ನೆರೆಯ ಮ್ಯಾನ್ಮಾರಿನಿಂದ ಭಾರತಕ್ಕೆ ನುಸುಳಿ ಬರುತ್ತಿರುವ ರೊಹಿಂಗ್ಯಾ ಮುಸ್ಲಿಮರು ಅಕ್ರಮವಲಸಿಗರಾಗಿದ್ದು ಅವರನ್ನು ಇರಗೊಡುವುದು ಭಾರತದ ಭದ್ರತೆಯ ದೃಷ್ಟಿಯಿಂದ ಅಪಾಯಕರವೆಂಬ ಕೇಂದ್ರಸರ್ಕಾರದ ನಿಲವನ್ನು ದೇಶವೆಲ್ಲ ಸಮರ್ಥಿಸಿದೆ. ಯಾವುದೇ ಲೆಕ್ಕದಂತೆ ಅವರು ನಿರಾಶ್ರಿತರೂ ಅಲ್ಲವೆಂಬುದೂ ಸ್ಪಷ್ಟವಿದೆ. ಖಾಸಗಿ ಸೇನಾಪಡೆಗಳನ್ನು ರಚಿಸಿಕೊಂಡು ಸ್ಥಳೀಯ ಬೌದ್ಧರ ಮೇಲೆ ಮಾತ್ರವಲ್ಲದೆ ಪೊಲೀಸ್ ದಳಗಳ ಮೇಲೆಯೂ ದೌರ್ಜನ್ಯವನ್ನೂ ಸಶಸ್ತ್ರ ದಾಳಿಗಳನ್ನೂ ನಡೆಸುತ್ತ ಬಂದಿರುವ ಕಾರಣದಿಂದ ಮ್ಯಾನ್ಮಾರ್ ಸೇನೆಯ ತೀಕ್ಷ್ಣ ಕಾರ್ಯಾಚರಣೆಗೆ ಈಡಾಗಿರುವ ’ಚಾರಿತ್ರ್ಯ’ದವರಾದ ರೊಹಿಂಗ್ಯಾರಿಗೆ ಅನುಕಂಪ ಸಲ್ಲುತ್ತದೆಂದು ಭಾರತದೊಳಗಿನ ವಾಮಪಂಥಿ ವಲಯಗಳವರು ಕೇಂದ್ರಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಿರುವುದು ’ಸದ್ಗುಣವಿಕೃತಿ’ಯ ಪರಾಕಾ?ಯಾಗಿದೆ. ತಮ್ಮದೇ ದಾಳಿಕೋರತನದಿಂದ ಉಚ್ಚಾಟಿತರಾಗಿರುವ ರೊಹಿಂಗ್ಯಾಗಳಿಗೆ ಜಗತ್ತಿನ ಐವತ್ತಕ್ಕೂ ಮಿಗಿಲಾದ ಮುಸ್ಲಿಂ ರಾ?ಗಳಾವವೂ ಆಸರೆ ನೀಡಲು ನಿರಾಕರಿಸಿವೆ. ಇಂತಹವರಿಗೆ ಭಾರತ ನಡೆಮುಡಿ ಹಾಸಬೇಕೆಂದು ವಾಮಪಂಥೀಯರೂ ಹಲವರು ಕಾನೂನು ’ತಜ್ಞ’ರೂ ವಾದಿಸುತ್ತಿರುವುದನ್ನು ಮನೋವೈಕಲ್ಯವೆಂದಷ್ಟೇ ಭಾವಿಸಬೇಕಾಗಿದೆ. ಅಕ್ರಮವಲಸಿಗರು ಜಮ್ಮು-ಕಾಶ್ಮೀರದ ಹಿಂದೂ ಬಹುಸಂಖ್ಯಾತ ಭಾಗಗಳಲ್ಲೇ ದಟ್ಟಯಿಸುತ್ತಿರುವುದೂ ಅವರು ಅಲ್ಲಿಯ ಜನಸಂಖ್ಯಾವಿನ್ಯಾಸದಲ್ಲಿ ಅಸಮತೋಲ ನಿರ್ಮಿಸುವ ಉದ್ದೇಶ ಹೊಂದಿರುವುದನ್ನು ಸ್ಪಷ್ಟಪಡಿಸುತ್ತದೆ. ಹಿಂದಿನ ಯು.ಪಿ.ಎ. ಅಧಿಕಾರಾವಧಿಯಲ್ಲಿ ನುಸುಳುವಿಕೆ ಆರಂಭವಾಗಿ ಇದೀಗ ೪೦,೦೦೦ದಷ್ಟಾಗಿರುವ ಈ ಅಕ್ರಮವಲಸಿಗರಿಗೆ ಆಸರೆ ಮುಂದುವರಿಸುವುದು ಆತ್ಮಘಾತಕವೆಂಬ ಮತ್ತು ದೇಶದ ಭದ್ರತೆಯ ದೃಷ್ಟಿಯಿಂದ ಹಾನಿಕರವೆಂಬ ಕೇಂದ್ರಸರ್ಕಾರದ ಧೋರಣೆ ಸತರ್ಕವೂ ಅನಿವಾರ್ಯವೂ ಆಗಿದೆ.
ರೊಹಿಂಗ್ಯಾಗಳಿಗೆ ಆಸರೆ ಸಲ್ಲದು
Month : November-2017 Episode : Author : ಎಸ್.ಆರ್. ರಾಮಸ್ವಾಮಿ