ಅದು ಕಶ್ಮೀರವನ್ನು ಯುಧಿಷ್ಠಿರನು ಆಳುತ್ತಿದ್ದ ಕಾಲ; ಎಂದರೆ ಕಲಿಯುಗ ಆರಂಭವಾಗಿ ೨೮೩೦ ವರ್ಷಗಳು ಕಳೆದಿದ್ದವು. ಸುಮಾರು ಕ್ರಿ.ಪೂ. ೨೮೪ನೇ ಸಂವತ್ಸರ.
ಕಿನ್ನರನ ಸ್ತ್ರೀಲೋಲುಪತೆಯ ಪರಿಣಾಮವಾಗಿ ದಗ್ಧವಾಗಿದ್ದ ಕಶ್ಮೀರವನ್ನು ಸಿದ್ಧ ಮಹಾರಾಜನು ಪುನರ್ನಿರ್ಮಿಸಿದ. ಅವನ ತರುವಾಯ ಉತ್ತ್ವಲಾಕ್ಷನು ಮೂವತ್ತು ವರ್ಷ ಆರು ತಿಂಗಳು, ಹಿರಣ್ಯಾಕ್ಷನು ನಲವತ್ತಾರು ವರ್ಷ ಆರು ತಿಂಗಳು, ಹಿರಣ್ಯಕನು ಐವತ್ತೊಂದು ವರ್ಷ, ವಸುಕುಲನು ಅರವತ್ತು ವರ್ಷ ಅನುಕ್ರಮವಾಗಿ ರಾಜ್ಯಪಾಲನೆ ಮಾಡಿದರು. ದಕ್ಷಿಣ ಭಾಗದಲ್ಲಿ ಹೆಸರು ಮಾಡಿದ ಯಮರಾಜನಿಗೆ ಸರಿಗಟ್ಟುವಂತೆ ಕಶ್ಮೀರವನ್ನು ವಸುಕುಲನ ಮಗ ಅಪರ-ಯಮನಂತಿದ್ದ ಮಿಹಿರಕುಲನೂ ರಾಜ್ಯವನ್ನು ಪಾಲಿಸಿದ.
ಹಲವೊಮ್ಮೆ ನಿರ್ದಯನೆನಿಸಿದರೂ ಮಿಹಿರಕುಲನು ಮ್ಲೇಚ್ಛಜನರನ್ನು ಹೊರಗಟ್ಟಿ ಸ್ವದೇಶನಿಷ್ಠೆಯನ್ನು ಮೆರೆದ. ಶ್ರೀಲಂಕೆಯ ರಾಜನನ್ನೂ ಪರಾಭವಗೊಳಿಸಿ ಅವನ ಪತ್ನಿ ಬಂದು ತನ್ನ ರಾಣಿಯ ಪಾದಕ್ಕೆ ಎರಗುವಂತೆ ಮಾಡಿದ್ದ ವೀರ ಅವನು. ಮಿಹಿರಕುಲನ ಆಳ್ವಿಕೆ ನಡೆದಿದ್ದಾಗ ರಾಜ್ಯದಲ್ಲಿ ಎಲ್ಲಿಯೂ ದ್ರೋಹವೆಂಬುದರ ಸುಳಿವೇ ಇರಲಿಲ್ಲ.
ಗ್ರೀಷ್ಮದ ನಂತರ ತಂಪಾದ ವರ್ಷಋತು ಬರುವಂತೆ ಮಿಹಿರಕುಲನ ತರುವಾಯ ಅವನ ಪುತ್ರ ಬಕಮಹಾರಾಜನು ಅತಿಶಯ ಜನಾನುರಾಗಿಯಾಗಿ ರಾಜ್ಯಪಾಲನೆ ಮಾಡಿದ. ಧರ್ಮವು ಮತ್ತೆ ಪ್ರತಿಷ್ಠೆಗೊಂಡಿತ್ತು. ಅರವತ್ಮೂರು ವರ್ಷ ಹದಿಮೂರು ದಿನಗಳಷ್ಟು ಕಾಲ ಬಕನ ಆಧಿಪತ್ಯ ನಡೆದ ಮೇಲೆ ಅವನ ಮಗ ಕ್ಷಿತಿನಂದನು ಮೂವತ್ತು ವರ್ಷಗಳೂ ಅವನ ಮಗ ವಸುನಂದನು ಐವತ್ತೆರಡು ವರ್ಷ ಎರಡು ತಿಂಗಳೂ, ಅನಂತರ ನಳಮಹಾರಾಜನು ಅರವತ್ತು ವರ್ಷಗಳೂ ಅವನ ಪುತ್ರ ಅಕ್ಷನು ಅರವತ್ತು ವರ್ಷಗಳೂ ರಾಜ್ಯವಾಳಿದರು. ಗೋಪಾದಿತ್ಯನ ಮಗ ಗೋಕರ್ಣನು ಐವತ್ತೇಳು ವರ್ಷ ಹನ್ನೊಂದು ತಿಂಗಳೂ ಮತ್ತು ಅವನ ಮಗ ನರೇಂದ್ರಾದಿತ್ಯನು ಮೂವತ್ತಾರು ವರ್ಷ ನೂರುದಿನ ಆಳ್ವಿಕೆ ನಡೆಸಿದ ಮೇಲೆ ಇದೀಗ ಯುಧಿಷ್ಠಿರನ ಪ್ರಭುತ್ವ ನಡೆದಿತ್ತು. ಅವನ ಕಣ್ಣು ಚಿಕ್ಕ ಗಾತ್ರದ್ದು; ಆದ್ದರಿಂದ ಅವನನ್ನು `ಅಂಧಯುಧಿಷ್ಠಿರ’ ಎಂದು ಜನರು ಕರೆಯುತ್ತಿದ್ದರು. ಯುಧಿಷ್ಠಿರನಾದರೊ ತನ್ನ ವಂಶವಾರಸಿಕೆಯನ್ನು ದಕ್ಷತೆಯಿಂದ ಮುಂದುವರಿಸಿದ್ದ. ಅವನ ಕಾಲದಲ್ಲಿಯೆ ಮ್ಲೇಚ್ಛ ತಂಡಗಳು ಕಶ್ಮೀರವನ್ನು ಪ್ರವೇಶಿಸಿ ದಾಂಧಲೆ ಮಾಡತೊಡಗಿದ್ದುದು. ಕಶ್ಮೀರದಲ್ಲಿ ಅಲ್ಲೋಲಕಲ್ಲೋಲ ಸೃಷ್ಠಿಸಿ ರಾಜನನ್ನು ದುರ್ಬಲಗೊಳಿಸಿ ಆ ಮೂಲಕ ಪ್ರಜೆಗಳಿಗೆ ರಾಜನಲ್ಲಿದ್ದ ವಿಶ್ವಾಸಕ್ಕೆ ಧಕ್ಕೆ ತಂದು ಕಾಲಕ್ರಮದಲ್ಲಿ ಕಶ್ಮೀರವನ್ನು ಆಕ್ರಮಿಸಿಕೊಳ್ಳಬೇಕೆಂಬುದು ಕಿರಾತ, ಬರ್ಬರ, ಉತ್ತರ ಜ್ಯೌತಿಷ ಮ್ಲೇಚ್ಛರ ಯೋಜನೆಯಾಗಿತ್ತು. ಹೀಗೆ ಪ್ರವಾಹದಂತೆ ಮ್ಲೇಚ್ಛರು ಕಶ್ಮೀರದಲ್ಲೆಲ್ಲ ಹರಡಿಕೊಂಡರು. ಭದ್ರತೆ ಕಡಮೆಯಿದ್ದ ಭಾಗಗಳಲ್ಲಿ ಕೊಲೆ-ಲೂಟಿ ನಡೆಸಿ ನಾಪತ್ತೆಯಾಗಿಬಿಡುತ್ತಿದ್ದರು. ಹೀಗೆ ಸ್ಥಳೀಯರು ಭಯಗ್ರಸ್ಥರಾಗಿದ್ದರು. ರಾಜಧಾನಿಯೂ ಮ್ಲೇಚ್ಛರ ಹಾವಳಿಯಿಂದ ಮುಕ್ತವಾಗಿರಲಿಲ್ಲ.
ಮ್ಲೇಚ್ಛರ ಪ್ರಲೋಭನೆಗಳಿಗೊಳಗಾದ ರಾಜಪರಿವಾರದ ಹಲವರು ಯುಧಿಷ್ಠಿರನಿಗೆ ತಪ್ಪು ಸಲಹೆಗಳನ್ನು ನೀಡಿ ದಾರಿತಪ್ಪಿಸಿದ್ದರು. ಹೀಗೆ ವಿವಶನಾಗಿದ್ದ ಅಂಧಯುಧಿಷ್ಠಿರನು ಮ್ಲೇಚ್ಛರನ್ನು ಹೊರಕ್ಕೋಡಿಸಿ ರಾಜ್ಯದಲ್ಲಿ ಶಾಂತಿಯನ್ನು ಸ್ಥಾಪಿಸಬೇಕೆಂಬ ಉಗ್ರಸೇನನ ಹಿತವಾದಕ್ಕೆ ಕಿವಿಗೊಡಲಿಲ್ಲ.
ಮ್ಲೇಚ್ಛ ತಂಡಗಳ ಶೌರ್ಯವಂತಿಕೆಯ ಕಥನಗಳು ಎಷ್ಟು ವ್ಯಾಪಕವಾಗಿ ಪ್ರಚುರಗೊಂಡಿದ್ದವೆಂದರೆ ಯುಧಿಷ್ಠಿರನ ಸೇನೆಯೇ ಮ್ಲೇಚ್ಛರನ್ನು ಎದುರಿಸುವುದರಲ್ಲಿ ಉತ್ಸಾಹ ಕಳೆದುಕೊಂಡಿತ್ತು. ಹೀಗೆ ಮ್ಲೇಚ್ಛರ ಸ್ವೈರವರ್ತನೆ ನಿರ್ವಿಘ್ನವಾಗಿ ಸಾಗಿತ್ತು.
ಇದೇ ಸ್ಥಿತಿ ಮುಂದುವರಿದರೆ ಕಶ್ಮೀರವಷ್ಟೂ ಮ್ಲೇಚ್ಛರ ವಶಕ್ಕೆ ಸಿಲುಕಲಿದ್ದ ಸಂಭವವನ್ನು ಮಂತ್ರಿ ಉಗ್ರಸೇನನು ಗ್ರಹಿಸಿದ.
ಮ್ಲೇಚ್ಛರ ಪ್ರಾಬಲ್ಯ ಹರಡಿದುದು ಹೇಗೆ?
ಮ್ಲೇಚ್ಛರ ಕೆಲವು ಆಚರಣೆಗಳು ಸ್ಥಳೀಯರಿಗೆ ಆಕರ್ಷಣೀಯವಾಗಿ ಕಂಡವು; ಅವು ಕ್ರಮೇಣ ಸ್ಥಳೀಯರ ಜೀವನಕ್ರಮದಲ್ಲಿ ಸೇರಿಹೋಗಿದ್ದವು. ಮ್ಲೇಚ್ಛರ ವಿಚಿತ್ರ ಸಂಗೀತವೂ ಸ್ಥಳೀಯರನ್ನು ಆಕರ್ಷಿಸಿತ್ತು. ಆ ಸಂಗೀತವಾದರೋ ಉಚ್ಛರೀತಿಯದಾಗದೆ ಅಶಿಕ್ಷಿತ ಜನರನ್ನು ಉದ್ರೇಕಗೊಳಿಸುವ ರೀತಿಯದಾಗಿತ್ತು. ಕ್ರಮೇಣ ಎಲ್ಲ ಕಲೆಗಳೂ ಸಾಹಿತ್ಯವೂ ಮ್ಲೇಚ್ಛರ ದಟ್ಟ ಪ್ರಭಾವಕ್ಕೆ ಒಳಗಾಗಿ ಹೋದವು. ಸ್ತ್ರೀ-ಪುರುಷ ಸಂಬಂಧಗಳ ವಿಷಯದಲ್ಲಿಯೂ ಮ್ಲೇಚ್ಛರ ವಿಕೃತ ಭಾವನೆಗಳು ಸ್ಥಳೀಯರಿಗೆ ಗ್ರಾಹ್ಯವೆನಿಸತೊಡಗಿದವು. ಸನಾತನಧರ್ಮವನ್ನು ತ್ಯಜಿಸಿ ಮ್ಲೇಚ್ಛ ಪದ್ಧತಿಗಳನ್ನು ಅನುಸರಿಸುವುದು ಪ್ರಗತಿಪರ ಎಂಬ ಭಾವನೆಯನ್ನು ರಾಜಪರಿವಾರದ ಸಲಹೆಗಾರರೂ ಪ್ರಚಾರ ಮಾಡತೊಡಗಿದರು. ಹೀಗೆ ಕ್ರಮೇಣ ಸ್ವಯಂ ರಾಜನೂ ಈ ಹೊಸ ಪ್ರಭಾವಗಳಿಗೆ ಗೋಣುಹಾಕತೊಡಗಿದ. ಆಸ್ಥಾನದಲ್ಲಿಯೂ ರಾಜನು ಶಿಷ್ಟತೆಯನ್ನು ಕೈಬಿಟ್ಟು ಹಲವೊಮ್ಮೆ ಜುಗುಪ್ಸಾಕರ ಅಸಭ್ಯ ಶೈಲಿಯನ್ನು ಬಳಸುತ್ತಿದ್ದುದು ಆಸ್ಥಾನಿಕರಲ್ಲಿ ಅಸಹ್ಯ ಉಂಟುಮಾಡುತ್ತಿತ್ತು. ಸ್ತ್ರೀಯರಲ್ಲಿಯೂ ರಾಜನು ಸ್ವೈರದಿಂದ ವರ್ತಿಸತೊಡಗಿದ್ದ.
ಮಾಂಸದ ತುಂಡುಗಳ ಮೇಲೆ ಲಕ್ಷ್ಯವಿರಿಸಿದ ಹದ್ದುಗಳಂತೆ ಮ್ಲೇಚ್ಛರು ಸರಹದ್ದುಗಳಲ್ಲಿ ಕಶ್ಮೀರವನ್ನು ಕಬಳಿಸಲು ಹೊಂಚುಹಾಕಿ ಕಾಯುತ್ತಿದ್ದರು.
ರಾಜನು ಹಿತವಾದಗಳನ್ನು ಆಲಿಸದಿದ್ದಾಗ ಮಂತ್ರಿ ಉಗ್ರಸೇನನು ತಾನೇ ಮ್ಲೇಚ್ಛರನ್ನು ಅಣಗಿಸಲು ಸೈನ್ಯವನ್ನು ಸಜ್ಜುಗೊಳಿಸಲು ಯತ್ನಿಸಿದ. ಆದರೆ ಸೈನ್ಯದಲ್ಲಿಯೂ ಅರ್ಧದಷ್ಟು ಜನರು ಮ್ಲೇಚ್ಛರಿಗೆ ಭಕ್ತರಾಗಿಬಿಟ್ಟಿದ್ದರು; ಉಳಿದವರು ಜೀವಭಯಕ್ಕೆ ಸಿಲುಕಿದ್ದರು. ಹೀಗೆ ಮ್ಲೇಚ್ಛರ ಅಡಾವುಡಿ ದಿನೇದಿನೇ ಮಿತಿಮೀರುತ್ತಿತ್ತು.
ಈ ವಿಕಟ ಸನ್ನಿವೇಶದಲ್ಲಿ ಅಜಿತಸಿಂಹನೆಂಬ ಸಾಮಾನ್ಯ ವ್ಯಕ್ತಿಯೊಬ್ಬನು ಕಶ್ಮೀರದಿಂದ ಮ್ಲೇಚ್ಛರನ್ನು ಉಚ್ಛಾಟಿಸಲು ಕಂಕಣಬದ್ಧನಾದ. ಇದಕ್ಕೆ ಮಹಾಮಂತ್ರಿಯ ಅನುಜ್ಞೆಯನ್ನು ಕೋರಿದ.
ಮಂತ್ರಿಯು ಆತನನ್ನು ಕೇಳಿದ: “ನೀನು ಮ್ಲೇಚ್ಛರನ್ನು ಉತ್ಪಾಟನ ಮಾಡಬಲ್ಲೆನೆಂದು ಹೇಗೆ ಭಾವಿಸಿರುವೆ?”
“ಮಂತ್ರಿವರ್ಯರೆ! ನನಗೆ ಕನಸಿನಲ್ಲಿ ಪರಶಿವನು ಕಾಣಿಸಿಕೊಂಡ. ತನ್ನ ನೆಲೆಯಲ್ಲಿ ನಡೆದಿರುವ ಈ ಅನಾಚಾರಗಳನ್ನು ಎದುರಿಸದವರಿಗೆ ಶಿವನಾಮವನ್ನು ಉಚ್ಚರಿಸುವ ಅರ್ಹತೆ ಇಲ್ಲವೆಂದು ಹೇಳಿದ. ನಾನಾದರೋ ಶಿವನಾಮವನ್ನು ಜಪಿಸದಿರಲಾರೆ. ಆದುದರಿಂದ ಹೇಗಾದರೂ ಮ್ಲೇಚ್ಛರನ್ನು ಹಿಮ್ಮೆಟ್ಟಿಸಬೇಕೆಂದು ನಿಶ್ಚಯ ಮಾಡಿದ್ದೇನೆ. ಇದಕ್ಕೆ ತಮ್ಮ ಅನುಜ್ಞೆಯನ್ನು ದಯವಿಟ್ಟು ಕೊಡಿರಿ.”
ಮಹಾಮಂತ್ರಿಯು ಅಜಿತಸಿಂಹನಿಗೆ ಶುಭಕೋರಿ ಅವನು ಬಯಸಿದಷ್ಟು ಸೈನಿಕರನ್ನು ಒದಗಿಸಿದ.
ಕಡಮೆ ಸಂಖ್ಯೆಯವರಾದರೂ ನುರಿತಿದ್ದ ಸೈನಿಕರ ತಂಡವನ್ನೊಯ್ದು ಅಜಿತಸಿಂಹನು ಹೆಚ್ಚು ಕ್ಲೇಶಕರವಲ್ಲದ ತರುಣಗಿರಿಯ ಮೇಲೆ ದಾಳಿಯಿಟ್ಟ. ಅಜಿತಸಿಂಹನ ವ್ಯೂಹರಚನೆಯು ಮಿಹಿರಕುಲನ ರಚನೆಯಂತೆಯೆ ಇದ್ದರೂ ಹೆಚ್ಚು ಶಕ್ತಿಯುತವಾಗಿತ್ತು.
ಮ್ಲೇಚ್ಛರು ಹಗಲಿನಲ್ಲಿ ಗಡಿಯಾಚೆ ವಿಶ್ರಮಿಸುತ್ತಿದ್ದು ರಾತ್ರಿವೇಳೇ ಸರಹದ್ದು ದಾಟಿ ಪಟ್ಟಣಗಳ ಮೇಲೆ ಎರಗುತ್ತಿದ್ದರು.
ಮ್ಲೇಚ್ಛರೊಡನೆ ಸಹಾನುಭೂತಿ ತಳೆದಿದ್ದ ಸ್ಥಳೀಯರ ಬಗೆಗೆ ಅಜಿತಸಿಂಹನು ವಿವರಗಳನ್ನು ಸಂಗ್ರಹಿಸಿದ. ಆಕ್ರಮಣಗಳಿಗೆ ಮೊದಲೂ ಅನಂತರವೂ ಮ್ಲೇಚ್ಛರು ಯಾರಾರ ಮನೆಗಳಲ್ಲಿ ಆಸರೆ ಪಡೆಯುತ್ತಿದ್ದರು ಎಂಬ ವಿವರಗಳನ್ನು ತಿಳಿದುಕೊಂಡ. ಒಂದು ದಿವಸ ಯಾರಿಗೂ ಸುಳಿವು ಸಿಗದಂತೆ ಹಠಾತ್ತಾಗಿ ಬೆಳಗಿನ ಝಾವ ಅಂತಹ ಮನೆಗಳನ್ನು ಸುತ್ತುವರಿದು ಒಳಗಿದ್ದವರನ್ನೆಲ್ಲ ಒಯ್ದು ಊರಿನಿಂದ ಆಚೆಗೆ ಅಟ್ಟಿದ. ವಿರೋಧಿಸಿದವರನ್ನು ಬಂಧನಕ್ಕೆ ಒಳಪಡಿಸಿ ಅವರಿಂದ ಉಳಿದವರ ವಾಸಸ್ಥಾನಗಳ ಬಗೆಗೆ ಮಾಹಿತಿ ಸಂಗ್ರಹಿಸಿದ್ದಾದಮೇಲೆ ಅವರನ್ನು ಕೊಲ್ಲಿಸಿದ. ಆ ಮಾಹಿತಿಯನ್ನನುಸರಿಸಿ ಮ್ಲೇಚ್ಛರ ಉಳಿದ ನೆಲೆಗಳ ಮೇಲೆ ಆಕ್ರಮಣ ನಡೆಸತೊಡಗಿದ.
ಮ್ಲೇಚ್ಛರ ಬಗೆಗೆ ಸಹಾನುಭೂತಿ ತಳೆದಿದ್ದವರಿಗೆ ಶಿಕ್ಷೆ ವಿಧಿಸಿ ಅವರಿಂದ ನಿಜಸಂಗತಿಗಳನ್ನು ಹೊರಡಿಸಿದ. ಅಲ್ಲಿಂದ ಮುಂದೆ ದೇಶದ್ರೋಹ ಎಸಗುವುದಿಲ್ಲವೆಂಬ ವಾಗ್ದಾನವನ್ನು ಅವರಿಂದ ಪಡೆದು ಅವರನ್ನು ಮುಕ್ತಗೊಳಿಸುತ್ತಿದ್ದ. ಆದರೆ ಬಿಡುಗಡೆ ಮಾಡಿದ ತರುವಾಯವೂ ಅವರ ಚಲನವಲನಗಳನ್ನು ಗಮನಿಸಲು ಚಾರರನ್ನು ನೇಮಿಸಿದ. ಮಾತಿಗೆ ಮೀರಿ ಮ್ಲೇಚ್ಛರಿಗೆ ಸಹಕಾರ ನೀಡುತ್ತಿದ್ದವರನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲಿಸುತ್ತಿದ್ದ.
ಇದನ್ನೆಲ್ಲ ಗಮನಿಸುತ್ತಿದ್ದ ಮ್ಲೇಚ್ಛರ ಪಾಲಿಗೆ ಅಜಿತಸಿಂಹನು ಸಿಂಹಸ್ವಪ್ನವೇ ಆದ. ಮ್ಲೇಚ್ಛರೊಡನೆ ಸಹಕರಿಸುತ್ತಿದ್ದವರೂ ಅಜಿತಸಿಂಹನ ಹೆಸರು ಕೇಳಿದರೆ ನಡುಗುತ್ತಿದ್ದರು.
ಸ್ಥಳೀಯರ ಸಹಕಾರ ಸಿಗುವುದು ನಿಂತ ಮೇಲೆ ಮ್ಲೇಚ್ಛರ ದುರ್ವರ್ತನೆಗೆ ಪ್ರತಿಬಂಧಕ ಏರ್ಪಟ್ಟಿತು. ಹೀಗೆ ಮ್ಲೇಚ್ಛರನ್ನು ಯಾರೂ ಎದುರಿಸಲಾಗದೆಂಬ ಭಾವನೆ ಜನರ ಮನಸ್ಸಿನಿಂದ ಮರೆಯಾಯಿತು. ಈ ಸನ್ನಿವೇಶವನ್ನು ಮಂತ್ರಿ ಉಗ್ರಸೇನನು ಪರಿಣಾಮಕಾರಿಯಾಗಿ ಬಳಸಿಕೊಂಡ; ಅಜಿತಸಿಂಹನಿಗೆ ಮ್ಲೇಚ್ಛರನ್ನು ಉಚ್ಛಾಟಿಸುವಂತೆ ಸಾಕ್ಷಾತ್ ಶಿವನೇ ಆದೇಶ ನೀಡಿ ಸಹಕರಿಸುತ್ತಿರುವುದಾಗಿ ಪ್ರಚಾರ ಮಾಡಿದ. ಹೀಗೆ ಮ್ಲೇಚ್ಛರಿಗೆ ದೈವಸಹಾಯ ಇದ್ದಿತೆಂಬ ಪ್ರಥೆ ಕ್ರಮೇಣ ಅಣಗಿತು.
ಮ್ಲೇಚ್ಛರನ್ನು ಹೊರಗಟ್ಟಿದ ಮೇಲೆ ಅಜಿತಸಿಂಹನು ಸ್ಥಳೀಯರನ್ನು ಸಮಾವೇಶಗೊಳಿಸಿ ಅವರಿಗೆ ಮನವರಿಕೆ ಮಾಡಿದ:
“ಇದು ನಮ್ಮ ಮಾತೃಭೂಮಿ. ನಮ್ಮ ಸಂಸ್ಕೃತಿಯು ಅನೇಕ ತಲೆಮಾರುಗಳ ನಮ್ಮ ಪೂರ್ವಜರಿಂದ ನಮಗೆ ಲಭಿಸಿರುವ ಅಮೂಲ್ಯ ನಿಧಿ. ಬೇರೆ ರಾಜ್ಯಗಳನ್ನು ಆಕ್ರಮಿಸಿಕೊಳ್ಳುವ ಇಚ್ಛೆ ನಮಗೆ ಇಲ್ಲ. ಆದರೆ ನಮ್ಮನ್ನು ಶೋಷಣೆ ಮಾಡಲು ಅನ್ಯರು ಮೇಲೆ ಬಿದ್ದಲ್ಲಿ ಅದನ್ನು ಮೂಕರಾಗಿ ಸಹಿಸುವಷ್ಟು ದುರ್ಬಲರು ನಾವಾಗಬಾರದು. ಮಹಾರಾಜರೋ ಸೈನಿಕರೋ ನಮ್ಮನ್ನು ರಕ್ಷಿಸಲಿ ಎಂಬ ನಿಃಸತ್ತ್ವತೆಗೆ ಒಳಗಾಗುವುದು ದ್ರೋಹಕ್ಕೆ ಸಮಾನ. ದೈವವು ನಮಗೆ ವಿಧಿಸಿರುವ ಪವಿತ್ರ ಬಾಧ್ಯತೆಯನ್ನು ವಿಸ್ಮರಿಸದಿರೋಣ.
“ನಮ್ಮ ಧರ್ಮವು ಸುಭದ್ರವಾಗಿ ಇದ್ದಲ್ಲಿ ಮಾತ್ರ ನಮ್ಮ ದೇಶದಲ್ಲಿ ಶಾಂತಿಯೂ ಸಮೃದ್ಧಿಯೂ ಇರಬಲ್ಲವು. ನಮ್ಮ ಧರ್ಮವನ್ನು ರಕ್ಷಿಸಿಕೊಳ್ಳುವ ಹೊಣೆ ನಮಗೆ ಹುಟ್ಟಿನೊಡನೆಯೆ ಬಂದಿರುತ್ತದೆ. ಆದುದರಿಂದ ಸ್ತ್ರೀ-ಪುರುಷ ಬಾಲ-ವೃದ್ಧ ಭೇದವಿಲ್ಲದೆ ಎಲ್ಲರೂ ಸದಾ ಸ್ವಧರ್ಮರಕ್ಷಣೆಗೆ ಸಿದ್ಧರಾಗಿರಬೇಕಾಗುತ್ತದೆ. ಧರ್ಮವನ್ನು ಅಲಕ್ಷಿಸುವುದು ಆತ್ಮಹತ್ಯೆಗೆ ಸಮವಾಗುತ್ತದೆ. ಹೀಗಾಗಿ ಬೇರಾರೋ ಬಂದು ಕಾಪಾಡಲಿ ಎಂದು ಕೈಚೆಲ್ಲಿ ಕುಳಿತಿರದೆ ಎಲ್ಲ ಪ್ರಜೆಗಳೂ ಸ್ವದೇಶರಕ್ಷಣೆಗಾಗಿ ಪ್ರಯತ್ನಶೀಲರಾಗಿರಬೇಕು.”
ಎಲ್ಲರಿಗೂ ಶರೀರವ್ಯಾಯಾಮವನ್ನೂ ಶೌರ್ಯತಂತ್ರಗಳನ್ನೂ ಕಲಿಸಲು ಅನುಭವಿ ಸೈನಿಕರನ್ನು ಅಜಿತಸಿಂಹನು ನೇಮಿಸಿದ. ಹೀಗೆ ಒಂದು ಪ್ರದೇಶವನ್ನು ಸುವ್ಯವಸ್ಥೆಗೊಳಿಸಿದ ಮೇಲೆ ಬೇರೆ ಗ್ರಾಮಗಳಿಗೆ ತೆರಳುತ್ತಿದ್ದ. ಈ ಯೋಜನೆಯಿಂದಾಗಿ ಪ್ರಜೆಗಳೆಲ್ಲ ಜಾಗೃತರಾದರು. ಮ್ಲೇಚ್ಛರಾರೂ ಗ್ರಾಮವನ್ನು ಪ್ರವೇಶಿಸಗೊಡುತ್ತಿರಲಿಲ್ಲ. ಜನರಲ್ಲಿ ವೀರ್ಯವಂತಿಕೆ ಬೆಳೆಯಿತು.
ಗಡಿಗಳನ್ನು ಭದ್ರಪಡಿಸಿದ ಮೇಲೆ ಅಜಿತಸಿಂಹನು ಹೊರಗಿನ ಆಸುಪಾಸಿನ ರಾಜ್ಯಗಳಿಗೂ ಹೋಗಿ ಅಲ್ಲಿ ಯಾರಾದರೂ ಮ್ಲೇಚ್ಛರಿಗೆ ಆಸರೆಯಿತ್ತಲ್ಲಿ ಯುದ್ಧವನ್ನು ಎದುರಿಸಬೇಕಾದೀತು ಎಂದು ಎಚ್ಚರಿಸಿದ.
ಸ್ಥಳೀಯರೊಡನೆ ಬೆರೆತುಹೋಗಿ ನೆಲೆಗೊಂಡಿದ್ದ ಮ್ಲೇಚ್ಛರನ್ನೂ ಪತ್ತೆಹಚ್ಚಿ ಸಂಹರಿಸಿದ. ಇದೆಲ್ಲದರ ಪರಿಣಾಮವಾಗಿ ಜನರ ದೃಷ್ಟಿ ಪರಿವರ್ತನೆಗೊಂಡು ದೇಶಭಕ್ತಿ ಉದ್ದೀಪಿತವಾಯಿತು; ಸನಾತನಧರ್ಮದಲ್ಲಿ ಶ್ರದ್ಧೆ ಬಲಗೊಂಡಿತು. ಮ್ಲೇಚ್ಛರ ಆಕ್ರಮಣದಿಂದ ತಮ್ಮನ್ನು ಉದ್ಧರಿಸಲು ಬಂದ ವೀರನೆಂದು ಅಜಿತಸಿಂಹನನ್ನು ಈಶ್ವರಾವತಾರವೆಂದೇ ಜನರು ಪರಿಗಣಿಸಿದರು; `ಖಡ್ಗಧಾರಿ ದೇವತೆ’ ಎಂದೆಲ್ಲ ಅವನ ಮೇಲೆ ಪ್ರಶಂಸೆಯ ಮಳೆಗರೆದರು.
ಈ ಪರಿವರ್ತನೆಯಿಂದಾಗಿ ಅಂಧಯುಧಿಷ್ಠಿರನ ಆಸ್ಥಾನ ಪರಿವಾರದೊಳಕ್ಕೆ ನುಸುಳಿಕೊಂಡಿದ್ದ ಮ್ಲೇಚ್ಛಾಭಿಮಾನಿಗಳಿಗೆ ಆತಂಕ ಉಂಟಾಯಿತು. ಅವರು ಸಂದಿಗ್ಧತೆಗೆ ಸಿಲುಕಿದರು. ಒಂದುಕಡೆ ಅಜಿತಸಿಂಹನನ್ನು ಟೀಕಿಸುವಂತಿಲ್ಲ; ಏಕೆಂದರೆ ಅವನು ಮಾಡುತ್ತಿದ್ದುದು ದೇಶಕಾರ್ಯ ಮತ್ತು ಆತನು ಬೋಧಿಸುತ್ತಿದ್ದವು ಆಧ್ಯಾತ್ಮಿಕ ತತ್ತ್ವಗಳನ್ನು. ಇನ್ನೊಂದು ಕಡೆ ಮ್ಲೇಚ್ಛ ಪ್ರಾಬಲ್ಯಕ್ಕೆ ಆಸ್ಪದವೇ ಇಲ್ಲದಂತಾಗಿತ್ತು. ಈ ಸ್ಥಿತಿಯನ್ನು ಎದುರಿಸಲು ಅವರು ಕುಟಿಲೋಪಾಯ ಹೂಡಿದರು; ಮಹಾರಾಜನ ಮನಸ್ಸಿನಲ್ಲಿ ವಿಷಬೀಜವನ್ನು ನೆಟ್ಟರು:
“ಮಹಾರಾಜರೆ! ಅಜಿತಸಿಂಹನು ದೇಶಭಕ್ತನೆಂಬಂತೆ ನಟಿಸುತ್ತಿದ್ದಾನೆ. ಆದರೆ ಆಂತರ್ಯದಲ್ಲಿ ಅವನು ದ್ರೋಹಿ. ಪ್ರಜೆಗಳನ್ನೆಲ್ಲ ತನ್ನ ಕಡೆಗೆ ಒಲಿಸಿಕೊಳ್ಳಲು ಯತ್ನಿಸುತ್ತಿದ್ದಾನೆ. ಜನರಿಗೆಲ್ಲ ಸೈನಿಕ ಶಿಕ್ಷಣ ಕೊಡಿಸುತ್ತಿದ್ದಾನೆ. ಇದೆಲ್ಲ ಮುಂದೆಂದೋ ಒಂದುದಿನ ತಮಗೆ ವಿರುದ್ಧವಾಗಿ ಎದುರುಬೀಳುವುದಕ್ಕಾಗಿಯೆ.”
ಮೊದಮೊದಲು ರಾಜನು ಇವರ ಮಾತುಗಳನ್ನು ನಂಬಲಿಲ್ಲ. ಏಕೆಂದರೆ ಇದುವರೆಗೆ ನೋಡಿದುದರಲ್ಲಿ ಅಜಿತಸಿಂಹನ ರಾಜಭಕ್ತಿಯನ್ನು ಶಂಕಿಸಲು ಕಾರಣ ಕಂಡಿರಲಿಲ್ಲ.
ಆದರೆ ಪದೇಪದೇ ಪ್ರಹಾರ ಬೀಳುತ್ತಿದ್ದರೆ ಕಬ್ಬಿಣವೂ ನುಗ್ಗಾಗುತ್ತದಷ್ಟೆ. ಇನ್ನು ಅಂಧಯುಧಿಷ್ಠಿರನದು ಯಾವ ಲೆಕ್ಕ!
ಯಾವ `ಅಪರಾಧ’ಕ್ಕಾಗಿ ಅಜಿತಸಿಂಹನನ್ನು ಬಂಧಿಸಬಹುದು – ಎಂಬುದು ರಾಜನನ್ನು ಮಾತ್ರವಲ್ಲದೆ ಮ್ಲೇಚ್ಛರನ್ನೂ ಕಾಡಿತು.
ಇಷ್ಟರಲ್ಲಿ ರಾಜನಿಗೆ ಸುದ್ದಿ ತಲಪಿತು – ದೇಶದ ಮೇಲೆ ಎರಗಿದ್ದ ಮ್ಲೇಚ್ಛರನ್ನು ನಿರ್ಮೂಲ ಮಾಡಿದ ಮೇಲೆ ಅಜಿತಸಿಂಹನು ರಾಜಧಾನಿಗೆ ಬರುತ್ತಿದ್ದಾನೆ – ಎಂದು.
ಈ ವಾರ್ತೆಯು ರಾಜಧಾನಿಯಲ್ಲಿ ವೇಷಮರೆಸಿಕೊಂಡು ಅಡಗಿದ್ದ ಮ್ಲೇಚ್ಛರನ್ನು ಗದಗುಟ್ಟಿಸಿತು. ಅಜಿತಸಿಂಹನು ಬಂದನೆಂದರೆ ತಮ್ಮ ಆಟ ಹೇಗೆ ಮುಂದುವರಿದೀತು? ಏನಾದರೂ ಮಾಡಿ ಅಜಿತಸಿಂಹನು ರಾಜಧಾನಿಯನ್ನು ತಲಪುವುದಕ್ಕೆ ಮೊದಲೇ ಅವನನ್ನು ಸಂಹರಿಸಬೇಕು. ಇಲ್ಲವೆ ಅವನು ಬಂದೊಡನೆ ಅವನನ್ನು ಹೇಗಾದರೂ ಕಾರಾಗೃಹಕ್ಕೆ ತಳ್ಳುವಂತೆ ಆಗಬೇಕು.
ಎದುರಿಗೆ ಬಂದ ಎಲ್ಲವನ್ನೂ ಅಗ್ನಿಯು ದಹಿಸುವಂತೆ ಅಜಿತಸಿಂಹನು ತನ್ನ ಹತ್ಯೆಗೆ ಯತ್ನಿಸಿದ್ದವರನ್ನು ಸಂಹಾರ ಮಾಡಿದ. ಕೊಲ್ಲುವುದಕ್ಕೆ ಮುಂಚೆ ಅವರನ್ನು ಈ ಕಾರ್ಯಕ್ಕೆ ನಿಯೋಜಿಸಿದ್ದವರು ಯಾರೆಂಬುದನ್ನೂ ಹಂತಕರಿಂದ ತಿಳಿದುಕೊಂಡ.
ತಮ್ಮ ಪ್ರಯತ್ನಗಳು ವಿಫಲಗೊಂಡ ಮೇಲೆ ರಾಜಧಾನಿಯಲ್ಲಿ ಅಲ್ಲಲ್ಲಿ ಅವಿತಿದ್ದ ಮ್ಲೇಚ್ಛರೆಲ್ಲ ಪಲಾಯನ ಮಾಡಿ ಜೀವ ಉಳಿಸಿಕೊಳ್ಳಲು ಸಿದ್ಧರಾದರು.
ಇಷ್ಟರಲ್ಲಿ ಒಂದು ದುರದೃಷ್ಟಕರ ಘಟನೆ ನಡೆಯಿತು. ತರುಣಗಿರಿಯಲ್ಲಿ ಮ್ಲೇಚ್ಛರ ಸಹಾನುಭೂತಿ ತಳೆದಿದ್ದ ಒಬ್ಬ ದಂಪತಿಗಳ ಮೂಕ ಮಗ ಅಜಿತಸಿಂಹನಿಂದ ಹತನಾದ. ಈ ಸಂದರ್ಭವನ್ನು ಬಳಸಿಕೊಂಡು ಮ್ಲೇಚ್ಛಪರ ಅಧಿಕಾರಿವರ್ಗದವರು ಗದ್ದಲವೆಬ್ಬಿಸಿದರು. ರಾಜನಿಗೆ ಮದ್ಯಪಾನ ಮಾಡಿಸಿ ಅವನು ಮತ್ತಸ್ಥಿತಿಯಲ್ಲಿದ್ದಾಗ ಅವನ ಕಿವಿಯನ್ನು ಊದಿದರು: “ಮಹಾರಾಜರೆ! ಮ್ಲೇಚ್ಛರನ್ನು ಹೊರಗಟ್ಟುವ ನೆವದಲ್ಲಿ ಅಜಿತಸಿಂಹನು ತನ್ನ ಪಾಶವೀ ಪ್ರವೃತ್ತಿಯನ್ನು ತೃಪ್ತಿಪಡಿಸಿಕೊಳ್ಳುತ್ತಿದ್ದಾನೆ. ನಿರಪರಾಧಿ ಪ್ರಜೆಗಳನ್ನು ಹಿಂಸಿಸುತ್ತಿದ್ದಾನೆ. ಪ್ರಜೆಗಳಿಗೆ ಸ್ವಾತಂತ್ರ್ಯವೇ ಇಲ್ಲದಂತೆ ಮಾಡಿದ್ದಾನೆ. ಅದಕ್ಕೆ ಮೃತಿಹೊಂದಿರುವ ಈ ಬಾಲಕನೇ ಸಾಕ್ಷಿ.”
ಇದರ ಜೊತೆಗೆ ಬೇರೆ ಗ್ರಾಮಗಳಲ್ಲಿಯೂ ಇಂತಹ ಪ್ರಕರಣಗಳು ನಡೆದಿವೆಯೆಂದು ಕಥೆಕಟ್ಟಿ ಅಜಿತಸಿಂಹನಮೇಲೂ ಅವನ ಸೇನೆಯ ಮೇಲೂ ಆರೋಪಗಳನ್ನು ಮಾಡತೊಡಗಿದರು. ಇದನ್ನು ಬಲವಾಗಿ ಪ್ರಚಾರಮಾಡತೊಡಗಿದರು. ಕೂಟಸಾಕ್ಷ್ಯ ಗಳನ್ನು ನಿರ್ಮಾಣ ಮಾಡಿದರು. ಅಜಿತಸಿಂಹನದು ರಾಕ್ಷಸಸೇನೆ ಎಂಬ ಭಾವನೆಯನ್ನು ಮೂಡಿಸಿದರು. ಮಹಾರಾಜನೂ ಈ ದುಷ್ಟ್ರಚಾರಕ್ಕೆ ಬಲಿಬಿದ್ದ.
ಈ ಬೆಳವಣಿಗೆಗಳನ್ನು ಅರಿಯದ ಅಜಿತಸಿಂಹನು ತನ್ನ ವಿಧಿವಿಹಿತ ಕರ್ತವ್ಯವನ್ನು ಪೂರೈಸಿದ್ದ ಸಂತೃಪ್ತಿಭಾವದಲ್ಲಿ ರಾಜಧಾನಿಯನ್ನು ಪ್ರವೇಶಿಸಿದ. ಅವನು ನಿರೀಕ್ಷಿಸಿದ್ದ ಸ್ವಾಗತಕ್ಕೆ ಬದಲಾಗಿ ಅವನಿಗೆ ಎದುರಾದದ್ದು ಸಂಕೋಲೆಗಳು, ನಿಂದನೆಗಳು! ಇದು ಅವನನ್ನು ನಿರ್ವಿಣ್ಣನನ್ನಾಗಿಸಿತು. ಅಷ್ಟೊಂದು ಶ್ರಮಪಟ್ಟು ಮ್ಲೇಚ್ಛರನ್ನು ದೇಶದಿಂದ ಹೊರಗಟ್ಟಿದುದಕ್ಕೆ ಇದೇ ಪ್ರತಿಫಲವೆ?
ಆದರೆ ಅಜಿತಸಿಂಹನ ಮನಸ್ಸಿನಲ್ಲಿ ಯಾರ ಬಗೆಗೂ ದ್ವೇಷಭಾವನೆ ಇರಲಿಲ್ಲ. ತಾನು ಕರ್ತವ್ಯವನ್ನು ನಿರ್ವಹಿಸಿದೆನೆಂಬ ಸಮಾಧಾನವಿದ್ದಿತು. ಅದಕ್ಕೆ ಇದೇ ಪ್ರತಿಫಲವಾದರೆ ಅದು ದೈವೇಚ್ಛೆ. ಇನ್ನೊಂದು ಯೋಚನೆಯೂ ಅವನಲ್ಲಿ ಹಾದುಹೋಯಿತು; ಇದುವರೆಗೆ ಹೊರಗಿನ ಶತ್ರುಗಳ ಮೇಲೆ ಗೆಲವು ಸಾಧಿಸಿದ್ದ ತಾನು ಇನ್ನು ಮುಂದೆ ರಾಜ್ಯದ ಒಳಗೇ ನಿಕ್ಷಿಪ್ತರಾಗಿದ್ದ ಅಂತಃಶತ್ರುಗಳ ಮೇಲೆ ಹೋರಾಟ ನಡೆಸಬೇಕಾಗಿದೆ – ಎನಿಸಿತು. ಅಜಿತಸಿಂಹನು ಸಮಾಧಾನಚಿತ್ತನಾಗಿಯೇ ಸೆರೆಮನೆಯನ್ನು ಪ್ರವೇಶಿಸಿದ.
ಅಜಿತಸಿಂಹನು ಮಾಡಿದ್ದ ದೊಡ್ಡ ಸಾಧನೆಯ ಅರಿವಿದ್ದ ಸಾರ್ವಜನಿಕರಿಗೆ ಮಹಾರಾಜನು ಅಜಿತಸಿಂಹನನ್ನು ಬಂಧನಕ್ಕೆ ಒಳಪಡಿಸಿದುದರ ಬಗೆಗೆ ಅಸಂತೋಷ ಉಂಟಾಗಿತ್ತು. ಪ್ರಜೆಗಳು ಮೌನವಾಗಿ ರೋದಿಸಿದರು. ದೇಶಭಕ್ತಿಗೆ ಈಗ ಬೆಲೆಯೇ ಇಲ್ಲವೆ?
ರಾಜಸಭೆಯಲ್ಲಿ ಅಜಿತಸಿಂಹನ ವಿಚಾರಣೆ ಉಪ ಕ್ರಮಗೊಂಡಿತು. ಅಜಿತಸಿಂಹನು ತಮ್ಮ ಮೇಲೆ ಅತ್ಯಾಚಾರಗಳನ್ನೆಸಗಿದ್ದನೆಂದು ಮ್ಲೇಚ್ಛರು ಸಾಕ್ಷ್ಯಗಳನ್ನು ಪ್ರದರ್ಶಿಸಿದರು. ಆ ಕೆಲವು ಆರೋಪಗಳಲ್ಲಿ ಸ್ವಲ್ಪಮಟ್ಟಿನ ತಥ್ಯ ಇದ್ದರೂ ಅದರ ಹಿಂದಿದ್ದ ದೃಷ್ಟಿಕೋನ ಪೂರ್ತಿ ತಪ್ಪಾಗಿತ್ತು – ಎಂಬುದು ಎಲ್ಲರಿಗೂ ತಿಳಿದಿತ್ತು. ಆದರೆ ನ್ಯಾಯಸ್ಥಾನದಲ್ಲಿ ವೇದವೇ ಸುಳ್ಳೆನಿಸಿಬಿಡಬಹುದು. ತನ್ನ ಮೇಲೆ ಮಾಡಲಾಗುತ್ತಿದ್ದ ಆರೋಪಗಳನ್ನು ಕೇಳಿ ಅಜಿತಸಿಂಹನು ಮುಗುಳ್ನಕ್ಕ, ಅಷ್ಟೆ.
ಅಜಿತಸಿಂಹನ ಕಾರ್ಯಾಚರಣೆಗಳಿಂದಾಗಿ ನಷ್ಟವನ್ನನು ಭವಿಸಿದ್ದ ಮ್ಲೇಚ್ಛ ಕುಟುಂಬಗಳಿಗೆ ಮಹಾರಾಜನು ಪರಿಹಾರ ಸಂದಾಯ ಮಾಡಿಸಿದ. ಅಂದರೆ ಮಹಾರಾಜನು ಅಜಿತಸಿಂಹನ ವಿರುದ್ಧದ ಆರೋಪಗಳನ್ನು ನಂಬಿದಂತೆಯೆ ಆಯಿತು – ಎಂದುಕೊಂಡರು, ಜನರು. ಆದರೂ ಮ್ಲೇಚ್ಛರ ದುರ್ವರ್ತನೆಗಳಿಂದ ನಷ್ಟಗೊಂಡಿದ್ದ ಸ್ಥಳೀಯರಿಗೆ ಪರಿಹಾರ ದೊರೆಯಬೇಡವೆ? ತಾವೆಲ್ಲ ಮನುಷ್ಯರಲ್ಲವೆ? ಮ್ಲೇಚ್ಛರನ್ನು ಎದುರಿಸುವಾಗ ಹತರಾದ ಸೈನಿಕರ ಕುಟುಂಬಗಳಿಗೆ ಪರಿಹಾರ ದೊರೆಯಬೇಡವೆ? ದೇಶದ್ರೋಹಿಗಳಿಗೆ ರಾಜಾಶ್ರಯ; ದೇಶದ್ರೋಹಿಗಳ ವಿರುದ್ಧ ಸೆಣೆಸಿದವರಿಗೆ ದಂಡನೆ – ಇದು ನ್ಯಾಯವೆ?
ವಾಸ್ತವವನ್ನು ಅರಿತಿದ್ದ ಪ್ರಜೆಗಳ ಮನಸ್ಸು ಅಸಮಾಧಾನ ದಿಂದ ಕುದಿಯುತ್ತಿತ್ತು. ಮ್ಲೇಚ್ಛರ ಪ್ರಭಾವಕ್ಕೆ ಸಿಲುಕಿದ ಮಹಾರಾಜನ ಪಡೆಗಳವರು ಅಜಿತಸಿಂಹನ ಮೇಲೆ ಮಾತ್ರವಲ್ಲದೆ ಅವನ ಸೈನಿಕರ ಮೇಲೆಯೂ `ಪ್ರಜಾಹಿಂಸೆ’ಯ ಆರೋಪ ಹೊರಿಸಿ ಅವರನ್ನೂ ಸೆರೆಯಲ್ಲಿಟ್ಟರು. ಗ್ರಾಮಗಳಲ್ಲಿ ಸಭ್ಯ ಜನರಲ್ಲಿ ಇದ್ದ ಆಯುಧಗಳನ್ನೂ ರಾಜಭಟರು ಸ್ವಾಧೀನ ಪಡಿಸಿಕೊಂಡರು. ಹೀಗೆ ಮ್ಲೇಚ್ಛರ ದಾಳಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಯತ್ನಿಸುವುದೂ ರಾಜದ್ರೋಹ ಎನಿಸಿಬಿಟ್ಟಿತು. ಸಹಜವಾಗಿ ಪ್ರಜೆಗಳು ಉದ್ವೇಗಗೊಂಡರು.
ರಾಜಸಭೆಯಲ್ಲಿ ಅಜಿತಸಿಂಹನ ವಿರುದ್ಧದ ಆರೋಪಗಳು ನಿರೂಪಣೆಗೊಂಡವು. ಅಜಿತಸಿಂಹನು ಮುಗ್ಧಪ್ರಜೆಗಳನ್ನು ಹಿಂಸಿಸಿ ಅವರ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದನೆಂಬುದು ಒಂದು ಆರೋಪವಾದರೆ ಪ್ರಜೆಗಳಿಗೆ ಸೈನಿಕ ಶಿಕ್ಷಣವನ್ನಿತ್ತು ಅವರನ್ನು ರಾಜಾಧಿಕಾರದ ವಿರುದ್ಧ ಎತ್ತಿಕಟ್ಟಿದ್ದನೆಂಬುದು ಇನ್ನೊಂದು ಆರೋಪ. ಮೊದಲ `ಅಪರಾಧ’ಕ್ಕೆ ಸಾಕ್ಷಿಗಳಾಗಿ ಅಜಿತಸಿಂಹನ ಚರ್ಯೆಗಳಿಂದ ತ್ರಾಸಗೊಂಡಿದ್ದ ಕುಟುಂಬಗಳನ್ನು ತೋರಿಸಿದರೆ ಎರಡನೆ `ಅಪರಾಧ’ಕ್ಕೆ ಪ್ರಜೆಗಳಿಂದ ವಶಪಡಿಸಿಕೊಂಡಿದ್ದ ಆಯುಧಗಳನ್ನು ಪುರಾವೆಗಳಾಗಿ ತೋರಿಸಲಾಯಿತು.
ಮಹಾರಾಜನು ತೀರ್ಪನ್ನು ಘೋಷಿಸುವುದಕ್ಕೆ ಮೊದಲು ಔಪಚಾರಿಕವಾಗಿ ಅಜಿತಸಿಂಹನಿಂದ ವಿವರಣೆಯನ್ನು ಕೋರಿದ.
ಅಜಿತಸಿಂಹನು ಮುಗುಳ್ನಕ್ಕು ಹೇಳಿದ:
“ಅಪರಾಧಗಳಲ್ಲಿ ಎರಡು ಬಗೆಯವು ಇರುತ್ತವೆ: ಒಂದು ನಿಷಿದ್ಧ ಕಾರ್ಯಗಳನ್ನು ಆಚರಿಸುವುದು; ಎರಡನೆಯದು ವಿಧ್ಯುಕ್ತ ಕರ್ತವ್ಯಗಳಿಂದ ವಿಮುಖರಾಗುವುದು.
ಅಥ ಚೇತ್ತ್ವಮಿಮಂ ಧರ್ಮ್ಯಂ
ಸ್ವಧರ್ಮವನ್ನೂ ಕರ್ತವ್ಯವೆನಿಸಿದ ಧರ್ಮಯುದ್ಧವನ್ನೂ ಮಾಡದಿದ್ದಲ್ಲಿ ಧರ್ಮಗ್ಲಾನಿಯಾಗುತ್ತದೆ. ಕರ್ತವ್ಯಲೋಪ ಮಾಡಿದರೆ ಪಾಪವನ್ನೆಸಗಿದಂತೆ ಆಗುತ್ತದೆಂಬುದು ದೈವಾಜ್ಞೆ.
ನಾನು ನನ್ನ ಕರ್ತವ್ಯ ನಿರ್ವಹಣೆಯಲ್ಲಿ ಯಾರನ್ನೂ ದ್ವೇಷಿಸಿಲ್ಲ, ಯಾರನ್ನೂ ಅತಿಶಯವಾಗಿ ಬೆಂಬಲಿಸಿಯೂ ಇಲ್ಲ. ನಾನು ನಿರ್ದಾಕ್ಷಿಣ್ಯವಾಗಿ ವರ್ತಿಸದಿದ್ದಲ್ಲಿ ಮ್ಲೇಚ್ಛರನ್ನು ನಿಯಂತ್ರಿಸುವುದು ಸಾಧ್ಯವಾಗುತ್ತಿರಲಿಲ್ಲ. ಕೈಯಲ್ಲಿ ಕತ್ತಿ ಹಿರಿದು ಸಾಯಿಸಲು ಬಂದವರ ಮೇಲೆ ಶಾಂತಿವಚನಗಳು ಯಾವ ಪರಿಣಾಮವನ್ನೂ ಬೀರಲಾರವು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕಾಗುತ್ತದೆ. ದೇಶದೊಳಗಿಂದ ಆಕ್ರಮಕ ಮ್ಲೇಚ್ಛರನ್ನು ಹೊರಗಟ್ಟಿ ದೇಶವನ್ನು ಶಕ್ತಿವಂತವಾಗಿಸುವುದು ಈಶ್ವರಾಜ್ಞೆ ಎಂದು ಭಾವಿಸಿ ನನ್ನ ಕರ್ತವ್ಯವನ್ನು ನಾನು ನಿರ್ವಹಿಸಿದ್ದೇನೆ.
ರಾಗದ್ವೇಷಗಳಿಗೆ ಒಳಗಾಗದೆ, ಫಲಾಪೇಕ್ಷೆಯ ನಿರೀಕ್ಷೆಯಿಲ್ಲದೆ ಮಾಡುವ ವಿಧ್ಯುಕ್ತ ಕರ್ಮಾಚರಣೆಯು ಸಾತ್ತ್ವಿಕ ಕರ್ಮವೆಂದು ನಮ್ಮ ಧರ್ಮಶಾಸ್ತ್ರ ಹೇಳಿದೆ. ನಾನು ನನ್ನ ಧರ್ಮವನ್ನು ಪಾಲಿಸಿದ್ದೇನೆ.
ನಿಃಸ್ವಾರ್ಥಬುದ್ಧಿ ತಳೆದು ಪ್ರಜೆಗಳ ರಕ್ಷಣೆ ಮಾಡುವುದರಲ್ಲಿ ಒಂದಷ್ಟುಮಟ್ಟಿಗೆ ಹಿಂಸೆಯು ನಡೆದರೆ ಅದರಿಂದ ಕಳಂಕ ಬಾರದೆಂಬುದು ಧರ್ಮಶಾಸ್ತ್ರದ ಬೋಧೆ ಇದೆ.
ಮ್ಲೇಚ್ಛರ ಆಕ್ರಮಣ ಬಿರುಗಾಳಿಯ ರೀತಿಯದು. ಅದನ್ನು ಬಿರುಗಾಳಿಯ ರೀತಿಯಲ್ಲಿಯೆ ಎದುರಿಸಬೇಕು. ಬಿರುಗಾಳಿಗೆ ಸಿಲುಕಿ ಹಲವು ಮರಗಳೂ ಪ್ರಾಣಿಗಳೂ ಸಾಯುವಂತೆ ಮನುಷ್ಯ ಪ್ರಜೆಗಳೂ ಸಾಯುತ್ತಾರೆ. ಅದು ಪ್ರಕೃತಿಸ್ವಭಾವ. ಇದು ನನ್ನ ಮೇಲಿನ ಮೊದಲ ಆರೋಪಕ್ಕೆ ಪ್ರತ್ಯುತ್ತರ. ನನ್ನ ಅಂತರಂಗದಲ್ಲಿ ರಾಜದ್ರೋಹದ ಆಲೋಚನೆ ಇರಲಿಲ್ಲವೆನ್ನಲು ಇಂದಿಗೂ ಇದೇ ನಿದರ್ಶನ.”
ಹೀಗೆ ಹೇಳುತ್ತ ಥಟ್ಟನೆ ಪಕ್ಕದಲ್ಲಿದ್ದ ಭಟನ ಮೇಲೆರಗಿ ಅವನ ಒರೆಯಲ್ಲಿದ್ದ ಕತ್ತಿಯನ್ನು ಹೊರಗೆಳೆದು ಅಜಿತಸಿಂಹನು ತನ್ನ ಎದೆಯೊಳಕ್ಕೇ ಇಳಿಸಿಕೊಂಡ.
ಎಲ್ಲೆಡೆ ನಿಃಶ್ಶಬ್ದ ಆವರಿಸಿತು. ನೋಡುನೋಡುತ್ತಿದ್ದಂತೆ ಪ್ರಜೆಗಳು ಆವೇಶಗೊಂಡರು. ಅದುವರೆಗೆ ಅಣಗಿಸಿಕೊಂಡಿದ್ದ ಕ್ರೋಧ ಈಗ ಕಟ್ಟೆಯೊಡೆಯಿತು.
ಆ ವಿಸ್ಫೋಟಕ್ಕೆ ಕಶ್ಮೀರದಲ್ಲಿದ್ದ ಮ್ಲೇಚ್ಛರು ದಗ್ಧಗೊಂಡರು. ಅಂಧ ಯುಧಿಷ್ಠಿರನ ಸಿಂಹಾಸನವೇ ಕಂಪಿಸತೊಡಗಿತು.
ಆಕ್ರೋಶಗೊಂಡ ಪ್ರಜೆಗಳಿಗೆ ಎದುರಾಗಿ ರಾಜಭಟರು ಪೂರ್ಣ ನಿಸ್ತೇಜರಾದರು.
ಪ್ರಜಾಸ್ತೋಮವು ರಾಜಭವನವನ್ನು ಸುತ್ತುವರಿಯಿತು. ರಾಜಭಟರು ಚೆಲ್ಲಾಪಿಲ್ಲಿಯಾದರು. ರಾಜನ ಸಲಹೆಗಾರರಾಗಿದ್ದವರು ಹೇಳಹೆಸರಿಲ್ಲವಾದರು. ಅವರಲ್ಲಿ ಕೈಗೆ ಸಿಕ್ಕಿದ ಹಲವರ ಕೈಗಳನ್ನು ಉದ್ರಿಕ್ತ ಜನರು ಕತ್ತರಿಸಿಹಾಕಿದರು.
ಕೆಲವೇ ನಿಮಿಷಗಳಲ್ಲಿ ಕಶ್ಮೀರದ ಬೀದಿಗಳು ರಣರಂಗ ವಾದವು. ಗ್ರಾಮಗಳಲ್ಲಿಯೂ ಅದೇ ದೃಶ್ಯ ಏರ್ಪಟ್ಟಿತು.
ಪ್ರಜೆಗಳ ಮನಃಸ್ಥಿತಿಯನ್ನು ಗ್ರಹಿಸಿದ ಉಗ್ರಸೇನನು ಅಂಧಯುಧಿಷ್ಠಿರನಿಗೆ ಕೂಡಲೆ ರಾಜ್ಯದಿಂದ ದೂರ ಹೋಗಿ ತನ್ನನ್ನು ರಕ್ಷಿಸಿಕೊಳ್ಳುವಂತೆ ಸಲಹೆ ಮಾಡಿದ. ಹೇಳಿದ್ದ ಹಿತವಾದಗಳನ್ನು ಅಲಕ್ಷಿಸಿ ಸನಾತನಧರ್ಮವನ್ನು ನಿರೋಧಿಸಿದ್ದುದಕ್ಕೆ ರಾಜನು ಬೆಲೆ ತೆರುವಂತೆ ಆಯಿತು.
ರಾಜನೂ ರಾಜಕುಟುಂಬಿಕರೂ ಕಾಡಿನಲ್ಲಿ ತಲೆತಪ್ಪಿಸಿಕೊಂಡು ಇರುವಾಗ ಅಲ್ಲಿದ್ದವರು ಅವರನ್ನು ಹೀಗಳೆದು ನಿಂದಿಸಿದಾಗಲೂ ಅವರಾರೂ ಪ್ರತಿಭಟಿಸುವ ಸ್ಥಿತಿಯಲ್ಲಿ ಇರಲಿಲ್ಲ.
ದೇಶಭಕ್ತರ ತ್ಯಾಗವನ್ನು ಗುರುತಿಸದ ಮಂದದೃಷ್ಟಿಯ ಪಾಲಕರ ಪಾಡು ಏನಾಗುತ್ತದೆಂಬುದನ್ನು ಯುಧಿಷ್ಠಿರನ ಪ್ರಸಂಗವು ನಿದರ್ಶನ ಪಡಿಸಿತು. ಯುಧಿಷ್ಠಿರನ ತರುವಾಯ ರಾಜವಂಶಕ್ಕೆ ಸೇರಿದ ಪ್ರತಾಪಾದಿತ್ಯನೆಂಬವನಿಗೆ ಉಗ್ರಸೇನನು ಪಟ್ಟಾಭಿಷೇಕ ಮಾಡಿಸಿದ. ಅವನು ಧರ್ಮಬದ್ಧವಾಗಿ ೩೨ ವರ್ಷ ಆಳಿದ ಮೇಲೆ ಅವನ ಪುತ್ರ ಜಲೌಕನು ರಾಜನಾಗಿ ೩೨ ವರ್ಷ ರಾಜ್ಯಭಾರ ಮಾಡಿದ ಮೇಲೆ ಅವನ ಪುತ್ರ ತುಂಜೀನನೂ ಅವನ ರಾಣಿ ವಾಕ್
ಪುಷ್ಪಾ ದೇವಿಯೂ ದಕ್ಷತೆಯಿಂದ ಶಾಸನ ನಡೆಸಿ ಜನಾನುರಾಗಿಗಳಾದರು.
Comments are closed.