ಅದೇ ಕ್ಷಣಕ್ಕೆ ಹಳೆಯ `ರೇಡಿಯೋ ಸಿಲೋನ್’ನಿಂದ ‘ಮಳೆ ಬರುವ ಕಾಲಕ್ಕ, ಒಳಗ್ಯಾಕ ಕುಂತೇವೋ, ಇಳೆಯೊಡನೆ ಜಳಕ ಮಾಡೋಣ, ನಾವೂನೂ ಮೋಡಗಳ ಆಟ ನೋಡೋಣ’ ಎನ್ನುವ ಹಾಡು ಹಾಗೇ ತೇಲಿ ಬರಬೇಕು ಅನಿಸಿತು….
ಮಳೆಗೂ ಮನೆಗೂ ಅದ್ಯಾವ ಸಂಬಂಧವೋ ಗೊತ್ತಿಲ್ಲ. ಅಪರೂಪಕ್ಕೆ ಹೊರಗೆ ಧೋ ಎಂದು ಮಳೆ ಸುರಿಯುತ್ತಿದ್ದರೆ ಮನೆಯ ನೆನಪು ಬಿಟ್ಟೂ ಬಿಡದೆ ಕಾಡುತ್ತದೆ.
ನಮ್ಮ ಊರಿನಲ್ಲಂತೂ ಹೊರಗೆ ಕಾಲಿಡುವುದೇ ಬೇಡ ಎನಿಸುವಂತೆ ಎಡೆಬಿಡದೆ ಸುರಿಯುವ ಮಳೆ, ಎಲ್ಲಿ ಹೆಜ್ಜೆಯಿಟ್ಟರೆ ಕಾಲು ಹೂತು ಬಿಡುವುದೋ ಅನ್ನಿಸುವಂತೆ ಮೆದುವಾಗಿ ಬಿಡುವ ನೆಲ, ಸೀರಣಿ ಸಿಡಿದು ಮನೆ ಒಳಗೂ ಧಾರಾಳ ನೀರು, ಅಲ್ಲಿ ಇಲ್ಲಿ ಹೆಂಚಿನ ನಡುವೆ ಸೋರುವ ನೀರು, ಅದು ತುಂಬುವುದಕ್ಕಾಗಿಯೇ ಇರಿಸಿದ ಹಳೆಯ ಬಕೀಟು. ಅದರೊಳಗೆ ಹನಿ ಒಂದೊಂದಾಗಿ ಬೀಳುವಾಗ ಟಪಟಪ ಶಬ್ದ ನಿರಂತರ. ಹಾಗೇ ಯೋಚಿಸಿದರೆ ಅಬ್ಬ, ಕಿರಿಕಿರಿ ಎನ್ನಿಸಿದರೂ ಅದರಲ್ಲಿನ ಖುಷಿ ಅರ್ಥವಾಗುವುದು ಆ ವಾತಾವರಣವನ್ನು ಕಳೆದುಕೊಂಡಾಗ ಮಾತ್ರ. ಇದೆಲ್ಲದರ ಜೊತೆಗೆ ಮಳೆಗಾಲದಲ್ಲಷ್ಟೇ ಅಮ್ಮ ಕರಿದು ಕೊಡುವ ಹಲಸಿನ ಕಾಯಿಯ ಹಪ್ಪಳ! ಅದರ ಮೇಲೆ ಉದುರಿಸಿರುವ ಸಿಹಿ ಸಿಹಿ ತೆಂಗಿನಕಾಯಿ. ಜೊತೆಗೆ ಬೆಚ್ಚಗಿನ ಹಾಲು. ಅಬ್ಬ! ಬದುಕು ಎಷ್ಟು ನವಿರಾಗಿತ್ತು ಎನಿಸುತ್ತದೆ.
ಮಳೆಗಾಲದ ಮನೆಗಳ ರೂಪವೇ ಬೇರೆ. ಯಾವಾಗಲೂ ಅಲ್ಲಿ ಇಲ್ಲಿ ಸ್ನಾನದ ಟವೆಲನ್ನು ಒಣಹಾಕಿದರೆ ರೇಗುತ್ತಿದ್ದವರೇ ಈಗ ಎಲ್ಲಾದರೂ ಸರಿ ಒಣಗಿದರೆ ಸಾಕಪ್ಪಾ ಎಂದು ಬಟ್ಟೆಗೊಂದು ಬೆಚ್ಚಗಿನ ಜಾಗ ಹುಡುಕುತ್ತಾರೆ. ಮನೆಯ ಕಿಟಕಿಯ ಸರಳಿನ ತುಂಬಾ ಅರ್ಧ ಒಣಗಿದ ಬಟ್ಟೆಗಳು. ಅವುಗಳಿಗೊಂದು ಅವುಗಳದೇ ಆದ ಕಮಟು ವಾಸನೆ. ವಾರ ಪೂರ್ತಿ ಒಣಗದೇ ಇದ್ದಾಗ ಅದಕ್ಕೆ ಹಾಕಿದ ಸಾಬೂನು, ಡೆಟ್ಟಾಲುಗಳ ಪರಿಮಳವೆಲ್ಲ ಎಲ್ಲಿಗೋ ಹಾರಿ ಹೋಗಿರುತ್ತದೆ. ತೊಳೆದು ನಾಲ್ಕು ದಿನವಾದರೂ ಒಂದಿಷ್ಟೂ ಒಣಗದೇ ಹಲ್ಕಿರಿಯುವ ಅನಿವಾರ್ಯ ಉಡುಪುಗಳು ಕಟ್ಟಕಡೆಯದಾಗಿ ಒಲೆಯ ಮೇಲೆ ಎತ್ತರದಲ್ಲಿ ಕಟ್ಟಿದ ಬಳ್ಳಿಯ ಆಸರೆ ಪಡೆಯುತ್ತವೆ. ಒದ್ದೆಯಾಗಿ ಉರಿಯಲೂ ಸತಾಯಿಸುವ ಸೌದೆಗಳು ಮನೆಯ ಸುತ್ತ ವಿಚಿತ್ರವೆನಿಸುವ ಹೊಗೆಯ ವಾಸನೆಗೆ ಕಾರಣವಾಗಿರುತ್ತವೆ. ಧರಿಸುವ ವಸ್ತ್ರವೂ ಅದೇ ಹೊಗೆ ವಾಸನೆ! ಆದರೂ ಆಗೆಲ್ಲ ಘಮಘಮಿಸುವ ಪರ್ಫ್ಯೂಮುಗಳ ಹಂಗಿರಲಿಲ್ಲ.
ಇಲ್ಲದ ಹೋಲಿಕೆ
ಬಚ್ಚಲುಮನೆಯಲ್ಲಿ ದೊಡ್ಡ ತಾಮ್ರದ ಹಂಡೆಯ ತುಂಬಾ ಬಿಸಿನೀರು. ಅದು ಖಾಲಿಯಾಗುವ ಅಥವಾ ತಣ್ಣಗಾಗುವ ಪ್ರಮೇಯವೇ ಇಲ್ಲ. ಒಲೆಯ ತುಂಬ ತುಂಬಿ ಬಿಡುವ ಅಡಕೆಯ ಸಿಪ್ಪೆ ಉರಿದೂ ಉರಿಯದಂತೆ ಮನೆಸುತ್ತಲೂ ಹರಡುವ ಟಿಪಿಕಲ್ ವಾಸನೆ. ಆ ಘಮವನ್ನೊಮ್ಮೆ ಈಗಲೂ ಆಸ್ವಾದಿಸಬೇಕೆನಿಸುತ್ತದೆ. ಹೊರಗೆ ತಂಪಾಗಿ ಮಳೆ ಹೊಯ್ಯುತ್ತಿದ್ದರೆ ಒಳಗೆ ಬಿಸಿನೀರು ಸ್ನಾನ ಮಾಡುವ ಖುಷಿಗೆ ಯಾವುದಾದರೂ ಹೋಲಿಕೆಯಿದೆಯೇ?
ಮಳೆಗಾಲದ ಆರಂಭದಲ್ಲಿ ಹಲಸಿನ ಹಣ್ಣಿನ ಭರಾಟೆ ನೋಡಿಯೇ ತಿಳಿಯಬೇಕು. ಮಳೆಗೆ ಜಾರುವ ಮರಕ್ಕೆ ಹತ್ತುವ ಧೈರ್ಯ ಸುಲಭವಾಗಿ ಯಾರೂ ಮಾಡುವುದಿಲ್ಲ. ಅದಲ್ಲದೇ ಈ ಸಮಯದಲ್ಲಿ ತುಂಬಿಕೊಳ್ಳುವ ದಪ್ಪದಪ್ಪ ಕಪ್ಪು ಕಂಬಳಿಹುಳಗಳು ಆಶ್ರಯ ಪಡೆಯುವುದು ಇವೇ ಹಲಸಿನ ಮರಗಳಲ್ಲಿ. ಅಂಥದ್ದರಲ್ಲಿ ಮರ ಹತ್ತಿ ಹಲಸಿನಹಣ್ಣು ಕೊಯ್ಯುವುದೆಂದರೆ ಸಾಮಾನ್ಯವೇ? ಅಷ್ಟೋ ಇಷ್ಟೋ ಹಣ್ಣುಗಳನ್ನು ಹಾಗೂ ಹೀಗೂ ಕೊಯ್ದು ಬಳಸಿಕೊಂಡರೆ ಮರದಲ್ಲೇ ಹಣ್ಣಾಗಿ ಉದುರಿ ಸಿಕ್ಕುವವು ಇನ್ನಷ್ಟು. ಮರದಲ್ಲೇ ಕೊಳೆತು, ಬಂದ ಹಕ್ಕಿಗಳಿಗೆಲ್ಲ ಆಹಾರವಾಗಿ ಕೊಳೆತು ಮರದ ಸುತ್ತಲೂ ಸೊಳ್ಳೆಯ ವಂಶಾಭಿವೃದ್ಧಿ ಮಾಡಿಸುವ ಹೆಗ್ಗಳಿಕೆಗೆ ಪಾತ್ರವಾಗುವವು ಇನ್ನುಳಿದವು. ಈ ಮಳೆಗಾಲ ಮುಗಿಯುವವರೆಗೂ ತೋಟಕ್ಕಂತೂ ಇಳಿಯಲೇಬಾರದು ಎಂದು ಶಪಥ ಮಾಡಿ ಬರುವಂತಹ ವಾತಾವರಣ ಇಡಿಯ ತೋಟದಲ್ಲಿ.
ಮಳೆಗಾಲದ ತಿಂಡಿಗಳೂ ಅಷ್ಟೇ. ಹಲಸಿನ ಹಣ್ಣು ಮುಗಿಯುವವರೆಗೆ ಅದರದೇ ಸಾಮ್ರಾಜ್ಯ ಪೂರಾ. ಹಲಸಿನ ಹಣ್ಣಿನ ಕೊಟ್ಟಿಗೆ, ದೋಸೆಯ ರುಚಿಗೆ ಸಾಟಿಯಿಲ್ಲ. ಸಂಜೆಯ ತಿಂಡಿಗೆ ಹಲಸಿನ ಹಣ್ಣಿನ ಸುಟ್ಟವು. ರಾತ್ರಿ ಒಲೆ ಮುಂದೆ ಕುಳಿತು ಅಮ್ಮ ದೋಸೆ ಮಾಡಿ ಕೊಡುತ್ತಿದ್ದರೆ ಅದಕ್ಕಿಷ್ಟು ತುಪ್ಪ, ಮಾವಿನ ಮಿಡಿ ಉಪ್ಪಿನಕಾಯಿಯ ರಸ ಇದ್ದರಾಯಿತು. ಚಿಕ್ಕಂದಿನಲ್ಲಿ ಈ ದೋಸೆಯ ರುಚಿಗೆ ನಾಲ್ಕು ದೋಸೆಯಾದರೂ ತಿನ್ನಬೇಕು ಎಂದು ಪ್ಲಾನು ಮಾಡಿದರೂ ಪುಟ್ಟ ಹೊಟ್ಟೆಯೊಳಗೆ ಒಂದು ದೋಸೆ ಹಿಡಿಸುತ್ತಿದ್ದುದೇ ಹೆಚ್ಚು. ‘ನಾಳೆ ಬೆಳಗ್ಗೆಗೆ’ ಎಂದು ಅಮ್ಮ ತಯಾರಿಸುವ ಹಲಸಿನ ಹಣ್ಣಿನ ಕೊಟ್ಟಿಗೆ ರಾತ್ರಿ ಕನಸಲ್ಲೂ ಬಂದು ಬಾಯಲ್ಲಿ ನೀರೂರಿಸುತ್ತಿತ್ತು. ಎಷ್ಟೋ ಬಾರಿ ರಾತ್ರಿ ಊಟವೂ ಮಾಡದೇ ಕೊಟ್ಟಿಗೆ ಬೇಯುವವರೆಗೂ ಕಾದಿದ್ದು ಅದನ್ನು ಸವಿದೇ ಮಲಗಿದ್ದೂ ಇದೆ. ಅದಕ್ಕೋಸ್ಕರ ಅಮ್ಮನೊಂದಿಗೆ ಜಗಳ ಬೇರೆ! ಅದರ ರುಚಿಯೇ ಹಾಗೆ!
ಶೀತ, ಜ್ವರ ಇದ್ದದ್ದೇ. ಅದು ಮಳೆಗಾಲದ ನಿರೀಕ್ಷಿತ ಅತಿಥಿ. ಬೇಕು ಬೇಕೆಂದೇ ಮಳೆಯಲ್ಲಿ ನೆನೆಯುವ ಹುಚ್ಚು ನಮಗೆ. ಶಾಲೆಯ ದಾರಿಯಲ್ಲಿ ಮಾತ್ರ ಮಳೆಯಿಂದ ರಕ್ಷಣೆ ಪಡೆಯುವುದಕ್ಕೆ ಸರ್ವ ವಿಧದ ಪ್ರಯತ್ನ. ಆದರೆ ಗಾಳಿ ಬೀಸಿದ ಕಡೆಗೆ ವಾಲುವ ಕೊಡೆಯಿಂದಾಗಿ ತಲೆಯಿಂದ ಕಾಲಿನವರೆಗೂ ಒದ್ದೆಯೇ. ಪುಸ್ತಕ ಒದ್ದೆಯಾಗಿ ಶಾಯಿಯೆಲ್ಲ ಕಲಸಿದರೆ ಮಾತ್ರ ಬೇಜಾರು. ಮಿಕ್ಕುಳಿದಂತೆ ಇಲ್ಲಿಂದ ಅಲ್ಲಿಗೆ ಮಳೆಯಲ್ಲಿ ಓಡುವುದೆಂದರೆ ಮಸ್ತ್ ಮಜವೇ ಸೈ. ಇದೆಲ್ಲಕ್ಕೆ ಪ್ರತಿಫಲವಾಗಿ ಜ್ವರ ಬಂದೇ ಬರುತ್ತದೆ. ಅದಕ್ಕೆ ವೈದ್ಯರ ಗುಳಿಗೆ ತರುವುದು ಅಪರೂಪ. ಕರಿಮೆಣಸು, ಶುಂಠಿಯ ಕಷಾಯ ಕುಡಿದರೆ ಮುಗಿಯಿತು. ಅದಕ್ಕಿಷ್ಟು ಬೆಲ್ಲ ಹಾಕಿ ಕೊಡುತ್ತಿದ್ದುದರಿಂದ ಕುಡಿಯಲು ಭಯವಿಲ್ಲ. ಕಷಾಯವನ್ನು ಚೂರು ಚೂರೇ ಕುಡಿದು ಬೆಚ್ಚಗೆ ಹೊದ್ದು ಮಲಗಿದರೆ ಮತ್ತದೇ ಮಳೆಯ ಜೋಗುಳ.
ಬದಲಾದ ಚಿತ್ರ
ಈಗಿನ ಚಿತ್ರ ಬದಲಾಗಿದೆ. ತುಮಕೂರಿನಲ್ಲಿ ಹತ್ತು ದಿನಕ್ಕೊಮ್ಮೆ ಹತ್ತು ನಿಮಿಷ ಮಳೆ ಬಂದರೆ ಹೆಚ್ಚು. ಅದನ್ನೂ ‘ಥೂ ಯಾಕಾದರೂ ಬರುತ್ತದೋ…… ರಾತ್ರಿ ಎಲ್ಲರೂ ಮಲಗಿದ ಮೇಲೆ ಬರಬಾರದಾ ಇದು?’ ಎಂದು ಬೈದುಕೊಳ್ಳುವವರೇ ಹೆಚ್ಚು. ಬೇಸಿಗೆಯಲ್ಲಿನ ನೀರಿನ ಪರದಾಟ ಗೊತ್ತಿದ್ದರೂ ಸುರಿಯುವ ಮಳೆಯನ್ನು ಪ್ರೀತಿಸುವ ಜನ ಇಲ್ಲಿ ಕಡಮೆ! ಈ ಮಳೆ ಸುರಿಯುವುದೂ ಹಾಗೆಯೇ. ಬೆಳಗ್ಗೆ ಅದಾಗಲೇ ಕಾಲೇಜಿಗೆ ತಡವಾಗಿದೆ, ಇನ್ನು ಹತ್ತು ನಿಮಿಷದಲ್ಲಿ ತಲಪಬೇಕು ಎನ್ನುವಾಗಲೇ ಕಾದುಕುಳಿತಂತೆ ಬರುತ್ತದೆ. ಕಾಲೇಜಿನ ಸಮಯ ಮುಗಿದು ಇನ್ನೇನು ಮನೆ ತಲಪಬೇಕು ಎನ್ನುವಷ್ಟರಲ್ಲಿ ಸುರಿಯುತ್ತದೆ. ಜನರಿಗೆ ಈ ಎರಡು ಸಂದರ್ಭಗಳಷ್ಟು ತರಾತುರಿಯದ್ದು ಇನ್ಯಾವುದೂ ಇಲ್ಲ. ಹಲವು ನೆಪಗಳ ಜೊತೆಗೆ ಅಗೆಸಿಕೊಂಡಿರುವ ರಸ್ತೆ ಚೂರು ಮಳೆ ಬಿದ್ದರೂ ಕೆಸರುಗದ್ದೆಯಾಗುತ್ತದೆ. ಅಲ್ಲಿ ನಡೆದು ಹೋಗುವುದೂ ಕಷ್ಟ, ಗಾಡಿ ಒಯ್ಯುವುದು ಇನ್ನೂ ಕಷ್ಟ. ಅದಕ್ಕೇ ಜನರಿಗೆ ಮಳೆ ಎಂದರೆ ಅಲರ್ಜಿ.
ಈ ಎಲ್ಲದರ ನಡುವೆಯೂ ಎದೆಯೊದೆದು ಬರುವ ಒಂದಾಸೆ. ಇಲ್ಲಿ ಎಡೆಬಿಡದೆ ಒಂದು ವಾರ ಮಳೆ ಸುರಿಯಬೇಕು. ಊರಲ್ಲಿ ‘ಮಳೆ’ಯ ಕಾರಣಕ್ಕೆ ಸಿಗುವ ರಜೆ ಇಲ್ಲೂ ಸಿಗಬೇಕು. ಹೊರಗೆ ಧೋ ಎಂದು ಸುರಿಯುವ ಮಳೆಗೆ ಕಿವಿಗೊಡುತ್ತಾ ಹಾಗೇ ಮಲಗಬೇಕು. ಅದೇ ಕ್ಷಣಕ್ಕೆ ಹಳೆಯ `ರೇಡಿಯೋ ಸಿಲೋನ್’ನಿಂದ ‘ಮಳೆ ಬರುವ ಕಾಲಕ್ಕ, ಒಳಗ್ಯಾಕ ಕುಂತೇವೋ, ಇಳೆಯೊಡನೆ ಜಳಕ ಮಾಡೋಣ, ನಾವೂನೂ ಮೋಡಗಳ ಆಟ ನೋಡೋಣ’ ಎನ್ನುವ ಹಾಡು ಹಾಗೇ ತೇಲಿ ಬರಬೇಕು. ಸುರಿಯುವ ಮಳೆಗೆ ಮನೆಯೆಲ್ಲ ತಂಪಾಗಿ ಚಳಿಚಳಿ ಎನ್ನುವಂತಾಗಬೇಕು. ಮನೆಯ ತಾರಸಿಯಿಂದ ಸುರಿದು ಹೋಗುವ ಮಳೆನೀರು ಭೂಮಿಯೊಳಗೆ ಇಂಗಿಸುವಂತೆ ವ್ಯವಸ್ಥೆ ಮಾಡಿಸಬೇಕು….. ಇದು ಎಂದು ನಿಜವಾಗುವುದೋ ಗೊತ್ತಿಲ್ಲ.
ಮತ್ತೆ ಮಳೆ ಹುಯ್ಯಲಿ! ಎಲ್ಲ ತಂಪಾಗಲಿ.