2017ರ ಫೆಬ್ರುವರಿ 20ನೇ ದಿನಾಂಕದಂದು ನಾನು ಉತ್ತರಪ್ರದೇಶದ ಮೀರತ್ನಲ್ಲಿ ಇದ್ದಾಗ ನನಗೆ ಸುದ್ದಿ ಸಿಕ್ಕಿತು. ಹೆಚ್ಚುಕಡಮೆ ಅನೇಕ ದಿನಗಳಿಂದ ಮನಸ್ಸು ಯಾವ ವಿಷಯಕ್ಕೆ ಗಟ್ಟಿಯಾಗಿತ್ತೋ ಅದೇ ಸಂಗತಿಯನ್ನು ಮೊಬೈಲ್ನಲ್ಲಿ ಬಂದ ಆ ಸಂದೇಶ ತಂದಿತ್ತು: ‘Jayadev is no more.’ ನಾನು ತಕ್ಷಣ ದೆಹಲಿಗೆ ಬಂದು ಬೆಂಗಳೂರಿಗೆ ಬರುವ ಸಾಧ್ಯತೆ ಇದೆಯೇ ಎಂದು ನೋಡಿದೆ. ನನ್ನಂತೆ ಅನೇಕರು ಇಲ್ಲಿ ಇರುವವರೂ ಕೂಡಾ ಜಯದೇವ ಅವರ ಅಂತಿಮದರ್ಶನಕ್ಕಾಗಿ ’ಕೇಶವಕೃಪಾ’ಕ್ಕೆ ಬಂದು ಸೇರಿದೆವು. ತದನಂತರ ಪಾರ್ಥಿವಶರೀರವನ್ನು `ಕೇಶವಕೃಪಾ’ದಿಂದ ಮೈಸೂರಿಗೆ ಅಲ್ಲಿನ ಕಾರ್ಯಕರ್ತರು, ವಿಶೇಷವಾಗಿ ಜಯದೇವ ಅವರ ಪರಿವಾರದ ಅನೇಕರ ಬಯಕೆಯಂತೆ, ಕೊಂಡೊಯ್ದರು. ಬಳಿಕ ಮರುದಿನ ಮೈಸೂರಿನಲ್ಲಿ ‘ಜಯದೇವ’ ಅನ್ನುವ ಶರೀರದ ಒಳಗಡೆ ಇದ್ದಂತಹ ಆತ್ಮ ಯಾವುದು ಹೊರಟುಹೋಗಿತ್ತೋ ಆ ಶರೀರವು ಮೈಸೂರಿನ ಮಣ್ಣಿನಲ್ಲಿ ಹುದುಗಿಹೋಯಿತು.
ಜಯದೇವ ಅವರ ಬಗ್ಗೆ ಅವರೊಡನೆ ಅನೇಕ ವರ್ಷಗಳಿಂದ ಸಾಹಿತ್ಯಸರಸ್ವತಿಯ ಆರಾಧಕರಾಗಿ ಕೆಲಸ ಮಾಡುತ್ತಿರುವ ಡಾ. ರಾಮಸ್ವಾಮಿಯವರಾಗಲಿ, ಸಂಶೋಧಕರಾದ ಡಾ. ಚಿದಾನಂದಮೂರ್ತಿಯವರಾಗಲಿ ಮಾತನಾಡಿದ ಬಳಿಕ ಹೆಚ್ಚಿನದು ಹೇಳುವುದು ಉಳಿದಿದೆಯೆಂದು ನನಗೆ ಅನ್ನಿಸುವುದಿಲ್ಲ.
ರಾ.ಸ್ವ. ಸಂಘದ ಸ್ವಯಂಸೇವಕನಾಗಿ ಸುಮಾರು 1971ರಿಂದ ಅವರ ಕೊನೆಯ ಕಾಲದವರೆಗೆ, ಇಲ್ಲಿ ಕುಳಿತಿರುವಂಥ ಅನೇಕರು ಮೈ.ಚ. ಜಯದೇವ್ ಅವರ ಹತ್ತಿರದ ಪರಿಚಿತರ ಸಾಲಿನಲ್ಲಿ ಹೇಗೆ ಇದ್ದೀರೋ ಅಂತಹವರಲ್ಲಿ ನಾನೂ ಒಬ್ಬ. ೧೯೭೧ರಲ್ಲಿ ಬೆಂಗಳೂರಿಗೆ ಬಂದಾಗಿನಿಂದ ೧೯೯೩ರವರೆಗೆ ಬೆಂಗಳೂರು ನನ್ನ ಕೇಂದ್ರವಾಗಿತ್ತು. ಆ ೨೨-೨೩ ವರ್ಷಗಳಲ್ಲಿ ನೂರಾರು ಸಲ ಜಯದೇವ್ ಅವರನ್ನು ಭೇಟಿ ಮಾಡಿ ಅವರಿಂದ ಅನೇಕ ಸಂಗತಿಗಳನ್ನು ಕಲಿಯುವ ಅವಕಾಶ ನನಗೂ ಸಿಕ್ಕಿತ್ತು. ಅದಕ್ಕಿಂತ ಮುಂಚೆ ನಾನು ನನ್ನೂರಿನಲ್ಲಿದ್ದಾಗ ರಾಷ್ಟ್ರೋತ್ಥಾನ ಸಾಹಿತ್ಯದಲ್ಲಿ ಅದರಲ್ಲೂ ಉತ್ಥಾನ ಪತ್ರಿಕೆಯಲ್ಲಿ ಮುಖ್ಯ ಆಡಳಿತಗಾರರು ಎಂದು ’ಮೈ.ಚ. ಜಯದೇವ’ ಹೆಸರನ್ನು ಓದಿ, ಇವರು ಯಾರು ಎಂದು ನನ್ನ ಮನಸ್ಸಿನಲ್ಲಿ ಆಗ ಹುಡುಗ ಬುದ್ಧಿಯಲ್ಲಿ ಪ್ರಶ್ನೆಯೊಂದು ಉಂಟಾಗಿತ್ತು. ಬೆಂಗಳೂರಿಗೆ ಬಂದ ಬಳಿಕ ರಾಷ್ಟ್ರೋತ್ಥಾನ ಪರಿಷತ್ತಿನ ಹಳೆಯ ಕಟ್ಟಡದ ಮೊದಲನೇ ಮಹಡಿಯ ಮೂಲೆಯ ಕೋಣೆಯಲ್ಲಿ ಅವರನ್ನು ಭೇಟಿಮಾಡಿದ್ದೆ. ಅದರ ನಂತರ ಕೊನೆಯದಾಗಿ ೧೩ ಫೆಬ್ರುವರಿಯಂದು ಬೆಳಗ್ಗೆ ಸಾಗರ್ ಆಸ್ಪತ್ರೆಯಲ್ಲಿ ’ಜಯದೇವರೇ’ ಎಂದು ಕರೆದು ಅವರು ಸ್ವಲ್ಪ ಕಣ್ಣು ತೆರೆದಿದ್ದನ್ನು ನೋಡಿದೆ; ಒಂದು ವಾರದ ಬಳಿಕ ಅವರು ಕಣ್ಣುಮುಚ್ಚಿದರು.
ಪಥದರ್ಶಕ
ಮೈ.ಚ. ಜಯದೇವ ಅವರು ಏನು ಹೌದು ಏನು ಅಲ್ಲ, ಇದು ಬಹಳ ಯೋಚನೆ ಮಾಡುವ ಪ್ರಶ್ನೆ. ಜಯದೇವ ಅವರು ಸಂಘದ ಕಾರ್ಯಕರ್ತರಾಗಿ ಬೆಂಗಳೂರಿನ ಉದ್ದಗಲವನ್ನೂ ಅಳೆದವರು. ನೂರಾರು ಸಾವಿರಾರು ಮನೆಗಳಲ್ಲಿ ಸ್ವಯಂಸೇವಕರನ್ನು, ಅವರ ಪರಿವಾರದವರನ್ನು ಅತ್ಯಂತ ಹತ್ತಿರದಿಂದ ಆತ್ಮೀಯತೆಯಿಂದ ಮಾತನಾಡಿಸಿ, ಅವರಿಗೆ ವ್ಯಕ್ತಿಜೀವನದಲ್ಲಿ ಕುಟುಂಬಜೀವನದಲ್ಲಿ ಅವರ ವೃತ್ತಿಜೀವನದಲ್ಲಿ ಸಾಮಾಜಿಕಕಾರ್ಯದ ಜೀವನದಲ್ಲಿ ಹೇಗಿರಬೇಕು ಹೇಗಿರಬಾರದು ಅನ್ನುವ ಪಾಠವನ್ನೂ ಮಾರ್ಗವನ್ನೂ ಹೇಳಿ ತೋರಿಸಿದಂಥವರು. ಜಯದೇವ ಅವರು ನಂತರ ಕರ್ನಾಟಕದ ಪ್ರಾಂತದ ಕಾರ್ಯವಾಹರಾದರು. ತದನಂತರ ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿದ ದಕ್ಷಿಣ ಮಧ್ಯ ಕ್ಷೇತ್ರದ ಕಾರ್ಯವಾಹರಾಗಿದ್ದರು. ಆಮೇಲೆ ಅವರನ್ನು ಒಂದು ದಿನ ’ಪ್ರಚಾರಕರು’ ಎಂದು ಘೋಷಣೆ ಮಾಡಿದರು. ಪ್ರಚಾರಕರು ಎಂದು ಘೋಷಣೆ ಮಾಡಿದ ಹಿಂದಿನ ವರುಷಗಳಲ್ಲಿಯೂ ಅವರು ಪ್ರಚಾರಕರಂತೆಯೇ ಇದ್ದರು; ಘೋಷಣೆ ಮಾಡಿದ್ದು ಅದೆಷ್ಟು ವರುಷಗಳ ನಂತರ! ಘೋಷಣೆಗೆ ಮೊದಲಿನ ಮತ್ತು ನಂತರದ ಅವರ ಜೀವನದಲ್ಲಿ ಏನೂ ವ್ಯತ್ಯಾಸವಿರಲಿಲ್ಲ. ಅವರು ಪ್ರಚಾರಕರು ಎಂದು ಅನಿಸಿಕೊಂಡ ಬಳಿಕ ಕೇಶವಕೃಪಾಕ್ಕೆ ಬಂದರು ಎಂದು ನಾನು ಭಾವಿಸಿಕೊಳ್ಳುತ್ತೇನೆ. ಅದಕ್ಕೂ ಮೊದಲು ಅವರು ರಾಷ್ಟ್ರೋತ್ಥಾನದಲ್ಲಿದ್ದರು. ವ್ಯತ್ಯಾಸವಾಗಿದ್ದು ಇಷ್ಟು – ರಾಷ್ಟ್ರೋತ್ಥಾನದಿಂದ ಕೇಶವಕೃಪಾಕ್ಕೆ ಬಂದಿದ್ದು. ಅವರ ಬಳಿ ನಾನೊಂದು ಪ್ರಶ್ನೆ ಕೇಳಿದ್ದೆ: “ಇಷ್ಟು ವರುಷ ನೀವು ಕಾರ್ಯವಾಹರಾಗಿದ್ದಿರಿ, ಈಗ ನಿಮ್ಮನ್ನು ಪ್ರಚಾರಕರು ಎಂದು ಘೋಷಿಸಿದ್ದಾರೆ, ನಿಮಗೆ ಈಗ ಏನು ಅನ್ನಿಸ್ತಾ ಇದೆ?” ಎಂದು.
“ಅನ್ನಿಸೋದೇನಪ್ಪಾ, ಇಷ್ಟು ವರುಷ ನಾನು ಕಾರ್ಯವಾಹನಾಗಿದ್ದರಿಂದ, ಸಂಘಸ್ಥಾನಕ್ಕೆ ಹೋದಾಗ ಸಂಘದಲ್ಲಿ ನನಗೆ ಒಂದು ’ಪ್ರಣಾಮ್’ ಆದರೂ ಸಿಗುತ್ತಿತ್ತು; ಈಗ ಸಂಘ ಅದನ್ನೂ ಕಿತ್ತುಕೊಂಡುಬಿಟ್ಟಿತು!”
ರಾ.ಸ್ವ. ಸಂಘದಲ್ಲಿ ಪ್ರಚಾರಕರಾಗಿದ್ದರೆ ಪ್ರಣಾಮ್ ಮಾಡುವುದಿಲ್ಲ, ಕಾರ್ಯವಾಹ ಆಗಿದ್ದವರಿಗೆ ಪ್ರಣಾಮ್ ಮಾಡುತ್ತೇವೆ. ಅಂದರೆ, ಅಷ್ಟು ಸಹಜವಾಗಿ ಜಯದೇವ ಅವರು ಸಂಘದ ಸೂಚನೆಯಂತೆ ಪ್ರತಿಯೊಂದನ್ನೂ ಜೀವನದಲ್ಲಿ ಸ್ವೀಕರಿಸಿದರು. ’ಇಂಡಿಯಾ ಗ್ಯಾರೇಜ್’ನ್ನು ಬಿಟ್ಟು ಬಂದ ಮೇಲೆ ರಾಷ್ಟ್ರೋತ್ಥಾನದಲ್ಲಿ, “ಈ ’ಗ್ಯಾರೇಜ್’ನಲ್ಲಿ ಕೆಲಸ ಮಾಡಿ” ಎಂದು ಹೇಳಿದರು. “ಸರಿ” ಅಂದರು; ಸಂಘ “ರಾ?ತ್ಥಾನದ ಕೆಲಸದ ಜೊತೆ ಜೊತೆಗೇ ಕಾರ್ಯವಾಹರಾಗಿಯೂ ಕೆಲಸ ನಿರ್ವಹಿಸಬೇಕು” ಎಂದಿತು. ಅದಕ್ಕೂ “ಸರಿ” ಎಂದರು. ಅನಂತರ ಪ್ರಾಂತದ, ಕ್ಷೇತ್ರದ ಜವಾಬ್ದಾರಿ ಬಂತು. ಆ ಹೊಣೆಯನ್ನೂ ಹೊತ್ತರು. ಮಾನ್ಯ ಹೊ.ವೆ. ಶೇಷಾದ್ರಿಗಳು ಮತ್ತು ಹಿರಿಯರು ಎಲ್ಲ ಸೇರಿ ’ನೀವಿನ್ನು ಕ್ಷೇತ್ರಪ್ರಚಾರಕರು’ ಅಂದರು. ಸರಿ ಎಂದರು. ಸಂಘದ ಸ್ವಯಂಸೇವಕನಾಗಿ ಬಂದ ನಂತರ ಸಂಘದ ಸೂಚನೆಯಂತೆಯೇ ತಮ್ಮ ಇಡೀ ಜೀವನವನ್ನು ಕಳೆದಂಥವರು ಜಯದೇವ ಅವರು. ಇಂತಹ ಸಮರ್ಪಿತಭಾವದ ಸಾವಿರಾರು ಸ್ವಯಂಸೇವಕರ ಕಾರಣಕ್ಕಾಗಿಯೇ ಈವತ್ತು ಸಂಘ ಎನ್ನುವಂತಹ ಒಂದು ಶಕ್ತಿ, ಸಂಘ ಎನ್ನುವ ಒಂದು ಧ್ಯೇಯಮಂದಿರ, ಸಂಘ ಎನ್ನುವ ಒಂದು ರಾಷ್ಟ್ರೀಯ ಆಂದೋಲನ ಪ್ರಭಾವಿಯಾಗಿ ನಿಂತಿದೆ. ದೇಶದ ತುತ್ತತುದಿ ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭಿಸಿ ದೇಶದ ಎಲ್ಲಾ ಮೂಲೆಗಳಲ್ಲೂ ಪ್ರಸಿದ್ಧಿಗೆ ಬಂದಿರುವ, ಬರಲಿರುವ ನೂರಾರು ಸಾವಿರಾರು ಕಾರ್ಯಕರ್ತರು ಈ ರೀತಿ ಈ ಯಜ್ಞದಲ್ಲಿ ಆಹುತಿಯಾಗಿದ್ದರಿಂದಲೇ ’ರಾಷ್ಟ್ರೀಯ ಸ್ವಯಂಸೇವಕ ಸಂಘ’ ಎನ್ನುವ ಒಂದು ಸಮಾಜದ ದೈವೀಶಕ್ತಿ ಇಷ್ಟೊಂದು ಪ್ರಭಾವಿಯಾಗಿ ಪ್ರಖರವಾಗಿ ಎದ್ದು ನಿಲ್ಲುವುದಕ್ಕೆ ಸಾಧ್ಯವಾಗಿದೆ.
ಜಯದೇವರು ಅಂತಹ ಒಂದು ಯಜ್ಞದಲ್ಲಿ ತಮ್ಮನ್ನು ತಾವು ಸಮಿಧೆಯಂತೆ ಸಲ್ಲಿಸಿಕೊಂಡರು. ಜಯದೇವ ಅವರಿಗೆ ಸ್ವಯಂಸೇವಕರ ಜೊತೆಗೆ ನಿಕಟ ಸಂಪರ್ಕ ಇತ್ತು. ಬೆಂಗಳೂರಿನ ಯಾವುದೋ ಒಂದು ಕಾರ್ಖಾನೆಯಲ್ಲಿ ಸಾಮಾನ್ಯ ಕೆಲಸ ಮಾಡುವ ಒಬ್ಬ ಸ್ವಯಂಸೇವಕನ ಮನೆಯಿಂದ ಆರಂಭಿಸಿ, ದೇಶದ ಪ್ರಧಾನಮಂತ್ರಿಯವರೆಗೆ; ಸಮಾಜದ ಒಂದು ಸಾಮಾನ್ಯ ಕೆಲಸ ಮಾಡುವ ಸೇವಾಸಂಸ್ಥೆಯಿಂದ ಆರಂಭಿಸಿ, ಇಡೀ ಸಮಾಜಕ್ಕೆ, ಧರ್ಮಕಾರ್ಯಕ್ಕೆ ಮಾರ್ಗದರ್ಶನ ಮಾಡುವ ಅನೇಕ ಪೀಠಾಧೀಶರು ಮಹಾತ್ಮರ ಜೊತೆಗೆ ಅತ್ಯಂತ ಸಹಜವಾಗಿ ಗಂಭೀರವಾಗಿ ದೇಶ-ಧರ್ಮ-ರಾಷ್ಟ್ರದ ಉದ್ದೇಶಗಳಿಗಾಗಿ ಅವರು ಸಂಪರ್ಕ ಹೊಂದಿದ್ದರು. ಕಾರ್ಯಕರ್ತರಿಗೆ ಆತ್ಮೀಯತೆಯನ್ನೂ, ಹಿರಿಯರಿಗೆ ಗೌರವವನ್ನೂ ತೋರಿಸಿದರು, ತಮ್ಮ ಕಾರ್ಯದಲ್ಲಿ ಗಂಭೀರತೆಯನ್ನೂ ಉದ್ದೇಶಪೂರ್ವತೆಯನ್ನೂ ಮೆರೆದರು. ಅವರು ಮಾಡಿದ ಯಾವುದೇ ಕಾರ್ಯವಾಗಲಿ ಅದಕ್ಕೆ ಹಿರಿದಾದ ಉದ್ದೇಶವಿರುತ್ತಿತ್ತು. ಕಾರ್ಯಕರ್ತರ ಜೊತೆಗೆ ಮಾತನಾಡಿದರೆ ಅವರ ಆ ಮಾತಿನಲ್ಲಿ ಏನಿದೆ ಎನ್ನುವುದನ್ನು ಕೇಳಿಸಿಕೊಳ್ಳುವ ಸಹನೆ ಇತ್ತು. ಇಷ್ಟೊಂದು ಕೆಲಸಗಳನ್ನು ಹಚ್ಚಿಕೊಂಡಿರುವ ವ್ಯಕ್ತಿಗೆ ಇದು ಹೇಗೆ ಸಾಧ್ಯ ಎಂದು ಆಶ್ಚರ್ಯವಾಗುತ್ತಿತ್ತು. ಅವರು ಸಹನಶಕ್ತಿಯ ಸಾಕಾರಮೂರ್ತಿಯೇ ಆಗಿದ್ದರು.
‘ಬಟ್ ಐ ಲವ್ ಜಯದೇವ್’
ತುರ್ತುಪರಿಸ್ಥಿತಿಯ ಸಂದರ್ಭ. ಸಮಾಜವಾದಿ ಕಾರ್ಯಕರ್ತ ಬಂಡಗದ್ದೆ ರಮೇಶ್ ಅಂತ ಇದ್ದರು. ವಿದ್ಯಾರ್ಥಿ ಹೋರಾಟ ಮತ್ತು ಸತ್ಯಾಗ್ರಹದಲ್ಲಿ ಭಾಗಿಯಾಗಿ ಜೈಲಿಗೆ ತೆರಳಿದ್ದಾಗ ಜಯದೇವ ಅವರೂ ಅಲ್ಲಿ ಮೀಸಾಬಂಧಿಯಾಗಿದ್ದರು. ನನಗೆ ಅವರ ಜೊತೆಗೆ ಇರುವ ಸೌಭಾಗ್ಯ ಇತ್ತು. ನಾನಾಗ ಎಂ.ಎ.
ಉತ್ಥಾನ ವಿದ್ಯಾರ್ಥಿ. ಬಂದಗದ್ದೆ ರಮೇಶ್ ಅವರೂ ಬ್ಯಾರಕ್ನಲ್ಲಿ ಜೊತೆಗಿದ್ದರು. ಜೊತೆಗೆ ಜೆ.ಹೆಚ್. ಪಟೇಲ್ ಇದ್ದರು, ಇನ್ನೊಂದು ಬ್ಯಾರಕ್ನಲ್ಲಿ ದೇವೇಗೌಡರೂ ಇದ್ದರು. ನನ್ನ ಜೊತೆ ರಮೇಶ್ ಅವರು ಹೇಳುತ್ತಿದ್ದರು: “ನೋಡಪ್ಪಾ, ಈ ಸಂಘದವರ ಬಗ್ಗೆ ವೈಚಾರಿಕವಾಗಿ ನನಗೆ ಅನೇಕ ಭಿನ್ನಾಭಿಪ್ರಾಯವಿದೆ; But I love Jayadev.” I respect him ಅಂತ ಹೇಳಬಹುದು. ಆದರೆ ’I Love’ ಅಂತ ಹೇಳುವಾಗ ಒಬ್ಬ ಅಣ್ಣನನ್ನು ಗೌರವ ಮತ್ತು ಪ್ರೀತಿಯಿಂದ ಹೇಗೆ ನೋಡಬೇಕೋ ಹಾಗೆ ನೋಡುತ್ತೇನೆ – ಎಂದಿದ್ದರು ರಮೇಶ್.
ರಮೇಶ್ ಅವರು ಹೇಳಿದ ಇನ್ನೊಂದು ಮಾತೆಂದರೆ, “ಜಯದೇವ್ ಅವರಿಗೆ ಇರುವ ಸಹನಶಕ್ತಿ ಅದ್ಭುತ. ತಾಸುಗಳ ಲೆಕ್ಕದಲ್ಲಿ ಅವರು ಕೇಳುವುದಕ್ಕೆ ತಯಾರಿದ್ದಾರೆ. ’ಹ್ಹೂಂ… ಹ್ಹೂಂ…’ ಎಂದು ಹೇಳುವುದು ಬಿಟ್ಟರೆ ಅವರು ಸಮಾಧಾನವಾಗಿ ಕೇಳುತ್ತಲೇ ಇರುವರು. ಆದರೆ ಕೇಳಿದ್ದೆಲ್ಲವೂ ಅವರಿಗೆ ನೆನಪಿರುತ್ತಿತ್ತು. ಅನೇಕ ಸಲ ಕೇಳಿದಂತೆ ಮಾಡಿ ಇನ್ನೇನೋ ಯೋಚನೆ ಮಾಡುವವರಿರುತ್ತಾರೆ. ಜಯದೇವ ಅವರು ಎಂದೂ ಹಾಗೆ ಮಾಡುತ್ತಿರಲಿಲ್ಲ, ಏಕೆಂದರೆ ಹೇಳಿದ ವಿ?ಯಗಳೆಲ್ಲವೂ ಅವರಿಗೆ ನೆನಪಿರುತ್ತಿತ್ತು. ಕೊನೆಗೆ ಎಲ್ಲವನ್ನೂ ಪೂರ್ತಿಯಾಗಿ ಕೇಳಿದ ನಂತರ ಅವರದ್ದು ಪ್ರಶ್ನೆಗಳಿರುತ್ತಿದ್ದವು. ಅದು – ಮೊದಲನೇ ಭಾಗ, ಎರಡನೇ ಭಾಗ, ಮೂರನೇ ಭಾಗ – ಎಂದು ನಾವು ಹೇಳಿದ್ದರಲ್ಲಿ ಯೋಚನೆ ಮಾಡಿ ಆ ಪ್ರಶ್ನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಹೇಳುವಾಗ ಹೇಳುವವನಿಗೆ ಆ ಓಘಕ್ಕೆ ತಡೆಬಾರದಿರಲಿ ಎಂದು ಆ ಪ್ರಶ್ನೆಗಳನ್ನು ಮನಸ್ಸಿನಲ್ಲೆ ಇಟ್ಟುಕೊಂಡು ಇಡೀ ಒಂದು ಗಂಟೆ ಕೇಳಿದ ನಂತರ ಒಂದೊಂದಾಗಿ ಪ್ರಶ್ನೆಗಳನ್ನು ಕೇಳಿ ಇನ್ನಷ್ಟು ವಿವರಗಳನ್ನು ಪಡೆಯುವಂತಹ ಕೌಶಲ ಅವರದ್ದಾಗಿತ್ತು. ಸಂಘದಲ್ಲಿ ಮನುಷ್ಯನನ್ನು ಅರ್ಥ ಮಾಡಿಕೊಳ್ಳುವಂತಹ ಈ ಮಾದರಿ ಅದ್ಭುತವಾದಂಥದ್ದು. ಜಯದೇವ ಅವರು ಅದಕ್ಕೆ ಮಾದರಿಯಾಗಿದ್ದರು.
ಇನ್ನೊಂದು ವಿಶೇಷ ಜಯದೇವ ಅವರದ್ದು ಎಂದರೆ – ಅನೇಕ ಸಲ ನಮ್ಮಂತಹ ಕಾರ್ಯಕರ್ತರಿಗೆ ಅವರು, ನಾವೆಲ್ಲಾ ಹೇಳಿದ ಮೇಲೆ, “ಅದೆಲ್ಲಾ ಸರಿ, ಮಾತುಕತೆಯಲ್ಲಿ ನೀನೇನೆಲ್ಲಾ ಹೇಳಿದ್ದೀಯಾ ಅವನ್ನೆಲ್ಲ ಎರಡು ಪುಟಗಳಲ್ಲಿ ಬರೆದು ಕೊಡು” ಎಂದು ಹೇಳುತ್ತಿದ್ದರು. ಅಂದರೆ ಜಯದೇವ ಅವರನ್ನು ಭೇಟಿ ಮಾಡಿ ಹೋದ ಬಳಿಕ ನಮಗೆ ’ಹೋಮ್ವರ್ಕ್’ ಕೂಡ ಇರುತ್ತಿತ್ತು! ಆವತ್ತು ರಾತ್ರಿ ಕುಳಿತು ನಾವು ಅದನ್ನು ಬರೆದು ಮರುದಿನ ಅವರಿಗೆ ಸಲ್ಲಿಸಬೇಕಾಗಿತ್ತು. ಅದಕ್ಕೆ ಕೊನೆಕೊನೆಗೆ ನನ್ನಂಥವರು ಏನು ಮಾಡುವುದಕ್ಕೆ ಆರಂಭಿಸಿದೆವು ಅಂದರೆ ಅವರನ್ನು ಭೇಟಿಯಾಗುವುದಕ್ಕೆ ಹೋಗುವ ಮೊದಲೇ ಪೂರ್ವದಲ್ಲೇ ಒಂದ? ಬರೆದುಕೊಂಡು ಹೋಗುತ್ತಿದ್ದೆವು. ಅದಕ್ಕೆ ಅವರು ಹೇಳುತ್ತಿದ್ದರು – “ಏನೇನು ತೀರ್ಮಾನ ಆಯ್ತು ಅದನ್ನೂ ಬರೆಯಬೇಕಲ್ಲಪ್ಪಾ…” ಹೀಗೆ ಹೋಮ್ವರ್ಕ್ಗೆ ಎಂದೂ ಬಿಡುಗಡೆ ಇರುತ್ತಿರಲಿಲ್ಲ. ಯಾಕೆ ಹೀಗೆ ಮಾಡ್ತಿದ್ದರು? ನಾವು ಹೀಗೆ ಹೋಮ್ವರ್ಕ್ ರೀತಿಯಲ್ಲಿ ಬರೆದುಕೊಟ್ಟ ಕಾಗದಗಳು, ಜಯದೇವ ಅವರು ಜೋಡಿಸಿಟ್ಟಿರುವಂಥದ್ದು ಕೇಶವಕೃಪಾದಲ್ಲಿ, ಕೇಶವಶಿಲ್ಪದಲ್ಲಿ ಬೇಕಾದಷ್ಟಿರಬಹುದು. They form the history, ಅವುಗಳು ಸಂಶೋಧನೆಗೆ ಬೇಕಾದಂತಹ ಅನೇಕ ವಿಷಯಗಳನ್ನು ಈವತ್ತು ಕೊಡಬಲ್ಲವು.
ರಚನಾತ್ಮಕಬುದ್ಧಿಯ ಸಾಕಾರಮೂರ್ತಿ
ನನಗಿನ್ನೂ ನೆನಪಿದೆ, ಕರ್ನಾಟಕದಲ್ಲಿ ನಕ್ಸಲೀಯರ ಹಾವಳಿ ನಿಧಾನಕ್ಕೆ ಆರಂಭವಾಗುತ್ತದೆ ಎಂದು ಜಯದೇವ ಅವರ ಬಳಿ ಒಂದಷ್ಟು ಚರ್ಚೆ ಮಾಡಿದ್ದೆ. ಆಗ, ಅದೆಲ್ಲಾ ಚರ್ಚೆ ಮಾಡಿದ ಬಳಿಕ, ಅವರು ಹೇಳಿದ್ದು ಒಂದೇ – “ಇದನ್ನೆಲ್ಲಾ ಬರೆದುಕೊಂಡು ಬಾ” ಎಂದು. ನಾನು ಬರೆದು ತಂದು ಕೊಟ್ಟೆ. ಹಾಗೆ ಬರೆಯಬೇಕಾದರೆ ಪತ್ರಿಕೆಯಲ್ಲಿ ಬಂದಿದ್ದು, ಅಲ್ಲಿ ಇಲ್ಲಿ ಕೇಳಿದ್ದು, ಇನ್ಯಾರೋ ಹೇಳಿದ್ದು ಎಲ್ಲಾ ಸೇರಿಸಿದ್ದೆ. ಅದನ್ನೆಲ್ಲಾ ನೋಡಿದ ಬಳಿಕ ಅವರು ಅಜಿತ್ಕುಮಾರ್ ಬಳಿ ಮಾತನಾಡಿ ವಿಭಾಗಪ್ರಚಾರಕರ ಬೈಠಕ್ನಲ್ಲಿ ಅದನ್ನು ಮಂಡಿಸಿದರು. ಹೀಗೆ ಕಾರ್ಯಕರ್ತರನ್ನು ತಯಾರು ಮಾಡುವುದು ಒಂದಾದರೆ, ಇನ್ನೊಂದು ಕಡೆ ಕಾರ್ಯಕರ್ತರು ನೀಡುತ್ತಿದ್ದ ವಿಷಯಗಳ ಗಂಭೀರತೆಯನ್ನೂ ಅರ್ಥಮಾಡಿಕೊಳ್ಳುತ್ತಿದ್ದರು. ಸಂಘಟನೆಯನ್ನು ಕಟ್ಟಬೇಕು. ಈ ರೀತಿ ’ಕಟ್ಟಬೇಕು’ ಅನ್ನುವಂತಹದ್ದು ಸಕಾರಾತ್ಮಕ ರಚನಾತ್ಮಕ ಬುದ್ಧಿ. ಜಯದೇವ ಅವರು ಇಂತಹ ರಚನಾತ್ಮಕ ಬುದ್ಧಿಯ ಒಂದು ಸಾಕಾರಮೂರ್ತಿ. ಅದಕ್ಕಾಗಿ ಬೆಂಗಳೂರಿನಲ್ಲಿ ಅವರು ಮಾರ್ಗದರ್ಶನ ನೀಡಿ ಬೆಳೆಸಿದ ’ಮಿಥಿಕ್ ಸೊಸೈಟಿ’, ’ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ’, ’ಅಬಲಾಶ್ರಮ’, ’ಅನಾಥಸೇವಾಶ್ರಮ’ ಮುಂತಾದ ಸಂಸ್ಥೆಗಳ ಹೆಸರನ್ನು ಇಲ್ಲಿ ಈಗಾಗಲೇ ಉಲ್ಲೇಖಿಸಿದ್ದಾರೆ. ಅದೇ ರೀತಿ ಅವರು ಕರ್ನಾಟಕದಲ್ಲಿ ಹಲವಾರು ಕಡೆ ಸಂಸ್ಥೆಗಳನ್ನು ಬೆಳೆಸಿದ್ದಾರೆ. ayadev was an Institution Builder. ಒಂದು ಸಂಸ್ಥೆ ಹೇಗಿರಬೇಕು ಎನ್ನುವುದಕ್ಕೆ ಬೇಕಾದಂತಹ ನೀತಿ-ನಿಯಮಗಳ ಚೌಕಟ್ಟನ್ನು, ಸಂಸ್ಥೆ ತನ್ನ ಉದ್ದೇಶಕ್ಕಾಗಿ ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವುದನ್ನು ಅವರು ಮಾದರಿಯಾಗಿ ತೋರಿಸಿಕೊಟ್ಟಿದ್ದಾರೆ. ಸಂಸ್ಥೆ ಯಾವೊಬ್ಬನ ಅಹಂಕಾರಕ್ಕಾಗಿಯಲ್ಲ, ಅದು ಸಮಾಜದ ಕೆಲಸಕ್ಕಾಗಿ. ಅದು ಯಾವ ಉದ್ದೇಶಕ್ಕಾಗಿ ಆರಂಭವಾಗಿದೆಯೋ ಆ ಉದ್ದೇಶವನ್ನು ಅದು ಈಡೇರಿಸುತ್ತಿದೆಯೇ ಎಂಬುದನ್ನು ಪ್ರತಿ ಹೆಜ್ಜೆಗೂ ಅವಲೋಕಿಸಿ, ಪರೀಕ್ಷೆಮಾಡಿ, ಅದು ಆ ರೀತಿ ಮಾಡುವುದಕ್ಕೆ ಬೇಕಾದ ಯೋಜನೆಯನ್ನು ರೂಪಿಸಿ, ಸಂಸ್ಥೆಯು ತನ್ನ ಉದ್ದೇಶಿತ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸುವಂತೆ ಮಾಡುವಲ್ಲಿ ತಮ್ಮ ಇಡೀ ಜೀವನವನ್ನು ಸವೆಸಿ ಒಂದು ಅಮೋಘವಾದ ಉದಾಹರಣೆಯನ್ನು ಅವರು ನಮ್ಮೆದುರಿಗಿಟ್ಟಿದ್ದಾರೆ.
ಜೈಲಿನೊಳಗೆ…
ಮೈ.ಚ. ಜಯದೇವ ಅವರನ್ನು ಜೈಲಿನಲ್ಲಿ ಹತ್ತಿರದಿಂದ ನೋಡುವಂತಹ ಅವಕಾಶ ನನಗಿತ್ತು. ೧೯೭೫ರ ಡಿಸೆಂಬರ್ ೧೮ನೇ ತಾರೀಖು ಬೆಂಗಳೂರಿನ ಕಾರಾಗೃಹದಲ್ಲಿ ನಾನು ಪ್ರವೇಶ ಪಡೆದೆ, ಮೀಸಾ ಬಂದಿಯಾಗಿ. ೧೯೭೬ರ ಜೂನ್ ತನಕ ಸುಮಾರು ಆರೂವರೆ ತಿಂಗಳು ಬೆಂಗಳೂರಿನಲ್ಲಿ ನಾವು ಜೊತೆಗಿದ್ದೆವು. ಅನಂತರ ಅವರನ್ನು ಗುಲ್ಬರ್ಗಾಕ್ಕೆ, ನನ್ನನ್ನು ಬಳ್ಳಾರಿಗೆ ವರ್ಗಾಯಿಸಿದರು. ಜೈಲಲ್ಲಿ ಇರಬೇಕಾದರೆ, ಅಲ್ಲಿರುವಂಥವರ ಮಾನಸಿಕ ಸ್ಥಿತಿಯನ್ನು ಕಾದಿಟ್ಟುಕೊಳ್ಳಬೇಕಾಗುತ್ತದೆ. ಜೈಲಿನಲ್ಲಿ ಇರುವಂತಹ ವ್ಯವಸ್ಥೆಯಲ್ಲಿ ರಾಜಕೀಯ ಖೈದಿಗಳಿಗೆ ಏನು ಸಿಗಬೇಕೋ ಅದು ಸರಿಯಾಗಿ ಸಿಗಬೇಕು. ಈ ಎಲ್ಲಾ ಸಂಗತಿಗಳ ಬಗ್ಗೆ, ಜೈಲಿನಲ್ಲೂ ಕೂಡ ಒಬ್ಬ ಜನರಲ್ ಮ್ಯಾನೇಜರ್ ಆಗಿದ್ದಂಥವರು ಜಯದೇವ ಅವರು. ಅವರ ಜೊತೆ ಪ್ರತಿನಿತ್ಯ ನನ್ನದೇನು ಕೆಲಸ ಎಂದರೆ, ಜಯದೇವ ಅವರ ಜೊತೆಗೆ ಆಗ ಜೈಲಿನ ಸೂಪರಿಂಟೆಂಡೆಟ್ ಆಗಿದ್ದ ಶಬನಾನಿ ಅವರ ಆಫೀಸ್ಗೆ ಹೋಗುವುದು (ಸುಮಾರು ಹನ್ನೊಂದೂವರೆ ಹೊತ್ತಿಗೆ, ಜಯದೇವ ಅವರಿಗೆ ಶಬನಾನಿಯವರು ಈ ಅನುಮತಿಯನ್ನು ಕೊಟ್ಟಿದ್ದರು), ಎಲ್ಲಾ ಬಂದಿಗಳ ಪರವಾಗಿ ಅವರದ್ದೇನಾದರೂ ಅಹವಾಲುಗಳಿದ್ದರೆ ಅದನ್ನು ತಿಳಿಸುವುದು. ಜಯದೇವ ಅವರ ಸಹಾಯಕನಾಗಿ ನಾನು ಹೋಗುತ್ತಿದ್ದೆ. ಅವರು ಅಲ್ಲಿಗೆ ಹೋಗುವ ಮೊದಲು ಕೆಲವು ಅಂಶಗಳನ್ನು ಬರೆದುಕೊಳ್ಳುತ್ತಿದ್ದರು. ಯಾರಿಗೆ ಏನೇನು ಆವಶ್ಯಕತೆಯಿದೆ, ಏನೇನು ಸಮಸ್ಯೆಗಳಿವೆ ಇತ್ಯಾದಿ. ಅದನ್ನೆಲ್ಲ ಶಬನಾನಿಯವರ ಜೊತೆ ಮಾತನಾಡುವ ಕೆಲಸ ಜಯದೇವ ಅವರದ್ದು. ಸೂಪರಿಂಟೆಂಡೆಂಟ್ ಇದಕ್ಕೆ ಬೇಕಾದಂತೆಲ್ಲಾ ಉತ್ತರಗಳನ್ನು ಕೊಡುತ್ತಿದ್ದರು, ಇಂಥದ್ದನ್ನು ಮಾಡುತ್ತೇನೆ, ಇಂತಹದ್ದನ್ನು ಮಾಡಬಹುದು, ಇತ್ಯಾದಿ. ಅಂದರೆ ಜೈಲಿನ ಒಳಗಿನ ಅಧಿಕಾರಿಗಳಿಗೆ – Jayadev was a perfect conversationalist, he was a manager. ಜಯದೇವ ಅವರು ಅಧಿಕಾರಿಗಳಿಗೆಂದೂ ’ನಿಮಗೆ ಇದನ್ನು ಕೇಳೋಕೆ ಅಧಿಕಾರವಿಲ್ಲ’ ಎಂದು ಹೇಳುವುದಕ್ಕೆ ಅವಕಾಶವನ್ನೇ ಕೊಡಲಿಲ್ಲ; ಅವರಿಗೆ ತನ್ನ ಸೀಮೆಯೆಲ್ಲಿದೆ ಎಂದು ಗೊತ್ತಿತ್ತು, ತನ್ನ ಅಧಿಕಾರ ಎಲ್ಲಿಯ ತನಕ ಇದೆ ಅಂತಲೂ ಗೊತ್ತಿತ್ತು. ಅದೆಲ್ಲ ಗೊತ್ತಿದ್ದೇ ಅವರು ಜೈಲಿನ ಅಧಿಕಾರಿಗಳ ಜೊತೆ ವ್ಯವಹರಿಸುತ್ತಿದ್ದರು. ಆದರೆ ಅನೇಕ ಸಲ ಏನಾಗುತ್ತಿತ್ತು ಅಂದರೆ ಇದನ್ನೆಲ್ಲಾ ಮಾಡಿ ಮುಗಿಸುವ ಹೊತ್ತಿಗೆ ಹನ್ನೆರಡು ಒಂದುಗಂಟೆಯಾಗೋದು, ಜೈಲಿನಲ್ಲಿ ಹನ್ನೆರಡು ಗಂಟೆಗೆ ಊಟದ ವ್ಯವಸ್ಥೆಯಾಗುತ್ತಿತ್ತು. ನಾವು ಹನ್ನೆರಡೂವರೆ ಒಂದು ಗಂಟೆಗೆ ಬಂದರೆ ಜೈಲಿನಲ್ಲಿ ಅ? ಹೊತ್ತಿಗೆ ಊಟ ಮುಗಿದು ಹೋಗಿರುವುದು. ಜಯದೇವ ಅವರು “ಒಳ್ಳೆಯದಾಯ್ತು ಬಿಡಯ್ಯಾ, ಒಂದು ದಿನ ಉಪವಾಸ ಇರಬಹುದು” ಎನ್ನುವರು. ಅವರಿಗೇನೋ ಸರಿ, ನಾನಾದರೋ ಆಗ ಇಪ್ಪತ್ತು ಇಪ್ಪತ್ತೊಂದು ವ?ದ ಹುಡುಗ. ಜೈಲಿನಲ್ಲಿ ಇನ್ನೇನು ಕ್ಯಾಂಟೀನ್ ಎಂದೆಲ್ಲ ಇರುವುದಿಲ್ಲವಲ್ಲ, ಹಾಗಾಗಿ ಸಾಯಂಕಾಲದವರೆಗೆ ಉಪವಾಸವೇ ಇರಬೇಕು. ಜಯದೇವ ಅವರು ಹಾಯಾಗಿ ಇರುತ್ತಿದ್ದರು. ಅವರಿಗೆ ಊಟ ತಪ್ಪಿಹೋಯ್ತು ಎನ್ನುವಂತಹ ಯಾವ ಚಿಂತೆಯೂ ಇರುತ್ತಿರಲಿಲ್ಲ. “ಇರಲಿ ಬಿಡಯ್ಯಾ, ಈವತ್ತು ಒಂದು ದಿವಸ ತಪ್ಪಿಹೋದರೇನು?” ಎನ್ನುವರು. ನಾನು ಅದಕ್ಕೆ ಕೊನೆಕೊನೆಗೆ ಹನ್ನೆರಡು ಗಂಟೆಗೆ ಮುಂಚೆಯೇ ಶಬನಾನಿಯವರ ಆಫೀಸಿನಿಂದ ಹೊರಗೆ ಬರುವುದಕ್ಕೆ ಪ್ರಯತ್ನ ಮಾಡಬೇಕಾಯಿತು. ಜಯದೇವ ಅವರು ಕ?ವನ್ನು ಹೇಗೆ ಸಹಿಸಬೇಕು ಅನ್ನುವುದನ್ನೂ ಹೀಗೆ ಕಲಿಸಿದರು.
ಜೈಲಿನ ಒಳಗಡೆ ಒಂದು ದಿವಸ ನಾವು ನಡೆದು ಹೋಗುತ್ತಾ ಇರಬೇಕಾದರೆ, ’ಅಲ್ಲಪ್ಪಾ, ಈ ಜೈಲಿನ ಒಳಗಡೆ ಎ? ಬ್ಯಾರಕ್ಗಳಿವೆ?’ ಎಂದು ಕೇಳಿದರು. ನಾನು ’ಎಣಿಸಿಲ್ಲ’ ಅಂದೆ. ’ಎಣಿಸು ನೋಡೋಣ’ ಅಂದರು. ನಾನು ಎಣಿಸಿದೆ, ಅದೆಲ್ಲಾ ಇಷ್ಟಿವೆ ಅಂದೆ; ’ಬರೆದುಕೋ’ ಎಂದರು. ’ಎಷ್ಟು ಎಲೆಕ್ಟ್ರಿಕ್ ಕಂಬ ಇರಬಹುದು?’ ಕೇಳಿದರು. ’ಈ ಕಂಬಗಳು ಕೊನೆಗೆ ಹೀಗೆ ಎಲ್ಲಿಯ ತನಕ ಹೋಗುತ್ತದೆ?’, ’ಜೈಲಿನ ಈ ತುದಿಯಿಂದ ಕೊನೆಯ ತನಕ ನಡೆದು ಹೋದರೆ ಎಷ್ಟು ಹೆಜ್ಜೆ ಆಗುತ್ತದೆ?’ ಎಂದು ಕೇಳಿದರು. ’ಸುಮಾರು ಸಾವಿರದ ಐವತ್ತು ಹೆಜ್ಜೆ’; ’ಸರಿ, ಬರೆದುಕೋ’…. ಈ ರೀತಿ ಸುಮಾರು ೫೦-೬೦ ಪ್ರಶ್ನೆಗಳು, ಕೊನೆಗೆ ಎಲ್ಲಿಯವರೆಗೆ ಅಂದರೆ, ಮೀಸಾಬಂದಿಗಳಲ್ಲಿ ಎಷ್ಟು ಜನ ಗಡ್ಡ ಬಿಟ್ಟಿದ್ದಾರೆ, ಎ? ಜನ ಕನ್ನಡಕ ಹಾಕಿರುವರು, ಎನ್ನುವವರೆಗೆ ಬರೆದಿದ್ದೆ. ನನಗನ್ನಿಸುವುದು, ಯಾಕೆ ಹೀಗೆ ಬರೆಸುತ್ತಿದ್ದಾರೆ ಎಂದು. ನನಗೇನು, ಜೈಲಿನಲ್ಲಿ ಕಾಲಕಳೆಯುವುದಕ್ಕೆ ಏನೋ ಒಂದು ಬೇಕಲ್ಲ ಎಂದು ಅವನ್ನೆಲ್ಲ ಶ್ರದ್ಧೆಯಿಂದಲೇ ಮಾಡಿದ್ದೆ. ಆದರೆ ಜಯದೇವ ಅವರು ಹೇಳಿದ್ದೇನೆಂದರೆ, “ನಾವು ಎಲ್ಲಿದ್ದೇವೋ ಅದು ಹೇಗಿದೆ ಎಂದು ನಮಗೆ ಪೂರ್ತಿ ಮಾಹಿತಿ ಗೊತ್ತಿರಬೇಕು. ನೋಡಪ್ಪಾ, ಆರು ತಿಂಗಳಿನಿಂದ ನಮಗೆ ಇದೇ ಮನೆ ಆಗಿರೋದು, ನಮ್ಮ ಮನೆ ನಮಗೇ ಗೊತ್ತಿಲ್ಲ ಅಂದ್ರೆ ಹೇಗೆ? ಕಣ್ಣು ಮುಚ್ಚಿಕೊಂಡು ಕೂಡಾ ಹೋಗೋ ಹಾಗಿರಬೇಕಲ್ವಾ ನಮ್ಮ ಮನೇಲಿ? ಬಾಗಿಲು ಕಿಟಕಿಗಳೆಲ್ಲಿವೆ, ಮೆಟ್ಟಿಲು ಎಲ್ಲಿ ಬರುತ್ತದೆ, ಮತ್ತೊಂದು ಮಗದೊಂದು ಎಲ್ಲ ಗೊತ್ತಿರಬೇಕು ತಾನೇ?” ಎಂದು. ಜೈಲಿನ ಒಂದೊಂದು ಭಾಗವನ್ನೂ ಈ ರೀತಿ ಅವರು ನನ್ನ ಬಳಿ ಬರೆಸಿದ್ದರು. ಹೀಗೆ ಸೂಕ್ಷ್ಮ ಅವಲೋಕನವನ್ನು ವಿಸ್ತೃತವಾದಂತಹ ಆಲೋಚನೆಯನ್ನು ಪ್ರತಿಯೊಂದು ಸಂಗತಿಯಲ್ಲೂ ಹೇಗೆ ಮಾಡಬೇಕು ಎಂಬುದನ್ನು ಅವರು ಸಹಜವಾಗಿ, ಆದರೆ ಯೋಜಿತವಾಗಿ ಮಾಡುತ್ತಾ ಹೋದರು. ಹೀಗೆ ಹಲವಾರು ಸಂಗತಿಗಳನ್ನು ಅವರ ಬಗ್ಗೆ ಹೇಳಬಹುದು.
ಎಲೆಮರೆಯ ’ಕ್ರೈಸಿಸ್ ಮ್ಯಾನೇಜರ್’
ದೇಶದ, ಧರ್ಮದ, ಸಮಾಜದ ಹಿತಕ್ಕೆ ಸಂಬಂಧಪಟ್ಟಂತಹ ಯಾವುದೇ ವಿಚಾರ ಬರಲಿ, ಅದಕ್ಕೆ ಜಯದೇವ ಅವರು ಸಂಘದ ಒಬ್ಬ ಕಾರ್ಯಕರ್ತನಾಗಿ, ಸಮಾಜದ ಜವಾಬ್ದಾರಿಯುತ ನಾಗರಿಕನಾಗಿ, ಒಬ್ಬ ಸಾರ್ವಜನಿಕ ವ್ಯಕ್ತಿಯಾಗಿ ಕೂಡಲೇ ಸ್ಪಂದಿಸುತ್ತಿದ್ದರು. ಅವರು ಅಂತಹ ಸಂಗತಿಗಳಿಗೆ ಸದಾ ಸಿದ್ಧರಿರುತ್ತಿದ್ದರು. ಅದು ಹಂಪಿಯ ಹೋರಾಟವಿರಬಹುದು, ಕನಕಪೀಠ ವಿವಾದದ್ದಿರಬಹುದು, ಸೌಂದರ್ಯಸ್ಪರ್ಧೆಯ ವಿರುದ್ಧವಿರಬಹುದು, ಇಲ್ಲಿ ನಡೆದಂತಹ ಯಾವುದೇ ಆಂದೋಲನವಿರಬಹುದು, ಆದರೆ ಅದಾವುದರಲ್ಲೂ ಅವರು ತಾನು ವೇದಿಕೆ ಹತ್ತಿ ಭಾಷಣ ಮಾಡಿ ತನ್ನ ನೇತೃತ್ವದಲ್ಲೇ ನಡೆಯಬೇಕೆಂದು ಆಶಿಸಲಿಲ್ಲ. ಸಮಾಜದ ಕೆಲಸ ಆಗಬೇಕೆನ್ನುವ ಕಳಕಳಿ ಇತ್ತೇ ಹೊರತು ಇದು ನನ್ನ ನೇತೃತ್ವದಲ್ಲಿ ಆಗಬೇಕು, ನಾನೊಬ್ಬ ಅಗ್ರಣಿಯಾಗಿ ನಿಲ್ಲುತ್ತೇನೆ ಎಂದು ಯೋಚಿಸಲಿಲ್ಲ. ಅದಕ್ಕೆ ಅಗತ್ಯವಾದ ಕಾರ್ಯಕರ್ತರನ್ನು ಯೋಜಿಸಿದರು, ಯಾರ ನೇತೃತ್ವದಲ್ಲಿ ನಡೆಯಬೇಕೆಂದು ಯೋಜನೆ ಮಾಡಿದರು, ಸಮಿತಿಯನ್ನು ನಿಯೋಜಿಸಿದರು, ಹೇಗೆ ನಡೆಯಬೇಕು ಎಂದು ವಿಚಾರ ಮಾಡಿದರು ಬಿಕ್ಕಟ್ಟುಗಳು ಬಂದಾಗ ಅದನ್ನು ಪರಿಹರಿಸುವ crisis management ಅವರಿಗೆ ಕರಗತವಾಗಿತ್ತು. ಹೀಗೆ ಒಬ್ಬ ವ್ಯವಸ್ಥಾಪಕನ ದೃಷ್ಟಿಯಿಂದ, ಒಬ್ಬ ಅಣ್ಣನಾಗಿ, ಸಾಮಾಜಿಕ ಕಾರ್ಯಕರ್ತನಾಗಿ, ಸಂಘದ ಜವಾಬ್ದಾರಿಯುತ ಅಧಿಕಾರಿಯಾಗಿ ಪ್ರತಿಯೊಂದು ಭೂಮಿಕೆಯಲ್ಲೂ ಒಂದು ಆದರ್ಶದ ಸ್ಥಿತಿಯನ್ನು ತಲಪುವ ಪ್ರಯತ್ನವನ್ನು ಜಯದೇವ ಅವರು ಮೌನವಾಗಿ ಮಾಡುತ್ತಾ ಬಂದರು.
ಈ ರೀತಿ ಅನೇಕ ಮುಖಗಳಲ್ಲಿ ಆದರ್ಶವನ್ನೂ ಮಾದರಿಯನ್ನೂ ನಮ್ಮೆದುರಿಗೆ ಇಟ್ಟರು. ಹೊಸದನ್ನು ಕಲಿಯುವುದಕ್ಕೆ ಅವರೆಂದೂ ಹಿಂಜರಿಯಲಿಲ್ಲ, ಆಧುನಿಕತೆಯನ್ನು ದೂರೀಕರಿಸುವಂತಹ ಸಂಪ್ರದಾಯನಿ?ರಾಗಿರಲಿಲ್ಲ. ಜೀವನದಲ್ಲಿ ಮೌಲ್ಯದ ಬಗ್ಗೆ ಆಗ್ರಹಪಡಿಸಿದರು. ಪರಂಪರೆಯ ಬಗ್ಗೆ ಗೌರವವನ್ನು ಇಟ್ಟುಕೊಂಡರು. ಧರ್ಮದ ಮಾತಿನಂತೆ ನಡೆಯುವುದಕ್ಕೆ ತಾನೊಬ್ಬನೇ ಪ್ರಯತ್ನ ಮಾಡಿದ್ದಲ್ಲ, ಜನರೂ ಮಾಡಬೇಕು ಅನ್ನುವುದರ ಬಗ್ಗೆ ಆಗ್ರಹಪಡಿಸಿದರು. ಆಧುನಿಕತೆಗೆ ಬೆನ್ನುಹಾಕಲಿಲ್ಲ, ತಂತ್ರಜ್ಞಾನವನ್ನು ಸ್ವಾಗತಿಸಿದರು. ಕಂಪ್ಯೂಟರ್ ಕಲಿಯಲು ತನ್ನ ಕೊನೆಯ ವ?ಗಳಲ್ಲಿ ಕೂಡ ಅದಕ್ಕಾಗಿ ಪಾಠ ಹೇಳಿಸಿಕೊಳ್ಳುವ ಪ್ರಯತ್ನ ಮಾಡಿದರು. ಒಮ್ಮೆ ಬೆಂಗಳೂರಿನ ಹೆಣ್ಣುಮಗಳು ತೇಜಸ್ವಿನಿಯ ಮಿಲಿಟರಿ ’ಪಾಸಿಂಗ್ಔಟ್ ಪೆರೇಡ್’ನ್ನು ನೋಡುವುದಕ್ಕೆ ಅವರು ಹೋಗಿದ್ದರು. ಮಿಲಿಟರಿಯಲ್ಲಿ ಆಕೆಯ ಅನುಭವವನ್ನು ಪೂರ್ತಿಯಾಗಿ, ಒಂದೆರಡು ಗಂಟೆ ಮೌನವಾಗಿ ಸಹನೆಯಿಂದ ಕೇಳಿ ಅದರ ಬಗ್ಗೆ ಪ್ರಶ್ನೆಗಳನ್ನೂ ಕೇಳಿ ತಿಳಿದುಕೊಂಡದ್ದು ಗಮನಿಸಿದರೆ – ವಿದ್ಯಾರ್ಥಿಯಂತೆ ತನಗೆ ಕಲಿಯುವುದು ಜೀವನದುದ್ದಕ್ಕೂ ಇದೆ ಎಂದು ಅವರು ಬಹುಶಃ ಯೋಚನೆ ಮಾಡಿದ್ದರು ಎಂದು ನಾನು ತಿಳಿದಿದ್ದೇನೆ.
ಕಾರ್ಯಕರ್ತರಿಗೆ ಮಾದರಿ
ಹೀಗೆ ಅನೇಕ ಮುಖಗಳಲ್ಲಿ ಜಯದೇವ ಅವರು ಒಬ್ಬ ಆದರ್ಶ ಸ್ವಯಂಸೇವಕನಾಗಿ ನಮ್ಮ ಕಣ್ಣೆದುರು ಕಾಣುತ್ತಾರೆ. ಸಂಘದ ಕಾರ್ಯಕರ್ತನೊಬ್ಬ ಹೇಗಿರಬೇಕು? ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ: ’ಮುಕ್ತ ಸಂಗೋsನಹಂವಾದೀ ಧೃತ್ಯುತ್ಸಾಹಸಮನ್ವಿತಃ, ಸಿದ್ಧ್ಯಸಿದ್ಧ್ಯೋರ್ನಿರ್ವಿಕಾರಃ ಕರ್ತಾ ಸಾತ್ತ್ವಿಕ ಉಚ್ಯತೇ’.
ಮುಕ್ತಸಂಗ – ಜಯದೇವ ಎಲ್ಲರ ಜೊತೆಯಲ್ಲೇ ಇದ್ದರು, ಆದರೂ ನಿಸ್ಸಂಗಿ; ಈಗತಾನೇ ಸ್ವಾಮಿಜೀ ಹೇಳಿದಂತೆ, ಅವರು ’ಶ್ವೇತವಸ್ತ್ರದ ಸಂನ್ಯಾಸಿಯಂತೆ ಒಬ್ಬ ದಾರ್ಶನಿಕನಂತಿದ್ದರು.’
ಅನಹಂವಾದೀ – ತನ್ನ ಅಹಂಕಾರವನ್ನೆಂದೂ ಮೆರೆಯುತ್ತಿರಲಿಲ್ಲ. ಮಿಥಿಕ್ ಸೊಸೈಟಿಯಲ್ಲಿ ಎಂಬತ್ತು ವ? ಆದ ನಾಲ್ಕು ಜನ ಹಿರಿಯರಿಗೆ ಗೌರವಿಸಬೇಕೆಂದು ಯೋಜನೆ ಮಾಡಿದ್ದರು; ಯಾರು ಮಿಥಿಕ್ ಸೊಸೈಟಿಯ ಏಳ್ಗೆಗಾಗಿ ದುಡಿದಿದ್ದರೋ ಅಂಥವರನ್ನು. ಜಯದೇವ ಅವರನ್ನು ವೇದಿಕೆಗೆ ಕರೆದಾಗ ಅವಾಕ್ಕಾದರೂ, ಕರೆದಿದ್ದರಿಂದ ವೇದಿಕೆಯ ಮೇಲೆ ಹೋದರು. ಆದರೆ ಕಾರ್ಯಕ್ರಮ ಮುಗಿದ ಬಳಿಕ, ಕಾರ್ಯದರ್ಶಿ ವಿ. ನಾಗರಾಜರನ್ನು ’ನೀನು ಹೀಗೆಲ್ಲಾ ಹೇಗೆ ಮಾಡಿದೆ?’ ಎಂದು ಹಿಡಿದು ಜಾಡಿಸಿದರೆಂದು ಕಾಣುತ್ತದೆ. ಎಂಬತ್ತು ವ? ಆಗಿರುವ ಕೆಲವು ಹಿರಿಯರಿಗೆ, ಸಂಘದ ಕಾರ್ಯಕರ್ತರಾಗಿದ್ದವರಿಗೆ, ಮೈಸೂರಿನಲ್ಲಿ ಅಲ್ಲಿನ ಕಾರ್ಯಕರ್ತರು ಧಾರ್ಮಿಕ ಕಾರ್ಯಕ್ರಮ ಮತ್ತು ಅನೌಪಚಾರಿಕ ಮಿಲನ ಮಾಡಿ ಸಂಮಾನ ಮಾಡುವುದೆಂದು ಉತ್ಸಾಹದಿಂದ ಯೋಜಿಸಿದರು. ಉಳಿದವರಿಗೆಲ್ಲಾ ಹೇಳಿದ್ದರು, ಸೂಚನೆಯಂತೆ ಹೋದರು. ಆದರೆ ಏನೋ ನೆವ ಹೇಳಿ ಜಯದೇವ ಅವರು ಆ ಕಾರ್ಯಕ್ರಮಕ್ಕೆ ಹೋಗಲೇ ಇಲ್ಲ; ಇನ್ನೇನೋ ಕೆಲಸವಿದೆಯೆಂದು ತಪ್ಪಿಸಿಕೊಂಡರು!
ಧೃತ್ಯುತ್ಸಾಹಸಮನ್ವಿತಃ – ಸೋಲು ಕಂಡಾಗ ತಾನು ಅಳುಕಲಿಲ್ಲ, ಇನ್ನೊಬ್ಬರಿಗೆ ಅಳುಕುವುದಕ್ಕೆ ಬಿಡಲಿಲ್ಲ. ಎದೆಗುಂದದ ನಿಲುಮೆ. ಜೀವನದಲ್ಲಿ ಏಳು-ಬೀಳು ಇರುವಂಥದ್ದೇ, ಸೋಲು-ಗೆಲವುಗಳನ್ನು ಕಾಣಲೇಬೇಕು, ಅದರಿಂದ ಎದೆಗೆಡಬಾರದು. ಜೋಶ್ ಮತ್ತು ಹೋಶ್ ಎಂದು ಹೇಳುತ್ತಾರೆ ಹಿಂದಿಯಲ್ಲಿ, ಧೃತಿ ಮತ್ತು ಉತ್ಸಾಹ ಅವೆರಡೂ ಇರಬೇಕು ಜೀವನದಲ್ಲಿ.
ಸಿದ್ಧ್ಯಸಿದ್ಧ್ಯೊಃ ನಿರ್ವಿಕಾರಃ – ಗೆಲವು ಮತ್ತು ಸೋಲು ಕಂಡಾಗ, ಸಿದ್ಧಿ-ಅಸಿದ್ಧಿಯಲ್ಲಿ ನಿರ್ವಿಕಾರ ಬುದ್ಧಿ. ಇಂತಹವನನ್ನು ಸಾತ್ತ್ವಿಕ ಕಾರ್ಯಕರ್ತ ಎಂದು ಹೇಳುತ್ತಾರೆ ಭಗವದ್ಗೀತೆಯಲ್ಲಿ. ಜಯದೇವ ಅವರು ಇಂತಹ ಭಗವಂತನ ಉಪದೇಶಕ್ಕೆ ನಮ್ಮ ಲೋಕದಲ್ಲಿ ಮಾದರಿ. ’ಇಂತಹ ಆದರ್ಶ ಇರಬಹುದೇ?’ ಎನ್ನುವ ಪ್ರಶ್ನೆ ಯಾರಿಗಾದರೂ ಬಂದರೆ ’ಅಂತಹ ಆದರ್ಶ ವ್ಯಕ್ತಿ ಇಲ್ಲಿದ್ದಾರೆ; ಇದೇ ಎಲುಬು-ಮೂಳೆ-ಮಾಂಸದಲ್ಲಿ ಅಂತಹವರನ್ನು ನೋಡುವುದಕ್ಕೆ ಸಾಧ್ಯವಾಗಿದೆ’ ಎಂದು ಜಯದೇವರನ್ನು ಉದಾಹರಿಸಬಹುದು.
ಜಯದೇವ ಅವರು ಗಂಭೀರರು, ಆದರೆ ಅವರೊಳಗಿನ ಆತ್ಮೀಯತೆ ಹೇಗಿತ್ತು ಎನ್ನುವುದು ಮಂಕುತಿಮ್ಮನ ಕಗ್ಗದ ಸಂದೇಶದಲ್ಲಿ ಡಿವಿಜಿ ಅವರು ಹೇಳಿರುವಂತೆ: ’ಎರಡು ಕೋಣೆಗಳ ನೀಂ ಮಾಡು ಮನದಾಲಯದಿ, ಹೊರಕೋಣೆಯಲಿ ಲೋಗರಾಟಗಳನಾಡು, ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ, ವರಯೋಗಸೂತ್ರವಿದು – ಮಂಕುತಿಮ್ಮ’. ಮನಸ್ಸಿನಲ್ಲಿ ಎರಡು ಕೋಣೆಗಳನ್ನು ಮಾಡಬೇಕಂತೆ, ಹೊರಕೋಣೆಯಲ್ಲಿ ಅನೇಕ ರೀತಿಯ ಲೋಕವ್ಯಾಪಾರಗಳನ್ನು ಮಾಡಬೇಕು, ವಿರಮಿಸೊಬ್ಬನೇ ಮೌನದೊಳಮನೆಯ ಶಾಂತಿಯಲಿ. ಒಳಮನೆ ಶಾಂತಿಯಲ್ಲಿ ಒಬ್ಬನೇ ಮೌನವಾಗಿರಬೇಕು, ಈ ಕಗ್ಗದ ದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಂಡು ಬಂದವರನ್ನು ನಾನು ಕಂಡಿದ್ದು ಜಯದೇವರಲ್ಲಿ.
ಹೀಗೆ ಜಯದೇವರು ಆದರ್ಶಕ್ಕಾಗಿ ಬಾಳಿದರು. ಆದರ್ಶವನ್ನು ಬಾಳುವಂಥಾದ್ದು ಅಸಾಧ್ಯ ಎಂದು ಅವರಿಗನಿಸಲಿಲ್ಲ; ಕ?ಸಾಧ್ಯ ಇರಬಹುದು, ಆದರೆ ಅಸಂಭವ ಎಂದು ಅವರಿಗನಿಸಲಿಲ್ಲ. ಬೇರೆಯವರಿಂದಲೂ ಅದನ್ನೇ ಬಯಸಿದರು. ಅದಕ್ಕಾಗಿ ಅವರು ಕಠೋರವಾಗಿಯೂ ಇದ್ದರು. ’ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ’ ಎಂದು ಹೇಳುವಂತೆ ಇದ್ದರು. ಇದೇ ಮೈದಾನದಲ್ಲಿ ಎಪ್ಪತ್ತನೇ ದಶಕದಲ್ಲಿ ನಡೆದ ದೊಡ್ಡ ಕಾರ್ಯಕ್ರಮ, ಎಮರ್ಜೆನ್ಸಿಯ ಬಳಿಕ; ಸಾವಿರಾರು ಜನ ಬಂದಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಕೆಲವೇ ಕೆಲವು ಕಾರ್ಯಕರ್ತರು ಉಳಿದಿದ್ದೆವು. ಇಡೀ ಮೈದಾನದಲ್ಲಿ ಕುರ್ಚಿಗಳು ಇದ್ದವು. ರಾತ್ರಿ ಇಡೀ ಅದನ್ನು ಕಾಯಬೇಕಿತ್ತು. ಜಯದೇವ ಹಾಗೂ ನಾವೊಂದಿಷ್ಟು ಜನ ರಾತ್ರಿ ಮೊಸರನ್ನ ಚಿತ್ರಾನ್ನ ತಿಂದು ಇಡೀ ರಾತ್ರಿ ಕಾವಲು ಕಾದೆವು. ಜಯದೇವ ಅವರು ಎಲ್ಲಾ ಕಾರ್ಯಕರ್ತರ ಜೊತೆಗೆ ಕೊನೆಯವರೆಗೆ ಇದ್ದರು. ಅವರ ಕೆಲಸದಲ್ಲಿ ಅವರ ಜೊತೆ ನಿಂತರು, ಅವರ ವ್ಯಕ್ತಿಜೀವನದಲ್ಲಿ ನಿಂತರು, ಕ?ದಲ್ಲಿ ಜೊತೆ ನಿಂತರು, ಸುಖದಲ್ಲಿ ಬೆನ್ನುತಟ್ಟಿದರು. ಆದ್ದರಿಂದ ಜಯದೇವರನ್ನು ನೆನೆಸಿಕೊಳ್ಳುವ ಲಕ್ಷಾಂತರ ಮನೆಗಳು ಇಂದಿವೆ. ಅವರು ಹೋಗಿದ್ದಾರೆ ಎಂದು ನೆನೆಸಿಕೊಳ್ಳುವುದು ಬಹುಶಃ ಸಾಧ್ಯವಿಲ್ಲ.
ಅವರನ್ನು ಕೊನೆಯವರೆಗೂ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ನೋಡಿಕೊಳ್ಳುತ್ತಿದ್ದ ಡಾಕ್ಟರ್ ಹೇಮಚಂದ್ರಸಾಗರ್ ಅವರು “ನಾನು ಪ್ರಧಾನಮಂತ್ರಿ ಬಂದು ಹೇಳಿದರೂ ಕೂಡ ಸಪೋರ್ಟ್ ಸಿಸ್ಟಮ್ ತೆಗೆಯುವುದಿಲ್ಲ” ಎಂದು ಹೇಳಿದ್ದರು. ನಾವೆಲ್ಲಾ ಆಸೆ ಬಿಟ್ಟಿದ್ದೆವು, ಆದರೆ ಸಾಗರ್ ಅವರು ಹೇಳಿದ್ದರು – “ಇಲ್ಲ, ನಾನು ಕೊನೆಯವರೆಗೂ ಪ್ರಯತ್ನ ಪಡುತ್ತೇನೆ. ಯಾಕೆಂದರೆ ಇದು ನಾನು ಡಾಕ್ಟರ್ ಆಗಿ ತೆಗೆದುಕೊಂಡಿರುವ ಶಪಥ.” ಫೆಬ್ರುವರಿ ೧೩ನೇ ತಾರೀಖು ಸಾಗರ್ ಆಸ್ಪತ್ರೆಯನ್ನು ಪ್ರವೇಶಿಸುತ್ತಿದ್ದಂತೆಯೇ ಹೇಮಚಂದ್ರಸಾಗರ್ ಅವರು ಎದುರು ಸಿಕ್ಕಿದವರು, “ನಾನು ಆಸೆ ಬಿಟ್ಟಿದ್ದೇನೆ” ಎಂದು ಹೇಳಿದರು, ಅದಾಗಿ ಒಂದು ವಾರ ಜಯದೇವ ಅವರು ಇದ್ದರು.
’ಮರ್ಕರ್ ಭೀ ಅಮರ್ ರಹೇ ಕೈಸೇ?’
ಇತಂಹ ಜಯದೇವ ಅವರನ್ನು ಕೆಲವರು ತಮ್ಮ ’ಗಾಡ್ಫಾದರ್’ ಎಂದಿದ್ದಾರೆ, ಕೆಲವರು ’ಅಜಾತಶತ್ರು’ ಎಂದಿದ್ದಾರೆ. ’ಮಹಾದೇವನ ಆರಾಧಕ’ ಅವರು ಎಂದು ಸ್ತುತಿಸಿದ್ದಾರೆ, ’ಮರ್ಕರ್ ಭೀ ಅಮರ್ ರಹೇ ಕೈಸೇ?’ – ಮಡಿದ ಮೇಲೂ ಬದುಕಿರುವಂತಹ ಜೀವನವನ್ನು ಮಾಡುವಂತಹದ್ದನ್ನು ಸಂಘದ ಕಾರ್ಯಕರ್ತರಿಗೆ ನೀನು ಹೇಗೆ ಕಲಿಸಿದೆ? – ಎಂದು ಡಾಕ್ಟರ್ಜೀ ಅವರನ್ನು ಕೇಳುವ ಗೀತೆಯೊಂದು ಸಂಘದಲ್ಲಿದೆ. ಒಂದು ಹಿರಿದಾದ ಧ್ಯೇಯಕ್ಕೆ, ಎಲೆಮರೆಯ ಕಾಯಿಯಂತೆ ಇದ್ದು, ಇಡೀ ಜೀವನ ಸವೆದು ಸವೆದು, ಮಡಿದ ಮೇಲೂ ಬದುಕಿರುವವರ ಸಾಲಿಗೆ ಜಯದೇವ ಅವರು ಸೇರಿದರು. ಇಂತಹ ಒಂದು ಅಮೋಘ ಸಂಗತಿಯನ್ನು ಸಂಘ ಹೇಗೆ ತಿಳಿಸಿದೆ, ಅದು ಯಾಕೆ ತಿಳಿಸಿದೆ ಎಂದರೆ: ಸಂಘದಲ್ಲಿ ನಡೆಸಿಕೊಂಡು ಬಂದಿರುವಂತಹ ಕಾರ್ಯಪದ್ಧತಿ, ಪಾರಿವಾರಿಕ ಆತ್ಮೀಯತೆ, ಇವೆಲ್ಲವಕ್ಕೂ ಇರುವಂತಹ ವೈಚಾರಿಕ ಅನು?ನ, ಮತ್ತು ಸರ್ವೋಚ್ಚವಾಗಿರುವಂತಹ ಧ್ಯೇಯ.
ಜಯದೇವ ಅವರು ತುಂಬಾ ಇಚ್ಛೆಪಡುತ್ತಿದ್ದಂತಹ ಸಂಘದ ಹಾಡು ಇದು: ’ವರ ಭವ್ಯ ಭಾರತದ ನಿರ್ಭೀತ ಸಂತತಿಗೆ ಸಂಗ್ರಾಮ ಸಂಗೀತ ಹಾಡುವಾಸೆ’. ಅವರು ಅನೇಕ ಬಾರಿ ಮಾತನಾಡುವಾಗ ಇದರ ನುಡಿಗಳನ್ನು ಹೇಳುತ್ತಿದ್ದರು, ನಮ್ಮನ್ನು ಹುರಿದುಂಬಿಸುವುದಕ್ಕೆ. ಧ್ಯೇಯವನ್ನು ಮರೆಯಬಾರದೆಂಬ ಕಾರಣಕ್ಕೆ ನಮ್ಮನ್ನು ಎಚ್ಚರಿಸುವುದಕ್ಕೆ. ’ಮಾನವತೆಯುದ್ಧಾರ ಮಾತೃವೈಭವಕಾಗಿ ಬೆವರು ನೆತ್ತರು ಸುರಿಸಿ ದುಡಿಯುವಾಸೆ, ದೇಶಹಿತ ಧರ್ಮಹಿತ ಸರ್ವಹಿತ ಜಗಕಾಗಿ ಕಲಿತನದಿ ಕಾದಾಡಿ ಮಡಿಯುವಾಸೆ’. ಜಯದೇವ ಅವರು ಇದೇ ರೀತಿ ಮಾಡಿದರು. ’ದೇಶಹಿತ ಧರ್ಮಹಿತ ಸರ್ವಹಿತ ಜಗಕಾಗಿ ಮಾತೃವೈಭವಕಾಗಿ, ಜಾತಿ-ಮತದ ಸೋಂಕಿಲ್ಲ ಮೇಲು-ಕೀಳಿನ ಎಣಿಕೆಯಿಲ್ಲ’ – ಹೀಗೆ ಮಾನವತೆ ಎನ್ನುವುದನ್ನೇ ಮನಸ್ಸಿನಲ್ಲಿಟ್ಟುಕೊಂಡು ಕೆಲಸಮಾಡಿದಂತಹ ಸಂಘದ ಕಾರ್ಯಕರ್ತಶ್ರೇಷ್ಠರ ಉದಾಹರಣೆಗಳಲ್ಲಿ ಜಯದೇವ ಅವರು ವಿರಾಜಿಸುತ್ತಾರೆ. ಅನೇಕ ಸಾರಿ ಅವರು ಹೇಳುತ್ತಿದ್ದರು, ಆ ಪದ್ಯದ ಕೊನೆಯ ನುಡಿಯಲ್ಲಿ ಬರುವ – ’ಧ್ಯೇಯದೇವನ ಪದದಿ ಅರ್ಚನೆಯ ಹೂವಾಗಿ, ಧನ್ಯತೆಯ ಸಂತೃಪ್ತಿ ಪಡೆಯುವಾಸೆ’ ಎಂದು. ಇನ್ನೊಂದು ಮಾತು ಹೇಳಬೇಕಾದರೆ, ಮುಂದಿನ ಪದಗಳನ್ನು ಹೇಳುವಾಗ ಅವರು ಭಾವುಕರಾಗುತ್ತಿದ್ದರು, ನಾನು ನೋಡಿದ್ದೇನೆ, ಅದು – ’ವ್ಯಕ್ತಿಗತ ಮಾನಾಪಮಾನಗಳ ಬದಿಗಿರಿಸಿ ಭಾರತಿಯ ಅಡಿಯ ಹುಡಿಯಾಗುವಾಸೆ.’
ಹೀಗೆ ನಮ್ಮ ನಡುವೆ ಇದ್ದಂತಹ ಸಂತಪುರು?, ದಾರ್ಶನಿಕ ಪುರುಷ, ವ್ಯವಸ್ಥಾಕೌಶಲದ ಚಾಣಾಕ್ಷ, ಸಂಘಟನೆಯ ರೂವಾರಿ, ಸಂಸ್ಥೆಗಳ ಶಿಲ್ಪಿ, ಕಾರ್ಯಕರ್ತರ ಆತ್ಮೀಯ ಅಣ್ಣ ’ಜಯದೇವ’ ಅನ್ನುವ ವ್ಯಕ್ತಿ ಶಕ್ತಿಯಾಗಿ, ಸಂಘಟನೆಯ ಸಾಕಾರಮೂರ್ತಿಯಾಗಿ, ಜೀವಂತ ಉದಾಹರಣೆಯಾಗಿ ನಮ್ಮ ಜೊತೆಗಿದ್ದರು ಎನ್ನುವುದೇ ನನ್ನಂತಹ ಕಾರ್ಯಕರ್ತರಿಗೆ ಜೀವನದುದ್ದಕ್ಕೂ ನೆನಪಿಸಿಕೊಂಡಾಗೆಲ್ಲ ಕರ್ತವ್ಯವನ್ನೇ ನೆನಪಿಸುವಂತೆ ಆಗುವ ಮಾದರಿಯನ್ನು ಕೊಟ್ಟು ಹೋಗಿರುವಂತಹ ಹಿರಿಯ ಚೇತನಕ್ಕೆ ನಮೋ ನಮಃ.