ಹಲವರು ವಿಕ್ಷಿಪ್ತಸ್ವಭಾವದ ನ್ಯಾಯಾಧೀಶರುಗಳ ವರ್ತನೆಯು ಇಡೀ ನ್ಯಾಯಾಂಗವ್ಯವಸ್ಥೆಯ ಬಗೆಗೆ ನಾಡಿನ ಜನತೆಯ ಮನಸ್ಸಿನಲ್ಲಿರುವ ಪ್ರತಿಮೆಗೆ ಭಂಗ ಉಂಟುಮಾಡುತ್ತಿರುವುದು ದೊಡ್ಡ ದುರಂತ. ಏಕೆಂದರೆ ನಮ್ಮ ಸ್ವೀಕೃತ ರಾಜ್ಯಾಂಗದಲ್ಲಿ ಅತ್ಯುಚ್ಚ ನಿರ್ಣಯಸ್ಥಾನವೆಂದರೆ ನ್ಯಾಯಾಂಗವೇ. ಒಂದು ರಾಜ್ಯದ ಉಚ್ಚನ್ಯಾಯಾಲಯದ ನ್ಯಾಯಾಧೀಶರಾಗಿರುವ ನ್ಯಾ|| ಸಿ.ಎಸ್. ಕರ್ಣನ್ ಅವರು ಸಹ-ನ್ಯಾಯಾಧೀಶರುಗಳ ಮೇಲೆಯೇ ಭ್ರಷ್ಟಾಚಾರ ಆರೋಪ ಮಾಡುವುದು, ನ್ಯಾಯಾಧೀಶರ ಆಯ್ಕೆಗೆ ಸಂಬಂಧಿಸಿದ ಕ್ರಮಗಳನ್ನೇ ಪ್ರಶ್ನಿಸುವುದು, ಸರ್ವೋಚ್ಚ ನ್ಯಾಯಾಲಯ ಹೊರಡಿಸಿದ ವರ್ಗಾವಣೆಯನ್ನೇ ಧಿಕ್ಕರಿಸುವುದು, ತಮ್ಮ ಅಧಿಕಾರಪರಿಧಿಗೆ ಮೀರಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳ ಬಗೆಗೇ ಆಪಾದನೆ ಮಾಡಿ ಪ್ರಧಾನಮಂತ್ರಿಗಳಿಗೇ ಪತ್ರ ಬರೆಯುವುದು – ಮೊದಲಾದ ಅನುಶಾಸನಹೀನ ವರ್ತನೆಯಲ್ಲಿ ತೊಡಗಿರುವುದು ಸಾರ್ವಜನಿಕರನ್ನು ದಿಗ್ಭ್ರಮೆಗೊಳಿಸಿದೆ. ಬಹುಮಟ್ಟಿಗೆ ಸಭ್ಯತೆಯ ಪರಿಸರವಿದ್ದ ಹಿಂದಿನ ವರ್ಷಗಳಲ್ಲಿ ಆವಶ್ಯವಿರದಿದ್ದ ಹೆಚ್ಚು ಕಠಿಣ ನಿಯಮಗಳನ್ನು ಶಾಸನಬದ್ಧಗೊಳಿಸಬೇಕಾದ ಅನಿವಾರ್ಯತೆ ಈಗ ತಲೆದೋರಿರುವುದು ವಿಷಾದನೀಯ. ನ್ಯಾಯಾಧೀಶರ ಆಯ್ಕೆ, ಬಡ್ತಿ, ವರ್ಗಗಳಿಗೆ ಸಂಬಂಧಿಸಿದಂತೆ ಕೊಲೀಜಿಯಂ ವ್ಯವಸ್ಥೆಯ ಪಾರದರ್ಶಕತೆಯೂ ಪ್ರತಿಷ್ಠಯೂ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ನ್ಯಾ|| ಕರ್ಣನ್ರಂಥವರ ನೇಮಕದ ಸನ್ನಿವೇಶಗಳ ಪರೀಕ್ಷಣೆಗೆ ಶಕ್ತವಾದ ವಿಧಾನ ಏರ್ಪಡಬೇಕಾಗಿದೆ. ಅವರ ಸರಣಿ ದುರ್ವರ್ತನೆಗಳ ತರುವಾಯವೂ ಅಭಿಯೋಗಕ್ಕೆ ಶಿಫಾರಸು ಮಾಡುವುದಕ್ಕೆ ಬದಲಾಗಿ ನ್ಯಾಯಾಂಗನಿಂದನೆಯ ಆರೋಪಕ್ಕ? ಒಳಪಡಿಸುವ ದೀರ್ಘಸೂತ್ರತೆಯ ಆವಶ್ಯಕತೆ ಇತ್ತೆ? ಯಾವುದೇ ದೃಷ್ಟಿಯಿಂದಲೂ ಅಕ್ಷಮ್ಯವಾದ ವರ್ತನೆ ಅವರಿಂದ ನಡೆದಿದೆ. ಅಪರಾಧವೆಸಗುವ ನ್ಯಾಯಾಧೀಶರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕೆಂಬ ಹಾಗೂ ಇತರ ಸುಧಾರಣೆಗಳನ್ನೊಳಗೊಂಡ ’‘Judicial Standards and Accountability Bill’ ಶೀಘ್ರವಾಗಿ ವಿಧಿಬದ್ಧಗೊಳ್ಳಲೆಂದು ಆಶಿಸೋಣ.
ನ್ಯಾಯಾಂಗ ದೃಢಿಷ್ಠವಾಗಲಿ
Month : July-2017 Episode : Author : ಎಸ್.ಆರ್. ರಾಮಸ್ವಾಮಿ