ಶ್ರೀರಂಗಂ, ತಿರುಮಲ ಮತ್ತು ಮೇಲುಕೋಟೆಯ ತಿರುನಾರಾಯಣ ದೇವಸ್ಥಾನಗಳ ದಿನನಿತ್ಯದ ಆಡಳಿತಾತ್ಮಕ ಚಟವಟಿಕೆಗಳನ್ನು ಶ್ರೀಮದ್ ರಾಮಾನುಜರು ವ್ಯವಸ್ಥಿತಗೊಳಿಸಿದರು. ಶ್ರೇಷ್ಠ ಪ್ರಬಂಧನಕಾರರಾದ ಶ್ರೀಮದ್ ರಾಮಾನುಜರು ಮನಸ್ಸು-ಮನಸ್ಸುಗಳನ್ನು ಬೆಸೆಯುವಲ್ಲಿ ಬಳಸಿದ ಪ್ರಬಂಧನಶಾಸ್ತ್ರದ ತತ್ತ್ವಗಳು ಇಂದಿಗೂ ನಮಗೆ ಆದರ್ಶಪ್ರಾಯವಾಗಿವೆ.
ಈ ವರ್ಷ ನಾವು ಶ್ರೀಮದ್ ರಾಮಾನುಜರ ಜನ್ಮಸಹಸ್ರಮಾನೋತ್ಸವವನ್ನು ಆಚರಿಸುತ್ತಿದ್ದೇವೆ. ವಿವಿಧ ಸಂಘ-ಸಂಸ್ಥೆಗಳು ಬೇರೆಬೇರೆ ರೀತಿಯಲ್ಲಿ ಆಚರಿಸುತ್ತಿವೆ. ಶ್ರೀಮದ್ ರಾಮಾನುಜರ ಆದರ್ಶಗಳನ್ನು ಸ್ಮರಿಸಲು ನಮಗಿದು ಸುಸಂದರ್ಭ. ನಮ್ಮ ಕನ್ನಡನಾಡಿನ ನಾಡಗೀತೆಯಲ್ಲಿಯೂ ರಾಮಾನುಜರ ಹೆಸರನ್ನು ಹಾಡುವ ಮೂಲಕ ನಾವು ಅವರನ್ನು ಯಾವಾಗಲೂ ಸ್ಮರಿಸುತ್ತೇವೆ. ಯಾವುದೇ ವ್ಯಕ್ತಿಯು ಜನಮಾನಸದಲ್ಲಿ ಬಹಳ ಕಾಲ ನೆಲಸಬೇಕಾದರೆ ಸಾಮಾಜಿಕವಾಗಿ ಸಕ್ರಿಯನಾಗಿದ್ದು, ಸಮಾಜದಲ್ಲಿ ತನ್ನ ಕೆಲಸಕಾರ್ಯಗಳ ಮೂಲಕ ಛಾಪನ್ನೂ ಖಂಡಿತ ಮೂಡಿಸಿರಬೇಕು. ರಾಮಾನುಜರು ಹುಟ್ಟಿದ್ದು ೧೦೧೭ರಲ್ಲಿ. ೧೦೦೦ ವರ್ಷಗಳ ನಂತರವೂ ನಾವು ಅವರನ್ನು ಸ್ಮರಿಸುತ್ತೇವೆಂದರೆ ಅವರ ವ್ಯಕ್ತಿತ್ವ ಎಂತಹುದಿರಬೇಕು? – ಎಂಬುದನ್ನು ನಾವು ಊಹಿಸಬಹುದು.
ಎಲ್ಲರಿಗೂ ತಿಳಿದಿರುವ ಹಾಗೆ ಶ್ರೀಮದ್ ರಾಮಾನುಜರು ವಿಶಿಷ್ಟಾದ್ವೈತ (ವೇದಾಂತ) ಸಿದ್ಧಾಂತದ ಪ್ರತಿಪಾದಕರು. ಶಂಕರಾಚಾರ್ಯರು ಅದ್ವೈತವೇದಾಂತ ಸಿದ್ಧಾಂತದ ಪ್ರತಿಪಾದಕರಾದರೆ, ಮಧ್ವಾಚಾರ್ಯರು ದ್ವೈತವೇದಾಂತ ಸಿದ್ಧಾಂತದ ಪ್ರತಿಪಾದಕರು. ಹಿಂದೂಸಂಸ್ಕೃತಿಯಲ್ಲಿ ಈ ಮೂವರು ಆಚಾರ್ಯರಿಗೆ ಬಹಳ ಪ್ರಮುಖ ಸ್ಥಾನವಿದೆ. ಈ ಮೂವರು ಆಚಾರ್ಯರ ಹಾದಿ ಬೇರೆಬೇರೆ ಆಗಿದ್ದರೂ ಕೂಡ, ಗುರಿಯು ಒಂದೇ ಆಗಿದ್ದಿತು. ಅದುವೇ ಮೋಕ್ಷಸಾಧನೆ. ಈ ಮೂವರೂ ಆಚಾರ್ಯರ ಸಾಮಾಜಿಕ ಕಾರ್ಯಗಳನ್ನು ಯಾರೂ ತಳ್ಳಿಹಾಕಲು ಸಾಧ್ಯವಿಲ್ಲ. ರಾಮಾನುಜರ ಬಗೆಗಿನ ಅಂಶಗಳ ಬಗ್ಗೆ ಮಾತ್ರ ಪಕ್ಷಿನೋಟ ಬೀರುವುದು ಈ ಲೇಖನದ ಉದ್ದೇಶ.
ಸನಾತನ ಹಿಂದೂಸಂಸ್ಕೃತಿಯ ವೈಶಿ?ವೇ ಇದು. ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಪುರು?ರ್ಥಗಳು ಇದ್ದರೂ ಸಹ, ಪ್ರಾಚೀನ ಆಚಾರ್ಯರು ಮೋಕ್ಷಮಾರ್ಗಕ್ಕೆ ಕೊಟ್ಟ ಪ್ರಾಶಸ್ತ್ಯವನ್ನು ಬೇರೆ ಪುರು?ರ್ಥಗಳಿಗೆ ನೀಡಲಿಲ್ಲ.
’ಆಧುನಿಕ ಪ್ರಬಂಧನ ಶಾಸ್ತ್ರ’ದಲ್ಲಿ ಅನೇಕ ಅಂಶಗಳ ಬಗ್ಗೆ ನಾವು ಮಾತನಾಡುತ್ತೇವೆ. ಪ್ರಾಚೀನ ಭಾರತೀಯ ಪರಂಪರೆಯ ಗುಣಗಾನ ನಾವು ಮಾಡುತ್ತೇವಾದರೂ, ಅದರ ಸಾಂಪ್ರತಿಕ ಅನ್ವಯನದ (ಸಮನ್ವಯ :Implementation) ಬಗ್ಗೆ ಮರೆಯುತ್ತೇವೆ.
ಭಾರತದೇಶವು ಹಿಂದೊಮ್ಮೆ ವಿಶ್ವಗುರುವಾಗಿತ್ತು ಎಂಬುದು ಎಲ್ಲರಿಗೂ ತಿಳಿದ ವಿ?ಯವೇ. ಶ್ಲೋಕವೊಂದನ್ನು ಉದಾಹರಿಸುವುದಾದರೆ –
“ಏತದ್ದೇಶಪ್ರಸೂತಸ್ಯ ಸಕಾಶಾದಗ್ರಜನ್ಮನಃ |
ಸ್ವಂ ಸ್ವಂ ಚರಿತ್ರಂ ಶಿಕ್ಷೇರನ್ ಪೃಥಿವ್ಯಾಂ ಸರ್ವಮಾನವಾಃ ||”
(ಮನುಸ್ಮೃತಿ ೨.೨೦)
ತಮ್ಮತಮ್ಮ ದೇಶದ ಚರಿತ್ರೆಯನ್ನು/ಇತಿಹಾಸವನ್ನು ತಿಳಿಯಲು ವಿದೇಶೀಯರು ನಮ್ಮ ದೇಶಕ್ಕೆ ಬರುತ್ತಿದ್ದರೆಂದರೆ, ಭಾರತದ ಮಹತ್ತ್ವ ಜಗತ್ತಿನೆಲ್ಲೆಡೆ ಹೇಗಿತ್ತು ಎಂಬುದು ತಿಳಿಯುತ್ತದೆ. ಭಾರತದ ಮಾಜಿ ರಾ?ಪತಿಗಳಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂರವರು ಪ್ರಾಚೀನಭಾರತದ ವಿಜ್ಞಾನ-ತಂತ್ರಜ್ಞಾನದ ಹಿರಿಮೆ, ಗರಿಮೆಗಳನ್ನು ಹೆಮ್ಮೆಯಿಂದ ತೋರಿಸುತ್ತಿದ್ದ ಸ್ವಯಂಸೇವಕರನ್ನು ಕುರಿತು ಹೇಳಿದ್ದ ಮಾತೊಂದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು: “ಭಾರತವು ವಿಶ್ವಗುರು ಆಗಿತ್ತೆಂಬುದೇನೋ ನಿಜ. ಆದರೆ, ಈ ಆಧುನಿಕ ಕಾಲದಲ್ಲಿ ಅಂತಹ ಜ್ಞಾನವನ್ನು ಬಳಸಿಕೊಂಡು ನಮ್ಮ ಸಂಶೋಧನೆಯನ್ನು ಮುಂದುವರಿಸಿ ಹೊಸ ಆವಿಷ್ಕಾರಗಳನ್ನು ಮಾಡದೇ ಹೋದಲ್ಲಿ, ಅಂತಹ ಪ್ರಾಚೀನಜ್ಞಾನದಿಂದ ಯಾವ ಪ್ರಯೋಜನವೂ ಇಲ್ಲ.”
ಹಾಗೆಯೇ ಈ ವಿಷಯದಲ್ಲೂ ಕೂಡ, ಶ್ರೀಮದ್ ರಾಮಾನುಜರ ಜನ್ಮಸಹಸ್ರಮಾನೋತ್ಸವದ ಈ ಸಂದರ್ಭದಲ್ಲಿ ರಾಮಾನುಜರ ಗ್ರಂಥಗಳ ಅಧ್ಯಯನ, ಸಂಶೋಧನೆ ಇತ್ಯಾದಿಗಳು ಒಂದೆಡೆಯಾದರೆ, ಅವರ ಜೀವನಮಾರ್ಗದ ಮತ್ತು ಅವರು ಅನುಸರಿಸಿದ ತತ್ತ್ವಗಳನ್ನು ನಾವು ಅಭ್ಯಸಿಸದೇ ಹೋದಲ್ಲಿ, ಅವರ ಸ್ಮರಣೆಗೆ ಯಾವ ಅರ್ಥವೂ ಉಳಿಯದು.
ವೈಷ್ಣವ ಸಂಪ್ರದಾಯದ ಅನುಷ್ಠಾನವು ಶಾಂತಿಪೂರ್ಣ ಜೀವನವನ್ನು ನಡೆಸಲು ಒಂದು ಒಳ್ಳೆಯ ಮಾರ್ಗ. ಅದು ಸಾಮರಸ್ಯಪೂರ್ಣ ಜೀವನಪದ್ಧತಿಯಿಂದ ಮಾತ್ರ ಸಾಧ್ಯ. ಇಂತಹ ವೈಷ್ಣವಸಂಪ್ರದಾಯವನ್ನು ಹುಟ್ಟುಹಾಕಿದವರು ಆಳ್ವಾರರು ಮತ್ತು ಆಚಾರ್ಯರು. ಇದರಲ್ಲಿ ಮುಂಚೂಣಿಯಲ್ಲಿದ್ದವರು ವಿಶಿಷ್ಟಾದ್ವೈತಸಿದ್ಧಾಂತವನ್ನು ಪ್ರತಿಪಾದಿಸಿದ ಶ್ರೀಮದ್ ರಾಮಾನುಜಾಚಾರ್ಯರು. ಸಮಾಜದ ಏಳಿಗೆಗಾಗಿ ಆ ಸಿದ್ಧಾಂತವನ್ನು ಅವರು ಬಳಸಿದರು.
ವೈ?ವ ಸಂಪ್ರದಾಯವು ಬಹಳ ಪ್ರಾಚೀನವಾದುದು. ಬೋಧಾಯನ, ಶ್ರೀವತ್ಸಾಂಕ, ಗುಹದೇವ, ಮುಂತಾದವರು ಈ ಸಿದ್ಧಾಂತವನ್ನು ಪ್ರತಿಪಾದಿಸಿದ್ದರಾದರೂ, ಅವರ ಗ್ರಂಥಗಳು ಲಭ್ಯವಿರಲಿಲ್ಲ. ಶ್ರೀಮದ್ ರಾಮಾನುಜರು ಈ ಸಿದ್ಧಾಂತದ ಪ್ರಚಾರ-ಪ್ರಸಾರದಲ್ಲಿ ತೊಡಗಿದರು. ಆದ್ದರಿಂದ ವೈ?ವಸಿದ್ಧಾಂತ ಮತ್ತು ಶ್ರೀಮದ್ ರಾಮಾನುಜರು ಪರ್ಯಾಯಪದಗಳಂತಾದರು.
ಶ್ರೀಮದ್ ರಾಮಾನುಜರು ಹುಟ್ಟಿದ್ದು ಕ್ರಿ.ಶ. ೧೦೧೭ರಲ್ಲಿ ಚೆನ್ನೈ ಹತ್ತಿರದ ಶ್ರೀಪೆರುಂಬುದೂರಿನಲ್ಲಿ. ೧೨೦ ವ?ಗಳ ಕಾಲ ಅವರು ಬದುಕಿದ್ದರು. ೧೧೩೭ರಲ್ಲಿ ಅವರು ಪರಮಪದ ಸೇರಿದರು. ಮೊದಲಿಗೆ ಅವರು ಕಾಂಚಿಯ ಯಾದವಪ್ರಕಾಶರಲ್ಲಿ ಅಧ್ಯಯನ ಪ್ರಾರಂಭಿಸಿದರು. ಬಳಿಕ ಶ್ರೀರಂಗಕ್ಕೆ ಹೋಗಿ ಯಾಮುನಾಚಾರ್ಯರಲ್ಲಿ ಅಧ್ಯಯನ ಮುಂದುವರಿಸಿದರು. ಆದರೆ, ಯಾಮುನಾಚಾರ್ಯರು ಅಕಾಲವಾಗಿ ಶ್ರೀರಂಗಂನಲ್ಲಿ ಪರಮಪದಕ್ಕೀಡಾದಾಗ, ಶ್ರೀಮದ್ ರಾಮಾನುಜರು ಕಾಂಚಿಗೆ ಹಿಂದಿರುಗಿದರು. ಯಾಮುನಾಚಾರ್ಯರ ಶಿ?ರಾದ ಕಾಂಚೀಪೂರ್ಣ ಅಥವಾ ತಿರುಕ್ಕಾಚಿ ನಂಬಿ ಎಂಬವರ ಮಾರ್ಗದರ್ಶನದಲ್ಲಿ ಬೆಳೆದರು. ಕಾಂಚೀಪೂರ್ಣನ ಮುಖಾಂತರ ಭಗವಂತನಾದ ವರದರಾಜರ ಆದೇಶದಂತೆ ಶ್ರೀಮದ್ ರಾಮಾನುಜರು ಪೆರಿಯನಂಬಿಯ ಎಂಬ ಹೆಸರಿನವರಾದ ಮಹಾಪೂರ್ಣರನ್ನು ಭೇಟಿಯಾದರು. ಮಧುರಾಂತಕಮ್ (ಮಧುರೈ) ದಾರಿಯಲ್ಲಿ ಮಹಾಪೂರ್ಣರು ಅವರಿಗೆ ಪಂಚಸಂಸ್ಕಾರ (ಶ್ರೀವೈ?ವ ಸಂಪ್ರದಾಯಕ್ಕೆ ಸೇರ್ಪಡೆಮಾಡುವ ಸಂಸ್ಕಾರ) ನೀಡಿದರು. ಆ ಬಳಿಕ ಅವರು ಗೃಹಸ್ಥಾಶ್ರಮ ತ್ಯಜಿಸಿ ಸಂನ್ಯಾಸಿಯಾದರು.
ವೈಷ್ಣವ ಸಂಪ್ರದಾಯವು ಜೀವನಮಟ್ಟ ಹಾಗೂ ಶಿಸ್ತಿನ ಪರಿಧಿಗೆ ಒಳಪಟ್ಟಿದೆ. ಅದು ಜಾತಿ-ಪಂಥ- ಬಡವ-ಬಲ್ಲಿದ ಎಂಬ ಭೇದವಿಲ್ಲದೇ ಎಲ್ಲ ಮಾನವರಿಗೂ ಉಪಯೋಗವಾಗುವಂತಹುದು. ಶ್ರೀಮದ್ ರಾಮಾನುಜರು ಸ್ವಂತ ಶಿಸ್ತನ್ನು (ಸ್ವ-ಅನುಶಾಸನ) ಕಲಿಸಿದರು. ಬೇರೆ ಮನು?ರ ಬಗ್ಗೆ ಪ್ರೀತಿ ವಾತ್ಸಲ್ಯಗಳನ್ನು ಬೆಳೆಸಿಕೊಳ್ಳಲು ಕಲಿಸಿಕೊಟ್ಟರು. ಬೇರೆಯವರಿಗೆ ಹೇಗೆ ಸಹಾಯ ಮಾಡಬೇಕೆಂದು ತಿಳಿಹೇಳಿದರು. ಪ್ರಕೃತಿಯನ್ನು, ಗಿಡ- ಮರ-ಪ್ರಾಣಿ-ಪಕ್ಷಿಗಳನ್ನು ಪ್ರೀತಿಸಲು ಹೇಳಿದರು. ಮನು?ನ ಮೂಲಭೂತ ಆವಶ್ಯಕತೆಗಳನ್ನು ಪೂರೈಸಲು ಅನ್ನ-ಆಹಾರ-ವಸ್ತ್ರ ದಾನದ ಮೂಲಕ ಸಾಮಾಜಿಕಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮೇಲ್ಪಂಕ್ತಿಯನ್ನು ಹಾಕಿಕೊಟ್ಟರು. ತೋಣಂದೂರಿನಲ್ಲಿ ಜಲಮೂಲಗಳನ್ನು ಕೃಷಿಗಾಗಿ ಮತ್ತು ಕುಡಿಯುವ ನೀರಿನ ಯೋಜನೆಗಾಗಿ ಸಮರ್ಪಕವಾಗಿ ಬಳಸಲು ತಿಳಿಸಿದರು.
ಶ್ರೀಮದ್ ರಾಮಾನುಜರು ಆಗ ಸಮಾಜದಲ್ಲಿ ಕೆಳವರ್ಗವೆಂದು ಭಾವಿಸುತ್ತಿದ್ದವರನ್ನು ’ತಿರುಕ್ಕುಳತಾರ್’ (ದೇವರ ಮಕ್ಕಳು) ಎಂದು ಹೆಸರಿಸಿದರು. ಮೇಲುಕೋಟೆ ಮತ್ತಿತರ ಕಡೆಗಳಲ್ಲಿ ರಾಜ ವಿ?ವರ್ಧನನ ಸಹಾಯ ಪಡೆದು ದೇವಸ್ಥಾನಗಳನ್ನು ನಿರ್ಮಿಸಿದರು. ಸಾಮಾನ್ಯ ಜನರ ಉದ್ಯೋಗಾವಕಾಶದ ಆವಶ್ಯಕತೆಯನ್ನು ಅವರೇ ಮೊದಲು ಮನಗಂಡು, ದೇವಾಲಯದ ಆಡಳಿತದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದರು. ಬ್ರಹ್ಮಸೂತ್ರ ಮತ್ತು ಉಪನಿಷತ್ತುಗಳಿಗೆ ಪ್ರೌಢವಾದ ಭಾಷ್ಯವನ್ನು ರಚಿಸಿದರು. ’ನವರತ್ನ’ಗಳೆಂದ ಒಂಭತ್ತು ಗ್ರಂಥಗಳನ್ನು ಮಾನವತೆಯ ಏಳ್ಗೆಗಾಗಿ ರಚಿಸಿದರು. ಸಮಾಜಸುಧಾರಣೆಯ ಈ ಕಾರಣದಿಂದಲೇ ಅವರು ಅನೇಕ ಸವಾಲುಗಳನ್ನೂ, ಪ್ರಾಣಕಂಟಕಗಳನ್ನೂ ಎದುರಿಸಬೇಕಾಯಿತು. ವೈಷ್ಣವ ಸಂಪ್ರದಾಯದ ಪ್ರಚಾರಕ್ಕಾಗಿ ದೇಶದಾದ್ಯಂತ ೭೪ ಸಿಂಹಾಸನಾಧಿಪತಿಗಳನ್ನು ನೇಮಿಸಿದರು.
ಕಳೆದ ಸಹಸ್ರಮಾನದ ಕಾಲಘಟ್ಟದಲ್ಲಿ ಶ್ರೀಮದ್ ರಾಮಾನುಜರು ಸಮಾಜಸುಧಾರಕರೂ, ಆಧ್ಯಾತ್ಮಿಕ ನಾಯಕರೂ (ಗುರುಗಳೂ) ಆಗಿದ್ದರು. ಶ್ರೀವೈಷ್ಣವ ಸಂಪ್ರದಾಯವನ್ನು ಪ್ರಚುರಪಡಿಸುವಲ್ಲಿ ಮುಖ್ಯರಾದವರು ಶ್ರೀಮದ್ ರಾಮಾನುಜರು. ಭಕ್ತಿ ಮತ್ತು ಪ್ರಪತ್ತಿ ಎಂಬ ಎರಡು ತತ್ತ್ವಗಳ ಮೂಲಕ ಶ್ರೀಮನ್ನಾರಾಯಣನೆಡೆಗೆ ಪ್ರೀತಿ ಮತ್ತು ಶರಣಾಗತಿಯನ್ನು ಅವರು ಕಲಿಸಿದರು. ಭಕ್ತಿಯಿಂದ ಮಾತ್ರ ಶ್ರೀಮನ್ನಾರಾಯಣನನ್ನು ಪಡೆಯಲು ಸಾಧ್ಯವೆಂದರು ಅವರು. ಎಲ್ಲ ಜ್ಞಾನ-ಕರ್ಮಗಳನ್ನು ಅವನಿಗೆ ಪ್ರಪತ್ತಿಯಾಗಿ ಸಮರ್ಪಿಸಿ ಆತನೇ ಗುರಿಯಾಗಿ, ಆತನೇ ದಾರಿಯೂ ಆಗಿದ್ದಾನೆ ಎಂದೂ ತಿಳಿಸಿದರು. ಪ್ರತಿಯೊಬ್ಬ ವ್ಯಕ್ತಿಗೂ ಶ್ರೀಮನ್ನಾರಾಯಣನನ್ನು ಕಾಣುವ ಬಗೆಯನ್ನು ಪ್ರತ್ಯೇಕವಾಗಿ ಕಲಿಸಿದವರು ಶ್ರೀಮದ್ ರಾಮಾನುಜರು. ಶ್ರೀಮನ್ನಾರಾಯಣನ ವಿವಿಧ ರೂಪಗಳು ಪರ, ವ್ಯೂಹ, ವಿಭವ, ಅಂತರ್ಯಾಮಿ, ಮತ್ತು ಅರ್ಚ.
ಶ್ರೀಮದ್ ರಾಮಾನುಜರು ಎಲ್ಲ ಜನರೂ ದೇವಸ್ಥಾನಕ್ಕೆ ಬರಬೇಕೆಂಬ ಅಪೇಕ್ಷೆ ಇಟ್ಟುಕೊಂಡಿದ್ದವರು ಮತ್ತು ಆ ದಿಸೆಯಲ್ಲಿ ಶ್ರಮವಹಿಸಿದವರು. ಪ್ರತಿದಿನವೂ ದೇವಾಲಯಗಳಲ್ಲಿ ಎಲ್ಲರಿಗೂ ತುಳಸಿಪತ್ರೆ ಹಾಗೂ ತೀರ್ಥ ನೀಡುವ ವ್ಯವಸ್ಥೆಯನ್ನು ಪ್ರಾರಂಭಿಸಿದರು. ಶ್ರೀಮದ್ ರಾಮಾನುಜರನ್ನು ಎಂಪರುಮಾರ್ ಎಂದು ಕರೆಯುತ್ತಿದ್ದರು. ಅವರು ಕೇವಲ ದಾರ್ಶನಿಕರಾಗಿರಲಿಲ್ಲ, ಅತ್ಯಂತ ಶ್ರೇಷ್ಠ ಸಮಾಜಸುಧಾರಕರಾಗಿದ್ದರು. ಸಮಾಜವನ್ನು ಒಳ್ಳೆಯ ದಾರಿಯಲ್ಲಿ ನಡೆಸುವ ’ಪ್ರಬಂಧನಶಾಸ್ತ್ರ’ವನ್ನು ಚೆನ್ನಾಗಿ ಬಲ್ಲವರಾಗಿದ್ದರು. ತಮ್ಮ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ, ತಾವೊಬ್ಬ ಶ್ರೇಷ್ಠ ಪ್ರಬಂಧಕರೆಂದು ನಿರೂಪಿಸಿ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದವರು. ಸಮಾಜದಲ್ಲಿದ್ದ ಜಾತಿಪದ್ಧತಿಯನ್ನು ಮೀರಿ ಮುನ್ನಡೆದವರು. ಶ್ರೇಷ್ಠ ಮಾನವತಾವಾದಿಯಾಗಿದ್ದವರು. ಎಲ್ಲ ಮಾನವರೂ ಮೋಕ್ಷ ಪಡೆಯಲು ಅರ್ಹರೆಂಬ ಅಭಿಪ್ರಾಯ ಹೊಂದಿದ್ದರು.
ಆಧುನಿಕ ಪ್ರಬಂಧನಶಾಸ್ತ್ರ(Management)ದ ದೃಷ್ಟಿಯಿಂದ, ಅಂತಹ ಅಂಶಗಳನ್ನು ಅಳವಡಿಸಿಕೊಳ್ಳುವ ದೃಷ್ಟಿಯಿಂದ ಕೆಲವು ಅಂಶಗಳನ್ನು ಗಮನಿಸಬಹುದು.
ಆಧುನಿಕ ಕಾಲದಲ್ಲಿ ಪ್ರಬಂಧನಶಾಸ್ತ್ರವು ಎಲ್ಲ ಕ್ಷೇತ್ರಗಳಲ್ಲಿಯೂ ಉಪಯುಕ್ತವಾಗಿರುವುದು ನಮಗೆಲ್ಲ ತಿಳಿದಿದೆ. ಅದು ಲಾಭದಾಯಕವಾದ ಸಂಸ್ಥೆಯಾಗಿರಲಿ, ಲಾಭದಾಯಕವಲ್ಲದ ಸೇವಾಪರವಾದ ಸಂಘಟನೆಯೇ ಆಗಿರಲಿ, ಇಂದಿನ ಕಾಲಕ್ಕೆ ಪ್ರಬಂಧನಶಾಸ್ತ್ರದ ಮಹತ್ತ್ವ ಎಂದಿಗಿಂತ ಹೆಚ್ಚು. ಶ್ರೀಮದ್ ರಾಮಾನುಜರು ಆ ಕಾಲದಲ್ಲಿಯೇ ಇಂತಹ ತತ್ತ್ವಗಳನ್ನು ಪ್ರತಿಪಾದಿಸಿದವರು. ಪ್ರಬಂಧನಶಾಸ್ತ್ರದ ತತ್ತ್ವಗಳು ಇಂದಿಗೆ ಎಲ್ಲೆಡೆಯೂ ಬಳಕೆಯಲ್ಲಿವೆ. ಕೇವಲ ವಿತ್ತೀಯ ಸಂಸ್ಥೆಗಳ? ಅಲ್ಲದೆ, ಸಾಮಾಜಿಕ, ಸರ್ಕಾರಿ ಮತ್ತು ಶೈಕ್ಷಣಿಕ ಸಂಸ್ಥೆಗಳು ಈ ತತ್ತ್ವವನ್ನು ಹೆಚ್ಚಾಗಿ ಅವಲಂಬಿಸುತ್ತವೆ. ಸಂಕ್ಷೇಪವಾಗಿ ಹೇಳುವುದಾದರೆ ಪ್ರಬಂಧನಶಾಸ್ತ್ರವು ಕಾರ್ಮಿಕರಿಂದ ಕೆಲಸ ತೆಗೆಸುವುದು ಎಂದು ಹೇಳಿಬಿಡಬಹುದು. ಆದರೆ ಇದರಲ್ಲಿ ಮುಖ್ಯಪಾತ್ರ ಇರುವುದು ಕೆಲಸ ಮಾಡಿಸುವವನ ಮತ್ತು ಕೆಲಸ ಮಾಡುವವನ ನಡುವಿನ ಸೌಹಾರ್ದ ಮನೋಭಾವ.
ಶ್ರೀರಂಗಂ, ತಿರುಮಲ ಮತ್ತು ಮೇಲುಕೋಟೆಯ ತಿರುನಾರಾಯಣ ದೇವಸ್ಥಾನಗಳ ದಿನನಿತ್ಯದ ಆಡಳಿತಾತ್ಮಕ ಚಟವಟಿಕೆಗಳನ್ನು ಶ್ರೀಮದ್ ರಾಮಾನುಜರು ವ್ಯವಸ್ಥಿತಗೊಳಿಸಿದರು. ಶ್ರೇ? ಪ್ರಬಂಧನಕಾರರಾದ ಶ್ರೀಮದ್ ರಾಮಾನುಜರು ಮನಸ್ಸು-ಮನಸ್ಸುಗಳನ್ನು ಬೆಸೆಯುವಲ್ಲಿ ಬಳಸಿದ ಪ್ರಬಂಧನಶಾಸ್ತ್ರದ ತತ್ತ್ವಗಳು ಇಂದಿಗೂ ನಮಗೆ ಆದರ್ಶಪ್ರಾಯವಾಗಿವೆ.
ಸಂಗ್ರಹವಾಗಿ ಶ್ರೀಮದ್ ರಾಮಾನುಜರ ಪ್ರಬಂಧನ ಸಾಮರ್ಥ್ಯದ ಗುಣಾಂಶಗಳನ್ನು ಹೆಸರಿಸುವುದಾದರೆ: ಕಾರ್ಯವಿಭಾಗ (Division of Work), ಅಧಿಕಾರ ಮತ್ತು ಜವಾಬ್ದಾರಿ (Authority and Responsibility), ಆದೇಶದ ಏಕತೆ (Unity of Command), ಪ್ರತಿಕ್ರಿಯೆ (Feedback), ಪ್ರೇರಣೆ (Motivation), ಜ್ಞಾನಪ್ರಬಂಧನ (Knowlegde Management), ಪ್ರವಾಸೀ ಪ್ರಬಂಧನ (Tourism Management), ನೂತನಾವಿಷ್ಕರಣ (Innovation), ಸಮಸ್ಯಾಪರಿಹಾರ (Conflict Resolution) ಎಂಬುದಾಗಿ ಒಂಭತ್ತು ಅಂಶಗಳನ್ನು ನಾವು ಇಂದಿಗೂ ಕೂಡ ಅಳವಡಿಸಿಕೊಳ್ಳಬಹುದು.
ಎಲ್ಲ ಮನುಷ್ಯರಲ್ಲಿಯೂ ಹತಾಶೆ ಎಂಬ ಗುಣ/ ದೋ?ವನ್ನು ನಾವು ಆಗಾಗ ಕಾಣುತ್ತಿರುತ್ತೇವೆ. ಒಂದು ಬೃಹತ್ತಾದ ಸಾಮಾಜಿಕ ಸಮುದಾಯವನ್ನು ಗಣನೆಗೆ ತೆಗೆದುಕೊಂಡಾಗ, ಆ ಜನರ ಹತಾಶಭಾವವನ್ನು ಖಂಡಿತವಾಗಿ ಗಮನಕ್ಕೆ ತೆಗೆದುಕೊಳ್ಳಲೇಬೇಕಾಗುತ್ತದೆ. ಅಶನ, ವಸನ, ವಾಸಿಸಲು ಯೋಗ್ಯವಾದ ಭೂಮಿ, ಇವಿಷ್ಟು ಮನುಷ್ಯನ ಮೂಲಭೂತ ಆವಶ್ಯಕತೆಗಳೆಂದು ಮನಶ್ಶಾಸ್ತ್ರಜ್ಞರು ೧೯ನೇ ಶತಮಾನದಲ್ಲಿ ಹೇಳಿದ್ದನ್ನು ಶ್ರೀಮದ್ ರಾಮಾನುಜರು ೧೧ನೇ ಶತಮಾನದಲ್ಲಿಯೇ ಮನಗಂಡಿದ್ದರು. ಶ್ರೀಮದ್ ರಾಮಾನುಜರು ಈ ಕ್ರಮಾನುಗತ ಅವಶ್ಯಕತೆಗಳ ಮಹತ್ತ್ವವನ್ನು ಚೆನ್ನಾಗಿ ಅರಿತಿದ್ದರು. ಜನರನ್ನು ಆತ್ಮಸಾಕ್ಷಾತ್ಕಾರದೆಡೆಗೆ ಕೊಂಡೊಯ್ಯಲು ಇವು ಅತ್ಯಂತ ಮೂಲಭೂತ ಆವಶ್ಯಕತೆಗಳೆಂದು ಅರಿತಿದ್ದರು.
ಶ್ರೀಮದ್ ರಾಮಾನುಜರು ತಮ್ಮ ಪ್ರಬಂಧನಕೌಶಲ ಬಳಸಿ, ಕೆಲಸದ ಹಂಚಿಕೆಯನ್ನು ಚೆನ್ನಾಗಿಯೇ ಮಾಡಿದ್ದರು.
ಕಾರ್ಯವಿಭಾಗ: ಕೋವನವರ್ಗಳ ಕರ್ತವ್ಯ, ಚೊಂಗಾನಲ್ಲೂರ್ನ ಕೊಟ್ಟಿಗೆಯ ಮೇಲ್ವಿಚಾರಕರ ಕರ್ತವ್ಯ, ತಿರುಪ್ಪತಿಯಾರ್ಗಳ ಕರ್ತವ್ಯ, ತಿರುಪ್ಪಾಣಿ ಸೇವಿಯರ್ಗಳ ಕರ್ತವ್ಯ, ಭಾಗವತ ತಂಬಿಗಳ (ಅರ್ಚಕರ) ಕರ್ತವ್ಯ, ಭಟ್ಟ-ಆರ್ಯಭಟ್ಟ-ಗರುಡವಾಹನ-ಪಂಡಿತ-ದಾಸನಂಬಿ- ಏಕಾಂಗಿಗಳ ಕರ್ತವ್ಯ, ಎಂಬೆರುಮಾನದಾಯಿರ್ಗಳ ಕರ್ತವ್ಯ, ತಿರುವೇಳಕ್ಕಾರ್ಗಳ ಕರ್ತವ್ಯ, ಶಿಲ್ಪಾಚಾರಿ-ಕಮ್ಮಾರ- ಹೊಲಿಗೆಯವನ ಕರ್ತವ್ಯ, ಅಗಸ-ನಾವಿಕ-ಸಂಗೀತಗಾರರ ಕರ್ತವ್ಯಗಳು, ಹೀಗೆ ಅತ್ಯಂತ ಸ್ಪ?ವಾಗಿ ಕರ್ತವ್ಯಗಳನ್ನು ಅವರು ವಿಂಗಡಿಸಿದ್ದರು.
ಜ್ಞಾನಪ್ರಬಂಧನ: ಈ ವಿಷಯವು ಯಾರಿಗೇ ಆಗಲಿ ಸದಾಕಾಲಕ್ಕೂ ಸಲ್ಲುವಂತಹದ್ದು. ಯಾವುದೇ ಕೆಲಸವಾಗಿರಲಿ, ಅದರ ಬಗ್ಗೆ ಆಳ-ಅಗಲಗಳನ್ನು ಅರಿಯದೆ ಮುಂದುವರಿಯುವುದು ದುಸ್ಸಾಧ್ಯ. ವೈಯಕ್ತಿಕ, ಸಾಮಾಜಿಕ, ಧಾರ್ಮಿಕ ಅಥವಾ ಯಾವುದೇ ವೃತ್ತಿಗೆ ಸಂಬಂಧಿಸಿದ ಕೆಲಸವಿರಲಿ, ಜ್ಞಾನಪ್ರಬಂಧನವೇ ಮೂಲಭೂತ ಚಾಲನಾಶಕ್ತಿ. ಶ್ರೀಮದ್ ರಾಮಾನುಜರು ತಮ್ಮ ಜ್ಞಾನಪ್ರಬಂಧನ ಕೌಶಲವನ್ನು ಬಳಸಿ ’ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ’ (ಭಗವದ್ಗೀತೆ, ೪.೩೮) ಜ್ಞಾನದ ಅಧ್ಯಯನ-ಅಧ್ಯಾಪನ- ಪ್ರಚಾರ-ಪ್ರಸಾರ ಮುಂತಾದ ಎಲ್ಲ ವಿಭಾಗಗಳಲ್ಲಿಯೂ ತಮ್ಮ ಛಾಪನ್ನು ಸರಿಸುಮಾರು ೯೦೦ ವರ್ಷಗಳ ಹಿಂದೆಯೇ ಮೂಡಿಸಿದವರು.
ನೂತನಾವಿಷ್ಕಾರಣ ಮತ್ತು ಉತ್ಪಾದಕತೆ: ಗೋಪೋಷಣೆಗೆ ಶ್ರೀಮದ್ ರಾಮಾನುಜರು ಹೆಚ್ಚಿನ ಮಹತ್ತ್ವವನ್ನು ನೀಡಿದ್ದರು. ದಿನವೂ ವಿವಿಧ ಗೋಶಾಲೆಗಳಿಗೆ ಸ್ವತಃ ಭೇಟಿ ನೀಡಿ ವೈದ್ಯರ ಜೊತೆಗೂಡಿ ಗೋವುಗಳನ್ನು ಸ್ವತಃ ನೇವರಿಸಿ ಪರೀಕ್ಷಿಸುತ್ತಿದ್ದರು. ಗೋವುಗಳ ಆಹಾರಕ್ಕೆ ಕಬ್ಬಿನರಸವನ್ನು ಸೇರಿಸಿದರೆ ಅವು ಹೆಚ್ಚಿನ ಸಿಹಿಯಾದ ಹಾಲನ್ನು ನೀಡುತ್ತವೆ ಎಂಬುದನ್ನು ಕಂಡುಕೊಂಡಿದ್ದರು. ಹೀಗೆ ಅವರು ನೂತನಾವಿಷ್ಕರಣ ಮತ್ತು ಉತ್ಪಾದಕತೆ ಎಂಬ ಎರಡು ಮುಖ್ಯವಾದ ಪ್ರಬಂಧನ ಅಂಶಗಳನ್ನು ಅಕ್ಷರಶಃ ಪಾಲಿಸುತ್ತಿದ್ದರು.
ಹೀಗೆ, ನಾವು ಭಗವದ್ ರಾಮಾನುಜರ ಜೀವನದಲ್ಲಿ ಅವರು ಪಾಲಿಸಿದ ಪ್ರಬಂಧನ ಗುಣಗಳನ್ನು ನಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ಅಳವಡಿಸಿಕೊಂಡರೆ, ಖಂಡಿತವಾಗಿಯೂ ಅದು ನಾವು ಶ್ರೀಮದ್ ರಾಮಾನುಜರ ಸಹಸ್ರಮಾನೋತ್ಸವದ ಈ ಸಂದರ್ಭದಲ್ಲಿ ಅವರಿಗೆ ನಾವು ಸಲ್ಲಿಸುವ ನಿಜವಾದ ಗುರುದಕ್ಷಿಣೆಯಾದೀತು.
ಆಕರ ಗ್ರಂಥ: Managerial Abilities of Sri Ramanuja in Retrospection ; Author : Sri A Krishnamachari