ದೇಶದ ಬದುಕಿನ ಬೆನ್ನೆಲುಬು ಎಂದೆಲ್ಲ ಸದಾ ಕೀರ್ತಿತನಾಗುವ ರೈತನದು ಸದಾ ಮುಗಿಯದ ಬವಣೆ ಎನ್ನಿಸುವುದು ಏಕೆ? ಒಮ್ಮೆ ಬರ ಎರಗಿದರೆ ಒಮ್ಮೆ ಬೆಲೆ ಕುಸಿತ. ಒಂದುಕಡೆ ಗ್ರಾಹಕನು ಬೆಲೆ ಹೆಚ್ಚಳಕ್ಕೆ ತತ್ತರಿಸುತ್ತಿದ್ದರೆ ಇನ್ನೊಂದುಕಡೆ ರೈತನು ಸಾಲದ ಹೊರೆಯಿಂದ ಜರ್ಜರಿತ. ಒಂದುಕಡೆ ಕೃಷಿಯ ಉಪಜೋತ್ಪನ್ನಗಳಿಂದ ವರ್ತಕರು ಹೆಚ್ಚು ಆಢ್ಯರಾಗುತ್ತ ಹೋದರೆ ಇನ್ನೊಂದುಕಡೆ ಉತ್ಪಾದಕ ರೈತರು ಆತ್ಮಹತ್ಯೆಯ ಮೊರೆಹೊಗುವ ದೃಶ್ಯ. ಇದನ್ನೆಲ್ಲ ಕುರಿತು ಯೋಚಿಸುವಾಗ ಒಂದು ಸುಸಂಬದ್ಧ ಕೃಷಿ ನೀತಿಯ ಅಭಾವ ಎದ್ದುಕಾಣುತ್ತದೆ. ಆರ್ಥಿಕ ಜಾಗತೀಕರಣ ಮೊದಲಾದ ನೆಗೆತಗಳಲ್ಲಿಯೂ ಈಗ ಉರುಬು ಉಳಿದಿಲ್ಲ. ಅಜ್ಞನಾದ ಸಾಮಾನ್ಯ ಪ್ರಜೆಯ ಮನಸ್ಸಿಗೂ ತೋರುವ ಪ್ರಶ್ನೆ:
ಉದಾರೀಕರಣಪರ್ವ ಚಾಲನೆಗೊಂಡು (೧೯೯೧) ಕಾಲು ಶತಮಾನ ಕಳೆದ ಮೇಲೂ ಉದ್ಯಮ ಕ್ಷೇತ್ರವೂ ಸೇವಾ ಕ್ಷೇತ್ರವೂ ಶೇ. ೮ ರ ವೇಗದಲ್ಲಿ ವೃದ್ಧಿಸಿರುವಾಗ ಕೃಷಿಕ್ಷೇತ್ರದ ವೃದ್ಧಿವೇಗ ಶೇ. ೧ ರಷ್ಟರಿಂದ ಮೇಲೇರದಿರುವುದು ಏಕೆ? ಈ ಪ್ರಶ್ನೆಗೆ ಯೋಜನಾಕರ್ತರೂ ಆಡಳಿತಗಾರರೂ ಈಗಲಾದರೂ ಉತ್ತರಿಸಿಯಾರೆ? ಸ್ವಾತಂತ್ರ್ಯ ಪ್ರಾಪ್ತವಾಗಿ ಏಳು ದಶಕಗಳೇ ಕಳೆದಿದ್ದರೂ ಕೃಷಿಸಂಬಂಧಿತವಾದ ಅಷ್ಟು ಆಯಾಮಗಳನ್ನು ಗಮನಿಸಿದ ಸಮಗ್ರ ನೀತಿಯೊಂದನ್ನು ಏಕೆ ರೂಪಿಸಲಾಗಿಲ್ಲ? – ಎಂದು ಸೋಜಿಗವೂ ವಿಷಾದವೂ ಉಂಟಾಗುತ್ತದೆ. ಭೂಕಂಪವೋ ಪ್ರವಾಹವೋ ಅಪಘಾತವೋ ಉಂಟಾದಾಗ ಕೂಡಲೇ ನೆರವು ಹರಿದುಬರುತ್ತದೆ. ಆದರೆ ಬರ, ಫಸಲು ಕುಸಿತ ಮೊದಲಾದವೂ ಪ್ರಕೃತಿವಿಕೋಪಗಳೇ ಅಲ್ಲವೆ? ಈ ದೃಷ್ಟಿಯಿಂದ ಏಕೆ ಸಮರ್ಪಕ ನೀತಿಯೊಂದು ರೂಪಗೊಂಡಿಲ್ಲ? ಕೆಲ ತಿಂಗಳ ಹಿಂದೆ ರೈತರಿಗೆ ಸಲ್ಲಬೇಕಾದ ನೆರವಿಗೆ ಸಂಬಂಧಿಸಿ ಮಲ್ಲಿಕಾ ಸಾರಾಭಾಯಿ ಮೊದಲಾದವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದ ಆಗಿನ ಮುಖ್ಯ ನ್ಯಾಯಾಧೀಶ ಜೆ.ಎಸ್. ಖೇಹರ್ ಅವರೂ ಕಟುವಾಗಿ ವ್ಯಾಖ್ಯೆ ಮಾಡಿದ್ದರು – “ಫಸಲು ಕುಸಿತದಂತಹ ಸನ್ನಿವೇಶದಲ್ಲಿ ರೈತರಿಗೆ ನೆರವನ್ನೊದಗಿಸುವುದರ ಬಗೆಗೆ ರಾಷ್ಟ್ರೀಯ ನೀತಿಯೊಂದು ಇರುವುದು ಅತ್ಯವಶ್ಯ. ಇದು ಇಡೀ ರಾಷ್ಟ್ರಕ್ಕೇ ಅನ್ವಯಿಸುವ ವಿಷಯ” – ಎಂದು. ೨೦೧೫ರಲ್ಲಿ ಸರ್ಕಾರೀ ನೌಕರರಿಗೆ ನೀಡಲಾದ ಹೆಚ್ಚುವರಿ ತುಟ್ಟಿ ಭತ್ಯ ಶೇ. ೧೨ ರ?; ಆದರೆ ಗೋಧಿ-ಭತ್ತಕ್ಕೆ ನೀಡಿದ ಪೋಷಕ ಬೆಲೆಯ ಹೆಚ್ಚಳ ಶೇ. ೪ರಷ್ಟು ಮಾತ್ರ. ಸರ್ಕಾರೀ ನೌಕರರಿಗೆ ಸಮಾನವಾದ ಸ್ಥಾನ-ಸವಲತ್ತಾದರೂ ರೈತರಿಗೆ ದೊರೆಯಲಿ.