ಪ್ರತಿಯೊಂದು ಚುನಾವಣೆಯಲ್ಲಿಯೂ ಹಲವು ಅನಿರೀಕ್ಷಿತಗಳು ಘಟಿಸುತ್ತವೆ. ಹಿಂದೆ ಸ್ವತಃಸಿದ್ಧಗಳೆನಿಸಿದ್ದ ಅಂದಾಜುಗಳು ಸದಾಕಾಲ ತಮ್ಮ ವಿಶ್ವಸನೀಯತೆಯನ್ನು ಉಳಿಸಿಕೊಂಡಿರುವುದಿಲ್ಲ. ಕೆಲವು ವಿಜ್ಞಾನಾಂಗಗಳ ಮೂಲ ಸಾಮಗ್ರಿಗಳೂ ಅಂತಃಪ್ರಕ್ರಿಯೆಗಳೂ ಒಂದಷ್ಟುಮಟ್ಟಿಗೆ
ಸ್ಥಿರಸ್ವರೂಪದವಾಗಿರುತ್ತವಾದ್ದರಿಂದ ಸಾಧಾರಣೀಕರಣ ಶಕ್ಯವಾಗಬಹುದು. ಈ ಕಾರಣದಿಂದ ಇವನ್ನು ಖಚಿತ ಶಾಸ್ತ್ರಗಳೆಂದು ವರ್ಗೀಕರಿಸುವ ರೂಢಿ ಇದೆ. ಇನ್ನು ಕೆಲವು ಪರಾಮರ್ಶನ ಕ್ಷೇತ್ರಗಳ ಮೂಲಸಾಮಗ್ರಿಯೂ ಅಂತಃಪ್ರಕ್ರಿಯೆಗಳೂ ಅಸ್ಥಿರವೂ ಪರಿವರ್ತನಶೀಲವೂ ಆಗಿರುತ್ತವೆ. ಇಲ್ಲಿ ಸಾಧಾರಣೀಕರಣವು ಪೂರ್ಣ ವಿಶ್ವಸನೀಯವೆನಿಸಲಾರದು. ಈ ಪರಾಮರ್ಶನೆಗಳಲ್ಲಿ ಅಪೇಕ್ಷಿತಮಟ್ಟದಲ್ಲಿ ಖಚಿತತೆ ಸಿದ್ಧಿಸುವುದು ಸಂಭವನೀಯವಲ್ಲ. ಹೀಗಿದ್ದರೂ ಲಬ್ಧಮಾಹಿತಿಯ ಆಧಾರದ ಮೇಲೆ ರಾಜಕೀಯ ವಿಶ್ಲೇಷಕರು ತೇರೀಜುಬೇರೀಜುಗಳಲ್ಲಿ ತೊಡಗಿರುತ್ತಾರೆ. ಇಂತಹ ಅರ್ಧಪಕ್ವ ಮಂಡನೆಗಳ ಪರಿಮಿತಿಗಳ ಪರಿಜ್ಞಾನ ಇರುವುದು ಹಿತಕರ. ಇಂಥಿಂಥ ಕಾರಣಗಳಿಂದ ಈ ಚುನಾವಣೆಯಲ್ಲಿ ಇಂಥಿಂಥ ಪರಿಣಾಮಗಳು ಬಂದವು ಎಂಬ ಜಾಡಿನ ನಿರ್ಣಯಗಳಿಗೆ ಹೆಚ್ಚಿನ ಅರ್ಥ ಇರದೆಂದು ಸೂಚಿಸಲು ಮೇಲಣ ವ್ಯಾಖ್ಯೆ ನೀಡಬೇಕಾಯಿತು.
ಒಂದು ಇಡೀ ಸಮುದಾಯದವರೆಲ್ಲ ಏಕಮುಖವಾಗಿ ಮತದಾನ ಮಾಡುತ್ತಾರೆ, ಅಭ್ಯರ್ಥಿಗಳ ಜಾತಿಯು ಪ್ರಬಲ ಪ್ರೇರಕವಾಗಿ ಕೆಲಸ ಮಾಡುತ್ತದೆ, ರಾಜಕೀಯ ಜೀವನದ ಕೌಟುಂಬಿಕ ಹಿನ್ನೆಲೆ ಮತಗಳನ್ನು ಆಕರ್ಷಿಸಿಬಿಡುತ್ತದೆ – ಇಂತಹ ಲೆಕ್ಕಾಚಾರಗಳನ್ನು ‘ಕವಿಸಮಯ’ವೆಂದಷ್ಟೇ ಭಾವಿಸಬೇಕಾದೀತು. ಆದರೆ ಕೆಲವು ಸನ್ನಿವೇಶಗಳಲ್ಲಿ ಇಂತಹ ಗೌಣಸಂಗತಿಗಳ ಪ್ರಭಾವ ಒಂದಷ್ಟು ಇರಬಹುದೆಂಬುದನ್ನೂ ಅಲ್ಲಗಳೆಯಲಾಗದು. ಅವು ಸದಾ ನಿರ್ಣಾಯಕ ಗಳಾಗಲಾರದೆಂಬುದು ತಥ್ಯ.
ವ್ಯಕ್ತಿಯ ಕೌಟುಂಬಿಕ-ಹಿನ್ನೆಲೆ ಪ್ರಮುಖ ಮತಾಕರ್ಷಕ ಸಂಗತಿಯಾದೀತೆಂಬ ನಿರೀಕ್ಷೆಯನ್ನು ರಾಹುಲ್ ಗಾಂಧಿಯಾದಿಯಾಗಿ ಅನೇಕ ಕಾಂಗ್ರೆಸ್ ಹಿರಿತಲೆಗಳ ಹಿನ್ನಡೆ ನಿರಸ್ತಗೊಳಿಸಿದೆ. ವರ್ಷಗಳುದ್ದಕ್ಕೂ ನೆಹರು ಕುಟುಂಬ ತನ್ನ ಭದ್ರಕೋಟೆಯಾಗಿ ಭಾವಿಸಿದ್ದ ಅಮೇಥಿಯಲ್ಲಿಯೇ ಅವರು ಪರಾಭವಗೊಂಡಿದ್ದಾರೆ. ಅಷ್ಟೊಂದು ಅಬ್ಬರದ ಅಸಹ್ಯ ಪ್ರಚಾರಪ್ರವಾಹವು ಕಾಂಗ್ರೆಸ್ಸಿನ ನೆರವಿಗೆ ಬರಲಿಲ್ಲ. ಉಳಿದ ಪಕ್ಷಗಳ ಪಾಡೂ ಹಾಗೆಯೆ ಆಯಿತು. ಸಮಾಜವಾದಿ ಪಕ್ಷದ ಮುಲಾಯಂಸಿಂಹರ ಪುತ್ರನೆಂಬ ಸಂದರ್ಭವೂ ಅಖಿಲೇಶ್ ಯಾದವರಿಗೆ ಬೆಂಬಲವಾಗಲಿಲ್ಲ; ಸ್ವಯಂ
ಆತನ ಪತ್ನಿಯೇ ಸೋಲನ್ನಪ್ಪಿದರು. ಒಂದೊಮ್ಮೆ ಮುತ್ಸದ್ದಿಯಾಗಿ ಉತ್ತರಪ್ರದೇಶದ ರಾಜಕಾರಣದ ಕೇಂದ್ರಬಿಂದುವೆನಿಸಿದ್ದ ಚೌಧರಿ ಚರಣಸಿಂಹರ ಪುತ್ರ ಅಜಿತ್ ಸಿಂಹರೂ ತೇರ್ಗಡೆಯಾಗಲಿಲ್ಲ. ಬಿಹಾರವನ್ನು ವರ್ಷಗಳುದ್ದಕ್ಕೂ ತಮ್ಮ ಪಾಳೆಯಪಟ್ಟನ್ನಾಗಿಸಿಕೊಂಡಿದ್ದ ಲಾಲೂಪ್ರಸಾದರ ರಾಷ್ಟ್ರೀಯ ಜನತಾದಳ ಹೇಳಹೆಸರಿಲ್ಲದಾಯಿತು. ಹರ್ಯಾಣಾದಲ್ಲಿ ಚೌತಾಲಾ ಭಜನಲಾಲರಾದಿಯಾಗಿ ಎಲ್ಲರ ಉತ್ತರಾಧಿಕಾರಿಗಳೂ ನೆಲಕಚ್ಚಿದರು. ಈ ಪ್ರಾವಾಹಿಕತೆಗೆ ಅಪವಾದಗಳೆನಿಸಿದ ರಾಜ್ಯಗಳು ಆಂಧ್ರಪ್ರದೇಶ ಮತ್ತು ತಮಿಳುನಾಡು ಮಾತ್ರ.
ಮೇಲಿನದೆಲ್ಲ ಕುಟುಂಬಗಳ ಮತ್ತು ವ್ಯಕ್ತಿಗಳ ಆಗುಹೋಗುಗಳನ್ನು ಕುರಿತು ಆಯಿತು. ಈಗ ರಾಜಕೀಯ ಸಂರಚನೆಗಳತ್ತ ಕಣ್ಣು ಹಾಯಿಸಬಹುದು.
ಉತ್ತರಪ್ರದೇಶದಲ್ಲಿ ಯಾದವರು, ದಲಿತರು, ಜಾಠರು, ಮುಸ್ಲಿಮರು – ಈ ಸಮುದಾಯಗಳನ್ನು ಒಟ್ಟುರಾಶಿ ಮಾಡಿದರೆ ಅದು ಯಾವ ಮೋದಿ ಹೆದ್ದೆರೆಯನ್ನಾದರೂ ಹಿಮ್ಮೆಟ್ಟಿಸಿಬಿಡುತ್ತದೆ – ಎಂಬ ಆಧಾರದ ಮೇಲೆ ‘ಗಟಬಂಧನ’ವನ್ನು ಹುಟ್ಟುಹಾಕಿದ್ದುದಾಗಿತ್ತು. ಆದರೆ ಈ ‘ಬಂಧನ’ ಅಲ್ಪ ಜೀವಂತಿಕೆಯನ್ನೂ ಮೆರೆಯದೆ ಧರಾಶಾಯಿಯಾಯಿತು. ಬಿಹಾರದಲ್ಲಿನ ಮುಸ್ಲಿಂ-ಯಾದವರ ಕೂಡಿಕೆಯ
ಅಂದಾಜಿನದೂ ಅದೇ ಪಾಡಾಯಿತು. ತಮ್ಮ ಬೆಂಬಲಿಗರು ಜಾತಿಯ ಲೆಕ್ಕಾಚಾರಗಳನ್ನು ಮೀರಬಲ್ಲರೆಂಬುದೇ ಬಂಡಿಜಾಡಿನ ‘ನಾಯಕ’ರಿಗೆ ದಿಗ್ಭ್ರಮೆ ತರಿಸಿತು. ದೇಶದ ಈಗಿನ ಮಾನಸಿಕ ಪರಿಸರ ಹಿಂದಿನದಲ್ಲವೆಂದು ಈ ನಾಯಕಮಣಿಗಳಿಗೆ ಈಗಲಾದರೂ ಅರಿವಿಗೆ ಬಂದೀತೇ?
ಹೀಗೆಂದರೆ ಜಾತಿ-ಉಪಜಾತಿ ಪರಿಗಣನೆಗಳು ರಾತ್ರೋರಾತ್ರಿ ಮಾಯವಾಗಿಬಿಟ್ಟವೆಂದು ತಾತ್ಪರ್ಯವಲ್ಲ. ಆದ್ಯತೆಗಳು ಬದಲಾಗುತ್ತಿರುತ್ತವೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ದಾರ್ಶನಿಕ ಸ್ಫುಟತೆಯಿದ್ದ ಸಮರ್ಥ ನಾಯಕತ್ವದ ಸುನಾಮಿಯು ರೂಢಿಗತ ಅಂದಾಜುಗಳನ್ನು ಕೊಚ್ಚಿಹಾಕಿತೆಂಬುದು ವಾಸ್ತವ. ಈ ದಾರ್ಶನಿಕತೆಯ ಆಕಾರ-ವಿನ್ಯಾಸ-ನುಡಿಗಟ್ಟುಗಳು ಜನಸಾಮಾನ್ಯರ ಗ್ರಹಿಕೆಗೆ ಎಟಕುವಂತೆ ಇದ್ದವೆಂಬುದು ವಿಶೇಷ. ಅವಕ್ಕೆ ಉಪಸ್ತಂಭಕವಾಗಿ ಕಳೆದ ಐದು ವರ್ಷಗಳ ಮುಷ್ಟಿಗ್ರಾಹ್ಯ ಸಾಧನೆಗಳೂ ಇದ್ದವು: ಶೌಚಾಲಯಗಳು, ವಸತಿ, ವಿದ್ಯುತ್, ಗ್ಯಾಸ್ಸಿಲಿಂಡರ್ಗಳು, ಆರೋಗ್ಯ ಯೋಜನೆಗಳು, ರಸ್ತೆನಿರ್ಮಾಣ ಮೊದಲಾದ ಒಳಹಂದರ, ನಗದು ರೂಪದ ನೆರವು – ಮೊದಲಾದವು. ಹಿಂದೆಯಾದರೊ ತಥೋಕ್ತ ಅಲ್ಪಸಂಖ್ಯಾತರ ಪಾಲಿಗೆ ತಾತ್ಪೂರ್ತಿಕ ತುಷ್ಟೀಕರಣವಷ್ಟೇ ಲಭ್ಯವಾಗುತ್ತಿತ್ತು.
ಕೇವಲ ಘೋಷಣೆಗಳಿಂದ ಪ್ರಭಾವಿತರಾಗದೆ ದೇಶದ ನವನಿರ್ಮಾಣದ ನಿಚ್ಚಳ ಸಾಧ್ಯತೆಗಳನ್ನು ಗುರುತಿಸಬಲ್ಲ ಮೂವತ್ತೈದು ವಯಸ್ಸಿನೊಳಗಣ ಆಶಾವಾದಿ ತರುಣ ಮತದಾರರು ಒಟ್ಟು ಜನಸಂಖ್ಯೆಯ ಹತ್ತಿರಹತ್ತಿರ ಮೂರರಲ್ಲೆರಡು ಭಾಗದಷ್ಟು ಇದ್ದಾರೆಂಬುದು, ಬಾಲಾಕೋಟ್ ಸಾಧನೆಯು ಸರ್ವಜನಿಕರಲ್ಲಿ ಮೂಡಿಸಿದ ನವೋತ್ಸಹ – ಇವೇ ಮೊದಲಾದ ಅಂಶಗಳ ಪರಿಣಾಮ ಗಣನೀಯ ರೀತಿಯಲ್ಲಿ ಆಗಿದೆ. ಆಮಿಷಗಳಿಗಿಂತ ಆಶೋತ್ತರಗಳು ಜನರ ಮಾನಸಿಕತೆಯನ್ನು ರೂಪಿಸುತ್ತಿರುವುದು ಈಗಿನ ನೂತನ ಪರ್ವದ ಎದ್ದುಕಾಣುವ ಲಕ್ಷಣವಾಗಿದೆ.