ಕಳೆದ ಆರು ತಿಂಗಳಲ್ಲಿ ಕೊರೋನಾ ವಿಷಾಣು ನಿರ್ವಹಣೆಗೆ ಆದ್ಯತೆ ನೀಡಬೇಕಾಗಿ ಬಂದುದರ ಅನಿವಾರ್ಯತೆಯಿಂದಾಗಿ ಆರ್ಥಿಕ ಕ್ಷೇತ್ರದಲ್ಲಿ ಒಂದಷ್ಟುಮಟ್ಟಿನ ಹಿನ್ನಡೆಯಾದದ್ದು ಸಹಜ. ಹೇಗೊ ಬಂದೊದಗಿದ ವಿಕಟ ಪರಿಸ್ಥಿತಿಗೆ ಪ್ರಧಾನಿಯವರ ಸಕಾಲಿಕ ಕರೆಗೆ ಓಗೊಟ್ಟು ದೇಶದ ಜನತೆಯೆಲ್ಲ ಸಂಯಮವನ್ನೂ ಕ್ಷಮತೆಯನ್ನೂ ಮೆರೆದಿರುವುದು ಮೇಲ್ಮಟ್ಟದ ಹೊಣೆಗಾರಿಕೆಯನ್ನು ಬಿಂಬಿಸಿದೆ. ಜನತೆಯಲ್ಲಿ ಇದೇ ಹೊಣೆಗಾರಿಕೆಯ ಮನೋಧರ್ಮ ಮುಂದುವರಿಯುವುದರಲ್ಲಿ ಸಂದೇಹವಿಲ್ಲ. ಆದುದರಿಂದ ಇದೀಗ ತೋರಿರುವ ಆರ್ಥಿಕ ಹಿನ್ನಡೆಯನ್ನೂ ಜನತೆ ಸವಾಲಾಗಿ ಸ್ವೀಕರಿಸಲು ಸಾರ್ವಜನಿಕರು ಮಾನಸಿಕವಾಗಿ ಸಿದ್ಧರಿರುವರೆಂಬುದರಲ್ಲಿ ಶಂಕೆಗೆ ಕಾರಣವಿಲ್ಲ. ತಾತ್ಕಾಲಿಕ ಹಿನ್ನಡೆಯಿಂದಾಗಿ ಕಳೆದ ಆರು ವರ್ಷಗಳ ಅವಧಿಯಲ್ಲಿ ಬೆಳೆಸಿಕೊಂಡಿರುವ ಸಕ್ರಿಯತೆಯೂ ದಕ್ಷತೆಯೂ ವ್ಯರ್ಥವಾಗಿಹೋಗಲಾರದಷ್ಟೆ. ಹಲವಾರು ಕ್ಷೇತ್ರಗಳಲ್ಲಿ ದೇಶವು ವಿಶೇಷ ಸಾಮಥ್ರ್ಯವನ್ನು ಬೆಳೆಸಿಕೊಂಡಿದೆಯೆಂಬುದನ್ನು ಅಲ್ಲಗಳೆಯಲಾಗದು. ಈ ಕ್ಷೇತ್ರಗಳ ನಿಕಟ ಭವಿಷ್ಯದ ಮುನ್ನಡೆಯು ಜಾಗತಿಕ ಸ್ತರದಲ್ಲಿ ಭಾರತದ ಗಣ್ಯ ಸ್ಥಾನವನ್ನು ದೃಢಪಡಿಸಲಿದೆಯಲ್ಲದೆ ದೇಶೀಯ ಆವಶ್ಯಕತೆಗಳನ್ನೂ ಪೂರಯಿಸಬಲ್ಲದೆಂದು ಭರವಸೆ ತಳೆಯಬಹುದು. ಆಹಾರ ಸಂಸ್ಕರಣ, ಸಾವಯವ ಕೃಷಿ, ಎಲೆಕ್ಟ್ರಾನಿಕ್ಸ್, ವಾಹನಗಳ ಅಂಗಗಳು, ಜವಳಿ ಉದ್ಯಮ, ಕುಶಲಕಲೆಗಳು, ಮರಗೆಲಸ – ಮೊದಲಾದ ನಾಲ್ಕಾರು ಕ್ಷೇತ್ರಗಳಲ್ಲಿ ಭಾರತದ ವಿಶೇಷ ಸಾಮಥ್ರ್ಯ ಈಗಾಗಲೆ ಸ್ಥಿರಪಟ್ಟಿದೆ. ನಮ್ಮದು ಮೇಲುಗೈಯಾಗಿರುವ ಇಂತಹ ಕ್ಷೇತ್ರಗಳಿಗೆ ಪ್ರಾಥಮ್ಯ ನೀಡಿದಲ್ಲಿ ಈಗಿನ ತಾತ್ಕಾಲಿಕ ಆರ್ಥಿಕ ಹಿಂಜರಿಕೆಯಿಂದ ಗಾಬರಿಗೊಳ್ಳಬೇಕಾದ ಪ್ರಮೇಯವಿರದು.
ಕೊರೋನೋತ್ತರ ಆರ್ಥಿಕ ಉಜ್ಜೀವನ
Month : September-2020 Episode : Author :