ಯಾವುದೇ ಗಂಭೀರ ಸಮಸ್ಯೆಯನ್ನು ಕೈಗೆತ್ತಿಕೊಳ್ಳಬೇಕಾದರೆ ಪರಿಸ್ಥಿತಿ ತೀರಾ ಹದಗೆಡುವವರೆಗೆ ಕಾಯಲೇಬೇಕೆ?
ಈಚಿನ ವರ್ಷಗಳಲ್ಲಿ ವ್ಯಾಪಕವಾಗಿ ಬಳಕೆಗೆ ಬಂದಿದ್ದ ‘ಮ್ಯಾಗಿ’ ನೂಡಲ್ಸ್ನಲ್ಲಿ ಸಹನೀಯಮಟ್ಟಕ್ಕಿಂತ ಬಹುಪಾಲು ಹೆಚ್ಚಿನ ಮಾನೋಸೋಡಿಯಂ ಗ್ಲೂಟಾಮೇಟ್ (ಎಂ.ಎಸ್.ಜಿ.) ಅಂಶವಿರುವುದು ಪತ್ತೆಯಾಗಿ ಈ ಕಾರಣದಿಂದ ‘ಮ್ಯಾಗಿ’ ದೇಶದೆಲ್ಲೆಡೆ ನಿಷೇಧವನ್ನು ಎದುರಿಸಿದೆ. ಎಂ.ಎಸ್.ಜಿ. ಅಧಿಕ ಪ್ರಮಾಣದಲ್ಲಿ ನೂಡಲ್ಸ್ನಲ್ಲಿ ಇರುವ ತಥ್ಯವನ್ನು ಅದನ್ನು ತಯಾರಿಸುತ್ತಿರುವ ನೆಸ್ಲೆ ಕಂಪೆನಿಯೂ ಅಂಗೀಕರಿಸಿ ದೇಶದೆಲ್ಲೆಡೆ ಇನ್ನೂ ಮಾರಾಟವಾಗದೆ ಉಳಿದಿದ್ದ ‘ಮ್ಯಾಗಿ’ ದಾಸ್ತಾನನ್ನು ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯತೊಡಗಿದೆ. ಈ ನಡಾವಳಿ ತಾತ್ಕಾಲಿಕವೋ ಅಥವಾ ಮುಂದುವರಿಯುವುದೋ ಎಂಬುದನ್ನು ಭವಿಷ್ಯವೇ ಹೇಳೀತು (ಅಲ್ಪಕಾಲದಲ್ಲಿ ಮ್ಯಾಗಿ ಮಾರುಕಟ್ಟೆಯಲ್ಲಿ ಮರುಕಳಿಸಿದರೆ ಆಶ್ಚರ್ಯವಿಲ್ಲ). ಆದರೆ ಈ ಪ್ರಸಂಗದಿಂದ ಉದಿಸುವ ದೂರಗಾಮಿ ಅಂಶಗಳು ಪರಾಮರ್ಶನೆಗೆ ಅರ್ಹವಾಗಿವೆ.
ವಿಷಯುಕ್ತವೆಂದು ಸ್ಥಿರಪಟ್ಟಿದ್ದರೂ ಇಂದು ಎಲ್ಲೆಡೆ ಬಳಕೆಯಾಗುತ್ತಿರುವ ಪದಾರ್ಥಗಳು ಲೆಕ್ಕಕ್ಕೆ ಮೀರಿದಷ್ಟು ಇವೆ. ಇದನ್ನು ಆಮೂಲಾಗ್ರ ವಿಶ್ಲೇಷಿಸಿ ಅವಶ್ಯವಾದ ದಿಟ್ಟಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸಿದ್ಧವಿದೆಯೆ? ಮುಂದಿನ ದಿನಗಳಲ್ಲಾದರೂ ಕಲಬೆರಕೆಯನ್ನು ಸಮರ್ಥವಾಗಿ ನಿವಾರಿಸಲು ಸರ್ಕಾರ ಕಟಿಬದ್ಧವಾದೀತೆ? ಜನರ ಆರೋಗ್ಯದ ಸಂರಕ್ಷಣೆಯ ದೃಷ್ಟಿಯಿಂದಲೂ ಇದೀಗ ಸಹಿಸಲಾರದ ಮಟ್ಟಕ್ಕೇರಿರುವ ವೈದ್ಯಕೀಯ ವೆಚ್ಚವನ್ನು ನಿಯಂತ್ರಿಸುವ ದೃಷ್ಟಿಯಿಂದಲೂ ಈ ವಿಷಯವು ಸಮಾಜದ ಮತ್ತು ಸರ್ಕಾರದ ತೀವ್ರ ಗಮನವನ್ನು ಬೇಡುತ್ತಿದೆ ಎಂಬುದು ನಿಸ್ಸಂದೇಹ.
ನಿಯಮೋಲ್ಲಂಘನ ಸರಣಿ
ಸರ್ಕಾರೀ ಅಂಗಗಳ ಪೂರ್ವಾನುಮತಿಯನ್ನು ಪಡೆದುಕೊಳ್ಳದೆಯೇ ಓಟ್ಸ್ ಮಸಾಲಾ ನೂಡಲ್ಸ್ ಮೊದಲಾದವನ್ನು ತಯಾರಿಸಿ ಎಲ್ಲೆಡೆ ವಿಕ್ರಯ ಮಾಡಲಾಗುತ್ತಿತ್ತು. ಮ್ಯಾಗಿ ಓಟ್ಸ್ ಪೊಟ್ಟಣಗಳ ಮೇಲೆ ‘ಇದರಲ್ಲಿ ಎಂ.ಎಸ್.ಜಿ. ಬಳಸಲಾಗಿಲ್ಲ’ ಎಂಬ ಸುಳ್ಳು ಘೋಷಣೆಯೂ ಮುದ್ರಿತವಾಗುತ್ತಿತ್ತು. ಕಾನೂನಿನ ದುರ್ಬಲ ಅನುಸರಣೆಯ ಹಿನ್ನೆಲೆಯಲ್ಲಿ ಏನು ಮಾಡಿದರೂ ಜೀರ್ಣಿಸಿಕೊಳ್ಳಬಹುದು ಎಂಬಂತಹ ನೆಲೆಯಲ್ಲಿಯೆ ಬೃಹತ್ ಕಂಪೆನಿಗಳ ವಹಿವಾಟು ನಡೆದಿರುತ್ತದೆ.
ನಿಯಮೋಲ್ಲಂಘನೆಯ ಆರೋಪಕ್ಕೆ ಗುರಿಯಾದ ದೀರ್ಘ ಇತಿಹಾಸವೇ ನೆಸ್ಲೆ ಕಂಪೆನಿಗೆ ಇದೆ. ಅದರ ತಯಾರಿಕೆಯ ಶಿಶು-ಆಹಾರಗಳನ್ನು ಉತ್ಪ್ರೇಕ್ಷಿತವಾಗಿ ವರ್ಣಿಸಿದುದಕ್ಕೆ ಅಮೆರಿಕದಲ್ಲಿ ೧೯೭೩ರಲ್ಲಿ ಈ ಕಂಪೆನಿ ನಿಂದನೆಗೆ ಗುರಿಯಾಗಿತ್ತು. ತನ್ನ ತಯಾರಿಕೆಯ ಶಿಶು-ಆಹಾರ ತಾಯಿಯ ಹಾಲಿಗಿಂತ ಉತ್ತಮ ಎಂದೂ ಜಾಹೀರಾತುಗಳಲ್ಲಿ ಅದು ಸಾರಿತ್ತು. ನೆಸ್ಲೆ ಕಂಪೆನಿಗೆ ನ್ಯಾಯಾಲಯ ದಂಡನೆ ವಿಧಿಸಿತ್ತು.
ಮ್ಯಾಗಿ ಮಾಂಸಖಂಡಗಳನ್ನು ಬೆಳೆಸುತ್ತದೆ – ಎಂದೂ ನೆಸ್ಲೆ ಕಂಪೆನಿ ಬಂಗ್ಲಾದೇಶದ ಜಾಹೀರಾತುಗಳಲ್ಲಿ ಹೇಳಿತ್ತು.
ಭಾರತದಂತಹ ದೇಶಗಳಲ್ಲಿ ನಿರಾಧಾರ ಮತ್ತು ಉತ್ಪ್ರೇಕ್ಷಿತ ಜಾಹೀರಾತುಗಳನ್ನು ಉತ್ಪಾದಕ ಕಂಪೆನಿಗಳು ಸತತವಾಗಿ ನಿರ್ಭಿಡೆಯಾಗಿ ಪ್ರಕಟಿಸುತ್ತಿವೆ.
ಎಂಎಸ್ಜಿ
ಹಲವಾರು ಕೃಷಿ-ಉತ್ಪನ್ನಗಳಲ್ಲಿ ಅಲ್ಪಪ್ರಮಾಣದ ಎಂಎಸ್ಜಿ ಇರುವುದುಂಟು. ಆದರೆ ರುಚಿಹೀನ ಕೃತಕ ಆಹಾರೋತ್ಪನ್ನಗಳ ರುಚಿಯನ್ನು ಹೆಚ್ಚಿಸಲು ಎಂಎಸ್ಜಿಯನ್ನು ಬಳಸಲಾಗುತ್ತಿದ್ದು ಇದು ಗ್ರಾಹಕರ – ವಿಶೇಷವಾಗಿ ಮಕ್ಕಳ – ಆರೋಗ್ಯಕ್ಕೆ ಹಾನಿಕರವಾಗಿದೆ. ರುಚಿವರ್ಧನೆಗಾಗಿ ಇಡೀ ಜಗತ್ತಿನಲ್ಲಿ ಅಧಿಕವಾಗಿ ಬಳಸಲಾಗುತ್ತಿರುವ ರಾಸಾಯನಿಕ, ಎಂಎಸ್ಜಿ. ‘ಚೈನೀಸ್ ಪೌಡರ್’, ‘ಅಜಿನೋಮೋಟೋ’ ಮೊದಲಾದ ಬೇರೆಬೇರೆ ಹೆಸರುಗಳಲ್ಲಿ ಬಳಕೆಯಾಗುತ್ತಿರುವುದೂ ಎಂಎಸ್ಜಿಯೇ. ಪ್ರತಿವರ್ಷ ೫೦೦ ಕೋಟಿ ಡಾಲರಿಗೂ ಹೆಚ್ಚು ಮೌಲ್ಯದ ಎಂಎಸ್ಜಿ ಉತ್ಪಾದನೆಯಾಗಿ ಮಾರಾಟವಾಗುತ್ತಿದೆ. ಆಲೂಗೆಡ್ಡೆ ಉಪ್ಪೇರಿಯಿಂದ ಪೀಟ್ಸಾವರೆಗೆ, ಸೂಪ್ಗಳಿಂದ ಬರ್ಗರುಗಳವರೆಗೆ ಬಹುತೇಕ ಎಲ್ಲ ಖಾದ್ಯಗಳಲ್ಲಿಯೂ ಎಂಎಸ್ಜಿ ಬಳಕೆ ಆಗುತ್ತದೆ.
ಎಂಎಸ್ಜಿಯ ಅತಿಬಳಕೆ ಅಲ್ಪಕಾಲದಲ್ಲಿಯೂ ಗುಂಡಿಗೆ ಸಮಸ್ಯೆಗಳನ್ನೂ ಸಂಧಿವಾತ ಮತ್ತು ತಲೆಸುತ್ತು ಮೊದಲಾದ ಸಮಸ್ಯೆಗಳನ್ನೂ ಉಂಟುಮಾಡಬಲ್ಲದೆಂದು ವೈದ್ಯಕೀಯ ಪರೀಕ್ಷೆಗಳಿಂದ ಸಿದ್ಧಪಟ್ಟಿದೆ.
ಆಸ್ಟ್ರೇಲಿಯಾ ಮತ್ತು ಸಿಂಗಾಪುರ ದೇಶಗಳು ಬಾಲ-ಆಹಾರ ವಸ್ತುಗಳಲ್ಲಿ ಎಂಎಸ್ಜಿ ಬಳಕೆಯನ್ನು ನಿಷೇಧಿಸಿವೆ. ಅಮೆರಿಕ, ಕೆನಡಾ, ಇಂಗ್ಲೆಂಡ್, ಜಪಾನ್ ದೇಶಗಳಲ್ಲಿಯೂ ಬಾಲ-ಆಹಾರ ವಸ್ತುಗಳಲ್ಲಿ ಎಂಎಸ್ಜಿ ಬಳಕೆಯನ್ನು ತಯಾರಕರು ಮಾಡುತ್ತಿಲ್ಲ.
ಭಾರತದಲ್ಲಿ ಸಿದ್ಧ-ಆಹಾರ ವಸ್ತುಗಳಲ್ಲಿ ಶೇ. ೧ಕ್ಕೆ ಮೀರದ ಎಂಎಸ್ಜಿ ಬಳಕೆಗೆ ಅನುಮತಿ ಇದೆ. ೧೨ ತಿಂಗಳ ಒಳಗಿನ ಮಕ್ಕಳಿಗೆ ನೀಡಲಾಗುವ ಆಹಾರಗಳಲ್ಲಿ ಎಂಎಸ್ಜಿಗೆ ನಿಷೇಧವಿದೆ. ಆದರೆ ಭಾರತದಲ್ಲಿ ನಿಯಮಗಳ ಅನುಸರಣೆ ಯಾವ ಮಟ್ಟದಲ್ಲಿದೆ ಎಂಬುದು ಸುವಿದಿತ.
ಪ್ರತಿದಿನ ಎಂಎಸ್ಜಿಯ ಯಾವ ಪ್ರಮಾಣದ ಬಳಕೆ ಸಹನೀಯ ಎಂಬುದರ ಬಗೆಗೆ ಹಿಂದೆ ಜಾರಿಯಲ್ಲಿದ್ದ ನಿಯಂತ್ರಣಗಳನ್ನು ಕೆಲಕಾಲದ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞ ಸಮಿತಿ ರದ್ದುಗೊಳಿಸಿತು. ಇದರ ಹಿಂದೆ ಯಾವ ಒತ್ತಡಗಳು ಕೆಲಸಮಾಡಿವೆ ಎಂದು ಯಾರು ಬೇಕಾದರೂ ಊಹಿಸಬಹುದು.
ಎಂಎಸ್ಜಿ ನಿಷೇಧವಷ್ಟೆ ಸಾಕೆ?
ಎಂಎಸ್ಜಿ ಹಾನಿಕಾರಕವಲ್ಲ ಎಂದು ವಾದಿಸುವ ವರ್ಗವೂ ಇಲ್ಲದಿಲ್ಲ.
ನೂಡಲ್ಸ್ ತಯಾರಿಕೆಯಲ್ಲಿ ಘಟಕಗಳಾಗಿ ಬಳಸುವ ಗೋದಿಹಿಟ್ಟು ಈರುಳ್ಳಿ ಮೊದಲಾದವುಗಳಲ್ಲಿ ಸಹಜವಾಗಿಯೆ ನೈಸರ್ಗಿಕವಾಗಿಯೆ ಒಂದಷ್ಟು ಪ್ರಮಾಣದ ಗ್ಲೂಟಾಮೇಟ್ ಇರುವುದೂ ಹೌದು.
ಹಲವು ರಾಜ್ಯಗಳಲ್ಲಿ ಮ್ಯಾಗಿಯನ್ನು ನಿಷೇಧಿಸಿರುವುದಕ್ಕೆ ಕಾರಣ ಅದರಲ್ಲಿ ಅಧಿಕ ಪ್ರಮಾಣದ ಸೀಸಾಂಶ ಇದ್ದಿತೆಂಬುದು ಕೂಡಾ.
ಸೀಸದ ವಿಷಯಕ್ಕೆ ಬಂದರೆ: ಅಧಿಕ ಕೀಟನಾಶಕಗಳನ್ನು ಬಳಸಿ ಬೆಳೆಯುವ ಮೂಲಂಗಿ, ಕ್ಯಾರೆಟ್ ಮೊದಲಾದವುಗಳಲ್ಲಿ ಸಹನಾರ್ಹ ಮಟ್ಟಕ್ಕಿಂತ ಶೇ. ೩೦೦ರಷ್ಟು ಹೆಚ್ಚು ಸೀಸದ ಅಂಶ ಇರುತ್ತದೆ – ಎಂದು ವರದಿಗಳಿವೆ.
ಹೀಗೆ ಮ್ಯಾಗಿಯಂತಹ ಯಾವುದೋ ಒಂದು ಉತ್ಪನ್ನವನ್ನು ಕ್ರಮಕ್ಕೆ ಒಳಪಡಿಸಿದರೆ ಪರ್ಯಾಪ್ತವಾಗದು. ಇಡೀ ಆಹಾರ ಕ್ಷೇತ್ರವನ್ನೇ ವೈಜ್ಞಾನಿಕವಾಗಿ ಸಮೀಕ್ಷಿಸಿ ಕ್ರಮ ಕೈಗೊಳ್ಳಬೇಕಾಗಿದೆ.
ಎಂಎಸ್ಜಿಯನ್ನು ಉಪ್ಪು ಮೊದಲಾದ ಸಂಭಾರಗಳಲ್ಲಿಯೂ ಹಲವೊಮ್ಮೆ ಸೇರಿಸಿರಲಾಗುತ್ತದೆ.
ಸ್ವಯಂ ರುಚಿಹೀನವಾದ ಎಂಎಸ್ಜಿ ಹಲವು ಪದಾರ್ಥಗಳೊಡನೆ ಬೆರೆತಾಗ ಹೊಸದೊಂದು ರುಚಿಯನ್ನು ನಿರ್ಮಿಸುತ್ತದೆ ಎನ್ನಲಾಗಿದೆ. ಉಪ್ಪು ಮತ್ತು ಒಗರು ಪದಾರ್ಥಗಳಲ್ಲಿ ಮಾತ್ರ ಈ ಪರಿವರ್ತನೆ ಗೋಚರವಾಗುತ್ತದೆ. ಎಂಎಸ್ಜಿ ಈಗಾಗಲೆ ಇರುವ ಒಗರು ಅಥವಾ ಉಪ್ಪು ರುಚಿಯನ್ನು ಹೆಚ್ಚಿಸೀತೇ ಹೊರತು ಅದು ತಾನಾಗಿ ಯಾವ ರುಚಿಯನ್ನೂ ಸೃಷ್ಟಿಸಲಾರದು.
ಯಾವ ಪ್ರಮಾಣಕ್ಕೆ ಮೀರಿದಲ್ಲಿ ಎಂಎಸ್ಜಿ ಹಾನಿಕರವಾದೀತು ಎಂಬುದು ಆಮೇಲಿನ ವಿಷಯ. ಅಸಲಿಗೆ ಅದರ ಬಳಕೆ ಏಕಾದರೂ ಬೇಕಾಗಿದೆ? ಕಳೆದ ನಲವತ್ತು ವರ್ಷಗಳಿಂದಲೇ ಎಂಎಸ್ಜಿಯ ಹೆಚ್ಚುವರಿ ಬಳಕೆ ವಿವಾದಾಸ್ಪದವಾಗಿದೆ. ಎಷ್ಟು ಮಾತ್ರವೂ ಪ್ರಯೋಜನಕಾರಿಯಲ್ಲದ ಮತ್ತು ಸುರಕ್ಷಿತವಲ್ಲದ ಎಂಎಸ್ಜಿಯನ್ನು ಬಳಸುವುದಾದರೂ ಏಕೆ? ರುಚಿಕಟ್ಟಾದ ಮತ್ತು ವೈವಿದ್ಯಮಯವಾದ ದೇಶೀಯ ತಿಂಡಿತಿನಿಸು ವಿಪುಲವಾಗಿ ಇರುವಾಗ ಮ್ಯಾಗಿಯಂತಹ ಕಳಪೆ ಪದಾರ್ಥಗಳನ್ನು ಕೊಳ್ಳುವ ಆವಶ್ಯಕತೆಯಾದರೂ ಎಲ್ಲಿದೆ?
ಮ್ಯಾಗಿಯಂತಹ ಫ್ಯಾಷನಬಲ್ ಪದಾರ್ಥಗಳ ಬಳಕೆಗೆ ಸಾರ್ವಜನಿಕರಲ್ಲಿ ಒಂದು ಅತ್ಯಧಿಕ ವರ್ಗವು ಒಗ್ಗಿಹೋಗಿದೆ ಎಂಬುದು ಸಮಸ್ಯೆಯನ್ನು ಜಟಲಗೊಳಿಸಿದೆ. ಮ್ಯಾಗಿ ಬಳಕೆಯನ್ನು ಸರಳ ಜೀವನಶೈಲಿಯ ಪ್ರತಿಪಾದಕರು ಟೀಕಿಸಿದೊಡನೆ ‘ನೀವು ಎಲ್ಲಕ್ಕೂ ಆಕ್ಷೇಪಿಸುತ್ತೀರಿ’ ಎಂಬ ಉದ್ಗಾರ ಕೇಳಿಬಂದೀತು.
ಕಲಬೆರಕೆಯ ಸಮೃದ್ಧಿ
ಇದೀಗ ಜನರ ಹೊಟ್ಟೆಯನ್ನು ಸೇರುತ್ತಿರುವ ಪದಾರ್ಥಗಳ ಗುಣಮಟ್ಟವನ್ನು ಕುರಿತು ಯೋಚಿಸಿದರೆ ಗಾಬರಿಯೇ ಆಗುತ್ತದೆ. ಆಹಾರ ಗುಣವತ್ತತೆಯ ಮಾಪನ ಮಾಡುವ ‘ಫುಡ್ ಸೇಫ್ಟಿ ಆಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ’ (ಈSSಂI) ಸಂಸ್ಥೆಯು ೨೦೧೧ರ ಆರಂಭದಲ್ಲಿ ದೇಶಾದ್ಯಂತ ನಡೆಸಿದ ಸಮೀಕ್ಷೆಯಿಂದ ಹೊರಪಟ್ಟ ಪರಿಸ್ಥಿತಿ ಇದು: ದೇಶದ ೩೩ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸಂಗ್ರಹಿಸಿದ ೧೭೯೧ ಆಹಾರ ಸ್ಯಾಂಪಲ್ಗಳ ಪೈಕಿ ೧೨೨೬ ಸ್ಯಾಂಪಲ್ಗಳು ಕಲಬೆರಕೆಯವಾಗಿದ್ದು ದೇಹಾರೋಗ್ಯಕ್ಕೆ ಮಾರಕವಾಗಿದ್ದವು. (ರಾಜ್ಯಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರ ಹೇಳಿಕೆ.)
‘ಮ್ಯಾಗಿ’ ವಿಷಯದಲ್ಲಿ ಇದ್ದಕ್ಕಿದ್ದಂತೆ ಸರ್ಕಾರವು ಆಸಕ್ತಿ ತಳೆದು ಸಕ್ರಿಯವಾದದ್ದು ಪ್ರಶಂಸನೀಯ. ಆದರೆ ಮ್ಯಾಗಿಯಾಗಲಿ ಹತ್ತಾರು ಅನ್ಯ ಪದಾರ್ಥಗಳಾಗಲಿ ಅನಿಯಂತ್ರಿತವಾಗಿ ಎಲ್ಲೆಡೆ ಬಳಕೆಯಲ್ಲಿರುವಾಗ ಸರ್ಕಾರಕ್ಕೆ ಎಚ್ಚೆತ್ತುಕೊಳ್ಳಲು ಇಷ್ಟು ದೀರ್ಘಕಾಲ ಏಕೆ ಬೇಕಾಯಿತು? ಈಗಲಾದರೂ ಸರ್ಕಾರ ಇದಕ್ಕೆ ಸಮೂಲ ಪರಿಹಾರಮಾರ್ಗಗಳನ್ನು ನಿಶ್ಚಯಿಸುವ ದಾರ್ಢ್ಯ ತೋರೀತೆ? ಇವು ಜನಸಾಮಾನ್ಯರ ಮನಸ್ಸಿನಲ್ಲಿ ಉದಿಸುವ ಪ್ರಶ್ನೆಗಳು.
ಯಾವುದೇ ಗಂಭೀರ ಸಮಸ್ಯೆಯನ್ನು ಕೈಗೆತ್ತಿಕೊಳ್ಳಬೇಕಾದರೆ ಪರಿಸ್ಥಿತಿ ತೀರಾ ಹದಗೆಡುವವರೆಗೆ ಕಾಯಲೇಬೇಕೆ?
ಪಶುಗಳಿಗೆ ನೀಡುವ ಮೇವಿನಲ್ಲಿ ಜೀವಿರೋಧಕಗಳ (ಆಂಟಿಬಯೊಟಿಕ್ಸ್) ಬಳಕೆಗೆ ಯೂರೋಪಿನ ದೇಶಗಳು ನಿಷೇಧ ಹೇರಿವೆ.
‘ಶಕ್ತಿದಾಯಕ’ ಪೇಯಗಳ ಮಾರುಕಟ್ಟೆ ವರ್ಷಕ್ಕೆ ಶೇ. ೨೦ರಷ್ಟು ಪ್ರಮಾಣದಲ್ಲಿ ವರ್ಧಿಸುತ್ತಿದೆ. ಆದರೆ ಈ ವರ್ಗದ ಪೇಯಗಳ ಮೇಲೆ ಯಾವುದೇ ನಿಯಂತ್ರಣ ಇಲ್ಲ. ಈ ಹಲವಾರು ಪೇಯಗಳು ಸ್ವೀಕಾರಾರ್ಹ ಮಟ್ಟಕ್ಕಿಂತ ಹೆಚ್ಚಿನ ಪ್ರಮಾಣದ ಕೆಫೇನ್ ಮೊದಲಾದವನ್ನು ಒಳಗೊಂಡಿರುವುದು ಸಿದ್ಧಪಟ್ಟಿದೆ.
ಹಲವಾರು ಅಲಂಕಾರ ಪ್ರಸಾಧನಗಳಲ್ಲಿ ಅತ್ಯಂತ ಹಾನಿಕರವಾದ ಪಾದರಸವನ್ನು ಬಳಸಲಾಗುತ್ತಿದೆ.
ಅಮೆರಿಕದಲ್ಲಿ ವ್ಯಾಪಕವಾಗಿ ಮಾರಾಟವಾಗುವ ಪೇಯಗಳನ್ನು ಸಿಎಸ್ಇ ಸಂಸ್ಥೆ (ಸೆಂಟರ್ ಫಾರ್ ಸಯನ್ಸ್ ಆಂಡ್ ಎನ್ವಿರನ್ಮೆಂಟ್) ಪರೀಕ್ಷಿಸಿದಾಗ ಅವುಗಳಲ್ಲಿ ಹಾನಿಕಾರಕ ಅಂಶಗಳು ಇರಲಿಲ್ಲ. ಆದರೆ ಅವೇ ಪೇಯಗಳ ಭಾರತದಲ್ಲಿನ ನಮೂನೆಗಳು ವಿಷಯುಕ್ತವಾಗಿದ್ದುದು ಕಂಡುಬಂದಿತು. ಭಾರತದಲ್ಲಿನ ಬಹುಪ್ರಸಾರ ಪೇಯಗಳ ಸುರಕ್ಷಿತತೆಯ ಮಟ್ಟವನ್ನು ಇದು ಸೂಚಿಸುತ್ತದೆ. ಈ ಹಿನ್ನೆಲೆಯಲ್ಲಿಯೆ ೨೦೦೬ರಲ್ಲಿ ಆಹಾರ ಸುರಕ್ಷಿತತೆಯ ಪರಾಮರ್ಶನೆಗಾಗಿ ಸಂಸದೀಯ ಸಮಿತಿ ಏರ್ಪಟ್ಟಿದ್ದುದು. ಆ ಸಮಿತಿಯ ಶಿಫಾರಸುಗಳು ಕಾರ್ಯಗತವಾಗಿಲ್ಲವೆಂದು ಹೇಳುವ ಆವಶ್ಯಕತೆಯಿಲ್ಲ.
ಕಾಯಿಲೆಗಳಿಗೆ ಆಮಂತ್ರಣ
ಸಸ್ಯಾಹಾರ ಮಾತ್ರವಲ್ಲ, ಪಶುಗಳಿಗೆ ನೀಡುವ ಮೇವಿನಲ್ಲಿ ಅಧಿಕಾಂಶ ಜೀವಿರೋಧಕಗಳು ಇರುವುದರಿಂದಾಗಿ ಪಶುಜನ್ಯ ಆಹಾರವನ್ನು ಸೇವಿಸುವವರಲ್ಲಿ ಔಷಧಪ್ರತಿರೋಧ ಬೆಳೆದಿರುವುದು ಕಂಡುಬಂದಿದೆ. ಹೀಗಾಗಿ ವೈದ್ಯಕೀಯ ಚಿಕಿತ್ಸೆಯೂ ನಿಷ್ಫಲಗೊಳ್ಳುತ್ತ ಸಾಗಿದೆ. ಶರೀರದಲ್ಲಿ ಔಷಧಪ್ರತಿರೋಧ ಬೆಳೆದಲ್ಲಿ ನ್ಯುಮೋನಿಯ, ಕ್ಷಯ ಮೊದಲಾದ ಕಾಯಿಲೆಗಳಿಗೆ ಆಮಂತ್ರಣ ನೀಡಿದಂತಾಗುತ್ತದೆ. ೨೦೧೧-೨೦೧೩ರ ಮೂರೇ ವರ್ಷದ ಅವಧಿಯಲ್ಲಿ ದೇಶದಲ್ಲಿ ಕ್ಷಯರೋಗಗ್ರಸ್ತರ ಪ್ರಮಾಣ ಹಿಂದಿಗಿಂತ ಐದುಪಟ್ಟು ಹೆಚ್ಚಿತೆಂಬುದಕ್ಕೆ ಹಿಂದಿನ ಕೇಂದ್ರ ಆರೋಗ್ಯ ಸಚಿವ ಡಾ|| ಹರ್ಷವರ್ಧನ್ ಗಮನ ಸೆಳೆದಿದ್ದರು.
ಭಾರತದಲ್ಲಿ ತಯಾರಾಗುವ ಕೋಲಾದಲ್ಲಿ ನೀರಿಗೆ ನಿಗದಿಯಾಗಿರುವುದಕ್ಕಿಂತ ಎಪ್ಪತ್ತುಪಟ್ಟು ಹೆಚ್ಚು ಕೀಟನಾಶಕ ಅವಶೇಷಗಳು ಇದ್ದವೆಂದು ಸಿಎಸ್ಇ ಸಂಸ್ಥೆಯು ಪರೀಕ್ಷಣೆಯಿಂದ ಹೊರಪಡಿಸಿತ್ತು.
ದೇಹವು ಕ್ಸಾಲ್ಸಿಯಂ, ರಿಬೋಫ್ಲಾವಿನ್ ಮೊದಲಾದವನ್ನೂ ಜೀವಸತ್ತ್ವಗಳನ್ನೂ ಹೀರಿಕೊಳ್ಳುವ ಶಕ್ತಿಯನ್ನು ಕೋಲಾ ಸೇವನೆಯು ಕುಂಠಿತಗೊಳಿಸುತ್ತದೆ – ಎಂದೆಲ್ಲ ಈಗ್ಗೆ ೩೦ ವರ್ಷಗಳ ಹಿಂದಿನಿಂದಲೇ ಸಿದ್ಧಪಟ್ಟಿತ್ತು. ಆದರೆ ಕೋಲಾ ಮಾರಾಟ ಈಗಲೂ ಅವಿಚ್ಛಿನ್ನವಾಗಿ ಮುಂದುವರಿದಿದೆ.
ಹಾಲಿನಲ್ಲಿಯೂ ಅಗ್ರಾಹ್ಯ ಅಂಶಗಳು
ಮಾರುಕಟ್ಟೆ ವ್ಯಾಪಕವಾಗಿ ಬೆಳೆದ ಯಾವುದೇ ಕ್ಷೇತ್ರದಲ್ಲಿ ಈ ಗ್ರಹಚಾರ ತಪ್ಪುವುದಿಲ್ಲ. ಪರಿಣಾಮ: ಆರೋಗ್ಯವರ್ಧಕವೆಂದು ಜನರು ಪ್ರತಿದಿನ ಸೇವಿಸುವ ಹಾಲಿನ ಮೂಲಕವೂ ಮಾರಕ ಕಾಯಿಲೆಗಳಿಗೆ ಕ್ರಮೇಣ ತುತ್ತಾಗುತ್ತಾರೆ. ಪ್ರಮುಖ ಹಾಲು-ಉತ್ಪಾದಕ ಕಂಪೆನಿಗಳು ಪ್ರಭಾವಶಾಲಿಗಳಾಗಿರುವುದರಿಂದ ತಮ್ಮ ಉತ್ಪನ್ನಗಳ ವೈಜ್ಞಾನಿಕ ಪರೀಕ್ಷೆಗೆ ಸಹಕರಿಸುವುದಿಲ್ಲ.
ಹಾಲು ಮೊದಲಾದ ದಿನಬಳಕೆಯ ವಸ್ತುಗಳಲ್ಲಿ ಕಲಬೆರಕೆ ಇರುವುದನ್ನು ಈ ಹಿಂದೆ ಹಲವು ಬಾರಿ ಗುರುತಿಸಲಾಗಿದೆ. ಆದರೆ ಅದನ್ನು ನಿಯಂತ್ರಿಸುವ ಯಾವುದೇ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಂತೆ ತೋರುವುದಿಲ್ಲ. ವಿರಳವಾಗಿ ದಿನಸಿ ಅಂಗಡಿಗಳ ಮಟ್ಟದ ವರ್ತಕರ ಮೇಲೆ ಕ್ರಮ ಜರುಗಿಸಲಾಗಿದ್ದರೂ, ಸಮಸ್ಯೆಯ ಸಮೂಲ ಪರಿಹಾರದ ಚಿಂತನೆ ದೂರವೇ ಉಳಿದಿದೆ. ಕಾನೂನಿನ ಕಾರ್ಯಾನ್ವಯ ದುರ್ಬಲವಾಗಿದ್ದಾಗ ಸಹಜವಾಗಿಯೆ ಪ್ರಭಾವೀ ಕಂಪೆನಿಗಳು ನುಣುಚಿಕೊಳ್ಳುವ ಮಾರ್ಗಗಳನ್ನು ಸುಲಭವಾಗಿ ಕಂಡುಕೊಳ್ಳುತ್ತವೆ.
ಹೆಚ್ಚುತ್ತಿರುವ ಕೃತಕ ಆಹಾರಗಳಿಂದಾಗಿ ಜನಸಾಮಾನ್ಯರಿಗೆ ದಿನಬಳಕೆಯ ಧಾನ್ಯಗಳು ದುಷ್ಪ್ರಾಪ್ಯವೂ ದುಬಾರಿಯೂ ಆಗುತ್ತಿವೆ.
ಹಾಲಿನ ಕಲಬೆರಕೆಯ ಸಂದರ್ಭದಲ್ಲಿ ಕೆಲವು ತಿಂಗಳ ಹಿಂದೆ ಸರ್ವೋಚ್ಚ ನ್ಯಾಯಾಲಯ ಕಟುವಾಗಿ ಹೀಗೆಂದಿತ್ತು: ಸರ್ಕಾರ ಎಚ್ಚೆತ್ತುಕೊಳ್ಳುವುದು ಯಾವಾಗ? ಹಾಲಿನಲ್ಲಿ ಸಯನೈಡ್ ಬೆರಕೆಯಾಗಿ ಅದನ್ನು ಕುಡಿದ ಕೂಡಲೆ ಸಾಯುವಂತಾಗಲಿ, ಆಗ ನೋಡೋಣವಂತೆ – ಎಂದು ಸರ್ಕಾರ ಕಾಯುತ್ತಿದೆಯೆ? ಹಾಗೆ ಆದ ಮೇಲೆ ಕಲಬೆರಕೆ ನಿಯಂತ್ರಣ ಶಾಸನವೊಂದನ್ನು ಮಾಡೀತೇನೊ!
ಹಾಲಿನಲ್ಲಿ ದೊಡ್ಡ ಪ್ರಮಾಣದ ಕಲಬೆರಕೆ ಆಗುತ್ತಿರುವುದಾಗಿ ಸಂಸತ್ತೇ ಒಪ್ಪಿಕೊಂಡಿದೆ. ದೇಶಾದ್ಯಂತ ಸಂಗ್ರಹಿಸಿದ ಹಾಲಿನ ಸ್ಯಾಂಪಲ್ಗಳಲ್ಲಿ ಶೇ. ೬೮.೪ರಷ್ಟು ಕಲಬೆರಕೆಯವಾಗಿದ್ದವು ಎಂದು ಈSSಂI ಸಮೀಕ್ಷೆಯಿಂದ ಹೊರಪಟ್ಟಿತ್ತು. ಜನರಿಗೆ ಆಶ್ಚರ್ಯ ಹುಟ್ಟಿಸಬಹುದಾದ ವಾಸ್ತವ ಇದು: ಕಲಬೆರಕೆಯಾಗಿದ್ದರೂ ಹಾಲಿನ ಆಕಾರವನ್ನೂ ತುಪ್ಪದ ಅಂಶವನ್ನೂ (ಇದನ್ನು ರಿಚರ್ಡ್ ಮಿಚೆಲ್ ವ್ಯಾಲ್ಯೂ ಎಂದು ತಾಂತ್ರಿಕವಾಗಿ ಕರೆಯುತ್ತಾರೆ) ಉಳಿಸಿಕೊಳ್ಳಲು ರಿಫೈಂಡ್ ಆಯಿಲ್, ಲಿಕ್ವಿಡ್ ಡಿಟರ್ಜೆಂಟ್ ಮೊದಲಾದವನ್ನು ಉತ್ಪಾದಕರು ಸೇರಿಸುತ್ತಿದ್ದಾರೆ. ಹೀಗೆ ಮಾರುಕಟ್ಟೆಯಲ್ಲಿ ಖರೀದಿಸಿದ ಹಾಲಿನಲ್ಲಿ ನಿಗದಿಯಾದ ಶೇ. ೩೦-೩೫ರಷ್ಟು ರಿಚರ್ಡ್ ಮಿಚೆಲ್ ವ್ಯಾಲ್ಯೂ ಇರುತ್ತದೆ; ಆದರೆ ಅದು ರಾಸಾಯನಿಕಜನ್ಯವಾಗಿದ್ದು ಸ್ವಾಸ್ಥ್ಯಕ್ಕೆ ಮಾರಕವಾಗಿರುತ್ತದೆ.
ಬೇಕಾಗಿದೆ: ನಿಮಮಗಳ ಅನುಸರಣೆ
ಮುಖ್ಯ ಸಂಗತಿಯೆಂದರೆ ಈ ಬಹುವಿಧ ಅಪಾಯಗಳಿಗೆ ಸಂಬಂಧಿಸಿದಂತೆ ಮತ್ತು ಕಲಬೆರಕೆ ನಿಯಂತ್ರಣಕ್ಕಾಗಿ ಸಾಕಷ್ಟು ಕಾನೂನುಗಳು ಈಗಾಗಲೆ ಇವೆ. ಸಮಸ್ಯೆ ಇರುವುದು ಕಾನೂನುಗಳ ದಕ್ಷ ಅನ್ವಯದಲ್ಲಿ. ಹೀಗಿರುವುದರಿಂದ ಇನ್ನಷ್ಟು ಹೊಸ ಕಾನೂನುಗಳನ್ನು ಗ್ರಂಥಸ್ಥ ಮಾಡುವುದರಿಂದ ಹೆಚ್ಚಿನ ಪ್ರಯೋಜನವೇನಾಗದು. ಸರ್ಕಾರದ ಅಂಗಗಳ ದಿಟ್ಟವಾದ ಕಾರ್ಯಾಚರಣೆ ಮತ್ತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ – ಇವುಗಳ ಆವಶ್ಯಕತೆ ಇದೆ. ಕಲಬೆರಕೆಗೆ ಕಾರಣರಾದ ವ್ಯಕ್ತಿಗಳಿಗೆ ಅಧಿಕ ಮೊತ್ತದ ದಂಡವನ್ನೂ ಕಾರಾಗೃಹವಾಸವನ್ನೂ ವಿಧಿಸಲು ಈಗಿನ ಕಾನೂನುಗಳಲ್ಲಿಯೆ ಅವಕಾಶವಿದೆ. ಆದರೆ ಈ ನಿಯಮಗಳು ಕಾರ್ಯಗತಗೊಂಡಿರುವ ನಿದರ್ಶನಗಳು ಇಲ್ಲವೆಂದೇ ಹೇಳಬಹುದು. ಕಲಬೆರಕೆಯನ್ನು ದಂಡನಾರ್ಹ ಅಪರಾಧವನ್ನಾಗಿ ಘೋಷಿಸಿದ ಕಾನೂನು ೨೦೦೬ರಲ್ಲಿಯೆ ಅಮಲುಗೊಂಡಿತ್ತು. ಇಂತಹ ಅಪರಾಧಗಳಿಗೆ ದಂಡನೆಯನ್ನು ಸಬ್-ಡಿವಿಜನಲ್ ಮ್ಯಾಜಿಸ್ಟ್ರೇಟ್ ಮಟ್ಟದ ನ್ಯಾಯಾಧಿಕಾರಿಯೇ ನಿರ್ಣಯಿಸಬಹುದಾಗಿದೆ.
ಹೆಚ್ಚುತ್ತಿರುವ ಶಂಕಾಸ್ಪದ ಆಹಾರವಸ್ತುಗಳ ಬಳಕೆಯ ಅಡ್ಡಪರಿಣಾಮಗಳ ಬಗೆಗೆ ಗಂಭೀರ ಪರಾಮರ್ಶನೆ ನಡೆಯಬೇಕೆಂದು ಕಳೆದ ೧೫ ವರ್ಷಗಳಿಂದಲೇ ಚರ್ಚೆಗಳು ನಡೆದಿವೆ. ಆದರೆ ಗಣನೀಯ ಕಾರ್ಯಾಚರಣೆ ನಡೆದಿಲ್ಲ. ಒಂದುಕಡೆ ಲಾಭೈಕದೃಷ್ಟಿಯ ಆಹಾರ ತಯಾರಿಕೆ ಕಂಪೆನಿಗಳು ಅತ್ಯಂತ ಪ್ರಭಾವಶಾಲಿಯಾಗಿವೆ. ಇನ್ನೊಂದುಕಡೆ ಪೂರ್ವಾಪರ ಯೋಚನೆ ಇಲ್ಲದೆ ಸಾರ್ವಜನಿಕರಲ್ಲಿ ಹೊಸದಾಗಿ ಮಾರುಕಟ್ಟೆಗೆ ಬರುವ ಎಲ್ಲಕ್ಕೂ ಮಾರುಹೋಗುವ ಕೊಳ್ಳುಬಾಕ ಸಂಸ್ಕೃತಿ ಬೆಳೆದಿದೆ – ವಿಶೇಷವಾಗಿ ತರುಣರಲ್ಲಿ. ಹೀಗೆ ಸಮಸ್ಯೆಯು ಜಟಿಲವಾಗುತ್ತ ಸಾಗಿದೆ. ಸ್ವೀಕರಿಸುವ ಆಹಾರವಸ್ತುಗಳು ಪುಷ್ಟಿದಾಯಕವಾಗಿರಬೇಕು ಮತ್ತು ಹಾನಿಕಾರಕವಾಗಿರಬಾರದು ಎಂಬ ಪ್ರಜ್ಞೆ ಮರೆಯಾಗಿದೆ. ಪ್ರತಿಯಾಗಿ ವಿನೂತನವಾದುದನ್ನೆಲ್ಲ ಬಳಸುವುದು ಪ್ರಗತಿಯ ಲಕ್ಷಣವೆಂದೇ ಪರಿಗಣಿತವಾಗಿದೆ.
ಆಹಾರೋತ್ಪನ್ನಗಳಲ್ಲಿ ಬಳಸುವ ಮೂಲ ಸಾಮಗ್ರಿಗಳಲ್ಲಿಯೆ ಕೀಟನಾಶಕಗಳ ಅವಶೇಷಗಳಿರುವುದು ಸುವಿದಿತ; ಪೇಯಗಳಲ್ಲಿಯೂ ಅಷ್ಟೆ. ಪ್ರಚಲಿತ ಕೃಷಿಯ ಮತ್ತು ಮಾರುಕಟ್ಟೆಯ ಸ್ಥಿತಿಯಿಂದಾಗಿ ಪರಿಶುದ್ಧವಾದ ದಿನಬಳಕೆಯ ವಸ್ತುಗಳು ದುಷ್ಪ್ರಾಪ್ಯವಾಗಿವೆ. ಈ ಹಿನ್ನೆಲೆಯಲ್ಲಿ ಕೃತಕ ಪದಾರ್ಥಗಳನ್ನು ಬಳಸದಿರುವ ಸಂಯಮವನ್ನಾದರೂ ಸಾರ್ವಜನಿಕರು ಬೆಳೆಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಹಿತಕಾರಿಯಾಗುತ್ತದೆ.