ಯೋ ದೇವೋ ಅಗ್ನೌ ಯೋ ಅಪ್ಸು ಯೋ ವಿಶ್ವಂ ಭುವನಮಾವಿವೇಶ |
ಯ ಓಷಧೀಷು ಯೋ ವನಸ್ಪತಿಷು ತಸ್ಮೆ ದೇವಾಯ ನಮೋ ನಮಃ ||
– ಶ್ವೇತಾಶ್ವತರ ಉಪನಿಷತ್ತು
“ಬೆಂಕಿ, ನೀರು, ಗಿಡ-ಮರ-ಬಳ್ಳಿಗಳು – ಜೀವಸಹಕಾರಿಯಾದ ಎಲ್ಲ
ಚರಾಚರಸೃಷ್ಟಿಯೂ ಯಾರ ಅಭಿವ್ಯಕ್ತಿಯೋ ಆ ಮಹಾದೇವನಿಗೆ ನಮ್ಮ ನಮ್ರ ನಮನ.”
ಆಧುನಿಕ ಯುಗದಲ್ಲಿ ಹಲವು ಕಾರಣಗಳಿಂದ ಮನುಷ್ಯನು ಪ್ರಕೃತಿಯೊಡನೆ ತನಗಿದ್ದ ನಂಟನ್ನು ಕಳೆದುಕೊಂಡಿದ್ದಾನೆ. ಆ ನಂಟನ್ನು ಮತ್ತೆ ಸ್ಥಾಪಿಸುವುದು ಹೇಗೆ – ಎಂಬುದೇ ಇಂದಿನ ಪ್ರಮುಖ ಸವಾಲು. ಪ್ರಕೃತಿಯಿಂದ ದೂರ ಸರಿದು ನಾವು ತಪ್ಪು ಮಾಡಿದ್ದೇವೆಂಬ ಅರಿವು ಈಗ ಜನರಲ್ಲಿ ಮೂಡಿದೆ. ಆದರೆ ಆ ಅಂತರವನ್ನು ಕಡಮೆ ಮಾಡುವ ಧೃತಿಯ ಕೊರತೆ ಇದೆ. ಪ್ರಕೃತಿಯನ್ನು ಗೌರವಿಸುವುದೆಂದರೆ ಶಾಶ್ವತ ಮತ್ತು ಅನುಲ್ಲಂಘ್ಯ ವಿಶ್ವನಿಯಮಗಳನ್ನು ಗೌರವಿಸಿದಂತೆ – ಎಂಬ ತಿಳಿವಳಿಕೆ ದೃಢಗೊಳ್ಳಬೇಕಾಗಿದೆ; ಪ್ರಕೃತಿಯು ಕೇವಲ ನಮ್ಮ ಭೋಗಸಾಧನ ಎಂಬ ಅಪ್ರಬುದ್ಧ ಧೋರಣೆ ಹೋಗಬೇಕಾಗಿದೆ.
ಅಣುಶಕ್ತಿ ಆಯೋಗದ ಅಧ್ಯಕ್ಷರಾಗಿದ್ದ ಡಾ|| ಹೋಮಿ ಭಾಭಾ ಒಮ್ಮೆ ಮುಂಬಯಿಯ ಬೀದಿಯೊಂದರಲ್ಲಿ ಕಾರಿನಲ್ಲಿ ಹೋಗುತ್ತಿರುವಾಗ ಧಪ್ ಧಪ್ ಎಂಬ ಶಬ್ದ ಕೇಳಿಸಿತು. ಇಳಿದು ನೋಡಿದಾಗ ಸೊಂಪಾದ ಭಾರಿ ಮರವನ್ನು ಕೆಲಸಗಾರರು ಕಡಿಯುತ್ತಿದ್ದುದು ಕಂಡಿತು. ವಿಚಾರಿಸಿದಾಗ ರಸ್ತೆಯನ್ನು ಅಗಲಗೊಳಿಸಲು ಆ ಮರವನ್ನು ಕಡಿಯುವಂತೆ ನಗರಸಭೆಯಿಂದ ಆಜ್ಞೆಯಾಗಿದ್ದುದಾಗಿ ಕೆಲಸಗಾರರು ಹೇಳಿದರು. ಭಾಭಾ ಅವರು ಅಲ್ಲಿಗೆ ತಾವು ಮತ್ತೆ ಬರುವವರೆಗೆ ಸ್ವಲ್ಪಕಾಲ ಕಡಿತವನ್ನು ತಡೆಯುವಂತೆ ಕೋರಿ ತಮ್ಮ ಕಚೇರಿಗೆ ಧಾವಿಸಿ ತಮ್ಮ ತೋಟಗಾರಿಕೆ ಪ್ರಮುಖರನ್ನು ಸಂಪರ್ಕಿಸಿ ಒಂದು ದೊಡ್ಡ ಮರವನ್ನು ಸ್ಥಳಾಂತರ ಮಾಡಲಾದೀತೆ? ಎಂದು ಕೇಳಿದರು – ಅದು ಆಗುವುದಾದರೆ ನನಗೆ ಬಹಳ ಆನಂದವಾಗುತ್ತದೆ. ಅದು ಸಾಧ್ಯವೆಂದು ಹೇಳಿದ ಆ ಅಧಿಕಾರಿ ಹತ್ತಾರು ಜನ ಪ್ರಯೋಗಾಲಯ ಸಿಬ್ಬಂದಿಯೊಡನೆ ಮತ್ತು ಭಾರಿ ಗಾತ್ರದ ಕ್ರೇನಿನೊಡನೆ ಸ್ಥಳಕ್ಕೆ ಹೋದರು. ಮರದ ಸುತ್ತಲೂ ಆಳವಾದ ಗುಂಡಿ ತೋಡಿ ಬೇರುಗಳಿಗೆ ಹೆಚ್ಚು ಹಾನಿಯಾಗದಂತೆ ನಿಧಾನವಾಗಿ ಕ್ರೇನಿನಿಂದ ಮೇಲಕ್ಕೆತ್ತಿ ಮರವನ್ನು ಅರವತ್ತು ಅಡಿಯ ದೂರದಲ್ಲಿ ಸಿದ್ಧಪಡಿಸಿದ್ದ ಗುಂಡಿಯಲ್ಲಿ ನೆಡಿಸಿದರು. ನಗರಸಭೆಯ ಕೆಲಸಗಾರರಿಗೆ ನಿಗದಿಯಾಗಿದ್ದ ದಿನಗೂಲಿಯನ್ನು ತಾವೇ ಪಾವತಿ ಮಾಡಿದರು. ಕಾರ್ಯ ಮುಗಿದ ಮೇಲೆ ಅಧಿಕಾರಿಯು ಅದು ಉಳಿದೀತೆಂದು ನೂರಕ್ಕೆ ನೂರರಷ್ಟು ಖಾತರಿ ಕೊಡಲಾರೆ; ಆದರೆ ಉಳಿಯುವ ಸಂಭವ ಚೆನ್ನಾಗಿದೆ ಎಂದು ಡಾ|| ಭಾಭಾರಿಗೆ ವರದಿ ಮಾಡಿದರು. ಡಾ|| ಭಾಭಾ ವಂದನೆಗಳು ನಿಮಗೆ. ನನ್ನ ಹತ್ತಿರದ ಬಂಧುವೊಬ್ಬರು ಮೃತ್ಯುವಿನ ದವಡೆಯಿಂದ ಪಾರಾದಷ್ಟು ಸಂತೋಷ ನನಗಾಗಿದೆ ಎಂದರು. ಹೊಸ ಮನೆಯಲ್ಲಿ ಆ ಮರ ವಿರಾಜಿಸುತ್ತಿದೆ.