“ಅಮ್ಮ, ನೀನು ಯಕ್ಷಗಾನ ಮಾಡುತ್ತೀಯಾ, ಲೇಖನಗಳನ್ನು ಬರೀತೀಯಾ, ಕಾಲೇಜಿಗೆ ಹೋಗಿ ಪಾಠ ಮಾಡ್ತೀಯಾ.. ಮನೆಯಲ್ಲೂ ಕೆಲಸ ಮಾಡ್ತೀಯಾ.. ಅದಕ್ಕೆ ನೀನು ಪ್ರೌಡ್ ಆಗಿರಬೇಕು. ನಿನ್ನ ಮುಖದಲ್ಲಿ ನಗು ಇರಬೇಕು ಯಾವಾಗ್ಲೂ. ನೀನು ಸಪ್ಪಗೆ ಮುಖ ಮಾಡ್ಕೊಂಡಿದ್ರೆ ಚಂದ ಇಲ್ಲ. ಮತ್ತೆ ಕಾಲೇಜಿಗೆ ಹೋಗಬೇಕಾದ್ರೆ ಡ್ರೆಸ್ ಮಾಡಿಕೋತೀಯಲ್ಲ.. ಆಗ ಮುದ್ದಾಗಿರ್ತಿ. ಮನೇಲಿ ಕೂಡಾ ಹಾಗೇ ಚಂದದ ಅಂಗಿ ಹಾಕ್ಕೊಂಡಿರು. ನಂಗೆ ಇಷ್ಟ ಅಮ್ಮ ನೀನು” ಏಳೂವರೆ ವರ್ಷದ ಮಗ ನನ್ನ ಮುಖವನ್ನು ತನ್ನ ಬೊಗಸೆಯಲ್ಲಿ ತುಂಬಿಕೊಂಡು ಕಣ್ಣಲ್ಲಿ ಕಣ್ಣಿಟ್ಟು ಹೇಳುತ್ತಿದ್ದರೆ ಅವನು ನನ್ನ ಮಗನೇ.. ಅಥವಾ ಮಿತ್ರನೇ ಎನಿಸಿದ್ದು ಸುಳ್ಳಲ್ಲ.
ಶರೀರಕ್ಕಿಂತ ಹೆಚ್ಚಿನ ದಣಿವು ಮನಸ್ಸಿಗಾಗಿದ್ದಾಗ ಹಂಬಲಿಸುವುದು ಅಂಥಾದ್ದೊಂದು ಸಾಂತ್ವನಕ್ಕೆ ತಾನೇ? ನಮ್ಮೆಲ್ಲಾ ನೋವಿಂದ ಹೊರಬರಲು, ಒತ್ತಡಗಳನ್ನು ಮರೆಯಲು ಜೀವಕ್ಕೆ ನೀರಿನಷ್ಟೇ ಅಗತ್ಯವಿರುವುದು ಅಂಥಾ ಸಮಾಧಾನದ ಮಾತುಗಳು. ಆ ಮಾತುಗಳ ಪರಿಣಾಮ ಹೇಗಿರಬೇಕೆಂದರೆ ಎಲ್ಲ ಸೋಲುಗಳನ್ನೂ ಕೊಡವಿ ಎದ್ದು ಮತ್ತೆ ಬದುಕು ಒಡ್ಡುವ ಸವಾಲುಗಳಿಗೆ ಎದೆಗೊಡುವುದು ಸಾಧ್ಯವಾಗಬೇಕು. ನನಗಿಂತ ಹಿರಿಯ ಸಖನೋ, ನನ್ನದೇ ವಯಸ್ಸಿನ ಸ್ನೇಹಿತನೋ ಹೇಳಬಲ್ಲ ಮಾತುಗಳನ್ನು ಮಗ ನುಡಿದಿದ್ದ. ಒಂದೊಮ್ಮೆ ಅವನು ನನಗಿಂತ ಎತ್ತರವಾಗಿ ನನ್ನನ್ನು ಅವನೆದೆಗೊರಗಿಸಿಕೊಂಡು ಧೈರ್ಯ ತುಂಬಿದಂತಿದ್ದವು ಅವನ ಖಚಿತವಾದ ಮಾತುಗಳು. ಹೌದಲ್ಲ, ಹೆಮ್ಮೆ ಪಡುವುದಕ್ಕೆ, ಸಂತೃಪ್ತಿಯಿಂದ ಬದುಕುವುದಕ್ಕೆ ಎಷ್ಟೊಂದು ಕಾರಣಗಳಿವೆ!
ಅಂದು ನಿಜಕ್ಕೂ ಆಗಿದ್ದಿಷ್ಟೇ. ಮುನ್ನಾ ರಾತ್ರಿ ಯಕ್ಷಗಾನ ಕಾರ್ಯಕ್ರಮವಿತ್ತು. ಅದರ ದಣಿವು ತೀರುವುದಕ್ಕೆ ಅವಶ್ಯವಿದ್ದ ವಿಶ್ರಾಂತಿ ದೊರೆಯುವ ಮೊದಲೇ ಮರುದಿನ ಬೆಳಗ್ಗೆ ಬೇಗನೆ ಇನ್ನಾವುದೋ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ತಲೆಸಿಡಿದು ಹೋಗುತ್ತಿದ್ದ ಕಾರಣಕ್ಕೆ ಯಾರಲ್ಲೂ ಮಾತಾಡದೆ ಮೌನವಾಗಿದ್ದೆ. ಅಷ್ಟು ಸಾಲದೆಂಬುದಕ್ಕೆ ಮಾಡಿ ಮುಗಿಸಲೇಬೇಕಿದ್ದ ಹಲವು ಕೆಲಸಗಳು ತಲೆಚಿಟ್ಟು ಹಿಡಿಸಿದ್ದವು. ಯಾವುದನ್ನು ಮಾಡಿಕೊಳ್ಳಲಿ, ಯಾವುದನ್ನು ಬಿಟ್ಟುಬಿಡಲಿ ಎನ್ನಿಸಿಬಿಟ್ಟಿತ್ತು. ಅಂಥ ಗೊಂದಲಗಳ ಗೂಡಾಗಿದ್ದಾಗ ಯಾರಲ್ಲೂ ಮಾತಾಡದೆ ಚಿಪ್ಪಿನೊಳಗೆ ಸೇರಿದ ಆಮೆಯಂತಾಗಿಬಿಡುವುದು ನನ್ನ ಅಭ್ಯಾಸ. ಅದು ಒಳ್ಳೆಯದೋ ಕೆಟ್ಟದ್ದೋ ನನಗೆ ಗೊತ್ತಿಲ್ಲ. ಆದರೆ ಅವನಿಗಾದರೋ ನನ್ನ ಮೌನವೇ ಅಸಹನೀಯ. ಅಮ್ಮ ಎಂದರೆ ಅವನ ಪಾಲಿಗೆ ಸದಾ ಮಾತಾಡುತ್ತಾ ಅವನೊಂದಿಗೆ ಆಟವಾಡುತ್ತಾ ಆಗೀಗ ಗದರುತ್ತಾ ಒಟ್ಟಿನಲ್ಲಿ ಮನೆ ತುಂಬಾ ಗುಲ್ಲೆಬ್ಬಿಸುವ ಜೀವ. ನಾನು ಕೊಂಚ ಸಪ್ಪಗಿದ್ದರೂ ಹತ್ತಿರ ಬಂದು ‘ಅಮ್ಮ, ನೀನೇನಾದರೂ ಟೆನ್ಷನ್ನಲ್ಲಿದ್ದೀಯಾ? ನಾನು ಈಗ ನಿನ್ನಲ್ಲಿ ಮಾತನಾಡಲಾ ಬೇಡವಾ?’ ಎಂದೆಲ್ಲ ಅಕ್ಕರೆ ತೋರುವುದು ಸಾಲದೆಂಬಂತೆ ತೀರಾ ಆರಾಮಿಲ್ಲದೆ ಮಲಗಿದ್ದರೆ ತನ್ನ ಪುಟ್ಟ ಕೈಗಳಲ್ಲಿ ಹಣೆ ನೇವರಿಸುವುದೋ ಕಾಲೊತ್ತುವುದೋ ಮಾಡಿಯಾನು. ಅಂಥ ಮಗು. ಅವನ ಕಾಳಜಿಗೆ ಸೋಲದೆ ಇರಲಾದೀತೆ? ಆದರೂ ಮೇಲಿನ ಅವನ ಮಾತುಗಳಲ್ಲಿ ನನಗೆ ವಿಸ್ಮಯ. ಅಂಥ ದೊಡ್ಡ ಮಾತುಗಳನ್ನಾಡುತ್ತಾ ತಾನೇನೋ ಕೌನ್ಸೆಲಿಂಗ್ ಕೊಡುವ ರೀತಿಯಲ್ಲಿದ್ದ ಅವನ ಪದಪುಂಜಗಳು ನನಗೆ ಇಂದಿಗೂ ಬೆರಗು.
ಮನೆಯಲ್ಲಿ ಮಕ್ಕಳಿದ್ದರೆ ಸಾಮಾನ್ಯವಾಗಿ ಮನೆಮಂದಿಯಲ್ಲಿ ಜಗಳ ಬರಲಾರದು. ಮಕ್ಕಳು ಮನೆಯೊಳಗಿನ ಭಾವಯಾನಗಳಿಗೆ ನೌಕೆಗಳಿದ್ದಂತೆ. ಅವರ ಮುಗ್ಧತೆ, ನಗು, ತುಂಟತನ ಕೊನೆಗೆ ಸಹಿಸಲಸಾಧ್ಯವೆನಿಸುವ ತಂಟೆಗಳು ಎಲ್ಲವೂ ಚಂದವೇ. ನಮಗೆ ಬಿಡುವಿರಬೇಕು ಅವನ್ನೆಲ್ಲ ಆನಂದಿಸುವುದಕ್ಕೆ ಅಷ್ಟೆ. ಮನೆಯೊಳಗೆ ಯಾರಾದರೂ ಮಾತು ಬಿಟ್ಟವರಿದ್ದರೂ ಮಕ್ಕಳ ಕಾರಣಕ್ಕೆ ಮಾತಾಡಲೇಬೇಕು. ಇಲ್ಲವೆಂದರೆ ಅವರೇ ಮಾತನಾಡಿಸುವುದಂತೂ ದಿಟವೇ.
ಇಂಗ್ಲಿಷ್ ಕವಿ ವಿಲಿಯಂ ವಡ್ರ್ಸ್ವರ್ತ್ ತನ್ನ ಪದ್ಯವೊಂದರಲ್ಲಿ ಮಗುವು ಮನುಜನ ತಂದೆ ಎಂದ. ನಮಗೆ ನಿಜಾರ್ಥದಲ್ಲಿಯೂ ಬದುಕನ್ನು ಕಲಿಸುವುದು ಬದುಕಲು ಕಲಿಸುವುದು ಎಲ್ಲವೂ ಮಕ್ಕಳೇ. ಮನೆಯೊಂದರಲ್ಲಿ ಯಾವಾಗ ಮಗುವೊಂದು ಜನಿಸುತ್ತದೋ ಅಂದೇ ಆ ಮನೆಯಲ್ಲಿ ಒಬ್ಬ ಅಪ್ಪ ಅಮ್ಮ, ಒಬ್ಬ ಅಜ್ಜ ಅಜ್ಜಿ ಜನಿಸುತ್ತಾರೆಂಬುದು ನಿಜವಷ್ಟೆ! ಎಲ್ಲ ಸಂಬಂಧಗಳಿಗೂ ಭಾವನೆಗಳಿಗೂ ಅರ್ಥ ದೊರೆಯುವುದು ಆವಾಗಲೇ. ಅಪ್ಪ ಅಮ್ಮ ನಮಗೆ ವಿಧಿಸುತ್ತಿದ್ದ ಕಟ್ಟುಪಾಡುಗಳ ಮೌಲ್ಯಗಳು ಅರಿವಾಗುವುದೂ ಆಗಲೇ. ಅಂಗಡಿಯ ಮುಂದೆ ನಿಂತು ತನಗಿಷ್ಟದ ಚಾಕಲೇಟಿಗಾಗಿ ಹಟ ಮಾಡುವ ಮಗುವಿನ ಮೇಲೆ ರೇಗಬೇಕೆನಿಸಿದರೂ ತಮ್ಮ ಬಾಲ್ಯದ ಅಂಥದೇ ಘಟನೆ ನೆನಪಾಗಿ ಅಂದು ಚಾಕಲೇಟ್ ಕೊಡಿಸದ ಅಪ್ಪ ವಿಲನ್ ಆಗಿ ಕಾಣಿಸಿದ್ದರೂ ಇಂದು ತಿಂಗಳ ಕೊನೆಗೆ ಖಾಲಿಯಾಗುವ ಪರ್ಸ್ ಕಲಿಸಿದ ಪಾಠವೇನೆಂದು ಅರಿಯುವುದು ಮಕ್ಕಳಿಂದಲೇ.
‘ಅಮ್ಮ, ನಿನ್ನ ಪರ್ಸ್ಲ್ಲಿ ದುಡ್ಡಿಲ್ಲದಿದ್ರೆ ಚಿಂತೆಯಿಲ್ಲ. ಆ ಅಂಗಡಿಯಲ್ಲಿ ಕಾರ್ಡ್ ಇದ್ದರಾಯಿತು. ಅವರೇನು ದುಡ್ಡೇ ಕೊಡಿ ಅನ್ನುವುದಿಲ್ಲವಲ್ಲ’ ಎನ್ನುವ ಮಕ್ಕಳಿಗೆ ಟ್ಯಾಂಕ್ ತುಂಬಿದ್ದರೆ ಮಾತ್ರ ನಲ್ಲಿಯಲ್ಲಿ ನೀರು ಹರಿಯುವುದೆಂಬ ಸತ್ಯ ಇನ್ನು ಮುಂದೆ ಅರಿವಿಗೆ ಬರಬೇಕಷ್ಟೆ. ನನ್ನ ಅಕ್ಕನ ಮಗಳು ಚಿಕ್ಕವಳಿದ್ದಾಗ ದುಡ್ಡಿಲ್ಲವೆಂದೇನಾದರೂ ಅವಳ ಮುಂದೆ ಯಾರಾದರೂ ಹೇಳಿದರೆ ‘ಮಿಷನಿನೊಳಗೆ ಕಾರ್ಡ್ ಹಾಕಿದರಾಯ್ತು, ದುಡ್ಡು ಬರುತ್ತೆ’ ಅಂತಿದ್ದಳು. ಅವಳ ಅಪ್ಪನ ಜತೆಗೆ ಎಟಿಎಮ್ಗೆ ಹೋಗಿ ದುಡ್ಡು ತಂದಿದ್ದ ಬೆರಗು ಅವಳ ಮಾತಿನಲ್ಲಿ ಮಾರ್ದನಿಸುತ್ತಿತ್ತು. ಅದು ಅಷ್ಟು ಸುಲಭವಲ್ಲವೆಂಬ ಸತ್ಯವನ್ನು ಅವಳಿಗೆ ಅರ್ಥ ಮಾಡಿಸಬೇಕಾದ ಧಾವಂತ ನಮಗೂ ಇರಲಿಲ್ಲವಾದ್ದರಿಂದ ಅವಳ ಮಾತಿನಲ್ಲೇ ಸಕ್ಕರೆಮಾವು ಸವಿದ ಸಂಭ್ರಮ ನಮ್ಮದು. ಮಕ್ಕಳ ಮುಗ್ಧತೆಯ ಕೈತೋಟದಲ್ಲಿ ನಮ್ಮ ಮನಸ್ಸುಗಳೂ ಹೂವುಗಳಂತೆ ಅರಳಿಯಾವು.
ಇಂದಿನ ಮಕ್ಕಳು ಚೂಟಿ, ಬುದ್ಧಿವಂತರು ಎಂಬುದೆಲ್ಲ ಬಿರುದುಬಾವಲಿಗಳು ಅವರ ಪಾಲಿಗೆ ಇದ್ದದ್ದೇ. ತಂತ್ರಜ್ಞಾನದ ಬಳಕೆಯಲ್ಲಿ ಅವರು ನಮ್ಮನ್ನು ಮೀರಿಸುವವರೇ ಸೈ. ಅಂದರೂ ಮಗುವಿನ ಮನಸ್ಸೆಂಬುದು ನಮ್ಮ ಅಳತೆಗೆ ಸಿಗಲಾರದ್ದು. ಎಷ್ಟೇ ಬೈದರೂ ಗದರಿದರೂ ಮರುಕ್ಷಣದಲ್ಲಿ ಅಷ್ಟೇ ಮುದ್ದುಗರೆಯುತ್ತಾ ಹತ್ತಿರ ಬರಬೇಕೆಂದರೆ ಮಕ್ಕಳೇ ಸರಿ.
ಒಮ್ಮೆ ಅಕ್ಕ ತನ್ನ ಮಗನ ಮೇಲೆ ಸಿಟ್ಟಾಗಿ ನಾಲ್ಕೇಟು ಪಟಪಟನೆ ಹೊಡೆದಿದ್ದಳು. ಅವಳು ಎಷ್ಟೇ ಹೊಡೆದರೂ ಅಳದೇ ಗರ್ವ ಕಟ್ಟಿ ಇರುತ್ತಿದ್ದವನು ಅಂದು ಬಿಕ್ಕಳಿಸಿ ಅತ್ತಿದ್ದ. ಎಲ್ಲೋ ಏಟು ಜೋರಾಯಿತೇನೋ ಎಂಬ ಗಾಬರಿಯಲ್ಲಿ ಅಕ್ಕನ ಸಿಟ್ಟೆಲ್ಲ ಜರ್ರನೆ ಇಳಿದಿತ್ತು. ಅವನನ್ನು ಸಮಾಧಾನಿಸುವಷ್ಟರಲ್ಲಿ ಅವಳಿಗೆ ಸಾಕೋ ಸಾಕಾಗಿತ್ತು. ಯಾಕೋ ಇಷ್ಟೊಂದು ಅತ್ತೆ? – ಎಂದು ಅವನಲ್ಲಿ ಕೇಳಿದರೆ ಅವನು ನಿಧಾನಕ್ಕೆ ನುಡಿದದ್ದು ಹೀಗೆ: ‘ಅಮ್ಮ, ನಿನ್ನ ಕೈಯ ಬಳೆ ತುಂಬಾ ಚಂದ ಇತ್ತು. ನೀನು ನನಗೆ ಹೊಡೆಯುವಾಗ ಆ ಬಳೆ ತುಂಡಾಯಿತು. ಅದು ಹಾಳಾಯಿತು ಅಂತ ನನಗೆ ಬೇಜಾರಾಯ್ತು ಅಮ್ಮ.. ಬಳೆ ತುಂಡಾಗದಂತೆ ಹೊಡೆಯಬೇಕಿತ್ತು ತಾನೇ ನೀನು?’ ಈ ಮಾತಿಗೆ ಯಾವ ರೀತಿಯ ಪ್ರತಿಕ್ರಿಯೆ ಇದ್ದೀತು? ತಾನು ತಿಂದ ಏಟಿಗಿಂತ ಹೆಚ್ಚು ಬಳೆ ತುಂಡಾದದ್ದು ಅವನಿಗೆ ನೋವು ತರಿಸಿತ್ತು! ಅಂದು ಅಕ್ಕನಿಗಾದ ದುಃಖ ಕಡಮೆಯಲ್ಲ. ಸಿಟ್ಟು ತಾಳಲಾರದೆ ಹೊಡೆದುಬಿಡುತ್ತೇವೆ, ಆಮೇಲೆ ಸಮಾಧಾನ ಮಾಡುತ್ತೇವೆ. ಆದರೆ ಅವರು ಹೊಡೆದದ್ದಕ್ಕಾಗಿ ಅಳದೆ ನಮಗಾದ ತೊಂದರೆಗಾಗಿ ಅತ್ತರೆ ಹೃದಯ ಹಿಂಡಿದಂತಾಗುತ್ತದೆ.
ಕೆಲವು ತಿಂಗಳ ಹಿಂದೆ ನನ್ನ ಮಗನಿಗೆ ತಾನು ದೊಡ್ಡವನಾದ ಮೇಲೆ ಮದುವೆಯಾಗುವುದು ಯಾರನ್ನು ಎಂಬ ಪ್ರಶ್ನೆ ಕಾಡಿತ್ತು. ಓದಿ, ಕೆಲಸ ಹಿಡಿದು ಸಂಪಾದನೆ ಶುರು ಮಾಡಿದ ಮೇಲೆ ಯಾರಾದರೂ ಒಳ್ಳೆಯ ಹುಡುಗಿಯನ್ನು ಹುಡುಕಿ ಮದುವೆ ಮಾಡಿದರಾಯ್ತು ಬಿಡೋ ಎಂದು ತಮಾಷೆ ಮಾಡಿದರೆ ಅವನು ಕಂಗಾಲು. ‘ಅಮ್ಮಾ, ಗುರುತು ಪರಿಚಯ ಇಲ್ಲದಿರುವವಳ ಜತೆಗೆ ಹೇಗಮ್ಮಾ ಬದುಕುವುದು ಸಾಧ್ಯ? ಅದೂ ಒಂದೇ ಮನೆಯಲ್ಲಿ?’ ಎಂದ ಅವನ ಮಾತಿಗೆ ನಗಬೇಕೆನ್ನಿಸಿದರೂ ಆ ಪ್ರಶ್ನೆಯಲ್ಲಿದ್ದ ಗಹನತೆ ನನ್ನನ್ನು ನಗದಂತೆ ತಡೆದಿತ್ತು. ನಮ್ಮ ಹಿರಿಯರು ಹೀಗೆ ಯೋಚಿಸಿದ್ದರೇ? ಜಾತಕಗಳು ಹೊಂದಿ ಆಗುವ ಮದುವೆಗಳಲ್ಲಿ ನಿಜಕ್ಕೂ ಮನಸ್ಸುಗಳು ಹೊಂದುತ್ತವೆಯೇ? ಹೆಚ್ಚಿನ ಮನೆಗಳದೂ ಹೊಂದಾಣಿಕೆಯ ಬದುಕು ವಿನಾ ನಿಜಾರ್ಥದಲ್ಲಿ ದೇಹವೆರಡು ಮನಸ್ಸೊಂದು ಎಂದು ಬದುಕುವುದು ಸಾಧ್ಯವೇ?
ಎಳೆಯ ಕಂದಮ್ಮಗಳೆಂದೆನ್ನಿಸುವ ಅವರು ಕ್ಷಣ ಮಾತ್ರದಲ್ಲಿ ದೊಡ್ಡ ಮಾತುಗಳನ್ನಾಡುತ್ತಾರೆ. ಇನ್ನೇನು ಬೆಳೆದೇಬಿಟ್ಟರಾ ಎಂದುಕೊಳ್ಳುವಷ್ಟರಲ್ಲಿ ಮತ್ತೆ ಯಾವುದೋ ಪುಟ್ಟ ವಸ್ತುವಿಗಾಗಿ ಹಟ ಮಾಡುವುದೋ ಹೇಳಿದ ಮಾತು ಕೇಳದಂತೆ ತಕರಾರು ಮಾಡುವುದೋ ಇಲ್ಲವೇ ಮತ್ತೇನಾದರೂ ಮಾಡಿಯಾರು.
ಒಟ್ಟಿನಲ್ಲಿ ಮಕ್ಕಳನ್ನು ದೇವರಂತೆ ಕಾಣಬೇಕೆಂದ ಹಿರಿಯರ ಮಾತು ಸುಮ್ಮನೇ ಮಾತಲ್ಲವೆಂಬುದು ದಿಟ!