ಇಪ್ಪತ್ತನೇ ಶತಮಾನದ ಮೊದಲ ದಶಕದಲ್ಲಿ ಪ್ರಖರ ರಾಷ್ಟ್ರೀಯತಾಭಾವನೆಯ ಪ್ರತಿಪಾದನೆಗೂ ಹಿಂದೂಧರ್ಮದ ಅನನ್ಯತೆಗೂ ಎಲ್ಲ ಜೀವನಕ್ಷೇತ್ರಗಳಲ್ಲಿಯೂ ಭಾರತೀಯತೆ ಹೊಮ್ಮಬೇಕೆಂಬ ನಿಲವಿಗೂ ಅಪೂರ್ವ ದೋಹದ ನೀಡಿದವರು ಸೋದರಿ ನಿವೇದಿತಾ. ಹತ್ತು-ಹನ್ನೆರಡು ವರ್ಷಗಳ ಅಲ್ಪ ಕಾಲಾವಧಿಯಲ್ಲಿ ಭಾರತದ ನವೋತ್ಥಾನಪ್ರಕ್ರಿಯೆಗೆ ನಿವೇದಿತಾರಿಂದ ದೊರೆತ ಪ್ರಸ್ಫುರಣವು ಭಾರತದ ಈಚಿನ ಇತಿಹಾಸದ ಒಂದು ಸುವರ್ಣಖಚಿತ ಪರ್ವ. ಈ ವರ್ಷ (೨೦೧೭) ನಿವೇದಿತಾರವರ ೧೫೦ನೇ ಜನ್ಮವರ್ಷಪರ್ವ. ಅದರ ನಿಮಿತ್ತ ನಿವೇದಿತಾರವರ ಜೀವನಗಾಥೆಯ ಪ್ರಮುಖ ಮಜಲುಗಳನ್ನು ಸ್ಮರಿಸುವ ಈ ಲೇಖನಮಾಲೆ.
ನಿವೇದಿತಾರವರನ್ನು ಹಿಂದುತ್ವದ ಕ್ರಾಂತಿಕಾರಕ ಪ್ರತಿಪಾದಕರಲ್ಲಿ ಅಗ್ರಶ್ರೇಣಿಯವರೆಂದು ವರ್ಣಿಸುವುದು ರೂಢಿ. ಈ ವರ್ಣನೆಯಲ್ಲಿ ಎಷ್ಟು ಮಾತ್ರವೂ ಉತ್ಪ್ರೇಕ್ಷೆ ಇಲ್ಲ. ಆ ಸಂಧಿಕಾಲದಲ್ಲಿ – ಎಂದರೆ ಇಪ್ಪತ್ತನೇ ಶತಮಾನದ ಮೊದಲ ದಶಕದಲ್ಲಿ – ಉಜ್ಜ್ವಲ ರಾಷ್ಟ್ರವಾದಿಗಳೆನಿಸಿದ್ದ ಅಥವಾ ಹಿಂದೂಧರ್ಮದ ಶ್ರೇಷ್ಠತೆಯ ಪ್ರತಿಪಾದಕರೆನಿಸಿದ್ದ ರಾಜಕೀಯ ಮತ್ತು ಧಾರ್ಮಿಕಕ್ಷೇತ್ರಗಳ ಬೇರೆಲ್ಲ ನಾಯಕರಿಗಿಂತ ಹೆಚ್ಚು ಪ್ರಖರವಾಗಿಯೂ ಏರುದನಿಯಲ್ಲಿಯೂ ಮಾತನಾಡಿದವರು ನಿವೇದಿತಾ (೨೮.೧೦.೧೮೬೭-೧೩.೧೦.೧೯೧೧). ಆಮೇಲಿನ ವರ್ಷಗಳಲ್ಲಿ ಹೆಚ್ಚು ಪ್ರಚಲನೆಗೊಂಡ ’ಆಕ್ರಾಮಕ ಹಿಂದೂಧರ್ಮ’ (’ಅಗ್ರೆಸಿವ್ ಹಿಂಡೂಯಿಸಂ’) ಎಂಬ ಪದಪುಂಜವನ್ನು ಟಂಕಿಸಿದವರೇ ನಿವೇದಿತಾ. ಭಾರತೀಯ ಸಮಾಜದ ಮಾನಸಿಕತೆಯಲ್ಲಿ ಈ ನಿರ್ಣಾಯಕ ತಿರುವನ್ನು ಉಂಟುಮಾಡುವುದಕ್ಕಾಗಿಯೇ ಅವರು ದೈವನಿರ್ದಿಷ್ಟರಾಗಿದ್ದರೆನಿಸುತ್ತದೆ. ಮುಖ್ಯ ಸಂಗತಿಯೆಂದರೆ: ನಿವೇದಿತಾರವರ ಸಕ್ರಿಯತೆ ಕೇವಲ ಭಾ?ಣ-ಬರಹಗಳಿಗೆ ಸೀಮಿತವಾಗಿರಲಿಲ್ಲ. ಶ್ರೀ ಅರವಿಂದರಂತಹ ಸ್ವಾತಂತ್ರ್ಯವಾದಿಗಳಿಂದ ಅವನೀಂದ್ರನಾಥ ಠಾಕೂರರಂತಹ ಕಲಾವಿದರವರೆಗೆ, ವಿಜ್ಞಾನಿ ಜಗದೀಶಚಂದ್ರ ಬೋಸ್ರವರಿಂದ ಕವಿ ಸುಬ್ರಹ್ಮಣ್ಯ ಭಾರತಿಯವರವರೆಗೆ ಆ ಪೀಳಿಗೆಯ ಮುಂಚೂಣಿಯ ರಾಷ್ಟ್ರೀಯತಾಭಿಮುಖ ಸಾಧಕರನ್ನೆಲ್ಲ ಉದ್ದೀಪಿಸಿದವರು ನಿವೇದಿತಾ. ಇದನ್ನು ನೆನೆಯುವಾಗ ಸ್ವಾತಂತ್ರ್ಯೋದ್ಯಮದ ನಿರ್ಣಾಯಕ ಹಂತದಲ್ಲಿ ನಿವೇದಿತಾರವರಿಂದ ಸಂದ ಕೊಡುಗೆಯ ಬಗೆಗೆ ಈಚಿನ ಪೀಳಿಗೆಗಳ ಪರಿಜ್ಞಾನವು ಅಪರ್ಯಾಪ್ತವೆನಿಸುತ್ತದೆ.
ಒಂದು ದೃಷ್ಟಿಯಿಂದ ನೋಡುವಾಗ ಮಾರ್ಗರೆಟ್ ಎಲಿಜಬೆತ್ ನೊಬಲ್ ಭಾರತಕ್ಕೆ ಹೋಲಿಸಿದಲ್ಲಿ ಹೆಚ್ಚು ಶ್ರೀಮಂತವೂ ಪ್ರಭಾವಿಯೂ ಆಗಿದ್ದ ತಾಯ್ನೆಲವನ್ನು ತ್ಯಜಿಸಿ ಸಮಸ್ಯೆಗಳ ಗೂಡಾಗಿದ್ದ ಭಾರತಕ್ಕೆ ವಲಸೆ ಬಂದದ್ದೇ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿತ್ತು. ಭಾರತಕ್ಕೆ ಬಂದ ಮೇಲೆ ಕೆಲವೇ ವರ್ಷಗಳಲ್ಲಿ ರಾಷ್ಟ್ರೀಯತಾ ಪ್ರಸ್ಥಾನಕ್ಕೆ ಅವರು ನೀಡಿದ ಅವಿಸ್ಮರಣೀಯ ತಿರುವು ಇನ್ನು ಹೆಚ್ಚು ಕ್ರಾಂತಿಕಾರಕ. ಅವರ ಅಂತರಂಗದಲ್ಲಿ ಈ ಪ್ರಸ್ಫುರಣವನ್ನು ಬಿತ್ತಿ ಪ್ರೋತ್ಸಾಹಿಸಿದವರು ಸ್ವಾಮಿ ವಿವೇಕಾನಂದರು. ಸ್ವಾಮಿಜೀ ವರ್ಷಗಳುದ್ದಕ್ಕೂ ನೀಡುತ್ತಬಂದಿದ್ದ ಆವಾಹನೆಗೆ ಆ ಪೀಳಿಗೆಯ ಎಲ್ಲರಿಗಿಂತ ಹೆಚ್ಚು ತೇಜೋಮಯವಾಗಿ ಸ್ಪಂದಿಸಿದವರು ನಿವೇದಿತಾ. ಈ ಪ್ರಕ್ರಿಯೆಯಲ್ಲಿ ಒಂದು ಪಾರಸ್ಪರಿಕತೆಯೂ ಇದ್ದಿರಬೇಕು. ಜಗದ್ಧಿತನದ ಯಾವ ಪ್ರಣಾಳಿಕೆಯನ್ನು ನಿವೇದಿತಾ ಅಂತರಂಗದಲ್ಲಿ ಕಲ್ಪಿಸಿಕೊಂಡಿದ್ದರೋ ಅದನ್ನೇ ಸ್ವಾಮಿಜೀ ಉಚ್ಚಸ್ವರದಲ್ಲಿ ಖಂಡಾಂತರಗಳಲ್ಲಿ ಸಾರತೊಡಗಿದ್ದರು. ಈ ವೈಶಿ?ವೇ ಅವರೆಡೆಗೆ ನಿವೇದಿತಾರನ್ನು ಆಕರ್ಷಿಸಿದ್ದಿರಬೇಕು.
ಭಾರತದೊಡನೆ ತಾದಾತ್ಮ್ಯ
ಭಾರತೀಯ ಜನಮಾನಸದೊಡನೆ ತಾದಾತ್ಮ್ಯ ಏರ್ಪಟ್ಟರೆ ಮಾತ್ರ ಇಲ್ಲಿಯ ಸಂಸ್ಕೃತಿಯ ಸೂಕ್ಷ್ಮತೆಗಳು ಅರಿವಿಗೆ ಬಂದಾವು – ಎಂಬುದು ಸ್ವಾಮಿಜೀ ಮೇಲಿಂದ ಮೇಲೆ ಹೇಳುತ್ತಿದ್ದ ಮಾತು. ಈ ತಥ್ಯವನ್ನು ಆರಂಭದಿಂದಲೇ ಗ್ರಹಿಸಿ ಅದಕ್ಕೆ ತಮ್ಮನ್ನು ಅಣಿಗೊಳಿಸಿಕೊಂಡವರು ನಿವೇದಿತಾ. ಸ್ಪಂದನಶೀಲ ಮನಸ್ಸಿಗೆ ಭಾರತೀಯ ಪುರಾಣಾದಿಗಳಲ್ಲಿಯೂ ದೈನಂದಿನ ಜನಜೀವನ ರೀತಿನೀತಿಗಳಲ್ಲಿಯೂ ಎಷ್ಟು ವಿಶಾಲವಾದ ಅರ್ಥವಂತಿಕೆ ತೋರಬಹುದು – ಎಂಬುದನ್ನು ನಿವೇದಿತಾರವರ ಭಾಷಣ-ಬರಹಗಳಲ್ಲಿ ನಿಚ್ಚಳವಾಗಿ ಕಾಣಬಹುದು.
ಒಟ್ಟಾರೆ ನಿರುತ್ಸಾಹಕರ ಪರಿಸರ ಹರಡಿದ್ದಾಗ ಈ ನಾಡಿನ ಉಜ್ಜ್ವಲ ಭವಿತವ್ಯದ ಪ್ರತೀಕವು ನಿವೇದಿತಾರಿಗೆ ಕಂಡದ್ದು ಸ್ವಾಮಿಜೀಯವರ ವ್ಯಕ್ತಿತ್ವದಲ್ಲಿ. ಭಾರತದ ಆಗಿನ ಬಾಹ್ಯರೂಪದಲ್ಲಿ ಒಂದ? ಆಯಾಸ ಕಾಣುವಂತಿದ್ದರೂ ಒಳಗಡೆ ತಾರುಣ್ಯವೂ ಸಾಮರ್ಥ್ಯವಂತಿಕೆಯೂ ಅಂತರ್ವಾಹಿನಿಯಾಗಿ ಇದೆಯೆಂದು ದೇಶವಿದೇಶ ವೇದಿಕೆಗಳಲ್ಲಿ ಸ್ವಾಮಿಜೀ ಮಾಡುತ್ತಿದ್ದ ಉದ್ಘೋಷವು ನಿವೇದಿತಾರವರ ಮೇಲೆ ಗಾಢ ಪ್ರಭಾವವನ್ನು ಮೂಡಿಸಿತು. ಆದರೆ ಭಾರತದ ಪುನರುತ್ಥಾನವು ಒಂದೆರಡು ತಲೆಮಾರುಗಳವರ ಅತ್ಯಂತ ಕಠಿಣ ಪರಿಶ್ರಮದಿಂದ ಮಾತ್ರ ಸಾಧ್ಯವಾಗುತ್ತದೆಂದೂ ಸ್ವಾಮಿಜೀ ಒತ್ತಿಹೇಳುತ್ತಿದ್ದರು. ಈ ವಾಸ್ತವಪ್ರಜ್ಞೆಯೂ ನಿವೇದಿತಾರವರಿಗೆ ಮಹತ್ತ್ವದ್ದಾಗಿ ಕಂಡಿರಬೇಕು.
ಸಹಜಪ್ರವೃತ್ತಿಗಳನ್ನು ಹಿಂದಿಕ್ಕಿ ಬೇರೊಂದು ಚಿಂತನರೀತಿಯನ್ನು ಒಗ್ಗಿಸಿಕೊಳ್ಳುವುದು ಯಾರಿಗೂ ಸುಲಭವಲ್ಲ. ಇನ್ನು ದೂರದ ದೇಶದಿಂದಲೂ ಭಿನ್ನ ಪರಿಸರದಿಂದಲೂ ಬಂದ ವ್ಯಕ್ತಿಗೆ ಈ ಸ್ವಶಿಕ್ಷಣ ಇನ್ನೂ ಹೆಚ್ಚು ಕ್ಲೇಶಕರವೆನಿಸುತ್ತದೆಂದು ಹೇಳುವ ಆವಶ್ಯಕತೆಯಿಲ್ಲ. ಮಾರ್ಗರೆಟ್ಳಂತಹ ಸಾಧಕಿಗೂ ಇದು ಸುಗಮವಾಗಿದ್ದಿರಲಾರದು. ಇನ್ನೊಂದು ಕಡೆ ಆಕೆ ಶೀಘ್ರಾತಿಶೀಘ್ರ ತಮ್ಮ ನಿರೀಕ್ಷೆಗೆ ತಕ್ಕಂತೆ ಸಜ್ಜುಗೊಳ್ಳಬೇಕು ಎಂಬ ಆತುರವೂ ಸ್ವಾಮಿಜೀಯವರಿಗೆ ಇದ್ದಿತು. ಈ ಹಿನ್ನೆಲೆಯಲ್ಲಿ ೧೮೯೫-೯೬ರ ಆ ದಿನಗಳು ಮಾರ್ಗರೆಟ್ಳ ಪಾಲಿಗೆ ತೀಕ್ಷ್ಣಪರೀಕ್ಷಣೆಯ ಕಾಲ ಆಗಿದ್ದಿರಬೇಕು. ಆದರೆ ಈ ಪರೀಕ್ಷೆಯಲ್ಲಿ ಆಕೆ ಕ್ಷಿಪ್ರವಾಗಿ ಉತ್ತೀರ್ಣರಾದರೆಂಬುದೂ ವಾಸ್ತವವೇ.
ನಿವೇದಿತಾರವರು ಭಾರತಕ್ಕೆ ಬಂದಾಗಿನಿಂದ ಅವರ ದೇಹಾವಸಾನದವರೆಗಿನ ಅವಧಿ ಕೇವಲ ಹದಿಮೂರು ವರ್ಷಗಳಷ್ಟರದು. ಅಷ್ಟು ಕಡಮೆ ಕಾಲಾವಧಿಯಲ್ಲಿ ಅವರು ಎಷ್ಟು ಮುಖಗಳಲ್ಲಿ ಜನಜಾಗೃತಿಯ ಹರಿಕಾರರಾದರೆಂಬುದು ಒಂದು ಅದ್ಭುತವೆಂದೇ ಹೇಳಬೇಕು. ರಾಜಕಾರಣದಲ್ಲಿ ಚೇತರಿಕೆಯ ಉದ್ದೀಪನ, ಪ್ರಖರ ರಾಷ್ಟ್ರೀಯತಾಭಾವದ ಪ್ರತಿಪಾದನೆ, ಹಿಂದೂಧರ್ಮದ ಅನನ್ಯತೆಯ ಪ್ರಸಾರ, ದೇಶಭಕ್ತ ಕಾರ್ಯಕರ್ತರ ಸಂಘಟನೆ, ಕಲೆಗಳೂ ಸೇರಿದಂತೆ ಎಲ್ಲ ಜೀವನಕ್ಷೇತ್ರಗಳಲ್ಲಿ ಭಾರತೀಯತೆ ಬಿಂಬಿತವಾಗಬೇಕೆಂಬ ನಿಲವಿನ ಪ್ರಸಾರ, ಹಲವು ಕ್ಷೇತ್ರಗಳಲ್ಲಿ ಭಾರತೀಯರ ಅನುಪಮ ಸಾಧನೆಗೆ ವಿದೇಶಗಳ ಗಮನವನ್ನು ಸೆಳೆದದ್ದು, ಹಲವು ಪಥದರ್ಶಕ ಬರಹಗಳು, ರಾಜಕೀಯ ಸಂವಾದದಲ್ಲಿ ಆತ್ಮವಿಶ್ವಾಸಭರಿತ ಹೊಸ ಮಂಡನರೀತಿಯ ಪ್ರವರ್ತನೆ; – ಹೀಗೆ ಆ ಹಲವೇ ವರ್ಷಗಳಲ್ಲಿ ಭಾರತದ ನವೋತ್ಥಾನದ ಪ್ರಕ್ರಿಯೆಗೆ ನಿವೇದಿತಾರವರಿಂದ ದೊರೆತ ಅಗ್ನಿಸದೃಶ ಪ್ರಸ್ಫುರಣವು ಭಾರತದ ಈಚಿನ ಇತಿಹಾಸದ ಒಂದು ಸುವರ್ಣಖಚಿತ ಪರ್ವ.
ಹಿನ್ನೆಲೆ, ಬೋಧಕವೃತ್ತಿ ಗಾಢ ನೈತಿಕ-ಧಾರ್ಮಿಕ ಮನೋಧರ್ಮದ ತಂದೆ ಸ್ಯಾಮ್ಯುವಲ್ ನೊಬಲ್ ೩೪ರ ಅಲ್ಪವಯಸ್ಸಿನಲ್ಲಿ ನಿಧನರಾದ ಬಳಿಕ ಹ್ಯಾಲಿಫಾಕ್ಸ್ನ ಮಿಷನರಿ ಶಾಲೆಯೊಂದರಲ್ಲಿ ಶಿಕ್ಷಣ ಪಡೆದು ಸ್ವಪ್ರವೃತ್ತಿಗನುಗುಣವಾಗಿ ಕೆಜ್ವಿಕ್ ಎಂಬೆಡೆ ಶಿಕ್ಷಕಿಯಾದದ್ದು, ಮಾತಿನಲ್ಲಿ ಹೇಳಲಾಗದ ಒಂದು ಬಗೆಯ ಆಧ್ಯಾತ್ಮಿಕ ಅತೃಪ್ತಿಯಿಂದಾಗಿ ಮೂರೇ ವರ್ಷಗಳಲ್ಲಿ ಕೆಲಸವನ್ನು ತ್ಯಜಿಸಿ ಹೆಣ್ಣುಮಕ್ಕಳಿಗೆ ಮನೆಗೆಲಸದ ತರಬೇತಿ ನೀಡುತ್ತಿದ್ದ ಒಂದು ಅನಾಥಾಶ್ರಮದಲ್ಲಿ ಬೋಧಕಿಯಾದದ್ದು, ಒಂದು ವರ್ಷ ಕಳೆದ ಮೇಲೆ ಆಕೆಯ ಕೌಶಲದ ಹೆಚ್ಚಿನ ಬಳಕೆಗೆ ಅವಕಾಶ ನೀಡೀತೆನಿಸಿದ ರೆಕ್ಸ್ಹಮ್ ಗಣಿಪ್ರದೇಶದ ಶಾಲೆಯಲ್ಲಿ ಮುಖ್ಯಾಧ್ಯಾಪಿಕೆಯಾಗಿಯೂ ಜೊತೆಜೊತೆಗೇ ತನ್ನ ಅಭಿರುಚಿಯದಾದ ದೀನರ ಸೇವೆಯಲ್ಲಿ ತೊಡಗಿಕೊಂಡದ್ದು, ಶಿಕ್ಷಣದಲ್ಲಿ ಹೆಚ್ಚಿನ ಪ್ರಯೋಗಶೀಲತೆಗೆ ಅವಕಾಶ ಗೋಚರಿಸಿದಾಗ ಡಿ-ಲ್ಯೂ ಎಂಬಾಕೆಯ ಸಹಕಾರದೊಡನೆ ಲಂಡನ್ನಿನ ವಿಂಬಲ್ಡನ್ನಿನಲ್ಲಿ ಸಣ್ಣ ಸ್ವತಂತ್ರ ಶಾಲೆಯನ್ನು ತೆರೆದದ್ದು, ಸ್ವಲ್ಪ ಸಮಯದ ತರುವಾಯ ೧೮೯೫ರಲ್ಲಿ ತನ್ನದೇ ಪ್ರಯಾಸದಿಂದ ರಸ್ಕಿನ್ ಸ್ಕೂಲ್ ಎಂಬ ಶಾಲೆಯನ್ನು ವಿಂಬಲ್ಡನ್ನಿನಲ್ಲಿಯೆ ಆರಂಭಿಸಿದುದು; – ಈ ವೈವಿಧ್ಯಮಯ ಕಾರ್ಯಾವಳಿಗಳಿಂದಾಗಿ ಸ್ವತಂತ್ರಚಿಂತನೆ- ಬರಹಗಳಲ್ಲದೆ ಐರ್ಲೆಂಡಿನ ಸ್ವಾಯತ್ತತೆಗಾಗಿ ಹತ್ತಾರೆಡೆ ನಡೆದಿದ್ದ ಆಂದೋಲನಗಳ ಪರಿಚಯದಿಂದಾಗಿ ಒಂದಷ್ಟುಮಟ್ಟಿನ ರಾಜಕೀಯ ಜಾಗೃತಿ – ಇಷ್ಟು ಅನುಭವ ಶೇಖರಣೆ ಸ್ವಾಮಿಜೀ ಭೇಟಿಗೆ ಪೂರ್ವದಲ್ಲಿಯೆ ಮಾರ್ಗರೆಟ್ ನೊಬಲ್ಗೆ ಆಗಿದ್ದಿತು.
ಒಂದುಕಡೆ ಪ್ರೇರಣೆಯ ಮತ್ತು ಸ್ಫುರಣೆಯ ಔಜ್ಜ್ವಲ್ಯ, ಇನ್ನೊಂದುಕಡೆ ಆತ್ಯಂತಿಕ ಸ್ಪಂದನಶೀಲತೆ – ಇವು ಮೇಳವಿಸಿದಾಗ ಎಂತಹ ಪವಾಡ
ನಡೆಯುತ್ತದೆ ಎಂಬುದಕ್ಕೆ ಸೋದರಿ ನಿವೇದಿತಾರವರ ಜೀವಿತ ಘಟನಾವಳಿಗಿಂತ ಶ್ರೇಷ್ಠ ನಿದರ್ಶನ ದುರ್ಲಭ. ಇದು ಸ್ವಾಮಿಜೀಯವರ ಪ್ರಭಾವದ ಪ್ರಖರತೆ, ನಿವೇದಿತಾರವರ ಆಂತರಂಗಿಕ ಸಚೇತನತೆ -ಎರಡನ್ನೂ ಏಕಕಾಲದಲ್ಲಿ ಪ್ರಕಾಶಪಡಿಸುತ್ತದೆ; ಎಷ್ಟುಮಟ್ಟಿಗೆ ಎಂದರೆ ನಿವೇದಿತಾರವರ ಜನನ ಆಗಿದ್ದುದೇ ಭಾರತದ ಸೇವೆಗಾಗಿ ಎಂದು ಎಲ್ಲರೂ ಪರಿಭಾವಿಸುವಂತೆ ಆಯಿತು.
ಸ್ವಾಮಿಜೀ ದರ್ಶನ
ಭಾರತೀಯೇತರ ಮೂಲದವರಾಗಿದ್ದರೂ ಅಲ್ಪಕಾಲದಲ್ಲಿ ಭಾರತದೊಡನೆ ನಿವೇದಿತಾ ಅವರಲ್ಲಿ ಏರ್ಪಟ್ಟ ಐಕಾತ್ಮ್ಯ ಅನಿತರಸಾಧಾರಣವಾದುದು. ಆಕೆಯ ಬದುಕಿನ ಆರಂಭಕಾಲದಲ್ಲಿ ಆಕೆಯಲ್ಲಿ ಹೇಳಿಕೊಳ್ಳುವಮಟ್ಟಿನ ಧರ್ಮಪ್ರವಣತೆಯಾಗಲಿ ಸೇವಾಭಿಮುಖತೆಯಾಗಲಿ ಗಮನ ಸೆಳೆಯುವ ರೀತಿಯಲ್ಲಿ ಇದ್ದವೆನ್ನಲು ಪುರಾವೆ ದೊರೆಯದು. ಆದರೆ ಸ್ವಾಮಿ ವಿವೇಕಾನಂದರು ಅಮೆರಿಕದಿಂದ ಹಿಂದಿರುಗುವಾಗ ಮೂರುತಿಂಗಳ ಕಾಲ ಲಂಡನ್ನಿನಲ್ಲಿ ವಾಸ್ತವ್ಯವಿದ್ದಾಗ (೧೮೯೫) ಘಟಿಸಿದ ಅವರ ಭೇಟಿಯೂ ಸ್ವಾಮಿಜೀ ಓಜಃಪೂರ್ಣವಾಗಿ ಪ್ರತಿಪಾದಿಸಿದ ವೇದಾಂತದರ್ಶನವೂ ನಿವೇದಿತಾರವರನ್ನು (ಆಗ ಅವರು ಇನ್ನೂ ಮಾರ್ಗರೆಟ್ ಎಲಿಜಬೆತ್ ನೊಬಲ್) ಸೂಜಿಗಲ್ಲಿನಂತೆ ಸೆಳೆದವು. ಹಾಗೆ ಉತ್ಪನ್ನವಾದ ಕುತೂಹಲವು ಶೀಘ್ರವಾಗಿ ಆಸ್ಥೆಯ ಸ್ವರೂಪ ತಳೆಯಿತು. ಸ್ವಭಾವತಃ ವೈಚಾರಿಕ ಪ್ರವೃತ್ತಿಯವಳಾಗಿದ್ದ ಮಾರ್ಗರೆಟ್ಳ ಪ್ರಶ್ನೆ-ಶಂಕೆಗಳಿಗೆ
ಲ್ಲ ಸ್ವಾಮಿಜೀ ನೀಡಿದ ಸೋಪಪತ್ತಿಕ ಸಮಾಧಾನ ಆಕೆಯ ಅಂತರಂಗವನ್ನು ದೃಢಿ?ಗೊಳಿಸಿತು. ತಾತ್ಪರ್ಯವೆಂದರೆ – ಮಾರ್ಗರೆಟ್ ನೊಬಲ್ ಯಾವುದೋ ಆವೇಶಕ್ಕೋ ಭಾವತೀವ್ರತೆಗೋ ಸಿಲುಕಿ ಆಧ್ಯಾತ್ಮಿಕ-ರಾಷ್ಟ್ರಕ ಪಯಣಕ್ಕೆ ಮುಖಮಾಡಿದವರಲ್ಲ. ಪ್ರತಿಯಾಗಿ ಭಾರತಕ್ಕೆ ತೆರಳುವ ಆಕೆಯ ನಿರ್ಧಾರವು ತೀಕ್ಷ್ಣ ಅಂತರ್ಮಥನದ ಫಲವಾಗಿ ಮೈತಳೆದದ್ದು. ಅದಾದ ಮೂರೇ ವ?ಗಳಲ್ಲಿ (೧೮೯೮ ಜನವರಿ ಅಂತ್ಯ) ಕೋಲ್ಕತಾ ತಲಪಿದರು. ಆಕೆ ಸ್ವಾಮಿಜೀಯವರ ಅನುಚರಣೆಯಲ್ಲಿ ತೊಡಗಿದುದು, ಬ್ರಹ್ಮಚರ್ಯ ವ್ರತ ಸ್ವೀಕಾರ, ಭಾರತೀಯ ಸಂಸ್ಕೃತಿಯ ಮತ್ತು ಇತಿಹಾಸದ ಗಾಢ ಅಧ್ಯಯನ – ಎಲ್ಲವೂ ಅತ್ಯಂತ ಸಹಜವೆಂಬಂತೆ ನಡೆಯಿತು.
ಪರೀಕ್ಷಕ ಬುದ್ಧಿ
ಪೂರ್ವಯೌವನದ ದಿನಗಳಲ್ಲಿ ಮಾರ್ಗರೆಟ್ ಸಾಮಾನ್ಯಮಟ್ಟದ ಧಾರ್ಮಿಕ ಒಲವು ಇದ್ದವಳಾದರೂ ರೂಢಿಗತ ಸಂಗತಿಗಳನ್ನು ಪ್ರಶ್ನಿಸುವ ಪ್ರವೃತ್ತಿಯೂ ಅವಳಲ್ಲಿ ಪ್ರಬಲವಾಗಿಯೇ ಇದ್ದಿತು. ಅನೇಕ ಧರ್ಮಸಂಬಂಧಿತ ಪ್ರಶ್ನೆಗಳಿಗೆ ಸಿಗುತ್ತಿದ್ದ ಗತಾನುಗತಿಕ ಸಮಾಧಾನಗಳು ಅವಳಿಗೆ ಸಮರ್ಪಕವೆನಿಸುತ್ತಿರಲಿಲ್ಲ. ಹೀಗಾಗಿ ಕ್ರಮಕ್ರಮೇಣ ಅತೃಪ್ತಿಯೂ ಚಡಪಡಿಕೆಯೂ ಹೆಚ್ಚುತ್ತಿತ್ತು; ಆದರೆ ಧಾರ್ಮಿಕತೆ ತನಗೆ ಅನಿವಾರ್ಯವೆಂಬ ದೃಢಮನಸ್ಕತೆಯೂ ಇದ್ದಿತು. ದೈವದಲ್ಲಿ ದೃಢವಿಶ್ವಾಸ, ಪ್ರಾಶ್ನಿಕ ಬುದ್ಧಿವೃತ್ತಿ, ಅಂತರ್ಮಥನ – ಇವು ಒಟ್ಟೊಟ್ಟಿಗೇ ಸಾಗಿದ್ದವು. ಸಮನ್ವಯ ಸುಲಭವಾಗಿರಲಿಲ್ಲ.
ಹೀಗಿದ್ದಾಗ ದೈವಿಕವಾಗೆಂಬಂತೆ ಮಾರ್ಗರೆಟ್
ಳ ಬೋಧಕರೊಬ್ಬರ ಮೂಲಕ ಗಣ್ಯರೊಬ್ಬರ ಮನೆಯಲ್ಲಿ ಹಿಂದೂಸಂನ್ಯಾಸಿಯೊಬ್ಬರ ಪ್ರವಚನ ಏರ್ಪಟ್ಟಿರುವುದಾಗಿ ತಿಳಿಯಿತು. ಆ ಸಂನ್ಯಾಸಿಯ ಹೆಸರನ್ನು ಆಗಲೇ ಅವಳು ಅವರಿವರಿಂದ ಕೇಳಿದ್ದಳು. ಹೀಗೆ ಯಾವುದೇ ಹೆಚ್ಚಿನ ನಿರೀಕ್ಷೆ ಇಲ್ಲದೆ ಕುತೂಹಲದಿಂದ ಆ ಪ್ರವಚನಕ್ಕೆ ಹೋಗಲು ನಿರ್ಧರಿಸಿದಳು. ಅಲ್ಲಿ ನೆರೆದಿದ್ದವರು ಹದಿನೈದಿಪ್ಪತ್ತು ಜನ ಇರಬಹುದಷ್ಟೆ. ಸುಗಂಧಭರಿತ ಆವರಣದಲ್ಲಿ ಕಾರ್ಯಕ್ರಮ ಆರಂಭಗೊಂಡಿತು.
ಮೊದಲಿಗೆ ಮಾರ್ಗರೆಟ್ಳ ಗಮನ ಸೆಳೆದದ್ದು ಆ ಸಂನ್ಯಾಸಿಯ ಪ್ರಶಾಂತ ಮುಖಭಾವ ಮತ್ತು ತನಗೆ ಸುತ್ತಲ ವಿದ್ಯಮಾನಗಳ ಸಂಪೃಕ್ತಿಯೇ ಇಲ್ಲವೆಂಬಂತಹ ಒಂದು ಬಗೆಯ ನಿರ್ಲಿಪ್ತಿ. ಅಲ್ಲೊಂದು-ಇಲ್ಲೊಂದು ಸಂಸ್ಕೃತ ವಾಕ್ಯಗಳನ್ನು ಉದ್ಧೃತ ಮಾಡಿ ಸ್ಫುಟವೂ ಆಕರ್ಷಕವೂ ಆದ ರೀತಿಯಲ್ಲಿ ಇಂಗ್ಲಿಷಿನಲ್ಲಿ ಆತ ವಿವರಣೆ ನೀಡುತ್ತಿದ್ದುದೂ ಕೇಳಿದ ಪ್ರಶ್ನೆಗಳಿಗೆ ಸರಳವಾಗಿ ಆದರೆ ಕಾವ್ಯಮಯವಾಗಿ ಉತ್ತರಿಸುತ್ತಿದ್ದುದೂ ಮಾರ್ಗರೆಟ್ಳನ್ನು ಶೀಘ್ರವಾಗಿ ಆಕರ್ಷಿಸಿತು. ಪ್ರವಚನ ಮುಂದುವರಿದಂತೆ ಅಲ್ಲಿದ್ದ ಎಲ್ಲರ ನಡುವೆ ಒಂದು ಅವರ್ಣನೀಯ ಆತ್ಮೀಯತೆ ಏರ್ಪಟ್ಟ ಅನುಭವವಾಯಿತು.
ಮಾರ್ಗರೆಟ್ಳಲ್ಲಿ ಅವಳಿಗೆ ತಿಳಿಯದಂತೆ ಮೊದಲಿಗಿದ್ದ ಪ್ರಶ್ನೆಗಳ ಅವಾಂತರವೆಲ್ಲ ಅಣಗಿ ನೆಮ್ಮದಿ ತಲೆದೋರಿತ್ತು. ತನ್ನಲ್ಲಿ ಮನೆಮಾಡಿದ್ದ ಶಂಕೆಗಳನ್ನೂ ಪ್ರಶ್ನೆಗಳ ಊಹಿಸಿದ್ದರೆಂಬಂತೆ ಅವರಿಂದ ಸಮಾಧಾನಕಾರಕ ವಿವರಣೆಗಳು ಹೊಮ್ಮುತ್ತಿದ್ದವು. ತಂಡದಲ್ಲಿದ್ದ ಒಬ್ಬಿಬ್ಬ ಮಹಿಳೆಯರು ಕೇಳಿದ ಪ್ರಶ್ನೆಗಳು ಹುರುಳಿಲ್ಲದವೆನಿಸಿತು.
ಅಯಸ್ಕಾಂತಸದೃಶ ಆಕರ್ಷಣೆ
ಕೆಲವೇ ದಿನಗಳಲ್ಲಿ ಸ್ಥಳೀಯ ಪತ್ರಿಕೆಗಳು ಆ ಸಂನ್ಯಾಸಿಯು ಅಮೆರಿಕದಲ್ಲಿ ಸೃಷ್ಟಿಸಿದ್ದ ಪ್ರಭಾವ, ಆತನ ಅಸಾಮಾನ್ಯ ವ್ಯಕ್ತಿತ್ವ, ಆತ ಶ್ರೀರಾಮಕೃಷ್ಣ ಪರಮಹಂಸರೆಂಬ ಸಿದ್ಧಪುರುಷರ ಶಿಷ್ಯರೆಂಬುದು, ಹಿಂದೂಧರ್ಮದ ಪ್ರಖರ ಪ್ರತಿಪಾದಕರೆಂಬುದು – ಇವನ್ನೆಲ್ಲ ಉಲ್ಲೇಖಿಸಿ ಪ್ರವಚನಗಳ ವರದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗತೊಡಗಿದವು.
ಪ್ರವಚನಗಳಲ್ಲದೆ ಒಂದೆರಡು ಅನೌಪಚಾರಿಕ ಭೇಟಿಗಳಿಗೆ ಅವಕಾಶವಾದಾಗ ಮಾರ್ಗರೆಟ್ ಹಲವು ತೀಕ್ಷ್ಣರೂಪದ ಪ್ರಶ್ನೆಗಳನ್ನು ಕೇಳದಿರಲಿಲ್ಲ. ಆಕೆ ಕೇಳಿದ ಪ್ರಶ್ನೆಗಳಲ್ಲಿನ ಖಚಿತತೆಯನ್ನು ಮೆಚ್ಚಿದ ಸ್ವಾಮಿಜೀ ಅವಕ್ಕೆ ಲೀಲಾಜಾಲವಾಗಿ ಉತ್ತರಿಸಿದರು. ಅವರ ವಿಶಾಲ ಅಧ್ಯಯನವೂ ವಿಶ್ಲೇ?ಣಕೌಶಲವೂ ಮಾರ್ಗರೆಟ್ಳ ಮೇಲೆ ಹೆಚ್ಚುಹೆಚ್ಚು ಪರಿಣಾಮ ಬೀರತೊಡಗಿದವು. ಪಾಶ್ಚಾತ್ಯ ಪರಿಸರದಲ್ಲಿ ಮಾರ್ಗರೆಟ್ಳಂಥವರ ಮನಃಸ್ಥಿತಿ ಹೇಗೆ ರೂಪಗೊಂಡಿರುತ್ತದೆ ಎಂಬುದು ಆ ವೇಳೆಗಾಗಲೇ ಸ್ವಾಮಿಜೀಯವರಿಗೆ ಪರಿಚಿತವೇ ಆಗಿತ್ತು. ಆ ಸಂವಾದಗಳಲ್ಲಿ ಸ್ವಾಮಿಜೀ ಪಾರಿಭಾಷಿಕತೆಯ ಮೊರೆಹೊಗದೆ ನೇರವಾಗಿಯೂ ಅನುಭವಾಧಾರಿತವಾಗಿಯೂ ಮಾತನಾಡುತ್ತಿದ್ದುದು ಆಕೆಗೆ ಹಿಡಿಸಿತು.
ಮಾರ್ಗರೆಟ್ಳಲ್ಲಿ ಸ್ವಾಮಿಜೀ ಬಗೆಗೆ ಆಪ್ತತೆಯನ್ನು ಮೂಡಿಸಿದ ಪ್ರಮುಖ ಸಂಗತಿಯೆಂದರೆ ಆತ್ಮೋತ್ಕರ್ಷಪಥದ ಬಗೆಗೆ ಇದ್ದ ಕ್ಲೇಶಪ್ರಜ್ಞೆಯು ದೂರಗೊಂಡದ್ದು, ಔನ್ನತ್ಯಕ್ಕೆ ಬೇಕಾದುದು ಸ್ವಯಮನುಶಾಸನ ಮಾತ್ರವೆಂಬ ಭರವಸೆ ಮೂಡಿದುದು; ಸಾಕ್ಷಾತ್ಕಾರವೆಂಬುದು ಶ್ರದ್ಧೆಗೆ ಇನ್ನೊಂದು ಹೆಸರ? ಎಂಬ ಸ್ವಾಮಿಜೀಯವರ ಬೋಧೆ. ಇದರ ಮನವರಿಕೆಯಾದಂತೆ ಮಾರ್ಗರೆಟ್ಳಿಗೆ ತಾನು ಮಾನಸಿಕ ಸಂಕೋಲೆಗಳಿಂದ ಮುಕ್ತಳಾಗುತ್ತಿರುವ ಭಾವನೆ ಉಂಟಾಗತೊಡಗಿತು. ಪ್ರಶ್ನೆ-ಸಮಾಧಾನಗಳೂ ಮುಂದುವರಿದಿದ್ದವು.
ಬೋಧನೆಯ ಜೊತೆಜೊತೆಗೆ ಸಾಧನೆಯೂ ಇರುತ್ತಿತ್ತು. ನಿದರ್ಶನಕ್ಕೆ: ’ನಿಮ್ಮ ಅಂತರಂಗವನ್ನು ಅಮನಸ್ಕಗೊಳಿಸಿ ಧ್ಯಾನಿಸಲು ಯತ್ನಿಸಿ’ ಎಂದು ಸ್ವಾಮಿಜೀ ಅಲ್ಲಿದ್ದ ಅನುಯಾಯಿಗಳಿಗೆ ಸೂಚಿಸಿದರು. ಇಂತಹ ಪ್ರಯತ್ನಗಳು ಅನುಯಾಯಿಗಳಲ್ಲಿ ಹೊಸ ಚೇತನವನ್ನು ನಿರ್ಮಿಸತೊಡಗಿದವು. ಸತ್ಯವೆಂಬುದು ಸ್ವಯಂಭುವಾದದ್ದು ಮತ್ತು ಅನ್ಯ ಅವಲಂಬನೆಯ ಆವಶ್ಯಕತೆ ಇಲ್ಲದ್ದು, ಸ್ವಯಂ ತೇಜೋಮಯವಾದದ್ದು – ಎಂಬ ಸ್ವಾಮಿಜೀಯವರ ಸ್ಫುಟೀಕರಣವು ನೇರವಾಗಿ ಅನುಯಾಯಿಗಳ ಹೃದಯವನ್ನೇ ಪ್ರವೇಶಿಸಿತು. ಮಾರ್ಗರೆಟ್ಳಿಗಂತೂ ಧರ್ಮ-ಅಧ್ಯಾತ್ಮಗಳ ಬಗೆಗೆ ತಾನು ಹಿಂದೆ ಕಲ್ಪಿಸಿಕೊಂಡಿದ್ದುದಕ್ಕಿಂತ ಭಿನ್ನವೇ ಆದ ಚಿತ್ರ ಎದುರಾಯಿತು.
* * * * *
ಅದಾದ ಎಂಟೊಂಬತ್ತು ವರ್ಷಗಳು ಕಳೆದ ಮೇಲೆ ಆ ದಿನಗಳನ್ನು ನೆನೆದು ನಿಕಟವರ್ತಿಯೊಬ್ಬರಿಗೆ ಬರೆದ ಪತ್ರದಲ್ಲಿ (೧೯೦೪) ನಿವೇದಿತಾ ಹೀಗೆಂದಿದ್ದರು: “ಆ ಸಮಯದಲ್ಲಿ ಲಂಡನ್ನಿಗೆ ಸ್ವಾಮಿಜೀ ಭೇಟಿ ಆಗಿರದಿದ್ದರೆ ನಾನು ಮನಸ್ಸಿನಲ್ಲಿ ಇನ್ನೂ ತಡಕಾಡುತ್ತಲೇ ಇರುತ್ತಿದ್ದೆನೇನೋ! ನಾನು ಬದುಕಿನಲ್ಲಿ ಯಾವುದಕ್ಕಾಗಿಯೋ ಕಾದಿರುವೆನೆಂಬ ಭಾವನೆಯೇನೋ ನನ್ನೊಳಗೆ ಇದ್ದಿತು. ನಾನು ಎದುರುನೋಡುತ್ತಿದ್ದ ನಿಧಿ ನನಗೆ ಪ್ರಾಪ್ತವಾದದ್ದು ಸ್ವಾಮಿಜೀಯವರಲ್ಲಿ.”
ಮಾರ್ಗರೆಟ್ಳಲ್ಲಿ ಆಗುತ್ತಿದ್ದ ಪರಿವರ್ತನೆಯ ಹಂತಗಳನ್ನು ಸ್ವಾಮಿಜೀ ಗಮನಿಸುತ್ತಲೇ ಇದ್ದರು. ಭಾರತದಲ್ಲಿ ತಾವು ಸಂಕಲ್ಪಿಸಿದ್ದ ಕಾರ್ಯವನ್ನು ಮುನ್ನಡೆಸಬಲ್ಲವಳು ಮಾರ್ಗರೆಟ್ ಎಂದು ಸ್ವಾಮಿಜೀಯವರಲ್ಲಿ ಭರವಸೆ ತೋರಿದ ಮೇಲೂ ಅವರು ಮಾರ್ಗರೆಟ್ಳನ್ನು ತಮ್ಮ ’ಶಿಷ್ಯ’ ಎಂದು ಘೋಷಿಸಲು ಆತುರಪಡಲಿಲ್ಲ. ಶಿಷ್ಯತ್ವವು ಶುದ್ಧಾಂಗವಾಗಿ ಆಕೆಯಿಂದಲೇ ಚಿಮ್ಮಲಿ – ಎಂದು ಕಾದಿದ್ದರು. ಅದು ಹಾಗೆ ಚಿಮ್ಮುತ್ತದೆಂಬ ವಿಶ್ವಾಸವೂ ಅವರಿಗೆ ಇದ್ದಿತು.
೧೮೯೫ರಲ್ಲಿ ಸ್ವಾಮಿಜೀ ಅಮೆರಿಕಕ್ಕೆ ಹಿಂದಿರುಗಿದರು. ಈಗ ಮಾರ್ಗರೆಟ್ ತನ್ನ ಅಷ್ಟು ಸಮಯವನ್ನು ಅಧ್ಯಯನ- ಮಂಥನಗಳಿಗೆ ಮೀಸಲಿರಿಸಿದಳು. ಇಂಗ್ಲಿಷ್ ಅನುವಾದಗಳ ನೆರವಿನಿಂದ ಭಗವದ್ಗೀತೆ, ಉಪನಿ?ತ್ತುಗಳು ಮೊದಲಾದ ವಾಙ್ಮಯದ ಆಳವಾದ ಪರಿಶೀಲನೆಯಲ್ಲಿ ಮುಳುಗಿದಳು.
* * * * *
ಮನೆತನ, ಸಾಮಾಜಿಕ ಪರಿಸರ
ನಿವೇದಿತಾರವರ ಮನೆತನವೇ ದೇಶಭಕ್ತಿಯ ಮತ್ತು ಸುಸಂಸ್ಕೃತಿಯ ಹಿನ್ನೆಲೆಯದಾಗಿತ್ತು. ಅಲ್ಲದೆ ಅವರ ಬಾಲ್ಯದ ಕಾಲವು ಐರ್ಲೆಂಡಿನ ಸ್ವಾಯತ್ತತಾ ಸಂಘ? ಅತ್ಯಂತ ಚೇತಃಪೂರ್ಣವಾಗಿದ್ದ ಕಾಲವೂ ಆಗಿತ್ತು. ಕ್ರಾಂತಿಕಾರಿ ’ಸಿನ್ಫೇನ್’ ಸಂಘಟನೆಯ ಗುಪ್ತಶಾಖೆಗಳು ಐರ್ಲೆಂಡಿನಾದ್ಯಂತ ಸಕ್ರಿಯಗೊಂಡಿದ್ದವು. ಅದೇ ಕಾಲಖಂಡದಲ್ಲಿ ಎಂದರೆ ೧೯ನೇ ಶತಮಾನದ ಅಂತ್ಯದಲ್ಲಿ ತಂತ್ರಜ್ಞಾನಾವೇಶದ ಆಧುನಿಕತೆಯ ಹೆದ್ದೆರೆ ವಿಜೃಂಭಿಸಿತ್ತು. ಹೀಗೆ ಶಿಕ್ಷಣವೂ ಸೇರಿದಂತೆ ಎಲ್ಲ ಜೀವನಕ್ಷೇತ್ರಗಳಲ್ಲಿ ನೂತನತೆಯ ಉರುಬು ಇದ್ದಿತು; ಎ?ಮಟ್ಟಿಗೆ ಎಂದರೆ ವಿಜ್ಞಾನಪ್ರಗತಿಯನ್ನು ಸ್ವೀಕರಿಸುತ್ತಲೇ ಜೊತೆಜೊತೆಗೆ ಅದನ್ನು ಆಧ್ಯಾತ್ಮಿಕ ಆಯಾಮದೊಡನೆ ಸಂಲಗ್ನಗೊಳಿಸಬೇಕಾದುದರ ಆವಶ್ಯಕತೆಯನ್ನು ಮನಗಂಡಿದ್ದ ಏಕೈಕ ದೂರದೃಷ್ಟಿಯ ಸಮನ್ವಯಕಾರರಾಗಿ ಹೊಮ್ಮಿದ್ದವರು ವಿವೇಕಾನಂದರು ಮಾತ್ರ. ಈ ಬೆಳವಣಿಗೆಗಳಿಗೆಲ್ಲ ಅಂತರ್ವಾಹಿನಿಯಾಗಿ ಕೆಲಸ ಮಾಡುತ್ತಿದ್ದುದು ಭಾರತದ ಅನನ್ಯ ಸಾಂಸ್ಕೃತಿಕ ಪರಂಪರೆಯ ಬಗೆಗೆ ಪಾಶ್ಚಾತ್ಯ ವಿದ್ವದ್ವಲಯಗಳಲ್ಲಿ ಮೂಡಿದ್ದ ಪರಿಜ್ಞಾನ.
ಈ ಜಾಗತಿಕ ಪರಿಸರದ ಹಿನ್ನೆಲೆಯಲ್ಲಿ ಜನಿಸಿದವಳಲ್ಲದೆ ಸ್ವಯಂ ಪ್ರತಿಭಾವಂತಳೂ ಸಂವೇದನಶೀಲಳೂ ಆಗಿದ್ದುದರಿಂದ ಮಾರ್ಗರೆಟ್ಳ ಓಜಃಪೂರ್ಣ ವಿಕಸನವೂ ಒಂದು ಚೋದಕ ಮೀಟುಗೋಲಿಗಾಗಿ ಕಾಯುತ್ತಿತ್ತೆಂದೇ ಅನ್ನಿಸುತ್ತದೆ. ಆ ಮೀಟುಗೋಲು ಮಾರ್ಗರೆಟ್ಳನ್ನು ಸ್ಪರ್ಶಿಸಿದುದು ವಿವೇಕಾನಂದರ ರೂಪದಲ್ಲಿ. ಅದೊಂದು ದೈವಾದಿಷ್ಟ್ಯವೆಂದೇ ಎನಿಸುವ ಗುರು-ಶಿಷ್ಯ ಸಮಾಗಮ. ದೈವವಶಾತ್ ಉದ್ಯೋಗನಿಮಿತ್ತ ಮಾರ್ಗರೆಟ್ ಲಂಡನ್ನಿಗೆ ಬಂದು ಸೇರಿದ್ದ ಅನಂತರದ ಅಲ್ಪಕಾಲದಲ್ಲಿ ಲಂಡನ್ನಿನಲ್ಲಿ ವಿವೇಕಾನಂದರು ನೀಡುತ್ತಿದ್ದ ಪ್ರವಚನಗಳು ವ್ಯಾಪಕ ಪ್ರಚಾರ ಪಡೆದಿದ್ದವು. ಮಾರ್ಗರೆಟ್ ನೊಬಲ್ ವಿವೇಕಾನಂದರ ಬೋಧನೆಗಳ ವೈಜ್ಞಾನಿಕತೆಯಿಂದಲೂ ಅನುಭವಗಾಢತೆಯಿಂದಲೂ ಕ್ರಮೇಣ ಪ್ರಭಾವಗೊಂಡದ್ದು, ಆಕೆಯಲ್ಲಿ ಅಸಮಾನ ನಾಯಕತ್ವಗುಣಗಳಿದ್ದುದನ್ನು ಸ್ವಾಮಿಜೀ ಗುರುತಿಸಿದುದು, ಅಲ್ಪಕಾಲದಲ್ಲಿ ಅಸಾಮಾನ್ಯ ಗುರು-ಶಿ? ಬಾಂಧವ್ಯ ಏರ್ಪಟ್ಟದ್ದು – ಇವೆಲ್ಲ ಇತಿಹಾಸ.
ಜಿಜ್ಞಾಸು ಪ್ರವೃತ್ತಿ
ಮುಖ್ಯಸಂಗತಿಯೆಂದರೆ ಮಾರ್ಗರೆಟ್ ನಾವೀನ್ಯದ ಕಾರಣದಿಂದಲೋ ಅವಿಚಾರೋತ್ಸಾಹದಿಂದಲೋ ಸ್ವಾಮಿಜೀಯವರ ಬಳಿಸಾರಿದವಳಲ್ಲ. ಸ್ವಾಮಿಜೀಯವರೂ ಒಬ್ಬ ಪಾಶ್ಚಾತ್ಯ ಭಕ್ತೆ ಸಿಕ್ಕಿದಳೆಂದು ಏಕಾಏಕಿ ಆಕೆಯನ್ನು ಸ್ವೀಕರಿಸಿದವರಲ್ಲ. ಇಬ್ಬರೂ ಒಬ್ಬರನ್ನೊಬ್ಬರು ಪರೀಕ್ಷಿಸಿದ ಮೇಲೇಯೇ ಪರಸ್ಪರ ವಿಶ್ವಾಸವೂ ಅಂಗೀಕಾರವೂ ಏರ್ಪಟ್ಟದ್ದು. ಮೊದಮೊದಲಿಗೆ ಸ್ವಾಮಿಜೀಯವರ ಬೋಧೆಗಳು ಸರಳವೆನಿಸಿದರೂ, ಚಿಂತಿಸುತ್ತಹೋದಂತೆ ಅವುಗಳ ಗಹನತೆ ಮಾರ್ಗರೆಟ್ಳಿಗೆ ಮನವರಿಕೆಯಾಯಿತು. ಸ್ವಾಮಿಜೀಯವರ ಮೆಚ್ಚಿಕೆಗೆ ಮೊದಲಿಗೆ ಪಾತ್ರವಾದದ್ದು ಮಾರ್ಗರೆಟ್ಳ ಜಿಜ್ಞಾಸು ಪ್ರವೃತ್ತಿಯೇ.
`ತಾವು ಹೇಳುತ್ತಿರುವುದು ನನ್ನ ಬುದ್ಧಿಗೇನೋ ಹಿಡಿಸಿದೆ, ಆದರೆ ಅದು ನನ್ನ ಸ್ವಂತ ಆಂತರಂಗಿಕ ಅನುಭವಕ್ಕೆ ಬಂದಿದೆಯೆಂದು ನಾನು ಹೇಳುವ ಸ್ಥಿತಿಯಲ್ಲಿಲ್ಲ’ ಎಂದು ಮಾರ್ಗರೆಟ್ ಹೇಳುತ್ತಿದ್ದುದು ವಿವೇಕಾನಂದರಿಗೆ ಹ?ವನ್ನೇ ತರುತ್ತಿತ್ತು. ಏಕೆಂದರೆ ಅವರು ಭಾವೀ ಶಿ?ರಿಂದ ಅಪೇಕ್ಷಿಸುತ್ತಿದ್ದುದು ಇಂತಹ ಪ್ರಾಮಾಣಿಕತೆಯನ್ನೇ. ಯಾರೇ ಹೇಳಿದುದನ್ನೂ ಪರೀಕ್ಷಿಸಿಯೇ ಸ್ವೀಕರಿಸಿರಿ – ಎಂದೇ ಅವರು ಪದೇಪದೇ ಒತ್ತಿ ಹೇಳುತ್ತಿದ್ದುದು. ಅವರಾದರೋ ತಮ್ಮ ಗುರುಗಳಾದ ಶ್ರೀರಾಮಕೃ?ರನ್ನು ಹೀಗೆ ಪರೀಕ್ಷಣೆಗೆ ಒಳಪಡಿಸಿದ್ದವರೇ.
ಮಾರ್ಗರೆಟ್ಳಿಗೆ ತಾನು ಉತ್ಕಟವಾಗಿ ಅರಸುತ್ತಿದ್ದ ಮಾರ್ಗದರ್ಶಕರು ವಿವೇಕಾನಂದರ ವ್ಯಕ್ತಿತ್ವದಲ್ಲಿ ಗೋಚರಿಸಲು ತಡವಾಗಲಿಲ್ಲ. ಮರುವ? (೧೮೯೬) ಲಂಡನ್ನಿನಲ್ಲಿ ನಡೆದ ಸ್ವಾಮಿಜೀ ಪ್ರವಚನಗಳಲ್ಲಿ ಮಾರ್ಗರೆಟ್ ಭಾಗವಹಿಸುವ ವೇಳೆಗೆ ಈ ತರುಣಿಯಲ್ಲಿ ಅಡಗಿರುವುದು ಒಂದು ಅಗ್ನಿಪುಂಜವೇ ಎಂಬುದು ಸ್ವಾಮಿಜೀಯವರ ಮನಸ್ಸಿಗೆ ಖಾತರಿಯಾಗಿತ್ತು.
ಆಧ್ಯಾತ್ಮಿಕತೆಯ ಬಗೆಗೆ ಮಾತ್ರವಲ್ಲದೆ ಮಹಿಳೆಯರ ಏಳ್ಗೆ, ಶಿಕ್ಷಣಪದ್ಧತಿಯ ಉನ್ನತೀಕರಣ ಮೊದಲಾದ ವಿ?ಯಗಳ ಬಗೆಗೂ ಸ್ವಾಮಿಜೀಯವರ ಪ್ರವಚನಗಳು ನಡೆದಿದ್ದವು. ಅವರ ಮಾತುಗಳಲ್ಲಿಯೂ ಪತ್ರಗಳಲ್ಲಿಯೂ ಘನೀಕೃತವಾಗಿದ್ದ ಭಾವತೀವ್ರತೆಯೂ, ಜಗತ್ತಿನ ಶ್ರೇಯದ ಸಾಧನೆಯ ಬಗೆಗೆ ಅವರಲ್ಲಿದ್ದ ಆವೇಶವೂ ಮಾರ್ಗರೆಟ್ಳನ್ನು ಅಯಸ್ಕಾಂತದಂತೆ ಸೆಳೆದವು.
* * * * *
ನಿವೇದನೆ
ತಮ್ಮ ಉದಾತ್ತ ಜೀವನಲಕ್ಷ್ಯದ ಸಾಧನೆಯಲ್ಲಿ ನಾನು ನನ್ನಿಂದಾದ ಸೇವೆಯನ್ನು ಸಲ್ಲಿಸಬಯಸುವೆ – ಎಂದು ಸ್ವಾಮಿಜೀಯವರಿಗೆ ಮಾರ್ಗರೆಟ್ ಮಾತುಕೊಟ್ಟಿದ್ದುದು ಮೊದಲಿಗೆ ಆವೇಶಪ್ರೇರಿತವಾಗಿದ್ದಿರಲೂಬಹುದು. ಆದರೆ ಅಲ್ಪಕಾಲದಲ್ಲಿ ಇದೇ ನನ್ನ ಜೀವನಪಥ ಆಗಬೇಕು ಎಂಬ ನಿಶ್ಚಯ ಮಾರ್ಗರೆಟ್ಳ ಮನಸ್ಸಿನಲ್ಲಿ ಹರಳುಗಟ್ಟಿತು.
೧೮೯೭ರ ಆರಂಭದಲ್ಲಿ ಸ್ವಾಮಿಜೀ ಭಾರತಕ್ಕೆ ಮರಳಿದಾಗ ಅವರಿಗೆ ಲಭಿಸಿದ ಅಭೂತಪೂರ್ವ ಸ್ವಾಗತವೂ ಅದು ನೂತನ ಅಧ್ಯಾತ್ಮಕ್ರಾಂತಿಗೆ ನಾಂದಿಯಾದದ್ದೂ ಈಗ ಇತಿಹಾಸ.
ತಾನು ಭಾರತಕ್ಕೆ ವಲಸೆಬರುವ ನಿರ್ಧಾರವನ್ನು ಮಾರ್ಗರೆಟ್ ಪತ್ರಗಳಲ್ಲಿ ಪುನರುಚ್ಚರಿಸಿದರಾದರೂ ವ್ಯವಹಾರಪ್ರಜ್ಞೆ ಇದ್ದ ಸ್ವಾಮಿಜೀಯವರು ಆಕೆಗೆ ಇನ್ನ? ಅಂತರ್ಮಥನಕ್ಕೆ ಅವಕಾಶವಾಗಲೆಂಬ ದೃಷ್ಟಿಯಿಂದ ಇಂಗ್ಲೆಂಡಿನಲ್ಲಿ ಉಳಿದೇ ಆಕೆ ಮಾಡಬಹುದಾದ ಮಾನವಸೇವೆ ಬಹಳಷ್ಟು ಇದೆಯೆಂದು ಆಕೆಗೆ ಪತ್ರ ಬರೆದರು. ಆದರೆ ಅಂತಿಮವಾಗಿ ಮಾರ್ಗರೆಟ್ಳ ಮನೋನಿಶ್ಚಯವೇ ಗೆದ್ದಿತು. ಇನ್ನಷ್ಟು ಪತ್ರವ್ಯವಹಾರ ನಡೆದ ಮೇಲೆ ಹಡಗಿನಲ್ಲಿ ಮಾರ್ಗರೆಟ್ ಭಾರತವನ್ನು ತಲಪಿದುದು ೧೮೯೮ರ ಜನವರಿ ೨೮ರಂದು.
(ಸಶೇಷ)