ಹೃದಯಂ ಸದಯಂ ಯಸ್ಯ ಭಾಷಿತಂ ಸತ್ಯಭೂಷಿತಮ್|
ಕಾಯಃ ಪರಹಿತೋಪಾಯಃ ಕಲಿಃ ಕುರ್ವೀತ ತಸ್ಯ ಕಿಮ್||
“ಯಾರ ಹೃದಯದಲ್ಲಿ ದಯೆಯು ತುಂಬಿಕೊಂಡಿದೆಯೋ, ಯಾರ ಮಾತು ಎಂದೂ ಸತ್ಯದಿಂದ ದೂರ ಸರಿಯದೋ, ಯಾರ ಶರೀರವು ಸದಾ ಇತರರ ಹಿತಕ್ಕಾಗಿ ಮೀಸಲಿರುತ್ತದೆಯೋ, ಅಂಥವನನ್ನು ಕಲಿಪುರುಷನು ಹೇಗೆ ತಾನೆ ಬಾಧಿಸಿಯಾನು?”
ಯಾರ ಅಂತರಂಗದಲ್ಲಿ ಉದಾರತೆಯೂ ಉದಾತ್ತತೆಯೂ ಪರಹಿತಕಾರಕ ಪ್ರವೃತ್ತಿಯೂ ಸಹಜವಾಗಿ ಮನೆಮಾಡಿಕೊಂಡಿರುತ್ತವೆಯೋ ಅಂಥವನು ಎಂದೂ ಪಾಪವನ್ನೆಸಗಲಾರನಾದುದರಿಂದ ಅವನನ್ನು ಬಾಧಿಸುವ ಅವಕಾಶ ಕಲಿಪುರುಷನಿಗೆ ದೊರೆಯುವುದೇ ಇಲ್ಲ. ಅಂಥವನಿಗೆ ಸದ್ಗತಿ ನಿಶ್ಚಿತ.
ಒಂದು ಸತ್ಯಕಥೆ ಇದು. ಅಮೆರಿಕದ ಒಂದೆಡೆ ಕ್ರಿಸ್ಟಿನಾ ಎಂಬಾಕೆಗೆ ಆಕೆಯ ಜನ್ಮದಿನ ಸಂದರ್ಭದಲ್ಲಿ ಗಂಡ ತುಂಬಾ ಬೆಲೆಬಾಳುವ ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದ. ಮರುದಿನ ಆಕೆ ಕೆಲಸದ ನಿಮಿತ್ತ ಹೊಸ ಕಾರಿನಲ್ಲಿ ಪಯಣ ಮಾಡುತ್ತಿದ್ದಳು. ಮಾರ್ಗಮಧ್ಯದಲ್ಲಿ ದುರದೃಷ್ಟವಶಾತ್ ಎದುರಿನಿಂದ ಬರುತ್ತಿದ್ದ ಕಾರೊಂದು ಈಕೆಯ ಕಾರಿಗೆ ಬಡಿದು ಜಖಂ ಆಯಿತು. ಇಬ್ಬರು ಚಾಲಕರೂ ಎಚ್ಚರಿಕೆಯಿಂದಲೇ ಕಾರುಗಳನ್ನು ನಡೆಸಿದ್ದರೂ ಆಕಸ್ಮಿಕ ನಡೆದುಹೋಯಿತು. ಎದುರಿನ ಕಾರಿನ ಚಾಲಕ ಕ್ರಿಸ್ಟಿನಾಗೆ ಹೇಳಿದ: “ನಿಮ್ಮ ಹೊಸ ಕಾರಿಗೆ ನನ್ನಿಂದಾಗಿ ತಗುಲಿ ಸ್ವಲ್ಪ ನಷ್ಟವಾಗಿರುವುದಕ್ಕಾಗಿ ಕ್ಷಮೆ ಕೋರುತ್ತಿದ್ದೇನೆ. ಇಗೋ – ನನ್ನ ಕಾರಿನ ದಾಖಲೆಗಳು, ಡ್ರೈವರ್ಸ್ ಲೈಸೆನ್ಸ್, ಇನ್‍ಶೂರೆನ್ಸ್ ಪತ್ರಗಳೆಲ್ಲ ಇಲ್ಲಿವೆ. ತಾವು ದಯವಿಟ್ಟು ಇವನ್ನು ಬಳಸಿ ಇನ್‍ಶೂರೆನ್ಸ್ ಪರಿಹಾರ ಪಡೆಯಬಹುದಾಗಿದೆ. ಅದರಂತೆ ತಾವೂ ತಮ್ಮ ದಾಖಲೆಗಳನ್ನು ನನಗೆ ಕೊಟ್ಟಲ್ಲಿ ಅನುಕೂಲವಾಗುತ್ತದೆ.”
ಅಪಘಾತದ ವಿಷಯವನ್ನು ಗಂಡನಿಗೆ ಹೇಗೆ ತಿಳಿಸುವುದೆಂದು ಚಿಂತಿತಳಾಗಿದ್ದ ಕ್ರಿಸ್ಟಿನಾ ತನ್ನ ದಾಖಲೆಗಳಿಗಾಗಿ ಗ್ಲೋವ್ ಕಂಪಾರ್ಟ್‍ಮೆಂಟನ್ನು ತೆರೆದಾಗ ಅವಳಿಗೆ ಆಶ್ಚರ್ಯ ಕಾದಿತ್ತು, ಕಣ್ಣೀರು ತರಿಸಿತು. ಅಲ್ಲಿ ಗಂಡನ ಕೇವಲ ಎರಡು-ಮೂರು ಸಾಲಿನ ಸಂದೇಶ ಇತ್ತು, ಹೀಗೆ: “ಪ್ರಿಯ ಕ್ರಿಸ್ಟಿನಾ, ಅಕಸ್ಮಾತ್ತಾಗಿ ಕಾರು ಎಲ್ಲಿಯಾದರೂ ಅಪಘಾತಕ್ಕೆ ಸಿಲುಕಿದಲ್ಲಿ ಚಿಂತೆ ಮಾಡಬೇಡ. ಇವೆಲ್ಲ ಸಹಜವಾಗಿ ನಡೆಯುವ ಘಟನೆಗಳಷ್ಟೆ. ಇಷ್ಟಾಗಿ ನಾನು ಪ್ರೀತಿಸುವುದು ನಿನ್ನನ್ನೇ ಹೊರತು ಕಾರನ್ನಲ್ಲ.”
ಎಲ್ಲೆಡೆ ಸದ್ಭಾವನೆ ತುಂಬಿದ್ದಲ್ಲಿ ಜೀವನ ಅದೆಷ್ಟು ಸುಂದರವಾಗಿರುತ್ತದೆ!