ಕಿಂ ನು ಮೇ ಸ್ಯಾದಿದಂ ಕೃತ್ವಾ ಕಿಂ ನು ಮೇ ಸ್ಯಾದಕುರ್ವತಃ |
ಇತಿ ಸಂಚಿಂತ್ಯ ಮನಸಾ ಪ್ರಾಜ್ಞಃ ಕುರ್ವೀತ ವಾ ನ ವಾ ||
“ಇದನ್ನು ಮಾಡುವುದರಿಂದ ನನಗೆ ಏನು ಆಗುತ್ತದೆ, ಮಾಡದಿದ್ದರೆ ಏನು ಆಗುತ್ತದೆ – ಎಂದು ಅಂತರಂಗದಲ್ಲಿ ವಿಚಾರ ಮಾಡಿ ವಿವೇಕಿಯು ಯಾವುದೊ ಕೆಲಸವನ್ನು ಮಾಡಬೇಕು ಅಥವಾ ಮಾಡದೆ ಇರಬೇಕು.”
ಯಾವ ಕೆಲಸವನ್ನು ಮಾಡಬೇಕು, ಯಾವುದನ್ನು ಮಾಡಬಾರದು – ಎಂದು ವಿವೇಕಿಯಾದವನು ಮನಸ್ಸಿನಲ್ಲಿ ವಿಚಾರಮಾಡಿ ನಿರ್ಣಯಗಳನ್ನು ಕೈಗೊಳ್ಳಬೇಕೇ ಹೊರತು ಆತುರದಿಂದಲೊ ಔದಾಸೀನ್ಯದಿಂದಲೊ ಅಲ್ಲ. ವಿಷಯವು ಸಣ್ಣದೇ ಅಥವಾ ದೊಡ್ಡದೇ ಎಂಬುದು ನಿರ್ಣಾಯಕವಾಗಬಾರದು. ಸಣ್ಣ ವಿಷಯಗಳಲ್ಲಿಯೂ ಪ್ರಮಾದಕ್ಕೆ ಅವಕಾಶ ಕೊಡದಿರುವವರು ಪ್ರಾಜ್ಞರೆನಿಸುತ್ತಾರೆ.
ಈಗ್ಗೆ ಸರಿಯಾಗಿ ಹತ್ತು ವರ್ಷ ಹಿಂದೆ (ಅಕ್ಟೋಬರ್ ೨೦೦೭) ಸ್ವರ್ಗವಾಸಿಗಳಾದ ಕಾಶಿಯಲ್ಲಿದ್ದ ಪುರುಷೋತ್ತಮದಾಸ್ ಮೋದಿ ಅವರು ತತ್ತ್ವನಿಷ್ಠೆಗಾಗಿಯೂ ಅರ್ಥಶೌಚಪಾಲನೆಗಾಗಿಯೂ ಹೆಸರಾಗಿದ್ದವರು. ಉಚ್ಚ ವ್ಯಾಸಂಗ ಮಾಡಿ ಸ್ನಾತಕೋತ್ತರ ಪದವಿ ಗಳಿಸಿದ್ದರೂ ಅವರು ಸಂಸ್ಕೃತಿಪ್ರಸಾರಕ್ಕಾಗಿ ಶ್ರಮಿಸುವ ನಿರ್ಧಾರ ಕೈಗೊಂಡು ಗ್ರಂಥಪ್ರಕಾಶನ ಕ್ಷೇತ್ರವನ್ನು ಆಯ್ದುಕೊಂಡರು. ಈಗ್ಗೆ ಅರವತ್ತು-ಅರವತ್ತೈದು ವರ್ಷ ಹಿಂದೆ ಉನ್ನತ ಶ್ರೇಣಿಯ ಗ್ರಂಥಗಳ ಗುಣಮಟ್ಟದ ಪ್ರಕಟನೆ ಸುಲಭವಿರಲಿಲ್ಲ.
ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಣ್ಯರೆನಿಸಿದ್ದ ಬಲದೇವ ಉಪಾಧ್ಯಾಯ, ಮೋತೀಚಂದ್ರ, ಗೋಪೀನಾಥ ಕವಿರಾಜ ಮೊದಲಾದ ಶ್ರೇಷ್ಠರ ಕೃತಿಗಳನ್ನು ವ್ಯವಸ್ಥಿತ ರೀತಿಯಲ್ಲಿ ಪ್ರಕಟನೆ ಮಾಡಿದ ಪುರುಷೋತ್ತಮದಾಸ್ ಅಖಿಲ ಭಾರತ ಪ್ರಕಾಶಕ ಸಂಘದ ಪ್ರಧಾನಾಧಿಕಾರಿಯಾಗಿಯೂ ಆಯ್ಕೆಗೊಂಡಿದ್ದರು. ವ್ಯವಹಾರಗಳಲ್ಲಿ ತಾವು ಆತ್ಯಂತಿಕ ಶುಚಿತೆಗೆ ಬದ್ಧರಾಗಿದ್ದು ಇತರರಿಂದಲೂ ಅದನ್ನು ನಿರೀಕ್ಷಿಸುತ್ತಿದ್ದರು.
ಅವರ ತಾಯಿಯವರ ದೇಹಾವಸಾನವಾದಾಗ ಮನೆಯಲ್ಲಿ ಜನ ಕಿಕ್ಕಿರಿದಿದ್ದರು. ವ್ಯವಸ್ಥೆ ಸುಲಭವಿರಲಿಲ್ಲ. ಆ ದಿನಗಳಲ್ಲಿ ಅಡಿಗೆ ಅನಿಲಕ್ಕೆ ಸದಾ ಕೊರತೆ ಇರುತ್ತಿತ್ತು. ಪುರುಷೋತ್ತಮದಾಸ್ ಅವರ ಪತ್ನಿ ಹೇಗೊ ಸಾಹಸ ಮಾಡಿ ಐದು ರೂಪಾಯಿ ಹೆಚ್ಚು ದರ ತೆತ್ತು ಗ್ಯಾಸ್ ಸಿಲಿಂಡರ್ ತಂದಿದ್ದರು. ಇದು ತಿಳಿದುಬಂದೊಡನೆ ಅವರು ಪರಿಚಾರಕನನ್ನು ಕರೆದು ಮನೆಯ ಕಷ್ಟದ ಪರಿಸ್ಥಿತಿಯನ್ನೂ ಲಕ್ಷಿಸದೆ ಆ ಸಿಲಿಂಡರನ್ನು ಅಂಗಡಿಗೆ ಹಿಂದಕ್ಕೆ ಕಳಿಸಿಬಿಟ್ಟರು. ಅಂತಹ ಆಢ್ಯರಿಗೆ ಐದು ರೂಪಾಯಿ ದೊಡ್ಡ ಸಂಗತಿಯಾಗಿರಲಿಲ್ಲ. ಆದರೆ ಅಲ್ಲಿ ಇದ್ದುದು ಜೀವನಮೌಲ್ಯದ ಪ್ರಶ್ನೆ. ಈ ಬಾಬ್ತಿನಲ್ಲಿ ರಾಜಿಯಾಗಲು ಅವರು ಸಿದ್ಧರಿರಲಿಲ್ಲ.