ಮನುಷ್ಯನ ಕ್ರಿಯೆ ಆಲೋಚನೆಯಿಂದ ಬರುತ್ತದೆ. ಆಲೋಚನೆ ಭಾವನೆಯಿಂದ ಹುಟ್ಟುತ್ತದೆ. ಪ್ರತಿಯೊಂದು ಆಲೋಚನೆಯ ಹಿಂದೆಯೂ ಒಂದು ಭಾವನೆ ಇರುತ್ತದೆ. ವಿಷಾದ ಭಾವನೆಯ ಬೀಜಬಿತ್ತಿ ಅಮೃತದ ಫಲವನ್ನು ಎಂದೂ ಪಡೆಯಲು ಸಾಧ್ಯವಿಲ್ಲ. ಜೀವನದಲ್ಲಿ ಸತ್ಫಲಗಳು ಸಿಗಬೇಕಾದರೆ ಸದ್ಭಾವನೆಯ ಬೀಜಗಳನ್ನು ಮನಸ್ಸಿನಲ್ಲಿ ಬಿತ್ತಿಕೊಳ್ಳಬೇಕು.
ಬದುಕಿನ ಬಗ್ಗೆ ಹಲವರು ಹಲವು ರೀತಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಕೆಲವರಿಗೆ ಬದುಕಿನಲ್ಲಿ ನೋವೇ ಕಂಡುಬಂದರೆ, ಇನ್ನು ಕೆಲವರಿಗೆ ನಲಿವೇ ಕಂಡುಬರುತ್ತದೆ. ಕೆಲವರಿಗೆ ಈ ಬದುಕೊಂದು ಆಕಸ್ಮಿಕವಾಗಿ ಕಂಡುಬಂದರೆ, ಇನ್ನು ಕೆಲವರಿಗೆ ಪೂರ್ವಯೋಜಿತವಾಗಿ ಕಂಡುಬರುತ್ತದೆ. ಕೆಲವರಿಗೆ ವ್ಯರ್ಥವಾಗಿ ಕಂಡುಬಂದರೆ, ಮತ್ತೆ ಕೆಲವರಿಗೆ ಅರ್ಥಪೂರ್ಣವಾಗಿ ಕಾಣುತ್ತದೆ. ಕೆಲವರು ತಮ್ಮ ಬದುಕನ್ನು ತಮ್ಮ ಇಚ್ಛೆಯಂತೆಯೇ ನಡೆಸುತ್ತೇವೆಂದರೆ, ಹಲವರು ಬದುಕು ದೈವೇಚ್ಛೆಯಂತೆ ಸಾಗುತ್ತದೆ ಎನ್ನುತ್ತಾರೆ. ಕೆಲವರು ಬದುಕಿನಲ್ಲಿ ಪ್ರಯತ್ನವೇ ಮುಖ್ಯವೆಂದರೆ, ಕೆಲವರು ಅದೃ?ವೇ ಮುಖ್ಯವೆನ್ನುತ್ತಾರೆ. ಕೆಲವರು ಅದು ಶಾಪವೆಂದರೆ, ಕೆಲವರು ವರವೆನ್ನುತ್ತಾರೆ. ಕೆಲವರು ಮಿಥ್ಯ ಎಂದರೆ, ಕೆಲವರು ಸತ್ಯವೆನ್ನುತ್ತಾರೆ.
ಹೀಗೆ ಬದುಕಿನ ಬಗ್ಗೆ ಹಲವಾರು ಅಭಿಪ್ರಾಯಗಳು ಇದ್ದರೂ ಯಾವುದೂ ಸಂಪೂರ್ಣ ಸತ್ಯವೂ ಅಲ್ಲ, ಪರಿಪೂರ್ಣ ಅಸತ್ಯವೂ ಅಲ್ಲ. ಯಾಕೆಂದರೆ ಅವರವರ ಅನುಭವ ಅವರವರ ಮಟ್ಟಿಗೆ ಸತ್ಯ. ಅದುವೇ ಸಾರ್ವಜನಿಕವಾಗಬೇಕಾಗಿಲ್ಲ.
ಮನಸ್ಸಿನಂತೆ ಮಾದೇವ
ನಮ್ಮ ಯೋಚನೆಗಳೇ ನಮ್ಮ ಬದುಕು. ’ಯದ್ ಭಾವಂ ತದ್ ಭವತಿ’ ಎಂಬ ಮಾತಿನಂತೆ ಯಾವ ಭಾವನೆಯಿಂದ ಉಸಿರಾಡುತ್ತೇವೋ, ಅದೇ ಜೀವ ತಳೆಯುತ್ತದೆ. ಹಾಲಿವುಡ್ಡಿನ ಸುಂದರ ತಾರೆಯೊಬ್ಬಳನ್ನು ಪತ್ರಕರ್ತನೊಬ್ಬ ಕೇಳಿದನಂತೆ: “ನಿಮ್ಮ ಯೌವನದ ಗುಟ್ಟೇನು?”
ಅದಕ್ಕೆ ಆ ಚೆಲುವೆ ಕೊಟ್ಟ ಉತ್ತರ: “ಎಳೆಯರಾಗಿ ಕಾಣಲು ನೀವು ಎಳೆಯರೆಂದೇ ಭಾವಿಸಿ” ಎಂಬುದಾಗಿತ್ತು.
ಬುದ್ಧ ಹೇಳಿದ ಒಂದು ಮಾತು ಹೀಗಿದೆ – “ಒಳಗಡೆ ಯಾವ ಭಾವನೆಗಳಿವೆಯೋ ಅಂಥದೇ ವ್ಯಕ್ತಿಯಾಗಿ ನಿರ್ಮಾಣವಾಗುತ್ತೇವೆ.”
ನಮ್ಮಲ್ಲಿ ಕೆಟ್ಟ ಭಾವನೆಯಿದ್ದರೆ ನಮಗೆ ಎಲ್ಲವೂ ಕೆಟ್ಟದ್ದಾಗಿ ಕಾಣುತ್ತವೆ. ಅದೇ ಒಳ್ಳೆಯ ಭಾವನೆಯಿದ್ದರೆ ನಮಗೆ ಎಲ್ಲವೂ ಒಳಿತಾಗಿಯೇ ಕಾಣುತ್ತವೆ. ದುರ್ಭಾವನೆಯಿಂದಲೇ ಬದುಕಿದ ದುರ್ಯೋಧನನಿಗೆ ಎಲ್ಲರೂ ಕೆಟ್ಟವರಂತೆ ಕಂಡರು; ಸದಾ ಸದ್ಭಾವನೆಯಿಂದ ಬದುಕಿದ ಧರ್ಮರಾಯನಿಗೆ ಎಲ್ಲರೂ ಒಳ್ಳೆಯವರಂತೆ ಕಂಡರು. ಹೀಗೆ ಭಾವನೆಗಳು ನಮ್ಮ ಜೀವನವನ್ನು ರೂಪಿಸುತ್ತವೆ.
ಭಾವಕ್ಕೆ ಒಲಿವ ಭಗವಂತ
ಮನಸ್ಸೆಂಬುದು ಒಂದು ಸಜೀವ ಯಂತ್ರವಿದ್ದಂತೆ. ಅದಕ್ಕೆ ಒಳ್ಳೆಯ ಚಿಂತನೆಯನ್ನು ಕೊಟ್ಟರೆ ಒಳ್ಳೆಯದನ್ನೇ ಯೋಚಿಸುತ್ತದೆ, ಕೆಟ್ಟ ಚಿಂತನೆಯನ್ನು ಕೊಟ್ಟರೆ ಕೆಟ್ಟದನ್ನೇ ಯೋಚಿಸುತ್ತದೆ. ಕೆಟ್ಟ ಯೋಚನೆಗಳೇ ಕ್ರಿಯಾಶೀಲವಾದಾಗ ಕೆಟ್ಟ ನಡತೆಗೆ ನಾಂದಿಯಾಗುತ್ತದೆ. ಸದಾ ಸತ್ಚಿಂತಕರಾದರೆ ಸಜ್ಜನರಾಗಿ ರೂಪುಗೊಳ್ಳುತ್ತೇವೆ. ಮನುಷ್ಯ ತಾನು ಮಾಡುವ ಕೆಲಸಗಳಿಂದ ಪಾಪ-ಪುಣ್ಯ ಗಳಿಸುವುದಿಲ್ಲ. ಬದಲಿಗೆ ಅದರ ಹಿಂದಿರುವ ಭಾವನೆಯ ಆಧಾರದ ಮೇಲೆ ಎಲ್ಲವೂ ನಿರ್ಣಯವಾಗುತ್ತವೆ. ಸುಭಾಷಿತವೊಂದು ಭಾವದ ಬಗ್ಗೆ ಬಹಳ ಸುಂದರವಾಗಿ ವಿವರಿಸುತ್ತದೆ –
ಮೂರ್ಖೋ ವದತಿ ವಿಷ್ಣಾಯ
ಧೀರೋ ವದತಿ ವಿಷ್ಣವೇ |
ಉಭಯೋಸ್ತು ಸಮಂ ಪುಣ್ಯಂ
ಭಾವಗ್ರಾಹಿ ಜನಾರ್ದನಃ ||
– ಚೈತನ್ಯಭಾಗವತ, ೧೧. ೧೦೮
ಅಜ್ಞಾನಿ ’ವಿಷ್ಣಾಯ’ ಎಂಬುದಾಗಿ ಹೇಳಿದರೂ, ಜ್ಞಾನಿ ’ವಿಷ್ಣವೇ’ ಎಂದು ಹೇಳಿದರೂ ಇಬ್ಬರಿಗೂ ಅದರ ಫಲ ಅಪಾರವಾಗಿ ಸಿಗುತ್ತದೆ. ಏಕೆಂದರೆ ಭಗವಂತನು ವ್ಯಾಕರಣ, ಉಚ್ಚಾರಣೆ ನೋಡುವುದಿಲ್ಲ. ಬದಲಾಗಿ ಅದರ ಹಿಂದೆ ಇರುವ ಭಾವನೆಯನ್ನು ನೋಡುತ್ತಾನೆ. ಭಗವಂತ ಭಾವಗ್ರಾಹಿ.
ಹೃದಯದ ಭಾವನೆಗಳು ಭಗವಂತನನ್ನು ತಲಪಲು ಭಾವನೆ ಮುಖ್ಯ, ಶಬ್ದಗಳಲ್ಲ. ಶ್ರೀರಾಮಚಂದ್ರ ಶಬರಿ ಕಚ್ಚಿದ ಹಣ್ಣನ್ನು ತಿಂದ; ಅದರಲ್ಲಿದ್ದ ಆಕೆಯ ಭಾವತೀವ್ರತೆಯನ್ನು ನೋಡಿ. ಪ್ರಭು ಶ್ರೀರಾಮಚಂದ್ರನನ್ನು ಜೀವಮಾನದಲ್ಲಿ ಒಮ್ಮೆಯಾದರೂ ಭೇಟಿಯಾಗಬೇಕು, ಭೇಟಿಯಾದಾಗ ಆತನಿಗೆ ಸಿಹಿಯಾದ ಬೋರೆಹಣ್ಣನ್ನು ಕೊಡಬೇಕೆಂದು ಶಬರಿ ಹಲವು ವ?ಗಳಿಂದ ಆತನ ಆಗಮನಕ್ಕಾಗಿ ಕಾಯುತ್ತಾ ಇದ್ದಳು. ಆತನ ಭೇಟಿಯಾದಾಗ ಪ್ರತಿ ಹಣ್ಣನ್ನೂ ಕಚ್ಚಿ ಅದು ಸಿಹಿಯಾಗಿದೆಯೆ ಹುಳಿಯಾಗಿದೆಯೆ? ಎಂದು ಪರೀಕ್ಷಿಸಿ, ಸಿಹಿಹಣ್ಣನ್ನು ಮಾತ್ರ ಪ್ರಭು ಶ್ರೀರಾಮಚಂದ್ರನಿಗೆ ಕೊಡುತ್ತಿದ್ದಳು. ಪ್ರಭುವಿಗೆ ತಾನು ಎಂಜಲನ್ನು ತಿನ್ನಿಸುತ್ತಿದ್ದೇನೆ ಎನ್ನುವ ಅರಿವು ಆಕೆಗಿರಲಿಲ್ಲ. ಬದಲಿಗೆ ಸಿಹಿಯಾದ ಹಣ್ಣನ್ನು ಮಾತ್ರ ತನ್ನ ಪ್ರಭುವಿಗೆ ಕೊಡಬೇಕೆಂಬ ಭಾವತೀವ್ರತೆ ಆಕೆಯಲ್ಲಿತ್ತು. ಇಂತಹ ಭಾವತೀವ್ರತೆಗೇ ಭಗವಂತ ಒಲಿಯುವುದು.
ಶ್ರೀಕೃಷ್ಣನನ್ನು ತೂಕ ಮಾಡುವಾಗ ಸತ್ಯಭಾಮೆ ಅಹಂಕಾರದಿಂದ ತನ್ನಲ್ಲಿದ್ದ ಎಲ್ಲ ಬಂಗಾರದ ಒಡವೆಗಳನ್ನು ತಕ್ಕಡಿಯ ಮೇಲಿಟ್ಟಳು. ಕೃಷ್ಣ ಕುಳಿತಿದ್ದ ತಕ್ಕಡಿ ಮೇಲೆ ಏರಲೇ ಇಲ್ಲ. ಕೊನೆಗೆ ರುಕ್ಮಿಣಿ ಪ್ರೀತಿಯ ಭಾವದಿಂದ ಅದರ ಮೇಲೆ ಒಂದು ತುಳಸಿದಳವನ್ನಿಟ್ಟಾಗ ತಕ್ಕಡಿ ಮೇಲೆ ಬಂತು.
ತ್ರೇತಾಯುಗದಲ್ಲಿ, ದ್ವಾಪರಯುಗದಲ್ಲಿ ಮಾತ್ರ ಭಗವಂತ ಭಕ್ತರ ಭಾವನೆಗೆ ಒಲಿಯುತ್ತಿದ್ದದ್ದಲ್ಲ; ಇಂದಿನ ಕಲಿಯುಗದಲ್ಲೂ ಭಗವಂತ ಭಕ್ತನ ಭಾವತೀವ್ರತೆಗೆ ಸೋಲುತ್ತಾನೆ. ೧೯೪೦ರ ದಶಕದಲ್ಲೊಮ್ಮೆ ಕಟೀಲಿನಲ್ಲಿ ಕುಂಭದ್ರೋಣ ಮಳೆಬಂದು ಇಡೀ ಊರೇ ಮುಳುಗುವಷ್ಟು ಪ್ರವಾಹ ಬಂತು. ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವೂ ಮುಳುಗಿತು. ಲಿಂಗರೂಪಿಯಾದ ದೇವಿಯೂ ಮುಳುಗುವ ಸಂದರ್ಭ ಬಂದಾಗ ಪ್ರಧಾನ ಅರ್ಚಕರಾದ ದಿವಂಗತ ಗೋಪಾಲಕೃಷ್ಣ ಅಸ್ರಣ್ಣರು ’ನೀನು ಮುಳುಗುವುದಾದರೆ ನನ್ನನ್ನೂ ಮುಳುಗಿಸು’ ಎಂದು ಲಿಂಗವನ್ನು ತಬ್ಬಿಹಿಡಿದು ಕೂತರು. ಭಕ್ತನ ಭಾವನೆಗೆ ಭಗವಂತ ಬೆಲೆ ಕೊಡಲೇಬೇಕಾಯಿತು. ಕೊನೆಗೂ ಪ್ರವಾಹ ಇಳಿಯಿತು. ಲಿಂಗಕ್ಕೆ ಏನೂ ಅನಾಹುತ ಆಗಲಿಲ್ಲ.
ಮನಸ್ಸು ಶುದ್ಧವಿಲ್ಲದಿದ್ದರೆ ನಿತ್ಯವೂ ದೇವರಪೂಜೆ ಮಾಡುವ ಅರ್ಚಕನಿಗೂ ಭಗವಂತ ಒಲಿಯುವುದಿಲ್ಲ. ಆದರೆ ಕಟುಕನಾದರೂ ಭಗವದ್ಭಾವದಿಂದಲೇ ಬದುಕಿದ ಧರ್ಮವ್ಯಾಧನಿಗೆ ಭಗವಂತ ಒಲಿಯುತ್ತಾನೆ.
ಯಾವುದೇ ಕೆಲಸವನ್ನು ಶುದ್ಧಭಾವದಿಂದ ಮಾಡಿದರೆ ಮಾತ್ರ ಅದು ಸಾರ್ಥಕವಾಗುತ್ತದೆ. ನಮ್ಮ ಹಿರಿಯರಿಗೆ ಮಾಡುವ ಶ್ರಾದ್ಧಕಾರ್ಯವನ್ನು ವಿಧಿಪೂರ್ವಕವಾಗಿ ಮಾಡಿದರೂ ಅದರಲ್ಲಿ ಶ್ರದ್ಧೆ, ಭಾವನೆಗಳು ಇಲ್ಲದಿದ್ದರೆ, ಅದು ನಮ್ಮ ಪಿತೃಗಳನ್ನು ತೃಪ್ತಿಗೊಳಿಸುವುದಿಲ್ಲ. ಆದರೆ ದೂರದೇಶದಲ್ಲಿದ್ದು ವಿಧಿಪೂರ್ವಕವಾಗಿ ಶ್ರಾದ್ಧಮಾಡಲಾಗದಿದ್ದರೂ, ಒಂದು ಮುಷ್ಟಿ ಅನ್ನವನ್ನು ಕಾಗೆಗೆ ಇಟ್ಟು, ಇದು ನನ್ನ ಪಿತೃಗಳಿಗೆ ತಲಪಲಿ ಎಂಬ ಭಾವದಿಂದ, ಶ್ರದ್ಧೆಯಿಂದ ಬೇಡಿಕೊಂಡರೆ ಅದು ನಮ್ಮ ಪಿತೃಗಳಿಗೆ ತಲಪುತ್ತದೆ.
ಪುರಾಣಕಾಲದ ಹಿರಣ್ಯಕಶಿಪು ತನ್ನ ಮಗನಾದ ಪ್ರಹ್ಲಾದನಿಗೆ ವಿ?ವನ್ನು ಕೊಡು ಎಂಬುದಾಗಿ ಹೆಂಡತಿಗೆ ಹೇಳಿದ. ಆಕೆಯಾದರೂ ಏನು ಮಾಡಬೇಕು? ’ವಿ?ಕುಡಿಸು’ ಎಂದು ಆಜ್ಞೆ ಕೊಟ್ಟವನು ಪತಿ; ವಿ? ಕುಡಿಸಬೇಕಾದದ್ದು ತನ್ನ ಕರುಳಕುಡಿಗೆ! ಆಕೆಗೆ ಗೊತ್ತಿದ್ದದ್ದು ಮೂರೇ ಸಂಗತಿ: ಗಂಡ, ಮಗ, ಹಾಗೂ ಭಗವಂತ. ಅದರಾಚೆಯ ಪ್ರಪಂಚವನ್ನೇ ಅರಿಯದ ಮುಗ್ಧೆ ಆಕೆ. ಮಗನಿಗೆ ವಿ? ಕುಡಿಸುವಾಗ ’ಹೇ ಹರಿಯೇ, ಈ ವಿ?ದಿಂದ ನನ್ನ ಮಗನಿಗೆ ಏನೂ ತೊಂದರೆ ಆಗದಿರಲಿ’ ಎಂಬುದಾಗಿ ಆ ಸರ್ವಶಕ್ತ ಭಗವಂತನಲ್ಲಿ ಆಕೆ ಭಾವಪೂರ್ವಕವಾಗಿ ಬೇಡಿಕೊಂಡಳು. ಈ ಭಾವವೇ, ಮನದಾಳದ ಮನದಾಳದ ಪ್ರಾರ್ಥನೆಯಿಂದಲೇ ಮಗನಿಗೆ ಕೊಟ್ಟ ವಿ? ಅಮೃತವಾಗಿ ಪರಿವರ್ತನೆ ಹೊಂದಿ ಪ್ರಹ್ಲಾದನಿಗೆ ಏನೂ ಆಗಲಿಲ್ಲ. ಅ? ಮಾತ್ರವಲ್ಲ, ನಿತ್ಯನಿರಂತರವಾಗಿ ಭಗವದ್ಭಾವದಿಂದ ಬದುಕಿದ ಪ್ರಹ್ಲಾದನಿಗೆ ತಂದೆ ನೀಡಿದ ಕಠೋರ ಶಿಕ್ಷೆಯೂ ಯಾವ ಪರಿಣಾಮವನ್ನೂ ಬೀರಲಿಲ್ಲ. ತಂದೆ ನೀಡಿದ ಎಲ್ಲ ಶಿಕ್ಷೆಯೂ ಪ್ರಹ್ಲಾದನಿಗೆ ಭಗವಂತನ ಲೀಲೆಯಾಗಿ ಕಂಡುಬಂದು, ಮುಳ್ಳಿನ ಹಾಸಿಗೆಯೂ ಹೂವಿನ ಹಾಸಿಗೆಯಾಯಿತು. ಬೆಂಕಿಯ ಮಳೆಯೂ ತಂಪಿನ ಮಳೆಯಾಯಿತು. ನಾವು ಕೂಡ ಸದಾ ಸದ್ಭಾವನೆಯಿಂದ, ಭಗವದ್ಭಾವದಿಂದ ಬದುಕಿದರೆ, ನಮ್ಮ ನೋವುಗಳು ನಲಿವಾಗಿ, ಸೋಲುಗಳು ಗೆಲವುಗಳಾಗಿ, ಕ್ಲೇಶಗಳು ಆನಂದವಾಗಿ ಪರಿವರ್ತನೆಯಾಗುತ್ತವೆ.
ದೃಷ್ಟಿಯಂತೆ ಸೃಷ್ಟಿ
’ನೂಲಿನಂತೆ ಸೀರೆ, ಭಾವದಂತೆ ಬದುಕು.’ ನಾವು ಏನು ಯೋಚಿಸುತ್ತೇವೆಯೊ ಅದೇ ನಮ್ಮ ಬದುಕಾಗುತ್ತದೆ. ಅಷ್ಟು ಮಾತ್ರವಲ್ಲ, ಇತರರ ಜೀವನವೂ ನಮ್ಮ ಭಾವದಂತೆ ಇದೆ ಎಂಬುದಾಗಿ ನಾವು ಭಾವಿಸುತ್ತೇವೆ. ನಾವು ಹಣದ ಬೆನ್ನಟ್ಟಿ ಹೋಗುತ್ತಿದ್ದರೆ ಎಲ್ಲರೂ ಹಣದ ಹಿಂದೆ ಓಡುತ್ತಿರುವರೆಂದು ನಾವೆಣಿಸುತ್ತೇವೆ. ನಾವೇನಾದರೂ ಕಳ್ಳರಾಗಿದ್ದರೆ, ಸದಾ ನಮ್ಮ ಕಿಸೆಯನ್ನು ತಡವಿ ನೋಡಿಕೊಳ್ಳುತ್ತಲೇ ಇರುತ್ತೇವೆ; ನಮ್ಮ ಸುತ್ತಮುತ್ತಲಿದ್ದವರೆಲ್ಲರೂ ನಮಗೆ ಕಳ್ಳರಂತೆ ಕಾಣುತ್ತಾರೆ. ನಮ್ಮ ದೃಷ್ಟಿಯಂತೆ ಸೃಷ್ಟಿ. ರಾಜಕಾರಣಿಗಳು ಸದಾ ಒಳಸಂಚು, ಪಿತೂರಿ ಎಂಬ ಭಾವನೆಯಿಂದ ಬದುಕುತ್ತಾರೆ. ಯಾರೋ ನನ್ನ ಸ್ಥಾನವನ್ನು ಕಬಳಿಸುತ್ತಾರೆ, ನನ್ನನ್ನು ಸ್ಥಾನಭ್ರ?ನನ್ನಾಗಿಸುತ್ತಾರೆ, ನನ್ನನ್ನು ಹೊಡೆದೋಡಿಸುತ್ತಾರೆ – ಇಂತಹ ಭಾವನೆಯೇ ರಾಜಕಾರಣಿಗಳಿಗೆ ಸದಾ ಯಾಕೆ ಬರುತ್ತದೆಂದರೆ ಇವರು ಮಾಡುವುದೂ ಅದನ್ನೆ. ಇತರರ ಕಾಲೆಳೆಯುವುದು ಹೇಗೆ? ತಾನು ಮೇಲೇರುವುದು ಹೇಗೆ ಎಂಬ ಭಾವನೆಯಿಂದಲೇ ಬದುಕಿದರೆ ಆತನಿಗೆ ರಾಜಕಾರಣಿಗಳಲ್ಲೂ ಒಳ್ಳೆಯವರಿದ್ದಾರೆ ಎಂಬ ವಿಶ್ವಾಸ ಬರುವುದಾದರೂ ಹೇಗೆ? ಅಸಂಖ್ಯಾತ ನಿರ್ದೋಷಿ ಜನರನ್ನು ಕೊಂದ ಹಿಟ್ಲರ್ ಸದಾಕಾಲ ತನ್ನನ್ನು ಯಾರಾದರೂ ಕೊಲ್ಲುತ್ತಾರೆನೋ ಎಂಬ ಭಯದಿಂದ ನರಳುತ್ತಿದ್ದ. ಆತನಿಗೆ ಎಲ್ಲರೂ ಕೊಲೆಗಡುಕರಂತೆ ಕಂಡುಬರುತ್ತಿದ್ದರು. ಇಂತಹ ನಕಾರಾತ್ಮಕ ಭಾವದಿಂದಲೇ ಸದಾ ಬದುಕಿದರೆ, ನಾವು ಮಾಡುವ ತಪ್ಪು ಕೂಡ ನಮಗೆ ಸರಿಯೆನಿಸುತ್ತದೆ. ತಪ್ಪು ಯಾವುದು, ಸರಿ ಯಾವುದು ಎಂಬ ವಿವೇಚನೆಯೇ ನಮ್ಮಿಂದ ಮಾಯವಾಗುತ್ತದೆ. ದುರ್ಭಾವನೆಯೇ ಉಸಿರಾದಾಗ, ದುಷ್ಟತನವೇ ಸ್ವಭಾವವಾದಾಗ ಅದೇ ಸರಿಯೆನಿಸುತ್ತದೆ, ಅದೇ ಸಹ್ಯವಾಗುತ್ತದೆ.
ಮನುಷ್ಯನ ಕ್ರಿಯೆ ಆಲೋಚನೆಯಿಂದ ಬರುತ್ತದೆ. ಆಲೋಚನೆ ಭಾವನೆಯಿಂದ ಹುಟ್ಟುತ್ತದೆ. ಪ್ರತಿಯೊಂದು ಆಲೋಚನೆಯ ಹಿಂದೆಯೂ ಒಂದು ಭಾವನೆ ಇರುತ್ತದೆ. ಭಾವನೆ ಜನಿಸದಿದ್ದರೆ ಆಲೋಚನೆಗಳು ಜನಿಸುವುದಿಲ್ಲ. ಮರದ ಫಲಗಳು ಫಲಿತಾಂಶವಾದರೆ, ಭಾವನೆಯ ಬೀಜಗಳು ಬೇರುಗಳು. ವಿಷಾದ ಭಾವನೆಯ ಬೀಜಬಿತ್ತಿ ಅಮೃತದ ಫಲವನ್ನು ಎಂದೂ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಜೀವನದಲ್ಲಿ ಸತ್ಫಲಗಳು ಸಿಗಬೇಕಾದರೆ ಸದ್ಭಾವನೆಯ ಬೀಜಗಳನ್ನು ಮನಸ್ಸಿನಲ್ಲಿ ಬಿತ್ತಿಕೊಳ್ಳಬೇಕು.
ಶುಕ್ಲಯಜುರ್ವೇದದ ಬೃಹದಾರಣ್ಯಕ ಉಪನಿಷತ್ತಿನಲ್ಲಿ ಒಂದು ಕತೆ ಬರುತ್ತದೆ.
ದೇವತೆಗಳು, ಮನುಷ್ಯರು, ಅಸುರರು ಮೂವರೂ ಪ್ರಜಾಪತಿಯ ಮಕ್ಕಳು. ಅವರೆಲ್ಲ ತಮ್ಮ ತಂದೆಯಾದ ಪ್ರಜಾಪತಿಯ ಬಳಿಯಲ್ಲಿ ಬ್ರಹ್ಮಚರ್ಯವನ್ನು ಪಾಲಿಸುತ್ತ ಉಳಿದುಕೊಂಡಿದ್ದರು. ಕೆಲಕಾಲದ ನಂತರ ಅವರು ಆತನಿಂದ ಬೀಳ್ಕೊಂಡು ತಮ್ಮತಮ್ಮ ಕೆಲಸಕ್ಕೆ ಹೋಗುವಾಗ ಆತನಲ್ಲಿ ಒಳ್ಳೆಯದೊಂದು ಉಪದೇಶವನ್ನು ಪಡೆದುಕೊಳ್ಳಬೇಕೆಂಬ ಬಯಕೆ ಅವರಿಗೆ ಉಂಟಾಯಿತು.
ಅವರೆಲ್ಲರಿಗೂ ಪ್ರಜಾಪತಿ ’ದ’ ಎಂಬ ಉಪದೇಶ ನೀಡಿದ. ’ಇದರ ಅರ್ಥವನ್ನು ನೀವು ಅರಿತಿರಾ?’ ಎಂದು ಅವರನ್ನು ಕೇಳಿದಾಗ ’ಅಹುದು’ ಎಂದರು. ’ದ’ ಎಂದರೆ ’ದಮ್ಯತ’, ದಮನ ಎಂಬುದಾಗಿ ದೇವತೆಗಳು ಅರ್ಥಮಾಡಿಕೊಂಡರು. ಯಾಕೆಂದರೆ ಅವರು ಸದಾ ಸುಖಭೋಗಗಳೊಂದಿಗೆ ಸ್ವರ್ಗದಲ್ಲಿರುತ್ತಿದ್ದರು. ನಾವು ದಮನ ಮಾಡದಿದ್ದರೆ ಸ್ವರ್ಗದಿಂದ ಉರುಳಿಹೋಗುತ್ತೇವೆ. ಆದ್ದರಿಂದ ಇಂದ್ರಿಯನಿಗ್ರಹ ಮಾಡಿಕೊಳ್ಳಿರಿ ಎಂಬುದಾಗಿ ಪ್ರಜಾಪತಿಯ ಉಪದೇಶವನ್ನು ದೇವತೆಗಳು ಅರ್ಥೈಸಿಕೊಂಡರು.
ಮನುಷ್ಯರು ’ದ’ ಎಂಬುದನ್ನು ’ದತ್ತ’ ಎಂಬುದಾಗಿ ಅರ್ಥೈಸಿಕೊಂಡರು. ಯಾಕೆಂದರೆ ಮನುಷ್ಯರು ಸದಾ ಲೋಭಿಗಳು. ದಾನದಿಂದಲೇ ನಮ್ಮ ಕಲ್ಯಾಣವಾಗುವುದು ಎಂಬುದಾಗಿ ಮನುಷ್ಯರು ಅರ್ಥಮಾಡಿಕೊಂಡರು.
ಅಸುರರು ’ದ’ ಎಂಬುದನ್ನು ’ದಯಧ್ವ’ ಎಂಬುದಾಗಿ ಅರ್ಥೈಸಿಕೊಂಡರು. ಯಾಕೆಂದರೆ ಅಸುರರು ಕ್ರೂರಿಗಳು, ಹಿಂಸಕರು. ಇಂತಹ ನಮ್ಮ ದು?ರ್ಮಗಳನ್ನು ನಿವಾರಿಸಿ ಪಾಪದಿಂದ ವಿಮೋಚನೆಯಾಗಬೇಕಾದರೆ ನಾವು ಸರ್ವರಲ್ಲೂ ದಯೆತೋರಬೇಕು.
ಹೀಗೆ ಪ್ರಜಾಪತಿಯ ’ದ’ ಎಂಬ ಒಂದೇ ಉಪದೇಶವನ್ನು ಅವರವರ ಭಾವನೆಗೆ ತಕ್ಕಂತೆ ದೇವತೆಗಳು, ಮನುಷ್ಯರು, ರಾಕ್ಷಸರು ಅರ್ಥಮಾಡಿಕೊಂಡರು.
ಭಾವನೆಗಳು ವಾಸ್ತವಕ್ಕೆ ಹತ್ತಿರವಿರಬೇಕು. ಭಾವನೆಗಳು ಬುದ್ಧಿಯ ಹಿಡಿತದಲ್ಲಿರಬೇಕು. ಇಲ್ಲದಿದ್ದರೆ ಅದು ಅನರ್ಥಕ್ಕೆ ನಾಂದಿಯಾಗುತ್ತದೆ, ಭಾವೋದ್ರೇಕಕ್ಕೆ ಒಳಗಾಗುವುದು ತಪ್ಪಲ್ಲ. ಆದರೆ ಭಾವೋದ್ವೇಗಕ್ಕೊಳಗಾದಾಗ ವಿವೇಕವನ್ನು ಕಳೆದುಕೊಳ್ಳುವುದು ತಪ್ಪು. ಈ ಬಗ್ಗೆ ಡಿ.ವಿ.ಜಿ. ಹೀಗೆ ಹೇಳುತ್ತಾರೆ –
ಭಾವರಾಗೋದ್ರೇಕ ತಾನೆ ತಪ್ಪೇನಲ್ಲ|
ಧೀವಿವೇಕದ ಸಮತೆಯದರಿನದಿರದಿರೆ ||
ಸ್ವಾವಿದ್ಯೆಯಾ ಮೋಹ ಮಮತೆಯದನಂಟದಿರೆ |
ಪಾವನವೊ ಹೃನ್ಮಥನ – ಮಂಕುತಿಮ್ಮ || (ಕಗ್ಗ, ೪೨೩)
ಭಾವನೆ ಮತ್ತು ಪ್ರೀತಿಗಳಿಂದ ಕೂಡಿದ ಉದ್ವೇಗ ತಪ್ಪೇನಲ್ಲ. ಆದರೆ ಈ ಉದ್ವೇಗದಿಂದ ಬುದ್ಧಿಶಕ್ತಿ ಮತ್ತು ವಿವೇಕದ ಸಮತೆಗಳು ಅಲ್ಲಾಡಕೂಡದು. ಸ್ವಾಭಾವಿಕವಾಗಿ ಬಂದ ಅಜ್ಞಾನದ ಮೋಹ ಮತ್ತು ಮಮತೆಗಳು ಈ ಉದ್ವೇಗವನ್ನು ಉಂಟುಮಾಡದಿದ್ದಲ್ಲಿ, ಅದು ನಮ್ಮ ಹೃದಯದ ವಿಚಾರಗಳನ್ನು ಪರಿಶುದ್ಧಗೊಳಿಸುತ್ತದೆ.
ಭಾವನೆ ಎಂಬುದು ಒಂದು ಅಪರಿಮಿತವಾದ ಅಮೂಲ್ಯ ಶಕ್ತಿ. ಅದನ್ನು ರಚನಾತ್ಮಕ ಕೆಲಸಕ್ಕೂ ಉಪಯೋಗಿಸಬಹುದು, ವಿಘಟನಾತ್ಮಕ ಕೆಲಸಕ್ಕೂ ಉಪಯೋಗಿಸಬಹುದು. ಈವತ್ತು ದೇಶದಲ್ಲಿ ಜನರಲ್ಲಿ ಜಾತಿಭಾವನೆಯನ್ನು ಕೆರಳಿಸಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವ ನಾಯಕರಿದ್ದಾರೆ. ಆದರೆ ದೇಶಪ್ರೇಮದ ಭಾವವನ್ನು ಉದ್ದೀಪಿಸಿ ದೇಶಸೇವೆಗೆ ಜನರನ್ನು ಸಜ್ಜುಗೊಳಿಸುವ ನಾಯಕರು ವಿರಳವಾಗುತ್ತಿದ್ದಾರೆ.
ಸದ್ಭಾವನೆಯಿಂದ, ಭಾವ ತೀವ್ರತೆಯಿಂದ ನಂಬಿಕೆ, ವಿಶ್ವಾಸಗಳು ಹುಟ್ಟುತ್ತವೆ. ನಂಬಿಕೆ ವಿಶ್ವಾಸಗಳು ದೃಢವಾದಾಗಲೇ ಪವಾಡಗಳು ನಡೆಯುತ್ತವೆ. ಈ ಬಗ್ಗೆ ಸುಭಾಷಿತವೊಂದು ಹೀಗೆ ಹೇಳುತ್ತದೆ –
ಮಂತ್ರೇ ತೀರ್ಥೇ ದೇವೇ ಮಂತ್ರೇ ದೈವಜ್ಞೇ ಭೇಷಜೇ ಗುರೌ ||
ಯಾದೃಶೀ ಭಾವನಾ ಯಸ್ಯ ಸಿದ್ಧಿರ್ಭವತಿ ತಾದೃಶೀ ||
ಭಾವನೆ, ನಂಬಿಕೆ ಇದ್ದವರಿಗೆ ಕಲ್ಲು ದೇವರಾಗಿ ಕಾಣುತ್ತದೆ, ಸಾಮಾನ್ಯ ನೀರು ತೀರ್ಥವಾಗುತ್ತದೆ, ಅಕ್ಷರಗಳು ಮಂತ್ರವಾಗುತ್ತವೆ, ಸಾಮಾನ್ಯ ಮರ, ಗಿಡಗಳು ಔಷಧಿಯಾಗುತ್ತವೆ, ಸಾಮಾನ್ಯ ವ್ಯಕ್ತಿಯು ಗುರುವಾಗಿ ಸ್ವೀಕರಿಸಲ್ಪಡುತ್ತಾನೆ. ನಾವು ಯಾವುದರಲ್ಲಿ ಹಾಗೂ ಯಾರಲ್ಲಿ ಯಾವ ಭಾವನೆಯನ್ನು ಇಟ್ಟುಕೊಳ್ಳುತ್ತೇವೆಯೋ ನಮಗೆ ಹಾಗೆ ಸಿದ್ಧಿಸುತ್ತದೆ.
ಭಾವಶಕ್ತಿ
ಕುನ್ಜ್ಂಗ್ ಲಾಮಾ ಅವರು ಬರೆದ ’ದಿ ವರ್ಡ್ಸ್ ಆಫ್ ಮೈ ಪರ್ಫೆಕ್ಟ್ ಟೀಚರ್’ ಎಂಬ ಪುಸ್ತಕದಲ್ಲಿ ಮೈನವಿರೇಳಿಸುವ ಪ್ರಸಂಗವೊಂದು ಉಲ್ಲೇಖವಾಗಿದೆ.
ಸಾವಿರಾರು ವರ್ಷಗಳ ಹಿಂದೆ ಟಿಬೆಟಿನಲ್ಲಿ ವಯಸ್ಸಾಗಿದ್ದ ಒಬ್ಬ ತಾಯಿಯಿದ್ದಳು. ಆಕೆಯ ಮಗ ವ್ಯಾಪಾರಿ. ಆತ ಆಗಾಗ್ಗೆ ವ್ಯಾಪಾರಕ್ಕಾಗಿ ಭಾರತಕ್ಕೆ ಹೋಗಿಬರುತ್ತಿದ್ದ. ತಾಯಿ ಯಾವಾಗಲೂ ಮಗನಿಗೆ ’ಮಗೂ, ಭಾರತದಲ್ಲಿ ಭಗವಾನ್ ಬುದ್ಧನ ಬದುಕಿಗೆ ಸಂಬಂಧಿಸಿದ ’ಬುದ್ಧಗಯಾ’ ಎಂಬ ಪುಣ್ಯಕ್ಷೇತ್ರವಿದೆ. ನೀನು ಮುಂದಿನಬಾರಿ ಭಾರತಕ್ಕೆ ಹೋದಾಗ ಬುದ್ಧಗಯಾದಿಂದ ಬುದ್ಧನಿಗೆ ಸಂಬಂಧಪಟ್ಟ ಯಾವುದಾದರೊಂದು ವಸ್ತುವನ್ನು ತಂದುಕೊಡು ಬಾ, ನಾನದನ್ನು ಪೂಜಿಸಬೇಕು’ ಎಂದು ಕೇಳಿಕೊಳ್ಳುತ್ತಿದ್ದಳು. ಮಗ ಒಪ್ಪಿಕೊಳ್ಳುತ್ತಿದ್ದ. ಆದರೆ ಪ್ರತಿಬಾರಿಯೂ ಭಾರತದಿಂದ ಬರುವಾಗ ಮರೆಯುತ್ತಿದ್ದ. ಹೀಗೆಯೇ ಹತ್ತಾರುಬಾರಿ ನಡೆಯಿತು. ಕೊನೆಗೊಮ್ಮೆ ತಾಯಿ ’ನೋಡು ಮಗೂ, ನೀನು ಮುಂದಿನ ಬಾರಿಯೂ ಬುದ್ಧನಿಗೆ ಸಂಬಂಧಪಟ್ಟ ಪವಿತ್ರವಸ್ತುವನ್ನು ತರುವುದನ್ನು ಮರೆತರೆ, ನಾನು ನಿನ್ನ ಮುಂದೆಯೇ ಪ್ರಾಣಬಿಡುತ್ತೇನೆ’ ಎಂದು ಹೇಳಿಬಿಟ್ಟಳು. ಮಗ ’ತರುವೆ’ ಎಂದ.
ಆದರೆ ಈ ಬಾರಿಯೂ ಅವನು ಬುದ್ಧಗಯಾಕ್ಕೆ ಹೋಗಲಿಲ್ಲ, ಬುದ್ಧ ಸಂಬಂಧಿತ ಪವಿತ್ರವಸ್ತುವನ್ನು ತರಲಿಲ್ಲ. ಆದರೆ ಊರಿಗೆ ಹಿಂತಿರುಗಿ ಬರುತ್ತಿರುವಾಗ ಅವನಿಗೆ ತಾಯಿ ಹೇಳಿದ್ದು ನೆನಪಾಗಿ, ’ಅಯ್ಯೋ! ನಾನು ಪವಿತ್ರವಸ್ತುವನ್ನು ತಾರದಿರುವುದರಿಂದ ತಾಯಿ ಪ್ರಾಣ ಬಿಟ್ಟರೂ ಆಶ್ಚರ್ಯವಿಲ್ಲ, ಈಗೇನು ಮಾಡುವುದು?’ ಎಂದು ಯೋಚಿಸುತ್ತ ಸುತ್ತಮುತ್ತ ನೋಡಿದ. ಅವನಿಗೆ ನಾಯಿಯ ತಲೆಬುರುಡೆಯೊಂದು ಕಂಡಿತು. ತಕ್ಷಣ ಅದರ ಹಲ್ಲೊಂದನ್ನು ಕಿತ್ತು, ರೇ?ವಸ್ತ್ರದಲ್ಲಿ ಸುತ್ತಿಟ್ಟುಕೊಂಡು ಮನೆಗೆ ಬಂದ. ತಾಯಿಗೆ ಅದನ್ನು ಕೊಟ್ಟು ’ಅಮ್ಮಾ! ಇದು ಭಗವಾನ್ ಬುದ್ಧನ ಹಲ್ಲುಗಳಲ್ಲೊಂದು ಎಂದು ಯಾರೋ ಹೇಳಿದರು. ನಿನ್ನ ಪೂಜೆಗೆ ಇದನ್ನು ಬಳಸಿಕೊಳ್ಳಬಹುದು’ ಎಂದುಬಿಟ್ಟ.
ತಾಯಿ ಮಗನ ಮಾತನ್ನು ನಂಬಿ, ಆ ಹಲ್ಲನ್ನು ಕಣ್ಣಿಗೊತ್ತಿಕೊಂಡು ಪೂಜಾಗೃಹದಲ್ಲಿಟ್ಟು ಪ್ರತಿನಿತ್ಯ ಅದಕ್ಕೆ ಅಭಿ?ಕ-ಅರ್ಚನೆ-ಆರತಿಗಳನ್ನು ಮಾಡತೊಡಗಿದಳು. ನಿಧಾನವಾಗಿ ಸುತ್ತಮುತ್ತಲ ಪ್ರದೇಶಗಳಲ್ಲೆಲ್ಲ ಹಲ್ಲಿನ ಸುದ್ದಿ ಹರಡಿತು. ಜನ ತಂಡೋಪತಂಡವಾಗಿ ಅಲ್ಲಿಗೆ ಬಂದು, ಹಲ್ಲಿಗೆ ನಮಸ್ಕರಿಸಿ, ಪೂಜಿಸಿ ಹೋಗುತ್ತಿದ್ದರು. ಹಲ್ಲಿನಿಂದಾಗಿ ಏನೇನೋ ಪವಾಡಗಳು ಆಗುತ್ತಿವೆಯೆಂದು ಹೇಳಿಕೊಳ್ಳುತ್ತಿದ್ದರು. ವ್ಯಾಪಾರಿ ಮಗನಿಗೆ ಒಳಗೊಳಗೆ ಅಳುಕಿದ್ದರೂ, ಸತ್ಯವನ್ನು ಹೇಳಲಾಗದ ಪರಿಸ್ಥಿತಿಯಿತ್ತು. ಹಲವಾರು ವ?ಗಳ ನಂತರ ತಾಯಿ ತೀರಿಕೊಂಡಾಗ, ಊರಿನವರೆಲ್ಲ ಅವರ ಅಂತಿಮದರ್ಶನಕ್ಕೆ ಬಂದಿದ್ದರು. ಆಕೆಯ ಕಳೆಬರಹದ ಸುತ್ತ ಪ್ರಭಾವಲಯವೊಂದು ಹರಡಿರುವುದನ್ನು ಕಂಡರು. ಆಕೆಯ ದೇಹಕ್ಕೆ ಮತ್ತೆಮತ್ತೆ ನಮಸ್ಕರಿಸಿದರು. ಆಕೆಯ ಮಗನಿಗೂ ಅಭಿವಂದಿಸಿದರು ಅಂದಿನಿಂದ ಅವರ ಮನೆಯೊಂದು ಯಾತ್ರಾಸ್ಥಳವಾಯಿತು.
ಆಕೆಯ ಮಗ ಅನೇಕ ದಿನಗಳವರೆಗೆ ’ನಾಯಿಯ ಹಲ್ಲಿಗೆ ಇಷ್ಟೊಂದು ಶಕ್ತಿಯಿದೆಯೇ?’ ಎಂದು ಯೋಚಿಸುತ್ತಿದ್ದ. ನಿಧಾನವಾಗಿ, ಶಕ್ತಿಯಿರುವುದು ನಾಯಿಯ ಹಲ್ಲಿನಲ್ಲಲ್ಲ, ತನ್ನ ತಾಯಿಯ ಭಾವನೆಯಲ್ಲಿ, ಶ್ರದ್ಧೆಯ ಮನಸ್ಸಿನಲ್ಲಿ ಎಂಬ ಸತ್ಯದ ಅರಿವು ಅವನಿಗಾಗಿತ್ತು.
ನಮ್ಮ ಭಾವನೆಯೇ ನಮ್ಮ ಜೀವನವನ್ನು ನಿರ್ಣಯಿಸುವುದು. ನಮ್ಮ ಭಾವನೆಯೇ ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ. ವೃದ್ಧನೊಬ್ಬ ತನ್ನ ಊರಿನಲ್ಲಿ ಹೊಸ ವ್ಯಕ್ತಿಯೊಬ್ಬನನ್ನು ಕಂಡ. ಜಿಜ್ಞಾಸೆಯಿಂದ ’ನೀನಾರು?’ ಎಂದು ಪ್ರಶ್ನಿಸಿದ. ’ನಾನು ನಿಮ್ಮ ಹಳ್ಳಿಯ ಮೇಸ್ಟ್ರು’ ಎಂದು ಆತ ಉತ್ತರಿಸಿದ. ’ನಿಮ್ಮ ಕುಟುಂಬದಲ್ಲಿ ಯಾರ್ಯಾರಿದ್ದಾರೆ?’ ಎಂಬುದಾಗಿ ವೃದ್ಧ ಪ್ರಶ್ನಿಸಿದಾಗ ’ನಾನು, ಪತ್ನಿ, ಇಬ್ಬರು ಮಕ್ಕಳು ಹಾಗೂ ವಯಸ್ಸಾದ ತಾಯಿ ಇದ್ದಾರೆ’ ಎಂದ. ಸ್ವಲ್ಪ ಸಯಯದ ನಂತರ ಮತ್ತೊಬ್ಬ ಹೊಸ ವ್ಯಕ್ತಿ ಆ ಹಳ್ಳಿಯಲ್ಲಿ ಕಾಣಿಸಿಕೊಂಡ. ವೃದ್ಧ ಮತ್ತೆ ಆತನಿಗೆ ಪ್ರಶ್ನೆ ಹಾಕಿದ ’ನೀನಾರು?’ ’ನಾನು ಅಂಚೆ ಇಲಾಖೆಯ ಹೊಸ ನೌಕರ’ ಎಂಬ ಉತ್ತರ ಬಂತು. ’ನಿಮ್ಮ ಕುಟುಂಬದಲ್ಲಿ ಯಾರ್ಯಾರಿದ್ದಾರೆ?’ ವೃದ್ಧ ಪ್ರಶ್ನಿಸಿದ. ’ನಾನು, ಪತ್ನಿ, ಇಬ್ಬರು ಮಕ್ಕಳಿದ್ದಾರೆ. ನಾವು ನಮ್ಮ ವೃದ್ಧ ತಾಯಿಯ ಜತೆಯಲ್ಲಿದ್ದೇವೆ’ ಒಂದೇ ಪರಿಸ್ಥಿತಿ. ಎರಡು ವಿಭಿನ್ನ ಮನೋಭಾವ.
ಕೆಲವು ವರ್ಷಗಳ ಹಿಂದೆ ಪ್ರಸಿದ್ಧ ಜೈಪುರ ಸಾಹಿತ್ಯ ಸಮ್ಮೇಳನದಲ್ಲಿ ’ಯಾವ ಹೃದಯಗಳಲ್ಲಿ ಸದ್ಭಾವನೆಗಳಿರುತ್ತವೆಯೋ, ಆ ವ್ಯಕ್ತಿಗಳಲ್ಲಿ ಸೌಂದರ್ಯವಿರುತ್ತದೆ. ಯಾವ ವ್ಯಕ್ತಿಗಳಲ್ಲಿ ಸೌಂದರ್ಯ ನೆಲೆಸಿರುತ್ತದೆಯೋ, ಅವರ ಮನೆಗಳಲ್ಲಿ ಸೌಹಾರ್ದತೆ ನೆಮ್ಮದಿ ನೆಲೆಸಿರುತ್ತದೆ. ಯಾವ ಮನೆಯಲ್ಲಿ ಸೌಹಾರ್ದತೆ, ನೆಮ್ಮದಿಯಿರುತ್ತದೋ ಆ ದೇಶದಲ್ಲಿ ಒಂದು ಶಿಸ್ತು, ಬದ್ಧತೆಯಿರುತ್ತದೆ. ಯಾವಾಗ ದೇಶಗಳಲ್ಲಿ ಶಿಸ್ತು ಬದ್ಧತೆಯಿರುತ್ತದೆಯೋ ಜಗತ್ತಿನಲ್ಲಿ ಶಾಂತಿ ನೆಲೆಸಿರುತ್ತದೆ. ಆದ್ದರಿಂದ ನಮ್ಮ ಹೃದಯದಲ್ಲಿ ಸದ್ಭಾವನೆ ಮೂಡಿಸಿಕೊಳ್ಳುವುದು ಅಗತ್ಯ’ ಎಂಬುದಾಗಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹೇಳಿದ್ದರು.
ಅಬ್ದುಲ್ ಕಲಾಂರ ಮಾತಿನಂತೆ ನಾವು ನಮ್ಮ ಹೃದಯದಲ್ಲಿ ಸದ್ಭಾವನೆಯನ್ನು ಸದಾ ಜಾಗೃತವಾಗಿಟ್ಟುಕೊಂಡರೆ, ಅವರು ಏರಿದ ಎತ್ತರವನ್ನು ನಾವೂ ಏರಬಹುದು. ಸದ್ಭಾವನೆಯಿಂದ, ಭಗವದ್ಭಾವದಿಂದ ಬದುಕಿದರೆ ನಾವು ಜೀವನ್ಮುಕ್ತರಾಗುತ್ತೇವೆ. ಯಾಕೆಂದರೆ ಹೃದಯದಲ್ಲಿ ಸದ್ಭಾವನೆಯಿದ್ದರೆ ರಾಗ, ದ್ವೇಷಗಳು ನಮ್ಮನ್ನು ಬಾಧಿಸುವುದಿಲ್ಲ. ಅರಿಷಡ್ವರ್ಗಗಳು ಇಲ್ಲದಿದ್ದಾಗ ನಮ್ಮಲ್ಲಿ ಸದಾ ಶಾಂತಿ ನೆಲೆಸುತ್ತದೆ. ಇದನ್ನೇ ಮುಕ್ತಿ ಎನ್ನುವುದು.