ಎಸ್.ಆರ್. ರಾಮಸ್ವಾಮಿ
ನಮ್ಮ ನಡುವೆಯೇ ಇದ್ದು ದಶಕಗಳುದ್ದಕ್ಕೂ ನಿರಂತರ ಜ್ಞಾನಪ್ರಸಾರದಲ್ಲಿ ನಿರತರಾಗಿದ್ದ ಪ್ರಕಾಂಡ ವೇದವಿದ್ವಾಂಸ ಪಂಡಿತ ಸುಧಾಕರ ಚತುರ್ವೇದಿ ಅವರು ನಮ್ಮನ್ನಗಲಿ ಒಂದು ವರ್ಷ ಕಳೆದಿದೆ.
ಪಂಡಿತ ಸುಧಾಕರ ಚತುರ್ವೇದಿ ಅವರು (20.4.1897-27.2.2020) ದೀರ್ಘಾಯುಷಿಗಳಾಗಿ, ರಾಜಕೀಯ ಆಗುಹೋಗುಗಳಲ್ಲಿ ಪಾತ್ರಧಾರಿಯಾಗಿ ಸಾಕ್ಷಿಯಾಗಿ ಇದ್ದವರು. ಅನಂತರ ವೇದಪ್ರಸಾರಕ್ಕೆ ತಮ್ಮನ್ನು ತೆತ್ತುಕೊಂಡವರು. ಜಲಿಯನ್ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷದರ್ಶಿಗಳಾಗಿದ್ದುದಲ್ಲದೆ ಅಲ್ಲಿ ಪ್ರಾಣನೀಗಿದ ಸುಮಾರು ಸಾವಿರ ಜನರಿಗೆ ತಾವೇ ಅಂತ್ಯಸಂಸ್ಕಾರವನ್ನು ತಮ್ಮ ಕೈಯಿಂದ ನೆರವೇರಿಸಿದ್ದವರು. ಅನಂತರ ದಶಕಗಳ ಕಾಲ ಅವರು ಗಾಂಧಿಯವರ ಅನುಚರಣೆ ಮಾಡಿದರು; ಗಾಂಧಿಯವರ ಪತ್ರವ್ಯವಹಾರಗಳಲ್ಲಿಯೂ ಪತ್ರಿಕೆಗಳ ಕಾರ್ಯದಲ್ಲಿಯೂ ನೆರವಾಗುತ್ತಿದ್ದವರು. ಅನೇಕ ವಿಷಯಗಳಲ್ಲಿ ಗಾಂಧಿಯವರು ಇವರ ಸಲಹೆಗಳನ್ನು ಕೋರುತ್ತಿದ್ದರು. ಹೀಗೆ ಹಲವಾರು ವರ್ಷ ಗಾಂಧಿಯವರೊಡನೆ ಸಹಕರಿಸಿ, ನಾಲ್ಕಾರು ಸಲ ಕಾರಾಗೃಹವಾಸವನ್ನೂ ಅನುಭವಿಸಿದವರು. ಗಾಂಧಿಯವರ ಹತ್ತಾರು ಸಮಸಾಮಯಿಕ ಲೇಖನಗಳನ್ನು ಬಹುಭಾಷಾವಿದರಾಗಿದ್ದ ಸುಧಾಕರ ಚತುರ್ವೇದಿ ತರ್ಜುಮೆ ಮಾಡಿ ಪ್ರಕಟಿಸುತ್ತಿದ್ದರು. ಹೀಗೆ ‘ಗಾಂಧಿಯವರ ಪೋಸ್ಟ್ಮನ್’ ಎಂಬ ಅಡ್ಡಹೆಸರೇ ಇವರಿಗೆ ಅಂಟಿಕೊಂಡಿತ್ತು. ಗಾಂಧಿ ಬರೆದ ಪತ್ರಗಳನ್ನು ವೈಸರಾಯ್ಗಳಿಗೆ ತಲಪಿಸುತ್ತಿದ್ದವರು ಇವರೇ. ‘ಉಪ್ಪಿನ ಸತ್ಯಾಗ್ರಹ’ ಮೊದಲಾದ ಪ್ರಮುಖ ಆಂದೋಲನಗಳಲ್ಲೆಲ್ಲ ಅವರು ಪಾಲ್ಗೊಂಡರು.
ಸ್ವಾತಂತ್ರ್ಯೋದ್ಯಮದಲ್ಲಿ ಶ್ರಮಿಸುವುದನ್ನು ಕರ್ತವ್ಯವೆಂದೇ ಭಾವಿಸಿ ಸುಧಾಕರ ಚತುರ್ವೇದಿ ಅವರು ವರ್ಷಗಳುದ್ದಕ್ಕೂ ಕೆಲಸ ಮಾಡಿದರು.
ಬಿರುಕಿಲ್ಲದ ವ್ಯಕ್ತಿತ್ವ
ಚಿಂತನೆ, ಮಾತು, ಕಾರ್ಯಗಳಲ್ಲಿ ಏಕರೂಪತೆ ಇದ್ದದ್ದನ್ನು ಅವರ ಪ್ರಮುಖ ವ್ಯಕ್ತಿಲಕ್ಷಣವೆಂದೇ ಹೇಳಬೇಕಾಗಿದೆ. ಅವರು ತಮ್ಮ ದೀರ್ಘಜೀವನದ ಉದ್ದಕ್ಕೂ ಈ ನಿಷ್ಠೆಯನ್ನು ಪಾಲಿಸಿದರು. ತಮ್ಮ ವ್ಯಾವಹಾರಿಕ ಜೀವನ ಅನಿಶ್ಚಿತವಾಗುತ್ತದೆಂದು ಎಂದೂ ಚಿಂತಿಸಿದವರಲ್ಲ. ದಿನಗಳಗಟ್ಟಲೆ ಉಪವಾಸ ಇರಬೇಕಾದ್ದು ಜೀವನಕ್ರಮವೇ ಆಗಿಬಿಟ್ಟಿತ್ತು. ಅವಕಾಶ ದೊರೆತಾಗ ಪ್ರವಚನಗಳನ್ನು ನೀಡಿ ಅದರಿಂದ ಬರುತ್ತಿದ್ದ ಅಲ್ಪ ಹಣದಿಂದ ಜೀವನವನ್ನು ಹೇಗೊ ಸಾಗಿಸುತ್ತಿದ್ದರು. ಹೀಗೆ ವರ್ಷಗಳೇ ಕಳೆದವು. ಉತ್ತರಭಾರತದಲ್ಲೆಲ್ಲ ಪ್ರವಚನಪ್ರವಾಸ ಮಾಡಿದರು.
ಆಮೇಲಿನ ವರ್ಷಗಳಲ್ಲಿ ಸರ್ಕಾರ ನೀಡಿದ ಸ್ವಾತಂತ್ರ್ಯ ಹೋರಾಟಗಾರ ಮಾಸಾಶನವನ್ನು ಸ್ವೀಕರಿಸದೆ ನಮ್ರವಾಗಿ ತಿರಸ್ಕರಿಸಿದರು. ಹಳೆ ಮೈಸೂರಿನಲ್ಲಿ ಅವರಿಗೆ ಸರ್ಕಾರ ನೀಡಬಯಸಿದ್ದ ಮಂತ್ರಿಪದವಿಯನ್ನೂ ಬೇಡವೆಂದರು.
ಸ್ವಾತಂತ್ರ್ಯಾನಂತರ ಅವರು ರಾಜಕೀಯ ಚಟುವಟಿಕೆಯಿಂದ ದೂರ ಸರಿದು ವೇದ-ವೇದಾಂತ ಪ್ರಸಾರಕ್ಕೆ ತಮ್ಮ ಪೂರ್ಣ ಸಮಯ ವಿನಿಯೋಗಿಸಲು ನಿರ್ಣಯಿಸಿದರು. ಇದಕ್ಕೆ ಬೇಕಾದ ಪೂರ್ವಸಿದ್ಧತೆಯಂತೂ ಆಗಿಯೇ ಇತ್ತು. ಹರಿದ್ವಾರದ ಆರ್ಯಸಮಾಜದ ಕಾಂಗಡೀ ಗುರುಕುಲದಲ್ಲಿ ಸ್ವಾಮಿ ಶ್ರದ್ಧಾನಂದರ ಮಾರ್ಗದರ್ಶನದಲ್ಲಿ ಹತ್ತು ವರ್ಷದಷ್ಟು ದೀರ್ಘಕಾಲ ಅವಿರತವಾಗಿ ವೇದ-ವೇದಾಂಗಗಳ ಹಾಗೂ ಇತಿಹಾಸಾದಿಗಳ ಗಾಢ ಅಧ್ಯಯನ ಮುಗಿಸಿದ್ದರು. ನಾಲ್ಕೂ ವೇದಗಳಲ್ಲಿ ಪ್ರಾವೀಣ್ಯ ಪಡೆದು “ಚತುರ್ವೇದಿ” ಎಂಬ ಹೆಸರನ್ನು ಸಾರ್ಥಕಪಡಿಸಿಕೊಂಡಿದ್ದರು. ಪ್ರಭಾವೀ ಭಾಷಣ, ಸಮರ್ಥ ಬರವಣಿಗೆಯನ್ನೂ ರೂಢಿಸಿಕೊಂಡಿದ್ದರು.
ಜ್ಞಾನಾರಾಧಕ
ವೇದಗಳ ಅಧ್ಯಯನ ಸುಲಭವಲ್ಲ. ಅದರ ಜಟಿಲತೆ ಸಾಮಾನ್ಯರಿಗೆ ಗ್ರಹಿಕೆಗೆ ಬರುವುದು ಕಷ್ಟ. ವೇದಗಳ ಪಾಠದ ಮತ್ತು ಅರ್ಥದ ಪರಿಚಯ ಆಗಬೇಕಾದರೆ ವ್ಯಾಕರಣ, ಛಂದಸ್ಸು, ಜ್ಯೌತಿಷ ಮೊದಲಾದ ಅಂಗಗಳಲ್ಲೂ ಪ್ರಭುತ್ವ ಪಡೆದಿರಬೇಕಾಗುತ್ತದೆ. ಹೀಗೆ ಯಾವುದಾದರೂ ಒಂದು ವೇದಶಾಖೆಯ ಸ್ಥೂಲ ಪರಿಚಯ ಆಗುವುದಕ್ಕೆ ಕನಿಷ್ಠ ಹದಿನೈದು ವರ್ಷಗಳೇ ಹಿಡಿಯುತ್ತದೆ. ಹೀಗಿರುವಾಗ ನಾಲ್ಕೂ ವೇದಗಳನ್ನು ಹತ್ತು ವರ್ಷಗಳಲ್ಲಿ ಸ್ವಾಧೀನ ಮಾಡಿಕೊಳ್ಳಲು ಸುಧಾಕರರು ಎಷ್ಟು ಶ್ರಮ ಹಾಕಿರಬಹುದೆಂದು ಊಹಿಸಬಹುದು.
ಈ ಆಳವಾದ ಅಧ್ಯಯನದ ಇನ್ನೊಂದು ಫಲಿತವೆಂದರೆ – ವೇದಗಳು ಮೂಲರೂಪದಲ್ಲಿ ಎಷ್ಟು ಉದಾತ್ತವಾದವೆಂದೂ ಆಮೇಲಿನ ಕಾಲದಲ್ಲಿ ಪ್ರಚಲಿತಗೊಂಡ ಜನ್ಮಜಾತ ಜಾತೀಯತೆ ಮೊದಲಾದವು ಮೂಲವೈದಿಕ ಸಂಸ್ಕøತಿಗೆ ಪೂರ್ಣ ಹೊರತಾದವೆಂದೂ ಅವರಿಗೆ ನಿಶ್ಚಯವಾಗಿತ್ತು. ವೇದಗಳ ಈ ಮೂಲರೂಪವನ್ನೂ ಜಾತ್ಯತೀತತೆಯನ್ನೂ ಅಧ್ಯಾತ್ಮಪರತೆಯನ್ನೂ ಸುಧಾಕರ ಚತುರ್ವೇದಿಗಳು ತಮ್ಮ ಜೀವನದುದ್ದಕ್ಕೂ ಪ್ರಸಾರ ಮಾಡಿದರು. ಮಹರ್ಷಿ ದಯಾನಂದ ಸರಸ್ವತಿಗಳ ಮತ್ತು ಅವರಿಂದ ಸ್ಥಾಪಿತವಾದ ಆರ್ಯಸಮಾಜದ ಪ್ರವರ್ತನೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದ ಪಂಡಿತ ಸುಧಾಕರ ಚತುರ್ವೇದಿಗಳು ವೇದಾಧಾರಿತವಾದ ಆರೋಗ್ಯಕರ ಜೀವನಕ್ರಮವನ್ನೂ ಸಾಮಾಜಿಕಮೌಲ್ಯಗಳನ್ನೂ ಬೋಧಿಸಲು ಅವಿರತವಾಗಿ ಮಾತು-ಬರಹ-ನಡವಳಿಗಳ ಮೂಲಕ ಶ್ರಮಿಸಿದರು.
ಸ್ವಾತಂತ್ರ್ಯಾನಂತರ ಸುಧಾಕರ ಚತುರ್ವೇದಿಗಳು ಬೆಂಗಳೂರಿನಲ್ಲಿ ಸ್ಥಿರಗೊಳ್ಳಲು ನಿಶ್ಚಯಿಸಿದ್ದು ನಮ್ಮೆಲ್ಲರ ಭಾಗ್ಯ. ನಿರಂತರ ಬರಹ-ಪ್ರವಚನ-ಸಮಾಜಕಾರ್ಯದಲ್ಲಿ ನಿರತರಾದರು.
ನುಡಿದಂತೆ ನಡೆದವರು
ನಾವು ಕಂಡ ಅತ್ಯಂತ ಪಾರದರ್ಶಕ ವ್ಯಕ್ತಿಗಳಲ್ಲಿ ಸುಧಾಕರ ಚತುರ್ವೇದಿಗಳು ಒಬ್ಬರಾಗಿದ್ದರು. ಯಾವ ಮೌಲ್ಯಗಳನ್ನು ಅವರು ಸಮಾಜಕ್ಕೆ ಬೋಧಿಸಿದರೋ ಅವನ್ನು ಸ್ವಂತ ಜೀವನದಲ್ಲಿ ತಾವೇ ಅನುಸರಿಸಿ ತೋರಿಸಿದರು. ಹರಿಜನ ಮಕ್ಕಳನ್ನು ದತ್ತು ಪಡೆದು ತಮ್ಮಲ್ಲೇ ಇರಿಸಿಕೊಂಡು ಓದಿಸಿದರು. ಅವರಲ್ಲಿ ಕೆಲವರು ಐ.ಎ.ಎಸ್.ವರೆಗೂ ವ್ಯಾಸಂಗ ಮಾಡಿ ಉತ್ತೀರ್ಣರಾಗಿ ಪ್ರತಿಷ್ಠಿತರಾದರು. ಸುಧಾಕರ ಚತುರ್ವೇದಿಗಳು ಮುಂದೆ ನಿಂತು ಮಾಡಿಸಿದ ಅಂತರ್ಜಾತೀಯ ವಿವಾಹಗಳು ಲೆಕ್ಕವಿಲ್ಲದಷ್ಟು. ಹರಿಜನರಿಗೆ ದೇವಾಲಯ ಪ್ರವೇಶ ಮೊದಲಾದ ಉದ್ದೇಶಗಳಿಗಾಗಿ ವರ್ಷಗಳುದ್ದಕ್ಕೂ ಶ್ರಮಿಸಿದರು.
ಯಾವ ಜಾತಿಯ ಹಿನ್ನೆಲೆಯವರಾಗಲಿ, ಪುರುಷರಾಗಲಿ ಸ್ತ್ರೀಯರಾಗಲಿ ವೇದ ಕಲಿಯುವ ಆಸಕ್ತಿ ಇದ್ದರೆ ಅವರಲ್ಲಿಗೆ ಬರಬಹುದಾಗಿತ್ತು. ಮಹಿಳೆಯರಿಗೂ ವೇದಾಧ್ಯಯನಾಧಿಕಾರ ಇದೆಯೆಂದೂ ಅವರನ್ನು ಅಧ್ಯಯನದಿಂದ ದೂರವಿರಿಸಲು ಶಾಸ್ತ್ರಾಧಾರವಿಲ್ಲವೆಂದೂ ಸಾರಿ ಅದನ್ನು ಅನುಷ್ಠಾನಗೊಳಿಸಿದ ಧೀಮಂತರು ಸುಧಾಕರ ಚತುರ್ವೇದಿಗಳು.
ಹೀಗೆ ಪ್ರಚಾರ ಬಯಸದೆ ಸುಧಾಕರರು ನಿಜ ಅರ್ಥದಲ್ಲಿ ಸುಧಾರಕರೂ ಆಗಿದ್ದರು.
ನಿಗರ್ವ; ವಿನಮ್ರತೆ
ಭಾವನೆ-ಬೌದ್ಧಿಕತೆಗಳ ಅಪೂರ್ವ ಸಂಗಮವಾಗಿದ್ದರು ಸುಧಾಕರ ಚತುರ್ವೇದಿ. ಅವರ ಪ್ರಬುದ್ಧತೆಯನ್ನು ಅವರ ವೇದಾನುವಾದ-ವ್ಯಾಖ್ಯಾನಗಳಲ್ಲಿಯೂ ಅವರೇ ವರ್ಷಗಳುದ್ದಕ್ಕೂ ಸಂಪಾದನ ಮಾಡಿ ಪ್ರಕಟಿಸಿದ ‘ವೇದ ತರಂಗ’ ಮಾಸಪತ್ರಿಕೆಯ ಅವರ ಅಂಕಣಗಳಲ್ಲಿಯೂ ಹತ್ತಾರು ಸ್ವತಂತ್ರ ಬರಹಗಳಲ್ಲಿಯೂ ಕಾಣಬಹುದು. ಇಷ್ಟಾಗಿ:
“ನಾನೇನೂ ಹೊಸದಾಗಿ ಹೇಳುತ್ತಿಲ್ಲ. ದಯಾನಂದ ಸರಸ್ವತಿಗಳೂ ಶ್ರದ್ಧಾನಂದರೂ ತೋರಿದ ದಾರಿಯಲ್ಲಿ ಸಾಗಿ ನಾನು ವೇದಗಳಲ್ಲಿ ಕಂಡುಕೊಂಡ ಉದಾತ್ತ ತತ್ತ್ವಗಳನ್ನು ಪ್ರಸಾರ ಮಾಡುತ್ತಿದ್ದೇನೆ ಅಷ್ಟೆ”
– ಎಂಬ ವಿನಯವಂತಿಕೆಯೂ ಅವರ ಜ್ಞಾನೋಪಾಸನೆಗೆ ಶೋಭೆ ಕೊಟ್ಟಿತ್ತು.
ಇಳಿವಯಸ್ಸಿನಲ್ಲಿಯೂ ಸದಾ ಬರಹ-ಪ್ರವಚನಗಳಲ್ಲಿ ತೊಡಗಿರುತ್ತಿದ್ದ ಅವರ ಶ್ರದ್ಧೆ-ನಿಷ್ಠೆಗಳು ಅಪೂರ್ವವಾಗಿದ್ದವು.
ಅವರು ಪದೇ ಪದೇ ಒತ್ತಿಹೇಳುತ್ತಿದ್ದ ಮಾತೆಂದರೆ:
“ಸ್ತ್ರೀಯರಿಗೆ, ಶೂದ್ರರಿಗೆ, ಅತಿಶೂದ್ರರಿಗೆ ವೇದಾಧಿಕಾರ ಇಲ್ಲ ಎನ್ನಲಾಗುತ್ತದೆ. ಎಂದರೆ ವೇದಾಧಿಕಾರ ಕೇವಲ ಬುದ್ಧಿವಂತರಿಗೆ, ಉನ್ನತಸಿದ್ಧಿ ಪಡೆದವರಿಗೆ, ಹಾಗೂ ಅತ್ಯಂತ ಶ್ರೇಷ್ಠರಾದ ಬ್ರಾಹ್ಮಣ ಮ್ಮನ್ಯರಿಗೆ ಎಂದಂತಾಯಿತು. ವೇದ ಎಂದರೆ ಜ್ಞಾನ. ಜ್ಞಾನ ಪಡೆಯಬೇಕಾದವನು ಅಜ್ಞಾನಿ. ಆದ್ದರಿಂದ ಅವನೇ ವೇದಾಧಿಕಾರಿ. ಆಸ್ಪತ್ರೆಯನ್ನು ಕಟ್ಟಿ ಇಲ್ಲಿ ರೋಗಿಗಳಿಗೆ ಪ್ರವೇಶಾಧಿಕಾರವಿಲ್ಲ ಎಂದರೆ ಹೇಗೆ?”
ಆಂತರಿಕ ಶಕ್ತಿಯನ್ನು ಆರಾಧಿಸಿದವರು ಸುಧಾಕರ ಚತುರ್ವೇದಿ. ಅವರದೇ ಮಾತು ಇದು:
“ಮಾನವಜೀವನವು ಮಲ್ಲಿಗೆಯ ಮಲರುಗಳ ಮೆತ್ತನೆಯ ಸುಪ್ಪತ್ತಿಗೆಯಲ್ಲ. ಘನ ಘೋರ ಸಂಘರ್ಷಗಳ, ಸಾಹಸ-ಸಾಮಥ್ರ್ಯಗಳ, ಸಹನೆಯ ಪರೀಕ್ಷೆ ಮಾಡುವ ಸಂಗ್ರಾಮರಂಗ. ಹೇಡಿಗಳು, ಕಾಪುರುಷರು; ಅಂಜುಬುರುಕರು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗರು.”
ತಾವು ದಯಾನಂದರ ಶಿಷ್ಯರೆಂಬ ಕಾರಣಕ್ಕೆ ದಯಾನಂದರು ಹೇಳಿದ್ದನ್ನೆಲ್ಲ ನೀವು ಒಪ್ಪಿಕೊಳ್ಳಿ – ಎಂದು ಸುಧಾಕರ ಚತುರ್ವೇದಿಗಳು ಎಂದೂ ಆಗ್ರಹಿಸಲಿಲ್ಲ. ಅವರು ಹೇಳುತ್ತಿದ್ದುದು:
“‘ನಾನು ಹೇಳಿದೆನೆಂಬ ಒಂದೇ ಕಾರಣಕ್ಕೆ ನೀವು ಅದನ್ನು ಅನುಸರಿಸಬೇಡಿ. ಸತ್ಯದ ಒರೆಗಲ್ಲಿಗೆ ಹಚ್ಚಿ ನೋಡಿ. ಅದು ಸತ್ಯವೆಂದು ಸಿದ್ಧವಾದಲ್ಲಿ ಆಗ ಮಾತ್ರ ಅದನ್ನು ಸ್ವೀಕರಿಸಿ’- ಎಂದಿದ್ದಾರೆ ಮಹರ್ಷಿ ದಯಾನಂದರು. ಅವರ ಬೇರೆ ಯಾವುದೇ ವಿಚಾರವನ್ನು ನೀವು ಸ್ವೀಕರಿಸಿ, ಅಥವಾ ಬಿಡಿ. ಈ ಸತ್ಯೈಕಪಕ್ಷಪಾತದಲ್ಲಿ, ಸತ್ಯೈಕನಿಷ್ಠೆಯಲ್ಲಿ ದಯಾನಂದರು ಅದ್ವಿತೀಯರು.”
ಬೌದ್ಧಿಕ ಪ್ರಖರತೆ
ಗಾಂಧಿಯವರ ಸೇವಾಗ್ರಾಮದಲ್ಲಿದ್ದಾಗ ಒಬ್ಬ ಸಾಂಪ್ರದಾಯಿಕರೊಡನೆ ಸುಧಾಕರ ಚತುರ್ವೇದಿಗಳು ತಮ್ಮ ಸುಧಾರಕ ದೃಷ್ಟಿಯನ್ನು ಸಮರ್ಥಿಸಬೇಕಾಯಿತು. ಮೊದಲಿಗೆ ಹಮ್ಮಿನಲ್ಲಿದ್ದ ಆ ಪ್ರತಿಷ್ಠಿತ ಪಂಡಿತರು ಸುಧಾಕರ ಚತುರ್ವೇದಿಗಳ ಸವಾಲಿಗೆ ನಿರುತ್ತರರಾಗಬೇಕಾಯಿತು. ಸುಧಾಕರ ಚತುರ್ವೇದಿಗಳು ಆ ಶಾಸ್ತ್ರಿಗಳನ್ನು ಪ್ರಶ್ನಿಸಿದರು.
“ಅಸ್ಪೃಶ್ಯ ಎಂದರೆ ಯಾರು?”
“ಯಾರನ್ನು ಮುಟ್ಟಬಾರದೋ ಅವನು ಅಥವಾ ಅವಳು” ಎಂದರು ಆ ದರ್ಶನಕೇಸರಿಗಳು.
“ಹಾಗಾದರೆ ಸ್ವಾಮೀ, ಹತ್ತು ಕೋಟಿಯಷ್ಟಿರುವ ಹರಿಜನರು ಉಳಿದ ಇಪ್ಪತ್ತು ಕೋಟಿಯಷ್ಟು ಮಂದಿಗೆ ಅಸ್ಪøಶ್ಯರಾದಂತೆ, ಸವರ್ಣೀಯರೂ ಆ ಹರಿಜನರಿಗೆ ಅಸ್ಪೃಶ್ಯರಾದವರಲ್ಲವೆ? ಆ ಸವರ್ಣೀಯರಲ್ಲಿ ತಾವೂ ಸೇರಿದ್ದೀರಿ. ತಮ್ಮನ್ನು ಸೇರಿ, ಈ ದೇಶದಲ್ಲಿರುವವರೆಲ್ಲ ಅಸ್ಪೃಶ್ಯರಾದವರಲ್ಲವೇ?”
– ಎಂದಾಗ ಶಾಸ್ತ್ರಿಗಳು ತಬ್ಬಿಬ್ಬಾದರು.
ಹೀಗೆ ಮತಾಂತರಾಸಕ್ತ ಕ್ರೈಸ್ತ ಪಾದರಿಗಳನ್ನೂ ಸುಧಾಕರ ಚತುರ್ವೇದಿಗಳು ಅನೇಕ ಸಲ ಹಿಮ್ಮೆಟ್ಟಿಸಿದ್ದರು.
ತಮ್ಮ ಪ್ರಖರ ಮಂಡನೆಗಳಿಂದಾಗಿ ಸುಧಾಕರ ಚತುರ್ವೇದಿಗಳು ಹಲವೊಮ್ಮೆ ಪ್ರಾಣಾಪಾಯವನ್ನೂ ಎದುರಿಸಬೇಕಾಗಿಬಂದಿತ್ತು. ಆದರೆ ಅವರ ನಿರ್ಭೀತಿ, ಆತ್ಮವಿಶ್ವಾಸ ಎಂದೂ ಮಸಕಾಗಲಿಲ್ಲ.
ಎಂತಹ ಒತ್ತಡದ ನಡುವೆಯೂ ಅವರ ಮುಖದಲ್ಲಿನ ಮುಗುಳ್ನಗೆ ಮಾಸಿದ್ದನ್ನು ನಾವಾರೂ ನೋಡಲಿಲ್ಲ. “ಮೊದಲು ಮುಕ್ತವಾಗಿ ನಗುವುದನ್ನು ಕಲಿಯಿರಿ” ಎಂದೇ ಜನರನ್ನು ಓಲೈಸುತ್ತಿದ್ದರು.
ಶ್ರೇಷ್ಠ ವಿದ್ವಾಂಸರಾಗಿದ್ದುದರ ಜೊತೆಗೆ ವೈಯಕ್ತಿಕ ಜೀವನದಲ್ಲಿ ಅಲುಗದ ಆದರ್ಶನಿಷ್ಠೆ ಮೆರೆದವರು ಸುಧಾಕರ ಚತುರ್ವೇದಿ. ಯಾವುದೇ ದ್ವೈಧಗಳಿಲ್ಲದ, ಬಿರುಕಿಲ್ಲದ ಬದುಕು ಅವರದು.
ಬಹುಶಃ ಅವರು ಆರಿಸಿಕೊಂಡ ವೇದಜ್ಞಾನಪ್ರಸಾರದ ವಿರಳ ರೀತಿಯ ಕಾರ್ಯದ ಕಾರಣದಿಂದಲೊ ಏನೊ – ಅವರ ಅಗಾಧ ಸಾಧನೆಗೆ ನ್ಯಾಯವಾಗಿ ಸಲ್ಲಬೇಕಾಗಿದ್ದ ದೊಡ್ಡಮಟ್ಟದ ಮನ್ನಣೆಗಳು ಅವರ ಕಡೆ ಸುಳಿಯಲಿಲ್ಲ. ಅವರಿಗೆ ಅವು ಬೇಕಾಗಿಯೂ ಇರಲಿಲ್ಲ. ಆದರೆ ಸಮಾಜವು ತನ್ನ ಋಷಿಋಣವನ್ನು ಸಲ್ಲಿಸುವುದರಲ್ಲಿ ಇನ್ನಷ್ಟು ಕರ್ತವ್ಯಪ್ರಜ್ಞೆ ತೋರಬಹುದಾಗಿತ್ತು. ಏನು ಮಾಡೋಣ! ಏಕಾಗ್ರನಿಷ್ಠರನೇಕರ ತಪಸ್ಸು ವ್ಯಾಪಕ ಗಮನ ಸೆಳೆಯುವುದೇ ಇಲ್ಲ.
ಯಾರಿಗಾದರೂ ಧನ್ಯತೆ ತರಬಲ್ಲ ಪ್ರಮಾಣದ ಅಗಾಧ ಸಾರಸ್ವತಸೇವೆಯನ್ನು ಮಾಡಿ ಪಂಡಿತ ಸುಧಾಕರ ಚತುರ್ವೇದಿ ಅವರು ಯಶಃಕಾಯರಾದರು.
ಅವರು ಅನೇಕ ದಶಕಗಳ ನಿರಂತರ ಶ್ರಮದಿಂದ ರಚಿಸಿದ ವೇದವ್ಯಾಖ್ಯಾನಗಳ ಪ್ರಗಾಢತೆ, ಗುಣವಂತಿಕೆ, ಸ್ವೋಪಜ್ಞತೆಗಳು ಹಾಗಿರಲಿ. ಬರಿಯ ಗಾತ್ರವನ್ನೇ ಪರಿಗಣಿಸಿದರೂ ಅದು ದಿಗ್ಭ್ರಮೆ ತರಿಸುವಷ್ಟು ಇದೆ. ಪರಿಶುದ್ಧ ಧ್ಯೇಯಾಭಿಮುಖೀ ಜೀವನಸೂತ್ರಗಳನ್ನು ತಿಳಿಸುವ ಸಾವಿರಾರು ಪುಟಗಳ ಸ್ವತಂತ್ರ ರಚನೆಗಳನ್ನು ಅವರು ನೀಡಿದ್ದಾರೆ. ಅತ್ಯಂತ ಪರಿಶ್ರಮದಿಂದ, ಚಿಂತನಮಂಥನದಿಂದ ಅವರು ರಚಿಸಿ ಪ್ರಕಟಿಸಿರುವ ವೇದಾರ್ಥಗ್ರಂಥರಾಶಿಯು ಮೂವತ್ತು ಸಾವಿರ ಪುಟಗಳಿಗೂ ಮಿಗಿಲಾಗಿದೆ. ಎಲ್ಲಿಯೂ ಸಂಪ್ರದಾಯಜಡತೆಗೆ ಒಳಗಾಗದೆ, ಬುದ್ಧಿಗ್ರಾಹ್ಯವೂ ಯುಕ್ತಿಸಮ್ಮತವೂ ಆಧುನಿಕಯುಗೀನ ಚಿಂತನೆಗೂ ಹೊಂದುವಂಥದೂ ಆದ ಪ್ರತಿಪಾದನಕ್ರಮವನ್ನು ಪಂಡಿತ ಸುಧಾಕರ ಚತುರ್ವೇದಿಗಳು ಅನುಸರಿಸಿದ್ದಾರೆ. ಹೀಗೆ ಅವರದು ಕಾಲಬಾಹ್ಯವಾಗದ, ತುಂಬಾ ಬೆಲೆಯುಳ್ಳ ಕೊಡುಗೆ.