ರಾಜರಿಗೊಂದು ಪ್ರಜೆಗಳಿಗೊಂದು ನೀತಿ ಇರದು. ಆಚರಣೆಯಲ್ಲಿ ತಪ್ಪನ್ನೆಸಗಿದ ಪ್ರಜೆಗಿಂತ ದುಷ್ಟ ಆಲೋಚನೆಗೊಳಗಾದ ರಾಜನು ಹೆಚ್ಚು ಶಿಕ್ಷಾರ್ಹನಾಗುತ್ತಾನೆ.
ಆಗಷ್ಟೇ ಮುಗಿಲಿನಿಂದ ಅವತರಿಸುತ್ತಿದ್ದ ಉಷಾದೇವಿಗೆ ಸುತ್ತಲೂ ಇದ್ದ ಧ್ವಜಸಮೂಹವೆಲ್ಲ ಅಬ್ಬರದ ಸ್ವಾಗತ ಹೇಳುತ್ತಿತ್ತು. ಆ ಕಲರವ ಕಿನ್ನರಮಹಾರಾಜನನ್ನು ಪುಲಕಗೊಳಿಸಿತ್ತು. ಅವನ ಕಣ್ಣುಗಳಲ್ಲಿ ಚಂದ್ರಲೇಖೆಯ ವದನಭಂಗಿಗಳು ತುಂಬಿಹೋಗಿದ್ದವು. ನೋಡುನೋಡುತ್ತಿದ್ದಂತೆ ಪಕ್ಷಿಗಳ ಕಲಕಲ ನಿನಾದದ ಹಿಮ್ಮೇಳದಲ್ಲಿ ಸಪ್ತವರ್ಣರಥಾರೂಢ ಸೂರ್ಯದೇವನು ಉಷೆಯನ್ನು ಹಿಂಬಾಲಿಸಿ ತನ್ನ ಪ್ರಕಾಶವನ್ನು ಪಸರಿಸತೊಡಗಿದ್ದ. ದಿಗಂತವು ಕೆಂಪೇರಿತ್ತು. ಆ ರಕ್ತಿಮ ವೈಭವವನ್ನು ತಾನು ಬೊಗಸೆಯಲ್ಲಿ ತುಂಬಿ ಚಂದ್ರಲೇಖೆಯ ಪಾದಗಳಿಗೆ ಅರ್ಪಿಸಲಾರೆನೆ? – ಎಂದುಕೊಳ್ಳುತ್ತಿದ್ದ, ಕಿನ್ನರಮಹಾರಾಜ.
ಅದೇಕೋ ಇಂದು ಪ್ರಕೃತಿಯ ಅಣುಅಣುವೂ ಮಹಾರಾಜನಲ್ಲಿ ಅದಮ್ಯ ಉದ್ರೇಕವನ್ನು ಸೃಷ್ಟಿಸುತ್ತಿತ್ತು. ನೋಡುವುದು ಕಣ್ಣೇ ಆದರೂ ನೋಡಿಸುವುದು ಮನಸ್ಸು ತಾನೆ! ಮಹಾರಾಜನ ಮನಸ್ಸಷ್ಟನ್ನೂ ಚಂದ್ರಲೇಖೆಯ ರೂಪ ಆವರಿಸಿತ್ತು. ಅವನ ಏಕೈಕ ಆಕಾಂಕ್ಷೆಯೆಂದರೆ ಚಂದ್ರಲೇಖೆಯೊಡನೆ ಮಿಲನ. ಅದರ ನಿರೀಕ್ಷೆಯೇ ಅವನನ್ನು ರೋಮಾಂಚನಗೊಳಿಸುತ್ತಿತ್ತು.
ಆಗ ಕಲಿಯುಗಾದಿಯಿಂದ ೨೧೫೦ನೇ ಸಂವತ್ಸರ ನಡೆಯುತ್ತಿತ್ತು – ಎಂದರೆ ಕ್ರಿ.ಪೂ. ೯೫೨. ಆ ವೇಳೆಗೆ ಕಶ್ಮೀರದಲ್ಲಿ ಕಿನ್ನರನ ಆಳ್ವಿಕೆಯ ೩೯ ವರ್ಷಗಳು ಕಳೆದಿದ್ದವು. ಕಿನ್ನರನು ಗೋನಂದವಂಶಕ್ಕೆ ಸೇರಿದವನು. ಕಶ್ಮೀರದಲ್ಲಿ ಗೋನಂದವಂಶದ ರಾಜ್ಯಭಾರ ಕಲಿಯುಗಾದಿ ೧೯೫೫ರಲ್ಲಿ, ಎಂದರೆ ಕ್ರಿ.ಪೂ. ೧೧೪೭ರಲ್ಲಿ ಮುಮ್ಮಡಿ ಗೋನಂದನ ಆಳ್ವಿಕೆಯೊಡನೆ ಆರಂಭವಾಗಿತ್ತು. ಗೋನಂದನು ೩೫ ವರ್ಷಗಳೂ ಅವನ ಮಗ ವಿಭೀಷಣನು ಇನ್ನು ೩೫ವರ್ಷಗಳೂ ಆಳಿದ್ದರು. ವಿಭೀಷಣನ ಪುತ್ರನೇ ಕಿನ್ನರ.
ಕಿನ್ನರನ ಪತ್ನಿ ಅಸಾಧಾರಣ ರೂಪವತಿ. ಅವಳನ್ನು ಕಿನ್ನರ ರಾಜಧಾನಿಗೆ ಸಮೀಪದಲ್ಲಿದ್ದ ಬೌದ್ಧ ಮಠದ ಒಬ್ಬ ಭಿಕ್ಷು ತನ್ನ ಯೋಗಶಕ್ತಿಯಿಂದ ಅಪಹರಿಸಿದ್ದ. ಇದರಿಂದ ಆಕ್ರೋಶಗೊಂಡ ಕಿನ್ನರ ಮಹಾರಾಜನು ಸೇನೆಯನ್ನು ಕಳಿಸಿ ನೂರಾರು ಬೌದ್ಧವಿಹಾರಗಳನ್ನು ಧ್ವಂಸಮಾಡಿಸಿದ್ದ. ಬೌದ್ಧರ ಸ್ವಾಧೀನದಲ್ಲಿದ್ದ ಗ್ರಾಮಗಳನ್ನು ವಶಪಡಿಸಿಕೊಂಡು ಅವನ್ನು ಬ್ರಾಹ್ಮಣಕುಟುಂಬಗಳ ಬಳಕೆಗೆ ನೀಡಿದ್ದ. ಆದರೆ ಅವನ ಮನಸ್ಸಿನಲ್ಲಿ ಕಳವಳ ತುಂಬಿತ್ತು – ಒಬ್ಬ ಬೌದ್ಧನ ಕಾಮದ ಕಾರಣದಿಂದ ಸಾವಿರಾರು ಬೌದ್ಧರು ಆಪತ್ತಿಗೆ ಸಿಲುಕುವಂತೆ ಆಯಿತಲ್ಲ – ಎಂದು. ಹೀಗೆ ಚಿಂತಿಸಿ ಕಿನ್ನರ ಮಹಾರಾಜನು ತನ್ನ ಕಾಮಾದಿಗಳನ್ನು ನಿಯಂತ್ರಣದಲ್ಲಿರಿಸಿಕೊಂಡು ಧರ್ಮಬದ್ಧ ಜೀವನವನ್ನು ಸಾಗಿಸುತ್ತಿದ್ದ.
ಮಹಾರಾಜನು ದಿಗ್ವಿಜಯಗಳನ್ನು ನಡೆಸಿ ಅಪರಿಮಿತ ಧನವನ್ನು ಶೇಖರಿಸಿದ್ದ. ಅತ್ಯಂತ ಭವ್ಯವಾದ ನಗರವನ್ನು ನಿರ್ಮಿಸಿದ್ದ. ಆ ಪಟ್ಟಣದ ರಾಜಮಾರ್ಗದ ಅಂಗಳಗಳಲ್ಲಿ ಚಿತ್ರವಿಚಿತ್ರ ವಸ್ತುಪ್ರದರ್ಶನಗಳು. ಸರಸ್ಸುಗಳಲ್ಲಿ ನೌಕಾಯಾನ ಏರ್ಪಾಡುಗಳು. ಎಲ್ಲೆಡೆ ವೃಕ್ಷಸಮೂಹಗಳು. ಅದನ್ನು ಭೂಲೋಕದ ಸ್ವರ್ಗವೆಂದೇ ಭಾವಿಸಬಹುದಿತ್ತು.
ಒಂದು ದಿನ ಸಂಜೆ ಕಿನ್ನರನು ಅರಮನೆಯ ಪ್ರಾಂಗಣದಲ್ಲಿ ಕುಳಿತು ಸುತ್ತಲಿನ ಪ್ರಕೃತಿಯನ್ನು ವೀಕ್ಷಿಸುತ್ತಿದ್ದಾಗ ಎದುರಿಗೆ ಒಂದು ಅದ್ಭುತ ಕಂಡಿತು. ಅದು ಮರೆಯಲಾಗದುದು. ಒಂದು ಹೊಳೆಯುವ ಮಿಂಚಿನ ಕಾಂಡವು ಮನುಷ್ಯಾಕಾರ ತಳೆದು ವೈಯಾರದಿಂದ ಬಳುಕುತ್ತ ಮಂದಗತಿಯಲ್ಲಿ ಹೋಗುವುದು ಕಾಣಿಸಿತು. ಬಂಗಾರದ ಮೈಬಣ್ಣ, ಕೆಂಪು ತುಟಿಗಳು, ಚಂದ್ರಕಾಂತಿಸದೃಶ ಚಹರೆ, ಮನ್ಮಥಬಾಣಗಳ ತಾಂಡವ. ಅದನ್ನು ಕಂಡು ಕಿನ್ನರಮಹಾರಾಜ ತನ್ನನ್ನೇ ಮರೆತ. ಆ ದಿವ್ಯ ಆಕೃತಿ ಹೆಜ್ಜೆಹಾಕುತ್ತಿದ್ದುದು ಭೂಮಿಯ ಮೇಲಲ್ಲ, ತನ್ನ ಹೃದಯದ ಮೇಲೆಯೆ – ಅನ್ನಿಸಿತು.
ಅಂದಿನಿಂದ ಅವಳ ಸ್ಮರಣೆಯ ಹೊರತು ಕಿನ್ನರನಿಗೆ ಅನ್ಯ ಧ್ಯಾನವಿಲ್ಲ. ಇಷ್ಟು ದಿವಸ ನಿಯಂತ್ರಣದಲ್ಲಿ ಇರಿಸಿಕೊಂಡಿದ್ದ ಕಾಮವು ನೆರೆಬಂದ ಪ್ರವಾಹದಂತೆ ಉಕ್ಕಿ ವಿಜೃಂಭಿಸತೊಡಗಿತ್ತು.
ಅವಳು ಯಾರು? – ಎಂದು ತಿಳಿದುಕೊಂಡು ಬರುವಂತೆ ಚಾರರನ್ನು ಕಳಿಸಿದ.
ಅವಳ ಹೆಸರು ಚಂದ್ರಲೇಖ; ಅವಳು ವಿಶಾಖನ ಧರ್ಮಪತ್ನಿ – ಎಂದು ಮಾಹಿತಿ ಬಂದಿತು. ಚಾರರ ಮೂಲಕವೇ ವಿಶಾಖನ ಜೀವನವೃತ್ತಾಂತವನ್ನೂ ಕಿನ್ನರ ತಿಳಿದುಕೊಂಡ.
ವಿಶಾಖನು ಒಮ್ಮೆ ಉದ್ಯಾನವನದಲ್ಲಿ ವಿಹರಿಸುತ್ತಿದ್ದಾಗ ದೇವಲೋಕದಿಂದಲೇ ಇಳಿದುಬಂದಿದ್ದಂತಹ ಇಬ್ಬರು ಸೌಂದರ್ಯವತಿಯರು ಸರೋವರದ ಬಳಿ ಹರಡಿಕೊಂಡಿದ್ದ ಮೊಳೆತಕಾಳುಗಳನ್ನು ಹೆಕ್ಕಿ ತಿನ್ನುತ್ತಿರುವುದನ್ನು ಕಂಡು ಅಚ್ಚರಿಗೊಂಡು ಅವರನ್ನು ಕರೆಯಿಸಿ ತನ್ನ ಅರಮನೆಯ ರಸೋಪೇತ ಭೋಜನವನ್ನು ನೀಡಿದ. ಅವರು ಸುಶ್ರವಸನೆಂಬ ನಾಗದೇವತೆಯ ಪುತ್ರಿಯರೆಂದೂ ಅವರ ಹೆಸರು ಇರಾವತಿ ಮತ್ತು ಚಂದ್ರಲೇಖ ಎಂದೂ ತಿಳಿಯಿತು. ಇರಾವತಿಗೆ ವಿದ್ಯಾಧರ ರಾಜನೊಡನೆ ವಿವಾಹವು ನಿಶ್ಚಯವಾಗಿದೆಯೆಂದೂ ತಿಳಿದುಬಂದಿತು. ಚಂದ್ರಲೇಖೆಯನ್ನು ನೋಡಿದೊಡನೆ ಮೊದಲ ನೋಟದಲ್ಲೇ ಅವಳ ಸೌಂದರ್ಯದಿಂದ ವಿಶಾಖನು ಆಕರ್ಷಿತನಾಗಿದ್ದ.
ಇಂತಹ ಅಪೂರ್ವ ಸುಂದರಿಯರು ನೆಲದಲ್ಲಿ ಹರಡಿದ್ದ ಕಾಳುಗಳನ್ನು ಆಯ್ದುಕೊಂಡು ತಿನ್ನುವ ಸ್ಥಿತಿ ಹೇಗೆ ಉಂಟಾಯಿತೆಂದು ವಿಶಾಖನು ವಿಚಾರಿಸಿದಾಗ, ಇರಾವತಿ-ಚಂದ್ರಲೇಖೆಯರು ಆ ವಿವರಗಳನ್ನೆಲ್ಲ ಜ್ಯೇಷ್ಠಕೃಷ್ಣ ದ್ವಾದಶಿಯಂದು ಜರುಗಲಿದ್ದ ತಕ್ಷಕಯಾತ್ರಾಮಹೋತ್ಸವದ ಸಂದರ್ಭದಲ್ಲಿ ತಮ್ಮ ತಂದೆ ಸುಶ್ರವನಿಂದ ಕೇಳಿ ತಿಳಿದುಕೊಳ್ಳುವಂತೆ ಹೇಳಿದರು.
ಅದರಂತೆ ವಿಶಾಖನು ಸುಶ್ರವನನ್ನು ಭೇಟಿಯಾಗಿ ವಿಚಾರಿಸಿದ. ಸುಶ್ರವನು ಉತ್ತರಿಸಿದ:
“ವೇದೋಕ್ತ ಆಗ್ರಯಣ ಯಜ್ಞ ಆಚರಣೆಯ ನಂತರದ ಶೇಷವನ್ನು ಸ್ವೀಕರಿಸುವುದು ನಮ್ಮ ಸಂಪ್ರದಾಯ. ಆದರೆ ಈ ದೇಶದಲ್ಲಿನ ಪ್ರಜೆಗಳು ನಮ್ಮನ್ನು ಮರೆತು ಆಗ್ರಯಣವನ್ನಾಚರಿಸದೆಯೇ ಭೋಜನ ಮಾಡುತ್ತಿದ್ದಾರೆ. ಹೀಗೆ ಯಜ್ಞಶೇಷವು ಸಿಗದ ಕಾರಣದಿಂದ ನಾವು ನೆಲದಲ್ಲಿ ಸಹಜವಾಗಿ ಬೆಳೆದುಕೊಂಡಿರುವ ಕಾಳುಗಳನ್ನು ಸೇವಿಸುತ್ತ ಜೀವಧಾರಣೆ ಮಾಡಿಕೊಂಡಿದ್ದೇವೆ.”
ಇದು ತಿಳಿದ ಮೇಲೆ ವಿಶಾಖನು ಆಗ್ರಯಣ ಯಜ್ಞವನ್ನು ಆಚರಿಸಿದ. ಪ್ರಸಾದವನ್ನು ಸ್ವೀಕರಿಸಿದ ಸುಶ್ರವನು ಸಂಪ್ರೀತನಾಗಿ ಯಥೇಷ್ಟ ಮಳೆಯನ್ನು ಸುರಿಸಿ ಸಮೃದ್ಧವಾಗಿ ಬೆಳೆಯು ಬೆಳೆಯುವಂತೆ ಮಾಡಿದ. ವಿಶಾಖನನ್ನು ಸುಶ್ರವನು ನಾಗಲೋಕಕ್ಕೆ ಕರೆದುಕೊಂಡು ಹೋಗಿ ಸತ್ಕರಿಸಿದ; ಅವನಿಗೆ ತನ್ನ ಪುತ್ರಿ ಚಂದ್ರಲೇಖೆಯನ್ನು ವಿವಾಹ ಮಾಡಿಕೊಟ್ಟ.
ಆ ಚಂದ್ರಲೇಖೆಯ ಮೇಲೆಯೆ ಈಗ ಕಿನ್ನರ ಮಹಾರಾಜರ ದೃಷ್ಟಿ ಬಿದ್ದಿತ್ತು. ವಿಶಾಖ ವೃತ್ತಾಂತವನ್ನು ಕೇಳಿ ಕಿನ್ನರನು ನಿಟ್ಟುಸಿರಿಟ್ಟ. ಕೇಳಿದ ಕಥೆಯನ್ನು ನಂಬದಿರಲು ಕಾರಣ ತೋರಲಿಲ್ಲ. ಅಲ್ಲದೆ ಚಂದ್ರಲೇಖೆಯ ಸೌಂದರ್ಯವೂ ಮಾನವರೀತಿಯದಲ್ಲದೆ ದೇವತಾಸ್ತ್ರೀ ಸೌಂದರ್ಯ ಎಂದು ನೋಡಿದೊಡನೆ ಅನಿಸುತ್ತಿತ್ತು.
ಮಹಾರಾಜನ ಆಲೋಚನೆಯ ಧಾಟಿಗೆ ಮಂತ್ರಿಯು ತಡೆಹಾಕಲು ಯತ್ನಿಸಿದ:
“ಮಹಾರಾಜರೆ! ಅನ್ಯರ ಪತ್ನಿಯನ್ನು ತಾಯಿಯಂತೆ ಕಾಣಬೇಕು. ಅಲ್ಲದೆ ರಾಜನು ಎಲ್ಲ ಪ್ರಜೆಗಳಿಗೂ ತಂದೆಯ ಸ್ಥಾನದಲ್ಲಿ ಇರುವವನು. ತಾವು ಚಂದ್ರಲೇಖೆಯನ್ನು ಮೋಹಿಸಿದರೆ ತಮ್ಮ ಮಗಳನ್ನು ಮೋಹಿಸಿದಂತೆಯೇ. ಅದು ತಮ್ಮಂತಹ ಜ್ಞಾನವಂತರಿಗೆ ಹೊಂದುವ ವರ್ತನೆಯಲ್ಲ.”
ಮಂತ್ರಿಯ ಹಿತವಾದದ ಔಚಿತ್ಯವನ್ನು ಮಹಾರಾಜನು ಗ್ರಹಿಸದಿರಲಿಲ್ಲ. ಆದರೂ ಚಂದ್ರಲೇಖೆಯನ್ನು ಮರೆಯುವುದು ಅವನಿಗೆ ಸಾಧ್ಯವಾಗಲಿಲ್ಲ.
ಮೋಹವನ್ನು ತಡೆದುಕೊಳ್ಳಲಾಗದೆ ಮಹಾರಾಜನು ಚಂದ್ರಲೇಖೆಗೆ ಹಲವಾರು ಸಂದೇಶಗಳನ್ನು ರಹಸ್ಯವಾಗಿ ಕಳಿಸಿದ. ಗಿಡಗಳ ಎಲೆಗಳ ಸದ್ದು ಕೇಳಿಸಿದರೆ, ಚಲಿಸುವ ಮೋಡಗಳು ಆಕಾಶದಲ್ಲಿ ಕಂಡರೆ, ಯಾರದೋ ಹೆಜ್ಜೆಸಪ್ಪಳ ಕೇಳಿದರೆ – ಎಲ್ಲವೂ ಮಹಾರಾಜನ ಮನಸ್ಸಿಗೆ ಚಂದ್ರಲೇಖೆಯು ಬರುತ್ತಿರುವುದರ ಸಂಕೇತವೆನಿಸತೊಡಗಿತ್ತು. ಸುತ್ತಲಿನ ವಾತಾವರಣವೆಲ್ಲ ಅವನಿಗೆ ಚಂದ್ರಲೇಖಾಮಯವಾಗಿ ಕಾಣಿಸತೊಡಗಿತ್ತು.
ಆದರೆ ಸಮಯ ಕಳೆದರೂ ಚಂದ್ರಲೇಖೆಯಿಂದ ಉತ್ತರ ಬರಲಿಲ್ಲ. ಅವಳ ಮೌನವು ಮಹಾರಾಜನ ಮನಸ್ಸಿನ ಉದ್ರೇಕವನ್ನು ಇಮ್ಮಡಿಗೊಳಿಸಿತು.
ಇಷ್ಟರಲ್ಲಿ ರಾಜ್ಯದಲ್ಲೆಲ್ಲ ಒಂದು ವಿಚಿತ್ರ ವಾರ್ತೆ ಹಬ್ಬಿತ್ತು. ಬೇರೆಲ್ಲಿಂದಲೊ ಆಗಮಿಸಿದ ಕುದುರೆಯ ಬೆನ್ನಿನ ಮೇಲೆ ಚಂದ್ರಲೇಖೆಯ ಹಸ್ತಮುದ್ರಿಕೆ ಬಂಗಾರದ ವರ್ಣದಲ್ಲಿ ಮೂಡಿತ್ತು – ಎಂಬುದು. ರಾಜನೂ ಧಾವಿಸಿ ಅದನ್ನು ವೀಕ್ಷಿಸಿದ. ಅಲ್ಲಿ ಇದ್ದುದು ಚಂದ್ರಲೇಖೆಯ ಸುಕುಮಾರವಾದ ಕೈಯ ಮುದ್ರಿಕೆಯೇ ಎಂದು ಅವನ ಮನಸ್ಸಿಗೆ ನಿಶ್ಚಯವಾಯಿತು.
ತನ್ನ ವಾಂಛೆಯನ್ನು ಅಣಗಿಸಿಕೊಳ್ಳಲಾಗದ ಮಹಾರಾಜನು ಲಜ್ಜೆಯನ್ನು ತ್ಯಜಿಸಿ ವಿಶಾಖನಿಗೆ ಕರೆ ಕಳುಹಿಸಿದ.
ವಿಶಾಖನನ್ನು ನೋಡಿದೊಡನೆ ಮಹಾರಾಜನ ಅಂತರಂಗ ಭಗ್ಗೆಂದಿತು. ವಿಶಾಖನು ಚಂದ್ರಲೇಖೆಗೆ ಅನುರೂಪನೆಂಬುದು ನಿಸ್ಸಂದೇಹವಾಗಿತ್ತು. ಆದರೂ ಚಂದ್ರಲೇಖೆ ಅವನ ಸ್ವಾಧೀನದಲ್ಲಿ ಇರುವುದು ಮಹಾರಾಜನಿಗೆ ಅಸಹನೀಯವಾಯಿತು. ಚಂದ್ರಲೇಖೆಯ ಮುಗುಳ್ನಗೆ, ಬಳುಕು-ಬಾಗು, ಉಲ್ಲಾಸ – ಎಲ್ಲವೂ ವಿಶಾಖನ ಸ್ವಾಧೀನದಲ್ಲಿ!
ವಿಶಾಖನು ಕಿನ್ನರ ಮಹಾರಾಜನಿಗೆ ಕೈಜೋಡಿಸಿ ನಮಸ್ಕರಿಸಿದ. ಆ ಕೈಗಳು ಚಂದ್ರಲೇಖೆಯ ತನುವನ್ನು ಪ್ರೇಮದಿಂದ ಸ್ಪರ್ಶಿಸಿದ್ದ ಕೈಗಳೇ – ಎಂಬ ಆಲೋಚನೆ ಮಹಾರಾಜನ ಮನಸ್ಸಿನಲ್ಲಿ ಮೂಡದಿರಲಿಲ್ಲ. ಚಂದ್ರಲೇಖೆಯ ವದನವನ್ನು ಲೆಕ್ಕವಿಲ್ಲದಷ್ಟು ಬಾರಿ ನೇವರಿಸಿದ್ದ ಈ ಕೈಗಳನ್ನು ಛೇದಿಸಿಬಿಡಲೆ? – ಎಂದೂ ಒಂದು ಘಳಿಗೆ ಮಹಾರಾಜನು ವಿಕ್ಷಿಪ್ತವಾಗಿ ಯೋಚಿಸಿದ. ಅಷ್ಟು ಅಸೂಯೆ ಮಹಾರಾಜನ ಮನಸ್ಸನ್ನು ತುಂಬಿತ್ತು.
ಚಂದ್ರಲೇಖೆಯನ್ನು ತನಗೆ ಒಪ್ಪಿಸುವಂತೆ ವಿಶಾಖನಲ್ಲಿ ಮಹಾರಾಜನು ಅಭ್ಯರ್ಥನೆ ಮಾಡಿದ.
ವಿಶಾಖನು ಮುಗುಳ್ನಕ್ಕು “ಅದು ತಮಗೆ ಉಚಿತವಾಗದು ಮಹಾರಾಜರೆ!” ಎಂದ, ಸೌಮ್ಯ ಧ್ವನಿಯಲ್ಲಿ.
ಮಹಾರಾಜನ ಅಂತರಂಗದಲ್ಲಿ ವಾಂಛೆ ಭುಗಿಲೆದ್ದಿತ್ತು.
“ನಾನು ಮನಸ್ಸು ಮಾಡಿದರೆ ಈ ಕ್ಷಣವೇ ನಿನ್ನನ್ನು ಕಾರಾಗೃಹಕ್ಕೆ ತಳ್ಳಿ ಚಂದ್ರಲೇಖೆಯನ್ನು ವಶಪಡಿಸಿಕೊಳ್ಳಬಲ್ಲೆ” ಎಂದ, ಗದರಿಕೆಯ ರೀತಿಯಲ್ಲಿ.
ಆದರೆ ವಿಶಾಖನು ಸ್ವಲ್ಪವೂ ಬೆದರದೆ ಉತ್ತರಿಸಿದ: “ಮಹಾರಾಜರೆ! ತಾವು ಸದ್ಗುಣವಂತರು. ತಮ್ಮ ಮನಸ್ಸಿನಲ್ಲಿ ಇಂತಹ ಅನುಚಿತ ಭಾವನೆ ಮೂಡಿದುದು ಈ ದೇಶದ ದೌರ್ಭಾಗ್ಯ. ಪರಸ್ತ್ರೀಯನ್ನು ಮೋಹಿಸಿದ ಲಂಕಾಧಿಪತಿ ರಾವಣನ ಪಾಡು ಏನಾಯಿತೆಂದು ನೆನಪು ಮಾಡಿಕೊಳ್ಳಿ. ನಿಮಗಾಗಿ ಅಲ್ಲವಾದರೂ ಕಶ್ಮೀರ ಪ್ರಜೆಗಳ ಕ್ಷೇಮದ ದೃಷ್ಟಿಯಿಂದ ನೀವು ನಿಮ್ಮ ಮನಶ್ಚಾಂಚಲ್ಯವನ್ನು ನಿಯಂತ್ರಿಸಬೇಕು. ನಿಮ್ಮ ಮನಸ್ಸಿನ ಸಂಚಲನೆಗೆ ವಿವೇಕವೆಂಬ ಕಡಿವಾಣ ಇರಲಿ. ಚಂದ್ರಲೇಖೆಯ ಸೌಂದರ್ಯದ ಮೇಲಿನ ನಿಮ್ಮ ವ್ಯಾಮೋಹ ಕ್ಷಣಿಕವಾದದ್ದು. ಅದನ್ನು ಗೆಲ್ಲಿರಿ. ಅದಕ್ಕಿಂತ ಭಗವಂತನ ಸಾನ್ನಿಧ್ಯದ ಸೌಂದರ್ಯವು ಸಾವಿರಪಟ್ಟು ಹೆಚ್ಚಿನದು. ಆ ಭೂಮಸೌಂದರ್ಯದ ಮೇಲೆ ನಿಮ್ಮ ಚಿತ್ತವನ್ನು ಕೇಂದ್ರೀಕರಿಸಿರಿ.”
ಇದಕ್ಕೂ ಬಾಗದೆ ಮಹಾರಾಜನು ತನ್ನ ಆಸೆಯನ್ನು ಪುನರುಚ್ಚರಿಸಿದ. ವಿಶಾಖನು ತಾಳ್ಮೆಯನ್ನು ಕಳೆದುಕೊಳ್ಳಲಿಲ್ಲ. ಮಹಾರಾಜನು ಕಡೆಗೂ ಪಟ್ಟುಬಿಡದೆ ಹೇಳಿದ, “ವಿಶಾಖ! ನಾಳೆ ಮುಂಜಾನೆಯೊಳಗೆ ಚಂದ್ರಲೇಖೆಯನ್ನು ನನಗೆ ತಂದು ಒಪ್ಪಿಸದಿದ್ದರೆ ನಾನು ಸೇನೆಯೊಡನೆ ನಿನ್ನ ಮನೆಯ ಮೇಲೆ ಆಕ್ರಮಣ ಮಾಡಿ ನಿನ್ನನ್ನು ಸಂಹರಿಸಿ ಚಂದ್ರಲೇಖೆಯನ್ನು ಸ್ವಾಧೀನ ಪಡಿಸಿಕೊಳ್ಳುತ್ತೇನೆ.”
ವಿಶಾಖನು ಮೌನವಾಗಿ ನಿರ್ಗಮಿಸುತ್ತ ಒಮ್ಮೆ ಮಹಾರಾಜನ ಕಡೆ ತಿರುಗಿ ಹೀಗೆಂದ:
“ಮಹಾರಾಜ! ಯಾರೋ ಒಬ್ಬರು ನಿಮ್ಮ ಭಾರ್ಯೆಯನ್ನು ಅಪಹರಿಸಿದರೆಂಬ ಕೋಪಕ್ಕೆ ಬೌದ್ಧವಿಹಾರಗಳನ್ನೆಲ್ಲ ತಾವು ಧ್ವಂಸ ಮಾಡಿದಿರಿ. ಅಂತಹ ನಿಮ್ಮ ಮನಸ್ಸಿನಲ್ಲಿ ನನ್ನ ಭಾರ್ಯೆಯನ್ನು ವಶಪಡಿಸಿಕೊಳ್ಳಬೇಕೆಂಬ ಯೋಚನೆ ಮೂಡಿರುವುದು ಕಶ್ಮೀರದ ವಿನಾಶಕ್ಕೆ ಕಾರಣವಾಗಬಹುದು. ರಾಜರಿಗೊಂದು ಪ್ರಜೆಗಳಿಗೊಂದು ನೀತಿ ಇರದು. ಆಚರಣೆಯಲ್ಲಿ ತಪ್ಪನ್ನೆಸಗಿದ ಪ್ರಜೆಗಿಂತ ದುಷ್ಟ ಆಲೋಚನೆಗೊಳಗಾದ ರಾಜನು ಹೆಚ್ಚು ಶಿಕ್ಷಾರ್ಹನಾಗುತ್ತಾನೆ.”
ಹೀಗೆ ಹೇಳಿ ವಿಶಾಖನು ಅಲ್ಲಿಂದ ನಿಷ್ಕ್ರಮಿಸಿದ.
ಮಹಾರಾಜನಾದರೋ ಕೋಪದಿಂದ ಕುದಿಯುತ್ತಿದ್ದ. ಅವನನ್ನು ಸಮಾಧಾನಗೊಳಿಸುವ ಮಂತ್ರಿಯ ಪ್ರಯತ್ನ ಸಫಲಗೊಳ್ಳಲಿಲ್ಲ. ಅವನು ಹೇಳಿದ:
“ಪ್ರಭುಗಳೇ! ನಾಗರಿಕತೆಯ ಲಕ್ಷಣವೇ ಸಂಯಮ. ಅಷ್ಟೊಂದು ತೇಜೋವಂತರಾದ ಸೂರ್ಯಚಂದ್ರರು ಕೂಡಾ ನಿಯಮಪಾಲನೆ ಮಾಡುತ್ತಾರೆ. ಅವರೇನಾದರೂ ತಮ್ಮ ನಿಯಮವನ್ನು ಸಡಿಲಿಸಿದರೆ ಇಡೀ ಜಗತ್ತೇ ನಾಶವಾಗುತ್ತದೆ. ಅದರಂತೆ ಸಮುದ್ರ ಕೂಡಾ. ಅದೇನಾದರೂ ಮೇರೆಯನ್ನು ಉಲ್ಲಂಘಿಸಿದರೆ ಜಗತ್ತೆಲ್ಲ ಜಲಾವೃತವಾಗುತ್ತದೆ. ಸಮುದ್ರವು ಮೇರೆ ಮೀರಿದರೆ ಹಾನಿಯಾಗುವುದು ಜಗತ್ತಿಗೆ. ಅದರಂತೆ ನೀವು ಸಂಯಮ ಕಳೆದುಕೊಂಡರೆ ಪ್ರಜೆಗಳಿಗೆ ಅಪಾರ ಹಾನಿಯಾಗುತ್ತದೆ.”
“ನಿಯಮ, ನಿಯಮ, ನಿಯಮ! ಎಲ್ಲಕ್ಕೂ ನಿಯಮ!” ಎಂದು ಅಸಹನೆಯಿಂದ ಅರಚಿದ, ಮಹಾರಾಜ. “ಯಾರು ಈ ನಿಯಮಗಳನ್ನೆಲ್ಲ ಮಾಡಿದವರು? ನನಗೂ ಈ ನಿಯಮಗಳಿಗೂ ಯಾವ ಸಂಬಂಧವೂ ಇಲ್ಲ. ನನಗೆ ಚಂದ್ರಲೇಖೆ ಬೇಕು, ಅಷ್ಟೆ. ನೀವು ನನ್ನೆದುರಿಗೆ ಇರಬೇಡಿ, ಹೊರಟುಹೋಗಿ!”
ಸಂಯಮದ ಮಾತು ಮಹಾರಾಜನಿಗೆ ಪಥ್ಯವೆನಿಸಲಿಲ್ಲ. ಅವನು ಅಂದಕೊಂಡ – ನನ್ನ ಆಲೋಚನೆಯಲ್ಲಿ ತಪ್ಪು ಏನಿದೆ? ಸ್ತ್ರೀ-ಪುರುಷ ಸಂಯೋಗವು ಪ್ರಕೃತಿಸಿದ್ಧವಾದುದು. ಪ್ರಕೃತಿಯನ್ನು ನಿಯಂತ್ರಿಸುವವರು ಯಾರು? ಸೃಷ್ಟಿಯೆಲ್ಲ ದೈವಕಲ್ಪಿತ. ಆಲೋಚನೆಗಳೆಲ್ಲ ದೈವಪ್ರೇರಿತ. ದೈವಕಲ್ಪಿತ ಆಲೋಚನೆಗಳಲ್ಲಿ ದೋಷ ಇರುವುದು ಸಾಧ್ಯವೆ?
ಹೀಗೆ ತನ್ನ ದೌರ್ಬಲ್ಯವನ್ನು ತಾನೇ ಸಮರ್ಥಿಸಿಕೊಂಡ.
ವಿಶಾಖನು ಮರುದಿನದೊಳಗಾಗಿ ಚಂದ್ರಲೇಖೆಯನ್ನು ತಂದು ಒಪ್ಪಿಸುತ್ತಾನೆಯೆ, ಅಥವಾ ಇಲ್ಲವೆ? ರಾತ್ರಿಯೇ ಬೇರೆಲ್ಲಿಗಾದರೂ ಓಡಿಹೋದರೆ?
ಹೀಗನಿಸಿದೊಡನೆ ಸೇನಾಪತಿಯನ್ನು ಕರೆದು ಆಜ್ಞೆ ಮಾಡಿದ: “ಈ ರಾತ್ರಿಯೇ ಹೋಗಿ ವಿಶಾಖನ ಮನೆಯನ್ನು ಸುತ್ತುವರಿಯಿರಿ. ವಿಶಾಖನನ್ನು ಕೊಂದಾದರೂ ಚಂದ್ರಲೇಖೆಯನ್ನು ಹಿಡಿದುಕೊಂಡು ಬನ್ನಿ. ಯಾರಾದರೂ ಅಡ್ಡಿಪಡಿಸಿದರೆ ಅವರನ್ನು ಅಲ್ಲಿಯೆ ಮುಗಿಸಿರಿ.”
ಇಡೀ ರಾತ್ರಿ ಮಹಾರಾಜನು ಚಂದ್ರಲೇಖೆಯ ಆಗಮನದ ಗುಂಗಿನಲ್ಲಿದ್ದ. ಇದೆಲ್ಲ ಪ್ರಕೃತಿಗೆ ಅನುಗುಣವಾದುದೇ ಎಂದುಕೊಳ್ಳುತ್ತಿದ್ದ.
ಸೂರ್ಯೋದಯ ಆಗುತ್ತಿದ್ದಂತೆ ಮಹಾರಾಜನ ವಾಂಛೆ ಹೆಚ್ಚು ತೀಕ್ಷ್ಣಗೊಂಡಿತು. ತನ್ನ ಇಚ್ಛೆಯು ಪೂರ್ಣಗೊಳ್ಳಲೆಂದೇ ಸೂರ್ಯನು ದಿಗಂತದಲ್ಲಿ ಹೊಮ್ಮಿ ಬರುತ್ತಿದ್ದಾನೆ – ಎಂದುಕೊಂಡ.
ಹೆಜ್ಜೆಸಪ್ಪಳ ಕೇಳಿ ಹಿಂದಕ್ಕೆ ತಿರುಗಿ ನೋಡಿದ. ಅಲ್ಲಿ ಸೇನಾಪತಿ ಕಾಣಿಸಿಕೊಂಡ.
“ಎಲ್ಲಿ ಚಂದ್ರಲೇಖೆ?” ಎಂದು ಆತುರದಿಂದ ಕೇಳಿದ, ಮಹಾರಾಜ.
“ಪ್ರಭುಗಳೆ! ನಾವು ವಿಶಾಖನ ಭವನದಲ್ಲಿ ಒಂದು ಕೊನೆಯಿಂದ ಇನ್ನೊಂದು ಕೊನೆಯವರೆಗೆ ಶೋಧಿಸಿದೆವು. ಆದರೆ ಅವರಿಬ್ಬರೂ ನಾವು ಬರುವುದನ್ನು ನಿರೀಕ್ಷಿಸಿ ಮೊದಲೇ ಅಲ್ಲಿಂದ ಹೊರಟುಹೋಗಿದ್ದಾರೆ” ಎಂದ, ಸೇನಾಪತಿ.
ಮಹಾರಾಜನು ಉಗ್ರನಾದ. “ಒಂದು ರಾತ್ರಿಯಲ್ಲಿ ಅವರು ತುಂಬ ದೂರ ಹೋಗಿರಲಾರರು. ನಾಲ್ಕು ದಿಕ್ಕುಗಳಲ್ಲಿಯೂ ಹೋಗಿ ಹುಡುಕಿರಿ” ಎಂದು ಮತಿತಪ್ಪಿದವನಂತೆ ಅರಚಿದ.
ಅಷ್ಟರಲ್ಲಿ ಇನ್ನೊಂದು ಆಲೋಚನೆ ಬಂದಿತು. ಚಂದ್ರಲೇಖೆ ಎಲ್ಲೆಲ್ಲಿಗೊ ಏಕೆ ಹೋಗುತ್ತಾಳೆ? ತನ್ನ ತಂದೆ ಸುಶ್ರವನ ಸರಸ್ಸಿನ ಕಡೆಗೆ ಹೋಗಿರುತ್ತಾಳೆ – ಎನಿಸಿತು.
ಕೂಡಲೇ ಮಹಾರಾಜನು ಹುಚ್ಚುಹಿಡಿದವನಂತೆ ಅಲ್ಲಿಗೆ ಧಾವಿಸಿದ.
ಮತಿಭ್ರಷ್ಟನಂತೆ ಬೀದಿಗಳಲ್ಲಿ ಓಡುತ್ತಿದ್ದ ಮಹಾರಾಜನನ್ನು ಪ್ರಜೆಗಳು ಆಶ್ಚರ್ಯದಿಂದ ನೋಡುತ್ತಿದ್ದರು. ಇಂತಹ ಲಜ್ಜೆಗೆಟ್ಟ ವರ್ತನೆಯ ರಾಜನಿಂದ ದೇಶಕ್ಕೆ ಏನು ಕೆಡುಕಾಗುತ್ತದೋ ಎಂದು ಜನರು ತಳಮಳಗೊಂಡರು.
“ಚಂದ್ರಲೇಖ!” ಎಂದು ಕೂಗುತ್ತಾ ಸುಶ್ರವನ ಸರಸ್ಸನ್ನು ಮಹಾರಾಜನು ಬಳಿ ಸಾರಿದ. ಸೈನ್ಯವೆಲ್ಲ ಅವನನ್ನು ಹಿಂಬಾಲಿಸಿತ್ತು.
ನಡೆಯಲಿದ್ದ ಘೋರವನ್ನು ನೋಡಲಾರೆನೆಂಬಂತೆ ಸೂರ್ಯನು ದಟ್ಟ ಮೋಡದ ಹಿಂದೆ ಸರಿದಿದ್ದ. ಹೀಗೆ ನಡುಮಧ್ಯಾಹ್ನವೇ ಕತ್ತಲು ಕತ್ತಲಾದಂತಿತ್ತು.
ಪ್ರಳಯದ ಸಂಕೇತವೆಂಬಂತೆ ಗುಡುಗು ಗರ್ಜಿಸಿತು. ಭಯಭ್ರಾಂತರಾಗಿ ಜನರು ಮುಗಿಲಿನತ್ತ ನೋಡಿದರು. ಆ ಗರ್ಜನೆಯ ತೀವ್ರತೆ ರಾಜನನ್ನು ದಿಗ್ಭ್ರಾತನನ್ನಾಗಿಸಿತು.
ಆ ಗರ್ಜನೆ ಹೊರಟಿದ್ದುದು ಗುಡುಗಿನಿಂದಲ್ಲ; ತನ್ನ ಪುತ್ರಿಯನ್ನು ಅವಮಾನಿಸಿದ್ದ ರಾಜನ ದುರ್ವರ್ತನೆಯಿಂದ ಕ್ರುದ್ಧನಾದ ಸುಶ್ರವಸನಿಂದ! ಅದು ಇಡೀ ಪ್ರಾಂತವನ್ನು ನಡುಗಿಸಿತು. ಗುಡ್ಡಗಳ ಬಂಡೆಗಳು ಪುಡಿಪುಡಿಯಾದವು. ಎಲ್ಲೆಡೆ ಭೂಮಿ ಕಂಪಿಸಿತು. ಸೇಡು ತುಂಬಿದ ಸುಶ್ರವನು ಸಿಡಿಲಿನ ಮಳೆಗರೆದ. ಅದು ಎಲ್ಲವನ್ನೂ, ಎಲ್ಲರನ್ನೂ ಬೂದಿ ಮಾಡತೊಡಗಿತು. ರಾಜನ ಕಾಮಾಗ್ನಿಯು ಮಾಯವಾಗಿ ಅವನು ಸುಶ್ರವಸನ ಪ್ರತೀಕಾರಾಗ್ನಿಯಿಂದ ದಗ್ಧನಾದ.
ಕ್ಷಣಗಳೊಳಗೆ ಇಡೀ ಪಟ್ಟಣವೇ ನೆಲಸಮವಾಗಿತ್ತು.
ಎಲ್ಲೆಡೆ ಹಾಹಾಕಾರ. ಉಳಿದ ಹಲವರು ಸಿಕ್ಕಸಿಕ್ಕೆಡೆಗೆ ಓಡತೊಡಗಿದರು. ಅನೇಕರು ಚಕ್ರಧರ ದೇವಾಲಯದಲ್ಲಿ ಅವಿತುಕೊಂಡರು. ಆದರೆ ಕೆಲವೇ ನಿಮಿಷಗಳಲ್ಲಿ ದೇವಾಲಯವೂ ಭಸ್ಮವಾಯಿತು.
ನಿಯಮೋಲ್ಲಂಘನೆಗೆ ಕ್ಷಮೆಯೇ ಇರದೆಂಬುದು ಸಾಕ್ಷ್ಯಗೊಂಡಿತು.
ಸುಶ್ರವಸನ ಸೋದರಿ ರಮಣ್ಯಾ ಕೂಡ ವಿಧ್ವಂಸನದಲ್ಲಿ ಕೈಜೋಡಿಸಿದಳು. ಬೆಟ್ಟಗುಡ್ಡಗಳ ಬಂಡೆಗಳಿಂದ ಪ್ರಹಾರ ನಡೆಸಿದಳು.
ಸುಂದರ ಹರ್ಮ್ಯ ಉದ್ಯಾನಗಳಿಂದ ತುಂಬಿದ್ದ ಸಮೃದ್ಧ ರಾಜ್ಯವು ಪೂರ್ತಿ ಹಾಳುಸುರಿದಿತ್ತು. ದಗ್ಧ ದೇಹಗಳಿಂದ ತುಂಬಿ ಇಡೀ ಪ್ರಾಂತವೇ ಸ್ಮಶಾನವಾಗಿತ್ತು.
ಎಷ್ಟೋ ವರ್ಷಗಳ ಶ್ರಮದಿಂದ ನಿರ್ಮಿಸಿದ್ದ ಪ್ರಾಂತವು ಒಬ್ಬ ರಾಜನ ಕಾಮಾವೇಶದಿಂದಾಗಿ ಕ್ಷಣಗಳಲ್ಲಿ ಧ್ವಂಸಗೊಂಡಿತ್ತು.
ಇದಾದ ಮೇಲೆ ಸುಶ್ರವಸನು ಮಗಳು ಮತ್ತು ಅಳಿಯನೊಡನೆ ದೂರದ ಪರ್ವತಾವಳಿಯಲ್ಲಿದ್ದ ಸರೋವರವನ್ನು ಸೇರಿದ. ಅಳಿಯನನ್ನೂ ನಾಗಪುರುಷನನ್ನಾಗಿ ಮಾರ್ಪಡಿಸಿ ಅವನಿಗಾಗಿ ಇನ್ನೊಂದು ಸರೋವರದಲ್ಲಿ ಅರಮನೆಯನ್ನೂ ನಿರ್ಮಿಸಿಕೊಟ್ಟ.
ಇಂದಿಗೂ ಅಮರನಾಥ ಯಾತ್ರಿಕರು ಸುಶ್ರವನಾಗ್, ಜಾಮಾನಾಗ್ ಎಂಬ ಹೆಸರಿನ ಆ ಸರೋವರಗಳನ್ನು ದರ್ಶಿಸುತ್ತಾರೆ.
ಸುಶ್ರವನ ಸೋದರಿ ರಮಣ್ಯಾ ಸುರಿಸಿದ ಬಂಡೆಗಳ ಪ್ರಹಾರದಿಂದ ಏರ್ಪಟ್ಟ ಗುಹೆಗಳನ್ನೊಳಗೊಂಡ `ರಮಣ್ಯಾಟವಿ’ ವನಪ್ರದೇಶ ಈಗಲೂ ಇದೆ.
ಇಷ್ಟಾದರೂ ಗೋನಂದವಂಶ ಅಲ್ಲಿಗೆ ಮುಗಿಯಲಿಲ್ಲ. ಕಿನ್ನರ ಮಹಾರಾಜನ ಕುಮಾರರಲ್ಲೊಬ್ಬನಾದ ಸಿದ್ಧನೆಂಬವನನ್ನು ಅವನ ತಾಯಿ ವಿಜಯಕ್ಷೇತ್ರವೆಂಬೆಡೆ ಅಡಗಿಸಿ ರಕ್ಷಿಸಿ ಬೆಳೆಸಿದಳು. ಸಿದ್ಧನು ತನ್ನ ತಂದೆಯ ವಿಚಕ್ಷಣರಹಿತ ವರ್ತನೆಯಿಂದ ಘಟಿಸಿದ ಅನಾಹುತವನ್ನು ಅರಿತುಕೊಂಡ. ತನ್ನ ಮನಸ್ಸು ಮಲಿನವಾಗದಂತೆ ಜಾಗ್ರತೆ ವಹಿಸಿದ. ಪರಶಿವನ ಧ್ನಾನಮಾಡುತ್ತಾ ನಿಃಸ್ಪೃಹನಾಗಿ ರಾಜ್ಯವನ್ನು ಶ್ರದ್ಧೆಯಿಂದ ಪಾಲಿಸಿದ. ಕಾಲಕ್ರಮದಲ್ಲಿ ಅವನು ಕಶ್ಮೀರವನ್ನು ಪುನರ್ನಿರ್ಮಿಸಿದ. ಅವನೂ ಅವನ ಭಾರ್ಯೆ ರಾಜಶ್ರೀಯೂ ಧರ್ಮಮಾರ್ಗದಲ್ಲಿ ಕ್ರಮಿಸಿ ಕಶ್ಮೀರಕ್ಕೆ ಪೂರ್ವವೈಭವವನ್ನು ಮರಳಿ ತಂದರು.
ಗತದಿಂದ ಗುಣಪಾಠವನ್ನು ಗ್ರಹಿಸಿ ಜೀವನದಲ್ಲಿ ಅಳವಡಿಸಿಕೊಂಡವರೇ ಧನ್ಯರೆಂಬುದನ್ನು ಸಿದ್ಧನ ವೃತ್ತಾಂತವು ನಿರೂಪಿಸಿದೆ. ಅವನು ಅರವತ್ತು ವರ್ಷಕಾಲ ಧರ್ಮದಿಂದ ರಾಜ್ಯಪಾಲನೆ ಮಾಡಿ ಸಶರೀರ ಶಿವಲೋಕಪ್ರಾಪ್ತಿಯನ್ನು ಹೊಂದಿದ.
ಬಾವಿಯ ರಾಟೆಯಲ್ಲಿ ಹುಗಿದುಕೊಂಡ ದಾರಗಳಿಂದಾದ ಹಗ್ಗವು ಕೆಳಕ್ಕೆ ಹೋಗುವುದೇ. ಆದರೆ, ಹೂಗಳನ್ನು ಪೋಣಿಸಲು ನೆರವಾದ ದಾರವು ಪುಷ್ಪಗಳೊಡನೆ ತಾನೂ ದೇವತೆಗಳ ಶಿರವನ್ನು ಅಲಂಕರಿಸುತ್ತದೆ.