ಇಲ್ಲಿಯವರೆಗೆ……
ಡಿಟೆಕ್ಟಿವ್ ವಿಜಯ್ಗೆ ಜನಪ್ರಿಯ ತಾರೆ ಮೃದುಲಾ ಹೊಸಮನಿ ಬ್ಲಾಕ್ಮೇಲ್ ಕೇಸ್ ಹಾಗೂ ತನ್ನ ಜನ್ಮರಹಸ್ಯವನ್ನು ಪತ್ತೆಮಾಡುವ ಕೆಲಸವನ್ನು ವಹಿಸಿದಳು. ವಿಜಯ್ ಸಂಬಂಧಿಸಿದ ದಾಖಲೆಗಳನ್ನು ಹುಡುಕಿ ಪರಿಶೀಲಿಸುವುದಕ್ಕೋಸ್ಕರ ತಮಿಳುನಾಡು-ಕೇರಳ ಗಡಿ ಭಾಗದ ಕರ್ಪೂರೀ ನದೀ ತೀರದ ಮಾಂಡಿಚೆರ್ರಿಗೆ ತೆರಳುತ್ತಾನೆ.
ಮಾಂಡಿಚೆರ್ರಿಯಲ್ಲಿ ಲಾಯರ್ ಲೂಸಿಯಾ ಜೊತೆಗೂಡಿ ಬ್ಲಾಕ್ಮೇಲ್ ಕೇಸಿಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಸಂಗ್ರಹಿಸಿಕೊಂಡು, ಮೃದುಲಾಳ ದತ್ತಕದ ದಾಖಲೆ ಫೈಲ್ಗಳಿಗಾಗಿ ಸರಕಾರಿ ಕಛೇರಿಗೆ ಅಲೆದಾಡಲು ಆರಂಭಿಸುತ್ತಾನೆ…..
ನಾನು ಆಕೆಯ ಬಗ್ಗೆ ಆಸಕ್ತಿ ತೋರಿದಂತೆ, ನಾನು ಆಕೆಗೂ ಅಂಥದೇ ಭಾವನೆ ಕೊಟ್ಟೆನೇ? ಎಂದೆಲ್ಲಾ ಲೂಸಿಯಾಳ ಬಗ್ಗೆಯೇ ಮನಸ್ಸಿದ್ದದ್ದರಿಂದಲೋ ಏನೋ ನಾನು ಟ್ಯಾಕ್ಸಿಯಲ್ಲಿ ವಾಪಸ್ ಹೋಗುತ್ತಿದ್ದಾಗ ನನ್ನನ್ನು ಹಿಂಬಾಲಿಸುತ್ತಿದ್ದ ಹಳದಿ ಟಾಟಾ ನ್ಯಾನೋ ಕಾರನ್ನು ತಕ್ಷಣವೇ ಗಮನಿಸಿರಲಿಲ್ಲ.
ನಾನು ಹೋಟೆಲ್ ಬಳಿ ಇಳಿಯುತ್ತಿದ್ದಂತೆ, ಅವನು ನಿಲ್ಲಿಸದೇ ಭರ್ ಎಂದು ನನ್ನ ಟ್ಯಾಕ್ಸಿಯನ್ನು ದಾಟಿ ಹೋಗಿದ್ದ. ಅದರಲ್ಲಿ ಕುಳಿತ ಸಣಕಲು ಕಡ್ಡಿಯಂಥ ಹಿಪ್ಪಿ ಕೂದಲಿನ ಡ್ರೈವರನ್ನು ನಾನು ಮನದಲ್ಲೇ ನೋಟ್ ಮಾಡಿಕೊಂಡೆ. ಅವನ ಕಾರ್ ನಂಬರ್ ಕೂಡಾ.
ಮತ್ತೆ ನನ್ನ ರೂಮಿನಲ್ಲಿ ಆಕೆ ಕೊಟ್ಟಿದ್ದ ಅಪ್ಲಿಕೇಶನ್, ಕೇಸ್ ಹಿನ್ನೆಲೆ ಇತ್ಯಾದಿ ಪತ್ರಗಳನ್ನೆಲ್ಲ ಓದಿದೆ. ಅನಂತರ ಸಂಜೆಯಾಗುತ್ತಿದೆ, ಇಲ್ಲಿನ ಕರ್ಪೂರಿನದಿಯ ಮೇಲಿನ ಸೇತುವೆ ಬಹಳ ಜನಪ್ರಿಯ ತಾಣವಂತೆ. ಒಮ್ಮೆ ಅಲ್ಲಿಗೆ ಹೋಗಿ ಬರೋಣ, ಎಂದೆನಿಸಿ ಲಾಡ್ಜ್ ಹೊರಗೆ ಕಾಯುತ್ತಿದ್ದ ಮೊದಲನೆಯ ಟ್ಯಾಕ್ಸಿ ಹತ್ತಿದೆ.
“ಅಲ್ಲಿಗೆ ಸಂಜೆ ಹೊತ್ತಲ್ಲಿ ಒಬ್ಬರೇ ಹೋಗುತ್ತೀರಾ, ಯಾರೂ ಇಲ್ಲವೆ?” ಎಂದ ಡ್ರೈವರ್. ಮಹಾ ವಾಚಾಳಿಗಳು ಈ ಡ್ರೈವರ್ಸ್.
“ಯಾಕೆ, ನೀನು ಅಲ್ಲಿವರೆಗೆ ಬರುತ್ತಿದ್ದೀಯಲ್ಲಾ?” ಎಂದೆ.
“ಆಮೇಲೆ. ಇಳಿದ ಮೇಲೆ?” ಎನ್ನುತ್ತಾನೆ.
“ಅಲ್ಲಿ ಬೇರೆ ಯಾರೂ ಜನರೇ ಇರುವುದಿಲ್ಲವೆ, ತೆಪ್ಪಗಿರು” ಎಂದು ಗದರಿಸುತ್ತೇನೆ. ನನಗಿಂತ ಹೆಚ್ಚು ತರಲೆಗಳು ನನಗೆ ಇಷ್ಟವಾಗುವುದಿಲ್ಲ ನೋಡಿ.
ಮತ್ತೆ ಊರಿನ ಹಾದಿಬಿಟ್ಟು ನದಿ ಸೇತುವೆಗೆ ಹತ್ತಿರವಾದಾಗ ಟ್ರಾಫಿಕ್ ಕಡಮೆಯಾಗುತ್ತದೆ. ಮತ್ತೆ ಆ ಹಳದಿ ಟಾಟಾ ನ್ಯಾನೋ ಕಾರ್ ನನ್ನ ಹಿಂದೆ ಎರಡು ಕಾರ್ ಬಿಟ್ಟು ಮೆತ್ತಗೆ ಹಿಂಬಾಲಿಸುತ್ತಿದೆ!
“ಸ್ವಲ್ಪ ಮುಂದೆ ಹೋಗಿ ನಿಲ್ಲಿಸು” ಎಂದೆ ಡ್ರೈವರಿಗೆ, ಸೇತುವೆ ಬಳಿ ಬಂದಾಗ.
ಅಚ್ಚರಿಯಿಂದ ನನ್ನತ್ತ ತಿರುಗಿ, “ಇಲ್ಲ, ಇಲ್ಲಿಂದಲೇ `ಸನ್ಸೆಟ್’ ಚೆನ್ನಾಗಿ ಕಾಣಿಸೋದು! ಅಯ್ಯೋ!” ಎನ್ನುವನು.
“ನಾನು ಸನ್ಸೆಟ್ ಅಲ್ಲ, ಮೂನ್ರೈಸ್ ನೋಡಲು ಮುಂದೆ ಹೋಗುತ್ತಿದ್ದೇನೆ. ಸುಮ್ಮನೆ ನಡಿಯಯ್ಯಾ….” ಎಂದು ಗದರಿದೆ; ಹಿಂದಿದ್ದ ಆ ಟಾಟಾ ನ್ಯಾನೋ ಕಾರನ್ನೇ ಗಮನಿಸುತ್ತಾ. ನನ್ನ ಡ್ರೈವರ್ ಅದನ್ನು ಗಮನಿಸಿರಲಿಲ್ಲ.
ಈಗ ಟ್ರಾಫಿಕ್ ಸಂದಣಿ ಕಡಮೆಯಾಗಿ ಅವನಿಗೆ ಬಚ್ಚಿಟ್ಟುಕೊಂಡು ಹಿಂಬಾಲಿಸಲು ಕವರ್ ಇಲ್ಲದಂತಾಯಿತು. ಆದರೂ ಭಂಡನಂತೆ ಜೋರಾಗಿ ಬಂದು ಎಡಗಡೆಯಿಂದ ನನ್ನ ಟ್ಯಾಕ್ಸಿಯನ್ನು ಹಿಮ್ಮೆಟ್ಟಿಸಿ ಮುಂದೆ ಧೂಳೆಬ್ಬಿಸುತ್ತಾ ಸಾಗಿಹೋದ. ಅದೇ ಸಣಕಲು ದೇಹದ ವ್ಯಕ್ತಿ. ಹಳದಿ ಚಿಟ್ಟೆ ಬಣ್ಣದ ಟೀ-ಶರ್ಟ್ ಹಾಕಿದ್ದಾನೆ. ನನ್ನ ಕಡೆಗೆ ತಿರುಗಿ ನೋಡದೇ ಎಚ್ಚರಿಕೆಯಿಂದ ನೇರವಾಗಿ ನೊಡುತ್ತಲೇ ಹೋದ.
“ಲೆಫ್ಟ್ನಿಂದ ಓವರ್ ಟೇಕ್ ಮಾಡಿದ. ತಪ್ಪಲ್ಲವೆ?” ಎಂದು ಸಿಡಿಮಿಡಿಗೊಂಡ ನನ್ನ ಡ್ರೈವರ್, ಟ್ಯಾಕ್ಸಿ ನಿಲ್ಲಿಸುತ್ತಾ.
“ತಪ್ಪುವ್ಯಕ್ತಿಗಳು ತಪ್ಪನ್ನು ತಾನೇ ಮಾಡುವುದು?” ಎಂದು ಉತ್ತರಿಸಿ, ಇಳಿಯಹತ್ತಿದೆ.
“ನಿಮಗೆ ಗೊತ್ತೇ ಅವನು?” ಎಂದು ನಾನಿತ್ತ ನೂರು ರೂಪಾಯಿ ನೋಟನ್ನು ಕಿಸೆಯಲ್ಲಿ ತುರುಕಿಕೊಂಡ.
“ಇಲ್ಲ, ಆದರೆ ಕಂಡುಹಿಡಿಯುತ್ತೇನೆ” ಎಂದು ಹೇಳಿ ಸೇತುವೆ ಅಂಚಿಗೆ ನಡೆದೆ.
ನಿಜಕ್ಕೂ ಸೇತುವೆಯಿಂದ ಸೂರ್ಯಾಸ್ತದ ಸಮಯದಲ್ಲಿ ನದಿಯ ಸುತ್ತಮುತ್ತ ಪ್ರಕೃತಿ ಸುಂದರವಾಗಿತ್ತು. ನದಿಯ ನೀರೆಲ್ಲ ಸಂಜೆಗತ್ತಲಿನಲ್ಲಿ ಬಂಗಾರದ ರಂಗೇರಿತ್ತು. ಅಲ್ಲಲ್ಲಿ ಮೀನುಗಾರರು ತಮ್ಮ ಶ್ರಮಜೀವನದ ಮತ್ತೊಂದು ದಿನ ಕಳೆದು ಮನೆಗಳಿಗೆ ನಾವೆಯಲ್ಲಿ ಹಿಂತಿರುಗುತ್ತಿದ್ದರು. ತಮ್ಮ ಲೋಡ್ಗಳೊಂದಿಗೆ….. ಪ್ರವಾಸಿಗರ ಬೋಟ್ಗಳು ತಮ್ಮ ಸಂಜೆಯ ಕೊನೆಯ ರೌಂಡ್ ಮಾಡುತ್ತಿದ್ದವೇನೋ ಅನಿಸಿತು. ನದಿಯ ಬದಿಯಲ್ಲಿ ಹಲವಾರು ಟೆಂಟ್ಗಳಿದ್ದವು. ಆ ಗುಡಾರಗಳಲ್ಲಿ ಶ್ರೀಲಂಕಾ ದ್ವೀಪದಿಂದ ಬಂದಿದ್ದ ನಿರಾಶ್ರಿತರು ಮನೆ ಮಾಡಿಕೊಂಡಿದ್ದರು. ಹೆಂಗಸರು ಚಿಕ್ಕ ಚಿಕ್ಕ ತಂತಿ ಕಟ್ಟಿ ಬಟ್ಟೆ ನೇತುಹಾಕಿದ್ದರು. ಹರಕಲು ಚಡ್ಡಿಯ ಅರೆಬೆತ್ತಲೆ ಕಪ್ಪು ಮಕ್ಕಳು ಝೂಟಾಟ ಆಡುತ್ತ ಕೂಗುತ್ತಿದ್ದವು. ಇನ್ನೂ ದೂರದಲ್ಲಿ ದಿಗಂತದತ್ತ ಸಮುದ್ರದ ಆರಂಭದ ಅಲೆಗಳು ಕಾಣಹತ್ತಿದ್ದವು. ಅತ್ತಲಿಂದ ಎಲ್ಲ ಕಳೆದುಕೊಂಡು ಇತ್ತ ಓಡಿ ಬಂದವರಲ್ಲವೆ ಇವರು ಅನಿಸಿತು.
ವಿಕ್ರಮ್ ನೀಡಿದ್ದ ಮತ್ತೊಂದು ಚೂಯಿಂಗ್ಗಮ್ ಬಾಯಿಗೆ ಹಾಕಿಕೊಂಡೆ.
ಆಗ….. ನನ್ನ ಪ್ಯಾಂಟ್ ಎಳೆದ ಒಬ್ಬ ನಿರಾಶ್ರಿತರ ಪುಟಾಣಿ…. ಮೂಗಿನಲ್ಲಿ ಸಿಂಬಳ ಸುರಿವ ಹುಡುಗನತ್ತ ನೋಡಿದೆ. ಕೈ ಚಾಚಿದ.
“ನಾನೊಂದು ಕೆಲಸ ಹೇಳುತ್ತೇನೆ, ಮಾಡಿದರೆ ೧೦ ರೂಪಾಯಿ ಕೊಡುತ್ತೇನೆ, ಆಯ್ತಾ?” ಎಂದೆ ಅರೆ-ಬರೆ ತಮಿಳಿನಲ್ಲಿ.
“ಹತ್ತು ರುಪಾಯಾ…. ಏನೇಳಿ?” ಎಂದ, ಮೂಗು ಸೊರ್ ಅನ್ನಿಸುತ್ತಾ.
“ಈ ಸೇತುವೆಯ ಅಂಚಿನಲ್ಲಿ ಒಂದು ಟಾಟಾ ನ್ಯಾನೊ ಹಳದಿ ಕಾರ್ ನಿಂತಿರುತ್ತೆ. ಅಲ್ಲೇ ಇದೆಯಾ, ಡ್ರೈವರ್ ಏನು ಮಾಡ್ತಿದ್ದಾನೆ ಅಂತ ನೋಡ್ಕೊಂಡು ಬಾ, ಆದರೆ ಅವನನ್ನು ಮಾತಾಡಿಸಬಾರದು, ಓಡು…… ಟಾಟಾ ನ್ಯಾನೋ ಗೊತ್ತು ತಾನೆ?” ಎಂದೆ ಅನುಮಾನದಿಂದ.
“ಅವನು ನನ್ನತ್ತ ವಿಚಿತ್ರವಾಗಿ ನೋಡುತ್ತಾ, “ಹೂಂ, ನಮ್ಮಪ್ಪನ ಹತ್ರ ಇದೆ ಒಂದು. ಗೊತ್ತಾಯ್ತು ಬಿಡಿ” ಎಂದು ಓಡಹತ್ತಿದ, ಬುರ್ರ್ ಎಂದು ಬಾಯಲ್ಲಿ ಕಾರಿನ ಸದ್ದು ಮಾಡುತ್ತಾ…. ಇವರಪ್ಪನ ಹತ್ರ ಕಾರ್ ಇದೆಯಂತೆ, ಸುಳ್ಳ!
ಐದೇ ನಿಮಿಷದಲ್ಲಿ ಮತ್ತೆ ತನ್ನ ಬಾಯಲ್ಲಿ ಕಾರ್ಗೆ ನಾಲ್ಕನೆ ಗೇರ್ ಹಾಕಿದವನಂತೆ ಸ್ಪೀಡಾಗಿ ಬಂದು ನಿಂತ.
“ಸಾರ್, ಅಲ್ಲೆ ಮೂಲೆಯಲ್ಲಿ ಮರದ ಮರೆಯಲ್ಲಿ ಇದೆ ಆ ಕಾರ್….. ಮೆತ್ತಗೆ ಹೋಗಿ ನೋಡಿದೆ. ಆ ಯಪ್ಪಾ ಕಣ್ಣಿಗೇನೋ ಇಟ್ಕೊಂಡಿದ್ದ; ಕನ್ನಡಕಗಿಂತ ದಪ್ಪ ಇದೆ. ಈ ಕಡೆಗೇ ನೋಡುತ್ತಿದ್ದಾನೆ” ಎಂದು ವರದಿ ಒಪ್ಪಿಸಿದ.
“ಓಹೋ ಬೈನಾಕ್ಯುಲರ್ನಲ್ಲಿ ನಾನೆಲ್ಲಿಗೆ ಹೋಗುತ್ತೇನೆ ಎಂದು ಗಮನಿಸುತ್ತಿರಬೇಕು!”
ಅವನಿಗೆ ಹತ್ತು ರೂಪಾಯಿ ಕೊಟ್ಟೆ.
“ಮುಂದಿನ ಸಲ ಬಂದ್ರೆ ಇಪ್ಪತ್ತು ರೂಪಾಯಿ ಕೊಡಿ ಸಾರ್” ಅಂದ.
“ಕೊಟ್ರೆ?”
“ಆಗ ಏರೋಪ್ಲೇನ್ ಹುಡುಕಿ ಕೊಡ್ತೀನಿ” ಎಂದು ಓಡಿದ; ಆಶಾಜೀವಿ, ಪಾಪ!
ನಾನೀಗ ವಾಪಸ್ ಹೋಟೆಲ್ ದಿಕ್ಕಿಗೆ ಕಾಲ್ನಡಿಗೆಯಲ್ಲಿ ಹೊರಟೆ. ಈಗವನು ನನ್ನ ಕಾರಿನಲ್ಲಿ ಹೇಗೆ ಹಿಂಬಾಲಿಸುತ್ತಾನೆ ಎಂಬುದನ್ನು ಪರೀಕ್ಷಿಸಲು.
ಸ್ವಲ್ಪ ಹೊತ್ತು ನನ್ನನ್ನೆ ನೋಡುತ್ತಿದ್ದ ಎಂದು ಕಾಣುತ್ತೆ. “ಹಾಳಾಗಿ ಹೋಗಲಿ ತನ್ನ ಗುಪ್ತಕಾರ್ಯ” ಎಂದುಕೊಳ್ಳುತ್ತಾ, ಜೋರಾಗಿ ಕಾರ್ ಬಿಟ್ಟುಕೊಂಡು ಬಂದು ನಡೆಯುತ್ತಿದ್ದ ನನ್ನನ್ನು ದಾಟಿ ಹೊರಟು ಹೋದ.
ಇನ್ನು ನನ್ನ ಹೋಟೆಲ್ ಬಳಿ ಬಚ್ಚಿಟ್ಟುಕೊಂಡು ಮತ್ತೆ ಕಾಯುತ್ತಿರುತ್ತಾನೆ, ಅನುಮಾನವಿಲ್ಲ…..
ಅರ್ಧ ಗಂಟೆಯಾಯ್ತು, ನಡೆದು ಬೆವತು ಸುಸ್ತಾಗುವಷ್ಟರಲ್ಲಿ ಹೋಟೆಲ್ ಬಳಿಗೆ ಬಂದಿದ್ದೆ.
ರೂಮಿಗೆ ಹೋಗಿ ಮೊದಲು ಲೂಸಿಯಾ ಮೊಬೈಲಿಗೆ ಫೋನ್ ಮಾಡಿದೆ.
“ನನಗೆ ಸ್ವಲ್ಪ ವಿಷಯ ಪತ್ತೆಹಚ್ಚಿ ಕೊಡಿ, ಆಗುತ್ತಾ?” ಎಂದೆ.
“ಏನು ಪತ್ತೆ ಮಾಡಿದಿರಿ, ಡಿಟೆಕ್ಟಿವ್ ಸಾಹೆಬರು?” ಎಂದಳು ನಗುತ್ತಾ. ಲೂಸಿ ಅಲ್ಲ, ಕಿಸಿ ಕಿಸಿ ಎಂದಿಡಬೇಕು ಹೆಸರು ಇವಳಿಗೆ.
“ನಾನು ಪತ್ತೆ ಮಾಡುವುದೆಲ್ಲಿ? ನನ್ನನ್ನೇ ಯಾರೋ ಪತ್ತೆ ಮಾಡುತ್ತಿರುವಂತಿದೆ” ಎಂದು ಆ ಟಾಟಾ ನ್ಯಾನೋ ಕಾರ್ ಲೈಸೆನ್ಸ್ ನಂಬರ್ ಕೊಟ್ಟು ಇದರ ಮಾಲೀಕನ ಪತ್ತೆಹಚ್ಚಿ ಕೊಡಲು ಸಾಧ್ಯವೆ ಎಂದೆ.
“ನಮ್ಮ ಕಂಪೆನಿಗೆ ಆರ್.ಟಿ.ಓ/ಪೊಲೀಸ್ ಕಡೆ ಎಲ್ಲ ಕಾಂಟ್ಯಾಕ್ಟ್ಸ್ ಇದ್ದೇ ಇರುತ್ತದೆ. ಇಲ್ದಿದ್ರೆ ನಮ್ಮ ಲಾಯರ್ ಕೆಲಸ ನಡೆಯೋದು ಹೇಗೆ? ಸರಿ, ನಾಳೆ ಬೆಳಗ್ಗೆ ಆಫೀಸ್ಟೈಮಿನಲ್ಲಿ ಫೋನ್ ಮಾಡಿ, ಹೇಳುತ್ತೇನೆ” ಎಂದಳು ವಿಶ್ವಾಸದಿಂದ.
“ಓಕೆ” ಎಂದೆ.
“ಸರಿ, ರಾತ್ರಿ ಊಟಕ್ಕೆ ಏನು ಮಾಡ್ತಿದ್ದೀರಿ?” ಎಂದಳು.
“ಗೊತ್ತಿಲ್ಲ, ಹೊರಗೆ ಹೋಗಬೇಕು” ಎಂದೆ.
“ಹೋಟೆಲ್ ರತನ್ವಿಲಾಸ್ಗೆ ಹೋಗಿ, ಚೆನ್ನಾಗಿರುತ್ತದೆ” ಎಂದಳು.
“ಯಾಕೆ ಆ ಹೋಟೆಲ್ ನಿಮ್ಮ ಮನೆ ರೋಡಿನಲ್ಲಿದೆಯೆ?” ಎಂದೆ ಕಳ್ಳ ಕೊರಮನಂತೆ.
ಒಂದು ಕ್ಷಣ ಮೌನ. ಅವಳ ಮಿದುಳು ಕೆಲಸ ಮಾಡುವುದು ಕೇಳಿಸುತ್ತಿದೆ!
“ಇದೆ, ಆದರೆ ಆ ರಸ್ತೆ ನಮ್ಮ ಮನೆಯ ಒಳಗೆ ಹೋಗಲ್ಲ” ಅಂದಳು ಜಾಣೆ.
“ಹೋಗಬೇಕಾದರೆ?” ಅಂದೆ ಮುಗುಳುನಗೆ ನಗುತ್ತಾ; ಛಲ ಬಿಡದ ತ್ರಿವಿಕ್ರಮನಂತೆ.
“ಅದಕ್ಕೆ ಇನ್ನೂ ಸಮಯವಾಗಬೇಕು. ಗುಡ್ನೈಟ್” ಎಂದಿಟ್ಟಳು.
ಸರಿ, ನನ್ನ ಲಾಡ್ಜ್ ಎದುರಿಗಿದ್ದ ವಿಷ್ಣುಭವನ್ನಲ್ಲಿ ಪ್ಲೇಟ್ಮೀಲ್ಸ್, ಐಸ್ಕ್ರೀಮ್ ತಿಂದು ವಾಪಸಾದೆ.
ರಾತ್ರಿಯಲ್ಲಿ ಹೇಗೆ ಈ ಕೇಸ್ ಬಗೆಹರಿಸುವುದು ಎಂದು ಯೋಚಿಸಲಾರಂಭಿಸಿದ್ದೆ. ಒಂದೆಡೆ ಕಳೆದು ಹೋದ ಮೂರುವರೆ ದಶಕದ ಹಿಂದಿನ ಮೃದುಲಾರ ಹೆತ್ತ ತಂದೆ-ತಾಯಿಯ ಪತ್ತೆಯಾಗಬೇಕು. ಇನ್ನೊಂದೆಡೆ ವಿಚಿತ್ರ ಬ್ಲ್ಯಾಕ್ಮೈಲ್ ಪತ್ರ ಬರೆವ ಇಲ್ಲಿನ ಲೋಕಲ್ ವ್ಯಕ್ತಿ. ಅವನಿಗೆ ಗೊತ್ತಿರುವ ಕಹಿಸತ್ಯವೇನು? ಮತ್ತು ಹೇಗೆ? ನನ್ನ ಮೇಲೆ ಕಣ್ಣಿಟ್ಟಿರುವ ಟಾಟಾ ನ್ಯಾನೋನ ಅಮೆಚೂರ್ ವ್ಯಕ್ತಿ ಬೇರೆ? ನಿದ್ದೆ ನಿಧಾನವಾಗಿಯೆ ಹತ್ತಿತ್ತು.
ಮರುದಿನ ಬೆಳಗ್ಗೆ ೧೦ರ ಒಳಗೆ ರೂಮ್ ಸರ್ವೀಸ್ನಲ್ಲಿ ಬ್ರೆಡ್ಟೋಸ್ಟ್, ಕಾಫಿ ಮುಗಿಸಿ ಹೊರಬಿದ್ದೆ. ಎದುರಿಗಿದ್ದ ಕಾರ್ ಬಾಡಿಗೆ ಏಜೆನ್ಸಿಯಲ್ಲಿ ಒಂದು ನೀಲಿ ಬಣ್ಣದ ಹೊಂಡಾ ಸಿಟಿ ಕಾರ್ ಬಾಡಿಗೆಗೆ ಆರಿಸಿದೆ. ಬೆಂಗಳೂರಿಗಿಂತ ದಿನಕ್ಕೆ ಒಂದೂವರೆ ಪಟ್ಟು ಹೆಚ್ಚು ಬೆಲೆ ಹೇಳಿದ. “ಇದು ಟೂರಿಸ್ಟ್ಸ್ಪಾಟ್ ಅಲ್ಲವಾ ಸರ್?” ಎಂದು ಹಲ್ಕಿರಿದ ಅದರ ಮಾಲಿಕ. ನನ್ನ ದುಡ್ಡೇನಲ್ಲವಲ್ಲ, ಮೃದುಲಾ, ವಿಶ್ವಾಸ್ ಅಂಥವರಿಗೆ ಈ ವೆಚ್ಚ ಧೂಳಿನಂತೆ.
ನನ್ನ ಪತ್ರಗಳ ಫೈಲ್ ತೆಗೆದುಕೊಂಡು ರಿಜಿಸ್ಟ್ರಾರ್ ಆಫೀಸ್ ಕಡೆಗೆ ನನ್ನ ಬಾಡಿಗೆ ಹೊಂಡಾ ಕಾರಿನಲ್ಲಿ ಹೊರಟೆ; ನನ್ನ ಮೊದಲ ದಿನದ ದಾಖಲೆ ವಿಚಾರಣೆಗೆ ರೆಡಿಯಾಗಿ. ಮತ್ತೆ ಹಿಂತಿರುಗಿ ಟಾಟಾ ನ್ಯಾನೋ ಕಾರಿನತ್ತ ನೊಡುವ ಅಗತ್ಯವಿರಲಿಲ್ಲ. ಅವನು ಹಿಂದೆಯೇ ಇರುವನು ಎಂದು ನನಗೆ ಚೆನ್ನಾಗಿ ಗೊತ್ತಿತ್ತು. `ಸ್ವಲ್ಪ ವಿಷಯ ಗೊತ್ತಾಗಲಿ, ಅವನಿಗೆ ಮಾಡುತ್ತೇನೆ ಶಾಸ್ತಿ’ ಎಂದುಕೊಂಡೆ. ನನ್ನ ಕಂಕುಳ ಕೆಳಗಿನ ರಿವಾಲ್ವರ್ ಕೇಸಿನಲ್ಲಿದ್ದ ಕೋಲ್ಟ್ ೦.೪೫ ನನಗೆ ಆತ್ಮವಿಶ್ವಾಸ ನೀಡಿತ್ತು.
ನಾನು ಆಫೀಸಿನ ಕಾರ್ಪಾರ್ಕ್ನಲ್ಲಿ ನಿಲ್ಲಿಸಿ ಇಳಿಯುವಾಗ ಮತ್ತೆ ನನ್ನ ಮುಂದೆಯೇ ಭರ್ ಎಂದು ಟಾಟಾ ನ್ಯಾನೋ ಹೋಯಿತು, ನಿಲ್ಲಿಸದೇ.
ಅತ್ಯಂತ ಧೂಳು ಹಿಡಿದ, ಮಳೆ ನೀರು ಸೋರುವ ಕೋಣೆಯೊಂದರಲ್ಲಿ ಓರ್ವ ಗುಳ್ಳೆಮುಖದ ಗುಮಾಸ್ತನಿಗೆ ನನ್ನ ಅಪ್ಲಿಕೇಶನ್ ಕೊಟ್ಟೆ.
“ಸೆಕೆಯಾಗುತ್ತಿದೆ. ಫ್ಯಾನ್ ಹಾಕು” ಎಂದೆ. ಹಳೆ ಪೇಪರ್ ಕಡತದ ವಾಸನೆ ಬೇರೆ.
“ಫ್ಯಾನ್ ಹಾಕಿದರೆ ಪೇಪರ್ ಹಾರುತ್ತದೆ, ಅದಕ್ಕೆ ಸ್ಪೀಡ್ ಕಂಟ್ರೋಲರ್ ಇಲ್ಲ” ಎಂದು ನನ್ನ ಅಪ್ಲಿಕೇಶನ್ ಅನ್ನು ಕಷ್ಟಪಟ್ಟು ಓದಿದ. ಇವತ್ತೋ ನಾಳೆಯೋ ರಿಟೈರ್ ಆಗುವ ವಯಸ್ಸಿರಬಹುದು ಇವನಿಗೆ…
“೧೯೮೦ನೇ ವರ್ಷದ್ದಾ? ಅಷ್ಟು ಹಳೇ ಪೇಪರ್ಸ್ ಆ? ಏನು ಮಾಡ್ತೀರಿ ಅದನ್ನು ನೋಡಿ?” ಅಂದ.
“ನಾನು ಮ್ಯೂಸಿಯಮ್ ಕಟ್ಟುತ್ತಿದ್ದೇನೆ. ಅಲ್ಲಿ ಚಿನ್ನದ ಫ್ರೇಮ್ ಹಾಕಿ ಅದನ್ನು ಇಡುತ್ತೇನೆ. ನಿನ್ನನ್ನೂ ಕರೆಯುತ್ತೇನೆ, ತೋರಿಸಲಿಕ್ಕೆ” ಎಂದೆ. ಕಾನ್ಫಿಡೆನ್ಶಿಯಲ್ ಆಗಿರಲಿ ಎಂದು ಎಷ್ಟೆಲ್ಲಾ ಸುಳ್ಳು ಹೇಳಬೇಕಲ್ಲ!
ಅವನಿಗೂ ನನ್ನ ಜೋಕ್ ಅರ್ಥವಾಗಲಿಲ್ಲ. ಮುಖ ಸಪ್ಪಗೆ ಮಾಡಿಕೊಂಡು ಒಳಗೆ ಹೋದ. ಒಂದು ಹತ್ತು ಹಳೆ ನುಸಿ ಬಿದ್ದ ಕಂದು ಬಣ್ಣಕ್ಕೆ ತಿರುಗಿದ್ದ ಫೈಲ್ಸ್ ಎತ್ತಲಾರದೇ ಎತ್ತಿಕೊಂಡು ಬಂದು ಒಂದು ಚಿಕ್ಕ ಟೇಬಲ್ ಮೇಲಿಟ್ಟ. ಮೂವತ್ತು ವರ್ಷದ ಧೂಳು ಎದ್ದಿತು.
“ನೋಡಿಕೊಳ್ಳಿ… ಕಾಪಿ ಬೇಕಾದ್ರೆ ಇಲ್ಲಿರೋ ಜೆರಾಕ್ಸ್ ಮೆಶೀನ್ ಕೆಟ್ಟಿದೆ, ಹೊರಗೋಗ್ಬೇಕು” ಅಂದ. ಸರ್ಕಾರಿ ಆಫೀಸ್!
“ಬೇಡಾ, ನನ್ನ ತಲೆಯಲ್ಲೇ ಎಲ್ಲಾ ಪ್ರಿಂಟ್ ಆಗುತ್ತೆ” ಎಂದೆ.
ಸುಮ್ಮನೆ ಹೋದ, ನನ್ನ ತಲೆ ಕೆಟ್ಟಿದೆ ಎಂದು ಅವನಿಗೆ ಗ್ಯಾರಂಟಿಯಾದಂತಿತ್ತು.
ಸುಮಾರು ಮೂವತ್ತೈದು ವರ್ಷದ ಹಿಂದೆ ಮಾಂಡಿಚೆರ್ರಿಯ ಆಸುಪಾಸಿನಲ್ಲಿ ಮಗುವೊಂದು ಹುಟ್ಟಿತ್ತು, ಬಡವರ ಮಗಳಾಗಿರುವ ಸಾಧ್ಯತೆ ಹೆಚ್ಚು. ಆಗ ಹುಟ್ಟಿದ ಸಮಯ ಅಂದರೆ ಫೆಬ್ರುವರಿ-ಮೇ ಅಂತರದಲ್ಲಿ ಎಷ್ಟು ಮಕ್ಕಳು ಹುಟ್ಟಿದವು, ಅದರಲ್ಲಿ ಹೆಣ್ಣು ಮಕ್ಕಳೆಷ್ಟು? ಅದರಲ್ಲಿ ಹುಡುಕುತ್ತಾ ಹೋದರೆ ಹೊಸಮನಿ ಎಂಬವರಿಗೆ ದತ್ತು ಕೊಟ್ಟ ಮಗು ಯಾವುದು? ಹೀಗೆ ಆ ಧೂಳು ಬಿದ್ದು, ಮುಟ್ಟಿದರೆ ಹರಿಯುವ ಸ್ಥಿತಿಯಲ್ಲಿದ್ದ ಕಡತಗಳನ್ನು ಒಂದೊಂದಾಗಿ ಪರಿಶೀಲಿಸಲು ನನಗೆ ಅರ್ಧ ದಿನವೇ ಬೇಕಾದೀತು ಎನಿಸಿತು.
ಇವರು ಮೃದುಲಾಗೆ ಮಾತ್ರ ಸಂಬಂಧಿಸಿದ ಪತ್ರಗಳನ್ನು ಆಗಿನ ಕಾಲದವರು ಬೇರೆಯಾಗಿ ಫೈಲ್ ಮಾಡೇ ಇಲ್ಲಾ! ನಾನು ಪ್ರತ್ಯೇಕ ಅಪ್ಲಿಕೇಶನ್ ಹಾಕಿದ್ದು ಹುಟ್ಟಿದ್ದ ಎಲ್ಲಾ ಮಕ್ಕಳ ದಾಖಲೆ ನೋಡಲೆಂದೆ? ಛೆ! ಎನಿಸಿ ಕೆಟ್ಟ ಕೋಪ ಬಂದಿತು. ನಿರಾಸೆಯಾಯೂ ಆಯಿತು. ಏನು ಮಾಡುವುದು, ಎಂದು ಎಲ್ಲ ಕಡತಗಳಲ್ಲಿ ತಾಳ್ಮೆಯಿಂದ ಹುಡುಕಾಡತೊಡಗಿದೆ
ಆ ಸಮಯದಲ್ಲಿ ಹುಟ್ಟಿದ ಮಕ್ಕಳು ೧೫೦. ಅವುಗಳಲ್ಲಿ ಹೆಣ್ಣು ೫೮ ಮಾತ್ರ.
ಅದರಲ್ಲಿ ದತ್ತು ಪಡೆದ ಮಕ್ಕಳು ಒಟ್ಟು ೧೫ ಎಂದು ಸಿಕ್ಕಿತು….
ಹೆಣ್ಣುಮಕ್ಕಳು ೬, ಗಂಡು ಮಕ್ಕಳು ೯.
ಈ ಆರರಲ್ಲಿ ಯಾರು ಎಂದು ಮತ್ತೆ ಇನ್ಡೆಕ್ಸ್ ನೋಡಿ ತಿಂಗಳುವಾರಿಯಾಗಿ ಹುಡುಕುತ್ತಾ ಹೋದೆ.
ಜನವರಿ – ಯಾರೂ ಇಲ್ಲ.
ಫೆಬ್ರುವರಿ – ಯಾರೂ ಇಲ್ಲ.
ಮಾರ್ಚ್ – ಎರಡು. ಇಬ್ಬರು ಮಕ್ಕಳಲ್ಲಿ ಯಾರೂ ಮೃದುಲಾ ಅಲ್ಲ, ದತ್ತು ತಗೊಂಡವರು ಹೊಸಮನಿಯೂ ಅಲ್ಲ. ಆದರೂ ನನ್ನ ನೋಟ್ಬುಕ್ನಲ್ಲಿ ವಿವರಗಳನ್ನು ಬರೆದುಕೊಂಡೆ. ಯಾತಕ್ಕೂ ಇರಲಿ ಎಂದು.
ಏಪ್ರಿಲ್ನಲ್ಲಿ ಯಾರೂ ಹೆಣ್ಣುಮಕ್ಕಳನ್ನು ದತ್ತು ಪಡೆದಿಲ್ಲ.
ಹಾಗಾದರೆ ಮೇ ತಿಂಗಳಲ್ಲಿ ಮಿಕ್ಕ ನಾಲ್ಕು ಹೆಣ್ಣುಮಕ್ಕಳ ದತ್ತು ಆಗಿರಬೇಕು! ಎಂದು ಖುಶಿಯಿಂದ ಕೊನೆಗೂ ಯಶಸ್ಸು ದೊರಕಿತೆಂದು ಮೇ ತಿಂಗಳ ಫೈಲ್ ತೆರೆದೆ.
ನನ್ನ ಎದೆ ಧಸಕ್ಕೆಂದಿತು…
ಅದು ಖಾಲಿ ಫೈಲ್, ಒಳಗೆ ಯಾವ ಪತ್ರವೂ ಇಲ್ಲ. ಆ ಫೈಲಿನ ಪಿನ್ ಹಾಗೆಯೇ ಇದೆ; ಆದರೆ ಪತ್ರಗಳೆಲ್ಲಾ ಕಾಣೆ!
ಯಾರೋ ಬಲವಂತವಾಗಿ ಮೇ ತಿಂಗಳ ಎಲ್ಲ ದತ್ತುಪತ್ರಗಳನ್ನು ಹರಿದು ಕದ್ದು ಒಯ್ದಿರುವುದು ಸ್ಪಷ್ಟವಾಗಿ ಕಾಣುತ್ತಿದೆ!
ಕೆಲವೊಮ್ಮೆ ಕೇಸ್ಗಳಲ್ಲಿ ನನಗೆ ಹೀಗೆಯೇ…. ಎಲ್ಲ ಸುಲಭವಾದದ್ದು, ಮೋಸವಿಲ್ಲದ ಸಾಮಾನ್ಯ ಕೇಸ್ ಎಂದುಕೊಳ್ಳುತ್ತೇನೆ, ಆದರೆ ಹೋಗುತ್ತಾ ಹೋಗುತ್ತಾ ಇಂಥ ಗಾಬರಿಯಾಗುವ ಘಟನೆಗಳು ಬಿಚ್ಚಿಕೊಳ್ಳುತ್ತವೆ.
ಮೂವತ್ತೈದು ವರ್ಷ ಹಿಂದಿನ ದತ್ತುಪತ್ರಗಳು ಯಾರಿಗೆ ತಾನೆ ಇಂದು ಕದ್ದಾದರೂ ಬೇಕಾಗುವುದು?
ಹಾಗೆ ಬೇಕಾಗುವುದು ಎಂದೇ ಇಟ್ಟುಕೊಳ್ಳೋಣ. ಅವರು ಅಪ್ಲಿಕೇಶನ್ ಹಾಕಿ ಎಲ್ಲ ಮಕ್ಕಳ ಪರವಾಗಿ ಕೇಳಲೂ ಸಾಧ್ಯವಿಲ್ಲ. ಒಬ್ಬರು ಒಂದು ಮಗುವಿನ ರೆಕಾರ್ಡ್ ಮಾತ್ರ ಕೇಳಿರಬೇಕು, ರೂಲ್ಸ್ ಪ್ರಕಾರ!
ಪೂರ್ತಿ ಕದ್ದಿದ್ದಾರೆ ಅಂದರೆ ಕಳ್ಳನಿಗೂ ಯಾವ ಮಗುವಿನ ರೆಕಾರ್ಡ್ಸ್ ಬೇಕೆಂದೇ ಸರಿಯಾಗಿ ತಿಳಿದಿಲ್ಲ….
ನಾನು ಎದ್ದು ಆ ಗುಳ್ಳೆಮುಖದ ಗುಮಾಸ್ತನನ್ನು ಕೂಗಿದೆ.
“ಇದರಲ್ಲಿದ್ದ ಪೇಪರ್ಸ್ ಎಲ್ಲಾ ಯಾರೋ ಕದ್ದೊಯ್ದಿದ್ದಾರಲ್ಲ! ಎಲ್ಲಯ್ಯಾ ಹೋಯ್ತು?” ಎಂದರೆ ಅವನು ಬೇಸರದಿಂದ “ನಾವೇನು ಮಾಡೊಣ ಸ್ವಾಮಿ ಇದಕ್ಕೆ? ಇಲಿ ತಿಂದಿರಬಹುದು ಅಷ್ಟೆ” ಎಂದ. ಅದು ಸರ್ವೇಸಾಮಾನ್ಯವೆಂಬಂತೆ. ಅವನ ಪೆನ್ಶನ್ ಏನೂ ಕಟ್ ಮಾಡುವುದಿಲ್ಲವಲ್ಲ; ಅವನಿಗೇನು ತೊಂದರೆ!
“ಇಲಿ ತಿಂದಿಲ್ಲ, ಯಾರೋ ಹರಿದುಕೊಂಡು ಹೋಗಿದ್ದಾರೆ, ನೋಡಿಲ್ಲಿ ಸರಿಯಾಗಿ. ಯಾರು ಬಂದಿದ್ದರು ಈ ವರ್ಷದ ರೆಕಾರ್ಡ್ಸ್ ಕೇಳಲು ಇತ್ತೀಚೆಗೆ; ಅಂದರೆ ನನಗಿಂತ ಮುಂಚೆ? ಅವರೇ ಈ ಕೆಲಸ ಮಾಡಿರುತ್ತಾರೆ” ಎಂದು ಉದ್ರಿಕ್ತನಾಗಿ ದಬಾಯಿಸಿದೆ.
ಅವನು ನಾನು ಹುಚ್ಚನೆ ಎಂಬಂತೆ ಮತ್ತೆ ಮುಖ ನೋಡಿದ.
“ಇದು ಗವರ್ಮೆಂಟ್ ಆಫೀಸ್ ಸಾಮಿ, ಯಾರು ಬೇಕಾದರೂ ಬರಬಹುದು, ಹೋಗಬಹುದು…” ಎಂದ ಭಡವ.
“ನೀನು ಇರಲಿಲ್ಲವೆ ಹೋದ ಸಲ, ಯಾರಾದ್ರೂ ಈ ಫೈಲ್ ಕೇಳಿದಾಗ?” ಎಂದೆ.
“ಇಲ್ಲ ಸ್ವಾಮೀ, ನಾನು ಒಂದು ತಿಂಗಳು ಎಲ್.ಟಿ.ಸಿ. ಹೋಗಿದ್ದೆ. ಆಗ ಟೆಂಪರರಿ ಸ್ಟಾಫ್ ಇದ್ದರು. ಯಾರ್ಯಾಕೆ ಕದಿಯುತ್ತಾರೆ ಬಿಡಿ ಸ್ವಾಮಿ? ಅದೇ ಹರಿದು ಹಾಳಾಗಿಹೋಗಿರುತ್ತೆ. ತುಂಬಾ ಹಳೇದಲ್ವಾ!” ಎಂದ ಅಲಕ್ಷ್ಯದಿಂದ, ದೊಡ್ಡ ಜ್ಞಾನಿಯಂತೆ.
“ಹೌದು, ಈ ಆಫೀಸಿನಲ್ಲಿರುವ ಹಳೆಯದನ್ನೆಲ್ಲ ಹರಿದು ಹಾಳುಮಾಡಬೇಕು. ನಿನ್ನನ್ನೂ ಸೇರಿಸಿ” ಎಂದು ಕುಪಿತನಾಗಿ ಅಲ್ಲೇ ಕಡತ ಬಿಸಾಕಿ ಹೊರಬಿದ್ದೆ. ಬಿರ್ರನೆ ಬರುವಾಗ ಒಬ್ಬ ಕೆಲಸದವಳು ನನಗೆ ಏಕ್ದಂ ಡಿಕ್ಕಿ ಹೊಡೆದು ತನ್ನ ಕೈಲಿದ್ದ ಕಸಪೊರಕೆ ಕೆಳಗೆತ್ತಿ ಹಾಕಿದಳು. “ಸಾರಿ ಸರ್” ಎಂದು ಗಾಬರಿಯಾಗಿ ಒಳಗೋಡಿದಳು. ಪೊರಕೆ ಸೇವೆಯೂ ಆಯ್ತು ನನಗೆ!
ಎದುರಿನ ಮಲೆಯಾಳಿ ಡಬ್ಬಾ ಅಂಗಡಿಯಲ್ಲಿ ಕುಳಿತು ಒಂದು ಕಾಫಿ ಕೇಳಿದೆ.
“ಕಾಫಿ ಆಗೋಯ್ತು, ಟೀ ಕೊಡ್ಲಾ?” ಅಂದ.
ಇವತ್ತು ನನ್ನ ಒಳ್ಳೆಯ ದಿನವಲ್ಲ, ಕಾಫಿಗೂ ಗತಿಯಿಲ್ಲ.
“ಸರಿ ಕೊಡು” ಎಂದೆ.
ಮಲೆಯಾಳಿ ಚೆನ್ನಾಗಿಯೇ ಚಹಾ ಮಾಡಿದ್ದ.
“ಯಾಕೆ ನೀವು ಬಂದ ಕೆಲ್ಸ ಆಗಲಿಲ್ವಾ? ಈ ಆಫೀಸೇ ಇಷ್ಟು. ಎಷ್ಟೋ ಜನಕ್ಕೆ….” ಅವನು ಏನೋ ಹೇಳುತ್ತಲೆ ಇದ್ದ. ಆದರೆ ನನ್ನ ಗಮನ ಮಾತ್ರ ಮೂಲೆಯಲ್ಲಿ ಮರೆಯಾಗಿ ನನಗಾಗಿ ಕಾಯುತ್ತಿರುವ ಟಾಟಾ ನ್ಯಾನೋ ಕಾರಿನ ಮೇಲಿತ್ತು.
ಅದಕ್ಕೆ ತಕ್ಕಂತೆ ನನ್ನ ಮೊಬೈಲ್ ಫೋನ್ ರಿಂಗಾಯಿತು. ಲೂಸಿಯಾ!
“ವಿಜಯ್, ಆ ನ್ಯಾನೋ ಕಾರ್ ನಂಬರ್ ಕೊಟ್ಟಿದ್ದಿರಲ್ಲಾ? ಅದರ ವಿಷಯಕ್ಕೆ ಅಂತಾ….” ಎಂದಳು. ಬರೇ ವಿಜಯ್ ಅಂದಿದ್ದಳು. `ಮಿಸ್ಟರ್’ ಇಲ್ಲ. ಶುಭಲಕ್ಷಣ!
“ಅದ್ಯಾರು ಎಂದು ನಾನು ಹೇಳಿದರೆ ನೀವು ನಂಬುವುದೇ ಇಲ್ಲ” ಎಂದು ರಾಗ ತೆಗೆದಳು.
“ಲೂಸಿಯಾ, ನೀವೀಗ ನಾನೇ ಐಶ್ವರ್ಯಾ ರೈ ಅಂದರೂ ನಾನು ನಂಬುವ ಸ್ಥಿತಿಯಲ್ಲಿದ್ದೇನೆ. ಬಹಳ ದುರದೃಷ್ಟಕರ ದಿನ ಇವತ್ತು. ಪ್ಲೀಸ್ ಬೇಗ ಹೇಳಿ” ಎಂದೆ ಅವಸರಪಡುತ್ತಾ.
“ಅವನ ಹೆಸರು ಜನಾರ್ಧನ್ ಎಂದು. ಕಾರ್ ಮೆಕ್ಯಾನಿಕ್ ಆಗಿದ್ದ. `ಜಾನಿ’ ಅಂತಾರೆ ಇಲ್ಲಿ ಎಲ್ಲರೂ ಅವನನ್ನು. ಈಗಲೂ ಪಾರ್ಟ್ಟೈಮ್ ಕಾರ್ ರಿಪೇರಿ ಮಾಡ್ತಿರ್ತಾನೆ. ಆ ನ್ಯಾನೋ ಕಾರ್ ಆವನ ಹೆಸರಲ್ಲೇ ರಿಜಿಸ್ಟರ್ ಆಗಿದೆ. ಆದರೆ ಅವನು ಆಫೀಸ್ ಇಟ್ಟಿರುವುದು, `ಜಾನಿ ಪ್ರೈವೇಟ್ ಡಿಟೆಕ್ಟಿವ್ ಏಜೆನ್ಸಿ’ ಅನ್ನೋ ಹೆಸರಿನಲ್ಲಿ. ಆ ಅಡ್ರೆಸ್ `ಯೆಲ್ಲೋಪೇಜಸ್’ನಲ್ಲಿದೆ ಕೂಡಾ” ಎಂದು ಉತ್ಸಾಹದಿಂದ ವಿವರಿಸಿದಳು ಲೂಸಿಯಾ.
ನನಗೆ ಅಂಥ ಸಂದರ್ಭದಲ್ಲೂ ಜೋರಾಗಿ ನಗೆ ಬಂತು.
“ಏಕೆ, ಏನು?” ಅಂದಳು ಲೂಸಿಯಾ ಅಸಮಾಧಾನದಿಂದ; ತನ್ನ ಬಗ್ಗೆ ನಗುತ್ತಿದ್ದೇನೆಂದು ತಿಳಿದು.
“ನೀವು ಹೇಳಿದ್ದು ನಿಜವಾದರೆ ಅವನಿಗೆ ಪ್ರಪಂಚದ ಅತಿ ಕೆಟ್ಟ ಪತ್ತೇದಾರ ಎನ್ನಬೇಕು. ಅವನಿಗೆ ಗೂಢಚಾರಿಕೆಲಸದ ಎರಡಕ್ಷರವೂ ಗೊತ್ತಿಲ್ಲ, ದಡ್ಡ” ಎಂದುತ್ತರಿಸಿದೆ. ಸರಿ, ಅವಳು ಜಾನಿಯ ಅಡ್ರೆಸ್ ಕೊಟ್ಟಳು, ಬರೆದುಕೊಂಡೆ.
“ಇನ್ನು ನಿಮ್ಮಿಷ್ಟ, ನನಗೆ ಕೋರ್ಟ್ ಇದೆ, ಟೈಮಾಯ್ತು…. ಬರ್ತೀನಿ” ಅಂದಳು.
“ಸಾಯಂಕಾಲ ಅಥವಾ ರಾತ್ರಿ ಊಟಕ್ಕೆ ಸಿಗುತ್ತೀರಾ?” ಎಂದೆ. ಆಶಾಜೀವಿಗಳಲ್ಲಿ ನಾನು ಮೊದಲಿಗ.
“ನೋಡೋಣಾ. ಫೋನ್ ಮಾಡ್ತೀನಿ, ಬೈ” ಎಂದಿಟ್ಟಳು.
ನಾನೀಗ ನನ್ನ ಟಾಟಾ ನ್ಯಾನೋ ಮಿತ್ರನಿಗೆ ಆಟ ಆಡಿಸೋಣವೆಂದಿದ್ದೆ. ಅವನ ಅಡ್ರೆಸ್ ನನ್ನ ಕೈಯಲ್ಲಿತ್ತು. ಅವನ ಆಫೀಸ್ ಪೊಲೀಸ್ ಕಮೀಶನರ್ ಆಫೀಸಿನ ಎದುರಿನ ಬಿಲ್ಡಿಂಗ್ ಅಂತೆ. ಮೊದಲನೇ ಮಹಡಿ.
ವಾರೆವ್ವಾ…. ವಿಪರ್ಯಾಸವೇ!
ನಾನು ಹೊಂಡಾ ಕಾರ್ ಹತ್ತಿ ನೇರವಾಗಿ ಅವನ ಆಫೀಸಿಗೆ ಹೋಗಿ ಆ ಬಿಲ್ಡಿಂಗಿನ ಮುಂದೆ ನಿಂತೆ. ಇಳಿದು ಏನೂ ತಿಳಿಯದವನಂತೆ ಅವನ ಮೊದಲನೆ ಮಹಡಿಯ ಆಫೀಸಿಗೆ ನಡೆಯಹತ್ತಿದೆ. ಹಿಂದೆ ಗಾಬರಿಯಾಗಿ ಓಡೋಡಿ ಬರುತ್ತಿದ್ದ. ಕಂಗಾಲಾಗಿರಬೇಕು, ಖಂಡಿತಾ! ಬೀದೀಲಿ ಹೋಗೋ ಮಾರಿ ಮನೆಗೇ ಬಂತಲ್ಲಾ ಎಂದು.
“ಹೇ ಮಿಸ್ಟರ್, ಏನು ಬೇಕಿತ್ತು?” ಎಂದು ಗಾಬರಿಯಾಗಿ ಕೇಳಿ, ಕೀಯಿಂದ ಡೋರ್ ಲಾಕ್ ತೆಗೆದು ಸರ್ರನೆ ಒಳಹೋದ. ಅವನು ಬಾಗಿಲು ಮುಚ್ಚುವ ಮೊದಲು, ನನ್ನ ಕಾಲಿಟ್ಟು ನೂಕಿದೆ, ದೊಪ್ಪನೆ ಟೇಬಲ್ ಹಿಂದಿನ ಚೇರ್ನಲ್ಲಿ ಕುಳಿತ.
ನಾನೂ ಅವನ ಎದುರಿಗೆ ಹೋಗಿ ನಿಂತೆ. ಬರೇ ಟೆಲಿಫೋನ್ ಬೂತಿನಂಥ ಆಫೀಸ್. ಒಂದೇ ವಿಸಿಟರ್ ಚೇರ್, ಗೋಡೆಯ ಮೇಲೆ ಫಾರಿನ್ ಮೇಕಿನ ಪೋರ್ಶೆ, ಲಾಮ್ಬೋರ್ಗಿನಿ ಕಾರ್ಗಳ ಬಣ್ಣದ ವಾಲ್ ಪೇಪರ್ಸ್ ಅಂಟಿಸಿದ್ದವು. ಯಾವುದೇ ಅಮೆಚೂರ್ ಮೆಕ್ಯಾನಿಕ್ನ ಕನಸುಗಳಂತೆ….
“ನಿನ್ನ ಹೆಸರೇನು, ಯಾಕೆ ಇಲ್ಲಿಗೆ ಫಾಲೋ ಮಾಡ್ಕೊಂದು ಬಂದಿ?” ಎಂದು ಗದರಿದ. ತಾನೇ ನನ್ನನ್ನು ಫಾಲೋ ಮಾಡಿಕೊಂಡು ಬಂದಿದ್ದನ್ನು ಕೂಡಾ ಮರೆತಿದ್ದ.
“ನಾನು ಕೇಳುವ ಪ್ರಶ್ನೆಗಳನ್ನೆಲ್ಲಾ ನೀನೇ ಉರುಹೊಡೆದಂತೆ ಕೇಳುತ್ತಿದ್ದೀಯಲ್ಲ, ಜಾನಿ” ಎಂದು ನನ್ನ ಕಂಕುಳ ಕೆಳಗಿನಿಂದ ಕೋಲ್ಟ್ ೦.೪೫ ರಿವಾಲ್ವರ್ ತೆಗೆದು ಅದನ್ನು ಕರ್ಚಿಫಿನಲ್ಲಿ ಒರೆಸತೊಡಗಿದೆ.
ಅದನ್ನು ಕಂಡು ಅವನ ಮುಖದಲ್ಲಿ ಭಯ, ಅಚ್ಚರಿ ಎರಡೂ ಒಟ್ಟಿಗೇ ಆಯಿತು.
“ನೋಡಿ, ಮಿಸ್ಟರ್ ವಿ…. ವಿಜಯ್, ನೀವ್ಯಾರೋ ನನ….. ನನಗೆ ಗೊತ್ತಿಲ್ಲ” ಎಂದು ತೊದಲಿಬಿಟ್ಟ.
ನಾನು ಪಿಸ್ತೂಲನ್ನು ಅವನತ್ತ ಲಘುವಾಗಿ ತಿರುಗಿಸಿದೆ.
“ಆದರೆ ವಿಜಯ್ ಎಂದು ನನ್ನ ಹೆಸರು ಹೇಗೆ ಗೊತ್ತು? ಜಾನಿ. ನನಗೆ ಸಮಯ ಹಾಳುಮಾಡಲು ಮನಸ್ಸಿಲ್ಲಾ…. ನಿನ್ನ ಜೀವನವನ್ನು ಹಾಳುಮಾಡಲೂ ಕೂಡಾ” ಎಂದು ಮೆತ್ತಗೆ ಅವನ ಹಣೆಗೆ ರಿವಾಲ್ವರ್ ನಳಿಕೆ ಹಿಡಿದೆ. ಅದರಲ್ಲಿ ಗುಂಡಿಲ್ಲ ಅನ್ನುವುದು ನನಗೆ ಮಾತ್ರ ಗೊತ್ತು.
“ಹೇಳ್ತೀನಿ…. ಸ್ವಲ್ಪ ನೀರು ಕುಡೀತೀನಿ…. ಬಿಡಿ” ಎಂದ. ಬೆದರಿ ಮುಖ ಬಿಳಿಚಿಕೊಂಡು ಗೋಡೆಯ ಸುಣ್ಣವನ್ನು ಹೋಲುತಿತ್ತು…. ಕೋಲ್ಟ್ ೦.೪೫ ರಿವಾಲ್ವರ್ ಬಹಳ ಜನಗಳ ಮೇಲೆ ಇಂಥ ಪ್ರಭಾವವನ್ನು ಬೀರುತ್ತದೆ.
ಅರ್ಧ ಬಾಟಲ್ ಮಿನರಲ್ ನೀರನ್ನು ಗಟ ಗಟ ಕುಡಿದ. ತಕ್ಷಣ ನೆತ್ತಿಹತ್ತಿತು. ಕೆಮ್ಮತೊಡಗಿದ….
ಪಾಪ, ಇವನಿಗೆ ಇಪ್ಪತ್ತೆರಡು ವರ್ಷ ವಯಸ್ಸಿರಬಹುದು, ಅನುಭವವಿಲ್ಲದವರು ಕ್ರೈಮ್ ಲೋಕಕ್ಕೆ ಬರಬಾರದು ನೋಡಿ.
ನಾನು ಎದುರಿಗೆ ಕುಳಿತೆ. ರಿವಾಲ್ವರ್ ಅವನಿಂದ ಎರಡೇ ಅಡಿ ದೂರದಲ್ಲಿತ್ತು.
“ನೀವು ಪ್ರೈವೇಟ್ ಡಿಟೆಕ್ಟಿವ್, ಬೆಂಗಳೂರಿನಿಂದ ಬರುತ್ತಿದ್ದೀರೆಂದು ನನ್ನ ಗರ್ಲ್ಫ್ರೆಂಡ್ ಹೇಳಿದಳು. ಏನೋ ಮುಖ್ಯ ವಿಷಯ ಇರಬೇಕೆಂದು ಫಾಲೋ ಮಾಡುತ್ತಿದ್ದೇನೆ. ನನಗೆ ಬಿಜಿನೆಸ್ಸ್ ಕಮ್ಮಿ ನೋಡಿ!” ಎಂದ. ಅರ್ಧ ಸತ್ಯದಂತಿತ್ತು ಅವನ ಮಾತು.
“ಅವಳಿಗೆ ಹೇಗೆ ಗೊತ್ತು?” ರಿವಾಲ್ವರ್ ಮೇಲೆ ಕೆಳಕ್ಕೆ ಆಡುತ್ತಿದೆ.
“ಲೂಸಿಯಾ ಲಾಯರ್ ಮೇಡಮ್ ಆಫೀಸಿನಲ್ಲಿ ಕಸ ಗುಡಿಸುತ್ತಾಳೆ ಅವಳು. ಮೇಡಮ್ ನಿಮ್ಮ ಬಗ್ಗೆ ಮಾತನಾಡಿದ್ದು ಕೇಳಿಸಿಕೊಂಡಳು. ಹಿಂದೆ ಹೀಗೆಲ್ಲಾ ಹೇಳಿ ನನಗೆ ಸ್ವಲ್ಪ ಕೆಲಸ ತಂದು ಕೊಟ್ಟಿದ್ದಾಳೆ. ಲಾಯರ್ ಕೆಲಸಕ್ಕೆ ಬಂದವರಿಗೆ ನನ್ನ ಬಳಿಯೂ ಕೆಲಸವಿರುತ್ತದೆ ಒಮ್ಮೊಮ್ಮೆ….. ನಿಮ್ಮ ಲಾಡ್ಜ್ ಪತ್ತೆಹಚ್ಚಿ ನಾನೇ ನಿಮ್ಮನ್ನು ಹಿಂಬಾಲಿಸುತ್ತಿದ್ದೇನೆ. ನನಗೆ ಗೊತ್ತಿಲ್ಲದ್ದು ಈ ಊರಿನಲ್ಲಿ ಏನಪ್ಪ ಕೇಸ್ ಇರಬಹುದು ಸಿಟಿ ಪತ್ತೇದಾರರಿಗೆ ಎಂದು ಕುತೂಹಲ…. ಆದರೆ ನೀವು ನಾನು ಫಾಲೋ ಮಾಡುವುದನ್ನು ಹಿಡಿದು ಬಿಟ್ರಲ್ಲಾ…. ಬಹಳ ಜಾಣರಿರಬೇಕು!” ಎಂದು ಹುಬ್ಬೇರಿಸಿದ, ಇದೊಂದು ದೊಡ್ಡ ಸಾಧನೆಯೆಂಬಂತೆ.
ನಾನು ಗನ್ ಮುಚ್ಚಿಟ್ಟು ನಕ್ಕೆ. “ನಿನ್ನನ್ನು ಒಬ್ಬ ಎಸ್.ಎಸ್.ಎಲ್.ಸಿ. ಓದುವ ಹುಡುಗ ಕೂಡಾ ಕಂಡುಹಿಡಿಯಬಹುದು.”
ಅವನ ಮುಖ ಪೆಚ್ಚಾಯ್ತು.
“ಅಷ್ಟು ಪೆದ್ದನೇ ನಾನು? ಏನೋ, ನಾನು ಚಿಕ್ಕ ಊರಿನವನು ಸಾರ್, ಎಲ್ಲಿಗೆ ಹೋಗಲಿ?” ಎಂದ ದಯಾಭಿಕ್ಷೆ ಬೇಡುವವನಂತೆ.
“ಇನ್ನು ಮೇಲೆ ನನ್ನ ಹಿಂದೆ ಬರಬೇಡ, ಅಷ್ಟೆ! ಈ ಊರಲ್ಲ, ಈ ಲೋಕವನ್ನೇ ಬಿಡಬೇಕಾಗುತ್ತದೆ” ಎಂದು ಎಚ್ಚರಿಸಿ ಅಲ್ಲಿಂದ ಹೊರಬಿದ್ದೆ. ಅವನಿಂದ ಇನ್ನು ಹೆಚ್ಚು ತೊಂದರೆಯಾಗದು ಎಂದು ವಿಶ್ವಾಸವಿತ್ತು.
“ಹೊರಗೆ ಬಂದು ಇನ್ನೊಂದು ಡಬ್ಬಾ ಅಂಗಡಿಯಲ್ಲಿ ಬ್ರೆಡ್ ಸ್ಯಾಂಡ್ವಿಚ್ ತಿಂದು ಕಾಫಿ ಕುಡಿದೆ. ಅದರೆ ಯಾಕೋ ಇನ್ನೂ ಮನಸ್ಸಿಗೆ ಈ ತನಿಖೆಯಿಂದ ಅಷ್ಟು ಸಮಾಧಾನವಾಗಲಿಲ್ಲ. ಇಲ್ಲೇನೋ ಮಿಸ್ ಹೊಡೆಯುತ್ತಿದೆ ಅನಿಸಿತು.
ಅಲ್ಲೇ ಹೊರಗಡೆ ಕಾಯೋಣವೆನಿಸಿತು. ಬಿಲ್ಡಿಂಗ್ ಬಾಗಿಲಿಗೆ ಬೆನ್ನುಮಾಡಿ ಪೇಪರ್ ಓದುತ್ತಾ ಕಾದೆ. ಸ್ವಲ್ಪ ಹೊತ್ತಿನ ನಂತರ ಒಬ್ಬ ಕಪ್ಪು ಯುವತಿ ಒಳಹೋದಳು. ಮತ್ತೈದು ನಿಮಿಷದಲ್ಲಿ ಜಾನಿ ಜತೆ ಮೆಟ್ಟಲಿಳಿದು ಹೊರಗೆ ಬರುತ್ತಿದ್ದಳು ಅವನ ಗರ್ಲ್ಫ್ರೆಂಡ್! ಇವಳನ್ನು ನಾನು ಲೂಸಿಯಾ ಆಫೀಸಿನಲ್ಲಿದ್ದಾಗ ಗಮನಿಸಬೇಕಾಗಿತ್ತು. ಆದರೆ ಅವಳು ಬೇಕಂತಲೇ ಕಾಣಿಸಿರಲಿಲ್ಲವೋ ಅಥವಾ ನಾನು ಬರೇ ಲೂಸಿಯಾಳನ್ನೇ ನೋಡುತ್ತಿದ್ದೆನೋ ಗೊತ್ತಿಲ್ಲ. ಆದರೆ ಈ ಊರಿನಲ್ಲೂ ಕೆಲವರು ನನಗಿಂತಾ ಜಾಣರಿದ್ದಾರೆಯೇ ಎಂದು ಹೊಟ್ಟೆ ಉರಿಯಿತು.
“ನಿನಗೆ ಎಷ್ಟು ಹೇಳಿಕೊಟ್ರೂ ಬುದ್ಧಿ ಬರಲ್ಲ ಜಾನಿ. ಅದೇನು ಉದ್ಧಾರ ಆಗುತ್ತೀಯೋ?” ಎಂದು ಅವಳು ಅವನ ಮೇಲೆ ಕೋಪಿಸಿಕೊಂಡು ನುಡಿಯುತ್ತಿದ್ದಂತೆ, ಇಬ್ಬರೂ ನನ್ನ ಪಕ್ಕ ಹಾದುಹೋದರು. ನನ್ನ ಬಗ್ಗೆಯೇ ಮಾತಾಡಿಕೊಳ್ಳುತ್ತಿರಬೇಕು.
“ಸಾರಿ ಕಣೆ! ನಿನ್ನನ್ನು ಇವಾಗ ಊರಾಚೆ ಇರುವ ಹೋಟೆಲ್ಗೆ ಮೀನಿನ ಊಟಕ್ಕೆ ಕರೆದುಕೊಂಡು ಹೋಗುತ್ತೇನೆ ಬಾ” ಎಂದು ಪುಸಲಾಯಿಸಿ ಕಾರ್ ಬಳಿಗೆ ನಡೆದ. ನನ್ನನ್ನು ಮತ್ತೆ ಗಮನಿಸಲೇ ಇಲ್ಲ! ಈ ಜಾನಿಗೆ ಪತ್ತೇದಾರಿ ವಿದ್ಯೆ ಹೇಳಿಕೊಡಲು ಯಾರಿಗೂ ಸಾಧ್ಯವಿಲ್ಲ, ಎನಿಸಿತು.
“ಅದೊಂದೆ ನಿನಗೆ ಬಂದ ಒಳ್ಳೆ ಐಡಿಯಾ ಅಂದರೆ” ಎಂದು ಉತ್ತರಿಸುತ್ತ ಆ ಯುವತಿ ಅವನ ಹಳದಿ ನ್ಯಾನೋ ಹತ್ತಿದಳು. ಅವನ ಕಾರ್ ಅಲ್ಲಿಂದ ಹೊರಟ ಮೇಲೆ ನಾನೂ ಹೊರಟೆ.
***
ನನ್ನ ಬಳಿ ಇದ್ದ ಹೆಣ್ಣು ದತ್ತು ಕೊಟ್ಟವರ ಲಿಸ್ಟ್ನಲ್ಲಿ ಮಾರ್ಚ್ನಲ್ಲಿ ಎರಡು ತಂದೆ-ತಾಯಿ ಹೆಸರುಗಳಿದ್ದವು. ಮೇ ತಿಂಗಳ ಮುಂಚಿನವು. ಮೃದುಲಾದೇ ಅಲ್ಲದಿದ್ದರೂ ಸ್ವಲ್ಪ ಸಮಕಾಲೀನವಾದದ್ದು. ಅವರ ಅಡ್ರೆಸ್ ಅನ್ನು ಟೆಲಿಫೋನ್ ಡೈರೆಕ್ಟರಿ ವಿಚಾರಣೆಯಲ್ಲಿ ಕಂಡುಹಿಡಿದೆ. ಒಬ್ಬರ ಮನೆ ಶ್ರೀಮತಿ ಶರ್ಮಿಳಾ ವಾಸುದೇವನ್ ಅವರದು. ಅದು ಹತ್ತು ನಿಮಿಷಗಳ ದೂರದಲ್ಲಿತ್ತು. ಅವರೊಂದಿಗೆ ಫೋನ್ ಮಾಡಿ ಅಪಾಯಿಂಟ್ಮೆಂಟ್ ಪಡೆದೆ.
ಮನೆಯ ಗೇಟ್ ಮುಂದೆ ದೊಡ್ಡ ಬುಲ್ಡಾಗ್ ನಿಂತಿತ್ತು. ಗುರ್ರ್ರ್ ಎನ್ನುವಂತಿತ್ತು. ನಾನು ಮಿಲಿಟರಿ ಪೊಲೀಸ್ನಲ್ಲಿದ್ದಾಗ ಕಲಿತ ಒಂದು ಟ್ರಿಕ್ ಪ್ರಯೋಗಿಸಿದೆ. ಒಂದು ವಿಶೇಷ ಬಗೆಯ ವಿಸಿಲ್. ಸಿಳ್…. ಸಿಳ್ ಸಿಳ್!! ಎಂದು ಸಿಳ್ಳೆ ಹೊಡೆದೆ.
ಅದು ತಕ್ಷಣ ಮೆತ್ತಗಾಗಿ ಕಿವಿಯಾಡಿಸುತ್ತಾ ನೆಲಕ್ಕೆ ಮಲಗಿತು ಕುಯ್ ಗುಟ್ಟುತ್ತಾ.
“ವಾ…. ವಾಟ್ ಎ ಟ್ರಿಕ್! ಅದು ಯಾರಿಗೂ ಬಗ್ಗಲ್ಲ, ಅಂಥದರಲ್ಲಿ!” ಅಂದರು ಬಾಗಿಲಿನಲ್ಲಿ ನಿಂತ ಅರವತ್ತು ವಯಸ್ಸಿನ ದಢೂತಿ ಮಧ್ಯವಯಸ್ಕೆ.
“ಶರ್ಮಿಳಾ ವಾಸುದೇವನ್ ತಾನೆ?” ಅಂದೆ. ತೆಪ್ಪಗಾಗಿದ್ದ ನಾಯಿಪಕ್ಕದಲ್ಲಿ ಒಳಹೋಗುತ್ತಾ.
“ಹೌದು ಹೌದು, ಬನ್ನಿ” ಎಂದು ಒಳಕರೆದರು. ಲಕ್ಷಣವಾದ ಶ್ರೀಮಂತರ ಬಂಗಲೆ.
ಅವರ ಕೈಯಲ್ಲಿ ಕುಕರಿ ಪುಸ್ತಕವಿತ್ತು. ಅವರ ಅಡುಗೆಮನೆಯಿಂದ ಘಮಘಮ ವಾಸನೆ ಬರುತ್ತಿತ್ತು.
“ನನಗೆ ಊಟ ಅಂದರಿಷ್ಟ. ಹೊಸ-ಹೊಸ ಅಡುಗೆ ಮಾಡುವುದು ನನ್ನ ಒಳ್ಳೇ ಹಾಬಿ” ಎಂದರು ನನಗೆ ವಿವರಿಸುತ್ತಾ.
ಇಂಥ ಒಳ್ಳೆ ಹಾಬಿಯಿಂದ ಆಕೆ ದಡೂತಿಯಾಗಿ ಉಬ್ಬಸ ಪಡುವುದು ಎದುರಿಗೇ ಗೋಚರವಾಗುತ್ತಿತ್ತು.
“ನಾನೊಬ್ಬ ಖಾಸಗಿ ಪತ್ತೇದಾರ” ಎಂದ ತಕ್ಷಣವೇ, “ಓಹ್, ಎಷ್ಟು ರೋಮಾಂಚಕ. ಆ ಜೇಮ್ಸ್ಬಾಂಡ್, ಜೇಸನ್ ಬೌರ್ನ್ ತರಹವೇ? ಒಳ್ಳೊಳ್ಳೇ ಹೀರೋಯಿನ್ಸ್ ಇರುತ್ತಾರೆ ಅವರ ಜತೆ” ಅಂದರು. ಸಿನಿಮಾ, ಟಿವಿ ನೋಡಿ ಮಾರುಹೋಗದವರಿಲ್ಲ.
“ನಾನು ಅವರಷ್ಟು ಅದೃಷ್ಟವಂತನಲ್ಲ” ಅಂದೆ.
ಒಳಗಿನಿಂದ ಏಲಕ್ಕಿ ಚಹಾ ತಂದು ಕೊಟ್ಟರು.
ಚಹಾ ಕುಡಿಯುತ್ತಾ, “ನೀವು ಮೂವತ್ತೈದು ವರ್ಷದ ಹಿಂದೆ ಮಗುವನ್ನು ದತ್ತು ಕೊಟ್ಟಿದ್ದು ನಿಜವೇ. ಏಕೆ ಎಂದು ಕೇಳಬಹುದೆ?”
ಆಕೆ ಮುಖ ಸ್ವಲ್ಪ ಸಪ್ಪಗಾಯಿತು. “ಅದನ್ನು ಕೇಳದಿದ್ರೆ ವಾಸಿ. ನಾನು ಆಗ ಹದಿನೆಂಟು ದಾಟಿದ್ದೆ. ಅಪ್ಪನಿಗೆ ಎದುರು ವಾದಿಸಿ ನಾನೊಬ್ಬ ಸೈನಿಕನನ್ನು ಮದುವೆಯಾಗಿದ್ದೆ. ಅವರು ಯುದ್ಧದಲ್ಲಿ ಸತ್ತುಹೋದ್ರು. ಅಪ್ಪ ನನ್ನನ್ನು ವಾಪಸ್ ಮನೆಗೆ ಬರುವ ಮುನ್ನ ಆ ಮಗುವನ್ನು ಮಕ್ಕಳಿಲ್ಲದ ತಮ್ಮ ತಂಗಿ ಭಾವನಿಗೆ ದತ್ತು ಕೊಡಿಸಿದರು. ನನಗೆ ಅನಂತರ ಬೇರೆ ಮದುವೆ ಮಾಡಿದರು. ಈಗಿನ ನನ್ನ ಪತಿ ಹೋಗಿಬಿಟ್ಟು ಐದು ವರ್ಷವೇ ಆಯ್ತು. ಈ ಪ್ರಶ್ನೆ ಯಾಕೆ ಈಗ? ನನ್ನ ಮಗಳು ಚೆನ್ನಾಗಿಯೇ ಬೆಳೆಯುತ್ತಿದ್ದಾಳೆ” ಎಂದರು ನನ್ನ ಮುಖ ನೋಡುತ್ತಾ, ಪ್ರಶ್ನಾರ್ಥಕವಾಗಿ. ನಾನು ಮತ್ತೆ ಇನ್ನೊಂದು ಹೆಸರನ್ನು ಮುಂದಿಟ್ಟೆ.
ನನ್ನ ಬಳಿಯಿದ್ದ ಎರಡನೆ ಹೆಸರಿನಾಕೆ ಆಗಿನ ಕಾಲಕ್ಕೆ ಆಕೆಯ ಗೆಳತಿಯೇ ಅಂತೆ. ಹೆಸರು ಶ್ರೀಮತಿ ಶಿವರಾಮನ್ ಎಂದು. ಆಕೆಯೂ ಹೆಣ್ಣು ಮಗು ದತ್ತು ಕೊಟ್ಟ ಅಮ್ಮ. ಆದರೆ ಆಕೆ ಸತ್ತು ಸ್ವಲ್ಪ ವರ್ಷಗಳೆ ಆಗಿತ್ತೆಂದೂ ಆಗ ನಾನು ವಿಧಿಯಿಲ್ಲದೇ ಕೊನೆಗೆ ಮೃದುಲಾ ಕೇಸ್ ಎತ್ತಿ, ಆಕೆ ಹುಟ್ಟಿದ್ದು ಮೇ ತಿಂಗಳಾದರೂ ಅದಕ್ಕಿಂತ ಹತ್ತಿರದ ಮಾಹಿತಿ ನನ್ನಲ್ಲಿಲ್ಲವಾದ್ದರಿಂದ ಏನಾದರೂ ಸುಳಿವು ಸಿಕ್ಕೀತು ಎಂದೇ ನಿಮ್ಮ ಬಳಿಗೆ ಬಂದಿದ್ದೇನೆ ಎಂದೆಲ್ಲಾ ವಿವರಿಸಬೇಕಾಯಿತು.
“ನಿಮಗೆಲ್ಲಾ ಆಗಿನ ಕಾಲದಲ್ಲಿ ಯಾವ ಆಸ್ಪತ್ರೆಯಲ್ಲಿ ಹೆರಿಗೆಯಾಗುತ್ತಿತ್ತು?” ಎಂದು ವಿಚಾರಿಸಿದೆ. ಆಗ ಹೆಚ್ಚು ಆಸ್ಪತ್ರೆಗಳಂತೂ ಇರಲಾರದು ಎಂಬಂತೆ.
“ಆಸ್ಪತ್ರೆಯೆ? ಎಲ್ಲಿತ್ತು, ಈ ಸುಡುಗಾಡು ಊರಿನಲ್ಲಿ, ಆ ಕಾಲದಲ್ಲಿ? ಒಂದು ಸಣ್ಣ ಕ್ಲಿನಿಕ್ನಲ್ಲಿ ಸೂಲಗಿತ್ತಿ ಸುಬ್ಬಮ್ಮ ಅನ್ನೋಳು ನಮಗೆಲ್ಲಾ ಹೆರಿಗೆ ಮಾಡುತ್ತಿದ್ಲು.”
ಸದ್ಯ ಒಂದು ಸುಳಿವು! “ಆಕೆ ಇನ್ನೂ ಬದುಕಿದ್ದಾಳೆಯೆ?” ಎಂದೆ ಕುತೂಹಲದಿಂದ.
“ಇದ್ದಾಳಂತೆ. ಇಲ್ಲಿನ ಹುಚ್ಚಾಸ್ಪತ್ರೆಯಲ್ಲಿ. ಯಾರನ್ನೂ ಮಾತನಾಡಿಸುವುದಿಲ್ಲ. ಹುಚ್ಚು ಹಿಡಿದಿದೆ ಎನ್ನುತ್ತಾರೆ” ಎಂದರು. ಇಂಥ ಹುಚ್ಚಿಯರ ಬಗ್ಗೆ ವಿಚಾರಿಸಲು ಬಂದ ನಾನೆಂಥ ಹುಚ್ಚನಿರಬೇಕೆಂದು ಆಕೆಯ ಮುಖಭಾವ ಸೂಚಿಸುತ್ತಿತ್ತು.
ಕೊನೆಗೆ ತನ್ನ ಹೊಸರುಚಿ ಅಡುಗೆ ತಿಂದೇ ಹೋಗಬೇಕೆಂದು ಬಲವಂತ ಮಾಡಿದರು ಆಕೆ. ನನಗೆ ಹೊಟ್ಟೆ ಸರಿಯಿಲ್ಲವೆಂದು ಹೇಳಿ ಧನ್ಯವಾದದೊಂದಿಗೆ ಅಲ್ಲಿಂದ ಮೆಲ್ಲಗೆ ಹೊರಬಿದ್ದೆ. ನನಗೆ ಹೊಟ್ಟೆ, ತಲೆ ಎರಡೂ ಒಟ್ಟಿಗೇ ಕೆಡಬಾರದು ನೋಡಿ!
ನನ್ನ ಮುಂದಿನ ಹೆಜ್ಜೆ ಅಲ್ಲಿನ ಮಾನಸಿಕ ಆಸ್ಪತ್ರೆಯತ್ತ ಸಾಗಿತ್ತು. ಈಗ ನ್ಯಾನೋ ಕಾರ್ ನನ್ನ ಕಾರಿನ ಹಿಂದಿರಲಿಲ್ಲ, ಆ ಕದ್ದು ಕೇಳುವ ಗರ್ಲ್ಫ್ರೆಂಡ್ ಜತೆ ಜಾನಿ ಹೊರಟು ಹೋಗಿದ್ದನಲ್ಲಾ!
ನಾನಂದುಕೊಂಡಂತೆಯೇ ನನಗೆ ಅಲ್ಲಿಯ ಮೆಂಟಲ್ ಆಸ್ಪತ್ರೆಯಲ್ಲಿ ರೋಗಿಯ ಬಳಿಗೆ ಪ್ರವೇಶ ಸಿಕ್ಕಲಿಲ್ಲ. ಆದರೆ ಲೂಸಿಯಾ ಹೆಸರು ಹೇಳಿ, ಕೊನೆಗೆ ಅವಳಿಂದ ಮುಖ್ಯ ಡಾಕ್ಟರಿಗೆ ಫೋನ್ ಮಾಡಿಸಿ, ಹೇಗೋ ಒಬ್ಬ ನರ್ಸ್ ಮೂಲಕ ಒಳಗೆ ಒಂದು ಸಂದೇಶ ಕಳಿಸಲು ಪುಸಲಾಯಿಸಿದೆ.
“ಮೃದುಲಾ ತರಹ ಹೆಣ್ಣು ಮಗುವಿನ ಕೇಸ್ ನಿನಗೆ ಗೊತ್ತೆ, ೧೯೮೦ರ ಮೇ ತಿಂಗಳಲ್ಲಿ ಹುಟ್ಟಿದ್ದು?” ಎಂದು ಪ್ರಶ್ನೆಯನ್ನು ಕೇಳಿ ಒಂದು ಖಾಲಿ ಪೇಪರ್ನಲ್ಲಿ ಬರೆದು ಕಳಿಸಿದೆ, ಆ ಸೂಲಗಿತ್ತಿಗೆ…. ಮೇ ತಿಂಗಳಲ್ಲಿ ಹುಟ್ಟಿದ ನಾಲ್ಕು ಮಕ್ಕಳಲ್ಲಿ ಒಬ್ಬಳಿಗಾದರೂ ಈಕೆ ಹೆರಿಗೆ ಮಾಡಿರಬಹುದೆಂದು ಗುಮಾನಿ. ಅದೂ ಒಬ್ಬ ಹುಚ್ಚಿಯಿಂದ, ಮೂವತ್ತೈದು ವರ್ಷದ ಹಳೇ ಕೇಸ್ ವಿಚಾರಣೆಗೆ ಸರಿಯಾದ ಉತ್ತರ ಬರಬಹುದೆಂಬ ಬಹಳ ಭರವಸೆಯೇನಿರಲಿಲ್ಲ. ಆದರೆ ನನಗೆ ಅಚ್ಚರಿಯಾಗುವಂಥ ಉತ್ತರ ಬಂತು.
ನನ್ನ ಚೀಟಿಯಲ್ಲಿ ಹುಚ್ಚಿ ಸುಬ್ಬಮ್ಮ ಉತ್ತರ ಬರೆದು ಕಳಿಸಿದ್ದು ಹೀಗೆ: “ಯಾರನ್ನಾದರೂ ನಂಬಿ, ಆದರೆ ನಂಬೂದರಿಯನ್ನು ನಂಬಬಾರದು.”
ಹಿಂದಿಲ್ಲ, ಮುಂದಿಲ್ಲಾ…. ಒಗಟಿನಂತಿದೆ! ಏನಿದರ ಅರ್ಥ? ಯಾರು ಈ ನಂಬೂದರಿ. ನಾನೇಕೆ ನಂಬಬಾರದು? ಮೃದುಲಾ ತರಹದ ಹೆಣ್ಣುಮಗುವಿನ ಬಗ್ಗೆ ಏನಾದರೂ ಹೇಳು ಅಂದರೆ ಹುಚ್ಚಿಯ ಮನಸ್ಸಿನಲ್ಲಿ ಯಾರ ಬಗ್ಗೆ ಈ ಯೋಚನೆ ಬಂದಿರಬಹುದು? ಈ ಒಗಟು ಮೃದುಲಾದೋ ಅಥವಾ ಮಿಕ್ಕ ಮೂರು ಹೆಣ್ಣುಮಕ್ಕಳು ಆ ತಿಂಗಳು ಹುಟ್ಟಿದವಲ್ಲಾ ಅವರದೋ? ಎಂದು ತಲೆ ಜೇನುಗೂಡಿನಂತೆ ಗುಂಯ್ ಗುಡುತ್ತಿರಲು ಅಲ್ಲಿಂದ ಹಿಂತಿರುಗಿ ಹೊರಟೆ.
ಇದೇಕೋ ಈ ಸಮಸ್ಯೆ ಬರುಬರುತ್ತಾ ಜಟಿಲವೇ ಆಗುತ್ತಾ ಹೋಗುತ್ತಿದೆ. ಎಲ್ಲಿಯೂ ಹೊಸ ಬೆಳಕು ಕಾಣುತ್ತಿಲ್ಲ ಎಂದು ಯೋಚಿಸುತ್ತಾ ಯಾವುದೋ ಒಂದು ರಸ್ತೆಗೆ ನಿಧಾನವಾಗಿ ಡ್ರೈವ್ ಮಾಡಿಕೊಂಡು ಬಂದಿದ್ದೆ. `ಕಮಲಾನಗರ ನಾಲ್ಕನೇ ಕ್ರಾಸ್’ ಎಂದಿದೆ. ಓಹ್! ಜಾನಿಯ ಮನೆಯ ಅಡ್ರೆಸ್ ಇಲ್ಲಿಯೇ ಎಂದು ಲೂಸಿಯಾ ಹೇಳಿರಲಿಲ್ಲವೇ. ಅಡ್ರೆಸ್ ತೆಗೆದು ನೊಡಿದೆ, ಹೌದು! ಸರಿ. ಇದೊಂದು ಚಾನ್ಸ್ ನೋಡಿಯೇಬಿಡಬೇಕು.
ಆ ರಸ್ತೆಯಲ್ಲಿ ಅವನ ಮನೆ ಹುಡುಕಲು ಕಷ್ಟವೇನಾಗಲಿಲ್ಲ. ಅವನ ಮನೆಯ ಡೋರ್ಲಾಕ್ ಕೂಡಾ ನನಗೆ ಬೆವರಿಳಿಸಲಿಲ್ಲ. ಖ್ಯಾತ ಪತ್ತೇದಾರನ ಕೈಚಳಕದಲ್ಲಿ ಕದ್ದು ಮುಚ್ಚಿ ಬೀಗ ಮುರಿಯುವುದೂ ಒಂದು. ಒಂದು ಚಿಕ್ಕಹೇರ್ಪಿನ್ ಮತ್ತು ಎರಡು ನಿಮಿಷಗಳ ಕೆಲಸ! ಸುಲಭವಾಗಿ ಅವನ ಮನೆಯ ಒಳಕ್ಕೆ ಹೋದೆ. ಅವನು ಇನ್ನೂ ಹೆಚ್ಚು ಹೊತ್ತು ತನ್ನ ಗರ್ಲ್ಫ್ರೆಂಡ್ ಜತೆಯಲ್ಲೇ ಕಳೆಯಲಿ ಎಂಬ ಆಶಯದಿಂದ.
ಆ ಮನೆಯ ಸಾಧಾರಣ ಹಾಲಿನಲ್ಲಿ ಸರ್ವೇ ಸಾಧಾರಣ ಮನೆಯ ಉಪಕರಣಗಳು. ಹರಿದಿದ್ದ ಸೋಫಾ ಕವರ್, ನೆಲದ ಮೇಲೆ ಅರೆ ಕುಡಿದ ಬಿಯರ್ ಬಾಟಲ್, ಖಾಲಿ ಚಿಪ್ಸ್ಪ್ಯಾಕೆಟ್, ಮೂಲೆಯಲ್ಲಿ ಸಿಗರೇಟ್ ಪ್ಯಾಕೆಟ್ಸ್ ಕುಪ್ಪೆ.
ಈ ಜಾನಿ ಮಹಾ ಸೋಮಾರಿ ಬೇರೆ, ಪೆದ್ದನಲ್ಲದೇ!
ಹುಡುಕುತ್ತಾ ಹೋದಂತೆ ಬೆಡ್ರೂಮಿನ ಸೈಡ್ಶೆಲ್ಫ್ನಲ್ಲಿ ಹಲವಾರು ಪತ್ರಗಳ ಫೈಲ್ ಕಾಣಿಸಿತು. ಅದರ ಪಕ್ಕದ ಗೋಡೆಯಲ್ಲಿ ಏನೋ ನ್ಯೂಸ್ಪೇಪರ್ ಕಟಿಂಗ್ಸ್ ಅಂಟಿಸಿದ್ದಾನೆ. ಲೈಟ್ ಹಾಕಿಯೇ ನೋಡಿದೆ. ನನಗೆ ದಿಗ್ಭ್ರಮೆಯಾಯಿತು. ಎಲ್ಲವೂ ನ್ಯೂಸ್ಪೇಪರ್ಸ್ ಮತ್ತು ಮ್ಯಾಗಝಿನ್ಸ್ನಲ್ಲಿ ಮೃದುಲಾ ಹೊಸಮನಿ ಬಗ್ಗೆ ಬಂದ ಲೇಖನಗಳ ಭಾಗಗಳೇ. ಆಕೆಯ ಹೆಸರನ್ನು ಕೆಂಪು ಇಂಕಿನಲ್ಲಿ ಸುತ್ತಿದ್ದಾನೆ. ಆಕೆಯ ಚಿತ್ರದ ಮೇಲೆ ಚೆಕ್ಮಾರ್ಕ್ ಹಾಕಿದ್ದಾನೆ. ಪಕ್ಕದಲ್ಲಿ `ಪೋಸ್ಟ್ ಮಾಡಿದ ಡೇಟ್ಸ್’ ಎಂದು ಬರೆದಿದ್ದಾನೆ. ಅಂದರೆ ಏನಿದರ ಮರ್ಮ?
ಅವನ ಫೈಲ್ಸ್ ಎಲ್ಲಾ ಕಿತ್ತು ಅವನ ಕೊಳಕು ಹಾಸಿಗೆಯ ಮೇಲೆ ಹರಡಿದೆ. ಒಂದೊಂದಾಗಿ ಪರೀಕ್ಷಿಸುತ್ತಾ ಹೋದೆ. ಮೊದಲ ಫೈಲ್ಸ್ನಲ್ಲಿ ಅವನ ಫೋನ್ಬಿಲ್ಸ್, ಅಂಗಡಿಗಳ ಬಿಲ್ಸ್ ಮತ್ತು ಆಫೀಸಿನ ಬಾಡಿಗೆ ಕಟ್ಟಿದ್ದರ ರಸೀತಿಗಳು ಮತ್ತು ಶಾಂತಿ ಎಂಬ ಹೆಣ್ಣಿಗೆ ಕಳುಹಿಸಿದ ಕೆಲವು ಚಿತ್ರಗಳು, ಪತ್ರಗಳ ಕಾಪಿಗಳು. ಮುಖ ನೋಡಿದರೆ ಈಗ ಅವನ ಜತೆಯಲ್ಲಿ ನೋಡಿದ್ದೆನಲ್ಲ, ಅವಳೇ, ಅನುಮಾನವಿಲ್ಲ. ಅದು ಹೋಗಲಿ ಬಿಡಿ.
ಅದರೆ ಎರಡನೆಯ ಫೈಲಿನಲ್ಲಿ ಬರೀ ಒಬ್ಬ ಲಾಯರ್ ಆಫೀಸಿಗೆ ಕಳಿಸಿದ ಪತ್ರಗಳು ಮತ್ತು ಆ ಆಫೀಸಿನಿಂದ ಇವನಿಗೆ ಬಂದ ಪೇಮೆಂಟ್ಸ್ ರಸೀತಿಗಳು.
ಆ ಲಾಯರ್ ಹೆಸರು ಫರ್ನಾಂಡೆಸ್! ಮೃದುಲಾರ ಸ್ವಂತ ವಕೀಲರು, ನನ್ನ ಕಕ್ಷಿದಾರರೇ!
ಬೆಂಗಳೂರಿನ ಆಫೀಸ್ ಅಡ್ರೆಸ್, ನನಗೆ ಅವರು ಕೊಟ್ಟಿದ್ದ ವಿಸಿಟಿಂಗ್ ಕಾರ್ಡ್ನಲ್ಲಿದ್ದಿದ್ದೇ!
ಸುಮಾರು ಎರಡು ಸಲ ಈ ಹಿಂದಿನ ಒಂದೊಂದು ತಿಂಗಳಿಗೆ ಜಾನಿಗೆ ಚೆಕ್ ರೂ. ೫೦,೦೦೦ ನೀಡಿದ್ದರ ಪುರಾವೆ ಇಲ್ಲಿದೆ. ನನಗೆ ಈಗ ಬೆವರಿಳಿಯಿತು, ಈ ಡಿಸೆಂಬರ್ ರಾತ್ರಿಯಲ್ಲೂ…..
ತಕ್ಷಣ ಮತ್ತೆಲ್ಲ ಪೇಪರ್ಸ್ ಕಿತ್ತು ಬಿಸಾಕಿದೆ. ಅಲ್ಲಲ್ಲಿ ಕಪ್ಪು, ಕೆಂಪು ಅಕ್ಷರದಲ್ಲಿ, `ಕಪ್ಪು ನದಿ = ?’ ಎಂದು ಅರ್ಧ ಬರೆದು ಬಿಟ್ಟಿದ್ದಾನೆ. ಇನ್ನು ಕೆಲವು ರಫ್ ಕಾಗದಗಳಲ್ಲಿ `ಮುಂದಿದೆ ಹಬ್ಬ?’ ಎಂದು ಯೋಚಿಸಿ ಗೊತ್ತಾಗದೇ ಬಿಟ್ಟಿದ್ದಾನೆ.
ಹಾಗಾದರೆ ಅದೆಲ್ಲ ಇವನೇ ಆ ಬ್ಲ್ಯಾಕ್ಮೇಲ್ ಪತ್ರಗಳನ್ನು ಬರೆಯಲು ನಡೆಸಿದ ಸಿದ್ಧತೆಗಳು! ಅಂದರೆ ಇವನು ಬ್ಲ್ಯಾಕ್ಮೇಲ್ ಮಾಡಿದಾಗ ಯಾರಿದು ಎಂದು ನಮ್ಮವರಿಗೆ ಗೊತ್ತಿತ್ತು. ಅವನಿಗೆ ಕೇಳಿದಷ್ಟು ಎರಡೂ ಪತ್ರಗಳಿಗೆ ೫೦, ೫೦ ಸಾವಿರ ರೂ. ಕೂಡಾ ಕೊಟ್ಟಿದ್ದಾರೆ ಅನಿಸುತ್ತೆ. ಅಂದಮೇಲೆ ನನ್ನ ಬಳಿ ಸುಳ್ಳು ಹೇಳಿ ಇಲ್ಲಿಗೆ ಕಳಿಸಿದ್ದಾರೆ!
ಯಾಕೆ?
ನಾನು ಮಹಾ ನ್ಯಾಯ, ನೀತಿ ಅನ್ನುವ ಪ್ರಾಣಿ. ಜೋಕ್ ಮಾಡುವುದು ಬಿಟ್ಟರೆ ಅದೊಂದೆ ನನಗೆ ಪರಮಪ್ರಿಯವಾಗಿರುವುದು. ನನಗೆ ಮೃದುಲಾ ಕಡೆಯವರ ಮೇಲೆ ಸಿಟ್ಟು ಉಕ್ಕಿತ್ತು. ನನ್ನ ಕಕ್ಷಿದಾರರೇ ಆಗಿ ಬಂದು, ವಿಷಯ ಗುಪ್ತವಾಗಿರಲಿ ಎಂದು ನನ್ನಿಂದ ವಾಗ್ದಾನ ಪಡೆದವರು, ನನ್ನಿಂದಲೇ ಬ್ಲ್ಯಾಕ್ಮೇಲರನ್ನು ಗುಪ್ತವಾಗಿಟ್ಟಿದ್ದಕ್ಕೆ…..
ಆದರೆ ಇದಕ್ಕೂ ಹೆಚ್ಚಿನ ಶಾಕ್ ನನಗೆ ಕೊನೆಯ ಹಳೆಯ ಹರಿದ ಪತ್ರಗಳ ಫೈಲಿನಲ್ಲಿ ನೋಡಿದಾಗ ಆಯಿತು. ಹಳೆಯದಾಗಿ ಮಾಸಿಹೋಗಿರುವ ರಿಜಿಸ್ಟ್ರಾರ್ ಆಫೀಸಿನ ಮೇ ತಿಂಗಳ ದತ್ತು ಮಕ್ಕಳ ರೆಕಾರ್ಡ್ಸ್ ಇದರಲ್ಲಿದೆ…
ಇವನ ಬಳಿ! ಹೇಗೆ ಬಂತು? ತಾನಂತೂ ಅಪ್ಲಿಕೇಶನ್ ಹಾಕಿರಲಾರ…. ಇಲ್ಲವೇ ಕದ್ದಿರಬೇಕು.
ಓಹ್ ಗಾಡ್, ನನ್ನ ತಲೆಯನ್ನು ಮಾರಿದರೆ ಯಾವ ಲ್ಯಾಬ್ನವರೂ ತೆಗೆದುಕೊಳ್ಳಲಾರರು. ಬೆಳೆಯದ ಬ್ರೈನ್ ಎಂದು.
ಈಗ ಗೊತ್ತಾಗುತ್ತಿದೆ! ನಾನು ಆ ಕೆಲಸದವಳನ್ನು ನೋಡಿದ್ದು ರಿಜಿಸ್ಟ್ರಾರ್ ಆಫೀಸಿನಿಂದ ಹೊರಬರುವಾಗ ಡಿಕ್ಕಿ ಹೊಡೆದಾಗ ಅಲ್ಲವೇ? ಹೂಂ. ಸಂದೇಹವೆ ಇಲ್ಲ. ಮತ್ತೆ ಜಾನಿ ಅವಳು ನನ್ನ ಗರ್ಲ್ಫ್ರೆಂಡ್; ಲೂಸಿಯಾ ಆಫೀಸಿನಲ್ಲಿ ನನ್ನ ಬಗ್ಗೆ ಕದ್ದು ಕೇಳಿದ್ದಳು ಅಂದಿದ್ದನಲ್ಲ! ಹೌದು, ಯಾಕಿರಬಾರದು? ಎರಡು ಆಫೀಸಿಗೂ ಅವಳೇ ಕಸಗುಡಿಸುತ್ತಿರಬೇಕು. ಇದು ಚಿಕ್ಕ ಊರು, ಏನಿದೆ ಆಶ್ಚರ್ಯ?
ಅದಕ್ಕಿಂತಾ ಹೆಚ್ಚಾಗಿ ಜಾನಿಗೆ ಬ್ಲ್ಯಾಕ್ಮೇಲ್ನಲ್ಲಿ ಒತ್ತಾಸೆಯಾಗಿ ನಿಂತು, ಅನುಮಾನ ಬಂದ ಮೇ ತಿಂಗಳ ರೆಕಾರ್ಡ್ಸ್ ಕದಿಯಲು ಆ ದರಿದ್ರ ಸರಕಾರಿ ಆಫೀಸಿನಿಂದ ಅವಳಿಗೆ ಕಷ್ಟವೇನಾದೀತು… ಎಲ್ಲಾ ಕಡೆ ಕಸ ಗುಡಿಸಿಕೊಂಡು ಬರುವಾಗ?
ಆದರೆ ಒಂದು ನಿಮಿಷ ತಾಳಪ್ಪಾ, ಪತ್ತೇದಾರಿ ಮೇಧಾವಿ! ಎಂದು ಬುದ್ಧಿ ಹೇಳಿದೆ. ಈ ಜಾನಿಯಂಥವನಿಗೆ ಮೃದುಲಾ ಬಗ್ಗೆ ತಿಳಿದಿದ್ದು ಹೇಗೆ? ಮೂವತ್ತೈದು ವರ್ಷದ ಹಿಂದೆ ಮೇ ತಿಂಗಳಲ್ಲೇ ದತ್ತು ಪಡೆದ ಕಥೆಯ ವಿವರಗಳು ಎಲ್ಲಿ ಸಿಕ್ಕವು? ಹೇಗೆ…. ಹೇಗೆ?
ಹಾಗಾದರೆ ಅವನು ನಾನು ತಿಳಿದಂತೆ ಪೆದ್ದನಂತೂ ಅಲ್ಲ. ಒಳ್ಳೆಯ ಪತ್ತೆದಾರನೇ, ಆದರೆ ಕೆಟ್ಟ ದಾರಿ ತುಳಿದಿದ್ದಾನೆ! ನನಗಿಂತ ಒಂದೆರಡು ಹೆಜ್ಜೆ ಮುಂದೆಯೇ ಇದ್ದಾನೆ, ಈ ವಿಚಾರಣೆಯಲ್ಲಿ ಪ್ರಗತಿ ಸಾಧಿಸುವಲ್ಲಿ! ಆದರೆ ನಮ್ಮವರು ಇವನ ಬ್ಲ್ಯಾಕ್ಮೇಲಿಗೆ ಒಪ್ಪುವಂಥ ಸೀಕ್ರೆಟ್ ಏನು ಹೇಳಿರಬಹುದು?
ತಲೆ ಸಿಡಿಯುವಂತಾಯ್ತು…. ಮೇ ತಿಂಗಳ ಮಕ್ಕಳ ದತ್ತು ರೆಕಾರ್ಡ್ಸ್ ಎಲ್ಲವನ್ನೂ ಜೇಬಿಗೆ ತುರುಕಿಕೊಂಡೆ. ಮಿಕ್ಕ ಎಲ್ಲ ಪತ್ರಗಳನ್ನು ಕೆದರಿ, ಹರಡಿ ಹಾಗೆಯೇ ಎದ್ದು ಬಂದೆ. ಜಾನಿಗೆ ತಿಳಿದರೆ ಹಾಳಾಗಿ ಹೋಗಲಿ; ಏನು ಮಾಡಬಲ್ಲ? ಅವನ ಮನೆಯ ಬಾಗಿಲನ್ನು ಲಾಕ್ ಮಾಡಿ ಹೊರಬಂದೆ.
ಅದೇ ಕ್ಷಣವೇ `ಠಪ್ ಠಪ್’ ಎಂದು ನನ್ನ ತಲೆಯ ಹಿಂಭಾಗಕ್ಕೆ ಆ ಪ್ಯಾಸೇಜಿನಲ್ಲಿ ಕಾದು ಕುಳಿತಿದ್ದವನೊಬ್ಬ ಜೋರಾಗಿ ಬಡಿದಿದ್ದ. `ದರಿದ್ರ ಜಾನಿ’ ಎಂದು ಅವನು ಕಿರುಚಿದ್ದು ನನಗೆ ಕಣ್ಕತ್ತಲೆ ಬರುತ್ತಿರುವಂತೆಯೇ ಕೇಳಿಸಿತು. ಅಷ್ಟೇ ನನಗೆ ಜ್ಞಾಪಕವಿರುವುದು ನೋಡಿ. ನನ್ನ ಜಗತ್ತು ಕತ್ತಲಾಗಿತ್ತು, ಕುಸಿದಿದ್ದೆ.
(ಸಶೇಷ)