ಅರ್ಕೇ ಚೇನ್ಮಧು ವಿಂದೇತ ಕಿಮರ್ಥಂ ಪರ್ವತಂ ವ್ರಜೇತ್|
ಇಷ್ಟಸ್ಯಾರ್ಥಸ್ಯ ಸಂಸಿದ್ಧೌ ಕೋ ವಿದ್ವಾನ್ ಯತ್ನಮಾಚರೇತ್||
– ಶಾಬರಭಾಷ್ಯ
“ದಾರಿಯಲ್ಲಿ ನಡೆದು ಹೋಗುವಾಗ ರಸ್ತೆಬದಿಯಲ್ಲಿರುವ ಎಕ್ಕದ ಗಿಡದಲ್ಲಿ ಜೇನು ಇರುವುದು ಕಂಡರೆ ಅದನ್ನು ಸವಿಯುವುದನ್ನು ಬಿಟ್ಟು ಬೇರೆಡೆ ತುಂಬಾ ಜೇನು ಸಿಗುತ್ತದೆಂದು ಯಾರೋ ಹೇಳಿದ್ದುದನ್ನು ನೆನೆದು ಕಡಿದಾದ ಬೆಟ್ಟವನ್ನು ಏಕಾದರೂ ಹತ್ತಬೇಕು? ಇಚ್ಛಿತ ವಸ್ತು ಕಣ್ಣಿಗೆ ಕಾಣುತ್ತಿರುವಾಗ ಅದನ್ನು ಉದಾಸೀನ ಮಾಡಿ ಕಲ್ಪಿತವಾದ್ದಾವುದನ್ನೋ ಅರಸುತ್ತ ಹೋಗುವವನು ವಿವೇಕಿ ಎನಿಸುವುದಿಲ್ಲ.”
ಈ ಉಕ್ತಿಯಲ್ಲಿ ಹಲವು ಅರ್ಥಸೂಕ್ಷ್ಮಗಳು ಅಡಗಿವೆ. ಸದಾ ದೂರದ ಗಮ್ಯದ ಬಗೆಗೆ ಚಿಂತೆಗೊಳಗಾಗಿ ಆ ವ್ಯಾಕುಲತೆಯಲ್ಲಿ ಈಗ ಧ್ಯೇಯಪ್ರಾಪ್ತಿಗಾಗಿ ಮಾಡಬೇಕಾದ ಕಾಯಕವನ್ನೂ ತನ್ನೆದುರಿಗೇ ಒದಗುವ ಸನ್ನಿವೇಶಗಳನ್ನೂ ಅಲಕ್ಷಿಸುವುದು ಪ್ರಯೋಜನಕರವಾಗದು.
ಸುಪರಿಚಿತ ದಾರ್ಶನಿಕ ಕಥೆಯೊಂದಿದೆ. ‘ನನಗೆ ಆತ್ಯಂತಿಕ ಸುಖವನ್ನು ಪಡೆಯುವ ಮಾರ್ಗವನ್ನು ತಿಳಿಸಿರಿ’ ಎಂದು ಸಾಧಕನೊಬ್ಬ ಗುರುವಿನ ಬಳಿಸಾರಿದ. ಗುರು ಹೇಳಿದ: ‘ನಾನೀಗ ಅನ್ಯ ಕಾರ್ಯದಲ್ಲಿ ಮಗ್ನನಾಗಿದ್ದೇನೆ. ನೀನು ಎರಡು ತಾಸು ಬಿಟ್ಟು ಬಾ. ಏತನ್ಮಧ್ಯೆ ನೀನು ಮಾಡಬೇಕಾದ ಸಿದ್ಧತೆಯೊಂದಿದೆ. ಎರಡು ತೊಟ್ಟು ಎಣ್ಣೆ ಇರುವ ಚಮಚವನ್ನು ಕೊಡುತ್ತೇನೆ. ಎಣ್ಣೆ ಚೆಲ್ಲದಂತೆ ಚಮಚವನ್ನು ತಲೆಯ ಮೇಲಿರಿಸಿಕೊಂಡು ಆಶ್ರಮವನ್ನೆಲ್ಲ ಒಮ್ಮೆ ಸುತ್ತು ಹಾಕಿ ಬಾ.’ ಸಾಧಕನು ಹಾಗೆ ಕಷ್ಟಪಟ್ಟು ಮಾಡಿ ಹಿಂದಿರುಗಿದ, ತಾನು ಗುರುಗಳ ಸೂಚನೆಯನ್ನು ಪಾಲಿಸಿದೆನೆಂಬ ಸಮಾಧಾನದೊಡನೆ. ಗುರುವು ಸಾಧಕನನ್ನು ಕೇಳಿದ: ‘ಓಡಾಡುವಾಗ ನೀನು ಏನೇನನ್ನು ನೋಡಿದೆ?’ ಯಾವುದನ್ನೂ ನೋಡಲು ಅಶಕ್ತನಾಗಿದ್ದೆನೆಂದೂ ತನ್ನ ಗಮನವೆಲ್ಲ ಚಮಚದಲ್ಲಿ ನೆಟ್ಟಿತ್ತೆಂದೂ ಸಾಧಕ ಉತ್ತರಿಸಿದ. ಗುರು ಕೇಳಿದ: ‘ಸಭಾಭವನದಲ್ಲಿ ಆಗಂತುಕರು ತಂದು ಹಾಸಿರುವ ಬೆಲೆಬಾಳುವ ತಿವಾಚಿ ನೋಡಲಿಲ್ಲವೆ?’ ‘ಇಲ್ಲ.’ ‘ಹೋಗಲಿ, ಪಕ್ಕದ ಉದ್ಯಾನದಲ್ಲಿ ಗಿಡಗಳಲ್ಲಿ ಬಿಟ್ಟಿರುವ ಸುಂದರ ಹೂಗಳನ್ನು ನೋಡಿದೆಯಾ?’ ‘ಇಲ್ಲ.’ ಗುರು ಹೇಳಿದ: ‘ನೀನು ಮತ್ತೊಮ್ಮೆ ಹೋಗಿ ಹಲವಾರು ಕಡೆ ಅನಾಯಾಸವಾಗಿ ಕಣ್ಣಿಗೆ ಕಾಣುವ ಸುಂದರ ವಸ್ತುಗಳನ್ನೆಲ್ಲ ನೋಡಿ ಬಾ. ತಾನು ಲೋಕಕಾರುಣ್ಯದಿಂದ ಏರ್ಪಡಿಸಿರುವ ಭವ್ಯತೆಯನ್ನು ಅನುಭವಿಸಲೂ ಬಾರದಂತಹವನಿಗೆ ಈಶ್ವರನು ಭೂಮಾನಂದವನ್ನು ಹೇಗೆ ತಾನೆ ಅನುಗ್ರಹಿಸಿಯಾನು?’