ತನ್ನ ಪಕ್ಷದ ಮಕುಟಮಣಿಗಳು ತಮ್ಮ ಪಾಪದ ಫಲವನ್ನು ಉಣ್ಣಬೇಕಾಗಿ ಬಂದುದಕ್ಕೆ ಹತಾಶವಾಗಿ ಕಾಂಗ್ರೆಸ್ ‘ಇವೆಲ್ಲ ರಾಜಕೀಯ ಪ್ರೇರಿತ’ ಎಂದು ಹಳಸಲು ವಾದಗಳಿಗೂ ಬೀದಿ ರಂಪಾಟಗಳಿಗೂ ಶರಣಾಗಿದೆ. ಈ ‘ಹೈ-ಪೆÇ್ರಫೈಲ್’ ಅಪರಾಧಿಗಳಿಗೆ ಬಹಳ ಹಿಂದೆಯೇ ದಂಡನೆ ಆಗಬೇಕಾಗಿತ್ತು ಎಂಬುದು ಜನತೆಯ ಪ್ರತಿಕ್ರಿಯೆಯಾದರೆ ಇದಕ್ಕೆ ಇಷ್ಟು ವರ್ಷಗಳು ಬೇಕಾಯಿತೆ ಎಂಬ ನೈರಾಶ್ಯಭಾವ ಹರಡಿರುವುದೂ ಸ್ವಾಭಾವಿಕ; ಅದು ಒತ್ತಟ್ಟಿಗಿರಲಿ, ತನಿಖಾಸಂಸ್ಥೆಗಳು ಆರೂಢ ಸರ್ಕಾರದ ಕೈಗೊಂಬೆಗಳಾಗಿ ವರ್ತಿಸುತ್ತಿವೆ ಎಂದು ವಾದಿಸಲು ಕಾಂಗ್ರೆಸ್ ರವೆಯಷ್ಟಾದರೂ ನೈತಿಕತೆಯನ್ನು ಉಳಿಸಿಕೊಂಡಿದೆಯೆ? ಅಧಿಕಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ತನಿಖಾಸಂಸ್ಥೆಗಳ ಸುಧಾರಣೆಗೆ ಕಿರುಬೆರಳನ್ನೂ ಎತ್ತಿರಲಿಲ್ಲವಲ್ಲ! ಸಿ.ಬಿ.ಐ.ಗೆ ‘ಪಂಜರದ ಗಿಳಿ’ ಎಂಬ ಪ್ರಶಸ್ತಿ ಲಭಿಸಿದ್ದು ಕಾಂಗ್ರೆಸ್ ಅಧಿಕಾರಾವಧಿಯಲ್ಲಿಯೇ ಅಲ್ಲವೆ? ತಾವು ಪಾಪದ ವೆಚ್ಚ ಸಲ್ಲಿಸಬೇಕಾದ ಸಮಯ ಬಂದೊಡನೆ ಗಿಳಿಯು ರಣಹದ್ದಾಗಿಬಿಟ್ಟಿತೆ? ಇದೆಲ್ಲ ವ್ಯರ್ಥ ಜಲ್ಪವಷ್ಟೆ. ಭ್ರಷ್ಟತೆ-ಕಪಟತೆಗಳು ಅನಂತಕಾಲದವರೆಗೆ ಮುಂದುವರಿಯಬಲ್ಲವೆಂದು ನಿರೀಕ್ಷಿಸುವುದು ಅಮಾಯಕತೆ. ಹಲವಾರು ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆ ಮುಂದುವರಿಯದಂತೆ, ನೆನೆಗುದಿಗೆ ಬೀಳುವಂತೆ ನೋಡಿಕೊಂಡಿದ್ದುದು ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವೇ. ತಮಗೆ ಯಾರಿಂದಲಾದರೂ ರಾಜಕೀಯ ಬೆಂಬಲದ ಆವಶ್ಯಕತೆ ಬೀಳುವಂತಿದ್ದರೆ ಅಂಥವರ ಮೇಲಿನ ಗಂಭೀರ ಆಪಾದನೆಗಳ ತನಿಖೆ ಮುಂದುವರಿಯದಂತೆ ನೋಡಿಕೊಳ್ಳುವುದು ಕಾಂಗ್ರೆಸಿನ ಜಾಯಮಾನವೇ ಆಗಿತ್ತು. ಇಂತಹ ‘ಚಾರಿತ್ರ’ ಇರುವ ಪಕ್ಷದಲ್ಲಿ ಎಷ್ಟು ಮಾತ್ರದ ಸಹಾನುಭೂತ್ಯರ್ಹತೆ ಉಳಿದಿದ್ದೀತು? ಎಲ್ಲಕ್ಕಿಂತ ಸೋಜಿಗದ ಸಂಗತಿಯೆಂದರೆ ಮಾಡಬಾರದ ಎಲ್ಲ ಕೃತ್ಯಗಳನ್ನು ಮುಚ್ಚಿರಿಸಲು ಅನುವಾಗುವಂತೆ ತಾವು ಅನಂತಕಾಲ ಅಧಿಕಾರದಲ್ಲಿರಬಲ್ಲೆವೆಂದು ಭ್ರಮಿಸುವುದು. ಕಿಮಾಶ್ಚರ್ಯಮತಃ ಪರಮ್?
ಹಳಸಲು ವಾದಗಳು, ಅಲುಗದ ತಥ್ಯಗಳು
Month : November-2019 Episode : Author : ಎಸ್.ಆರ್. ರಾಮಸ್ವಾಮಿ