ನಿವೇದಿತಾರವರಿಗೆ ಹಿಂದೂಧರ್ಮದ ಶ್ರೇಷ್ಠತೆಯ ಸ್ಥಾಪನೆಯು ಆದ್ಯತೆಯ ಸಂಗತಿಯಾಗಿದ್ದೀತೇ ವಿನಾ ತಮ್ಮ ವ್ಯಕ್ತಿಪ್ರತಿಷ್ಠೆ ಬೆಳೆಯಬೇಕೆಂಬುದಾಗಿರಲಿಲ್ಲ. ಅನೇಕ ಸಂದರ್ಭಗಳಲ್ಲಿ ತಮಗೆ ಒಂದಷ್ಟು ಹೆಸರನ್ನು ತಂದುಕೊಡಬಹುದಾಗಿದ್ದ ಸನ್ನಿವೇಶಗಳನ್ನು ಅವರು ಪ್ರಯತ್ನಪೂರ್ವಕ ನಿವಾರಿಸುತ್ತಿದ್ದುದೂ ಉಂಟು.
ನಿವೇದಿತಾರವರು ಸ್ವಾಮಿಜೀಯವರ ಬಗೆಗೆ ಬೆಳೆಸಿಕೊಂಡಿದ್ದ ಭಕ್ತಿಭಾವನೆಯು ಕೇವಲ ಆಕ?ಣೆಯ ಕಾರಣದಿಂದಲ್ಲ. ಅದರಲ್ಲಿ ಪ್ರಜ್ಞಾಪೂರ್ವಕ ಪರಾಮರ್ಶನೆಯೂ ಸೇರಿತ್ತು. ಭಾರತಕ್ಕೆ ತನ್ನ ಉದ್ಧಾರವನ್ನು ತಾನೇ ಮಾಡಿಕೊಳ್ಳುವಂತಹ ತೇಜಸ್ಸನ್ನು ತುಂಬಬಲ್ಲವರು ತಾನು ಗುರುತಿಸಿದಂತೆ ಸ್ವಾಮಿಜೀ ಮಾತ್ರ – ಎಂಬ ನಿಶ್ಚಯ ನಿವೇದಿತಾರವರ ಆ ದಿನಗಳ ಪತ್ರಗಳಲ್ಲಿ ಧ್ವನಿತವಾಗಿದೆ.
ಉದ್ಬೋಧನೆ
ಸ್ವಾಮಿಜೀಯವರಿಗಾದರೋ ಉದ್ಬೋಧನವೆಂಬುದು ಸಹಜ ಪ್ರಕೃತಿಯೇ ಆಗಿಬಿಟ್ಟಿತ್ತು. ಹೀಗೆ ಬೇಲೂರು, ಆಲ್ಮೋರಾಗಳಲ್ಲಿ ನಿವೇದಿತಾ ಹಾಗೂ ಇತರ ಶಿ?ರಿಗೆ ಪರಂಪರೆ, ಇತಿಹಾಸ, ಸಾಂಪ್ರತಜೀವನ, ಜಗತ್ತಿನ ವಿದ್ಯಮಾನಗಳು – ಈ ಹಲವುಹತ್ತು ವಿಷಯಗಳ ಬಗೆಗೆ ಅಂತರ್ದೃಷ್ಟಿಪೂರ್ವಕ ಚಿತ್ರಣವನ್ನು ಅವರು ನೀಡುತ್ತಿದ್ದರು.
ಸ್ವಾಮಿಜೀಯವರಿಂದ ಕೇಳಿದ ಸಂಗತಿಗಳೆಲ್ಲ ಹೊಸವೆಂದೇ ನಿವೇದಿತಾರಿಗೆ ಆಗ ಭಾಸವಾಗುತ್ತಿತ್ತು. “ಬದುಕಿನಲ್ಲಿ ಎರಡನೇ ಬಾರಿ ಶಾಲೆಗೆ ಸೇರಿ ಕಲಿಯತ್ತಿದ್ದೇನೆ ಎನಿಸತೊಡಗಿತು” ಎಂದು ಆಲ್ಮೋರಾದಲ್ಲಿನ ಆ ದಿನಗಳನ್ನು ನಿವೇದಿತಾ ನೆನೆದಿದ್ದಾರೆ. ಹೊಸದಾಗಿ ವಿಷಯಗಳನ್ನು ಕಲಿಯಬೇಕಾಗಿದ್ದುದು ಎಷ್ಟು ಮುಖ್ಯವಾಗಿದ್ದಿತೋ ಹಿಂದೆ ಕಲಿತಿದ್ದ ಅನೇಕ ವಿಷಯಗಳನ್ನು ದೂರ ಮಾಡುವುದೂ ಅ? ಮುಖ್ಯವಾಗಿದ್ದಿತು. ಹೀಗೆ ಆ ನವಜೀವನದ ಆರಂಭದ ಹಂತದಲ್ಲಿ ನಿವೇದಿತಾರವರು ಕಲಿಯುವುದನ್ನೇ ಕಲಿಯಬೇಕಾಯಿತು. ಯಾವುದು ನಿಜವಾದ ಅರಿವು, ಬದುಕಬೇಕಾದುದು ಹೇಗೆ, ಸುಖದುಃಖಗಳೆಂದರೆ ಏನು, ಎಲ್ಲ ಪ್ರಯಾಸಗಳ ನಿಜವಾದ ಲಕ್ಷ್ಯ ಏನಿರಬೇಕು – ಇಂತಹ ಪ್ರಾಥಮಿಕ ಸಂಗತಿಗಳು ಸ್ವಾಮಿಜೀಯವರ ಬೋಧನೆಯಿಂದ ಸ್ಪಷ್ಟಗೊಳ್ಳತೊಡಗಿದ್ದವು.
೧೮೯೮ರ ಜೂನ್ ತಿಂಗಳಲ್ಲಿ ಸ್ವಾಮಿಜೀಯವರೊಡನೆ ಅಮರನಾಥ ಯಾತ್ರೆ ಮಾಡಿದಾಗ ನಿವೇದಿತಾರವರಿಗೆ ಮೊದಲಬಾರಿಗೆ ಬೌದ್ಧಿಕಗ್ರಹಿಕೆಗೂ ಸಾಕ್ಷಾದನುಭವಕ್ಕೂ ಇರುವ ಅಂತರ ಅರಿವಿಗೆ ಬಂದಿತು.
ಅಂತರಂಗದ ತ್ಯಾಗಪ್ರವೃತ್ತಿಯನ್ನು ದೃಢಪಡಿಸಿಕೊಳ್ಳುವುದು ನಿವೇದಿತಾರಿಗೆ ಹೆಚ್ಚಿನ ಕ್ಲೇಶವೆನಿಸಲಿಲ್ಲ. ಏಕೆಂದರೆ ಅದಕ್ಕೆ ಬೇಕಾದ ಮನೋವೃತ್ತಿ ಆ ವೇಳೆಗೇ ಅವರಲ್ಲಿ ನೆಲೆಗೊಂಡಿತ್ತು. ಹೆಚ್ಚು ಕ್ಲೇಶಕರವೆನಿಸಿದುದೆಂದರೆ ಪೂರ್ಣ ಅಪರಿಚಿತವೇ ಆಗಿದ್ದ ರೀತಿರಿವಾಜುಗಳಿಗೆ ಹೊಂದಿಕೊಳ್ಳುವುದು. ಎಷ್ಟೇ ಆಗಲಿ ಆಶ್ರಮಜೀವನವೆಂದರೆ ಸಾಮಾನ್ಯ ಸಾಮಾಜಿಕ ಜೀವನದಿಂದ ಭಿನ್ನವೇ ತಾನೆ.
“ನಿಮಗಾಗಿ ನಾನು ಏನು ಮಾಡಬಹುದು?” ಎಂದು ಪಾಶ್ಚಾತ್ಯ ಶಿ?ರೊಬ್ಬರು ಕೇಳಿದಾಗ ಸ್ವಾಮಿಜೀ ಕೂಡಲೆ ಉತ್ತರಿಸಿದ್ದರು – “ಭಾರತ ದೇಶವನ್ನು ಅಪಾರವಾಗಿ ಪ್ರೀತಿಸಿರಿ” ಎಂದು.
ಸಮಾಜಪ್ರೀತಿ, ಸಮಾಜಸೇವೆ – ಇವು ಒಂದೇ ನಾಣ್ಯದ ಎರಡು ಬದಿಗಳು ಎಂಬುದು ಸ್ವಾಮಿಜೀಯವರ ಅಚಲ ನಂಬಿಕೆಯಾಗಿತ್ತು. ಸೇವೆಯು ಧಾರ್ಮಿಕತೆಯ ಪ್ರಕಟರೂಪವೆಂದೂ ಅವರು ಮೇಲಿಂದ ಮೇಲೆ ಹೇಳುತ್ತಿದ್ದರು. ೧೮೯೮ರ ಏಪ್ರಿಲ್-ಮೇ ದಿನಗಳಲ್ಲಿ ಕೋಲ್ಕತಾ ಆಸುಪಾಸಿನ ಪ್ರಾಂತದಲ್ಲಿ ಪ್ಲೇಗ್ ಸಾಂಕ್ರಾಮಿಕ ಹರಡಿದಾಗ ಸ್ವಯಂ ಅನಾರೋಗ್ಯದಲ್ಲಿ ಡಾರ್ಜಿಲಿಂಗಿನಲ್ಲಿ ಆರೈಕೆ ಪಡೆಯುತ್ತಿದ್ದ ಸ್ವಾಮಿಜೀ ಕೂಡಲೇ ಕೋಲ್ಕತಾಗೆ ಹಿಂದಿರುಗಿ ತಮ್ಮೆಲ್ಲ ಪರಿವಾರವನ್ನು ತೊಡಗಿಸಿ ಪ್ಲೇಗ್ ನಿವಾರಣ ಕ್ರಮಗಳನ್ನು ಆಯೋಜಿಸಿದರು.
ಹೊಸ ನಿರ್ವಚನ
ಯಾವ ಪ್ರಕ್ರಿಯೆಯನ್ನು ವ್ಯಕ್ತಿತ್ವನಿರ್ಮಾಣವೆಂದು ಸ್ವಾಮಿಜೀ ಪರಿಭಾಷಿತಗೊಳಿಸಿದ್ದರೋ ಅದೇ ನಿವೇದಿತಾರವರಿಂದ ರಾಷ್ಟ್ರ ನಿರ್ಮಾಣವೆಂದು ಕ್ರಮೇಣ ವ್ಯಾಖ್ಯಾನಗೊಳ್ಳತೊಡಗಿತು. ಆ ನಿರ್ಣಾಯಕ ಕಾಲಘಟ್ಟದಲ್ಲಿ ಅವಶ್ಯವಿದ್ದುದು ಈ ಸ್ಫುಟೀಕರಣವೇ. ನಿವೇದಿತಾರವರ ಆಶಯವನ್ನೇ ಅನಂತರದ ದಿನಗಳಲ್ಲಿ ಅರವಿಂದರು ಇನ್ನಷ್ಟು ಪ್ರಸ್ಫುಟಗೊಳಿಸಿದುದು ಸುವಿದಿತವೇ ಆಗಿದೆ.
ನಿವೇದಿತಾರವರ ಕಣಕಣದಲ್ಲಿ ರಾಷ್ಟ್ರೀಯತಾಪ್ರಜ್ಞೆ ತುಂಬಿಹೋಗಿತ್ತು. ಸಮಾಜವು ತನ್ನ ಸಹಜ ಬೇರುಗಳಿಂದ ದೂರ ಸರಿಯುವುದು ಅಕ್ಷಮ್ಯ – ಎಂಬ ಅವರ ನಿಲವು ರಾಜಿಯಿಲ್ಲದುದು. ಅದಕ್ಕೆ ಅತ್ಯಲ್ಪ ಭಂಗ ಬರುವುದನ್ನೂ ಅವರು ಸಹಿಸುತ್ತಿರಲಿಲ್ಲ. ಬಂಗಾಳದ ಒಂದು ಸಭೆಗೆ ಅವರು ಪ್ರವೇಶಿಸುತ್ತಿದ್ದಂತೆ ಅಲ್ಲಿದ್ದ ಯುವಕರು ಅಭ್ಯಾಸಬಲದಿಂದ ’ಹಿಪ್ ಹಿಪ್ ಹುರೇ’ ಎಂದು ಘೋಷಣೆ ಹಾಕಿದರು. ನಿವೇದಿತಾ ಕೆಂಡವಾದರು. “ಇಂತಹ ಪರಕೀಯ ಘೋಷಣೆಗಳನ್ನು ಹಾಕಲು ನಿಮಗೆ ನಾಚಿಕೆಯಾಗುತ್ತಿಲ್ಲವೆ? ನೀವೆಲ್ಲ ಯೂರೋಪಿನಿಂದ ಬಂದಿಳಿದವರೆ?” ಎಂದು ಛೀಮಾರಿ ಹಾಕಿದರು.
ಲೇಖನ-ಉಪನ್ಯಾಸಾದಿ ಸತತ ಚಟುವಟಿಕೆಗಳೊಡನೆಯೇ ನಿವೇದಿತಾ ಗಮನ ನೀಡುತ್ತಿದುದು ಅನುಶೀಲನ ಸಮಿತಿಯ ಮತ್ತು ಅಂತಹ ಅನ್ಯಸಂಘಟನೆಗಳ ದೃಢೀಕರಣಕ್ಕೆ.
ಸ್ವಾತಂತ್ರ್ಯ ಕಾರ್ಯಕರ್ತರಿಗೆ ಪಥದರ್ಶನ
ಬಂಗಾಳದಲ್ಲಿ ಪ್ರಮಥನಾಥರ ಪ್ರಯತ್ನದ ಫಲವಾಗಿ ಅನುಶೀಲನ ಸಮಿತಿಯ ಸ್ಥಾಪನೆ, ಅರವಿಂದರು ಭೂಗತಕಾರ್ಯದ ತರಬೇತಿಗಾಗಿ ಯತೀಂದ್ರನಾಥನನ್ನು ಬಂಗಾಳಕ್ಕೆ ಕಳುಹಿಸಿದುದು, ಭೂಗತ ಕಾರ್ಯಾಚರಣೆಯ ದಿಶೆಯಲ್ಲಿ ಅರವಿಂದರ ಮಾನಸಿಕತೆಯನ್ನು ನಿವೇದಿತಾರವರು ದೃಢಗೊಳಿಸಿದುದು – ಈ ಎಲ್ಲ ಬೆಳವಣಿಗೆಗಳಾದುದು ಕೆಲವೇ ತಿಂಗಳ ಅಂತರದಲ್ಲಿ. ಒಂದು ದೃಷ್ಟಿಯಿಂದ ಈ ಹಲವು ಒಮ್ಮುಖ ಚಟುವಟಿಕೆಗಳು ಏಕಕಾಲದಲ್ಲಿ ನಡೆದವಾದರೂ ಅವೆಲ್ಲ ಪ್ರತ್ಯೇಕ ಸ್ವಯಂಪ್ರೇರಿತ ಪ್ರಯಾಸಗಳೇ ಆಗಿದ್ದವು. ಹಾಗೆ ನೋಡಿದರೆ ಆ ಕಾಲಘಟ್ಟದಲ್ಲಿ ಅರವಿಂದರ ಚಿಂತನಧಾಟಿಯ ಬಗೆಗೆ ಹೆಚ್ಚು ಜನರಿಗೆ ತಿಳಿದಿರಲಿಲ್ಲವೆಂದೇ ಹೇಳಬಹುದು. ಈ ಬೇರೆ ಬೇರೆ ಪ್ರಯತ್ನಗಳನ್ನು ಸಂಘಟಿತಗೊಳಿಸಿದವರು ನಿವೇದಿತಾ. ಅರವಿಂದರ ಅಂತರಂಗದಲ್ಲಿ ಹುದುಗಿದ್ದ ಕ್ರಾಂತಿಜ್ವಾಲೆಯನ್ನು ಯಥಾರ್ಥವಾಗಿ ಗುರುತಿಸಿದವರು ನಿವೇದಿತಾ. ಅವರಿಬ್ಬರನ್ನು ರಮೇಶಚಂದ್ರ ದತ್ತರು ಪರಿಚಯ ಮಾಡಿಸಿದ ಕೂಡಲೆ ಆ ಸಂಗಡಿಕೆಯ ಪ್ರಭಾವ ಎಷ್ಟು ದೂರಗಾಮಿಯಾದೀತೆಂದು ಇಬ್ಬರಿಗೂ ಒಡನೆಯೇ ಮನವರಿಕೆಯಾಯಿತು. ಅವರಲ್ಲಿ ಒಬ್ಬರು ಇನ್ನೊಬ್ಬರ ಪ್ರತೀಕ್ಷೆಯಲ್ಲಿ ಕಾಯುತ್ತಿದ್ದರೆಂದೇ ಅನಿಸಿತು.
ಭೂಗತ ಕಾರ್ಯಾಚರಣೆಗಳ ಮೂಲಕ ಆರೂಢ ಸರ್ಕಾರಕ್ಕೆ ಸವಾಲೊಡ್ಡುವುದರ ಮೂಲಕ ಸ್ವಾತಂತ್ರ್ಯಪರವಾಗಿ ದೇಶದ ಜನತೆಯ ಮಾನಸಿಕತೆಯನ್ನು ಸಜ್ಜುಗೊಳಿಸಬೇಕೆಂಬ ಹತ್ತಾರು ಪ್ರತ್ಯೇಕ ಸಾಹಸಿಗಳ ನಡುವೆ ಸಂಪರ್ಕಜಾಲವನ್ನು ಏರ್ಪಡಿಸಿ ಸೂತ್ರಬದ್ಧತೆಯನ್ನು ತಂದ ಐತಿಹಾಸಿಕ ಕಾರ್ಯ ಅನುಶೀಲನ ಸಮಿತಿಯಿಂದ ನಡೆಯಿತು. ಅದಕ್ಕೆ ಪರೋಕ್ಷವಾಗಿ ದೋಹದ ನೀಡಿದವರು ನಿವೇದಿತಾ. ಅರವಿಂದರಿಗೆ ಅನುಶೀಲನ ಸಮಿತಿಯ ಸಂಘಟನೆಯ ವಿವರಗಳನ್ನು ತಿಳಿಸಿದವರೂ ನಿವೇದಿತಾರವರೇ.
ನಿವೇದಿತಾ ಮತ್ತು ಅರವಿಂದರ ನಡುವೆ ಬಡೋದೆಯ ಪ್ರಥಮ ಭೇಟಿ ಮತ್ತು ಸಮಾಲೋಚನೆಯಿಂದ ದೃಢಪಟ್ಟ ಸಂಗತಿ ಇಬ್ಬರೂ ಮೂಲತಃ ಶಕ್ತಿಯ ಉಪಾಸಕರೇ ಆಗಿದ್ದರೂ ಕಾರ್ಯಾನ್ವಯದ ಸ್ತರದಲ್ಲಿ ಸ್ಫುಟತೆಗಾಗಿ ತಡಕಾಡುತ್ತಿದ್ದರು ಎಂಬುದು. ಪರಸ್ಪರ ವಿಚಾರವಿನಿಮಯದಿಂದ ಈ ಅಸ್ಪಶ್ಯತೆಗಳು ನಿವಾರಣೆಗೊಂಡವು. ಅಲ್ಲಿಂದಾಚೆಗೆ ಅಲ್ಪಕಾಲದಲ್ಲಿ ಅರವಿಂದರು ರಾಷ್ಟ್ರೀಯತಾಪರ ಸಕ್ರಿಯತೆಯ ದಾರ್ಶನಿಕರೇ ಆದದ್ದು ಈಗ ಇತಿಹಾಸ.
ಅನುಶೀಲನ ಸಮಿತಿಯ ಪ್ರಮುಖರಿಗೆ ಅರವಿಂದರ ಚಿಂತನಕಕ್ಷೆಯ ಬಗೆಗೆ ವಿವರಗಳನ್ನು ನಿವೇದಿತಾ ಮನದಟ್ಟು ಮಾಡಿಕೊಟ್ಟರು.
೧೯೦೩ರಲ್ಲಿ ಮುಂಬಯಿ ಪ್ರವಾಸದ ಸಂದರ್ಭ ಒದಗಿದಾಗ ನಿವೇದಿತಾರವರು ಮಾಡಿದ ಮೊದಲ ಕೆಲಸವೆಂದರೆ ಹುತಾತ್ಮರಾದ ಚಾಫೇಕರ ಬಂಧುಗಳ ತಾಯಿಯನ್ನು ಭೇಟಿಮಾಡಿ ವಂದನೆ ಸಲ್ಲಿಸಿ ಸಾಂತ್ವನ ಹೇಳಿದುದು. ಆ ಭೇಟಿಯಲ್ಲಿ ಆ ತ್ಯಾಗಮಯಿ ತಾಯಿ ನಿವೇದಿತಾರವರಿಗೆ ಹೇಳಿದ ಮಾರ್ಮಿಕ ಮಾತು ಸದಾಕಾಲಕ್ಕೂ ಸಗೌರವ ಸ್ಮರಣೀಯವಾಗಿದೆ: “ನಾನು ಮೂವರು ಬಂಗಾರದಂತಹ ಮಕ್ಕಳನ್ನು ಕಳೆದುಕೊಂಡಿರುವುದು ಹೌದು. ನನಗೆ ದುಃಖವಾಗುತ್ತಿರುವುದು ಆ ಮೂವರು ಮಕ್ಕಳನ್ನು ಕಳೆದುಕೊಂಡಿರುವುದಕ್ಕಾಗಿ ಅಲ್ಲ; ದೇಶಮಾತೆಯ ಪದತಲದಲ್ಲಿ ಸಮರ್ಪಿಸಲು ನನಗೆ ಇನ್ನೂ ಇಬ್ಬರು ಮಕ್ಕಳು ಇಲ್ಲವಲ್ಲ ಎಂದು ಹೆಚ್ಚಿನ ದುಃಖವಾಗುತ್ತಿದೆ.”
’ಧರ್ಮ’ದ ಯಥಾರ್ಥಗ್ರಹಿಕೆ
ಕ್ರಾಂತಿಕಾರಿ ತರುಣರೊಡನೆ ನಿವೇದಿತಾ ಆಗಿಂದಾಗ ಭೇಟಿಯಾಗುತ್ತಿದ್ದರು. ಕೆಲವೊಮ್ಮೆ ತಮ್ಮ ವಸತಿಯಲ್ಲಿ, ಇನ್ನು ಕೆಲವೊಮ್ಮೆ ’ಯುಗಾಂತರ’ ಕಾರ್ಯಾಲಯ ಮೊದಲಾದೆಡೆ. ಹೆಚ್ಚಿನ ವ್ಯಾಸಂಗದ ಹಿನ್ನೆಲೆ ಇಲ್ಲದ ಆ ತರುಣರಿಗೆ ನಿವೇದಿತಾ ಜಗತ್ತಿನ ಇತಿಹಾಸವನ್ನೂ ಇತಿಹಾಸದಿಂದ ಕಲಿಯಬೇಕಾದ ಪಾಠಗಳನ್ನೂ ಕುರಿತು ಪ್ರಬೋಧನೆ ಮಾಡುತ್ತಿದ್ದರು. ಆಗಿಂದಾಗ ಚರ್ಚೆಗಾಗಿ ಬರುತ್ತಿದ್ದ ವಿ?ಯ – ಕ್ರಾಂತಿಮಾರ್ಗ ಒಳಗೊಂಡ ಹಿಂಸಾಚರಣೆಯು ಸಮರ್ಥನೀಯವೆ ಮತ್ತು ಪರಿಣಾಮಕಾರಿಯೆ ಎನ್ನುವುದು. ಆಗೆಲ್ಲ ನಿವೇದಿತಾ ಒತ್ತಿಹೇಳುತ್ತಿದ್ದುದು – ರಾಷ್ಟ್ರೀಯತಾಭಿಮುಖ ಪ್ರಯಾಸಗಳು ಮಾತುಗಳ ಚೌಕಟ್ಟಿನಿಂದ ಹೊರಬಿದ್ದು ಹೆಚ್ಚು ಕೃತಿಶೀಲವಾಗುವುದು ಅವಶ್ಯವಿದೆ ಎಂದು; ಮತ್ತು ದಮನಕ್ಕೆ ಪ್ರಭಾವೀ ಪ್ರತಿರೋಧವನ್ನು ತೋರುವುದು ಹಿಂದೂಧರ್ಮದ ಪರಂಪರೆಗೆ ಅನುಗುಣವೇ ಆಗಿದೆ ಎಂದು. ಅವರು ಮೇಲಿಂದ ಮೇಲೆ ಗಮನಕ್ಕೆ ತರುತ್ತಿದ್ದುದು ದೈವಾರಾಧನೆಯ ಎಂದರೆ ಕಾಳೀ ಉಪಾಸನೆಯ ಅಂತರ್ಗತ ಸಂದೇಶವನ್ನು.
ಒಂದು ಕಾಕತಾಳೀಯವೆಂದರೆ – ತಮ್ಮ ಉದ್ದೇಶಸಾಧನೆಗೆ ಹೆಚ್ಚು ಸಮಯ ಉಳಿದಿಲ್ಲವೆಂಬ ತೀಕ್ಷ್ಣ ಆತುರವು ಸ್ವಾಮಿಜೀಯವರನ್ನು ಮುನ್ನಡೆಸಿದ್ದಂತೆಯೇ ನಿವೇದಿತಾರವರೂ ಕಠಿಣ ಪರಿಶ್ರಮದಿಂದಲೂ ಸ್ವಶಿಕ್ಷಣದಿಂದಲೂ ತಾವು ಮನಸ್ಸಿನಲ್ಲಿ ರೂಪಿಸಿಕೊಂಡಿದ್ದ ನೀಲನಕ್ಷೆಯಂತೆ ತ್ವರಿತಗತಿಯಲ್ಲಿ ಹೆಜ್ಜೆಹಾಕತೊಡಗಿದರು. ಯಾವುದೋ ಮಾಂತ್ರಿಕ ಆವೇಶ ಅವರನ್ನು ಮುಂದೂಡುತ್ತಿತ್ತು. ಹೀಗೆ ೧೮೯೮ರ ನವೆಂಬರ್ ೧೨ ದೀಪಾವಳಿ ಅಮಾವಾಸ್ಯೆಯಂದು ನಿವೇದಿತಾ ತಾವು ಸಂಕಲ್ಪಿಸಿದ್ದ ಬಾಲಿಕಾ ಶಾಲೆಯನ್ನು ಶ್ರೀಮಾತೆಯವರ ಆಶೀರ್ವಾದದಿಂದ ಆರಂಭಿಸಿದರು. ಆಗ್ಗೆ ಅವರು ಭಾರತಕ್ಕೆ ಕಾಲಿರಿಸಿ ಒಂದು ವ? ಕೂಡಾ ಆಗಿರಲಿಲ್ಲ. ಸ್ವಾಮಿಜೀಯವರ ಸತತ ಮಾರ್ಗದರ್ಶನವಂತೂ ಇದ್ದೇ ಇದ್ದಿತು.
ಆರಂಭದ ಹಂತದಿಂದಲೇ ಅದೊಂದು ವಿಭಿನ್ನ ರೀತಿಯ ’ಶಾಲೆ’ ಆಗಿತ್ತು. ರೂಢಿಯ ಅಂಶಗಳ ಕಲಿಕೆಯ ಜೊತೆಗೆ ಸಮಾಜೋಪಯೋಗಿಯಾದ ಸೇವಾಪ್ರಜ್ಞೆಯನ್ನು ಎಳವೆಯಿಂದಲೇ ಅಲ್ಲಿ ಮಕ್ಕಳ ಮನಸ್ಸಿನಲ್ಲಿ ಬೇರೂರಿಸಲಾಗುತ್ತಿತ್ತು. ಇನ್ನು ಕಲಿಕೆಯು ನೇರವಾಗಿ ಚಟುವಟಿಕೆಗಳ ಮೂಲಕ ನಡೆಸಲಾಗುತ್ತಿದ್ದುದು ಬಹುಶಃ ಭಾರತದಲ್ಲಿ ಇದಂಪ್ರಥಮವಾಗಿದ್ದಿರಬೇಕು.
ಆರ್ಥಿಕ ಬೆಂಬಲವಾಗಲಿ ವ್ಯಾವಹಾರಿಕ ನೆರವಾಗಲಿ ಇರದಿದ್ದ ಆ ಆರಂಭದ ಕಾಲವು ನಿವೇದಿತಾರವರ ಪಾಲಿಗೆ ಎಂತಹ ಸವಾಲು ಆಗಿದ್ದಿರಬೇಕೆಂದು ಊಹಿಸಿಕೊಳ್ಳಬಹುದು.
ಸ್ವದೇಶೀ ಆಂದೋಲನದ ಸಾಂದರ್ಭಿಕತೆ
೨೦ನೇ ಶತಮಾನದ ಮೊದಲ ದಶಕದಲ್ಲಿ ಪ್ರಮುಖವಾಗಿ ವಂಗವಿಭಜನೆಗೆ ಪ್ರತಿರೋಧವಾಗಿ ಹೊಮ್ಮಿ ಅನಂತರ ವಿಸ್ತೃತ ಆಯಾಮಗಳನ್ನು ಪಡೆದುಕೊಂಡ ಸ್ವದೇಶೀ ಆಂದೋಲನವು ಸ್ವಾತಂತ್ರ್ಯಸಂಘರ್ಷಕ್ಕೆ ಒಂದು ನಿರ್ಣಾಯಕ ತಿರುವನ್ನಿತ್ತಿತೆಂಬುದು ನಿರ್ವಿವಾದ. ಈ ದಿಕ್ಪರಿವರ್ತನೆಗೆ ವಿವೇಕಾನಂದರ ಆವಾಹನೆಯ ಮುಂದುವರಿಕೆಯಾಗಿ ತಾತ್ತ್ವಿಕ ಅಧಿ?ನವನ್ನು ನಿರ್ಮಿಸಿದ ಪ್ರಮುಖರು ನಿವೇದಿತಾ ಮತ್ತು ಅರವಿಂದರು. ನಿವೇದಿತಾರವರು ಸ್ಫುಟವೂ ದೂರಗಾಮಿಯೂ ಆದ ರಾಷ್ಟ್ರೀಯತಾನಿ?ಯನ್ನು ಸಂಘ?ದ ಕೇಂದ್ರಬಿಂದುವಾಗಿ ಪ್ರತಿಪಾದಿಸಿದರೆ ಅರವಿಂದರು ರಾಷ್ಟ್ರೀಯತೆಯೆಂಬುದು ವಾಸ್ತವವಾಗಿ ಅಸ್ಖಲಿತ ಹಿಂದೂಧರ್ಮದ ಅವಿಭಾಜ್ಯ ಅಂಗವೇ ಆಗಿದೆಯೆಂದು ಘೋಷಿಸಿದರು; ಸನಾತನಧರ್ಮವೆಂದರೆ ತತ್ತ್ವಶಃ ರಾಷ್ಟ್ರೀಯತೆಯೇ ಎಂದು ಸಮೀಕರಣ ಮಾಡಿದರು. ಈ ಎರಡೂ ಮಂಡನೆಗಳು ಐತಿಹಾಸಿಕವೆನಿಸಿದವು; ಅದುವರೆಗೆ ಅಸ್ಪಶ್ಯವಾಗಿದ್ದ ಅಥವಾ ಸುಪ್ತಸ್ಥಿತಿಯಲ್ಲಿದ್ದ ಚಿಂತನಧಾರೆಯನ್ನು ಸ್ವಾತಂತ್ರ್ಯೋದ್ಯಮದ ಘಂಟಾಪಥವನ್ನಾಗಿಸಿದವು. ಮೆಕ್ಲಿಯಾಡ್ರವರಿಗೆ ಬರೆದ ಒಂದು ಪತ್ರದಲ್ಲಿ (೧೪-೪-೧೯೦೩) ನಿವೇದಿತಾ ಹೀಗೆಂದಿದ್ದರು:
“ರಾಷ್ಟ್ರೀಯತೆ ಎಂಬ ಶಬ್ದಕ್ಕೆ ಅದರ ನಿಜವಾದ ವ್ಯಾಪಕತೆಯನ್ನೂ ಅರ್ಥವಂತಿಕೆಯನ್ನೂ ಪ್ರಕಾಶಪಡಿಸುವುದೇ ಈಗ ಆಗಬೇಕಾಗಿರುವ ಕಾರ್ಯ. ಇದು ಆದಲ್ಲಿ ಉಳಿದ ಅನೇಕ ಅಪೇಕ್ಷೆಗಳು ಸಹಜವಾಗಿ ಕೈಗೂಡುತ್ತಹೋಗುತ್ತವೆ…. ಶಬ್ದಾಂತರಗಳಲ್ಲಿ ಹೇಳಬೇಕೆಂದರೆ, ರಾಮಕೃಷ್ಣ-ವಿವೇಕಾನಂದ ಬೋಧಿತ ಧಾರ್ಮಿಕತೆಯ ಬೆಳಕಿನಲ್ಲಿ ಇತಿಹಾಸ, ಆಚರಣೆಗಳು ಮೊದಲಾದವನ್ನೆಲ್ಲ ಪುನರ್ನಿರ್ವಚನ ಮಾಡಬೇಕಾಗಿದೆ. ತಾತ್ಪರ್ಯವೆಂದರೆ ಈಗ ಮುಖ್ಯವೆನಿಸುತ್ತಿರುವ ರಾಜಕೀಯ-ಆರ್ಥಿಕ ಸಂಗತಿಗಳು ನಿಜಕ್ಕೂ ಗೌಣವಾದವು. ಪ್ರಮುಖ ಆವಶ್ಯಕತೆಯೆಂದರೆ ದೇಶವು ತನ್ನ ರಾಷ್ಟ್ರೀಯತೆಯ ಸ್ವರೂಪವನ್ನು ಸಮಗ್ರವಾಗಿ ಸಾಕ್ಷಾತ್ಕರಿಸಿಕೊಳ್ಳಬೇಕಾದುದೇ ಆಗಿದೆ.”
ವಾಸ್ತವಾಗಿ ನಿವೇದಿತಾರವರ ಈ ಚಿಂತನಧಾಟಿಯು ಅವರು ೧೯೦೦ರ ದಿನಗಳಿಂದ ತಮ್ಮ ಬರಹಗಳಲ್ಲಿ ಸೂಚಿಸುತ್ತಬಂದಿದ್ದ ಪ್ರಣಾಳಿಕೆಯ ದೃಢೀಕರಣವೇ ಆಗಿದ್ದಿತು.
ಜನಜಾಗರಣ
ಗಮನಿಸಬೇಕಾದ ಅಂಶವೆಂದರೆ ಬ್ರಿಟಿಷರು ಶತಮಾನದುದ್ದಕ್ಕೂ ಬಿಂಬಿಸಿದ್ದ ಚಿತ್ರಕ್ಕೆ ವಿರುದ್ಧವಾಗಿ ವಿವೇಕಾನಂದರು, ನಿವೇದಿತಾ – ಇಬ್ಬರೂ ಭಾರತದ ಸ್ವಪುನರುಜ್ಜೀವನ ಸಾಮರ್ಥ್ಯದಲ್ಲಿ ಪೂರ್ಣ ಭರವಸೆ ತಳೆದಿದ್ದರು. ಇಬ್ಬರೂ ಶಿಕ್ಷಣಕ್ಷೇತ್ರಕ್ಕೆ ಅಷ್ಟು ಹೆಚ್ಚಿನ ಮಹತ್ತ್ವ ನೀಡಿದ್ದುದೂ ಭಾರತೀಯ ಸಮಾಜದ ಆತ್ಮವಿಶ್ವಾಸಜಾಗರಣದ ಉದ್ದೇಶದಿಂದಲೇ. ಈ ಜನಜಾಗರಣಪ್ರಕ್ರಿಯೆಗೆ ಕೇವಲ ರಾಜಕೀಯ- ಕೇಂದ್ರಿತ ಮತ್ತಿತರ ಆಂದೋಲನಗಳು ಸ್ವಲ್ಪಮಟ್ಟಿಗೆ ಹಾನಿಮಾಡಿದ್ದೆವೆಂದೇ ಸ್ವಾಮಿಜೀ ವಿಶ್ಲೇಷಿಸಿದ್ದರು. ಇಲ್ಲಿ ಅಡಗಿರುವ ಸೂಕ್ಷ್ಮತೆಯೆಂದರೆ ಧಾರ್ಮಿಕ, ಸಾಮಾಜಿಕ, ಐತಿಹಾಸಿಕ ಮೊದಲಾದ ಎಲ್ಲ ಪರಿಗಣನೆಗಳ ಮೂಲಸತ್ತ್ವದ ಒಟ್ಟಿಲೇ ’ಭಾರತೀಯತೆ’ ಎಂಬ ಮಂಡನೆ.
ಕೆಲವೇ ವರ್ಷಗಳ ಅವಧಿಯಲ್ಲಿ ನಿವೇದಿತಾರವರು ಭಾರತೀಯರ ಎಷ್ಟು ಅಧಿಕ ವಿಶ್ವಾಸವನ್ನು ಗಳಿಸಿಕೊಂಡಿದ್ದರೆಂಬುದು ವಿಸ್ಮಯಕರ. ೧೯೦೨ರ ಫೆಬ್ರುವರಿ ೩ರಂದು ಅವರು ವಿದೇಶದಿಂದ ಹಿಂದಿರುಗಿ ಮದರಾಸು ರೇವಿನಲ್ಲಿ ಇಳಿದಾಗ ಅವರಿಗೆ ದೊರೆತ ಸ್ವಾಗತವನ್ನು ಭವ್ಯವೆಂದೇ ವರ್ಣಿಸಬೇಕು. ಆ ವೇಳೆಗೇ ಅವರು ನೈಜ ಭಾರತೀಯ ರಾಷ್ಟ್ರೀಯತೆಯ ವಕ್ತಾರರೆಂಬ ಪ್ರತಿಮೆ ಉಜ್ಜ್ವಲಗೊಂಡಿತ್ತು. ಈ ವಿದ್ಯಮಾನದ ಇನ್ನೊಂದು ಬದಿಯೆಂದರೆ ನಿವೇದಿತಾರವರ ಚಲನವಲನಗಳ ಮೇಲೆ ಬ್ರಿಟಿ? ಸರ್ಕಾರದ ಹದ್ದುಗಣ್ಣು ಇನ್ನಷ್ಟು ತೀಕ್ಷ್ಣಗೊಂಡದ್ದು!
ನಿವೇದಿತಾರವರ ಅಂತರಂಗವನ್ನು ದಟ್ಟವಾಗಿ ಆವರಿಸಿದ್ದ ಭಾವನೆಯೆಂದರೆ ಭಾರತವು ಕ್ಷಿಪ್ರವಾಗಿ ತನ್ನ ದಯನೀಯ ಸ್ಥಿತಿಯಿಂದ ಹೊರಬಂದು ನಿಜವೈಭವವನ್ನು ಮತ್ತೆ ಗಳಿಸಿಕೊಂಡು ಜಗತ್ತಿಗೇ ಅಗ್ರಣಿಯಾಗಬೇಕು – ಎಂಬುದು. ಸ್ವಾಮಿಜೀಯವರ ಅಮೆರಿಕ ಪ್ರವಾಸದಲ್ಲಿ ಆ ದೇಶದ ಬಾಹ್ಯಸಮೃದ್ಧಿಯನ್ನೂ ಭಾರತದ ಅವನತ ದಶೆಯನ್ನು ಹೋಲಿಸಿ ಖಿನ್ನರಾಗಿ ಕಣ್ಣೀರುಗರೆದುದು ಸುವಿದಿತ. ಅದರಂತೆ ನಿವೇದಿತಾರವರು ಏಕಾಂತದಲ್ಲಿದ್ದಾಗಲೆಲ್ಲ ಭಾರತದ ನವಜಾಗರಣ ತಾವು ನಿರೀಕ್ಷಿಸಿದ? ವೇಗವಾಗಿ ಆಗುತ್ತಿಲ್ಲವೆಂಬ ಚಡಪಡಿಕೆ ಅವರಲ್ಲಿ ತುಂಬಿರುತ್ತಿತ್ತು. ದೇಶದ ನವೋತ್ಥಾನಕ್ಕೆ ಸ್ವಾಮಿಜೀಯವರಿಗಿಂತ ಹೆಚ್ಚಿನ ಸ್ಫುರಣೆಯನ್ನು ಯಾರೂ ನೀಡುವುದು ಅಕಲ್ಪನೀಯವಾಗಿತ್ತು. ಆದರೂ ಸಮಾಜದಲ್ಲಿ ತನ್ನ ಭವ್ಯ ಪರಂಪರೆಯ ಬಗೆಗೆ ವಿಸ್ಮೃತಿಯೇ ಹರಡಿತ್ತು.
ತಮ್ಮ ನಿವಾಸದಲ್ಲಿ ನಿಯಮಿತವಾಗಿ ಆಗಿಂದಾಗ ಸೇರುವ ಅಭ್ಯಾಸ ಬೆಳೆಸಿಕೊಂಡಿದ್ದ ತರುಣತಂಡಗಳೊಡನೆ ನಿವೇದಿತಾ ಸದಾ ಸಮಾಲೋಚನೆ ನಡೆಸುತ್ತಿದ್ದುದೂ ಇದನ್ನು ಕುರಿತೇ. ತೀಕ್ಷ್ಣವಾದ ಪ್ರಶ್ನೋತ್ತರಗಳ ಮೂಲಕ ಯುವಕರ ಬೌದ್ಧಿಕ ಸ್ಪಂದನವನ್ನು ಹೆಚ್ಚು ತೇಜಃಪೂರ್ಣವಾಗಿಸಲು ನಿವೇದಿತಾ ಶ್ರಮಿಸುತ್ತಿದ್ದರು.
ಆತ್ಮಶಕ್ತಿಯ ಉದ್ದೀಪನ
ಜನಾಂದೋಲನಕ್ಕೂ ಕಾರ್ಯಕರ್ತರಿಗೂ ನಿರಂತರ ಬೆಂಬಲವನ್ನು ನೀಡಿದುದು ಮಾತ್ರವಲ್ಲದೆ ಸ್ವದೇಶೀ ಕಲ್ಪನೆಯ ವಿಸ್ತೃತ ಆಯಾಮಗಳನ್ನು ಜನರಿಗೆ ಮನವರಿಕೆ ಮಾಡಿಸುವುದರಲ್ಲಿ ನಿವೇದಿತಾರವರ ಮುಖ್ಯ ಪಾತ್ರ ಇದ್ದಿತು. ಅವರು ಹೇಳುತ್ತಿದ್ದರು: “ನಿತ್ಯಜೀವನದಲ್ಲಿ ಪ್ರಚಂಡ ಆತ್ಮಶಕ್ತಿಯನ್ನು ಮೆರೆಯುವುದೇ ಸ್ವದೇಶೀ ಎನಿಸಿರುವುದು. ಇದು ಆರ್ಥಿಕ ದೃಷ್ಟಿಯಿಂದ ನಮ್ಮನ್ನು ಸ್ವಾವಲಂಬಿಗೊಳಿಸಬಲ್ಲದೆಂಬುದು ಸ್ಪಷ್ಟವೇ ಆಗಿದೆ. ಆದರೆ ಶಿಕ್ಷಣ ಮೊದಲಾದ ಎಲ್ಲ ಕ್ಷೇತ್ರಗಳಲ್ಲಿಯೂ ಸ್ವದೇಶೀ ಚಿಂತನೆಯು ಕಾರ್ಯಾನ್ವಯಗೊಳ್ಳಬೇಕಾಗಿದೆ. ಅಸೀಮ ತ್ಯಾಗ ಮತ್ತು ನಿಯಮಾನುಸರಣೆಗಳು ಸೇರಿರುವ ಈ ಸಂಗ್ರಾಮವನ್ನು ಯಶಸ್ವಿಗೊಳಿಸಬೇಕೆಂಬುದು ನಮಗೆ ಕಾಲದ ಕರೆಯಾಗಿದೆ.”
ನಿವೇದಿತಾರವರಿಗೆ ಹಿಂದೂಧರ್ಮದ ಶ್ರೇಷ್ಠತೆಯ ಸ್ಥಾಪನೆಯು ಆದ್ಯತೆಯ ಸಂಗತಿಯಾಗಿದ್ದೀತೇ ವಿನಾ ತಮ್ಮ ವ್ಯಕ್ತಿಪ್ರತಿಷ್ಠೆ ಬೆಳೆಯಬೇಕೆಂಬುದಾಗಿರಲಿಲ್ಲ. ಅನೇಕ ಸಂದರ್ಭಗಳಲ್ಲಿ ತಮಗೆ ಒಂದಷ್ಟು ಹೆಸರನ್ನು ತಂದುಕೊಡಬಹುದಾಗಿದ್ದ ಸನ್ನಿವೇಶಗಳನ್ನು ಅವರು ಪ್ರಯತ್ನಪೂರ್ವಕ ನಿವಾರಿಸುತ್ತಿದ್ದುದೂ ಉಂಟು. ಒಂದು ನಿದರ್ಶನ: ನಿವೇದಿತಾರಿಗೆ ಹಿಂದೆ ಸ್ವಾಮಿಜೀಯವರ ಮೂಲಕ ಪರಿಚಿತರಾಗಿದ್ದ ಜಪಾನೀ ಸಜ್ಜನ ಒಕಾಕುರಾ ಎಂಬವರು ಭಾರತಕ್ಕೆ ಬಂದು ತೀರ್ಥಕ್ಷೇತ್ರಗಳನ್ನೆಲ್ಲ ಸಂದರ್ಶಿಸಿ ಹಿಂದೂ ಸಂಸ್ಕೃತಿಯ ಉದಾರತೆಯ ಬಗೆಗೆ ತಮ್ಮ ಮನಸ್ಸಿನಲ್ಲಿ ಮೂಡಿದ್ದ ಪ್ರೇರಣಾದಾಯಕ ಭಾವನೆಗಳನ್ನು ಲಿಖಿತಗೊಳಿಸಿದರು. ಅವರಿಗೆ ಇಂಗ್ಲಿಷ್ ಭಾಷೆಯ ಮೇಲೆ ತಮಗಿದ್ದ ಪ್ರಭುತ್ವ ಸಾಲದೆನಿಸಿ ತಮ್ಮ ಬರಹವನ್ನು ಸುಧಾರಣೆಗಾಗಿ ನಿವೇದಿತಾರವರ ಕೈಯಲ್ಲಿರಿಸಿದರು. ಬಿಡಿ ಟಿಪ್ಪಣಿಗಳಂತಿದ್ದ ಆ ಬರಹವನ್ನು ನಿವೇದಿತಾರವರು ನೇರ್ಪಡಿಸಿ ಅವಕ್ಕೆ ಸುಂದರ ಪುಸ್ತಕದ ರೂಪ ಕೊಟ್ಟು ಒಕಾಕುರಾ ಅವರ ಹೆಸರಿನಲ್ಲಿಯೆ ಅದು ಪ್ರಕಟಗೊಳ್ಳುವಂತೆ ಏರ್ಪಡಿಸಿದರು.