ಮುಲ್ಲಾ ನಾಸಿರುದ್ದೀನ ಜ್ಞಾನೋದಯ ಪಡೆದಿದ್ದನೆ? ಪಡೆದಿರಲೇ ಬೇಕು. ಆತ ಪಡೆದಿಲ್ಲವೆಂದರೆ ಉಳಿದ ಯಾರೂ ಪಡೆದಿರಲು ಸಾಧ್ಯವಿಲ್ಲ. ಮುಲ್ಲಾ ಒಬ್ಬ ಸೂಫಿಸಂತ. ಸೂಫಿ ತತ್ತ್ವಜ್ಞಾನದ ಜಗತ್ತಿನಲ್ಲಿ ಬಹಳ ಹಿಂದಿನ ಕಾಲದಿಂದಲೂ ಕೇಳಿಬರುವ ಹೆಸರು ಅವನದು. ಈ ಇಡೀ ಜಗತ್ತೇ ಒಂದು ಅಣಕು ಎನ್ನುವ ಮುಲ್ಲಾ, ಅಂಥ ಅಣಕುಲೋಕದ ಪ್ರತಿನಿಧಿ. ಅವನೊಬ್ಬ ಸೀರಿಯಸ್ ಜೋಕರ್. ಅವನನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಬಲ್ಲೆವಾದರೆ ಹಲವು ನಿಗೂಢಗಳನ್ನು ಅವನು ನಮಗೆ ತೋರಿಸಿಯಾನು.
ಮುಲ್ಲಾ ನಾಸಿರುದ್ದೀನ, ಈ ಜಗತ್ತು ಒಂದು ದುರಂತಗಾಥೆಯಲ್ಲ; ಹಾಸ್ಯನಾಟಕ ಇದ್ದ ಹಾಗೆ ಎನ್ನುವುದನ್ನು ತನ್ನ ಬದುಕಿನ ಪ್ರಸಂಗಗಳ ಮೂಲಕ ಹೇಳುತ್ತಾನೆ. ಇದು ಅದೆಂಥಾ ಜಗತ್ತೆಂದರೆ ಇಲ್ಲಿ ನೀವು ನಗಲು ಕಲಿತರೆ ಎಲ್ಲವನ್ನೂ ಕಲಿತಂತೆ. ನಿಮ್ಮ ಪ್ರಾರ್ಥನೆ ಆಳದಲ್ಲಿ ಅತ್ಯಂತ ಪ್ರಬುದ್ಧವಾದ ಮುಗ್ಧ ನಗುವೇ ಆಗಿರಬೇಕು. ನಿಮ್ಮ ಪ್ರಾರ್ಥನೆ ಒಂದು ಗೋಳಾಟವಾಗಿದ್ದರೆ ಮತ್ತು ದೇವರ ಜೊತೆ ನಿಮಗೆ ಹರಟೆ ಹೊಡೆಯುತ್ತ ನಗುವುದು ಸಾಧ್ಯವಿಲ್ಲ ಎಂದಾದರೆ ನೀವು ಧಾರ್ಮಿಕರಾಗುವುದು ಕೂಡ ಸಾಧ್ಯವಿಲ್ಲ. ಕ್ರಿಶ್ಚಿಯನ್ನರು, ಯಹೂದಿಗಳು, ಮುಸ್ಲಿಮರು ತಮ್ಮ ದೇವರುಗಳ ಬಗ್ಗೆ ಬಹಳ ಗಂಭೀರವಾಗಿರುವವರು. ಆದರೆ ಹಿಂದೂಗಳು ಹಾಗಲ್ಲ. ಅವರು ದೇವರ ಜತೆ ನಗಬಲ್ಲರು. ದೇವರನ್ನೇ ಕಿಚಾಯಿಸಬಲ್ಲರು. ಅವರು ದೇವರನ್ನು ಅದೆಷ್ಟು ಆಳವಾಗಿ ನಂಬುತ್ತಾರೆಂಬುದಕ್ಕೆ ಅದೇ ಸಾಕ್ಷಿ. ನೀವು ದೇವರನ್ನು ನಂಬುವುದಿಲ್ಲವಾದರೆ ಆತನ ಜೊತೆ ಕೂತು ನಗುವುದು ನಿಮಗೆ ಸಾಧ್ಯವಿಲ್ಲದ ಮಾತು. ನಿಮ್ಮ ಹಾಸ್ಯ, ನಗು, ಜೋಕುಗಳಿಂದ ಆತನಿಗೆ ಅವಮಾನವಾದೀತೇನೋ ಎಂದು ಹೆದರುತ್ತೀರಿ ನೀವು. ಅಂಥ ಭಯದಲ್ಲಿ ಹುಟ್ಟಿದ ಧಾರ್ಮಿಕಪ್ರಜ್ಞೆ ಆಳದಲ್ಲಿ ಪೊಳ್ಳಾಗಿರುತ್ತದೆ. ಹಿಂದೂಗಳು ತಮ್ಮ ನಂಬಿಕೆ ಅತ್ಯಂತ ಗಾಢವಾದ್ದರಿಂದ ತಾವು ದೇವರ ಜೊತೆ ನಗಲೂ ಸಾಧ್ಯ; ಹಾಸ್ಯದಿಂದ ನಮ್ಮಿಬ್ಬರ ನಡುವಿನ ಸಂಬಂಧ ಮುರಿದುಬೀಳಲಾರದು ಎಂದು ನಂಬುತ್ತಾರೆ.
ಬೋಧಿಧರ್ಮ, ಬೌದ್ಧಮತದ ಮಹಾನ್ ಗುರು. ಅವನು ತನ್ನ ಶಿಷ್ಯರಿಗೆ ಹೇಳುತ್ತಿದ್ದ: ಯಾವಾಗೆಲ್ಲ ನೀವು ಬುದ್ಧನ ಹೆಸರು ಹೇಳುತ್ತೀರೋ ಆಗೆಲ್ಲ ಕೂಡಲೇ ನಿಮ್ಮ ಬಾಯಿಗಳನ್ನು ಮುಕ್ಕಳಿಸಿಬಿಡಿ. ಆತನ ಹೆಸರು ಅಪಾಯಕರ. ಅದು ನಿಮ್ಮ ಬಾಯಿಯನ್ನು ಅಪವಿತ್ರ ಮಾಡಬಹುದು! ಇನ್ನೊಬ್ಬ ಬೌದ್ಧಸನ್ಯಾಸಿ ಬೊಕುಜು ತನ್ನ ಶಿಷ್ಯರಿಗೆ ಹೇಳುತ್ತಿದ್ದದ್ದು: ನೀವು ಧ್ಯಾನಾಸಕ್ತರಾಗಿರುವಾಗ ಬುದ್ಧ ಮನಸ್ಸಲ್ಲಿ ಹಾದುಹೋದೊಡನೆ ಅವನನ್ನು ಕೊಂದುಬಿಡಿ. ಯಾಕೆಂದರೆ ಧ್ಯಾನಕ್ಕೆ ಕೂತವರು ಏಕಾಂಗಿಗಳಾಗಬೇಕು. ಬುದ್ಧ ಮನಃಪಟಲದಲ್ಲಿ ಕಾಣಿಸಿಕೊಂಡರೆ ಮುಂದೆ ಅವನು ನಿಮ್ಮನ್ನು ಅಂಟಿಕೊಂಡುಬಿಡುತ್ತಾನೆ. ಒಂಟಿಯಾಗಿರುವುದು ಬಹಳ ಕಷ್ಟ ಆಮೇಲೆ. – ಅವರಿಬ್ಬರೂ ಬಹಳ ದೊಡ್ಡ ಬೌದ್ಧಗುರುಗಳಾಗಿದ್ದವರು; ಬುದ್ಧನ ಅನುಯಾಯಿಗಳು, ಬುದ್ಧನನ್ನು ಪ್ರೀತಿಸಿದವರು. ಅದರೆ ಆತನ ಹೆಸರಲ್ಲಿ ಹಾಸ್ಯ ಕೂಡ ಮಾಡಬಲ್ಲವರಾಗಿದ್ದರು. ಬುದ್ಧನ ಜೊತೆ ಅವರ ಸಂಬಂಧ ಅದೆಷ್ಟು ಆತ್ಮೀಯವೂ ವೈಯಕ್ತಿಕವೂ ಆಗಿತ್ತೆಂದರೆ, ತಾವು ಹೇಳಿದ್ದನ್ನು ದುರುದ್ದೇಶದಿಂದ ತಿರುಚಿ ಅಪಾರ್ಥ ಮಾಡಿಕೊಳ್ಳಲಾಗುವುದೆಂಬ ಭಯವನ್ನು ಅವರಿಬ್ಬರೂ ಮೀರಿದ್ದರು. ನೀವು ಪಾಶ್ಚಾತ್ಯ ಜಗತ್ತನ್ನು ನೋಡಿ. ಅಲ್ಲಿ ಏನು ಬೇಕಾದರೂ ದೇವನಿಂದನೆ ಆಗಬಹುದು. ದೇವನಿಂದನೆಯ ಮೇಲೆ ಅತ್ಯಂತ ಉಗ್ರವಾದ ಕಾನೂನುಗಳಿವೆ. ನೀವು ಸಣ್ಣದೊಂದು ಜೋಕ್ ಮಾಡಿದರೂ ಅದು ಕಾನೂನಿನಡಿ ಬಂದು ನಿಮ್ಮನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಯಾಕೆಂದರೆ ಅವರು ದೇವರ ವಿಷಯದಲ್ಲಿ ಯಾವುದನ್ನೂ ಲಘುವಾಗಿ ಪರಿಗಣಿಸಲಾರರು. ಜೋಕುಗಳನ್ನು ಕೂಡ. ನಿಮ್ಮ ದೇವರ ವಿಷಯದಲ್ಲಿಯೂ ನೀವು ಗೆಳೆಯನಂತೆ ಜೋಕು ಮಾಡುತ್ತ, ನಗುತ್ತ ನಿಮ್ಮ ಭಾವನೆಯನ್ನು ವ್ಯಕ್ತಪಡಿಸಲಾರಿರಿ ಎಂದರೆ ಖಂಡಿತವಾಗಿಯೂ ನೀವು ಅಸ್ವಸ್ಥರು ಎನ್ನಬೇಕಾಗುತ್ತದೆ.
ಇಂಗ್ಲೀಷಿನಲ್ಲಿ ’ದೇವರಭಯ’ ಎಂಬ ಒಂದು ಪದಪುಂಜವಿದೆ. ದೇವರ ಬಗ್ಗೆ ಭಯ ಇರುವವನು ಎಂದೂ ರಿಲೀಜಿಯಸ್ ಆಗಲಾರ. ಯಾಕೆಂದರೆ ರಿಲೀಜಿಯಸ್ ಆಗಬೇಕಾದರೆ ನಮಗೆ ದೇವರ ಬಗ್ಗೆ ಇರಬೇಕಾದ್ದು ಪ್ರೀತಿ; ಹೊರತು ಭಯವಲ್ಲ. ಪ್ರೀತಿ ಮತ್ತು ಭಯ ಎರಡೂ ಒಟ್ಟೊಟ್ಟಿಗೆ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಭಯ ಇದ್ದಲ್ಲಿ ದ್ವೇಷ ಇರುತ್ತದೆ; ಕೋಪ ಇರುತ್ತದೆ. ಭಯ ಇದ್ದಲ್ಲಿ ನೀವು ತಲೆಯನ್ನು ಬಾಗಿಸಬಹುದು; ಆದರೆ ಮನಃಪೂರ್ವಕವಾಗಿ ಶರಣಾಗಲಾರಿರಿ. ಭಯವಿದ್ದಲ್ಲಿ ಧಣಿ-ಗುಲಾಮನ ಸಂಬಂಧ ಹುಟ್ಟಬಹುದೇ ಹೊರತು ಇಬ್ಬರು ಪ್ರೇಮಿಗಳ ಸಂಬಂಧ ಒಡಮೂಡಲಾರದು. ದೇವರ ವಿಷಯದಲ್ಲಿ ಹಿಂದೂಧರ್ಮ ಮತ್ತು ಬೌದ್ಧಮತದ ಜನರ ಧೋರಣೆ ಸಂಪೂರ್ಣ ಭಿನ್ನವಾದದ್ದು. ಅವರಿಗೆ ದೇವರು ಕೂಡ ತಮ್ಮ ಜೊತೆ ಸುಖ-ದುಃಖ ಹಂಚಿಕೊಳ್ಳಬಲ್ಲ ಸ್ನೇಹಿತ; ಜಗಳವಾಡುವಷ್ಟು ಸಲಿಗೆ ಅವನೊಡನೆ ಅವರಿಗಿದೆ. ಹಾಗೆ ನೋಡಿದರೆ ಸೂಫಿಗಳೂ ಬಹಳ ಹಗುರ ಮನಸ್ಸಿನವರು. ಮುಲ್ಲಾ ನಾಸಿರುದ್ದೀನನನ್ನು ಸೃಷ್ಟಿಸಿದವರು ಅವರೇ. ಮತ್ತು ಈ ಮುಲ್ಲಾ ಒಂದು ಚಿರಂತನ ವ್ಯಕ್ತಿತ್ವ. ಅವನನ್ನು ನೀವು ಯಾವ ಕಾಲಕ್ಕಾದರೂ ಎಳೆಯಬಹುದು; ಎಷ್ಟು ಗುಣವಿಶೇಷಗಳನ್ನೂ ಆರೋಪಿಸಬಹುದು; ಎಷ್ಟು ಕತೆಗಳನ್ನಾದರೂ ಅವನ ಸುತ್ತ ಹೆಣೆಯಬಹುದು. ನಾನು ಅವನ ಚರಿತ್ರೆಗೆ ಹಲವು ಕತೆಗಳನ್ನು ಜಮೆ ಮಾಡಿದ್ದೇನೆ. ಅವನು ಮನುಷ್ಯನ ದಡ್ಡತನಕ್ಕೊಂದು ಸಂಕೇತ ಇದ್ದ ಹಾಗೆ. ಸ್ವಾರಸ್ಯವೆಂದರೆ ಆತನಿಗೆ ತನ್ನ ದಡ್ಡತನದ ಅರಿವಿದೆ. ಮತ್ತು ಆತನೂ ನಮ್ಮ ಜೊತೆ ಸೇರಿ ನಗಬಲ್ಲ. ತಾನು ಅದೆಷ್ಟು ದಡ್ಡತನದಿಂದ ವರ್ತಿಸಿದರೂ ಆತ ಸದಾ ನಿಮ್ಮನ್ನು ನೋಡಿ ನಗುತ್ತಿದ್ದಾನೆ. ನಿಮ್ಮನ್ನು – ಎಂದರೆ, ಮಾನವ ಕುಲವನ್ನು ಎಂದು ಅರ್ಥ.
ನಾಸಿರುದ್ದೀನ ಬಹಳ ಬುದ್ಧಿವಂತ, ಚಾಣಾಕ್ಷ ಮನುಷ್ಯ. ಅವನು ನಿಮ್ಮನ್ನು ನೇರವಾಗಿ ಕೆಣಕುವುದಿಲ್ಲ. ಆತ ತನ್ನನ್ನು ತಾನೇ ಗುರಿಯಾಗಿಸಿಕೊಂಡು ಹಾಸ್ಯ ಮಾಡುತ್ತಾನೆ. ಮೇಲುಮೇಲಿನ ಅರ್ಥಗಳಿಂದ ದಿಕ್ಕುತಪ್ಪದೆ ನಾವು ನಿಜವಾಗಿಯೂ ಆತನ ಮನಸ್ಥಿತಿಯೊಳಗೆ ದೀಪ ಹಿಡಿದು ಹುಡುಕುವುದು ಸಾಧ್ಯವಾದರೆ ನಮಗೊಂದು ಹೊಸ ಪ್ರಪಂಚವೇ ತೆರೆದುಕೊಳ್ಳುತ್ತದೆ. ಎಷ್ಟು ಸಲ ಹಾಸ್ಯಗಳಿಂದ ಹುಟ್ಟಿಸಬಹುದಾದ ಪರಿಣಾಮವನ್ನು ಪ್ರವಚನಗಳಿಂದಲೂ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಹಾಸ್ಯ ನೇರವಾಗಿ ಹೃದಯವನ್ನು ತಟ್ಟುವ ಸಂಗತಿ. ಹಿರಿಯರು ಕೊಡುವ ಪ್ರವಚನ, ಸಂದೇಶಗಳೆಲ್ಲ ನಮ್ಮ ಬುದ್ಧಿಗೆ ತಾಕಬಹುದು; ಆದರೆ ಹಾಸ್ಯ ಮಾತ್ರ ಹೃದಯಕ್ಕೆ ನಾಟುತ್ತದೆ. ಹಾಸ್ಯ ಕೇಳಿದ ತಕ್ಷಣ ನಮ್ಮೊಳಗೆ ಅದೇನೋ ಬದಲಾವಣೆಯಾಗುತ್ತದೆ ಮತ್ತು ಅದು ನಮ್ಮ ಮಂದಸ್ಮಿತವಾಗಿ, ಗಹಗಹಿಸುವ ನಗುವಾಗಿ ಹೊರಚಿಮ್ಮುತ್ತದೆ. ನಾಸಿರುದ್ದೀನ ಈಗಾಗಲೇ ಜ್ಞಾನೋದಯವಾಗಿರುವ ಮನುಷ್ಯ. ಅಥವಾ ಜ್ಞಾನೋದಯದ ದಾರಿಯಲ್ಲಿರುವ ಪಥಿಕ. ಧರ್ಮವೆನ್ನುವುದು ನನಗೆ ಅತ್ಯಂತ ಗಂಭೀರ ವಿಷಯ ಅಲ್ಲ ಎನ್ನುವುದನ್ನು ಹೇಳುವುದಕ್ಕಾಗಿ ನಾನು ಆಗಾಗ ಈ ಮನುಷ್ಯನ ಬೆಂಬಲ ಪಡೆಯುತ್ತೇನೆ. ಅವನ ಹೆಸರಲ್ಲಿ ಒಂದಷ್ಟು ಕತೆಗಳನ್ನು ಸೃಷ್ಟಿಸಿ ಧರ್ಮದ ಪಾಠ ಮಾಡುತ್ತೇನೆ. ನನ್ನ ಕತೆಗಳಲ್ಲಿ ಮುಲ್ಲಾ ನಾಸಿರುದ್ದೀನನ ಜತೆ ಮಹಾವೀರ ಬರಬಹುದು; ಉಪನಿಷತ್ತುಗಳು ಕಾಣಿಸಿಕೊಳ್ಳಬಹುದು. ಆಧ್ಯಾತ್ಮಿಕ ಜ್ಞಾನವನ್ನು ಪಡೆಯಲು ನಾವು ಸೀರಿಯಸ್ ಆಗಿರಬೇಕಾಗಿಲ್ಲ ಎನ್ನುವುದು ನನ್ನ ತಿಳಿವಳಿಕೆ ಮತ್ತು ಸಂದೇಶ. ಹೃದಯತುಂಬಿ ನಗುವುದು; ನಿಷ್ಕಲ್ಮಶವಾದ ನಗುವನ್ನು ಅನುಭವಿಸುವುದು; ಪರಿಶುದ್ಧವಾದ ಹೃದಯದಿಂದ ನಕ್ಕು ನಗುವನ್ನು ಹರಡುವುದು – ನನ್ನ ಪ್ರಕಾರ ಇವೇ ಮನುಷ್ಯ ಸಾಧಿಸಬಹುದಾದ ಅತ್ಯುನ್ನತ ಆಧ್ಯಾತ್ಮಿಕ ಸಾಧನೆ. ನಗುನಗುತ್ತ ನಾವೇ ನಗುವಾಗಿ ಬಿಡಬೇಕು. ಒಬ್ಬ ಮನುಷ್ಯನನ್ನು ದೈವಿಕ ಮಟ್ಟಕ್ಕೆ ಏರಿಸಲು ಅಷ್ಟು ಸಾಕು; ಬೇರಾವ ಧ್ಯಾನವೂ ಬೇಕಾಗಿಲ್ಲ.
* * *
ಸತ್ಯದರ್ಶನ
ಊರ ಚೌಕಿಯಲ್ಲಿ ಫಕೀರನೊಬ್ಬ ಬೀಡುಬಿಟ್ಟಿದ್ದ. ಯಾರಿಗೇ ಆಗಲಿ ಕ್ಷಣಮಾತ್ರದಲ್ಲಿ ಓದುವ ವಿದ್ಯೆ ಕಲಿಸುತ್ತೇನೆ ಎನ್ನುತ್ತಿದ್ದ. ಆತನ ಬಳಿ ಬಂದ ನಾಸಿರುದ್ದೀನ, “ಸರಿ ನನಗೆ ಕಲಿಸು ಹಾಗಾದರೆ” ಎಂದು ಸವಾಲು ಹಾಕಿದ. ಫಕೀರ ನಾಸಿರುದ್ದೀನನ ತಲೆಯನ್ನು ಗಟ್ಟಿಯಾಗಿ ಹಿಡಿದು ಕಣ್ಣುಮುಚ್ಚಿ ಯಾವುದೋ ಮಂತ್ರ ಮಣಮಣ ಹೇಳಿ, ನಂತರ “ಸರಿ, ಈಗ ಹೋಗು. ಏನನ್ನು ಬೇಕಾದರೂ ಓದುವ ವಿದ್ಯೆ ನಿನಗೆ ಸಿದ್ಧಿಸಿದೆ” ಎಂದು ಕಳಿಸಿದ.
ಅದಾಗಿ ಅರ್ಧದಿನದ ನಂತರ ನಾಸಿರುದ್ದೀನ ಮತ್ತೆ ಊರ ಚೌಕಿಯ ಬಳಿ ಕಾಣಿಸಿಕೊಂಡ. ಈಗ ಮಾತ್ರ ಸಿಟ್ಟಿನಿಂದ ಬುಸುಗುಡುತ್ತಿದ್ದ. “ಎಲ್ಲಿ ಆ ಫಕೀರ?” ಎಂದು ಜೋರಾಗಿ ಕೇಳಿದ. ಅಲ್ಲಿ ಸುತ್ತಮುತ್ತ ಕೂತಿದ್ದವರು “ಏನಯ್ಯ ನಾಸಿರುದ್ದೀನ, ಏನು ವಿ?ಯ? ಫಕೀರರು ಅರ್ಧತಾಸಿನ ಹಿಂದ? ಇಲ್ಲಿಂದ ಮುಂದಿನ ಊರಿಗೆ ಪ್ರಯಾಣ ಬೆಳೆಸಿದರು. ನಿನಗೆ ಓದುವ ವಿದ್ಯೆ ಕೊಟ್ಟಿದ್ದರಲ್ಲ? ಈಗ ನಿನಗೆ ಓದಲು ಬರುತ್ತದೆಯೋ ಇಲ್ಲವೋ?” ಎಂದು ವಿಚಾರಿಸಿದರು.
“ಬರುತ್ತದೆ” ಎಂದ ನಾಸಿರುದ್ದೀನ.
“ಮತ್ತೇನು ನಿನ್ನ ಸಮಸ್ಯೆ? ಯಾಕೆ ಫಕೀರರ ಮೇಲೆ ಕೋಪದಿಂದ ಬುಸುಗುಡುತ್ತಿದ್ದಿ?” ಕೇಳಿದರು ಜನ.
“ಇಲ್ಲಿಂದ ಹೋದವನೇ ಮನೆಯಲ್ಲಿ ಒಂದಷ್ಟು ಪುಸ್ತಕ ಹರಡಿಕೊಂಡು ಓದುತ್ತಿದ್ದೆ. ಒಂದು ಪುಸ್ತಕದಲ್ಲಿ ಬರೆದಿತ್ತು – ಈ ಫಕೀರರೆಲ್ಲ ಫಟಿಂಗರು ಅಂತ.” ಆತ ಕೋಪದ ಕಾರಣ ಅನಾವರಣ ಮಾಡಿದ.
ಸಬೂಬು
ನಾಸಿರುದ್ದೀನ ಯಾರದೋ ಮನೆಯ ತೋಟದಲ್ಲಿ ನಿಂತು ಅಲ್ಲಿದ್ದ ಗಿಡಗಳಿಂದ ತರಕಾರಿಗಳನ್ನು ಕಿತ್ತು ತನ್ನ ಚೀಲಕ್ಕೆ ಹಾಕಿಕೊಳ್ಳುತ್ತಿದ್ದ. ಅ?ರಲ್ಲಿ ತೋಟದ ಮಾಲೀಕನ ಕಣ್ಣಿಗೆ ಬಿತ್ತು ಈ ಕೃತ್ಯ. ಕೆಂಡಾಮಂಡಲನಾದ ಮಾಲೀಕ ಓಡಿಬಂದು “ಏಯ್, ಏನ್ ಮಾಡ್ತಿದ್ದೀ ನನ್ನ ತೋಟದಲ್ಲಿ?” ಎಂದು ದಬಾಯಿಸಿದ.
“ಜೋರಾಗಿ ಬೀಸುತ್ತಿದ್ದ ಗಾಳಿ ನನ್ನನ್ನು ಎತ್ತಿ ತಂದು ಇಲ್ಲಿ ಹಾಕಿತು.” ನಾಸಿರುದ್ದೀನ ಕ್ಷಣವೂ ತಡವರಿಸದೆ ಉತ್ತರಿಸಿದ.
“ತಲೆಹರಟೆ ಮಾಡಬೇಡ. ಗಾಳಿ ಬೀಸಿ ನಿನ್ನನ್ನು ಇಲ್ಲಿ ಒಗೆಯಿತು ಅಂತಾನೇ ಇಟ್ಟುಕೊಳ್ಳೋಣ. ನೀನು ಕೈಯಲ್ಲಿ ತರಕಾರಿ ಹಿಡಿದಿದ್ದೀಯಲ್ಲ, ಇದಕ್ಕೂ ಒಂದು ಸಬೂಬು ಕೊಡು” ಎಂದ ಮಾಲೀಕ.
“ಅದು ತುಂಬ ಸುಲಭ. ಗಾಳಿ ಜೋರಾಗಿ ಬೀಸುತ್ತಿದ್ದಾಗ, ಹಾರಿಹೋಗದ ಹಾಗೆ ಗಟ್ಟಿಯಾಗಿ ನಿಲ್ಲಲು ನಾನು ಈ ತರಕಾರಿಗಳನ್ನು ಹಿಡಿದುಕೊಳ್ಳಬೇಕಾಯಿತು. ಕೊಚ್ಚಿಹೋಗುತ್ತಿರುವವನಿಗೆ ಹುಲ್ಲುಕಡ್ಡಿಯೂ ಆಸರೆ ಅನ್ನುತ್ತಾರಲ್ಲ ಹಾಗೆ” ಉತ್ತರ ಬಂತು ನಾಸಿರುದ್ದೀನನಿಂದ”
ಅವನ ಒಂದೊಂದು ಮಾತಿನಿಂದಲೂ ಮಾಲೀಕನ ಸಿಟ್ಟು ಏರುತ್ತಾ ಹೋಗುತ್ತಿತ್ತು. “ಸರಿಯಪ್ಪ ಸರಿ! ಹಾಗಾದರೆ ಆ ತರಕಾರಿಗಳನ್ನು ಕಿತ್ತು ಚೀಲಕ್ಕೆ ತುಂಬಿಸಿಕೊಳ್ಳುತ್ತಿದ್ದೀಯಲ್ಲ? ಅದಕ್ಕೇನು ಸಮಜಾಯಿಷಿ?” ಎಂದು ಕೂಗುತ್ತ ಕೇಳಿದ.
“ಹ್ಹಹ್ಹ! ಏನು ಗೊತ್ತಾ? ಇದೇ ವಿ?ಯವನ್ನು ನಾನೂ ಚಿಂತಿಸುತ್ತಿದ್ದೆ ಈಗ; ಈ ಚೀಲ ಏನು ಮಾಡುತ್ತಿದೆ ಇಲ್ಲಿ ನನ್ನ ಜೊತೆ ಅಂತ..” ಎಂದು ಹೇಳಿ ನಾಸಿರುದ್ದೀನ ಚೀಲದೊಂದಿಗೆ ಬೇಲಿ ಹಾರಿದ.
ಧಿಮಾಕು
ಮುಲ್ಲಾ ನಾಸಿರುದ್ದೀನ ಮತ್ತು ಇಬ್ಬರು ಗೆಳೆಯರು ಪ್ರಯಾಣ ಹೊರಟಿದ್ದರು. ಊಟದ ಸಮಯಕ್ಕೆ ಒಂದೆಡೆ ನೆರಳಿನಲ್ಲಿ ಕೂತು ತಂತಮ್ಮ ಬುತ್ತಿಗಳನ್ನು ಬಿಚ್ಚಿದರು. ಮೊದಲನೆಯವನು ತನ್ನ ಬುತ್ತಿಯನ್ನು ಇಬ್ಬರಿಗೂ ತೋರಿಸುತ್ತ “ನಾನು ಮೆಡಿಟರೇನಿಯನ್ ಪ್ರದೇಶದಲ್ಲಿ ಬೆಳೆದ ವಿಶೇ? ಬೇಳೆಕಾಳುಗಳನ್ನೂ ಸುಗಂಧಭರಿತ ಹಣ್ಣುಗಳನ್ನೂ ಅರೇಬಿಯದ ಖರ್ಜೂರವನ್ನೂ ತಿನ್ನುತ್ತೇನೆ. ಅದರ ಹೊರತು ಬೇರೇನೂ ತಿನ್ನೋದಿಲ್ಲ” ಎಂದು ತನ್ನ ಊಟ ಶುರು ಮಾಡಿದ. ಎರಡನೆಯವನು “ನಾನು ಅತ್ಯಂತ ರುಚಿಕಟ್ಟಾದ ಒಂಟೆಯ ಮಾಂಸ ಮತ್ತು ಬೆಲೆಬಾಳುವ ಸಾಲ್ಮನ್ ಮೀನಿನ ವಿಶೇ? ಖಾದ್ಯಗಳನ್ನ? ತಿನ್ನೋದು. ಅದರ ಹೊರತು ಬೇರೇನೂ ತಿನ್ನೋದಿಲ್ಲ” ಎಂದು ತನ್ನ ಬುತ್ತಿಯನ್ನು ಇಬ್ಬರಿಗೂ ತೋರಿಸಿ ಊಟ ಶುರು ಮಾಡಿದ.
ಈಗ ಮುಂದಿನ ಸರದಿ ನಿನ್ನದು ಎನ್ನುವಂತೆ ಇಬ್ಬರೂ ಮುಲ್ಲಾನನ್ನು ನೋಡಿದರು. ಆತ ತನ್ನ ಬುತ್ತಿಯಿಂದ ಒಣರೊಟ್ಟಿ ತೆಗೆದು ಇಬ್ಬರಿಗೂ ತೋರಿಸಿ “ಗೋದಿಯ ಹಿಟ್ಟನ್ನು ಸರಿಯಾದ ಪ್ರಮಾಣದ ನೀರಲ್ಲಿ ಬೆರೆಸಿ ಕಲಸಿ ಮುದ್ದೆ ಮಾಡಿ ತಟ್ಟಿ ಹದವಾದ ಬೆಂಕಿಯಲ್ಲಿ ಬೇಯಿಸಿ ತಯಾರಿಸಿದ ರೊಟ್ಟಿಯನ್ನ? ನಾನು ತಿನ್ನೋದು” ಎಂದು ತನ್ನ ಊಟ ಶುರು ಮಾಡಿದ.
ನಿರ್ಮೋಹದ ತುರೀಯಾವಸ್ಥೆ
ಒಬ್ಬ ಸಂನ್ಯಾಸಿ ಹೇಳುತ್ತಿದ್ದ: “ನಾನು ಅದೆಂಥ ನಿರ್ವ್ಯಾಮೋಹದ ಸ್ಥಿತಿಗೆ ಹೋಗಿದ್ದೇನೆಂದರೆ, ನಾನು ನನ್ನ ಬಗ್ಗೆ ಯೋಚಿಸುವುದನ್ನು ಬಿಟ್ಟಿದ್ದೇನೆ. ಬೇರೆಯವರ ಬಗ್ಗೆ ಮಾತ್ರ ನನ್ನ ಯೋಚನೆ, ಚಿಂತನೆ, ಚಿಂತೆ ಎಲ್ಲವೂ.”
“ಬಹಳ ಒಳ್ಳೆಯದು. ಆದರೆ ನಾನು ಅದಕ್ಕಿಂತ ಮುಂದಿನ ಹಂತಕ್ಕೆ ಹೋಗಿಯಾಗಿದೆ” ಎಂದ ನಾಸಿರುದ್ದೀನ. “ಅದು ಹೇಗೆ?” ಅಚ್ಚರಿಯಿಂದ ಕೇಳಿದ ಸಂನ್ಯಾಸಿ.
“ನಾನು ಯಾರನ್ನೇ ನೋಡಿದರೂ, ಅವರೀಗ ನನ್ನ ಸ್ಥಾನದಲ್ಲಿದ್ದರೆ ಏನು ಮಾಡುತ್ತಿದ್ದರು ಎಂದು ಯೋಚಿಸುತ್ತೇನೆ. ಹಾಗಾಗಿ ಜಗತ್ತಿನ ಪ್ರತಿಯೊಬ್ಬರನ್ನು ನೋಡಿದಾಗಲೂ ನಾನು ನನ್ನ ಬಗ್ಗೆ ಚಿಂತಿಸಲು ಸಾಧ್ಯವಾಗಿದೆ” ಮುಲ್ಲಾನ ಉತ್ತರ ಬಂತು.
ದಯಾಳು ಕಳ್ಳ
ನಾಸಿರುದ್ದೀನನ ಮನೆಗೊಮ್ಮೆ ಕಳ್ಳರು ನುಗ್ಗಿದರು. ಎ? ದುಡ್ಡಿದೆಯೋ ಅವೆಲ್ಲವನ್ನೂ ಕೊಟ್ಟುಬಿಡು ಎಂದು ಅವನನ್ನು ಪೀಡಿಸತೊಡಗಿದರು. “ನೋಡಿ, ನಾನೇನೂ ನೂರಾರು ದಿನಾರು ಇರೋ ಸಾಹುಕಾರ ಅಲ್ಲ. ಇರೋದು ಈ ಹತ್ತು ದಿನಾರು ಹಣ. ಇದನ್ನೂ ನಿಮ್ಮ ಕೈಗೆ ಹಾಕುತ್ತೇನೆ” ಎಂದು ತನ್ನ ಜೇಬಿನಿಂದ ಒಂದ? ಚಿಲ್ಲರೆ ನಾಣ್ಯ ತೆಗೆದು ಅವರಿಗೆ ಕೊಟ್ಟ. ಕಳ್ಳರಿಗೆ ರೇಗಿಹೋಯಿತು. ಈ ದಿನ ಈ ಮನೆಯಲ್ಲೆ ಝಂಡಾ ಹೂಡೋಣ ಎಂದು ಅವರೆಲ್ಲರೂ ಅಲ್ಲೇ ಕುಕ್ಕರುಬಡಿದು ಕೂತರು. ಸಾಲದ್ದಕ್ಕೆ ನಾಸಿರುದ್ದೀನನಿಗೆ ಒಂಟಿ ಕಾಲಲ್ಲಿ ನಿಲ್ಲುವ ಶಿಕ್ಷೆ ಸಿಕ್ಕಿತು.
ಸಂಜೆ ಮುಗಿದು ಕತ್ತಲು ಕವಿಯಿತು. ಕಳ್ಳರು ಅಲ್ಲೇ ನೆಲಕ್ಕೊರಗಿ ಗಡದ್ದಾಗಿ ನಿದ್ದೆ ತೆಗೆಯತೊಡಗಿದರು. ತಮ್ಮ ತಂಡದ ಕಿರಿಯಸದಸ್ಯನನ್ನು ನಾಸಿರುದ್ದೀನನ ಕಾವಲು ಕಾಯಲು ಕೂರಿಸಿದರು. ನಡುರಾತ್ರಿಯ ಹೊತ್ತು ಆ ಕಳ್ಳನಿಗೆ ನಾಸಿರುದ್ದೀನನ ಅವಸ್ಥೆ ಕಂಡು ಪಾಪವೇ ಅನ್ನಿಸಿತು. “ನೀನು ಬೇಕಾದರೆ ಆ ಕಾಲನ್ನು ನೆಲಕ್ಕಿಟ್ಟು ಈ ಕಾಲನ್ನೆತ್ತಿ ನಿಲ್ಲಬಹುದು” ಎಂದು ಗುಟ್ಟಾಗಿ ಹೇಳಿದ. ಆಗ ನಾಸಿರುದ್ದೀನ “ನಿಮ್ಮ ಕಳ್ಳರ ಬಳಗದಲ್ಲಿ ನೀನೊಬ್ಬನೇ ದಯೆ-ಕರುಣೆ ಇರುವವನು ಮಾರಾಯ. ನಾನೂ ನಿಮ್ಮ ತಂಡಕ್ಕೆ ಸುಳ್ಳು ಹೇಳಿದ್ದೆ. ದುಡ್ಡು ಒಳಗಿನ ಕಪಾಟಿನಲ್ಲಿದೆ. ಆದರೆ ಉಳಿದವರಿಗೆ ಹೇಳಿಬಿಟ್ಟೀಯ ಹು?ರು!” ಎಂದ.
ಮೂಲಭೂತ ಪ್ರಶ್ನೆ
ಒಮ್ಮೆ ನಾಸಿರುದ್ದೀನ ಊರಿನ ದೊಡ್ಡ ಧರ್ಮಗುರುವಿನ ಮನೆಗೆ ಊಟಕ್ಕೆ ಹೋಗಬೇಕಾಗಿ ಬಂತು. ಆ ದಿನ ಹೆಚ್ಚು ಊಟ ಮಾಡದೆ ಹೊಟ್ಟೆಖಾಲಿ ಬಿದ್ದಿದ್ದರಿಂದ, ಧರ್ಮಗುರುಗಳ ಮನೆಗೆ ಹೋಗುವ ಹೊತ್ತಿಗೆ ಅವನ ಹೊಟ್ಟೆ ತಾಳಹಾಕುತ್ತಿತ್ತು. ಅಲ್ಲಿ ಬೇಗಬೇಗ ಊಟ ಮುಗಿಸಿ ಹಿಂದಿರುಗಬೇಕು ಎಂದು ಯೋಚನೆ ಮಾಡಿದ್ದ. ಆದರೆ, ಗುರುಗಳ ಮನೆಯಲ್ಲಿ ಊಟ ತಡವಾಯಿತು. ಅಲ್ಲಿಯವರೆಗೂ ಯಾವುದಾದರೂ ಧಾರ್ಮಿಕ ವಿಷಯ ಚರ್ಚೆ ಮಾಡೋಣ ಎಂದ ಗುರುಗಳು ಯಾವ್ಯಾವುದೋ ಧರ್ಮಜಿಜ್ಞಾಸೆ ನಡೆಸತೊಡಗಿದರು. ಮೊದಮೊದಲು ಆಸಕ್ತಿ ಇದ್ದವನಂತೆ ತೋರಿಸಿಕೊಂಡರೂ, ಕಾಲಕ್ರಮೇಣ ನಾಸಿರುದ್ದೀನನಿಗೆ ನಾಟಕ ಮಾಡುವುದಕ್ಕೂ ಆಸಕ್ತಿ ಇಲ್ಲವಾಯಿತು. ತಾಸೆರಡು ಕಳೆದರೂ ಗುರುಗಳ ಮೀಮಾಂಸೆ ಚರ್ಚೆ ನಿಲ್ಲಲಿಲ್ಲ; ಊಟದ ಸೂಚನೆಯೂ ಬರಲಿಲ್ಲ. ಕೊನೆಗೆ ನಾಸಿರುದ್ದೀನ, ಗುರುಗಳ ಮಾತನ್ನು ತಡೆದು “ಕ್ಷಮಿಸಿ, ನನಗೊಂದು ಪ್ರಶ್ನೆ ಕೇಳಬೇಕಾಗಿದೆ” ಎಂದ. ಅದ್ಯಾವುದೋ ದೊಡ್ಡ ಧರ್ಮಪ್ರಶ್ನೆಯೇ ಇರಬೇಕು ಎಂದುಕೊಂಡ ಗುರುಗಳು ತಮ್ಮ ಮಾತನ್ನು ನಿಲ್ಲಿಸಿ ಆಸಕ್ತಿಯಿಂದ ನಾಸಿರುದ್ದೀನನ ಕಡೆಗೆ ಬಾಗಿ ಏನು ಎನ್ನುವಂತೆ ಹುಬ್ಬೇರಿಸಿ ಕೇಳಿದರು. “ಏನಿಲ್ಲ, ನಿಮ್ಮ ಈ ಕತೆಗಳಲ್ಲಿ ಇದುವರೆಗೆ ಬಂದ ಧರ್ಮಬೀರುಗಳು ತಮ್ಮ ಜೀವನದಲ್ಲಿ ಊಟ ಮಾಡ್ತಿದ್ದರೋ ಇಲ್ಲವೋ ತಿಳಿಯಬೇಕಾಗಿತ್ತು” ಎಂದ ನಾಸಿರುದ್ದೀನ ಗಂಭೀರವಾಗಿ.
ವಧುಪರೀಕ್ಷೆ
ನಾಸಿರುದ್ದೀನನಿಗೆ ತನ್ನ ಮಗ ಭಾವೀಪತ್ನಿಯ ಶೋಧದಲ್ಲಿ ತೊಡಗಿದ್ದಾನೆಂದು ತಿಳಿದಿತ್ತು. ಆತ ಒಂದು ದಿನ ಮಗನನ್ನು ಹತ್ತಿರ ಕರೆದು “ನಿನಗೆ ಯಾವ ಬಗೆಯ ಹೆಂಡತಿ ಬೇಕೆಂಬ ಅಪೇಕ್ಷೆ ಇದೆ?” ಎಂದು ವಿಚಾರಿಸಿದ. “ಅಪ್ಪಾ, ಆಕೆ ಬುದ್ಧಿವಂತಳೂ ಆಗಿರಬೇಕು ಮತ್ತು ಮನಸ್ಸಲ್ಲಿ ಬಂದದ್ದನ್ನು ಹೇಳುವ ನೇರವಂತಿಕೆಯೂ ಇರಬೇಕು. ಅಂಥವಳೊಬ್ಬಳನ್ನು ಹುಡುಕುತ್ತಿದ್ದೇನೆ” ಎಂದ ಮಗ. ನಾಸಿರುದ್ದೀನ ತನ್ನ ಮಗನನ್ನು ಊರ ನಾಲ್ಕುಬೀದಿಗಳು ಸೇರುವಲ್ಲಿ ಕರೆತಂದು ನಿಲ್ಲಿಸಿ ಛಟೀರನೆ ಕೆನ್ನೆಗೆ ಬಿಗಿದ. “ನಾನು ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸಿದರೆ ನಿನಗಿದೇ ಶಿಕ್ಷೆ” ಎಂದು ಜೋರಾಗಿ ಕೂಗಿದ. ಈ ನಾಟಕ ಕಂಡ ಒಬ್ಬ ಹೆಣ್ಣುಮಗಳು ಹತ್ತಿರ ಬಂದು, “ಸಾಕು ನಿಲ್ಲಿಸಿ, ನೀವು ಹೇಳಿದ್ದನ್ನು ಅನುಸರಿಸಿದರೂ ಯಾಕೆ ಹೊಡೆಯುತ್ತೀರಿ? ವಿಧೇಯತೆಗೂ ಶಿಕ್ಷೆ ಕೊಡುವ ನೀವೆಂಥ ಗಂಡಸರು” ಎಂದು ಜೋರು ಮಾಡಿದಳು. ಆಗ ಮಗ, “ಅಪ್ಪಾ, ಈಕೆಯೇ ನನಗೆ ತಕ್ಕ ವಧು. ಆಕೆ ಬುದ್ಧಿವಂತಳೂ ಹೌದು; ನೇರವಂತಿಕೆಯೂ ಇದೆ” ಎಂದ. ನಾಸಿರುದ್ದೀನ, “ಹೌದು, ಈಕೆಗೆ ಅವೆರಡು ಗುಣಗಳೂ ಇವೆ. ಆದರೆ ಈ ಎರಡೂ ಗುಣಗಳಲ್ಲಿ ಇವಳನ್ನು ಮೀರಿಸುವ ಹೆಣ್ಣುಗಳೂ ಇರಬಹುದು ಈ ಊರಿನಲ್ಲಿ. ಪ್ರಯತ್ನ ಮುಂದುವರಿಸೋಣ” ಎಂದು ಉತ್ತರಿಸಿದ.
ನಾಸಿರುದ್ದೀನ ತನ್ನ ಮಗನನ್ನು ಊರಿನ ಮತ್ತೊಂದು ತುದಿಗೆ ಕರೆದುಕೊಂಡು ಹೋದ. ಅಲ್ಲಿಯೂ ನಾಲ್ಕು ರಸ್ತೆಗಳು ಸಂಧಿಸುವ ಕುಕ್ಕಿಕಟ್ಟೆಯ ಮೇಲೆ ಮಗನನ್ನು ನಿಲ್ಲಿಸಿ ಛಟೀರನೆ ಹೊಡೆದು ಹಿಂದೆ ಹೇಳಿದ್ದ ಮಾತುಗಳನ್ನೇ ಜೋರಾಗಿ ಹೇಳಿದ. ಈ ನಾಟಕವನ್ನು ನೋಡಿದ ಒಬ್ಬ ಯುವತಿ, “ಹೊಡೀರಿ, ಇನ್ನೂ ಎರಡೇಟು ಹೊಡೀರಿ; ಒಬ್ಬ ಮೂರ್ಖ ಮಾತ್ರ ಬೇರೆಯವರು ಹೇಳಿದ್ದನ್ನು ಹಿಂದೆ ಮುಂದೆ ಯೋಚಿಸದೆ ಮಾಡಿ ವಿಪತ್ತಿನಲ್ಲಿ ಸಿಕ್ಕಿಕೊಂಡಾನು” ಎಂದಳು. ಕೂಡಲೇ ನಾಸಿರುದ್ದೀನ ತನ್ನ ಮಗನತ್ತ ತಿರುಗಿ ಹೇಳಿದ: “ಇವಳಲ್ಲಿ ನೀನು ಹುಡುಕುತ್ತಿದ್ದ ಎರಡು ಗುಣಗಳೂ ಅತಿಶಯವಾಗಿವೆ. ಇವಳೇ ನಿನಗೆ ತಕ್ಕ ಜೋಡಿ”
ಜೀವ ರಕ್ಷಣೆ
ಒಬ್ಬ ವ್ಯಕ್ತಿ ಅದೇನು ಕೆಲಸವಿತ್ತೋ ಏನೋ ಎತ್ತರದ ಮರವೊಂದನ್ನು ಏರಿದ. ಅದರ ತುತ್ತತುದಿಗೆ ಹೋದ ಮೇಲೆ ಇಳಿಯಲೆಂದು ವಾಪಸು ತಿರುಗಿದಾಗ ಅವನಿಗೆ ಸಮಸ್ಯೆಯ ಅರಿವಾಯಿತು. ಮರವನ್ನು ಹತ್ತಿದ? ಸುಲಭವಾಗಿ ಇಳಿಯುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಅವನಿಗೆ ಗೊತ್ತಾಯಿತು. ಹೇಗೆ ಇಳಿಯಲು ಹೋದರೂ ಜಾರಿ ಬಿದ್ದು ಕೈಕಾಲು ಮುರಿದುಕೊಳ್ಳುವುದು ಖಚಿತ ಎನ್ನುವುದು ಅವನಿಗೆ ಮನದಟ್ಟಾಯಿತು. ಆ ಮನು? ಮರದ ಮೇಲೆ ನಿಂತುಕೊಂಡು ಜೋರಾಗಿ ಕೂಗತೊಡಗಿದ. ದಾರಿಹೋಕರು ಅವನ ಅವಸ್ಥೆಯನ್ನು ಕಂಡರೂ ಹೇಗೆ ಸಹಾಯ ಮಾಡುವುದೆಂದು ತಿಳಿಯದೆ ಅಸಹಾಯಕರಾಗಿ ನೋಡುತ್ತಿದ್ದರು. ಹಲವು ಜನ ಗುಂಪಾಗಿ ಮರದ ಬಳಿ ನಿಂತರೂ ಆ ವ್ಯಕ್ತಿಯನ್ನು ಅಪಾಯವಿಲ್ಲದೆ ಕೆಳಗಿಳಿಸುವ ಬಗೆ ಹೇಗೆ ಎನ್ನುವುದು ಅವರಿಗೆ ಗೊತ್ತಾಗಲಿಲ್ಲ. ಅ?ರಲ್ಲಿ ಅಲ್ಲಿಗೆ ನಾಸಿರುದ್ದೀನ ಬಂದ. ಜನರು ಅವನಿಗೆ ಪರಿಸ್ಥಿತಿ ವಿವರಿಸಿದರು. ನಾಸಿರುದ್ದೀನ ಒಂದು ಹಗ್ಗದ ಏರ್ಪಾಡು ಮಾಡುವಂತೆ ಕೇಳಿಕೊಂಡ. ಕೂಡಲೇ ದಪ್ಪನೆ ಉದ್ದನೆ ಹಗ್ಗ ಬಂತು. ನಾಸಿರುದ್ದೀನ ಅದರ ಒಂದು ತುದಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಇನ್ನೊಂದು ತುದಿಯನ್ನು ಮರದ ಮೇಲಿನ ವ್ಯಕ್ತಿಯತ್ತ ಎಸೆದ. “ಅದನ್ನು ಸೊಂಟದ ಸುತ್ತ ಗಟ್ಟಿಯಾಗಿ ಕಟ್ಟಿಕೋ” ಎಂದ. ಸುತ್ತ ನೆರೆದ ಜನರಿಗೆ ನಾಸಿರುದ್ದೀನನ ತಂತ್ರ ಏನು ಎನ್ನುವುದು ಗೊತ್ತಾಗಲಿಲ್ಲ. ನೀವೇನು ಮಾಡಲು ಹೊರಟಿದ್ದೀರಿ ಕೇಳಬಹುದೆ ಎಂದು ಪ್ರಶ್ನಿಸಿದವರನ್ನು ನಾಸಿರುದ್ದೀನ ಸುಮ್ಮನಿರುವಂತೆ ಸೂಚಿಸಿ “ನನ್ನ ಈ ಉಪಾಯ ಕೆಲಸ ಮಾಡುತ್ತದೆ, ನೋಡುತ್ತಿರಿ” ಎಂದ. ಸುತ್ತಲಿನ ಜನ ಮುಂದೇನಾಗುವುದೋ ಎಂದು ಕಾತರದಿಂದ ನೋಡುತ್ತ ನಿಂತರು. ಮರದ ಮೇಲಿದ್ದ ವ್ಯಕ್ತಿ ಹಗ್ಗವನ್ನು ತನ್ನ ಸೊಂಟಕ್ಕೆ ಬಿಗಿದುಕೊಂಡಮೇಲೆ, ನಾಸಿರುದ್ದೀನ ಆ ಹಗ್ಗವನ್ನು ಜೋರಾಗಿ ಎಳೆದ. ಮರದಲ್ಲಿದ್ದ ವ್ಯಕ್ತಿ ದೊಪ್ಪನೆ ನೆಲಕ್ಕೆ ಬಿದ್ದ. ಮೈಯೆಲ್ಲ ತರಚಿ ಗಾಯವಾಯಿತು. ಇದುವರೆಗೆ ಈ ಆಟ ನೋಡುತ್ತಿದ್ದ ಜನರಿಗೆ ಅಸಾಧ್ಯ ಸಿಟ್ಟು ಬಂತು. “ಮುಲ್ಲಾ ಅವರೇ, ನಿಮಗೇನು ತಲೆಗಿಲೆ ಕೆಟ್ಟಿದೆಯೆ? ಅವನನ್ನು ಹಗ್ಗ ಹಾಕಿ ಆ ಪಾಟಿ ಎಳೆದರೆ ಅವನು ಬಿದ್ದು ಸೊಂಟ ಮುರಿಸಿಕೊಳ್ಳದೆ ಇರುತ್ತಾನೆಯೆ? ಬುದ್ದಿ ಇರುವವರು ಮಾಡುವ ಕೆಲಸವೇ ಇದು?” ಎಂದು ತರಾಟೆಗೆ ತೆಗೆದುಕೊಂಡರು. “ಸುಮ್ಮನೆ ವಾದ ಮಾಡಬೇಡಿ. ಕಳೆದ ಬಾರಿ ನಾನು ಇಂಥದ್ದೇ ತಂತ್ರ ಬಳಸಿ ಒಬ್ಬನ ಜೀವ ರಕ್ಷಿಸಿದ್ದೆ” ಎಂದ ನಾಸಿರುದ್ದೀನ. “ಎಲ್ಲಿ?” ಜನ ಪ್ರಶ್ನಿಸಿದರು. “ಮಸೀದಿಯ ಅಂಗಳದಲ್ಲಿರೋ ಬಾವಿಯಲ್ಲಿ” – ಉತ್ತರ ಬಂತು.
ಪೂರ್ವಸಿದ್ಧತೆ
ನಗರದ ಸುಂಕ ಸಂಗ್ರಹ ಮಾಡುವ ಅಧಿಕಾರಿ ತನ್ನ ಕೆಲಸದಲ್ಲಿ ಬಹಳಷ್ಟು ಲಫಡಾ ಮಾಡಿದ್ದಾನೆಂದು ಷರೀಫನಿಗೆ ಸಂದೇಹ ಇತ್ತು. ಒಂದು ದಿನ ಅವನಲ್ಲಿ ಇದುವರೆಗಿನ ಎಲ್ಲ ಲೆಕ್ಕಪತ್ರಗಳನ್ನೂ ತಂದು ಒಪ್ಪಿಸುವಂತೆ ಆಜ್ಞೆ ಮಾಡಿದ. ಆಜ್ಞೆಗನುಸಾರವಾಗಿ ಅಧಿಕಾರಿ ತನ್ನ ಲೆಕ್ಕದಪುಸ್ತಕವನ್ನು ತಂದು ಷರೀಫನೆದುರು ಹರಡಿದ. ಅಲ್ಲಿದ್ದ ಲೆಕ್ಕಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತ ಹೋದಹಾಗೆ, ಷರೀಫನಿಗೆ ಅಲ್ಲಿ ಬಹಳ ದೊಡ್ಡ ಮೋಸ ನಡೆದಿರುವುದು ಗಮನಕ್ಕೆ ಬಂತು. ಅವೆಲ್ಲವನ್ನೂ ಅಧಿಕಾರಿಯ ಮುಖದ ಮುಂದೆ ಹಿಡಿದು ನೀರಿಳಿಸಿದ. ಸಾಲದ್ದಕ್ಕೆ ತನ್ನ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಅಧಿಕಾರಿ ಆ ಕಾಗದಗಳನ್ನು ಎಲ್ಲರ ಎದುರಲ್ಲಿ ತಿನ್ನಬೇಕೆಂದು ಆಜ್ಞಾಪಿಸಿದ. ಷರೀಫ ಮತ್ತು ಉಳಿದೆಲ್ಲ ಜನರು ಅಚ್ಚರಿಯಿಂದ ನೋಡುತ್ತಿರುವಂತೆಯೇ ಅಧಿಕಾರಿ ಆ ಕಾಗದಪತ್ರಗಳನ್ನು ಒಂಟೆಯಂತೆ ಜಗಿದು ತಿಂದು ಮುಗಿಸಿದ!
ಸುಂಕದ ಅಧಿಕಾರಿಯನ್ನು ಕೆಲಸದಿಂದ ತೆಗೆದುಹಾಕಿ ಆ ಜಾಗದಲ್ಲಿ ಮುಲ್ಲಾ ನಾಸಿರುದ್ದೀನನ್ನು ನೇಮಿಸಲಾಯಿತು. ಒಂದು ತಿಂಗಳ ಬಳಿಕ, ಷರೀಫ ಮುಲ್ಲಾನಲ್ಲೂ ಕಾಗದಪತ್ರಗಳನ್ನು ಪರಿಶೀಲನೆಗಾಗಿ ಕಳಿಸುವಂತೆ ಕೇಳಿಕೊಂಡ. ಕಡತಗಳ ಬದಲಿಗೆ ಒಂದು ತಟ್ಟೆ ಷರೀಫನ ಎದುರಿಗೆ ಬಂತು. ಅದರಲ್ಲಿ ಒಂದ? ರೊಟ್ಟಿಗಳಿದ್ದವು. “ಏನಿದು?” ಎಂದು ಪ್ರಶ್ನಿಸಿದ ಷರೀಫ. “ಈ ರೊಟ್ಟಿಗಳ ಮೇಲೆ ಸುಂಕದ ಲೆಕ್ಕಪತ್ರ ಬರೆದಿದ್ದೇನೆ. ಲೆಕ್ಕ ತಪ್ಪಾಗಿದ್ದರೆ ಇವನ್ನು ತಿನ್ನಲಿಕ್ಕೂ ತಯಾರಿದ್ದೇನೆ” – ಎಂದ ನಾಸಿರುದ್ದೀನ.
ಅರ್ಧ ಜವಾಬ್ದಾರಿ
ತಡರಾತ್ರಿಯ ಹೊತ್ತಲ್ಲಿ ಮಗು ಒಂದೇ ಸವನೆ ರಚ್ಚೆಹಿಡಿದು ಕೂಗತೊಡಗಿತು. ನಾಸಿರುದ್ದೀನ ಹೆಂಡತಿ ಅವನತ್ತ ತಿರುಗಿ “ನೋಡಿ, ಮಗು ಅಳುತ್ತಾ ಇದೆ. ಹೋಗಿ ಸಮಾಧಾನ ಮಾಡಿ ಮಲಗಿಸಿ. ಪ್ರತಿಸಲ ಈ ಕೆಲಸ ನಾನೇ ಮಾಡಬೇಕು ಅಂತ ಕಾನೂನಿಲ್ಲ. ಮಗು ಅರ್ಧ ನಿಮ್ಮದೂ ತಾನೇ?” ಎಂದಳು. ನಾಸಿರುದ್ದೀನ ಮಲಗಿದ್ದಲ್ಲೆ “ಸರಿ ಬಿಡು; ನಿನ್ನ ಭಾಗದ ಮಗುವನ್ನು ಮಾತ್ರ ಕೊಂಡಾಟ ಮಾಡಿ ಮಲಗಿಸಿ ಬಾ. ನನ್ನ ಭಾಗದ ಮಗು ಅರಚುತ್ತಿರಲಿ” ಎಂದ.
ಮೆಚ್ಚುಗೆ
ಒಮ್ಮೆ ಮುಲ್ಲಾ ನಾಸಿರುದ್ದೀನ ಮತ್ತು ಊರಿನ ಷರೀಫ – ಇಬ್ಬರೂ ಹತ್ತಿರದ ಕಾಡಿಗೆ ಶಿಕಾರಿಗೆ ಹೋದರು. ಇಡೀದಿನ ಬಂದೂಕು ಹಿಡಿದು ಸುತ್ತಿದರೂ ಷರೀಫನಿಗೆ ಒಂದೇಒಂದು ಪ್ರಾಣಿಯೂ ಕಣ್ಣಿಗೆ ಬಿದ್ದಿರಲಿಲ್ಲ. ಅಲೆದು ಹೊಟ್ಟೆಯೂ ತಾಳ ಹಾಕತೊಡಗಿತ್ತು. ಅಷ್ಟರಲ್ಲಿ ಅವರಿಗೆ ಕಾಡುಕೋಳಿಯೊಂದು ಕಣ್ಣಿಗೆ ಬಿತ್ತು. ಷರೀಫ ಅಮಿತೋತ್ಸಾಹದಿಂದ ಗುರಿಇಟ್ಟು ಗುಂಡು ಹೊಡೆದೇಬಿಟ್ಟ. ಆದರೆ, ಅಷ್ಟರಲ್ಲಿ ಕೋಳಿ ತಪ್ಪಿಸಿಕೊಂಡದ್ದರಿಂದ ಸಾವಿನಿಂದ ಪಾರಾಯಿತು. “ಅದ್ಭುತ! ಅದ್ಭುತ!” ಎಂದ ಮುಲ್ಲಾ. ಗುಂಡು ಗುರಿತಪ್ಪಿದ ಕೋಪದಲ್ಲಿ ಬುಸುಗುಡುತ್ತಿದ್ದ ಷರೀಫ ಮುಲ್ಲಾನತ್ತ ತಿರುಗಿ “ನನ್ನನ್ನು ಅಪಹಾಸ್ಯ ಮಾಡಲು ಎಷ್ಟು ಧೈರ್ಯ ನಿನಗೆ?” ಎಂದು ಜೋರಾಗಿ ಅಬ್ಬರಿಸಿದ. “ಸ್ವಾಮಿ! ನಾನು ನಿಮಗೆಲ್ಲಿ ಅಪಹಾಸ್ಯ ಮಾಡಿದೆ! ಕೋಳಿಯ ಚಾಕಚಕ್ಯತೆ ನೋಡಿ ಗೌರವ ಸಲ್ಲಿಸಿದೆ ಅಷ್ಟೆ” ಎಂದ ಮುಲ್ಲಾ.