ಭೀರುಃ ಪಲಾಯಮಾನೋsಪಿ ನಾವೇಷ್ಟವ್ಯೋ ಬಲೀಯಸಾ|
ಕದಾಚಿಚ್ಛೂರತಾಮೇತಿ ಮರಣೇ ಕೃತನಿಶ್ಚಯಃ ||
– ಸುಭಾಷಿತಸುಧಾನಿಧಿ
“ಪುಕ್ಕಲನು ಹೆದರಿ ಓಡಿಹೋಗುತ್ತಿದ್ದಾಗಲೂ ಅವನನ್ನು ಅವನ ಪಾಡಿಗೆ ಬಲಿಷ್ಠನು ಬೆನ್ನುಹತ್ತದೆ ಬಿಡಬೇಕು. ಏಕೆಂದರೆ ಒಮ್ಮೊಮ್ಮೆ ತಾನು ಸಾಯುವುದು ನಿಶ್ಚಿತವೆನಿಸಿದಾಗ ಅಂತಹವನಲ್ಲಿ ಹಿಂದೆ ಇರದಿದ್ದ ಅಪಾರ ಶೌರ್ಯದ ಸಂಚಯವಾಗಿರುತ್ತದೆ.”
ಸುಪ್ತವಾಗಿದ್ದ ಶಕ್ತಿಯೆಲ್ಲ ಪ್ರಾಣಾಂತಕ ಸನ್ನಿವೇಶ ಎದುರಾದಾಗ ಒಗ್ಗೂಡಿ ಬರುತ್ತದೆ. ಜಿಂಕೆಯನ್ನು ಹುಲಿ ಬೆನ್ನುಹತ್ತಿದಾಗ ಜಿಂಕೆ ತಾನು ಸಾಮಾನ್ಯವಾಗಿ ಓಡುತ್ತಿದ್ದುದರ ನಾಲ್ಕುಪಟ್ಟು ವೇಗದಿಂದ ಓಡುತ್ತದೆ. ಹುಲಿಗೆ ಅದು ಒಪ್ಪತ್ತಿನ ಡಿನ್ನರ್ ಮಾತ್ರ; ಜಿಂಕೆಗೆ ಅದು ಬದುಕು-ಸಾವಿನ ಪ್ರಶ್ನೆ.
ಅನ್ಯೋಕ್ತಿ ಪ್ರಕಾರದ ಮೇಲಣ ಸೂಕ್ತಿಯಲ್ಲಿ ಇನ್ನೊಂದು ಅರ್ಥಾಂತರವೂ ಅಡಗಿದೆ. ಭೀತಿಯು ನಿಂದ್ಯ; ಶೌರ್ಯವು ಪ್ರಶಂಸ್ಯ. ಹಲವೊಮ್ಮೆ ತುಚ್ಛ ಸಾಮಗ್ರಿಯಿಂದ ಉಪಯುಕ್ತವಾದದ್ದು ಹೊರಬರಬಹುದು; ಕ್ರೂರಿಯಾದವನಲ್ಲಿ ಒಮ್ಮೊಮ್ಮೆ ಕಾರುಣ್ಯ ಮೂಡಬಹುದು; – ಎಂಬ ಜಾಡಿನದು ಈ ಸೂಕ್ತಿಯ ಧ್ವನಿತಾರ್ಥ.
ರಷ್ಯದ ಅಧಿಪತಿ ಜೋಸೆಫ್ ಸ್ಟಾಲಿನ್ ಬಗೆಗೆ ಒಂದು ಪ್ರಸಂಗ ಪ್ರಚಲಿತವಿದೆ. ಖಾಸಗಿ ಕಾರ್ಯದರ್ಶಿಯ ಸ್ಥಾನಕ್ಕೆ ಯಾರನ್ನಾದರೂ ನೇಮಿಸಿಕೊಳ್ಳಬೇಕಾಗಿತ್ತು. ಅನೇಕರು ತಿರಸ್ಕೃತರಾದ ಮೇಲೆ ಇಬ್ಬರು ಅಭ್ಯರ್ಥಿಗಳು ಉಳಿದರು. ಒಬ್ಬನನ್ನು ಪರೀಕ್ಷೆಗೆ ಒಳಪಡಿಸಿದಾಗ ಅವನು ನನಗೆ ಕಮ್ಯೂನಿಸ್ಟ್ ಸಿದ್ಧಾಂತದಲ್ಲಿ ಪೂರ್ಣ ನಂಬಿಕೆ ಇರುವುದರಿಂದ ಈ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದೆಲ್ಲ ಹೇಳಿದ. ಎರಡನೆಯವನು ನನಗೆ ನಿಮ್ಮ ಸಿದ್ಧಾಂತದ ಬಗೆಗೆ ಹೆಚ್ಚು ತಿಳಿಯದು. ಆದರೆ ಇಲ್ಲಿ ಇದ್ದರೆ ಸುರಕ್ಷಿತವಾಗಿರುತ್ತೇನೆನಿಸಿ ಅರ್ಜಿ ಹಾಕಿದೆ ಎಂದ. ಸ್ಟಾಲಿನ್ ಆಯ್ಕೆ ಮಾಡಿದ್ದು ಎರಡನೆಯವನನ್ನು. ಇದಕ್ಕೆ ಅಚ್ಚರಿಗೊಂಡು ಸಹಚರರು ಪ್ರಶ್ನಿಸಿದಾಗ ಸ್ಟಾಲಿನ್ ಹೇಳಿದ: ಇವರಲ್ಲಿ ಮೊದಲನೆಯವನು ಸಿದ್ಧಾಂತದಿಂದ ಆಕರ್ಷಿತನಾಗಿ ಬಂದಿದ್ದಾನೆ. ಮೇಲೆನಿಸುವ ಬೇರಾವುದಾದರೂ ಸಿದ್ಧಾಂತದ ಪರಿಚಯವಾದಾಗ ಅವನು ಅತ್ತಕಡೆ ವಾಲಬಹುದು. ಎರಡ ನೆಯವನಾದರೋ ಭಯದಿಂದ ಬಂದಿದ್ದಾನೆ. ಭಯವು ಸದಾ ಇರುವುದರಿಂದ ಅವನು ಇಲ್ಲಿಂದ ಕಳಚಿಕೊಂಡು ಹೋಗುವ ಸಂಭವ ಕಡಮೆ.