ನನಗೆ ಅನುಕೂಲನಾದ ಪರಾಕ್ರಮಿಯೊಬ್ಬನ ಶೋಧವೇ ನನ್ನ ಮುಂದಿನ ಗುರಿಯಾಯಿತು.
ಕುರುಕ್ಷೇತ್ರ ರಣಭೂಮಿ. ಕರ್ಣಾರ್ಜುನರ ನಡುವೆ ನಿರ್ಣಾಯಕವಾದ ಹೋರಾಟ ನಡೆಯುತ್ತಿದೆ. ಇಬ್ಬರ ಮುಖದಲ್ಲೂ ತೀವ್ರವಾದ ದ್ವೇಷಭಾವ ಹೊಮ್ಮುತ್ತಿದೆ. ಪ್ರತಿಕಾರದ ಹಠದಿಂದ ಪರಸ್ಪರ ಕಾದುತ್ತಿದ್ದಾರೆ. ಇಬ್ಬರೂ ಪ್ರತಿಜ್ಞಾಬದ್ಧರು. ಸಂಜೆಯ ಸೂರ್ಯ ಮುಳುಗುವ ಮೊದಲೇ ಇಬ್ಬರಲ್ಲೊಬ್ಬನ ತಲೆ ನೆಲಕ್ಕುರುಳಬೇಕು. ಶಪಥ ಪೂರ್ಣಗೊಳ್ಳಬೇಕು. ಹೀಗೆ ನಿರ್ಣಯಿಸಿಕೊಂಡ ಶಸ್ತ್ರಾಸ್ತ್ರ ಪಾರಂಗತರಾದ ಈ ಮಹಾವೀರರ ದ್ವೈರಥ ಯುದ್ಧ ಪ್ರಾರಂಭವಾಗುತ್ತಿದ್ದಂತೆ ಉಭಯ ಸೇನೆಗಳೂ ಕಾದಾಟ ನಿಲ್ಲಿಸಿದವು. ಸೈನಿಕರೂ ಸೇನಾನಾಯಕರೂ ಕರ್ಣಾರ್ಜುನರ ಸಂಗ್ರಾಮಕ್ಕೆ ಪ್ರೇಕ್ಷಕರಾದರು. ಯುದ್ಧವೆಂದರೆ ಹೀಗಿರಬೇಕು ಎಂಬಂತೆ ಅವರ ಕಾಳಗ ಮಸಗಿತು. ಉಭಯರೂ ಅಸ್ತ್ರ ವಿಶೇಷಗಳನ್ನು, ಮಂತ್ರಾಸ್ತ್ರಗಳನ್ನು ಪ್ರತ್ಯಸ್ತ್ರಗಳನ್ನು ತೆರಪಿಲ್ಲದಂತೆ ಪ್ರಯೋಗಿಸುತ್ತಿದ್ದರು. ವಿದ್ವೇಷದ ಯುದ್ಧವಾದರೂ ಅವರ ಬಾಣಪ್ರಯೋಗದ ಕೌಶಲ ಅದನ್ನೊಂದು ಕಲಾಪ್ರದರ್ಶನವೆಂಬಂತೆ ಮಾರ್ಪಡಿಸಿಬಿಟ್ಟಿತ್ತು. ಈ ಮಹಾಯುದ್ಧದಲ್ಲಿ ನನ್ನ ಪ್ರವೇಶದ ಸಂದರ್ಭದ ನಿರೀಕ್ಷೆಯಲ್ಲಿ ನಾನೂ ಕಾದು ಕುಳಿತಿದ್ದೆ. ಕರ್ಣಾರ್ಜುನರ ಯುದ್ಧಕ್ಕೂ ನನ್ನ ಕಾಯುವಿಕೆಗೂ ಸಂಬಂಧವೇನೆಂದು ಅರ್ಥವಾಗಬೇಕಾದರೆ ನಾವು ಸ್ವಲ್ಪ ಹಿಂದೆ ಹೋಗಿ ಭೂತಕಾಲವನ್ನು ಬಗೆಯಬೇಕು.
* * *
ನನ್ನ ಹೆಸರು ಅಶ್ವಸೇನನೆಂದು. ನಾನು ಸರ್ಪರಾಜ ತಕ್ಷಕನ ಮಗ. ಎಲ್ಲ ಸರಿಯಾಗಿರುತ್ತಿದ್ದರೆ ನಾನು ಎಲ್ಲರ ಗೌರವಾದರಗಳಿಗೆ ಪಾತ್ರನಾಗಿ ಪ್ರಸಿದ್ಧನಾಗುತ್ತಿದ್ದೆ. ಆದರೆ ವಿಧಿ ನನ್ನ ಬಾಳಿನಲ್ಲಿ ವಿಚಿತ್ರವಾದ ಆಟವನ್ನಾಡಿಬಿಟ್ಟಿತು. ಹೀಗಾಗಿ ಅಜ್ಞಾತನಾಗಿ ಯಾರಿಗೂ ನನ್ನ ಇರವನ್ನು ತೋರದೆ ನನ್ನ ಬದುಕಿನ ಏಕೈಕ ಉದ್ದೇಶವನ್ನು ಈಡೇರಿಸಿಕೊಳ್ಳುವ ಹೊತ್ತನ್ನು ನಿರೀಕ್ಷಿಸುತ್ತ ಉಳಿಯಬೇಕಾಯಿತು.
ಇದೆಲ್ಲ ಪ್ರಾರಂಭವಾದುದು ಖಾಂಡವ ವನದಲ್ಲಿ. ಖಾಂಡವ ವನ ದೇವೇಂದ್ರನಿಗೆ ಸೇರಿದ್ದು. ನನ್ನ ತಂದೆ ತಕ್ಷಕನಿಗೂ ದೇವೇಂದ್ರನಿಗೂ ಆತ್ಮೀಯ ಗೆಳೆತನವಿತ್ತು. ನಾವು ಅಂದರೆ ನಾನು ಮತ್ತು ನನ್ನ ತಾಯಿ ಖಾಂಡವ ವನದಲ್ಲಿ ವಾಸವಿದ್ದೆವು. ಇಂದ್ರಮಿತ್ರನಾದ ನನ್ನ ತಂದೆಯಿಂದ ನಮಗದು ನಿರಾತಂಕವಾದ ಮನೆಯಾಗಿತ್ತು. ನಾನು ಎಳೆಯವನಾಗಿದ್ದಾಗಿನಿಂದಲೂ ತಂದೆಯ ಸಂಪರ್ಕ ಅಷ್ಟೇನೂ ಇರಲಿಲ್ಲ. ಅಪ್ಪನಿಗೆ ಸದಾಕಾಲ ಅವನದೇ ಕಾರ್ಯಭಾರ. ದೊಡ್ಡವರ ಒಡನಾಟ. ಖಾಂಡವ ವನಕ್ಕೆ ಅವನು ಬರುತ್ತಿದ್ದುದೇ ವಿರಳ. ಹೀಗಾಗಿ ತಾಯಿಯೇ ನನ್ನನ್ನು ಬೆಳೆಸಿದಳು. ನಾನು ಅಮ್ಮನ ಮಗನಾಗಿಯೇ ಬೆಳೆಯುತ್ತಿದ್ದೆ. ತಾಯಿಗೆ ನನ್ನ ಬಗ್ಗೆ ಅಪಾರ ವಾತ್ಸಲ್ಯ. ಗಂಡನ ಸಹವಾಸ ತಪ್ಪಿದ ಕೊರತೆಯನ್ನು ಅವಳು ಮಗನ ಲಾಲನೆಯಲ್ಲಿ ಮರೆಯುತ್ತಿದ್ದಿರಬೇಕು. ಅಲ್ಲದೆ ಬೇರೆ ಬಂಧು ಬಳಗವೂ ಜೊತೆಯಲ್ಲಿರಲಿಲ್ಲ. ತನ್ನ ಭಾವನೆಗಳನ್ನು ಅವಳು ಹಂಚಿಕೊಳ್ಳಬೇಕು ಯಾರಲ್ಲಿ? ಅವಳಿಗೆ ನಾನು ಮಾತ್ರ ಒಡನಾಡಿ; ನನಗೆ ಅವಳು ಮಾತ್ರ. ನಾವು ನಾಗಕುಲದವರು. ಕಾಡಿನ ಸಮೀಪದಲ್ಲಿ ಮನುಷ್ಯರೇನೊ ಇದ್ದರು. ಆದರೆ ಅವರು ನಮ್ಮ ಜಾತಿಯವರನ್ನು ಕಂಡರೆ ಒಂದೋ ಹೆದರುತ್ತಿದ್ದರು ಅಥವಾ ದ್ವೇಷಿಸುತ್ತಿದ್ದರು. ಈ ಕಾರಣದಿಂದ ನಾನು ಜತೆಗಾರರಿಲ್ಲದೇ ಬೆಳೆಯುತ್ತಿದ್ದೆ. ನಾವಿದ್ದ ವನಪ್ರದೇಶ ಬಿಟ್ಟರೆ ಹೊರಗಿನ ಅರಿವು ನನಗಿನಿತೂ ಇರಲಿಲ್ಲ. ನನ್ನ ಪ್ರಪಂಚವೇನಿದ್ದರೂ ನನ್ನ ತಾಯಿ ಮಾತ್ರ. ನಾನು ಒಂಟಿಯಾಗಿದ್ದೆ, ನಿಜ. ಆದರೆ ಜೀವನದ ಅನೇಕ ಪಾಠಗಳನ್ನು ತಾಯಿ ಕಲಿಸುತ್ತಿದ್ದಳು. ಅವಳು ಕಲಿಸಿದ ಬದುಕಿನ ಪಾಠಗಳಿಂದ ನಾನು ಅಪಾಯಕ್ಕೆ ಸಿಲುಕದೆ ಇರುವುದನ್ನು ಅರಿತೆ; ಆಹಾರ ಸಂಪಾದಿಸಿಕೊಳ್ಳುವುದನ್ನು ಕಲಿತೆ; ಶತ್ರುಗಳು ಎದುರಾದಾಗ ರಕ್ಷಿಸಿಕೊಳ್ಳುವುದನ್ನು ಕಲಿತೆ. ಎಲ್ಲಕ್ಕಿಂತ ಮಿಗಿಲಾಗಿ ಶತ್ರುಗಳು ಯಾರು, ಮಿತ್ರರು ಯಾರು ಎಂದು ಗುರುತಿಸುವುದನ್ನು ಕಲಿತೆ. ಹೊಟ್ಟೆ ತುಂಬ ಆಹಾರ ದೊರೆಯುತ್ತಿತ್ತು. ಪ್ರಾಣಭೀತಿ ಇರಲಿಲ್ಲ. ಜೀವಿ ಸುಖವಾಗಿರುವುದಕ್ಕೆ ಬೇರೇನು ಬೇಕು? ಇದಕ್ಕಿಂತ ಹೆಚ್ಚು ಬೇಕು ಅನಿಸುವ ವಯಸ್ಸೂ ನನ್ನದಲ್ಲ. ಮುಂದೆ ನಾನು ಬೆಳೆದು ದೊಡ್ಡವನಾದ ಬಳಿಕ ನಾಗಲೋಕವನ್ನು ಸೇರಿ ನಮ್ಮ ಬಂಧುಗಳೊಂದಿಗೆ ಜೀವಿಸಬೇಕೆಂದು ನಾವಿಬ್ಬರೂ ಆಗೀಗ ಮಾತನಾಡಿಕೊಳ್ಳುತ್ತಿದ್ದೆವು. ನಮ್ಮ ಜಾತಿಯ ಚೆಲುವಿನ ಹೆಣ್ಣೊಬ್ಬಳನ್ನು ನಾನು ಮದುವೆಯಾಗಬೇಕು ಎಂದು ತಾಯಿಗೆ ಆಸೆಯಿತ್ತು. ಒಂದರ್ಥದಲ್ಲಿ ನೆಮ್ಮದಿಯಿಂದಲೇ ಬದುಕು ಸಾಗುತ್ತಿತ್ತು. ಮುಂದೆಯೂ ಹೀಗೆಯೇ ಸಾಗುತ್ತಿತ್ತೋ ಏನೋ. ಆದರೆ?
ಅದೊಂದು ನಮ್ಮ ಬಾಳಿನ ದುರ್ದಿನ. ಪ್ರಶಾಂತವಾಗಿದ್ದ ಖಾಂಡವ ವನದ ಪರಿಸರ ಇದ್ದಕ್ಕಿದ್ದಂತೆ ಕಲಕಿಹೋಯಿತು. ಸುತ್ತಲಿಂದ ಬೆಂಕಿ ಆವರಿಸುತ್ತ ಬರತೊಡಗಿತು. ಅಪಾರ ಪ್ರಮಾಣದ ಹೊಗೆಯೂ ಕವಿಯುತ್ತಿತ್ತು. ಇದೇನಪ್ಪ ಆಶ್ಚರ್ಯ ಎಂದು ನಾವು ದಿಗ್ಭ್ರಾಂತರಾದೆವು. ಇಂದ್ರನಿಂದ ರಕ್ಷಿತವಾದ ಖಾಂಡವ ವನಕ್ಕೆ ಕಿಚ್ಚು ಹತ್ತಿಕೊಳ್ಳುವುದು ಶಕ್ಯವೇ ಇರಲಿಲ್ಲ. ಸುಡುವ ಅಗ್ನಿಯೇ ಇಂದ್ರನ ಆಜ್ಞಾಪಾಲಕ. ಅವನಿಗೆ ಪರಮಪ್ರಿಯವಾದ ವನವನ್ನು ಅಗ್ನಿ ಸುಡುವುದು ಹೇಗೆ ಸಾಧ್ಯ? ಅಥವಾ ಹಾಗೆ ಸುಡುವುದಿದ್ದರೂ ಇಂದ್ರನ ಅನುಮತಿ ಬೇಡವೆ? ಅನುಮತಿಯಿಲ್ಲದೆ ಸುಡುವುದಕ್ಕೆ ಇಂದ್ರ ಬಿಡುತ್ತಾನೆಯೆ? ನಮ್ಮ ಮನಸ್ಸಿನಲ್ಲಿ ಇಂತಹ ಅನೇಕ ಪ್ರಶ್ನೆಗಳು ಮೂಡುತ್ತಿದ್ದವು. ಆದರೆ ಉತ್ತರಿಸುವವರು ಯಾರು? ಆದರೆ ನಮ್ಮ ಪ್ರಶ್ನೆಗಳಿಗೆ ಸ್ವಯಂ ಇಂದ್ರನೇ ಉತ್ತರಿಸಿದನೋ ಎಂಬಂತೆ ಬೆಂಕಿ ಆರತೊಡಗಿತು. ಮೇಲೆ ನೋಡಿದರೆ ಆಗಸದಿಂದ ಧಾರಾಕಾರ ಮಳೆ ಸುರಿಯುತ್ತಿದೆ.ಅಂತಿಂತಹ ಮಳೆಯಲ್ಲ, ಖಾಂಡವ ವನವೇ ಕೊಚ್ಚಿಕೊಂಡು ಹೋಗಬೇಕು ಅಂತಹ ಭೀಕರ ವರ್ಷಪಾತ. ಈ ಬಿರುಮಳೆಗೆ ಇಂದ್ರಾಜ್ಞೆಯೇ ಕಾರಣವೆಂದು ನಮಗೆ ಅರ್ಥವಾಯಿತು. ಬಿಟ್ಟಾನೆ ಇಂದ್ರ? ಅಗ್ನಿಯ ಅಹಂಕಾರಕ್ಕೆ ತಕ್ಕ ಮದ್ದರೆದ ಹಾಗಾಯಿತೆಂದು ಸಂತೋಷವೂ ಆಯಿತು. ನಾನು ಕುಣಿಯತೊಡಗಿದೆ. “ಬೇಡ ಮಗು, ಇದು ಆನಂದಪಡುವ ವಿಚಾರವೆಂದು ನನಗೆ ತೋರುವುದಿಲ್ಲ. ಪ್ರಕರಣ ದಿಕ್ಪತಿಗಳ ನಡುವಿನ ಮೇಲಾಟಕ್ಕೆ ಕಾರಣವಾದರೆ….. ಮುಂದೆ ಇನ್ನೆಂತಹ ಘೋರ ವಿಪತ್ತು ನಮಗೆ ಕಾದಿದೆಯೋ ಏನೋ” ಎಂದಳು ನನ್ನ ತಾಯಿ. “ಅಯ್ಯೋ ಬಿಡಮ್ಮ, ದೇವರಾಜನ ಅಪ್ರತಿಹತವಾದ ಆಜ್ಞೆಯನ್ನು ಮೀರಿ ಯಾವ ದಿಕ್ಪಾಲಕನಾದರೂ ನಡೆಯುವುದು ಶಕ್ಯವೇ? ಅಲ್ಲದೆ ಇದು ಇಂದ್ರನಿಗೆ ಬಹು ಪ್ರಿಯವಾದ ವನ. ಅವನಿದನ್ನು ಉಳಿಸಿಕೊಳ್ಳದಿರುವನೆ? ಇಷ್ಟು ದುಡುಕಿನ ವರ್ತನೆ ತೋರಿದ ಅಗ್ನಿಗೆ ಶಿಕ್ಷೆ ಕಾದಿದೆ ನೋಡು. ಮೇಲಾಗಿ ನಮ್ಮಪ್ಪ ಇಂದ್ರನ ಮಿತ್ರನಲ್ಲವೇ? ನನಗೆ ತೋರುತ್ತದೆ, ನಮ್ಮನ್ನುಳಿಸುವುದಕ್ಕೇ ಹೀಗೆ ಮಳೆ ಸುರಿಸುತ್ತಿರಬೇಕು” ಎಂದು ತಾಯಿಗೆ ಸಮಾಧಾನ ಹೇಳಿದೆ ನಾನು. ಅವಳು ಮೌನವಾದಳು. ಹೀಗೆ ನಾನು ಸಾಂತ್ವನ ಹೇಳಿ ಬಾಯಿ ಮುಚ್ಚುವ ಮುನ್ನವೇ ಒಂದು ವಿಚಿತ್ರ ಸಂಭವಿಸಿಬಿಟ್ಟಿತು. ಮುಸಲಧಾರೆಯಾಗಿ ಸುರಿಯುತ್ತಿರುವ ಮಳೆ ಇನ್ನೇನು ಕಾಳ್ಗಿಚ್ಚನ್ನು ಆರಿಸಿ ವನ ಪ್ರಶಾಂತವಾಗುವುದೆಂಬ ನಮ್ಮ ನಂಬುಗೆಯನ್ನು ಹುಸಿಯಾಗಿಸುವಂತೆ ಆಗಸದ ತುಂಬೆಲ್ಲ ಬಾಣಗಳು ತುಂಬಿಕೊಳ್ಳತೊಡಗಿದವು.
`ಇದೇನು ಕೌತುಕ’ ಎಂದು ನಾವು ಬೆರಗಿನಿಂದ ನೋಡುತ್ತಿರುವಂತೆ ವನಪ್ರದೇಶದ ಮೇಲೆ ಬಾಣಗಳ ಚಪ್ಪರವೇ ನಿರ್ಮಾಣವಾಯಿತು. ಏನಾಶ್ಚರ್ಯ! ಸುರಿಯುವ ಮಳೆಯ ಒಂದು ಹನಿಯೂ ಕೆಳಗೆ ಬೀಳದಂತೆ ಆ ಬಾಣಗಳ ಚಪ್ಪರ ತಡೆಯಿತು. ಇದರಿಂದಾಗಿ ಇನ್ನೇನು ನಂದಿಹೋಗುತ್ತಿದ್ದ ಬೆಂಕಿ ಮತ್ತೆ ಪ್ರಜ್ವಲಿಸಿ ಉರಿಯತೊಡಗಿತು. ಭೀತಿಗೊಂಡ ಸಮಸ್ತ ವನವಾಸೀ ಜೀವರಾಶಿ ಪ್ರಾಣ ಭೀತಿಯಿಂದ ದೆಸೆಗೆಟ್ಟು ಓಡಲಾರಂಭಿಸಿದವು. ವನವನ್ನು ಸುತ್ತಿಕೊಂಡು ಉರಿಯುತ್ತಿದ್ದ ಅಗ್ನಿಯಿಂದ ಹೇಗೆ ತಪ್ಪಿಸಿಕೊಳ್ಳಲು ಸಾಧ್ಯ? ಯಾವ ಕಡೆಗೆ ಧಾವಿಸಿದರೂ ಬೆಂಕಿಯ ಕೆನ್ನಾಲಗೆ ನುಂಗಬರುತ್ತಿತ್ತು. ನಮ್ಮ ಕಣ್ಣೆದುರೇ ಸಾವಿರಾರು ಮೃಗಪಕ್ಷಿಗಳು ಸುಟ್ಟು ಸೀಕರಿಯಾಗಿ ಅಸು ನೀಗಿದವು. ಅಲ್ಲಿಯವರೆಗೆ ಹೇಗಾದರೂ ತಪ್ಪಿಸಿಕೊಂಡೇವು ಎಂಬ ಧೈರ್ಯದಿಂದಿದ್ದ ನಮಗೆ ಈಗ ನಿಜವಾದ ಪ್ರಾಣಭೀತಿ ಕಾಣಿಸಿಕೊಂಡಿತು. ಬೆಂಕಿಯ ನಡುವೆ ನುಸುಳಿಯೋ, ಮರವೇರಿ ಅಲ್ಲಿಂದ ನೆಗೆದೋ ಪಾರಾಗಬಹುದೆಂಬ ಭರವಸೆ ಇನ್ನೂ ಇತ್ತು. ಆದರೆ ಹಾಗೆ ಪಾರಾಗುವುದಕ್ಕೆ ಯತ್ನಿಸಿದ ಅನೇಕ ಪ್ರಾಣಿಗಳು ಮರಳಿ ಬೆಂಕಿಗೇ ಬೀಳುತ್ತಿದ್ದವು. ಇಲ್ಲದಿದ್ದರೆ ಎಲ್ಲಿಂದಲೋ ಹಾರಿಬರುತ್ತಿದ್ದ ಅಸಂಖ್ಯಾತ ಬಾಣಗಳಿಗೆ ಬಲಿಯಾಗುತ್ತಿದ್ದವು. ಇದನ್ನೆಲ್ಲ ಕಂಡ ಬಳಿಕ ಒಳಗಿದ್ದ ಅಷ್ಟಿಷ್ಟು ಧೈರ್ಯವೂ ಉಡುಗಿಹೋಯಿತು. “ಯಾರೋ ಚಂದ್ರವಂಶೀಯನಂತೆ ಅರ್ಜುನ ಎಂದವನ ಹೆಸರಂತೆ. ಅದ್ಭುತ ಬಿಲ್ಗಾರನಂತೆ. ಅಗ್ನಿದೇವನಿಗೆ ಖಾಂಡವವನ್ನು ದಹಿಸಿಬಿಡುವುದಕ್ಕೆ ಸಹಾಯಕನಾಗಿ ನಿಂತಿದ್ದಾನಂತೆ” – ಹೀಗೆ ಯಾರೋ ತಾಪಸರು, ಬೆಂಕಿಯಿಂದ ತಪ್ಪಿಸಿಕೊಂಡು ಓಡುತ್ತಿದ್ದವರು ಮಾತನಾಡಿಕೊಳ್ಳುತ್ತಿದ್ದುದು ನಮ್ಮ ಕಿವಿಗೆ ಬಿತ್ತು. ಅಮ್ಮ ಚಕಿತಳಾದಳು. “ಅಯ್ಯಾ ತಾಪಸರೆ, ಸ್ವಲ್ಪ ತಡೆಯಿರಿ. ಅರ್ಜುನ ಇಂದ್ರಾಂಶದಿಂದ ಹುಟ್ಟಿದವನಲ್ಲವೆ? ತಂದೆಯ ವನವನ್ನು ಸುಡುವುದಕ್ಕೆ ಮಗನ ಸಹಾಯವೆ?”
“ಅಮ್ಮಾ ನಾಗಿಣಿ, ಅದೊಂದನ್ನೂ ನಾವರಿಯೆವು. ಅಗ್ನಿದೇವನಿಗೆ ಈ ವನವೆಲ್ಲವನ್ನು ಆಹಾರವಾಗಿ ಕೊಡುವೆನೆಂದು ಅರ್ಜುನನ ವಾಗ್ದಾನವಂತೆ. ಈ ಸಹಾಯಕ್ಕಾಗಿ ದಿವ್ಯರಥ, ವಿಶೇಷ ಶಸ್ತ್ರಾಸ್ತ್ರಗಳನ್ನು ಅಗ್ನಿಯಿಂದ ಪಡೆದಿದ್ದಾನಂತೆ. ಇಂದ್ರನ ಮಳೆಯ ರಭಸವನ್ನು ತಡೆದ ಅರ್ಜುನ ಯುದ್ಧಕ್ಕೆ ಬಂದ ಇಂದ್ರನನ್ನೇ ಸೋಲಿಸಿದನಂತೆ. ಅವನಿಗೆ ಬೆಂಬಲಿಗನಾಗಿ ಯಾದವೋತ್ತಮ ಕೃಷ್ಣನೇ ಇದ್ದಾನಂತೆ. ಇಲ್ಲಿರುವ ಪ್ರಾಣಿಪಕ್ಷಿಗಳ ಸಹಿತ ಈ ವನ ಪೂರ್ಣವಾಗಿ ಸುಟ್ಟು ಹೋಗುತ್ತದೆ. ಅದಕ್ಕೆ ಮುನ್ನ ನಿನ್ನ ಮಗನನ್ನೂ ಕರೆದುಕೊಂಡು ಇಲ್ಲಿಂದ ಪಾರಾಗಿಹೋಗು – “ಹೀಗೆಂದು ಅಮ್ಮನಿಗೆ ಉತ್ತರಿಸಿದ ತಾಪಸಿ ವೇಗವಾಗಿ ಎತ್ತಲೋ ಧಾವಿಸಿದ. ಇದನ್ನು ಕೇಳಿದ ನಾವಿಬ್ಬರೂ ಭಯಗೊಂಡೆವು. ಮುಂದೇನು? ಜೀವರಕ್ಷಣೆಗಾಗಿ ಯಾರ ಮೊರೆ ಹೊಗುವುದು? ಇಂದ್ರನೇ ಸೋತಮೇಲೆ ನಮ್ಮ ಸಹಾಯಕ್ಕೆ ಬರುವವರು ಯಾರಿದ್ದಾರೆ? ಬೆಂಕಿಯ ಬೇಗೆ ಇನ್ನೂ ನಮ್ಮವರೆಗೆ ಬಂದಿರಲಿಲ್ಲ. ಯೋಚಿಸುವುದಕ್ಕೆ ಕೊಂಚ ಕಾಲಾವಕಾಶವಿತ್ತು. ನನಗೊಂದು ಆಲೋಚನೆ ಬಂತು. ತಾಯಿಗೆ ಹೇಳಿದೆ, “ಅಮ್ಮಾ ಇಲ್ಲಿಯೇ ಕುಳಿತರೆ ನಾವಿಬ್ಬರೂ ಸುಟ್ಟು ಸಾಯುತ್ತೇವೆ. ಹಾಗೆಂದು ನಮ್ಮ ರಕ್ಷಣೆಗಾಗಿ ಬರುವವರು ಕಾಣೆ. ಇಲ್ಲಿಂದ ಓಡಿ ಪಾರಾಗುವುದೂ ಸುಲಭವಲ್ಲ. ಕಂಡೆಯಾ, ತಪ್ಪಿಸಿಕೊಳ್ಳಲೆತ್ನಿಸಿದವರನ್ನು ಅರ್ಜುನ ಬಾಣಗಳಿಂದ ಕತ್ತರಿಸಿ ಮತ್ತೆ ಬೆಂಕಿಗೆ ಚೆಲ್ಲುತ್ತಿದ್ದಾನೆ. ಅಗ್ನಿದೇವ ಕರುಣೆದೋರುವ ಸಂಭವವಿಲ್ಲ. ನಮಗುಳಿದಿರುವ ದಾರಿಯೊಂದೇ. ಅಮ್ಮಾ, ಅರ್ಜುನನಲ್ಲಿ ಹೋಗಿ ಜೀವಭಿಕ್ಷೆ ಬೇಡೋಣ. ಧರ್ಮರಾಯನ ತಮ್ಮನಲ್ಲವೆ? ನಮ್ಮನ್ನುಳಿಸಿಯಾನು. ಆಗದೇ?” ಒಂದು ಕ್ಷಣ ತಾಯಿ ಮಾತನಾಡಲಿಲ್ಲ. ನಾನಾಡಿದ್ದನ್ನು ಚಿಂತಿಸುತ್ತಿದ್ದಳು. ಬಳಿಕ ನುಡಿದಳು, “ನಿಜ ನೀನಾಡುತ್ತಿರುವುದು. ಬೇರೆ ಸಂದರ್ಭವಾದರೆ ತಕ್ಷಕನ ಕುಟುಂಬಕ್ಕೆ ಇದು ಹೀನಾಯವೆಂದು ನಾನು ಹೇಳುತ್ತಿದ್ದೆ. ಆದರೀಗ ಹೆತ್ತ ಮಗುವಿನ ಪ್ರಾಣಕ್ಕಿಂತ ಮಿಗಿಲಾದ್ದು ಬೇರೇನಿರುತ್ತದೆ ತಾಯಿಗೆ? ನಮ್ಮ ಸ್ವಾಭಿಮಾನ, ಕುಲಾಭಿಮಾನಗಳಿಗಿಂತ ನಿನ್ನನ್ನು ಉಳಿಸಿಕೊಳ್ಳುವುದು ಮುಖ್ಯ ನನಗೆ. ನಿಜ ಕಂದ, ಅರ್ಜುನ ಧರ್ಮಪರಿಪಾಲಕನಾದ ಧರ್ಮರಾಜನ ತಮ್ಮ. ಪ್ರಾಣದಾನಕ್ಕಿಂತ ದೊಡ್ಡ ಪುಣ್ಯಕಾರ್ಯವಿಲ್ಲವೆಂದು ಅರಿತಿದ್ದಾನು. ಅಲ್ಲದೆ ಅವನ ಸಮೀಪದಲ್ಲಿ ಶ್ರೀಕೃಷ್ಣದ್ದಾನೆ. ಅವನು ಕರುಣಾಮಯಿಯಂತೆ. ಅವನಲ್ಲಿಯೂ ಬೇಡಿಕೊಳ್ಳೋಣ. ಪ್ರಾಣವುಳಿದರೆ ಸಾಕು. ಈ ಮನುಷ್ಯಲೋಕದ ಗೊಡವೆ ನಮಗೆ ಬೇಡ. ಮನುಷ್ಯರು ನಮ್ಮ ಹಾಗಲ್ಲ, ನಮಗೆ ಹಲ್ಲಿನಲ್ಲಿ ಮಾತ್ರ ವಿಷವಾದರೆ ಇವರಿಗೆ ಮೈ, ಬುದ್ಧಿಗಳಲ್ಲೂ ಅದೇ ತುಂಬಿದೆ. ಕಾರಣವೇ ಇಲ್ಲದೆ ಕೊಲ್ಲುವವರ ಪರಿಸರವನ್ನು ಬಿಟ್ಟು ದೂರಕ್ಕೆ ನಮ್ಮ ನಾಡಿಗೆ ಹೋಗಿಬಿಡೋಣ.” ಹೀಗೆಂದು ಹೇಳಿದವಳು ಮುಂದೆ ಸಾಗಿದಳು. ನಾನು ಹಿಂಬಾಲಿಸಿದೆ. ಕಾಡಿನ ತುಂಬ ಹೊಗೆ ತುಂಬಿತ್ತು. ದಾರಿ ಗೋಚರಿಸದಷ್ಟು ದಟ್ಟ ಹೊಗೆ. ನಾವು ನಿಧಾನಕ್ಕೆ ಸರಿಯುತ್ತಿದ್ದೆವು. ಬೆಂಕಿಯ ಝಳ ಬೇರೆ ನಮ್ಮನ್ನು ಕಂಗೆಡಿಸುತ್ತಿತ್ತು. ಕೃಷ್ಣಾರ್ಜುನರು ಎಲ್ಲಿದ್ದಾರೆಂದು ತಿಳಿಯುತ್ತಿರಲಿಲ್ಲ. ಆದರೂ ಊಹೆಯ ಮೇಲೆ ಮುಂದುವರಿದೆವು. ಬೆಂಕಿಯ ಪರದೆಯಾಚೆಗೆಲ್ಲೋ ಅರ್ಜುನನಿರಬೇಕು. ಆದರೆ ಎಲ್ಲಿ? ಹತ್ತಿರವಾಗುತ್ತಿದ್ದ ಬೆಂಕಿಯಿಂದ ತಪ್ಪಿಸಿಕೊಳ್ಳುತ್ತ ಸಾಗುತ್ತಿದ್ದ ನಮಗೆ ಎಷ್ಟೋ ಹೊತ್ತಿನ ಮೇಲೆ ತಿಳಿದದ್ದು ನಾವು ಗೊತ್ತು ಗುರಿಯಿಲ್ಲದೆ ಪ್ರದಕ್ಷಿಣೆ ಹಾಕುತ್ತಿದ್ದೆವು. ಬೆಂಕಿ ಮೊದಲಿಗಿಂತ ತೀವ್ರವೇಗದಿಂದ ಸಮೀಪಿಸುತ್ತಿತ್ತು. ದಿಗ್ಭ್ರಾಂತರಾಗಿದ್ದ ನಮಗೆ ಅರ್ಜುನ ಕಾಣಿಸುವುದಿರಲಿ, ಅವನಿರುವ ಸ್ಥಳವನ್ನು ಊಹಿಸಿಕೊಳ್ಳಲೂ ಸಾಧ್ಯವಾಗಲಿಲ್ಲ. ಕೊನೆಗೆ ನಮಗರ್ಥವಾದುದೇನೆಂದರೆ ಹೀಗೆಯೆ ಸುತ್ತುತ್ತಿದ್ದರೆ ಕೆಲವೇ ಕ್ಷಣಗಳಲ್ಲಿ ಬಸವಳಿದು ಸುಟ್ಟು ಸಾಯುತ್ತೇವೆನ್ನುವುದು.
ನನ್ನಿಂದ ಮುಂದೆ ಹೋಗುತ್ತಿದ್ದ ಅಮ್ಮನಿಗೂ ಇದು ಅರ್ಥವಾಗಿರಬೇಕು. ಒಂದೆಡೆ ನಿಂತಳು. “ಮಗೂ ಅಶ್ವಸೇನ, ನಾವು ಎಷ್ಟು ಹುಡುಕಿದರೂ ಅರ್ಜುನ ಕಾಣಿಸುವಂತಿಲ್ಲ. ಅಗ್ನಿಜ್ವಾಲೆಗಳ ಆಚೆಗಿರುವ ಅವನನ್ನು ನಾವು ನೋಡಲಾರೆವು. ಬೆಂಕಿಯನ್ನು ದಾಟುವುದು ನಮ್ಮಿಂದಾಗದು. ತಪ್ಪಿಸಿಕೊಳ್ಳುವ ಕೊನೆಯ ಪ್ರಯತ್ನವನ್ನು ಮಾಡಿನೋಡೋಣವೆ?” ನಾನು ಸಮ್ಮತಿಸಿದೆ. ಬೇರೇನು ಮಾಡುವಂತಿತ್ತು? ಸುತ್ತಲೂ ದೃಷ್ಟಿ ಹರಿಸಿದಾಗ ಒಂದೆಡೆಯಲ್ಲಿ ಸ್ವಲ್ಪ ತೆರವಾದ ಸ್ಥಳ ಕಾಣಿಸಿತು. ಜ್ವಾಲೆಗಳ ರಭಸ ಅಲ್ಲಿ ಕಡಿಮೆಯಿತ್ತು. ಇದೇ ಸೂಕ್ತ ಸ್ಥಳವೆಂದು ಅಲ್ಲಿಂದ ನುಸುಳಿ ಪಾರಾಗೋಣವೆಂದು ಅಲ್ಲಿಗೆ ಧಾವಿಸಿದೆವು. ಅಲ್ಲಿಯವರೆಗೂ ಮುಂದಿದ್ದ ತಾಯಿ ತಡೆದು ನಿಂತಳು. “ಮಗು, ನೀನು ಮಂದೆ ಸಾಗು. ನಾನು ಹಿಂಬಾಲಿಸುತ್ತೇನೆ.” ಎಂದಳು. ಯೋಚಿಸುವಷ್ಟು ಕಾಲಾವಕಾಶವಿರಲಿಲ್ಲ. ಸರಿಯೆಂದು ನಾನು ಮುಂದಾದೆ. ಅಲ್ಲಿ ಮಳೆಯ ಪರಿಣಾಮವೋ ಹಸಿರು ಹುಲ್ಲು ದಟ್ಟವಾಗಿ ಬೆಳೆದಿದ್ದುದರಿಂದಲೋ ಬೆಂಕಿಯ ಪ್ರಭಾವ ಕಡಿಮೆಯಿತ್ತು. ಅನುಕೂಲಕರ ತೆರಪು ಕಂಡೊಡನೆ ಸಾಧ್ಯವಿದ್ದಷ್ಟು ವೇಗದಿಂದ ಹೊರಕ್ಕೆ ಚಿಮ್ಮಿದೆ. ನನ್ನ ಬೆನ್ನಿಗೇ ತಾಯಿಯೂ ಬರುತ್ತಿದ್ದಳು. ನಾನು ಬೆಂಕಿಯ ಬಲೆಯಿಂದ ಹೆಚ್ಚುಕಡಿಮೆ ತಪ್ಪಿಸಿಕೊಂಡಿದ್ದೆ. ತಾಯಿ ಹೊರಬರುವ ಯತ್ನದಲ್ಲಿದ್ದಾಗಲೇ ಅನಾಹುತ ನಡೆದುಹೋಯಿತು. ಹೇಗೋ ಪಾರಾಗಿಬಿಟ್ಟೆನಲ್ಲ ಎಂಬ ಸಂತೋಷದಲ್ಲಿ ಸಿಕ್ಕಿದ ದಾರಿ ಹಿಡಿದು ಧಾವಿಸುತ್ತಿದ್ದ ನನಗೆ “ಅರ್ಜುನಾ, ಅಲ್ಲಿ ನೋಡು, ಎರಡು ಸರ್ಪಗಳು ತಪ್ಪಿಸಿಕೊಳ್ಳುತ್ತಿವೆ. ಬಿಡಬೇಡ, ಹೊಡೆ. ಇಲ್ಲವಾದಲ್ಲಿ ಅಗ್ನಿದೇವನಿಗೆ ಕೊಟ್ಟ ಭಾಷೆ ಸುಳ್ಳಾಗುತ್ತದೆ” ಎಂದು ಯಾರೋ ಕೂಗಿಹೇಳುತ್ತಿದ್ದುದು ಕೇಳಿಸಿತು. ಬಹುಶಃ ಕೃಷ್ಣನೇ ಇರಬೇಕು. ಇಲ್ಲಿಯವರೆಗೆ ಅವರಿಗಾಗಿ ಹುಡುಕುತ್ತಿದ್ದಾಗ ಕಾಣದಿದ್ದವರು ಈಗ ಹಠಾತ್ತನೆ ಎಲ್ಲಿಂದ ಬಂದರಪ್ಪ? ಇದನ್ನೆಲ್ಲ ಯೋಚಿಸುವಷ್ಟು ವ್ಯವಧಾನವೆಲ್ಲಿತ್ತು? ನಾನು ಓಡುತ್ತಿದ್ದೆ ಮಾತ್ರ. ಕೃಷ್ಣನ ಎಚ್ಚರಿಕೆಯ ಬೆನ್ನಿಗೇ ನನ್ನ ತಾಯಿಯ ಆತಂಕದ ಕೂಗೂ ಕೇಳಿಸಿತು. `ಅಯ್ಯೋ ಕಂದಾ ನಿಲ್ಲಬೇಡ, ಓಡು, ಓಡು….” ಎಲ್ಲಿಗೆ ಓಡಲಿ? ನನ್ನ ಅಕ್ಕಪಕ್ಕದಲ್ಲೇ ಸುಂಯ್ ಗುಡುತ್ತ ಬಾಣಗಳು ಹಾರುತ್ತಿದ್ದವು. ಯಾವುದನ್ನೂ ಗಮನಿಸದೆ ಧಾವಿಸುತ್ತಿದ್ದ ನನಗೆ ಇದ್ದಕ್ಕಿದ್ದಂತೆ ನನ್ನ ತಾಯಿಯ ಆರ್ತನಾದ ಕೇಳಿತು. ಸರ್ವನಾಶವಾಯಿತು ಎಂದುಕೊಂಡೆ. ನನ್ನ ಮಮತಾಮಯಿ ಮಾತೆ ಅರ್ಜುನನ ಬಾಣಗಳಿಗೆ ಬಲಿಯಾಗಿದ್ದಳು. ನನ್ನಮೇಲೆ ಅರ್ಜುನ ಪ್ರಯೋಗಿಸಿದ ಬಾಣಕ್ಕೆ ತಾನು ಅಡ್ಡಬಂದಿದ್ದಳು. ನನ್ನನ್ನು ಉಳಿಸಿದ್ದಳು. ಜೀವಭಯದಿಂದ ಕಂಗೆಟ್ಟಿದ್ದ ನನಗೆ ಕೊನೆಯ ಬಾರಿಗೆ ಅವಳ ಮುಖವನ್ನು ನೋಡಲೂ ಸಾಧ್ಯವಾಗಲಿಲ್ಲ. ಸುಡುತ್ತಿದ್ದ ಕಾಡಿನಿಂದ ಹೊರಬಂದಿದ್ದ ನಾನು ಮತ್ತೆ ಓಡತೊಡಗಿದೆ. ನನ್ನನ್ನು ಕಂಡಿರಬೇಕು ಅರ್ಜುನ. ಮತ್ತೆ ಬಾಣಪ್ರಯೋಗಕ್ಕೆ ತೊಡಗಿದ. ಎಷ್ಟು ವೇಗವಾಗಿ ಓಡಿದರೂ ಅವನ ಬಾಣದ ಹೊಡೆತದಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಒಂದು ಬಾಣ ನನ್ನ ಬಾಲದ ಭಾಗವನ್ನು ಕತ್ತರಿಸಿಬಿಟ್ಟಿತು. ಆದರೂ ಅಗ್ನಿಗೆ ಆಹುತಿಯಾಗದೆ ಜೀವ ಉಳಿಸಿಕೊಳ್ಳುವುದು ನನಗೆ ಸಾಧ್ಯವಾಯಿತು. ಅಲ್ಲಿಂದ ಪಾರಾಗಿ ನನ್ನ ಜಾತಿಯವರ ನೆಲೆಯನ್ನು ಸೇರಿಕೊಂಡೆ. ನನ್ನ ತಂದೆ ತಾಯಿಯರ ಬಂಧುಗಳೆಲ್ಲ ನನ್ನನ್ನು ಅತ್ಯಂತ ಪ್ರೀತಿಯಿಂದಲೇ ಕಂಡರು. ಅರ್ಜುನನಂತಹ ಪ್ರಚಂಡ ಬಿಲ್ಗಾರನ ಗುರಿಯಿಂದ ತಪ್ಪಿಸಿಕೊಂಡು ನಾನು ಪ್ರಾಣವುಳಿಸಿಕೊಂಡು ಬಂದದ್ದೇ ಅವರಿಗೆಲ್ಲ ದೊಡ್ಡ ವಿಸ್ಮಯವಾಗಿತ್ತು. ಅವರ ಆಶ್ರಯದಲ್ಲಿ ನಾನು ಸುಖವಾಗಿರಬಹುದಿತ್ತು. ಜತೆಗಾತಿಯಾಗಿ ಒಬ್ಬಳು ನಾಗಸುಂದರಿಯನ್ನು ವರಿಸಬಹುದಿತ್ತು. ಸಂತಾನವೂ ಬೆಳೆಯುತ್ತಿತ್ತು. ಖಾಂಡವ ಪ್ರಕರಣವಲ್ಲದಿದ್ದರೆ ನನ್ನ ಬದುಕು ಹಾಗೆಯೇ ಸಾಗುತ್ತಿತ್ತೋ ಏನೊ. ಆದರೆ?
ನನ್ನ ಕಣ್ಣೆದುರಿಗೆ ಕಾಣುತ್ತಿದ್ದುದು ಹರಿತವಾದ ಬಾಣಕ್ಕೆ ಬಲಿಯಾಗಿ ವಿಲವಿಲನೆ ಒದ್ದಾಡಿ ಅಸುನೀಗಿದ ನನ್ನ ತಾಯಿಯ ಬಲಿದಾನ. ಅವಳ ಮೇಲೆ ಅರ್ಜುನ ಬಾಣಬಿಟ್ಟಿರಲಿಲ್ಲ. ಅವನಿಗೆ ಮೊದಲು ಕಾಣಿಸಿದ್ದು ನಾನು. ನನ್ನನ್ನು ಕೊಲ್ಲುವುದಕ್ಕೇ ಅವನು ಬಾಣಪ್ರಯೋಗ ಮಾಡಿದ್ದು. ಇದನ್ನು ನೋಡಿದ ನನ್ನಮ್ಮ ಆ ಬಾಣಕ್ಕೆ ಅಡ್ಡಲಾಗಿ ತಾನು ಜಿಗಿದಳು. ಪರಿಣಾಮ ನನ್ನ ಬದಲಾಗಿ ತಾನೇ ಜೀವತೆತ್ತಳು. ನನ್ನ ಬಾಲ ತುಂಡಾದರೂ ನಾನು ಪ್ರಾಣಸಹಿತ ಉಳಿದೆ. ಅಬ್ಬಾ ತಾಯಿಯ ಹೃದಯವೇ! ಅವಳ ಸ್ಥಾನದಲ್ಲಿ ನನ್ನ ತಂದೆಯೇ ಇದ್ದಿದ್ದರೂ ಬಹುಶಃ ನಾನು ಉಳಿಯುತ್ತಿರಲಿಲ್ಲ. ನನ್ನನ್ನು ಹೆತ್ತು ಪೊರೆದ ಆ ಮಹಾಮಾತೆಗಾಗಿ ನನ್ನ ಕಣ್ಣುಗಳಲ್ಲಿ ನೀರಿಳಿಸುವುದನ್ನು ಬಿಟ್ಟರೆ ನಾನೇನೂ ಮಾಡುವಂತಿರಲಿಲ್ಲ. ನನ್ನ ಸುತ್ತಲೂ ಬಳಗದವರಿದ್ದರೂ ನಾನು ಏಕಾಂಗಿಯೆಂದೇ ಭಾಸವಾಗುತ್ತಿತ್ತು.
ನನ್ನ ಓರಗೆಯ ಅನೇಕ ನಾಗ ನಾಗಿಣಿಯರು ಗೆಳೆತನ ತೋರಿದರೂ ನನ್ನಲ್ಲಿ ಸ್ಪಂದನವೇ ಹುಟ್ಟಲಿಲ್ಲ. ಯಾರ ಒಡನಾಟವೂ ನನಗೆ ಬೇಕಾಗಲಿಲ್ಲ. ನಿತ್ಯ ಒಬ್ಬೊಂಟಿಯಾಗಿ ನಿರ್ಜನ ಪ್ರದೇಶದಲ್ಲಿ ಕುಳಿತು ತಾಯಿಯನ್ನು ನೆನೆದು ಕಣ್ಣೀರಿಡುವುದು ನನ್ನ ದಿನಚರಿಯಾಗಿಬಿಟ್ಟಿತು. ಎಷ್ಟು ಕಂಬನಿಗರೆದರೂ ತಾಯಿ ಮರಳಿ ಬರಲಾರಳೆಂಬುದು ನಿಜ. ಆದರೆ ನನ್ನನ್ನು ರೂಪಿಸಿದ ಅವಳ ಮರಣವನ್ನು ಅಲ್ಲ, ಕಗ್ಗೊಲೆಯನ್ನು ನೋಡಿ ಮೌನವಾಗಿ ಸಹಿಸಿಕೊಂಡ ನನ್ನ ಬಗೆಗೆ ಒಂದು ಬಗೆಯ ತಿರಸ್ಕಾರ ಮೂಡುತ್ತಿತ್ತು. ಅವಳ ಸಾವಿಗೆ ಕಾರಣ ಯಾರು? ಸುಟ್ಟು ಹಾಕಿದ ಅಗ್ನಿಯೆ? ಬಾಣ ಹೊಡೆದು ಬೆಂಕಿಗಿತ್ತ ಅರ್ಜುನನೇ? ಅವನಿಗೆ ಪ್ರೇರಣೆ ಕೊಟ್ಟ ಕೃಷ್ಣನೇ? ಒಮ್ಮೆಯೂ ಕಷ್ಟ ಸುಖಗಳಿಗೆ ಕಿವಿಗೊಡದ ನನ್ನಪ್ಪನೆ? ಯಾರು ನನ್ನ ತಾಯಿಯನ್ನು ಕೊಂದವರು? ಚಿಂತಿಸಿದಷ್ಟು ಬಗೆಹರಿಯದ ಗೋಜಲಿನಲ್ಲೇ ಮುಳುಗಿದ್ದೆ, ಬಹುಕಾಲ. ದಿನಗಳೆದಂತೆ ತಿಳಿಯಾಗುತ್ತಿದ್ದ ಮನಸಿಗೆ ವಿನಾಕಾರಣ ಕಾಡನ್ನು ಸುಟ್ಟುಹಾಕಿ ಅಸಂಖ್ಯ ಮುಗ್ಧ ಜೀವಿಗಳನ್ನು ಬಲಿಗೊಟ್ಟ ಪಾರ್ಥನೇ ಅಪರಾಧಿಯಾಗಿ ಕಾಣಿಸತೊಡಗಿದ. ನೇರ ಬಾಣಹೊಡೆದು ತಾಯಿಯನ್ನು ಘಾತಿಸಿದ ಅವನನ್ನು ಸುಮ್ಮನೆ ಬಿಡಬಾರದೆಂದು ನನ್ನ ಮನಸ್ಸು ಹೇಳುತ್ತಿತ್ತು. ಹೌದು. ನನ್ನ ವೈರಿ ಅರ್ಜುನ. ಅವನನಿಗೆ ಪ್ರತಿಕಾರ ಮಾಡದ ಹೊರತು ನನ್ನ ಮನಸಿಗೆ ನೆಮ್ಮದಿಯಿಲ್ಲ. ನನ್ನ ತಾಯಿಯ ಆತ್ಮಕ್ಕೆ ಶಾಂತಿಯಿಲ್ಲ. ಪ್ರತಿಕಾರವೆಂದರೇನು? ಅವನನ್ನು ಕೊಲ್ಲುವುದಲ್ಲದೆ ಬೇರೆಯಲ್ಲ. ನಿಜ, ಅರ್ಜುನನ ಮರಣವೇ ನನ್ನ ಜೀವಿತದ ಗುರಿ. ಹೀಗೆಂದು ನಿರ್ಣಯಿಸಿದೆ. ನಿರ್ಣಯಿಸಿದೆ, ನಿಜ. ಆದರೆ ಅದು ನನ್ನಂತಹವನಿಗೆ ಸುಲಭವೆ? ಸಾಧ್ಯವೆ? ಪ್ರಕೃತ ಪ್ರಪಂಚದ ಅಗ್ರಮಾನ್ಯ ಧನುರ್ಧರ, ಕೃಷ್ಣ ಕೃಪಾಪೋಷಿತನಾದ ಅವನ ಹೆಸರೆತ್ತಿದರೆ ಸಾಕು, ವೀರರೆನಿಸಿಕೊಂಡವರ ಹಣೆಯಲ್ಲಿ ಬೆವರೊಡೆಯುತ್ತಿತ್ತು. ನಾನು ನೇರವಾಗಿ ಅವನನ್ನು ಎದುರಿಸಿ ಕೊಲ್ಲಲಾರೆ. ಆದರೆ? ಯಾರಾದರೂ ಪ್ರಬಲನೊಬ್ಬ ದೊರೆತರೆ ನನ್ನ ಶಕ್ತಿಯನ್ನು ಬಳಸಿ ಅವನ ಮೂಲಕ ಕೊಲ್ಲಿಸಲಾಗದೆ? ಅದೇ ಸರಿ. ಹಾಗೆಯೇ ಮಾಡುವುದೆಂದು ನಿರ್ಧರಿಸಿದೆ. ನನಗೆ ಅನುಕೂಲನಾದ ಪರಾಕ್ರಮಿಯೊಬ್ಬನ ಶೋಧವೇ ನನ್ನ ಮುಂದಿನ ಗುರಿಯಾಯಿತು. ಹೀಗೆ ನನ್ನ ಸೇಡಿನ ಕಥೆ ಪ್ರಾರಂಭವಾಯಿತು.
(ಸಶೇಷ)