ಇಂಗ್ಲೆಂಡಿನ ಪರಿಸರದಲ್ಲಿ ಬೆಳೆದಿದ್ದ ಮಾರ್ಗರೆಟ್ಳಿಗೆ ಪೂರ್ಣ ಅಪರಿಚಿತವಾಗಿದ್ದ ಭಾರತಕ್ಕೆ ವಲಸೆಹೋಗುವ ನಿರ್ಧಾರ ತಳೆಯುವುದು ಅತ್ಯಂತ ಕ್ಲೇಶದ ಸನ್ನಿವೇಶವೇ ಆಗಿದ್ದಿರಬೇಕು. ಆದರೆ ತನ್ನ ಲಕ್ಷ್ಯದ ಬಗೆಗೆ ಮನೋದಾರ್ಢ್ಯ ಇದ್ದುದರಿಂದಲೂ ಪರಿಶ್ರಮಕ್ಕೆ ಎಂದೂ ಹಿಂದೆಗೆಯುವ ಪ್ರವೃತ್ತಿ ಇರದಿದ್ದುದರಿಂದಲೂ ಅಲ್ಪಕಾಲದಲ್ಲಿ ಆಕೆ ಈ ಬಗೆಯ ದ್ವಂದ್ವಗಳನ್ನು ಮೀರಲು ಶಕ್ತಳಾದಳು. ಎಲ್ಲಕ್ಕಿಂತ ಮಿಗಿಲಾಗಿ ಸ್ವಂತ ಸುಖದ ಅಪೇಕ್ಷೆಗಳಿಂದ ಆಕೆ ಮುಕ್ತಳಾಗಿದ್ದುದರಿಂದಲೂ ತ್ಯಾಗಜೀವನದಿಂದ ಮಾತ್ರ ತನಗೆ ನೆಮ್ಮದಿ ದೊರೆಯಬಲ್ಲದೆಂಬ ಮಾನಸಿಕತೆ ಹರಳುಗಟ್ಟಿದ್ದುದರಿಂದಲೂ ಆಕೆ ಇಂತಹ ಸವಾಲನ್ನು ಎದುರಿಸಲು ಸಿದ್ಧಳಾಗಿರಬೇಕೆನಿಸುತ್ತದೆ. ಆಕೆ ತನ್ನ ನಿರ್ಣಯವನ್ನು ಇನ್ನಷ್ಟು ಮತ್ತಷ್ಟು ತಾಳ್ಮೆಯಿಂದ ಪುನರ್ವಿಮರ್ಶೆ ಮಾಡಿಕೊಳ್ಳಬೇಕೆಂದು ಸ್ವಾಮಿಜೀ ಬಗೆಬಗೆಯಾಗಿ ಆಕೆಯನ್ನು ಎಚ್ಚರಿಸಿದ್ದರು. ಭಾರತದ ಸಾಮಾಜಿಕ ಪರಿಸ್ಥಿತಿಯ ಬಗೆಗೆ ಇಲ್ಲಸಲ್ಲದ ಚಿತ್ರಣ ನೀಡಿ ಆಕೆಯಲ್ಲಿ ಜುಗುಪ್ಸೆಯನ್ನೂ ಗಾಬರಿಯನ್ನೂ ಹುಟ್ಟಿಸಲು ಯತ್ನಿಸಿದ್ದವರಿಗೂ ಕಡಮೆಯಿಲ್ಲ. ಅಂತಿಮವಾಗಿ ಆಕೆಯ ಅಂತರಂಗದಾರ್ಢ್ಯದ್ದೇ ಮೇಲುಗೈಯಾಯಿತು.
ಒಮ್ಮೆ ಆಕೆಯ ನಿಶ್ಚಯದ ಮನವರಿಕೆಯಾದೊಡನೆ ಸ್ವಾಮಿಜೀ ಆಕೆಯ ಭಾರತದಲ್ಲಿನ ಆರಂಭದ ದಿನಗಳು ಕ್ಲೇಶಮಯವಾಗದಿರುವಂತೆ ಮಾಡಲು ಯತ್ನಿಸತೊಡಗಿದರು.
ಪೌರುಷೋಪಾಸನೆ
ಹಡಗಿನಲ್ಲಿ ನಡೆದ ಒಂದು ಸಂವಾದದಲ್ಲಿ ನಿವೇದಿತಾರವರಿಗೆ ಸ್ವಾಮಿಜೀ ಹೇಳಿದ ಮಾತು ಮಾರ್ಮಿಕವಾಗಿತ್ತು: “ಬೇರೆಬೇರೆಯವಾಗಿ ಕಾಣುವ ಈಗಿನ ಎಲ್ಲ ಸಮಸ್ಯೆಗಳಿಗೆ ಇರುವ ಏಕೈಕ ಪರಿಹಾರವೆಂದರೆ ಪೌರುಷೋಪಾಸನೆ. ನಾನು ಮಾನವತೆಗೆ ನೀಡಬಹುದಾಗಿರುವ ಸಂದೇಶವೆಂದರೆ ಇದೇ.”
ಈ ಜಾಡಿನ ಚಿಂತನೆಗೆ ಸ್ವಾಮಿಜೀ ಇತಿಹಾಸದ ಸಮರ್ಥನೆಯನ್ನೂ ನೀಡುತ್ತಿದ್ದರು. ವಾಸ್ತವವಾಗಿ ಹಿಂದೂಧರ್ಮದ ಬಿಳಲೇ ಆಗಿದ್ದ ಬೌದ್ಧಮತವು ಪ್ರಕಾಶಮಯವಾಗಿದ್ದ ಕಾಲ ಒಂದಿತ್ತು. ಅನಂತರ ವಿಕೃತಿಗಳು ತಲೆದೋರಿ ಸಂನ್ಯಾಸಿಪರಂಪರೆ ಹರಡಿತು. ವಿಚಾರಶೂನ್ಯ ಅಹಿಂಸಾನುಸರಣೆಯು ಹಿಂದೂಧರ್ಮ, ಬೌದ್ಧಮತ – ಎರಡನ್ನೂ ದುರ್ಬಲಗೊಳಿಸಿತು. ಈ ನಿಸ್ಪತ್ತ್ವತೆಯು ಶತಮಾನಗಳುದ್ದಕ್ಕೂ ಮುಂದುವರಿಯಿತು. ಈಗ ಪೌರುಷಪರತೆಯನ್ನು ಮತ್ತೆ ಗಳಿಸಿಕೊಳ್ಳಬೇಕಾಗಿದೆ – ಎನ್ನುತ್ತಿದ್ದರು ಸ್ವಾಮಿಜೀ. ಈ ಪ್ರಸ್ಥಾನವನ್ನೇ ನಿವೇದಿತಾರವರು ಪ್ರಚುರಗೊಳಿಸಿದ ’ಆಕ್ರಾಮಕ ಹಿಂದೂಧರ್ಮ’ (’ಅಗ್ರೆಸಿವ್ ಹಿಂಡೂಯಿಸ್ಮ್’) ಎಂಬ ನುಡಿಗಟ್ಟು ಸಂಕೇತಿಸಿದುದು.
ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಪೌರುಷೋಪಾಸನೆ ಸುಲಭವಾಗಿ ನಡೆಯುವಂತಹದಲ್ಲ. ಪೌರುಷವಂತರಾಗಬೇಕಾದರೆ ಸಮಾಜವು ಮೊದಲು ಸುಸಂಘಟಿತವಾಗಬೇಕಾಗುತ್ತದೆ.
ಸಮಾಜವು ದಾರ್ಢ್ಯವಂತವಾಗಬೇಕೆಂಬ ಮಾತನ್ನು ಅನ್ಯ ನಾಯಕರೂ ಹಲವೊಮ್ಮೆ ಆಡುತ್ತಿದ್ದುದುಂಟು. ಆದರೆ ಸ್ವಾಮಿಜೀ ಪೌರುಷವನ್ನು ಪ್ರತಿಪಾದಿಸಿದುದು ಇತಿಹಾಸಪ್ರಜ್ಞೆಯ ಜೊತೆಗೆ ದಾರ್ಶನಿಕವಾಗಿ, ಉಪನಿ?ತ್ತುಗಳ ಆಧಾರದ ಮೇಲೆ.
* * * * * *
ಸವಾಲುಗಳ ಸರಣಿ
ಮಾರ್ಗರೆಟ್ ಭಾರತಕ್ಕೆ ಬಂದ ಸನ್ನಿವೇಶವನ್ನು ಒಂದು ಕುಲುಮೆಗೆ ಹೋಲಿಸಬಹುದು. ಒಂದುಕಡೆ ತಮ್ಮ ಕಲ್ಪನೆಯ ಆಧ್ಯಾತ್ಮಿಕ ಸಾಮ್ರಾಜ್ಯಕ್ಕೆ ಅವಶ್ಯವಿದ್ದ ಅಸ್ತಿಭಾರವನ್ನು ನಿರ್ಮಿಸುವ ಹೊಣೆ, ಇನ್ನೊಂದುಕಡೆ ತಮ್ಮ ಸಹಚರ-ಸಂನ್ಯಾಸಿಗಳ ದೃಕ್ಪಥವನ್ನು ವಿಸ್ತಾರಗೊಳಿಸಿ ಕೇವಲ ಧಾರ್ಮಿಕ ಪ್ರಾಕಾರದಿಂದ ಹೊರತಂದು ಸಾಮಾಜಿಕೀಕರಣಗೊಳಿಸುವ ಕಾರ್ಯ, ಮತ್ತೊಂದುಕಡೆ ತಮ್ಮ ಲಕ್ಷ್ಯಸಾಧನೆಗೆ ಆ ವೇಳೆಗಾಗಲೇ ಒಂದಷ್ಟು ಪ್ರತಿಷ್ಠೆಗಳಿಸಿಕೊಂಡಿದ್ದ (ದಿವ್ಯಜ್ಞಾನ ಸಮಾಜ ಮೊದಲಾದ) ಸಂಘಟನೆಗಳವರಿಂದ ಉಂಟಾಗುತ್ತಿದ್ದ ಕಿರುಕುಳಗಳ ನಿರ್ವಹಣೆ; – ಇಂತಹ ಹಲವಾರು ಸವಾಲುಗಳು ಎದುರಿಗೆ ಇದ್ದವು. ಅಚಲ ಮನೋದಾರ್ಢ್ಯ ಮತ್ತು ತಾವು ಪಾಶ್ಚಾತ್ಯ ಜಗತ್ತಿನಲ್ಲಿ ಸಾಧಿಸಿದ್ದ ದಿಗ್ವಿಜಯ – ಈ ಅಮೂರ್ತ ಬಂಡವಾಳದ ಆಧಾರದ ಮೇಲೆ ಸ್ವಾಮಿಜೀ ಹಲವು ದೃಷ್ಟಿಗಳಿಂದ ಅನನ್ಯವೆನ್ನಬೇಕಾದ ದಿಗಂತವ್ಯಾಪಿ ಅಧ್ಯಾತ್ಮಸೌಧವನ್ನು ಎಬ್ಬಿಸಬೇಕಾಗಿತ್ತು.
ಎಲ್ಲವೂ ಸಮಸ್ಯೆಗಳೇ ಆಗಿದ್ದ ದಿನಗಳು ಅವು. ಆರಂಭದ ದಿನಗಳಲ್ಲಿ ಪಾಶ್ಚಾತ್ಯ ಶಿ?ರಿಗೆ ಗುರುಮಹಾರಾಜರ ಗರ್ಭಗೃಹಕ್ಕೆ ಪ್ರವೇಶ ಸರಿಯೇ? – ಎಂಬಂತಹವೂ ಕ್ಲಿಷ್ಟ ಸಮಸ್ಯೆಗಳೇ ಆಗಿದ್ದವು! ಸ್ವಾಮಿಜೀ ತಮ್ಮ ವ್ಯಕ್ತಿತ್ವಬಲದ ಅಧಿಕಾರದಿಂದ ಈ ಸ್ಥಿತಿಯನ್ನು ದಾಟಬೇಕಾಯಿತು.
ರಾಮಕೃಷ್ಣ ಮಠವನ್ನು ಆರಂಭಕಾಲದಲ್ಲಿ ದೃಢಗೊಳಿಸಬೇಕಾದುದು ಆದ್ಯತೆಯನ್ನು ಬೇಡುತ್ತಿತ್ತು. ಸಹಚರರನ್ನು ಸ್ವಾಮಿಜೀ ತಾಳ್ಮೆಯಿಂದ ಶ್ರುತಿಗೊಳಿಸಿದರು.
ಪಕ್ಕದಲ್ಲಿ ದೊಡ್ಡಗೆರೆ ಎಳೆದ ಬೀರಬಲನಂತೆ ಸ್ವಾಮಿಜೀ ತಮ್ಮ ಆದರ್ಶದ ಭವ್ಯತೆಯ ಚಿತ್ರವನ್ನು ಮುಂದೊಡ್ಡಿ ಸಹಚರರ ಪರಿಮಿತಿಗಳನ್ನು ನಿವಾರಿಸಿದರು. ಜೊತೆಜೊತೆಗೇ ಅವರಿಗೆ ಕಠಿಣ ಪ್ರಶಿಕ್ಷಣವನ್ನೂ ನೀಡುತ್ತ ಹೋದರು.
೧೮೯೮ರ ಆರಂಭದಲ್ಲಿ ಅಲ್ಪಕಾಲದ ಹಿಂದೆ ಸ್ಥಾಪನೆಗೊಂಡಿದ್ದ ಮಠಕ್ಕೆ ಹೆಚ್ಚಿನ ಪ್ರಚುರತೆಯನ್ನು ಆಕರ್ಷಿಸುವ ದೃಷ್ಟಿಯಿಂದ ಗುರುಮಹಾರಾಜರ ಜಯಂತಿಯನ್ನು ಸ್ವಾಮಿಜೀ ಒಂದು ಸಂಭ್ರಮಪೂರ್ಣ ಗ್ರಾಮೀಣ ಉತ್ಸವದಂತೆ ಏರ್ಪಡಿಸಿದರು. ವಿಧವಿಧ ಅಲಂಕರಣಗಳು, ದೀಪಗುಚ್ಛಗಳು, ಸಾಮೂಹಿಕ ಗಾಯನ, ಸಮೃದ್ಧ ಪ್ರಸಾದವಿತರಣೆ, ಸುಗಂಧಪರಿಮಳದ ಆವರಣ; – ಆ ಸಂಭ್ರಮೋತ್ಸಾಹ ಇಡೀ ಜನತೆಯನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ಅದರ ಆಯೋಜನೆಯಲ್ಲಿ ಸ್ವಾಮಿಜೀಯವರಿಗೆ ಕೆಲವು ಸೂಕ್ಷ್ಮ ಆಶಯಗಳೂ ಇದ್ದವು. ಹಲವು ಹೊಸ ಕಲ್ಪನೆಗಳನ್ನು ಒಳಗೊಂಡ ಆಶ್ರಮಕ್ಕೆ ಸಾಮಾಜಿಕ ಸ್ವೀಕೃತಿ ದೊರೆಯಲಿ ಎಂಬುದು ಒಂದು ಲಕ್ಷ್ಯವಾಗಿದ್ದರೆ, ತಮ್ಮ ನಿಕಟವರ್ತಿಗಳ ಸ್ವಭಾವಸಹಜ ಮಡಿವಂತಿಕೆಯ ಚೌಕಟ್ಟನ್ನು ಲಂಘಿಸುವುದು ಇನ್ನೊಂದು ಆಶಯ ಆಗಿತ್ತು.
ಪ್ರತಿಕೂಲ ಪರಿಸರ
ಮುಖ್ಯ ಸಂಗತಿಯೊಂದನ್ನು ನೆನಪಿಡಬೇಕು. ಆನಂತರದ ಕಾಲದಲ್ಲಿ ರಾಮಕೃಷ್ಣ ಮಠವು ಹೆಚ್ಚು ಹೆಚ್ಚು ಬೆಂಬಲಿಗರನ್ನೂ ಅನುಯಾಯಿಗಳನ್ನೂ ಆಕರ್ಷಿಸಿತಾದರೂ, ಸ್ವಾಮಿಜೀ ಭಾರತಕ್ಕೆ ಹಿಂದಿರುಗಿದ ಆರಂಭಕಾಲದಲ್ಲಿ ಸಂಪನ್ಮೂಲಗಳ ತೀವ್ರ ಕೊರತೆ ಇದ್ದಿತು. ಈ ಸಂಕೀರ್ಣತೆಗಳನ್ನು ಸ್ವಾಮಿಜೀ ನಿಭಾಯಿಸಲು ಶಕ್ತರಾದದ್ದು ಅವರು ಪಾಶ್ಚಾತ್ಯ ಜಗತ್ತಿನಲ್ಲಿ ಸಾಧಿಸಿದ್ದ ದಿಗ್ವಿಜಯದ ಹಿನ್ನೆಲೆಯಿಂದ ಮಾತ್ರ. ಈ ಹಿನ್ನೆಲೆಯಲ್ಲಿ ನಿವೇದಿತಾರವರ ಆರಂಭದ ದಿನಗಳು ಸರಳವೇನಾಗಿರಲಿಲ್ಲ. ಆ ಐತಿಹಾಸಿಕ ಸಾಧನೆಯ ನೆನಪು ಹಸಿರಾಗಿರುವಾಗಲೇ ಮುಂದಿನ ಬೃಹದ್ ಯೋಜನೆಗೆ ದೃಢವಾದ ಅಸ್ತಿಭಾರವನ್ನು ಸ್ವಾಮಿಜೀ ನಿರ್ಮಿಸಬೇಕಾಗಿತ್ತು. ಆದ್ಯತೆಯ ವಿ?ಯವೆಂದರೆ ಸಹ-ಸಂನ್ಯಾಸಿಗಳಿಗೆ ಕನಿಷ್ಟ ಜೀವನಸೌಕರ್ಯಗಳನ್ನಾದರೂ ಕಲ್ಪಿಸುವುದು. ಒಂದು ಸುವ್ಯವಸ್ಥ ’ಆಶ್ರಮ’ವನ್ನು ನೆಲೆಗೊಳಿಸಬೇಕಾಗಿತ್ತು. ಆ ದಿನಗಳಲ್ಲಿ ಸ್ವಾಮಿಜೀಯವರ ನಿಕಟವಲಯದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿಯೇ ಆರ್ಥಿಕವಾಗಿ ಅನುತ್ಸಾಹಕರ ವಾತಾವರಣ ಇದ್ದಿತು. ಸಂನ್ಯಾಸಿಗಳ ಜೀವಿಕೆಗೆ ಪೋ?ಣೆ ನೀಡುವ ಮನಸ್ಸು ಮಾಡಬಲ್ಲವರು ತೀರಾ ವಿರಳವಾಗಿದ್ದರು.
ಈ ಸನ್ನಿವೇಶವನ್ನು ನೆನೆಯುವಾಗ ನಿವೇದಿತಾರವರು ಬಾಹ್ಯ ಸಂದರ್ಭಗಳನ್ನು ಲೆಕ್ಕಿಸದೆ ತಾವು ನಿಶ್ಚಯಿಸಿಕೊಂಡಿದ್ದ ಮಾರ್ಗದಲ್ಲಿ ಅವಿಚಲವಾಗಿ ಕ್ರಮಿಸಿದುದರ ಸಾಹಸವಂತಿಕೆಯನ್ನು ಮೆಚ್ಚದಿರಲಾಗದು.
ಸ್ವಾಮಿಜೀಯವರಾದರೋ ತಮ್ಮ ತಪೋಬಲದಿಂದ ಒಂದೊಂದಾಗಿ ಸಮಸ್ಯೆಗಳಿಗೆ ಪರಿಹಾರಮಾರ್ಗಗಳನ್ನು ಕಂಡುಕೊಳ್ಳುತ್ತ ಸಾಗಿದ್ದರು.
ಆಶ್ರಮವನ್ನು ಸಜ್ಜುಗೊಳಿಸುವುದೇ ದು?ರವೆನಿಸಿದ್ದರೂ ಸ್ವಾಮಿಜೀ ತಮ್ಮ ಹಲವರು ಸಹಚರರನ್ನು ಆ ದಿನಗಳಲ್ಲಿಯೆ ಕ್ಷಾಮಪರಿಹಾರಕಾರ್ಯಗಳಿಗಾಗಿ ನಿಯೋಜಿಸಿ ಕಳಿಸಿದುದು ಅವರ ಸಂಕಲ್ಪದಾರ್ಢ್ಯದ ದ್ಯೋತಕ.
* * * * *
ಹಿಂದೆ ಸೂಚಿಸಿದಂತೆ ಮಾರ್ಗರೆಟ್ಳ ಮನೋದಾರ್ಢ್ಯವನ್ನು ಮತ್ತೆಮತ್ತೆ ಒರೆಗೆ ಹಚ್ಚಿ ನೋಡಿದ ಮೇಲೆಯೆ ಆಕೆಯನ್ನು ಸ್ವಾಮಿಜೀ ತಮ್ಮ ಶಿ?ಯಾಗಿ ಪೂರ್ಣಪ್ರಮಾಣದಲ್ಲಿ ಅಂಗೀಕರಿಸಿದುದು.
ಬಗೆಬಗೆಯ ಅನಿಶ್ಚಿತತೆಗಳ ನಡುವೆ ಮಾರ್ಗರೆಟ್ಳ ಮನಸ್ಸಿಗೆ ಸ್ಥಿರತೆಯನ್ನು ನೀಡಿದ್ದ ಒಂದು ಪ್ರಮುಖ ಸಂಗತಿಯೆಂದರೆ ಸ್ವಾಮಿಜೀಯವರ ಆಸರೆ ತನಗೆ ಸದಾ ಇರುತ್ತದೆಂಬ ಭರವಸೆ. ಸ್ವಾಮಿಜೀ ಆಕೆಗೆ ಬರೆದಿದ್ದ ಒಂದು ಪತ್ರ ಸ್ವಾರಸ್ಯಕರ: “ಆನೆಯ ದಂತವು ಒಮ್ಮೆ ಹೊರಕ್ಕೆ ಹೊಮ್ಮಿತೆಂದರೆ ಅದು ಮುಂದೆಂದೂ ಒಳಕ್ಕೆ ಸೇದಿಕೊಂಡು ಹೋಗುವುದಿಲ್ಲ.” ತಾತ್ಪರ್ಯವೆಂದರೆ ಎಂತಹ ಪ್ರತಿಕೂಲ ಸನ್ನಿವೇಶಗಳಲ್ಲಿಯೂ ಸ್ವಾಮಿಜೀ ತನ್ನ ಬೆಂಗಾವಲಿಗೆ ಇರುತ್ತಿದ್ದರೆಂಬುದು.
’ಬ್ರಹ್ಮಚಾರಿಣಿ’
ಮಾರ್ಗರೆಟ್ ಭಾರತಕ್ಕೆ ಕಾಲಿರಿಸಿ ಎರಡು ತಿಂಗಳು ಕಳೆದಿದ್ದವು. ಗುರುಮಹಾರಾಜರ ಜಯಂತ್ಯುತ್ಸವವಾದ ತಿಂಗಳು ಕಳೆದ ಮೇಲೆ ದೀಕ್ಷಾವಿಧಿಯನ್ನು ಆಯೋಜಿಸಲಾಯಿತು (೨೫ ಮಾರ್ಚ್ ೧೮೯೮). ಈಗ ಮಾರ್ಗರೆಟ್ ರಾಮಕೃ? ಮಠದ ಅಧಿಕೃತ ಬ್ರಹ್ಮಚಾರಿಣಿಯಾದಂತಾಯಿತು. ಆಕೆಗೆ ಸ್ವಾಮಿಜೀ ’ನಿವೇದಿತಾ’ ಎಂಬ ಹೆಸರನ್ನಿತ್ತುದು ಆ ವಿಧಿಯೊಡನೆಯೇ. ತಾತ್ತ್ವಿಕವಾಗಿ ಆ ವೇಳೆಗೇ ಸೇವೆಗೆ ನಿವೇದನೆಗೊಂಡಿದ್ದ ಅನುಯಾಯಿಗೆ ಈ ಹೆಸರು ಅನ್ವರ್ಥವಾಗಿಯೇ ಇದ್ದಿತು.
ನಿವೇದಿತಾಳ ಪಾಲಿಗೆ ಅದೊಂದು ಧನ್ಯತೆಯ ಕ್ಷಣವೆನಿಸಿದುದು ಸಹಜ. ಅದರ ಜೊತೆಗೇ “ಸ್ವಾಮಿಜೀಯವರ ನಿರೀಕ್ಷೆಯನ್ನು ನಾನು ಪೂರೈಸಬಲ್ಲೆನೆ?” ಎಂದು ಸ್ವಲ್ಪಮಟ್ಟಿನ ಆತಂಕವೂ ಇರದಿರಲಿಲ್ಲ.
ಅದೊಂದು ಐತಿಹಾಸಿಕ ತಿರುವಿನ ಸಂದರ್ಭವೆಂದು ಸ್ವಾಮಿಜೀಯವರಿಗೂ ಅನಿಸಿತು. ಅವರು ಭಾವೋದ್ವಿಗ್ನರಾಗಿ ತಾವು ಗುರಮಹಾರಾಜರ ಸನ್ನಿಧಿಯಲ್ಲಿ ಹಾಡುತ್ತಿದ್ದ ಗೀತಗಳನ್ನು ತಲ್ಲೀನತೆಯಿಂದ ಹಾಡತೊಡಗಿದರು.
ಅಲ್ಪಸಮಯದಲ್ಲಿ ನಿವೇದಿತಾರವರ ಪ್ರತಿಭೆಯು ಹೆಚ್ಚುಹೆಚ್ಚು ಜನರ ಗಮನಕ್ಕೆ ಬರಲೆಂಬ ಉದ್ದೇಶದಿಂದ ಸ್ವಾಮಿಜೀ ಹಲವೆಡೆ ಆಕೆಯ ಉಪನ್ಯಾಸಗಳನ್ನು ಏರ್ಪಡಿಸತೊಡಗಿದರು.
ಅನತಿಕಾಲದಲ್ಲಿ ಮಾತೆ ಶಾರದಾದೇವಿಯವರ ವಾತ್ಸಲ್ಯಪೂರ್ಣ ಆಶೀರ್ವಾದವೂ ದೊರೆತದ್ದು ಅವಳಲ್ಲಿ ಉಲ್ಲಾಸವನ್ನೂ ಆತ್ಮವಿಶ್ವಾಸವನ್ನು ತುಂಬಿತು.
ಸ್ವಾಮಿಜೀಯವರೊಡನೆ ನಡೆದ ಹಿಮಾಲಯಪರ್ಯಟನದಲ್ಲಿ ಆಗಿನ ಬ್ರಿಟಿ? ಪ್ರಭುತ್ವದ ಬಿಗಿಮುಷ್ಟಿಯ ಅನುಭವವೂ ಆಗದಿರಲಿಲ್ಲ. ಸ್ವಾಮಿಜೀ ಸಂಕಲ್ಪಿಸಿದ್ದ ಸಂಸ್ಕೃತ ಮಹಾವಿದ್ಯಾಲಯಕ್ಕೆ ವಿಶಾಲ ಜಮೀನನ್ನು ಕಾಶ್ಮೀರ ಮಹಾರಾಜನು ದಾನವಾಗಿ ನೀಡಬಯಸಿದ್ದ. ಅದಕ್ಕೂ ಬ್ರಿಟಿ? ಅಧಿಕಾರಿಗಳು ಅನುಮತಿ ನೀಡಲಿಲ್ಲ.
ಇಂತಹ ಹಲವು ಅನುಭವಗಳು ನಿವೇದಿತಾರವರಲ್ಲಿ ಸ್ವಾತಂತ್ರ್ಯ ಸಂಘರ್ಷವು ಹೆಚ್ಚು ತೀಕ್ಷ್ಣಗೊಳ್ಳಬೇಕಾದುದರ ಆವಶ್ಯಕತೆಯನ್ನು ಮನಗಾಣಿಸಿದವು.
ಅಮೆರಿಕ ಪ್ರವಾಸ
ಅನಾರೋಗ್ಯ, ಹಣದ ಕೊರತೆ ಮತ್ತಿತರ ಕ್ಲೇಶಗಳ ನಡುವೆಯೇ ೧೮೯೯-೧೯೦೦ರಲ್ಲಿ ಸ್ವಾಮಿಜೀಯವರ ಅಮೆರಿಕ ಮರುಪ್ರವಾಸ ನಡೆಯಬೇಕಾಯಿತು. ಈ ಬಾರಿ ಅವರ ಸಂಗಡ ಇದ್ದವರು ಸ್ವಾಮಿ ತುರೀಯಾನಂದ ಮತ್ತು ನಿವೇದಿತಾ. ಆ ದಿನಗಳಲ್ಲಿ ಹಡಗಿನ ಪ್ರಯಾಣ ಸುದೀರ್ಘವೇ ಆಗಿರುತ್ತಿದ್ದ ಕಾರಣ ಭಾರತದ ಇತಿಹಾಸ, ಸದ್ಯಃಸ್ಥಿತಿ ಮೊದಲಾದ ಹಲವಾರು ವಿಷಯಗಳನ್ನು ಕುರಿತು ಸ್ವಾಮಿಜೀ ನಿವೇದಿತಾರವರಿಗೆ ಬೋಧನೆ ನೀಡುವುದು ಸಾಧ್ಯವಾಯಿತು. ಆ ಪ್ರವಾಸದ ರೋಚಕ- ಪ್ರಬೋಧಕ ನೆನಪುಗಳನ್ನು ನಿವೇದಿತಾರವರು ‘The Master As I Saw Him’ ಗ್ರಂಥದಲ್ಲಿ ದಾಖಲೆ ಮಾಡಿದ್ದಾರೆ.
ನಿವೇದಿತಾರವರು ವಿದೇಶಪ್ರವಾಸದ ನಂತರ ಮದ್ರಾಸು ರೇವಿನಲ್ಲಿ ಬಂದು ಇಳಿದಾಗ ಅವರಿಗೆ ಭವ್ಯಸ್ವಾಗತ ಕಾದಿತ್ತು. ಆ ಸ್ವಾಗತ ಸಮಾರಂಭವಾದರೋ ವಿದೇಶೀ ಮಹಿಳೆಯೊಬ್ಬಳಿಗೆ ಕೋರಿದ ಔಪಚಾರಿಕ ಸ್ವಾಗತವಾಗಿರದೆ ಹಿಂದೂಧರ್ಮದೊಡನೆ ತಾದಾತ್ಮ್ಯ ಹೊಂದಿದ್ದುದರ ಮತ್ತು ಉಚ್ಚ ಸ್ವರದಲ್ಲಿ ಹಿಂದೂಧರ್ಮದ ಶ್ರೇಷ್ಠತೆಯನ್ನು ಪ್ರಸಾರ ಮಾಡುತ್ತಿದ್ದ ವಿಚಾರಪೂರ್ಣ ಶ್ರದ್ಧಾವಂತಿಕೆಯ ಮೂರ್ತರೂಪ ಅವರಾಗಿದ್ದರೆಂಬುದರ ಮನವರಿಕೆಯ ಸಂಕೇತವಾಗಿದ್ದಿತು. ಪುನರಾಗಮನದ ನಂತರದ ಸಾರ್ವಜನಿಕ ಅಭಿನಂದನೆಗೆ ಉತ್ತರರೂಪವಾಗಿ ನಿವೇದಿತಾ ಮಾಡಿದ ಭಾ?ಣದಲ್ಲಿ ಅತ್ಯುನ್ನತ ವಾರಸಿಕೆ ಇರುವ ಭಾರತವು ವಿದೇಶಗಳತ್ತ ಮುಖಮಾಡಬೇಕಾದ ಆವಶ್ಯಕತೆ ಸುತರಾಂ ಇಲ್ಲವೆಂದು ನಿವೇದಿತಾ ಉತ್ಸ್ಫೂರ್ತರಾಗಿ ಮಾತನಾಡಿದುದು ದೇಶಾದ್ಯಂತ ಸುದ್ದಿಯಾಯಿತು.
ಆ ವೇಳೆಗೇ ನಿವೇದಿತಾ ಮಾನಸಿಕ ಪ್ರಬುದ್ಧತೆ ಗಳಿಸಿಕೊಂಡಿದ್ದರೆಂಬುದನ್ನು ಸ್ವಾಮಿಜೀ ಒಡನೆಯೇ ಗುರುತಿಸಿದರು. ಹಿಂದೆ ಆವೇಶದಿಂದ ಹೊಮ್ಮುತ್ತಿದ್ದ ಭಾವನೆಗಳು ಈಗ ಅಂತರ್ಮಥನದ ಮೂಸೆಯಲ್ಲಿ ಪರಿ?ರಗೊಂಡು ಹೊಮ್ಮತೊಡಗಿದ್ದವು.
* * * *
ಠಾಕೂರ್ ಪರಿವಾರದ ಸಂಗಡಿಕೆ
೧೮೯೯ರ ದಿನಗಳಿಂದಲೇ ನಿವೇದಿತಾರವರಿಗೆ ದೇವೇಂದ್ರನಾಥ ಠಾಕೂರ್ ಮನೆಮಂದಿಯ ಪರಿಚಯವಾಗಿತ್ತು. ಬರುಬರುತ್ತ ಅವರ ಹೊಕ್ಕುಬಳಕೆ ಗಾಢವಾಗುತ್ತ ಸಾಗಿತ್ತು. ಠಾಕೂರರ ಮನೆಗೆ ನಿವೇದಿತಾ ಸತತವಾಗಿ ಭೇಟಿಕೊಡುವ ರೂಢಿ ಬೆಳೆಯಿತು. ಅದಕ್ಕೂ ಹಿಂದೆಯೇ ೧೮೯೭ರಲ್ಲಿ ಲೋಕಮಾನ್ಯ ತಿಲಕರ ವಿರುದ್ಧ ಬ್ರಿಟಿ? ಸರ್ಕಾರವು ರಾಜದ್ರೋಹದ ಮೊಕದ್ದಮೆ ಹೂಡಿದ್ದುದು, ರವೀಂದ್ರನಾಥ ಠಾಕೂರರು ಅದಕ್ಕೆ ಬಹಿರಂಗ ಪ್ರತಿಭಟನೆಯನ್ನು ಸಂಘಟಿಸಿದ್ದುದು – ಇವೇ ಮೊದಲಾದ ಸಂಗತಿಗಳು ರವೀಂದ್ರನಾಥರ ಬಗೆಗೆ ನಿವೇದಿತಾರವರ ಅಭಿಮಾನವನ್ನು ಉತ್ಕಟಗೊಳಿಸಿದ್ದವು. ತನ್ನ ರಾಷ್ಟ್ರೀಯತಾಪರ ಮಾನಸಿಕತೆಗೆ ಹಾರ್ದಿಕವಾಗಿ ಸ್ಪಂದಿಸುವ ವ್ಯಕ್ತಿಯನ್ನು ರವೀಂದ್ರನಾಥರಲ್ಲಿ ನಿವೇದಿತಾ ಗುರುತಿಸಿದ್ದರು. ರವೀಂದ್ರನಾಥರಿಗೂ ಆಗಿಂದಾಗ ನಿವೇದಿತಾರವರ ವಸತಿಗೆ ಹೋಗಿ ಅವರೊಡನೆ ದೇಶಸ್ಥಿತಿ, ಸಾಹಿತ್ಯ, ಕಲೆಗಳು ಮೊದಲಾದ ನಾಲ್ಕಾರು ವಿ?ಯಗಳ ಬಗೆಗೆ ಗಂಟೆಗಳಗಟ್ಟಲೆ ಸಂವಾದವನ್ನು ನಡೆಸುವ ರೂಢಿ ಬೆಳೆದಿತ್ತು.
ರವೀಂದ್ರನಾಥ ಠಾಕೂರರ ’ಗೋರಾ’ ಪ್ರಸಿದ್ಧ ಕಾದಂಬರಿಯಲ್ಲಿ ನಿವೇದಿತಾರವರ ವ್ಯಕ್ತಿತ್ವವೂ ಚಿಂತನೆಗಳೂ ಠಾಕೂರರ ಮೇಲೆ ದಟ್ಟವಾದ ಪ್ರಭಾವ ಬೀರಿದ್ದುದರ ಸಂಕೇತಗಳು ದೊರೆಯುತ್ತವೆ. ಕಾದಂಬರಿಯ ನಾಯಕ ಗೋರಾ ಸ್ವಭಾವದಲ್ಲಿಯೆ ನಿವೇದಿತಾರವರ ಮಾನಸಿಕತೆಯ ಸಾದೃಶ್ಯವು ಎದ್ದು ಕಾಣುತ್ತದೆ. ಕಾದಂಬರಿಯ ವಿ?ಯವನ್ನು ಕುರಿತು ಠಾಕೂರರು ನಿವೇದಿತಾರೊಡನೆ ಅನೇಕ ಸಲ ಚರ್ಚಿಸಿದ್ದುದು ತಿಳಿದಿದೆ. ಭಾರತೀಯ ಸಂಸ್ಕೃತಿಯ ಬಗೆಗೆ ಗೋರಾ ಮಾತನಾಡುವಲ್ಲಿ ತೋರುವ ಆವೇಶವು ನಿವೇದಿತಾರವರ ಮನೋಭಂಗಿಯ ಪಡಿನೆಳಲೆಂದೇ ಅನಿಸುತ್ತದೆ. ಸೃಷ್ಟಿಯ ಸತ್ಯದರ್ಶನಕ್ಕೆ ಅವಶ್ಯವಾದ ಚಿಂತನೆಯ? ಭಾರತದ ಪರಂಪರೆಯಲ್ಲಿಯೆ ಲಭ್ಯವಿದೆಯೆಂದೂ ಕ್ರೈಸ್ತಾದಿ ಮತಗಳನ್ನು ಅದಕ್ಕಾಗಿ ಕಟಾಕ್ಷಿಸಬೇಕಾದ ಸ್ಥಿತಿ ಸುತರಾಂ ಇಲ್ಲವೆಂದೂ ಕಾದಂಬರಿಯಲ್ಲಿ ಗೋರಾ ಘೋಷಿಸುತ್ತಾನೆ. ಭಾರತೀಯ ಪರಂಪರೆಯ ಬಗೆಗೆ ಯಾರೂ ಅತ್ಯಲ್ಪ ಅವಹೇಳನಕರ ಮಾತನಾಡುವುದನ್ನೂ ಗೋರಾ ಸಹಿಸದೆ ಸಿಡಿದೇಳುತ್ತಾನೆ.
ಸಾಮಾಜಿಕ ಸುಧಾರಣೆಯ ಹಿಂದೆಬಿದ್ದು ದೇಶೀಯರು ತಮ್ಮ ಪರಂಪರೆಯನ್ನು ಶಿಥಿಲಗೊಳಿಸುವ ಆವಶ್ಯಕತೆ ಇಲ್ಲವೆಂದೂ ಸಮಾಜವು ಬಲಿಷ್ಠಗೊಂಡಂತೆ ಸುಧಾರಣೆಗಳು ತಾವಾಗಿ ಆಗುತ್ತವೆ ಎಂದೂ ಗೋರಾ ಸಾರುತ್ತಾನೆ.
ಒಂದು ಕಾಕತಾಳೀಯವೆಂದರೆ ಕಾದಂಬರಿಯಲ್ಲಿನ ಗೋರಾ ಕೂಡಾ ಹುಟ್ಟಿನಿಂದ ಐರ್ಲೆಂಡಿನವನು.
(ಸಶೇಷ)