ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಡಿಸೆಂಬರ್ 2020 > ಯಾವುದೇ ಪರಿಸ್ಥಿತಿಯಲ್ಲಿ ಭಗವನ್ನಾಮಸ್ಮರಣೆ ಶಕ್ಯವಿರುತ್ತದೆ

ಯಾವುದೇ ಪರಿಸ್ಥಿತಿಯಲ್ಲಿ ಭಗವನ್ನಾಮಸ್ಮರಣೆ ಶಕ್ಯವಿರುತ್ತದೆ

ಮನುಷ್ಯನ ಎಲ್ಲ ಪ್ರಯತ್ನವೂ ಶಾಶ್ವತ ಸಮಾಧಾನವನ್ನು ಸಂಪಾದಿಸುವುದಕ್ಕಾಗಿ ಇರುತ್ತದೆ. ಆ ಸಮಾಧಾನವು ಕೇವಲ ಭಗವಂತನ ಹತ್ತಿರವೇ ಇರುವುದರಿಂದ ಸಮಾಧಾನಕ್ಕಾಗಿ ಪ್ರತಿಯೊಬ್ಬ ಮನುಷ್ಯನಿಗೂ ಭಗವಂತನ ಆವಶ್ಯಕತೆಯಿರುತ್ತದೆ. ನಮ್ಮ ಯಾವುದೇ ಪ್ರಯತ್ನಗಳಿಂದಲೂ ‘ಭಗವತ್ಪ್ರಾಪ್ತಿಯಿಂದ ಉಂಟಾಗುವ ಸಮಾಧಾನವು’ ನಮಗೆ ಸಿಗುವುದಿಲ್ಲ. ಇದಕ್ಕೆ ಪರಿಸ್ಥಿತಿಯು ಕಾರಣವೆಂದು ಎಲ್ಲರೂ ಹೇಳುತ್ತಾರೆ. ಆದರೆ ನಿಜವಾಗಿಯೂ ಪರಿಸ್ಥಿತಿ ಅಡ್ಡಬರುವುದೋ ಅಥವಾ ಇಲ್ಲವೋ ಎಂಬುದನ್ನು ಈಗ ನಾವು ನೋಡಬೇಕು. ಪರಿಸ್ಥಿತಿಯನ್ನು ಕುರಿತು ವಿಚಾರ ಮಾಡುವಾಗ ಒಂದು ಬಾಹ್ಯಪರಿಸ್ಥಿತಿ ಹಾಗೂ ಇನ್ನೊಂದು ಆಂತರಿಕಪರಿಸ್ಥಿತಿ ಎಂದು ಎರಡು ಭಾಗ ಮಾಡಿ, ಇವುಗಳ ಬಗ್ಗೆ ವಿಚಾರ ಮಾಡಬೇಕಾಗುವುದು.  ಬಾಹ್ಯಪರಿಸ್ಥಿತಿಯನ್ನು ಕುರಿತು ವಿಚಾರ ಮಾಡುವಾಗ ಮೊದಲು ನಮ್ಮ ಶರೀರಸ್ವಾಸ್ಥ್ಯ ಅಡ್ಡಬರುತ್ತದೆ. ಈ ಸ್ವಾಸ್ಥ್ಯವು ಹೇಗೇ ಇದ್ದರೂ ನಮಗೆ ಭಗವಂತನ ಸ್ಮರಣೆಯನ್ನು ಮಾಡಲು ಬರುತ್ತದೆಯೋ ಅಥವಾ ಇಲ್ಲವೋ? ಪ್ರಕೃತಿಯು ಎಷ್ಟೇ ಅಸ್ವಸ್ಥವಾದರೂ, ಶರೀರವು ಎಷ್ಟೇ ವಿಕಲತೆ ಹೊಂದಿದರೂ ಅಂತಕಾಲದಲ್ಲಿ ಭಗವಂತನ ಸ್ಮರಣೆ ಮಾಡಲು ಬರುತ್ತದೆ ಎಂದು ಭಗವಂತನೇ ಗೀತೆಯಲ್ಲಿ ಹೇಳಿರುತ್ತಾನೆ. ಅಂದ ಮೇಲೆ ಪ್ರಕೃತಿಯು ಅಡ್ಡಬರುತ್ತದೆ ಎಂದು ಹೇಳುವುದು ಉಚಿತವೆನಿಸುವುದಿಲ್ಲ.

ಹಣದ ಅಭಾವದಿಂದಾಗಿ ಪ್ರಪಂಚದಲ್ಲಿ ಚಿಂತೆ ಉಂಟಾಗಿ ಭಗವಂತನ ಕಡೆಗೆ ಲಕ್ಷ್ಯ ಕೊಡಲು ವೇಳೆಯೇ ಸಿಗುವುದಿಲ್ಲವೆಂದು ಜನರು ಹೇಳುತ್ತಾರೆ. ಆದರೆ ಜಗತ್ತಿನಲ್ಲಿ ಸಾಕಷ್ಟು ಹಣವಿದ್ದು ವೈಭವದ ಶಿಖರದ ಮೇಲಿರುವ ಎಷ್ಟು ಜನರು ಭಗವನ್ನಾಮಸ್ಮರಣೆ ಮಾಡುತ್ತಾರೆ? ನಮ್ಮ ಹತ್ತಿರ ದುಡ್ಡು ಇಲ್ಲದೇ ಇರುವುದು ಭಗವಂತನ ಪ್ರಾಪ್ತಿಯ ಮಾರ್ಗದಲ್ಲಿ ಅಡ್ಡಬರುತ್ತದೆ ಎಂಬುದು ಸರಿಯಲ್ಲ. ಇದಕ್ಕೆ ಬದಲು ಹಣವು ಭಗವಂತನ ನಿಷ್ಠೆಯನ್ನು ಬಹಳ ಕಡಮೆ ಮಾಡುತ್ತದೆ. ವಾರ್ಧಕ್ಯದಲ್ಲಿ ನಮಗೆ ಉಪಯೋಗವಾಗಬೇಕೆಂದು ಹಣ ಸಂಗ್ರಹಿಸುವ ಪ್ರಯತ್ನ ಮಾಡಬೇಕು. ಆದರೆ ವಾರ್ಧಕ್ಯದವರೆಗೆ ನಾನು ಬದುಕುವೆನೆಂಬ ವಿಷಯದಲ್ಲಿ ಯಾರು ನಿಶ್ಚಿತವಾಗಿ ಹೇಳಲು ಸಾಧ್ಯ? ಸುಖ ಸಮಾಧಾನಗಳು ಹಣವನ್ನವಲಂಬಿಸಿಕೊಂಡಿರುವುದಿಲ್ಲ. ಪ್ರತಿಯೊಬ್ಬನ ಗೋತ್ರಾವಳಿಯು ನಿಶ್ಚಿತವಾಗಿರುತ್ತದೆ. ಬೇತಾಳದ ಯಾತ್ರೆ ಹೊರಟಿತೆಂದರೆ ಅದರೊಂದಿಗೆ ಪಿಶಾಚಿಗಳೂ ಹೊರಡುವವೇ! ಹಾಗೂ ಭಗವಂತನ ಯಾತ್ರೆ ಹೊರಟಿತೆಂದರೆ ದಯಾ, ಕ್ಷಮಾ, ಆನಂದವೃತ್ತಿ ಮುಂತಾದವುಗಳು ಇದ್ದೇ ಇರುತ್ತವೆ. ಅದರಂತೆ ಹಣ ಬಂದಿತೆಂದರೆ ಅದರೊಂದಿಗೆ ತಳಮಳ, ಲೋಭ, ಅಸಮಾಧಾನಗಳು ಬಂದೇ ಬರುತ್ತವೆ. ತಂದೆ-ಮಗ, ಅಣ್ಣ-ತಮ್ಮ, ಅಕ್ಕ-ತಂಗಿಯರು, ಮಿತ್ರರು ಇವರಲ್ಲಿ ವಿರೋಧವನ್ನುಂಟು ಮಾಡುವುದರಲ್ಲಿ ಮುಖ್ಯ ಕಾರಣ ಹಣವೇ ಆಗಿರುತ್ತದೆ.

[ಮಹಾರಾಜರ ಪ್ರವಚನದಿಂದ.

ಅನುವಾದ: ಶ್ರೀ ದತ್ತಾತ್ರೇಯ ಅವಧೂತರು.

ಕೃಪೆ : ಚೈತನ್ಯಾಶ್ರಮ, ಹೆಬ್ಬಳ್ಳಿ]

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ