ನಮ್ಮ ಸಾರ್ವಜನಿಕ ಜೀವನದಲ್ಲಿ ದಕ್ಷತೆಗೆ ಹೆಸರಾದ ಸಂಸ್ಥಾಸಮೂಹಗಳಲ್ಲಿ ಪ್ರಮುಖವಾದುದು ಬ್ಯಾಂಕಿಂಗ್ ವ್ಯವಸ್ಥೆ. ಬ್ಯಾಂಕುಗಳನ್ನು ಜನರು ಗೌರವದಿಂದ ಕಾಣುತ್ತಾರೆ. ಇದಕ್ಕೆ ಹೋಲಿಸಿದರೆ ಸರ್ಕಾರೀ ಇಲಾಖೆಗಳೂ ಇಷ್ಟು ಗೌರವವನ್ನು ಗಳಿಸಿಕೊಳ್ಳಲಾಗಿಲ್ಲ; ಅವುಗಳದು ಪಾಳೆಗಾರಿಕೆಯಷ್ಟೆ. ಈ ಹಿನ್ನೆಲೆಯಲ್ಲಿ ಒಮ್ಮೊಮ್ಮೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವ್ಯವಹಾರ ನಡೆದಾಗ ಜನಸಾಮಾನ್ಯರು ವಿಷಾದಗೊಳ್ಳುತ್ತಾರಾದರೂ ಬ್ಯಾಂಕುಗಳ ಬಗೆಗೆ ಜನರ ವಿಶ್ವಾಸಕ್ಕೆ ಧಕ್ಕೆ ಬರದು. ಪಂಜಾಬ್ ನ್ಯಾಶನಲ್ ಬ್ಯಾಂಕಿನ ಹಲವು ಸಿಬ್ಬಂದಿಯವರೊಡನೆ ಶಾಮೀಲಾಗಿ ನೀರವ್ ಮೋದಿ ಎಂಬ ವಜ್ರವ್ಯಾಪಾರಿ ಬ್ಯಾಂಕಿಗೆ ರೂ. ೧೧,೩೪೩ ಕೋಟಿಯಷ್ಟು ವಂಚನೆ ಮಾಡಿರುವುದು ಕಳೆದ ಫೆಬ್ರುವರಿ ತಿಂಗಳ ಆರಂಭದಲ್ಲಿ ಬೆಳಕಿಗೆ ಬಂದು ಜನರಿಗೆ ಆಘಾತ ತಂದಿದೆ. ವಂಚನೆಯ ಅಗಾಧತೆಯಷ್ಟೆ ತಳಮಳವನ್ನುಂಟುಮಾಡಿರುವುದು ಈ ಅವ್ಯವಹಾರ ಬಯಲಾಗಲು ಏಳು ವರ್ಷಗಳಷ್ಟು ದೀರ್ಘಕಾಲ ಹಿಡಿದದ್ದು ಹೇಗೆಂಬುದು. ನೀರವ್ ಮೋದಿಯ ಆಭರಣ ವ್ಯಾಪಾರ ಸಂಸ್ಥೆಗೆ ವಿದೇಶಗಳಲ್ಲಿ ಬ್ಯಾಂಕುಗಳಿಂದ ಸಾಲ ಪಡೆಯಲು ಅವಶ್ಯವಿದ್ದ ಅಧಿಕರಣಪತ್ರಗಳನ್ನು (ಲೆಟರ್ಸ್ ಆಫ್ ಅಂಡರ್ಟೇಕಿಂಗ್) ಸಂವಾದಿ ಆಧಾರಗಳೇ ಇಲ್ಲದಿದ್ದರೂ ಪಂಜಾಬ್ ನ್ಯಾಶನಲ್ ಬ್ಯಾಂಕಿನ ಮುಂಬಯಿ ಶಾಖೆ ಹಲವು ವರ್ಷಗಳಿಂದ ನೀಡುತ್ತ ಬಂದಿರುವುದು ಈ ವರ್ಷದ ಆರಂಭದಲ್ಲಷ್ಟೇ ಅಧಿಕಾರಿಗಳ ಗಮನಕ್ಕೆ ಬಂದು ಅವ್ಯವಹಾರದ ಸ್ಫೋಟವಾಯಿತು.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬ್ಯಾಂಕ್ ಘೋಟಾಳಗಳು ಹೊಸವೇನಲ್ಲ. ರಿಜರ್ವ್ ಬ್ಯಾಂಕ್ ೧೯೪೯ರಲ್ಲಿ ಘಟಿತವಾದ ಮೇಲೆ ಒಂದಷ್ಟುಮಟ್ಟಿನ ನಿಯಂತ್ರಣ ಬಂದಿತಾದರೂ ಆಗಾಗ ಎಡವಟ್ಟುಗಳು ನಡೆದದ್ದುಂಟು. ನೆನಪಾಗುವ ಅಂತಹ ಕೆಲವು: ೧೯೬೧ರ ಕೇರಳದ ಪಲಾಯಿ ಬ್ಯಾಂಕ್ ಮುಳುಗಡೆ (ಜನರು ಅದನ್ನು ’ಕಲಾಯಿ ಬ್ಯಾಂಕ್’ ಎನ್ನುತ್ತಿದ್ದರು), ೧೯೯೮ರ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ಅವಸಾನ, ಮೊದಲಾದ ಪ್ರಕರಣಗಳು. ಎಷ್ಟು ಬಿಗಿ ವ್ಯವಸ್ಥೆಗಳು ಇದ್ದರೂ ಅನೈತಿಕತೆಯನ್ನೇ ದಂಧೆ ಮಾಡಿಕೊಂಡವರು ಅಪಮಾರ್ಗಗಳನ್ನು ಹುಡುಕಿಯಾರು.
ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಗರಣ ಕುರಿತು ಯೋಚಿಸುವಾಗ ಜನಸಾಮಾನ್ಯರ ಮನಸ್ಸಿಗೆ ಎದುರಾಗುವ ಕೆಲವು ಪ್ರಶ್ನೆಗಳು: (೧) ವಾಸ್ತವವಾಗಿ ನೀರವ್ ಮೋದಿ ದೋಚಿರುವ ಹಣವೆ?, ಕಾಗದಪತ್ರಗಳಲ್ಲಿ ಸೂಚಿತವಾಗಿರುವುದು ಎಷ್ಟು? (೨) ಬ್ಯಾಂಕಿನ ಆಡಳಿತವರ್ಗದಲ್ಲಿಯೆ ಅವ್ಯವಹಾರ ನಡೆದಿದೆಯೆ, ಅಥವಾ ನಡೆದಿರುವುದು ತಾಂತ್ರಿಕ ದುರುಪಯೋಗವೆ? (೩) ಫಲಾನುಭವಿಗಳು ಯಾರಾರು? (೪) ಕೇಂದ್ರಸರ್ಕಾರದ ಹಣಕಾಸು ಖಾತೆಗೆ ಮಾಹಿತಿ ಇರಲಿಲ್ಲವೆ? (೫) ಕನಿಷ್ಠ ಏಳು ವರ್ಷಗಳಿಂದ ನಡೆದಿದ್ದ ಈ ಅಕ್ರಮಗಳು ಯಾರ ಗಮನಕ್ಕೂ ಬರದಿದ್ದುದು ಹೇಗೆ? (೬) ಬ್ಯಾಂಕುಗಳ ಆಂತರಿಕ ಭದ್ರತಾವ್ಯವಸ್ಥೆಯಲ್ಲಿಯೆ ನ್ಯೂನತೆಗಳು ಇವೆಯೆ? (೭) ಆಡಿಟರುಗಳಿಂದ ಅಪರಾಧ ನಡೆದಿದೆಯೆ? (೮) ಬ್ಯಾಂಕಿಂಗ್ನಂತಹ ಬಿಗಿವ್ಯವಸ್ಥೆಯನ್ನು ಒಬ್ಬ ತಲೆಮಾಸಿದ ವ್ಯಾಪಾರಿ ಉಲ್ಲಂಘಿಸುವುದು ಹೇಗೆ ಸಾಧ್ಯವಾಯಿತು? (೯) ಬ್ಯಾಂಕುಗಳ ರಚನೆಯಲ್ಲಿಯೆ ಸುಧಾರಣೆಗಳ ಆವಶ್ಯಕತೆ ಇದೆಯೆ?
ಈಚಿನ ಕಾಲದಲ್ಲಿ ವಿಶೇಷವಾಗಿ ಸರ್ಕಾರೀ ಬ್ಯಾಂಕುಗಳಲ್ಲಿ ಅವ್ಯವಹಾರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ (ಚುನಾವಣೆಗೆ ಸಂಬಂಧಿಸಿದ ವಹಿವಾಟುಗಳೂ ಚಿಂತನೀಯ) ಪುನರ್ವಿಮರ್ಶೆಯ ಮತ್ತು ಶಕ್ತಿವಂತ ಸುಧಾರಣೆಗಳ ಆವಶ್ಯಕತೆ ಇದೆಯೆನಿಸುತ್ತದೆ. (೨೦೧೧ರಲ್ಲಿ ನೀರವ್ ಮೋದಿಯಿಂದ ಕಾಂಗ್ರೆಸ್ ಪಕ್ಷಕ್ಕೆ ರೂ. ೯೮ ಕೋಟಿ ಉಪಾಯನ ದೊರೆತಿತ್ತೆಂದು ವದಂತಿ ಇದೆ.) ಖಾಸಗಿ ವ್ಯಕ್ತಿಗಳು ತಮ್ಮ ಆವಶ್ಯಕತೆಗೆ ಮೀರಿದ ಹಣವನ್ನು ಸಾಲವಾಗಿ ತೆಗೆದುಕೊಳ್ಳುವುದು, ಆ ಹೆಚ್ಚುವರಿಯನ್ನು ರಾಜಕೀಯ ಪಕ್ಷಗಳಿಗೆ ಹಸ್ತಾಂತರಿಸುವುದು, ಉತ್ತರೋತ್ತರ ಈ ವ್ಯತ್ಯಾಸವನ್ನು ‘ನಾನ್-ಪರ್ಫಾರ್ಮಿಂಗ್ ಅಸೆಟ್ಸ್’ ಎಂದು ಲೆಕ್ಕಿಸಿ ತಿಲಾಂಜಲಿ ಕೊಡುವುದು – ಇವೆಲ್ಲ ರಾಜಾರೋಷವಾಗಿಯೆ ನಡೆದಿವೆ. ಅವುಗಳ ಹೊರೆ ಬೀಳುವುದು ಪ್ರಾಮಾಣಿಕ ತೆರಿಗೆದಾರರ ಹೆಗಲ ಮೇಲೆ. ವಂಚನೆಗಳನ್ನು ಎಂದಿಗಾದರೂ ನೂರಕ್ಕೆ ನೂರರಷ್ಟು ತಪ್ಪಿಸಲಾದೀತೆ ಎಂಬುದೇ ಶಂಕಾಸ್ಪದ. ಆದರೂ ವ್ಯವಸ್ಥೆಯನ್ನು ಹೆಚ್ಚು ಸಕ್ಷಮಗೊಳಿಸುವ ಕಾರ್ಯ ಆಗಲೇಬೇಕಾಗಿದೆ.