ಆಳವಾದ ಬಾವಿಯಲ್ಲಿರುವ ನೀರನ್ನು ಹೊರತರಲು ಮೆಟ್ಟಿಲುಗಳಾದರೂ ಇರಬೇಕು ಇಲ್ಲವೆ ಒಂದು ನೀರಿನ ಪಾತ್ರೆಯನ್ನು ಎತ್ತುವ ಹಗ್ಗವಾದರೂ ಇರಬೇಕು. ಹಾಗೆಯೇ ಮಹಾತ್ಮರ ಅಂತರಂಗದಲ್ಲಿರುವ ಸುಜ್ಞಾನದ ಜಲವನ್ನು ಪಡೆಯಲು ಒಂದು ಸಾಧನ ಅವಶ್ಯ. ಆ ಸಾಧನವೇ ಮಹಾತ್ಮರಾಡುವ ಮುತ್ತಿನಂಥ ಮಾತುಗಳು.
ಶರಣರ ಮಾತುಗಳು ಅವರ ಮುಖದಿಂದ ಬಂದವಲ್ಲ. ಅವರ ಅಂತರಂಗದಿಂದ ಹೊರಹೊಮ್ಮಿದವು. ತಾಯಿ ಆಡುವ ಮಾತಿನಂತೆ ಮಹಾತ್ಮರ ಮಾತುಗಳು ವಾತ್ಸಲ್ಯಭರಿತ. ತಾಯಿ ಹೇಳಿದ ಜೋಗುಳವನ್ನು ಕೇಳಿದ ಮಗು ಸಹಜವಾಗಿಯೇ ಮಲಗಿ ನಿದ್ರಾನಂದ ಪಡೆಯುತ್ತದೆ. ಆದರೆ ಸುಪ್ರಸಿದ್ಧ ಗಾಯಕರು ಹಾಡಿದರೆ ಮಗು ಮಲಗುತ್ತದೆ ಎಂದು ಹೇಳಲಾಗದು. ಮಾತೃಹೃದಯಿಗಳಾದ ಸಂತರ, ಶರಣರ ನುಡಿಗಳು ನಮ್ಮ ಮನಸ್ಸನ್ನು ಅರಳಿಸುತ್ತವೆಯೇ ವಿನಾ ಕೆರಳಿಸುವುದಿಲ್ಲ. ಅಂತೆಯೇ ಮಾತೃವಾತ್ಸಲ್ಯದಿಂದ ತುಂಬಿದ ಮಹಾತ್ಮರ ಮಾತು ಮಾತಲ್ಲ, ಮಂತ್ರ. ದೇವಲೋಕದ ದಾರಿಯನ್ನು ತೋರುವ ಜ್ಞಾನದೀವಿಗೆ ಈ ನೀತಿಸೂತ್ರಗಳು. ಅಂತೆಯೇ ವಿಜ್ಞಾನಿಗಳೂ ತತ್ತ್ವಜ್ಞಾನಿಗಳೂ ನೂರಾರು ವರುಷಗಳ ಹಿಂದೆ ಆಡಿದ ಮಾತುಗಳು ಇಂದಿಗೂ ಲೋಕವನ್ನು ಬೆಳಗುತ್ತಲಿವೆ.
ಒಂದು ಊರಿನ ಮುಂದೆ ವಿಶಾಲವಾದ ನದಿ ಹರಿಯುತ್ತಿತ್ತು. ಅದು ಮುಂದೆ ಹೋಗಿ ಒಂದು ಗುಡ್ಡದಿಂದ ಕೆಳಗೆ ಜಲಪಾತವಾಗಿ ದುಮುಕುತ್ತಿತ್ತು. ಒಂದು ದಿನ ಒಬ್ಬ ವ್ಯಕ್ತಿಯು ಆಕಸ್ಮಿಕವಾಗಿ ಆ ನದಿಯ ಪ್ರವಾಹದಲ್ಲಿ ಸೆಳವಿಗೆ ಸಿಕ್ಕುಹಾಕಿಕೊಂಡ. ಅಷ್ಟರಲ್ಲಿ ಒಂದು ಮರದ ದೊಡ್ಡ ತುಂಡು ಅವನತ್ತ ತೇಲಿಬಂದಿತು. ಕೂಡಲೆ ಅವನು ಆ ಮರದ ತುಂಡನ್ನು ಏರಿ ಕುಳಿತನು. ಅದು ತೇಲುತ್ತ ವೇಗವಾಗಿ ಜಲಪಾತದ ಕಡೆಗೆ ಹರಿಯತೊಡಗಿತು. ನದಿಯ ದಡದಲ್ಲಿದ್ದ ಮತ್ತೊಬ್ಬ ವ್ಯಕ್ತಿ ಒಂದು ಹಗ್ಗವನ್ನು ಎಸೆದು ಅದನ್ನು ಹಿಡಿದುಕೋ ಎಂದು ಆತನಿಗೆ ಹೇಳಿದ. ಆಗ ಈತ ಹೇಳಿದ: ‘ಇದು ನಿನ್ನ ಹಗ್ಗಕ್ಕಿಂತಲೂ ದೊಡ್ಡದಿದೆ. ಆದ್ದರಿಂದ ನಾನು ಇದನ್ನು ಬಿಡಲಾರೆ!’ ಆಗ ಆತ ಹೇಳಿದ: ‘ಮರದ ತುಂಡು ಹಗ್ಗಕ್ಕಿಂತ ದೊಡ್ಡದಿದೆ ಸರಿ. ಆದರೆ ಅದು ನಿನ್ನನ್ನು ಮುಳುಗಿಸುವುದೂ ಇಲ್ಲ ಮತ್ತು ಉಳಿಸುವುದೂ ಇಲ್ಲ.’ ಕೂಡಲೇ ಈತನಿಗೆ ತನ್ನ ತಪ್ಪಿನ ಅರಿವಾಗಿ ಮರದ ತುಂಡನ್ನು ಬಿಟ್ಟು ಹಗ್ಗವನ್ನು ಹಿಡಿದುಕೊಂಡ. ಸೆಳವಿನಿಂದ ಪಾರಾಗಿ ಬದುಕಿ ಉಳಿದುಕೊಂಡ.
ಈ ಪ್ರಪಂಚದಲ್ಲಿ ಧನ, ಕನಕ, ಅಧಿಕಾರ, ಅಂತಸ್ತು, ಮಾನ-ಮರ್ಯಾದೆ ಮೊದಲಾದವು ಮರದ ತುಂಡಿನಂತೆ ನಮಗೆ ದೊಡ್ಡದಾಗಿ ಕಾಣುತ್ತಿರಬಹುದು, ಆದರೆ ಅವು ನಮ್ಮನ್ನು ಸಂಸಾರಸಾಗರದಿಂದ ಎಂದಿಗೂ ಪಾರುಮಾಡಲಾರವು. ಮಹಾತ್ಮರ ಉಪದೇಶಪರ ಮಾತುಗಳು ಹಗ್ಗದಂತೆ ಸಣ್ಣದಾಗಿ ಕಂಡರೂ ಅವು ನಮ್ಮನ್ನು ಸಂಸಾರಸಾಗರದಿಂದ ಪಾರುಮಾಡುತ್ತವೆ; ಸಂತಸದ ದಡಕ್ಕೆ ತಲಪಿಸುತ್ತವೆ. ಆದ್ದರಿಂದ ಮಹಾತ್ಮರ ಮಾತುಗಳು ಬರೀ ಮಾತಲ್ಲ; ನಮ್ಮನ್ನು ಸಂಸಾರಸಾಗರದಿಂದ ಪಾರುಮಾಡುವ ಮಂತ್ರಸದೃಶವಾದ ಮಹಾವಾಕ್ಯಗಳು.
[ಪೂಜ್ಯ ಸ್ವಾಮಿಗಳ ‘ಸತ್ಸಂಗಶ್ರದ್ಧಾ’ ಪ್ರವಚನಸಂಕಲನದಿಂದ
ಸಂಪಾದಕರು: ಡಾ|| ಶ್ರದ್ಧಾನಂದಸ್ವಾಮಿಗಳು
ಕೃಪೆ: ಜ್ಞಾನಯೋಗ ಫೌಂಡೇಶನ್, ವಿಜಾಪುರ]
ಮಾತೇ ಮಂತ್ರ
Month : September-2015 Episode : Author : ವಿಜಾಪುರ