ವೃದ್ಧನೇ ಒಂದು ಕಾಗದ ಮತ್ತು ಪೆನ್ನನ್ನು ರಾಘವನಿಗೆ ನೀಡಿದ; ರಾಘವ ಬರೆಯತೊಡಗಿದ…..
“ನಾನೊಂದು ವದಂತಿ ಕೇಳಿದೆ…..” ಅಷ್ಟು ನುಡಿದ ರಾಘವ ಸುತ್ತಲೂ ನೋಡಿದ, ತನ್ನ ಮಾತುಗಳು ಬೇರೆ ಯಾರದಾದರೂ ಕಿವಿಗೆ ಬೀಳುತ್ತದೆಯೇನೋ ಎಂದು. ಆ ಮೆಡಿಕಲ್‌ಶಾಪ್‌ನಲ್ಲಿ ಆತನನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಆತನ ಮುಂದೆ ಇದ್ದ ಮೆಡಿಕಲ್‌ಶಾಪ್‌ನ ಮಾಲೀಕ ವೃದ್ಧನಾಗಿದ್ದ. ಆದರೆ ಆತನ ವಯಸ್ಸು ಇಂತಿಷ್ಟೇ ಎಂದು ಹೇಳಲಾಗದಂತಿತ್ತು. ಅದು ೬೦ರಿಂದ ಹಿಡಿದು ೧೦೦ರ ತನಕವೂ ಆಗಿರಬಹುದಿತ್ತು. ರಾಘವ ಮಾತು ಮುಂದುವರಿಸುವಂತೆ ವೃದ್ಧ ಮುಖಭಾವದಲ್ಲೆ ಸೂಚಿಸಿದ.
“ಗುರುತು ಪತ್ತೆಯಾಗದಂತಹ ವಿಷವೊಂದು ನಿಮ್ಮಲ್ಲಿ ಇರುವುದಾಗಿ ಕೇಳಿದೆ. ಅದು ಪ್ರಯೋಗಿಸಿದರೆ ಯಾವುದರಿಂದ ಸತ್ತುದೆಂದೇ ತಿಳಿಯುವುದಿಲ್ಲವಂತೆ” ರಾಘವ ಪಿಸುಮಾತಿನಲ್ಲಿ ಕೇಳಿದ.
ವೃದ್ಧ ತಲೆಯಾಡಿಸಿದ. “ಒಳಗೆ ಬನ್ನಿ” ಎಂದು ರಾಘವನನ್ನು ಕರೆದ. ರಾಘವ ಕೌಂಟರ್ ಸರಿಸಿ ಒಳಗೆ ಹೋದ. ವೃದ್ಧ ಔಷಧಿಯ ಶೆಲ್ಫ್‌ನ ಹಿಂದಿದ್ದ ಪುಟ್ಟಕೋಣೆಗೆ ರಾಘವನನ್ನು ಕರೆದೊಯ್ದ. ಅಲ್ಲಿನ ಕುರ್ಚಿಯಲ್ಲಿ ರಾಘವನನ್ನು ಕೂರಲು ಹೇಳಿದ.
ರಾಘವ ಗ್ಲಾಸ್ ತೆಗೆದುಕೊಂಡ. ವೃದ್ಧ ತಾನೊಂದು ಕುರ್ಚಿಯೆಳೆದು ರಾಘವನ ಮುಂದೆ ಕೂತ.
“ಯಾರನ್ನು ನೀನು ಕೊಲ್ಲಲು ಬಯಸುತ್ತಿದ್ದಿ; ಏಕಾಗಿ?” ಆತ ಪ್ರಶ್ನಿಸಿದ.
“ಅದೆಲ್ಲ ವಿವರ ಬೇಕೆ? ನಾನು ಹಣ ನೀಡುತ್ತೇನೆ, ಅಷ್ಟು ಸಾಲದೆ?” ರಾಘವ ಪ್ರಶ್ನಿಸಿದ.
ವೃದ್ಧ ಆತನ ಮಾತು ತಡೆಯುವಂತೆ ಕೈಯೆತ್ತಿದ “ಆ ವಿವರಗಳೂ ಬೇಕು. ನಾನು ನಿನಗೆ ಕೊಡುವ ವಿಷವನ್ನು ಪಡೆಯಲು ನೀನು ಅರ್ಹನಾಗಿದ್ದಿ ಎಂದು ನನಗೆ ಖಚಿತವಾಗಬೇಕು.”
ರಾಘವ ಒಂದು ಕ್ಷಣ ಸುಮ್ಮಗೆ ಕೂತ. ಬಳಿಕ ನುಡಿದ “ಆಗಲಿ. ನಾನು ನನ್ನ ಪತ್ನಿಯನ್ನು ಕೊಲ್ಲಲು ಬಯಸುತ್ತಿದ್ದೇನೆ…..” ಬಳಿಕ ರಾಘವ ಏಕೆ ಎಂಬುದನ್ನು ವಿವರಿಸತೊಡಗಿದ. ಮಧ್ಯದಲ್ಲೊಮ್ಮೆ ವೃದ್ಧ ಎದ್ದು ಅಲ್ಲೇ ಇದ್ದ ಸ್ಟವ್ ಉರಿಸಿ ಅದರಲ್ಲಿ ಪಾತ್ರೆಯಿಟ್ಟು ಕಾಫಿ ಮಾಡಿದ. ಅದನ್ನು ತಂದು ರಾಘವನಿಗೆ ಕೊಟ್ಟ. ರಾಘವ ತನ್ನ ಕಥೆ ಹೇಳಿ ಮುಗಿಯುವಾಗ ಆತನ ಮುಂದಿದ್ದ ಕಾಫಿಯೂ ಕುಡಿದು ಮುಗಿದಿತ್ತು.
ಎಲ್ಲವನ್ನೂ ಕೇಳಿದ ಬಳಿಕ ವೃದ್ಧ ನುಡಿದ “ನಾನು ಕೆಲವೊಮ್ಮೆ ಗುರುತು ಪತ್ತೆಹಚ್ಚಲಾಗದಂತಹ ವಿಷ ನೀಡುವುದು ನಿಜ. ಅದಕ್ಕೆ ನಾನು ಯಾವುದೇ ಬೆಲೆ ತೆಗೆದುಕೊಳ್ಳುವುದಿಲ್ಲ. ಅದು ಉಚಿತವಾದುದು. ನಾನು ಕೆಲವಾರು ಕೊಲೆಪಾತಕರಿಗೆ ಈ ವಿಷ ನೀಡಿ ನೆರವಾಗಿದ್ದೇನೆ.”
“ನನಗೂ ಆ ವಿಷ ಕೊಡಿ” ರಾಘವ ಅನುನಯಿಸಿದ.
ವೃದ್ಧ ಆತನೆಡೆಗೆ ನಸುನಗು ಬೀರಿದ. “ನಾನು ಅದಾಗಲೆ ನಿನಗೆ ಕೊಟ್ಟಿದ್ದೇನೆ. ನಿನಗೆ ಕಾಫಿ ಮಾಡುವಾಗಲೇ ನೀನು ವಿಷ ಪಡೆಯಲು ಅರ್ಹ ಎಂದು ನಾನು ನಿರ್ಧರಿಸಿಯಾಗಿತ್ತು. ನಾನು ಮೊದಲೇ ಹೇಳಿದಂತೆ ಅದು ಉಚಿತ. ಅದಕ್ಕೆ ನೀನು ಹಣ ಕೊಡಬೇಕೆಂದಿಲ್ಲ” ಒಂದು ನಿಮಿಷದ ಮೌನದ ಬಳಿಕ ವೃದ್ಧ ಮಾತು ಮುಂದುವರಿಸಿದ “ಆದರೆ ಆ ವಿಷಕ್ಕೆ ಪ್ರತ್ಯೌಷಧ ನೀಡಬೇಕಾದರೆ ಅದಕ್ಕೆ ಬೆಲೆಯಿದೆ….”
ರಾಘವನ ಮುಖ ವಿವರ್ಣಗೊಂಡಿತು. ಆತ ಇದನ್ನು ನಿರೀಕ್ಷಿಸಿರಲಿಲ್ಲ. ಆತ ಒಮ್ಮೆಗೆ ತನ್ನ ಜೇಬಿನಿಂದ ಪಿಸ್ತೂಲು ಹೊರತೆಗೆದ.
ವೃದ್ಧ ಪುಟ್ಟದಾಗಿ ನಗು ಚೆಲ್ಲಿದ. “ನೀನು ಆ ಪಿಸ್ತೂಲು ಬಳಸುವ ಧೈರ್ಯ ಮಾಡಲಾರೆ. ಈ ಮೆಡಿಕಲ್‌ಶಾಪ್‌ನಲ್ಲಿ ನೀನು ಆ ಪ್ರತ್ಯೌಷಧ ಹುಡುಕಿ ತೆಗೆಯಬಲ್ಲೆಯಾ? ಒಂದು ವೇಳೆ ನಾನು ಹೇಳುತ್ತಿರುವುದು ಸುಳ್ಳು, ನಿನಗೆ ವಿಷ ಕೊಟ್ಟೇ ಇಲ್ಲವೆಂದು ನೀನು ಭಾವಿಸುವುದಾದರೆ ಗುಂಡು ಹಾರಿಸು. ಮೂರು ಗಂಟೆಯೊಳಗಾಗಿ ನಿನಗೆ ಉತ್ತರ ಸಿಗುತ್ತದೆ – ನಿನಗೆ ವಿಷ ಪ್ರಯೋಗವಾಗಿದೆಯೋ ಇಲ್ಲವೋ ಎಂಬುದರ ಬಗ್ಗೆ.”
ರಾಘವ ಪಿಸ್ತೂಲು ಕೆಳಗಿಳಿಸಿದ. ಸಣ್ಣ ದನಿಯಲ್ಲಿ ಕೇಳಿದ, “ಆ ಪ್ರತ್ಯೌಷಧದ ಬೆಲೆ ಎಷ್ಟು?”
“ತುಂಬಾ ಏನೂ ಅಲ್ಲ. ೧೦ ಸಾವಿರ ರೂಪಾಯಿ ಅಷ್ಟೆ. ಅಷ್ಟಾದರೂ ನನಗೆ ಬೇಡವೆ. ಒಬ್ಬ ವ್ಯಕ್ತಿಯ ಹವ್ಯಾಸವು ಕೊಲೆಯನ್ನು ತಡೆಯುವುದಾದರೆ ಅದರಿಂದ ಹಣವನ್ನೂ ಸಂಪಾದಿಸಬಾರದೇಕೆ?”
ರಾಘವ ಪಿಸ್ತೂಲನ್ನು ಮಡಿಲಲ್ಲಿಟ್ಟ. ಪ್ರತ್ಯೌಷಧ ಸಿಕ್ಕಿದ ಬಳಿಕ ಈ ಪಿಸ್ತೂಲಿನಿಂದ ವೃದ್ಧನ ಜೀವ ತೆಗೆಯಬಹುದು ಎಂದಾತ ಯೋಚಿಸಿದ. ತನ್ನ ಜೇಬಿನಿಂದ ಪರ್ಸ್ ತೆಗೆದ. ೧೦,೦೦೦ ರೂಪಾಯಿ ಎಣಿಸಿ ವೃದ್ಧನ ಕೈಗೆ ಚಾಚಿದ. ವಿಷದ ಬೆಲೆ ೧೦ ಸಾವಿರಕ್ಕಿಂತ ಮೇಲಿರಬಹುದು ಎಂಬ ಅನಿಸಿಕೆಯಿಂದ ಆತ ಅಷ್ಟೂ ಹಣ ಹಿಡಿದುಕೊಂಡು ಬಂದಿದ್ದ.
ವೃದ್ಧ ಕೂಡಲೇ ಹಣ ತೆಗೆದುಕೊಳ್ಳಲಿಲ್ಲ. ಆತ ನುಡಿದ. “ಇನ್ನೊಂದು ವಿಷಯ. ನಿನ್ನ ಪತ್ನಿ ಮತ್ತು ನನ್ನ ಸುರಕ್ಷೆಗಾಗಿ ನೀನು ತಪ್ಪೊಪ್ಪಿಗೆ ಪತ್ರವೊಂದನ್ನು ನನಗೆ ಬರೆದು ನೀಡಬೇಕು. ಅದರಲ್ಲಿ ನೀನು ನನ್ನಲ್ಲಿ ಬಂದುದು ಏಕೆ ಎಂಬುದನ್ನು ಉಲ್ಲೇಖಿಸಬೇಕು. ಬಳಿಕ ನಾನು ಹೊರಗೆ ಹೋಗಿ ಅದನ್ನು ನನ್ನ ಗೆಳೆಯನಿಗೆ ಪೋಸ್ಟ್ ಮಾಡಿ ಬರುತ್ತೇನೆ. ಆ ಬಳಿಕವಷ್ಟೇ ನಿನಗೆ ಪ್ರತ್ಯೌಷಧಿ ನೀಡುವುದು. ಮುಂದಕ್ಕೆ ಕೂಡ ನೀನು ಪತ್ನಿಯನ್ನು ಕೊಲ್ಲಲು ಯತ್ನಿಸಿದರೆ ಅದನ್ನೇ ನಾನು ಪೊಲೀಸರಿಗೆ ನೀಡುತ್ತೇನೆ. ನನ್ನನ್ನು ಕೊಂದರೂ ಆ ಪತ್ರವನ್ನು ನನ್ನ ಗೆಳೆಯ ಪೊಲೀಸರಿಗೆ ನೀಡುತ್ತಾನೆ.”
ವೃದ್ಧನೇ ಒಂದು ಕಾಗದ ಮತ್ತು ಪೆನ್ನನ್ನು ರಾಘವನಿಗೆ ನೀಡಿದ…. ರಾಘವ ಬರೆಯತೊಡಗಿದ.
ವೃದ್ಧ ಅದನ್ನು ನೋಡುತ್ತಾ ನುಡಿದ. “ಇನ್ನೊಂದು ವಿಷಯ. ದಯವಿಟ್ಟು ಗುರುತು ಪತ್ತೆಹಚ್ಚಲಾಗದ ನನ್ನ ವಿಷದ ಬಗ್ಗೆ ಇತರರಿಗೂ ಸುದ್ದಿ ಪ್ರಸರಿಸು. ಹೇಗೆ ಹೇಳುವುದು, ಮುಂದೊಮ್ಮೆ ನಿನ್ನ ವಿರೋಧಿಗಳಿಂದ ನಿನ್ನ ಪ್ರಾಣ ಹೋಗುವುದೂ ನನ್ನಿಂದ ತಪ್ಪಬಹುದು…”
(ಫ್ರೆಡ್ರಿಕ್ ಬ್ರೌನ್‌ನ ಒಂದು ಕತೆಯನ್ನು ಆಧರಿಸಿದ್ದು)