ತಿಲಕರ ನಿಧನದ ನೂರನೇ ವರ್ಷ ನಿಮಿತ್ತ ಸ್ಮರಣಲೇಖನ
ಹತ್ತೊಂಬತ್ತನೇ ಶತಮಾನದ ಕೊನೆಯ ದಶಕದಿಂದ ಆರಂಭಿಸಿ ಮೂರು ದಶಕಗಳ ಕಾಲ ಭಾರತದ ಹೃದಯಸಮ್ರಾಟರೂ ರಾಷ್ಟ್ರನಾಯಕರಲ್ಲಿ ಅಗ್ರಣಿಗಳೂ ಆಗಿದ್ದವರು ತಿಲಕರೆಂಬುದೂ ಸ್ವರಾಜ್ಯಾಭಿಮುಖ ಸಂಘರ್ಷದಲ್ಲಿ ಸಕ್ರಿಯತೆ ತಂದವರು ಅವರೆಂಬುದೂ ವಿವಾದಾತೀತ. ಸ್ವಾತಂತ್ರ್ಯೇತಿಹಾಸಕ್ಕೆ ನಿರ್ಣಾಯಕ ತಿರುವನ್ನು ನೀಡಿದವರು ಅವರು. ಇದು ಸಾಧ್ಯವಾದದ್ದು ಅವರ ನಿಶಿತ ಪ್ರತಿಭೆ, ತೀಕ್ಷ್ಣ ವೈದುಷ್ಯ, ಅಸೀಮ ನಿಃಸ್ವಾರ್ಥ ಮೊದಲಾದ ವ್ಯಕ್ತಿಗುಣಗಳಿಂದ. ಧ್ಯೇಯಸಾಧನೆಗಾಗಿ ಅವರಂತೆ ಸರ್ವಸ್ವಾರ್ಪಣೆ ಮಾಡಿದವರ ನಿದರ್ಶನಗಳು ಇತಿಹಾಸದಲ್ಲಿ ವಿರಳವಾಗಷ್ಟೆ ದೊರೆಯುತ್ತವೆ.
ಸಮಾಜೋಜ್ಜೀವನ
ಪಶ್ಚಿಮಭಾರತದಲ್ಲಿ ‘ಆಧುನಿಕ’ ಶಿಕ್ಷಣವ್ಯವಸ್ಥೆ 19ನೇ ಶತಮಾನದ ನಡುಭಾಗದ ವೇಳೆಗೇ ಉಪಕ್ರಮಗೊಂಡಿತ್ತಾದರೂ ಸ್ವರಾಜ್ಯಾಭಿಮುಖ ಪ್ರಯಾಸಗಳು ಗರಿಗೆದರಿದುದು ಹಲವು ದಶಕಗಳ ತರುವಾಯವೇ. ಆಂಗ್ಲಪ್ರವರ್ತಿತ ಶಿಕ್ಷಣವ್ಯವಸ್ಥೆ ಜನತೆಯಲ್ಲಿ ರಾಷ್ಟ್ರೀಯತಾಪರ ಭಾವನೆಗಳನ್ನು ಉಜ್ಜೀವಿಸುವುದಕ್ಕೆ ಬದಲಾಗಿ ಜನರ ಮನಸ್ಸುಗಳನ್ನು ತಮ್ಮ ಮೂಲ ಬೇರುಗಳಿಂದ ವಿಚ್ಛೇದಗೊಳಿಸತೊಡಗಿತ್ತು. ನೈಜ ಸಂಸ್ಕøತಿಯ ಬಗೆಗೂ ಪರಂಪರೆಯ ಬಗೆಗೂ ಜನರಲ್ಲಿ ಹೀನಾಯಭಾವನೆಯೇ ಬೆಳೆಯುತ್ತಿತ್ತು; ಎಷ್ಟುಮಟ್ಟಿಗೆ ಎಂದರೆ ಈ ಸ್ಥಿತಿ ಒಂದು ವಿಕೃತಿ ಎಂಬ ಮನವರಿಕೆಯೇ ಹೆಚ್ಚಿನವರಲ್ಲಿ ಮೂಡಿರಲಿಲ್ಲ. ಜನರ ಈ ಮಾನಸಿಕತೆಯನ್ನು ಪರಿವರ್ತಿಸುವುದೇ ಸ್ವರಾಜ್ಯಾಭಿಯಾನದ ಮೊದಲ ಹೆಜ್ಜೆಯಾಗಬೇಕು ಎಂದು ಗುರುತಿಸಿದ ಮೊದಲಿಗರಲ್ಲಿ ಒಬ್ಬರು ಬಾಲ ಗಂಗಾಧರ ತಿಲಕ್. ಇದು ಸುಲಭವಾಗಿ ಆಗುವಂತಹದಲ್ಲವೆಂದೂ ಅಸಾಮಾನ್ಯ ಪ್ರಯಾಸವೇ ಅವಶ್ಯವಿದೆಯೆಂದೂ ಸ್ಫುಟವಾಗಿ ಗುರುತಿಸಿ ಅದಕ್ಕೆ ಸಮಾಜವನ್ನು ಅಣಿಗೊಳಿಸಬೇಕು – ಎಂದು ತಮ್ಮ ಸಾಮಾಜಿಕ ಜೀವನದ ಆರಂಭಿಕ ಹಂತದಲ್ಲಿಯೇ ತಿಲಕ್ ಮನಗಂಡರು. ಹಾಗೆ ನೋಡಿದರೆ ಪ್ರಥಮ ಸ್ವಾತಂತ್ರ್ಯಸಂಗ್ರಾಮದಂತಹ ಅಭೂತಪೂರ್ವ ಘಟನಾವಳಿಯೂ ಅದಕ್ಕೂ ಹಿಂದಿನಿಂದ ಬಂಗಾಳ, ಮಹಾರಾಷ್ಟ್ರ, ದಕ್ಷಿಣಭಾರತಗಳಲ್ಲಿ ನಡೆದಿದ್ದ – ವಿಶೇಷವಾಗಿ ಪತ್ರಿಕೆಗಳ ಮಾಧ್ಯಮದಿಂದ – ಜಾಗರಣಪ್ರಯತ್ನಗಳೂ ಹೆಚ್ಚಿನ ತೀವ್ರಸ್ವರೂಪ ಪಡೆದು ದೇಶವ್ಯಾಪಿಗೊಳ್ಳಬೇಕೆಂಬ ನಿರೀಕ್ಷೆ ಇದ್ದಿತು. ಆದರೆ ಹಾಗೆ ಆಗಲಿಲ್ಲ. ಹೆಚ್ಚಿನ ಚೇತರಿಕೆ ಕಾಣತೊಡಗಿದುದು 19ನೇ ಶತಮಾನದ ಕೊನೆಯ ಪಾದದಲ್ಲಿ ಎನ್ನಬಹುದು. ಈ ಚೇತರಿಕೆಗೆ ದೋಹದ ನೀಡಿದವು ದಯಾನಂದಸರಸ್ವತಿಗಳು ಕೈಗೊಂಡ ವೇದಕೇಂದ್ರಿತ ಸಂಸ್ಕೃತಿಯ ಉಜ್ಜೀವನದ ಮತ್ತು ಅನಂತರದ ಕಾಲದಲ್ಲಿ ವಿವೇಕಾನಂದರಿಂದ ಪ್ರವರ್ತಿತವಾದ ಆನ್ವಯಿಕ ವೇದಾಂತದ ಸರ್ವಂಕಷತೆಯ ಮಂಡನೆ. ಈ ಅಭಿಯಾನಗಳ ಫಲಿತವಾಗಿ ಸಮಾಜದಲ್ಲಿ ಉದ್ದೀಪ್ತಗೊಂಡ ಸ್ವಾಭಿಮಾನವೂ ಆತ್ಮವಿಶ್ವಾಸವೂ ಸ್ವಾತಂತ್ರ್ಯಸಂಘರ್ಷದ ಅಂತಿಮ ಹಂತಕ್ಕೆ ನಾಂದಿಯಾದವು.
ಭಾರತದ ರಾಜಕೀಯ ಅಂಗಣಕ್ಕೆ ಬಾಲ ಗಂಗಾಧರ ತಿಲಕರ ಪ್ರವೇಶವಾದದ್ದು ಈ ಸನ್ನಿವೇಶದಲ್ಲಿ. ಬಾಲ ಗಂಗಾಧರ ತಿಲಕರು (23.7.1856-31.7.1920) ಗೋಪಾಲ ಗಣೇಶ ಅಗರ್ಕರ್, ವಿಷ್ಣುಶಾಸ್ತ್ರಿ ಚಿಪಲೂಣಕರ್ ಮೊದಲಾದವರ ಒಡಗೂಡಿ ಪುಣೆಯ ಫರ್ಗುಸನ್ ಕಾಲೇಜನ್ನು ಒಳಗೊಂಡ ಡೆಕ್ಕನ್ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿ (1884) ಅದನ್ನು ದೇಶದಲ್ಲಿಯೆ ಪ್ರತಿಷ್ಠಿತ ಸಂಸ್ಥೆಯನ್ನಾಗಿಸಿದ್ದು, ಗಣಿತ ಬೋಧಕರಾಗಿ ಖ್ಯಾತರಾದದ್ದು, ವ್ಯಾಪಕ ಜನಶಿಕ್ಷಣಕ್ಕಾಗಿ ಮರಾಠಿಯ ‘ಕೇಸರಿ’ ಮತ್ತು ಇಂಗ್ಲಿಷಿನ ‘ಮರಾಠಾ’ ಪತ್ರಿಕೆಗಳನ್ನು ಸ್ಥಾಪಿಸಿ (1881) ಅಲ್ಪಕಾಲದಲ್ಲಿ ಅವನ್ನು ಇಡೀ ದೇಶದಲ್ಲಿಯೆ ಓಜಸ್ವಿ ಜನಧ್ವನಿಯಾಗಿಸಿದ್ದು, ಶಾಲಾ ಬೋಧನೆ ಪ್ರಮುಖವಾಗಿ ಸೇವಾಕಾರ್ಯದ ರೀತಿಯಲ್ಲಿ ನಡೆಯಬೇಕೆಂಬ ನಿಲವಿಗೆ ಭಂಗವೊದಗುತ್ತದೆನಿಸಿ ತಮಗೆ ಅತ್ಯಂತ ಪ್ರೀತಿಯ ಕಾಯಕವಾಗಿದ್ದ ಬೋಧಕ ವೃತ್ತಿಗೇ ರಾಜೀನಾಮೆ ನೀಡಿ (1899) ತಮ್ಮ ಪೂರ್ಣ ಸಮಯವನ್ನು ಪತ್ರಿಕೆಗಳಿಗಾಗಿಯೂ ರಾಷ್ಟ್ರಕಾರ್ಯಗಳಿಗಾಗಿಯೂ ಮೀಸಲಿರಿಸಿದ್ದು, ರಾಷ್ಟ್ರೀಯ ಕಾಂಗ್ರೆಸ್ ಸಂಘಟನೆಗೆ ಸೇರಿ ಅದರ ಕಲಾಪಗಳಲ್ಲಿ ಸಕ್ರಿಯರಾದದ್ದು, 1890ರ ದಶಕದ ಆರಂಭದ ವರ್ಷಗಳಲ್ಲಿ ಒಂದು ಅವಧಿಗೆ ಮುಂಬಯಿ ಶಾಸನಸಭೆಯ ಸದಸ್ಯರಾಗಿದ್ದು, ಅನಂತರ ಅದು ನೀರಸವೆನಿಸಿ ದೂರ ಸರಿದದ್ದು – ಇವೇ ಮೊದಲಾದವು ಅವರ ಸಾರ್ವಜನಿಕ ಜೀವನದ ಆರಂಭಿಕ ಘಟ್ಟದ ಘಟನೆಗಳು.
ಉತ್ಸವಾಚರಣೆಗಳು
ಗಣೇಶಚತುರ್ಥಿ ಮತ್ತು ಶಿವಾಜಿಜಯಂತಿಗಳ ಆಚರಣೆಗಳಿಗೆ ಸಾಮೂಹಿಕ ಸ್ವರೂಪವನ್ನಿತ್ತು ಅವುಗಳನ್ನು ರಾಜಕೀಯ ಜಾಗೃತಿಯ ಮಾಧ್ಯಮವಾಗಿಸಿದ್ದು ತಿಲಕರ ಒಂದು ಅದ್ವಿತೀಯ ಪ್ರತಿಭೋನ್ಮೀಲನ. ಆ ತಿಲಕ್-ಪ್ರವರ್ತಿತ ಆಂದೋಲನಗಳ ಹಿನ್ನೆಲೆ ಚಿಂತನಾರ್ಹವಾದದ್ದು.
ಆಮೇಲಿನ ವರ್ಷಗಳಲ್ಲಿಯೂ ನಡೆಯುತ್ತಿದ್ದಂತೆ 1890ರ ದಶಕದಲ್ಲಿಯೂ ಮುಂಬಯಿ ಪ್ರಾಂತದ ಹಲವೆಡೆ ‘ಕೋಮುಗಲಭೆ’ಗಳು ನಡೆಯುತ್ತಿದ್ದವು. ಹಿಂದೂಗಳು ಮುಸ್ಲಿಂ ಬಡಾವಣೆಗಳಲ್ಲಿಯೂ ಹಬ್ಬ-ಉತ್ಸವಗಳಲ್ಲಿ ವಾದ್ಯಸಂಗೀತ ನಡೆಸುತ್ತಿದ್ದುದು – ಇಂತಹ ಕಾರಣಗಳೂ ಮುಸ್ಲಿಮರನ್ನು ಪ್ರಚೋದಿಸಲು ಸಾಕಾಗಿದ್ದುವು. ಇಂತಹ ಹಲವಾರು ಸಂದರ್ಭಗಳಲ್ಲಿ ಪೆÇಲೀಸರು ಸನ್ನಿವೇಶವನ್ನು ನಿರ್ವಹಿಸುವುದರಲ್ಲಿ ಲಾಘವ ತೋರುತ್ತಿದ್ದುದು ಸಾಮಾನ್ಯವಾಗಿತ್ತು. ಆದರೆ ಹಿಂದೂಗಳಿಂದ ಅತ್ಯಲ್ಪ ಪ್ರತಿಭಟನೆ ಹೊಮ್ಮಿದರೂ ಅದನ್ನು ಕ್ಷಿಪ್ರವಾಗಿ ನಿಯಂತ್ರಿಸಲು ಪೆÇಲೀಸರು ಮುಂದಾಗುತ್ತಿದ್ದರು. ಗಲಭೆಗೆ ಮೂಲಕಾರಣವಾಗಿದ್ದ ಸಂದರ್ಭವನ್ನು ಅಲಕ್ಷಿಸಿ ಅದರಿಂದ ಉತ್ಪನ್ನವಾದ ಪ್ರತಿಭಟನೆಯನ್ನು ಮಾತ್ರ ಗಂಭೀರವಾಗಿ ಪರಿಗಣಿಸುವುದು ‘ರೂಢಿ’ಯೇ ಆಗಿಬಿಟ್ಟಿತ್ತು (ಈಗಲೂ ಅನೇಕ ಸಂದರ್ಭಗಳಲ್ಲಿ ನಡೆಯುತ್ತಿರುವಂತೆ). ಈ ಅಸಂಗತತೆಯನ್ನು ಕುರಿತು ಸ್ವಭಾವತಃ ಸೌಮ್ಯರಾದ ಹಿಂದೂಗಳು ದೀರ್ಘಕಾಲ ಸಹನೆಯಿಂದಿದ್ದರು. ಈ ಸಹನಪ್ರವೃತ್ತಿ ಇನ್ನಷ್ಟು ಗಲಭೆಗಳಿಗೆ ಕಾರಣವಾಗುತ್ತಿತ್ತು. ಇಂತಹ ಸಂದರ್ಭಗಳಲ್ಲಿ ಸರ್ಕಾರವು ಕ್ಷಿಪ್ರವಾಗಿಯೂ ತ್ರಯಸ್ಥವಾಗಿಯೂ ನಡೆದುಕೊಳ್ಳುವುದು ಅವಶ್ಯವೆಂದು ಮೊತ್ತಮೊದಲಿಗೆ ದನಿಯೆತ್ತಿದವರು ತಿಲಕರು.
ಹೀಗೆ ಸರ್ಕಾರೀ ಧೋರಣೆಗಳ ಉಪ-ಉತ್ಪನ್ನಗಳೆನ್ನಬಹುದಾದ ಸಂಗತಿಗಳನ್ನು ಮುನ್ನೆಲೆಗೆ ತರುವುದರಲ್ಲಿ ತಿಲಕರಿಗೆ ಸ್ವಸಮಾಜವನ್ನು ಸುಪ್ತಸ್ಥಿತಿಯಿಂದ ಹೊರತಂದು ಹೆಚ್ಚು ಚೇತಃಪೂರ್ಣಗೊಳಿಸಬೇಕೆಂಬ ಆಶಯವೂ ಇದ್ದೇ ಇದ್ದಿತು. ಜನನಾಯಕರೆಂದು ಪರಿಗಣಿತರಾಗಿದ್ದ ಹಲವರು ಗಣ್ಯರು ಸಮಾಜದ ಅವನತಸ್ಥಿತಿಯ ಬಗೆಗೆ ತೂಷ್ಣೀಭಾವ ತಳೆದಿದ್ದುದನ್ನು ತಿಲಕರು ಪ್ರಶ್ನಿಸಬೇಕಾಯಿತು. ಆದರೆ ತಮ್ಮ ನಿಲವಿನ ಬಗೆಗೆ ತಿಲಕರಿಗೆ ಖಚಿತತೆ ಇದ್ದಿತು. ಹಿಂದೂ ದೇವಾಲಯಗಳ ಮೇಲೆ ಹಲ್ಲೆ ನಡೆದಾಗಲೂ ಸರ್ಕಾರವು ಹಿಂದೂಗಳನ್ನೇ ಅಪರಾಧಿಗಳೆಂಬಂತೆ ದಂಡನೆಗೊಳಪಡಿಸಿದುದೂ ಇತ್ತು. ಯವೋಲಾ ಎಂಬಲ್ಲಿ ಮಾರುತಿ ದೇವಾಲಯದ ಮೇಲೆ ನಡೆದ ಮುಸ್ಲಿಮರ ಹಲ್ಲೆ (1894) ಇಂತಹ ಒಂದು ದುರ್ಘಟನೆ ಮಾತ್ರ.
ತಿಲಕರು ಸಂಘಟಿಸಿದ ಜನಾಭಿಪ್ರಾಯದ ಫಲವಾಗಿ ಪೆÇಲೀಸರಿಗೂ ಮಿಲಿಟರಿ ಸೈನಿಕರಿಗೂ ಹೊಣೆಗಾರಿಕೆಯಿಂದ ವರ್ತಿಸುವಂತೆ ಸರ್ಕಾರವು ಆದೇಶ ನೀಡಿದುದು (1894) ಒಂದು ಗಣನೀಯ ಹೆಜ್ಜೆ.
ತಿಲಕರು ಗಣೇಶೋತ್ಸವ, ಶಿವಾಜಿ ಜಯಂತ್ಯುತ್ಸವಗಳ ವ್ಯಾಪಕ ಸಾಮೂಹಿಕ ಆಚರಣೆಗೆ ಮನಸ್ಸನ್ನು ತೆತ್ತುದರ ಹಿನ್ನೆಲೆಯಲ್ಲಿ ಮೇಲಿನಂತಹ ಹತ್ತಾರು ವಿದ್ಯಮಾನಗಳು ಇದ್ದವು.
ಧಾರ್ಮಿಕೋತ್ಸವಗಳ ಜೀವಾಳ
1893-94ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಮುಸ್ಲಿಂ-ಹಿಂದೂ ಸಂಘರ್ಷಗಳ ಪರೋಕ್ಷ ಫಲಿತವೆನ್ನಬಹುದು ಸಾಮೂಹಿಕ ಗಣಪತಿಪೂಜೆಯ ಆಂದೋಲನ. ಜ್ಞಾನದ ದೇವತೆಯಾದ ಗಣಪತಿಯು ವಿಘ್ನನಿವಾರಕನೆಂದೂ ಹೆಸರಾಗಿರುವುದು, ದೇಶದೆಲ್ಲೆಡೆ ಮನೆಮನೆಗಳಲ್ಲಿ ಗಣಪತಿಪೂಜೆಯ ಪರಂಪರೆ ಇದ್ದುದು – ಇವೇ ಮೊದಲಾದ ಪೂರಕ ಅನುಕೂಲತೆಗಳೂ ಇದ್ದವು. ಹೊಸ ರೂಪದಲ್ಲಿ, ಎಂದರೆ ಸಾಮೂಹಿಕವಾಗಿ ಮತ್ತು ಅಧಿಕ ಸಂಭ್ರಮಪೂರ್ಣವಾಗಿ ಗಣಪತಿ ಉತ್ಸವ ಮಹಾರಾಷ್ಟ್ರದಲ್ಲಿ ನಡೆಯತೊಡಗಿದುದು 1893ರಲ್ಲಿ. ಈ ಸಾಧ್ಯತೆಯನ್ನು ಮೊದಲಿಗೇ ಗುರುತಿಸಿದವರು ತಿಲಕರು. 1894ರಲ್ಲಿ ಪುಣೆ ಮೊದಲಾದೆಡೆ ನಡೆದ ವೈಭವಯುತ ಗಣೇಶೋತ್ಸವಗಳು ಅಭೂತಪೂರ್ವವಾಗಿದ್ದವು. ಹೀಗೆ ಹಿಂದೆ ಧಾರ್ಮಿಕ ಕಲಾಪವಷ್ಟೆ ಆಗಿದ್ದ ಗಣೇಶೋತ್ಸವ ಈಗ ಸಾಮಾಜಿಕ ಆಯಾಮವನ್ನು ಪಡೆದುಕೊಂಡಿದ್ದಿತು.
ಶಿವಾಜಿ ಉತ್ಸವದ ಹಿನ್ನೆಲೆ ಸ್ವಲ್ಪ ಭಿನ್ನವಾದ್ದು. 1883ರಲ್ಲಿ ಆಗಿನ ನ್ಯಾಯಾಧೀಶ ಜೇಮ್ಸ್ ಡಗ್ಲಸ್ ಮುಂಬಯಿ ಇತಿಹಾಸ ಕುರಿತು ಬರೆದ ಗ್ರಂಥದಲ್ಲಿ “ಶಿವಾಜಿಯಂತಹ ಮಹಾಪುರುಷನನ್ನು ಜನತೆ ಮರೆತೇಬಿಟ್ಟಿದ್ದಾರೆ” ಎಂದು ವ್ಯಾಖ್ಯೆ ಮಾಡಿದ್ದ. ಅದು ಹಲವರು ಸಾಮಾಜಿಕ ಗಣ್ಯರನ್ನು ಚಿಂತನೆಗೊಳಗಾಗಿಸಿತು. ಹಾಗೆ ನಡೆದ ಮಾತುಕತೆಗಳಲ್ಲಿ ಹೊಮ್ಮಿದ ಒಂದು ಅಭಿಪ್ರಾಯವೆಂದರೆ ರಾಯಗಢದಲ್ಲಿ ಶಿವಾಜಿಯ ಭವ್ಯ ಸಮಾಧಿಯೊಂದನ್ನು ನಿರ್ಮಿಸಬೇಕೆಂಬುದು. ಆದರೆ ಅದಕ್ಕೆ ತಗಲುತ್ತಿದ್ದ ವೆಚ್ಚಕ್ಕಾಗಿ (ಆ ಕಾಲದಲ್ಲಿ ರೂ. 45 ಸಾವಿರ) ಹಣ ಹೊಂದಿಸುವುದು ದುಃಶಕ್ಯವಾಯಿತು.
ಇದಾದ ಒಂದು ದಶಕದ ತರುವಾಯ (1894) ಮುಂಬಯಿಯ ರಾಯಲ್ ಏಷ್ಯಾಟಿಕ್ ಸೊಸೈಟಿಯಲ್ಲಿ ಆರ್.ಪಿ. ಕರ್ಕಾರಿಯಾ ಎಂಬ ಗಣ್ಯ ಪಾರ್ಸಿ ಲೇಖಕ ಶಿವಾಜಿಯ ಬಗೆಗೆ ಇದ್ದ ಅಪಕಲ್ಪನೆಗಳನ್ನು (ಅಫಜಲನನ್ನು ‘ಮೋಸ’ದಿಂದ ಕೊಂದ ಇತ್ಯಾದಿ) ದೂರಗೊಳಿಸುವ ಧಾಟಿಯಲ್ಲಿ ಪ್ರಭಾವೀ ಉಪನ್ಯಾಸವನ್ನು ನೀಡಿದ. ಈ ಅಭಿಪ್ರಾಯವಾದರೋ ತಿಲಕರು ಹಲವು ವರ್ಷ ಹಿಂದಿನಿಂದ ವ್ಯಕ್ತ ಮಾಡುತ್ತಿದ್ದುದೇ. ಹೀಗೆ ಶಿವಾಜಿ ಸ್ಮಾರಕ ನಿರ್ಮಾಣ ಅಭಿಯಾನ ಪುನರುಜ್ಜೀವಿತವಾಯಿತು. ಈ ಪ್ರಯತ್ನಕ್ಕೆ ಮಹಾದೇವ ಗೋವಿಂದ ರಾನಡೆ ಅವರಂತಹ ಗಣ್ಯರ ಅನುಮೋದನೆಯೂ ದೊರೆಯಿತ್ತಿತ್ತು. ಹಲವೆಡೆ ಸ್ಮಾರಕ ನಿರ್ಮಿತಿಗಳಲ್ಲದೆ ನಿಯತಕಾಲಿಕ ಉತ್ಸವಗಳಿಗಾಗಿಯೂ ಶಾಶ್ವತ ನಿಧಿಯೊಂದು ಏರ್ಪಡಬೇಕೆಂದು ಸಲಹೆ ಮಾಡಿ ತಿಲಕರು ‘ಕೇಸರಿ’ ಪತ್ರಿಕೆಯಲ್ಲಿ ಲೇಖನ ಬರೆದರು. (ಈ ಪ್ರಯಾಸಸರಣಿಯನ್ನು ‘ಟೈಮ್ಸ್ ಆಫ್ ಇಂಡಿಯಾ’ ಮೊದಲಾದ ಆಂಗ್ಲೊ-ಇಂಡಿಯನ್ ಪತ್ರಿಕೆಗಳು ಸಹಜವಾಗಿಯೆ ಸದಾ ಟೀಕಿಸುತ್ತಿದ್ದವು.)
ಹಣದ ಕೊರತೆ ಮೊದಲಾದ ಸಮಸ್ಯೆಗಳನ್ನು ಎದುರಿಸಿಯೂ ಮೊದಲ ಭವ್ಯ ಶಿವಾಜಿ ಉತ್ಸವ 1896ರಲ್ಲಿ ರಾಯಗಢದಲ್ಲಿ ತಿಲಕರ ಉಪಸ್ಥಿತಿಯಲ್ಲಿ ನಡೆಯಿತು.
ಈ ಉತ್ಸವಗಳಿಂದ ಸ್ಫೂರ್ತಿ ಪಡೆದು ವಿವಿಧ ಅನ್ಯ ಭಾಗಗಳಲ್ಲಿಯೂ (ದೂರದ ಕೋಲ್ಕತಾದಲ್ಲಿಯೂ) ಉತ್ಸವಗಳು ನಡೆದವು. ಹೀಗೆ ಪ್ರಾದೇಶಿಕ ಮಟ್ಟದಲ್ಲಿ ಉಪಕ್ರಮಗೊಂಡ ಶಿವಾಜಿ ಉತ್ಸವ ಕೆಲವೇ ವರ್ಷಗಳಲ್ಲಿ ಒಂದು ರಾಷ್ಟ್ರೀಯ ಉತ್ಸವವೆನಿಸಿತು.
ಈ ಪ್ರಯಾಸಗಳ ಹಿಂದಿನ ತಾತ್ತ್ವಿಕತೆಯನ್ನು ತಿಲಕರು ‘ಕೇಸರಿ’ ಪತ್ರಿಕೆಯ ಎರಡು ಸಂಚಿಕೆಗಳಲ್ಲಿ (1 ಮತ್ತು 8 ಸೆಪ್ಟೆಂಬರ್ 1896) ಹೀಗೆ ಸ್ಫುಟೀಕರಿಸಿದರು:
“ಇಲ್ಲಿ ಭಾರತದಲ್ಲಿ ಧಾರ್ಮಿಕತೆಗೆ ಜನಜೀವನದಲ್ಲಿ ಕೇಂದ್ರಸ್ಥಾನವಿದ್ದುದರಿಂದ ನಮ್ಮ ಹಬ್ಬಹರಿದಿನಗಳು ಸಾಮಾನ್ಯವಾಗಿ ಧಾರ್ಮಿಕ ಕಲಾಪಗಳ ಸ್ವರೂಪದಲ್ಲಿ ಇರುತ್ತಿದ್ದವು. ಆದರೆ ಹಬ್ಬ ಪೂಜೆ ಉತ್ಸವಗಳ ಆಶಯ ಜನಗಳ ಧಾರ್ಮಿಕ ಪ್ರಜ್ಞೆಯನ್ನು ಊರ್ಜಿತವಾಗಿ ಉಳಿಸುವುದರ ಜೊತೆಗೆ ಜನರಿಗೆ ನೈತಿಕ-ಸಾಮಾಜಿಕ-ರಾಜಕೀಯ ಶಿಕ್ಷಣವನ್ನು ನೀಡಬೇಕು ಎಂಬುದೂ ಆಗಿದ್ದಿತು. ಈಚಿನ ಇತಿಹಾಸಕಾಲದಲ್ಲಿ ಶಿವಾಜಿ ಕಾಲದ ಹಿಂದೆಯೂ ಅನಂತರವೂ ಅಂತಹ ಉತ್ಸವಪರ್ವಗಳೂ ಜಾತ್ರೆಗಳೂ ನಡೆಯುತ್ತಿದ್ದುದು ಸಮಾಜದಲ್ಲಿ ಭಕ್ತಿಯ ವಾತಾವರಣವನ್ನು ಹರಡಲು ಸಹಾಯಕವಾಗಿದ್ದಿತು. ಏಕನಾಥರಂತಹ ಸಂತರೂ ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಸಮರ್ಥ ರಾಮದಾಸರು ರಾಮನವಮಿ ಉತ್ಸವಾಚರಣೆಯನ್ನು ಪ್ರಚುರಗೊಳಿಸಿದುದು ಪ್ರಸಿದ್ಧವಿದೆ. ಈ ಉತ್ಸವಗಳಿಂದ ಹರಡಿದ ಜನಜಾಗೃತಿಯಿಂದಾಗಿಯೆ ಸಮಾಜವನ್ನು ಸಶಕ್ತಗೊಳಿಸಿ ಔರಂಗಜೇಬನಂತಹ ಆಕ್ರಮಕರ ಸೇನೆಗಳನ್ನೂ ಸಮರ್ಥವಾಗಿ ಎದುರಿಸಲಾದದ್ದು. ವಾಸ್ತವವಾಗಿ ಹಿಂದಿನ ಕಾಲದಲ್ಲಿ ಧಾರ್ಮಿಕ-ಔದ್ಯಮಿಕ-ಸಾಮಾಜಿಕ ಚಟುವಟಿಕೆಗಳನ್ನು ಓಜಸ್ವಿಗೊಳಿಸಲೆಂದೇ ಜಾತ್ರೆಗಳು ಏರ್ಪಡುತ್ತಿದ್ದುದು….. . ರಾಷ್ಟ್ರದ ಸರ್ವಾಂಗೀಣ ಅಭ್ಯುದಯಕ್ಕೆ ರಾಷ್ಟ್ರೀಯ ಉತ್ಸವಗಳು ಒಂದು ಪ್ರಮುಖ ಮಾಧ್ಯಮವಾಗಬಲ್ಲದು.”
ಸ್ವೋಪಜ್ಞ ಚಿಂತನೆ
ಹಲವಾರು ವಿಷಯಗಳಲ್ಲಿ ತಿಲಕರಿಗೆ ತಮ್ಮದೇ ಆದ ವಿಶಿಷ್ಟ ಸ್ವತಂತ್ರ ನಿಲವುಗಳು ಇದ್ದವು. ನಿದರ್ಶನಕ್ಕೆ: ಬಾಲ್ಯವಿವಾಹ ಕುರಿತು. ಅವಶ್ಯವಿರುವ ಸುಧಾರಣೆಗಳು ಸಾಮಾಜಿಕ ಸ್ತರದಲ್ಲಿ ಹಿತಚಿಂತಕರ ಸಮಾಲೋಚನೆಯ ಮೂಲಕ ನಡೆಯಬೇಕೇ ಹೊರತು ಈ ವಿಷಯಗಳಲ್ಲಿ ಸರ್ಕಾರದ ಪ್ರವೇಶ ಕೂಡದು ಎಂಬುದು ತಿಲಕರ ಆಗ್ರಹವಿದ್ದಿತು. ಅಲ್ಲದೆ ಯಾವುದೇ ಸುಧಾರಕ ಕ್ರಮಗಳನ್ನು (ಅವು ಎಷ್ಟೇ ಅಪೇಕ್ಷಣೀಯವೆನಿಸಿದರೂ) ಸಮಾಜದ ಮೇಲೆ ಶಾಸನಗಳ ಮೂಲಕ ಹೇರತಕ್ಕದ್ದಲ್ಲ ಎಂಬುದು ಅವರ ಚಿಂತನೆಯಾಗಿದ್ದಿತು. ಬಾಲ್ಯವಿವಾಹ ಕುರಿತಂತೆ ಶಾಸನವನ್ನು ಸರ್ಕಾರವು ಅಮಲುಗೊಳಿಸುವ ಸಿದ್ಧತೆ ನಡೆಸಿದಾಗ ಅದಕ್ಕೆ ವ್ಯಾಪಕ ಪ್ರತಿಭಟನೆಯನ್ನು ತಿಲಕರು ಪುಣೆಯಲ್ಲಿ ಸಂಘಟಿಸಿದರು. ಹೀಗೆ ಸುಧಾರಣೆಗಳ ಪರವಾಗಿದ್ದ ತಂಡಗಳೊಡನೆಯೂ ತಿಲಕರಿಗೆ ಸಂಘರ್ಷಗಳು ಉಂಟಾದವು. (ತಿಲಕರ ಜನ್ಮಜಾತಕವೇ ಹೀಗಿದ್ದಿತೇನೊ!) ಶಾಸನವೇನೊ ಅಂತಿಮವಾಗಿ ಸ್ವೀಕಾರ ಪಡೆಯಿತು. ಆದರೆ ಅದೇ ಸಂದರ್ಭದಲ್ಲಿ ತಿಲಕರಿಗೆ ಸಾಂಪ್ರದಾಯಿಕ ವಲಯಗಳ ಬೆಂಬಲವೂ ಗೌರವವೂ ಬಹುಪಾಲು ಹೆಚ್ಚಿದುದೂ ಹೌದು.
ತಿಲಕರು ಸ್ವಭಾವತಃ ನಿಷ್ಠುರವಾದಿ. ಇತರರಿಗೆ ಸಹನೀಯವಾಗಲೆಂಬ ಉದ್ದೇಶದಿಂದ ತಮ್ಮ ಮಾತಿನ ಮತ್ತು ಬರಹದ ಮೊನಚನ್ನು ತಗ್ಗಿಸುವುದು ತಿಲಕರ ಸ್ವಭಾವದಲ್ಲಿಯೆ ಇರಲಿಲ್ಲ. ಇದರಿಂದಾಗಿಯೆ ಅವರು ಹಲವು ಖಟ್ಲೆಗಳನ್ನು ಎದುರಿಸಬೇಕಾಗಿಬಂದದ್ದು. ಒಂದು ಖಟ್ಲೆಯನ್ನು 1897ರಲ್ಲಿ ಎದುರಿಸಿ ದಂಡನೆಗೊಳಗಾದದ್ದರ ಪರಿಣಾಮವಾಗಿ ತಿಲಕರ ರಾಜಿಯಿಲ್ಲದ ರಾಷ್ಟ್ರೀಯತಾಪರ ನಿಲವಿನ ಪ್ರಖರತೆ ಪ್ರಕಾಶಗೊಂಡು ಅವರು ಅಗ್ರಪಂಕ್ತಿಯ ಒಬ್ಬ ಜನನಾಯಕರೆಂಬ ಪ್ರತಿಮೆ ಜನರ ಮನಸ್ಸಿನಲ್ಲಿ ಸ್ಥಿರಗೊಳ್ಳುವಂತಾಯಿತು.
ಕ್ಷಾಮ; ಪ್ಲೇಗ್ ಸಾಂಕ್ರಾಮಿಕ
ಬರವಾಗಲಿ, ಸಾಂಕ್ರಾಮಿಕ ಕಾಯಿಲೆಗಳಾಗಲಿ ಭಾರತಕ್ಕೆ ಅಪರಿಚಿತವೇನಲ್ಲ. ಈಚಿನ ಕಾಲದಲ್ಲಿ 1876ರಲ್ಲಿ ಭಾರತದಲ್ಲಿ ಹಲವು ಭಾಗಗಳು ತೀವ್ರ ಬರಗಾಲವನ್ನು ಎದುರಿಸಿದ್ದವು. ಇಂತಹ ಸನ್ನಿವೇಶಗಳಲ್ಲಿ ಸಾಧ್ಯವಿದ್ದಷ್ಟುಮಟ್ಟಿಗೆ ಆಘಾತವನ್ನು ಕನಿಷ್ಠಗೊಳಿಸುವ ಹಲವು ವಿಧಾನಗಳನ್ನು ಸಮಾಜ ಆವಿಷ್ಕರಿಸಿಕೊಂಡಿತ್ತು. ಆದರೆ 19ನೇ ಶತಾಬ್ದದ ಅಂತ್ಯದ ವೇಳೆಗೆ ಜೀವನದ ಎಲ್ಲ ಕ್ಷೇತ್ರಗಳೂ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿದ್ದವು. ಹೀಗಾಗಿ ಒಂದುಕಡೆ ಸರ್ಕಾರದ ಯಾಂತ್ರಿಕ ಮನೋಭೂಮಿಕೆ, ಇನ್ನೊಂದುಕಡೆ ಸಮಾಜದ ನಿಃಸತ್ತ್ವ ಸ್ಥಿತಿ – ಇವು ಪ್ರಕೃತಿವಿಕೋಪ ಸನ್ನಿವೇಶವನ್ನು ಹೆಚ್ಚು ದುರ್ಭರಗೊಳಿಸಿದ್ದವು.
ಕೃಷಿಕಾರ್ಮಿಕರಿಗೆ ನೀಡಲಾಗುತ್ತಿದ್ದ ದಿನಗೂಲಿಯ ಹೆಚ್ಚಳ, ಅಂಚಿನ ಅರಣ್ಯಭಾಗಗಳಲ್ಲಿ ದನಗಳನ್ನು ಮೇಯಿಸಲು ಅವಕಾಶ, ಬರಗಾಲದ ಅವಧಿಯಲ್ಲಿ ಕಂದಾಯದ ದರದ ತಗ್ಗಿಸುವಿಕೆ, ಕಂದಾಯದ ಪಾವತಿಗಾಗಿ ಜಮೀನಿನ ಮತ್ತು ದನಗಳ ಮುಟ್ಟುಗೋಲಿಗೆ ನಿಷೇಧ – ಇಂತಹ ಜನಾಭಿಮುಖ ಕ್ರಮಗಳನ್ನು ಕೈಗೊಳ್ಳುವಂತೆ 1896ರ ಕ್ಷಾಮಕಾಲದಲ್ಲಿ ತಿಲಕರು ಸರ್ಕಾರಕ್ಕೆ ಮನವಿ ಮಾಡಿದರು. ಜಮೀನಿನ ಫಸಲು ಮೂರರಲ್ಲೊಂದು ಭಾಗಕ್ಕೂ ಕಡಮೆ ಇದ್ದೆಡೆಗಳಲ್ಲಿ ಭೂಕಂದಾಯವನ್ನು ರದ್ದುಪಡಿಸಬೇಕು – ಎಂದು ಆಗ್ರಹಿಸಿದರು. ಜನರ ಮಟ್ಟದಲ್ಲಿಯೂ ಶಕ್ಯವಿದ್ದಲ್ಲಿ ಅವರು ಸಂತ್ರಸ್ತರ ನೆರವಿಗೆ ಮುಂದಾಗಬೇಕೆಂದೂ ಸೂಚಿಸಿ ಹಲವಾರೆಡೆ ಈ ದಿಕ್ಕಿನಲ್ಲಿ ಜನಸಮುದಾಯಗಳ ಮನವೊಲಿಸಿದರು.
ದುರದೃಷ್ಟವೆಂದರೆ 1896ರ ಅಂತ್ಯ ಮತ್ತು 1897ರ ಆರಂಭದ ಕಾಲದಲ್ಲಿ ಪಶ್ಚಿಮಭಾರತದಲ್ಲಿ ಕ್ಷಾಮದ ಹಿಂದುಗೂಡಿ ಪ್ಲೇಗ್ ಸಾಂಕ್ರಾಮಿಕವೂ ಅಮರಿಕೊಂಡಿತು. ತಿಲಕರು ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳು ಹೆಚ್ಚು ಸಹಾನುಭೂತಿಪೂರ್ವಕ ವರ್ತಿಸಬೇಕೆಂದು ಆಗ್ರಹಿಸಿದಂತೆಯೇ ಅನಿವಾರ್ಯವಾದಲ್ಲಿ ಕುಟುಂಬಗಳ ಸ್ಥಾನಾಂತರ ಮೊದಲಾದ ಕಾರ್ಯಗಳಲ್ಲಿ ಸರ್ಕಾರದೊಡನೆ ಸಹಕರಿಸುವಂತೆ ಜನತೆಯಲ್ಲಿಯೂ ಮನವಿ ಮಾಡಿಕೊಂಡರು.
ರೋಗನಿಯಂತ್ರಣದ ವ್ಯಾಜದಲ್ಲಿ ಸರ್ಕಾರನಿಯುಕ್ತ ಸೈನಿಕರು ಅನಾವಶ್ಯಕವಾಗಿ ಜನರ ಮನೆಗಳನ್ನು ಹೊಕ್ಕು ಸ್ವೈರಾಚಾರ ನಡೆಸಿದ ಘಟನೆಗಳೂ ಇದ್ದವು. ಹೀಗೆ ಸರ್ಕಾರವು ತಮಗೆ ಶತ್ರುಸ್ಥಾನದಲ್ಲಿ ಇದೆಯೆಂಬ ಭಾವನೆ ಅಲ್ಲಲ್ಲಿ ಹರಡಿದುದು ಸ್ವಾಭಾವಿಕ. ತಿಲಕರಂತೂ ಆಸ್ಪತ್ರೆಗಳ ಸಿಬ್ಬಂದಿಗೆ ಅವಶ್ಯವಿದ್ದಲ್ಲಿ ಜನಸಹಾಯವನ್ನು ಏರ್ಪಡಿಸುವುದು ಮೊದಲಾದ ಕಾರ್ಯಗಳನ್ನು ನಿರಂತರ ನಡೆಸಿದ್ದರು; ಅನಾವಶ್ಯಕವಾಗಿ ಕ್ಷೋಭೆಗೆ ಒಳಗಾಗದಂತೆ ಜನರಲ್ಲಿಯೂ ಪ್ರಚಾರ ನಡೆಸಿದ್ದರು.
ಇಷ್ಟೆಲ್ಲ ಇದ್ದರೂ ಸಮಸ್ಯೆಯ ವ್ಯಾಪ್ತಿಯ ಕಾರಣದಿಂದಾಗಿ ಒಂದಷ್ಟು ಅರಾಜಕತೆ ತಪ್ಪಲಿಲ್ಲ.
ತಿಲಕರು ಸರ್ಕಾರೀ ವ್ಯವಸ್ಥೆಯ ನ್ಯೂನತೆಗಳನ್ನು ಟೀಕಿಸುವಷ್ಟಕ್ಕೆ ತೃಪ್ತರಾಗಲಿಲ್ಲ. ಸೈನಿಕರು ಬಿಡಿಬೀಸಾಗಿ ಖಾಸಗಿ ಮನೆಗಳನ್ನು, ದೇವರ ಕೋಷ್ಠಗಳನ್ನು ಕೂಡಾ ಪ್ರವೇಶಿಸಿ ಹೊಣೆತಪ್ಪಿ ವರ್ತಿಸುತ್ತಿದ್ದುದನ್ನು ತೀಕ್ಷ್ಣವಾಗಿ ಟೀಕಿಸಿದರು. ಆದರೆ ಜೊತೆಜೊತೆಗೆ ಸಾಂಕ್ರಾಮಿಕದ ನಿಯಂತ್ರಣದಲ್ಲಿ ಸರ್ಕಾರೀ ಯಂತ್ರದೊಡನೆ ಸಹಕರಿಸಬೇಕೆಂದು ಜನರಿಗೂ ಕರೆಕೊಟ್ಟರು. ಅನೇಕ ಕಡೆಗಳಲ್ಲಿ ಸೈನಿಕರು ತಪಾಸಣೆಗಾಗಿ ಮನೆಗಳನ್ನು ಹೊಕ್ಕಾಗ ತಾವೇ ಸೈನಿಕರೊಡನೆ ಮನೆಗಳಿಗೆ ಹೋದರು. ಇದಲ್ಲದೆ ಸರ್ಕಾರೀ ವೈದ್ಯಕೀಯ ವ್ಯವಸ್ಥೆಗಳು ಸಾಲದೆಂದು ಗಮನಿಸಿ ಜನರ ನೆರವಿನಿಂದ ತಾವೇ ಒಂದು ಪ್ರತ್ಯೇಕ ಖಾಸಗಿ ಆಸ್ಪತ್ರೆಯನ್ನು ಆರಂಭಿಸಿದರು. ಹೀಗೆ ತಿಲಕರ ದೃಷ್ಟಿ ಸದಾ ರಚನಾತ್ಮಕವಾಗಿ ಇರುತ್ತಿತ್ತು. ಪ್ರತಿದಿನ ತಪ್ಪದೆ ಸರ್ಕಾರೀ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಖುದ್ದಾಗಿ ಭೇಟಿ ನೀಡುತ್ತಿದ್ದರು. ಮನೆಗಳಿಂದ ಸ್ಥಾನಾಂತರಗೊಂಡಿದ್ದವರ ಶಿಬಿರಗಳಿಗೆ ಭೇಟಿಯಿತ್ತು ಆವಶ್ಯಕತೆಯಿದ್ದ ಪರಿಹಾರಕ್ರಮಗಳನ್ನು ಆಯೋಜಿಸಿದರು.
1897ರ ನಡುಭಾಗದ ವೇಳೆಗೆ ಪ್ಲೇಗ್ ಸಾಂಕ್ರಾಮಿಕದ ಹಾವಳಿ ಒಂದಷ್ಟು ತಗ್ಗಿದ್ದಿತು. ಆ ವರ್ಷ ಜೂನ್ 12ಕ್ಕೆ ಶಿವಾಜಿ ಉತ್ಸವಾಚರಣೆ ಆರಂಭಗೊಂಡಿದ್ದು, ಹಲವಾರು ಸಾರ್ವಜನಿಕ ಸಭೆಗಳಲ್ಲಿ ತಿಲಕರೂ ಪ್ರೊ. ಆರ್.ಪಿ. ಪರಾಂಜಪೆಯವರೂ ಶಿವಾಜಿಯ ಚಾರಿತ್ರದ ವಿರುದ್ಧ ಹಲವು ವಲಯಗಳಲ್ಲಿ ಪ್ರಚಲಿತಗೊಂಡಿದ್ದ ಅಪಪ್ರಚಾರವನ್ನು ನಿರಸ್ತಗೊಳಿಸಿ ಶಿವಾಜಿಯ ಹಿರಿಮೆಯನ್ನೂ ಅನನ್ಯತೆಯನ್ನೂ ಕುರಿತು ಜನರಿಗೆ ಮನವರಿಕೆ ಮಾಡಿಸುವ ಅಭಿಯಾನ ನಡೆಸಿದರು. ಶಿವಾಜಿಯು ಅಫಜಲನನ್ನು ಕೊಂದದ್ದು ದ್ರೋಹವಲ್ಲವೆಂದೂ ಅದು ಸ್ವಧರ್ಮರಕ್ಷಣೆಯ ಕ್ರಮವಾಗಿತ್ತೆಂದೂ ಪ್ರಖರವಾಗಿ ತಿಲಕರು ಪ್ರತಿಪಾದಿಸಿದರು.
ಆ ಸಂದರ್ಭಗಳಲ್ಲಿ ತಿಲಕರು ಮಾಡಿದ ಭಾಷಣಗಳು ‘ದೇಶದ್ರೋಹ’ವೆಂದು ಹಲವು ಆ್ಯಂಗ್ಲೊ-ಇಂಡಿಯನ್ ಪತ್ರಿಕೆಗಳು ಟೀಕಿಸಿದವು. ತಿಲಕರು ಆ ಟೀಕೆಗಳನ್ನು ಅಲ್ಲಗಳೆದು ತಾವು ‘ಕೇಸರಿ’ ಮತ್ತು ‘ಮರಾಠಾ’ ಪತ್ರಿಕೆಗಳಲ್ಲಿ ಬರೆದಿದ್ದ ಲೇಖನಗಳನ್ನು ಸಮರ್ಥಿಸಿಕೊಂಡರು. ದೇಸೀ ಪತ್ರಿಕೆಗಳಲ್ಲಿನ ಲೇಖನಗಳ ಕಿಂಚಿದ್ ವಿಕೃತ ಅನುವಾದಗಳೂ ಆಂಗ್ಲ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಪ್ಲೇಗ್ ನಿಯಂತ್ರಕ ಕ್ರಮಗಳಲ್ಲಿ ಉನ್ನತ ಅಧಿಕಾರಿಗಳು ಜವಾಬ್ದಾರಿಯಿಂದ ವರ್ತಿಸುತ್ತಿದ್ದರೂ ಕೆಳಗಿನ ಸ್ತರಗಳವರು ಹೊಣೆತಪ್ಪಿ ನಡೆದುಕೊಳ್ಳುತ್ತಿದ್ದುದಕ್ಕೆ ತಿಲಕರು ಗಮನ ಸೆಳೆದಿದ್ದರು.
ಈ ಸಂಗತಿಗಳ ಹಿನ್ನೆಲೆಯಲ್ಲಿ ಹಾಗೂ ತಿಲಕರು ತಾವೇ ಕೈಗೊಂಡಿದ್ದ ರಚನಾತ್ಮಕ ಕಾರ್ಯಗಳ ಹಿನ್ನೆಲೆಯಲ್ಲಿ ತಿಲಕರ ಬರಹಗಳು ಜನತೆಯಲ್ಲಿ ಅಸಮಾಧಾನವನ್ನೂ ದ್ವೇಷಭಾವನೆಯನ್ನೂ ಹುಟ್ಟುಹಾಕುತ್ತಿದ್ದವೆಂಬ ಆರೋಪಗಳನ್ನು ತಿಲಕರು ಅಲ್ಲಗಳೆದರು; ಮತ್ತು ತಮ್ಮ ‘ಕೇಸರಿ’ ಬರಹಗಳಿಗಾಗಿ ತಾವು ಪೂರ್ಣ ಹೊಣೆಗಾರಿಕೆ ವಹಿಸಿರುವುದಾಗಿ ಪ್ರಕಟಿಸಿದರು. ಸಾಂದರ್ಭಿಕವಾಗಿ ‘ದೇಶದ್ರೋಹ’ ಎಂಬ ಕಲ್ಪನೆಯ ಹಿನ್ನೆಲೆ-ಮುನ್ನೆಲೆಗಳನ್ನು ಕುರಿತೂ ವ್ಯಾಖ್ಯೆ ಮಾಡಿದರು.
ಕಾಕತಾಳೀಯವೆಂಬಂತೆ ಅದೇ ಸನ್ನಿವೇಶದಲ್ಲಿಯೇ (27 ಜೂನ್ 1877) ಪುಣೆಯಲ್ಲಿ ಮದೋನ್ಮತ್ತ ಅಸಿಸ್ಟೆಂಟ್ ಕಲೆಕ್ಟರ್ ರ್ಯಾಂಡನ ಮತ್ತು ಅವನ ಅಧೀನ ಅಧಿಕಾರಿಯ ಹತ್ಯೆ ನಡೆಯಿತು.
‘ದೇಶದ್ರೋಹ’
ತಿಲಕರನ್ನು ದಂಡನೆಗೆ ಒಳಪಡಿಸಬೇಕೆಂಬ ಸರ್ಕಾರದ ಉದ್ದೇಶ ಜೂನ್ ತಿಂಗಳಲ್ಲಿ ನಡೆದ ಹತ್ಯೆಗಳ ಹಿನ್ನೆಲೆಯದು ಮಾತ್ರವಾಗಿರಲಿಲ್ಲ. ತಿಲಕರ ‘ಕೇಸರಿ’ಯೂ ಸೇರಿದಂತೆ ಪ್ರಮುಖ ದೇಶೀಯ ಪತ್ರಿಕೆಗಳು ಸರ್ಕಾರೀ ನಡಾವಳಿಗಳನ್ನು ತೀಕ್ಷ್ಣವಾಗಿ ಟೀಕಿಸುತ್ತ ಬಂದಿದ್ದವು. ಅಸಂದಿಗ್ಧ ಜನನಾಯಕರೆಂಬ ಪ್ರತಿಷ್ಠಿತತೆ ತಿಲಕರಿಗೆ ಪ್ರಾಪ್ತವಾಗಿದ್ದುದರಿಂದ ಸಾರ್ವತ್ರಿಕ ಅಸಮಾಧಾನಕ್ಕೂ ತಿಲಕರಿಗೂ ಸರ್ಕಾರವು ಸಂಬಂಧವನ್ನು ಕಲ್ಪಿಸಿತು. ಪ್ರಭುತ್ವದ ಧೋರಣೆಗಳ ಬಗೆಗೆ ತಿಲಕರ ನಿಲವುಗಳಂತೂ ದೀರ್ಘಕಾಲದಿಂದ ಜನಜನಿತವಾಗಿದ್ದವು. ಹೀಗಾಗಿ ತಿಲಕರನ್ನು ದಂಡನೆಗೆ ಒಳಪಡಿಸಿದರೆ ಸಮಾಜದಲ್ಲಿ ಅಸಂತುಷ್ಟಿಯ ತೀಕ್ಷ್ಣತೆ ಕಡಮೆಯಾದೀತು ಎಂಬುದು ಸರ್ಕಾರದ ಪ್ರಮುಖರ ಆಲೋಚನೆ ಇದ್ದಿತು. ಆದರೆ ತಿಲಕರನ್ನು ದಂಡನೆಗೆ ಒಳಪಡಿಸಿದುದರ ಪರಿಣಾಮ ಸರ್ಕಾರದ ನಿರೀಕ್ಷೆಗೆ ಪೂರ್ಣ ವಿರುದ್ಧವೇ ಆಯಿತು ಎಂಬುದು ಇತಿಹಾಸ.
ಸರ್ಕಾರದ ಚಿಂತನೆಯ ದಿಶೆಯನ್ನು ಎತ್ತಿತೋರಿಸುವ ಒಂದು ಸಂಗತಿಯೆಂದರೆ: ಹಲವಾರು ಅನ್ಯ ಪತ್ರಿಕೆಗಳು ಸರ್ಕಾರೀ ಧೋರಣೆಗಳನ್ನು ತಿಲಕರಿಗಿಂತ ಉಗ್ರವಾಗಿ ಟೀಕಿಸುತ್ತಿದ್ದವು. ಹೀಗಿದ್ದರೂ ತಿಲಕರ ಮತ್ತು ಅವರ ಪತ್ರಿಕೆಗಳ ಮೇಲೆಯೇ ಸರ್ಕಾರದ ಗೃಧ್ರದೃಷ್ಟಿ ಕೇಂದ್ರೀಕೃತವಾಯಿತು. ಸಾಮಾಜಿಕ ಸ್ತರದಲ್ಲಿ ತಿಲಕರ ಬಗೆಗೆ ವಿರುದ್ಧ ಭಾವನೆಯನ್ನೇ ತಳೆದಿದ್ದ ವಲಯಗಳ ‘ಸುಧಾರಕ’, ‘ಜ್ಞಾನಪ್ರಕಾಶ್’ ಮೊದಲಾದ ಪತ್ರಿಕೆಗಳು ರ್ಯಾಂಡನ ಆಡಳಿತ ವೈಖರಿಯ ಬಗೆಗೆ ತಿಲಕರಿಗಿಂತ ಹೆಚ್ಚು ತೀಕ್ಷ್ಣವಾಗಿ ಬರೆಯುತ್ತಿದ್ದವು. ಆದರೂ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರವು ಮುಂದಾಗಲಿಲ್ಲ. ಆ ದಿನಗಳ ಆಸುಪಾಸಿನಲ್ಲಿಯೇ ಅಮರಾವತಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ತಿಲಕರ ಮೇಲೆ ಮಾಡಲಾಗಿದ್ದ ‘ದೇಶದ್ರೋಹ’ದ ಆರೋಪವು ನಿರಾಧಾರವೆಂದೂ ತಾವು ತಿಲಕರನ್ನು ಸಮರ್ಥಿಸುತ್ತಿರುವುದಾಗಿಯೂ ಸುರೇಂದ್ರನಾಥ ಬ್ಯಾನರ್ಜಿ ಘೋಷಿಸಿದಾಗ ಇಡೀ ಸಭೆಯೇ ಅದನ್ನು ಸೋದ್ಗಾರವಾಗಿ ಅನುಮೋದಿಸಿತು.
ಯಾವ ಸಭೆಯಲ್ಲಿ ಶಿವಾಜಿ ಕುರಿತು ತಿಲಕರು ಆಡಿದ್ದ ಮಾತುಗಳು ಆರೋಪಣೆಯ ವಿಷಯವಾಗಿದ್ದವೋ ಆ ಮಾತುಗಳ ಆಶಯವನ್ನು ತಿಲಕರೊಡನೆ ಸಹಮತವಿರದಿದ್ದ ಪ್ರೊ. ಸಿ.ಜಿ. ಭಾನು ಮೊದಲಾದವರೂ ಪೂರ್ಣವಾಗಿ ಸಮರ್ಥಿಸಿದರು. ತಿಲಕರು ತಮ್ಮ ಆಪಾದಿತ ಭಾಷಣದಲ್ಲಿ ಮಂಡಿಸಿದ್ದ ವಾದವೆಂದರೆ: ಶಿವಾಜಿಯು ಅಫಜಲನನ್ನು ಹನನಮಾಡಿದ ಸಂದರ್ಭವನ್ನು ಪರಿಶೀಲಿಸುವಾಗ ಸಂಗತವಾದದ್ದು ಕಾನೂನಿನ ಅಥವಾ ಅದಕ್ಕೂ ಹಿಂದಿನ ಸ್ಮøತಿಗಳ ಹೇಳಿಕೆಗಳು ಅಲ್ಲವೇ ಅಲ್ಲವೆಂದು; ಅದು ಸಾಮಾನ್ಯ ಸನ್ನಿವೇಶೌಚಿತ್ಯದ ದೃಷ್ಟಿಯಿಂದ ಅವಲೋಕಿಸಬೇಕಾದುದು ಎಂದು. ದೃಷ್ಟಾಂತವಾಗಿ ತಿಲಕರು ಶತ್ರುಸ್ಥಾನದಲ್ಲಿರುವ ಆಚಾರ್ಯರುಗಳನ್ನೂ ಬಂಧುಗಳನ್ನೂ ಕೂಡಾ ಸಂಹರಿಸುವಂತೆ ಕೃಷ್ಣನು ಅರ್ಜುನನಿಗೆ ನೀಡಿದ ಆಜ್ಞಾಪನೆಯನ್ನು ಉಲ್ಲೇಖಿಸಿದರು. ಶಿವಾಜಿಯಲ್ಲಿ ಯಾವುದೇ ಸ್ವಾರ್ಥದ ಆರೋಪ ಮಾಡಲು ಆಸ್ಪದವೇ ಇಲ್ಲವೆಂಬುದಕ್ಕೂ ತಿಲಕರು ಗಮನ ಸೆಳೆದಿದ್ದರು.
ತಿಲಕರ ವಿರುದ್ಧ ಅಧಿಕಾರಾರೂಢ ಪ್ರಭುತ್ವವು ಮೊಕದ್ದಮೆಯನ್ನು ದಾಖಲೆ ಮಾಡಿದುದು ‘ರಾಜದ್ರೋಹ’ದ ಆರೋಪದ ನಿಮಿತ್ತ. ಆದರೆ ಸರ್ಕಾರದ ರೀತಿಗಳನ್ನು ತಿಲಕರು ಎಷ್ಟೇ ಪ್ರಖರವಾಗಿ ಟೀಕಿಸಿದ್ದರೂ ಅದು ‘ರಾಜದ್ರೋಹ’ವೆಂದು ಪರಿಗಣಿಸುವುದು ನ್ಯಾಯಸಮ್ಮತವಾಗದೆಂದು ದೇಶದ ಪ್ರಮುಖರೆಲ್ಲರ ಪ್ರತಿಕ್ರಿಯೆ ಇದ್ದಿತು. ಪ್ರಕರಣವು ಉದ್ಭವಿಸಿದ ತಿಲಕರ ಜೂನ್ 15ರ ಲೇಖನವನ್ನು ಬ್ರಿಟಿಷ್ ಅಧಿಕಾರಿಗಳು ತಾಂತ್ರಿಕವಾಗಿ ವಿಶ್ಲೇಷಿಸಿದಾಗಲೂ ರಾಜದ್ರೋಹದ ಆಪಾದನೆಗೆ ಗಟ್ಟಿ ಆಧಾರಗಳು ಕಾಣಲಿಲ್ಲ. ಆದರೂ ಅಧಿಕಾರಬಲವನ್ನು ಪ್ರಯೋಗಿಸಿ ಸರ್ಕಾರವು ತಿಲಕರನ್ನು ಅಪರಾಧಿಯನ್ನಾಗಿ ಮಾಡಿ ಮೊಕದ್ದಮೆಯನ್ನು ಮುಂದುವರಿಸಿತು. ವಿಚಾರಣೆಯಲ್ಲಿ ಶಿವಾಜಿ-ಅಫಜಲ್ಖಾನ್ ಪ್ರಸಂಗ ಮೊದಲಾದವನ್ನು ತಿಲಕರು ಪ್ರಸ್ತಾವಿಸಿದುದು ಇತಿಹಾಸದ ಸ್ಮರಣೆಯ ರೀತಿಯಲ್ಲಿಯೆ ಹೊರತು ಅದು ಜನತೆಯಲ್ಲಿ ಪ್ರಭುತ್ವದ ಬಗೆಗೆ ನಿಷ್ಠೆಯನ್ನು ತೊರೆಯುವಂತೆ ನೀಡಿದ ಕರೆ ಎಂಬುದಾಗಿ ಅರ್ಥೈಸುವುದು ನಿರಾಧಾರವೆಂದು ತಾರ್ಕಿಕವಾಗಿ ಮಂಡಿಸಲಾಯಿತು. ಆದರೂ ಪರ್ಯವೇಕ್ಷಕರ (ಜ್ಯೂರಿ) ಬಹುಮತ ಅಭಿಪ್ರಾಯವನ್ನು ಅನುಸರಿಸಿ 1897ರ ಸೆಪ್ಟೆಂಬರ್ 14ರಂದು ತಿಲಕರನ್ನು ದೋಷಿ ಎಂದು ನ್ಯಾಯಾಧೀಶರು ತೀರ್ಪನ್ನಿತ್ತು 18 ತಿಂಗಳ ಸಶ್ರಮ ಬಂಧನವನ್ನು ವಿಧಿಸಿದರು.
ಅದರ ಬಗೆಗೆ ಸಲ್ಲಿಸಲಾದ ಮೇಲರ್ಜಿಯನ್ನು ಪ್ರಿವಿ ಕೌನ್ಸಿಲ್ ತಿರಸ್ಕರಿಸಿ ತೀರ್ಪನ್ನು ಎತ್ತಿಹಿಡಿಯಿತು.
ಮುಂಬಯಿ ಜೈಲಿನಲ್ಲಿ ಬಂಧಿಸಲಾದ ತಿಲಕರನ್ನು ಕೆಲ ದಿನಗಳ ತರುವಾಯ ಯೆರವಾಡ ಜೈಲಿಗೆ ಸ್ಥಳಾಂತರಿಸಲಾಯಿತು. ಏತನ್ಮಧ್ಯೆ ತಿಲಕರ ಆರೋಗ್ಯ ಹದಗೆಡುತ್ತಿತ್ತು. ಅವರು ಬಂಧನದಲ್ಲಿದ್ದಾಗಲೇ ತಿಲಕರನ್ನು ಶೀಘ್ರವಾಗಿ ಬಂಧಮುಕ್ತಗೊಳಿಸಬೇಕೆಂದು ಸರ್ಕಾರಕ್ಕೆ ದಾದಾಭಾಯಿ ನವರೋಜಿ, ರಮೇಶಚಂದ್ರ ದತ್ತ ಮೊದಲಾದ ಭಾರತದ ಜನನಾಯಕರಲ್ಲದೆ ಮ್ಯಾಕ್ಸ್ಮುಲ್ಲರ್, ವಿಲಿಯಂ ಹಂಟರ್, ರಿಚರ್ಡ್ ಗಾರ್ಥ್ ಮೊದಲಾದ ಐರೋಪ್ಯ ಧೀಮಂತರೂ ಮನವಿ ಸಲ್ಲಿಸಿದರು.
ಅದೇ ದಿನಗಳಲ್ಲಿ ರ್ಯಾಂಡ್ ಹತ್ಯೆಗೆ ಸಂಬಂಧಿಸಿದಂತೆ ಚಾಫೇಕರ್ ಬಂಧುಗಳ ವಿರುದ್ಧ ಮೊಕದ್ದಮೆ ಮುಗಿದು ಅವರಿಗೆ ಮರಣದಂಡನೆ ವಿಧಿಸಲಾಗಿದ್ದು ಆ ಪ್ರಕರಣದಲ್ಲಿ ತಿಲಕರ ಪಾತ್ರ ಇರಲಿಲ್ಲವೆಂಬುದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿಯೂ ಮ್ಯಾಕ್ಸ್ಮುಲ್ಲರ್ ಮೊದಲಾದವರ ಆಗ್ರಹದಿಂದಲೂ ಸರ್ಕಾರವು ತಿಲಕರನ್ನು ಬಂಧನದ ಅವಧಿಗೆ ಆರು ತಿಂಗಳು ಮೊದಲೇ (6 ಸೆಪ್ಟೆಂಬರ್ 1898) ಬಿಡುಗಡೆ ಮಾಡಿತು. ಬಿಡುಗಡೆಗೆ ತಿಲಕರು ಯಾವುದೇ ಸಾರ್ವಜನಿಕ ಅಭಿನಂದನೋತ್ಸವದಲ್ಲಿ ಪಾಲ್ಗೊಳ್ಳಬಾರದೆಂಬ ಷರತ್ತನ್ನು ವಿಧಿಸಲಾಗಿತ್ತು.
“ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು; ಅದನ್ನು ನಾನು ಪಡೆದೇ ತೀರುವೆ” ಎಂಬ ಇತಿಹಾಸಾರ್ಹ ಘೋಷವಾಕ್ಯವನ್ನು ತಿಲಕರು ರೂಪಿಸಿದುದು ಆ ದಿನಗಳಲ್ಲಿಯೇ.
‘ಕೇಸರಿ’ ಪತ್ರಿಕೆ
ಅದಾದ ಹತ್ತು ತಿಂಗಳು ಕಳೆದ ಮೇಲೆ (4 ಜುಲೈ 1899) ತಿಲಕರು ‘ಕೇಸರಿ’ ಪತ್ರಿಕೆಯ ಅಧಿಕೃತ ಸಂಪಾದಕತ್ವವನ್ನು ವಹಿಸಿಕೊಂಡರು.
‘ಕೇಸರಿ’ ಪತ್ರಿಕೆಯ ಪೂರ್ಣ ಹೊಣೆಗಾರಿಕೆಯನ್ನು ವಹಿಸಿಕೊಂಡ ಮೇಲೆ ತಿಲಕರ ಬೌದ್ಧಿಕ ತೀಕ್ಷ್ಣತೆಯ ಪ್ರಕಾಶಕ್ಕೆ ಹೆಚ್ಚು ಅವಕಾಶವಾಯಿತು. ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿದ್ಯಮಾನಗಳನ್ನು ಆಗಿಂದಾಗ ವಿಶ್ಲೇಷಿಸುವುದು ಅನಿವಾರ್ಯವೇ ಆಯಿತು. ಆಂಗ್ಲ ದಮನಶಾಹಿಯನ್ನು ಸಂದರ್ಭವಿದ್ದಾಗಲೆಲ್ಲ ಪ್ರತಿಭಟಿಸುವುದಂತೂ ಇದ್ದೇ ಇದ್ದಿತು. ಇದರ ಜೊತೆಜೊತೆಗೇ ಸಾರ್ವಜನಿಕ ಹಿತಾಸಕ್ತಿಯ ಯಾವುದೇ ವಿಷಯವನ್ನು ಅಲಕ್ಷಿಸುವಂತಿರಲಿಲ್ಲ.
ಇಂತಹ ಸಾಂದರ್ಭಿಕ ವಿಶ್ಲೇಷಣೆಗಳನ್ನು ಒಂದು ವ್ಯಾಪಕ ಜನವರ್ಗ ತಿಲಕರಿಂದ ಅಪೇಕ್ಷಿಸುತ್ತಿದ್ದಿತು. ಕಾರಣವೆಂದರೆ ಮಹಾರಾಷ್ಟ್ರ ಮಾತ್ರವಲ್ಲದೆ ಅನ್ಯರಾಜ್ಯಗಳಲ್ಲಿಯೂ ‘ಕೇಸರಿ’ ಪತ್ರಿಕೆಗೆ ತುಂಬಾ ದೊಡ್ಡ ಪ್ರಮಾಣದ ವಾಚಕವರ್ಗ ಬೆಳೆದಿದ್ದಿತು. ಎಷ್ಟುಮಟ್ಟಿಗೆ ಎಂದರೆ ‘ಕೇಸರಿ’ ಪತ್ರಿಕೆಯಲ್ಲಿ ಮೂಡುತ್ತಿದ್ದ ತಿಲಕರ ಬರಹಗಳನ್ನು ಅನ್ಯಭಾಷಿಕ ಓದುಗರಿಗೆ ತಲಪಿಸುವುದಕ್ಕಾಗಿಯೇ ಪತ್ರಿಕೆಗಳು ಹುಟ್ಟಿಕೊಂಡವು; ಆ ಪತ್ರಿಕೆಗಳ ಸಂಚಿಕೆಗಳಿಗಾಗಿ ಓದುಗರು ಚಾತಕಪಕ್ಷಿಗಳಂತೆ ಕಾದಿರುತ್ತಿದ್ದರು. ಮುದ್ರಣಸೌಕರ್ಯಗಳು ಹೆಚ್ಚಾಗಿ ಇರದಿದ್ದ ಆ ದಿನಗಳಲ್ಲಿ ಒಬ್ಬ ಓದುಗ ಒಂದು ಪ್ರತಿಯನ್ನು ಸಂಗ್ರಹಿಸಿದರೆ ಸ್ಥಳೀಯ ಆಸಕ್ತತಂಡಗಳಲ್ಲಿ ಹತ್ತಾರು ಮಂದಿ ಗುಂಪು ಸೇರಿ ಯಾರೋ ಒಬ್ಬರಿಂದ ತಿಲಕರ ಲೇಖನದ ತರ್ಜುಮೆಯನ್ನು ಓದಿಸಿ ಕೇಳುತ್ತಿದ್ದರು. ಹೀಗೆ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸುವುದರಲ್ಲಿಯೂ ತಿಲಕರ ‘ಕೇಸರಿ’ ಪತ್ರಿಕೆಯ ದೊಡ್ಡ ಪಾತ್ರವಿದ್ದಿತು. ಕರ್ನಾಟಕದಲ್ಲಿಯೂ ಹರ್ಡೇಕರ ಮಂಜಪ್ಪನವರು ತಿಲಕರ ಬರಹಗಳನ್ನು ಕನ್ನಡದ ಓದುಗರಿಗೆ ಮುಟ್ಟಿಸುವುದಕ್ಕಾಗಿಯೇ ‘ಧನುರ್ಧಾರಿ’ ಯಶಸ್ವಿ ಪತ್ರಿಕೆಯನ್ನು ನಡೆಸಿದರು.
ತಿಲಕರ ಬರಹಗಳಲ್ಲಿ ಇರುತ್ತಿದ್ದುದು ರಾಜಕೀಯ ಮಾತ್ರವಲ್ಲ. ಕೃಷಿ, ಕಂದಾಯ ಇಲಾಖೆಗಳ ಸ್ಥಿತಿಗತಿಗಳು, ವಿದೇಶೀ ಹಣ ವಿನಿಮಯ ಪರಿಸ್ಥಿತಿ – ಇಂತಹ ನಾಲ್ಕಾರು ವಿಷಯಗಳ ಬಗೆಗೆ ತಿಲಕರ ಬೋಧಕ ಬರಹಗಳು ಇರುತ್ತಿದ್ದವು. ಸಾಹಿತ್ಯಾಭಿರುಚಿಯು ಉಳಿದ ಹಲವು ರಾಜ್ಯಗಳಿಗಿಂತ ಮೇಲ್ಮಟ್ಟದಲ್ಲಿದ್ದ ಮಹಾರಾಷ್ಟ್ರದಲ್ಲಿಯೂ ‘ಕೇಸರಿ’ಗೆ ಹೋಲಿಸಬಹುದಾದ ಪತ್ರಿಕೆ ಬೇರೊಂದು ಇರಲಿಲ್ಲ. ಒಂದು ವಿಶಿಷ್ಟತೆಯೆಂದರೆ ತಿಲಕರ ಬರಹಗಳು ತಾತ್ತ್ವಿಕ ಮೀಮಾಂಸೆಗಷ್ಟೆ ಮಿತಗೊಳ್ಳದೆ ತತ್ಕಾಲೀನ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜನತೆ ಏನು ಮಾಡಬಹುದು ಎಂಬ ಕಾರ್ಯಸೂಚನೆಯೂ ಆ ಬರಹಗಳಲ್ಲಿ ಇರುತ್ತಿದ್ದಿತು. ಹೀಗೆ ಖಡ್ಗಕ್ಕಿಂತ ಲೇಖನಿ ಹೆಚ್ಚು ಶಕ್ತವೆಂಬ ನಾಣ್ನುಡಿಗೆ ಪ್ರಖರ ನಿದರ್ಶನವಾಗಿದ್ದಿತು ‘ಕೇಸರಿ’ ಪತ್ರಿಕೆ.
1903ರಲ್ಲಿ ತಿಲಕರ ಅದ್ವಿತೀಯ ಶೋಧಕೃತಿ ‘ದಿ ಆರ್ಕ್ಟಿಕ್ ಹೋಮ್ ಇನ್ ದಿ ವೇದಾಸ್’ ಪ್ರಕಟವಾದ ಮೇಲಂತೂ ನಾಡಿನ ಶ್ರೇಷ್ಠ ವಿದ್ವಾಂಸರ ಪಂಕ್ತಿಯಲ್ಲಿ ಅವರ ಸ್ಥಾನವು ಸ್ಥಿರಗೊಂಡಿತು.
1899ರಿಂದ ಆಚೆಯ ವರ್ಷಗಳಲ್ಲಿ ‘ಕೇಸರಿ’ ಪತ್ರಿಕೆಯ ಮೂಲಕ ಪ್ರವಾಹಸದೃಶವಾಗಿ ಹೊಮ್ಮಿದ ತಿಲಕರ ಪ್ರಖರ ರಾಷ್ಟ್ರೀಯತಾಪರ ಬರಹಗಳು ಭಾರತದ ಮೂಲೆಮೂಲೆಗಳನ್ನು ತಲಪಿ ದೇಶದಲ್ಲಿಯೆ ಪ್ರಮುಖ ಜನಜಾಗೃತಿಮಾಧ್ಯಮವೆನಿಸಿದವು. ಈ ಹಿನ್ನೆಲೆಯಲ್ಲಿ ಹಾಗೂ ಕಾಂಗ್ರೆಸ್ ಕಲಾಪಗಳಲ್ಲಿ ಅವರು ತೋರಿದ ಸಕ್ರಿಯತೆಯಿಂದಾಗಿ 1900ರಿಂದಾಚೆಗೆ ಸಹಜವಾಗಿ ತಿಲಕರು ಅಗ್ರಣಿ ರಾಷ್ಟ್ರನಾಯಕರೆನಿಸಿದರು. 1905ರ ನಡುಭಾಗದ ವೇಳೆಗೆ ತಿಲಕರಿಗೆ ಅದುವರೆಗಿನ ನಾಯಕತ್ವದ ಮನವಿದಾರಿಕೆಯ ಮಾರ್ಗದ ಬಗೆಗೆ ಭ್ರಮನಿರಸನವಾಗಿತ್ತು. 1905ರ ಅಕ್ಟೋಬರಿನಲ್ಲಿ ವೈಸರಾಯ್ ಕರ್ಜನನೆಸಗಿದ ವಂಗವಿಭಜನೆಯ ದುಃಸಾಹಸವಂತೂ ಕಾಂಗ್ರೆಸಿನೊಳಗಿನ ಸೌಮ್ಯಮಾರ್ಗಿಗಳನ್ನೂ ತಳಮಳಗೊಳಿಸಿತು.
ಕಾಂಗ್ರೆಸ್ ಸಂಸ್ಥೆಯಲ್ಲಿ
ಕಾಂಗ್ರೆಸ್ ಸಂಸ್ಥೆಯ ಆರಂಭದ ದಿನಗಳಿಂದ ಅದರ ಕಲಾಪಗಳನ್ನು ತಿಲಕರು ಗಮನಿಸುತ್ತಿದ್ದರು. ಹಲವಾರು ವರ್ಷ ಕಾಂಗ್ರೆಸ್ ಕಾರ್ಯಾವಳಿ ಮನವಿದಾರಿಕೆಗೇ ಮಿತವಾಗಿದ್ದದ್ದು ಸುವಿದಿತ. ಆ ಅವಧಿಯಲ್ಲಿ ತಿಲಕರು ಕಾಂಗ್ರೆಸಿನ ಪ್ರಾಂತೀಯ ಸಮಾವೇಶಗಳಲ್ಲಿ ಹೆಚ್ಚು ಆಸಕ್ತಿ ತಳೆದಿದ್ದರು. ಜವಳಿ ಮಾರಾಟ ಸುಂಕದ ಇಳಿತ ಮೊದಲಾದ ಹಲವು ಗೌಣ ಸಾಧನೆಗಳಷ್ಟೆ ಕಾಂಗ್ರೆಸಿನಿಂದ ಶಕ್ಯವಾಗಿದ್ದಿತು.
1895-96ರ ದಿನಗಳಲ್ಲಿಯೆ ತಿಲಕರು ಕಾಂಗ್ರೆಸ್ ಸಂಸ್ಥೆ ಹೆಚ್ಚು ಸಕ್ರಿಯಗೊಳ್ಳಬೇಕೆಂಬ ತಮ್ಮ ಆಶಯವನ್ನು ಸ್ಫುಟರೂಪದಲ್ಲಿ ಪ್ರಕಟಗೊಳಿಸತೊಡಗಿದ್ದರು. ಮೊದಲ ಹೆಜ್ಜೆಯಾಗಿ ಕಾಂಗ್ರೆಸ್ ವರ್ಷದಲ್ಲೊಮ್ಮೆ ಮಾತ್ರ ಸಮಾವೇಶ ನಡೆಸಿ ಸುಪ್ತವಾಗುಳಿದರೆ ಸಾಲದು, ಸಾಂಪ್ರತ ವಿಷಮ ಸನ್ನಿವೇಶದಲ್ಲಿ ಕಾಂಗ್ರೆಸ್ ಸತತ ಕಾರ್ಯಶೀಲವಾಗಿರಬೇಕು – ಎಂದು ‘ಕೇಸರಿ’ ಪತ್ರಿಕೆಯಲ್ಲಿ ತೀಕ್ಷ್ಣವಾಗಿ ಬರೆದರು.
ಸ್ವಾತಂತ್ರ್ಯಪರ ಹೋರಾಟ ಸಾಂವಿಧಾನಿಕ ಮಾರ್ಗದಲ್ಲಿಯೆ ನಡೆಯಬೇಕೆಂಬ ಗೋಖಲೆ ನಾಯಕತ್ವದ ಸೌಮ್ಯಮಾರ್ಗಿಗಳ ಧೋರಣೆಗೆ ಅಸಮ್ಮತಿ ಸೂಚಿಸಿ ತಿಲಕರು ಕಾಂಗ್ರೆಸ್ ಸಂಸ್ಥೆಯ ಅಸ್ತಿತ್ವ ಸಾರ್ಥಕಗೊಳ್ಳಬೇಕಾದರೆ ಹೆಚ್ಚು ಶಕ್ತಿವಂತ ಕ್ರಮಗಳನ್ನು ಕೈಗೊಳ್ಳತೊಡಗಬೇಕು ಎಂದು 1907ರಲ್ಲಿ ಕಾಂಗ್ರೆಸ್ ವೇದಿಕೆಯಲ್ಲಿಯೆ, ಸೂರತ್ ಅಧಿವೇಶನದಲ್ಲಿ ಪ್ರತಿಪಾದಿಸಿದುದು, ಸೌಮ್ಯಮಾರ್ಗಿಗಳಿಗೂ ತೀಕ್ಷ್ಣಮಾರ್ಗಿಗಳಿಗೂ ನಡುವೆ ಸಂಘರ್ಷವೇರ್ಪಟ್ಟದ್ದು ಮೊದಲಾದ ವಿದ್ಯಮಾನಗಳು ಸುವಿದಿತ.
ಸೂರತ್ ಅಧಿವೇಶನ; ಹೋಳಾದ ಕಾಂಗ್ರೆಸ್
ಕಾಂಗ್ರೆಸಿನ ಆಗಿನ ಮುಖ್ಯಧಾರೆಯ ನೇತಾರರು ರೂಢಿಗತ ಮೆದುಮಾರ್ಗದಿಂದ ಬದಿಗೆ ಸರಿದು ಕಾಂಗ್ರೆಸ್ ಸಂಘಟನೆಯನ್ನು ಹೆಚ್ಚು ಚೈತನ್ಯಪೂರ್ಣಗೊಳಿಸುವ ದಿಶೆಯಲ್ಲಿ ಹೆಜ್ಜೆಯಿರಿಸುವುದರಲ್ಲಿ ಆಸಕ್ತಿ ತಳೆಯುವ ಲಕ್ಷಣ ತೋರದಿದ್ದಾಗ ತಿಲಕರು ಕಾಂಗ್ರೆಸಿನ ಅಧಿಕೃತ ಅಧಿವೇಶನದಲ್ಲಿಯೆ ಪಂಥಾಹ್ವಾನ ನೀಡಲು ನಿರ್ಣಯಿಸಿದರು. ವಾಸ್ತವವಾಗಿ ಈ ದಿಕ್ಕಿನ ಪರಿವರ್ತನೆಯ ಆವಶ್ಯಕತೆಯನ್ನು ಕೋಲ್ಕತಾ ಅಧಿವೇಶನದ ಅಧ್ಯಕ್ಷಪೀಠದಿಂದಲೇ (1906)ದಾದಾಭಾಯಿ ನವರೋಜಿ ಘೋಷಿಸಿದ್ದರು; ಭಾರತ ಭಿಕ್ಷೆ ಬೇಡುತ್ತಿಲ್ಲವೆಂದೂ ಬ್ರಿಟಿಷರಿಂದಾಗುತ್ತಿದ್ದ ಆರ್ಥಿಕ ಶೋಷಣೆಯೂ ಸೇರಿದಂತೆ ಎಲ್ಲ ಸಮಸ್ಯೆಗಳಿಗೂ
ಸ್ವರಾಜ್ಯ ಮಾತ್ರ ಪರಿಹಾರ ನೀಡಬಲ್ಲದೆಂದೂ ಸಾರಿದ್ದರು. ಆದರೆ ಆ ಹಿರಿಯ ಗಣ್ಯರು ನೀಡಿದ ಆವಾಹನೆಯೂ ಕಾಂಗ್ರೆಸಿನ ಧೋರಣೆಯಲ್ಲಿ ಬದಲಾವಣೆ ತಂದಿರಲಿಲ್ಲ; ಯಥಾಸ್ಥಿತಿ ಮುಂದುವರಿದಿತ್ತು. ಈ ಸನ್ನಿವೇಶದಲ್ಲಿ ಮನವಿದಾರ ಮನೋವೃತ್ತಿಯ ಸೌಮ್ಯಮಾರ್ಗಿಗಳ ಮೇಲೆ ಪ್ರಹಾರವೆಸಗಿದವರು ತಿಲಕ್.
ಬಗೆಬಗೆಯ ತಂತ್ರಗಾರಿಕೆಗಳು ನಡೆದಿದ್ದವು. ತಿಲಕರ ಸಲಹೆಯಂತೆ ಲಾಲಾ ಲಜಪತ್ರಾಯ್ ಸೂರತ್ ಅಧಿವೇಶನದ ಅಧ್ಯಕ್ಷರಾಗುವುದನ್ನು ಸೌಮ್ಯಮಾರ್ಗಿಗಳು ತಪ್ಪಿಸಿ ತಮ್ಮ ದೃಷ್ಟಿಕೋನಕ್ಕೆ ಅನುಕೂಲಕರರಾಗಿದ್ದ ರಾಸಬಿಹಾರಿ ಘೋಷ್ರನ್ನು ಅಧ್ಯಕ್ಷಸ್ಥಾನಕ್ಕೆ ನಿಯುಕ್ತಿ ಮಾಡಿದ್ದರು. ಇದರ ಔಚಿತ್ಯವನ್ನು ವೇದಿಕೆಯಿಂದ ಪ್ರಶ್ನಿಸುವುದರೊಂದಿಗೇ ತಿಲಕರ ಸಮರ ಉಪಕ್ರಮಗೊಂಡಿತು.
ಈ ಸಂಘರ್ಷ ಅನಿವಾರ್ಯವೇ ಆಗಿತ್ತು. ಸಾಮಾನ್ಯ ಕಾರ್ಯಕರ್ತ ಬಣಗಳ ನಡುವೆ ‘ತೂತೂ-ಮೈಮೈ’ ಧಾರಾಳವಾಗಿಯೆ ನಡೆಯಿತು. ಚಪ್ಪಲಿ ತೂರಾಟದಿಂದ ಕುರ್ಚಿ ಎಸೆದಾಟದವರೆಗೆ ಎಲ್ಲವೂ ನಡೆಯಿತು.
ಫಲಶ್ರುತಿಯಾಗಿ ಸೌಮ್ಯಮಾರ್ಗಿಗಳೂ ಪ್ರಖರವಾದಿಗಳೂ ಪ್ರತ್ಯೇಕ ಸಮಾವೇಶಗಳನ್ನು ಆಯೋಜಿಸಲೆಳಸಿದರು. ಸೌಮ್ಯಮಾರ್ಗಿಗಳ ಸಮಾವೇಶ ಜನರಿಲ್ಲದೆ ಭಣಗುಡುತ್ತಿತ್ತು. ಶ್ರೀ ಅರವಿಂದರ ಬಣದವರು ಸಂಘಟಿಸಿದ ಪ್ರಖರವಾದಿಗಳ ಸಮಾವೇಶದಲ್ಲಿ ಜನ ಕಿಕ್ಕಿರಿದಿದ್ದರು.ಅದೊಂದು ಖೇದಕರ ಪರ್ವ. ಆದರೆ ಇತಿಹಾಸಗತಿ ತಿಲಕರ ಪರವಾಗಿದ್ದಿತು.
ವಾಸ್ತವವಾಗಿ ಕಾಂಗ್ರೆಸ್ ಇಬ್ಭಾಗವಾಗುವುದನ್ನು ತಿಲಕರು ಇಚ್ಛಿಸಿರಲಿಲ್ಲ. ಆ ದಿನಗಳ ರಾಷ್ಟ್ರಮಟ್ಟದ ಪ್ರಮುಖ ವೇದಿಕೆಯಾಗಿದ್ದ ಕಾಂಗ್ರೆಸ್ ಅಖಂಡವಾಗಿ ಉಳಿಯಬೇಕೆಂದೂ ಅದು ಕಾಲದ ಕರೆಗೆ ಸ್ಪಂದಿಸಿ ಹೆಚ್ಚಿನ ಸಕ್ರಿಯತೆಯನ್ನು ಮೈಗೂಡಿಸಿಕೊಂಡು ಮುಂದುವರಿಯಬೇಕೆಂದೂ ತಿಲಕರು ಬಯಸಿದ್ದರು. ಆದರೆ ಕಾಂಗ್ರೆಸಿನ ಬಂಡಿಜಾಡಿನ ನಾಯಕತ್ವ ಸ್ಪಂದನಹೀನವಾಗಿದ್ದುದರಿಂದ ಬಿರುಕು ಅನಿವಾರ್ಯವಾಯಿತು.
ಸೂರತ್ ‘ಬಿರುಕಿನ’ ಹಿಂದುಗೂಡಿದ ಕೆಲವೇ ವರ್ಷಗಳಲ್ಲಿ ತಿಲಕರ ನಿಲುಮೆಯನ್ನೇ ಶಿಥಿಲಿತ ರೂಪದಲ್ಲಿ ಗಾಂಧಿ ನೇತೃತ್ವದ ಕಾಂಗ್ರೆಸ್ ಅಳವಡಿಸಿಕೊಳ್ಳಬೇಕಾಯಿತು. (ಆದರೆ ಆ ಪರ್ವಕಾಲದಿಂದಾಚೆಗೆ ಮನೋಬಲದ ಹಾಗೂ ದಾಢ್ರ್ಯದ ಕೊರತೆಯಿಂದಾಗಿ ಹೊಸ ನಾಯಕತ್ವವು ಕ್ರಮೇಣ ದುರ್ಬಲಗೊಂಡು ಮಾರ್ಗಚ್ಯುತಗೊಂಡಿತು; ಅದು ಬೇರೆಯ ಕಥೆ.)
1915ರಲ್ಲಿ ಗಾಂಧಿ ಭಾರತಕ್ಕೆ ಮರಳಿದರು. ಅವರನ್ನು ಭಾರತದ ಸನ್ನಿವೇಶಕ್ಕೆ ಶ್ರುತಿಗೊಳಿಸಿದವರು ತಿಲಕರೇ. ಆ ಹಂತದಲ್ಲಿ ಗಾಂಧಿ ಇನ್ನೂ ಬ್ರಿಟಿಷ್ ನಂಟಸ್ತಿಕೆಯ ಮೋಹದಿಂದ ಹೊರಬಂದಿರಲಿಲ್ಲ; ಎಷ್ಟುಮಟ್ಟಿಗೆಂದರೆ ಮಹಾಯುದ್ಧ ಸಂದರ್ಭದಲ್ಲಿ ಬ್ರಿಟಿಷರಿಗೆ ನೆರವಾಗಲು ಭಾರತೀಯರು ಹೆಚ್ಚು ಸಂಖ್ಯೆಯಲ್ಲಿ ಸೇನೆಗೆ ಸೇರಬೇಕೆಂದು ಕರೆ ನೀಡಿದ್ದರು. (ಯಾರೂ ಕಿವಿಗೊಡಲಿಲ್ಲವೆಂಬುದು ಬೇರೆ ವಿಷಯ.) ತಿಲಕರು ಮುಗುಳ್ನಕ್ಕು ಗಾಂಧಿಯವರಿಗೆ ಕಚಗುಳಿಯಿಡುವಂತೆ ಹೇಳಿದ್ದರು:
“ನೀವು ಇನ್ನು ಸ್ವಲ್ಪ ಕೈಸುಟ್ಟುಕೊಂಡ ಮೇಲೆ ಬ್ರಿಟಿಷರ ಬಗೆಗೆ ನಿಮಗಿರುವ ಭರವಸೆಯನ್ನು ಕೈಬಿಡುವಿರಿ.”
ಕಾಂಗ್ರೆಸಿನ ವಿಷಯನಿರ್ಣಾಯಕ ಸಮಿತಿಯ ಸದಸ್ಯರಾಗಿ (1916) ಗಾಂಧಿಯವರ ಆಯ್ಕೆಗೆ ನೆರವಾಗುವ ಮೂಲಕ ತಿಲಕರು ಕಾಂಗ್ರೆಸಿನಲ್ಲಿ ಗಾಂಧಿಯವರ ಪಾಲ್ಗೊಳ್ಳುವಿಕೆಗೆ ದಾರಿಮಾಡಿದರು.
ಮತ್ತೆ ‘ರಾಜದ್ರೋಹ’; ಸೆರೆವಾಸ
1908ರ ಉತ್ತರಾರ್ಧದಲ್ಲಿ ತಿಲಕರು ಬರೆದ ‘ದೇಶದ ದೌರ್ಭಾಗ್ಯ’ ಮತ್ತು ‘ಈ ಉಗುರುಬೆಚ್ಚಗಿನ ಕ್ರಮಗಳು ದೀರ್ಘಕಾಲೀನ ಪರಿಹಾರಗಳಾಗಲಾರವು’ ಎಂಬ ಎರಡು ಲೇಖನಗಳನ್ನು ವ್ಯಾಜವಾಗಿಸಿಕೊಂಡು ‘ರಾಜದ್ರೋಹ’ದ ಆಪಾದನೆಗೊಳಪಡಿಸಿ ಬ್ರಿಟಿಷ್ ನ್ಯಾಯಾಲಯವು ತಿಲಕರಿಗೆ ಆರು ವರ್ಷಗಳ ಗಡೀಪಾರು ಶಿಕ್ಷೆ ವಿಧಿಸಿ ದೂರದ ಬರ್ಮದ (ಈಗಿನ ಮಯನ್ಮಾರ್) ಮಾಂಡಲೆ ಕಾರಾಗೃಹಕ್ಕೆ ಅವರನ್ನು ರವಾನಿಸಿತು.
ಮಾಂಡಲೆ ಕಾರಾಗೃಹವಾಸದಲ್ಲಿದ್ದಾಗಲೆ ತಿಲಕರು ಇಂದಿಗೂ ಪ್ರಸಿದ್ಧವಾಗಿರುವ ಅವರ ‘ಗೀತಾರಹಸ್ಯ’ ಕೃತಿಯನ್ನು ರಚಿಸಿದುದು. ಗೀತಾವ್ಯಾಖ್ಯಾನದಂತಹ ಸಾರಸ್ವತಕಾರ್ಯದ ಮೂಲಕ ತಿಲಕರು ಇಡೀ ದೇಶವನ್ನು ಸ್ವಾತಂತ್ರ್ಯಾಭಿಮುಖಗೊಳಿಸಿದುದು ಒಂದು ಐತಿಹಾಸಿಕ ಘಟನೆ.
ತಿಲಕರ ಐದೂವರೆ ವರ್ಷ ವಾಸ್ತವ್ಯದಿಂದಾಗಿ ಮಾಂಡಲೆ ಕಾರಾಗೃಹ ದೇಶಭಕ್ತರಿಗೆ ತೀರ್ಥಕ್ಷೇತ್ರವೆನಿಸಿತು. ಅದಾದ ಮೂರು ದಶಕಗಳು ಕಳೆದ ಮೇಲಿನ ವರ್ಷಗಳಲ್ಲಿ ಆಗ್ನೇಯ ಏಷ್ಯದಲ್ಲಿ ಆಜಾದ್ ಹಿಂದ್ ಫೌಜನ್ನು ಸಂಘಟಿಸುತ್ತಿದ್ದ ಸಮಯದಲ್ಲಿ ಯೋಜನೆ ಮಾಡಿಕೊಂಡು ಮಾಂಡಲೆ ಕಾರಾಗೃಹಕ್ಕೆ ಭೇಟಿ ನೀಡಿದ ಸುಭಾಷ್ಚಂದ್ರ ಬೋಸ್ “ತಿಲಕರ ಸ್ಮರಣೆಯಿಂದ ಪುನೀತವಾದ ಮಾಂಡಲೆ ಸೆರೆಮನೆಯ ದರ್ಶನ ಮಾಡಿದ್ದು ನನ್ನ ಜೀವನದ ಒಂದು ಅವಿಸ್ಮರಣೀಯ ಘಟನೆಯಾಯಿತು” ಎಂದಿದ್ದಾರೆ.
ಅವಿರತ ಜನಜಾಗರಣ
ಕಾರಾಗೃಹವಾಸದ ಅವಧಿ ಮುಗಿದ ಮೇಲೆ ತಿಲಕರು ಭಾರತಕ್ಕೆ ಹಿಂದಿರುಗಿದುದು 1914ರ ಜೂನ್ ತಿಂಗಳ ನಡುಭಾಗದಲ್ಲಿ. ಆಗ ಅವರ ವಯಸ್ಸು ಇನ್ನೂ 58. ಆದರೆ ನಿರಂತರ ಶ್ರಮ-ಆಯಾಸಗಳಿಂದಾಗಿ ಅವರ ದೇಹಸ್ವಾಸ್ಥ್ಯ ಹದಗೆಟ್ಟಿತ್ತು. ಆ ಜರ್ಜರಿತ ಸ್ಥಿತಿಯಲ್ಲಿಯೂ ಅವರು ‘ಹೋಂ ರೂಲ್’ ಆಂದೋಲನ, ಸ್ವದೇಶೀ ಪ್ರವರ್ತನ ಮೊದಲಾದ ವಿವಿಧ ಮುಖಗಳಲ್ಲಿ ರಾಷ್ಟ್ರಜೀವನವನ್ನು ಚೇತಃಪೂರ್ಣಗೊಳಿಸುವ ಉದ್ಯಮಗಳನ್ನು ಅವಿರತವಾಗಿ ಮುಂದುವರಿಸಿದರು.
ತಿಲಕರು ಸ್ವಭಾವತಃ ದಾರ್ಶನಿಕರಾಗಿದ್ದರು.
1914-15ರ ದಿನಗಳಲ್ಲಿ ಇಂಗ್ಲೆಂಡ್ ಮಹಾಯುದ್ಧದಲ್ಲಿ ತೊಡಗಿದ್ದ ಸಂದರ್ಭವನ್ನು ಬಳಸಿಕೊಂಡು ಬಂಡಾಯ ನಡೆಸಿ ಬ್ರಿಟಿಷ್ ಸರ್ಕಾರವನ್ನು ಅಸ್ವಸ್ಥಗೊಳಿಸಬೇಕೆಂದು ಹಲವಾರು ಮಂದಿ ಮಾಡಿದ ಸಲಹೆಯನ್ನು ತಿಲಕ್ ತಿರಸ್ಕರಿಸಿ ಹೇಳಿದರು: “ಇಂತಹ ಅಪಮಾರ್ಗಗಳನ್ನು ನಾನು ಬೆಂಬಲಿಸಲಾರೆ. ನಮ್ಮ ಹೋರಾಟ ರಾಜಮಾರ್ಗದಲ್ಲಿಯೇ ನಡೆಯಬೇಕೆಂಬುದು ನನ್ನ ದೃಢವಾದ ನಿಲವು.”
1914ರಲ್ಲಿ – ಪ್ರಮುಖವಾಗಿ ಆ್ಯನಿ ಬೆಸೆಂಟರ ಮಧ್ಯಸ್ಥಿಕೆಯ ಫಲವಾಗಿ – ತಿಲಕರ ಬಣವೂ ಗೋಖಲೆ ನೇತೃತ್ವದ ಬಣವೂ ತಮ್ಮ ಅಭಿಪ್ರಾಯಭೇದಗಳನ್ನು ಬದಿಗೆ ಸರಿಸಿ ಕಾಂಗ್ರೆಸನ್ನು ಬಲಪಡಿಸುವ ಯತ್ನಗಳಲ್ಲಿ ತೊಡಗಿದವು. 1915ರ ಫೆಬ್ರುವರಿ 15ರಂದು ಗೋಖಲೆಯವರ ನಿಧನವಾದದ್ದು ದೇಶವನ್ನು ಶೋಕಾಕುಲವಾಗಿಸಿತು.
1915ರ ಉತ್ತರಾರ್ಧದಲ್ಲಿ ಆ್ಯನಿ ಬೆಸೆಂಟ್ ಆರಂಭಿಸಿದ ‘ಹೋಂ ರೂಲ್’ ಆಂದೋಲನವನ್ನು ತಿಲಕ್ ಬೆಂಬಲಿಸಿದುದಲ್ಲದೆ ಹಲವು ತಿಂಗಳ ತರುವಾಯ ತಾವೇ ‘ಇಂಡಿಯನ್ ಹೋಂ ರೂಲ್ ಲೀಗ್’ ಸಂಘಟನೆಯನ್ನೂ ಆರಂಭಿಸಿ ಆ ವೇದಿಕೆಯ ಮೂಲಕ ಸ್ವರಾಜ್ಯಪರ ಚಟುವಟಿಕೆಗಳನ್ನು ತೀವ್ರಗೊಳಿಸಿದರು. 1915ರ ಮೇ ತಿಂಗಳಲ್ಲಿ ತಿಲಕರು ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಗೆ ಆಗಮಿಸಿ ಉದ್ಬೋಧಕ ಭಾಷಣ ಮಾಡಿದುದೂ ಆ ‘ಹೋಂ ರೂಲ್’ ಆಂದೋಲನದ ಭಾಗವಾಗಿ.
ಆ್ಯನಿ ಬೆಸೆಂಟರ ಪ್ರಖರ ವಕ್ತೃತ್ವ ಜನರನ್ನು ಸಂಮೋಹಗೊಳಿಸಿದರೆ ತಿಲಕರ ಚೌಕಾಶಿಯಿಲ್ಲದ ನೇರ ಮಾತೂ ನಿರ್ಭೀತಿಯೂ ಜನರನ್ನು ಆಕರ್ಷಿಸುತ್ತಿದ್ದವು.
ಅನಾರೋಗ್ಯದ ದುರ್ಬಲ ದೇಹಸ್ಥಿತಿಯಲ್ಲಿಯೂ ತಿಲಕರು ಪ್ರತಿದಿನ ಎರಡರಂತೆ 1916ರ ಆರಂಭದ ದಿನಗಳಲ್ಲಿ ವ್ಯಾಪಕ ಪ್ರವಾಸ ಮಾಡಿ ಎಂಬತ್ತಕ್ಕೂ ಹೆಚ್ಚು ಸ್ವರಾಜ್ಯಪರ ಭಾಷಣಗಳನ್ನು ಮಾಡಿದುದು ಅವರ ಪ್ರಚಂಡ ಮನೋಬಲಕ್ಕೆ ಸಾಕ್ಷಿ.
ತಿಲಕರ ಅರವತ್ತೊಂದನೇ ಜನ್ಮದಿನ ಸಂದರ್ಭದಲ್ಲಿ 1916ರ ಜುಲೈ 23ರಂದು ಪುಣೆಯ ಗಾಯಕವಾಡ್ವಾಡೆಯಲ್ಲಿ ಭವ್ಯ ಸಮಾರಂಭ ಆಯೋಜಿತವಾಗಿ ತಿಲಕರಿಗೆ ಮಾನಪತ್ರ ಅರ್ಪಣೆ, ಒಂದು ಲಕ್ಷ ರೂ.ಗಳ ಹಮ್ಮಿಣಿ ನೀಡಿಕೆ ನಡೆದವು. ದೇಶದೆಲ್ಲೆಡೆಗಳಿಂದ ಜನ ಬಂದು ಸೇರಿದ್ದರು.
ವಿಧಿವೈಕಟ್ಯವೆಂಬಂತೆ ಆ ಸಮಾರಂಭ ನಡೆದಿದ್ದ ಸಮಯದಲ್ಲಿಯೆ ತಿಲಕರು ಅಹಮದ್ನಗರ ಬೆಳಗಾವಿಗಳಲ್ಲಿ ಮಾಡಿದ್ದ ಭಾಷಣಗಳನ್ನು ನೆವ ಮಾಡಿಕೊಂಡು ಸರ್ಕಾರ ಅವರ ಮೇಲೆ ಎಂದಿನಂತೆ ‘ರಾಜದ್ರೋಹ’ದ ಆಪಾದನೆ ಹೊರಿಸಿ ಖಟ್ಲೆ ಜಾರಿಮಾಡಿತು. “ಓ, ಬ್ರಿಟಿಷ್ ಸರ್ಕಾರವೂ ನನ್ನ ಷಷ್ಟ್ಯಬ್ದವನ್ನು ಆಚರಿಸುತ್ತಿದೆ ಎಂದಂತಾಯಿತು” ಎಂದು ತಿಲಕರು ಸ್ಥಿತಪ್ರಜ್ಞತೆಯಿಂದ ಹಾಸ್ಯವಾಡಿದರು.
ಆದರೆ ನ್ಯಾಯಾಲಯದಲ್ಲಿ ಮೊಕದ್ದಮೆ ನಿಲ್ಲದೆ ಬಿದ್ದುಹೋಯಿತು. ತಿಲಕರ ಪರವಾಗಿ ವಕಾಲತ್ತು ನಡೆಸಿ ಪ್ರಖರವಾಗಿ ವಾದ ಮಾಡಿದವರು ಬ್ಯಾರಿಸ್ಟರ್ ಮಹಮ್ಮದಾಲಿ ಜಿನ್ನಾ.
1916ರ ಡಿಸೆಂಬರಿನಲ್ಲಿ ಲಖ್ನೌನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ತಿಲಕರು ಭಾಗವಹಿಸಿ ಸ್ವರಾಜ್ಯಪ್ರೇಮಿಗಳೆಲ್ಲ ಕಾಂಗ್ರೆಸಿನ ಮೂಲಕ ಏಕಮುಖವಾಗಿ ಕೆಲಸ ಮಾಡಬೇಕಾದುದು ಕಾಲದ ಕರೆಯಾಗಿದೆ ಎಂದು ಮನವಿ ಮಾಡಿದರು. ಕಾಂಗ್ರೆಸಿನೊಳಗಿನ ‘ನರ್ಮ್ ದಲ’ – ‘ಗರಮ್ ದಲ’ ಬಿರುಕು ಈ ವೇಳೆಗೆ ಉಪಶಮನಗೊಂಡಿತ್ತು.
ಇಂಗ್ಲೆಂಡ್ ಪ್ರವಾಸ
ವ್ಯಾಲೆಂಟೀನ್ ಶಿರೋಲ್ ಎಂಬ ಆಂಗ್ಲ ಲೇಖಕ ಭಾರತದೊಳಗಿನ ಸ್ವಾತಂತ್ರ್ಯಪರ ಸಂಘರ್ಷ ಕೆಲವರೇ ‘ಉಚ್ಚವರ್ಣ’ದವರ ಕರಾಮತ್ತು, ತಿಲಕರೇ ಆ ಅಸಂತೋಷದ ಜನಕ – ಎಂದೆಲ್ಲ ಅಪಲಾಪ ಮಾಡಿ ಪುಸ್ತಕ ಬರೆದಿದ್ದುದು ತಿಲಕರು ಮಾಂಡಲೆ ಸೆರೆಯಿಂದ ಮುಕ್ತರಾದೊಡನೆ (1914) ಅವರ ಗಮನಕ್ಕೆ ಬಂದಿತ್ತು. ಅನಂತರ ಹೋಂ ರೂಲ್ ಆಂದೋಲನ ಮೊದಲಾದ ಚಟುವಟಿಕೆಗಳಲ್ಲಿ ಅವರು ಪೂರ್ಣ ಮಗ್ನರಾಗಿದ್ದರು. ಆದರೆ ಸ್ವಾತಂತ್ರ್ಯಸಂಘರ್ಷವನ್ನೇ ಅಪಹಾಸ್ಯ ಮಾಡಿದ್ದ ಶಿರೋಲನ ಪುಸ್ತಕಕ್ಕೆ ಯುಕ್ತ ಪ್ರತಿಕ್ರಿಯೆ ನೀಡಲೇಬೇಕೆಂದು ಅವರ ಅಂತರಂಗದಲ್ಲಿ ಒತ್ತಡವಿದ್ದಿತು. ಇದಕ್ಕೆ ಸಮಯ ಕೂಡಿಬಂದದ್ದು 1918ರಲ್ಲಿ. ಶಿರೋಲ್ ವಿರುದ್ಧ ಮಾನನಷ್ಟ ಮೊಕದ್ದಮೆ ನಡೆಸುವುದು ಮಾತ್ರವಲ್ಲದೆ ಇಂಗ್ಲೆಂಡಿನೊಳಗಿನ ಚಿಂತಕವಲಯಗಳಿಗೆ ಭಾರತದ ಸ್ವಾತಂತ್ರ್ಯಾರ್ಹತೆಯನ್ನು ಮನವರಿಕೆ ಮಾಡಿಕೊಡುವ ಉದ್ದೇಶವೂ, ಅಲ್ಲಿಯ ಲೇಬರ್ ಪಕ್ಷವನ್ನು ಬೆಂಬಲಿಸುವ ಉದ್ದೇಶವೂ ಇದ್ದದ್ದರಿಂದ ತಿಲಕರು ಅನಾರೋಗ್ಯವನ್ನು ಲೆಕ್ಕಿಸದೆ ಇಂಗ್ಲೆಂಡ್ ಪ್ರವಾಸ ಕೈಗೊಂಡರು.
ಇಂಗ್ಲೆಂಡಿನ ಸಂಸದೀಯ ಸಮಿತಿಯನ್ನು ಉದ್ದೇಶಿಸಿಯೂ ಭಾರತ ಸ್ವಾತಂತ್ರ್ಯ ಪರವಾಗಿ ನಿವೇದನೆ ಮಾಡಲು ತಿಲಕರ ಇಂಗ್ಲೆಂಡ್ ಭೇಟಿ ಅನುಕೂಲಕರವಾಯಿತು.
ಸಾಮ್ರಾಜ್ಯಶಾಹಿಯ ಅನುಬಂಧವೇ ಆಗಿದ್ದ ಬ್ರಿಟಿಷ್ ನ್ಯಾಯಾಲಯದಲ್ಲಿ ತಿಲಕರಿಗೆ ನ್ಯಾಯ ದೊರೆಯದಿದ್ದುದು ಸ್ವಾಭಾವಿಕವೇ ಆಗಿತ್ತು. ಆದರೆ ನೈತಿಕ ವಿಜಯ ತಿಲಕರದೇ ಆಗಿತ್ತು. ವ್ಯಾಲೆಂಟೀನ್ ಶಿರೋಲನೇ ಕೆಲವು ವರ್ಷಗಳ ತರುವಾಯ ಬರೆದ ಇನ್ನೊಂದು ಪುಸ್ತಕದಲ್ಲಿ ಲೋಕಮಾನ್ಯ ತಿಲಕರ ಅಸಾಮಾನ್ಯ ವ್ಯಕ್ತಿತ್ವವನ್ನು ಮುಕ್ತವಾಗಿ ಪ್ರಶಂಸೆ ಮಾಡಿದ.
ಒಂದು ವಿವರ ಸ್ವಾರಸ್ಯಕರ. ‘ಭಾರತದ ಅಸಂತೋಷದ ಜನಕ’ ಎಂದು ನಿಂದಾರ್ಥಕವಾಗಿ ಶಿರೋಲನು ಬಳಸಿದ್ದ ಪದಪುಂಜವು ಅನಂತರದ ಕಾಲದುದ್ದಕ್ಕೂ ಪ್ರಶಂಸಾರ್ಥಕವಾಗಿಯೆ ಬಳಕೆಯಾಯಿತು!
ಪಥದರ್ಶನ
ಭಯೋತ್ಪಾದಕತೆಯ ನಿವಾರಣೆಯ ವ್ಯಾಜದಲ್ಲಿ ಎಲ್ಲ ನಾಗರಿಕ ಹಕ್ಕುಗಳನ್ನು ನಿರಸ್ತಗೊಳಿಸಿ ಸರ್ಕಾರವು ‘ವಿರೋಧಿ’ಗಳೆಂದು ಪರಿಗಣಿಸಿದ ಯಾರನ್ನು ಬೇಕಾದರೂ ಯಾವುದೇ ಕಾನೂನುಕ್ರಮಗಳಿಲ್ಲದೆ ದಂಡಿಸುವ ಅವಕಾಶ ಕಲ್ಪಿಸಿದ ಕುಪ್ರಸಿದ್ಧ ರೌಲಟ್ ಶಾಸನ (18-3-1919), ಅದರ ಹಿಂದುಗೂಡಿ ನಡೆದ ಜಲಿಯನ್ವಾಲಾಬಾಗ್ ಹತ್ಯಾಕಾಂಡ (13-4-1919) ಘಟನಾವಳಿ ಸ್ವಾತಂತ್ರ್ಯ ಸಂಘರ್ಷಕ್ಕೆ ನಿರ್ಣಾಯಕ ತಿರುವನ್ನು ನೀಡಿದುದು ಸರ್ವವಿದಿತವಿದೆ.
ಅಭಿಪ್ರಾಯಭಿನ್ನತೆ ಇದ್ದರೂ ಯಾವುದೇ ರಾಷ್ಟ್ರೀಯತಾಪರ ಪ್ರಯತ್ನಗಳನ್ನು ಬೆಂಬಲಿಸುವುದು ತಿಲಕರ ರಕ್ತಗತ ಪ್ರವೃತ್ತಿಯಾಗಿತ್ತು. ನಿದರ್ಶನಕ್ಕೆ: ಗಾಂಧಿಯವರ ಸತ್ಯಾಗ್ರಹ ಕಲ್ಪನೆಯ ಬಗೆಗೆ ಸಹಾನುಭೂತಿ ತೋರಿದರೂ ತಿಲಕರು ತಮ್ಮ ವಾಸ್ತವ ಪ್ರಜ್ಞೆಯನ್ನು ಶಿಥಿಲಗೊಳಿಸಲಿಲ್ಲ. ಸತ್ಯಾಗ್ರಹತಂತ್ರವು ಎಲ್ಲ ಸಂದರ್ಭಗಳಲ್ಲಿಯೂ ಸಫಲವಾಗದಿರಬಹುದೆಂದು ಅವರು ಗಾಂಧಿಯವರನ್ನು ಎಚ್ಚರಿಸದಿರಲಿಲ್ಲ. 1920ರ ಜನವರಿ 18ರಂದು ಗಾಂಧಿಯವರಿಗೆ ಬರೆದ ಪತ್ರದಲ್ಲಿ ತಿಲಕರು ಹೀಗೆಂದಿದ್ದರು:
“Politics is a game of worldly people and not of sadhus, and instead of the maxim ‘Anger should be won over with love’, as preached by Buddha, I prefer to rely on the maxim of Srikrishna who said ‘I treat humans equally when they seek refuge in me’. ….Both methods are equally honest and righteous but one is more suited to this world than the other. Further explanation can be found in my ‘Gita-rahasya’.”
1920ರ ಮೇ 27ರಂದು ಗಾಂಧಿ ತಮ್ಮ ಅಸಹಕಾರ ಚಳವಳಿಯನ್ನು ಘೋಷಿಸಿದರು.
1920ರ ಜುಲೈ 24ರಂದು ಪುಣೆಯಲ್ಲಿ ತಿಲಕರ 64ನೇ ಜನ್ಮದಿನೋತ್ಸವ ಜರುಗಿತು. ಅದಾದ ಕೂಡಲೆ ಅವರು ಗಾಂಧಿಯವರೊಡನೆ ಸಮಾಲೋಚನೆಗಾಗಿ ಮುಂಬಯಿಗೆ ತೆರಳಿದರು. ಜುಲೈ 26ರ ವೇಳೆಗೆ ತೀವ್ರ ಜ್ವರಕ್ಕೆ ತುತ್ತಾದರು. ಜ್ವರವು ನ್ಯೂಮೋನಿಯಾಕ್ಕೆ ತಿರುಗಿತು. ಅದರಿಂದ ಅವರು ಚೇತರಿಸಿಕೊಳ್ಳಲೇ ಇಲ್ಲ. ಮಂಪರಿನಲ್ಲಿಯೂ ಅರೆಪ್ರಜ್ಞಾವಸ್ಥೆಯಲ್ಲಿ ಭಾರತದ ಭವಿಷ್ಯ ಕುರಿತೂ, ಕಾಂಗ್ರೆಸ್ ಅಧಿವೇಶನ ವ್ಯವಸ್ಥೆಗಳನ್ನು ಕುರಿತೂ ಮಾತನಾಡಲು ಯತ್ನಿಸುತ್ತಿದ್ದರು. ಜುಲೈ 31 – ಆಗಸ್ಟ್ 1ರ ನಡುರಾತ್ರಿ ಸ್ವಾತಂತ್ರ್ಯ ಸಂಘರ್ಷದಲ್ಲಿ ‘ತಿಲಕ್ ಯುಗ’ಕ್ಕೆ ಜವನಿಕೆ ಇಳಿಬಿದ್ದಿತು.
‘ಲೋಕಮಾನ್ಯ’
ತಿಲಕರು ಲೋಕಮಾನ್ಯರೆನಿಸಿದುದು ಅವರ ಸ್ವಾತಂತ್ರ್ಯಪರ ಹೋರಾಟದಂತಹ ಯಾವುದೋ ಪ್ರತ್ಯೇಕ ಕಾರಣಗಳಿಂದಷ್ಟೆ ಅಲ್ಲ. ಅವರ ವ್ಯಕ್ತಿಗುಣಗಳ ಶ್ರೀಮಂತಿಕೆಯೇ ಅವರನ್ನು ಲೋಕಮಾನ್ಯರಾಗಿಸಿದುದು.
ಒಂದು ದೃಷ್ಟಿಯಿಂದ ನೋಡುವಾಗ ತಿಲಕರಲ್ಲಿ ಇದ್ದಷ್ಟು ನಾಯಕತ್ವಗುಣಗಳನ್ನು ಪಡೆದಿದ್ದವರು ತೀರಾ ವಿರಳವೆನ್ನಬೇಕು. ಪ್ರಖರ ಸ್ವದೇಶೀ ಸಮರ್ಥಕರಾಗಿದ್ದ ಅವರಿಂದ ಪಾನನಿರೋಧ, ವೈದ್ಯಕೀಯ ಸೇವೆ, ಸ್ವದೇಶೀ ಉದ್ಯಮಗಳು – ಹೀಗೆ ಹಲವಾರು ಕ್ಷೇತ್ರಗಳಿಗೆ ಯೋಗದಾನ ಸಂದಿತು. ಜೆಮ್ಶೇಡ್ಜೀ ತಾತಾ ಸಂಸ್ಥಾಸಮೂಹದ ಔದ್ಯಮೀಕರಣಪ್ರಯತ್ನಗಳಿಗೆ ಒತ್ತಾಸೆ ನೀಡಿದವರು ತಿಲಕರು.
ತಿಲಕರಿಂದ ದೋಹದ ಪಡೆದ ರಾಷ್ಟ್ರೀಯತಾಪರ ಪ್ರಯತ್ನಗಳೂ ವ್ಯಕ್ತಿಗಳೂ ಲೆಕ್ಕವಿಲ್ಲದಷ್ಟು. ಸಾವರಕರರ ವಿದೇಶವ್ಯಾಸಂಗಕ್ಕಾಗಿ ಶ್ಯಾಮ್ಜೀ ಕೃಷ್ಣವರ್ಮರ ಮೂಲಕ ವ್ಯವಸ್ಥೆ ಮಾಡಿದವರು ತಿಲಕರು. ಖಂಡಾಂತರಗಳಲ್ಲಿ ಭಾರತೀಯ ಸಂಸ್ಕøತಿಯ ಪ್ರಚಾರ ಮಾಡುವಂತೆ ರವೀಂದ್ರನಾಥ ಠಾಕೂರರನ್ನು ಪ್ರೋತ್ಸಾಹಿಸಿ ಅದಕ್ಕಾಗಿ ಗಣನೀಯ ಪ್ರಮಾಣದ ಹಣವನ್ನೂ ತಾವಾಗಿ ನೀಡಿದವರು ತಿಲಕರು. ಅಮೆರಿಕದಲ್ಲಿ ಭಾರತಸ್ವಾತಂತ್ರ್ಯಪರವಾಗಿ ಕಾರ್ಯ ಮಾಡುತ್ತಿದ್ದ ಲಾಲಾ ಲಜಪತ್ರಾಯ್ ಮತ್ತು ನಾ.ಸು. ಹರ್ಡೀಕರ್ ಅವರಿಗೆ ತಿಲಕರು ಹಣ ಕಳಿಸಿದರು. ಅಷ್ಟೇಕೆ, ಇಂಗ್ಲೆಂಡಿನಲ್ಲಿನ ಲೇಬರ್ ಪಕ್ಷದ ಮುನ್ನಡೆಯು ಭಾರತಕ್ಕೆ ಅನುಕೂಲಕರವಾಗಲಿದೆಯೆಂಬ ದೃಷ್ಟಿಯಿಂದ ಇಂಗ್ಲೆಂಡಿನ ಲೇಬರ್ ಪಕ್ಷಕ್ಕೂ ತಿಲಕರು ದೊಡ್ಡ ದೇಣಿಗೆ ನೀಡಿದರು.
ಹೀಗೆ ತಿಲಕರು ಲೋಕಮಾನ್ಯರೆನಿಸಿದುದು ಅವರ ಬಹುಮುಖ ಕಾರ್ಯವಂತಿಕೆಯಿಂದ.
ರಾಜಕೀಯ ಕ್ಷೇತ್ರದಲ್ಲಂತೂ ತಿಲಕರ ಓಜಸ್ವಿತೆಗೆ ಹೋಲಿಸಬಹುದಾದ ವ್ಯಕ್ತಿ ಅವರ ಸಮಕಾಲೀನರಲ್ಲಿಯೆ ಅನ್ಯರಿರಲಿಲ್ಲವೆಂದರೆ ಅತ್ಯುಕ್ತಿಯಾಗದು; ಅನಂತರದ ನೂರು ವರ್ಷಗಳಲ್ಲಿಯೂ ಅಂತಹ ನಾಯಕಶ್ರೇಷ್ಠರನ್ನು ಭಾರತ ಕಂಡಿಲ್ಲ. ಡಾ. ಆರ್.ಪಿ. ಪರಾಂಜಪೆಯವರು ಉದ್ಗರಿಸಿದಂತೆ: “ತಮ್ಮ ಕೊನೆಯ ಇಪ್ಪತ್ತು ವರ್ಷಗಳಲ್ಲಿ ತಿಲಕರು ದೇಶದ ಅನಭಿಷಿಕ್ತ ಸಮ್ರಾಟರೆನಿಸಿಬಿಟ್ಟಿದ್ದರು. ಬ್ರಿಟಿಷ್ ಸರ್ಕಾರವಂತೂ ಅವರನ್ನು ತಮ್ಮ ಮೊತ್ತಮೊದಲ ಶತ್ರು ಎಂದು ಪರಿಗಣಿಸಿತ್ತು. ಗಾಂಧಿಯವರಿಗಿಂತ ಮೊದಲೇ ತಿಲಕರು ಇತಿಹಾಸದಲ್ಲಿ ಕಂಡುಕೇಳಿರದ ಶ್ರದ್ಧೆ-ಭಕ್ತಿಗಳಿಗೆ ಪಾತ್ರರಾಗಿದ್ದರು.”
ತಿಲಕರು ಮೂಲತಃ ಜ್ಞಾನೋಪಾಸಕರು. ಅವರ ಆಸಕ್ತಿಕ್ಷೇತ್ರಗಳು ಹತ್ತಾರು. ಅವರ ಅಧ್ಯಯನದ ವೈಶಾಲ್ಯ ದಿಗ್ಭ್ರಮೆ ತರಿಸುವಂತಹದು. ಖಗೋಳ ಅಧ್ಯಯನಕ್ಕಾಗಿ ದೂರದರ್ಶಕವನ್ನಿರಿಸಿಕೊಂಡು ರಾತ್ರಿ ಗಂಟೆಗಳ ಕಾಲ ಗ್ರಹ-ತಾರೆಗಳನ್ನು ವೀಕ್ಷಿಸುತ್ತಿದ್ದರು. ಒಮ್ಮೆ ಪ್ರಯೋಗದಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಮಿತ್ರರೊಬ್ಬರು ಕ್ಲೇಶಕ್ಕೆ ಸಿಲುಕಿದ್ದಾಗ ತಿಲಕರು ಅದನ್ನು ಕೂಡಲೆ ಪರಿಹರಿಸಿದರು.
ಕಾಲೇಜಿನಲ್ಲಿ ತಿಲಕರು ಬೋಧಕರಾಗಿದ್ದ ದಿನಗಳಲ್ಲಿ ಅಲ್ಲಿಯ ಗ್ರಂಥಭಂಡಾರವನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳುತ್ತಿದ್ದವರು ತಿಲಕರೇ – ಎಂಬ ಮಾತು ಜನಜನಿತವಾಗಿತ್ತು.
ತಿಲಕರ ಪ್ರಕಟಿತ ಪೂರ್ಣಪ್ರಮಾಣದ ಗ್ರಂಥಗಳು ಎರಡೇ. ಆದರೆ ನಾಲ್ಕಾರು ವಿಷಯಗಳ ಬಗೆಗೆ ಗ್ರಂಥರಚನೆ ಮಾಡುವ ಉದ್ದೇಶ ಅವರಿಗಿತ್ತು. ರಾನಡೆ ಮಹಾಶಯರ ಪ್ರಸಿದ್ಧ ಮರಾಠಾ ಇತಿಹಾಸ ಗ್ರಂಥದ ಮುಂದುವರಿಕೆಯಾಗಿ ಶಿವಾಜಿಯ ಸಮಗ್ರ ಚರಿತ್ರೆಯನ್ನು ಬರೆಯಲು ಇಚ್ಛಿಸಿದ್ದರು. ಹಿಂದೂಧರ್ಮದ ಇತಿಹಾಸವನ್ನು ರಚಿಸಲು ಟಿಪ್ಪಣಿಗಳನ್ನು ಸಿದ್ಧಪಡಿಸಿಕೊಂಡಿದ್ದರು. ರಾಮಾಯಣಕಾಲಕ್ಕೂ ಹಿಂದಿನ ಭಾರತದ ಇತಿಹಾಸವನ್ನು ರಚಿಸಬಯಸಿದ್ದರು. ಶಾಂಕರದರ್ಶನ, ಹಿಂದೂ ಕಾನೂನುಶಾಸ್ತ್ರ ಮೊದಲಾದ ಹಲವು ವಿಷಯಗಳ ಬಗೆಗೆ ಗ್ರಂಥಗಳನ್ನು ರಚಿಸಲು ಸಿದ್ಧತೆ ನಡೆಸಿದ್ದರು. ಆದರೆ ಅಹರ್ನಿಶಿ ರಾಜಕೀಯ ಹೋರಾಟಗಳಲ್ಲಿ ನಿರತರಾಗಬೇಕಾದುದರಿಂದ ಅವರು ತಮ್ಮ ಸ್ವೀಯ ಆಸಕ್ತಿಯ ಈ ಕಾರ್ಯಗಳಿಗೆ ಗಮನ ಹರಿಸಲಾಗಲಿಲ್ಲ.
ಅತುಲ್ಯ ನಾಯಕತ್ವ
ಕ್ರಿಯೆಯಲ್ಲಿ ಪರಿಣಮಿಸದ ಕಲ್ಪನಾಲೋಕದ ಬಗೆಗೆ ತಿಲಕರು ಉತ್ಸಾಹಿತರಾಗುತ್ತಿರಲಿಲ್ಲ. ಅವರ ಸ್ವಭಾವದ ದ್ಯೋತಕವಾದ ಒಂದು ಘಟನೆಯನ್ನು ಸ್ಮರಿಸಬಹುದು. ಒಮ್ಮೆ ಹಲವರು ವಿದ್ಯಾರ್ಥಿಗಳು ಸಲ್ಲಾಪದಲ್ಲಿ ತೊಡಗಿದ್ದರು. ಒಂದು ವೇಳೆ ಕಟ್ಟಡಕ್ಕೆ ಬೆಂಕಿ ತಗುಲಿ ಮೆಟ್ಟಿಲುಗಳ ಬಳಕೆ ಅಸಾಧ್ಯವಾದಾಗ ಏನು ಮಾಡಬಹುದು? – ಎಂಬ ವಿಚಾರ ನಡೆದಿತ್ತು. ಆಗ ಅಲ್ಲಿಗೆ ಬಂದ ತಿಲಕರು ಒಂದೂ ಮಾತನಾಡಲಿಲ್ಲ. ಪ್ರತಿಯಾಗಿ ತಮ್ಮ ಧೋತರವನ್ನು ಸೊಂಟಕ್ಕೆ ಬಿಗಿದು ಮಹಡಿಯಿಂದ ಕೆಳಕ್ಕೆ ದುಮುಕಿಬಿಟ್ಟರು.
ಒಳ್ಳೆಯ ನಾಯಕತ್ವದ ಒಂದು ಲಕ್ಷಣವೆಂದರೆ ಸಣ್ಣಪುಟ್ಟ ಅಭಿಪ್ರಾಯಭೇದಗಳನ್ನು ಲೆಕ್ಕಿಸದೆ ಎಲ್ಲರೊಡನೆ ಹೊಂದಿಕೊಂಡುಹೋಗುವುದು.
ಅದೇಕೋ ಹಠವಾದಿಗಳೆಂಬ ಪ್ರಥೆ ತಿಲಕರ ಹೆಸರಿಗೆ ಅಂಟಿಕೊಂಡಿತ್ತು. ಆದರೆ ತಮಗೆ ಪೂರ್ಣ ಸಮ್ಮತವಲ್ಲದ ಮಾರ್ಗದಲ್ಲಿ ಗಾಂಧಿಯವರು ನಡೆದಿದ್ದಾಗ ಅದನ್ನು ಲೆಕ್ಕಿಸದೆ ಉದ್ದಕ್ಕೂ ಗಾಂಧಿಯವರಿಗೆ ಬೆಂಬಲವಾಗಿ ನಿಂತವರು ತಿಲಕರು. ತಿಲಕರ ಆಪ್ತ ಸಹಕಾರಿ ಅಗರ್ಕರ್ ಅವರು ಆಧ್ಯಾತ್ಮಿಕತೆಗೆ ಬದಲಾಗಿ ಭೌತಿಕವಾದವನ್ನು ಹೆಚ್ಚಾಗಿ ಸಮರ್ಥಿಸುತ್ತಿದ್ದರೂ ಇದು ಅವರಿಬ್ಬರ ಸಾಹಚರ್ಯಕ್ಕೆ ಅಡ್ಡಿ ತಂದಿರಲಿಲ್ಲ.
ತಿಲಕರ ಸಾರ್ವಜನಿಕ ಜೀವನದ ಆರಂಭದ ದಿನಗಳಲ್ಲಿ ಅವರು ಸಮಾಜಸುಧಾರಣಪ್ರಯತ್ನಗಳ ಬಗೆಗೆ ಹೆಚ್ಚು ಉತ್ಸಾಹ ತಳೆಯುತ್ತಿರಲಿಲ್ಲವೆಂದೂ ವಿದೇಶೀ ಪ್ರಭುತ್ವವನ್ನು ನೇರವಾಗಿ ಎದುರಿಸುವುದಕ್ಕೆ ಆದ್ಯತೆ ಸಲ್ಲಬೇಕೆಂಬ ನಿಲವು ಅವರದು ಎಂದೂ ಒಂದು ವರ್ಗದವರಲ್ಲಿ ಅನಿಸಿಕೆ ಇದ್ದಿತು. ಆದರೆ ತಮ್ಮ ಸ್ವಂತ ಜೀವನದಲ್ಲಿ ತಿಲಕರು ಎಲ್ಲ ರೀತಿಯ ಸುಧಾರಣೆಗಳನ್ನೂ ಅಳವಡಿಸಿಕೊಂಡಿದ್ದರು; ಹೆಣ್ಣುಮಕ್ಕಳ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಿದರು; ಅವರಿಗೆ 16 ವರ್ಷ ದಾಟಿದ ಮೇಲಷ್ಟೆ ವಿವಾಹ ನೆರವೇರಿಸಿದರು; ಹರಿಜನರ ಸಂಗಡಿಕೆ ಅವರಿಗೆ ಎಂದೂ ಸಮಸ್ಯೆ ಎನಿಸಿರಲಿಲ್ಲ. ಸಾಂಪ್ರದಾಯಿಕರಿಗೆ ಸಮ್ಮತವಲ್ಲದ ಸಮುದ್ರಯಾನವನ್ನೂ ಮಾಡಿದರು. ವಿಧವಾವಿವಾಹ ಸಂದರ್ಭಗಳಲ್ಲಿ ತಪ್ಪದೆ ಪಾಲ್ಗೊಳ್ಳುತ್ತಿದ್ದರು. ಇದನ್ನೆಲ್ಲ ನೆನೆಯುವಾಗ ಅವರನ್ನು ಸುಧಾರಣಾವಿರೋಧಿ ಎಂದು ಭಾವಿಸಲು ಕಾರಣ ಕಾಣದು.
ಸಮರ್ಥ ನಾಯಕತ್ವದ ಒಂದು ಲಕ್ಷಣವೆಂದರೆ ಪ್ರಯತ್ನಸಾತತ್ಯ. ಜೀವನದುದ್ದಕ್ಕೂ ನಿರಾಶಾದಾಯಕ ಸನ್ನಿವೇಶಗಳನ್ನೂ ಪಡಬಾರದ ಬವಣೆಗಳನ್ನೂ ಅನುಭವಿಸುತ್ತಿದ್ದರೂ ತಿಲಕರು ಎಂದೂ ತಮ್ಮ ಧ್ಯೇಯದಿಂದ ವಿಚಲಿತರಾಗದೆ ಮರುಘಳಿಗೆಯೇ ಕಾರ್ಯದ ಮುಂದುವರಿಕೆಯ ಹೆಜ್ಜೆಗಳನ್ನು ಕುರಿತು ಯೋಚಿಸತೊಡಗುತ್ತಿದ್ದರು.
ತಿಲಕರ ನಿಧನಕ್ಕೆ ಹಿಂದೆ ಮಹಾರಾಷ್ಟ್ರ ಕಂಡಿದ್ದ ಅತಿದೊಡ್ಡ ಶವಯಾತ್ರೆ ದಾದಾಭಾಯಿ ನವರೋಜಿಯವರದಾಗಿತ್ತು (30-6-1917). ಆದರೆ ತಿಲಕರ ಶವಯಾತ್ರೆ ಆ ದಾಖಲೆಯನ್ನು ಮರೆಸಿತು.
“ತಾವು ತಮ್ಮ ದೇಶ ಮತ್ತು ಜನತೆಯಲ್ಲಿ ದೃಢವಾಗಿ ನಂಬಿದ ಗುರಿಗೆ ಏಕಾಂಗಿಯಾಗಿಯೇ ದುಡಿಯುವ ಸ್ವಾರ್ಥರಹಿತ ದೇಶಭಕ್ತನೊಬ್ಬ ಹೇಗಿರುವನೆಂಬ ಆದರ್ಶವನ್ನು ತಿಲಕರು ನಮಗೆ ಕೊಟ್ಟಿದ್ದಾರೆ.”
ಹೀಗೆಂದು ಸಂಪಾದಕೀಯ ಶ್ರದ್ಧಾಂಜಲಿಯಲ್ಲಿ ಬರೆದವರು ಆ ದಿನಗಳ ರಾಷ್ಟ್ರಖ್ಯಾತಿಯ ಪತ್ರಕರ್ತ ‘ಇಂಡಿಯನ್ ಸೋಷಲ್ ರಿಫಾರ್ಮರ್’ ಪತ್ರಿಕೆಯ ಸಂಪಾದಕ ಕೆ. ನಟರಾಜನ್.
‘ಭಾರತದ ಹೊಸ ಹುಟ್ಟಿನ ರಾಷ್ಟ್ರೀಯತೆಯ ಸ್ಫೂರ್ತಿ ಮತ್ತು ಪ್ರತಿನಿಧಿ’ ಎಂದು ತಿಲಕರನ್ನು ವರ್ಣಿಸಿತು ದೂರದ ಇಂಗ್ಲೆಂಡಿನ ಪ್ರತಿಷ್ಠಿತ ‘ಮ್ಯಾಂಚೆಸ್ಟರ್ ಗಾರ್ಡಿಯನ್’ ಪತ್ರಿಕೆ.
ತಿಲಕರನ್ನು ಅಸಾಧಾರಣವಾಗಿಸಿದವು ಅವರ ಪ್ರಚಂಡ ಧೈರ್ಯ, ಉದಾರತೆ, ಸರಳತೆ, ಮನೋದಾಢ್ರ್ಯ, ಕೈಗೊಂಡ ಕಾರ್ಯಕ್ಕಾಗಿ ಆತ್ಯಂತಿಕ ತ್ಯಾಗವನ್ನೂ ಮಾಡುವ ಸಿದ್ಧತೆ. ಇದನ್ನೆಲ್ಲ ಪರಿಗಣಿಸುವಾಗ ತಿಲಕರು ‘ಗೀತಾರಹಸ್ಯ’ದಲ್ಲಿ ಮಂಡಿಸಿರುವ ನೈತಿಕ ಆದರ್ಶಕ್ಕೆ ತಿಲಕರೇ ಶ್ರೇಷ್ಠ ಉದಾಹರಣೆ ಎನಿಸದಿರದು.
ತಿಲಕರ ಶಿಷ್ಯರೂ ನಿಕಟ ಅನುಯಾಯಿಯೂ ಆದ ಕೃಷ್ಣ ಪ್ರಭಾಕರ ಖಾಡಿಲ್ಕರ್ ಕವನರೂಪದಲ್ಲಿ ಸಲ್ಲಿಸಿರುವ ಈ ನುಡಿನಮನ ತಿಲಕರ ಗುಣೌನ್ನತ್ಯವನ್ನು ಸುಂದರವಾಗಿ ಸಂಗ್ರಹಿಸಿದೆ:
ಲೋಕೋದ್ಧಾರೇ ಪ್ರವೀಣಂ ತಿಲಕ ಸುಚರಿತಂ ಧ್ಯಾಯತೇ ತದ್ವರೇಣ್ಯಂ
ಉದ್ದೀಪ್ತಂ ರಾಷ್ಟ್ರಭಕ್ತ್ಯಾ ಜನಪದಹೃದಯಂ ಯಸ್ಯ ಕಾರಾನಿವಾಸೈಃ |
ಬದ್ಧಾಕಾಂಕ್ಷಃ ಸ್ವರಾಜ್ಯೇ ಪರಿಣತವಚನಾ ಭಾರತೋ ಯಸ್ಯ ಜಾತಃ
ದೃಶ್ಯೋ ಗೀತಾರಹಸ್ಯೇ ವಿಮಲಯತು ಗುರುರ್ನೋ ಧಿಯೋ ಲೋಕಮಾನ್ಯಃ ||
“ಲೋಕೋದ್ಧಾರದಲ್ಲಿ ಜ್ಯೇಷ್ಠತೆ ಗಳಿಸಿದ ತಿಲಕರ ಜೀವನವನ್ನು ಭಾರತದ ಅಖಿಲ ಜನತೆ ಭಕ್ತಿಯಿಂದ ನೆನೆಯುತ್ತದೆ. ಅವರ ಜೀವನವಿಡೀ ಜನತೆಯ ಉದ್ಧಾರಕ್ಕಾಗಿ ಮುಡುಪಾಗಿತ್ತು. ಅವರ ಸೆರೆಮನೆಯ ವಾಸವು ಜನರ ಹೃದಯದಲ್ಲಿದ್ದ ರಾಷ್ಟ್ರಭಕ್ತಿಯನ್ನು ಉದ್ದೀಪಿಸಿತ್ತು. ಅವರ ಪ್ರಾಜ್ಞ ಮಾತುಗಳಿಂದ ದೇಶದ ಜನರು ತಮ್ಮ ಸ್ವರಾಜ್ಯವೆಂಬ ಗುರಿಗೆ ಬದ್ಧಕಂಕಣರಾದರು. ‘ಗೀತಾರಹಸ್ಯ’ದಲ್ಲಿ ರೂಪಿತವಾದ ಆ ಗುರುತಿಲಕರು ನಮ್ಮ ಬುದ್ಧಿಯನ್ನೂ ಮನಸ್ಸನ್ನೂ ಪರಿಶುದ್ಧಗೊಳಿಸಲಿ.”