ದೇಶದ ಜನತೆಯ ಸ್ವಾಸ್ಥ್ಯದ ಬಗೆಗೆ ಎಲ್ಲರೂ ಚಿಂತಿತರಾಗಬೇಕಾದಂತಹ ಹಲವಾರು ಮಾಹಿತಿಗಳು ಈಚಿನ ವರ್ಷಗಳಲ್ಲಿ ಬರುತ್ತಿವೆ. ತುಂಬಾ ಕಿರಿಯ ಪ್ರಾಯದವರು ಹೃದಯಬೇನೆಗಳಿಗೊಳಗಾಗುತ್ತಿರುವ ಪ್ರಮಾಣ ಹೆಚ್ಚುತ್ತಿದೆಯೆಂದು ಹೃದಯರೋಗತಜ್ಞರು ಹೇಳುತ್ತಿದ್ದಾರೆ. ಭಾರತೀಯ ಹೃದಯರೋಗಗಳ ಅಧ್ಯಯನ ಸಂಸ್ಥೆ (ಇಂಡಿಯನ್ ಹಾರ್ಟ್ ಅಸೋಸಿಯೇಷನ್) ಇತ್ತೀಚೆಗೆ ಹೊರಹಾಕಿರುವ ಈ ಮಾಹಿತಿ ತಳಮಳ ತರಿಸಬೇಕಾದದ್ದು: ಇಡೀ ಜಗತ್ತಿನಲ್ಲಿ ಹೃದಯಬೇನೆಗಳಿಗೊಳಗಾಗಿರುವವರಲ್ಲಿ ಭಾರತೀಯರ ಪ್ರಮಾಣ ಶೇ. 60ರಷ್ಟಿದೆ. ಹೃದಯಾಘಾತಕ್ಕೆ ಒಳಗಾಗುತ್ತಿರುವವರಲ್ಲಿ ಅರ್ಧದಷ್ಟು ಜನರ ವಯಸ್ಸು 50ಕ್ಕಿಂತ ಕಡಮೆ; ಶೇ. 25ರಷ್ಟು ಜನ 40 ವರ್ಷಕ್ಕಿಂತ ಕಡಮೆಯವರು. ಈ ದುಃಸ್ಥಿತಿಗೆ ಪ್ರಮುಖ ಕಾರಣ ಈಗಿನ ಯುವಕರು ರೂಢಿಸಿಕೊಂಡಿರುವ ಜೀವನರೀತಿ ಎಂಬುದರ ಬಗೆಗೂ ವೈದ್ಯಶಾಸ್ತ್ರಜ್ಞರಲ್ಲಿ ಏಕಾಭಿಮತವಿದೆ. ಎರಡನೇ ಕಾರಣ ಮಾನಸಿಕ ಒತ್ತಡ; ಮೂರನೆಯದು ಕಲುಷಿತ ವಾತಾವರಣ. ವೈದ್ಯರಲ್ಲಿಗೆ ಎಡತಾಕುವವರ ದೈಹಿಕ ವಯಸ್ಸು 25 ಆಗಿದ್ದರೆ ಅವರ ಹೃದಯದ ವಯಸ್ಸು 40 ಅಥವಾ 50 ಆಗಿರುತ್ತದೆ – ಎಂದಿದ್ದಾರೆ ತಜ್ಞರು. ಈಚಿನ ದಶಕಗಳಲ್ಲಿ ಬದಲಾದ ಸಾಮಾಜಿಕ-ಆರ್ಥಿಕ ಸನ್ನಿವೇಶದಿಂದಾಗಿ ಹರೆಯದವರು ತೆಗೆದುಕೊಳ್ಳುತ್ತಿರುವ ಆಹಾರ ರೀತಿಯಿಂದಾಗಿ ಹೆಚ್ಚು ಪ್ರಮಾಣದ ಕ್ಯಾಲೊರಿಗಳೂ ಅಧಿಕ ಮಟ್ಟದ ಕಾರ್ಬೋಹೈಡ್ರೇಟುಗಳೂ ಮೈ ಸೇರುತ್ತಿವೆ. ಅತಿ ಪರಿಷ್ಕರಣಗೊಂಡ ಸಾಮಗ್ರಿಗಳ ಬಳಕೆಯೂ ಇದಕ್ಕೆ ಕಾರಣವಾಗಿದೆ. ಸಕ್ಕರೆಯ ಬಳಕೆಯ ಬಗೆಗೆ ಹೇಳುವುದೇ ಬೇಡ. ‘ಡಯಾಬಿಟೀಸ್ ಕ್ಯಾಪಿಟಲ್ ಆಫ್ ದಿ ವಲ್ರ್ಡ್’ ಪ್ರಶಸ್ತಿಯನ್ನು ಭಾರತ ಪಡೆದುಕೊಂಡಿದೆ. ‘ಫಾಸ್ಟ್‍ಫುಡ್’, ನಿವ್ರ್ಯಾಯಾಮ, ಧೂಮಪಾನಾದಿ ವ್ಯಸನಗಳು – ಇವೇ ಮುಂತಾದ ‘ಫ್ಯಾಷನ್’ಗಳಿಗೆ ಈ ಪೀಳಿಗೆ ದುಬಾರಿ ಬೆಲೆ ತೆರುತ್ತಿದೆಯೆಂಬುದು ಸ್ಪಷ್ಟವೇ ಇದೆ. ವೈದ್ಯರಂತೂ ಈ ವಿಷಯಗಳಲ್ಲಿ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಈ ಸ್ಥಿತಿಯ ಸುಧಾರಣೆಗೆ ಸರ್ಕಾರಗಳಾಗಲಿ ವೈದ್ಯರುಗಳಾಗಲಿ ಮಾಡಬಹುದಾದ್ದು ಕಡಮೆ. ಸಮಾಜವು ವಿವೇಕವಂತವಾದರೆ ಮಾತ್ರ ಪರಿಸ್ಥಿತಿ ಒಂದಷ್ಟು ಸುಧಾರಣೆಗೊಂಡೀತು.
ಸ್ವಾಸ್ಥ್ಯಜಾಗೃತಿ
Month : April-2021 Episode : Author :