ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಹೊರಗಿದ್ದು ಈಗ ಬೆಂಗಳೂರು ಮಹಾನಗರದ ಒಳಗೇ ಇರುವ ಮಾರತ್ತಹಳ್ಳಿ ಮುಖ್ಯರಸ್ತೆಯಲ್ಲಿ ಎಂ.ಜಿ.ಎ. ಹಾಸ್ಪಿಟಲ್ ಎನ್ನುವ ಒಂದು ಆಸ್ಪತ್ರೆ ಇದೆ. ಎಂ.ಜಿ.ಎ. ಹಾಸ್ಪಿಟಲ್ ಎಂದರೆ ’ಮೊಗೇರಿ ಗೋಪಾಲಕೃಷ್ಣ ಅಡಿಗ ಹಾಸ್ಪಿಟಲ್’ ಅಲ್ಲದೆ ಬೇರೇನೂ ಅಲ್ಲ. ಯುಗಪ್ರವರ್ತಕ ಕವಿ ಎಂ. ಗೋಪಾಲಕೃರ್ಷ ಅಡಿಗರ ಹೆಸರಿನಲ್ಲಿರುವ ಈ ಆಸ್ಪತ್ರೆಯನ್ನು ನಡೆಸುವವರು ಕವಿ ಅಡಿಗರ ಎರಡನೇ ಮಗ ಡಾ| ಪ್ರದ್ಯುಮ್ನ ಅಡಿಗ ಅಥವಾ ಡಾ| ಎಂ.ಜಿ. ಪ್ರದ್ಯುಮ್ನ ಅವರು. ಮಹಾನ್ ಮಾನವತಾವಾದಿಯಾದ ಪ್ರೊ| ಅಡಿಗರ ಮಾನವಪ್ರೇಮ ಮತ್ತು ಜನಸೇವೆಯ ಆಕಾಂಕ್ಷೆಗಳು ಇಲ್ಲಿ ಈ ಆಸ್ಪತ್ರೆಯ ರೂಪದಲ್ಲಿ ನಿಂತಿವೆ ಎಂದರೆ ತಪ್ಪೆನಿಸದು. ಕವಿ ಅಡಿಗರ ಜನ್ಮಶತಮಾನೋತ್ಸವದ ಹಿನ್ನೆಲೆಯಲ್ಲಿ ಡಾ| ಪ್ರದ್ಯುಮ್ನ ಅವರೊಂದಿಗೆ ನಡೆಸಿದ ಮಾತುಕತೆಯ ವಿವರಗಳು ಇಲ್ಲಿವೆ:
ಪ್ರಶ್ನೆ: 1968ರ ಆರಂಭದಲ್ಲಿ ಅಡಿಗರಿಗೆ 5೦ ವರ್ಷಗಳು ತುಂಬಿದಾಗ ಅವರ ಸಾಹಿತಿಮಿತ್ರರು, ಅಭಿಮಾನಿಗಳು ಉಡುಪಿಯಲ್ಲಿ ಎರಡು ದಿನಗಳ ಆತ್ಮೀಯ ಅಭಿನಂದನ ಕಾರ್ಯಕ್ರಮವನ್ನು ನಡೆಸಿದರಲ್ಲವೆ? ಆಗಲೇ ಅವರು ಉಡುಪಿಯಲ್ಲಿ ಇದ್ದರಾ?
ಉತ್ತರ: ಇಲ್ಲ; ಅದಕ್ಕೆ ಬಂದಿದ್ದರು, ಅಷ್ಟೆ. ಅದಾದ ಮೇಲೆಯೇ ಅವರು ಅಲ್ಲಿ ಪೂರ್ಣಪ್ರಜ್ಞ ಕಾಲೇಜಿನ ಪ್ರಿನ್ಸಿಪಾಲರಾಗಿ ಸೇರಿದ್ದು. ಆಗ ನಾವು ಉಡುಪಿಗೆ ಹೋದೆವು. ನಾನು ಮಣಿಪಾಲ ಹೈಸ್ಕೂಲು (ಈಗ ಮಣಿಪಾಲ್ ಪಿ.ಯು. ಕಾಲೇಜ್) ಎಂಟನೇ ತರಗತಿಗೆ ಸೇರಿದೆ; ಅಣ್ಣ (ಜಯಂತ ಅಡಿಗ) ಹತ್ತನೇ ತರಗತಿಗೆ ಸೇರಿದ.
ಪ್ರ: ನಿಮ್ಮ ಒಡಹುಟ್ಟಿದವರ ಬಗ್ಗೆ ಹೇಳಿ.
ಉ: ನಾವು ಐವರು ಮಕ್ಕಳು. ಇಬ್ಬರು ಅಕ್ಕಂದಿರಾದ ಮೇಲೆ ಅಣ್ಣ, ನಮಗೊಬ್ಬಳು ತಂಗಿ. ಅಣ್ಣ ಓದಿದ್ದ; ಲಾ ಎಲ್ಲ ಮಾಡಿದ್ದ. ಪ್ರಾಕ್ಟಿಸ್ ಮಾಡಲಿಲ್ಲ. ಕನಕಪುರದ ಬಳಿ ಜಮೀನು ಖರೀದಿಸಿ ಕೃಷಿ ಮಾಡುತ್ತಿದ್ದ; ಸ್ವಾವಲಂಬಿಯಾಗಿದ್ದ. ಆದರೆ ದುರದೃಷ್ಟವಶಾತ್, ಬೇಗ ೫೬ನೇ ವರ್ಷ ವಯಸ್ಸಿಗೇ ತೀರಿಹೋದ. ಡಯಾಬಿಟೀಸ್ ಇತ್ತು; ಕೊನೆಗೆ ಕಿಡ್ನಿ ವೈಫಲ್ಯ ಆಯಿತು. ಏನೇನೋ ತೊಂದರೆಯಾಗಿ ತೀರಿಹೋದ. ಅಕ್ಕಂದಿರಿಬ್ಬರೂ ಅಮೆರಿಕದಲ್ಲಿದ್ದಾರೆ. ದೊಡ್ಡ ಅಕ್ಕ ಬಿ.ಎಸ್ಸಿ., ಬಿ.ಎಡ್. ಮಾಡಿದ್ದಳು. ಚಿಕ್ಕವಳು ಎಂ.ಎ. ಇಂಗ್ಲಿಷ್. ಅಲ್ಲಿಗೆ (ಅಮೆರಿಕ) ಹೋಗಿಯೂ ಏನೋ ಮಾಡಿದಳು. ಅಮೆರಿಕದಲ್ಲಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರು. ಬೆಂಗಳೂರಿನಲ್ಲಿ ಮದುವೆಗೂ ಮುನ್ನ ಇಬ್ಬರೂ ಬ್ಯಾಂಕ್ ಕೆಲಸದಲ್ಲಿದ್ದರು. ದೊಡ್ಡ ಅಕ್ಕನ ಮದುವೆ ೧೯೭೫ರ ಆರಂಭದಲ್ಲಿ ಆಯಿತು. ಎರಡನೆಯವಳದ್ದು ಮತ್ತೆ ಮೂರು ವರ್ಷದ ಅನಂತರ ನಡೆಯಿತು. ದೊಡ್ಡ ಅಕ್ಕ ವಿದ್ಯಾ ಕೃಷ್ಣರಾಜು ಅವಳ ಗಂಡ ಡಾಕ್ಟರ್. ಮಕ್ಕಳರೋಗ ತಜ್ಞರು, ನಿಯೋನೆಟಾಲಜಿಸ್ಟ್. ಅಕ್ಕ ಅಲ್ಲಿನ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಳು. ಎರಡನೇ ಅಕ್ಕ (ನಂದಿನಿ ಶಶಿಧರ್) ಕೂಡ ಕೆಲಸ ಮಾಡುತ್ತಿದ್ದಳು. ಅವಳ ಗಂಡ ಇಂಜಿನಿಯರ್; ಆಟೋಮೊಬೈಲ್ ಉದ್ದಿಮೆಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಚೆನ್ನಾಗಿದ್ದಾರೆ (ವೆಲ್ ಸೆಟ್ಲಡ್). ಯಾವಾಗಲೋ ತುಂಬ ಮೊದಲೇ (ಅಮೆರಿಕಕ್ಕೆ) ಹೋಗಿದ್ದಾರೆ. ದೊಡ್ಡ ಅಕ್ಕ ವಾಷಿಂಗ್ಟನ್ನಲ್ಲಿದ್ದರೆ ಎರಡನೆಯವಳು ಚಿಕಾಗೋದಲ್ಲಿದ್ದಾಳೆ. ತಂಗಿ (ಅಂಜನಾ ರಘು) ಇಂಗ್ಲೆಂಡಿನಲ್ಲಿದ್ದಳು. ಅವಳ ಗಂಡ ಕೂಡ ಡಾಕ್ಟರ್; ಅವರು ಸರ್ಜನ್. ಅವಳು ಕಳೆದ ವರ್ಷ ಹೃದಯಾಘಾತವಾಗಿ ಸಡನ್ನಾಗಿ ತೀರಿಕೊಂಡಳು; ಅಮೆರಿಕಕ್ಕೆ ಅಕ್ಕನನ್ನು ನೋಡಲು ಹೋಗಿದ್ದಳು; ಸಡನ್ನಾಗಿ ತೀರಿಕೊಂಡಳು; ಅದೊಂದು ದುರಂತ (ಟ್ರಾಜಿಡಿ).
ಪ್ರ: ನಮಗೆ ಅಡಿಗರು ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಒಂದು ವರ್ಷ ಪ್ರಿನ್ಸಿಪಾಲರಾಗಿದ್ದರು; ನಾನು ಪದವಿ ಒಂದನೇ ವೃರ್ಷದಲ್ಲಿದ್ದಾಗ ವೋಟಿಗೆ ನಿಲ್ಲುವ ಸಲುವಾಗಿ ಬಿಟ್ಟುಹೋದರು. ಕೆಂಗಲ್ ಹನುಮಂತಯ್ಯ (ಇಂದಿರಾ ಕಾಂಗ್ರೆಸ್)ನವರ ವಿರುದ್ಧ ಓಟಿಗೆ ನಿಂತರಲ್ಲಾ (೧೯೭೧). ವೋಟಿಗೆ ನಿಂತಾಗ ಬಹುಶಃ ಕಾಲೇಜು ನಡೆಸುವ ಸ್ವಾಮಿಗಳು (ಅಂದಿನ ಅದಮಾರು ಮಠಾಧೀಶ ಶ್ರೀ ವಿಬುಧೇಶ ತೀರ್ಥರು) ಬಿಟ್ಟುಹೋಗುವಂತೆ ಹೇಳಿರಬೇಕು.
ಉ: ಹೌದು ಹೌದು, ಅವರೇ ಹೇಳಿದ್ದು; ವೋಟಿಗೆ ನಿಲ್ಲುವುದಾದರೆ ಬಿಟ್ಟುಹೋಗಿ ಅಂತ. ಅ? ಹೇಳಿದ ಮೇಲೆ ಇವರು ಮತ್ತೆ ಅಲ್ಲಿ ನಿಲ್ಲಲಿಕ್ಕೆ ಇಲ್ಲ. ಅವರು ಹಾಗೇ. ನೇರನಡೆ ಮತ್ತು ಸ್ಟ್ರಿಕ್ಟ್. ಅವರು ಯಾರಿಗೂ ತಲೆ ಬಗ್ಗಿಸುತ್ತಾ ಇರಲಿಲ್ಲ. ಬಿಟ್ಟು ಬರುವುದೇ; ಯೋಚನೆ ಮಾಡಲಿಕ್ಕೆ ಇಲ್ಲ. ತುಂಬ ಆನೆಸ್ಟ್ (ಪ್ರಾಮಾಣಿಕರು), ನೇರ ನಡೆ; ಸ್ವಾಭಿಮಾನ ತುಂಬ. ಬಿಟ್ಟುಕೊಡುತ್ತಿರಲಿಲ್ಲ. ದುಡ್ಡು, ಗಿಡ್ಡು ಅವರಿಗೆ ಅಷ್ಟು ಮುಖ್ಯವಾಗಿ ಇರಲಿಲ್ಲ. ಯಾವಾಗಲೂ ಅವರು ತಮ್ಮ ಮನಸ್ಸಿಗೆ ಸರಿ ಆಗುವಂಥದ್ದನ್ನೇ ಮಾಡಿದ್ದಾರೆ.
ಪ್ರ: ಅದರಿಂದ ಫ್ಯಾಮಿಲಿಗೆ ತೊಂದರೆ ಆಗಲಿಲ್ಲವೆ?
ಉ: ನಿಜವೆಂದರೆ, ಫ್ಯಾಮಿಲಿಗೆ ಹೆಚ್ಚು ತೊಂದರೆ ಆಗಲಿಲ್ಲ. ದೊಡ್ಡ ಹುದ್ದೆಯಲ್ಲಿ ಇದ್ದರಲ್ಲವೆ? ಹಾಗಾಗಿ ನಾವು ಹೇಗೋ ನಿಭಾಯಿಸಿದೆವು. ಆಮೇಲೆ, ಕೊನೆಗೆ ಈ ಚುನಾವಣೆ ಮುಗಿದ ಮೇಲೆ ಸ್ವಲ್ಪ ತೊಂದರೆ ಆಯಿತು ಎನಿಸುತ್ತದೆ. ಉಡುಪಿ ಬಿಟ್ಟು ಬಂದರಲ್ಲವೇ? ಆವಾಗ ನಮ್ಮ ಅಕ್ಕಂದಿರ ಶಿಕ್ಷಣ ಕೂಡ ಇನ್ನೂ ಮುಗಿಯುತ್ತಿತ್ತು, ಅಷ್ಟೆ. ಮತ್ತೆ ಅವರು (ಇಬ್ಬರೂ) ಕೆಲಸಕ್ಕೆ ಸೇರಿದರು. ಮತ್ತೆ ಅವರಿಗೆ ಮದುವೆ ಆಯಿತು, ಅಮೆರಿಕಕ್ಕೆ ಹೋದರು. ಮನೆ ಖರ್ಚಿಗೆ ವ್ಯವಸ್ಥೆ ಹೇಗೋ ಆಗುತ್ತಿತ್ತು. ಆ ಹೊತ್ತಿಗೆ ನಾನು ಮೆಡಿಕಲ್ಗೆ ಸೇರಿದ್ದ?. ಒಂದು ಐದಾರು ವರ್ಷ ಸ್ವಲ್ಪ ತೊಂದರೆ ಆಗಿದೆ. ಅಂದರೆ ತೀರಾ ಏನೂ ಅಲ್ಲ. ಅಕ್ಕಂದಿರು ಕೆಲಸ ಮಾಡುತ್ತಿದ್ದರು. ಮನೆ ಸಾಗಿಸಿಕೊಂಡು ಹೋಗಲಿಕ್ಕೆ ಆಗುತ್ತಿತ್ತು. ಮತ್ತೆ ನನ್ನ ಎಜುಕೇ?ನ್ ಮುಗಿಯಿತು; ಮುಂದೆ ತೊಂದರೆ ಆಗಲಿಲ್ಲ ಎನ್ನಬಹುದು.
ಪ್ರ: ನಿಮ್ಮ ಪೂರ್ತಿ ವೈದ್ಯಕೀಯ ಶಿಕ್ಷಣ ಮಣಿಪಾಲದಲ್ಲೇ ಆಯಿತೇ?
ಉ: ಹೌದು, ಎಂಬಿಬಿಎಸ್, ಎಂ.ಡಿ. ಎಲ್ಲ ಸೇರಿ ಸುಮಾರು ಹತ್ತು ವ? ಅಲ್ಲೇ ಇದ್ದೆ. ಐದೂವರೆ ವ? ಎಂಬಿಬಿಎಸ್ಸೇ ಆಗುತ್ತದೆ; ಮತ್ತೆ ಆರು ತಿಂಗಳು ಆಸ್ಪತ್ರೆ. ಅಲ್ಲಿಗೆ ಆರು ವ? ಆಯಿತು. ಮತ್ತೆ ಮೂರು ವ? ಎಂಡಿ. ರಿಸಲ್ಟ್ ಬರುವಾಗ ಎಲ್ಲ ಸೇರಿ ಹತ್ತು ವ? ಆಗಿಹೋಗುತ್ತದೆ; ಮತ್ತೆ ನಾನು ಸೆಟ್ಲ್ ಆದೆ; ಮನೆಯ ಜವಾಬ್ದಾರಿ ನೋಡಿಕೊಳ್ಳಲು ಸಾಧ್ಯವಾಯಿತು.
ಪ್ರ: ಆರ್ಥಿಕ ತೊಂದರೆ ಇದ್ದಾಗ ತಂದೆ ಯಾರದಾದರೂ ನೆರವು ಪಡೆಯುತ್ತಿದ್ದರಾ?
ಉ: ಅದೆಲ್ಲ ಮಾಡೋದಿಲ್ಲ ನಮ್ಮಪ್ಪ. ಕೇಳುವುದು, ಯಾರ ಬಳಿಗಾದರೂ ಹೋಗುವುದು, ಏನೂ ಇಲ್ಲ. ಫಾಲೋವರ್ಸ್ ತುಂಬ ಇದ್ದರು. ಬೇಕಾದಷ್ಟು ಜನ ಇದ್ದರು. ಮನೆಗೆ ಮಂತ್ರಿಗಳೆಲ್ಲ ಬರುತ್ತಿದ್ದರು. ಮುಖ್ಯಮಂತ್ರಿವರೆಗೆ ಎಲ್ಲರೂ ಬರುತ್ತಿದ್ದರು. ಆದರೆ ಇವರಿಗೆ ಕೇಳುವ ಅಭ್ಯಾಸ ಇಲ್ಲ. ತುಂಬ ಕಷ್ಟಪಟ್ಟಿದ್ದರು. ಬೇರೆಯವರಾದರೆ ಅಷ್ಟು ಕಷ್ಟಪಡುತ್ತಿರಲಿಲ್ಲ.
ಪ್ರ: ಅಡಿಗರು ಆಗಾಗ ಊರು ಬದಲಿಸುತ್ತಿದ್ದುದರಿಂದ, ಇನ್ನೊಂದು ರೀತಿಯಲ್ಲಿ ಮನೆಯವರಿಗೆ ತೊಂದರೆ ಆಗಲಿಲ್ಲವೆ?
ಉ: ಊರು ಬದಲಾಗುತ್ತಾ ಇತ್ತು ನಿಜ. ಆದರೆ ನಮಗೆ ಹೆಚ್ಚಿನ ತೊಂದರೆ ಆಗಲಿಲ್ಲ. ನನ್ನ ಬಗ್ಗೆ ಹೇಳುವುದಾದರೆ ನಾನು ಹುಟ್ಟಿದ್ದು ಮೈಸೂರಿನಲ್ಲಿ; ನಾವು ಹೆಚ್ಚಿನ ಮಕ್ಕಳೆಲ್ಲ ಹುಟ್ಟಿದ್ದು ಮೈಸೂರಿನಲ್ಲಿ. ಅ?ರೊಳಗೆ ಅವರು ಸುಮಾರೆಲ್ಲ ಮುಗಿಸಿದ್ದರು. ಹತ್ತು ವ? (೧೯೫೪-೬೪) ಮೈಸೂರಿನಲ್ಲಿದ್ದರು. ಮೈಸೂರಿನಿಂದ ಸಾಗರಕ್ಕೆ; ಅಲ್ಲಿ ನಾಲ್ಕು ವರ್ಷ. ಬಳಿಕ ಉಡುಪಿಯಲ್ಲಿ ಮೂರು ವರ್ಷ; ಆಮೇಲೆ ಬೆಂಗಳೂರು. ಕುಮಟಾದಲ್ಲಿ ಇದ್ದರಂತೆ; ಅದೆಲ್ಲ ಮೊದಲು. ಆಗ ಅಪ್ಪ-ಅಮ್ಮನ ಜೊತೆಗೆ ದೊಡ್ಡ ಅಕ್ಕ ಏನಾದರೂ ಇದ್ದಳೇನೋ ಗೊತ್ತಿಲ್ಲ. ನಾನು ಅವರ ಜೊತೆ ನಾಲ್ಕು ಜಾಗ ಮಾತ್ರ ನೋಡಿದ್ದು: ಮೈಸೂರು, ಸಾಗರ, ಉಡುಪಿ ಮತ್ತು ಬೆಂಗಳೂರು.
ಪ್ರ: ಚುನಾವಣೆ (೧೯೭೧) ಮುಗಿದ ಮೇಲೆ ಅಡಿಗರು ದೆಹಲಿಗೆ ಹೋದವರಲ್ಲವೆ?
ಉ: ಹೌದು. ನ್ಯಾಶನಲ್ ಬುಕ್ ಟ್ರಸ್ಟ್ನ ಉಪ ನಿರ್ದೇಶಕ(ಸಂಪಾದಕೀಯ ವಿಭಾಗ)ರಾಗಿ ಅಲ್ಲಿಗೆ ಹೋದರು. ಹತ್ತಿರಹತ್ತಿರ ಒಂದು ವ? ಮಾತ್ರ ಆ ಹುದ್ದೆಯಲ್ಲಿದ್ದರು. ಅಲ್ಲಿನ ಕೆಲಸ (ಜಾಬ್) ಅವರಿಗೆ ಇಷ್ಟ ಆಗಲಿಲ್ಲ (ಪ್ರಕಟಣೆಗೆ ಪುಸ್ತಕ ಆರಿಸುವಾಗ ಮೇಲಿನಿಂದ ಹಸ್ತಕ್ಷೇಪ ನಡೆಯುತ್ತಿತ್ತೆಂದು ಅಡಿಗರು ಹೇಳಿಕೊಂಡದ್ದಿದೆ – ನೋಡಿ, ’ನೆನಪಿನ ಗಣಿಯಿಂದ’ – ಸಂದರ್ಶಕ). ವರ್ಷವಾಗುವ ಮುನ್ನವೇ ಅದನ್ನು ಬಿಟ್ಟು ಸಿಮ್ಲಾಗೆ ಹೋದರು. ಅಲ್ಲಿನ ’ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್’ನಲ್ಲಿ ಸುಮಾರು ಮೂರು ವ? ಇದ್ದರು. ದೆಹಲಿ, ಸಿಮ್ಲಾಗೆ ಅಮ್ಮ ಹೋಗಿದ್ದರು; ನಾವೆಲ್ಲ ಇಲ್ಲೇ (ಬೆಂಗಳೂರು) ಇದ್ದೆವು. ಅಲ್ಲಿಂದ ಬೆಂಗಳೂರಿಗೆ ಮರಳಿದರು (೧೯೭೫). ಮತ್ತೆ ಎಲ್ಲೂ ಕೆಲಸಕ್ಕೆ ಸೇರಲಿಲ್ಲ.
ಪ್ರ: ಉದ್ಯೋಗಕ್ಕೆ ಹೋಗುತ್ತಿದ್ದ ದಿನಗಳಲ್ಲಿ ಅಡಿಗರ ದಿನಚರಿ ಹೇಗಿತ್ತು?
ಉ: ಅವರು ಯಾವಾಗಲೂ ಬೆಳಗ್ಗೆ ಬೇಗ ಏಳುವುದು. ನಾನು ನೋಡುವಾಗಿನಿಂದ ಅವರು ಬೆಳಗ್ಗೆ ಐದು ಗಂಟೆಗೆ ಎದ್ದು ಬಿಡುತ್ತಿದ್ದರು. ಅವರು ವಾಕಿಂಗಿಗೆ ಹೋಗುವುದು. ಸಿಗರೇಟು ಸೇದುವ ಒಂದು ಅಭ್ಯಾಸವಿತ್ತು ಅವರಿಗೆ. ಸ್ಮೋಕ್ ಮಾಡಿ ವಾಕಿಂಗ್ ಮುಗಿಸಿ ಬಂದು ಬರೆಯುವುದು. ಬರೆಯುವುದನ್ನು ಹೆಚ್ಚಾಗಿ ಬೆಳಗ್ಗೆಯೇ ಮಾಡುತ್ತಿದ್ದರು. ಬೆಳಗ್ಗೆ ನಾವೆಲ್ಲ ಏಳುವುದರ ಒಳಗೇ ಕುಳಿತುಕೊಂಡು ಏನೋ ಬರೆದಿರುತ್ತಿದ್ದರು; ಆಗ ಅವರಿಗೆ ಸುಮಾರು ಎರಡು ಗಂಟೆ ಸಿಗುತ್ತಿತ್ತು. ಅವರ ಮುಖ್ಯವಾದ ಕವನ- ಲೇಖನಗಳನ್ನೆಲ್ಲ ಬಹುಶಃ ಬೆಳಗ್ಗಿನ ಹೊತ್ತಿನಲ್ಲೇ ಬರೆದಿದ್ದರು ಅನ್ನಿಸುತ್ತದೆ; ಒಂದು ಸಣ್ಣ ವಾಕಿಂಗ್ ಮಾಡಿಕೊಂಡು ಬಂದು ಬರೆಯುತ್ತಿದ್ದರು. ಮನೆಯಲ್ಲಿ ನಾವೆಲ್ಲ ಮಕ್ಕಳು ಚಿಕ್ಕವರಿದ್ದರೂ ಬೆಳಗ್ಗೆ ೭ ಗಂಟೆಯ ಒಳಗೆ ಏಳುತ್ತಿದ್ದೆವು. ಎದ್ದು ಮುಖ ತೊಳೆದು ಸ್ನಾನ-ಗೀನ ಎಲ್ಲ ಆದ ಮೇಲೆ ತಿಂಡಿ. ಒಂದು ರೀತಿಯಲ್ಲಿ ನಮಗೆಲ್ಲ ಶಿಸ್ತು ಅಲ್ಲಿಂದಲೇ ಬಂದದ್ದು. ಸಮಯಪಾಲನೆ, ಯಾರನ್ನೂ ಕಾಯಿಸಬಾರದು; ಸಮಯಕ್ಕೆ ಸರಿಯಾಗಿ ಹೋಗಬೇಕು. ಇದೆಲ್ಲ ಅಪ್ಪನಿಗೆ ಭಾರೀ ಮುಖ್ಯ. ಕಾಲೇಜಿಗೆ ಹೋಗುವುದು, ಕಾಲೇಜಿಂದ ಬರುವುದು ಎಲ್ಲದರಲ್ಲೂ ಶಿಸ್ತು; ಮತ್ತು ತುಂಬ ಜನ ಮನೆಗೆ ಬಂದು ಅವರನ್ನು ನೋಡುತ್ತಿದ್ದರು. ಸಾಹಿತ್ಯಾಸಕ್ತರಿರಬಹುದು, ಅವರ ಸ್ನೇಹಿತರಿರಬಹುದು – ಹೀಗೆ ಮನೆಯಲ್ಲಿ ಯಾವಾಗಲೂ ಜನ.
ನಿಮಗೆ ನಿಜವಾಗಿ ಸಾಹಿತ್ಯದಲ್ಲಿ ಒಂದು ರೀತಿಯ ಆಸಕ್ತಿ (ಇಂಟರೆಸ್ಟ್) ಇದೆ, ಸಾಹಿತ್ಯ ನಿಮಗೆ ಅರ್ಥವಾಗುತ್ತದೆ, ಓದಿಕೊಳ್ಳುತ್ತಾ ಇದ್ದೀರಿ ಅಂತ ಅನ್ನಿಸಿದರೆ ತುಂಬಾ ಪ್ರೋತ್ಸಾಹ ಕೊಡುತ್ತಿದ್ದರು (ಎನ್ಕರೇಜ್ ಮಾಡುತ್ತಿದ್ದರು). ಯಾರೇ ಆಗಲಿ, ಬಂದವನು ಸಣ್ಣ ಹುಡುಗನೇ ಇರಲಿ; ಸುಮ್ಮನೆ ಕಳುಹಿಸುತ್ತಿರಲಿಲ್ಲ. ಏನಾದರೂ ಬರೆದುಕೊಂಡು ಬಂದರೆ ಅದನ್ನು ಓದಿ ತಮ್ಮ ಅಭಿಪ್ರಾಯ ಹೇಳಿ ಸರಿಯಾದ ಸಲಹೆಯನ್ನು ಕೊಟ್ಟೇ ಕಳುಹಿಸುತ್ತಿದ್ದರು. ಬಂದವನು ತುಂಬಾ ಓದಿಕೊಳ್ಳುತ್ತಿದ್ದಾನೆ ಅನ್ನಿಸಿದರೆ, ಓದಿಕೊಳ್ಳುವ ಬಗ್ಗೆ ಮಾರ್ಗದರ್ಶನ ಕೊಟ್ಟು ತುಂಬ ಪ್ರೋತ್ಸಾಹಿಸುತ್ತಿದ್ದರು.
ಪ್ರ: ಮೊದಲಿನಿಂದಲೂ ಹಾಗೇನಾ?
ಉ: ಪ್ರೊಫೆಸರ್ ಆಗಿದ್ದಾಗ, ಪ್ರಿನ್ಸಿಪಾಲ್ ಆಗಿದ್ದಾಗ ಎಲ್ಲ ಹಾಗೇ. ತುಂಬ ಜನ ಬರುತ್ತಿದ್ದರು; ಮನೆಯಲ್ಲಿ ಯಾವಾಗಲೂ ಜನ. ಕೊನೆಯವರೆಗೆ ಅದೇ ರೀತಿ ಇತು
ಅವರು ಸಾಯುವ ದಿನ ಕೂಡ ಸುಮಾರು ಜನರನ್ನು ನೋಡಿದ್ದಾರೆ. ಜನ ಯಾವಾಗಲೂ ಬರುತ್ತಿದ್ದರು; ಡಿಸ್ಕಸ್ ಮಾಡುತ್ತಿದ್ದರು. ಕಾವ್ಯ, ರಾಜಕೀಯ ಎಲ್ಲ ಚರ್ಚಿಸುತ್ತಿದ್ದರು. ಎಲ್ಲರ ಹತ್ತಿರ ಮಾತನಾಡುತ್ತಿದ್ದರು; ಚೆನ್ನಾಗಿಯೇ ಮಾತನಾಡುತ್ತಿದ್ದರು. ಏನಾದರೂ ತಪ್ಪು ಮಾಡಿದ್ದರ ಹೊರತಾಗಿ ಯಾರಿಗೂ ಅವಮಾನ ಮಾಡಿ ಕಳುಹಿಸುತ್ತಿರಲಿಲ್ಲ. ಎಲ್ಲರಿಗೂ ಗೌರವ ಕೊಟ್ಟು ಮಾತನಾಡಿಸುತ್ತಿದ್ದರು. ಚಿಕ್ಕವರು ಕೂಡ ಬರುತ್ತಿದ್ದರು. ನಿನ್ನೆ ಒಬ್ಬರು ಡಾಕ್ಟರು ನನ್ನನ್ನು ಹುಡುಕಿಕೊಂಡು ಬಂದರು. ದಿನಪತ್ರಿಕೆ(ಪ್ರಜಾವಾಣಿ)ಯಲ್ಲಿ ನನ್ನ ಲೇಖನ ನೋಡಿ ಮೈಸೂರಿನಿಂದ ಬಂದಿದ್ದರು. ಅವರು ಹೇಳುತ್ತಿದ್ದರು. ಅವರಿಗೆ ೨೩ ವ? ಇರುವಾಗ ಪೂರ್ಣಪ್ರಜ್ಞ ಕಾಲೇಜಿನಲ್ಲಿದ್ದ ಅಪ್ಪನನ್ನು ಹೋಗಿ ನೋಡಿದ್ದರಂತೆ. ತಾನು ಸಣ್ಣ ಯುವಕನಾಗಿದ್ದರೂ ತನ್ನನ್ನು ಹೇಗೆ ಟ್ರೀಟ್ ಮಾಡಿದರೆಂದು ಹೇಳುತ್ತಿದ್ದರು. ಡಾ| ನಾಗರಾಜರಾವ್ ಅಂತ ಅವರ ಹೆಸರು. ಅಪ್ಪ ಅವರನ್ನು ಆತ್ಮೀಯವಾಗಿ ಕರೆದು ಕೂರಿಸಿ ಚೆಂದದಲ್ಲಿ ಮಾತನಾಡಿದರಂತೆ. ಅವರು ತುಂಬ ಸಂತೋ?ದಲ್ಲಿದ್ದರು. ಕೇವಲ ಅವರು ಅಂತ ಅಲ್ಲ. ತುಂಬ ಜನ ಆ ರೀತಿ ಹೇಳುತ್ತಾರೆ. ಇನ್ನು ತುಂಬ ಜನರಿಗೆ ಓದುವುದಕ್ಕೆ ಅಪ್ಪ ಸಹಾಯ ಮಾಡಿದ್ದಾರೆ. ನಮ್ಮ ಮನೆಯಲ್ಲೆ ಇದ್ದುಕೊಂಡು ಎಷ್ಟು ಜನ ಓದಿದ್ದಾರೆ.
ಪ್ರ: ಎಲ್ಲಿ?
ಉ: ಎಲ್ಲ ಕಡೆ; ಅದು ನಿರಂತರವಾಗಿ ಇತ್ತು. ಮೈಸೂರು ಆಗಲಿ, ಉಡುಪಿ ಆಗಲಿ, ಅಥವಾ ಸಾಗರವಾಗಲಿ. ನನ್ನ ಚಿಕ್ಕವಯಸ್ಸಿನಿಂದ ನಮ್ಮ ಮನೆಯಲ್ಲಿ ಓದುವವರು ೩-೪ ಜನ ಎಕ್ಸ್ಟ್ರಾ ಇರುತ್ತಿದ್ದರು. ಕಾಲೇಜಿನಲ್ಲಿ ಓದುವುದಕ್ಕೆ ಅಪ್ಪ ದುಡ್ಡು ಕೊಡುತ್ತಿದ್ದರು. ಮನೆಯಲ್ಲಿ ವಸತಿ ಒದಗಿಸಿ ಇವರೇ ಎಲ್ಲ ನೋಡಿಕೊಳ್ಳುತ್ತಿದ್ದರು; ಬೇರೆ ಸಹಾಯ ಮಾಡುತ್ತಿದ್ದರು.
ಪ್ರ: ಅವರು ಸಂಬಂಧಿಕರ ಹುಡುಗರಾ?
ಉ: ಕೆಲವರು ಸಂಬಂಧಿಕರಾದರೆ ಬೇರೆಯವರು ಕೂಡ ಇದ್ದರು. ಇಲ್ಲಿಗೆ ಎಷ್ಟು ಜನ ಬಂದು ಅಪ್ಪ ಸಹಾಯ ಮಾಡಿದರೆಂದು ಹೇಳುತ್ತಾರೆ. ಒಬ್ಬರು ವೆಂಕಟಗಿರಿ ಅಂತ ಬರುತ್ತಾರೆ. ಅವರಿಗೆ ಓದುವುದರಲ್ಲಿ ಇಂಟರೆಸ್ಟ್; ಆದರೆ ಬಡತನ. ಅವರು ನಮ್ಮ ಮನೆಯಲ್ಲೇ ಇದ್ದು ಓದಿದವರು. ಸಾಗರ ಬಿಡುವ ಸಮಯದಲ್ಲಿ ಅಪ್ಪ ಅವರಿಗೆ ಕಾಲೇಜಿನಲ್ಲಿ ಕೆಲಸ ಕೊಡಿಸಿದರು. ಕಾಲೇಜು ಬಿಡಿಸಿ ಸಂಜೆ ಕಾಲೇಜಿಗೆ ಸೇರಿಸಿದರು. ಕಾಲೇಜಿನ ಲ್ಯಾಬ್ನಲ್ಲಿ ಡೆಮಾನ್ಸ್ಟ್ರೇಟರ್ ಥರ ಕೆಲಸ ಕೊಡಿಸಿದರು. ಆತ ಈಗ ಕೆ.ಇ.ಬಿ.(ಬೆಸ್ಕಾಂ) ಯಲ್ಲಿ ದೊಡ್ಡ ಆಫೀಸರ್. ಯಾವಾಗಲೂ ಬರುತ್ತಾರೆ; “ನಿಮ್ಮ ತಂದೆಯಿಂದಾಗಿ ನಾನು ಈ ಮಟ್ಟಕ್ಕೆ ಮುಟ್ಟಿದೆ” ಎಂದು ಹೇಳುತ್ತಾರೆ. ಈಗ ಅವರ ಮಕ್ಕಳೆಲ್ಲ ಚೆನ್ನಾಗಿ ಓದಿಕೊಂಡು ಮುಂದೆ ಬಂದಿದ್ದಾರೆ; ದೊಡ್ಡದೊಡ್ಡ ಹುದ್ದೆಗಳಲ್ಲಿದ್ದಾರೆ. ಅವರು ಬಂದು ಭೇಟಿ ಮಾಡಿದಾಗ ತುಂಬ ಸಂತೋ?ವಾಗುತ್ತದೆ; ಆ ರೀತಿ ತುಂಬ ಜನ ಬರುತ್ತಾರೆ.
ಪ್ರ: ದೊಡ್ಡ ಆದಾಯವಿಲ್ಲದಿದ್ದರೂ ಅಡಿಗರು ಅದನ್ನು ಮಾಡುತ್ತಿದ್ದರಲ್ಲವೇ?
ಉ: ದೊಡ್ಡ ಆದಾಯವಿಲ್ಲದಿದ್ದರೂ ಬೇರೆಯವರಿಗೆ ಸಹಾಯ ಮಾಡಿಯೇ ಮಾಡುತ್ತಿದ್ದರು. ಅವರ ಫೀಸೆಲ್ಲ ಕಟ್ಟುತ್ತಿದ್ದರು. ನನಗೆ ಅದು ಅನಂತರ ಗೊತ್ತಾಯಿತು. ಎ? ಮಕ್ಕಳಿಗೆ ಫೀಸ್ ಕಟ್ಟಲು ಆಗುವುದಿಲ್ಲವೆಂದು ಕಾಲೇಜಿನಲ್ಲಿ ರಿಯಾಯತಿ ಕೊಡಿಸುತ್ತಿದ್ದರು. ಅವರು ಆ ರೀತಿ ಎಲ್ಲ ಸಹಾಯ ಮಾಡಿದ್ದರಿಂದ ಈಗ ದೇವರು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಬಹುದು ಅನ್ನಿಸುತ್ತದೆ. ಸಂಥಿಂಗ್ ರಿಯಲೀ ಗುಡ್. ಮನು? ತನ್ನ ಕಾಲ ಮೇಲೆ ಗಟ್ಟಿಯಾಗಿ ನಿಂತಿದ್ದರೆ ಬೇರೆಯವರಿಗೆ ಸಹಾಯ ಮಾಡುವುದು ಸಹಜ ಅಂತ ಹೇಳಬಹುದು. ಇವರ ಸ್ಥಿತಿ ಅಷ್ಟಕ್ಕಷ್ಟೆ ಅಲ್ಲವಾ? ಆಗ ಸಂಬಳವೆಲ್ಲ ಎಷ್ಟು? ನನಗೆ ಚೆನ್ನಾಗಿ ಜ್ಞಾಪಕ ಇದೆ. ಪೂರ್ಣಪ್ರಜ್ಞ ಕಾಲೇಜಿನ ಪ್ರಿನ್ಸಿಪಾಲರಾಗಿದ್ದಾಗ ಅವರಿಗೆ ಸಿಗುತ್ತಿದ್ದ ಸಂಬಳ ೨,೦೦೦ ರೂ. ಆದರೂ ಆ ಥರ ಇರುವುದು ತುಂಬ ಕಷ್ಟ. ಅವರು ಆ ರೀತಿ ಇದ್ದದ್ದಕ್ಕೆ ನಮಗೆ ತುಂಬ ಸಂತೋಷ!
ಪ್ರ: ಅಪ್ಪ ನಿಮಗೆ ಹೊಡೆಯುತ್ತಿದ್ದರೆಂದು ಎಲ್ಲೋ ಒಂದು ಕಡೆ ಹೇಳಿದ್ದೀರಿ. ಯಾವ ಕಾರಣಗಳಿಗೆ ಹೊಡೆಯುತ್ತಿದ್ದರು?
ಉ: ಅದು ಚಿಕ್ಕವನಿರುವಾಗ. ಅಯ್ಯೋ ನಾನು ಬಹಳ ತುಂಟ ಇದ್ದೆ. ನಿಭಾಯಿಸುವುದು ಅಸಾಧ್ಯ. ಬೇರೆಯವರ ಮನೆಗೆ ಹೋಗುವುದು, ಗಿಡ ಎಲ್ಲ ಕಿತ್ತುಹಾಕುವುದು, ಮರ ಏರಿ ಹಣ್ಣೆಲ್ಲ ಕಿತ್ತು ಬಿಸಾಡುವುದು, ಬೇರೆಯವರಿಗೆ ಹೊಡೆಯುವುದು, ಮೈಮೇಲೆ ಕಸ ಬೀಸಾಡುವುದು – ಏನೇನೋ ಚೇ? ಮಾಡುತ್ತಿದ್ದೆ; ಸುಮಾರು ಎಂಟು ವ?ದ ತನಕ. ಪ್ರತಿದಿನ ಮನೆಗೆ ಕಂಪ್ಲೇಂಟ್ ಬರುವುದು, ಶಾಲೆಯ ಟೀಚರ್, ನೆರೆಮನೆಯವರು ಬಂದು ಹೇಳುವುದು. ಅಪ್ಪನಿಗೆ ದೂರು ಹೋಯಿತು ಅಂದರೆ ಮುಗಿಯಿತು! ನಾನು ಚೆನ್ನಾಗಿ ತಿಂದಿದ್ದೇನೆ; ಏಳೆಂಟು ವ?ದವರೆಗೆ. ಆಮೇಲೆ ಏನೂ ಇಲ್ಲ. ಆವಾಗ ಮಕ್ಕಳಿಗೆ ಫ್ರೀ ಅಲ್ಲವಾ? ಈಗ ಮಕ್ಕಳನ್ನು ಹೊರಗಡೆ ಬಿಡುವುದೇ ಇಲ್ಲ. ಹಾಗೆ ಶಿಕ್ಷಿಸುವುದರಲ್ಲಿ ಅವರು ತುಂಬಾ ಸ್ಟ್ರಿಕ್ಟ್. ನಾನು, ಅಣ್ಣ ಸುಮಾರು ತಿಂದಿದ್ದೇವೆ. ಹೆಣ್ಣುಮಕ್ಕಳಿಗೆ ಅವರು ಹೊಡೆಯುತ್ತಾ ಇರಲಿಲ್ಲ ಎನ್ನಬಹುದು. ಹೈಸ್ಕೂಲ್ ಆದ ಮೇಲೆ ಅವರು ಬಹುತೇಕ ನಮ್ಮನ್ನು ಸ್ನೇಹಿತರಂತೆ ಕಾಣುತ್ತಿದ್ದರು. ಏನಿದ್ದರೂ ನಮ್ಮೊಂದಿಗೆ ಡಿಸ್ಕಸ್ ಮಾಡುತ್ತಿದ್ದರು. ಆವಾಗಿನಿಂದಲೂ ನಮಗೆ ಅಪ್ಪ ಅಂದರೆ ಅಲ್ಲಿ ಮೇಲೆ; ದೇವರ ಹಾಗೆ (ಮೇಲೆ ತೋರಿಸುತ್ತಾ). ಕೊನೆತನಕವೂ ಆ ಗೌರವ ಇದ್ದೇ ಇತ್ತು.
ಪ್ರ: ಮನೆಗೆ ಬಂದವರನ್ನು ನಿಮಗೆ ಪರಿಚಯ (ಇಂಟ್ರೊಡ್ಯೂಸ್) ಮಾಡಿಸುವುದು ಇತ್ಯಾದಿ ಇತ್ತಾ?
ಉ: ಇಲ್ಲ, ಅದು ಹೆಚ್ಚಿಲ್ಲ. ಅದೇ ನಾನು ಹೇಳುವುದು – ಅವರು ನಮ್ಮನ್ನು ಮನೆಗೆ ಬಂದ ಕವಿ-ಸಾಹಿತಿಗಳಿಗೆ ಪರಿಚಯ ಮಾಡಿಸುವುದು, ಮಾತುಕತೆಯಲ್ಲಿ ನಮ್ಮನ್ನು ಇನ್ವಾಲ್ವ್ ಮಾಡಿಸುವುದು ಎಲ್ಲ ಮಾಡಿದ್ದರೆ ನಾವು ಸ್ವಲ್ಪ ಬರವಣಿಗೆಗೆ ಮುಂದಾಗುತ್ತಿದ್ದೆವಾ ಅಂತ. ಕನಿ?ಪಕ್ಷ ನಮ್ಮಲ್ಲಿ ಒಬ್ಬರು ಅಥವಾ ಇಬ್ಬರಾದರೂ ಬರೆಯಬಹುದಿತ್ತಾ ಅಂತ. ಆದರೆ ಅದನ್ನವರು ಮಾಡುತ್ತಿರಲಿಲ್ಲ.
ಪ್ರ: ನಿಮ್ಮಲ್ಲಿ ಯಾರಿಗೂ ಸಾಹಿತ್ಯದ ಸಂಪರ್ಕ ಇಲ್ಲವಾ?
ಉ: ಓದುತ್ತಿದ್ದೆವು. ಎಲ್ಲರೂ ಸಿಕ್ಕಾಪಟ್ಟೆ ಓದುತ್ತಿದ್ದೆವು. ಮನೆಯಲ್ಲಿ ಯಾವಾಗಲೂ ೨-೩ ಸಾವಿರ ಪುಸ್ತಕ ಇದ್ದೇ ಇರುತ್ತಿತ್ತು. ಅಪ್ಪ ನಿರಂತರವಾಗಿ ಹೊಸ ಪುಸ್ತಕಗಳನ್ನು ತರುತ್ತಿದ್ದರು. ಅವನ್ನು ಓದಿಕೊಳ್ಳುತ್ತಿದ್ದೆವು; ಬರೆಯಲಿಲ್ಲ ಅ?. ನನ್ನ ಮಗ (ಆದಿತ್ಯ) ಸ್ವಲ್ಪ ಬರೆಯುತ್ತಾನೆ. ದೊಡ್ಡ ಅಕ್ಕನ ಒಬ್ಬ ಮಗನೂ ಬರೆಯುತ್ತಾನೆ. ದೊಡ್ಡ ಮಟ್ಟ ಅಲ್ಲ.
ಪ್ರ: ನಿಮ್ಮ ತಾಯಿಯ ತವರು ಎಲ್ಲಿ?
ಉ: ಮೈಸೂರು; ನಮ್ಮಮ್ಮ ಮೈಸೂರಿನವರು. ಅವರ ಪೂರ್ವಿಕರು ಶಿವಮೊಗ್ಗ ಸಮೀಪದವರಂತೆ. ೩-೪ ತಲೆಮಾರುಗಳ ಹಿಂದೆಯೇ ಮೈಸೂರಿಗೆ ಹೋಗಿ ನೆಲೆಸಿದ್ದವರು.
ಪ್ರ: ತಾಯಿಯ ಕಡೆಯಿಂದ ಸಾಹಿತ್ಯದ ಸಂಪರ್ಕ ಇದೆಯಾ?
ಉ: ಇಲ್ಲ. ಓದಿದವರು, ತಿಳಿದುಕೊಂಡವರು ಇದ್ದರು. ಸಾಹಿತ್ಯ ಕ್ಷೇತ್ರದಲ್ಲಿ ಯಾರೂ ಇಲ್ಲ. ಅವರ ಮನೆಗೆ, ಅಂದರೆ ಅಮ್ಮನ ಅಜ್ಜನ ಮನೆಗೆ ಅಪ್ಪ ವಾರಾನ್ನಕ್ಕೆ ಹೋಗುತ್ತಿದ್ದರು. ಅಪ್ಪ ಊರು (ಕುಂದಾಪುರ ತಾಲ್ಲೂಕು ಮೊಗೇರಿ) ಬಿಟ್ಟು ಓದಲಿಕ್ಕೆ ಮೈಸೂರಿಗೆ ಹೋಗಿದ್ದರು. ಆಗಿನ ಕ್ರಮದಂತೆ ವಾರದಲ್ಲಿ ಒಂದೊಂದು ದಿನ ಒಬ್ಬೊಬ್ಬರ ಮನೆಗೆ ಊಟಕ್ಕೆ ಹೋಗುತ್ತಿದ್ದರು. ಅವರು ಹೋಗುತ್ತಿದ್ದ ಒಂದು ಮನೆ ಅಮ್ಮನ ಅಜ್ಜನ ಮನೆ. ಸಯ್ಯಾಜಿರಾವ್ ರಸ್ತೆಯಲ್ಲಿ ಅವರಿಗೆ ದೊಡ್ಡ ಮನೆ ಇತ್ತು; ಅರಮನೆಯಂತಹ ಕಟ್ಟಡ. ಅಪ್ಪ ಕಲಿತು ದೊಡ್ಡವರಾದ ಮೇಲೆ ಮಾತುಕತೆಯಾಗಿ ಆ ಸಂಬಂಧ ಬೆಳೆಯಿತು.
ಪ್ರ: ನಿಮ್ಮ ತಂದೆ ಅನೇಕ ಸಾಹಿತಿಗಳನ್ನು ಬೆಳೆಸಿದ್ದಾರಲ್ಲವೆ?
ಉ: ನಮ್ಮ ತಂದೆಯ ಸ್ವಭಾವವೇ ಅದು, ಅಲ್ಲವಾ? ಬರೆಯಲು ಆರಂಭಿಸಿದ ಹಲವರನ್ನು ಪ್ರೋತ್ಸಾಹಿಸಿ ಬೆಳೆಸಿದ್ದಾರೆ. ಅದರಿಂದ ತುಂಬ ಜನ ಮುಂದೆ ಬಂದಿದ್ದಾರೆ. ಅದರಲ್ಲಿ ಅನಂತಮೂರ್ತಿ, ಲಂಕೇಶ್
ಅವರೆಲ್ಲ ಇದ್ದಾರೆ. ಮೈಸೂರಿನ ಮನೆಯಿಂದಲೇ ಅದೆಲ್ಲ ಆರಂಭವಾಗಿತ್ತು. ತಾವು ಬರೆದುದನ್ನು ಅಪ್ಪನ ಮುಂದೆ ಓದುವುದು, ಅವರ ಅಭಿಪ್ರಾಯ ಕೇಳುವುದು, ಚರ್ಚಿಸುವುದು, ಪ್ರಕಟಣೆಗೆ ವ್ಯವಸ್ಥೆ ಮಾಡುವುದು ಎಲ್ಲ ಮಾಡುತ್ತಿದ್ದರು. ತುಂಬ ಜನ ಬರುತ್ತಿದ್ದರು.
ಪ್ರಶ್ನೆ: ಮಕ್ಕಳಾದ ನಿಮ್ಮೊಂದಿಗೆ ಅಡಿಗರು ಸಾಹಿತ್ಯದ ವಿ?ಯ ಚರ್ಚಿಸುತ್ತಿದ್ದರಾ?
ಉತ್ತರ: ಇಲ್ಲ. ಒಂದು ವೇಳೆ ನಾವೇ ಏನಾದರೂ ಅವರಲ್ಲಿ ಕೇಳಿದರೆ ಮಾತ್ರ ಹೇಳುತ್ತಿದ್ದರು. ಇಲ್ಲವಾದರೆ ಹೇಳಿದೆನಲ್ಲಾ; ಮನೆಯಲ್ಲಿ ಅವರು ನಡೆಸುತ್ತಿದ್ದ ಚರ್ಚೆಗಳಿಂದ ನಾವು ಹೊರಗೇ. ನಾನು ಆಗ ಸಾಹಿತ್ಯದ ಬಗ್ಗೆ ಹೆಚ್ಚು ಆಸಕ್ತಿ ವಹಿಸದೆ ಇದ್ದುದಕ್ಕೆ ಅದು ಕೂಡ ಒಂದು ಕಾರಣ ಇರಬಹುದು. ನಾವು ನಮ್ಮ (ಶಾಲಾ) ಸಬ್ಜೆಕ್ಟ್ನಲ್ಲೇ ಇದ್ದೆವು. ನಾನಂತೂ ಇ? ವ?ವೂ ನನ್ನ ಸಬ್ಜೆಕ್ಟ್ ಮತ್ತು ಪ್ರಾಕ್ಟೀಸಿನಲ್ಲೇ ಬ್ಯುಸಿ ಇದ್ದೆ. ಈಗ ಅಪ್ಪನ ಕಾವ್ಯವನ್ನು ಓದಲಿಕ್ಕೆ ಆರಂಭಿಸಿದ್ದೇನೆ. ಸಾಹಿತಿಗಳ ಪರಿಚಯವೆಲ್ಲ ಇದೆ. ಅವರು ಬಂದಾಗ ಚರ್ಚಿಸುತ್ತೇನೆ. ಸಾಹಿತ್ಯದ ಕಾರ್ಯಕ್ರಮಗಳಿಗೆ ಹೋಗುತ್ತೇನೆ. ಕಾವ್ಯ ಓದುವುದು, ಅದರಲ್ಲೆಲ್ಲ ಈಗ I am taking lot of interest. ನಿಧಾನಗತಿಯಲ್ಲಿ ಅಧ್ಯಯನ ಆರಂಭವಾಗಿದೆ. ಇದಕ್ಕೆಲ್ಲ ಅಭ್ಯಾಸ ಬೇಕು ನೋಡಿ. ತಂದೆಯವರ ಕಾವ್ಯ ಅರ್ಥಮಾಡಿಕೊಳ್ಳಲಿಕ್ಕೆ ಅ? ಸುಲಭ ಇಲ್ಲ, ಅಲ್ಲವಾ? ಓದಿ, ಮಾತಾಡಿ, ಡಿಸ್ಕಸ್ ಮಾಡಿಯೇ ಆಗಬೇಕು.
ಪ್ರಶ್ನೆ: ಅಡಿಗರ ಕವನಗಳು ಬಂದಾಗಲೇ ನೀವು ಅವುಗಳನ್ನು ಓದುತ್ತಿದ್ದಿರಾ?
ಉತ್ತರ: ಆವಾಗ ನಾವು ಸಣ್ಣ ಮಕ್ಕಳಲ್ಲವಾ? ನಾನಂತೂ ಆಗ ಶಾಲೆಯದನ್ನು ಓದುತ್ತಿದ್ದೆ; ಆಗ ನಮ್ಮ ಶಾಲಾ ಓದು ಸಾಗುತ್ತಿತ್ತು. ಅಪ್ಪ ತೀರಿಕೊಳ್ಳುವಾಗ ನನ್ನ ಸ್ಟಡಿ ಮುಗಿದು ಪ್ರಾಕ್ಟೀಸಿಗೆ ಬಂದಿದ್ದೆ ಅಷ್ಟೆ.
ಪ್ರಶ್ನೆ: ಅಡಿಗರು ನಿಮಗೆಲ್ಲ ಸ್ವಾತಂತ್ರ್ಯ ಕೊಟ್ಟಿದ್ದರಲ್ಲವೆ?
ಉತ್ತರ: ಹೌದು. ಮೊದಲಿನಿಂದಲೂ ಕೊಟ್ಟಿದ್ದರು. ಏನಾದರೂ ಕೆಲಸ ಇದ್ದರೆ ನಾವೇ ಮಾಡಬೇಕು. ೧೨ನೇ ಕ್ಲಾಸ್ (ಪಿ.ಯು.ಸಿ.) ಮುಗಿಯುವಾಗ ನನಗೆ ಮೆಡಿಕಲ್ಗೆ ಹೋಗಬೇಕು ಅನ್ನಿಸಿತು. ಇಂಜಿನಿಯರಿಂಗಾ, ಮೆಡಿಕಲ್ಲಾ ಎಂಬ ದ್ವಂದ್ವವೂ ಇತ್ತು. ಆಗ ನಮಗೆ ಏನೂ ಗೊತ್ತಿರಲಿಲ್ಲ, ಅಲ್ಲವಾ? ಆದರೂ ನನ್ನ ಬಗ್ಗೆ ನಾನೇ ನಿರ್ಧರಿಸಬೇಕಾಯಿತು. ವೈದ್ಯಕೀಯ ಶಿಕ್ಷಣಕ್ಕೆ ಹೋದದ್ದು ನನ್ನದೇ ನಿರ್ಧಾರ. ಏನಾದರೂ ಕೆಲಸ ಆಗಬೇಕಿದ್ದರೆ ಅಪ್ಪ “ಯೋಚನೆ ಮಾಡು. ಯಾವುದು ನಿನಗೆ ಸರಿ ಎನಿಸುತ್ತದೆ, ಅದನ್ನು ಮಾಡು” ಎಂದು ಹೇಳುತ್ತಿದ್ದರು. ಆ ರೀತಿಯಲ್ಲಿ ಪ್ರೋತ್ಸಾಹಿಸುತ್ತಿದ್ದರು. ಅಕ್ಕಂದಿರು, ಅಣ್ಣ, ತಂಗಿ, ನಾನು ಎಲ್ಲರೂ ಪೂರ್ತಿ ಸ್ವತಂತ್ರರು (ಇಂಡಿಪೆಂಡೆಂಟ್). ಒಂದು ರೀತಿಯಲ್ಲಿ ನೋಡಿದರೆ ಅದು ನಿಜವಾಗಿ ಶಾಕಿಂಗ್ (ಆಘಾತಕಾರಿ). ಯಾರ ಹತ್ತಿರವೂ ಹೋಗಲಿಕ್ಕಿಲ್ಲ; ಸ್ವತಂತ್ರವಾಗಿ ನಾವೇ ನಿರ್ಧಾರ ಕೈಗೊಳ್ಳಬೇಕು. ಆ ರೀತಿ ತುಂಬ ಕಠಿಣ (ಟಫ್) ಮಾರ್ಗ. ಆವಾಗಿಂದ ಅವರು ನಮ್ಮನ್ನು ಆ ರೀತಿಯಲ್ಲಿ ಬೆಳೆಸಿದ್ದರು. ನನಗೆ ಇಂಜಿನಿಯರಿಂಗ್ ಸೀಟು ಸಹ ಸಿಕ್ಕಿತ್ತು. ಎಲ್ಲ ಸಿಗುತ್ತಿತ್ತು; ಒಳ್ಳೆಯ ಮಾರ್ಕ್ಸ್ ಇತ್ತು. ನಾನು ಮೆಡಿಸಿನ್ ವಿಭಾಗ ತೆಗೆದುಕೊಂಡೆ; ನನ್ನದೇ ನಿರ್ಧಾರವಾದ ಕಾರಣ ಆಮೇಲೆ ಯಾರ ಮೇಲೂ ತಪ್ಪು (ಬ್ಲೇಮ್) ಹೊರಿಸುವಂತಿಲ್ಲ.
ಪ್ರಶ್ನೆ: ಅಮ್ಮ ಏನೂ ಹೇಳುತ್ತಿರಲಿಲ್ಲವೆ?
ಉತ್ತರ: ಇಲ್ಲ; ಅಮ್ಮ ಹೇಳುತ್ತಿರಲಿಲ್ಲ. ಅದೆಲ್ಲ ಅಪ್ಪನದೇ ಕ್ಷೇತ್ರ. ಮನೆಯಲ್ಲಿ ಅಪ್ಪನೇ ಬಾಸ್; ಅವರೇ ಹೇಳಬೇಕು. ಅಮ್ಮನ ಹತ್ತಿರ ಏನಾದರೂ ಬೇಕಾದರೆ ಹೇಳಿ ಮಾಡಿಸಿಕೊಳ್ಳಬಹುದ?. ಇಂತಹ ದೊಡ್ಡ ನಿರ್ಧಾರಗಳು ಅಪ್ಪನ ಮೂಲಕವೇ. ಅವರು ಕುಳ್ಳಿರಿಸಿಕೊಂಡು ಡಿಸ್ಕಸ್ ಮಾಡುತ್ತಿದ್ದರು. “ನೋಡು, ನಿನಗೆ ಇದು ಆಗುತ್ತದಾ? ನಿನ್ನ ಇಂಟರೆಸ್ಟ್ ಪ್ರಕಾರ ನೀನೇ ನಿರ್ಧಾರ ಮಾಡಬೇಕು, ಅಲ್ಲವಾ” ಎನ್ನುತ್ತಿದ್ದರು. ಹಾಗಾಗಿ ಸಣ್ಣದಾಗಲಿ, ದೊಡ್ಡದಾಗಲಿ, ಯೋಚಿಸಿ ನಿರ್ಧರಿಸುವುದು ನಮಗೆ ಅಭ್ಯಾಸವಾಗಿತ್ತು. ಕ?ವಾಗುತ್ತದೆ, ಏನು ಮಾಡುವುದೆಂದು ಹಿಂಜರಿಯುವ ಪ್ರಶ್ನೆ ಇರಲಿಲ್ಲ. ಎ? ಕ?ವಾದರೂ ನಾವೇ ಅಡ್ಜಸ್ಟ್ ಮಾಡಿಕೊಂಡು ಮುಂದುವರಿಯಬೇಕಿತ್ತು. ಅದರಿಂದಾಗಿ ನಾವು ಚಿಕ್ಕ ವಯಸ್ಸಿನಲ್ಲೇ ತುಂಬ ಇಂಡಿಪೆಂಡೆಂಟ್ ಆಗಿದ್ದೆವು. ಪಿ.ಯು.ಸಿ. ಆಗಿದ್ದು ಮಾತ್ರ; ಎಲ್ಲಿ ಉಳಿದುಕೊಳ್ಳಬೇಕು ಎಲ್ಲ ನಾನೇ ಮಾಡಿಕೊಂಡೆ.
ಪ್ರಶ್ನೆ: ಸ್ಟ್ರೋಕ್ (ಪಾರ್ಶ್ವವಾಯು) ಆದ ಮೇಲೆ ಅಡಿಗರು ಕೆಲವು ವರ್ಷ ಇದ್ದರಲ್ಲವೆ?
ಉತ್ತರ: ಹೌದು; ಆರು ವರ್ಷ ಇದ್ದರು. ಆಗ ಕೂಡ ಅವರೇ ಮ್ಯಾನೇಜ್ ಮಾಡುವುದು. ಎಡಭಾಗ ಪೂರ್ತಿ ಬಿದ್ದುಹೋಗಿತ್ತು. ಮಂಚದಿಂದ ಏಳುವುದಕ್ಕೂ ತುಂಬ ಕಷ್ಟ. ಆದರೂ (ಎತ್ತುವುದಕ್ಕೆ) ಯಾರಿಗೂ ಬಿಡುತ್ತಿರಲಿಲ್ಲ; ಅವರೇ ಏಳುವುದು. ಅವರೇ ಬಾತ್ರೂಮಿಗೆ ಹೋಗಬೇಕು, ಎಷ್ಟು ಕಷ್ಟವಾದರೂ ಅವರೇ ಸ್ನಾನಮಾಡಬೇಕು. ಕೊನೆಯ ತನಕ ಎಲ್ಲವನ್ನು ಅವರೇ ನೋಡಿಕೊಂಡರು. ಊಟವನ್ನೂ ಅವರೇ ಮಾಡಬೇಕು. ಕರೆಕ್ಟಾಗಿ ಡೈನಿಂಗ್ ಟೇಬಲ್ನಲ್ಲೇ ಕುಳಿತು ಊಟಮಾಡುವುದು. ಎಷ್ಟು ಕಷ್ಟವಾದರೂ ಕೊನೆಯ ತನಕ ತಾವೇ ಮ್ಯಾನೇಜ್ ಮಾಡಿದರು; ಯಾರೂ ಸಹಾಯ ಮಾಡುವುದು ಅವರಿಗೆ ಇಷ್ಟವಿಲ್ಲ. ಜೊತೆಯಲ್ಲಿ ಅಮ್ಮ ಇದ್ದರೂ ಅವರು ಕೂಡ ಸಹಾಯ ಮಾಡಲಿಕ್ಕೆ ಇಲ್ಲ.
ಪ್ರಶ್ನೆ: ಸ್ಟ್ರೋಕ್ನ ಆನಂತರ ಅವರಿಗೆ ಬರೆಯಲು ತೊಂದರೆ ಆಗಿತ್ತಾ?
ಉತ್ತರ: ಇಲ್ಲ. ಸ್ಟ್ರೋಕ್ ಆದದ್ದು ಎಡಗೈಗೆ. ಬಲಗೈಯಲ್ಲಿ ಬರೆಯುತ್ತಿದ್ದರು. ಮಿದುಳು ಪಕ್ಕಾ ಶಾರ್ಪ್ ಆಗಿತ್ತು. ಅದರ ಮೇಲೆ ಯಾವುದೇ ಪರಿಣಾಮ ಆಗಿರಲಿಲ್ಲ. ಕೊನೆಯ ದಿನದವರೆಗೂ ಅವರು ಬರೆದಿದ್ದರು. ಏನೂ ತೊಂದರೆ ಆಗಲಿಲ್ಲ. ಆಚೀಚೆ ತಿರುಗಾಡುವುದಕ್ಕೆ (movemement) ಮಾತ್ರ ತೊಂದರೆ ಆಗಿತ್ತು. ಆವಾಗ ಕೂಡ ಬೆಳಗ್ಗೆ ಬೇಗ ಎದ್ದು ಬರೆಯುತ್ತಿದ್ದರು. ನನಗೆ ಚೆನ್ನಾಗಿ ನೆನಪಿದೆ; ಬರೆಯುವ ಆ ಶಿಸ್ತನ್ನು ಅವರು ಬಿಡಲೇ ಇಲ್ಲ.
ಪ್ರಶ್ನೆ: ಮನೆಯಿಂದ ಹೊರಗೆ ಹೋಗಲು ಕಷ್ಟವಿತ್ತಲ್ಲವಾ?
ಉತ್ತರ: ಹೊರಗೆ ಹೋಗಲು ಆಗುತ್ತಿರಲಿಲ್ಲ. ಸ್ನೇಹಿತರೆಲ್ಲ ಮನೆಗೇ ಬರುತ್ತಿದ್ದರು. ಬಂದಾಗ ಇವರು ಹೋಗಿ ಹಾಲ್ನಲ್ಲಿ ಕುಳಿತುಕೊಳ್ಳುತ್ತಿದ್ದರು; ಮಾತನಾಡುವುದಕ್ಕೇನೂ ತೊಂದರೆ ಇರಲಿಲ್ಲ.
ಪ್ರಶ್ನೆ: ಅಡಿಗರ ಮೊದಲ ರಚನೆಗಳು ಸರಳವಾದ ಪದ್ಯಗಳು, ಅನಂತರದ್ದು ಕಠಿಣ. ಭೂಮಿಗೀತದಂತಹ (ಕಠಿಣ) ಪದ್ಯಗಳನ್ನು ಮಕ್ಕಳಾದ ನೀವು ಆಗ ಓದುವುದಿತ್ತೆ?
ಉತ್ತರ: ಅಕ್ಕಂದಿರು ಓದುತ್ತಿದ್ದರು. ಅವರು ಚೆನ್ನಾಗಿ ಓದಿಕೊಂಡಿದ್ದರು.
ಪ್ರಶ್ನೆ: ಅವರ ಕೆಲವು ಕವನಗಳು ಹಾಗೆಯೇ ಅರ್ಥವಾಗುವುದಿಲ್ಲ; ಅದರ ಬಗೆಗಿನ ವಿಮರ್ಶೆಯನ್ನು ಓದಿ ಅರ್ಥಮಾಡಿಕೊಳ್ಳಬೇಕು. ಆದರೆ ಸುಮತೀಂದ್ರ ನಾಡಿಗರಂಥವರು ಬಹಳ ಹಿಂದೆಯೇ ವಿಮರ್ಶೆಗಳನ್ನು ಬರೆದರಲ್ಲವೆ?
ಉತ್ತರ: ಅನಂತಮೂರ್ತಿ, ನಾಡಿಗರೆಲ್ಲ ಬರೆಯುತ್ತಿದ್ದರು. ವಿಮರ್ಶೆ ಓದಿಕೊಂಡು ಜೊತೆಜೊತೆಗೇ ಅವರ ಕವನಗಳನ್ನು ಓದಬೇಕು. ಇಲ್ಲದಿದ್ದರೆ ಅದು ನಿಮ್ಮನ್ನು ತಡೆದು ನಿಲ್ಲಿಸುತ್ತದೆ.
ಪ್ರಶ್ನೆ: ತ್ರೈಮಾಸಿಕ ಸಾಹಿತ್ಯ ಪತ್ರಿಕೆ ’ಸಾಕ್ಷಿ’ಯ ಸಂಪಾದಕರಾಗಿ ಅಡಿಗರು ಅದನ್ನು ಚೆನ್ನಾಗಿ ನಡೆಸಿದರಲ್ಲವೆ?
ಉತ್ತರ: ಹೌದು ಹೌದು. ಅದೊಂದು ಹೈಲೆವೆಲ್ನಲ್ಲಿ ಬರುತ್ತಾ ಇತ್ತು. ಜನ ಅದನ್ನು ಈಗ ಕೂಡ ಜ್ಞಾಪಿಸಿಕೊಳ್ಳುತ್ತಾರೆ.
ಪ್ರಶ್ನೆ: ಅಡಿಗರು ಬೆಳಗ್ಗಿನ ಹೊತ್ತು ಬರೆಯುತ್ತಿದ್ದರು ಎಂದಿರಿ; ಬೇರೆ ಹೊತ್ತು ಬರೆಯುತ್ತಿರಲಿಲ್ಲವೆ?
ಉತ್ತರ: ಹಾಗೇನಿಲ್ಲ. ಬೇರೆ ಹೊತ್ತಿನಲ್ಲೂ ಬರೆಯುತ್ತಿದ್ದರು. ಬರೆದದ್ದು ಯಾವಾಗಲೂ ಅವರ ಟೇಬಲ್ ಮೇಲೆ ಇರುತ್ತಿತ್ತು. ಪುಟಗಟ್ಟಲೆ ಬರೆದು ಟೇಬಲ್ ಮೇಲೆ ಒಂದರ ಮೇಲೊಂದು ಇಟ್ಟಿರುತ್ತಿದ್ದರು. ಮನಸ್ಸು ಬಂದಾಗ ಅಥವಾ ಏನಾದರೂ ಹೊಳೆದಾಗ ಮತ್ತೆ ಬರೆದು ಇಡುತ್ತಿದ್ದರು. ಆಚೀಚೆ ಹೋಗುವಾಗ ಬರುವಾಗ ಐಡಿಯಾಸ್ ಬಂದರೆ ಚಕ್ಕಂತ ಬರೆದುಬಿಡುತ್ತಿದ್ದರು; ಎರಡು ಲೈನಾದರೂ ಸರಿಯೆ, ಬರೆದುಬಿಡುತ್ತಿದ್ದರು. ಅದನ್ನೆಲ್ಲ ಒಂದರ ಮೇಲೊಂದು ಇಡುತ್ತಿದ್ದರು. ಮತ್ತೆ ಕೊನೆಗೆ ಎಲ್ಲವನ್ನು ಸೇರಿಸಿಕೊಂಡು ಎರೇಂಜ್ ಮಾಡಿ ಸರಿಪಡಿಸುತ್ತಿದ್ದರು. ಬರೆಯುವುದಕ್ಕೆ ಸುಮಾರು ಸಮಯ ತೆಗೆದುಕೊಳ್ಳುತ್ತಿದ್ದರು. ಅವರೇನು ಪ್ರಾಲಿಫಿಕ್ ರೈಟರ್ (ರಾಶಿಗಟ್ಟಲೆ ಬರೆಯುವವರು) ಅಲ್ಲ ನೋಡಿ. ವ?ದಲ್ಲಿ ಕೆಲವು ಸಲ ೨-೩ ಪದ್ಯ ಮಾತ್ರ ಬರೆದದ್ದು ಕೂಡ ಉಂಟು. ಯಾವಾಗ ಮನಸ್ಸಿನಲ್ಲಿ ಬರುತ್ತಿತ್ತೋ ಕೂಡಲೆ ಬರೆದು ಇಟ್ಟುಬಿಡುತ್ತಿದ್ದರು. ಮತ್ತೆ ಅದನ್ನೆಲ್ಲ ಜೋಡಿಸಿ ಪದ್ಯಕ್ಕೆ ಅಂತಿಮ ರೂಪ ಕೊಡುತ್ತಿದ್ದರು. ಬೆಳಗ್ಗೆ ಅವರಿಗೆ ಯಾವುದೇ ಡಿಸ್ಟರ್ಬೆನ್ಸ್ ಇರುತ್ತಿರಲಿಲ್ಲ. ಬಹುಶಃ ಅದೇ ಕಾರಣದಿಂದ ಹೆಚ್ಚಾಗಿ ಬೆಳಗ್ಗೆ ಬೇಗ ಬರೆಯುತ್ತಿದ್ದಿರಬೇಕು.
ಪ್ರಶ್ನೆ: ಕೆಲವು ಸಲ ಒಂದು ಪದ್ಯದ ಒಂದೆರಡು ಸಾಲು ಹೊಳೆದು ಅದನ್ನು ಬರೆದಿಟ್ಟು ಮತ್ತೆ ಡೆವಲಪ್ ಮಾಡುವುದು ಹೀಗೆಲ್ಲ ಮಾಡುತ್ತಿದ್ದರಂತೆ; ’ಯಾವ ಮೋಹನ ಮುರಳಿ’ ಪದ್ಯ ಮೊದಲು ಎರಡು ಲೈನ್ ಹೊಳೆದದ್ದಂತೆ.
ಉತ್ತರ: ಹೌದು, ಹಾಗೇ. ಬಹುತೇಕ ಎಲ್ಲ ಪದ್ಯಗಳು ಹಾಗೇ ಇರಬೇಕು. ಕಂಟಿನ್ಯೂವಸ್ ಬರೆದದ್ದು ಅಂತ ನಮಗೆ ಸಹಾ ಗೊತ್ತಿಲ್ಲ. ಕೆಲವು ಸಾಲು ಬರೆದಿಟ್ಟು ಮುಂದಿನ ದಿವಸವೋ ಮುಂದಿನ ವಾರವೋ ಮುಂದಿನ ತಿಂಗಳೋ ಅದನ್ನು ಮೆಲ್ಲಗೆ ಬೆಳೆಸಿಕೊಂಡು ಬೆಳೆಸಿಕೊಂಡು, ಕೆಲವು ಪದ್ಯ ಮುಗಿಸಲಿಕ್ಕೆ ಒಂದು ವ? ಆಗಿದ್ದು ಕೂಡ ಉಂಟು. ಪದ್ಯ ಶುರು ಮಾಡಿದ ಮೇಲೆ ಪ್ರತಿ ವರ್ಡ್ ಕೂಡ ಅ? ಕೇರ್ಫುಲ್ಲಾಗಿ ಆರಿಸಿ, ಶಬ್ದ ಶಬ್ದವನ್ನೂ ಆರಿಸಿ ಜೋಡಿಸುತ್ತಿದ್ದರು. ಆ ಸಂದರ್ಭಕ್ಕೆ ಬೇಡದೆ ಇದ್ದದ್ದು ಅಂತ ಯಾವುದೂ ಇರುವುದಿಲ್ಲ. ಒಂದು ವರ್ಡ್ ಹಾಕಿದರೆ ಅ? ತೂಕ ಇರಬೇಕು. ಅದಕ್ಕಾಗಿಯೇ ಅವರ ಕೃತಿಗಳನ್ನು ಜನ ಯಾವಾಗಲೂ ನೆನಪಿಟ್ಟುಕೊಳ್ಳುತ್ತಾರೆ!
ಪ್ರಶ್ನೆ: ಅಡಿಗರು ರಾಜಕೀಯಕ್ಕೆ ಇಳಿದರಲ್ಲಾ! ವೋಟಿಗೆ ನಿಲ್ಲುವ ಬಗ್ಗೆ ಮನೆಯಲ್ಲಿ ಏನಾದರೂ ಡಿಸ್ಕಸ್ ಮಾಡಿದ್ದರಾ?
ಉತ್ತರ: ಇಲ್ಲ, ಇಲ್ಲ. ರಾಜಕೀಯಕ್ಕೆ ಬಂದದ್ದು ಅವರದ್ದೇ ನಿರ್ಧಾರ. ಆದರೆ ನಮ್ಮ ತಂದೆಯ ಕವನ, ಲೇಖನಗಳನ್ನು ಓದಿದರೆ, ರಾಜಕೀಯ ಚಿಂತನೆ ವಿ?ಯದಲ್ಲಿ ಅವರು ಯಾವಾಗಲೂ ಸಕ್ರಿಯವಾಗಿದ್ದರು (ತಟಸ್ಥರಲ್ಲ) ಎಂಬುದು ನಿಮಗೆ ಗೊತ್ತಾಗುತ್ತದೆ. ರಾಜಕೀಯದಲ್ಲಿ ಅವರು (ಭಾವನಾತ್ಮಕವಾಗಿ) ಸದಾ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ಕೆಲವು ಪದ್ಯಗಳನ್ನು ನೋಡಿದರೆ ನಿಮಗೆ ತಿಳಿಯುತ್ತದೆ; ಇದು ಹೀಗೆ ಆಗಬೇಕು, ದೇಶ ಚೆನ್ನಾಗಿರಬೇಕು ಎನ್ನುವ ಕಾಳಜಿ ಅವರಿಗೆ ಯಾವಾಗಲೂ ಇದ್ದೇ ಇತ್ತು. ಕೆಟ್ಟ ರಾಜಕಾರಣಿಗಳ ಬಗ್ಗೆ ಅವರಿಗೆ ತೀರಾ ಸಿಟ್ಟಿತ್ತು. ಅದೇ ಕಾರಣದಿಂದ, ಏನಾದರೂ ಮಾಡೋಣವೆಂದು ಅವರು ಸಕ್ರಿಯ ರಾಜಕೀಯಕ್ಕೆ ಬಂದಿರಬಹುದು; ರಾಜಕೀಯಕ್ಕೆ ಅವರು ಅರ್ಹರಲ್ಲ ಎಂಬುದು ನನ್ನ ಅಭಿಪ್ರಾಯ; ಅದು ಬೇರೆಯ ವಿಚಾರ. ರಾಜಕೀಯವು ಆಗಲೇ ಎ?ಂದು ಕೆಟ್ಟಿತ್ತು, ಕೊಳೆತುಹೋಗಿತ್ತು ಎಂದರೆ ನಮ್ಮ ಅಪ್ಪ ಅದಕ್ಕೆ ಖಂಡಿತವಾಗಿಯೂ ಫಿಟ್ ಆಗಿರಲಿಲ್ಲ. ಅವರಂತಹ ಪ್ರಾಮಾಣಿಕ ವ್ಯಕ್ತಿಗಳು ರಾಜಕೀಯಕ್ಕೆ ಅರ್ಹರೆನಿಸುವುದಿಲ್ಲ. ಆ ಸಮಯದಲ್ಲಿ ಅವರೇನಾದರೂ ಗೆದ್ದಿದ್ದರೆ ಬಹುಶಃ ಕೇಂದ್ರಸಂಪುಟದಲ್ಲಿ ಮಂತ್ರಿ ಆಗುತ್ತಿದ್ದರೇನೊ; ಅದರಲ್ಲಿ ಯಾವುದೇ ಸಂಶಯ ಇಲ್ಲ. ಆದರೆ ರಾಜಕೀಯಕ್ಕೆ ಅವರು ಅರ್ಹರಾಗಿರಲಿಲ್ಲ; ಆದ್ದರಿಂದ ಸೋತರು. ಬೆಂಗಳೂರಿನಲ್ಲಿ ಕೆಂಗಲ್ ಹನುಮಂತಯ್ಯನವರ ವಿರುದ್ಧ ಸೋತರು. ರಾಜಕೀಯಕ್ಕೆ ಬಂದು ಕೂಡ ಅವರು ಅಲ್ಲಿ ಬಹಳ ದಿನ ಇರಲಿಲ್ಲ. ಅದು ಅವರದೇ ನಿರ್ಧಾರ. ರಾಜಕೀಯಕ್ಕೆ ಒಳ್ಳೆಯವರು ಬಂದರೆ ಅದು ಸರಿಯಾಗಲು ಸಾಧ್ಯ ಎನ್ನುವ ನಂಬಿಕೆ ಅವರಿಗಿತ್ತು. ಕೆಟ್ಟ ರಾಜಕೀಯ ನಮಗೆ ಬೇಡವಪ್ಪಾ ಎಂದು ಎಲ್ಲರೂ ದೂರ ಹೋದರೆ ಒಳ್ಳೆಯ ವ್ಯಕ್ತಿಗಳು ಬರುವುದು ಹೇಗೆ? – ಎನ್ನುವ ಆತಂಕ ಅವರಿಗಿತ್ತು.
ಪ್ರಶ್ನೆ: ಉಡುಪಿಯಲ್ಲಿ ಇದ್ದವರನ್ನು ಕರೆದುಕೊಂಡು ಬಂದು ನಿಲ್ಲಿಸಿದ್ದರಲ್ಲವೆ? (ವಿರೋಧಪಕ್ಷಗಳ ಕೂಟದ ಪರವಾಗಿ ಜನಸಂಘದಿಂದ ಅವರು ಸ್ಪರ್ಧಿಸಿದ್ದರು).
ಉತ್ತರ: ಹೌದು. ಬೆಂಗಳೂರಿನಲ್ಲಿ ಅಲ್ಲಿಯವರೆಗೆ ಕೆಂಗಲ್ ಹನುಮಂತಯ್ಯನವರ ಎದುರು ನಿಲ್ಲುವವರೇ ಇಲ್ಲ ಎಂಬಂತಿತ್ತು. ಸೋಲಿಸುವುದಂತೂ ದೂರವೇ ಉಳಿಯಿತು. ನಮ್ಮಪ್ಪ ಸ್ಪರ್ಧಿಸಿದ ಮುಂದಿನ ಸಲ ಕೆಂಗಲ್ ಸೋತರು. ಅಪ್ಪ ಸ್ಪರ್ಧಿಸಿದಾಗಲೇ ಒಳ್ಳೆಯ ಸ್ಪರ್ಧೆ ಆಗಿತ್ತು; ಕೆಂಗಲ್ ಸೋಲುತ್ತಾರೇನೋ ಎಂಬ ವಾತಾವರಣವಿತ್ತು. ಆದರೆ ಅವರು ಗಟ್ಟಿ ತಳವೂರಿದ್ದವರಲ್ಲವೆ? ಆ ಸಲ ಗೆದ್ದು ಮುಂದಿನ ಸಲ ಸೋತರು. ಮುಂದಿನ ಸಲವೂ ಅಪ್ಪನಿಗೆ ಲೋಕಸಭೆಗೆ ಸ್ಪರ್ಧಿಸುವ ಅವಕಾಶವಿತ್ತು; ಅವರು ತನಗೆ ಇಂಟರೆಸ್ಟ್ ಇಲ್ಲ; ಬೇಡ ಎಂದು ಹೇಳಿದರು.
ಪ್ರಶ್ನೆ: ಸಾಹಿತ್ಯ ಕ್ಷೇತ್ರದಲ್ಲಿ ಅಡಿಗರಿಗೆ ಕೆಲವರ ಹತ್ತಿರ ಆಗುತ್ತಿರಲಿಲ್ಲ. ಮೊದಲು ಒಳ್ಳೆಯದಿದ್ದು ಆನಂತರ ಸಂಬಂಧ ಹಾಳಾದದ್ದು ಕೂಡ ಇತ್ತಲ್ಲಾ. ಆ ಬಗ್ಗೆ ಮನೆಯಲ್ಲಿ ಏನಾದರೂ ಹಂಚಿಕೊಳ್ಳುತ್ತಿದ್ದರಾ?
ಉತ್ತರ: ಖಂಡಿತಾ ಇಲ್ಲ; ಖಂಡಿತಾ ಹಂಚಿಕೊಳ್ಳುತ್ತಿರಲಿಲ್ಲ; ಯಾವತ್ತಾದರೂ ಸಾಂದರ್ಭಿಕವಾಗಿ ಒಂದು ಮಾತು ಬರುತ್ತಿತ್ತೋ ಏನೋ. ಅವರು ಆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ ಕೂಡ. ನೋಡಿ, ಬೇರೆಯವರಿಗೆ ಅವರವರದೇ ಹಿತಾಸಕ್ತಿ (ಇಂಟರೆಸ್ಟ್) ಇದ್ದರೆ ಅಪ್ಪನಿಗೆ ಅಂಥದೇನೂ ಇರುತ್ತಿರಲಿಲ್ಲ. ಇವರು ಯಾರನ್ನಾದರೂ ಬೆಳೆಸಿದರೆ ಅವರಿಂದ ತಮಗೆ ಪ್ರಯೋಜನ (ಅಡ್ವಾಂಟೇಜ್) ಆಗಬೇಕೆಂದೂ ಯಾವತ್ತೂ ನೋಡಲಿಲ್ಲ. ಕೆಲವರು ಕಾಲಕಾಲಕ್ಕೆ ಬದಲಾದದ್ದಿದೆ. ಇದರಿಂದ ತಂದೆಗೆ ಮನಸ್ಸಿನಲ್ಲಿ ಬೇಜಾರು ಆಗಿರಬಹುದು. ಆದರೆ ಅದನ್ನು ನಮ್ಮಲ್ಲಿ ಹೇಳಿಕೊಳ್ಳುತ್ತಿರಲಿಲ್ಲ. ತುಂಬ ಜನ ಹಾಗೆ ಮಾಡಿದ್ದಾರೆ. ನಮ್ಮಪ್ಪ ಯಾರು ಏನು ಹೇಳಿದರೂ ಸತ್ಯವೆಂದು ನಂಬುತ್ತಿದ್ದರು; ಮೊದಲಿನಿಂದ ಕೂಡ.
ಪ್ರಶ್ನೆ: ಕೆಲವರ ಬಗ್ಗೆ ಪದ್ಯದಲ್ಲೂ ಬರೆದುಕೊಂಡಿದ್ದಾರೆ; ಕೆಲವು ಹಳಬರ ಬಗೆಗೂ ಬರೆದಿದ್ದರಲ್ಲ!
ಉತ್ತರ: ಹೌದು. ಆದರೆ ಅವರು ತಲೆಗೆ ಹಚ್ಚಿಕೊಳ್ಳುತ್ತಿರಲಿಲ್ಲ. ಬೇಕಾದ? ಜನ ಅವರಿಗೆ ಮೋಸ ಮಾಡಿದ್ದಾರೆ. ಕೆಲವರು ಹಣ ತೆಗೆದುಕೊಂಡು ವಾಪಸು ಕೊಡದೆಯೂ ವಂಚಿಸಿದ್ದಾರೆ. ಆದರೆ ಮರುದಿನವೂ ಬಂದು ಅವರಿಗೆ ಮೋಸ ಮಾಡಬಹುದಿತ್ತು; ಅಷ್ಟೊಂದು ಸಿಂಪಲ್ ಮನುಷ್ಯ ಅವರು.
ಪ್ರಶ್ನೆ: ಮೊದಲು ತುಂಬ ಸಿಗರೇಟು ಸೇದುತ್ತಿದ್ದವರು ಮತ್ತೆ ಬಿಟ್ಟರಲ್ಲವೆ?
ಉತ್ತರ: ಸಡನ್ನಾಗಿ ಒಂದು ದಿವಸ ಬಿಟ್ಟರು. ಬೆಳಗ್ಗೆ ಆರು ಗಂಟೆಗೆ ಸಿಗರೇಟು ಬೇಕು ಅಂತ ಹೋಗಿದ್ದಾರೆ; ಅಂಗಡಿಯವ ತೆರೆದಿರಲಿಲ್ಲ. ನಾಯಿಯನ್ನು ಕರೆದುಕೊಂಡು ಒಂದು ವಾಕಿಂಗ್ ಅಂತ ಹೋಗಿದ್ದಾರೆ. ಅಂಗಡಿಯವ ಓಪನ್ ಮಾಡಿಲ್ಲ. ಇವರಿಗೆ ತೀರಾ ಬೇಕಿತ್ತು. ಮನೆಗೆ ವಾಪಸು ಬಂದಿದ್ದಾರೆ; ಮತ್ತೆ ಹೋಗಿದ್ದಾರೆ. ಆಗಲೂ ಬಾಗಿಲು ತೆಗೆದಿಲ್ಲ. ೨-೩ ಸರ್ತಿ ಹೋಗಿ ಬಂದಿದ್ದಾರೆ. ಮತ್ತೆ ಇದು ಎಂಥ ಗುಲಾಮಿ ಅಂದುಕೊಂಡು ಒಂದೇ ದಿನದಲ್ಲಿ ಬಿಟ್ಟುಬಿಟ್ಟಿದ್ದಾರೆ. ಅದರ ನಂತರ ಅವರು ಸ್ಮೋಕ್ ಮಾಡಲೇ ಇಲ್ಲ; ಅದಕ್ಕೆ ಯಾಕೆ ಗುಲಾಮನಾಗಿ ಇರಬೇಕೆಂದು ನಿಲ್ಲಿಸಿಬಿಟ್ಟರು.
ಪ್ರಶ್ನೆ: ಮತ್ತೆ ಅವರಿಗೆ ಪ್ರಾಣಿಗಳ ಬಗ್ಗೆ ಬಹಳ ಪ್ರೀತಿ ಇತ್ತಲ್ಲಾ?
ಉತ್ತರ: ಪ್ರಾಣಿಗಳೆಂದರೆ ಅವರಿಗೆ ತುಂಬ ಇಷ್ಟ. ಮನೆಯಲ್ಲಿ ಒಂದು ಬೆಕ್ಕಿತ್ತು. ಅದು ಯಾವಾಗಲೂ ಅವರ ಜೊತೆಗೇ ಇರುತ್ತಿತ್ತು. ಅವರು ಬರೆಯುವಾಗ ಅವರ ಟೇಬಲ್ ಮೇಲೇ ಮಲಗಿರುತ್ತಿತ್ತು. ಒಂದು ದಿನ ಅದು (ನರಸಿಂಗ) ಕಾಣೆಯಾಯಿತು; ಮರುದಿನವೂ ಬರಲಿಲ್ಲ. ತಂದೆ ಹುಡುಕಿಕೊಂಡು ಹೋದರು. ಎಲ್ಲೋ ಪಾಪ, ರಸ್ತೆಯಲ್ಲಿ ಬಿದ್ದು ಸತ್ತುಹೋಗಿತ್ತು. ಅದನ್ನು ಮನೆಗೆ ಎತ್ತಿಕೊಂಡು ಬಂದು ಸ್ವತಃ ಮಣ್ಣುಮಾಡಿದರು. ಆ ರೀತಿಯಲ್ಲಿ ತೀರಾ ಗಾಢ ಸಂಬಂಧ.
* * * * *
ಮಾತುಕತೆಯನ್ನು ಮುಗಿಸಿ ಡಾ| ಪ್ರದ್ಯುಮ್ನ ಅಡಿಗರ ಕೊಠಡಿಯಿಂದ ಹೊರಬಂದಾಗ ’ಹಹಹಾ’ ಎನ್ನುವ ಅವರ ಮುಕ್ತಮನಸ್ಸಿನ ಪೂರ್ಣನಗು ಕಿವಿಗಳಲ್ಲಿ ತುಂಬಿಕೊಂಡಿತ್ತು. ಅದರ ಹಿಂದೆ ಕವಿ, ಪ್ರಾಧ್ಯಾಪಕ ಪ್ರೊ| ಎಂ. ಗೋಪಾಲಕೃಷ್ಣ ಅಡಿಗರು ಇದ್ದಾರೆ ಎನಿಸುತ್ತದೆ.
ಮಾತುಕತೆ ನಡೆಸಿದವರು –
ಎಚ್. ಮಂಜುನಾಥ ಭಟ್
ಕವಿ ಅಡಿಗರಿಗೆ ಸಂಬಂಧಿಸಿದ ಭಾವಚಿತ್ರಗಳನ್ನು ಒದಗಿಸಿದವರು: ಜಯರಾಮ ಅಡಿಗ
ಶತಾಬ್ದ ಸ್ಮರಣೆ