ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಮಾರ್ಚ್ 2021 > ಹದವಾದ ಮಣ್ಣು ಹಸನಾದ ಬದುಕು

ಹದವಾದ ಮಣ್ಣು ಹಸನಾದ ಬದುಕು

ಅರಳೀಕಟ್ಟೆಗೆ ಕುಳಿತ ಮಲ್ಲೇಶಜ್ಜ ಹಿಗ್ಗಾಮುಗ್ಗಾ ಬೈಯದಿದ್ದರೆ ಈವತ್ತಿಗೂ ಹಮಾಲಿ ಕೆಲಸವನ್ನೇ ತಾನು ಮಾಡಕೊಂತಿರ್ತಿದ್ನೇನೋ! ‘ನಾ ಎಷ್ಟೇ ಕಟುಕಿ ಮಾತಾಡಲಿ ಸಹಿಸ್ಕೊಂಡು ತ್ವಾಟಾ ಮಾಡಿದಾಕಿ ಈಕಿ’ ಎಂಬ ಹೆಮ್ಮೆಯಿಂದ ಹೆಂಡತಿಯನ್ನು ಮತ್ತೆ ಮತ್ತೆ ನೋಡಿದ ಮಾದಪ್ಪ.

ಮಂಜೀಹಾಳದ ಹದಗೆಟ್ಟ ರಸ್ತೆಯ ಎರಡೂ ಕಡೆ ಇದ್ದ ಸಾಲು ಮನೆಗಳಿಂದ ಬುಸುಬುಸುನೆ ಉರಿಯೊಲೆಗಳ ಕಪ್ಪನೆಯ ಹೊಗೆ ಆಗಸಕ್ಕೇರುತ್ತಿತ್ತು. ತಟತಟನೇ ರೊಟ್ಟಿ ತಟ್ಟುವ ಸದ್ದು ಬೆಳಗಿನ ಮೌನ ಮುರಿದಂತಿತ್ತು. ಮುಂಜಾವಿನ ತಂಪನ್ನು ಕರಗಿಸಲೆಂಬಂತೆ ಬಂದ ಎಳೆಬಿಸಿಲಿಗೆ ಮೈಯೊಡ್ಡಿ ಕೂತ ಹಿರಿಯರು, ತಳಿ ಹೊಡೆದು ರಂಗೋಲಿ ಹಾಕುವ ಹೆಂಗಸರು ‘ಚಾ ಆತೇನ್ರೀ? ಹೊಲಕ್ಕ ಹ್ವಾಂಟ್ರೇನು?’ ಎಂದು ರಸ್ತೆಯಲ್ಲಿ ಹೊರಟವರನ್ನು ಮಾತಾಡಿಸುತ್ತಿದ್ದರು. ಆ ಸಾಲುಮನೆಗಳಲ್ಲಿ ಒಂದು ಕುರುಬರ ಮಾದಪ್ಪನ ಮನೆ. ಅದರಲ್ಲಿ ಮಾದಪ್ಪ ತನ್ನ ಹೆಂಡತಿ ಕಲ್ಲವ್ವ, ಭರಮಾ, ಶಂಕ್ರಾನ ಕೂಡಾ ಜೀವ್ನಾ ಮಾಡಿಕೊಂಡಿದ್ದ.

ಅಂದು ಮುಂಜಾನೆ ಕಲ್ಲವ್ವ, “ರೀ ಈವತ್ತು ನೀವು ಮೂಟೆ ಹೊರಾಕ ಹೋಗುದ ಬ್ಯಾಡ. ನಾ ನಿನ್ನೆ ರಾತ್ರಿ ಹೇಳಿನಲ್ರೀ ಸೊಸೈಟಿಗೆ ಹೋಗಿ ಚಿಕ್ಕೂಸಸಿ ತಗೊಂಡು ಬರ್ರಿ. ಎರಡೇ ದಿನಾ ಗಿಡಾ ಹಂಚತಾರಂತ” ಎಂದಳು. ಮಾದಪ್ಪ ಅವಳ ಮಾತಿಗೆ ಒಂದಿಷ್ಟು ಲಕ್ಷ್ಯಹಾಕದೇ ಬಣ್ಣಗೇಡಾದ ಪಂಚೆ ಸುತ್ತಿಕೊಂಡ. ಒಂದಾನೊಂದು ಕಾಲದಲ್ಲಿ ಬಿಳಿಯದಾಗಿ ಈಗ ಅಲ್ಲಲ್ಲಿ ಕಲೆಗಳಿಂದ ತುಂಬಿ ಬೂದುಬಣ್ಣಕ್ಕೆ ತಿರುಗಿದ ಅಂಗಿಯನ್ನು ಹಾಕಿಕೊಂಡ ಎಲೆ, ಅಡಕೆ, ತಂಬಾಕಿನ ಚೀಟಿ ಇರುವ ಚೀಲವನ್ನು ಸುತ್ತಿ ಕಿಸೆಯಲ್ಲಿಟ್ಟುಕೊಂಡ. “ಒಂದು ಕಪ್ ಚಾ ಕಾಸಿಕೊಡು, ಕುಡಕೊಂಡು ಹೊಕ್ಕೇನಿ. ಹುಬ್ಬಳ್ಳಿಗೆ ಹೋಗೂ ಬಸ್ ಬರೂ ಹೊತ್ತಾತು” ಎಂದು ನಿರ್ಲಿಪ್ತವಾಗಿ ನುಡಿದ. ತಾನು ಹೇಳಿದ ಮಾತಿಗೆ ಕಿಂಚಿತ್ತು ಬೆಲೆ ಕೊಡದೇ ಹಮಾಲಿ ಕೆಲಸಕ್ಕೆ ಹೊರಟ ಗಂಡನನ್ನು ಕಂಡು ಕಲ್ಲವ್ವನಿಗೆ ಸಿಟ್ಟು ನೆತ್ತಿಗೇರಿತು.

“ಮದವಿ ಆಗಿ ಹದಿನೆಂಟು ವರಷಾತು. ನೀವ ಹೇಳಿದ್ದಕ್ಕ ಯಾವತ್ತಾದರೂ ಇಲ್ಲಾ ಅಂದೀನೇನು ನಾನು? ನಾ ಹೇಳಿದ್ದ ನೀವು ಯಾಕ ಕೇಳವಲ್ಲರಿ? ಕೂಲಿಕಾರನ ಹೆಂಡ್ತಿ ಅನ್ನಿಸ್ಕೊಂಡೇ ಸಾಯೂದು ನನ್ನ ಹಣೆಬಾರೇನೂ ಹಾಂಗಾದ್ರ? ಈವತ್ತ ಏನಾರ ಒಂದು ತೀರ್ಮಾನ ಮಾಡಿ ಹೇಳಿಬಿಡ್ರಿ. ಅಲ್ಲಿತನಾ ಚಾ ಕಾಸಂಗೂ ಇಲ್ಲ ನಾ” ಎಂದು ಬಾಗಿಲಿಗಡ್ಡ ನಿಂತು ಗಂಡನನ್ನು ದುರುದುರುನೆ ನೋಡುತ್ತಾ ಗಟ್ಟಿಸಿ ಕೇಳಿದಳು ಕಲ್ಲವ್ವ.

ಹಿಂದೆಂದೂ ಕಾಣದ ಹೆಂಡತಿಯ ಇಂತಹ ದುರ್ಗೆಯ ಅವತಾರ ಕಂಡು ಮೆತ್ತಗಾದ ಮಾದಪ್ಪ ಮೂಲೆಯಲ್ಲಿ ಕುಸಿದಂತೆ ಕುಳಿತ. “ಒಂದು ದಿನಾ ಕೆಲಸಕ್ಕೆ ಹೋಗಲಿಲ್ಲ ಅಂದ್ರ ನಾನೂರು ರುಪಾಯಿ ಹೋಕ್ಕೇತಿ. ನಾಲ್ಕ ದಿನಾ ಕೆಲಸಕ್ಕೆ ಹೋಗಲಿಲ್ಲಾ ಅಂದ್ರ ಮಾಲಕರು ಬ್ಯಾರೇದವ್ರನ್ನ ತಗೋತಾರ. ನಿನಗೇನು ತಿಳಿತತಿ ಇವೆಲ್ಲ.. ರೊಕ್ಕ ಇಲ್ಲಾ ಅಂದ್ರ ಮನಿತನಾ ಹೆಂಗ ನಡೆಸತಿ? ಅದನ್ನಾರ ಹೇಳೂ ನನಗ. ಯಾರೋ ಹೇಳಿದ್ರು ಅಂತ ನೀರಿಲ್ಲದ ಹೊಲದಾಗ ತ್ವಾಟ ಮಾಡಾಕ ಆಕ್ಕೇತೇನು? ನೀನು ತೆಲಿ ಕೆಡಿಸಿಕೊಳ್ಳೂದಲ್ಲದೆ ನನ್ನ ತಲಿನೂ ಕೆಡಿಸಾಕ ಹತ್ತೀದಿ” ಎಂದು ಆಕ್ಷೇಪಣೆಯ ದ್ವನಿಯಲ್ಲಿ ಹೇಳಿದ.

ಕಲ್ಲವ್ವ ಗಂಡನ ಪಕ್ಕದಲ್ಲಿ ಬಂದು ಕುಳಿತಳು. “ಹಿರ್ಯಾರು ನಮಗ ಬಿಟ್ಟು ಹ್ವಾದ ಮೂರೆಕ್ರೆ ಭೂಮಿ ನೀವು ಕೂಲಿಗೆ ಹೊಂಟ ಮ್ಯಾಲೆ ಪಾಳ ಬಿದ್ದೇತಿ. ಹಿಂಗ ಭೂಮಿ ಇದ್ದೂ ಕೂಲಿ ಮಾಡೋವ್ರ ಜೀವ್ನಾ ಸುಧಾರ್ಸಾಕ ಅಂತಾನೇ ‘ನೆಲೆ’ ಸಂಸ್ಥೆ ಹೆಣಗಾಡಾಕ ಹತ್ತೇಂತ್ರಿ. ಊರಾಗ ನಮ್ಮಂಥಾ ಸಣ್ಣ ಹಿಡುವಳಿದಾರ್ರು ಇಪ್ಪತ್ತೈದು ಮಂದಿ ಗಿಡಾ ಹಚ್ಚತೇವಂದ್ರ ಅವ್ರು ಹೆಂಗ ಅನ್ನೂದು ತಿಳಿಸಿಕೊಡ್ತೇವಂದಾರ್ರೀ. ಮ್ಯಾಲಿನ ಮನಿ ಸಣ್ಣವ್ವ, ತುದಿಮನಿ ಪಾರವ್ವ ಎಲ್ಲಾರು ತಾವೂ ಗಿಡ ತರಾಕ ಗಂಡಂದಿರನ್ನು ಕಳಿಸ್ತೇವಿ ಅಂದಾರು… ನಾವು ಒಂದ ಕೈ ನೋಡೋಣ್ರೀ.. ಒಮ್ಮಿ ಗಿಡಾ ಸಿಕ್ಕ ನೆಡಾಕ ನೀವು ಸಹಾಯ ಮಾಡ್ರೀ. ನಾ ಸಂಸ್ಥೆದವರು ಕರೆಯೋ ಮೀಟಿಂಗಿಗೆಲ್ಲಾ ಹೋಗ್ತೇನಿ. ಅವ್ರಿಂದ ಮಾಹಿತಿ ತಿಳಕೊಂಡು ಬಂದು ಗಿಡಾ ಜ್ವಾಪಾನಾ ಮಾಡ್ತೇನಿ. ಆಗ ನೀವು ಮತ್ತ ಕೂಲಿಗೆ ಹೋಗುವಿರಂತೆ’’ ಎಂದು ಗಂಡನನ್ನು ಅನುನಯಿಸುವ ದ್ವನಿಯಲ್ಲಿ ಕಲ್ಲವ್ವ ಹಿಂದಿನ ದಿನ ಹೇಳಿದ್ದನ್ನೇ ಮತ್ತೊಮ್ಮೆ ತಾಳ್ಮೆಯಿಂದ ಹೇಳಿದಳು.

“ನಿನ್ನ ತೆಲ್ಯಾಗ ತ್ವಾಟಾ ಮಾಡೋ ದೆಯ್ಯ ಹೊಕ್ಕೇತಿ.. ಅವ್ರು ಗಿಡ ಕೊಡತಾರ ಖರೇ, ಪಡಾ ಬಿದ್ದ ಭೂಮಿ ಹಸಾ ಮಾಡೂದೇನ ಸುಲಭ ಐತೇನು? ಎರಡ ವರ್ಷಾತು ರೆಂಟಿ ಹೊಡದಿಲ್ಲ, ಕುಂಟಿ ಹೊಡದಿಲ್ಲ. ಹೊಲದಾಗ ಕಸಾ ತುಂಬ್ಯಾವು. ಅರ್ಧ ಎಕರೆ ಜಾಗಾದಾಗ ಕಲ್ಲಹಾಸೇ ಐತಿ. ಅದೆಲ್ಲಾ ಸರಿ ಮಾಡೋದರ ಹ್ಯಾಂಗ ಹೇಳು ಮಾರಾಯಳ.” ಗಂಡ ಹೇಳಿದ್ದಕ್ಕೆಲ್ಲ ಉತ್ತರ ಸಿದ್ಧಪಡಿಸಿಕೊಂಡವಳಂತಿದ್ದ ಕಲ್ಲವ್ವ, “ನೀವು ಗಿಡಾ ತಗೊಂಬರ್ರೀ. ಮನೀ ಹಿತ್ತಲದಾಗ ಗಿಡಾ ಇಟ್ಟು ಒಂದು ತಿಂಗಳು ನೀರು ಹಾಕೋಣಂತ. ಹೊಲಾ ಸ್ವಚ್ಛ ಮಾಡಿಕ್ಯಾರ ಗಿಡಾ ನೆಡೋಣ, ನಾನು ನನ್ನೆರಡು ಮಕ್ಕಳು ಕೆಲ್ಸಕ್ಕ ಹತ್ತತೇವ್ರೀ….” ಎಂದಳು!

“ಇನ್ನ ನಾ ಏನು ಹೇಳೂದೈತಿ.. ಎಲ್ಲಿ ಸೊಸೈಟಿ ಬಿಲ್ಡಿಂಗದಗೇನು ಅವ್ರು ಗಿಡಾ ಹಂಚೂದು? ರಾಮಪ್ಪನ ಚಕ್ಕಡಿಯಾಗ ಓಟೂ ಗಿಡಾ ಹೇರಿಕೊಂಡ ಬರ್ತಿನೇಳು..” ಹೆಗಲ ಮೇಲೆ ಟವೆಲ್ಲೊಂದನ್ನು ಹೊದ್ದು ಪಂಚೆಯ ಕೊನೆಯ ಹಿಡಿದು ಹೊರಗೆ ಹೊರಟ ಗಂಡನನ್ನು ತಡೆದ ಕಲ್ಲವ್ವ, “ಐದು ಮಿನಿಟು ತಡೀರಿ’’ ಎಂದು ಬಿಸಿಬಿಸಿ ಚಹಾ ತಂದಿತ್ತಳು. ದೇವರ ಮುಂದೆ ಜೋಡಿ ದೀಪ ಬೆಳಗಿ “ಕೈ ಮುಗಿದು ಹೋಗ್ರೀ. ಗಿಡಾ ಕೊಡು ಮುಂದ ಜಮೀನ ಕಾಗಜಪತ್ರ ತೋರಿಸಬೇಕಂತ್ರಿ. ಅದನ್ನೂ ಒಯ್ರಿ” ಎಂದು ಸಂಭ್ರಮಿಸಿದಳು. ಅವಳ ಉತ್ಸಾಹವನ್ನು ಕೊಂಚ ಬೆರಗಿನಿಂದಲೇ ನೋಡಿದ ಮಾದಪ್ಪ ಸೊಸೈಟಿಯತ್ತ ಹೆಜ್ಜೆ ಹಾಕಿದ.

ಕಡಕ್ ರೊಟ್ಟಿಯ ಮೇಲೆ ಒಂದಿಷ್ಟು ಶೇಂಗಾ ಚಟ್ನಿ, ಮೊಸರು ಹಾಕಿ ಮಕ್ಕಳಿಬ್ಬರ ಕೈಗಿತ್ತ ಕಲ್ಲವ್ವ “ಜಲ್ದಿ ಜಲ್ದಿ ತಿನ್ರೀ. ಅಪ್ಪ ಗಿಡ ತರೋದ್ರೊಳಗ ಒಮ್ಮಿ ಹೊಲದ ತನಾ ಹೋಗಿ ಬರೋಣಂತ” ಎಂದಳು. ಅದುವರೆಗೂ ಮೂಕಪ್ರೇಕ್ಷರರಂತೆ ಅಪ್ಪ ಅವ್ವನ ಮಾತುಕತೆ ಕೇಳಿದ ಭರಮ, ಶಂಕ್ರಾ ಇಬ್ಬರೂ ರೊಟ್ಟಿಮುರಿದು ಬಾಯಿಗಿಟ್ಟರು.

 “ಜಲ್ದಿ ಬರಾಕ ಆಕ್ಕೇತೇನ ಯವ್ವಾ, ದೋಸ್ತರೆಲ್ಲ ಸೇರಿ ಬ್ಯಾಟ ಬಾಲು ಆಡಬೇಕಂತ ಮಾತಾಡಿಕೊಂಡೇವಿ” ಎಂದ ಭರಮ.

“ಹೊಲಾ ಹಸನ ಮಾಡಿ ಗಿಡ ನೆಡೂ ತನಾ ನಿಮ್ಮ ಬ್ಯಾಟ ಬಾಲಾಟ ಎಲ್ಲಾ ಬಂದ. ಮದ್ಲೀಗ ಚೆಂದಾಗಿ ಬಾಳ್ವೆ ಮಾಡಾಕ ವಿಚಾರ ಮಾಡ್ರೀ. ನಿ ಏಳನೇತ್ತಾಕ ಸಾಲಿ ಬಿಟ್ಟ ಕುಂತಿ, ಅಂವಾ ಒಂಭತ್ತನೇತ್ತಿ ಕಲಿಯಾಕ ಹತ್ಯಾನ. ಕಲತರೂ ನೌಕ್ರಿ ಸಿಗೂದು ಸುಲಭಿಲ್ಲ ಏನಪಾ.. ನಮ್ಮ ಭೂಮ್ಯಾಗ ನಾವು ಚೆಂದಾಗಿ ದುಡಿದರ ಭೂಮ್ತಾಯಿ ಕೈಹಿಡೀಬಹುದು. ದೂಸರಾ ಮಾತಾಡಬ್ಯಾಡ್ರಿ ನಡ್ರೀ..” ಎನ್ನುತ್ತ ಮನೆಯಲ್ಲಿದ್ದ ಕುಡಗೋಲು, ಕುಡಚಿ ತಗೊಂಡು ಭರಭರನೇ ಹೊರಟಳು ಕಲ್ಲವ್ವ. ಅವ್ವನ ಹಿಂದೆ ಮಕ್ಕಳಿಬ್ಬರೂ ಓಡುನಡಿಗೆಯಲ್ಲೇ ಹೊರಟರು.

***

ಕಲಘಟಗಿ ತಾಲೂಕಿನ ಮಂಜೀಹಾಳದಲ್ಲಿರುವ ಹೊಲಗಳ ಸಾಲಿನಲ್ಲಿ ನಡುವೆಯೇ ಇದ್ದ ತಮ್ಮ ಹೊಲಕ್ಕೆ ಬಂದು ನಿಂತ ಕಲ್ಲವ್ವ ಅದರ ದುಃಸ್ಥಿತಿಯನ್ನು ಕಂಡು ದಂಗಾದಳು. ಹೊಲದ ಮಧ್ಯದಲ್ಲಿ ಅನಾದಿಕಾಲದಿಂದ ಇದ್ದ ಹುಣಿಸೇಮರವೊಂದು ಎಳೆಯ ಕಾಯಿಗಳಿಂದ ಕಂಗೊಳಿಸುವುದನ್ನು ಬಿಟ್ಟರೆ ಉಳಿದಂತೆ ಇಡೀ ಹೊಲದಲ್ಲಿ ಉತ್ತರಾಣಿ, ನೆಗ್ಗಿಲಮುಳ್ಳು, ನಾಚಿಕೆಮುಳ್ಳು, ಹುಲ್ಲು ಬೆಳೆದು ನಿಂತಿತ್ತು. ಸುತ್ತಮುತ್ತಲಿನ ಅನೇಕ ಹೊಲಗಳ ಕತೆಯೂ ಅದೇ ಆಗಿತ್ತು. ‘ಉತ್ತು ಬಿತ್ತಿ ಮಾಡದಿದ್ರೆ ಭೂಮಿ ಮತ್ತೇನಾಗ್ತದೆ?’ ಎಂದು ಮನದಲ್ಲಿಯೇ ಗೊಣಗಿಕೊಳ್ಳುತ್ತ ಕುಡಗೋಲಿನಲ್ಲಿ ಗಿಡಗಳನ್ನು ಅತ್ತಿತ್ತ ಸರಿಸುತ್ತ ಹೊಲದೊಳಗೆ ತಿರುಗಿದಳು ಕಲ್ಲವ್ವ. “ಮುಳ್ಳು ಭಾಳ ಐತಬೇ. ಇವೆಲ್ಲಾ ತೆಗಿಯಾಕ ನಮ್ಮಗೂಡಾ ಆಕ್ಕೇನಬೇ” ಎನ್ನುವ ಮಕ್ಕಳಿಗೆ “ಆಗಲಾರ್ದೆ ಏನು? ದಿನಾ ಅಟಟ ಸ್ವಚ್ಛ ಮಾಡೋಣೂ” ಎಂದಳು.

ಅಷ್ಟರಲ್ಲಿ ಪಕ್ಕದ ಹೊಲದ ಪದ್ದವ್ವ “ಏನು ಅವ್ವಾ ಮಕ್ಕಳ ಸವಾರಿ ಈವತ್ತು ಹೊಲದ ತಾಕ ಬಂದಬುಟ್ಟೈತೆ..” ಎಂದು ವ್ಯಂಗ್ಯ ಬೆರೆಸಿದ ದ್ವನಿಯಲ್ಲಿಯೇ ಕೂಗಿ ಮಾತಾಡಿಸಿದಳು.

“ಹಾಂಗ ನೋಡಿ ಹೋಗೂಣಂತ ಬಂದೆ ಬಿಡಬೇ.. ನೀ ಏನ ಹ್ವಾರಿ ಮಾಡಾಕ್ಹತ್ತಿ..” ಎನ್ನುತ್ತಾ ಹೊಲದಂಚಿನವರೆಗೂ ಹೋದಳು ಕಲ್ಲವ್ವ.

“ದನಕ್ಕ ಒಂದ ಹೊರಿ ಹುಲ್ಲ ತಗಂಡು ಹೋಗವಾ ಅಂತ ಬಂದಿದ್ದೆ..” ಎಂದಳು ಪದ್ದಕ್ಕ.

“ಪದ್ದವ್ವ ದಿನಾ ಬರ್ತಿಯೇನು ಹೊಲಕ್ಕ?” ಎನ್ನುತ್ತ ಅವರ ಹೊಲದೆಡೆ ಕಣ್ಣು ಹಾಯಿಸಿದಳು ಕಲ್ಲವ್ವ. ಒಂದೆಡೆ ಗಿನಿ ಹುಲ್ಲು, ಒಂದಿಷ್ಟು ಕುಸುಬಿ ಗಿಡ, ತೆನೆಯೊಡೆದ ಮುಸುಕಿನ ಜೋಳ ಮೆಣಸಿನ ಗಿಡಗಳೆಲ್ಲವನ್ನು ನೋಡುತ್ತ ಇವರ ಹೊಲದಲ್ಲಿಷ್ಟು ಬೆಳೆ ಬಂದಿದೆ ಎಂದರೆ ತಮ್ಮ ಹೊಲದಲ್ಲಿಯೂ ಇಷ್ಟು ಬೆಳೆ ಬರಬಹುದೆಂದು ಮನದಲ್ಲಿಯೇ ಲೆಕ್ಕಾಚಾರ ಹಾಕಿದಳು.

“ನಾನ ಬೆಳೆದಿದ್ದು ಇವೆಲ್ಲ… ದಿನಾ ಬರ್ತೀನವಾ.. ನನ ಗಂಡಾ ದಿನಾ ಕುಡಿದು ಎಲ್ಲಾರ ಬಿದ್ದಿರ್ತಾನು. ನನಗ, ನನ್ನ ಮಕ್ಕಳಿಗ ಏನರ ಬೇಕಲ್ಲವಾ.. ಮಳಿ ಶುರುವಾದಾಗೊಮ್ಮಿ ಅಣ್ಣ ತಮ್ಮಾ ಯಾರಾರ ಬಂದ ಉಳುಮಿ ಮಾಡಿ, ಬಿತ್ತನಿ ಮಾಡಿ ಕೊಟ್ಟ ಹೊಕ್ಕಾರ. ಆಮ್ಯಾಲೆ ಎಲ್ಲಾ ಹ್ವಾರೆ ನಂದೆ.. ಕುಂಕುಮಾ ಹಚ್ಚಿಕೊಳ್ಳಾಕಷ್ಟ ಗಂಡ ಬದಕ್ಯಾನ ಅನಬೇಕು ನಾ..” ಎಂದು ನಿಟ್ಟುಸಿರಿಟ್ಟ ಪದ್ದವ್ವ ಹುಲ್ಲು ಹೊರೆಗೆ ಕೈಇಟ್ಟಳು. ಕಲ್ಲವ್ವ ಅವಳಿಗೆ ಹೊರೆ ಹೊರಿಸಲು ನೆರವಾಗುತ್ತ, “ಇನ್ನ ದಿನಾ ನಾನು ನಿನ್ನ ಜೋಡಿ ಹೊಲಕ್ಕ ಬರತೀಳೇಳು. ನಿನ್ನ ಹೊಲದಾಗ ನೀನು ದುಡಿ, ನನ್ನ ಹೊಲದಾಗ ನಾನ.. ಕೆಲ್ಸಾ ಭಾಳ ಇದ್ದಗ ಮುಯ್ಯಾಳು ಮಾಡೋಣ ಏನಂತಿ?” ಪದ್ದವ್ವನ ಕಂಗಳಲ್ಲಿಯೂ ಸ್ನೇಹದ ಬೆಳಕು.

“ಏ ಹಾಂಗ ಮಾಡೋಣು. ನಿಮ್ಮ ಹೊಲಾನೂ ಪಡಾ ಬಿದ್ದಿದ್ದು ನೋಡಿ ಬ್ಯಾಸರಾಗಿತ್ತ ಯವ್ವಾ. ಹಾವು ಹುಳಾ ಹುಪ್ಪಡಿ ನಮ್ಮ ಹೊಲಕ್ಕೂ ಬರೂದು ನೋಡಿ ನಿಮ್ಮ ಮ್ಯಾಲೆ ಸಿಟ್ಟ ಬರತಿತ್ತು.. ಏನ ಬೆಳಿ ಬೆಳಿತೀರಿ?” ಎಂದು ಅಕ್ಕರೆಯಿಂದ ವಿಚಾರಿಸಿದಳು ಪದ್ದವ್ವ.

“ಮೊದಲ ಹೊಲಾ ಹಸನ ಮಾಡ್ತೇವಿ. ಆಮ್ಯಾಲೆ ಬೆಳೆ ತೆಗಿಯೋ ಮಾತು.. ನಾಳೆ ಭೆಟ್ಟಿ ಆಗೋಣು” ಎನ್ನುತ್ತ ಕಲ್ಲವ್ವ ತನ್ನ ಹೊಲಕ್ಕೆ ಹಿಂದಿರುಗಿದಳು. ಹೊಲವನ್ನು ಕಣ್ಣಿನ ಅಂದಾಜಿನಲ್ಲಿಯೇ ವಿಭಾಗಿಸಿ ದಿನದಲ್ಲಿ ಒಂದಷ್ಟು ಜಾಗವನ್ನು ಸ್ವಚ್ಛ ಮಾಡುವುದೆಂದು ತೀರ್ಮಾನಿಸಿ ಮಕ್ಕಳಿಗೂ ಅದನ್ನೆಲ್ಲ ಹೇಳಿದಳು ಕಲ್ಲವ್ವ.

“ಈವತ್ತಿಂದಲೇ ಹ್ವಾರಿ ಶುರು ಮಾಡೋಣ.. ನಾ ಕಳೆ ಸವರಿಕೋಂತ ಹೊಕ್ಕೀನಿ, ಭರಮಾ ನೀ ಒಂದ ಕಡೆ ಗುಂಪ್ಪಿ ಹಾಕ. ಶಂಕ್ರಾ ನೀ ಸಣ್ಣಾ ಪುಟ್ಟಾ ಕಲ್ಲ ತೆಗೆದು ರಾಶಿ ಹಾಕ..” ಎನ್ನುತ್ತಾ ಒಂದು ಕಡೆಯಿಂದ ಕಳೆ ತೆಗೆಯಲಾರಂಭಿಸಿದಳು ಕಲ್ಲವ್ವ.

***

ಕಲ್ಲವ್ವ ಮಕ್ಕಳೊಂದಿಗೆ ಮನೆಗೆ ಬರುವಷ್ಟರಲ್ಲಿ ಮಾದಪ್ಪ ಮನೆಯ ಮುಂದೆ ಗಿಡಗಳನ್ನೆಲ್ಲ ಇಳಿಸಿ ಜಗುಲಿಕಟ್ಟೆಯ ಮೇಲೆ ಕುಕ್ಕರಗಾಲಿನಲ್ಲಿ ಕುಳಿತಿದ್ದ. “ಇಂದ ಹೊಲಕ್ಕ ಹೋಗಾಕ ಏನ ಅವಸರಾ ಇತ್ತ ನಿಮಗ? ನನಗರ ಹೊಟ್ಟಿ ಹಸದೈತಿ.. ನೋಡ ಸಂಸ್ಥೇದಾವ್ರು ಅಲ್ಲಿ ಮೂವತ್ತ ಚಿಕ್ಕೂ ಗಿಡಾ, ಹತ್ತ ಹೊಂಗೆಗಿಡಾ, ಹತ್ತ ಸುಬಾಬುಲ್ ಗಿಡಾ ಕೊಟ್ಟಾರ. ಇನ್ನೊಂದು ವಾರಕ್ಕ ಹೊಲಾ ಸರ್ವೇ ಮಾಡಾಕ ಬರ್ತಾರಂತ. ಕೆಲಸಾ ಶುರು ಮಾಡ್ಯಾರ. ಇವ್ರಿಗೆ ಗಿಡಾ ನೆಡಾಕ ಜಾಗಾ ಐತಿ, ಕೆಲ್ಸಾ ಚುಲೋ ಮಾಡ್ತಾರ ಅಂದ್ರ ಮಾವಿನಸಸಿನೂ ಕೊಡತಾರಂತ. ಇಷ್ಟರಾಗ ಏನ ತ್ವಾಟಾ ಮಾಡತೀಯೋ ಮಾಡು. ಮೊದ್ಲೀಕ ನನಗ ತಾಟಹಚ್ಚಿ ಊಟಕ್ಕ ಕೊಡು” ಎಂದು ತುಸುಕೋಪದಲ್ಲಿಯೇ ಹೇಳಿದ ಮಾದಪ್ಪ. ಅವನ ಮಾತುಗಳನ್ನು ಕೇಳುತ್ತಲೇ ಒಮ್ಮೆ ಎಲ್ಲ ಗಿಡಗಳನ್ನು ಪ್ರೀತಿಯಿಂದ ನೋಡಿ ಅಡುಗೆಮನೆಗೆ ಸೇರಿದಳು.

“ಕೈಕಾಲು ತೊಳಕೊಂಡು ಉಣಬರ್ರೀ, ತಾಟ ಹಚ್ಚೀನಿ. ಬರಮ್ಯಾ ಶಂಕ್ರ್ಯಾ ನೀವೂ ಬರ್ರಪ್ಪಾ” ಎಂಬ ಕಲ್ಲವ್ವನ ಕೂಗಿಗೆ ಕಾತರಿಸಿಕೊಂಡು ಕೂತ ಮೂರು ಜನರೂ ರೊಟ್ಟಿಮುರಿದು ತಿನ್ನಲಾರಂಭಿಸಿದರು.

“ಎರಡು ರೊಟ್ಟಿ ತಿಂದ ನಂತರ ಇನ್ನ ಅನ್ನಾ ಸಾರ ನೀಡಿ ಬಿಡು ರೊಟ್ಟಿ ಸಾಕಾತು..” ಎಂದ ಮಾದಪ್ಪ. ಗಂಡಮಕ್ಕಳಿಗೆ ಅನ್ನ ಸಾರು ಹಾಕಿ ನೆಂಜಿಕೊಳ್ಳಲು ಉಪ್ಪಿನಕಾಯಿ ಹಚ್ಚಿ, ಕುಡಿಯಲು ನೀರು ಕೊಟ್ಟು ತಾಟಿನಲ್ಲಿ ತನಗೂ ರೊಟ್ಟು ಹಾಕಿಕೊಂಡು ಊಟಕ್ಕೆ ಕುಳಿತಳು ಕಲ್ಲವ್ವ. “ಎಷ್ಟ ಮಂದಿ ಗಿಡಾ ಒಯ್ಯಾಕ ಸೊಸೈಟಿಗೆ ಬಂದಿದ್ರು?” ಎಂದು ಮೆಲ್ಲಗೆ ಗಂಡನಿಗೆ ಕೇಳಿದಳು.

 “ಏ ಅದು ದೊಡ್ಡ ಕತಿ… ಅವ್ರು ಇಪ್ಪತ್ತೈದು ಮಂದಿಗೆ ಗಿಡ ಕೊಡತೆವಂದ್ರ ಅಲ್ಲಿ ನಲವತ್ತ ಮಂದಿ ಹೋಗ್ಯಾರೇಳು. ಮೊನ್ನೆ ನೀ ಹೆಸರು ಬರೆಸಿ ಬಂದಿದ್ದಕ್ಕೆ ಈವತ್ತು ಇಷ್ಟ ಗಿಡಾ ಸಿಕ್ಕವು..ಹೊಲಾ ಇಲ್ಲದೇ ಬ್ಯಾರೇದವ್ರ ಹೊಲಾ ಎಲ್ಡ ಮೂರೊರ್ಸ ಲಾವಣಿ ಹಿಡಿದಾರೂ ಹೋಗಿ ಗಿಡಾ ಕೇಳತಾರು. ಪುಗಸಟ್ಲೆ ಗಿಡಾ ಕೊಡತಾರಂತ ಬಂದ ಪಾಳಿ ಹಚ್ಯಾರ.. ಚಿಕ್ಕೂ, ಮಾವು ಎಲ್ಲಾ ನೆಟ್ರ ಅದೇನ ಫಲಕ್ಕ ಬರತತೇನು ಅಷ್ಟರಾಗ.. ಬುದ್ದಿಗೇಡಿಗಳು. ಅವ್ರು ಜಮೀನ ಇದ್ದಾವ್ರ ಕಾಗಜಪತ್ರ ನೋಡಿಕ್ಯಾರ ಗಿಡಾ ಕೊಟ್ಟಾರ.. ಗಿಡ ಒಯ್ದಾರೆಲ್ಲ ನಾಳೆ ಸಂಜೀಕ ಆರ ಘಂಟೇಕ್ಕ ಬರ್ರಿ ಮೀಟಿಂಗ ಮಾಡತೇವಿ ಅಂದಾರ.. ನೀನ ಹೋಗಿ ಬಾ. ನಾಳೆ ನಾ ಅಂತೂ ಹುಬ್ಬಳ್ಳಿಗೆ ಹೋಗಾಂವ” ಎಂದು ಮುಂದಿನ ಮಾತಿಗೆ ಅವಕಾಶ ನೀಡದೇ ಮಾದಪ್ಪ ಹುಲ್ಲಿನ ಚಾಪೆಯ ಮೇಲೆ ಮಲಗಿ ಹೆಗಲ ಮೇಲಿದ್ದ ಚೌಕಡಿ ಟವೆಲ್ಲನ್ನು ಮುಖದ ಮೇಲೆ ಬರುವಂತೆ ಹೊದೆದುಕೊಂಡ.

ಅನ್ನ ಸಾರು ಕಲಸಿ ಬಾಯಿಗೆ ತುತ್ತಿಡುವಾಗ ಕಲ್ಲವ್ವನಿಗೆ ತಮ್ಮ ಮದುವೆಯ ಸಮಯದಲ್ಲಾದ ಮಾತುಕತೆಗಳು ನೆನಪಿಗೆ ಬಂದವು. ‘ನಮ್ಮ ಕಲ್ಲವ್ವನ ನಶೀಬ ದ್ವಾಡ್ದು. ನಾಲ್ಕ ಮಂದಿ ಅಣ್ಣ ತಮ್ಮದೀರ ಇದ್ದ ಮನಿತನಾ. ಇಂವ ಸಣ್ಣಾಂವ. ಹದಿನೈದು ಎಕ್ರೆ ಹೊಲಾ. ಗಟ್ಟುಳ್ಳ ಮನಿ ದನ ಕರಾ ಎಲ್ಲಾ ಅದಾವು.’ ದಿನಗೂಲಿ ಮಾಡಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಅಪ್ಪ ಅದೆಷ್ಟು ಹಿಗ್ಗಿನಿಂದ ತಾಯಿಗೆ ವರ್ಣಿಸಿದ್ದ.

 ‘ಹೌದು ತಾನು ಮನೆ ತುಂಬಿದಾಗ ಆ ಮನೆ ಅಪ್ಪ ಹೇಳಿದಂತೆಯೇ ಇತ್ತು.  ಊರಿಗೆ ಕಾಲರಾ ಬ್ಯಾನಿ ಬಂದು ಅತ್ತೆ-ಮಾವ ಒಂದೇಸಲ ಶಿವನಪಾದ ಸೇರುವವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು’ ಎಂದು ನೆನಪಿಸಿಕೊಂಡು ನಿಟ್ಟುಸಿರಿಟ್ಟಳು ಕಲ್ಲವ್ವ. ಮಾವ ಭರಮಪ್ಪ ಕಷ್ಟಪಟ್ಟು ದುಡಿಯುವ ಮನಷಾ. ಮಕ್ಕಳಿಗೂ ಒಂದಿಲ್ಲಾ ಒಂದು ಕೆಲಸ ಹೇಳುತ್ತ ಹೊಲವನ್ನು ಚೆನ್ನಾಗಿಯೇ ಗೇಯ್ಮೆ ಮಾಡಿಸುತ್ತಿದ್ದ. ಮೂರೂವರೆ ಎಕರೆ ಒಣಾ ಭೂಮಿ, ಉಳಿದ ಹನ್ನೊಂದೂವರೆ ಎಕರೆ ಹೊಲ ಊರ ಕೆರೆಯ ಸಮೀಪ ಇದ್ದು ಮುಂಗಾರಿ, ಹಿಂಗಾರಿ ಬೆಳೆ ತೆಗೆಯುವಂತಿತ್ತು. ಅಪ್ಪ ಸತ್ತ ಎರಡೇ ವರ್ಷದಲ್ಲಿ ಕುಟುಂಬದಲ್ಲಿ ಆಸ್ತಿ ಜಗಳ ಶುರುವಾಗಿ ಹಿರಿಯ ಮೂರು ಅಣ್ಣಂದಿರು ಫಲವತ್ತಾದ ಹೊಲವನ್ನು ತಮ್ಮ ಪಾಲಿಗೆ ಹಂಚಿಕೊಂಡು ಮೃದುಸ್ವಭಾವದ ಮಾದಪ್ಪನಿಗೆ ಮಳೆಆಧಾರಿತ ಒಣಭೂಮಿಯನ್ನು ಕೊಟ್ಟಿದ್ದರು. ಅಷ್ಟೇ ಅಲ್ಲ, ಊರೊಳಗಿನ ಅಜ್ಜನ ಕಾಲದ ಹಳೆಯ ಮನೆಯನ್ನು ತಮ್ಮನ ಪಾಲಿಗೆ ಕೊಟ್ಟು ಗಟ್ಟಿಮುಟ್ಟಾಗಿದ್ದ ಮನೆಯನ್ನು ಮೂರು ಪಾಲು ಮಾಡಿಕೊಂಡು ತಾವೇ ವಾಸ್ತವ್ಯ ಹೂಡಿದ್ದರು. ಪಂಚಾಯ್ತಿಕಟ್ಟೆಯಲ್ಲಿ ಕುಳಿತ ಪಂಚರು ಅಣ್ಣಂದಿರ ಪರವಾಗಿದ್ದಿದ್ದನ್ನು ಗಮನಿಸಿದ ಮಾದಪ್ಪ ಅನ್ಯಾಯವನ್ನು ಪ್ರತಿಭಟಿಸದೇ ಅವರು ಕೊಟ್ಟಷ್ಟು ಪಾತ್ರೆ ಪಗಡಿಗಳೊಂದಿಗೆ ಹೆಂಡತಿ ಮಕ್ಕಳನ್ನು ಕರೆದುಕೊಂಡು ಹಳೆಯ ಮನೆಗೆ ಬಂದುಳಿದಿದ್ದ. ಪಂಚಾಯತಿಗೆ ಬಂದಿದ್ದ ಕಲ್ಲವ್ವನ ಹೆತ್ತವರು ಮಗಳು ಅಳಿಯನಿಗಾದ ಅನ್ಯಾಯ ಕಂಡು ಮಮ್ಮಲ ಮರುಗಿದರು.. ‘ಬಡವ್ರದೀವಿ ನಾವ, ಏನಾರ ಮಾತಾಡಿದ್ರೂ ಕೇಳಾವ್ರು ಯಾರು? ಸಹಾಯ ಮಾಡೋಣಂದ್ರ ನಮ್ಮ ಕೈಯಾಗೂ ಏನಿಲ್ಲ, ಬರಿಗೈ ಭಂಟರು. ದೇವರು ದುಡಿಯಾಕ ಶಕ್ತಿ ಕೊಟ್ಟಾನ ಕಷ್ಟಪಟ್ಟು  ದುಡಿದು ಉಣ್ರೀ. ನಾಕ ಮಂದಿ ಮೆಚ್ಚೋ ಹಂಗ ಬದಕ್ರೀ’ ಎಂದು ಹರಸಿ ಹೋದರು.

“ಯವ್ವಾ ಆ ಗಿಡಗಳೆಲ್ಲಾನು ಹಿತ್ತಲದಾಗ ಇಡೂದೇನು?” ಭರಮನ ಪ್ರಶ್ನೆ ಕಲ್ಲವ್ವನನ್ನು ಮತ್ತೆ ವರ್ತಮಾನಕ್ಕೆ ಕರೆದುತಂದಿತು. ಹಿತ್ತಲಿನ ಬೇಲಿಗೆ ಬೆಳೆದ ಕಳ್ಳಿ ಅಲ್ಲಲ್ಲಿ ಸ್ವಲ್ಪ ಅಡ್ಡಾದಿಡ್ಡಿಯಾಗಿ ಬೆಳೆದಿತ್ತು. ಅದನ್ನೆಲ್ಲ ಸವರಿ ಇದ್ದೊಂದು ಮಾವಿನಗಿಡದ ಅಡಿ ಬಿದ್ದಿದ್ದ ದರಗೆಲೆಗಳನ್ನು ಕಡ್ಡಿ ಕಸಬರಿಗೆಯಲ್ಲಿ ಗುಡಿಸಿ ಇಡೀ ಹಿತ್ತಿಲನ್ನು ಸ್ವಚ್ಛವಾಗಿಸಿದಳು ಕಲ್ಲವ್ವ. ಭರಮ, ಶಂಕ್ರ ಇಬ್ಬರೂ ಮನೆಯ ಮುಂದಿದ್ದ ಗಿಡಗಳನ್ನೆಲ್ಲ ತಂದು ಹಿತ್ತಲಿನಲ್ಲಿ ಜೋಡಿಸಿ ಉತ್ಸಾಹದಿಂದಲೇ ನೀರು ಹಾಕಿದರು.

“ಯವ್ವಾ ಹಿತ್ತಲ ಮೂಲ್ಯಾಗಿದ್ದ ಟೊಮ್ಯಟೋ ಗಿಡದಾಗ ಎಷ್ಟಕೊಂದು ಕಾಯ ಸುರದಾವು ನೋಡಿಯೇನಬೇ?” ಎನ್ನುತ್ತ ಹಣ್ಣನ್ನು ತಿನ್ನುತ್ತಾ ತಾಯಿಯ ಬಳಿ ಬಂದ ಶಂಕ್ರ. “ಅರೆ ಇದೆಲ್ಲಗೇತೋ ನನ್ನ ಕಣ್ಣಿಗೇ ಬಿದ್ದಿಲ್ಲ ತೋರಿಸು ನೋಡೋಣ” ಎನ್ನುತ್ತ ಮಗನೊಡನೆ ಹಿತ್ತಲಿಗೆ ನಡೆದಳು. ದಾಸವಾಳ ಗಿಡದ ಹಿಂಭಾಗದಲ್ಲಿ ಮೇಲ್ಮಣ್ಣಿನಲ್ಲಿ ಬಿದ್ದ ಬೀಜ ಗಿಡವಾಗಿ ಬೆಳೆದು ಹೇರಳವಾಗಿ ಕಾಯಿ ಹಣ್ಣುಗಳಾಗಿದ್ದವು. ಅದನ್ನು ನೋಡುತ್ತಲೇ ಕಲ್ಲವ್ವನ ತಲೆಯಲ್ಲಿ ಹೊಸತೊಂದು ವಿಚಾರ ಮೊಳೆಯಿತು.

***

ಮರುದಿನ ‘ನೆಲೆ’ ಸಂಸ್ಥೆಯವರು ನಡೆಸಿದ ಮೀಟಿಂಗಿಗೆ ಹೋಗಿ ಬಂದ ನಂತರ ಕಲ್ಲವ್ವನ ತಲೆಯಲ್ಲಿ ಅವರು ಹೇಳಿದ ವಿಚಾರಗಳೆಲ್ಲ ಇಡೀ ದಿನ ಸುತ್ತುತ್ತಲೇ ಇತ್ತು. ರಾತ್ರಿ ಊಟಕ್ಕೆ  ಕುಳಿತ ಗಂಡನ ಬಳಿ ಎಲ್ಲವನ್ನು ಹೇಳಲು ಶುರು ಮಾಡಿದಳು ಕಲ್ಲವ್ವ. “ಮೂರಡಿ ಅಗಲ ಮೂರಡಿ ಆಳ ಇರೋ ಹಂಗ ಗುಂಡಿ ತೆಗೆದು ಗಿಡಾ ನೆಡಬೇಕಂತ್ರಿ. ಗಿಡದಿಂದ ಗಿಡಕ್ಕ ಹದಿನೈದು ಅಡಿ ಅಂತರಾ ಇರಬೇಕಂತ್ರಿ…” ಇಡೀ ದಿನ ದುಡಿದು ಸುಸ್ತಾಗಿದ್ದ ಮಾದಪ್ಪ ಅವಳ ಎಲ್ಲ ಮಾತಿಗೂ ನಿರಾಸಕ್ತಿಯಿಂದ ‘ಹೂಂ’ ಎನ್ನುತ್ತ ಊಟ ಮಾಡಿದ. “ನಾ ಅಂತೂ ದಿನಾ ಕೂಲಿ ಮಾಡಾಕ ಹೋಗಾಂವ.. ಆ ಹೊಲಾ ತ್ವಾಟಾ ಮಾಡಕ ಆಕ್ಕೇತಿ ಅಂತ ನನಗನಿಸಾಕ ಹತ್ತಿಲ್ಲ. ನಿನಗ ಹುಚ್ಚಿದ್ದರ ನೀನ ಏನ ಬೇಕಾರೂ ಮಾಡು. ಅವರು ಹೇಳಿದ್ದಕ್ಕೆಲ್ಲ ಕುಣಿಯಾಕ ರೊಕ್ಕ ಎಲ್ಲೈತಿ ನಮ್ಮ ಕೈಯಾಗ? ಮಳೆರಾಯ ಕಣ್ತೆಗೆದರೆ ಆ ಹೊಲದಾಗ ನೀರು. ಈಗ ಗಿಡಾ ನೆಟ್ಟರೆ ಬ್ಯಾಸಗಿ ದಿನದಾಗ ಆ ಗಿಡಗೋಳನ್ನ ಹೆಂಗ ಬದಕಿಸಾಕ ಆಕ್ಕೇತಿ? ಹುಚ್ಚ ಪ್ಯಾಲಿ..” ಎಂದು ಅವಳ ಉತ್ಸಾಹಕ್ಕೆ ತಣ್ಣೀರೆರೆಚಿದಂತೆ ನುಡಿದು ಜಗುಲಿಗೆ ತೆರಳಿ ಎಲೆಅಡಕೆ ಮೆಲ್ಲಲಾರಂಭಿಸಿದ. ‘ಮುಂದಿಟ್ಟ ಹೆಜ್ಜೆಯನ್ನು ತಾನೆಂದಿಗೂ ಹಿಂದೆ ತೆಗೆಯಬಾರದು. ಪದ್ದವ್ವನ ಹಾಗೇ ಗಟ್ಟಿಮನಸ್ಸಿನಿಂದ ದುಡಿಯಬೇಕು’ ಎಂದು ನಿರ್ಧರಿಸಿ ಗಂಡನ ಪಕ್ಕದಲ್ಲುರುಳಿದ ಕಲ್ಲವ್ವನಿಗೆ ಬಹಳ ಸಮಯದವರೆಗೂ ನಿದ್ದೆ ಬರಲಿಲ್ಲ. ಮಗಳ ನೆನಪು ಕಾಡಲಾರಂಭಿಸಿತು.

ಐದನೇ ತರಗತಿ ಓದುತ್ತಿದ್ದ ಮುದ್ದಿನ ಮಗಳು ನೀಲಾ ಒಂದು ದಿನ ಮಳೆಯಲ್ಲಿ ನೆನೆದಿದ್ದೇ ನೆಪವಾಗಿ ಜ್ವರ ಬಂದು ಮಲಗಿದ್ದಳು. ಸರಕಾರಿ ಆಸ್ಪತ್ರೆಗೆ ಎಡತಾಕಿ ಔಷಧ ಗುಳಗಿ ತಂದು ಹಾಕಿದ್ದ ಮಾದೇವ ಕೆಲಸ ಬಿಟ್ಟು ಮಗಳ ಮಗ್ಗುಲಲ್ಲೆ ಕುಳಿತಿರುತ್ತಿದ್ದ. ಉಡಾಳತನ ಮಾಡುವ ಗಂಡುಮಕ್ಕಳಿಗಿಂತ ಕಕ್ಕುಲಾತಿ ಮಾಡುವ ಮಗಳೆಂದರೆ ಅವನಿಗೆ ಬಲು ಜೀವ. ಹೊಲಕ್ಕೆ ಹೋಗುವಾಗ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದ. ‘ನಮ್ಮ ನೀಲಿ ಮಾತ ಕೇಳಕೊಂತ ದುಡದ್ರ ಒಟ್ಟ ಸುಸ್ತು ಸಂಕ್ಟ ಆಗಂಗಿಲ್ಲ ನೋಡ’ ಎಂದು ಹೆಮ್ಮೆಯಲ್ಲಿ ಹೇಳುತ್ತಿದ್ದ. ನೀಲಾಳಿಗೆ ಬಂದ ಜ್ವರ ನೆತ್ತಿಗೇರಿತ್ತು. ಅವಳು ಇಡೀ ದಿನ ಅಪ್ಪಾ ಎಂದೇ ಬಡಬಡಿಸುತ್ತಿದ್ದಳು. ಅವಳ ಕಷ್ಟ ನೋಡಲಾರದೇ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅವರು ಅವಳನ್ನು ಪರೀಕ್ಷೆ ಮಾಡಿ ತಮ್ಮ ಕೈಮೀರಿದೆ. ನೀವು ಮೊದಲೇ ಕರೆದುಕೊಂಡು ಬಂದಿದ್ದರೆ ಬದುಕಿಸಬಹುದಿತ್ತೇನೋ ಎಂದರು. ಅವಳು ಜೀವಬಿಟ್ಟಿದ್ದು ಅಪ್ಪನ ಮಡಿಲಿನಲ್ಲಿಯೇ…. ಮಗಳ ದೇಹವನ್ನು ಸ್ಮಶಾನಕ್ಕೊಯ್ಯದೇ ತಮ್ಮ ಹೊಲದಲ್ಲಿಯೇ ಮಣ್ಣು ಮಾಡಿದ್ದ ಮಾದೇವ ದುಡಿಮೆಯ ಆಸಕ್ತಿಯನ್ನೇ ಕಳೆದು ಮನೆಮೂಲೆ ಸೇರಿ ತಿಂಗಳಾನುಗಟ್ಟಲೆ ಮೌನವಾಗಿ ಕುಳಿತಿರುತ್ತಿದ್ದ. ಮನೆಯಲ್ಲಿನ ದವಸ ಧಾನ್ಯಗಳು ಡಬ್ಬಿಯತಳ ಕಂಡವು.

“ನೀವು ಹಿಂಗ ಹೊಟಬ್ಯಾನಿ ಹಚ್ಚಗೊಂಡ ಕುಂತರ ಉಳಿದಿಬ್ಬರು ಮಕ್ಕಳು ಹಸಿವಿನ್ಯಾಗ ಸಾಯತಾರ. ಹೊಲದ ಕೆಲಸಾ ಅಲ್ಲದಿದ್ರ ಕೂಲಿ ಕೆಲಸಕ್ಕಾದ್ರೂ ನಡ್ರೀ” ಎಂದು ಕಲ್ಲವ್ವ ಅಳುತ್ತಲೇ ಕಟುವಾಗಿ ನುಡಿದಾಗ ಒಲ್ಲದ ಮನಸ್ಸಿನಿಂದಲೇ ಆದರೂ ಹುಬ್ಬಳ್ಳಿಗೆ ಹಮಾಲಿ ಕೆಲಸಕ್ಕೆ ಹೊರಟಿದ್ದ ಮಾದೇವ ಹೊಲಕ್ಕೆ ಹೋಗುವುದನ್ನೇ ನಿಲ್ಲಿಸಿದ್ದ. ‘ತಲೆಗೆಳೆದರೆ ಕಾಲಿಗಿಲ್ಲ ಕಾಲಿಗೆಳೆದರೆ ತಲೆಗಿಲ್ಲ’ ಎನ್ನುವ ಆರ್ಥಿಕ ಪರಿಸ್ಥಿತಿ ಕಲ್ಲವ್ವನ ಕುಟುಂಬದ್ದು. ಕಾಲಕ್ಕೆ ಎಲ್ಲವನ್ನೂ ಅಷ್ಟಿಷ್ಟಾದರೂ ಮಾಯಿಸುವ ಶಕ್ತಿ ಇದ್ದೇ ಇದೆ…. ಕ್ರಮೇಣ ಕಲ್ಲವ್ವನೂ ಊರಿನ ಮಠದ ಜಮೀನಿನಲ್ಲಿ ಕೂಲಿ ಕೆಲಸಕ್ಕೆ ಹೋಗಲಾರಂಭಿಸಿದ್ದಳು. ಮಗ ಭರಮ ಶಾಲೆ ಕಲಿಯುವುದರಲ್ಲಿ ನಿರಾಸಕ್ತಿ ತೋರಿಸಿದ ಮೇಲೆ ಅವನ ಬದುಕಿಗೇನು ದಾರಿ ಎಂದು ತಲೆಕೆಡಿಸಿಕೊಂಡಿದ್ದ ಕಲ್ಲವ್ವನಿಗೆ ತೋಟ ಮಾಡುವುದು ಒಂದು ಪರಿಹಾರವಾಗಿ ಕಂಡಿತ್ತು. ಬೆಳಗಿನ ಝಾವಕ್ಕೆ ರಾಮಣ್ಣನ ಮನೆ ಕೋಳಿ ಕೂಗಿದಾಗ ಸಾಕಿನ್ನು ಉರುಳಾಡಿದ್ದು ಎಂದು ತೀರ್ಮಾನಿಸಿ ಒಲೆಗೆ ಉರಿ ಹಚ್ಚಿ ರೊಟ್ಟಿ ಬಡಿಯಲು ಕುಳಿತಳು.

***

“ಜಲ್ದಿ ಜಲ್ದಿ ಎದ್ದು ನಾಸ್ಟಾ ಮಾಡಾಕ ಬರ್ರಿ. ನಾ ಇನ್ನು ದಿನಾ ಬೆಳಗ್ಗೆ ಎಂಟು ಗಂಟೆಕ್ಕ ಹೊಲಕ್ಕ ಹೋಗುವಾಕಿ” ಎಂದು ಜುಲುಮೆಯಲ್ಲಿಯೇ ಗಂಡಮಕ್ಕಳನ್ನು ಎಬ್ಬಿಸಿದಳು  ಕಲ್ಲವ್ವ.  ರೊಟ್ಟಿ ಪಲ್ಲೆ ನಾಸ್ಟಕ್ಕ ಹಾಕಿ, ಗಂಡನಿಗೆ ಬುತ್ತಿಗಂಟು ಕೊಟ್ಟು, ಹುಬ್ಬಳ್ಳಿಗೆ ಕಳಿಸಿದಳು. ‘ನಿಂದೊಳ್ಳೆ ಕತಿಯಾತು’ ಟೀಕಿಸುತ್ತಲೇ ಹೋದ ಗಂಡನ ಮಾತನ್ನು ಮನಸ್ಸಿಗಿಳಿಸಿಕೊಳ್ಳದೇ ಶಂಕ್ರನನ್ನು ಶಾಲೆಗೆ ಕಳಿಸಿದಳು. ‘ಭರಮ್ಯಾ ಇಂದ ನೀರ ಬರ್ತತಿ. ಮನಿ ಮುಂದ ಕುಂದರು. ಪೈಪ ಹಚ್ಚಿಕ್ಯಾರ ಮನಿ ಹಿಂದಿನ ಹೌದಿನ್ಯಾಗ ನೀರು ತುಂಬಿಡು. ಎಲ್ಡ ಕೊಡ ಕುಡಿಯಾಕ ನೀರ ಹಿಡದಿಡು. ನಾ ಸಂಜೀಕ ಬರ್ತೀನಿ. ಹಸದಾಗ ತಾಟ ಹಚ್ಚಿ ಉಣಬೇಕು. ಮನೀ ಬಿಟ್ಟು ಗೆಳ್ಯಾರ ಜೊತಿಗ ಅಡ್ಡಾಡಾಕ ಹೋಗಬ್ಯಾಡ’ ಎಂದು ಎಚ್ಚರಿಸಿದಳು. ಮಗ ತಲೆಯಾಡಿಸಿದ ನಂತರ ತಾನೂ ಒಂದು ಬುತ್ತಿಗಂಟು ಹಿಡಿದುಕೊಂಡು ಕಲ್ಲವ್ವ ಹೊಲಕ್ಕ ಹೊರಟಳು. ದಾರಿಯಲ್ಲಿ ಪದ್ದವ್ವನೂ ಜೊತೆಯಾದಳು. ‘ಮಗಳು ಸತ್ತ ಮ್ಯಾಲೆ ಜೀವ್ನಾ ಅಂಬೂದು ಹಳಿತಪ್ಪಿದ ರೈಲ ಗತೆ ಆಗಿತ್ತು ನೋಡ ಪದ್ದವ್ವಾ’ ಎಂದು ನೋವನ್ನು ಹಂಚಿಕೊಂಡ ಕಲ್ಲವ್ವನಿಗೆ ಪದ್ದವ್ವ ‘ಆದದ್ದಾತು ಬದಕಿರೋ ಮಕ್ಕಳ ನೋಡವ್ವಾ’  ಎಂದು ಸಮಾಧಾನ ಹೇಳಿದಳು.

ಮಗಳನ್ನು ಸಮಾಧಿ ಮಾಡಿದ ಜಾಗವನ್ನು ಮೊದಲು ಸ್ವಚ್ಛ ಮಾಡಿದ ಕಲ್ಲವ್ವ ‘ಇನ್ನ ಈ ಹೊಲಾನೇ ನನ್ನ ಮಗಳು’ ಎಂದುಕೊಂಡಳು. ಮುಳ್ಳಿನ ಗಿಡಗಳನ್ನು ಸವರಿ ಅಲ್ಲಲ್ಲಿ ರಾಶಿಹಾಕಿ, ಒಣಗಿದ ಹುಲ್ಲು ಉಳಿದ ಕಳೆಗಳನ್ನು ಕಲ್ಲುಹಾಸಿನ ಮೇಲೆ ಒಗೆದಳು. ಕಲ್ಲಿನ ಮೇಲೆ ಒಗೆದ ಕಸದ ಮೇಲೆ ಒಂದೆರಡು ಹಿಡಿ ಒಣ ಮಣ್ಣನ್ನೂ ಹಾಕಿ ಬಂದಳು. ಸಂಜೆಯವರೆಗೂ ಇದೇ ಕಾಯಕ ಮುಂದುವರಿಸಿದ ಕಲ್ಲವ್ವನಿಗೆ ‘ನನ್ನ ಕೈಲಿ ತ್ವಾಟಾ ಮಾಡಾಕ ಆಕ್ಕೇತಿ’ ಎನ್ನುವ ಧೈರ್ಯ ಬಂದಿತ್ತು. ದಿನವೂ ಸಂಜೆಯ ಹೊತ್ತಿಗೆ ಹೊಲಕ್ಕೆ ಬರುವ ಶಂಕ್ರ, ಭರಮಾ ಅವ್ವನ ಕೆಲಸದಲ್ಲಿ ಕೈಗೂಡುತ್ತಿದ್ದರು. ಒಂದು ತಿಂಗಳು ಬೇಕಾಗಬಹುದೆಂದುಕೊಂಡ ಕೆಲಸ ಹದಿನೈದು ದಿನಗಳಲ್ಲಿಯೇ ಮುಗಿದಾಗ ಕಲ್ಲವ್ವನ ಹುಮ್ಮಸ್ಸು ಇಮ್ಮಡಿಗೊಂಡಿತ್ತು. ಹಿತ್ತಲಿನಲ್ಲಿಟ್ಟ ಗಿಡಗಳು ಸೊಂಪಾಗಿ ಬೆಳೆದಿದ್ದವು. ಹಣ್ಣಾದ ಟೊಮ್ಯಾಟೋ ಕೊಯ್ದು ನೆರಳಿನಲ್ಲಿ ಬೀಜ ಒಣಗಿಸಿ ಎತ್ತಿಟ್ಟುಕೊಂಡಳು.

“ಇಷ್ಟ ದಿನ ಏನೋ ನಾವ ಕೆಲ್ಸಾ ಮಾಡೀವಿ. ಇನ್ನ ಗಿಡಾ ನೆಡಾಕ ತಗ್ಗ ತೆಗೀಬೇಕು. ಅದಕ್ಕ ಒಣಾ ಎಲಿ, ಸಗಣಿ ಹಾಕಬೇಕು, ಅದ ಕಳಿತ ಮ್ಯಾಲೆ ಗಿಡ ನೆಡಬೇಕು ಅಂತ ಸಂಸ್ಥೆದವ್ರು ಹೇಳ್ಯಾರ. ಒಂದ ವಾರನಾರÀ ಬರ್ತಿರೇನು ನಮ್ಮ ಹೊಲದಾಗ ದುಡಿಯಾಕ?” ಎಂದು ಕಲ್ಲವ್ವ ಮಾದಪ್ಪಗ ಕೇಳಿದಳು.

“ಬಟಾನು ಬಯಲ ಹೊಲದಾಗ ಗಿಡ ನೆಟ್ರ ದನಾ ಕರಾ, ಕುರಿ ತಿನ್ನಂಗಿಲ್ಲೇನು? ನಿನಗಂತೂ ಮಾಡಾಕ ಬ್ಯಾರೆ ಕೆಲಸಿಲ್ಲ ಮಾಡತಿದೀ. ನಾನು ಅದನ್ನ ಮಾಡಂತೀಯೇನು? ನಾ ಹಮಾಲಿ ಕೆಲಸಕ್ಕ ಹೋಗಾಂವ’ ಎಂದು ಕಡ್ಡಿಮುರಿದಂತೆ ನುಡಿವ ಗಂಡನನ್ನು ಬದಲಾಯಿಸುವುದು ವ್ಯರ್ಥ ಎಂದು ಸುಮ್ಮನಾದರೂ, ಕಲ್ಲವ್ವನಿಗೆ ಗಂಡನ ಮಾತಿನಲ್ಲಿ ಸತ್ಯವೂ ಇರುವುದರ ಅರಿವಾಗಿತ್ತು. ಹೆಂಗಾರ ಬೇಲಿ ಮಾಡಬೇಕು… ಇಡೀ ಹೊಲಕ್ಕೆ ಬೇಲಿ ಮಾಡಾಕ ಹೆಂಗೂ ಆಗಂಗಿಲ್ಲ. ಗಿಡ ನೆಡುವಷ್ಟೇ ಜಾಗಕ್ಕೆ ಬೇಲಿ ಮಾಡೋದು ಎಂದು ನಿರ್ಧರಿಸಿದಾಗ ನೆನಪಾಗಿದ್ದು ಮುಂಡಗೋಡಿನವರು ಮಾಡುವ ಸೀರೆ ಬೇಲಿ. ಕೂಲಿ ಕೆಲಸಕ್ಕೆ ಹೋಗುತ್ತಿದ್ದಾಗ ಕಷ್ಟ ಕಾಲಕ್ಕಿರಲಿ ಎಂದು ಅಲ್ಲಿ ಇಲ್ಲಿ ಬಚ್ಚಿಟ್ಟ ಹಣವನ್ನು ಹುಡುಕಿದಳು. ಒಂದು ಸಾವಿರದ ಆರುನೂರು ರೂಪಾಯಿ ಸಿಕ್ಕಿತು. ನಾಲ್ಕುನೂರು ರೂಪಾಯಿ ತೆಗೆದು ಸೊಂಟದಲ್ಲಿರಿಸಿದ ಸಂಚಿಯಲ್ಲಿ ಹಾಕಿಕೊಂಡಳು. ಉಳಿದಿದ್ದನ್ನು ಮತ್ತೆ ಅಡಗಿಸಿಟ್ಟಳು.

“ಪದ್ದವ್ವಾ ಇನ್ನೂರು ರೂಪಾಯಿ ಕೊಡತೀನಿ. ನಿಮ್ಮ ಹೊಲದಂಚಿಗೆ ಇರುವ ಗೊಬ್ಬರ ಗಿಡದ ಒಂದಿಷ್ಟ ಗೂಟಾ ಕೊಡತೀಯೇನು?” ಕೇಳಿದಳು ಕಲ್ಲವ್ವ.

“ಅದಕ್ಕೇನವ್ವಾ, ರೊಕ್ಕ ಗಿಕ್ಕ ಬ್ಯಾಡ. ನಿಮಗೆಷ್ಟು ಬೇಕೋ ಅಷ್ಟ ಕಡಕೊಂಡು ಹೋಗ್ರಿ. ಏನ ಮಾಡಾವ್ರ ಇದ್ದೀರಿ?” ಎಂದು ಕೇಳಿದಳು ಪದ್ದವ್ವ. “ಒಂದೊಂದು ಮಾರಿಗೆ ಒಂದೊಂದು ಗೂಟಾ ಹುಗಿದು ಹಳೆ ಸೀರಿ ಕಟ್ಟಿ ಬೇಲಿ ಮಾಡ್ತೇವಿ” ಎಂದು ಕಲ್ಲವ್ವ ಹೇಳಿದಾಗ, ಪದ್ದವ್ವ ಬೆರಗಾದಳು. “ಅಷ್ಟಕ್ಕೊಂದ ಸೀರಿ ಐತೇನು ಕಲ್ಲವ್ವಾ ನಿನ್ನ ಕಡೇಕ?” ಎಂದು ಪ್ರಶ್ನಿಸಿದಳು ಪದ್ದವ್ವ.

“ಇಲ್ಲವ್ವಾ, ನನ್ನ ಕಡೇಕ ಅವ್ರಿವ್ರು ಉಡಸಿದ್ದ ಐದೋ ಆರೋ ಸೀರಿ ಅಷ್ಟ ಅದಾವು. ಊರಾಗ ಸುದ್ದಿ ಹಾಕೀನಿ ‘ಹತ್ತ ರೂಪಾಯಿಗೆ ಗಟ್ಟಿಮುಟ್ಟಾದ ಹಳೆಸೀರಿ ಖರೀದಿ ಅಂತಾ ಮಾಡ್ತೀನಿ’ ಎಂದು ನಕ್ಕಳು ಕಲ್ಲವ್ವ.

ಗಟ್ಟಿಯಾದ ಮಣ್ಣನ್ನು ಅಗೆಯುವುದು ಕಷ್ಟ ಎನಿಸಿದಾಗ ಹೊಲದಿಂದ ಅರ್ಧ ಕಿಲೋಮೀಟರ್ ದೂರದಿಂದ ಒಂದೊಂದು ಕೊಡ ನೀರು ಹೊತ್ತೊಯ್ದು ಗಿಡ ನೆಡುವುದಕ್ಕೆ ಮಾರ್ಕ್ ಮಾಡಿದ ಜಾಗದಲ್ಲಿ

ಸುರಿಯುತ್ತಿದ್ದ ಕಲ್ಲವ್ವ ಮಣ್ಣು ಮೆತ್ತಗಾದೊಡನೆ ತಗ್ಗು ತೆಗೆಯುತ್ತಿದ್ದಳು. ದಿನವೂ ಸಂಜೆಯ ಹೊತ್ತಿಗೆ, ರಜಾ ದಿನಗಳಲ್ಲಿ ಮಕ್ಕಳಿಬ್ಬರೂ ಬಂದು ಕಲ್ಲವ್ವ ತೆಗೆದ ತಗ್ಗಿಗೆ ದರಗೆಲೆ ತುಂಬಿಸುತ್ತಿದ್ದರು. ದಾರಿಯಲ್ಲಿ ಬಿದ್ದ ಸಗಣಿಯನ್ನು ಬುಟ್ಟಿಯಲ್ಲಿ ತುಂಬಿ ತಂದು ಹಾಕುತ್ತಿದ್ದರು. ಗೊಬ್ಬರ ಗಿಡದ ಗೂಟಾ ನೆಟ್ಟು ಒಂದೆಕರೆ ಹೊಲಕ್ಕೆ ಸೀರೆ ಬೇಲಿ ಮಾಡುವಾಗ ಕೈಗೂಡಿದ ಪದ್ದವ್ವನಿಗೂ, ‘ನೀನೂ ತ್ವಾಟಾ ಮಾಡು’ ಎಂದು ಕಲ್ಲವ್ವ ವರಾತ ಹಚ್ಚಿದ್ದಳು. ತಂದಷ್ಟೂ ಗಿಡಗಳನ್ನು ನೆಟ್ಟು ಮುಗಿಸಿದ ಕಲ್ಲವ್ವನನ್ನು ಟೀಕಿಸುತ್ತಿದ್ದ ಊರಿನವರು ಹುಬ್ಬೇರಿಸಿ ನೋಡಲಾರಂಭಿಸಿದ್ದರು. ಆದರೆ ಮಾದಪ್ಪ ಒಮ್ಮೆಯೂ ಹೊಲದ ಕಡೆ ಬರಲಿಲ್ಲ.

ಆ ದಿನಗಳಲ್ಲಿಯೇ ಸಂಸ್ಥೆಯವರು ಎಲ್ಲರ ಹೊಲಕ್ಕೆ ಭೇಟಿ ನೀಡಿ ಕೆಲಸ ಮಾಡುತ್ತಿದ್ದಾರೆಯೇ ಸರ್ವೇ ನಡೆಸಿದರು. ಕಲ್ಲವ್ವನ ಕೆಲಸವನ್ನು ಮನಸಾ ಮೆಚ್ಚಿ ಹೊಗಳಿದರು. ‘ನಿಮಗ ಇಪ್ಪತ್ತೈದು ಮಾವಿನ ಸಸಿನೂ ಕೊಡತೇವಿ’ ಅಂದರು. ‘ಹೆಂಗಾರ ಮಾಡಿ ಗುದ್ಯಾಡಿ ಗಿಡಾ ನೆಡತೀನ್ರೀ ಸರ. ನೀರಿಗೇನು ಮಾಡೋದ್ರೀ? ಅರ್ಧಾ ಕಿಲೋ ಮೀಟರ್ ದೂರ ಆಕ್ಕೇತಿ ನೀರಿರೋ ಜಾಗ’ ಎಂದು ಅಳಲು ತೋಡಿಕೊಂಡಳು ಕಲ್ಲವ್ವ. “ಗಿಡಾ ಯಾರ್ಯಾರ ತಗೊಂಡೀರಿ ಅವ್ರೆಲ್ಲಾ ಬರೋ ಮಳೆಗಾಲದಾಗ ಮಳೆನೀರ ಕೊಯ್ಲು ಮಾಡ್ರೀ. ಹೊಲದ ತಗ್ಗಿರೋ ಜಾಗದಾಗ ಕೃಷಿ ಹೊಂಡಾ

ತೆಗೆದು ನೀರ ಹಿಡಿರಿ. ಹೊಲಾ ತಂಪಾಗಿಯೂ ಇರ್ತತಿ. ಬೇಕಾದಾಗ ಗಿಡಕ್ಕೆ ನೀರು ಹಾಕಾಕೂ ಬರ್‍ತತಿ. ಇದೊಂದ ಬ್ಯಾಸಗಿಯಾಗ ನೀರ ಹೊತ್ತಗೊಂಡ ಬಂದ ಹಾಕಿ ಗಿಡದ ಜೀವಾ ಉಳಸ್ರೀ. ಮುಂದಿನ ಮಳೆಗಾಲಕ್ಕ ನೀರ ಹಿಡಿರಿ’ ಎಂದರು. ‘ಈ ವರಷಾ ಬ್ಯಾಸಗ್ಯಾಗ ಗಿಡ ಉಳಿಸಿಕೊಳ್ಳೋದು ಹ್ಯಂಗ್ರೀ ಸರ್? ಹೊತಗೊಂಡು ಬಂದ ಇಂದ ಎರಡುಕೊಡಾ ನೀರು ಸುರವಿದರ ನಾಳೆ ಅನ್ನೂದ್ರಗ ಭೂಮಿ ಒಣಗಿರ್ತತಿ’ ಎಂದ ಕಲ್ಲವ್ವನಿಗೆ ಅವರು ಹೊಸತೊಂದು ಉಪಾಯ ಹೇಳಿದರು. ‘ಪ್ರತಿ ಗಿಡದ ಬುಡದಲ್ಲಿ ಸಣ್ಣ ತೂತಿರುವ ಮಡಕೆಯೊಂದನ್ನು ಇಟ್ಟು ಅದರಲ್ಲಿ ಎರಡು ಕೊಡ ನೀರು ತುಂಬಿಡ್ರೀ. ಸತತವಾಗಿ ಸಣ್ಣಗೆ ಹನಿಯುವ ನೀರಿನಲ್ಲಿಯೇ ಗಿಡಗಳು ಬೆಳಿತಾವ ನೋಡ್ರಿ.’ ಕಲ್ಲವ್ವನಿಗೆ ಆ ಉಪಾಯ ತುಂಬ ಹಿಡಿಸಿತು.. ಬಚ್ಚಿಟ್ಟ ಹಣದಲ್ಲಿಯೇ ಮಡಕೆ ಖರೀದಿಯೂ ನಡೆದು ಗಿಡದ ಬಳಿ ಒಂದೊಂದು ಮಡಕೆ ಇಟ್ಟು ನೀರು ತುಂಬಿಸಿದ್ದೂ ಆಯ್ತು. ನಂತರ ಕೃಷಿಯಲ್ಲಿ ಕಲ್ಲವ್ವನೆಂದೂ ಹಿಂತಿರುಗಿ ನೋಡಿದ್ದೇ ಇಲ್ಲ. ಅವಳು ನಡೆದಿದ್ದೇ ಹಾದಿ.

***

ಅಂದು ಧಾರವಾಡ ಕೃಷಿಮೇಳದಲ್ಲಿ ‘ಕೃಷಿ ಪಂಡಿತ’ ಪ್ರಶಸ್ತಿ ಪ್ರಧಾನ ಸಮಾರಂಭ. ಸಾಲಾಗಿ ಕುಳಿತ ಕೃಷಿಸಾಧಕರ ಸಾಲಿನಲ್ಲಿ ಕಲ್ಲವ್ವನೂ ಕುಳಿತಿದ್ದಳು! ಪ್ರೇಕ್ಷಕರಿಗಾಗಿ ಮೀಸಲಿಟ್ಟ ಖುರ್ಚಿಯಲ್ಲಿ ಕುಳಿತಿದ್ದ ಶಂಕ್ರಾ, ಭರಮರು ಅಭಿಮಾನದಿಂದ ಅವ್ವನನ್ನು ನೋಡುತ್ತ ಕುಳಿತಿದ್ದರು. ಮಾದಪ್ಪ ಒಂದು ಬಗೆಯ ಅಪರಾಧೀ ಪ್ರಜ್ಞೆಯಲ್ಲಿಯೇ ಕುಳಿತಿದ್ದ. ‘ಹೆಣ್ಣ ಹೆಂಗ್ಸು ಹಗಲೂ ರಾತ್ರ್ರಿ ಅನಲಾರ್ದ ತ್ವಾಟ ಮಾಡಕ ದುಡಿತಾಳು, ನೀ ಎದ್ದಎರಗಿ ಅದರ ಕಡೆ ನೋಡವಲ್ಲಿ, ಎಂಥಾ ಮನಷಾನಪ್ಪ!’ ಎಂದು ಅರಳೀಕಟ್ಟೆಗೆ ಕುಳಿತ ಮಲ್ಲೇಶಜ್ಜ ಹಿಗ್ಗಾಮುಗ್ಗಾ ಬೈಯದಿದ್ದರೆ ಈವತ್ತಿಗೂ ಹಮಾಲಿ ಕೆಲಸವನ್ನೇ ತಾನು ಮಾಡಕೊಂತಿರ್ತಿದ್ನೇನೋ! ‘ನಾ ಎಷ್ಟೇ ಕಟುಕಿ ಮಾತಾಡಲಿ ಸಹಿಸ್ಕೊಂಡು ತ್ವಾಟಾ ಮಾಡಿದಾಕಿ ಈಕಿ’ ಎಂಬ ಹೆಮ್ಮೆಯಿಂದ ಹೆಂಡತಿಯನ್ನು ಮತ್ತೆ ಮತ್ತೆ ನೋಡಿದ. ಆರಂಭದಲ್ಲಿಯೇ ಕಲ್ಲವ್ವನಿಗೆ ಸನ್ಮಾನ ಮಾಡುವುದಾಗಿ ಅನೌನ್ಸ ಮಾಡಿದ ನಿರೂಪಕಿ ಕಲ್ಲವ್ವನ ಸಾಧನೆಯ ಕುರಿತಾಗಿ ಹೇಳಲಾರಂಭಿಸಿದಳು.

“ನೋಡ್ರೀ, ಈಗ ನಿಮ್ಮ ಮುಂದೆ ಕುಳಿತಿರುವ ಕಲ್ಲವ್ವ ಒಬ್ಬ ಅಸಾಧಾರಣ ಸಾಧನೆ ಮಾಡಿದ ಮಹಿಳೆ. ಇವರ ಊರಿನ್ಯಾಗ ‘ನೆಲೆ’ ಅನ್ನೋ ಸಂಸ್ಥೆಯವರು ಸಮಗ್ರ ಕೃಷಿ ಮಾಡಾಕ ಮಾರ್ಗದರ್ಶನಾ ಮಾಡತೇವಿ ಅಂತ ಎಂಟ ವರ್ಷದ ಹಿಂದೆ ಇವರ ಊರಿಗೆ ಹೋಗಿದ್ರು. ನಮ್ಮ ಹೊಲಾನ ತ್ವಾಟಾ ಮಾಡ್ತೇನಿ ಅಂತ ಮೊದಲ ಮುಂದಕ್ಕ ಬಂದವ್ರು ಇವ್ರು. ಪಡಾ ಬಿದ್ದ ಒಣಾ ಹೊಲಾನ ಹಸನ ಮಾಡಿ ಹಳೆಸೀರಿ ಬೇಲಿ ಕಟ್ಟಿ ತ್ವಾಟ ಮಾಡ್ಯಾರ. ತಗ್ಗ ತೆಗೆಯೋದ್ರಿಂದ ಹಿಡಿದು ಗಿಡಾ ನೆಡೋ ತನಕ ಎಲ್ಲಾ ಕೆಲಸಾ ಮಾಡ್ಯಾರ. ಗಿಡಾ ನೆಡಾಕ ಅರ್ಧಾ ಕಿಲೋಮೀಟರ್ ದೂರದಿಂದಾ ನೀರು ಹೊತಕೊಂಡ ಬಂದ ಹಾಕಿ ಗಿಡಾ ಬೆಳೆಸ್ಯಾರ. ಹೊಲದಂಚಿಗೆ ಬದು ಮಾಡ್ಯಾರ. ಹೊಲದ ಮೂಲ್ಯಾಗ ಕೃಷಿಹೊಂಡ ತೆಗೆಸಿ ಮಳೆಕೊಯ್ಲು ಮಾಡಿ ನೀರು ಹಿಡಿದಿಟ್ಟು ಊರಿನವರಿಗೇ ಮಾದರಿ ಹಾಕಿ ಕೊಟ್ಟಾರ. ಮೇವಿಗೆ ಬೇಕಾಗಿ ಸಿಗ್ನಲ್ ಹುಲ್ಲು, ಸುಬಾಬುಲ್ ಬೆಳೆದು ದನ, ಕುರಿ ಸಾಕ್ಯಾರ. ಎರೆಗೊಬ್ಬರದ ಟ್ರೇನಿಂಗ್ ತಗೊಂಡು ಎರೆಗೊಬ್ಬರಾ ಮಾಡಿ ಮಾರ್ತಾರ. ನರ್ಸರಿ ಮಾಡಿ ಗಿಡಾ ಬೆಳೆದು ಮಾರ್ತಾರ. ಚಿಕ್ಕೂ ಮಾವು, ತರಕಾರಿ ಎಲ್ಲಾ ಬೆಳೆದು ರೈತರ ಸಂತ್ಯಾಗ ತಾವೇ ಸ್ವತಃ ಮಾರತಾರ. ಎಲ್ಲಾಕ್ಕಿಂತ ಮುಖ್ಯ ಅತ್ಯಪೂರ್ವ ಸಾಧನೆ ಅಂದ್ರ ಇವರ ಹೊಲದಾಗ ಅರ್ಧಾ ಎಕರೆ ಕಲ್ಲುಹಾಸಿನ ಇತ್ತು. ಅಷ್ಟೂ ಜಾಗ ನಿರುಪಯುಕ್ತ ಆಗಿತ್ತು. ಇವ್ರು ಅದರ ಮ್ಯಾಲೆ ಹೊಲದ ಕಸಾ ಹರವಿ ಹಾಕ್ಯಾರ. ಕಸದ ಮ್ಯಾಲೆ ನಾಲ್ಕಿಂಚು ಮಣ್ಣು ಗೊಬ್ಬರಾ ಹಾಕಿ ಬೆಡ್ ತಯಾರಿಸಿ ಅದರ ಮ್ಯಾಲ ಟೊಮ್ಯಾಟೋ ಗಿಡಾ, ಮೆಣಸಿನಗಿಡಾ ನೆಟ್ಟು ಬೆಳೆಸ್ಯಾರ! ನಾಟಿ ತಳಿ ಬೀಜ ಬ್ಯಾಂಕ್ ಮಾಡ್ಯಾರ! ಊರಿನ ಹೆಂಗಸರನ್ನೆಲ್ಲ ಸೇರಿಸಿ ಸ್ವಸಹಾಯ ಸಂಘಾ ಕಟ್ಯಾರ. ಕೃಷಿಆಧಾರಿತ ಉಪಕಸುಬು ಮಾಡಾಕ ಸಾಲ ಸಿಗೋ ಹಾಂಗ ಮಾಡ್ಯಾರ. ಈಗ ದೇಶ ವಿದೇಶದ ಮಂದಿ ಇವರ ತ್ವಾಟಕ್ಕ ಅಧ್ಯಯನ ಮಾಡಾಕ ಬರ್ತಾರ.”

ನಿರೂಪಕಿ ಈ ವಿವರಗಳನ್ನು ಹೇಳುತ್ತಿದ್ದಂತೆಯೇ ರಾಜ್ಯದ ರಾಜ್ಯಪಾಲರು ಕಲ್ಲವ್ವನಿಗೆ ಮಾಲೆ ಹಾಕಿ ಶಾಲು ಹೊದೆಸಿ ‘ಕೃಷಿ ಪಂಡಿತ’ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿದರು. ಕಲ್ಲವ್ವನ ಬಳಿ ‘ಪ್ರಶಸ್ತಿ ಕೊಟ್ಟಿದ್ದಕ್ಕ ನಿಮಗೇನ ಅನ್ನಿಸ್ತದೆ ನಾಲ್ಕ ಮಾತ ಮಾತಾಡ್ರೀ’ ಎಂದರು.

ಕಲ್ಲವ್ವ ಮೈಕಿನ ಮುಂದ ನಿಂತಳು. “ಎಲ್ಲಾರಿಗೂ ನಮಸ್ಕಾರ್ರೀ. ನನಗ ಭಾಷಣಾ ಮಾಡಾಕ ಬರೂದಿಲ್ಲ. ನಾ ನನ್ನ ಅನುಭವಾ ಹೇಳ್ತೀನ್ರಿ. ಎಂಟ ವರಷದ ಹಿಂದ ಒಣಾ ಭೂಮಿ ತ್ವಾಟಾ ಮಾಡಾಕ ಹೊಂಟಾಕಿ ಅಂತ ನನ್ನ ಗಂಡನೂ ಸೇರಿದಂಗ ಊರಾಗಿನ ಮಂದಿಯೆಲ್ಲಾ ಆಡಿಕೊಂಡು ನಗೀಚಟಾಕಿ ಹಾರಸ್ತಿದ್ರೂ. ಕಸಾ ಪಸಾ ಕೀಳಾಕ, ಬೀಜಾ ಬಿತ್ತಾಕ ಅಷ್ಟೇ ಹೆಂಗಸೂರ ಕೈಲಿ ಆಗೂದು ಅನ್ನೋ ನಮ್ಮೂರ ಮಂದಿ ಮಾತ ಕಿವ್ಯಾಗ ಬಿಸಿ ಎಣ್ಣೀ ಬಿದ್ದ ಹಂಗ ಬೀಳತಿದ್ವು. ಹೊಲದಾಗ ತಗ್ಗ ತೆಗೆದು ಗಿಡಗೋಳ್ನ ನೆಟ್ಟು ದೂರದಿಂದ ನೀರು ಹೊತ್ತಗೊಂಡ ಬಂದ ಹಾಕಿ ಬದಕಿಸಿದೆ. ಆಮ್ಯಾಲೆ ಹಮಾಲಿ ಕೆಲ್ಸಾ ಮಾಡೋ ನನ ಗಂಡ ಅದನ್ನ ಬಿಟ್ಟು ಕೃಷಿ ಕೆಲ್ಸ ಮಾಡಾಕ ಕೈಗೂಡಿದ. ದನ, ಕುರಿ, ಕೋಳಿ ತಗೊಳ್ಳಾಕ ರೊಕ್ಕ ಇಲ್ಲದಾಗ ಕರಿಮಣಿ ಜೋಡಿ ಅರಿಶಿನದ ಕೊಂಬ ಕಟ್ಟಿಕೊಂಡು ಕೊಳ್ಳಾಗಿನ ತಾಳಿ, ಕಿವ್ಯಾಗಿನ ಬೆಂಡೋಲೆ ಅಡ ಇಟ್ಟ ರೊಕ್ಕಾ ತೆಗೆದಿದ್ದೆ. ಈಗ ಅವ್ನೆಲ್ಲಾ ಬಿಡಿಸಿ, ಮ್ಯಾಲ ಮತ್ತ ಬೋರಿಗುಂಡಿನ ಸರಾ ಮಾಡಿಸಿಕೊಂಡೇನಿ. ‘ನೆಲೆ’ ಸಂಸ್ಥೆಯಾರು ಸಮಗ್ರಕೃಷಿ ಮಾಡಾಕ ಮಾಹಿತಿ ನೀಡಿದ್ರು. ಒಬ್ಬ ತಾಯಿ ಮಗೀನ ಕೈಹಿಡಿದು ನಡೆಸೊ ಹಂಗ ನಮಗ ಸಹಾಯ ಮಾಡಿದ್ರು. ಹಿಂದಕ್ಕ ಕೂಲಿಕಾರನ ಹೆಂಡ್ತಿ ಅನ್ನಿಸ್ಕೊಂಡಾಕಿ ಈಗ ತ್ವಾಟದ ಯಜಮಾನ್ತಿ ಆಗೀನಿ. ಈಗ ಒಂದ ವರಸಾ ಬರಾ ಬಂದ್ರೂ ನಾವು ಅಂಜಂಗಿಲ್ಲರೀ. ಈಗ ನಮ್ಮ ಭೂಮಿ ಬಂಗಾರದ ಬೆಳಿ ತೆಗೆಯೋ ಹಂಗ ಆಗೇತಿ. ಯಾರೂ ನಿನ್ನ ಕೈಯಾಗ ಏನಾಕ್ಕೇತಿ ಅಂತ ನಿಮ್ಮನಿ ಹೆಂಗಸೂರಿಗೆ ಕೇಳಬ್ಯಾಡ್ರೀ. ಮನಸ್ಸ ಮಾಡಿದ್ರ ಹೆಂಗಸೂರು ಏನ ಕೆಲ್ಸಾ ಬೇಕಾದ್ರೂ ಮಾಡತಾರ. ಭೂಮಿನಾ ಪಡಾ ಬಿಡಬ್ಯಾಡ್ರಿ, ಭೂಮ್ತಾಯಿ ನಂಬಿ ದುಡಿದ್ರ ಆಕಿ ಎಂದೂ ನಮ್ಮ ಕೈ ಬಿಡಂಗಿಲ್ಲಾ” ಎನ್ನುತ್ತ ಕಲ್ಲವ್ವ ಕೈಮುಗಿದಾಗ ಪ್ರೇಕ್ಷಕರಿಂದ ಚಪ್ಪಾಳೆಗಳ ಸುರಿಮಳೆ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ