ರಾಜ್ಯದ ಹಿಂದೂ ಮಠ-ಮಂದಿರಗಳನ್ನು ಸರ್ಕಾರವು ವಶಪಡಿಸಿಕೊಳ್ಳುವ ಆಶಯದ ಧಾರ್ಮಿಕ ಇಲಾಖೆಯ ಪ್ರಕಟನೆ ಕಳೆದ ಫೆಬ್ರುವರಿ ೭ರಂದು ಬಹಿರಂಗಗೊಂಡ ಕೂಡಲೆ ವ್ಯಾಪಕ ಪ್ರತಿಭಟನೆ ಹೊಮ್ಮಿತು. ಜನಾಕ್ರೋಶಕ್ಕೆ ಮಣಿದು ಮುಖ್ಯಮಂತ್ರಿಗಳು ಮರುದಿನವೇ ತಮ್ಮ ಆದೇಶವನ್ನು ಹಿಂದೆಗೆದುಕೊಂಡರಾದರೂ ಅವರ ಇಂಗಿತವಂತೂ ಬಯಲಾಗಿದೆ.
ಸಾಮಾಜಿಕ ಜೀವನದ ಜೀವನಾಡಿಯಾಗಿರುವ ಧಾರ್ಮಿಕ ಸಂಸ್ಥೆಗಳನ್ನು ಸ್ವರೂಪದಲ್ಲಿಯೇ ವ್ಯಾವಹಾರಿಕ ಕಕ್ಷೆಯದಾದ ಸರ್ಕಾರವು ವಶಕ್ಕೆ ತೆಗೆದುಕೊಳ್ಳುವುದು ವ್ಯವಹಾರ್ಯವೆ? – ಎಂಬ ಸಂಗತಿ ಹಾಗಿರಲಿ. ಈ ಇಂಗಿತದ ಹಿಂದಿನ ಚಿಂತನೆಯೇ ಘೋರ ಮನೋವೈಕಲ್ಯವನ್ನು ಸೂಚಿಸುತ್ತದೆ. ಸಾಂಪ್ರದಾಯಿಕ ಧಾರ್ಮಿಕ ಕಟ್ಟಳೆಗಳಿಗೆ ಸೀಮಿತವಾಗದೆ ಧರ್ಮಪೀಠಗಳು ಸರ್ಕಾರದ ವ್ಯಾಪ್ತಿಗೂ ಶಕ್ತಿಗೂ ಮೀರಿದ ಸಮಾಜಮುಖಿಯಾದ ಮತ್ತು ಸುಧಾರಣೋದ್ದೇಶದ ಅಸಂಖ್ಯ ಕಾರ್ಯಗಳನ್ನು ಸ್ವಪ್ರೇರಣೆಯಿಂದ ಮತ್ತು ಸರ್ಕಾರದ ಬೆಂಬಲದ ಮೇಲೆ ಅವಲಂಬಿತವಾಗದೆ ದೀರ್ಘಕಾಲದಿಂದ ನಡೆಸಿಕೊಂಡು ಬಂದಿವೆ. ಯಾವುದೇ ಸಂಸ್ಥೆಯಲ್ಲಿ ಅವ್ಯವಹಾರ ನಡೆದ ಸಂದರ್ಭಗಳಲ್ಲಿ ಸರ್ಕಾರ ಅದನ್ನು ಸುಪರ್ದಿಗೆ ತೆಗೆದುಕೊಂಡು ನೇರ್ಪಡಿಸುವ ಪದ್ಧತಿಯಿದೆ. ಧಾರ್ಮಿಕ ಸಂಸ್ಥೆಗಳಲ್ಲಿ ಅಂತಹ ನಿಯಮೋಲ್ಲಂಘನೆ ನಡೆದರೆ ಅವನ್ನು ವ್ಯವಸ್ಥೆಗೊಳಿಸಲು ನಾಗರಿಕ ಕಾನೂನುಗಳಿವೆ. ಸ್ವಯಂಪ್ರೇರಿತ ಸೇವಾಕಾರ್ಯಗಳ ಸ್ಥಾನವನ್ನು ಸರ್ಕಾರೀ ಯಂತ್ರವು ಎಂದಿಗೂ ತುಂಬಲಾರದೆಂಬುದು ಚಾರಿತ್ರಿಕಾನುಭವ. ಈಗ್ಗೆ ಇಪ್ಪತ್ತು ವರ್ಷ ಹಿಂದೆ (೧೯೯೭) ರಾಜ್ಯಸರ್ಕಾರ ರೂಪಿಸಿದ್ದ ಈ ಸಂಬಂಧದ ಕಾಯ್ದೆಯೂ ಈಗ್ಗೆ ಐದು ವರ್ಷ ಹಿಂದೆ (೨೦೧೧-೧೨) ಮಾಡಿದ ತಿದ್ದುಪಡಿಯೂ ನ್ಯಾಯಾಲಯದಲ್ಲಿ ಅನೂರ್ಜಿತಗೊಂಡಿದ್ದವು. ಆದರೂ ಮತ್ತೆ ಸರ್ಕಾರವು ಹುಚ್ಚುಸಾಹಸಕ್ಕೆ ಇಳಿದಿರುವುದು ದುರದೃಷ್ಟಕರ.