ಕಳೆದ ವರ್ಷದ ಆರಂಭದಲ್ಲಿ ಜಗತ್ತನ್ನು ಆಕ್ರಮಿಸಿದ ಕೋವಿಡ್-19 ಸಾಂಕ್ರಾಮಿಕ ಈ ವರ್ಷದ ಆರಂಭದಲ್ಲಿ ಬಹುಮಟ್ಟಿಗೆ ಹಿಂದಕ್ಕೆ ಸರಿಯತೊಡಗಿರುವ ಲಕ್ಷಣಗಳು ಗೋಚರಿಸಿವೆ. ಕಳೆದ ಹತ್ತು-ಹನ್ನೊಂದು ತಿಂಗಳಲ್ಲಿ ದೇಶದ ಸಾಮಾಜಿಕ-ಆರ್ಥಿಕ ಜೀವನವಷ್ಟೂ ಗ್ರಹಣಗ್ರಸ್ತವಾದಂತಿತ್ತು. ಜನರಲ್ಲಿ ಹಿಂದೆ ಇದ್ದುದಕ್ಕಿಂತ ಹೆಚ್ಚಿನ ಅನುಶಾಸನವನ್ನು ತಂದಿತೆಂಬ ಪ್ರಶಂಸೆಗೂ ವೈರಾಣು ಅರ್ಹವಾಗಿದೆ. ಎಲ್ಲಿಂದಲೊ ಬಂದೆರಗಿದ ವಿಪತ್ತನ್ನು ಶಾಪವಾಗಿ ಭಾವಿಸದೆ ಅವಕಾಶವನ್ನಾಗಿ ಪರಿವರ್ತಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರ ಮುತ್ಸದ್ದಿತನ. ಅದರಿಂದಾಗಿ ಆತ್ಮನಿರ್ಭರತೆಯತ್ತಲೂ ಸ್ವಾವಲಂಬನೆಯತ್ತಲೂ ಸ್ಥಳೀಯ ಉತ್ಪಾದನೆಗಳಿಗೆ ಆದ್ಯತೆ ಸಲ್ಲಬೇಕೆನ್ನುವತ್ತಲೂ ದೇಶದ ಗಮನ ಹರಿಯುವಂತಾಯಿತು. ಪರಿಣಾಮವಾಗಿ ಮುಖ್ಯವಾದ ಆರ್ಥಿಕ ಕ್ಷೇತ್ರದಲ್ಲಿಯೂ ಚೇತರಿಕೆ ಈಗ ಕಾಣತೊಡಗಿದೆ. ಹೀಗೆ ಹೊಸ ವರ್ಷವು ಭರವಸೆಯ ಪರ್ವವಾಗಿ ಮೂಡಿದೆ. ಜನವರಿಯ ನಡುಭಾಗದಿಂದ ರೋಗನಿವಾರಕ ಲಸಿಕೆಯೂ ಲಭ್ಯವಾಗಿ ಅದರ ವಿನಿಯೋಗ ದಾಪುಗಾಲಿಟ್ಟಿದೆ. ಹಲವು ತಿಂಗಳ ಸ್ಥಗಿತತೆಯ ತರುವಾಯ ಕಳೆದ (2020) ಸೆಪ್ಟೆಂಬರಿನಿಂದೀಚೆಗೆ ದೇಶದ ರಫ್ತಿನ ಪ್ರಮಾಣವು ಉನ್ಮುಖವಾಗಿದೆ. ಸಮರ್ಥ ನಾಯಕತ್ವ, ಸ್ಪಂದನಶೀಲ ಸಮಾಜ – ಇವುಗಳು ಒಟ್ಟುಗೂಡಿದಲ್ಲಿ ಅದೊಂದು ‘ಮಣಿಕಾಂಚನಸಂಯೋಗ’.
ಪುನಶ್ಚೇತನ
Month : February-2021 Episode : Author :