ದಿನಪೂರ್ತಿ ಮಾಡುವ ಕೆಲಸವನ್ನು ಗೌರವದಿಂದ ಕಾಣುವ ಮನಸ್ಸುಗಳು ಬೆಳೆಯಬೇಕಲ್ಲವೇ? ಅಷ್ಟೆಲ್ಲ ದುಡಿಮೆಗೆ ಸಂಬಳವಂತೂ ಇರಲಾರದು, ಆದರೆ ಅವಳ ಆವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿ ಮನೆಮಂದಿಗೆ ಇರುವುದು ಅಗತ್ಯವಲ್ಲವೇ? …ಮಾತುಗಳ ಮೂದಲಿಕೆ ಇದುವರೆಗೆ ಅದೆಷ್ಟು ಹೃದಯಗಳನ್ನು ಇರಿದಿವೆಯೋ ಲೆಕ್ಕವಿದೆಯೇ?
“ಅಕ್ಕ, ನನಗಂತೂ ಯಾರೂ ನನ್ನವರಲ್ಲ ಅನ್ನಿಸಿಬಿಟ್ಟಿದೆ. ಅಪ್ಪ ಅಮ್ಮನಂತೂ ‘ಅಲ್ಲೇ ಹೊಂದಿಕೊಂಡು ಇದ್ದುಬಿಡು. ಈಗ ಗಂಡನನ್ನು ಬಿಟ್ಟು ಬಂದು ಇನ್ನು ನಾಲ್ಕು ವರ್ಷ ಕಳೆದ ಮೇಲೆ ನನಗೆ ಗಂಡ ಬೇಕು ಎಂದರೆ ನಾವೇನಮ್ಮ ಮಾಡೋಣ?’ ಎನ್ನುತಾರೆ. ಇಲ್ಲಿ ನಾನನುಭವಿಸ್ತಾ ಇರೋ ನೋವು ಸಂಕಟ ಒಬ್ಬರಿಗೂ ಅರ್ಥ ಆಗ್ತಾ ಇಲ್ಲ. ಅಷ್ಟಕ್ಕೂ ಇಲ್ಲಿ ಇದ್ರೆ ಇನ್ನೆಷ್ಟು ದಿನ ಜೀವಂತವಾಗಿರ್ತೀನಿ ಎಂದೂ ಗೊತ್ತಿಲ್ಲ..” ಆ ಹುಡುಗಿ ಬಿಕ್ಕಳಿಸಿ ಅಳುತ್ತಾ ಇದ್ದರೆ ಬೇರೆಲ್ಲೋ ದೂರದಲ್ಲಿ ಕೇಳಿದ ದೌರ್ಜನ್ಯದ ಕಥೆಗಳೆಲ್ಲ ನಮ್ಮ ಬೀದಿಯವರೆಗೂ ಬಂದಿರುವುದು ಅರ್ಥವಾಯಿತು.
ಅವಳನ್ನೊಮ್ಮೆ ಸರಿಯಾಗಿ ಗಮನಿಸಿದರೆ ಹೊಟ್ಟೆಗಿಲ್ಲದಂತೆ ಸೊರಗಿದ್ದಳು. ಅತ್ತು ಅತ್ತು ಕಣ್ಣುಗಳೆಲ್ಲ ಎಲ್ಲೋ ಆಳಕ್ಕೆ ಸೇರಿಕೊಂಡಂತಿದ್ದವು. ಅವಳ ಮಗುವಾದರೊ ಅಮ್ಮನ ಹೊರತು ಇನ್ನೊಬ್ಬರ ಮುಖ ನೋಡಿದರೆ ಅಳುವುದಕ್ಕೆ ಆರಂಭಿಸುತ್ತಿತ್ತು. ಕಾರಣವಿಷ್ಟೇ: ಈ ತಾಯಿಯ ಹೊರತು ಮತ್ತಾರೂ ಆ ಮಗುವನ್ನು ಮನೆಯಲ್ಲಿ ಮಾತನಾಡಿಸುವವರಿಲ್ಲ. ಹೆಣ್ಣುಮಗು ಎಂಬುದೊಂದು ತಾತ್ಸಾರ. ಮಗುವಿನ ತಾಯಿಯ ಕುರಿತು ಅಸಡ್ಡೆ. ಆ ತಾಯಿ
ಒಂದೆರಡು ವರ್ಷಗಳ ಹಿಂದೆ ಮುದ್ದಾದ ಹುಡುಗಿಯಂತೂ ಆಗಿದ್ದಿರಲೇಬೇಕು. ಮುಖದಲ್ಲಿರುವ ಲಕ್ಷಣ ನೋಡಿದರೆ ಒಂದು ವೇಳೆ ಸೂಕ್ತ ವಿದ್ಯಾಭ್ಯಾಸ ಒದಗಿಸಿದರೆ ಅವಳು ತನ್ನ ಕಾಲಮೇಲೆ ಸಮರ್ಥವಾಗಿ ನಿಂತು ತನ್ನ ಜೀವನವನ್ನು ಸರಿದೂಗಿಸಿಕೊಂಡು ಹೋಗುವುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಸಮಸ್ಯೆಯಾಗಿರುವುದೆಂದರೆ ಗಂಡ, ಅತ್ತೆ.
ಬಾಣಲೆಯಿಂದ ಬೆಂಕಿಗೆ
ಇವರಿಬ್ಬರು ಹೆಣ್ಣುಮಕ್ಕಳು ಮಾತ್ರವೇ ಆಗಿರುವುದರಿಂದ ಮುಂದೆ ಅವರ ಆಸ್ತಿಯೆಲ್ಲ ತಮಗೆ ಬರುತ್ತದೆ ಎಂಬುದು ಅವರ ಯೋಚನೆ. ಅದನ್ನು ಈಗಲೇ ಬರೆಸಿಕೊಂಡುಬಿಡಬೇಕೆಂಬ ದುರಾಸೆ. ಮುಂದಕ್ಕೆ ಓದಿಸುತ್ತೇನೆ ಎಂಬ ಭರವಸೆ ಕೊಟ್ಟು ಮದುವೆ ಮಾಡಿಕೊಂಡ ಬಳಿಕ ‘ಮನೆಯಲ್ಲಿ ಮುಸುರೆ ತಿಕ್ಕುತ್ತಾ ಬಿದ್ದಿರು’ ಎಂಬ ಬದಲಾದ ವರಸೆ ಇವಳಿಗೆ ಜೀವನದ ಇನ್ನೊಂದು ಮುಖದ ದರ್ಶನವನ್ನು ಬಹಳ ಚಿಕ್ಕವಯಸ್ಸಿಗೇ ಮಾಡಿಸಿಬಿಟ್ಟಿದೆ. ಸ್ವಾವಲಂಬಿಯಾಗುವ ಹಂಬಲವಿದ್ದರೂ ಒಂದು ಮಗುವಾದರೆ ಮಗುವಿನ ಮುಖ ನೋಡಿಯಾದರೂ ಮನೆಮಂದಿ ಸರಿಯಾಗುತ್ತಾರೆ ಎಂಬ ಭ್ರಮೆಯಲ್ಲಿ ಕಂದನಿಗೆ ಜನ್ಮನೀಡಿದ್ದಾಯ್ತು. ಆದರೆ ಅನಂತರ ಬದುಕು ಬಾಣಲೆಯಿಂದ ಬೆಂಕಿಗೇ ಬಿದ್ದಂತಾದುದಕ್ಕೆ ಅದಾರು ಹೊಣೆಯೋ ಭಗವಂತನಿಗೇ ಗೊತ್ತು. ಈಗ ತನ್ನ ಜೊತೆಗೆ ತನ್ನ ಮಗುವನ್ನೂ ಪೊರೆಯಬೇಕಾದ ಹೊಣೆ. ಆದರೆ ತನ್ನ ಕಾಲಿನಡಿಯ ನೆಲವೇ ಕುಸಿಯುವ ಹಂತದಲ್ಲಿ ಅವಳು ಮಗುವನ್ನು ಪೋಷಿಸುವುದಾದರೂ ಹೇಗೆ?
ತವರುಮನೆಗಾದರೂ ಹೋಗಿಬಿಡೋಣ ಎಂದರೆ ಅವಳಿಗೆ ತವರಿನ ಬಾಗಿಲು ತೆರೆದಿಲ್ಲ. ‘ಕತ್ತು ಹಿಡಿದು ಆಚೆಗೆ ತಳ್ಳುವವರೆಗೂ ನೀನಾಗಿ ಮನೆಬಿಟ್ಟು ಬರಕೂಡದು’. ಎಂದು ಅಪ್ಪ ಅಮ್ಮ ಅವಳಲ್ಲಿ ಪ್ರಮಾಣ ಮಾಡಿಸಿಕೊಂಡಿದ್ದರಂತೆ! ಒಂದು ವೇಳೆ ಹಾಗೇನಾದರೂ ಮಾಡಿದರೆ ತಕ್ಷಣ ಬಂದು
ಕರೆದುಕೊಂಡು ಹೋಗುತ್ತೇವೆ ಎಂಬುದು ಅವರ ಆಶ್ವಾಸನೆ. ಅಂತೂ ಕೆಲವು ವಾರಗಳ ಹಿಂದೆ ಅಂಥದ್ದೊಂದು ಘಟನೆಯೂ ನಡೆದು ಅವಳ ತಂದೆತಾಯಿ ಬಂದು ಕರೆದೊಯ್ದದ್ದೂ ಆಯ್ತು.
ಆದರೆ ನನ್ನನ್ನು ಕಾಡಿದ ಪ್ರಶ್ನೆ, ಅಲ್ಲಿಯವರೆಗೂ ಆ ತಂದೆತಾಯಿ ಕಾದದ್ದಾದರೂ ಹೇಗೆ? ಯಾಕೆ?
ಹೆಣ್ಣು ಎಂಬ ಒಂದೇ ಕಾರಣಕ್ಕೆ ತನ್ನ ಎಲ್ಲ ಆತ್ಮಗೌರವವನ್ನೂ ಸ್ವಾಭಿಮಾನವನ್ನೂ ಬಿಟ್ಟು ಆಕೆ ಬದುಕಬೇಕೆಂಬ ಸಮಾಜದ ನಿರೀಕ್ಷೆ ಎಂದಾದರೂ ಬದಲಾಗುವುದೇ? ಮದುವೆಯಾದಲ್ಲಿಂದ ತಾನು ಹುಟ್ಟಿದ ಮನೆಗೇ ಅತಿಥಿಯಾಗುವ ಅವಳಿಗೆ ಸೇರಿದ ಮನೆಯಲ್ಲಿ ದೊರೆಯಬೇಕಾದ ಗೌರವ, ಕಾಳಜಿ ಒದಗದೆಹೋದರೆ ಅವಳು ಬದುಕಿನ ಅರ್ಥ ಕಂಡುಕೊಳ್ಳುವುದಾದರೂ ಹೇಗೆ?
ಕಾಲದ ಪ್ರಶ್ನೆಗಳು
ಒಳ್ಳೆಯ ಸಂಬಂಧ ಬಂತು ಎಂಬ ಕಲ್ಪನೆಯಿಂದ, ತಮ್ಮ ಮಗಳಿಗೆ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸುವ ಅವಕಾಶವನ್ನೂ ಕೊಡದೆ ಮದುವೆ ಮಾಡಿ ಸಂಭ್ರಮಿಸುವ ಹೆತ್ತವರನ್ನು ಕಂಡಾಗ ತುಂಬಾ ಕಸಿವಿಸಿಯಾಗುತ್ತದೆ. ಎಷ್ಟು ಅದ್ಧೂರಿಯಾಗಿ ಹೇಗೆ ಮದುವೆ ಮಾಡಿಕೊಟ್ಟರು ಎಂಬುದಕ್ಕಿಂತ ಅವಳಿಗೆ ಬದುಕು ಕಟ್ಟಿಕೊಳ್ಳುವ ಅವಕಾಶ ಅವರೆಷ್ಟು ನೀಡಿದ್ದಾರೆ ಎಂಬುದೇ ಇಂದಿನ ಕಾಲದಲ್ಲಿ ಮುಖ್ಯವಲ್ಲವೇ? ಕೊರೋನಾ ಲಾಕ್ಡೌನ್ನ ಅವಧಿಯಂತೂ ಅದೆಷ್ಟೋ ಹೆಣ್ಣುಮಕ್ಕಳ ಓದಿನ ಹಕ್ಕನ್ನು ಕಸಿದುಕೊಂಡು ಅವರನ್ನು ಗೃಹಸ್ಥಾಶ್ರಮಕ್ಕೆ ತಳ್ಳಿಬಿಟ್ಟಿದೆ. ಇನ್ನೇನು ಕೊನೆಯ ಸೆಮಿಸ್ಟರ್ ಮುಗಿಸಿ ಸ್ನಾತಕೋತ್ತರ ಪದವಿಗೆ ಸೇರುವ ಹಂಬಲದಲ್ಲಿದ್ದವರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿ ಸರಕಾರೀ ಉದ್ಯೋಗದ ಕನಸು ಕಾಣುತ್ತಿದ್ದವರು ಮದುವೆಯ ಹೋಮದಲ್ಲಿ ತಮ್ಮ ಕನಸುಗಳನ್ನು ಉರಿಸಿಬಿಟ್ಟಿದ್ದಾರೆ ಎಂಬುದು ಕಹಿಯಾದ ಸತ್ಯ.
ಅದರರ್ಥ ಮದುವೆಯ ಕುರಿತಾಗಿ ಋಣಾತ್ಮಕ ಯೋಚನೆಯಿರಲಿ ಎಂದಲ್ಲ. ಎಷ್ಟೋ ಮಂದಿ ಪುರುಷರು ತಮ್ಮ ಪತ್ನಿಯರಿಗೆ ಮುಂದೆ ಓದುವ ಪ್ರೋತ್ಸಾಹ ತಾವೇ ಕೊಟ್ಟು ಮಾದರಿಯಾದವರಿದ್ದಾರೆ. ಆದರೆ ಎಲ್ಲರೂ ಹಾಗಿರುವುದಿಲ್ಲ. ಒಂದೊಮ್ಮೆ ವಿವಾಹಿತ ಬದುಕು ತಮ್ಮ ಕೈಮೀರಿದರೆ ಜೀವನವನ್ನು ಎದುರಿಸುವುದಕ್ಕೆ ಬೇಕಾದ ಆತ್ಮಸ್ಥೈರ್ಯ ಅವಳಲ್ಲಿ ಇರುವಷ್ಟರ ಮಟ್ಟಿಗಿನ ಅವಕಾಶವನ್ನು ಅವಳಿಗೆ ಒದಗಿಸಿಕೊಡುವುದು ಬಹಳ ಮುಖ್ಯ. ಅದರ ಹೊರತು ತಮ್ಮ ಆಸ್ತಿ ಮಾರಿಯಾದರೂ ಸರಿ, ಮಗಳ ಮದುವೆಯನ್ನು ವೈಭವದಿಂದ ಮಾಡಬೇಕು ಎಂದುಕೊಳ್ಳುವವರ ಮೂರ್ಖತೆಗೆ ಏನೆನ್ನೋಣ? ಅದಕ್ಕಿಂತ ಆಸ್ತಿಯನ್ನೇ ಮಗಳ ಹೆಸರಿಗೆ ಬರೆಯುವುದೊಳಿತು.
ಗಂಡನೆಂದರೆ ಸರ್ವಶ್ರೇಷ್ಠ, ಆ ಮನೆಯೇ ಅರಮನೆ ಎಂದೆಲ್ಲ ಬಾಳುವ ಕಾಲ ಇಂದಿಲ್ಲ. ಬಾಳ್ವೆಗೆ ಬೇಕಾಗಿರುವುದು ಬರಿಯ ಎರಡು ಹೊತ್ತಿನ ಊಟವಲ್ಲ. ಅಂತರಿಕ್ಷಕ್ಕೇರಿದ ಕಲ್ಪನಾ ಚಾವ್ಲಾ ಇಂದಿನ ಅನೇಕ ಮಂದಿಗೆ ಆದರ್ಶವೇ ಹೊರತು ಮನೆಯಲ್ಲಿನ ಅಜ್ಜಿಯಲ್ಲ. ಅವರಂತಹ ತಾಳ್ಮೆ ನಮಗೆ ಒದಗಬೇಕೆಂಬುದು ಸತ್ಯವಾದರೂ ಬರಿಯ ಅಷ್ಟರಿಂದಲೇ ಬದುಕಲಾರೆವು. ಆರ್ಥಿಕ ಸ್ವಾತಂತ್ರ್ಯದ ಅಗತ್ಯ ಅರಿವಾದ ಮೇಲೆ ಮನೆಯೊಳಗೇ ಅಪ್ಪಟ ಗೃಹಿಣಿಯಾಗಿ ಬದುಕುವುದು ಸವಾಲು.
ಏಕೆಂದರೆ ಸಂಪಾದಿಸುವ ಹೆಣ್ಣಿಗಿರುವ ಮರ್ಯಾದೆ ಮನೆಯನ್ನು ಅಚ್ಚುಕಟ್ಟಾಗಿ ರೂಪಿಸುತ್ತ ಮನೆಯವರ ಬೇಕುಬೇಡಗಳನ್ನು ಪೂರೈಸುವವರಿಗೆ ಇರಲಾರದು.
ಇದಕ್ಕೆ ಸಣ್ಣ ಉದಾಹರಣೆ ನೀಡಬಹುದಾದರೆ, ‘ನಿನ್ನ ಪತ್ನಿ ಏನು ಕೆಲಸ ಮಾಡುತ್ತಾಳೆ?’ – ಎಂದು ಗಂಡನನ್ನು ಅವನ ಸ್ನೇಹಿತ ಕೇಳಿದನಂತೆ. ‘ಅವಳೇನು ಮಾಡುತ್ತಾಳೆ, ಸುಮ್ನೇ ಮನೆಯಲ್ಲಿ ಕೂತಿರುತ್ತಾಳೆ’ ಎಂದನಂತೆ ಗಂಡ, ಅವಳು ಬೆಳಗ್ಗೆ ಐದು ಗಂಟೆಗೇ ಎದ್ದು ಇವನಿಗಾಗಿ ರೆಡಿಮಾಡಿಕೊಟ್ಟ ಬುತ್ತಿಯ ತಿಂಡಿಯನ್ನು ತಿನ್ನುತ್ತಾ!
ಅವಳು ದಿನಪೂರ್ತಿ ಮಾಡುವ ಕೆಲಸವನ್ನು ಗೌರವದಿಂದ ಕಾಣುವ ಮನಸ್ಸುಗಳು ಬೆಳೆಯಬೇಕಲ್ಲವೇ? ಅಷ್ಟೆಲ್ಲ ದುಡಿಮೆಗೆ ಸಂಬಳವಂತೂ ಇರಲಾರದು, ಆದರೆ ಅವಳ ಆವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿ ಮನೆಮಂದಿಗೆ ಇರುವುದು ಅಗತ್ಯವಲ್ಲವೇ? ‘ಬಿಟ್ಟಿ ತಿನ್ನುತ್ತಿದ್ದೀಯಾ… ನೀನೇನು ಅಪ್ಪನಮನೆಯಿಂದ ತೆಗೆದುಕೊಂಡು ಬಂದಿದ್ದೀಯಾ?’ ಎಂಬ ಮಾತುಗಳ ಮೂದಲಿಕೆ ಇದುವರೆಗೆ ಅದೆಷ್ಟು ಹೃದಯಗಳನ್ನು ಇರಿದಿವೆಯೋ ಲೆಕ್ಕವಿದೆಯೇ?
“ಮನೆಯಲ್ಲಿ ಇರುವುದು ಅಥವಾ ಇರಬೇಕಾದುದು ಪತ್ನಿಯ ಆಯ್ಕೆಯೋ ಅನಿವಾರ್ಯತೆಯೋ ಆದಾಗ ಆ ಕುರಿತು ಗೌರವವಿರಲಿ. ಅವಳೊಬ್ಬ ವೈದ್ಯೆಯೋ ಪೈಲಟ್ಟೋ ಶಿಕ್ಷಕಿಯೋ ಆಗಿರಬಹುದಿತ್ತು,
ಆದರೆ ಅವಳು ಪತ್ನಿ, ತಾಯಿ, ಮಗಳಾಗಿ ಇರುವುದಕ್ಕೆ ಇಷ್ಟಪಟ್ಟಳು. ಅದು ಕೇವಲ ನಿಮಗಾಗಿ.” – ಎಂದ ನಯನ್ ಗುಪ್ತಾ ಮಾತು ನಿಜವಲ್ಲವೇ? ಕೊರೋನಾ ಲಾಕ್ಡೌನ್ನ ಈ ಅವಧಿ ಅನೇಕ ಹೆಣ್ಣುಮಕ್ಕಳಿಗೂ ಮನೆಯಲ್ಲಿ ಮಕ್ಕಳೊಂದಿಗಿರುವುದರ ಸಂತೋಷವೇನು ಎಂಬುದನ್ನು ಕಲಿಸಿಕೊಟ್ಟಿದೆ. ‘ಇನ್ನು ಪುನಃ ಕೆಲಸಕ್ಕೆ ಹೋಗಲಾರೆ’ ಎಂದು ಸ್ವತಃ ತೀರ್ಮಾನ ತೆಗೆದುಕೊಂಡವರು ಅನೇಕ ಮಂದಿ ಇದ್ದಾರೆ.
ಆದರೆ ಮನೆಮಂದಿ ಕಾಪಿಡಬೇಕಾದುದು ಅವರ ಆತ್ಮಗೌರವವನ್ನು. ಮನೆಯೊಳಗೆ ಅವಳ ಬಳೆಗಳ ಸದ್ದು ಅಕ್ಕರೆಯ ಲಾಲಿಯಾಗಲಿ. ಒಂದೊಮ್ಮೆ ಆ ಬಳೆಗಳು ಮೌನವಾದಾಗ ಅರ್ಥೈಸಿಕೊಳ್ಳಬೇಕಾದ ಬದ್ಧತೆಯನ್ನು ಮನೆಯೊಳಗಿನ ಮಂದಿ ಬೆಳೆಸಿಕೊಳ್ಳಲಿ!