–ಆರತಿ ಪಟ್ರಮೆ
ಯಕ್ಷಗಾನ ಅಕಾಡೆಮಿ ವತಿಯಿಂದ ಪ್ರತಿದಿನವೂ ಓರ್ವ ಕಲಾವಿದರಂತೆ ಸಂವಾದ ನಡೆಸಿದ್ದು ನನಗೊಂದು ವಿಶಿಷ್ಟ ಅನುಭವದ ಕಂತೆಯನ್ನು ಒದಗಿಸಿಕೊಟ್ಟಿದೆ. ರಂಗಸ್ಥಳದ ಅರಸರಾಗಿ ಮೆರೆದ, ದೇವರೇ ಆಗಿ ವರಗಳನ್ನು ದಯಪಾಲಿಸಿದ ಕಲಾವಿದರ ಮನೆಯೊಳಗಿನ ಕಥೆ ಉಂಟುಮಾಡಿದ ಕಸಿವಿಸಿ ಅಷ್ಟಿಷ್ಟಲ್ಲ. ವೃದ್ಧಾಪ್ಯದ ಹಲವು ಬಣ್ಣಗಳನ್ನು, ಹಲವು ನೋಟಗಳನ್ನು ಕಂಡು ಅರಗಿಸಿಕೊಂಡಿರುವೆನಾದರೂ ಕಲ್ಪನೆಯಲ್ಲಿ ಕಂಡ ಕಲಾವಿದರ ಚಿತ್ರಕ್ಕೂ ನೈಜ ಬದುಕಿಗೂ ಅಜಗಜಾಂತರವಿದೆ. ವೃದ್ಧಾಪ್ಯವೆಂಬುದು ಅಷ್ಟೊಂದು ಹೀನಾಯವೇ?
ದೇವರೊಬ್ಬರನ್ನು ಬಿಟ್ಟರೆ!
ಅತಿ ಹಿರಿಯ ಕಲಾವಿದರೋರ್ವರಿಗೆ ಕರೆ ಮಾಡಿ ಮಾತನಾಡಿಸಿದಾಗ ಅವರಿಗೆ ‘ಝೂಮ್’ನ ಕುರಿತು, ‘ಫೇಸ್ಬುಕ್ ಲೈವ್’ನ ಕುರಿತು ವಿವರ ನೀಡಬೇಕಿತ್ತು. ಅವರಿಗದು ಅರ್ಥವಾಗಲಿಲ್ಲ. ‘ಜತೆಯಲ್ಲಿ ಯಾರಿದ್ದಾರೆ? ಅವರಿಗೆ ಕೊಡಿ, ತಿಳಿಸುತ್ತೇನೆ’ ಎಂದೆ. ನನ್ನ ಸಹಜವಾದ ನಿರೀಕ್ಷೆಯೆಂದರೆ ಮಕ್ಕಳೋ, ಮೊಮ್ಮಕ್ಕಳೋ ಯಾರಾದರೂ ಪಕ್ಕದಲ್ಲಿದ್ದರೆ ವಿವರಿಸುವುದು ಸುಲಭ ಎಂದು. ಅವರು ನಿರ್ಲಿಪ್ತರಾಗಿ ಹೇಳಿದ ಮಾತು ‘ನನ್ನ ಜೊತೆ ಯಾರೂ ಇಲ್ಲ, ದೇವರೊಬ್ಬರನ್ನು ಬಿಟ್ಟರೆ!’ ಮಾತುಗಳನ್ನು ಮುಂದುವರಿಸಲು ಗೊತ್ತಾಗದೇ ತಬ್ಬಿಬ್ಬಾದೆ. ಅಷ್ಟರಲ್ಲಿ ಅವರೇ ಫೋನ್ ಕಡಿದರು. ಆ ದಿನ ಪೂರ್ತಿ ಹೇಳಲಾಗದ ಒದ್ದಾಟದಲ್ಲಿ ಕಳೆದೆ. ಅವರ ಧ್ವನಿಯಲ್ಲಿಲ್ಲದ ವಿಷಾದ ನನ್ನನ್ನು ಪೂರ್ತಿಯಾಗಿ ಆವರಿಸಿತ್ತು.
ಇನ್ನೋರ್ವರ ಕತೆ ಬೇರೆಯದು. ಫೋನಾಯಿಸಿದಾಗ ಉತ್ಸಾಹದಿಂದಲೇ ಮಾತನಾಡಿದ್ದರು. ಸ್ಮಾರ್ಟ್ ಫೋನ್ ಇರುವವರ ಯಾರದ್ದಾದರೂ ನಂಬರ್ ಕೊಡಿ ಎಂದರೆ ತನ್ನ ಮಿತ್ರನದ್ದೆಂದು ಕೊಟ್ಟರು. ಸರಿ, ಸಂದರ್ಶನದ ಪೂರ್ವಭಾವಿಯಾಗಿ ಮಾತನಾಡಿಸುವಾಗ ಮನೆಯ ಮಂದಿಯ ಬಗ್ಗೆ ವಿಚಾರಿಸಿದೆ. ಮಕ್ಕಳ ಕುರಿತಾಗಿ ಹೇಳಿದರು. ‘ನಿಮ್ಮ ಯಜಮಾನಿ ಏನು ಮಾಡ್ತಾರೆ?’ ಎಂದರೆ ‘ಅರ್ಧ ಸತ್ತಿದ್ದಾಳೆ’ ಎಂಬ ಕಟುವಾದ ಉತ್ತರ ಬಂತು. ಅಂದರೆ ಮಲಗಿದಲ್ಲೇ ಇದ್ದಾರೇನೋ ಅಂದುಕೊಂಡು ಆರೋಗ್ಯ ಸರಿಯಿಲ್ಲವೇ ಎಂದು ಕೇಳಿದೆ. ಇನ್ನಷ್ಟು ಕಹಿ ಬೆರೆಸಿ ‘ಇಲ್ಲ, ಓಡಾಡುತ್ತಾಳೆ, ನನ್ನ ಮಕ್ಕಳೊಂದಿಗೆ ಇದ್ದಾಳೆ. ನಾನು ಒಬ್ಬನೇ ಇದ್ದೇನೆ’ ಎಂದರು. ನನ್ನಲ್ಲಿ ಮುಂದೆ ಪ್ರಶ್ನೆಗಳಿದ್ದರೂ ಕೇಳುವಂತಿರಲಿಲ್ಲ. ಬಳಿಕ ಅವರ ಸ್ನೇಹಿತರ ಮುಖೇನ ತಿಳಿದ ವಿಚಾರವೆಂದರೆ ಅವರ ಕೌಟುಂಬಿಕ ಸಮಸ್ಯೆಯಿಂದಾಗಿ ಅವರು ಒಂಟಿಯಾಗಿದ್ದಾರೆ ಎಂಬುದು.
ಇನ್ನೋರ್ವ ಹಿರಿಯ ಕಲಾವಿದರು, ಸ್ವತಃ ಅರಳು ಹುರಿದಂತೆ ಮಾತಾಡಬಲ್ಲವರು. ಫೋನ್ ಮಾಡಿದ್ದೇ ತಡ ಅತ್ಯುತ್ಸಾಹದಿಂದ ಮಾತಿಗಣಿಯಾದರು. ಸರಿ, ಎಲ್ಲವನ್ನೂ ವಿವರಿಸಿ ಬಳಿಕ ಸಂದರ್ಶನಕ್ಕಾಗಿ ಬೇಕಾದ ತಯಾರಿಯ ಬಗ್ಗೆ ಮಾತಾಡಲು ಮೊಮ್ಮಗಳನ್ನು ಕರೆದರು. ಸಮಯದ ಬಗ್ಗೆ ಕೇಳಿದ ಕೂಡಲೇ ಅವಳ ಪ್ರತಿಕ್ರಿಯೆ ‘ನಾನು ಬ್ಯುಸೀ ಇರ್ತೇನೆ. ನೀವು ನಿಮ್ಮ ಕೆಲಸದವರಾರಾದರೂ ಇದ್ದರೆ ಅವರಲ್ಲೊಂದು ಮೊಬೈಲ್ ಕೊಟ್ಟು ಕಳಿಸಿ!’ ಅವಳೇನು ಕೆಲಸ ಮಾಡುತ್ತಿದ್ದಾಳೆ ಎಂದರೆ, ಈಗಿನ್ನೂ ವಿದ್ಯಾರ್ಥಿನಿ!
ಇನ್ನೋರ್ವರೊಂದಿಗೆ ಮಾತನಾಡಿಸಬೇಕಾದಾಗ ಮೊಮ್ಮಗನಿಗಾಗಿ ಕಾಯಬೇಕಿತ್ತು. ಅವನಿಗೆ ಎಲ್ಲವನ್ನೂ ವಿವರಿಸಿ ಮೀಟಿಂಗ್ ಜಾಯಿನ್ ಆಗುವಂತೆ ಹೇಳಿದೆ. ಐದು ನಿಮಿಷ ಕಾದೆ. ಅವರು ಕನೆಕ್ಟ್ ಆಗುವ ಲಕ್ಷಣ ಕಾಣಿಸಲಿಲ್ಲ. ಮತ್ತೆ ಫೋನ್ ಮಾಡಿದರೆ ಕರೆ ಸ್ವೀಕರಿಸಿದ ಹಿರಿಯರು ‘ಮೊಮ್ಮಗನಿಗೆ ಟ್ಯೂಷನ್ ಇದೆಯಂತೆ ಅಮ್ಮಾ ಅವನು ಮೊಬೈಲು ಇಟ್ಟು ಹೋದ’ ಎಂದರು. ಕಡೆಯ ಪಕ್ಷ ತನಗೇನೋ ಅನನುಕೂಲವಿದೆ ಎಂಬುದನ್ನು ತಿಳಿಸಿ ಹೋಗಬಾರದಿತ್ತೇ ಎಂಬ ನನ್ನ ಪ್ರಶ್ನೆಗೆ ಅವರ ಹತಾಶೆಯ ನಿಟ್ಟುಸಿರು ಮಾತ್ರ ಉತ್ತರವಾಗಿತ್ತು.
ಅರ್ಥವಿಲ್ಲದ ಪದಪುಂಜಗಳು
‘ಅಮ್ಮಾ, ನಿಮ್ಮಲ್ಲಿ ಮಾತಾಡುತ್ತಿದ್ದರೆ ಕಳೆದುಕೊಂಡ ಮಗಳು ನೆನಪಾದಳು. ಬಿಡುವಾಗಿದ್ದಾಗ ವಾರಕ್ಕೊಮ್ಮೆಯಾದರೂ ನನಗೆ ಫೋನ್ ಮಾಡಿ ಮಾತಾಡುತ್ತೀರಾ?’ ಎಂದು ಬಿಕ್ಕಳಿಸಿದವರು ರಂಗಸ್ಥಳದಲ್ಲಿ ಖಳನಾಯಕನ ಪಾತ್ರದಲ್ಲಿ ವಿಜೃಂಭಿಸಿದವರು. ಮಗಳು ತೀರಿಕೊಂಡ ಸಂದರ್ಭವನ್ನು ನೆನೆನೆನೆದು ಅವರು ಅಳುತ್ತಿದ್ದರೆ ನನಗೆ ಏನು ಹೇಳುವುದಕ್ಕೂ ತೋಚಲಿಲ್ಲ. ಸಮಾಧಾನ ತಂದುಕೊಳ್ಳಿ ಎಂಬುದು ಅನೇಕ ಸಂದರ್ಭಗಳಲ್ಲಿ ಅರ್ಥವಿಲ್ಲದ ಪದಪುಂಜಗಳಷ್ಟೇ ಅಲ್ಲವೇ?
ವೃದ್ಧಾಪ್ಯದ ಕಥನಗಳು ಅನೇಕ ಮನೆಗಳಲ್ಲಿ ಬಹು ಕಠಿಣ. ವಯಸ್ಸಿನೊಂದಿಗೆ ಅಂಟಿಕೊಂಡೇ ಬರುವ ಕಾಯಿಲೆಗಳ ಗುಚ್ಛ ಅವರನ್ನು ಮತ್ತಷ್ಟು ದಣಿಸುತ್ತದೆ. ಕಂಗೆಡಿಸುತ್ತದೆ. ಆದರೆ ಹಲವು ಸಂದರ್ಭಗಳಲ್ಲಿ ಅವರು ತಮಗೆ ಬೇಕಾದ ವ್ಯಾಯಾಮಗಳನ್ನು ಮಾಡುವುದಕ್ಕೋ, ಆಹಾರದಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಅನುಸರಿಸುವುದಕ್ಕೋ ಸಿದ್ಧರಿರುವುದಿಲ್ಲ. ಮಕ್ಕಳಂತೆ ರಚ್ಚೆಹಿಡಿದು ಬಿಡುತ್ತಾರೆ. ಮಕ್ಕಳಿಗಾದರೋ ಗದರಬಹುದು, ದಂಡಿಸಬಹುದು. ಆದರೆ ಹಿರಿಯರಿಗೆ ಗದರುವುದು ಸಾಧ್ಯವೇ?
ದಂಪತಿಗಳಿಬ್ಬರೂ ಜತೆಯಾಗಿದ್ದರೆ, ಅನ್ಯೋನ್ಯವಾಗಿದ್ದರೆ ಅಥವಾ ಜಗಳವೇ ಆಡುತ್ತಿದ್ದರೂ ಅವರೀರ್ವರ ನಡುವೆ ನಿರಂತರ ಸಂವಹನ ಇರುತ್ತದೆ ಎಂಬುದು ಸಹಜ. ಅದರಿಂದಾಗಿಯೇ ನೆಮ್ಮದಿ ಕಂಡುಕೊಳ್ಳುವುದೂ ನಿಜ. ಆದರೆ ಇಬ್ಬರಲ್ಲಿ ಒಬ್ಬರು ಮರೆಯಾದರೆ ಉಳಿದುಕೊಂಡವರ ಪರಿಸ್ಥಿತಿ ಘೋರವಾಗಿಬಿಡುತ್ತದೆ. ನಮ್ಮ ಮನೆಯಲ್ಲಿ ಅತ್ತೆ ತೀರಿಕೊಂಡ ಬಳಿಕ ಸ್ನೇಹಿತರೊಬ್ಬರು ‘ಮಾವ ಹೇಗಿದ್ದಾರೆ?’ ಎಂದು ವಿಚಾರಿಸಿದರು. ಅವರ ಸ್ಥಿತಿಗತಿಗಳ ಕುರಿತು ವಿವರಿಸಿದೆ. ‘ಪರವಾಗಿಲ್ಲರೀ. ಅವರು ಹೊಂದಿಕೊಂಡರು ಅನ್ನಿಸ್ತಿದೆ. ನಮ್ಮನೆಯಲ್ಲಂತೂ ಅಮ್ಮ ಹೋದ ಮೇಲೆ ಅಪ್ಪ ನಮ್ಮ ಬದುಕನ್ನು ನರಕ ಮಾಡಿಬಿಟ್ಟರು!’ ಎಂದು ಉದ್ಗರಿಸಿದರು. ನೋಡಿದರೆ ಸಂಗಾತಿಯ ಅಗಲುವಿಕೆ ಸಹಿಸಿಕೊಳ್ಳಲಾಗದೆ ಅವರು ಮಾನಸಿಕವಾಗಿ ಬಹಳ ಕುಸಿದಿದ್ದರಂತೆ. ಪರಿಣಾಮ ಶಾರೀರಿಕವಾಗಿಯೂ ಹತ್ತುಹಲವು ಸಮಸ್ಯೆಗಳು ಅವರನ್ನು ಆವರಿಸಿಕೊಂಡವು. ಮಗ ಕಟ್ಟಿಸಿದ ಬಂಗಲೆಯಂತಹ ಮನೆ, ಓಡಾಡಲು ಸುಂದರವಾದ ಕೈತೋಟ, ಹಲವರಿಗೆ ಕನಸಿನ ಮನೆಯೆನ್ನಬಹುದಾದ ಸುತ್ತಲಿನ ವಾತಾವರಣ…. ಎಲ್ಲವೂ ಇದ್ದೂ ನೆಮ್ಮದಿಯನ್ನು ಕಳೆದುಕೊಂಡು ಬದುಕುವ ಪರಿಸ್ಥಿತಿ ಕಠಿಣ.
ನಿತ್ಯದ ಅಳಲು
ಇಷ್ಟು ಸಾಲದ್ದಕ್ಕೆ ಅಲ್ಲಿಂದ ಇಲ್ಲಿಂದ ಕೇಳಿಬರುವ ತನ್ನ ಓರಗೆಯವರ ನಿರ್ಗಮನ ಅವರನ್ನು ಮತ್ತಷ್ಟು ಕಂಗೆಡಿಸುತ್ತದೆ. ಸಾವು ಖಚಿತವೇ ಆದರೂ ಸಾವಿಗೆ ಹೆದರದವರು ಕಡಮೆಯಲ್ಲವೇ? ಸಾವಿನ ನಿರೀಕ್ಷೆಯಲ್ಲಿ ಮಲಗಿದವರದು ಅರ್ಥವಾಗದ ಚಡಪಡಿಕೆ. ಹಾಸಿಗೆ ಹಿಡಿದಿದ್ದ ನಮ್ಮತ್ತೆ ದೇವರಿಗೆ ಅದೆಷ್ಟು ಬೈದರೋ ಅವರಿಗೇ ಗೊತ್ತು. ‘ನನ್ನನ್ನು ಈ ಪರಿಸ್ಥಿತಿಗೆ ತಂದಿಟ್ಟವನಿಗೆ ನನ್ನನ್ನು ಕರೆದುಕೊಂಡುಹೋಗಬೇಕು ಎಂದು ಗೊತ್ತಾಗಬಾರದೇ?’ ಎಂಬುದು ಅವರ ದಿನನಿತ್ಯದ ಅಳಲಾಗಿತ್ತು. ಆ ಸಮಯದಲ್ಲಿ ಅನಿವಾರ್ಯವಾಗಿ ಅವರಿಗೆ ತಿಳಿಸಲೇಬೇಕಾದ ಸಾವಿನ ಸುದ್ದಿಗಳಿದ್ದರೆ ಆ ದಿನಪೂರ್ತಿ ಮತ್ತೆ ಅದೊಂದೇ ಧ್ಯಾನ.
ವಯಸ್ಸಹಜವಾಗಿ ಬರುವ ಕಣ್ಣು ಕಿವಿಗಳ ಸಮಸ್ಯೆ ಹಿರಿಯರನ್ನು ಬಹಳವಾಗಿ ಕಾಡುತ್ತದೆ. ಆದರೆ ಓದುವಂತಹ ಹವ್ಯಾಸವೇನಾದರೂ ಇದ್ದವರು ಸಮಯ ಕಳೆಯುವುದಕ್ಕೆ ತಮ್ಮ ಪಾಡಿಗೆ ತಾವೇನಾದರೂ ಮಾಡುತ್ತಿರುತ್ತಾರೆ. ನನ್ನ ತಂದೆಯವರೂ ಇದಕ್ಕೆ ಹೊರತಲ್ಲ. ದುಡಿಯಲು ಆರಂಭಿಸಿದಾಗಿನಿಂದಲೂ ಪುಸ್ತಕಗಳನ್ನು ಖರೀದಿಸುವ, ಸಂಗ್ರಹಿಸುವ ಹವ್ಯಾಸ ಇಟ್ಟುಕೊಂಡ
ಅವರು ಕಣ್ಣುಗಳ ತೊಂದರೆ ಇದ್ದರೂ ಭೂತಗನ್ನಡಿ ಹಿಡಿದು ದಿನವಿಡೀ ಓದುತ್ತಿರುತ್ತಾರೆ. ಪ್ರತಿದಿನ ಸಂಜೆ ಅಂದು ಓದಿದ ಪುಸ್ತಕಗಳ ಬಗ್ಗೆ ನಮ್ಮಲ್ಲಿ ಚರ್ಚಿಸುತ್ತಾರೆ. ಕೆಲವೊಮ್ಮೆ ಅವುಗಳನ್ನು ನಾವೇ ಓದಿರುವುದಿಲ್ಲ. ಒಂದು ಬಗೆಯ ಔದಾಸೀನ್ಯದಿಂದಲೋ ಸಮಯದ ಅಭಾವವೆಂಬ ಕುಂಟುನೆಪದಿಂದಲೋ ಓದಲಾಗಿರುವುದಿಲ್ಲ. ಹೀಗಿರುವಾಗ ಅಪ್ಪನ ನಿರಂತರ ಓದು ಅಚ್ಚರಿಯ ಜತೆಗೆ ಸಮಾಧಾನವನ್ನೂ ಕೊಡುತ್ತದೆ.
ಹಿರಿಯ ಸ್ನೇಹಿತರೊಬ್ಬರು ವೃದ್ಧರ ಬಗ್ಗೆ ಹೇಳಿದ ಮಾತು ಆಗೀಗ ನೆನಪಾಗುತ್ತದೆ, ‘ವಯಸ್ಸಾಗುತ್ತಾ ಆಗುತ್ತಾ ಅವರೇಕೆ ಮಕ್ಕಳಿಗಿಂತ ಕಡೆಯಾಗಿ ಹೀನಾಯವಾಗಿ ನಡೆದುಕೊಳ್ಳುತ್ತಾರೆ ಎಂದರೆ ಅವರ ನಿರ್ಗಮನಕ್ಕೆ ನಮ್ಮನ್ನು ಮಾನಸಿಕವಾಗಿ ಸಿದ್ಧತೆ ಮಾಡಿದಂತೆ. ಅವರು ಚೆನ್ನಾಗಿಯೇ ವರ್ತಿಸುತ್ತಿದ್ದು ನಮ್ಮನ್ನಗಲಿದರೆ ಮನೆಮಂದಿಗೆ ತಡೆದುಕೊಳ್ಳುವ ಶಕ್ತಿಯೇ ಇರದೇನೋ!’ ಕೆಲವೊಮ್ಮೆ ಇದ್ದರೂ ಇರಬಹುದೇನೋ ಎನಿಸುತ್ತದೆ.
ನಮ್ಮ ಜವಾಬ್ದಾರಿಯಾಗಲಿ
ಎಲ್ಲರಿಗೂ ಬೇಡವಾಗಿ, ಪ್ರೀತಿಗೆ ಎರವಾಗಿ, ಕಾಳಜಿಯನ್ನು ಹಂಬಲಿಸಿ, ಎಲ್ಲರ ನೆನಪಿನಿಂದಲೂ ಮಾಸಿ ಬದುಕುವ ಸ್ಥಿತಿಯು ಹೊಟ್ಟೆಯ ಹಸಿವಿನಿಂದ ಕಂಗೆಟ್ಟವನಿಗಿಂತ ಭೀಕರ ಎಂದವರಾರೋ ಗೊತ್ತಿಲ್ಲ. ಆದರೆ ನಮ್ಮ ಮನೆಯ ಹಿರಿಯರಿಗೆ ಅಂತಹ ಸ್ಥಿತಿ ಬಾರದಂತೆ ಕಾಯ್ದುಕೊಳ್ಳುವುದು ನಮ್ಮ ಜವಾಬ್ದಾರಿಯಾಗಲಿ. ಏಕೆಂದರೆ ನಮ್ಮ ಈ ಬದುಕು ಅವರು ಕೊಟ್ಟ ಉಡುಗೊರೆ! ಅವರ ಮುಖದ ಸುಕ್ಕುಗಳಲ್ಲೂ ಸೌಂದರ್ಯ ಬೆಸೆದಿರುವುದು ಸಾಧ್ಯವಾಗುವುದು ಬದುಕಲ್ಲಿ ಸಂತೃಪ್ತಿಯಿದ್ದಾಗಲಂತೆ. ನಮಗಾಗಿ ತನ್ನ ಸೌಂದರ್ಯವನ್ನು ಚಿಂತಿಸದ ಅಮ್ಮ, ತಾನು ಹರಿದ ಬನಿಯನ್ ಹಾಕಿದರೂ ನಮ್ಮ ಹುಟ್ಟುಹಬ್ಬಕ್ಕೆ ಹೊಸಬಟ್ಟೆ ಕೊಡಿಸುವುದನ್ನು ಮರೆಯದ ಅಪ್ಪ ನಮ್ಮ ಜೀವನದ ರೂವಾರಿಗಳೇ ನಿಜವಷ್ಟೇ? ಅವರು ದಣಿದಾಗ ಆದರಿಸುವ ಕೆಲಸವನ್ನು ಅಂತರಂಗದಿಂದಲೇ ಮಾಡಬೇಕಲ್ಲವೇ?