ಕಳೆದ ಜೂನ್ ೨೧ರಂದು ಕರ್ನಾಟಕ ಸರ್ಕಾರ ರೂ. ೮,೧೬೫ ಕೋಟಿಯ?ರ ರೈತಸಾಲಗಳನ್ನು ಮನ್ನಾ ಮಾಡಿರುವುದಾಗಿ ಘೋಷಿಸಿತು. ಇದೀಗ ಕರ್ನಾಟಕದ ರೈತರ ಹೆಗಲ ಮೇಲಿರುವ ಸಾಲ ರೂ. ೫೨,೦೦೦ ಕೋಟಿಯಷ್ಟು. ಅದು ಹೇಗಾದರಿರಲಿ. ಒಂದು ಕಡೆ ಸಾಲದ ಹೊರೆ, ಇನ್ನೊಂದು ಕಡೆ ಮುಂದುವರಿದ ಬರ – ಈ ಇಕ್ಕುಳದಲ್ಲಿ ಸಿಲುಕಿ ನಲುಗುತ್ತಿರುವ ರೈತರಿಗೆ ಸರ್ಕಾರ ಕೊಡಮಾಡುವ ಯಾವುದೇ ನೆರವನ್ನು ಜನಸಾಮಾನ್ಯರು ಸ್ವಾಗತಿಸುತ್ತಾರೆ. ಈಗಾಗಲೇ ಸಾಲಮನ್ನಾ ಮಾಡಿರುವ ಉತ್ತರಪ್ರದೇಶ (ರೂ. ೩೬,೫೦೦ ಕೋಟಿ), ಮಹಾರಾಷ್ಟ್ರ (ರೂ. ೩೫,೫೦೦ ಕೋಟಿ), ಪಂಜಾಬ್ (ರೂ. ೧೦,೦೦೦ ಕೋಟಿ) ರಾಜ್ಯಗಳ ಸರಣಿಗೆ ಕರ್ನಾಟಕವೂ ಸೇರಿದಂತಾಯಿತು. ಮಧ್ಯಪ್ರದೇಶ, ಆಂಧ್ರಪ್ರದೇಶಗಳಲ್ಲಿ ಸಾಲಮನ್ನಾಗಾಗಿ ಆಗ್ರಹಿಸಿ ತೀವ್ರ ಆಂದೋಲನಗಳು ನಡೆದಿವೆ. ಹಲವು ರಾಜ್ಯಗಳಲ್ಲಿ ಆಗಿರುವ, ಆಗುತ್ತಿರುವ ರೈತರ ಆತ್ಮಹತ್ಯೆಯ ಪ್ರಸಂಗಗಳು ಸಮಸ್ಯೆಯ ಗಂಭೀರತೆಯನ್ನು ಸ್ಪಷ್ಟಪಡಿಸಿವೆ. ಈವರೆಗೆ ೧೨,೦೦೦ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಲಮನ್ನಾ ಇತ್ತೀಚಿನ ವಿದ್ಯಮಾನವೇನಲ್ಲ. ೧೯೯೦ರಷ್ಟು ಹಿಂದೆಯೇ ವಿ.ಪಿ. ಸಿಂಹರ ನೇತೃತ್ವದ ನ್ಯಾಶನಲ್ ಫ್ರಂಟ್ ಸರ್ಕಾರ ರೂ. ೧೦,೦೦೦ ಕೋಟಿ ಸಾಲಮನ್ನಾ ಮಾಡಿತ್ತು. ಅದರ ಹೆಚ್ಚಿನ ಲಾಭ ಪಡೆದವರು ಶ್ರೀಮಂತ ರೈತರೇ ಎಂದೆಲ್ಲ ಟೀಕೆಗಳು ಬಂದಿದ್ದವು.
ಈಚಿನ ವರ್ಷಗಳಲ್ಲಿ ಎಲ್ಲ ಚುನಾವಣೆಗಳ ಸಂದರ್ಭದ ಪ್ರಣಾಳಿಕೆಗಳಲ್ಲಿಯೂ ಸಾಲಮನ್ನಾ ಜಾಗ ಪಡೆದುಕೊಂಡಿದೆ.
ಸಾಲಮನ್ನಾ ಸಾಂಕ್ರಾಮಿಕದ ಬಗೆಗೆ ರೈತ-ಸಂಘಟನೆಗಳು ತುಂಬಾ ಉತ್ಸಾಹ ತೋರಿಲ್ಲವೆಂಬುದನ್ನು ಗಮನಿಸಬೇಕು. ಏಕೆಂದರೆ ಸಮಸ್ಯೆಗಳ ಬೇರುಗಳ ಮಟ್ಟದಲ್ಲಿ ಚಿಕಿತ್ಸೆಯ ಆವಶ್ಯಕತೆ ಇದೆ. ದೇಶದ ಒಟ್ಟು ರೈತರ ಸಾಲ ರೂ. ೧೨.೬ ಲಕ್ಷ ಕೋಟಿಗೂ ಮೀರಿದೆ. ಪ್ರತಿ ರೈತ ಕುಟುಂಬದ ಸರಾಸರಿ ಸಾಲ ರೂ. ೪೭,೦೦೦ರಷ್ಟಿದೆ; ಸರಾಸರಿ ವಾರ್ಷಿಕ ಆದಾಯ ರೂ. ೭೪,೬೭೬ ಮಾತ್ರವಿದೆ.
ಬೇರೆ ಉತ್ಪನ್ನಗಳಿಗೆ ಹೋಲಿಸಿದರೆ ಕೃಷಿಪ್ರಾಪ್ತ ವರಮಾನ ಹೆಚ್ಚಾಗದೆ ಸ್ಥಗಿತಗೊಂಡಿರುವುದು ಪ್ರಮುಖ ಸಮಸ್ಯೆ. ೨೦೧೨-೧೩ರ ಒಂದು ಅಂದಾಜಿನಂತೆ ಭಾರತದ ರೈತರ ತಿಂಗಳ ಸರಾಸರಿ ವರಮಾನ ರೂ. ೬,೨೨೩ ಮಾತ್ರವಿದೆ. ಸಾಲದ ಪ್ರಮಾಣ ಏರುತ್ತಿರುವುದಕ್ಕೆ ಹಲವು ಕಾರಣಗಳಿವೆ. ನಿದರ್ಶನಕ್ಕೆ: ಸಾಲದ ಒದಗಣೆಯ ಹೆಚ್ಚಿನಂಶವನ್ನು ಯಂತ್ರೀಕರಣ ನುಂಗಿದೆ. ಹೆಕ್ಟೇರಿಗೂ ಕಡಮೆ ಜಮೀನು ಇರುವ ರೈತರಿಗೆ ನಿವಾರಣೀಯ ಯಂತ್ರೀಕರಣ ಹೊರೆಯಾಗಿ ಪರಿಣಮಿಸಿದೆ. ಸಾಲಮನ್ನಾ ವ್ಯವಸ್ಥಾಪನೆಯಲ್ಲಿಯೂ ವ್ಯಾಪಕ ಅದಕ್ಷತೆಯೂ ಭ್ರ?ಚಾರವೂ ತುಂಬಿತ್ತೆಂದು ೨೦೧೩ರಲ್ಲಿ ಪಬ್ಲಿಕ್ ಅಕೌಂಟ್ಸ್ ಸಮಿತಿ ವರದಿ ಮಾಡಿತ್ತು. ಕೃಷಿಯ ಉಪ- ಉತ್ಪನ್ನಗಳಿಗೆ ದಾರಿಮಾಡುವ ಪ್ರಾಸೆಸಿಂಗ್ ಘಟಕಗಳ ಸ್ಥಾಪನೆ ಮೊದಲಾದ ವಿಧಾನಗಳ ಮೂಲಕ ರೈತನ ವರಮಾನದ ಹೆಚ್ಚಳ ಸಾಧಿಸುವುದು ಮಾತ್ರ ಅಂತಿಮ ಪರಿಹಾರವಾಗಬಲ್ಲದು. ವ್ರಣದ ತೀವ್ರತೆಗೆ ಸಾಲಮನ್ನಾದಂತಹ ಸುಗಂಧಿತ ಮುಲಾಮು ಚಿಕಿತ್ಸಕವಾಗಲಾರದು.