ಆಸುರೀಶಕ್ತಿಗಳ ಪ್ರಾಬಲ್ಯದಿಂದ ಧರೆಯನ್ನು ರಕ್ಷಿಸುವುದು ಎಷ್ಟು ದುರ್ಗಮವೆಂಬುದನ್ನು ಸಾಕ್ಷ್ಯಪಡಿಸಿರುವ ಒಂದು ಇತ್ತೀಚಿನ ಪ್ರಕರಣವೆಂದರೆ ಎಂಡೋಸಲ್ಫಾನ್ ವಿರುದ್ಧ ಜನರು ನಡೆಸಬೇಕಾಗಿಬಂದ ದೀರ್ಘಸಮರ. ಈ ಕೀಟನಾಶಕ ಎಷ್ಟು ಮಾರಕವೆಂಬುದು ಈಗ್ಗೆ ಇಪ್ಪತ್ತು ವರ್ಷ ಹಿಂದೆಯೇ ಮನವರಿಕೆಯಾಗಿತ್ತು. ಇದರಿಂದ ಜನ್ಯವಾದ ವಿಷವು ನೆಲಜಲಮೂಲಗಳನ್ನೆಲ್ಲ ವ್ಯಾಪಿಸಿ ಜನರ ಮೆದುಳಿನ ಜೋಗರಿಕೆ, ದೈಹಿಕ-ಮಾನಸಿಕ ಮಾಂದ್ಯ, ಅಪಸ್ಮಾರ, ಪಿತ್ತಕೋಶದ ಮತ್ತು ರಕ್ತದ ಕ್ಯಾನ್ಸರ್, ಆಸ್ತಮಾ, ಸಂತಾನಹೀನತೆ ಮೊದಲಾದ ಹಲವಾರು ವ್ಯಾಧಿಗಳಿಗೆ ಎಂಡೋಸಲ್ಫಾನ್ ಕಾರಣವಾಗುವುದೆಂಬುದು ಸಿದ್ಧಪಟ್ಟಿದೆ. ಈ ಹಿನ್ನೆಲೆಯಿದ್ದರೂ – ವಿಶೇಷವಾಗಿ ದಕ್ಷಿಣಕನ್ನಡ, ಕಾಸರಗೋಡು, ಕೇರಳ ಭಾಗಗಳಲ್ಲಿ – ಲಾಭಾಸಕ್ತ ಬೆಳೆಗಾರರು ಗೋಡಂಬಿ ಮೊದಲಾದ ಬೆಳೆಗಳಲ್ಲಿ ಈ ಕೀಟನಾಶಕದ ವ್ಯಾಪಕ ಬಳಕೆಯನ್ನು ಮುಂದುವರಿಸಿದ್ದರು. ಕೀಟನಾಶಕ ತಯಾರಕ ಉದ್ಯಮಕ್ಕೂ ಕೇರಳ ಕೃಷಿ ವಿಶ್ವವಿದ್ಯಾಲಯ ಅಧಿಕಾರಿಗಳಿಗೂ ನಡುವೆ ಅನೈತಿಕ ಮೈತ್ರಿ ಏರ್ಪಟ್ಟು ಕೀಟನಾಶಕ ’ಸುರಕ್ಷಿತ’ವೆಂಬ ಘೋ?ಣೆ ಹೊರಡಿಸಿದ್ದು (ಜುಲೈ ೨೦೦೨) ಮೊದಲಾದ ಮಾಮೂಲು ಅಸಹ್ಯಗಳೂ ಬೇಕಾದಷ್ಟು ನಡೆದವು. ಕೀಟನಾಶಕ ಬಳಕೆಯ ಪ್ರದೇಶಗಳಲ್ಲಿ ಹರಡಿದ ಬಗೆಬಗೆಯ ವ್ಯಾಧಿಗಳಿಗೂ ಕೀಟನಾಶಕಕ್ಕೂ ಸಂಬಂಧವಿಲ್ಲವೆಂಬ ’ತಜ್ಞ’ ವರದಿಗಳನ್ನೂ ಹುಟ್ಟುಹಾಕಲಾಯಿತು (ದುಬೇ ಸಮಿತಿ, ಮಾರ್ಚ್ ೨೦೦೩); ಆ ಸಮಿತಿಯು ಸಂಗತ ಸಾಕ್ಷ್ಯಗಳನ್ನು ಅದುಮಿರಿಸಿದ್ದುದೂ ಬಯಲಾಯಿತು. ೨೦೦೫ರ ಅಂತ್ಯದಲ್ಲಿ ಕೇಂದ್ರಸರ್ಕಾರವು ಕೇರಳದಲ್ಲಿ ಎಂಡೋಸಲ್ಫಾನ್ ಬಳಕೆಗೆ ನಿರ್ಬಂಧ ಹೇರಿ ಆಜ್ಞೆ ಹೊರಡಿಸಿದರೂ ಆನಂತರವೂ ಅದರ ಬಳಕೆ ಮುಂದುವರಿದಿತ್ತು. ೨೦೧೦ರ ಅಂತ್ಯದಲ್ಲಿ ರಾಷ್ಟ್ರೀಯ ಮಾನವಹಕ್ಕು ಆಯೋಗವು ಕೇಂದ್ರಸರ್ಕಾರದಿಂದಲೂ ಕೇರಳಸರ್ಕಾರದಿಂದಲೂ ವಿವರಣೆ ಕೇಳಿತು; ಕೀಟನಾಶಕಜನ್ಯ ವ್ಯಾಧಿಗಳಿಗೆ ತುತ್ತಾದವರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿತು. ಎಂಡೋಸಲ್ಫಾನ್ ಉತ್ಪಾದನೆ-ಮಾರಾಟ-ಬಳಕೆಗಳ ಮೇಲೆ ಪೂರ್ಣ ನಿಷೇಧ ಹೇರುವಂತೆ ೨೦೧೧ ಏಪ್ರಿಲ್‌ನಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿಯೊಂದು ದಾಖಲೆಗೊಂಡು ಅದರಂತೆ ಆದೇಶ ಹೊರಡಿಸಲಾಯಿತು. ಇತ್ತೀಚೆಗೆ – ಈ ವರ್ಷದ (೨೦೧೭) ಆರಂಭದಲ್ಲಿ ಸರ್ವೋಚ್ಚ ನ್ಯಾಯಾಲಯ ವ್ಯಾಧಿ ಪೀಡಿತರಾದ ೪,೦೦೦ ಜನರಿಗೆ ಒಬ್ಬೊಬ್ಬರಿಗೂ ರೂ. ೫ ಲಕ್ಷ ಪರಿಹಾರಧನವನ್ನು ಮೂರು ತಿಂಗಳೊಳಗೆ ಪಾವತಿ ಮಾಡಬೇಕೆಂದು ಆದೇಶ ಹೊರಡಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಆದರೂ ಇಂತಹ ದುರಂತಗಳು ಮರುಕಳಿಸದಂತೆ ಮುಂದೆ ಸರ್ಕಾರಗಳು ಕೈಗೊಳ್ಳಬೇಕಾದ ಕ್ರಮಗಳು ಬಹಳ ಉಳಿದಿವೆ.
ವಿಷದ ನಂಟು
Month : May-2017 Episode : Author :