ಈಶಾನ್ಯಭಾರತದ ಭಾಗಗಳ ಮೇಲೆ ದುರಾಕ್ರಮಣ, ಭಾರತದ ಶತ್ರುದೇಶವಾದ ಪಾಕಿಸ್ತಾನಕ್ಕೆ ಆರ್ಥಿಕ ಮತ್ತು ಸಾಮರಿಕ ನೆರವು ನೀಡುವುದರ ಮೂಲಕ ಪಾಕಿಸ್ತಾನದ ಭಯೋತ್ಪಾದಕ ಧೋರಣೆಗೆ ಪರೋಕ್ಷ ಮದತ್ತು, ಮುಂಬಯಿ ದಾಳಿಯೂ ಸೇರಿದಂತೆ ಇಸ್ಲಾಮೀ ಉಗ್ರವಾದಾನುಸರಣೆಗಳ ಮುಂಚೂಣಿಯ ಲಷ್ಕರ್- ಏ-ತೋಯ್ಬಾ ನಾಯಕರನ್ನು ಭಯೋತ್ಪಾದಕರೆಂದು ಘೋಷಿಸಬೇಕೆಂಬ ಭಾರತದ ಪ್ರಸ್ತಾವಕ್ಕೆ ವಿಶ್ವಸಂಸ್ಥೆಯಲ್ಲಿ ವಿರೋಧ, ಭಾರತದ ಸುರಕ್ಷತತೆಗೆ ಪ್ರತಿಕೂಲವಾದ ಪರ್ವತೀಯ ರಸ್ತೆಗಳ ನಿರ್ಮಾಣ, ಹಲವು ಬಾರಿ ನೇರ ಸೇನಾಕ್ರಮಣ – ನೆರೆಯ ಚೀಣಾದ ಈ ರಾಜಕೀಯಕಕ್ಷೆಯ ಕಿರುಕುಳಗಳು ಭಾರತಕ್ಕೆ ಹೊಸವೇನಲ್ಲ. ಆದರೆ ಈಚಿನ ವ?ಗಳಲ್ಲಿ ಭಾರತದ ಮೇಲೆ ಚೀಣಾ ನಡೆಸಿರುವ ಆರ್ಥಿಕ ಆಕ್ರಮಣವೂ ರಾಜಕೀಯ ವಿಸ್ತರಣವಾದದ? ಚಿಂತೆಗೆ ಕಾರಣವಾಗಿದೆ. ರಾಜಕೀಯ ಆಕ್ರಮಣಗಳ ನಿರ್ವಹಣೆ ಜಟಿಲವಾದ್ದು, ನಾಜೂಕಿನದು. ಆದರೆ ಆರ್ಥಿಕ ವಿಸ್ತರಣವಾದದ ನಿಯಂತ್ರಣ ವ್ಯವಹಾರ್ಯವೂ ಅವಶ್ಯವೂ ಆಗಿದೆ. ಆರ್ಥಿಕ ವಿಸ್ತರಣವಾದವು ಭಾರತದ ಸ್ವಾಯತ್ತತೆಗೂ ಭಂಗ ತರುತ್ತದೆಂಬುದು ಸ್ಪಷ್ಟ. ಜಾಗತೀಕರಣದ ದಾರಿಯಲ್ಲಿ ಭಾರತ ಈಗಾಗಲೇ ಬಹಳ ದೂರ ಸಾಗಿರುವುದು ದಿಟವಾದರೂ ಚೀಣಾದಿಂದ ನಡೆದಿರುವ ಆರ್ಥಿಕ ಆಕ್ರಮಣ ಹೆಚ್ಚು ಆತಂಕಕಾರಿಯೆನ್ನಬೇಕಾಗಿದೆ. ಈ ಸನ್ನಿವೇಶವನ್ನು ಹದ್ದುಬಸ್ತಿಗೆ ತರುವ ಕಾರ್ಯ ಬಹುಮಟ್ಟಿಗೆ ಸರ್ಕಾರಕ್ಕಿಂತ ಮಿಗಿಲಾಗಿ ಜನರ ಮಟ್ಟದಲ್ಲಿ ಆಗಬೇಕಾಗಿದೆ. ತಾನು ಉತ್ಪಾದಿಸಿದ ಸರಕುಗಳ ರಾಶಿಯನ್ನು ಭಾರತದಲ್ಲೆಡೆ ಪಸರಿಸುವುದರ ಮೂಲಕ ಚೀಣಾ ಭಾರತದ ಸ್ವಾಯತ್ತತೆಗೂ ಉದ್ಯಮಕ್ಷೇತ್ರಕ್ಕೂ ಏಕಕಾಲದಲ್ಲಿ ಪ್ರಹಾರ ನೀಡುತ್ತಿದೆ. ಭಾರತದಲ್ಲಿ ಚೀಣಾಮೂಲದ ಬಗೆಬಗೆಯ ಉತ್ಪನ್ನಗಳ ಪ್ರಸಾರ ಇದೀಗ ಒಂದು ಲಕ್ಷಕೋಟಿ ಮೌಲ್ಯವನ್ನೂ ದಾಟಿದೆಯೆಂದು ಒಂದು ಅಂದಾಜು; ಮತ್ತು ಭಾರತದಿಂದ ಹೀಗೆ ಚೀಣಾಕ್ಕೆ ಹರಿದುಹೋಗುತ್ತಿರುವ ಧನರಾಶಿ ಪಾಕಿಸ್ತಾನದ ಮೂಲಕ ಭಾರತದ ವಿರುದ್ಧವೇ ಬಳಕೆಯಾಗುತ್ತಿದೆ. ಆಟಿಗೆಗಳು, ಪಟಾಕಿಗಳು, ಪೂಜಾಸಾಮಗ್ರಿಗಳು, ಅಷ್ಟೇಕೆ, ಎಷ್ಟು ಭಾರತೀಯ ದೇವದೇವತೆಗಳೂ ಚೀಣಾದಿಂದ ಆಮದಾಗುವಂತಾಗಿದೆ. ಇನ್ನು ಫೋನ್, ಕಂಪ್ಯೂಟರ್ ಮೊದಲಾದ ಎಲೆಕ್ಟ್ರಾನಿಕ್ ಬಾಬ್ತುಗಳ ಬಗೆಗೆ ಹೇಳುವುದೇ ಬೇಡ; ರಾಜಮಾರ್ಗದಲ್ಲಿ ಬರುವುದರ? ಪ್ರಮಾಣದವು ಕಳ್ಳಮಾರ್ಗಗಳಲ್ಲಿ ಹರಿದುಬರುತ್ತಿವೆ. ಕಡಮೆ ವೇತನದ ಅಪಾರ ಕಾರ್ಮಿಕಶಕ್ತಿ ಬಳಸಿ ಚೀಣಾದಲ್ಲಿ ತಯಾರಾಗುವ ಸಾಮಗ್ರಿಗಳು ಇಲ್ಲಿ ಅಗ್ಗವೆಂಬ ಪ್ರಬಲ ಆಕರ್ಷಣೆಯೂ ಹೆಚ್ಚು ಪ್ರಚಲನೆಗೆ ಕಾರಣವಾಗಿದ್ದು ವರ್ತಕರು ಅವಕ್ಕೆ ಮುಗಿಬೀಳುತ್ತಿದ್ದಾರೆ. ಈ ಪ್ರವಾಹದಿಂದಾಗಿ ಮುಂಬಯಿಪ್ರದೇಶದ ಅರ್ಧಕ್ಕಿಂತ ಹೆಚ್ಚು ಸಣ್ಣ ಉದ್ಯಮಗಳು ಈಗ ಮುಚ್ಚಿವೆ. ಕೆಲವು ವರ್ಗಗಳಲ್ಲಿ ವಿದೇಶೀ ವ್ಯಾಮೋಹ ಎಷ್ಟು ದಟ್ಟವಾಗಿದೆಯೆಂದರೆ ಭಾರತದಲ್ಲಿಯೇ ತಯಾರಾದ ವಸ್ತುಗಳು ’ಮೇಡ್ ಇನ್ ಚೈನಾ’ ಹಣೆಪಟ್ಟಿಯ ಮುದ್ರಣದಡಿ ಬಿಕರಿಯಾಗುತ್ತಿರುವ ದುಃಸ್ಥಿತಿ ಈಗಿನದು. ಅಸಲಿ, ನಕಲಿ ವ್ಯತ್ಯಾಸವೇ ಗೋಚರವಾಗದಂತೆ ನವನವೀನ ಪ್ಯಾಕಿಂಗ್ ತಂತ್ರಗಳನ್ನು ಚೀಣಾ ಬಳಸುತ್ತದೆ. ಚೀಣಾವನ್ನು ಉತ್ಪಾದಕ ದೇಶವಾಗಿ ಬೆಳೆಸಿದ ಅಮೆರಿಕವೇ ಈಗ ಚೀಣೀ ಆರ್ಥಿಕ ದಾಳಿಯಿಂದ ಚಿಂತಿಸುವಂತಾಗಿದೆ. ಕಳೆದ ವರ್ಷ ದೀಪಾವಳಿಯಲ್ಲಿ ಚೀಣೀ ಉತ್ಪನ್ನಗಳನ್ನು ಮಾರದಿರಲು ದೆಹಲಿಯ ವರ್ತಕರು ನಿರ್ಧರಿಸಿದ್ದರು. ಸ್ವದೇಶೀ ಚಿಂತನದೃಷ್ಟಿಯ ಇಂತಹ ಪ್ರಯತ್ನಗಳನ್ನು ಬೆಂಬಲಿಸಲು ಸಾರ್ವಜನಿಕರು ಮುಂದಾಗಬೇಕಾದದ್ದು ಈಗಿನ ಸಮರದ ಮೊದಲ ಹೆಜ್ಜೆ.
ಚೀಣಾದ ಕಬಂಧಬಾಹುಗಳು
Month : August-2017 Episode : Author : ಎಸ್.ಆರ್. ರಾಮಸ್ವಾಮಿ