ಸ್ಫುರಣ
ಅಂತರಂಗದ ನಿಶ್ಚಲತ್ವ
– ಸಂತ ಜ್ಞಾನೇಶ್ವರ ಮಹಾರಾಜರು
ಹೃದಯದಲ್ಲಿ ಯೋಗಯುಕ್ತಿಯ ವಿಚಾರವಿಲ್ಲದವನು ವಿಷಯದ ಪಾಶದಿಂದ ಕಟ್ಟಲ್ಪಡುವನು. ಅರ್ಜುನ! ಅಂತಹವನ ಬುದ್ಧಿಯು ಎಂದೂ ಸ್ಥಿರವಾಗದು. ಮತ್ತು ಅದು ಸ್ಥಿರವಾಗಿರಬೇಕೆಂಬ ಬಯಕೆಯೂ ಅವನಲ್ಲಿರುವುದಿಲ್ಲ. ನಿಶ್ಚಲತ್ವದ ಗಂಧವು ಕೂಡ ಇಲ್ಲದವನ ಮನಸ್ಸಿಗೆ ಶಾಂತಿಯು ಅದೆಂತು ದೊರೆತೀತು? ಪಾಪಿಯಾದ ಮನುಷ್ಯನಲ್ಲಿ ಮೋಕ್ಷವು ವಾಸಿಸಲರಿಯದು. ಅದರಂತೆ ಶಾಂತಿಯ ಆದ್ರ್ರತೆಯಿಲ್ಲದವನನ್ನು ಸುಖವೂ ಇಣಿಕಿಕ್ಕಿ ಸಹ ನೋಡದು. ಹುರಿದ ಬೀಜವು ಮೊಳೆತರೆ ಮಾತ್ರ ಅಶಾಂತ ಮನುಷ್ಯನಿಗೆ ಸುಖವು ದೊರೆತೀತು. ಆದಕಾರಣ ಮನಸ್ಸಿನ ಚಂಚಲತೆಯೇ ದುಃಖದ ಬೀಜವು. ಅದಕ್ಕಾಗಿ ಇಂದ್ರಿಯನಿಗ್ರಹ ಮಾಡುವುದೇ ಒಳ್ಳೆಯದು.
ಇಂದ್ರಿಯಗಳು ಬೇಡಿದ ವಿಷಯಗಳನ್ನೆಲ್ಲ ಪೂರೈಸುತ್ತ ಹೋಗುವ ಪುರುಷರು, ತಾವು ವಿಷಯರೂಪದ ಸಮುದ್ರವನ್ನು ದಾಟಿದೆವೆಂದು ಭಾವಿಸಬಹುದು. ಆದರೆ ಅವರು ನಿಜವಾಗಿಯೂ ದಾಟಿರುವುದಿಲ್ಲ. ಸಮುದ್ರದೊಳಗಿನ ನಾವೆಯೊಂದು ದಂಡೆಗೆ ಬಂದು ನಿಲ್ಲುವಷ್ಟರಲ್ಲಿಯೇ ಬಿರುಗಾಳಿಯ ಹೊಡೆತಕ್ಕೆ ಸಿಕ್ಕರೆ ಅದು ತಪ್ಪಿಸಿಕೊಂಡು ಬಂದು ಅಪಾಯದಲ್ಲಿ ಮತ್ತೆ ಸಿಕ್ಕಿಬೀಳುವುದು. ಅದರಂತೆ ಸಿದ್ಧ ದಶೆಗೆ ಮುಟ್ಟುವ ಯೋಗ್ಯತೆಯುಳ್ಳ ಪುರುಷನು (ಉತ್ಕೃಷ್ಟನಾದ ಮುಮುಕ್ಷುವು) ಕೌತುಕದಿಂದ ಇಂದ್ರಿಯಗಳನ್ನು ಪ್ರೀತಿಸಹೋದರೂ ಸಹ, ಅವನು ಮತ್ತೆ ಸಂಸಾರದುಃಖದಿಂದ ವ್ಯಾಪ್ತನಾಗುವನು.
ಆದ್ದರಿಂದ ತನ್ನ ಇಂದ್ರಿಯಗಳನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದಾದರೆ, ಅದಕ್ಕಿಂತಲೂ ಹೆಚ್ಚಿನ ಸಾರ್ಥಕವು ಇನ್ನಾವುದು? ಆಮೆಯು ಪ್ರಸನ್ನತೆಯಿಂದ ತನ್ನ ಅವಯವಗಳನ್ನು ಹೊರದೆಗೆದು ಆಡುವುದು. ಮತ್ತು ಸ್ವೇಚ್ಛೆಯಿಂದ ತಾನೇ ಆವರಿಸಿಕೊಳ್ಳುವುದು. ಅದರಂತೆ ಇಂದ್ರಿಯಗಳು ಅಂಕೆಯಲ್ಲಿದ್ದು, ಆಜ್ಞೆಯಲ್ಲಿ ವರ್ತಿಸುವವನ ಬುದ್ಧಿಯು ಸ್ಥಿರವಾಗಿದೆಯೆಂದು ತಿಳಿದುಕೋ.
ಪ್ರಾಣಿಮಾತ್ರರುಗಳೆಲ್ಲ ಆತ್ಮಜ್ಞಾನಶೂನ್ಯತೆಯೆಂಬ ಕತ್ತಲೆಯ ರಾತ್ರಿಯಲ್ಲಿ ಮಲಗಿ ನಿದ್ರಿಸುತ್ತಿರುವಾಗ, ಆತ್ಮಜ್ಞಾನದಿಂದ ಎಚ್ಚೆತ್ತಿರುವ ಹಾಗೂ ಪ್ರಾಣಿಮಾತ್ರರೆಲ್ಲ ವಿಷಯಗಳ ಬಗ್ಗೆ ಎಚ್ಚರಾಗಿರುವಾಗ, ಮಲಗಿಕೊಂಡಿರುವ ಆ ಪುರುಷನು ಉಪಾಧಿರಹಿತನು, ಸ್ಥಿರಬುದ್ಧಿಯವನು ಹಾಗೂ ಶ್ರೇಷ್ಠ ಮುನೀಶ್ವರನೂ ಆಗಿರುವನೆಂದು ತಿಳಿ.
ಸಮುದ್ರದಲ್ಲಿ ನಿರಂತರವೂ ಶಾಂತತೆಯಿರುವುದು. ಮಳೆಗಾಲದಲ್ಲಿ ಅದೆಷ್ಟೋ ನದಿಗಳು ಮೇರೆದಪ್ಪಿ ತುಂಬಿ ಹರಿದು ಬಂದು ಸಮುದ್ರವನ್ನು ಸೇರುವವು. ಆದಾಗ್ಯೂ ಅದು ಸ್ವಲ್ಪ ಸಹ ಹೆಚ್ಚಾಗುವುದಿಲ್ಲ. ತನ್ನ ಮೇರೆಯನ್ನು ಮೀರುವುದೂ ಇಲ್ಲ. ಬೇಸಿಗೆಯಲ್ಲಿ ಎಲ್ಲ ನದಿಗಳು ಒಣಗುವವು. ಅದರಿಂದ ಕಿಂಚಿತ್ತಾದರೂ ಸಮುದ್ರವು ಇಳಿಯುವುದಿಲ್ಲ. ಅದೇ ಮಾದರಿಯಂತೆ ಋದ್ಧಿ-ಸಿದ್ಧಿಗಳು ದೊರೆತಿದ್ದರಿಂದ ಸ್ಥಿತಪ್ರಜ್ಞನಿಗೆ ಉಲ್ಲಾಸವೆನಿಸುವುದಿಲ್ಲ. ಒಂದು ವೇಳೆ ದೊರಕದಿದ್ದರೂ ಅಸಂತುಷ್ಟತೆಯೆನಿಸುವುದಿಲ್ಲ.
ಸ್ವರ್ಗಸುಖವನ್ನು ಲೆಕ್ಕಿಸದವನಿಗೆ ಕವಡಿಯ ಬೆಲೆಯ ಋದ್ಧಿ-ಸಿದ್ಧಿಯ ಮಹತ್ತ್ವವೇನು?
[ಜ್ಞಾನೇಶ್ವರೀ ಗೀತೆ, ಅಧ್ಯಾಯ 2.
ಅನುವಾದ: ಅಣ್ಣಪ್ಪ ಕೃಷ್ಣಾಜಿರಾವ ಕುಲಕರ್ಣಿ]