ಈಚಿನ ವರ್ಷಗಳಲ್ಲಿ ಬಹುಸಂಖ್ಯಾತರಲ್ಲಿ ಅಸಹಿಷ್ಣುತೆ ಹೆಚ್ಚಿದೆಯೆಂದೂ ಇದರಿಂದಾಗಿ ಅಲ್ಪಸಂಖ್ಯಾತರಲ್ಲಿ ಅಭದ್ರತೆಯ ಮನೋಭಾವ ಬೆಳೆಯುತ್ತಿದೆಯೆಂದೂ ವಾಮಪಂಥೀಯರು ಆರೋಪಿಸುವುದು ದಿನನಿತ್ಯದ ನಡವಳಿಯಾಗಿದೆ. ಅದು ಹುರುಳಿಲ್ಲದ ಆರೋಪವೆಂಬುದು ಹಾಗಿರಲಿ. ಆ ಆರೋಪಕರ್ತರ ವರ್ತನೆ ಹೇಗಿದೆಯೆಂದು ಪರಿಶೀಲಿಸಿದಲ್ಲಿ ಅಸಹಿಷ್ಣುತೆಯನ್ನು ಬೆಳೆಸುತ್ತಿರುವುದು ಯಾವ ವರ್ಗವೆಂಬುದು ಜಾಹೀರಾಗುತ್ತದೆ. ಹಿಂದಿನ ಇತಿಹಾಸ ಒತ್ತಟ್ಟಿಗಿರಲಿ. ಎರಡು ಇತ್ತೀಚಿನ ಪ್ರಸಂಗಗಳನ್ನಷ್ಟೇ ನೆನೆದರೂ ತಥ್ಯದರ್ಶನವಾದೀತು.
ಕಳೆದ ಸೆಪ್ಟೆಂಬರ್ 19ರಂದು ಜಾದವಪುರ ವಿಶ್ವವಿದ್ಯಾಲಯದಲ್ಲಿ ಹೊಸ ವಿದ್ಯಾರ್ಥಿತಂಡವನ್ನು ಸ್ವಾಗತಿಸಿ ಒಂದೆರಡು ಹಿತವಚನ ಹೇಳುವ ಮಾಮೂಲು ಕಾರ್ಯಕ್ರಮ. ಭಾಷಣಕಾರರಲ್ಲಿ ಒಬ್ಬ ಸರ್ವೋಚ್ಚ ನ್ಯಾಯಾಲಯ ವಕೀಲರು, ಒಬ್ಬ ಫ್ಯಾಶನ್ ಡಿಸೈನರ್, ಕಲಾವಿದ ಬಾಬುಲ್ ಸುಪ್ರಿಯೊ ಮೊದಲಾದವರಿದ್ದರು. ಆದರೆ ಕಾರ್ಯಕ್ರಮವನ್ನು ಸಂಘಟಿಸಿದ್ದುದು ಅಭಾವಿಪ ಎಂಬ ಒಂದೇ ಕಾರಣಕ್ಕೆ ವಾಮಪಂಥಿ ವಿದ್ಯಾರ್ಥಿಸಂಘ ಕಾರ್ಯಕ್ರಮ ಆಗಗೊಡದೆ ಬಾಬುಲ್ ಸುಪ್ರಿಯೊ ಮೊದಲಾದವರ ಮೇಲೆ ಯೋಜಿತವಾಗಿ ಹಲ್ಲೆ ನಡೆಸಿದರು. (ಕೆಲವು ದಶಕಗಳ ಹಿಂದೆ ‘ಪರೀಕ್ಷೆಗಳೇ ಬೇಡ’ ಎಂದು ಆಂದೋಲನ ನಡೆಸಿದ್ದ ಚಾರಿತ್ರ ಈ ಸಂಘಗಳದು.)
ಇನ್ನೊಂದು ಘಟನೆ ಕಳೆದ ಅಕ್ಟೋಬರ್ 3ರಂದು ಜೆ.ಎನ್.ಯು.ನಲ್ಲಿ ನಡೆದದ್ದು. ಸಂವಿಧಾನ ವಿಧಿ 370ರ ರದ್ದತಿಯ ಹಿನ್ನೆಲೆಯಲ್ಲಿ ವಿಷಯದ ಪೌರ್ವಾಪರ್ಯ ಕುರಿತು ಭಾಷಣ ಮಾಡಲು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಆಮಂತ್ರಿತರಾಗಿದ್ದರು. ಅವರು ಏನು ಹೇಳುತ್ತಾರೆಂಬುದು ಹಾಗಿರಲಿ. ಅವರು ಮಾತನಾಡುವುದಕ್ಕೆ ಅವಕಾಶವನ್ನೇ ಕೊಡಬಾರದೆಂದು ವಾಮಪಂಥಿ ವಿದ್ಯಾರ್ಥಿ ಸಂಘಗಳವರು ಗುಲ್ಲೆಬ್ಬಿಸಿದರು.
ಮುಕ್ತ ವೈಚಾರಿಕ ಕೇಂದ್ರಗಳಾಗಿರಬೇಕಾದ ವಿದ್ಯಾಸಂಸ್ಥಾನಗಳನ್ನು ದಂದಾದುಂದಿ ವೇದಿಕೆಗಳಾಗಿಸುತ್ತಿರುವುದು ‘ಅಸಹಿಷ್ಣುತೆ’ಯ ಪ್ರತಿಪಾದಕ ವರ್ಗಗಳ ‘ಉದಾರ ಚಿಂತನೆ’ಗೆ ಪುರಾವೆ.