ಯದಿ ಸಂತಿ ಗುಣಾಃ ಪುಂಸಾಂ ವಿಕಸಂತ್ಯೇವ ತೇ ಸ್ವಯಂ |
ನ ಹಿ ಕಸ್ತೂರಿಕಾಮೋದಃ ಶಪಥೇನ ವಿಭಾವ್ಯತೇ ||
– ಕುವಲಯಾನಂದ
“ಜನರಲ್ಲಿ ಸ್ವಭಾವಗತವಾದ ಔದಾರ್ಯಾದಿ ಒಳ್ಳೆಯ ಗುಣಗಳಿದ್ದರೆ ಅವು ಯಾವ ಅನ್ಯಪ್ರೋತ್ಸಾಹನವೂ ಇಲ್ಲದೆ ತಾವಾಗಿ ಪ್ರಕಾಶಗೊಳ್ಳುತ್ತವೆ. ಕಸ್ತೂರಿಯ ಸುಗಂಧವನ್ನು ಯಾರೂ ಬಲವಂತದಿಂದ ಹೊರಹೊಮ್ಮಿಸಬೇಕಾಗಿಲ್ಲವಷ್ಟೆ?”
ಬೇರೆಯವರಿಗೆ ಉಪಕಾರ ಮಾಡುವುದು ಉತ್ತಮ ವರ್ತನೆ. ಸಂದರ್ಭವಶದಿಂದಲೊ ವ್ಯವಸ್ಥಾನುಗುಣವಾಗಿಯೊ ಅನ್ಯಪ್ರೇರಣೆಯಿಂದಲೊ ಯಾರಿಗೋ ಉಪಕಾರ ಮಾಡಿದರೂ ಅದಕ್ಕೆ ಮೆಚ್ಚಿಕೆ ಸಲ್ಲತಕ್ಕದ್ದೇ. ಆದರೆ ಪರೋಪಕಾರದ ಶ್ರೇಷ್ಠ ರೂಪವೆಂದರೆ ಅವಕಾಶ ಗೋಚರಿಸಿದೊಡನೆ ಯಾವುದಕ್ಕೂ ಕಾಯದೆ ನೆರವಿಗೆ ಧಾವಿಸುವುದು. ಇಂತಹ ವರ್ತನೆಯನ್ನು ಸ್ವಾಭಾವಿಕವಾಗಿಸಿಕೊಂಡವರು ಉದಾತ್ತಜೀವಿಗಳಲ್ಲಿ ಉನ್ನತರೆನಿಸುತ್ತಾರೆ.
1950ರ ದಶಕದ ಒಂದು ಘಟನೆ. ಚಿಕಾಗೋ ವಿಮಾನ ನಿಲ್ದಾಣಕ್ಕೆ ಗಣ್ಯನಂತೆ ತೋರುತ್ತಿದ್ದ ಆರೂಕಾಲು ಅಡಿ ಎತ್ತರದ ವಿದೇಶೀಯನೊಬ್ಬ ಆಗಮಿಸಿದ. ಆತ ಇಳಿದೊಡನೆ ಪತ್ರಕರ್ತರೂ ಇತರರೂ ಮುತ್ತಿಕೊಂಡರು. ಕೆಲವರು ಫೋಟೋ ತೆಗೆಯುವ ತರದೂದಿನಲ್ಲಿದ್ದರೆ ಇನ್ನು ಕೆಲವರು ‘ಏನಾದರೂ ಎರಡು ಮಾತು ಹೇಳಿ’ ಎಂದು ಗಂಟುಬಿದ್ದರು. ಆತ ಮಾತನಾಡತೊಡಗಿದ.
ಒಂದೆರಡು ನಿಮಿಷವಾದೊಡನೆ ಆತ ಏಕೊ ಸ್ತಬ್ಧನಾದ; ಆತನ ದೃಷ್ಟಿ ಅಲ್ಲಿದ್ದ ಗುಂಪಿನಿಂದಾಚೆಗೆ ನೆಟ್ಟಿತ್ತು. “ದಯವಿಟ್ಟು ಕ್ಷಮಿಸಿರಿ. ನನಗೊಂದು ತುರ್ತು ಕೆಲಸವಿದೆ. ಆಮೇಲೆ ಬರುತ್ತೇನೆ” ಎಂದವನೇ ಅಲ್ಲಿಂದ ನಿರ್ಗಮಿಸಿದ.
ಅಲ್ಲಿದ್ದ ಗುಂಪಿನಿಂದಾಚೆಗೆ ಸ್ವಲ್ಪ ದೂರದಲ್ಲಿ ಹಣ್ಣುಹಣ್ಣು ಮುದುಕಿಯೊಬ್ಬಳು ಎರಡು ಭಾರವಾದ ಸೂಟ್‍ಕೇಸುಗಳನ್ನು ಹೊರಕ್ಕೆ ಸಾಗಿಸಲಾಗದೆ ಕ್ಲೇಶಪಡುತ್ತಿದ್ದಳು. ಈ ವ್ಯಕ್ತಿ ಟ್ರಂಕುಗಳನ್ನು ಕೈಗೆತ್ತಿಕೊಂಡು ಮುದುಕಿಯನ್ನು ಕರೆದೊಯ್ದು ಹೊರಗಿದ್ದ ಬಸ್ಸಿನೊಳಕ್ಕೆ ಹತ್ತಿಸಿ ಅನಂತರ ಮೊದಲಿದ್ದ ಸ್ಥಳಕ್ಕೆ ಹಿಂದಿರುಗಿ ಮಾತುಕತೆಯನ್ನು ಮುಂದುವರಿಸಿದ.
ಗಮನಿಸಬೇಕಾದ್ದೆಂದರೆ ಅಲ್ಲಿದ್ದ ಗುಂಪಿನಲ್ಲಿ ಅಷ್ಟೊಂದು ಜನರಿದ್ದರೂ ಯಾರಿಗೂ ಮುದುಕಿಗೆ ಸಹಾಯ ಮಾಡಬೇಕೆಂದು ತೋರಿರಲಿಲ್ಲ. ಉದಾತ್ತತೆ ಮೆರೆದ ಆ ಆಗಂತುಕ ವ್ಯಕ್ತಿ ಆಫ್ರಿಕದಲ್ಲಿ ವ್ಯಾಪಕವಾಗಿ ಬಡಜನರಿಗೆ ಸೇವೆ ಮಾಡುತ್ತಿದ್ದುದಕ್ಕಾಗಿ ನೊಬೆಲ್ ಪ್ರಶಸ್ತಿಗೆ ಪಾತ್ರನಾದ ಆಲ್ಬರ್ಟ್ ಶ್ವೈಟ್ಸರ್.