ದೊಡ್ಡ ಪ್ರಮಾಣದಲ್ಲಿ ಸುಶಿಕ್ಷಿತರನ್ನೊಳಗೊಂಡ ನಮ್ಮ ರಾಜ್ಯದಲ್ಲಿ ಮತದಾನದ ಪ್ರಮಾಣ ಇಷ್ಟು ಕಡಮೆಯಾಗಿರುವುದು ಏಕೆಂಬುದಕ್ಕೆ ದೇವರೇ ಉತ್ತರಿಸಬೇಕು. ಸಿಲಿಕಾನ್ ಸಿಟಿ, ಉದ್ಯಾನನಗರಿ ಎಂದೆಲ್ಲ ಕರೆಯಿಸಿಕೊಳ್ಳುವ ರಾಜಧಾನಿ ಬೆಂಗಳೂರಿನಲ್ಲಿಯೆ ಮೂರೂ ಕ್ಷೇತ್ರಗಳನ್ನು ಒಟ್ಟಾಗಿ ಪರಿಶೀಲಿಸಿದಾಗ ಮತದಾನವಾಗಿರುವುದು ಸರಾಸರಿ ಶೇ. 52.1ರಷ್ಟು ಮಾತ್ರ. ಮತಜಾಗೃತಿಗಾಗಿ ಸಂಘಸಂಸ್ಥೆಗಳಿಂದಲೂ ಮಾಧ್ಯಮಗಳಿಂದಲೂ ಹೋಟೆಲ್ ಮೊದಲಾದ ಉದ್ಯಮಗಳಿಂದಲೂ ವಿಶೇಷ ಪ್ರಯತ್ನಗಳು ಈ ಬಾರಿ ಆಗಿದ್ದವು; ಫೇಸ್ಬುಕ್ ಮೊದಲಾದ ಜಾಲತಾಣಗಳ ಮೂಲಕವೂ ಗಣನೀಯ ಪ್ರಯಾಸಗಳು ಆಗಿದ್ದವು. ಆದರೂ ಮತದಾನದ ಪ್ರಮಾಣ ಕಡಮೆ ಮಟ್ಟದಲ್ಲೇ ಉಳಿಯಿತು. ಇದು ಹೀಗೇಕೆಂಬುದು ಯಕ್ಷಪ್ರಶ್ನೆಯಾಗಿದೆ. ಮತದಾರ ಪಟ್ಟಿಗಳಲ್ಲಿನ ದೋಷಗಳು, ಗ್ರಾಮಗಳಲ್ಲಿರುವಂತೆ ಹೆಚ್ಚು ಮತದಾನಕ್ಕೆ ಪ್ರೋತ್ಸಾಹಕಗಳಾದ ಜಾತಿವ್ಯವಸ್ಥೆ ಮೊದಲಾದವು ನಗರಗಳಲ್ಲಿ ಇಲ್ಲದಿರುವುದು – ಮೊದಲಾದ ಸನ್ನಿವೇಶಗಳು ಈಗಿನ ಸ್ಥಿತಿಗೆ ಕಾರಣವಾಗಿರಬಹುದೆ? ಸ್ವಲ್ಪಮಟ್ಟಿಗೆ ಹಾಗೆ ಇದ್ದೀತು. ಆದರೆ ಮಾನಸಿಕ ಜಡತೆಯೇ ಪ್ರಮುಖ ಕಾರಣವೆಂಬ ನಿರ್ಣಯವನ್ನು ಅಲ್ಲಗಳೆಯಲಾಗದು. ಇದಕ್ಕೆ ಪ್ರತಿಭಾರವೆನ್ನಬಹುದಾದ ಒಂದು ಸಂಗತಿಯೆಂದರೆ ಇಡೀ ದೇಶದಲ್ಲಿ ನಗರಕ್ಷೇತ್ರಗಳ ಮತದಾರರ ಪ್ರಮಾಣ ಸುಮಾರು ಶೇ. 18ರಷ್ಟು ಮಾತ್ರ. ಆದರೂ ನಗರವಾಸಿ ಮತದಾರರನ್ನು ಹೆಚ್ಚು ಸಕ್ರಿಯರನ್ನಾಗಿಸಬಲ್ಲ ಕ್ರಮಗಳನ್ನು ಕುರಿತು ತಜ್ಞರು ಗಂಭೀರವಾಗಿ ಚಿಂತಿಸಬೇಕಾಗಿದೆ.
ನಗರವಾಸಿಗಳಿಗೇಕೆ ಮತದಾನದಲ್ಲಿ ನಿರಾಸಕ್ತಿ?
Month : June-2019 Episode : Author : ಎಸ್.ಆರ್. ರಾಮಸ್ವಾಮಿ