ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಎಪ್ರಿಲ್ 2018 > ಅಡಿಗರು ಒಬ್ಬ ‘ಕವಿಗಳ ಕವಿ’ – ಡಾ. ಕೆ.ವಿ. ತಿರುಮಲೇಶ್

ಅಡಿಗರು ಒಬ್ಬ ‘ಕವಿಗಳ ಕವಿ’ – ಡಾ. ಕೆ.ವಿ. ತಿರುಮಲೇಶ್

ವೃತ್ತಿಜೀವನವನ್ನು ದೂರದ ಹೈದರಾಬಾದ್‌ನಲ್ಲಿ ಕಳೆದವರು ಮತ್ತು ಆನಂತರ ಅಲ್ಲೇ ನೆಲೆಸಿದವರಾಗಿದ್ದರೂ ಕನ್ನಡ ಭಾಷೆ ಮತ್ತು ಸಾಹಿತ್ಯಗಳ ಬಗೆಗೆ ನಿರಂತರ ಸ್ಪಂದಿಸುತ್ತಿರುವವರು ಕವಿ-ಸಾಹಿತಿ ಮತ್ತು ಭಾಷಾಶಾಸ್ತ್ರಜ್ಞ ಡಾ| ಕೆ.ವಿ. ತಿರುಮಲೇಶ್. ಅವರು ಕವಿ ಗೋಪಾಲಕೃಷ್ಣ ಅಡಿಗರಿಂದ ಆರಂಭಗೊಂಡ ನವ್ಯಸಾಹಿತ್ಯ ಚಳವಳಿಯಿಂದ ಪ್ರಭಾವಿತರಾಗಿ ಬರೆಯಲು ಆರಂಭಿಸಿ ಮುಂದೆ ಬಹುಎತ್ತರಕ್ಕೆ ಬೆಳೆದವರು. ಇಂಗ್ಲಿಷ್ ಸೇರಿದಂತೆ ಪಾಶ್ಚಾತ್ಯ ಸಾಹಿತ್ಯ ಮತ್ತು ಚಿಂತನಪ್ರಣಾಳಿಗಳನ್ನು ವಿಪುಲವಾಗಿ ಓದಿಕೊಂಡಿರುವ ತಿರುಮಲೇಶ್ ಪತ್ರಿಕಾ ಅಂಕಣ ಸೇರಿದಂತೆ ವಿವಿಧ ಕಡೆ ಆ ಕುರಿತು ಅಪಾರವಾಗಿ ಬರೆದಿದ್ದಾರೆ. ಕನ್ನಡ ಕಾವ್ಯ, ಸಾಹಿತ್ಯಗಳಲ್ಲಿ ವೈವಿಧ್ಯಮಯ ಪ್ರಯೋಗಗಳನ್ನು ಮಾಡುವ ಮೂಲಕ ಮತ್ತು ಮೌಲಿಕ ಕೃತಿಗಳ ರಚನೆಯಿಂದ ಇವರು ಕವಿ ಅಡಿಗರ ಮುಂದಿನ ತಲೆಮಾರಿನ ಓರ್ವ ಪ್ರಮುಖರೆನಿಸಿದ್ದಾರೆ. ಗೋಪಾಲಕೃಷ್ಣ ಅಡಿಗರ ಜನ್ಮಶತಾಬ್ದದ ಸಂದರ್ಭದಲ್ಲಿ, ಕವಿ ಅಡಿಗರನ್ನು ಹತ್ತಿರದಿಂದ ಬಲ್ಲವರಾದ  ಡಾ|ತಿರುಮಲೇಶ್ ಅವರನ್ನು ಸಂದರ್ಶಿಸಲಾಯಿತು. ಈ ಸಂದರ್ಭದಲ್ಲಿ ಡಾ| ತಿರುಮಲೇಶ್ ಅವರು ಅಡಿಗರ ಕಾವ್ಯದ ಮಹತ್ತ್ವವನ್ನು ಕನ್ನಡ ಕಾವ್ಯದ ಸಂದರ್ಭದಲ್ಲಿಟ್ಟು ಎಳೆಎಳೆಯಾಗಿ ವಿಶ್ಲೇಷಿಸಿದ್ದಾರೆ.

ಪ್ರಶ್ನೆ: ಕನ್ನಡ ಕಾವ್ಯಪರಂಪರೆಯಲ್ಲಿ ತಮ್ಮ ಪ್ರಕಾರ ಕವಿ ಎಂ. ಗೋಪಾಲಕೃಷ್ಣ ಅಡಿಗರು ಎಲ್ಲಿ ನಿಲ್ಲುತ್ತಾರೆ? ಸುದೀರ್ಘವಾದ ಈ ಪರಂಪರೆಯಲ್ಲಿ ಅವರು ಯಾವ ಬಗೆಯಲ್ಲಿ ಸೇರಿಕೊಳ್ಳುತ್ತಾರೆ? ಅಥವಾ ಹೊರಗೆ ನಿಲ್ಲುತ್ತಾರೆಯೆ?

ಉತ್ತರ: ಪರಂಪರೆಯೆಂಬ ಕಲ್ಪನೆಯನ್ನೇ ತೆಗೆದುಕೊಂಡರೆ ಯಾವುದೊಂದು ದೇಶದಲ್ಲೂ ಭಾ?ಯಲ್ಲೂ ಅದು ಯಾವತ್ತೂ ಸ್ವಯಂಸಿದ್ಧವಾಗಿರುವುದಿಲ್ಲ ಎನ್ನುವುದು ಗೊತ್ತಾಗುತ್ತದೆ. ಅಥವಾ ಏಕತಾರಿಯ ಹಾಗೆ ಸರಳವಾಗಿಯೂ ಇರುವುದಿಲ್ಲ. ಹಲವು ಧ್ವನಿಗಳು ಸೇರಿಯೇ ಒಂದು ಪರಂಪರೆಯಾಗುವುದು. ಈ ಧ್ವನಿಗಳಲ್ಲಿ ಆಗಾಗ ಕೆಲವು ಸಾಮ್ಯತೆಗಳು ಕಂಡುಬರುವುದು ಸಾಮಾನ್ಯ; ಅಂಥ ಸಾಮಾನ್ಯತೆಗಳಿರುವ ರಚನೆಗಳು ಒಟ್ಟಿಗೇ ಸೇರುತ್ತವೆ, ಒಂದೇ ತರಹದ ರೆಕ್ಕೆಗಳಿರುವ ಹಕ್ಕಿಗಳು ಒಟ್ಟಿಗೇ ಇರುವಂತೆ. ಉದಾಹರಣೆಗೆ: ಜೈನಕವಿಗಳ ಕಾವ್ಯಗಳು, ಶಿವಶರಣರ ವಚನಗಳು, ಷಟ್ಪದಿ ಕಾವ್ಯಗಳು, ನವೋದಯ ಕವಿತೆಗಳು, ಇತ್ಯಾದಿ. ಜೈನಕವಿಗಳ ಚಂಪೂ ಕಾವ್ಯಗಳಿಗೂ ಶಿವಶರಣರ ವಚನಗಳಿಗೂ ಇರುವ ಕಾಲದ ಅಂತರ ಕಿರಿದು, ಆದರೆ ಉಳಿದಂತೆ ಅಂತರ ಬಹಳ ದೊಡ್ಡದು. ನಿಮ್ಮ ಈ ಪ್ರಶ್ನೆಯನ್ನು ವಚನಗಳ ಕುರಿತಾಗಿಯೂ ಆ ಕಾಲದಲ್ಲಿ ಕೇಳಬಹುದಿತ್ತು ಅಲ್ಲವೇ? ಅವು ಕನ್ನಡ ಕಾವ್ಯಪರಂಪರೆಗೆ ಸೇರುತ್ತವೆಯೇ ಇಲ್ಲವೇ ಎಂಬುದಾಗಿ. ಈಗಲಾದರೆ ಅವು ಕನ್ನಡ ಕಾವ್ಯಪರಂಪರೆಯ ಅಂಗವೇ ಆಗಿ ನಮಗೆ ಗೋಚರಿಸುತ್ತವೆ. ಅಡಿಗರ ನೆಲೆಯೂ ಹಾಗೆಯೇ ಎಂದು ನನಗನಿಸುತ್ತದೆ. ನನ್ನ ಅಭಿಪ್ರಾಯದಲ್ಲಿ ಅವರು ತಮ್ಮ ವರೆಗಿನ ಪರಂಪರೆಯಿಂದ ಎಷ್ಟು ಭಿನ್ನರಾಗಿದ್ದರೂ ಆ ಪರಂಪರೆಗೆ ಸೇರಿಯೇ ಇದ್ದಾರೆ. ಭಿನ್ನರಾಗಿ ಇರುವುದರಿಂದಲೇ, ಇರುತ್ತಲೇ, ಅವರು ಪರಂಪರೆಯನ್ನು ಅಭಿವೃದ್ಧಿಗೊಳಿಸಿದ್ದಾರೆ. ದತ್ತವಾದುದಕ್ಕೆ ಅಂಥದ್ದನ್ನೇ ಮತ್ತೆ ಮತ್ತೆ ಸೇರಿಸುವುದರಿಂದ ಪರಂಪರೆ (ಸಂಸ್ಕೃತಿ ಎಂದು ಅಂದುಕೊಳ್ಳಿ ಬೇಕಾದರೆ) ಸ್ಥಿರವಾಗುತ್ತದೆ ನಿಜ, ಆದರೆ ಬಹುಕಾಲ ಹಾಗೆಯೇ ಇದ್ದರೆ ಅದು ನಿಂತ ನೀರಾಗುತ್ತದೆ. ಅದಕ್ಕೆ ಹೊಸತನ್ನು ಸೇರಿಸಿದಾಗಲೇ ಅದು ಅಭಿವೃದ್ಧಿಗೊಳ್ಳುವುದು. ಅಡಿಗರು ಕನ್ನಡ ಕಾವ್ಯಕ್ಷೇತ್ರದಲ್ಲಿ ಮೂಡಿಸಿದ ವಿದ್ಯುತ್ ಸಂಚಲನವನ್ನು ಯಾರೂ ಅಲ್ಲಗಳೆಯಲಾರರು. ಆದ್ದರಿಂದ ಅವರು ಪರಂಪರೆಯ ಹೊರಗೆ ನಿಲ್ಲುವುದಿಲ್ಲ, ಪರಂಪರೆಯ ಭಾಗವೇ ಆಗಿರುತ್ತಾರೆ. ಇದು ಅವರ ನಂತರದವರು ಒಪ್ಪಿಕೊಂಡ, ಒಪ್ಪಿಕೊಳ್ಳಬೇಕಾದ ವಿಷಯ.

PDF/ಪಿಡಿಎಫ್ ನಲ್ಲಿ ಓದಿಗಾಗಿ ಇಲ್ಲಿ ಭೇಟಿ ನೀಡಿ : https://utthana.in/?p=11019

ಪ್ರಶ್ನೆ: ನವ್ಯಸಾಹಿತ್ಯ ಚಳವಳಿಗೆ ಅವರೇ ಮೂಲಪುರುಷರೆಂದು ಹೇಳಬಹುದೇ? ಅಥವಾ ಗೋಕಾಕರು ಸೇರಿದಂತೆ ಹಲವರ ಸೇರ್ಪಡೆಯೊಂದಿಗೆ ಅದು ಆರಂಭವಾಯಿತೆ?

ಉತ್ತರ: ಈ ಮೂಲವನ್ನು ನಿಖರವಾಗಿ ಹುಡುಕುವುದು ಒಂದು ಜಟಿಲ ಸಮಸ್ಯೆ. ನವ್ಯ ಎಂದ ತಕ್ಷಣ ನಮಗೆ ಮನಸ್ಸಿಗೆ ಬರುವುದು ಅಡಿಗರು ಎಂಬುದರಲ್ಲಿ ಎರಡು ಮಾತಿಲ್ಲ. ಅವರನ್ನು ನವ್ಯಸಾಹಿತ್ಯ ಚಳವಳಿಯ ಮೂಲಪುರುಷರೆಂದು ಕರೆಯುವುದರಲ್ಲಿ ನನಗೇನೂ ತಕರಾರಿಲ್ಲ. ತಕರಾರಿರುವುದು ‘ಮೂಲಪುರುಷ’ ಎಂಬ ಕಲ್ಪನೆಯಲ್ಲಿ. ಅದು ಆಧುನಿಕ ಈಥೋಸ್‌ಗೆ ಹಿಡಿಸುವುದಿಲ್ಲ. ’ನವ್ಯಕಾವ್ಯ’ ಎಂಬ ಪದವನ್ನು ಗೋಕಾಕರಿಗೆ ಒಯ್ಯಲಾಗುತ್ತಿದೆ. ಇಂಗ್ಲಿಷ್ ಅಧ್ಯಾಪಕರಾಗಿದ್ದ ಗೋಕಾಕರು ೧೯೩೬- ೩೮ರಲ್ಲಿ ಆಕ್ಸ್‌ಫರ್ಡ್ ಯೂನಿವರ್ಸಿಟಿಗೆ ಹೋಗಿ ಅಲ್ಲಿ ಇಂಗ್ಲಿಷ್ ನಲ್ಲಿ ಆನರ್ಸ್ ಗಳಿಸಿ ಬಂದಿದ್ದರು. ಆನಂತರ ಅವರ ’ಸಮುದ್ರ ಗೀತಗಳು’ ಕವನ ಸಂಕಲನ ಪ್ರಕಟವಾಯಿತು. ಹಿನ್ನೋಟದಲ್ಲಿ ನೋಡಿದರೆ ಅವರ ಕವಿತೆಗಳು ’ನವ್ಯ’ವೆಂದು ಅನಿಸದೆ ಇದ್ದರೂ, ಅವು ಅಂದಿನ ಮಾದರಿಯ ನವೋದಯ ಲಿರಿಕ್ಸ್ ಖಂಡಿತಕ್ಕೂ ಆಗಿರಲಿಲ್ಲ. ಅವುಗಳಲ್ಲಿ ಹೊಸತನದ ತುಡಿತಗಳಿದ್ದುವು. ಮುಕ್ತಛಂದಸ್ಸಿನ ತುಯ್ತಗಳಿದ್ದುವು. ಗೋಕಾಕರ ಪ್ರಯೋಗಶೀಲತೆಯನ್ನು ನಾವು ’ಸಮುದ್ರ ಗೀತಗಳು’ ಕವಿತೆಗಳಲ್ಲಿ ಕಾಣಬಹುದು. ನವ್ಯತೆಯ ಕುರಿತು ಕನ್ನಡದಲ್ಲಿ ಬರೆದವರಲ್ಲಿ ಮೊದಲಿಗರು ಅವರು. ಆದರೂ ಒಬ್ಬ ’ನವ್ಯಕವಿ’ಯಾಗಿ ಅವರು ಗುರುತಿಸಲ್ಪಡಲಿಲ್ಲ ಎನ್ನುವುದು ನಿಜ. ಇನ್ನು ಗೋಕಾಕರಲ್ಲದೆ, ಕನ್ನಡಕ್ಕೆ ಹೊಸ ಸಂವೇದನೆಯನ್ನು ತಂದವರಲ್ಲಿ ಮಾಸ್ತಿ, ಡಿ.ವಿ.ಜಿ., ಕಾರಂತ, ಎಸ್.ವಿ. ರಂಗಣ್ಣ, ಶ್ರೀರಂಗ, ಎ.ಎನ್. ಮೂರ್ತಿರಾವ್, ಕೈಲಾಸಂ ಮುಂತಾದವರೂ ಇದ್ದಾರೆ. ನಾನು ಕೇವಲ ಕವಿತೆಗಳ ಬಗ್ಗೆ ಹೇಳುತ್ತಿಲ್ಲ. ಆಧುನಿಕ ಮನಸ್ಸಿನ ಬಗ್ಗೆ ಹೇಳುತ್ತಿದ್ದೇನೆ. ಅಡಿಗರ ’ಚಂಡೆ ಮದ್ದಳೆ’ ಕವನ ಸಂಕಲನ ೧೯೫೪ರಲ್ಲಿ ಬಂತು, ಅದರೊಂದಿಗೆ ನವ್ಯಕಾವ್ಯ ಕೂಡ. ಅಡಿಗರನ್ನು ಆ ಕಾಲದ ಸೃಷ್ಟಿ ಎಂದು ನೋಡಬೇಕಾಗುತ್ತದೆ. ಅಲ್ಲದೆ ಸ್ವತಃ ಇಂಗ್ಲಿಷ್ ಅಧ್ಯಾಪಕರಾಗಿದ್ದ ಅಡಿಗರ ಮೇಲೆ ಆದ ಆಧುನಿಕ ಇಂಗ್ಲಿ? ಕಾವ್ಯದ ಪ್ರಭಾವವನ್ನು, ಮುಖ್ಯವಾಗಿ ಎಲಿಯಟ್‌ನ “ದ ವೇಸ್ಟ್ ಲ್ಯಾಂಡ್” ಕಾವ್ಯದ ಪ್ರಭಾವವನ್ನು, ಮರೆಯಬಾರದು. ಸ್ವಾತಂತ್ರ್ಯೋತ್ತರ ಕಾಲದಲ್ಲಿ ಉಂಟಾದ ಭ್ರಮನಿರಸನ ತಮ್ಮನ್ನು ಹೊಸ ಹಾದಿ (ಎಂದರೆ ನವ್ಯದ ಹಾದಿ) ಹಿಡಿಯುವಂತೆ ಮಾಡಿತು ಎನ್ನುತ್ತಾರೆ ಅಡಿಗರು. ಹೇಗಿದ್ದರೂ ಅಡಿಗರ ಕಾವ್ಯ ಕನ್ನಡದಲ್ಲಿ ಒಂದು ಕ್ರಾಂತಿಯನ್ನು ತಂದಿತು ಎನ್ನುವುದು ನಿಸ್ಸಂದೇಹ.

ನನ್ನ ಮತ್ತು ಓರಗೆಯವರ ಮೇಲೆ ಅಡಿಗರ ಪ್ರಭಾವ ಹೇಗಿತ್ತು ಎಂದರೆ ಅದು ನಮಗೊಂದು ಬಿಡುಗಡೆ ತಂದುಕೊಟ್ಟಿತು. ಸಂಪ್ರದಾಯದಿಂದ ಬಿಡುಗಡೆ. ಆಗ ನಮಗೆ ಕವಿಯಾಗುವುದೆಂದರೆ ಸಂಪ್ರದಾಯದ ಬಂಧನವನ್ನು ಕಿತ್ತೊಗೆಯುವುದೇ ಆಗಿತ್ತು; ಅದುವೇ ನಿಜವಾದ ಸೃಷ್ಟಿಕ್ರಿಯೆ ಎನಿಸಿತು. ಅದೇ ಸಮಯಕ್ಕೆ ವ್ಯಕ್ತಿವಿಶಿ?ವಾದವೂ (ಎಗ್ಸಿಸ್ಟೆನ್ಶಿಯಲಿಸಂ , ಅಸ್ತಿತ್ವವಾದ) ಕನ್ನಡಕ್ಕೆ ಬಂತು ಎಂಬುದನ್ನು ಮರೆಯಬಾರದು; ಇದರಲ್ಲಿ ಅಡಿಗರ ಕೈವಾಡ ಇರಲಿಲ್ಲ,; ಅನಂತಮೂರ್ತಿ , ಲಂಕೇಶ್ ಮುಂತಾದ ಅಡಿಗರ ಅನುಯಾಯಿಗಳದು ಇತ್ತು.

ಪ್ರಶ್ನೆ: ಕಾವ್ಯ-ಸಾಹಿತ್ಯಗಳ ನಿರಂತರ ಪ್ರವಾಹದಲ್ಲಿ ಚಳವಳಿಗಳನ್ನು ಗುರುತಿಸುವ ಬಗ್ಗೆ ತಮ್ಮದು ಸಹಮತವೆ? ಆಕ್ಷೇಪ ಇದೆಯೆ? ಅಥವಾ ವ್ಯಕ್ತಿಗಳೇ ಮುಖ್ಯವಾಗುತ್ತಾರಾ?

ಉತ್ತರ: ವ್ಯಕ್ತಿಗಳಿಲ್ಲದೆ ಚಳವಳಿಗಳಿಲ್ಲ, ಚಳವಳಿಗಳಿಲ್ಲದೆ ವ್ಯಕ್ತಿಗಳಿರಬಹುದು. ಹೊಸತೊಂದು ಬಂದರೆ ಅದರ ಕುರಿತು ಉತ್ಸಾಹ ತೋರಿಸುವುದು ಅಥವಾ ನಿರುತ್ಸಾಹ ತೋರಿಸುವುದು ಸಾಹಿತ್ಯ- ಕಲಾಜಗತ್ತಿನಲ್ಲಿ ಸ್ವಾಭಾವಿಕ, ಇತರ ಕ್ಷೇತ್ರಗಳಲ್ಲೂ ಹಾಗೆಯೇ. ಉದಾಹರಣೆಗೆ- ವೈಚಾರಿಕ ಕ್ಷೇತ್ರಗಳಲ್ಲಿ. ಫಿಲಾಸಫಿಯಲ್ಲಿ ಎಷ್ಟೊಂದು ’ಸ್ಕೂಲುಗಳು’ ಬಂದಿಲ್ಲ! ಈಚೆಗೆ ತಾನೆ ’ನಿರಚನವಾದ’ (Deconstruction) ಅಲೆಗಳನ್ನೆಬ್ಬಿಸಿತು. ಅದಕ್ಕಿಂತ ಹಿಂದೆ ಅಸ್ತಿತ್ವವಾದ (Existentialism) ದೊಡ್ಡ ಸುದ್ದಿಯನ್ನು ಉಂಟುಮಾಡಿತು. ಇವೆಲ್ಲ ಕೆಲವು ವಿಚಾರಗಳ ಮತ್ತು ಅವುಗಳನ್ನು ಪ್ರತಿಪಾದಿಸುವವರ ಸುತ್ತ ನಡೆಯುವ ಚಳವಳಿಗಳು. ಇವು ಬರುತ್ತವೆ, ಹೋಗುತ್ತವೆ, ಹೆದ್ದೆರೆಗಳ ಹಾಗೆ. ಇವಕ್ಕೆ ಪರಿಣಾಮಗಳಿರುತ್ತವೆ, ಆದ್ದರಿಂದ ಕೃತಿಗಳಿಗೆ ಕಾರಣವೂ ಆಗುತ್ತವೆ. ಇವು ನನಗೆ ಸಮ್ಮತವೇ ಅಲ್ಲವೇ ಎನ್ನುವುದು ಮುಖ್ಯವಲ್ಲ, ಯಾಕೆಂದರೆ ಚಳವಳಿಗಳು ಯಾರ ನಿಯಂತ್ರಣದಲ್ಲೂ ಇರುವುದಿಲ್ಲ. ಅಡಿಗರ ಸಂದರ್ಭದಲ್ಲಿ ನೀವು ಈ ಪ್ರಶ್ನೆಯನ್ನು ಕೇಳಿರುತ್ತ, ಅದು ನವ್ಯಸಾಹಿತ್ಯಕ್ಕೆ ಸಂಬಂಧಿಸಿ ಎಂದು ನಾನು ತಿಳಿದುಕೊಳ್ಳುತ್ತೇನೆ. ಅಡಿಗರು ಅದರ ಪ್ರತಿಪಾದಕರಾಗಿದ್ದರು. ನಾನು ಬರೆಯಲು ಶುರುಮಾಡಿದ್ದು ಅರವತ್ತರ ದಶಕದಲ್ಲಿ. ಆಗ ನವ್ಯ ಚಳವಳಿ ಜೋರಾಗಿತ್ತು. ಸ್ವಾಭಾವಿಕವಾಗಿ ನಾನೂ ಅದರಲ್ಲಿ ಗುರುತಿಸಿಕೊಂಡೆ. ಆದರೆ ಕೆಲವೇ ಸಮಯದಲ್ಲಿ ನನಗೆ ಯಾವುದೇ ’ಪಂಥ’ವೊಂದರ ಜತೆ ನನ್ನನ್ನು ನಾನು ಗುರುತಿಸಿಕೊಳ್ಳುವುದು ಬೇಡ ಅನಿಸಿತು. ನನಗೆ ನಾನೇ ಆಗಬೇಕು ಎನಿಸಿತು. ನವ್ಯದ ಜೋರು ಕಡಮೆಯಾದ ಮೇಲೆ ಕನ್ನಡದಲ್ಲಿ ದಲಿತ-ಬಂಡಾಯ ಚಳವಳಿಗಳು ಬಂದವು. ನಾನು ಇವುಗಳೆಲ್ಲದರ ಚಾರಿತ್ರಿಕ ಅಗತ್ಯಗಳನ್ನು ಕಾಣುತ್ತೇನೆ, ಆದರೆ ಅವುಗಳ ಅಂಗವಾಗಿ ಅಲ್ಲ. ನವ್ಯ ಸೇರಿದಂತೆ ಇವೆಲ್ಲವನ್ನು ನಾನೇನೂ ನಿರಾಕರಿಸುವುದೂ ಇಲ್ಲ. ಆದರೆ ನನಗೆ ಯಾವುದೇ ಲೇಬಲ್ ಇ?ವಾಗುವುದಿಲ್ಲ.

ಸಾಹಿತ್ಯಸೃಷ್ಟಿಗೆ ಯಾವುದೇ ಚಳವಳಿ ಬೇಕೆಂದೇ ಇಲ್ಲ, ಯಾವ ಪಂಥಕ್ಕೆ ಸೇರಬೇಕಾದ್ದೂ ಇಲ್ಲ. ಮುದ್ದಣನಿಗೆ ಯಾವ ಚಳವಳಿಯ ಅಥವಾ ಪಂಥದ ಬೆಂಬಲವಿತ್ತು? ಆದರೆ ಯಾವುದಕ್ಕೂ ಸೇರದವರು ಒಂಟಿಯಾಗುತ್ತಾರೆ ಎನ್ನುವುದೂ ನಿಜ. ಈಗ ಅಡಿಗರ ಸಂಗತಿಗೆ ಬಂದರೆ, ನವ್ಯದ ಆರಂಭದಲ್ಲಿ ಅವರು ಯಾರಿಗೂ ಅರ್ಥವಾಗಲಿಲ್ಲ; ಅರ್ಥವಾಗುವುದಕ್ಕೆ ಅರ್ಧ ಶತಮಾನವೇ ಬೇಕಾಯಿತು. ನವೋದಯ ಶೈಲಿಯಲ್ಲಿ ಬರೆಯುತ್ತಿದ್ದ ಅವರು ಅದನ್ನು ತಿರಸ್ಕರಿಸಿ ಹೊಸ ವಿಧದಲ್ಲಿ ಪದ್ಯರಚನೆಗೆ ತೊಡಗಿದ್ದು ಬಹು ದೊಡ್ಡ ರಿಸ್ಕ್ ಆಗಿತ್ತು. ಕವಿ ಇಂಥ ರಿಸ್ಕಿಗೆ ತಯಾರಾಗಿರಬೇಕು.

ಪ್ರಶ್ನೆ: ಓರ್ವ ಕವಿ-ಸಾಹಿತಿಯಾಗಿ ಬೆಳೆಯುವಲ್ಲಿ ತಮ್ಮ ಮೇಲೆ ಅಡಿಗರ ಪ್ರಭಾವ ಇದ್ದಿರಬೇಕಲ್ಲವೇ? ಅದು ಯಾವ ಬಗೆಯದ್ದು? ತಮ್ಮಂತಹ ಕವಿ-ಸಾಹಿತಿಗಳ ಸುತ್ತ ಆಗ ಇದ್ದ ಅಡಿಗರ ಪ್ರಭಾವವನ್ನು ನೆನಪಿಸಿಕೊಳ್ಳಬಹುದೆ?

ಉತ್ತರ: ಅಡಿಗರ ಪ್ರಭಾವ ಎರಡು ರೀತಿಯದು ಎಂದು ಕಾಣುತ್ತದೆ: ಒಂದು ವಸ್ತು ಮತ್ತು ವಿಧಾನಗಳದು, ಇವು ಹೆಚ್ಚೆಚ್ಚು ಹೊಸತೂ, ಸಾಮಾಜಿಕವೂ ಐಹಿಕವೂ ಆಗಿರಬೇಕು ಎನ್ನುವುದು; ಇನ್ನೊಂದು ಮಡಿವಂತಿಕೆಯ ತಿರಸ್ಕಾರ. ಇವು ಬೇರೆ ಬೇರೆ ಕವಿಗಳಲ್ಲಿ ತಮ್ಮದೇ ರೀತಿಯಲ್ಲಿ ಕಾಣಿಸಿಕೊಂಡುವು. ಒಂದು ತರಹದ ಮೂರ್ತಿಭಂಜನೆ ಇದು. ಅಡಿಗರ ’ವರ್ಧಮಾನ’ ಕವಿತೆಯಲ್ಲಿನ ’ಮಗ’ನಂತೆ ಆಗಿಬಿಟ್ಟೆವು ಎಲ್ಲರೂ! ಎಂದರೆ ಪರಂಪರೆಯೊಂದಿಗಿನ ಸಂಬಂಧ ಕಳಚಿ ಬಿಟ್ಟಂತೆ.

ಅಡಿಗರ ’ಚಂಡೆ ಮದ್ದಳೆ’ ಪ್ರಕಟವಾದಾಗ (೧೯೫೪) ನಾನಿನ್ನೂ ಒಂದು ಹಳ್ಳಿಯ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ. ’ಚಂಡೆ ಮದ್ದಳೆ’ ಸಂಕಲನದ ಬಗ್ಗೆಯಾಗಲಿ ಅಡಿಗರ ಬಗ್ಗೆಯಾಗಲಿ ನಾನು ಕೇಳಿರಲಿಲ್ಲ. ಅಡಿಗರ ಕವಿತೆಗಳನ್ನೂ ನಾನಾಗ ಓದಿರಲಿಲ್ಲ. ಡಿ.ವಿ.ಜಿ., ಬೇಂದ್ರೆ, ಕುವೆಂಪು, ಗೊವಿಂದ ಪೈ, ನರಸಿಂಹಸ್ವಾಮಿ, ಪಂಜೆ ಮಂಗೇಶರಾಯರು ಮುಂತಾದವರ ಹೆಸರು ಕೇಳಿ ಗೊತ್ತಿತ್ತು. ’ಜಯಂತಿ’, ’ಜಯಕರ್ನಾಟಕ’, ’ಜೀವನ’ ಪತ್ರಿಕೆಗಳು ಕೆಲವೊಮ್ಮೆ ಕಣ್ಣಿಗೆ ಬೀಳುತ್ತಿದ್ದವು. ಆದರೆ ಕವಿತೆಯ ಕುರಿತಾದ ನನ್ನ ಕಲ್ಪನೆ ಇನ್ನೂ ಲಯಬದ್ಧವೂ ಪ್ರಾಸಬದ್ಧವೂ ಆದ ಭಾವಪ್ರಧಾನ ರಚನೆ ಎಂದೇ ಇತ್ತು. ಪ್ರೌಢಶಾಲೆಯಲ್ಲಿರುವಾಗ ನಾನು ಪದ್ಯ ಬರೆಯಲು ಪ್ರಯತ್ನಿಸಿದುದಿದೆ. ಆದರೆ ಅವೆಲ್ಲ ಬಾಲಿಶ ಯತ್ನಗಳು. ಆನಂತರ ೧೯೬೦ರಲ್ಲಿ ಕಾಲೇಜಿಗೆ ಸೇರಿದ ಮೇಲೆಯೇ ನಾನು ಕಾವ್ಯರಚನೆಯ ಕುರಿತು ಹೆಚ್ಚು ಕುತೂಹಲ ತೋರಿದುದು. ನವ್ಯ ಸಾಹಿತ್ಯವೂ ಥಟ್ಟಂತ ಪ್ರಚಾರಕ್ಕೆ ಬರಲಿಲ್ಲ. ಅದಕ್ಕೆ ಸಾಮಾಜಿಕ ಪ್ರತಿರೋಧವಿತ್ತು. ಅದು ಸ್ವೀಕೃತ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದು. ಆದ್ದರಿಂದ ಈ ’ಸ್ವೀಕೃತ ಸಂಸ್ಕೃತಿ’ಯ ತಾರತಮ್ಯತೆ, ಅನ್ಯಾಯ, ದಬ್ಬಾಳಿಕೆ, ಯಾಜಮಾನ್ಯ ಪದ್ಧತಿ, ವ್ಯಕ್ತಿಸ್ವಾತಂತ್ರ್ಯ ನಿರಾಕರಣೆ ಮುಂತಾದ ಪಿಡುಗುಗಳಿಗೆ ಒಳಗಾದವರು, ಬದಲಾವಣೆಯನ್ನು ಬಯಸಿದವರು ನವ್ಯವನ್ನು ಸ್ವೀಕರಿಸಿದರು. ಅಂಥವರಲ್ಲಿ ನಾನೂ ಒಬ್ಬನಾಗಿದ್ದೆ. ಸ್ವೀಕರಿಸಿದವರು ಅಲ್ಪಸಂಖ್ಯೆಯಲ್ಲಿದ್ದರು. ವಿರೋಧಿಸಿದವರೇ ಬಹುಸಂಖ್ಯಾತರು. ಆದರೂ ಸಾಹಿತ್ಯ ಸಂಚಲನ ನವ್ಯ ಅರ್ಥಾತ್ ಆಧುನಿಕತೆಯ ಕಡೆಗೆ ಇತ್ತು.

ನಾನು ಬರೆಯಲು ಆರಂಭಿಸಿದ್ದು ೧೯೬೦ನೇ ದಶಕದ ಮಧ್ಯಭಾಗದಲ್ಲಿ ಎಂದು ಕಾಣುತ್ತದೆ. ಆ ಕಾಲಕ್ಕೆ ನಾನು ಅಡಿಗರ ಕೆಲವು ಕವಿತೆಗಳನ್ನು ಓದಿದ್ದಿರಬಹುದು, ಆದರೆ ಯಾವುದು ಎನ್ನುವುದು ನೆನಪಿಲ್ಲ. ನವ್ಯಸಾಹಿತ್ಯದ ಒಂದು ವಾತಾವರಣದ ಅರಿವು ನನಗಿತ್ತು, ಮುಖ್ಯವಾಗಿ ಯು.ಆರ್. ಅನಂತಮೂರ್ತಿಯವರ ಬರವಣಿಗೆಗಳಿಂದ. ಅವರು ನವ್ಯಸಾಹಿತ್ಯದ ಬಗ್ಗೆ, ಅಡಿಗರ ಕಾವ್ಯದ ಬಗ್ಗೆ, ತುಂಬಾ ಉತ್ಸಾಹದಿಂದ ಬರೆಯುತ್ತಿದ್ದರು. ನಾನಿದ್ದುದು ಕೇರಳಕ್ಕೆ ಸೇರಿದ ಕಾಸರಗೋಡಿನಲ್ಲಿ, ಎಂ.ಎ. (ಇಂಗ್ಲಿಷ್) ಮಾಡಿದ್ದು, ನಂತರ ಇಂಗ್ಲಿಷ್ ಲೆಕ್ಚರರ್ ಆಗಿ ಕೆಲಸ ಆರಂಭಿಸಿದ್ದು ಎಲ್ಲವೂ ಕೇರಳದಲ್ಲಿ ಎನ್ನುವುದನ್ನು ನೆನಪಿಡಬೇಕು. ಆಧುನಿಕತೆಯ ಅರಿವು ನನಗೆ ಕೆಲವು ಮಲೆಯಾಳಿ ಕವಿಮಿತ್ರರ ಮೂಲಕವೂ ಸಿಕ್ಕಿತು. ಮೈಸೂರು ಬೆಂಗಳೂರುಗಳು ನನಗೆ ಬಹಳ ದೂರವಾಗಿದ್ದುವು. ಆದರೂ ಕನ್ನಡದಲ್ಲಿ ಏನಾಗುತ್ತಿದೆ ಎಂಬ ಒಂದು ರೀತಿಯ ಅರಿವು ಕಾಸರಗೋಡಿನ ನನಗೆ ಇತ್ತು. ಅಲ್ಲದೆ ಕಾಸರಗೋಡಿನಲ್ಲಿ ನನ್ನಂಥ ಇತರರೂ ಇದ್ದರು. ಅಲ್ಲಿ ಈಗಾಗಲೇ ಇದ್ದ ಕನ್ನಡ ಸಂಘದಲ್ಲಿ ನಮಗೆ ಅವಕಾಶವಿರಲಿಲ್ಲ, ಬಹುಶಃ ಅದು ನಮಗೆ ಬೇಕೂ ಇರಲಿಲ್ಲ. ನಾವೆಲ್ಲ ಸೇರಿ ನವ್ಯ ಸಾಹಿತ್ಯ ಸಂಘವನ್ನು ಸ್ಥಾಪಿಸಿದೆವು. ಅದರ ಆಶ್ರಯದಲ್ಲಿ ವಿಚಾರ ಸಂಕಿರಣಗಳನ್ನು ಏರ್ಪಡಿಸತೊಡಗಿದೆವು. ಒಮ್ಮೆ ಅನಂತಮೂರ್ತಿಯವರನ್ನೂ ಕರೆಸಿದೆವು. ಅವರ ’ಸಂಸ್ಕಾರ’ ಕಾದಂಬರಿ ಆಗತಾನೆ ಪ್ರಕಟವಾಗಿತ್ತು. ’ಸಂಸ್ಕಾರ’ದ ಬಗ್ಗೆಯೂ ಸಂಕಿರಣ ನಡೆಸಿದೆವು. ಹೀಗೆ ನವ್ಯವೆನ್ನುವುದು ನಮ್ಮ ಬರವಣಿಗೆ ಮತ್ತು ಬೆಳವಣಿಗೆಯ ಭಾಗವಾಯಿತು. ಈ ಕಾಲಘಟ್ಟದಲ್ಲೇ ನಾನು ’ನವ್ಯ’ ಕವನಗಳನ್ನು ಬರೆಯಲು ತೊಡಗಿದ್ದು. ಅವು ಅಡಿಗರ ಕಾವ್ಯದಿಂದ ಪ್ರಭಾವಿತವಾಗಿದ್ದುವು. ೧೯೬೮ರಲ್ಲಿ ಪ್ರಕಟವಾದ ನನ್ನ ’ಮುಖವಾಡಗಳು’ ಎಂಬ ಕವನ ಸಂಕಲನಕ್ಕೆ ಅಡಿಗರದೇ ಮುನ್ನುಡಿ! ಆಗ ಅವರು ಸಾಗರದ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿದ್ದರು. “ಮುಖವಾಡಗಳು” ಕವಿತೆಗಳಲ್ಲಿ ನೀವು ಸಾಮಾಜಿಕ ಉಲ್ಲಂಘನೆಗಳನ್ನು ಕಾಣುವಿರಿ, ರೀತಿಯೂ ಮುಕ್ತಛಂದದ್ದು, ಶಾಕ್ ನೀಡುವಂಥ ಮಾತುಗಳು. ಇವೆಲ್ಲ ಅಡಿಗರ ಅನುಕರಣೆಯಿಂದಲೇ ಇರಬೇಕು. ಅಡಿಗರದು ಮಾತ್ರವೇ ಅಲ್ಲ, ಈ ರೀತಿಯಲ್ಲಿ ಬರೆಯುತ್ತಿದ್ದ ಲಂಕೇಶ್, ನಾಡಿಗ, ಚಂಪಾ, ಅನಂತಮೂರ್ತಿ ಮುಂತಾದ ಸಮಕಾಲೀನರ ಬರವಣಿಗೆಗಳ ಪ್ರೇರಣೆಯಿಂದ ಕೂಡ. ಆದರೆ ನನ್ನ ಕವಿತೆಗಳು ತೀರಾ ಸಾಮಾನ್ಯವಾಗಿದ್ದವು. ಈ ಸಂಕಲನಕ್ಕೆ ಅಡಿಗರಿಂದ ಮುನ್ನುಡಿ ಬರೆಸಿದ್ದಕ್ಕೆ ನನಗೆ ನಾಚಿಕೆಯಿದೆ; ಯಾಕೆಂದರೆ ಅವರ ಮುನ್ನುಡಿಗೆ ಅದು ಯೋಗ್ಯವಾಗಿರಲಿಲ್ಲ. ಆನಂತರ ನನ್ನ ಯಾವ ಕವನ ಸಂಕಲನಕ್ಕೂ ನಾನು ಯಾರಿಂದಲೂ ಮುನ್ನುಡಿ ಬರೆಸಲಿಲ್ಲ. ನನ್ನ ಬರಹಗಳಿಗೆ ನಾನೇ ಜವಾಬ್ದಾರನಾಗಬೇಕು ಎನ್ನುವ ಇರಾದೆ ನನ್ನಲ್ಲಿ ಮೂಡಿತು.

ನನ್ನ ಮತ್ತು ಓರಗೆಯವರ ಮೇಲೆ ಅಡಿಗರ ಪ್ರಭಾವ ಹೇಗಿತ್ತು ಎಂದರೆ ಅದು ನಮಗೊಂದು ಬಿಡುಗಡೆ ತಂದುಕೊಟ್ಟಿತು. ಸಂಪ್ರದಾಯದಿಂದ ಬಿಡುಗಡೆ. ಆಗ ನಮಗೆ ಕವಿಯಾಗುವುದೆಂದರೆ ಸಂಪ್ರದಾಯದ ಬಂಧನವನ್ನು ಕಿತ್ತೊಗೆಯುವುದೇ ಆಗಿತ್ತು; ಅದುವೇ ನಿಜವಾದ ಸೃಷ್ಟಿಕ್ರಿಯೆ ಎನಿಸಿತು. ಅದೇ ಸಮಯಕ್ಕೆ ವ್ಯಕ್ತಿವಿಶಿಷ್ಟವಾದವೂ (ಎಗ್ಸಿಸ್ಟೆನ್ಶಿಯಲಿಸಂ, ಅಸ್ತಿತ್ವವಾದ) ಕನ್ನಡಕ್ಕೆ ಬಂತು ಎಂಬುದನ್ನು ಮರೆಯಬಾರದು; ಇದರಲ್ಲಿ ಅಡಿಗರ ಕೈವಾಡ ಇರಲಿಲ್ಲ, ಅನಂತಮೂರ್ತಿ, ಲಂಕೇಶ್ ಮುಂತಾದ ಅಡಿಗರ ಅನುಯಾಯಿಗಳದು ಇತ್ತು.

ಪ್ರಶ್ನೆ: ಹಲವು ಕವಿ-ಸಾಹಿತಿಗಳು ಅಡಿಗರ ಪ್ರಭಾವದಿಂದ ಬಿಡಿಸಿಕೊಳ್ಳಲು ತುಂಬ ಶ್ರಮಿಸಿದ್ದಾರೆ. ತಮಗೆ ಈ ಸಮಸ್ಯೆ ಉಂಟಾಗಿತ್ತೆ? ಅದನ್ನು ಯಾವ ರೀತಿ ಎದುರಿಸಿದಿರಿ?

ಉತ್ತರ: ನೀವು ಹೇಳುತ್ತಿರುವುದು ’ಅನುಕರಣೆ’ಯ ಕುರಿತು. ಪ್ರಭಾವ ಎನ್ನುವುದು ಯಾವತ್ತೂ ಇದ್ದೇ ಇರುತ್ತದೆ. ಅದನ್ನು ಮೀರುವುದು ಸಾಧ್ಯವಿಲ್ಲ, ಅದು ಯುಗಧರ್ಮದ ಹಾಗೆ. ಆದ್ದರಿಂದಲೇ ಅಡಿಗರು ಒಬ್ಬ ಯುಗಪ್ರವರ್ತಕರು. ಅಡಿಗರು ಖುದ್ದಾಗಿ ಸ್ವಯಂಭೂ ಏನಲ್ಲ, ಅವರ ಮೇಲೂ ಪ್ರಭಾವವಿತ್ತು. ಆದರೆ ಈ ’ಪ್ರಭಾವ’ ಎನ್ನುವ ಮಾತನ್ನು ನಾವು ಮ್ಯಾನರ್ (ಮತ್ತು ಮ್ಯಾನರಿಸಂ) ಕುರಿತಾಗಿ ಕೂಡ ಬಳಸುತ್ತೇವೆ. ಒಬ್ಬ ಹಿರಿ ಕವಿ ಯುವ ಕವಿಗಳನ್ನು ಆ ರೀತಿಯಲ್ಲೂ ’ಪ್ರಭಾವಿ’ಸಬಹುದು. ನನ್ನ ಸಮೇತ ಕನ್ನಡದ ಹಲವು ಕವಿಗಳ ಮೇಲೆ ಇಂಥ ಪ್ರಭಾವ ಸಹಾ ಆಗಿದೆ. ಇದು (ಪ್ರಭಾವಿಸುವ) ಹಿರಿ ಕವಿಗಾಗಲಿ (ಪ್ರಭಾವಕ್ಕೆ ಒಳಪಡುವ) ಯುವ ಕವಿಗಾಗಲಿ ಇ?ದ ವಿಚಾರವಲ್ಲ. ಆದರೆ ಕಲೆಯ ವಿಚಾರವೇ ಹೀಗೆ. ಇಂಥ ಪ್ರಭಾವದಿಂದ ಬಿಡಿಸಿಕೊಳ್ಳಲು ಯತ್ನಿಸುತ್ತಲೇ ನಾವು ’ಬೆಳೆ’ಯುತ್ತೇವೆ. ಸ್ವತಃ ಅಡಿಗರಿಗೂ ಇತರರು ಬರೆದಂತೆ ತಾವು ಬರೆಯುವುದು ’ನರಕ’ವೆನಿಸಿತ್ತಲ್ಲವೇ?

ಎರಡು ಮೂರು ಕವನ ಸಂಕಲನಗಳನ್ನು ಪ್ರಕಟಿಸಿದ ನಾನು ಅಡಿಗರನ್ನು ಹೆಚ್ಚು ಕ್ರಿಟಿಕಲ್ ಆಗಿ ನೋಡತೊಡಗಿದೆ. ಅಡಿಗರ ಶೈಲಿ ಅಬ್ಬರದ್ದೆಂದು ಅನಿಸತೊಡಗಿತು, ಅವರ ಕವಿತೆಗಳಲ್ಲಿ ’ಚಂಡೆ ಮದ್ದಳೆ’ಯ ಸದ್ದೇ ಹೆಚ್ಚಾಗಿತ್ತು. ಅಲ್ಲದೆ ಅವರು ಎಲ್ಲವನ್ನೂ ವ್ಯಂಗ್ಯ ದೃಷ್ಟಿಯಿಂದ ನೋಡುತ್ತಾರೆ ಎನಿಸಿತು. ಹೊಸ ದಾರಿಯಲ್ಲಿ ಹೋಗುವ ರಭಸದಲ್ಲಿ ಬದುಕಿನ ಸೂಕ್ಷ್ಮ ಸಂಗತಿಗಳನ್ನು ಕಡೆಗಣಿಸುತ್ತಾರೆ ಎನಿಸಿತು. ಅದೇನೋ ಪ್ರವಾದಿಯಾಗುವ ಮಹತ್ತ್ವಾಕಾಂಕ್ಷೆಯೊಂದು ಅವರ ರಚನೆಗಳಲ್ಲಿತ್ತು. ನಾನು ಇದಕ್ಕಿಂತ ಭಿನ್ನವಾಗಿ ಬರೆಯಲು ಬಯಸಿದೆ. ಇದರ ಅರ್ಥ ನಾನು ಅಡಿಗರ ಮಹತ್ತ್ವವನ್ನು ತಿರಸ್ಕರಿಸಿದೆ ಎಂದಲ್ಲ. ಅಡಿಗರ ಕುರಿತು ನನಗೆ ಆದರ ಅಂದೂ ಇತ್ತು, ಈಗಲೂ ಇದೆ. ಆದರೆ ಈ ಆದರ ಹೆಚ್ಚು ಪಕ್ವವಾದದ್ದು ಎಂದು ತೋರುತ್ತದೆ. ೧೯೭೪ರಲ್ಲಿ ನಾನು Adiga Contribution to Kannada Poetry ಎಂಬ ಲೇಖನವೊಂದನ್ನು ಬರೆದು ಪತ್ರಿಕೆಯೊಂದರಲ್ಲಿ ಪ್ರಕಟಿಸಿದ್ದೂ ಇದೆ. ಕಾಲಾತೀತ ಕವಿಯಾಗಬೇಕು ಎನ್ನುವ ಇರಾದೆ ನನಗಿಲ್ಲ. ನಾನು ಕಾಲ ದೇಶಕ್ಕೆ ಬದ್ಧ, ಈ ಉಪಾಧಿಗಳಿಂದ ನನಗೆ, ಯಾರಿಗೂ ಬಿಡುಗಡೆಯಿಲ್ಲ. ಆದ್ದರಿಂದ ನನ್ನ ಸುತ್ತಮುತ್ತಲ ವಿಷಯಗಳ ಕುರಿತು ಬರೆಯಬೇಕೆಂದೆನಿಸಿತು. ಅಡಿಗರಷ್ಟು ಮಹತ್ತ್ವದ ಕವಿಯಾದ ಎ. ಕೆ. ರಾಮಾನುಜನ್ ತೀರ ಭಿನ್ನವಾಗಿ ಬರೆಯುತ್ತಿದ್ದರು. ಇದಕ್ಕೆ ಸರಿಯಾಗಿ ೧೯೭೫ರಲ್ಲಿ ನಾನು ಉನ್ನತ ಅಧ್ಯಯನಕ್ಕಾಗಿ ಕಾಸರಗೋಡು ತೊರೆದು ಹೈದರಾಬಾದಿಗೆ ಬಂದೆ. ಹೊಸ ಊರು, ಹೊಸ ಭಾಷೆ, ಹೊಸ ಜನರು, ಹೊಸ ಅನುಭವಗಳು, ಎಲ್ಲಕ್ಕಿಂತಲೂ ಹೆಚ್ಚಾಗಿ ಒಂದು ತರಹದ ಅನಾಮಿಕ ಸ್ವಾತಂತ್ರ್ಯ – ಸಂತೆ ಸುತ್ತುವವನ ಹಾಗೆ ಆದೆ. ಒಂಟಿತನ ಅಂಟಿಕೊಂಡಿತು. ಇದುವರೆಗೆ ಇದ್ದ ಕವಿಮಿತ್ರರ ಸಂಪರ್ಕ ತಪ್ಪಿತು. ನನ್ನನ್ನು ಹೇಳುವವರು ಕೇಳುವವರು ಯಾರೂ ಇರಲಿಲ್ಲ. ನನಗೆ ಇಷ್ಟ ಬಂದಂತೆ ಬರೆಯತೊಡಗಿದೆ. ಹೀಗೆ ನಾನು ಪ್ರತ್ಯೇಕವಾದೆ.

ಪ್ರಶ್ನೆ: ನವ್ಯೋತ್ತರದಲ್ಲಿ ಕಾವ್ಯ-ಕತೆಗಳಲ್ಲಿ ನೀವು ಬಹಳಷ್ಟು ಪ್ರಯೋಗಗಳನ್ನು ನಡೆಸಿದ್ದೀರೆಂದು ವಿಮರ್ಶಕರು ಗುರುತಿಸಿದ್ದಾರೆ. ಅದರ ಮೇಲೆ ಅಡಿಗರ ಪ್ರಭಾವವಿತ್ತೆ?

ಉತ್ತರ: ಇಲ್ಲ, ಅಡಿಗರ ಪ್ರಭಾವ ಇರಲಿಲ್ಲ. ನನ್ನ ಆರಂಭಿಕ ಕತೆಗಳ ಮೇಲೆ ಪ್ರಭಾವವಿದ್ದುದು ಚೆಕ್ ಸಾಹಿತಿ ಫ್ರಾಂಝ್ ಕಾಫ್ಕಾನದು. ಕಾಫ್ಕಾ ನನ್ನ ಇಷ್ಟದ ಕತೆಗಾರ. ಅದೇ ರೀತಿ ಒಂದು ತರಹದ ಅಸಂಗತವೂ (ಅಬ್ಸರ್ಡಿಸ್ಟ್ ಚಳವಳಿ) ನನ್ನನ್ನು ಆಕರ್ಷಿಸಿತು. ಪ್ರಯೋಗಶೀಲತೆ ನನ್ನ ಒಂದು ಜಾಯಮಾನ. ಕತೆ ಬರೆಯುವಾಗಲೂ ಒಂದರಂತೆ ಇನ್ನೊಂದು ಇರಬಾರದು ಎನ್ನುವುದು ನನ್ನ ಆಸೆ. ಆದರೆ ಕೆಲವು ಸಲ ಪ್ರಯೋಗಶೀಲತೆಯೇ ಮುಂದೆ ನಿಂತು ಇನ್ನುಳಿದದ್ದು ಮರೆಯಾಗುವ ಅಪಾಯವಿದೆ. ಅದು ಅತಿಯಾಗಿ ಬಣ್ಣ ಹಚ್ಚಿದ ಮುಖದಂತೆ, ಅಥವಾ ಅತಿಯಾಗಿ ನಟಿಸುವ ನಟನಂತೆ. The lady
doth protest too much, me thinks ಎನ್ನುತ್ತಾನಲ್ಲ ಶೇಕ್ಸ್‌ಪಿಯರ್, ಹಾಗೆ! ಕತೆಯಾಗಲಿ, ಕವಿತೆಯಾಗಲಿ ಹೇಗೆ ಮೂಡಿಬರುತ್ತದೆ ಎನ್ನುವುದನ್ನು ಮೊದಲೇ ನಿರ್ಧರಿಸಲು ಆಗುವುದಿಲ್ಲ. ಒಬ್ಬ ವ್ಯಕ್ತಿ ಬರೆದುದೆಲ್ಲ ಚೆನ್ನಾಗಿರುತ್ತದೆ ಎನ್ನುವುದೂ ಸಾಧ್ಯವಿಲ್ಲ. ಅಡಿಗರು ಕಾವ್ಯದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದಾರೆ, ಆದರೆ ಇತರ ಪ್ರಕಾರಗಳಲ್ಲಿ ಅವರು ಬರೆದುದೇ ಕಡಮೆ.

ಪ್ರಶ್ನೆ: ಅಡಿಗರು ‘ಒಂದು ಜನಾಂಗದ ಕಣ್ಣು ತೆರೆಸಿದ ಕವಿ’ ಎಂದು ಮೆಚ್ಚಿಕೊಂಡ ಕೆಲವರು ಮುಂದೆ ಬಹುತೇಕ ಅದಕ್ಕೆ ಪೂರ್ತಿ ವಿರುದ್ಧ ನಿಲವನ್ನು ತಳೆದರು. ಅದಕ್ಕೆ ಕೇವಲ ರಾಜಕೀಯ ಕಾರಣವೆ? ಬೇರೆ ಕಾರಣಗಳು ಇವೆಯೆ? ಅನಂತರದ ಕಾಲದಲ್ಲಿನ ಅಡಿಗರ ರಾಜಕೀಯ ನಿಲವು ಅವರ ಕಾವ್ಯದ ಮೇಲೆ ಪ್ರಭಾವ ಬೀರಿದೆಯೆ?

ಉತ್ತರ: ಈ ಪ್ರಶ್ನೆಗೆ ಸಮರ್ಪಕವಾಗಿ ಉತ್ತರಿಸುವ ಸಾಮರ್ಥ್ಯ ನನಗೆ ಇಲ್ಲ. ಅಡಿಗರನ್ನು ’ಒಂದು ಜನಾಂಗದ ಕಣ್ಣು ತೆರೆಸಿದ ಕವಿ’ ಎಂದು ಬಣ್ಣಿಸಿದವರು ಲಂಕೇಶ್; ಆ ಮಾತನ್ನು ಹಲವು ಮಂದಿ ಒಪ್ಪಿಕೊಂಡೂ ಇದ್ದಾರೆ. ಆ ಕಾಲದಲ್ಲಿ ಅಡಿಗರು ಮತ್ತು ಲಂಕೇಶ್ ಪರಸ್ಪರ ಸ್ನೇಹದಲ್ಲಿ ಇದ್ದರು. ಆನಂತರ ಲೇಖಕರ ಒಕ್ಕೂಟ ಬಂತು, ದಲಿತ-ಬಂಡಾಯ ಚಳವಳಿಗಳು ಶುರುವಾದವು. ಅಡಿಗರ ಜತೆಗಿದ್ದ ಲಂಕೇಶ್, ಚಂಪಾ, ತೇಜಸ್ವಿ ಮುಂತಾದವರು ಅವರಿಂದ ದೂರವಾದರು, ಮಾತ್ರವಲ್ಲ, ಅವರನ್ನು ವಿರೋಧಿಸತೊಡಗಿದರು ಕೂಡ. ಅಡಿಗರ ಕುರಿತು ಚಂಪಾ ಎರಡು ಕವಿತೆಗಳನ್ನು ಬರೆದಿದ್ದಾರೆ, ಒಕ್ಕೂಟಪೂರ್ವದಲ್ಲಿ ಮತ್ತು ನಂತರ. ಮೊದಲಿನದರಲ್ಲಿ ಮೆಚ್ಚುಗೆಯಿದ್ದರೆ, ಎರಡನೆಯದರಲ್ಲಿ ತಿರಸ್ಕಾರವಿದೆ. ಅಡಿಗರನ್ನು ಮೊದಲು ಮೆಚ್ಚಿದ ಹಲವು ಲೇಖಕರು ಆನಂತರ ಟೀಕಿಸಲು ಶುರುಮಾಡಿದರು. ಇದಕ್ಕೆ ರಾಜಕೀಯ ಕಾರಣವೇ ಅಥವಾ ಬೇರೆ ಕಾರಣಗಳು ಇವೆಯೆ ಎನ್ನುವುದು ನಿಮ್ಮ ಪ್ರಶ್ನೆ: ’ಬೇರೆ ಕಾರಣಗಳು’ ಎನ್ನುವಲ್ಲಿ ನೀವು ಬ್ರಾಹ್ಮಣ-ಶೂದ್ರ ವರ್ಗವಿರೋಧವನ್ನು ಉದ್ದೇಶಿಸುತ್ತಿರುವಿರಿ ಎಂದು ಕಾಣುತ್ತದೆ. ರಾಜಕೀಯ ಮತ್ತು ಜಾತಿ ವರ್ಗೀಯತೆ ಬೇರೆ ಬೇರೆಯಾಗಿ ಉಳಿದಿಲ್ಲವಲ್ಲ? ಕಾರಣ ಏನೇ ಇರಲಿ, ಅಡಿಗರು ಮತ್ತು ಈ ಇತರರ ನಡುವೆ ಬಿರುಕು ತಲೆದೋರಿದುದು ನಿಜ. ಇದು ಅಡಿಗರ ಮತ್ತು ಇತರರ ಕವಿತೆಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಿತು ಎಂದು ನಾನು ನಿಖರವಾಗಿ ಹೇಳಲಾರೆ; ಆದರೆ ದಲಿತ-ಬಂಡಾಯ ಸಾಹಿತ್ಯ ಚಳವಳಿಗಳು ಜಾತಿ ಮತ್ತು ಶೋಷಣೆಯ ಪ್ರಶ್ನೆಯನ್ನು ಪ್ರಧಾನವಾಗಿ ಎತ್ತಿಕೊಂಡಿವೆ ಎನ್ನುವುದು ಸರ್ವವಿದಿತ. ಅಡಿಗರ ಹಲವು ಕವಿತೆಗಳು ಆರ್ಷೇ ಮೌಲ್ಯಗಳನ್ನು ಎತ್ತಿಹಿಡಿಯುವ ಹಾಗೆ ತೋರುವುದರಿಂದ ಈ ವರ್ಗವಾದದಲ್ಲಿ ಅವರು ಬ್ರಾಹ್ಮಣ್ಯದ ಪ್ರತಿನಿಧಿಯಾಗಿ ಕಾಣಿಸಿದರು. ಅವರು ಎಡಪಂಥವನ್ನು ಟೀಕಿಸುವುದರಿಂದ ಬಲಪಂಥದ ವಕ್ತಾರರಾಗಿಯೂ ಅನಿಸುತ್ತಾರೆ. ಮಧ್ವಾಚಾರ್ಯರ ಬಗ್ಗೆ ಬರೆದ ಅಡಿಗರು ಶಾಂತವೇರಿ ಗೋಪಾಲಗೌಡರ ಕುರಿತೂ, ಭೀಮರಾವ್ ಅಂಬೇಡ್ಕರ್ ಕುರಿತೂ ಬರೆದಿದ್ದಾರೆ. ನೆಹರೂವನ್ನು ತೆಗಳಿದವರು ಮಾವೋ ತ್ಸೆ ತುಂಗ್‌ನ ಕವಿತೆಗಳನ್ನೂ ಅನುವಾದಿಸಿದ್ದಾರೆ. ಭೂತದ ಪುನರುತ್ಥಾನವನ್ನು ಬಯಸುವ ಕವಿ ಭೂತದ ಕೊಳಕನ್ನೂ ಕಂಡವರು. ಪರಂಪರೆಯನ್ನು ಮನ್ನಿಸುತ್ತಲೇ ಅಜ್ಜನೆಟ್ಟ ಆಲಕ್ಕೆ ಜೋತುಬೀಳುವುದನ್ನೂ ವಿರೋಧಿಸುತ್ತಾರೆ. ಅವರ ರಾಮರಾಜ್ಯದ ಕಲ್ಪನೆ ನೆನಪೋ ಕನಸೋ ಎಂದು ಸಹ ತಿಳಿಯುವುದಿಲ್ಲ. ’ನಾನು ಹಿಂದೂ, ನಾನು ಬ್ರಾಹ್ಮಣ’ ಎಂಬ ಅವರ ಕವಿತೆಯ ಶೀರ್ಷಿಕೆಯನ್ನು ಮಾತ್ರ ಓದಿ ಕವಿತೆಯನ್ನು ಓದದೆ ಬಿಟ್ಟವರೇ ಹೆಚ್ಚು. ಅಂತೂ ವರ್ಗಕಲಹದಲ್ಲಿ ಅಡಿಗರ ಸಂಕೀರ್ಣ ವ್ಯಕ್ತಿತ್ವ ಮಾಸಿಹೋಯಿತು.

ಪ್ರಶ್ನೆ: ಕಾವ್ಯದ ಭಾಷೆಯಲ್ಲಿ ಅಡಿಗರು ಮಾಡಿದ ಪ್ರಯೋಗಗಳನ್ನು ಓರ್ವ ಭಾಷಾವಿಜ್ಞಾನಿಯಾಗಿ ಹೇಗೆ ವಿಶ್ಲೇಷಿಸುತ್ತೀರಿ?

ಉತ್ತರ: ಅಡಿಗರು ಆಡುಭಾಷೆಯನ್ನು ಬಳಸಿದರು; ಹಾಗೆ ಬಳಸಿದ ಕನ್ನಡ ಕವಿಗಳಲ್ಲಿ ಅವರೇನೂ ಮೊದಲಿಗರಾಗಿ ಇರಲಾರರು. ವಿ.ಕೃ. ಗೋಕಾಕರು ಅದೇ ಕಾಲಕ್ಕೆ ಬಳಸುತ್ತಿದ್ದರು. ನವೋದಯ ಕಾವ್ಯದಲ್ಲಿಯೂ ಆಡುಭಾಷೆಯನ್ನು ಕಾಣುತ್ತೇವೆ. ಆದರೆ ಅಡಿಗರ ವಿಶೇಷತೆಯೆಂದರೆ, ಅವರು ಶಿಷ್ಟ, ಗ್ರಾಮ್ಯ ಮುಂತಾದ ಎಲ್ಲ ಸ್ತರದ ಭಾಷೆಗಳನ್ನೂ ಒಟ್ಟಿಗೇ ತಂದುದು; ಭಾಷೆ ಮಡಿವಂತಿಕೆಯನ್ನು ಮೀರುವ, ಮೀರುತ್ತೇನೆಂದು ಸಾರುವ ಛಲವಂತಿಕೆಯನ್ನು ಅವರ ಕವಿತೆಗಳಲ್ಲಿ ಕಾಣುತ್ತೇವೆ.

ಅಡಿಗರದು ಕ್ಷಿಷ್ಟ  ಶೈಲಿ ಎನ್ನುವುದು ಸರ್ವವಿದಿತ. ಇದಕ್ಕೆ ಅನೇಕ ಕಾರಣಗಳಿವೆ; ಒಂದು ಮುಖ್ಯ ಕಾರಣವೆಂದರೆ ಅವರು ಹೊರನೋಟಕ್ಕೆ ಸಂಬಂಧವಿಲ್ಲದ ಸಂಗತಿಗಳನ್ನು ಒಟ್ಟಿಗೆ ತಂದು ಕೂಡಿಸುವುದು. ಆದ್ದರಿಂದ ಅವರು ಸೃಜಿಸುವ ರೂಪಕಗಳು ಅಚ್ಚರಿ ಮೂಡಿಸುವಂಥವು. ಇದನ್ನು ಅರಿಯಬೇಕಾದರೆ ನಾವು ೧೭ನೆಯ ಶತಮಾನದ ಇಂಗ್ಲಿಷ್ ಕವಿಗಳಲ್ಲಿಗೆ ಹೋಗಬೇಕು. ಜಾನ್ ಡನ್, ಅಂಡ್ರ್ಯೂ ಮಾರ್ವೆಲ್, ಜಾರ್ಜ್ ಹರ್ಬರ್ಟ್, ಹೆನ್ರಿ ವಾನ್ ಮುಂತಾದ ಈ ಕವಿಗಳನ್ನು ಡಾಕ್ಟರ್ ಜಾನ್ಸನ್ ’ಮೆಟಫಿಸಿಕಲ್’ ಕವಿಗಳೆಂದು ಕರೆಯುತ್ತಾನೆ. ಇವರ ಕವಿತೆಗಳಲ್ಲಿ “the most heterogeneous ideas are yoked by violence together”  ಎನ್ನುತ್ತಾನೆ ಜಾನ್ಸನ್. ಎಂದರೆ ಭಿನ್ನ ಭಿನ್ನವಾದ ವಿಚಾರಗಳನ್ನು ಬಲವಂತದಿಂದ ಒಟ್ಟಿಗೆ ಒಂದು ನೊಗಕ್ಕೆ ಕಟ್ಟಲಾಗಿದೆ ಎಂದು. ಅನಂತರದ ಕಾವ್ಯೇತಿಹಾಸದಲ್ಲಿ ಕಡೆಗಣಿಸಲ್ಪಟ್ಟ ಈ ಕವಿಗಳಿಗೆ ಪುನರುಜ್ಜೀವನ ತಂದುಕೊಟ್ಟುವನು ಟಿ.ಎಸ್. ಎಲಿಯಟ್. ಈ ಕವಿಗಳ ಕುರಿತು ಅವನು ಸಾಕಷ್ಟು ಬರೆದಿದ್ದಾನೆ. ಅವರ ಈ ಕಾವ್ಯತಂತ್ರವನ್ನು ತನ್ನ ಕವಿತೆಗಳಲ್ಲಿ ಬಳಸಿಕೊಂಡಿದ್ದಾನೆ ಕೂಡ. ಆಧುನಿಕ ಕಾವ್ಯದ ಆರಂಭ ಇದು. ಹಾಗೂ ತಮ್ಮ ಮೇಲೆ ಎಲಿಯಟ್‌ನ ಪ್ರಭಾವವಿರುವುದನ್ನು ಸ್ವತಃ ಅಡಿಗರೇ ಒಪ್ಪಿಕೊಂಡಿದ್ದಾರೆ. ಭಿನ್ನ ಭಿನ್ನ ವಿಚಾರಗಳನ್ನು ಒಟ್ಟಿಗೆ ಇರಿಸಿ ಪರಿಣಾಮ ತೆಗೆಯುವ ಮೆಟಫಿಸಿಕಲ್ ತಂತ್ರವನ್ನು ಅಡಿಗರು ಅತ್ಯಂತ ಅತಿಶಯವಾಗಿ ಬಳಸಿಕೊಂಡಿರುವುದು ಸ್ಪಷ್ಟ. ಇದೇ ಅವರ ಕವಿತೆ ಸುಲಭವಾಗಿ ಅರ್ಥವಾಗದಿರುವುದಕ್ಕೆ ಮುಖ್ಯ ಕಾರಣ ಎನ್ನಬಹುದು. ಎಲಿಯಟ್ ಪ್ರಕಾರ ಅಂಥ ಕಾವ್ಯ “requires considerable agility on the part of the reader.”  ಓದುಗ ಚುರುಕಾಗಿರಬೇಕಾಗುತ್ತದೆ, ಯಾಕೆಂದರೆ ಕವಿತೆ ಅವನನ್ನು ಚಕಿತಗೊಳಿಸುತ್ತಲೇ ಇರುತ್ತದೆ. ಅಡಿಗರ ನವ್ಯಕಾವ್ಯದ ಯಾವುದೇ ಕವಿತೆಯನ್ನು ತೆಗೆದುಕೊಂಡರೂ ಇದಕ್ಕೆ ಉದಾಹರಣೆ ಸಿಗುತ್ತದೆ. ’ಭೂತ’ ಕವಿತೆಯ ಆರಂಭವನ್ನು ನೋಡಿ:

ಕಾಡುತ್ತಿವೆ ಭೂತಕಾಲದ ಭ್ರೂಣಗೂಢಗಳು
ಹುಗಿದ ಹಳಭಾವಿಯೊಳ ಕತ್ತಲ ಹಳಸು ಗಾಳಿ
ಅಂಬೆಗಾಲಿಟ್ಟು ತಲೆಕೆಳಗು ತೆವಳುತ್ತೇರಿ
ಅಳ್ಳಳ್ಳಾಯಿ ಜಪಿಸುವ ಬಿಸಿಲಕೋಲಿಗೆಗರಿ ತೆಕ್ಕಾಮುಕ್ಕಿ
ಹಾಯುತ್ತಿದೆ ತುಳಸಿವೃಂದಾವನದ ಹೊದರಿಗೂ.
ತೊಟ್ಟು ಕಳಚಿದ ಹೊಕ್ಕುಳಿನ ಬಳ್ಳಿ ದಡದಲ್ಲಿ
ಕತ್ತರಿಸಿದಿಲಿಬಾಲ ಮಿಡುಕುತ್ತದೆ.
ಕತ್ತಲಲ್ಲೇ ಕಣ್ಣು ನೆಟ್ಟು ತಡಕುವ ನನಗೆ
ಹೊಳೆವುದು ಹಠಾತ್ತನೊಂದೊಂದು ಚಿನ್ನದ ಗೆರೆ,
ಅಮಾವಾಸ್ಯೆ ಕಂದಕಗಳಲ್ಲಿ ಹೇಗೋ ಬಿದ್ದು
ಒದ್ದಾಡುತಿರುವ ಗರಿಸುಟ್ಟ ತಾರೆ.
(’ಭೂತ’)

ಕವಿತೆ ಎತ್ತಣಿಂದೆತ್ತ ಹೋಗುತ್ತಿದೆ ನೋಡಿ: ಹಳಸು ಗಾಳಿ ಇಲ್ಲಿ ಅಂಬೆಗಾಲಿಕ್ಕುವ ಹಸುಳೆಯಾಗಿ ತೆವಳುತ್ತ ಮೇಲೇರುತ್ತದೆ, ಬಿಸಿಲ ಕೋಲಿಗೆ ಎಗರಿ! ಅಲ್ಲಿಂದ ಅದು ತುಳಸಿ ವೃಂದಾವನದ ಹೊದರಿಗೂ ಹಾಯುತ್ತದೆ. ತೊಟ್ಟು ಕಳಚಿದ ಹೊಕ್ಕುಳ ಬಳ್ಳಿಯನ್ನು ಕತ್ತರಿಸಿದ ಇಲಿಬಾಲದಂತೆ ರೂಪಿಸಲಾಗಿದೆ: ಇದೂ ಅಡಿಗರು ಆಧುನಿಕ ಕಾವ್ಯದಿಂದ ಪಡೆದುಕೊಂಡ ಒಂದು ಲಕ್ಷಣ, ಎಂದರೆ ಜಿಗುಪ್ಸೆ ಹುಟ್ಟಿಸುವ ಪ್ರತಿಮೆಗಳನ್ನು ಮೂಡಿಸುವುದು, ಹಾಗೂ ಪವಿತ್ರವನ್ನು ಅಪವಿತ್ರದ ಜತೆ ಹೆಣೆಯುವುದು! ಈ ವೈರುಧ್ಯಗಳ ನಡುವೆ ಅದೆಲ್ಲೋ ಕವಿಗೆ ಪ್ರಿಯವಾದ ’ಚಿನ್ನದ ಗೆರೆ’ಯೂ ಕಾಣಿಸುತ್ತದೆ. ಅದೊಂದು ಗರಿಸುಟ್ಟ (ಶಪಿತ?) ತಾರೆ. ಇವೆಲ್ಲವೂ ಭೂತದ ಸ್ಥಿತಿಯನ್ನು ಹೇಳುತ್ತವೆ. ನಮಗಿಲ್ಲಿ ಮುಖ್ಯವಾಗುವುದು ಹೇಳುವ ಕ್ರಮ. ಅಡಿಗರ ಬಹುಪ್ರಸಿದ್ಧ ಕವಿತೆಗಳಲ್ಲಿ ಒಂದಾದ ’ವರ್ಧಮಾನ’ ಶುರುವಾಗುವ ಬಗೆಯನ್ನೂ ಗಮನಿಸಿ:

ತನ್ನ ರಾಜಕುಮಾರತನದ ಮೀಸೆಯ ಚಿಗುರು
ದೇಶ ಕಾಣದ ಹಾಗೆ ನೆರೆದು, ಕತ್ತಿನ ಕುಣಿಕೆ
ಹರಿದು ಹರವೋ ಹರ. ಹುಲ್ಲು, ದರೆ, ಗಿಡ,
ಹೊದರು-
ಎಲ್ಲವನ್ನೆತ್ತೆತ್ತಿ ಕುತ್ತಿ ತೀರದ ತುರಿಕೆ
ಮೊಳೆವ ಕೊಂಬಿಗೆ. ಅರಬ್ಬಿಠಾಕಣ ಸವಾರಿಯ
ಪೊಗರು
ನಾಣಿ ಮಗ ಸೀನಿಗೆ. ಅಕಾಶ ಕೈಗೆಟುಕದಿದ್ದಕ್ಕೆ,
ಕೋಶಾವಸ್ಥೆ ಮರಳಿ ಬಾರದ್ದಕ್ಕೆ, ತನಗಿಂತ
ಮೊದಲೇ ತನ್ನಪ್ಪ ಹುಟ್ಟಿದ್ದಕ್ಕೆ,
ಮೊಲೆ ಬಿಡಿಸಿದವಮಾನ ಮುಯ್ಯಿ ತೀರದ್ದಕ್ಕೆ

ರೊಚ್ಚು: ಕೊಚ್ಚುತ್ತಾನೆ ಗಾಳಿಮೋಪು;
ರೇಗಿ ಕಿರಚುತ್ತಾನೆ ಭಾರಿ ರೋಫು;
ಹೂಂಕರಿಸಿ ಹಾರುತ್ತಾನೆ ಮೂರು ಗುಪ್ಪು.
(’ವರ್ಧಮಾನ’)

ಅಪ್ಪ ಮತ್ತು ಮಗನ ನಡುವಿನ ಕಂದರವನ್ನು ಹೇಳುವ ಈ ಕವಿತೆಯಲ್ಲೂ ಅಡಿಗರ ಮೆಚ್ಚಿನ ತಂತ್ರಗಾರಿಕೆಯನ್ನು ನೋಡಬಹುದು: ಮೀಸೆ ಬರುವಾಗ ದೇಶ ಕಾಣದು ಎಂಬ ಗಾದೆಮಾತನ್ನು ನೆನಪಿಸುವಂತೆ ಈ ಹೈದನಿಗೂ ಮೀಸೆ ಬಂದಿದೆ, ಹಾಗೂ ಅವನಿಗೆ ದೇಶ ಕಾಣಿಸುವುದಿಲ್ಲ; ಅರ್ಥಾತ್ ಅವನು ಯಾರನ್ನೂ ಲೆಕ್ಕಿಸುವುದಿಲ್ಲ. ’ನೆರೆದು’ ಎಂಬಲ್ಲಿನ ಶ್ಲೇ?ಯೂ ಗಮನಾರ್ಹ. (ಅಡಿಗರು ಶೇಕ್ಸ್‌ಪಿಯರ್‌ನಂತೆಯೇ ಶ್ಲೇ?ಯನ್ನು ಬಿಡುವವರಲ್ಲ!) ವಯಸ್ಸಿಗೆ ಮೊದಲೇ ಈತ ವೃದ್ಧನಾಗಿದ್ದಾನೆ ಎನ್ನುವುದು ಭಾವ. ಅನಂತರ ಬರುವುದು ಗೂಳಿಯ ಪ್ರತಿಮೆ; ಆಮೇಲೆ ಕುದುರೆಯದು, ಅದೂ ’ಅರಬಿಠಾಕಣ’ದ್ದು; ’ಠಾಕಣ’ವೆಂದರೆ ಗಿಡ್ಡ ಜಾತಿಯ ಕುದುರೆ. ಮೇಯುವ, ಹಾಯುವ, ನೆಗೆಯುವ ಹುಮ್ಮಸ್ಸು ಈ ನಾಣಿ ಮಗ ಸೀನಿಗೆ – ಈ ನುಡಿಗಟ್ಟು ಅವನ ವಾಸ್ತವದ ಸಾಮಾನ್ಯತನವನ್ನು ಸೂಚಿಸುತ್ತದೆ. ಅವನ ರೊಚ್ಚಿನ ಅಸಂಗತ ಕಾರಣಗಳನ್ನೂ ಗಮನಿಸಿ! ’ಗಾಳಿಮೋಪು’ ಎನ್ನುವ ಸಮಾಸಪದ ಬಲವಂತದ್ದು, ಅದೊಂದು ಅಸಾಧಾರಣವಾದ ರೂಪಕ. ಗಾಳಿಯನ್ನು ಮೋಪಾಗಿ ಕಲ್ಪಿಸುವುದು, ಹಾಗೂ ಅದನ್ನು ನಮ್ಮೀ ಕಥಾನಾಯಕ ಕೊಚ್ಚುವುದನ್ನು ಗ್ರಹಿಸುವುದು ಕ?ವಾಗುತ್ತದೆ, ಆದರೆ ಕವಿ ನಮ್ಮನ್ನು ಈ ಅಸಾಧ್ಯತೆಯ ಕಡೆಗೆ ಪ್ರೇರೇಪಿಸುತ್ತಾರೆ.

ಒಬ್ಬ ಪ್ರಮುಖ ಕವಿಯ ಉಪಸ್ಥಿತಿಯನ್ನು ಸ್ಟೆಟಿಸ್ಟಿಕಲ್ ಆಗಿ ಹೇಳಲು ಬರುವುದಿಲ್ಲ. ಅಡಿಗರ ಕವಿತೆಗಳನ್ನು ಓದಿದ್ದೀರಾ ಎಂದು ಹೊಸ (ಎಂದರೆ ಈಚಿನ ತಲೆಮಾರಿನ) ಕವಿಗಳನ್ನು ಕೇಳಿದರೆ, ಉತ್ತರ ನಿರಾಶಾಜನಕವಾಗಿದ್ದೀತು. ಪಂಪ, ರನ್ನ, ಜನ್ನ, ಕುಮಾರವ್ಯಾಸ, ಲಕ್ಷ್ಮೀಶ ಮುಂತಾದವರ ಬಗ್ಗೆ ಕೇಳಿದರೂ ಹೀಗೆಯೇ. ಆದರೆ ಅಡಿಗರು ಈಚಿನವರು, ನಮಗೆ ಹೆಚ್ಚು ಪ್ರಸ್ತುತ, ಆದ್ದರಿಂದ ಇಂದಿನ ಕವಿಗಳು, ವಿಮರ್ಶಕರು ಅವರನ್ನು ಓದಬೇಕೆಂದು ನಾವು ಬಯಸುವುದು, ಆದರೆ ನಿರೀಕ್ಷೆಯ ಮಟ್ಟಕ್ಕೆ ಜನ ಓದುವುದಿಲ್ಲ ಎಂದು ಬೇಸರಿಸುವುದು ಸಹಜವೇ ಆಗಿದೆ. ಓದುವುದು, ಓದಿದ ಬಗ್ಗೆ ಮಾತಾಡುವುದು, ಬರೆಯುವುದು, ವಿಶ್ಲೇಷಿಸುವುದು ಒಂದು ಜೀವಂತ ಸಂಸ್ಕೃತಿಯ ಲಕ್ಷಣ.

ಅಡಿಗರು ಬಳಸುವ ಪದಗಳನ್ನು ನೋಡಿ: ಕೆಲವೊಂದು ನಮಗೆ ಅರ್ಥವೇ ಆಗುವುದಿಲ್ಲ. ಕೆಲವಕ್ಕೆ ಅವರೇ ಅರ್ಥ ಕೊಡುತ್ತಾರೆ. ’ಅಳ್ಳಳ್ಳಾಯಿಸು’ ಎಂದರೆ ಮಗುವನ್ನು ಲಾಲಿ ಮಾಡುವಾಗ ಹೇಳುವ ಮಾತು ಎನ್ನುತ್ತಾರೆ. ’ಠಾಕಣ’ ಶಬ್ದದ ಅರ್ಥ ನಿಮಗೆ ಯಾವುದಾದರೂ ಪದಕೋಶದಲ್ಲಿ ಸಿಕ್ಕಿದರೆ ಭಾಗ್ಯ. ಅಡಿಗರದು ಮಿಶ್ರಧಾತುವಿನ ಭಾಷೆ, ಆದ್ದರಿಂದಲೇ ಗ್ರಹಿಸಲು ಕ?ವಾದ್ದು, ಆದರೆ ಯೋಗ್ಯವಾದ್ದು ಕೂಡ. ಅವರ ಪದಪ್ರಯೋಗ ನನಗೆ ಕುಮಾರವ್ಯಾಸನನ್ನು ನೆನಪಿಸುತ್ತದೆ!

ಅಡಿಗರ ಶೈಲಿಯ ಬಗ್ಗೆ ಇನ್ನಷ್ಟು ಹೇಳಬಹುದು, ಆದರೆ ಇದು ಅದಕ್ಕೆ ಸರಿಯಾದ ವೇದಿಕೆಯಲ್ಲ. ಒಂದು ಮಾತನ್ನು ಮಾತ್ರ ಹೇಳಿ ಮುಗಿಸುತ್ತೇನೆ: ಅದು ಅಡಿಗರ ವ್ಯಂಗ್ಯ (ಐರನಿ); ವ್ಯಂಗ್ಯವಿಲ್ಲದೆ ಅಡಿಗ ಕಾವ್ಯವಿಲ್ಲ. ’ಬತ್ತಲಾರದ ಗಂಗೆ,’ ’ಅಜ್ಜ ನೆಟ್ಟಾಲ,’ ’ಎಡ-ಬಲ,’ ’ಏನಾದರೂ ಮಾಡುತಿರು ತಮ್ಮ,’ ’ಗೊಂದಲಪುರ,’ ’ಹಿಮಗಿರಿಯ ಕಂದರ,’ ’ಪು?ಕವಿಯ ಪರಾಕು,’ ’ಡೊಂಕು ಬಾಲಕ್ಕೆ ಚಿನ್ನದ ನಳಿಗೆ,’ ’ನೆಹರೂ ನಿವೃತ್ತರಾಗುವುದಿಲ್ಲ’ – ಯಾವ ಕವಿತೆಯನ್ನು ಬೇಕಾದರೂ ತೆಗೆದುಕೊಳ್ಳಿ, ವ್ಯಂಗ್ಯ ಇದ್ದೇ ಇರುತ್ತದೆ. ಕೆಲವೊಮ್ಮೆ ಅದು ಕಾರಣರಹಿತವಾಗಿ ಅತಿಯಾಯಿತು ಎನಿಸುತ್ತದೆ, ಎಂದರೆ ಅದಕ್ಕೆ ತಕ್ಕುದಾದ ವಸ್ತುಪ್ರತಿರೂಪ (objective correlative) ಸಾಲದು ಎನಿಸುತ್ತದೆ. ಆಗ ಅಡಿಗರ ಸ್ವಭಾವವೇ ಕಟುವಾದ್ದು ಎನ್ನುವ ಭಾವನೆ ಬಂದರೆ ಆಶ್ಚರ್ಯವಿಲ್ಲ. ತಮ್ಮ ಕಟುವಾದ ಮಾತಿನ ಮೂಲಕ ಲೋಕವನ್ನೇ ಬದಲಿಸಿಬಿಡುತ್ತೇನೆ ಎಂಬ ವಿಶ್ವಾಸವೊಂದು ಅವರಿಗೆ ಇತ್ತೋ ಏನೋ.

ಪ್ರಶ್ನೆ: ಕರ್ನಾಟಕ ಸೇರಿದಂತೆ ಭಾರತದಲ್ಲಿ ಯೂರೋಪಿನಂತಹ ಪರಿಸ್ಥಿತಿ ಇರಲಿಲ್ಲ. ಆದ್ದರಿಂದ ಇಲ್ಲಿ ನವ್ಯಚಳವಳಿಯ ಅಗತ್ಯವಿರಲಿಲ್ಲ ಎಂಬ ಒಂದು ಅಭಿಪ್ರಾಯ ಇದೆಯಲ್ಲವೆ? ಆ ಬಗ್ಗೆ ನಿಮ್ಮ ನಿಲವೇನು?

ಉತ್ತರ: ಇದಕ್ಕೆ ಅಡಿಗರು ೧೯೭೬ರಲ್ಲಿ ಪ್ರಕಟವಾದ ತಮ್ಮ ’ಸಮಗ್ರ ಕಾವ್ಯ’ಕ್ಕೆ ಬರೆದ ಮೊದಲ ಮಾತಿನಲ್ಲಿ ಉತ್ತರಿಸಿದ್ದಾರೆ. ಸ್ವಾತಂತ್ರ್ಯೋತ್ತರದ ಭಾರತದಲ್ಲಿ ಉಂಟಾದ ಭ್ರಮನಿರಸನವನ್ನು ಅವರು ಮೊದಲ ಮಹಾಯುದ್ಧದ ಬೆನ್ನಲ್ಲೇ ಯೂರೋಪಿನಲ್ಲಿ ಉಂಟಾದ ಅಸ್ಥಿರ ಮನಃಸ್ಥಿತಿಗೆ ಹೋಲಿಸುತ್ತಾರೆ, ಎರಡಕ್ಕೂ ಸಾಮ್ಯತೆ ಕಲ್ಪಿಸುತ್ತ. ಕೇವಲ ಇಂಗ್ಲಿಷ್ ಕವಿಗಳ ಪ್ರಭಾವದಿಂದ ಅನುಕರಣೆಯಾಗಿ ನವ್ಯಕಾವ್ಯ ಇಲ್ಲಿಗೆ ಬಂತು ಎನ್ನುವ ಆಪಾದನೆಗೆ ಅವರು ನೀಡುವ ಉತ್ತರ ಇದು. ಇದರ ಕುರಿತು ನನ್ನ ವಿಚಾರ ಬೇರೆಯೇ ಇದೆ. ನವ್ಯವೆನ್ನುವುದು ಆಧುನಿಕತೆಯ ಒಂದು ಅಭಿವ್ಯಕ್ತಿ. ಅದು ಭಾರತದಲ್ಲಿ ಒಂದಲ್ಲ ಒಂದು ದಿನ ಕಾಣಿಸಿಕೊಳ್ಳಲೇಬೇಕಿತ್ತು, ರೇಲ್ವೆಯಂತೆ, ವಿದ್ಯುತ್ತಿನಂತೆ, ವಿಜ್ಞಾನದಂತೆ, ತಂತ್ರಜ್ಞಾನದಂತೆ. ಪಾಶ್ಚಾತ್ಯ-ಪೌರಾತ್ಯ ಎಂಬ ಸಗಟು ವಿಭಜನೆಯಲ್ಲಿ ನನಗೆ ನಂಬಿಕೆಯಿಲ್ಲ. ಭಾರತೀಯರು ಸಿದ್ಧರಾಗುವ ಮೊದಲೇ ಭಾರತಕ್ಕೆ ಪ್ರಜಾಪ್ರಭುತ್ವ ಬಂತು ಎನ್ನುವುದನ್ನು ನಾನು ಕೇಳಿದ್ದೇನೆ! ಸ್ವಾತಂತ್ರ್ಯಕ್ಕೆ ಸಿದ್ಧರಾಗುವುದು ಎಂದರೇನು? ಅದೇ ರೀತಿ ನವ್ಯಕಾವ್ಯಕ್ಕೆ ಸಿದ್ಧತೆ ಎನ್ನುವುದೊಂದು ಇದೆಯೇ? ಸ್ವಾತಂತ್ರ್ಯಪೂರ್ವದಲ್ಲಿ ’ಕಟ್ಟುವೆವು ನಾವು’ ಬರೆದ ಅಡಿಗರಿಗೆ ಸ್ವಾತಂತ್ರ್ಯದ ಅನಂತರ ಅವರ ಕಲ್ಪನೆಯ ’ರಸದ ಬೀಡು’ ಮೂಡಿಬಂದಿಲ್ಲ ಎಂದು ಭ್ರಮನಿರಸನ ಆಗಿರಬಹುದು. ಆಗ ಮೂಡಿಬಂದುದು ’ಚಂಡೆ ಮದ್ದಳೆ’ಯ ನವ್ಯ ಕವಿತೆಗಳು ಎನ್ನೋಣವೇ? ಹಾಗನ್ನುವುದೊಂದು ’ಬ್ಯಾಡ್ ಫೈತ್’ನಂತೆ ನನಗನಿಸುತ್ತದೆ. ’ಕಟ್ಟುವೆವು ನಾವು’ ಒಂದು ಕವಿಸಮಯ, ರೊಮ್ಯಾಂಟಿಕ್ ಪಂಥಕ್ಕೆ ಸೇರಿದ್ದು; ಅದನ್ನು ಅಕ್ಷರಶಃ ನಂಬುವ? ಮುಗ್ಧರಾಗಿರಲಿಲ್ಲ ಅಡಿಗರು. ಐವತ್ತರ ಸುಮಾರಿಗೆ ಅವರು ಕವಿತೆಯ ಹೊಸ ಸಾಧ್ಯತೆಗಳನ್ನು ಕಂಡುಕೊಂಡರು; ಹಾಗೂ ಅದಕ್ಕೆ ಅವರಿಗೆ ಅಧುನಿಕ ಇಂಗ್ಲಿ? ಕಾವ್ಯದ ಪರಿಚಯವಾದುದೇ ಕಾರಣ ಎನಿಸುತ್ತದೆ ನನಗೆ. ಟಿ.ಎಸ್. ಎಲಿಯಟ್, ಆಡೆನ್, ಲೂಯಿ ಮೆಕ್‌ನೀಸ್ ಮುಂತಾದವರನ್ನು, ಮುಖ್ಯವಾಗಿ ಎಲಿಯಟ್‌ನ ವಿಮರ್ಶಾ ಪ್ರಬಂಧಗಳನ್ನು, ಓದುವಂತೆ ಅಡಿಗರು ತಮಗೆ ಸಲಹೆಯಿತ್ತರು ಎಂಬುದಾಗಿ ರಾಮಚಂದ್ರ ಶರ್ಮ ಒಂದೆಡೆ ಹೇಳುತ್ತಾರೆ. ಇದರ ಅರ್ಥವನ್ನು ನೀವೇ ಮಾಡಿಕೊಳ್ಳಿ.

ನನ್ನ ಪ್ರಕಾರ ನವ್ಯವೆನ್ನುವುದು ಆಧುನಿಕತೆಯ ಒಂದು ಅಂಗ. ಆಧುನಿಕತೆ ಜಗತ್ತಿನ ಎಲ್ಲ ಕಡೆಯೂ ಹರಡಿದೆ – ಕಾಲದಲ್ಲಿ ಹೆಚ್ಚು ಕಡಮೆ ಇರಬಹುದು. ಆಧುನಿಕತೆಯ ಲಕ್ಷಣಗಳೇನು, ಅದು ಬರುವುದಕ್ಕೆ ಕಾರಣವೇನು ಎಂಬ ಪ್ರಶ್ನೆಯನ್ನು ನಾನಿಲ್ಲಿ ಉತ್ತರಿಸಲಾರೆ. ಆದರೆ ಅದಕ್ಕೆ ಭ್ರಮನಿರಸನವಂತೂ ಕಾರಣವಲ್ಲ. ಇನ್ನು ನನ್ನಂಥವರಿಗೆ ಎಂದೂ ಭ್ರಮನಿರಸನ ಇರಲಿಲ್ಲ, ಯಾಕೆಂದರೆ ನಮಗೆ ಭ್ರಮೆಯೇ ಇರಲಿಲ್ಲ. ನಮಗೆ ಬೇಕಾಗಿದ್ದುದು ವ್ಯಕ್ತಿಸ್ವಾತಂತ್ರ್ಯ, ವಿದ್ಯಾಭ್ಯಾಸ ಮತ್ತು ಬೆಳವಣಿಗೆಗೆ ಅವಕಾಶ. ಯಾಜಮಾನ್ಯ ಸಂಸ್ಕೃತಿಯಲ್ಲಿ ಇದು ಸಾಧ್ಯವಿರಲಿಲ್ಲ. ಆದ್ದರಿಂದ ನವ್ಯ ಇಂಥ ಬಂಧನವನ್ನು ಸಾಹಿತ್ಯಿಕವಾಗಿಯಾದರೂ ಉಲ್ಲಂಘಿಸುವುದಕ್ಕೆ, ಹಾಗೂ ಆ ಮೂಲಕ ಇತರ ಸಾಧ್ಯತೆಗಳನ್ನು ಕಂಡುಕೊಳ್ಳುವುದಕ್ಕೆ ಒಂದು ವಿಧಾನವಾಯಿತು. ಇದಕ್ಕೆ ಇಂಗ್ಲಿಷ್ ವಿದ್ಯಾಭ್ಯಾಸ ನಮಗೆ ಸಹಾಯಕ್ಕೆ ಬಂತು. ನಾನು ನನ್ನ ತಲೆಮಾರಿನ ಯುವಕ ಯುವತಿಯರ ಬಗ್ಗೆ ಹೇಳುತ್ತಿರುವುದು. ಇಂದಿನವರಿಗೆ ಇದು ಅರ್ಥವಾಗುವುದು ಕಷ್ಟ.

ಪ್ರಶ್ನೆ: ಅಡಿಗರು ನಿಧನರಾಗಿ ಕಾಲು ಶತಮಾನ ದಾಟಿದರೂ ಕನ್ನಡ ಕಾವ್ಯ ಈಗಲೂ ಅರ್ಥಾನುಸಾರಿ – ಆಡುಮಾತಿನ ಲಯ, ಮುಕ್ತ ಛಂದಸ್ಸು ಮುಂತಾಗಿ ಅಡಿಗರ ಶೈಲಿಯಲ್ಲೇ ಇದೆಯೆ?

ಉತ್ತರ: ಇದೆ ಮತ್ತು ಇಲ್ಲ! ಬದಲಾವಣೆಗಳು, ಹೊಸ ಪ್ರಯೋಗಗಳು ಆಗುತ್ತಲೇ ಇರುತ್ತವೆ. ಅಡಿಗರು ಇನ್ನೂ ಬರೆಯುತ್ತ ಇರುವಾಗಲೇ ’ಅಡಿಗೋತ್ತರ’ ಕಾವ್ಯದ ಬಗ್ಗೆ ಜನ ಮಾತಾಡಿಕೊಳ್ಳಲು ಸುರುಮಾಡಿದ್ದರು. ಅಡಿಗರ ಕಾಲದಲ್ಲೇ ಎ.ಕೆ. ರಾಮಾನುಜನ್ ಅವರಿಗಿಂತ ಭಿನ್ನವಾಗಿ ಬರೆಯುತ್ತಿದ್ದರು. ಆದರೆ ರಾಮಾನುಜನ್ ಕೂಡ ಮುಕ್ತ ಛಂದಸ್ಸನ್ನು ಬಳಸಿದರು, ಆಡುಮಾತಿನ ಲಯವನ್ನು ಅನುಸರಿಸಿದರು, ಅವರ ಕವಿತೆಗಳೂ ಅರ್ಥಾನುಸಾರಿಯೇ. ಆದರೂ ಅವೆಲ್ಲ ಅಡಿಗರಿಗಿಂತ ಬಹಳ ಭಿನ್ನವಾಗಿದ್ದುವು. ಇನ್ನು ಕೆಲವರು ಅಡಿಗರ ಶೈಲಿಯ ಪ್ರಭಾವದಲ್ಲಿದ್ದುದು ನಿಜ. ಆದರೆ ಅವರೂ ಸ್ವಂತಿಕೆಯನ್ನ ಸಾಧಿಸಿಕೊಂಡಿದ್ದಾರೆ. ಅಡಿಗರ ತದ್ರೂಪಿಗಳು ಯಾರೂ ಇಲ್ಲ. ಅಡಿಗರು ಇರುವಾಗಲೇ ಎಪ್ಪತ್ತರಲ್ಲಿ ದಲಿತ-ಬಂಡಾಯ ಚಳವಳಿಗಳೂ ಮೂಡಿಬಂದುವು ಎನ್ನುವುದನ್ನು ನೆನೆಯಬೇಕು.

ಇದಕ್ಕೂ ಮೊದಲು ಪ್ರಗತಿಪಂಥ; ಆದರೆ ಅದು ಹೆಚ್ಚು ಗದ್ಯಕ್ಕೆ ಸೀಮಿತವಾಗಿತ್ತು. ಈಗ ಈ ತಾಂತ್ರಿಕಯುಗದಲ್ಲಿ ಒಬ್ಬೊಬ್ಬರೂ ತಮಗೆ ತೋಚಿದಂತೆ ಬರೆಯುತ್ತಿದ್ದಾರೆ, ಆದ್ದರಿಂದ ವೈವಿಧ್ಯವಿದೆ. ಆಧುನಿಕತೆಯ ಛಳಕು ಎಲ್ಲ ರಚನೆಗಳ ಮೇಲೂ ಇದೆ.

ಪ್ರಶ್ನೆ: ಅಡಿಗರ ಕಾವ್ಯ ಕ್ಲಿಷ್ಟವೆ? ಸಂಕೀರ್ಣವೆ? ಕಾವ್ಯ ಸರಳವಾಗಿರಬೇಕೆಂದು ಇಂದಿನ ಓದುಗ ನಿರೀಕ್ಷಿಸುತ್ತಾನೆಯೆ?

ಉತ್ತರ: ಅಡಿಗರ ಕಾವ್ಯ ಕ್ಲಿಷ್ಟ ಮತ್ತು ಸಂಕೀರ್ಣ ಎನ್ನುವುದು ನಿಜ. ಈ ಬಗ್ಗೆ ಈಗಾಗಲೇ ಪ್ರಸ್ತಾಪಿಸಲಾಗಿದೆ. ಇಂಗ್ಲಿಷ್ ನ ಮೆಟಫಿಸಿಕಲ್ ಕವಿಗಳು (ಎಲಿಯಟ್ ಮೂಲಕ) ಮಾಡಿದ ಪ್ರಭಾವ ಇದು ಎನ್ನುವುದನ್ನೂ ನೋಡಿದ್ದೇವೆ. ಇನ್ನು ಆಧುನಿಕ ಜೀವನ ಸಂಕೀರ್ಣವಾಗಿದೆ, ಅದಕ್ಕೆ ಅನುಗುಣವಾಗಿ ಆಧುನಿಕ ಕವಿತೆಯೂ ಸಂಕೀರ್ಣವಾಗಿರುತ್ತದೆ ಎಂಬ ವಾದವೂ ಇದೆ. ಭಾಷೆಯೇ ಕುಸಿದಿದೆ, ಭಾಷೆಯ ಮೇಲಿನ ನಂಬಿಕೆ (’ಭಾಷೆಯ ಭಾಷೆ’) ಹೊರಟು ಹೋಗಿದೆ – ಆದ್ದರಿಂದ ಈ ಸಂಕೀರ್ಣತೆ ಎಂದೂ ಹೇಳುತ್ತಾರೆ. ಇಂಥ ವ್ಯಾಖ್ಯಾನಗಳನ್ನು ಹೇಗೆ ತೆಗೆದುಕೊಳ್ಳಬೇಕೋ ತಿಳಿಯುವುದಿಲ್ಲ. ಇದರಲ್ಲಿ ಇದಮಿತ್ಥಂ ಎಂಬ ನಿಖರ ಸತ್ಯವೊಂದು ಇದೆಯೆನ್ನುವುದಕ್ಕೆ ಕಷ್ಟವಾಗುತ್ತದೆ. ಯೂರೋಪಿನ ಸರ್ರಿಯಲಿಸ್ಟ್ ಸಾಹಿತಿಗಳು ಮತ್ತು ಕಲಾವಿದರು ಹೊರನೋಟಕ್ಕೆ ಕಾಣಿಸದಂಥ ವಲಯವೊಂದನ್ನು ಹುಡುಕುತ್ತಿದ್ದರು. ಅಡಿಗರು ಅಂಥದೇನನ್ನಾದರೂ ಹುಡುಕುತ್ತಿದ್ದರೆಂದು ಅನಿಸುವುದಿಲ್ಲ. ಆದರೆ ಅವರಿಗೆ ಅದೇನೋ ಆಂತರಿಕ ತುಮುಲವೊಂದು ಇದ್ದೇ ಇತ್ತು. ಅಡಿಗರದೊಂದು ‘ಭಗ್ನ ವ್ಯಕ್ತಿತ್ವ’ ಎಂದು ನನಗನಿಸುತ್ತದೆ. ಅವರು ಯಾರನ್ನು, ಏನನ್ನು ಟೀಕಿಸುತ್ತಾರೋ ಅದು ಅವರದೇ ಒಂದು ಭಾಗ. ಉದಾಹರಣೆಗೆ, ’ವರ್ಧಮಾನ’ದಲ್ಲಿ ಮಗನೂ ತಂದೆಯೂ ಅಡಿಗರೇ! ಅದಲ್ಲದಿದ್ದರೆ ಮೈ ಪರಚಿಕೊಳ್ಳುವಂಥ ಅಂಥ ಶೈಲಿಗೆ ಅರ್ಥವಿಲ್ಲ.

ಕೊರಕಲಿನ ದಂಡೆಯರೆ ಮೇಲೆ ಕುಳಿತಿದ್ದೇನೆ
ಸಿಗರೇಟು ಹಚ್ಚಿ ಸೇದುತ್ತ ಸುಡುವುರಿಯಲ್ಲಿ
ಬೇಸಗೆಯ ಮಧ್ಯಾಹ್ನ. ಕೆಳಗೆ ಅಳಲುತ್ತಾನೆ
ಪಂಚಾಗ್ನಿ ಮಧ್ಯಸ್ಥ ಮಗ. ಕೂಗಿ ಕೂಗಿ
ಕರೆಯುತ್ತೇನೆ ಮಂಡೆ ಬಿಸಿ
ಕಂದ ಕಿವುಡಾಗಿದ್ದಾನೆ. ಅಥವಾ ಅವನ ಭಾ?ಯೇ
ಬೇರೊ?
(’ವರ್ಧಮಾನ’)

ಅಪ್ಪ ಮಗ ಇಬ್ಬರೂ ಉರಿಯಲ್ಲಿ ಬೇಯುತ್ತಿದ್ದಾರೆ, ಇಬ್ಬರ ನಡುವೆ ಸಂಪರ್ಕ ಕಡಿದಿದೆ. ’ಅಥವಾ ಅವನ ಭಾಷೆಯೇ ಬೇರೊ?’ ‘By the waters of Leman I sat down and wept…’ (T. S. Eliot, The Waste Land, l. 182, ಚುಕ್ಕಿಗಳು ಮೂಲದಲ್ಲಿರುವಂತೆ.) ಅತ್ಯಂತ ಬಹಿರ್ಮುಖಿಯಾದ ಅಡಿಗರ ಭಾ? ಅರ್ಥವಾಗದ ಆ ಬೇರೆ ಭಾ?ಯೂ ಹೌದು! ಇದೊಂದು ವೈರುಧ್ಯ.

ನೀವಂದಂತೆ ಕಾವ್ಯಭಾಷೆ ಸರಳವಾಗಿರಬೇಕು, ಸುಲಭವಾಗಿ ಅರ್ಥವಾಗಬೇಕು ಎಂಬ ನಿರೀಕ್ಷೆ ಅಡಿಗೋತ್ತರ ಕಾಲದಲ್ಲಿ ಇದೆ. ಹಲವಾರು ಕಾರಣಗಳು. ದಲಿತ ಬಂಡಾಯ ಕಾವ್ಯ (ಸಾಹಿತ್ಯ) ಸೋಶಿಯಲ್ ರಿಯಲಿಸಂ ಮೇಲೆ ಅವಲಂಬಿಸಿದೆ. ಅದು ಶೋಷಿತವರ್ಗದ ಕಾವ್ಯ, ಆದ್ದರಿಂದ ಅದರಲ್ಲಿ ಅವಾಂ-ಗಾರ್ದ್ ಪ್ರಯೋಗಗಳಿಗೆ ಅವಕಾಶವಿಲ್ಲ. ಕಾವ್ಯದಲ್ಲಿ ’ಅರ್ಥ’ವೇ ಮುಖ್ಯ, ಅದರ ರೂಪವಲ್ಲ, ಹಾಗೂ ಈ ಅರ್ಥ ಸುಲಭದಲ್ಲಿ ಸಂವಹನಗೊಳ್ಳಬೇಕು – ಎನ್ನುವುದು ಸೋಶಿಯಲ್ ರಿಯಲಿಸಂ ಸಾಹಿತ್ಯ ಸಿದ್ಧಾಂತದ ಆಗ್ರಹ. ಅದೇ ರೀತಿ, ಫೆಮಿನಿಸಂ ಮೊದಲಾದ ಐಡಿಯಾಲಜಿಯಿಂದ ಪ್ರೇರಿತವಾದ ರಚನೆಗಳೂ ಆರಂಭದಲ್ಲೇ ತಮ್ಮ ಅರ್ಥವನ್ನು ಪ್ರಕಟಿಸಿಬಿಡುತ್ತವೆ. ಅಲ್ಲದೆ ಸದ್ಯ ಐಟಿ ಬಿಟಿ ಇತ್ಯಾದಿ ಔದ್ಯೋಗಿಕ ಹಿನ್ನೆಲೆಯಿಂದ ಬರುವ ಅನೇಕ ಲೇಖಕರಿದ್ದಾರೆ. ಅವರಿಗೆ ಸಾಹಿತ್ಯದ ಪರಿಚಯ ಹೆಚ್ಚೇನೂ ಇರದ ಕಾರಣ, ತಮಗೆ ಗೊತ್ತಿರುವ ಕನ್ನಡದಲ್ಲಿ ಬೇಕಾದ ಹಾಗೆ ಬರೆಯುತ್ತಿದ್ದಾರೆ. ಓದುಗರಿಗಾದರೂ ಕ್ಲಿಷ್ಟ ಕವಿತೆಗಳನ್ನು ಅರ್ಥಮಾಡಿಕೊಳ್ಳುವ ವೇಳೆಯಾದರೂ ಎಲ್ಲಿದೆ? ಇದೆಲ್ಲಾ ಒಳ್ಳೆಯದೋ ಕೆಟ್ಟದ್ದೋ ಎಂದು ನಾನು ಹೇಳಲಾರೆ, ಆದರೆ ಇಂದಿನ ಸಮಯ ಹಾಗಿದೆ. ಕವಿತೆಯ ಓದುಗರು ಹಿಂದೆಯೂ ಕಡಿಮೆಯಿದ್ದರು, ಈಗ ಇನ್ನಷ್ಟು ಕಡಮೆಯಿರಬಹುದು. ಅನೇಕ ಮಂದಿ ಕವಿಗಳು ಭಾವಗೀತೆಗಳನ್ನು ಬರೆದು ಸುಗಮ ಸಂಗೀತದ ಕಡೆ ಸರಿದಿರುವುದಕ್ಕೆ ಇದೂ ಒಂದು ಕಾರಣವಿದ್ದೀತು. ಅದೆಲ್ಲಾ ಏನೇ ಇದ್ದರೂ ಕವಿತೆಯೊಂದು ನಮಗೆ ಪ್ರಿಯವೆನಿಸುವುದು ಅದರ ಕ್ಲಿ?ತೆಯಿಂದಲಾಗಲಿ ಸರಳತೆಯಿಂದಲಾಗಲಿ ಅಲ್ಲ, ಸುಲಭವಾಗಿ ವಿವರಿಸಲಾಗದ ಇನ್ನೇನೋ ಗುಣದಿಂದ. ’ಅರ್ಥವಾಗುವ ಹಾಗೆ ಬರೆಯಬೇಕು’ ಎನ್ನುವ ಅಡಿಗರದೇ ಕವಿತೆ ಇಲ್ಲಿ ಪ್ರಸ್ತುತ: ಅರ್ಥವಾಗುವ ಹಾಗೆ ಬರೆಯಬೇಕು ಎನ್ನುವವರಿಗೋಸ್ಕರ ಅಡಿಗರು ನೀಡುವ ಅರ್ಥಜಿಜ್ಞಾಸೆ ಇದು: “ಅರ್ಥವೇ ಇಲ್ಲ ಅಥವಾ ಎಲ್ಲವೂ ಅರ್ಥ.”

ಪ್ರಶ್ನೆ: ಅಡಿಗರ ಕಾವ್ಯದ ಮೇಲೆ ಕರಾವಳಿಯ ಯಕ್ಷಗಾನ ಮತ್ತು ಇತರ ಕಲೆಗಳ ಪ್ರಭಾವ ಇದೆಯೆ? ಯಾವ ರೀತಿಯಲ್ಲಿ ಇದೆ?

ಉತ್ತರ: ಯಕ್ಷಗಾನ ಬಯಲಾಟದ ಪ್ರಭಾವವಂತೂ ಇದ್ದೇ ಇದೆ, ಇನ್ನು ಸಂಗೀತ, ಚಿತ್ರಕಲೆ, ಶಿಲ್ಪ ಮುಂತಾದವುಗಳ ಪ್ರಭಾವ ಇದೆಯೋ ನಾನು ಹೇಳಲಾರೆ. ಯಕ್ಷಗಾನ ಜನಪ್ರಿಯವಾಗಿದ್ದ ಊರಿನಿಂದಲೇ ಬಂದವರು ಅವರು. ’ಸಮಗ್ರ ಕಾವ್ಯ’ದ ಮೊದಲ ಮಾತಿನಲ್ಲಿ ಇದನ್ನೆಲ್ಲ ಅವರೇ ಹೇಳಿಕೊಂಡಿದ್ದಾರೆ. ’ಚಂಡೆ ಮದ್ದಳೆ’ ಎಂಬ ಶೀರ್ಷಿಕೆಯೇ ಯಕ್ಷಗಾನವನ್ನು ಸೂಚಿಸುತ್ತದೆ. ಚಂಡೆ ಮತ್ತು ಮದ್ದಳೆ ಬಹಳ ಸದ್ದು ಮಾಡುವ ಯಕ್ಷಗಾನದ ಎರಡು ಚರ್ಮವಾದ್ಯಗಳು. ’ಚಂಡೆ ಮದ್ದಳೆ’ ಸಂಕಲನದ ಮೂಲಕ ಅಡಿಗರು ತಮ್ಮ ನವ್ಯಾವತಾರವನ್ನು ಸಾರಿಕೊಂಡರು ಎನ್ನಬಹುದು. ಅವರ ಕವಿತೆಗಳು ಯಕ್ಷಗಾನದ ನಾಟಕೀಯತೆಯಿಂದ ತುಂಬಿವೆ. ಅವುಗಳ ಎತ್ತುಗಡೆ, ನಿಲುಗಡೆ, ಚಲನ ಇತ್ಯಾದಿ. ಒಡ್ಡೋಲಗ ಬರುತ್ತದೆ; ಅದರಲ್ಲಿ ಕಥಾಪಾತ್ರ ಭಾಗವತರನ್ನು ಮಾತಾಡಿಸುವುದನ್ನು ಕಾಣುತ್ತೇವೆ. ಕೆಲವು ಸಾಲುಗಳು ಕೋಡಂಗಿ ಕುಣಿತಗಳನ್ನು, ಇನ್ನು ಕೆಲವು ಬಣ್ಣದ ವೇ?ಗಳ (ಅರ್ಥಾತ್ ರಾಕ್ಷಸ ಪಾತ್ರಗಳ) ಹೂಂಕಾರಗಳನ್ನು ನೆನಪಿಗೆ ತರುತ್ತವೆ. ’ಗೊಂದಲಪುರ’, ’ಹಿಮಗಿರಿಯ ಕಂದರ’, ’ದೆಹಲಿಯಲ್ಲಿ’ ಮುಂತಾದವು ಇದಕ್ಕೆ ಉದಾಹರಣೆಗಳು. ಅಡಿಗರ ಒಟ್ಟಾರೆ ಭಾ?ಯಲ್ಲೇ ಯಕ್ಷಗಾನದ ಗತ್ತು ಇದೆ. ಅದನ್ನವರು ವ್ಯಂಗ್ಯವಾಗಿ ಬಳಸಿಕೊಂಡಿರುವುದೂ ನಿಜ. ಆದರೆ ಪಾತ್ರಧಾರಿ ಎಲ್ಲಿ ನಟ, ಎಲ್ಲಿ ವ್ಯಕ್ತಿ ಎನ್ನುವುದು ಕೆಲವು ಸಲ ಗೊತ್ತಾಗದೆ ಹೋಗುತ್ತದೆ!

ಪ್ರಶ್ನೆ: ಹೊಸ ಕವಿಗಳು, ವಿಮರ್ಶಕರು ಅಡಿಗರ ಕಾವ್ಯದತ್ತ ಗಮನ ಹರಿಸುತ್ತಿಲ್ಲ ಎನ್ನಿಸುತ್ತದೆಯೆ? ಈವತ್ತಿನ ಕಾವ್ಯಜಗತ್ತಿನಲ್ಲಿ ಅಡಿಗರು ಎಷ್ಟು ಪ್ರಸ್ತುತ?

ಉತ್ತರ: ಒಬ್ಬ ಪ್ರಮುಖ ಕವಿಯ ಉಪಸ್ಥಿತಿಯನ್ನು ಸ್ಟೆಟಿಸ್ಟಿಕಲ್ ಆಗಿ ಹೇಳಲು ಬರುವುದಿಲ್ಲ. ಅಡಿಗರ ಕವಿತೆಗಳನ್ನು ಓದಿದ್ದೀರಾ ಎಂದು ಹೊಸ (ಎಂದರೆ ಈಚಿನ ತಲೆಮಾರಿನ) ಕವಿಗಳನ್ನು ಕೇಳಿದರೆ, ಉತ್ತರ ನಿರಾಶಾಜನಕವಾಗಿದ್ದೀತು. ಪಂಪ, ರನ್ನ, ಜನ್ನ, ಕುಮಾರವ್ಯಾಸ, ಲಕ್ಷ್ಮೀಶ ಮುಂತಾದವರ ಬಗ್ಗೆ ಕೇಳಿದರೂ ಹೀಗೆಯೇ. ಆದರೆ ಅಡಿಗರು ಈಚಿನವರು, ನಮಗೆ ಹೆಚ್ಚು ಪ್ರಸ್ತುತ, ಆದ್ದರಿಂದ ಇಂದಿನ ಕವಿಗಳು, ವಿಮರ್ಶಕರು ಅವರನ್ನು ಓದಬೇಕೆಂದು ನಾವು ಬಯಸುವುದು, ಆದರೆ ನಿರೀಕ್ಷೆಯ ಮಟ್ಟಕ್ಕೆ ಜನ ಓದುವುದಿಲ್ಲ ಎಂದು ಬೇಸರಿಸುವುದು ಸಹಜವೇ ಆಗಿದೆ. ಓದುವುದು, ಓದಿದ ಬಗ್ಗೆ ಮಾತಾಡುವುದು, ಬರೆಯುವುದು, ವಿಶ್ಲೇಷಿಸುವುದು ಒಂದು ಜೀವಂತ ಸಂಸ್ಕೃತಿಯ ಲಕ್ಷಣ. ಈಗ ಅಡಿಗರ ಶತಮಾನೋತ್ಸವ ನಡೆಯುತ್ತಿದೆ, ನೀವು ನನ್ನನ್ನು ಸಂದರ್ಶಿಸುತ್ತಿರುವುದೂ ಇದೇ ಕಾರಣಕ್ಕಾಗಿಯೇ. ಇದೊಂದು ಒಳ್ಳೆಯ ಕೆಲಸ. ಅಡಿಗರನ್ನು ಇಂದಿನವರು ಎ? ಮಂದಿ ಓದುತ್ತಾರೆ, ಬಿಡುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ಕೆಲವರು ತಾವು ಅವರಿಂದ ಪ್ರಭಾವಿತರಾಗಬಹುದು ಎಂಬ ಭಯದಿಂದ ಓದದೆ ಇರಬಹುದು! ಕೆಲವರಿಗೆ ಹಾಗೆ ಓದುವ ಅಭ್ಯಾಸ ಇಲ್ಲದೆ ಇರಬಹುದು, ವೇಳೆಯೇ ಸಿಗದಿರಬಹುದು, ಅಡಿಗರ ಕುರಿತು ಏನೂ ಗೊತ್ತಿಲ್ಲದೆಯೂ ಇರಬಹುದು! ಯಾರು ಓದಲಿ, ಓದದಿರಲಿ, ಅಡಿಗರು ಒಬ್ಬ ’ಕವಿಗಳ ಕವಿ’ ಎನ್ನುವುದನ್ನು ಪ್ರಜ್ಞಾವಂತರು ಅಲ್ಲಗಳೆಯಲಾಗುವುದಿಲ್ಲ. ಇದು ’ಪ್ರಭಾವ’ದ ಸಂಗತಿಯಲ್ಲ. ಅದಕ್ಕಿಂತಲೂ ಮೀರಿದ್ದು. ಕನ್ನಡ ಕಾವ್ಯವನ್ನು ನವೋದಯದಿಂದ ಮುಂದೆ ಸಾಗಿಸಿದವರಲ್ಲಿ ಅವರಿಗೆ ಮಹತ್ತ್ವದ ಸ್ಥಾನವಿದೆ. ಇಂಗ್ಲಿಷ್ ನಲ್ಲಿ ಎಝ್ರಾ ಪೌಂಡ್ ಮತ್ತು ಎಲಿಯಟ್‌ಗೆ ಹೋಲಿಸಬಹುದಾದಂಥ ಕವಿ ಅಡಿಗರು. ಅವರನ್ನು ನೇರವಾಗಿ ಓದದವರು ಕೂಡ ಅವರ ಬೆಳಕಿನಲ್ಲಿ ಇರುತ್ತಾರೆ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat