ಆದಿಯಲಿ ನೆನೆಯುವೆನು ಪೋಕ್ರಿ ಕುಟ್ಟಿಯನು!
ಎರಡನೆಯ ಪೋಕ್ರಿ ಕುಟ್ಟಿಯ ಕಥೆಯನ್ನು ಹೇಳುವ ಮುನ್ನ ಮೊದಲನೆಯ ಪೋಕ್ರಿ ಕುಟ್ಟಿಯ ಕಥೆಯನ್ನು ಹೇಳಬೇಕಾಗುತ್ತದೆ.
ಸುಂದರರಾಜನು ಬರ್ಕಾಡಿ ಗ್ರಾಮದಲ್ಲಿ ಎಲ್ಲಿಗೆ ಹೋದರೂ ಅವನ ನಾಯಿ (ಮೊದಲನೆಯ) ಪೋಕ್ರಿ ಕುಟ್ಟಿಯು ಅವನ ಹಿಂದಿನಿಂದ ಹೋಗುತ್ತಿತ್ತು. ಸಿಂಬಾವಿ ಗುತ್ತಿಯ ಹಾಗೆ ಹಳ್ಳಿಗನಲ್ಲದ, ಪ್ರಾಥಮಿಕ ಶಾಲೆಯ ಶಿಕ್ಷಕನಾದ ಸುಂದರರಾಜನ ಹಿಂದಿನಿಂದ ನಾಯಿ ಹೋಗುವುದು ಸ್ವಲ್ಪ ವಿಚಿತ್ರವೇ ಆದರೂ ಊರಿನವರಿಗೆ ಅದು ಅಭ್ಯಾಸವಾಗಿ ಹೋಗಿತ್ತು. ಸಣ್ಣ ಊರಾದ ಕಾರಣ ಮತ್ತು ಸುಂದರರಾಜನು ಮನೆಯಿಂದ ನಡೆದುಕೊಂಡೇ ಶಾಲೆಗೆ ಹೋಗುತ್ತಿದ್ದುದರಿಂದ ಅವನ ಹಿಂದಿನಿಂದ ಪೋಕ್ರಿ ಕುಟ್ಟಿಯು ಹೋಗುವುದು ಅಂತಹ ವಿಚಿತ್ರ ದೃಶ್ಯವೆಂದು ಹೇಳುವಂತಿಲ್ಲ.
ಸುಂದರರಾಜನು ಮುಂದೆ ಎಂದಾದರೂ ಒಂದು ಸ್ಕೂಟರನ್ನು ತೆಗೆದುಕೊಳ್ಳಬೇಕೆಂದು ಆಲೋಚನೆ ಮಾಡುತ್ತಿದ್ದುದು ಪೋಕ್ರಿ ಕುಟ್ಟಿಗೆ ತಿಳಿಯಿತು. ಸುಂದರರಾಜನು ಮನೆಯಲ್ಲಿ ಅಮ್ಮನೊಡನೆಯೂ, ಶಾಲೆಯಲ್ಲಿ ಸಹೋದ್ಯೋಗಿಗಳೊಡನೆಯೂ, ದಾರಿಯಲ್ಲಿ ಮಿತ್ರರೊಡನೆಯೂ ಸಂಭಾಷಣೆಗಳಲ್ಲಿ ಸ್ಕೂಟರ್ ತೆಗೆದುಕೊಳ್ಳಬೇಕೆಂಬ ತನ್ನ ಇಚ್ಛೆಯನ್ನು ಹೇಳಿಕೊಂಡಿದ್ದದ್ದನ್ನು ಅದು ಕೇಳಿಸಿಕೊಂಡಿತ್ತು. ಹಾಗಾಗಿ ಸುಂದರರಾಜನು ಸ್ಕೂಟರ್ ಕಲಿಯುವ ಮೊದಲೇ ಪೋಕ್ರಿ ಕುಟ್ಟಿ ಸ್ಕೂಟರಿನ ಹಿಂದಿನಿಂದ ಓಡುವ ಅಭ್ಯಾಸವನ್ನು ಶುರುಮಾಡಿತ್ತು. ಮುಂದೆ ಸುಂದರರಾಜನ ಸ್ಕೂಟರಿನ ಹಿಂದಿನಿಂದ ಓಡಿಕೊಂಡು ಹೋಗುವುದಕ್ಕೆ ಶಕ್ತನಾಗಲು ಇಂತಹ ಅಭ್ಯಾಸವನ್ನು ಅದು ಪ್ರಾರಂಭಿಸಿತು.
ಆದರೆ ಈ ಅಭ್ಯಾಸ ಸ್ವಲ್ಪ ವಿಚಿತ್ರವಾಗಿತ್ತು ಮತ್ತು ಅದು ಸ್ವಲ್ಪ ದಾರಿ ತಪ್ಪಲು ಕಾರಣವೂ ಆಯಿತು. ಬೇರೆ ದ್ವಿಚಕ್ರವಾಹನಗಳು ರಸ್ತೆಯಲ್ಲಿ ಹೋಗುವುದನ್ನು ಕಂಡಕೂಡಲೆ ಪೋಕ್ರಿ ಕುಟ್ಟಿ ಸುಮ್ಮನೆ ಅವುಗಳ ಹಿಂದೆ ಓಡುತ್ತಾ ಅಭ್ಯಾಸ ಮಾಡುವುದನ್ನು ಬಿಟ್ಟು, ಯಾರೋ ಕಳ್ಳಕಾಕರು ಏನನ್ನೋ ದೋಚಿಕೊಂಡು ಹೋಗುತ್ತಿದ್ದಾರೆ ಅನ್ನುವಷ್ಟು ಉದ್ವಿಗ್ನತೆಯಿಂದ ಬೊಗಳುತ್ತಾ ಬೆನ್ನಟ್ಟತೊಡಗಿತು.
ಇದು ಪೋಕ್ರಿ ಕುಟ್ಟಿಯು ಮಾನಸಿಕವಾಗಿ ಸುಂದರರಾಜನಿಂದ ದೂರವಾದ ಮೊದಲನೆಯ ಹಂತ. ಹೀಗೆ ಪೋಕ್ರಿ ಕುಟ್ಟಿಯು ರಸ್ತೆಯಲ್ಲಿ ಕಿರಿಕಿರಿ ಮಾಡತೊಡಗಿದಾಗ ಸುಂದರರಾಜನು ಅದಕ್ಕೂ ತನಗೂ ಸಂಬಂಧವಿಲ್ಲದಂತೆ ನಡೆದುಕೊಳ್ಳುವುದು ಅನಿವಾರ್ಯವಾಯಿತು.
ದ್ವಿಚಕ್ರ ವಾಹನಗಳನ್ನು ಬೆನ್ನಟ್ಟಿಕೊಂಡು ಹೋಗುವ ಅಭ್ಯಾಸ ಬೆಳೆಸಿಕೊಂಡ ಮೇಲೆ ಪೋಕ್ರಿ ಕುಟ್ಟಿಗೆ ಒಂದು ಹೊಸ ಸ್ವಾತಂತ್ರ್ಯದ ಅಭಿಲಾಷೆ ಮೂಡಿತು ಅನಿಸುತ್ತದೆ. ತಾನು ಸುಂದರರಾಜನನ್ನೇ ಹಿಂಬಾಲಿಸಿಕೊಂಡು ಹೋಗಬೇಕಾಗಿಲ್ಲ ಎಂದು ಅದಕ್ಕೆ ಗೊತ್ತಾಯಿತು. ಹಾಗಾಗಿ, ಪೋಕ್ರಿ ಕುಟ್ಟಿಯು ಸುಂದರರಾಜನನ್ನು ಬಿಟ್ಟು ರಾಗಿಣಿಯ ತವರುಮನೆಗೆ ಅಂದರೆ ಪದ್ಮಕ್ಕನ ಮನೆಗೆ ಆಗಾಗ ಹೋಗತೊಡಗಿತು. ಅದಕ್ಕಿದ್ದ ಬಲವಾದ ಆಕರ್ಷಣೆ ಎಂದರೆ ಪದ್ಮಕ್ಕನ ಮನೆಯಲ್ಲಿದ್ದ ಹೆಣ್ಣು ನಾಯಿ ಸ್ವೀಟಿ ಎನ್ನುವುದು ಸುಂದರರಾಜನಿಗೆ ಗೊತ್ತಾಗಿದ್ದರೂ ಅವನದನ್ನು ಪದ್ಮಕ್ಕನ ಬಳಿ ಚರ್ಚಿಸಲು ಹೋಗಿರಲಿಲ್ಲ. ಪದ್ಮಕ್ಕನ ಮನೆಯನ್ನು ಪೋಕ್ರಿ ಕುಟ್ಟಿಗೆ ಪರಿಚಯಿಸಿದವನು ಸುಂದರರಾಜನೇ ಅಲ್ಲವೇ? ತಾನಿಲ್ಲದಾಗಲೂ ಪೋಕ್ರಿ ಕುಟ್ಟಿ ಅಲ್ಲಿಗೆ ಹೋಗುತ್ತದೆ ಎಂದು ಸುಂದರರಾಜನಿಗೆ ಗೊತ್ತಾದದ್ದೇ ಆಕಸ್ಮಿಕವಾಗಿ!
ಒಮ್ಮೆ ಪದ್ಮಕ್ಕನ ಮನೆಯಲ್ಲಿ ಗ್ಯಾಸ್ ಖಾಲಿಯಾಗಿತ್ತು. ಅವರು ಏಜೆನ್ಸಿಯವರಿಗೆ ಫೋನ್ ಮಾಡಿದರೆ ಇನ್ನೆರಡು ದಿನ ಬಿಟ್ಟು ಲೈನಿಗೆ ಬರುವಾಗ ಕೊಡುತ್ತೇವೆ ಎಂದರು. ಪದ್ಮಕ್ಕ ಮನೆಮಗನಂತಿದ್ದ ಸುಂದರರಾಜನಿಗೆ ಫೋನ್ ಮಾಡಿದರು. ಅವನು ತನ್ನ ಮನೆಯಲ್ಲಿದ್ದ ಹೆಚ್ಚುವರಿ ಸಿಲಿಂಡರನ್ನು ಆಟೋರಿಕ್ಷಾದಲ್ಲಿ ಹಾಕಿಕೊಂಡು ಪದ್ಮಕ್ಕನ ಮನೆಯಲ್ಲಿ ಇಳಿಸಿ ಬರಲು ಹೋದ.
ಆಗ ಪೋಕ್ರಿ ಕುಟ್ಟಿ ಅಲ್ಲಿತ್ತು! ಸುಂದರರಾಜನನ್ನು ಕಂಡು ನಾಚಿದ ಪೋಕ್ರಿ ಕುಟ್ಟಿ ಅಲ್ಲಿಂದ ಓಡಿಹೋಗಿ ತಲೆಮರೆಸಿಕೊಂಡಿತು.
“ಏನಿದು! ನಮ್ಮ ಪೋಕ್ರಿ ಕುಟ್ಟಿ ಇಲ್ಲಿದ್ದಾನೆ!” ಸುಂದರರಾಜನು ಆಶ್ಚರ್ಯ ವ್ಯಕ್ತಪಡಿಸಿದ.
“ಅದು ಹಾಗೆಯೇ!” ಎಂದು ಪದ್ಮಕ್ಕ ಸ್ವಲ್ಪದರಲ್ಲೇ ಹೇಳಿ ಬೇರೆ ವಿಷಯ ಮಾತಾಡಿದರು. ಸುಂದರರಾಜನಿಗೆ ಯಾಕೆ ಬೇಜಾರು ಎಂದು.
ಹೀಗೆ ರಾಗಿಣಿಯ ಅಮ್ಮನ ಮನೆಗೆ ಪೋಕ್ರಿ ಕುಟ್ಟಿಯ ಸವಾರಿಯಿಂದಾಗಿ ಕೂಡ ಸುಂದರರಾಜನು ಪೋಕ್ರಿ ಕುಟ್ಟಿಯಿಂದ ದೂರ ಉಳಿಯುವಂತಾಯಿತು. ಇದು ಪೋಕ್ರಿ ಕುಟ್ಟಿ ಅವನಿಂದ ದೂರವಾದ ಎರಡನೆಯ ಹಂತ.
ಪೋಕ್ರಿ ಕುಟ್ಟಿಯಿಲ್ಲದೆ ಒಬ್ಬನೇ ನಡೆದುಕೊಂಡು ಹೋಗುತ್ತಿದ್ದ ಸುಂದರರಾಜನು ಜನರಿಗೆ ಅಸಹಜನಾಗಿ ಕಾಣತೊಡಗಿದ. ಕೊನೆಗೊಂದು ದಿನ ಪೋಕ್ರಿ ಕುಟ್ಟಿಯ ಹೆಣ ಬರ್ಕಾಡಿಯ ಹೊರವಲಯದ ಮೇರಮಜಲು ಎಂಬ ಒಂದು ಪ್ರದೇಶದಲ್ಲಿ ಪತ್ತೆಯಾಯಿತು. ಹೆಚ್ಚಿನ ಜನರಿಗೆ ಅದು ಸುಂದರರಾಜ ಮಾಸ್ಟರರ ನಾಯಿ ಪೋಕ್ರಿ ಕುಟ್ಟಿಯ ಹೆಣ ಎಂದು ಗೊತ್ತಾದರೂ ಮಾಸ್ಟರಿಗೆ ಅದನ್ನು ಯಾರೂ ಹೇಳದ ಕಾರಣ ಅದರ ನಾಪತ್ತೆ ಅವನ ಮಟ್ಟಿಗೆ ನಿಗೂಢವಾಗಿಯೇ ಉಳಿಯಿತು.
*****
ಈ ರಾಗಿಣಿ ಎನ್ನುವವಳು ಸುಂದರರಾಜನ ಮನಸ್ಸನ್ನು ಗೆದ್ದು, ಅಂತರಂಗದ ಒಳಗೆ ಹೊಕ್ಕು, ಮತ್ತೆ ಹೊರಬರಲಾಗದಂತೆ ಒಳಗೆ ಸೇರಿಕೊಂಡು ಬಾಗಿಲುಹಾಕಿಕೊಂಡು ಒಳಗೆ ಕುಳಿತಿರುವ ಪರಮ ಸುಂದರಿ. ಸದ್ಯಕ್ಕೆ ಮದುವೆಯಾಗಿ ಬೆಂಗಳೂರಿನಲ್ಲಿದ್ದಾಳೆ. ಅವಳಿಗೆ ಈಗ ನಲವತ್ತೆರಡು ವರ್ಷ ವಯಸ್ಸು; ನೋಡಲು ಇಪ್ಪತ್ತೈದರ ಯುವತಿಯಂತಿದ್ದಾಳೆ. ಅವಳಿಗೆ ಇಪ್ಪತ್ತು ಮತ್ತು ಹದಿನೆಂಟರ ಹರೆಯದ ವಿವಾಹಯೋಗ್ಯರಾದ ಇಬ್ಬರು ಹೆಣ್ಣುಮಕ್ಕಳಿದ್ದಾರೆ.
ಸುಂದರರಾಜನಿಗೆ ಈಗ ನಲುವತ್ತೈದು ವರ್ಷ. ಅವಿವಾಹಿತ. ಈ ರಾಗಿಣಿಯು ಅವನ ಮನದೊಳಗೆ ಹೊಕ್ಕು ಕುಳಿತಿರುವುದರಿಂದ ಬೇರೆಯವರಿಗೆ ಒಳಗೆ ಹೋಗಲು ಸಾಧ್ಯವಾಗದೆ ಇರುವ ಕಾರಣ ಸುಂದರರಾಜನು ರಾಗಿಣಿನಾಮಸ್ಮರಣವೃತನಿಷ್ಠ ಏಕಾಂತವಾಸಿ.
ಸುಂದರರಾಜನು ಊರಿನಲ್ಲಿದ್ದ ರಾಗಿಣಿಯ ತವರು ಮನೆಗೆ ತಿಂಗಳಿಗೊಂದೆರಡು ಬಾರಿ ಹೋಗಬೇಕಾಗಿ ಬರುತ್ತಿತ್ತು. ರಾಗಿಣಿಯ ಹಳೆಯ ಪ್ರೇಮಿ (ಅದೂ ಬಹುಶಃ ಏಕಮುಖ ಪ್ರೇಮ) ಎನ್ನುವ ಒಂದೇ ಸಂಬಂಧ ಅವರಿಬ್ಬರ ನಡುವೆ ಇದ್ದದ್ದು. ಆದರೂ ಸುಂದರರಾಜನು ಅವಳ ತಾಯಿಗೆ ಬಹಳ ಸಹಾಯ ಮಾಡುತ್ತಾನೆ. ಇದರಿಂದಾಗಿ ರಾಗಿಣಿಯ ಮನಸ್ಸಿನಲ್ಲಿ ತನ್ನ ಬಗ್ಗೆ ಪ್ರೀತಿ ಹುಟ್ಟೀತೆಂಬ ಆಸೆ ಅವನ ಒಳಮನಸ್ಸಿಗೆ ಇದ್ದರೂ ಅದು ಅವನಿಗೆ ತಿಳಿಯುವಂತಿರಲಿಲ್ಲ. ಅಲ್ಲದೆ ಅದರಿಂದ ಪ್ರಯೋಜನವೇನು? ಅವನಿಗೆ ಮದುವೆಯಾಗಿರಲಿಲ್ಲವಾದರೂ, ಅವಳು ಮದುವೆಯಾಗಿ ಎರಡು ಬೆಳೆದ ಹೆಣ್ಣು ಮಕ್ಕಳ ತಾಯಿಯಾಗಿ, ಗಂಡನೊಡನೆ ಸುಖವಾಗಿರುವಾಗ ಅವಳ ಮನಸ್ಸಿನಲ್ಲಿ ತವರುಮನೆಗೆ ಸಹಾಯ ಮಾಡುವ ಹಳೆಯ ಪ್ರೇಮಿಯ ಬಗ್ಗೆ ಯಾವ ಯೋಚನೆಯಾದರೂ ಬರಲು ಅವಕಾಶವಾಗಲಿ, ಬಿಡುವಾಗಲಿ ಇದ್ದೀತೇ?
ರಾಗಿಣಿಯ ಅಮ್ಮ ಪದ್ಮಕ್ಕ ವಿಧವೆ ಹೆಂಗಸು, ಒಂಟಿಯಾಗಿ ಆ ಮನೆಯಲ್ಲಿರುತ್ತಾರೆ. ಅವರ ಮಗ, ಅಂದರೆ ರಾಗಿಣಿಯ ತಮ್ಮ ಅವರ ಜತೆಯಲ್ಲಿಲ್ಲ. ಅವನು ಕೇರಳದ ತಿರುವನಂತಪುರಕ್ಷೇತ್ರದಲ್ಲಿ ಕೀಳುಶಾಂತಿಯವನೋ, ಸಹಾಯಕನೋ ಆಗಿದ್ದಾನೆ. ಅಪಾರ ಶ್ರೀಮಂತಿಕೆಯಿರುವಲ್ಲಿಯೇ ಅವನು ಇರುತ್ತಾನೆಂದು ಅವನ ಜಾತಕದಲ್ಲಿರುವುದು ಹೀಗೆ ನಿಜವಾಗಿದೆ. ಮಗ ದೂರದಲ್ಲಿರುವುದರಿಂದ ಪದ್ಮಕ್ಕನಿಗೆ ಕರೆಂಟ್ಬಿಲ್ಲು ಕಟ್ಟುವುದು, ಫೋನ್ಬಿಲ್ಲು ಕಟ್ಟುವುದು, ತಿಂಗಳ ಸಾಮಾನಿನ ಪಟ್ಟಿಯನ್ನು ಬರೆದು ವೆಂಕಟೇಶ ಕಾಮತರ ಅಂಗಡಿಗೆ ಕೊಟ್ಟು, ರಿಕ್ಷದಲ್ಲಿ ಸಾಮಾನುಗಳನ್ನು ಮನೆಗೆ ಕಳುಹಿಸಲು ಏರ್ಪಾಡು ಮಾಡುವುದು ಇತ್ಯಾದಿ ಕೆಲಸಗಳಿಗೆ ‘ಗಂಡು ದಿಕ್ಕು’ ಬೇಕಾಗಿತ್ತು. ಈ ‘ಗಂಡು ದಿಕ್ಕಾಗಿ’ ಅವರಿಗೆ ಒದಗಿದವನು ಸುಂದರರಾಜ.
ಪದ್ಮಕ್ಕನಿಗೆ ಸುಂದರರಾಜನು ತಮ್ಮ ಮಗಳ ಪ್ರೇಮದಲ್ಲಿ ಬಿದ್ದದ್ದು ಗೊತ್ತಿತ್ತೋ ಇಲ್ಲವೋ ಹೇಳುವುದು ಕಷ್ಟ. ಗೊತ್ತಿದ್ದರೂ ತೋರಿಸಿಕೊಂಡಿರಲಾರರು.
ಏಕೆಂದರೆ ಸುಂದರರಾಜನು ಪ್ರಾಥಮಿಕ ಶಾಲೆಯ ಶಿಕ್ಷಕ ಮತ್ತು ಊರಿನಲ್ಲೇ ಇರುವವ. ಹಾಗಾಗಿ ಅವನು ರಾಗಿಣಿಯಂತಹ ಸುಂದರಿಗೆ ತಕ್ಕವನಲ್ಲವೆಂದು ಅವರೆಲ್ಲರ ಆಗಿನ ಅಭಿಪ್ರಾಯವಾಗಿತ್ತು. ಅಲ್ಲದೆ ತಿಮಿಂಗಿಲ ಸಾಗರದಲ್ಲಿರಬೇಕೇ ಹೊರತು ನದಿಯಲ್ಲಿ ಇರಬಹುದೆ! ಹಾಗೆ ರಾಗಿಣಿ ಊರಿನಲ್ಲಿ ನಿಲ್ಲುವ ಹೆಣ್ಣಲ್ಲ; ಬೆಂಗಳೂರಿನಂತಹ ಮಹಾನಗರವೇ ಅವಳಿಗೆ ತಕ್ಕ ನೆಲೆ ಎಂದು ಸ್ವತಃ ಅವಳೂ, ಅವಳ ಅಮ್ಮ ಪದ್ಮಕ್ಕನೂ ನಂಬಿಕೊಂಡಿದ್ದರು. ಅವಳ ತಂದೆ ಹಿರಣ್ಯಪ್ಪ ತಮ್ಮ ಪತ್ನಿ (ಪದ್ಮಕ್ಕ) ನಂಬಿಕೊಂಡಿದ್ದುದನ್ನೇ ನಂಬಿಕೊಂಡಿರುತ್ತಿದ್ದರು. ಆ ಕಾರಣದಿಂದಾಗಿ ರಾಗಿಣಿಯ ಮನಸ್ಸಿಗೆ ಪ್ರತಿನಿತ್ಯ ಎಂಬಂತೆ ರವಾನೆಯಾಗುತ್ತಿದ್ದ ಸುಂದರರಾಜನ ಪ್ರೇಮದ ಮೂಕರ್ಜಿಗಳು ವಿಚಾರಣೆಯಿಲ್ಲದೆ ಹಾರಿಹೋಗುತ್ತಿದ್ದವು!
ರಾಗಿಣಿಯನ್ನು ಮದುವೆಯಾದ ಮಧುರಾಂತಕ ಗೋಪಾಲಕೃಷ್ಣನಿಗೆ ಬೆಂಗಳೂರಿನಲ್ಲಿ ಸ್ವಂತ ಬಿಸಿನೆಸ್ ಇತ್ತು. ಮದುವೆಯಾದ ಮೇಲೆ ಅದು ಅಂತಹ ದೊಡ್ಡ ಬಿಸಿನೆಸ್ ಏನೂ ಅಲ್ಲ, ಸಾಫ್ಟ್ವೇರ್ ಕಂಪೆನಿಗಳ ಸಿಬ್ಬಂದಿಗಳಿಗೆ ಊಟ ಉಪಾಹಾರ ಒದಗಿಸುವ ಕೇಟರಿಂಗ್ ಬಿಸಿನೆಸ್ ಎಂದು ಗೊತ್ತಾಗಿತ್ತು. ಮತ್ತು ಅವನಿದ್ದದ್ದು ಬಾಡಿಗೆ ಫ್ಲ್ಯಾಟಿನಲ್ಲಿ, ಸ್ವಂತ ಮನೆಯಲ್ಲಲ್ಲ ಎನ್ನುವುದು ಗೊತ್ತಾಗಿತ್ತು.
ಆದರೆ, ವಿಧಿಯ ಆಟ ವಿಚಿತ್ರ ಎಂಬಂತೆ ರಾಗಿಣಿಯ ಅಪ್ಪ ಹಿರಣ್ಯಪ್ಪನಿಗೆ (ಅವನ ಹೆಸರು ಹಿರಿಯಣ್ಣ ಎಂದಿರಲೂ ಸಾಕು; ಆದರೆ ಎಲ್ಲರೂ ಹಿರಣ್ಯಪ್ಪ ಎನ್ನುತ್ತಿದ್ದರು) ಅವರ ಧನಿ, ನವಕೋಟಿನಾರಾಯಣ, ಮಕ್ಕಳಿಲ್ಲದ ಭುಜಂಗಯ್ಯ ತೀರಿಹೋಗುವಾಗ ಅವರ ಕೊನೆಗಾಲದಲ್ಲಿ ಅವರನ್ನು ನೋಡಿಕೊಳ್ಳುವ ಭಾಗ್ಯ ಸಿಕ್ಕಿತು. ಇದು ಭಾಗ್ಯವಯ್ಯ! ಯಾಕೆಂದರೆ ಭುಜಂಗಯ್ಯನವರು ಮನೆಯಲ್ಲಿ ಸೂಟು ಕೇಸುಗಳಲ್ಲಿ ಹಣದ ಕಟ್ಟುಗಳನ್ನು ಇಟ್ಟುಕೊಂಡಿದ್ದದ್ದು ಹಿರಣ್ಯಪ್ಪನಿಗೆ ಗೊತ್ತಿತ್ತು. ಹಾಗಾಗಿ ಭುಜಂಗಯ್ಯ ತೀರಿಕೊಂಡಾಗ ಕಾರಣಾಂತರದಿಂದ ಅಲ್ಲಿಗೆ ಭೇಟಿಕೊಟ್ಟಿದ್ದ ಅಳಿಯ ಮಧುರಾಂತಕ ಗೋಪಾಲಕೃಷ್ಣನ ಕೈಯಲ್ಲಿ ಎರಡು ಸೂಟುಕೇಸುಗಳನ್ನು ಕೊಟ್ಟು, ಅವನು ವಿಮಾನದಲ್ಲಿಯೇ ಬೆಂಗಳೂರಿಗೆ ಹೋಗುವ ಹಾಗೆ ವ್ಯವಸ್ಥೆ ಮಾಡಲು ಸುಲಭವಾಯಿತು. ಆಮೇಲೆ ಭುಜಂಗಯ್ಯನವರ ಸಾವಿನ ಸುದ್ದಿ ತಿಳಿದು ಅವರ ಸಂಬಂಧಿಕರು ಬಂದು ಅಂತ್ಯಕ್ರಿಯೆಗಿಂತಲೂ ಮುಂಚೆ ಸೂಟುಕೇಸನ್ನು ಹುಡುಕಿ, ಗಲಾಟೆ ಗಿಲಾಟೆ ಎಲ್ಲ ಆಗಿತ್ತು; ಅದು ಬೇರೆ ವಿಚಾರ.
ಆಮೇಲೆ ಮಧುರಾಂತಕ ಗೋಪಾಲಕೃಷ್ಣ ಮತ್ತು ರಾಗಿಣಿಯವರು ತಾವಿದ್ದ ಬಾಡಿಗೆ ಮನೆಯನ್ನು ಸ್ವಂತಕ್ಕೆ ಕೊಂಡುಕೊಂಡ ಕಾರಣ, ಸುಂದರರಾಜನನ್ನು ತಿರಸ್ಕರಿಸಿ ಮಧುರಾಂತಕ ಗೋಪಾಲಕೃಷ್ಣನನ್ನು ಮದುವೆಯಾದ ರಾಗಿಣಿಯ ನಿರ್ಧಾರ ಅತ್ಯುತ್ತಮವಾಯಿತೆಂದು ಪದ್ಮಕ್ಕ ಮನದಲ್ಲೇ ಕೊಂಡಾಡಿದ್ದರು. ಆದರೆ ಅವರು ಸುಂದರರಾಜನನ್ನು ಯಾವಾಗಲೂ ಪುತ್ರವಾತ್ಸಲ್ಯದಿಂದ ಕಾಣುತ್ತಿದ್ದುದಕ್ಕೆ ಕಾರಣ ಅವನು ಅವರಿಗೆ ಗಂಡುದಿಕ್ಕಾಗಿದ್ದುದೇ (ಅಥವಾ ಅದೊಂದೇ) ಕಾರಣ ಎನ್ನಲಾಗದು.
*****
ಸುಂದರರಾಜನ ಬದುಕಿನಲ್ಲಿ ಪೋಕ್ರಿ ಕುಟ್ಟಿಯ ಪ್ರಭಾವವನ್ನು ಏನೆಂದು ಬಣ್ಣಿಸಲಿ! ಅವನ ಅಪ್ಪ ವಾಸುದೇವ ಮಾಸ್ಟರರು ಬಾಲಕ ಸುಂದರರಾಜನನ್ನು ಕಣ್ಣಿನ ಬೊಂಬೆಗಿಂತಲೂ ಹೆಚ್ಚಿನ ಜಾಗರೂಕತೆಯಿಂದ, ಜಗಲಿಯಲ್ಲಿಟ್ಟರೆ ಕಾಗೆ ಕೊಂಡುಹೋಗುವುದೋ, ತೋಡಿನ ಬದಿಯಲ್ಲಿ ಬಿಟ್ಟರೆ ಮೀನು ಕೊಂಡುಹೋಗುವುದೋ, ಹೆಂಗಸರ ಅಂತಃಪುರದಲ್ಲಿ ಬಿಟ್ಟರೆ ಇಷ್ಟನಾರಿಯರೆಲ್ಲ ಅಷ್ಟದಿಕ್ಕುಗಳಿಂದ ಬಂದು ಎತ್ತಿ ಕೊಂಡೊಯ್ಯುವರೋ ಎಂದು ತಲ್ಲಣಿಸುತ್ತ ಸಾಕಿ ದೊಡ್ಡವನನ್ನಾಗಿ ಮಾಡಿರುವರು. ಅವರಿಗೆ ಮಗನ ಮೇಲೆ ಪ್ರೀತಿ ಉಕ್ಕಿದಾಗಲೆಲ್ಲ, ಅವನನ್ನು ವ್ಯಾಮೋಹದಿಂದ ಬೆರಗುಗಣ್ಣಿನಿಂದ ನೋಡುತ್ತಾ, “ಯೇ ಪೋಕ್ರಿ ಕುಟ್ಟೀ….!!!” ಎಂದು ಮುದ್ದಿನಿಂದ ಕರೆಯುತ್ತಿದ್ದರು. ಹಾಗಾಗಿ ಸುಂದರರಾಜನ ಮನಸ್ಸಿನಲ್ಲಿ ತಾನು ಪೋಕ್ರಿ ಕುಟ್ಟಿ ಎಂಬ ಭಾವನೆಯು ಗಟ್ಟಿಯಾಗಿ ಬಲಿತಿತ್ತು.
‘ಪೋಕ್ರಿ ಕುಟ್ಟಿ’ ಅನ್ನುವುದರ ಅರ್ಥ ‘ಕಳ್ಳ ಕೃಷ್ಣಾ!!’ ಎಂದು ತಿಳಿದುಕೊಂಡು ಮುದಗೊಂಡು ಮನಸ್ಸಿನಲ್ಲೇ ಕೊಳಲನೂದುತ್ತಾ ಬೆಣ್ಣೆ ಕದ್ದು ಮೆಲ್ಲುತ್ತಾ ಗೋಪಬಾಲೆಯರನ್ನು ಹುಡುಕುತ್ತಾ ತಂದೆಯಿಂದ ತಪ್ಪಿಸಿಕೊಂಡು ಓಡಿಬಿಡುತ್ತಿದ್ದನು! ಅದೊಂದು ರೀತಿಯ ನಿಂದಾಸ್ತುತಿಯೇ ಎಂದು ಪರಿಗಣಿಸಿ ಆ ಹೆಸರನ್ನು ಇಷ್ಟಪಟ್ಟಿದ್ದ. ಆಮೇಲೆ ಕಾಲ ಉರುಳಿತು. ವಾಸುದೇವ ಮಾಸ್ಟರರು ಸತ್ತುಹೋದರು; ಅವನಿಗೆ ಶಿಕ್ಷಕನಾಗಿ ನೇಮಕಾತಿ ಆಯಿತು; ಅವನು ಮದುವೆಯಾಗದೆ ಉಳಿಯಲು ನಿರ್ಧರಿಸಿದ; ಅವನ ಅಮ್ಮ ‘ನಾನಿದ್ದಷ್ಟು ಸಮಯ ನಿನಗೆ ಬೇಯಿಸಿಹಾಕುತ್ತೇನೆ; ಮುಂದೆ ನಿನ್ನವರೂಂತ ಯಾರೂ ಬೇಡವಾ? ಒಂದು ಮದುವೆಯಾಗು ಅಣಯ!” (‘ಅಣಯ’ ಅಮ್ಮ ಕರೆಯುತ್ತಿದ್ದ ಅವನ ಮುದ್ದಿನ ಹೆಸರು) ಎಂದು ಒತ್ತಾಯ ಮಾಡುತ್ತಿದ್ದರೂ ಜಗ್ಗದೆ ಉಳಿದ; ತನ್ನ ಒಂಟಿತನ ಕಳೆಯಲೆಂಬಂತೆ ನಾಯಿಯೊಂದನ್ನು ಸಾಕತೊಡಗಿ ಅದಕ್ಕೆ ‘ಪೋಕ್ರಿ ಕುಟ್ಟಿ’ ಎಂಬ ಹೆಸರಿಟ್ಟು ತನ್ನ ಬಾಲ್ಯವನ್ನು ಅಜರಾಮರ ಮಾಡಿದ.
ಬಾಲ್ಯದಲ್ಲಿ ವಾಸುದೇವ ಮಾಸ್ಟರರ ಕಣ್ಗಾಪಿನಲ್ಲಿ ಬೆಳೆದ ಮುದ್ದು ಸುಂದರರಾಜನು ಅವನ ಪ್ರಾಯದ ಹುಡುಗ ಹುಡುಗಿಯರೆಲ್ಲರ ಸ್ನೇಹದಿಂದ ವಂಚಿತನೇ ಆದ ಎಂದು ಹೇಳಬಹುದು. ಸುಂದರರಾಜನು ಓರಗೆಯ ಮಕ್ಕಳೊಡನೆ ಆಟವಾಡುತ್ತಿದ್ದರೆ ವಾಸುದೇವ ಮಾಸ್ಟರರು ಅಲ್ಲೇ ಪಕ್ಕದಲ್ಲಿ ನಿಂತುಕೊಂಡು ಆಟವನ್ನೇ ಗಮನಿಸುತ್ತಾ, ಸುಂದರರಾಜನ ಪರವಾಗಿ ಉಳಿದ ಮಕ್ಕಳೊಡನೆ ಜಗಳಾಡುತ್ತಾ, ಅವರಿಗೆಲ್ಲ ಗದರಿಸುತ್ತಾ, ಸುಂದರರಾಜನೇ ಗೆಲ್ಲುವಂತೆ ಆಡಬೇಕೆಂದು ಒತ್ತಾಯಿಸುತ್ತಾ ಇರುತ್ತಿದ್ದರು. ಹಾಗಾಗಿ ಆ ಮಕ್ಕಳೆಲ್ಲ ಅವನಿಗೆ ಗೊತ್ತಾಗದ ಸ್ಥಳಗಳಿಗೆ ಹೋಗಿ ಆಡಿಕೊಳ್ಳುತ್ತಿದ್ದರು.
ಹಾಗೆ ದೊಡ್ಡವನಾದ ಸುಂದರರಾಜನಿಗೆ ಶ್ರೀಕೃಷ್ಣನಂತೆ ಹಲವಾರು ಮಂದಿ ಗೆಳತಿಯರು ಸಿಗದೆ ರಾಗಿಣಿ ಎಂಬ ಒಬ್ಬಳು ಮಾಯಾವಿನಿಯ ಮೋಹಜಾಲದಲ್ಲಿ ಸಿಕ್ಕಿಬಿಟ್ಟ. ಅವನ ಬದುಕಿನಲ್ಲಿ ರಾಗಿಣಿ ಸಂಭವಿಸಿದ್ದು ಅವನಿಗೆ ಹದಿನೆಂಟು ವರ್ಷ ವಯಸಾಗಿದ್ದಾಗ. ಆಗ ಅವಳಿಗೆ ಹದಿನಾರು ವರ್ಷ ಹಿಡಿದಿರಬಹುದಷ್ಟೆ! ಆಗಲೇ ಅವಳು ಅಪ್ರತಿಮ ಸುಂದರಿಯಾಗಿದ್ದಳು. ಚಂಚಲ ಕಣ್ಣುಗಳಿಂದ ನೋಡಿದರೆ ಎದುರಿಗೆ ಇದ್ದವರು ಮರುಳಾಗುವಂತಿದ್ದಳು. ಮತ್ತು ತನ್ನ ಕಣ್ಣುಗಳ ಶಕ್ತಿಯ ಅರಿವು ಅವಳಿಗೆ ಆಗಲೇ ಇತ್ತೆಂದು ಕಾಣುತ್ತದೆ.
ರಾಗಿಣಿಯನ್ನು ಸುಂದರರಾಜನು ಕಂಡದ್ದು ಒಂದು ಮದುವೆಯಲ್ಲಿ. ಆಗ ಅವನು ಪಿಯುಸಿ ಪರೀಕ್ಷೆ ಮುಗಿಸಿ ಮುಂದೆ ಡಿಗ್ರಿ ಕಾಲೇಜಿಗೆ ಸೇರಲು ಸಿದ್ಧನಾಗುತ್ತಿದ್ದ. ಅವಳದು ಹತ್ತನೆಯ ತರಗತಿ ಪಾಸಾಗಿ ಪಿ.ಯು.ಸಿ.ಗೆ ಹೋಗಬೇಕಿತ್ತಷ್ಟೆ.
ಅದೊಂದು ಗದ್ದೆಯಲ್ಲಿ ಹಾಕಿಸಿದ್ದ ಅಂತರ್ ಚಪ್ಪರದ ಮದುವೆ. ಅಪ್ಪ ಅಮ್ಮನ ಜತೆಗೆ ಮದುವೆಗೆ ಹೋಗಿದ್ದ ಸುಂದರರಾಜನು ಅವರ ಜತೆಗೆ ಇರದೆ ಸತೀಶ ಮತ್ತು ಹರೀಶ ಎಂಬ ತನ್ನ ಇಬ್ಬರು ಗೆಳೆಯರ ಜತೆಗೆ ತಿರುಗಾಡುತ್ತಾ, ಹುಡುಗಿಯರನ್ನು ದೂರದಿಂದಲೇ ಗಮನಿಸುತ್ತಾ ಸಂತೋಷಪಡುತ್ತಿದ್ದ. ಮದುವೆಯ ಊಟಕ್ಕೆ ಕರೆಕೊಟ್ಟಾಗ ಆ ಮೂವರು ಹುಡುಗರೂ ಎದ್ದು ಊಟಕ್ಕೆ ಜಾಗ ಹಿಡಿಯೋಣವೆಂದು ಹೊರಟಿದ್ದರು. ಆಗ ಹಿಂದೆ ತಿರುಗಿ ತನ್ನ ಬಳಗದ ಹೆಂಗಸರ ಬಳಿಯೋ, ಹುಡುಗಿಯರ ಬಳಿಯೋ ಏನನ್ನೋ ಹೇಳಿ ಒಮ್ಮೆಲೆ ಇತ್ತ ತಿರುಗಿ ಎದುರುಬಂದ ರಾಗಿಣಿ ಇಡಿಯಾಗಿ ಸುಂದರರಾಜನ ಹೊಟ್ಟೆ, ಎದೆ, ಕುತ್ತಿಗೆಗೆ ಸ್ಪರ್ಶವಾದಳು.
ಅಗಲವಾದ ಜಿಂಕೆಕಣ್ಣುಗಳ, ಚಂದ್ರನಂತಹ ಅಗಲ ಮುಖದ, ದಟ್ಟ ಕೂದಲಿನ, ಜರಿಯಿದ್ದ ನೀಲಿಬಣ್ಣದ ಲಂಗ ರವಕೆಯ, ಶ್ವೇತಸುಂದರಿ ಇಡಿಯಾಗಿ ತನ್ನ ಮೈಗೆ ಒರಗಿದಾಗ ಸುಂದರರಾಜನ ಉಸಿರು ನಿಂತಂತಾಯಿತು. ಸ್ವರ್ಗಕ್ಕೇ ಏರಿದಂತಹ ಸೌಖ್ಯ ಅವನೊಳಗೆ ಬೆಚ್ಚಗೆ ಹರಿದಾಡಿತು. ಆ ಅನುಭೂತಿ ಅವನ ಬದುಕಿನಲ್ಲಿ ಮತ್ತೊಮ್ಮೆ ಸಿಗಲೇ ಇಲ್ಲ. ಅಂತಹ ಅನುಭವವದು. ರಾಗಿಣಿ ಒಮ್ಮೆಲೆ ಹಿಂದಕ್ಕೆ ಚಿಮ್ಮಿ, ಅವನ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿ, ನಾಚಿಕೊಂಡು ಓಡಿಹೋದಳು. ಅದೇ ಕ್ಷಣವೇ ಸುಂದರರಾಜನ ಮನಸ್ಸು ಅವಳೊಳಗೆ ಕಳೆದುಹೋಯಿತು. ಅವನ ಬದುಕಿನಲ್ಲಿ ಅವನಿಗೆ ಮತ್ತೊಬ್ಬಳು ಹೆಣ್ಣನ್ನು ಬಯಸಲು, ಆಕರ್ಷಿಸಲು ಸಾಧ್ಯವಾಗದೇ ಹೋಯಿತು.
ಅವನ ಮನಸ್ಸನ್ನು ಅರಿತುಕೊಂಡಂತೆ ಸತೀಶ ಮತ್ತು ಹರೀಶ ಅವನಿಗೆ ರಾಗಿಣಿಯನ್ನು ಕಟ್ಟಿಕೊಟ್ಟು ತಮಾಷೆ ಮಾಡತೊಡಗಿದರು. ಊಟವಾದ ಮೇಲೆ ಅವಳ ಜತೆಗೆ ಮಾತಾಡೋಣ ಎಂದು ಹರೀಶ ಹೇಳಿದ. ಆದರೆ ಮದುವೆಮನೆಯಲ್ಲಿ ರಾಗಿಣಿಯ ಜತೆಗೆ ಮಾತಾಡಲು ಸಾಧ್ಯವಾಗಲಿಲ್ಲ. ಸುಂದರರಾಜನು ಆಮೇಲೆ ಆ ಊರಿನಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೆ ಹೋಗಲಾರಂಭಿಸಿದ. ಅಲ್ಲಲ್ಲಿ ಸಿಗುತ್ತಿದ್ದ ರಾಗಿಣಿಯ ಪರಿಚಯ ಮಾಡಿಕೊಂಡ. ಆಮೇಲೆ ಅವಳೊಡನೆ ಒಂದು ತಪ್ಪಿದರೆ ಎರಡು ಮಾತಾಡಲು ಸಾಧ್ಯವಾಯಿತು.
“ರಿಸಲ್ಟ್ ಬಂತಾ?”
“ಎಲ್ಲಿಗೆ ಸೇರುತ್ತಿ, ಪಿಯುಸಿಗೆ?”
ಅವಳು ಉತ್ತರಿಸುತ್ತಿದ್ದಳು. ಮಾತ್ರವಲ್ಲದೆ ಕಾರಣವಿಲ್ಲದೆ ನಗುತ್ತಿದ್ದಳು. ಸುಂದರರಾಜನು ಹೆಚ್ಚುಹೆಚ್ಚು ಆಳವಾದ ಕೆಸರಿನಲ್ಲಿ ಮುಳುಗುತ್ತಿದ್ದ.
ಸುಂದರರಾಜನು ಅವಳ ಬಗ್ಗೆ ಎಷ್ಟು ಹುಚ್ಚನಾಗಿದ್ದನೆಂದು ಹೇಳುವ ಒಂದು ಘಟನೆಯಿದೆ. ರಾಗಿಣಿ ಡಿಗ್ರಿಗೆ ಸೇರಿದಾಗ (ಡಿಗ್ರಿ ಕಂಪ್ಲೀಟ್ ಆಗಲಿಲ್ಲ ಎನ್ನುವುದು ಬೇರೆ ಮಾತು) ಕಾರ್ಕಳ ಕಾಲೇಜಿನ ಹಾಸ್ಟೆಲಿನಲ್ಲಿರುವ ವ್ಯವಸ್ಥೆ ಮಾಡಿದ್ದರು. ಅದಕ್ಕೆ ಕಾರಣ ಎಂದು ಕೆಲವು ಅಪವಾದಗಳು ಸುಂದರರಾಜನ ಕಿವಿಗೆ ಬಿದ್ದಿದ್ದರೂ ಅವನು ಅವುಗಳನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ. ಒಮ್ಮೆ ಅವನು ಟಿ.ಸಿ.ಎಚ್. (ಶಿಕ್ಷಕ ತರಬೇತಿ ಕೋರ್ಸ್) ಮುಗಿಸಿ ಕೆಲಸಕ್ಕೆ ಸೇರುವ ಮುನ್ನ ಅವಳನ್ನು ನೋಡದೆ ಬದುಕಲಾರೆ ಎಂಬ ಮನಸ್ಥಿತಿಯನ್ನು ಹೊಂದಿ, ಅವಳಿಗೆ ಸಿಹಿತಿಂಡಿ, ಕೇಕ್, ಹಣ್ಣುಗಳ ಬುಟ್ಟಿಯನ್ನು ಹಿಡಿದುಕೊಂಡು ಅವಳಿದ್ದ ಹಾಸ್ಟೆಲಿಗೆ ಹೋಗಿ, ‘ಮನೆಯವರು ಕಳಿಸಿದರು’ ಎಂದು ವಾರ್ಡನಿಗೆ ಹೇಳಿ ಅವಳನ್ನು ಕರೆಸಿ ಅವಳನ್ನು ನೋಡಿ, ನಾಲ್ಕು ಮಾತುಗಳನ್ನು ವಿನಿಮಯ ಮಾಡಿಕೊಂಡು, ಅವಳ ನಗುವನ್ನು ಸ್ವೀಕರಿಸಿ ಹಿಂದಿರುಗಿ ಬಂದಿದ್ದ!
ಕೊನೆಗೊಮ್ಮೆ ರಾಗಿಣಿಗೆ ಮಧುರಾಂತಕ ಗೋಪಾಲಕೃಷ್ಣನೊಡನೆ ಮದುವೆಯಾಯಿತು. ಸುಂದರರಾಜನು ಅಷ್ಟರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಉದ್ಯೋಗ ಸಂಪಾದಿಸಿದ್ದರೂ ಹಿರಣ್ಯಪ್ಪ ಮತ್ತು ಪದ್ಮಕ್ಕ ಅದನ್ನು ಕನ್ಸಿಡರ್ ಮಾಡಲಿಲ್ಲ. ಮುಖ್ಯವಾಗಿ ಸುಂದರರಾಜನು ‘ರಾಗಿಣಿಯನ್ನು ತನಗೆ ಮದುವೆ ಮಾಡಿಕೊಡಿ’ ಎಂದು ಹೇಳುವ ಮುಂಚೆಯೇ ಅವಳಿಗೆ ಮದುವೆಯಾಗಿಹೋಗಿತ್ತು. ಯಾರನ್ನು ದೂರುವುದು? ಸುಂದರರಾಜನು, ‘ಅವಳಿಗಾದರೂ ಹೇಳಬಹುದಿತ್ತು’ ಎಂಬ ಒಂದು ಕಾರಣವನ್ನು ಇಟ್ಟುಕೊಂಡು ಕೊರಗಲಾರಂಭಿಸಿದ, ಅಷ್ಟೆ.
ಈಗ ಸುಂದರರಾಜನು ನಲವತ್ತೈದು ವಸಂತಗಳನ್ನು ಕಂಡಿರುವ ಬ್ರಹ್ಮಚಾರಿ. ಉಣ್ಣದೆಯೆ ಉಪವಾಸಿ, ಬಳಸದೆಯೆ ಬ್ರಹ್ಮಚಾರಿ. ಅವನ ಬದುಕು ಹೀಗಾದುದಕ್ಕೆ ವಾಸುದೇವ ಮಾಸ್ಟರರನ್ನು ದೂರೋಣವೆ? ಸಲ್ಲದು. ರಾಗಿಣಿಯೇ ಕಾರಣ ಎನ್ನೋಣವೇ? ಅವಳು ಸುಂದರರಾಜನನ್ನು ಪ್ರೀತಿಸಿದ್ದೇನೆ ಎಂದು ಯಾವತ್ತೂ ಹೇಳಿರಲಿಲ್ಲ, ಅವನಿಗೆ ಯಾವುದೇ ಬಗೆಯ ಆಶ್ವಾಸನೆ ಕೊಟ್ಟಿರಲಿಲ್ಲ. ಕೊನೆಗೆ ವಿಧಿಯನ್ನು ದೂರಬೇಕಷ್ಟೆ!
*****
ಇದೆಲ್ಲ ಹಿಂದಿನ ಕಥೆ. ಈಗ ನೇರವಾಗಿ ಎರಡನೆಯ ಪೋಕ್ರಿ ಕುಟ್ಟಿಯ ಕಥೆಗೆ ಬರೋಣ. ಸುಂದರರಾಜನು ಸಾಕಿದ ಎರಡನೆಯ ನಾಯಿಯೇ ಎರಡನೆಯ ಪೋಕ್ರಿ ಕುಟ್ಟಿ. ಇದು ಸ್ವಭಾವತಃ ಮುನ್ನುಗ್ಗುವ ಧೈರ್ಯಶಾಲಿ ಗುಣವನ್ನು ಹೊಂದಿತ್ತು. ಸ್ವತಂತ್ರ ಸ್ವಭಾವವನ್ನೂ ಹೊಂದಿತ್ತು. ಅದರಷ್ಟಕ್ಕೆ ಊರಿಡೀ ಎಲ್ಲಿಗೆ ಬೇಕಾದರೂ ಹೋಗಿ ಬರುತ್ತಿತ್ತು!
ಈಗ ಸುಂದರರಾಜನು ಹೊಸ ಹೊಂಡಾ ಆಕ್ಟಿವಾ ಸ್ಕೂಟರನ್ನು ತೆಗೆದುಕೊಂಡಿದ್ದ. ಎರಡನೆಯ ಪೋಕ್ರಿ ಕುಟ್ಟಿ ತನಗೆ ಬೇಕಾದಷ್ಟು ದೂರ ಅದರ ಹಿಂದಿನಿಂದ ಓಡುತ್ತಾ ಹೋಗಿ ಮತ್ತೆ ಮನೆಗೆ ಹಿಂದಿರುಗುತ್ತಿತ್ತು, ಅಥವಾ ಬೇರೆ ದಾರಿ ಹಿಡಿದು ಹೋಗುತ್ತಿತ್ತು. ಅದರ ವೇಗ ಸುಂದರರಾಜನ ಸ್ಕೂಟರಿನ ವೇಗಕ್ಕಿಂತಲೂ ಹೆಚ್ಚಾಗಿಯೇ ಇರಬಹುದು ಅನಿಸುತ್ತಿತ್ತು. ಮತ್ತು ಅದಕ್ಕೆ ಬೇರೆಯವರ ವಾಹನಗಳ ಹಿಂದೆ ಓಡಲು ಇಂಟರೆಸ್ಟ್ ಇರುತ್ತಿರಲಿಲ್ಲ; ಮತ್ತು ಸುಮ್ ಸುಮ್ಮನೆ ಬೊಗಳುತ್ತಿರಲಿಲ್ಲ.
ಎರಡನೆಯ ಪೋಕ್ರಿ ಕುಟ್ಟಿ ಯಾವಾಗಾದರೊಮ್ಮೆ ಸುಂದರರಾಜನ ಶಾಲೆಗೂ ಹೋಗಿ ಅವನನ್ನು ನೋಡಿ, ಅವನು ಅದನ್ನು ಮಾತಾಡಿಸಿದ ಮೇಲೆ ಹಿಂದೆ ಬರುತ್ತಿತ್ತು. ಅಂತೂ ಸಂಜೆ ಅವನು ಮನೆಗೆ ಬರುವಷ್ಟರಲ್ಲಿ ಅದೂ ಮನೆಯಲ್ಲಿರುತ್ತಿತ್ತು.
ಇಷ್ಟರಲ್ಲಿ ರಾಗಿಣಿಯ ಬದುಕಿನಲ್ಲಿ ಕೂಡ ಬಿರುಗಾಳಿ ಬೀಸಿಹೋಗಿತ್ತು. ಅವಳ ಮೊದಲನೆಯ ಮಗಳು ಒಬ್ಬ ಗ್ಯಾರೇಜಿನವನೊಟ್ಟಿಗೆ ಓಡಿಹೋಗಿದ್ದಳು. ಎರಡನೆಯ ಮಗಳು ಹೀಗಾಗಬಾರದೆಂದು ರಾಗಿಣಿ ಅವಳಿಗೆ ಬೇಗನೆ ಮದುವೆ ಮಾಡಿದಳು. ಅವಳೂ ಅವಳ ಗಂಡನೂ ಆಗಾಗ ಇವರ ಮನೆಗೆ ಬಂದು ಇರುತ್ತಿದ್ದರು. ಯಾವುದೋ ಮಾಯಕದಲ್ಲಿ ಒಮ್ಮೆ ಆ ಎರಡನೆಯ ಮಗಳು ರಾಗಿಣಿಯ ಲಾಕರಿನಲ್ಲಿದ್ದ ಚಿನ್ನ ಮತ್ತು ನಗದನ್ನೆಲ್ಲ ಎತ್ತಿಕೊಂಡು ಹೋದಳು. ಕೇಳಿದರೆ ಯಾವ ಭಯವೂ ಇಲ್ಲದೆ ಒಪ್ಪಿಕೊಂಡಳಂತೆ. ಅವಳು ಅದನ್ನು ಹಿಂದೆಕೊಡಲು ಒಪ್ಪದ ಕಾರಣ ಇನ್ನು ಮನೆಗೆ ಬರಬಾರದು ಎಂದು ನಿರ್ಬಂಧಿಸುವುದಷ್ಟೆ ಸಾಧ್ಯವಾಯಿತು. ಆಮೇಲೆ ಮಧುರಾಂತಕ ಗೋಪಾಲಕೃಷ್ಣ ಹೃದಯಾಘಾತವಾಗಿ ಸತ್ತ. (ಮಗಳು ನಗ, ನಗದು ಕೊಂಡುಹೋದ ಕಾರಣಕ್ಕಲ್ಲ, ಸಹಜವಾಗಿ ಆರೋಗ್ಯಕೆಟ್ಟು ಹೃದಯಾಘಾತವಾದದ್ದು). ಆಮೇಲೆ ರಾಗಿಣಿ ಬೆಂಗಳೂರಿನ ಎಲ್ಲವನ್ನೂ ಮಾರಾಟಮಾಡಿ ಊರಿಗೆ ಬಂದು ತವರುಮನೆಯನ್ನೇ ಗಟ್ಟಿಮಾಡಿಕೊಂಡಳು. ಹಣವನ್ನೆಲ್ಲ ಬ್ಯಾಂಕಿನಲ್ಲಿಟ್ಟು ಅದರ ಬಡ್ಡಿಯನ್ನೂ ಕೂಡಿಡುತ್ತಾ ಭವಿಷ್ಯವನ್ನು ಭದ್ರ ಮಾಡಿಕೊಳ್ಳತೊಡಗಿದಳು.
ರಾಗಿಣಿಗೆ ಊರಿನಲ್ಲಿ ಬದುಕು ಕಷ್ಟವೆಂದು ಕಾಣಲೇ ಇಲ್ಲ! ಮನೆಗೆ ಗಂಡುದಿಕ್ಕಾಗಿ ಇದ್ದ ಸುಂದರರಾಜನಿಗೆ ಫೋನ್ ಮಾಡಿ ಮೆಡಿಕಲ್ ಸ್ಟೋರಿನಿಂದ ಫ್ಯಾನ್ಸಿ ಅಂಗಡಿಯಿಂದ ತನಗೆ ಬೇಕಾದ ಮಾತ್ರೆ, ಮದ್ದು, ಸೌಂದರ್ಯವರ್ಧಕಗಳನ್ನು ಸಂಕೋಚವಿಲ್ಲದೆ ತರಿಸಿಕೊಳ್ಳತೊಡಗಿದಳು.
ಸುಂದರರಾಜನು ಮಾತ್ರ ಈ ಸೇವೆಗಳನ್ನು ಮಾಡುವಾಗ ತನ್ನ ಬದುಕು ಹೊಸ ರೀತಿಯಲ್ಲಿ ರೂಪುಗೊಳ್ಳಬಹುದೆ ಎಂದು ಆಸೆಪಡುತ್ತಾ ಅವಳ ಮೇಲಿನ ಹಳೆಯ ಪ್ರೀತಿಯನ್ನು ಇಮ್ಮಡಿಸಿಕೊಂಡು ಅವಳ ಅನುಗ್ರಹಕ್ಕಾಗಿ ಕಾಯತೊಡಗಿದ. ಅದಕ್ಕೆ ಸ್ವಲ್ಪ ಪ್ರೋತ್ಸಾಹ ಅವಳ ಕಡೆಯಿಂದಲೂ ಬರಲಿ ಎಂದು ಭಾವನೆಗಳನ್ನು ಮಾತ್ರ ಅವಳ ಕಡೆಗೆ ಬೀರುತ್ತಾ ಪ್ರಯತ್ನಿಸತೊಡಗಿದ.
ಒಂದು ದಿನ ಸಂಜೆ ಶಾಲೆ ಬಿಟ್ಟ ಮೇಲೆ ಸುಂದರರಾಜನು ರಾಗಿಣಿ ಕೇಳಿದ್ದ ಕೆಲವು ವಸ್ತುಗಳನ್ನು ಹಿಡಿದುಕೊಂಡು ಅವಳ ಮನೆಗೆ ಹೋದ. ಮನೆಯಲ್ಲಿ ರಾಗಿಣಿ ಒಬ್ಬಳೇ ಇದ್ದಳು. ಪದ್ಮಕ್ಕ ಸಂಜೆಯ ಹೊತ್ತಿನ ಪಟ್ಟಾಂಗಕ್ಕಾಗಿ ಸ್ವಲ್ಪ ದೂರದ ಇನ್ನೊಂದು ಮನೆಗೆ ಹೋಗಿದ್ದರು. ರಾಗಿಣಿಯ ವಸ್ತುಗಳನ್ನು ಅವಳ ಕೈಯಲ್ಲಿ ಕೊಡಲು ಸಮೀಪಿಸಿದ ಸುಂದರರಾಜನು ಸ್ವಲ್ಪ ಪ್ರಯತ್ನಪಟ್ಟು ಅವಳ ಕೈಯನ್ನು ಸ್ಪರ್ಶಿಸಿದ. ಮೈ ಜುಮ್ಮೆಂದು ಪ್ರತಿಕ್ರಿಯಿಸಿ ಬೆಚ್ಚಗಾಯಿತು.
ಅಲ್ಲಿಯೇ ಕುಳಿತು ಅನುರಾಗದಿಂದ ರಾಗಿಣಿಯನ್ನು ನೋಡಿದ. ಅವಳಿಗೆ ಇವನು ಸ್ಪರ್ಶಿಸಿದ ಉದ್ದೇಶ ಅರಿವಾಗಿದ್ದರೂ ಆಗದವಳಂತೆ ಸ್ವಲ್ಪ ದೂರ ಹೋಗಿ ಕುಳಿತಳು. ಅವನ ನೋಟಕ್ಕೆ ನೋಟವನ್ನು ಕೂಡಿಸದೆ ಅವನು ತಂದಿದ್ದ ಸಾಮಗ್ರಿಗಳನ್ನು ಒಂದೊಂದಾಗಿ ಪರಿಶೀಲಿಸಿದಳು. ಅವುಗಳ ಬೆಲೆಯನ್ನು ಪರಿಶೀಲಿಸಿದಳು. ಆಮೇಲೆ ಎಕ್ಸ್ಪಯರಿ ಡೇಟನ್ನು ಪರಿಶೀಲಿಸಿದಳು. ಆಮೇಲೆ ತಯಾರಿಸಿದ ಕಂಪೆನಿಯ ಹೆಸರುಗಳನ್ನು ಓದಿದಳು. ಮತ್ತೊಮ್ಮೆ ಬೆಲೆ, ಎಕ್ಸ್ಪಯರಿ ಡೇಟ್, ಕಂಪೆನಿಯ ಹೆಸರು….
ಕೊನೆಗೆ ತಲೆಯೆತ್ತಿ, “ಕಾಫಿ ಮಾಡೋಣವೆಂದರೆ ಅಮ್ಮ ಸಕ್ಕರೆ ಎಲ್ಲಿಡುತ್ತಾಳೆ, ಕಾಫಿಪುಡಿ ಎಲ್ಲಿಡುತ್ತಾಳೆ ಎಂದು ನಾನು ನೋಡುವುದಂತ ಇಲ್ಲ ಮಾರಾಯ! ಸ್ವಲ್ಪ ಹೊತ್ತು ನಿಂತರೆ ಅಮ್ಮನೇ ಬರುತ್ತಾಳೆ. ನಿನಗೆ ತಡವಾಗುತ್ತದೆ ಅಂತ ಕಾಣುತ್ತದೆ, ಅಲ್ವಾ?” ಎಂದು ಯಾವ ಭಾವವೂ ಇಲ್ಲದಂತೆ ಹೇಳಿದಳು. ಭಾವ ಇದ್ದರೆ ಅದು, “ಈ ಮನುಷ್ಯ ಯಾವಾಗ ಹೋದಾನು!” ಎನ್ನುವ ಅಸಹನೆಯೊಂದೇ.
ಜೀವದಲ್ಲೆಲ್ಲ ಅನುರಾಗವನ್ನು ತುಂಬಿಕೊಂಡು ತುಡಿಯುತ್ತಿದ್ದ ಸುಂದರರಾಜನನ್ನು ಎತ್ತಿ ಹೊರಗೆ ಎಸೆದಂತಾಯಿತು. ಅವನು ಸ್ಕೂಟರ್ ಸ್ಟಾರ್ಟ್ ಮಾಡಿಕೊಂಡು ಮನೆಯತ್ತ ಓಡಿಸಿದ.
ದಾರಿಯಲ್ಲಿ ಅವನ ಮನಸ್ಸು ಅಮ್ಮ ಯಾವಾಗಲೂ ಒತ್ತಾಯಿಸುತ್ತಿದ್ದ ಒಂದು ಮದುವೆ ಪ್ರಸ್ತಾವದ ಕಡೆಗೆ ಹೊರಳಿತು. ಸೊಸೈಟಿ ರಾಜೇಶನ ವಿಧವೆ ಪತ್ನಿ ಸರಿತಳನ್ನು ನೀನು ಮದುವೆಯಾಗಬಹುದಲ್ಲ, ಅವಳ ಕಡೆಯವರು ಪ್ರಸ್ತಾಪ ಮಾಡಿದ್ದಾರೆ ಎಂದು ಅಮ್ಮನೇ ಹೇಳಿದ್ದಳು. ಊರಿನ ವ್ಯವಸಾಯ ಸೇವಾ ಸಹಕಾರಿ ಸಂಘ(ಸೊಸೈಟಿ)ದಲ್ಲಿ ಕೆಲಸಕ್ಕಿದ್ದ ರಾಜೇಶ ಅಪಘಾತವೊಂದರಲ್ಲಿ ತೀರಿಕೊಂಡಿದ್ದ. ಅವನ ಕೆಲಸ ಅವನ ಹೆಂಡತಿ ಸರಿತಳಿಗೆ ಸಿಕ್ಕಿತ್ತು. ಅವರಿಗೆ ಮಕ್ಕಳಿರಲಿಲ್ಲ. ಸರಿತಳನ್ನು ಸುಂದರರಾಜ ಮಾಸ್ಟರು ಮದುವೆಯಾದರೆ ಒಳ್ಳೆಯದು ಎಂದು ಹಲವು ವ್ಯಕ್ತಿಗಳಿಗೆ ಆಸೆಯಿತ್ತು. ಕೆಲವು ಹಿರಿಯರು ಬಂದು ಸುಂದರರಾಜನ ಅಮ್ಮನ ಬಳಿಯೂ ಹೇಳಿ, ಅವರನ್ನು ಒಪ್ಪಿಸಿದ್ದರು.
ಸುಂದರರಾಜನು ತನ್ನ ಮನೆಗೆ ಹೋಗುವ ಸಣ್ಣ ರಸ್ತೆಗೆ ಸ್ಕೂಟರನ್ನು ತಿರುಗಿಸಿದಾಗ ಎರಡನೆಯ ಪೋಕ್ರಿ ಕುಟ್ಟಿ ಎಲ್ಲಿಂದಲೋ ಬಂದು ಅವನ ಪಕ್ಕದಲ್ಲಿ ಓಡುತ್ತಾ ಅವನ ಮುಖವನ್ನು ಸ್ನೇಹಭಾವದಿಂದ ನೋಡಿತು. ಸುಂದರರಾಜ ಸ್ಕೂಟರನ್ನು ನಿಧಾನಗೊಳಿಸಿ, “ಎಲ್ಲಿಗೆ ಹೋಗಿದ್ದಿ ಪೋಕ್ರಿ?” ಎಂದು ಕೇಳಿದ.
ಪೋಕ್ರಿ ಕುಟ್ಟಿ ನಗುತ್ತಾ, ಏನೊಂದೂ ಉತ್ತರಿಸದೆ ವೇಗವಾಗಿ ಮುಂದೆ ಓಡಿತು. ಸುಂದರರಾಜ ಮನೆಗೆ ತಲಪುವಷ್ಟರಲ್ಲಿ ಪೋಕ್ರಿ ಕುಟ್ಟಿ ಅವನ ಅಮ್ಮನಿಗೆ ಮುಖ ತೋರಿಸಿ, ತನಗಾಗಿ ತಟ್ಟೆಯಲ್ಲಿ ಹಾಕಿದ್ದ ಅನ್ನವನ್ನು ತಿನ್ನತೊಡಗಿತ್ತು.
“ಪೋಕ್ರಿ ಕುಟ್ಟಿ ನಿನ್ನೆಯಿಂದ ಬಂದಿರಲಿಲ್ಲ. ಬೇರೆ ನಾಯಿಗಳ ಜತೆಗೆ ಊರು ಸುತ್ತುತ್ತಾ ಇದೆ” ಎಂದು ಅಮ್ಮ ನಕ್ಕರು.
ತಾನು ಅನ್ನ ತಿಂದಾದ ಮೇಲೆ ಮತ್ತೆ ಹೋಗುವವನೇ ಎಂಬಂತೆ ಪೋಕ್ರಿ ಕುಟ್ಟಿ ಅವರ ಮುಖವನ್ನು ನೋಡಿ ಹೌದೋ ಅಲ್ಲವೋ ಅನ್ನುವಂತೆ ಮುಗುಳ್ನಕ್ಕಿತು.
ಸುಂದರರಾಜನೂ ನಗುತ್ತಾ, “ಅಮ್ಮ, ಆ ಸೊಸೈಟಿ ಸರಿತಳ ಪ್ರಪೋಸಲ್ ಹೇಳಿದಿಯಲ್ಲ, ನಿನಗೆ ಮನಸ್ಸಿದ್ದರೆ ಮುಂದುವರಿಸು. ನನಗೆ ಪರವಾಗಿಲ್ಲ” ಎಂದ.