ನಿಧಾನ ಗತಿಯಿಂದ ಸಾಗುತ್ತಿತ್ತು ನಮ್ಮ ಪ್ರಯಾಣ. ಅಲ್ಲಲ್ಲಿ ಬೀಡು ಬಿಡುತ್ತ, ತೀರಾ ದಣಿವಾದಲ್ಲಿ, ಒಂದೊಂದು ಪೂರ್ತಿ ದಿನ ವಿಶ್ರಾಂತಿ ಪಡೆಯುತ್ತ, ಸೇನೆ ಮಂದ ವೇಗದಿಂದ ಮುಂದೆ ನಡೆಯುತ್ತಿತ್ತು. ಅಷ್ಟು ಮಂದಿಗೆ ಅಟ್ಟು ಉಣ್ಣುವುದಕ್ಕೆ ಹಾಗೂ ಶೌಚಕ್ಕೆ ಸಾಕಷ್ಟು ಕಾಲಾವಕಾಶ ಬೇಕಾಗುತ್ತಿತ್ತು. ಇದರಿಂದ ಪ್ರಯಾಣದ ಸಮಯ ಕಡಮೆಯಾಗಿ, ಉಣ್ಣುವುದು ಮತ್ತು ವಿಶ್ರಾಂತಿ ಪಡೆಯುವುದಕ್ಕೆ ಹೆಚ್ಚು ಕಾಲ ವ್ಯಯವಾಗತೊಡಗಿತು. ಈ ಕಾಲಹರಣ ಭೂಪತಿಗಳಿಗೆ ಅಸಮಾಧಾನ ಉಂಟುಮಾಡುತ್ತಿತ್ತು. ಆದರೆ ಏನೂ ಮಾಡುವ ಹಾಗಿರಲಿಲ್ಲ. ಆಹಾರ ಮತ್ತು ವಿಶ್ರಾಂತಿಗಳು ಕಡಮೆಯಾದರೆ ಸೈನಿಕರ ಯುದ್ಧಸಾಮರ್ಥ್ಯವೂ ಕುಂದುತ್ತಿತ್ತು. ಸೇನೆ ವಿ?ಣ್ಣತೆಯನ್ನು ಅನುಭವಿಸುವುದು ಸೋಲಿನ ಮೊದಲ ಹಂತ. ಅದನ್ನು ತಿಳಿದವರಾದುದರಿಂದ ಪ್ರಭುಗಳು ತಮ್ಮ ಅಸಮಾಧಾನವನ್ನು ಪ್ರಕಟಿಸಲಿಲ್ಲ. ಹಾಗೆಂದು ಅವರ ತುಮುಲ ನನ್ನ ಅರಿವಿಗೆ ಬರುತ್ತಿತ್ತು. ರಾಜಪುತ್ರ ರುಕ್ಮರಥನೂ ಇದನ್ನು ಬಲ್ಲವನೇ. ಅವನೂ ಸೇನೆ ವೇಗವಾಗಿ ಸಾಗುವಂತೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದ. ಗಮನದ ಗತಿ ನಿಧಾನವಾದುದರಿಂದ ಮಾರ್ಗಶಿರ ಮಾಸದ ಮುನ್ನ ನಾವು ಕುರುಕ್ಷೇತ್ರವನ್ನು ತಲಪುವುದು ಕಷ್ಟಸಾಧ್ಯವೆಂದು ಎಲ್ಲರಿಗೂ ತೋರತೊಡಗಿತು. ಮದ್ರದಿಂದ ಹೊರಡುವಾಗ ಇದ್ದ ಯುದ್ಧೋತ್ಸಾಹ ತಗ್ಗುತ್ತಿರುವುದು ಎಲ್ಲರ ಗಮನಕ್ಕೂ ಬರುವ ಹಾಗಿತ್ತು.
ಇಂತಹ ನಿರುತ್ಸಾಹದ ಮನೋಧರ್ಮದೊಂದಿಗೆ ಎರಡೂ ನದಿಗಳನ್ನು ದಾಟಿದೆವು. ಆಗಷ್ಟೇ ಮಳೆಗಾಲ ಹಿಂದಾಗಿತ್ತು. ನದಿಗಳು ತುಂಬಿಕೊಂಡು ರಭಸದಿಂದ ಹರಿಯುತ್ತಿದ್ದವು. ಈ ನದೀತರಣಕ್ಕೆ ಹಲವು ದಿನಗಳೇ ಬೇಕಾದವು. ಅಂತೂ ದಾಟಿದೆವು. ಆದರೆ ಸರಸ್ವತಿ ನದಿಯನ್ನು ದಾಟಿದ್ದೇ ತಡ, ಒಂದು ವಿಸ್ಮಯ ನಮಗಾಗಿ ಕಾದಿತ್ತು. ಆಚೆಯ ದಡದಲ್ಲಿ ನಮ್ಮ ಈ ಬೃಹತ್ ಸೇನೆಗೆ ವಿಶ್ರಾಂತಿಗೆ ಅನುಕೂಲವಾದ ಸಾಲುಸಾಲು ಡೇರೆಗಳು, ಆನೆ ಕುದುರೆಗಳನ್ನು ಮೇಯಿಸುವುದಕ್ಕೆ ಯಥೇಚ್ಛ ಹಸಿರು ಹುಲ್ಲುಸೊಪ್ಪು, ಕಟ್ಟುವುದಕ್ಕೆ ಅನುಕೂಲವಾಗುವಂತೆ ವಿಸ್ತಾರ ಬಯಲುಗಳು, ಯಾರೋ ಆಗಷ್ಟು ನಿರ್ಮಾಣ ಮಾಡಿಹೋದಂತೆ ಸಿದ್ಧವಾಗಿ ನಮ್ಮ ದಾರಿ ಕಾಯುತ್ತಾ ಇದ್ದವು. ಭೂಪತಿಗಳು ಸಹಿತ ನಾವೆಲ್ಲ ಚಕಿತರಾಗಿ ಹೋದೆವು. ಈ ಸುಸಜ್ಜಿತ ವ್ಯವಸ್ಥೆಯನ್ನು ಕಣ್ಣು ಬಾಯಿ ಬಿಟ್ಟು ನೋಡುತ್ತಿರುವಾಗ ಹಿಂದಿನಿಂದ ಹಿರಿಯ ರಾಜಪುತ್ರ ರುಕ್ಮರಥ ಕುದುರೆಯೊಂದನ್ನೇರಿ ಧಾವಿಸಿ ಬಂದ. ಭೂಪತಿಗಳ ಉತ್ತರಾಧಿಕಾರಿಯಾಗಿ ಮದ್ರದ ಸಿಂಹಾಸನವೇರಬೇಕಾದ ರುಕ್ಮರಥನಿಗೆ ಸೇನೆಯಲ್ಲಿ ವಿಶೇಷ ಪ್ರಾಮುಖ್ಯವಿತ್ತು. ಧಾವಿಸಿ ಬಂದ ರುಕ್ಮರಥನನ್ನು ನೋಡಿ ರಥ ನಿಲ್ಲಿಸುವಂತೆ ಭೂಪತಿಗಳು ಆಜ್ಞೆ ಮಾಡಿದರು. ನಾನು ರಥ ನಿಲ್ಲಿಸಿದೆ.
ಅಪ್ಪಾ, ನೋಡಿದಿರ ಇಲ್ಲಿನ ವ್ಯವಸ್ಥೆಯನ್ನು? ನಮ್ಮ ಸೈನಿಕರೇನೋ ಇದರ ಪ್ರಯೋಜನ ಪಡೆಯುವುದಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ಇದನ್ನು ನಾವು ಬಳಸಿಕೊಳ್ಳುವುದು ಉಚಿತವೇ ಎಂಬ ಸಂದೇಹ ಸೇನಾಪ್ರಮುಖರಿಗೆ ಬಂದಿದೆ. ಇದೆಲ್ಲ ಅಜ್ಞಾತ ಕರ್ತೃಕದಂತೆ ಕಾಣುತ್ತಿವೆ. ಆದರೆ ಯಾರೋ ನಮ್ಮ ಬರೋಣವನ್ನು ತಿಳಿದು ನಿರ್ದಿ?ವಾದ ಯಾವುದೋ ಉದ್ದೇಶಕ್ಕಾಗಿ ಹೀಗೆ ಮಾಡಿರುವಂತೆ ತೋರುತ್ತಿರುವುದರಿಂದ ಸಂಶಯ ಬಂದಿದೆ. ಏನು ಮಾಡೋಣ?”
ಅವನ ಪ್ರಶ್ನೆಗೆ ಉತ್ತರಿಸದೆ ಭೂಪತಿಗಳು ದೀರ್ಘಾಲೋಚನೆಯಲ್ಲಿ ಮುಳುಗಿದರು. ನನಗೆ ಏನೇನೂ ಅರ್ಥವಾಗಲಿಲ್ಲ. ಯಾರೋ ಇ?ಲ್ಲಾ ವೆಚ್ಚ ಮಾಡಿ ನಮ್ಮ ಮಹಾಸೈನ್ಯಕ್ಕೆ ಹೀಗೊಂದು ವ್ಯವಸ್ಥೆಯನ್ನು ಯಾಕಾದರೂ ಮಾಡಬೇಕು? ಇದರಿಂದ ಪ್ರಯೋಜನ ಪಡೆಯುವ ಅನುಕೂಲ ಇದ್ದವರು ತಾನೇ ಮಾಡುತ್ತಾರೆ? ಭೂಪತಿಗಳೂ ಹೀಗೆಯೇ ಯೋಚಿಸಿದ್ದರೆಂಬುದು ನನಗೆ ಆಮೇಲೆ ಅರ್ಥವಾಯಿತು. ಅವರ ಉತ್ತರವನ್ನು ನಿರೀಕ್ಷಿಸುತ್ತಾ ರುಕ್ಮರಥ ನಿಂತೇ ಇದ್ದ. ಭೂಪತಿಗಳು ತಲೆಯೆತ್ತಿದರು.
ಹೂಂ. ಇಲ್ಲಿ ಸೇವಕರು ಯಾರೂ ಇಲ್ಲವೇ? ಇದನ್ನೆಲ್ಲಾ ಮಾಡಿಸಿದವರು ಯಾರೆಂದು ಅವರಲ್ಲಿ ಕೇಳಿದೆಯಾ?”
ಸೇವಕರೇನೋ ಕೆಲವರಿದ್ದಾರೆ. ಆದರೆ ಅವರೆಲ್ಲಾ ಸ್ಥಳೀಯ ಜನ. ಹತ್ತಿರದ ಹಳ್ಳಿಯವರು. ಯಾರೋ ರಾಜಪುರುಷರು ಬಂದು ಸಂಭಾರಗಳನ್ನೆಲ್ಲಾ ಒದಗಿಸಿ ಹೀಗೆ ಏರ್ಪಾಡು ಮಾಡುವಂತೆ ನೇಮಿಸಿದರಂತೆ. ಯಥೇಚ್ಛ ಪ್ರತಿಫಲವನ್ನೂ ಮೊದಲೇ ಕೊಟ್ಟಿದ್ದಾರಂತೆ. ತಾವು ಯಾರೆಂದಾಗಲೀ, ಬರುವವರು ಯಾರೆಂದಾಗಲೀ ಅವರಿಗೆ ತಿಳಿಸಿಯೇ ಇಲ್ಲವೆನ್ನುತ್ತಾರೆ. ಯಾವುದೋ ಸೇನೆ ಬರಲಿದೆಯೆಂದು ಮಾತ್ರ ಹೇಳಿದ್ದರಂತೆ. ಈ ಹಳ್ಳಿಗರು ಇಷ್ಟು ಏರ್ಪಾಡು ಮಾಡಿ ನಿರೀಕ್ಷಿಸುತ್ತಾ ಕೂತಿದ್ದಾರಂತೆ. ಇದಕ್ಕಿಂತ ಹೆಚ್ಚು ಅವರಿಗೇನೂ ತಿಳಿದಿಲ್ಲ. ಎಷ್ಟು ಬಗೆಯಿಂದ ವಿಚಾರಿಸಿದರೂ ಅಷ್ಟೆ” – ರುಕ್ಮರಥ ಉತ್ತರಿಸಿದ. ಅಂದರೆ ಸದ್ಯ ನಿಮ್ಮ ಪ್ರಶ್ನೆಯಿರುವುದು ನಾವು ಇದನ್ನು ಉಪಯೋಗಿಸಬಹುದೇ ಅಥವಾ ಕೂಡದೇ ಎನ್ನುವುದು ಮಾತ್ರ ಅಲ್ಲವೇ? ಅಷ್ಟು ಸಾಲದು, ಇದರಿಂದೇನಾದರೂ ಅಪಾಯವಾದೀತೆ ಎಂಬ ದೃಷ್ಟಿಯಿಂದಲೂ ನಾವು ಆಲೋಚಿಸಬೇಕು. ಯಾಕೆ ಎಂದರೆ ಇದು ಯುದ್ಧಕಾಲ. ನಮಗಾಗಿಯೇ ಮಾಡಿರಲಿ ಅಥವಾ ಇನ್ನಾರಿಗೇ ಮಾಡಿರಲಿ, ಉಪಕಾರವೋ ಅಪಕಾರವೋ ತಿಳಿದುಕೊಳ್ಳದೆ ಉಪಯೋಗಿಸುವುದು ವಿಪತ್ಕಾರಿ. ತಿರಸ್ಕರಿಸುವುದು ಮೂರ್ಖತನ. ಯಾರು ಮಾಡಿರಬಹುದು ಎಂದು ಊಹಿಸುವುದು ಸಾಧ್ಯವಾದರೆ ಉಪಯೋಗದ ಕುರಿತು ಆಲೋಚಿಸಬಹುದು. ನಮ್ಮ ತರ್ಕವನ್ನು ಈ ದಿಕ್ಕಿನಲ್ಲಿ ಹರಿಸಬೇಕು. ನಾವು ಮದ್ರದಿಂದ ಹೊರಟುದು ತರಾತುರಿಯಿಂದ. ಉಳಿದವರಿಗಿರಲಿ, ಸೈನಿಕರಿಗೇ ಪೂರ್ವಭಾವಿ ಸೂಚನೆಯಿರಲಿಲ್ಲ. ಅಲ್ಲದೆ ಪಾಂಡವರ ನಿಮಂತ್ರಣದ ಮೇಲೆ ನಾವು ಬರುತ್ತಿದ್ದೇವೆ. ಅಂದರೆ ನಾವು ಮತ್ತು ಪಾಂಡುಪುತ್ರರ ವಿನಾ ಇನ್ನಾರಿಗೂ ಈ ಕುರಿತಾದ ತಿಳಿವಳಿಕೆ ಇರುವುದು ಅಸಾಧ್ಯ. ಹಾಗಿದ್ದ ಮೇಲೆ ಅವರೇ ಈ ಅನುಕೂಲ ಕಲ್ಪಿಸಿರಬಹುದೇ?” ಅಂದರೆ ಪಾಂಡುಪುತ್ರರೇ ಇದನ್ನೆಲ್ಲಾ ಮಾಡಿಸಿರಬಹುದೆನ್ನುತ್ತೀರಾ ಅಪ್ಪಾ?”
ಭೂಪತಿಗಳು ಯೋಚನೆಯಲ್ಲಿ ಮುಳುಗಿದವರು ಬಳಿಕ ನುಡಿದರು, ಏನಿದ್ದರೂ ಒಮ್ಮೆ ಪರಿಶೀಲಿಸಿ ನೋಡುವುದರಲ್ಲಿ ತಪ್ಪಿಲ್ಲ ತಾನೇ. ಸಾರಥಿ, ರಥವನ್ನು ಆ ದೊಡ್ಡ ಡೇರೆಯತ್ತ ಹೊಡೆ. ರುಕ್ಮ, ನೀನೂ ಉಳಿದ ಸೇನಾನಿಗಳೂ ಅಲ್ಲಿಗೆ ಬನ್ನಿ.” ಅವರ ಆಜ್ಞೆಯಂತೆ ರಥ ನಡೆಸಿದೆ. ನಾವು ನಿಂತದ್ದು ರಾಜಯೋಗ್ಯವಾದ ಬಿಡಾರದ ಬಾಗಿಲಲ್ಲಿ. ತಾತ್ಪೂರ್ತಿಕವಾದರೂ ಸುಂದರ ಹಾಗೂ ಸುಸಜ್ಜಿತವಾಗಿತ್ತು. ಅದನ್ನು ನೋಡುತ್ತಲೇ ಭೂಪತಿಗಳು ಸಂತು?ರಾದರು. ಒಳಗೆ ಹೊಕ್ಕು ಸರಿಯಾಗಿ ಪರಿಶೀಲಿಸುವಂತೆ ಅಂಗರಕ್ಷಕರಿಗೆ ಆದೇಶವಿತ್ತರು. ಅವರು ಕೂಲಂಕ?ವಾಗಿ ನೋಡಿ ಅಪಾಯವೇನೂ ಇಲ್ಲವೆಂದು ಬಿನ್ನವಿಸಿದ ಬಳಿಕ ಭೂಪತಿಗಳು ರಥವಿಳಿದರು. ಅವರು ಡೇರೆಯ ಒಳಗೆ ಪ್ರವೇಶಿಸುತ್ತಿದ್ದಂತೆ, ಪ್ರಮುಖ ದಳಪತಿಗಳೂ, ರುಕ್ಮರಥನೂ ಅಲ್ಲಿಗೆ ತಲುಪಿದರು. ಅವರೆಲ್ಲ ಒಳಗೆ ಹೋದರು. ನಾನು ರಥದ ಕುದುರೆಗಳನ್ನು ಬಿಚ್ಚಿ ವಿಶ್ರಮಿಸಲು ಬಿಟ್ಟು ಅಲ್ಲೇ ಕಾಯುತ್ತಾ ಕುಳಿತೆ. ಅ?ರಲ್ಲಿ ಸೈನಿಕರು ಹಳ್ಳಿಗನೊಬ್ಬನನ್ನು ಕರೆತಂದರು. ಅವನು ಈ ವ್ಯವಸ್ಥೆಗಳನ್ನು ಮಾಡುವಂತೆ ತಿಳಿಸಿದವರು ಆಡುತ್ತಿದ್ದ ಮಾತುಗಳನ್ನು ಕೇಳಿಸಿಕೊಂಡಿದ್ದನಂತೆ. ಅವರು ‘ಇಷ್ಟು ಅನುಕೂಲ ಕಲ್ಪಿಸಿದ್ದರಿಂದ ಮಾವ ಸಂತು?ರಾಗುತ್ತಾರೆಂದು’ ಆಡಿಕೊಳ್ಳುತ್ತಿದ್ದರಂತೆ. ಇದನ್ನು ಕೇಳಿದ ಬಳಿಕ ಭೂಪತಿಗಳಿಗೆ ಯಾವ ಸಂಶಯವೂ ಉಳಿಯಲಿಲ್ಲ. ಇದನ್ನೆಲ್ಲಾ ಮಾಡಿಸಿದವರು ಪಾಂಡವರೇ ಎಂದು ನಿಶ್ಚಯಿಸಿ, ಸೈನ್ಯವು ಅಲ್ಲಿಯೇ ತಂಗುವಂತೆ ಆಜ್ಞೆ ಮಾಡಿದರು. ಅದೊಂದು ಕಡೆ ಮಾತ್ರವಲ್ಲ, ಅಲ್ಲಲ್ಲಿ ಇಂತಹ ಸೌಲಭ್ಯಗಳನ್ನು ಮುಂಚಿತವಾಗಿಯೇ ಮಾಡಿದ್ದರೆಂಬುದು ನಮ್ಮ ಮುಂದಿನ ಪ್ರಯಾಣದಲ್ಲಿ ತಿಳಿಯಿತು. ಭೂಪತಿಗಳು ಪರಮ ಸಂತು?ರಾದರು. ನಮ್ಮ ಗಮನವನ್ನು ಮುಂದಾಗಿ ತಿಳಿದು ಇಷ್ಟು ಅನುಕೂಲವನ್ನು ಕಲ್ಪಿಸಬೇಕಾದರೆ, ಪಾಂಡವರಿಗೆ ನಮ್ಮ ಕುರಿತು ಎಷ್ಟು ಆದರವಿದೆ ನೋಡಿದೆಯಾ ಸೂತ? ಬರೇ ಬೆಂಬಲಕ್ಕೆ ಬರುವ ಭೂಪರೆಂದು ನಮ್ಮನ್ನು ಗ್ರಹಿಸಿಲ್ಲ. ನಾನವರ ಮಾವನೆಂದು ಸಂಬಂಧದ ನೆಲೆಯಿಂದಲೂ ಪ್ರೀತ್ಯಾದರಗಳನ್ನು ಹೀಗೆ ತೋರಿಸುತ್ತಿದ್ದಾರೆ. ಪಾಂಡವರಿಗೆ ಇಷ್ಟು ವೆಚ್ಚ ಮಾಡುವುದಕ್ಕೆ ಅನುಕೂಲ ಎಲ್ಲಿಂದ ಬಂತು ಅನ್ನುವುದು ನನಗಿನ್ನೂ ಅರ್ಥವಾಗುವುದಿಲ್ಲ. ದ್ರುಪದನೋ, ವಿರಾಟನೋ ಸಹಾಯಕ್ಕೆ ಗಟ್ಟಿಯಾಗಿ ನಿಂತಿರಬೇಕು. ಏನೇ ಇರಲಿ, ಅವರೇಕೆ ಇನ್ನೂ ನಮಗೆ ಕಾಣಿಸಿಕೊಂಡಿಲ್ಲವೋ ತಿಳಿಯುತ್ತಿಲ್ಲ. ಶಲ್ಯ ಭೂಪತಿಗಳು ಈ ಆದರಾತಿಥ್ಯದಿಂದ ಪೂರ್ಣ ಸಂತು?ರಾಗಿದ್ದಾರೆ. ‘ಇದನ್ನೆಲ್ಲಾ ವ್ಯವಸ್ಥೆಗೊಳಿಸಿದವರಿಗೆ ಕೇಳಿದ್ದನ್ನು ಕೊಡುತ್ತೇವೆ. ಅವರು ಅರಸರಿಗೆ ಕಾಣಿಸಿಕೊಳ್ಳಬೇಕು’ ಎಂದು ಈ ಪ್ರದೇಶದಲ್ಲೆಲ್ಲ ಡಂಗುರ ಸಾರುವಂತೆ ಆಜ್ಞೆ ಮಾಡಿದ್ದೇನೆ. ಆಗಲಾದರೂ ಮುಂದೆ ಬರುತ್ತಾರೋ ನೋಡಬೇಕು.” ಸೇನೆಯ ವ್ಯವಸ್ಥೆಯನ್ನು ತಿಳಿಯಲೆಂದು ಶಿಬಿರಗಳ ಸಮೀಪಕ್ಕೆ ರಥದಲ್ಲಿ ಹೋಗುವಾಗ ಭೂಪತಿಗಳು ನನ್ನಲ್ಲಿ ಹೇಳಿದರು.
ಡಂಗುರದವರು ಅಲ್ಲಲ್ಲಿ ಸಾರುತ್ತಾ ಹೋಗುತ್ತಿರುವಾಗಲೇ ಅದರ ಪರಿಣಾಮ ಕಂಡುಬಂತು. ಆದರೆ ಭೂಪತಿಗಳ ನಿರೀಕ್ಷೆಯಂತೆ ಅಲ್ಲ. ಮರುದಿನ ಪ್ರಾತಃಕಾಲದಲ್ಲಿ ನಿತ್ಯಕರ್ಮಗಳನ್ನು ಪೂರೈಸಿ ಸಜ್ಜಾಗಿದ್ದ ರಥವನ್ನೇರಲೆಂದು ಭೂಪತಿಗಳು ಹೊರಬಂದಾಗ ಇಬ್ಬರು ತೇಜಸ್ವಿಗಳಾದ ರಾಜಪುರು?ರು ಅವರೆದುರು ಕಾಣಿಸಿಕೊಂಡರು. ಅವರ ಗುರುತು ನನಗಂತೂ ತಿಳಿಯಲಿಲ್ಲ. ಭೂಪತಿಗಳು ಮಾತ್ರ ಕ್ಷಣಕಾಲ ಚಕಿತರಾಗಿ ನೋಡುತ್ತಿದ್ದರು. ಬಂದವರು ಅವರಿಗೆ ನಮಸ್ಕರಿಸಿ ವಿನಯದಿಂದ ನಿಂತರು. ರಾಜಕಿರೀಟ ಧರಿಸಿದ್ದವನಂತೂ ಭೂಪತಿಗಳ ಪಾದಗಳಿಗೆ ಸಾ?ಂಗ ಪ್ರಣಾಮವನ್ನೇ ಮಾಡಿಬಿಟ್ಟ.
ಭೂಪತಿಗಳೇ ಮಾತನಾಡಿಸಿದರು, ಅರೆ! ಸುಯೋಧನ, ಕರ್ಣ; ನಿಮಗೆ ಶ್ರೇಯಸ್ಸಾಗಲಿ. ಏನಿದು ಆಶ್ಚರ್ಯ! ಯುದ್ಧದ ಸಂದರ್ಭವಿದು. ನೀವು ಹಸ್ತಿನಾವತಿಯಲ್ಲಿರಬೇಕಾದವರು ಇಲ್ಲೇನು ಮಾಡುತ್ತಿದ್ದೀರಿ? ನಮ್ಮನ್ನು ನೋಡಲೆಂದು ಬಂದಿರೇನು?”
ಅವರ ಮಾತು ಕೇಳಿದ ಬಳಿಕವೇ ನಾನು ಬಂದವರನ್ನು ಗಮನವಿಟ್ಟು ನೋಡಿದ್ದು. ಇಬ್ಬರೂ ಮಟ್ಟಸವಾದ ಆಳ್ತನವುಳ್ಳವರು. ಸುಂದರವಾದ ರೂಪ. ಆದರೆ ಅವರಾರೆಂದು ತಿಳಿದ ಮೇಲೆ ಅವರ ಕುರಿತು ನನಗೆ ಮೆಚ್ಚುಗೆ ಉಳಿಯಲಿಲ್ಲ. ಅವರ ನಗುವಿನಲ್ಲಿ ಏನೋ ಕೃತ್ರಿಮ ಕಂಡಿತು. ದುರ್ಯೋಧನ ಹಾಗೂ ಕರ್ಣನ ಕುಖ್ಯಾತಿಯ ಬಗ್ಗೆ ಭೂಪತಿಗಳಿಂದಲೇ ಸಾಕ? ತಿಳಿದಿದ್ದೆ. ಪಾಂಡವರ ವಿಚಾರವಾಗಿ ಅವರು ನಡೆದುಕೊಂಡ ರೀತಿಯನ್ನು ಕೇಳಿದ ಬಳಿಕ ಅವರಿಬ್ಬರ ಕುರಿತು ಯಾವ ಗೌರವವೂ ಉಳಿದಿರಲಿಲ್ಲ ನನಗೆ. ತಿರಸ್ಕಾರದಿಂದಲೇ ಅವರತ್ತ ನೋಡಿದೆ.
ಮಾವ, ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ. ತಾವು ಕುಶಲವ?? ಮದ್ರದಿಂದ ಇಲ್ಲಿಯವರೆಗೆ ಪ್ರಯಾಣ ಸುಖಪ್ರದವಾಗಿತ್ತೇ? ದಣಿವು ತೀರಿತೇ? ತಮ್ಮ ಆಗಮನದ ವೇಳೆ ಸ್ವಾಗತಿಸಲು ಬರಬೇಕಾಗಿತ್ತು ನಾನು. ಅನುಕೂಲವಾಗಲಿಲ್ಲ. ಕ್ಷಮಿಸಬೇಕು. ಇಂದು ತಮ್ಮನ್ನು ಕಾಣಲೆಂದೇ ಇಲ್ಲಿಯವರೆಗೆ ಬಂದೆವು. ಮುಹೂರ್ತಕಾಲ ಕುಳಿತು ಸಂಭಾ?ಣೆಗೆ ಬಿಡುವುಂಟೆ?”
ದುರ್ಯೋಧನನ ಮಾತುಗಳು ಜೇನಿನಲ್ಲಿ ಅದ್ದಿ ತೆಗೆದಂತಿದ್ದವು.
ಅದೇನು ಮಾತು ಸುಯೋಧನ, ಹಸ್ತಿನಾಪುರದ ರಾಜಪುತ್ರ ನೀನು. ಬಿಡುವುಂಟೆ ಅಂತ ಕೇಳುವುದೇನು? ಇಲ್ಲದಿದ್ದರೆ ಮಾಡಿಕೊಳ್ಳೋಣವಂತೆ. ಇಲ್ಲಿ ಬಯಲಿನಲ್ಲಿ ಮಾತೇಕೆ, ಒಳಗೆ ಬಾ” ಮಾತನಾಡುತ್ತ ಭೂಪತಿಗಳು ಅವನನ್ನು ಡೇರೆಯೊಳಗೆ ಕರೆದೊಯ್ದರು. ಅವರ ಹಿಂದೆಯೇ ಕರ್ಣನೂ ನುಸುಳಿದ.
ಅದೆಷ್ಟು ಹೊತ್ತಿನವರೆಗೆ ಅವರು ಮಾತನಾಡುತ್ತ ಕುಳಿತಿದ್ದರು. ಹೊರಗೆ ಬಂದಾಗ ಅವರಿಬ್ಬರ ಮುಖವೂ ಅರಳಿತ್ತು. ಯಾಕೋ ನನಗೆ ಅವರ ಕುರಿತು ಹಿತವಾದ ಭಾವನೆ ಬರಲಿಲ್ಲ.
* * * * *
ಮರುದಿನ ಸೇನೆಗೆ ಹೊಸತೊಂದು ಆಜ್ಞೆ ಹೊರಟಿತು. ಸಮಸ್ತ ಸೈನಿಕರೂ ಪಾಂಡವರ ಪಾಳಯದ ಬದಲು ಕುರುಕ್ಷೇತ್ರದ ಪೂರ್ವದಿಕ್ಕಿನ ಕೌರವರ ದಂಡನ್ನು ಕೂಡಿಕೊಳ್ಳಬೇಕು. ಆಯಾ ದಳಪತಿಗಳು ತಮ್ಮ ಪಡೆಗಳನ್ನು ಸೂಕ್ತ ರೀತಿಯಲ್ಲಿ ಒಯ್ಯುವ ಹೊಣೆಯನ್ನು ಹೊರಬೇಕು. ನನಗೆ ಏನೂ ತಿಳಿಯಲಿಲ್ಲ. ನಾವು ಹೊರಟುದೆಲ್ಲಿಗೆ? ಈಗ ಹೋಗಬೇಕಾಗಿರುವುದೆಲ್ಲಿಗೆ? ಯೋಚಿಸುವುದಕ್ಕೆ ಹೆಚ್ಚು ಕಾಲಾವಕಾಶ ದೊರೆಯಲಿಲ್ಲ. ಬೆಳಗಾಗುತ್ತಲೇ ಭೂಪತಿಗಳು ಸನ್ನದ್ಧರಾಗಿ ಬಂದು ರಥವೇರಿದರು.
ಸೂತ, ನೇರವಾಗಿ ಉಪಪ್ಲಾವ್ಯದ ಸಮೀಪದ ಪಾಂಡವರ ಪಾಳಯದತ್ತ ನಡೆ. ಎ? ಸಾಧ್ಯವೋ ಅ? ವೇಗವಾಗಿ ರಥ ಓಡಿಸು.
ನಾನು ಅವರ ಮಾತಿನಂತೆ ಆ ಕಡೆಗೆ ರಥ ನಡೆಸಿದೆ. ಕೊಂಚ ದೂರ ಸಾಗಿದ್ದೆವ?. ಭೂಪತಿಗಳು ಮಾತಿಗೆ ತೊಡಗಿದರು.
ನೋಡಿದೆಯಾ ಆ ಕೌರವ ಹಾಗೂ ಕರ್ಣನ ದುರ್ಬುದ್ಧಿಯನ್ನು? ನನ್ನ ಔದಾರ್ಯವನ್ನು ಹೇಗೆ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡರು! ಮುಖ್ಯ ನಾನು ಸತ್ಯಕ್ಕೆ ಬದ್ಧನಾದುದೇ ತಪ್ಪು ಅನಿಸುತ್ತಿದೆ ಈಗ. ನಾನೇನೋ
ಪಾಂಡವರ ವ್ಯವಸ್ಥೆಯಿದೆಂದು ತಿಳಿದು ಕೇಳಿದ್ದು ಕೊಡುತ್ತೇನೆಂದು ಡಂಗುರ ಹೊಯ್ಸಿದೆ. ಈ ನರಿಗಳು ಅದೆಲ್ಲಿ ಅಡಗಿದ್ದರೋ ಏನೋ, ಆ ಗಳಿಗೆಯಲ್ಲಿ ಕಾಣಿಸಿಕೊಂಡು ತಮ್ಮ ಮಾತಿನಂತೆ ನಿಮ್ಮ ಸೈನ್ಯಕ್ಕೂ ನಿಮಗೂ ಆತಿಥ್ಯ ಮಾಡಿದ ನಮ್ಮ ಕೋರಿಕೆಯನ್ನು ಈಡೇರಿಸಬೇಕು. ದಯಮಾಡಿ ನಮ್ಮ ಪಕ್ಷಕ್ಕೆ ಸೇರಿ ಯುದ್ಧ ಮಾಡಬೇಕು ಅಂತ ಕೇಳಿದರು. ಹುಂ… ದುರ್ಯೋಧನ ಕುತಂತ್ರದಲ್ಲಿ ಇ? ಪಳಗಿದ್ದಾನೆಂದು ನಾನು ತಿಳಿದಿರಲಿಲ್ಲ. ಎಂತಹ ದುಃಸ್ಥಿತಿ ಬಂತು ನನ್ನ ಪಾಲಿಗೆ! ಸೋದರಳಿಯಂದಿರನ್ನು ಬಿಟ್ಟು ಈ ಧೂರ್ತನ ಪಕ್ಷಕ್ಕೆ ಸೇರಬೇಕಾಗಿ ಬಂತಲ್ಲ. ಬರುವುದಿಲ್ಲವೆಂದೆನೋ ಶಲ್ಯ ಮಾತಿಗೆ ತಪ್ಪಿದನೆಂದು ಎಲ್ಲೆಡೆಯಲ್ಲಿಯೂ ಪ್ರಚಾರ ಮಾಡುತ್ತಾರಿವರು. ಹಾಗೆಂದು ಪಾಂಡವರೇನು ತಿಳಿದಾರು, ನನ್ನ ಧರ್ಮಪ್ರಜ್ಞೆಗೇನು ಬೆಲೆ? ಛೇ…”
ಮಹಾಪ್ರಭುಗಳು ಮನ್ನಿಸಬೇಕು. ನಾವೀಗ ಹೋಗುತ್ತಿರುವುದು ಪಾಂಡವರ ಪಾಳಯಕ್ಕಲ್ಲವೇ? ಸೈನ್ಯವನ್ನು ಮಾತ್ರ ಕೌರವರ ಕಡೆಗೆ ಹೋಗುವಂತೆ ಆಜ್ಞೆಯಾಗಿದೆ. ಪ್ರಭುಗಳು ಮಾತ್ರ ಪಾಂಡವಪಕ್ಷವನ್ನು ಬೆಂಬಲಿಸುವ ಯೋಚನೆಯೇ?” ನಾನು ಧೈರ್ಯಮಾಡಿ ಕೇಳಿಬಿಟ್ಟೆ. ಆ ಮೇಲೆ ಭಯವಾಯಿತು, ನನ್ನ ಅಧಿಕಪ್ರಸಂಗಕ್ಕೆ ಭೂಪತಿಗಳು ಸಿಟ್ಟಾಗುವರೋ ಎಂದು.
ಆದರೆ ಅವರು ಕೋಪಗೊಳ್ಳಲಿಲ್ಲ. ತಮ್ಮ ತುಮುಲವನ್ನು ನನ್ನಲ್ಲಿ ಹೇಳಿಕೊಳ್ಳುವ ಮನಸ್ಸುಮಾಡಿದ ಹಾಗಿತ್ತು. ಒಮ್ಮೆ ಹೂಂಕರಿಸಿ ಮತ್ತೆ ನುಡಿದರು, ನಿಜ, ನಿನಗೆ ಬಂದ ಸಂಶಯ ಸಹಜ. ಯಾರಿಗೂ ಬರುವಂತಹುದೇ. ನಾನು ಒಮ್ಮೆ ಯುಧಿಷ್ಠಿರನನ್ನು ಕಂಡು ಬರುವುದಾಗಿ ಕೌರವನಲ್ಲಿ ನಿನ್ನೆಯೇ ಹೇಳಿದ್ದೆ, ಅವನಂತಹ ಸುಜನನ ಮನ ನೋಯಿಸುವ ಕೆಲಸವೊಂದು ನಡೆದು ಹೋಗಿದೆ. ಅವನ ಆಮಂತ್ರಣವನ್ನು ಸ್ವೀಕರಿಸಿ ಈಗ ಪಕ್ಷವನ್ನೇ ಬದಲಾಯಿಸಿದ ದ್ರೋಹಕ್ಕೆ ತಲೆತಗ್ಗಿಸಬೇಕಾಗಿ ಬಂದಿದೆ. ಅವನ ಕ್ಷಮಾಯಾಚನೆಗಾಗಿ ಹೊರಟಿದ್ದೇನೆ. ಮದ್ರ ಭೂಪತಿಗೆ ಎಂತಹ ದುರ್ಗತಿ ಬಂತು ನೋಡು. ಈ ಮೂರ್ಖರ ?ಡ್ಯಂತ್ರಕ್ಕೆ ಬಲಿಯಾಗಬೇಕಾಯಿತಲ್ಲ? ಶಲ್ಯನೆಂದರೆ ಏನೆಂದು ತಿಳಿದಿದ್ದಾರೆ ಇವರು? ನನ್ನ ಮೇಲೆ ತಂತ್ರಪ್ರಯೋಗವೇ! ಇರಲಿ, ಕೌರವನಿಗೊಂದು ಪಾಠ ಕಲಿಸದೆ ಬಿಡುವವನಲ್ಲ ನಾನು…”
ಭೂಪತಿಗಳು ಮತ್ತೆ ಮೌನವಾದರು. ಕೊಂಚ ದೂರ ರಥದ ಚಕ್ರಗಳ ಸದ್ದಿನ ವಿನಾ ಬೇರೆ ಶಬ್ದವಿಲ್ಲ. . . ಹಾ..ಎಡಕ್ಕೆ… ಈ ದಾರಿಯಲ್ಲಿ ಹೋಗು?” ನನ್ನನ್ನು ಎಚ್ಚರಿಸಿದ ಭೂಪತಿಗಳು ಮತ್ತೊಮ್ಮೆ ಮೌನ ಮುರಿದರು. ಏನು, ನೀನೂ ನನ್ನನ್ನು ತಪ್ಪು ದಾರಿಗೆಳೆಯುತ್ತೀಯೇನು? ಸುಲಭವಲ್ಲವೋ ಅದು. ತಂತ್ರಗಾರಿಕೆಯಲ್ಲಿ ಇವರಿಗೆಲ್ಲಾ ಕಲಿಸುವ? ಪಳಗಿದ್ದೇನೆ ನಾನು. ನನ್ನ ದಾರಿ ಯಾವುದೆಂದು ನನಗೆ ನಿಖರವಾಗಿ ತಿಳಿದಿದೆ. ನನ್ನನ್ನು ವಂಚಿಸಿದವರು ಮತ್ತೆ ಪಶ್ಚಾತ್ತಾಪ ಪಡುವುದನ್ನು ನೀನೇ ನೋಡುವಿಯಂತೆ.”
ಮತ್ತೆ ಮಾತಿಲ್ಲ. ಕೌರವನ ವಂಚನೆ ಭೂಪತಿಗಳ ಮನವನ್ನು ಕದಡಿಬಿಟ್ಟಿದೆಯೆಂದು ನನಗರಿವಾಯಿತು. ತಮ್ಮ ಧರ್ಮಪಾಲನೆ, ಸತ್ಯವಚನಗಳ ಕುರಿತು ತುಂಬ ಕಾಳಜಿಯುಳ್ಳ ಭೂಪತಿಗಳಿಗೆ ತಾವೀಗ ನಡೆದುಕೊಳ್ಳುತ್ತಿರುವುದು ಆತ್ಮವಂಚನೆಯಾಗಿ ಕಂಡಿರಬೇಕೆಂದು ನನಗನಿಸಿತು. ಅವರನ್ನು ಸುದೀರ್ಘಕಾಲದಿಂದ ನೋಡುತ್ತಿರುವ ನನಗೆ ಕೌರವನ ಪಕ್ಷದಿಂದ ಹೋರಾಟಕ್ಕಿಳಿದರೂ ಅವನ ದ್ರೋಹವನ್ನು ಎಂದಿಗೂ ಕ್ಷಮಿಸಲಾರರೆಂದೇ ತೋರಿತು.
ಹೀಗೆಲ್ಲಾ ಯೋಚಿಸುತ್ತ ಇಡೀ ದಿನದ ಪ್ರಯಾಣ ಮುಕ್ತಾಯವಾಗುವ ಹೊತ್ತಿಗೆ ಪಾಂಡವರ ಬಿಡದಿ ಗೋಚರಿಸಿತು; ಸಂಜೆಯೂ ಆಯಿತು. ತುಂಬ ಪ್ರಯಾಸದ ಪ್ರಯಾಣವದು. ನಡುವೆ ಕುದುರೆಗಳಿಗೆ ಹುಲ್ಲು, ನೀರಿಗೆ ಹಾಗೂ ನಮ್ಮ ಆಹಾರ ಸೇವನೆಗೆಂದು ಕೊಂಚಕಾಲ ನಿಂತದ್ದು ಬಿಟ್ಟರೆ ಬೇರೆಲ್ಲೂ ನಿಲ್ಲದ ಉದ್ದಾನುದ್ದ ಬಯಲಿನ ದಾರಿಯ ಪ್ರಯಾಣವಾಗಿತ್ತದು.
ನಮ್ಮ ರಥವನ್ನು ಕಂಡ ಕಾವಲುಭಟರು ಒಳಗೆ ವರ್ತಮಾನ ಮುಟ್ಟಿಸಿರಬೇಕು. ಯುಧಿಷ್ಠಿರ ಓಡೋಡುತ್ತ ಹೊರಗೆ ಬಂದ. ಅವನೊಂದಿಗೆ ಬಂದವನನ್ನು ಕಂಡು ನಾನು ದಂಗುಬಡಿದು ಹೋದೆ. ಅಬ್ಬಾ ಎಂತಹ ಆಕ?ಣೆ ಆ ವ್ಯಕ್ತಿಯಲ್ಲಿ! ಅವನು ದೇವರೆಂದು ಕರೆಯಲ್ಪಡುವ ಶ್ರೀಕೃ? ಎಂದು ಆಮೇಲೆ ತಿಳಿಯಿತು. ಇಬ್ಬರೂ ಭೂಪತಿಗಳನ್ನು ಗೌರವಪೂರ್ವಕ ಒಳಗೆ ಕರೆದೊಯ್ದರು. ನಾನು ಯಥಾಪ್ರಕಾರ ಹೊರಗೆ ಕುದುರೆಗಳಿಗೆ ಹುಲ್ಲು ಹಾಕಿ ರಥದ ಮೂಕಿಯ ಮೇಲೆ ಕುಳಿತಿದ್ದೆ. ಅ?ರಲ್ಲಿ ಸೇವಕನೊಬ್ಬ ಬಂದು, ಅಯ್ಯಾ, ಈ ದಿನ ಮದ್ರದ ಮಹಾರಾಜರು ಇಲ್ಲಿಯೇ ಉಳಿಯುವರಂತೆ. ನಿನಗೆ ಅನ್ನ ಪಾನ ಹಾಗೂ ಬಿಡದಿಯ ಅನುಕೂಲ ಮಾಡಿಕೊಡುವಂತೆ ಯುಧಿಷ್ಠಿರ ಪ್ರಭುಗಳ ಆಜ್ಞೆಯಾಗಿದೆ. ಕುದುರೆಗಳನ್ನು ಲಾಯದಲ್ಲಿ ಕಟ್ಟುವಂತೆ ಅಶ್ವಪಾಲಕನಿಗೆ ಹೇಳುವೆ. ನೀನು ಈ ಕಡೆ ಬಾ ಎಂದು ಕರೆದೊಯ್ದ.
ನನ್ನಂತಹ ಸಾಮಾನ್ಯ ಸೂತನಿಗೂ ಅಲ್ಲಿ ದೊರಕಿದ ಆತಿಥ್ಯದಿಂದ ನಾನು ಬೆರಗಾದೆ. ಯಾಕೆ ಪಾಂಡವರನ್ನು ಎಲ್ಲರೂ ಕೊಂಡಾಡುತ್ತಾರೆಂದು ನನಗೆ ಆಗ ಅರ್ಥವಾಯಿತು.
…ಮುಂದುವರಿಯುವುದು
– ಲೇಖಕರು ಯಕ್ಷಗಾನ ತಾಳಮದ್ದಳೆ ಕಲಾವಿದರು, ನಿವೃತ್ತ ಉಪನ್ಯಾಸಕರು
ಸಾರಥಿ ಭಾಗ-3
Month : June-2016 Episode : ಭಾಗ - 3 Author : ರಾಧಾಕೃಷ್ಣ ಕಲ್ಚಾರ್