ಕಾಶ್ಮೀರವನ್ನು ಭಾರತ ಗಣರಾಜ್ಯದಲ್ಲಿ ಉಳಿಸುವುದಕ್ಕಾಗಿ ಡಾ|| ಶ್ಯಾಮಾಪ್ರಸಾದ ಮುಖರ್ಜಿಯವರ ಬಲಿದಾನವಾದದ್ದರ (23 ಜೂನ್ 1953) 68ನೇ ವರ್ಷ ಇದು (2021). ಯಾವ ಧ್ಯೇಯಕ್ಕಾಗಿ ಡಾ|| ಮುಖರ್ಜಿಯವರು ಹುತಾತ್ಮರಾದರೋ ಆ ಲಕ್ಷ್ಯ ಇನ್ನೂ ನೇರವೇರಬೇಕಾಗಿದೆ. ಆ ಪ್ರಖರ ರಾಷ್ಟ್ರಭಕ್ತರ ತ್ಯಾಗವು ವ್ಯರ್ಥವಾಗದಿರಲೆಂದು ಹಾರೈಸುತ್ತ ಆ ಸಮರ್ಪಿತ ಪ್ರೇರಣಾದಾಯಿ ಜೀವನದ ಹಲವು ಮುಖಗಳನ್ನು ಇಲ್ಲಿ ಸ್ಮರಿಸಲಾಗಿದೆ.
ನವಭಾರತ ಇತಿಹಾಸ ನಿರ್ಮಾಪಕರ ಪಂಕ್ತಿಯಲ್ಲಿ ಗಣ್ಯ ಸ್ಥಾನ ಪಡೆದವರು ಡಾ|| ಶ್ಯಾಮಾಪ್ರಸಾದ ಮುಖರ್ಜಿ (6.7.1901-23.6.1953). ರಾಷ್ಟ್ರವಾದಿ ರಾಜಕಾರಣದ ಪ್ರವರ್ತಕರೆಂದು ಸಾಮಾನ್ಯವಾಗಿ ಅವರನ್ನು ನೆನೆಯಲಾಗುತ್ತದೆ. ಇದು ತಥ್ಯವೂ ಹೌದು. ಆದರೆ ಆಡಳಿತಶಾಸ್ತ್ರ, ಶಿಕ್ಷಣ, ಉದ್ಯಮ ಮೊದಲಾದ ಹಲವಾರು ಕ್ಷೇತ್ರಗಳಿಗೆ ಅವರ ಕೊಡುಗೆ ಗಣನೀಯವಾಗಿತ್ತು. ಬೆಂಗಳೂರಿನ ಹಿಂದೂಸ್ಥಾನ್ ಏರ್ಕ್ರಾಫ್ಟ್ ಫ್ಯಾಕ್ಟರಿ (ಈಗಿನ ಹಿಂದೂಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್), ರೈಲುಗಾಡಿಗಳನ್ನು ತಯಾರಿಸುವ ಬುದ್ರ್ವಾನ್ ಜಿಲ್ಲೆ ಚಿತ್ತರಂಜನ್ ಲೋಕೋಮೋಟಿವ್ಸ್, ಸಿಂಧ್ರಿ ರಸಗೊಬ್ಬರ ಕಾರ್ಖಾನೆ ಮೊದಲಾದ ಸ್ವತಂತ್ರ ಭಾರತದ ಹೆಮ್ಮೆಯ ಉದ್ಯಮಗಳನ್ನು ಸಾಕಾರಗೊಳಿಸಿದವರು ಡಾ|| ಶ್ಯಾಮಾಪ್ರಸಾದ ಮುಖರ್ಜಿ ಅವರೇ.
ಉನ್ನತ ವ್ಯಕ್ತಿತ್ವ
ಡಾ|| ಶ್ಯಾಮಾಪ್ರಸಾದ ಮುಖರ್ಜಿಯವರ ಕೀರ್ತಿ ಬಂಗಾಳಕ್ಕೆ ಸೀಮಿತವಿರಲಿಲ್ಲ, ದೇಶವ್ಯಾಪಿಯಾಗಿತ್ತು. 1935ರಷ್ಟು ಹಿಂದೆಯೇ ಅವರು ಬೆಂಗಳೂರಿನ ತಾತಾ ವಿಜ್ಞಾನ ಮಂದಿರದ ನಿರ್ವಾಹಕ ಮಂಡಳಿಯ ಸದಸ್ಯರಾಗಿ ನಿಯುಕ್ತರಾಗಿದ್ದರು. 1938ರಲ್ಲಿ ಲೀಗ್ ಆಫ್ ನೇಷನ್ಸ್ ಸಂಸ್ಥೆಯ Committee of intellectual Cooperation ಸಮಿತಿಗೆ ಭಾರತದ ಪ್ರತಿನಿಧಿಯಾಗಿ ಮುಖರ್ಜಿಯವರು ಭಾರತ ಸರ್ಕಾರದಿಂದ ನೇಮಕಗೊಂಡಿದ್ದರು. 1943ರಲ್ಲಿ ಬಂಗಾಳದ ಪ್ರತಿಷ್ಠಿತ ರಾಯಲ್ ಏಶ್ಯಾಟಿಕ್ ಸೊಸೈಟಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
1942ರ ಅಂತ್ಯದ ಚಕ್ರವಾತ (ಸೈಕ್ಲೋನ್), ಬರ್ಮದಿಂದ ಸರಬರಾಜಾಗುತ್ತಿದ್ದ ಅಕ್ಕಿಯ ಅಲಭ್ಯತೆ ಮೊದಲಾದ ಕಾರಣಗಳಿಂದ 1943ರಲ್ಲಿ ಬಂಗಾಳದಲ್ಲಿ ತೀವ್ರ ಕ್ಷಾಮ ಉಂಟಾಯಿತು. 35 ಲಕ್ಷದಷ್ಟು ಅಧಿಕ ಸಂಖ್ಯೆಯ ಪ್ರಜೆಗಳು ಆಹಾರಾಭಾವದಿಂದ ಸತ್ತರು. ಆ ಸಮಯದಲ್ಲಿ ಡಾ|| ಶ್ಯಾಮಾಪ್ರಸಾದ ಮುಖರ್ಜಿ ಸ್ವಂತ ಉಮೇದಿನಿಂದಲೇ ಸಂಘಟಿಸಿದ ಪರಿಹಾರ ಕಾರ್ಯ ಅವರಿಗೆ ವಿಶಾಲ ಜನಮನ್ನಣೆ ತಂದಿತ್ತಿತು.
ಮುಖರ್ಜಿಯವರು ಅಭಿಜಾತಕುಲೀನರು. ಬಂಗಾಳದ ನವನಿರ್ಮಾಪಕರಲ್ಲಿ ಅಗ್ರಮಾನ್ಯರೆನಿಸಿದ್ದ ಸರ್ ಆಶುತೋಷ ಮುಖರ್ಜಿಯವರ ಸುಪುತ್ರರಾಗಿ ಜನಿಸಿದವರಾದರೂ, ಶ್ಯಾಮಾಪ್ರಸಾದರ ಔನ್ನತ್ಯ ಅವರ ವೈಯಕ್ತಿಕ ಗಳಿಕೆಯೇ.
ಎಡ್ವರ್ಡ್ ಸಪ್ತಮನ ಕಿರೀಟಧಾರಣೋತ್ಸವದಲ್ಲಿ ಭಾಗವಹಿಸಲು ಲಂಡನ್ನಿಗೆ ಬರುವಂತೆ ವೈಸರಾಯ್ ಕರ್ಜನ್ ಒತ್ತಾಯಿಸಿದಾಗ ಸರ್ ಆಶುತೋಷ ಮುಖರ್ಜಿ ದಿಟ್ಟತನದಿಂದ ಉತ್ತರಿಸಿದ್ದರು: “ನನ್ನ ತಾಯಿಗೆ ಸಮ್ಮತವಿಲ್ಲದ್ದರಿಂದ ನಾನು ಲಂಡನ್ನಿಗೆ ಬರಲಾರೆ.” ಇದಕ್ಕೆ ಕರ್ಜನ್ “ಭಾರತದ ವೈಸರಾಯ್ ಮತ್ತು ಗವರ್ನರ್-ಜನರಲ್ ಆಕೆಯ ಮಗನಿಗೆ ಹೀಗೆ ಆದೇಶ ನೀಡಿರುವುದಾಗಿ ನಿಮ್ಮ ತಾಯಿಗೆ ಹೇಳಿರಿ” ಎಂದ. ಒಂದು ಕ್ಷಣವೂ ಹಿಂದೆಗೆಯದೆ ಸರ್ ಆಶುತೋಷ ಮುಖರ್ಜಿ ಉತ್ತರಿಸಿದ್ದರು:
“Then I will tell the Viceroy of India on her behalf that the mother of Ashutosh refuses to let her son be commanded by anybody excepting herself, be he the Viceroy of India or be he anybody greater.” ಇಂಥದೇ ಸ್ವಾಭಿಮಾನ ಡಾ|| ಶ್ಯಾಮಾಪ್ರಸಾದ ಮುಖರ್ಜಿಯವರಲ್ಲಿಯೂ ರಕ್ತಗತವಾಗಿತ್ತು.
ಮುಖರ್ಜಿಯವರ ಸಂಸತ್ತಿನ ಹಾಗೂ ಇತರ ಸಾಂದರ್ಭಿಕ ಭಾಷಣಗಳಲ್ಲದೆ ಪ್ರಾಂತೀಯ ಸ್ವಾಯತ್ತತೆಯನ್ನು ಭಂಗಗೊಳಿಸುತ್ತಿದ್ದ ಆಂಗ್ಲ ಸರ್ಕಾರದ ಕ್ರಮಗಳನ್ನು ವಿರೋಧಿಸಿ ಅವರು ಗವರ್ನರ್-ಜನರಲ್ ಲಿನ್ಲಿತ್ಗೋಗೆ ಬರೆದ ಪತ್ರ (12-8-1942), ದೇಶವಿಭಜನೆಗೆ ಅಂಗೀಕಾರ ಸೂಚಿಸುವ ‘ಸಿ. ರಾಜಗೋಪಾಲಾಚಾರಿ ಸೂತ್ರ’ ವನ್ನು ವಿರೋಧಿಸಿ ಗಾಂಧಿಯವರಿಗೆ ಬರೆದ ಪತ್ರ (19-7-1944), ಭಾರತ-ಪಾಕ್ ಸಂಬಂಧಗಳ ದುಃಸ್ಥಿತಿಯನ್ನು ಪ್ರಸ್ತಾವಿಸಿದ ಅವರ ರಾಜೀನಾಮೆಯ ಹೇಳಿಕೆ (19-4-1950) ಮೊದಲಾದವು ಇತಿಹಾಸಾರ್ಹ ದಾಖಲೆಗಳು.
ಬರಹಗಾರಿಕೆಯನ್ನೂ ಡಾ|| ಶ್ಯಾಮಾಪ್ರಸಾದ ಮುಖರ್ಜಿ ಆರಂಭದ ದಿನಗಳಿಂದಲೇ ರೂಢಿಸಿಕೊಂಡಿದ್ದರು. 1920ರ ದಶಕದಲ್ಲಿ ‘ಬಂಗಬಾಣಿ’, ‘ಅಚಿಠಿiಣಚಿಟ’ ಮೊದಲಾದ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿದ್ದರು. 1944ರಲ್ಲಿ ತಮ್ಮ ಅಭಿಪ್ರಾಯಗಳ ಪ್ರಸಾರಕ್ಕಾಗಿ ತಮ್ಮದೇ ಆದ ‘The Nationalist’ ಎಂಬ ದೈನಿಕವನ್ನೂ ಆರಂಭಿಸಿ ಕೆಲ ಕಾಲ ನಡೆಸಿದರು. ವಿದ್ವತ್ತೆ, ಪ್ರಭಾವೀ ವಕ್ತøತ್ವ, ಲೇಖನಸಾಮಥ್ರ್ಯ, ನಿರಂತರ ಅಧ್ಯಯನಪ್ರವೃತ್ತಿ ಅವರಲ್ಲಿ ಬೆರೆತಿದ್ದುದರಿಂದ ಉಪಕುಲಪತಿ ಸ್ಥಾನದ, ರಾಜ್ಯ ಹಾಗೂ ಕೇಂದ್ರ ಮಟ್ಟಗಳ ಮಂತ್ರಿಸ್ಥಾನದ ಹಾಗೂ ಇತರ ಗುರುತರ ಹೊಣೆಗಳನ್ನು ಅವರು ಅನಾಯಾಸವಾಗಿ ನಿರ್ವಹಿಸಿದರು.
ಶಿಕ್ಷಣವೇತ್ತ
ಧ್ಯೇಯನಿಷ್ಠ ರಾಜಕೀಯ ನೇತಾರ, ಶಾಸಕ, ವಕ್ತøತ್ವಶಾಲಿ, ಶಿಕ್ಷಣ ತಜ್ಞ, ಉದ್ಯಮ ಪ್ರವರ್ತಕ, ಸಂಘಟಕ, ದಕ್ಷ ಆಡಳಿತಗಾರ – ಹೀಗೆ ಡಾ|| ಶ್ಯಾಮಾಪ್ರಸಾದ ಮುಖರ್ಜಿಯವರದು ಬಹುಮುಖ ವ್ಯಕ್ತಿತ್ವ. ಒಂದು ದೃಷ್ಟಿಯಿಂದ ಅವರ ಸಾರ್ವಜನಿಕ ಜೀವನದ ಆರಂಭವಾದುದೇ ಶಿಕ್ಷಣ ಕ್ಷೇತ್ರದಲ್ಲಿ. 23 ವರ್ಷ ವಯಸ್ಸಿನಲ್ಲಿಯೇ (1924) ಅವರು ಕೊಲ್ಕತ್ತಾ ವಿಶ್ವವಿದ್ಯಾಲಯದ ಸೆನೇಟ್ ಮತ್ತು ಸಿಂಡಿಕೇಟ್ ಸದಸ್ಯರಾದರು. 1934ರಿಂದ 1938ರವರೆಗೆ ಉಪಕುಲಪತಿಗಳಾಗಿದ್ದರು. 33ರಷ್ಟು ಕಿರಿಯ ವಯಸ್ಸಿನವರು ಉಪಕುಲಪತಿಗಳಾದದ್ದು ಒಂದು ದಾಖಲೆಯೆನಿಸಿತು. 1926ರಲ್ಲಿ ಇಂಗ್ಲೆಂಡಿಗೆ ಹೋಗಿ ಬ್ಯಾರಿಸ್ಟರ್ ಪದವಿಯನ್ನು ಪಡೆದು ಬಂದರಾದರೂ ವಕೀಲಿ ವೃತ್ತಿಯಲ್ಲಿ ಆಸಕ್ತರಾಗದೆ ಶಿಕ್ಷಣ ಕ್ಷೇತ್ರವನ್ನು ಆಯ್ದುಕೊಂಡರು. ಶಿಕ್ಷಣದ ಸ್ವದೇಶೀಕರಣಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡರು. ಸರ್ವಾಂಗೀಣ ವ್ಯಕ್ತಿತ್ವವಿಕಾಸವೇ ಶಿಕ್ಷಣದ ಗುರಿಯಾಗಬೇಕೆಂದೂ ಅದು ಉದ್ಯೋಗ ಸಾಧನವಷ್ಟೇ ಆಗಿ ಉಳಿಯಬಾರದೆಂದೂ ಸತತವಾಗಿ ಪ್ರತಿಪಾದಿಸಿದರು. 1936ರ ಫೆಬ್ರುವರಿ 22ರಂದು ಕೊಲ್ಕತ್ತಾ ವಿಶ್ವವಿದ್ಯಾಲಯದ ದೀಕ್ಷಾಂತ ಭಾಷಣ ಮಾಡುತ್ತಾ ಅವರು ಹೇಳಿದರು:
“ನಮ್ಮ ನವಯುವಕರ ಸುಪ್ತ ಸದ್ಗುಣಗಳನ್ನು ಪೂರ್ಣವಾಗಿ ವಿಕಸಿತಗೊಳಿಸಿ ಅವರಿಗೆ ಶಾರೀರಿಕ-ಬೌದ್ಧಿಕ-ನೈತಿಕ-ಸತ್ಸಂಸ್ಕಾರಗಳನ್ನು ನೀಡಿ ಅವರು ರಾಷ್ಟ್ರೋತ್ಥಾನ ಕಾರ್ಯಗಳಲ್ಲಿ ಹಳ್ಳಿಗಳಲ್ಲಿಯೂ ನಗರಗಳಲ್ಲಿಯೂ ನಿಷ್ಠೆಯಿಂದ ತೊಡಗುವಂತೆ ಆಗಬೇಕು. ಸಾಂಸ್ಕøತಿಕ ಶಿಕ್ಷಣ, ವೃತ್ತಿಪರ ಶಿಕ್ಷಣ – ಇವು ಒಟ್ಟೊಟ್ಟಿಗೇ ನಡೆಯಬೇಕು. ಕೇವಲ ಭೌತಿಕ ಶಿಕ್ಷಣದಿಂದ ಯಾವ ರಾಷ್ಟ್ರವೂ ಮೇಲ್ಮೆ ಸಾಧಿಸಲಾರದು. ಶಿಕ್ಷಾರ್ಥಿಗಳು ಚಾರಿತ್ರ್ಯವಂತರೂ ಸ್ವಾತಂತ್ರ್ಯಶೀಲರೂ ಆದಲ್ಲಿ ಮಾತ್ರ ಅವರೊಳಗಿಂದ ದೇಶಭಕ್ತರೂ ಶ್ರೇಷ್ಠ ಜನನಾಯಕರೂ ನಿರ್ಮಾಣಗೊಂಡಾರು. ಸರ್ಕಾರ, ಶಿಕ್ಷಣಸಂಸ್ಥೆಗಳು, ಸಮಾಜ – ಇವು ಪರಸ್ಪರ ಪೂರಕಗಳಾಗಬೇಕು.”
ಹಿಂದೂ ಜೀವನಮೌಲ್ಯಗಳು, ಆಧುನಿಕ ವಿಜ್ಞಾನ-ಇವುಗಳ ನಡುವೆ ಸಮನ್ವಯ ಅವಶ್ಯವೆಂಬುದು ಅವರ ಪ್ರತಿಪಾದನೆಯಾಗಿತ್ತು.
ಇಂಗ್ಲಿಷಿಗೆ ಬದಲಾಗಿ ಶಿಕ್ಷಣದಲ್ಲಿ ದೇಶೀಯ ಭಾಷೆಗಳ ಗರಿಷ್ಠ ಬಳಕೆಯನ್ನು ಮುಖರ್ಜಿ ಬಳಕೆಗೆ ತಂದರು. ಆದರೆ ವಿಜ್ಞಾನಾದಿ ಕ್ಷೇತ್ರಗಳಲ್ಲಿ ಇಂಗ್ಲಿಷಿನ ಬಳಕೆಗೆ ಅವರ ವಿರೋಧವಿರಲಿಲ್ಲ. ದೇಶವ್ಯಾಪಿ ಸಂಪರ್ಕಭಾಷೆಯಾಗಿ ಹಿಂದಿ ಭಾಷೆಯನ್ನೂ ಅವರು ಬೆಂಬಲಿಸಿದರು.
ಶಿಕ್ಷಣದ ಹೊಣೆಗಾರಿಕೆಯನ್ನು ಆಯಾ ರಾಜ್ಯಗಳು ವಹಿಸಿಕೊಳ್ಳಬೇಕು. ವಿಶ್ವವಿದ್ಯಾಲಯಗಳ ಪೋಷಣೆಗಾಗಿ ಕೇಂದ್ರದಲ್ಲಿ ಅನುದಾನ ಆಯೋಗ ಏರ್ಪಡಬೇಕು; ಬೇರೆ ಬೇರೆ ವಿಶ್ವವಿದ್ಯಾಲಯಗಳು ಬೇರೆಬೇರೆ ವಿಷಯಗಳಲ್ಲಿ ತಜ್ಞತೆಯನ್ನು ಸಾಧಿಸಬೇಕು; ಪದವಿ ಪ್ರದಾನಕ್ಕೆ ಮುಂಚೆ ಶಿಕ್ಷಾರ್ಥಿಗಳು ಕಡ್ಡಾಯವಾಗಿ ಕೆಲ ಕಾಲ ಯಾವುದಾದರೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಬೇಕು; – ಇಂಥ ಹಲವಾರು ಮೌಲಿಕ ಚಿಂತನೆಗಳು ಮುಖರ್ಜಿಯವರವು.
ಎಲ್ಲ ವಿಷಯಗಳ ತಾಂತ್ರಿಕ ಶಬ್ದಗಳಿಗೆ ದೇಶಭಾಷೆಯ ಪರ್ಯಾಯ ಶಬ್ದಗಳ ಕೋಶ ನಿರ್ಮಾಣ; ಬೋಧಕರಿಗೆ ಪ್ರಶಿಕ್ಷಣ; ಶಾಲೆಗಳ ಪ್ರಾಕಾರದಾಚೆಗೆ ವಿದ್ಯಾರ್ಥಿಗಳ ಸ್ವಾಸ್ಥ್ಯ ಯೋಜನೆಗಳು; ಕೃಷಿ, ಶಿಕ್ಷಣಶಾಸ್ತ್ರ ಮೊದಲಾದವಕ್ಕೆ ಸಂಬಂಧಿಸಿದ ವಿಶೇಷ ಕೋರ್ಸುಗಳು; – ಈ ಹಲವಾರು ನೂತನ ದಿಶೆಗಳಲ್ಲಿ ಮುಖರ್ಜಿ ಪಥದರ್ಶಕರಾದರು. ವಿಶ್ವವಿದ್ಯಾಲಯವನ್ನು ಸ್ವಾಯತ್ತ ಸಂಸ್ಥೆಯಾಗಿ ಉಳಿಸಲು ಅವರು ವಿಶೇಷ ಕಾಳಜಿ ವಹಿಸಿದರು.
ಸರ್ಕಾರೀ ದೂತಾವಾಸಗಳಿಗಿಂತ ಮಿಗಿಲಾಗಿ ಸ್ವಾಮಿ ವಿವೇಕಾನಂದ, ಲಾಲಾ ಹರದಯಾಲ್ ಮೊದಲಾದವರ ಅಭಿಯಾನಗಳಿಂದಲೇ ಹೊರಜಗತ್ತಿನಲ್ಲಿ ಭಾರತ ಹೆಚ್ಚಿನ ಮನ್ನಣೆ ಗಳಿಸುವಂತಾಯಿತು – ಎಂಬುದು ಡಾ|| ಶ್ಯಾಮಾಪ್ರಸಾದ ಮುಖರ್ಜಿಯವರ ವಿಶ್ಲೇಷಣೆಯಾಗಿತ್ತು. ಮುಖರ್ಜಿಯವರ ಸಂಸ್ಕøತಿ ಪರಿಜ್ಞಾನ ಎಷ್ಟು ಆಳವಾಗಿತ್ತೆಂದರೆ ಅವರು ಸಾಂಸ್ಕೃತಿಕ ಉಪನ್ಯಾಸ ಸರಣಿ ನೀಡಬೇಕೆಂದು ಅಮೆರಿಕದಿಂದ ಒತ್ತಾಯದ ಆಮಂತ್ರಣವಿತ್ತು. ಆದರೆ ಅದೇ ಸಮಯದಲ್ಲಿ ಅವರು ಕಾಶ್ಮೀರ ಸಮಸ್ಯೆಯಲ್ಲಿ ವ್ಯಸ್ತರಾಗಿ ಕೊನೆಯುಸಿರೆಳೆದರು.
ಬೌದ್ಧಧರ್ಮಪ್ರಸಾರಕ್ಕೂ ಗಣನೀಯ ಕೊಡುಗೆ ಅವರದು. ಬೌದ್ಧಧರ್ಮವು ಹಿಂದೂ ಧರ್ಮದ ಅಭಿನ್ನ ಅಂಗವೆಂದು ಸತರ್ಕವಾಗಿ ಅವರು ಪ್ರತಿಪಾದಿಸಿದರು. ಬುದ್ಧನ ಪ್ರಮುಖ ಶಿಷ್ಯರಾದ ಸಾರಿಪುತ್ರ ಮತ್ತು ಮೌದ್ಗಲ್ಯಾಯನರ ಅವಶೇಷಗಳು ಬ್ರಿಟಿಷ್ ಮ್ಯೂಸಿಯಂನಿಂದ ಪುನರ್ಲಬ್ಧವಾಗಿ ಸಾಂಚಿಯಲ್ಲಿ 1952ರ ಅಂತ್ಯದಲ್ಲಿ ಅವು ಸ್ಮಾರಕಗೊಳ್ಳಲಿದ್ದ ಸಂದರ್ಭದಲ್ಲಿ ಆ ಅವಶೇಷಗಳೊಡನೆ ಮುಖರ್ಜಿಯವರು ಆಗ್ನೇಯ ಏಶ್ಯಾದಲ್ಲೆಲ್ಲ ಪ್ರವಾಸ ಮಾಡಿ ಪ್ರವಚನಗಳನ್ನು ನೀಡಿದರು.
ಸಕ್ರಿಯ ರಾಜಕಾರಣಕ್ಕೆ
ಮುಖರ್ಜಿ ಸಕ್ರಿಯ ರಾಜಕಾರಣವನ್ನು ಪ್ರವೇಶಿಸಿದ್ದು ಹಿಂದೂ ಮಹಾಸಭೆಯ ಮೂಲಕ. ಅವರು ಸ್ವಾತಂತ್ರ್ಯವೀರ ಸಾವರ್ಕರರಿಂದ ಪ್ರಭಾವಿತರಾಗಿ ಹಿಂದೂ ಮಹಾಸಭೆಗೆ ಸೇರಿ ಅದರ ಅಧ್ಯಕ್ಷರಾಗಿದ್ದರು. ಪಂ. ಮದನಮೋಹನ ಮಾಳವೀಯರ ತರುವಾಯ ಹಿಂದೂಗಳಿಗೆ ಒಬ್ಬ ಸಮರ್ಥ ನಾಯಕರು ದೊರೆತಂತಾಯಿತೆಂದು ಸ್ವಯಂ ಗಾಂಧಿಯವರೇ ಪ್ರಶಂಸೆ ಮಾಡಿದ್ದರು. 1930-1940ರ ದಶಕಗಳಲ್ಲಿ ಕಾಂಗ್ರೆಸ್ಸಿನ ಮತ್ತು ಹಿಂದೂ ಮಹಾಸಭೆಯ ಅಧಿವೇಶನಗಳು ಒಟ್ಟೊಟ್ಟಿಗೇ ನಡೆಯುತ್ತಿದ್ದವು. ಪ್ರಮುಖರನೇಕರು ಎರಡರಲ್ಲಿಯೂ ಭಾಗವಹಿಸುತ್ತಿದ್ದರು. 1930ರ ದಶಕದಲ್ಲಿ ಈ ಎರಡು ಧಾರೆಗಳ ನಡುವೆ ‘ಅಸ್ಪøಶ್ಯತಾ ಭಾವನೆ’ ಇರಲಿಲ್ಲ. ಸ್ವಾತಂತ್ರ್ಯಪ್ರಾಪ್ತಿಯ ತರುವಾಯ ರಚಿತವಾದ ಜವಾಹರಲಾಲ್ ನೆಹರು ಸಚಿವಸಂಪುಟದಲ್ಲಿ ಮುಖರ್ಜಿಯವರ ಸೇರ್ಪಡೆಯಾದದ್ದು ಯಾರಿಗೂ ಅಚ್ಚರಿ ತರಲಿಲ್ಲ. ಸ್ವಾತಂತ್ರ್ಯಪ್ರಾಪ್ತಿಯ ತರುವಾಯ ದೇಶದ ಏಳ್ಗೆಯಲ್ಲಿ ಎಲ್ಲ ವಿಚಾರಧಾರೆಗಳವರ ಕೊಡುಗೆಗಳೂ ಅವಶ್ಯ – ಎಂಬ ಧೋರಣೆ ಆಗ ಇದ್ದಿತು.
ಆಮೇಲಿನ ದಿನಗಳಲ್ಲಿ ನೆಹರು ಧೋರಣೆಗಳಿಂದ ಭ್ರಮನಿರಸನಗೊಂಡು ಮುಖರ್ಜಿಯವರು ಕೇಂದ್ರ ಸಚಿವ ಪದವಿಗೆ ರಾಜೀನಾಮೆಯಿತ್ತು ಹೊರಬರಬೇಕಾಯಿತು. ಇದರಿಂದಾಗಿ ಅವರ ಸಾಮಾಜಿಕ ಸಂಮಾನ್ಯತೆಗೆ ಕುಂದು ಬರಲಿಲ್ಲ; ಪ್ರತಿಯಾಗಿ ಅವರ ನಿಃಸ್ಪøಹತೆಯೂ ಋಜುವರ್ತನೆಯೂ ಇನ್ನಷ್ಟು ಪ್ರಶಂಸೆಗೆ ಪಾತ್ರವಾದವು.
1930ರ ದಶಕದ ಉತ್ತರಾರ್ಧದಿಂದಲೇ ಡಾ|| ಶ್ಯಾಮಾಪ್ರಸಾದ ಮುಖರ್ಜಿಯವರ ವ್ಯಕ್ತಿತ್ವದ ಔನ್ನತ್ಯ ಇಡೀ ದೇಶದ ಗಮನ ಸೆಳೆದಿತ್ತು.
ಬಂಗಾಳವನ್ನು ಇಸ್ಲಾಮೀಕರಿಸುವ ಕಾಂಗ್ರೆಸ್ಸಿನ ಹಾಗೂ ಮುಸ್ಲಿಂ ಲೀಗಿನ ಧೋರಣೆಯ ವಿರುದ್ಧವಾಗಿ ಹೆಬ್ಬಂಡೆಯಂತೆ ನಿಂತವರು ಡಾ|| ಶ್ಯಾಮಾಪ್ರಸಾದ ಮುಖರ್ಜಿ. ಫಜ್ಲುಲ್-ಹಕ್ ನೇತೃತ್ವದಲ್ಲಿ ಕೃಷಿಕ ಪ್ರಜಾಪಕ್ಷದೊಡನೆ ಹೊಂದಾಣಿಕೆ ಏರ್ಪಡಿಸಿಕೊಂಡು ಪರ್ಯಾಯ ಪಕ್ಷ ಸಮೂಹವನ್ನು ಮುಖರ್ಜಿಯವರು ಹುಟ್ಟುಹಾಕಿ ಮುಸ್ಲಿಂ ಲೀಗಿನ ಪ್ರಾಬಲ್ಯವನ್ನು ತಡೆಗಟ್ಟುವುದರಲ್ಲಿ ಸಫಲರಾದರು. ಇಂಥ ಅವರ ಒಂದೊಂದು ಕಾರ್ಯಯೋಜನೆಯೂ ದೂರದೃಷ್ಟಿಯದೆನಿಸಿತು.
ಸ್ವಾತಂತ್ರ್ಯವೀರ ಸಾವರ್ಕರರ ಜೀವನ-ಚಿಂತನೆಗಳಿಂದ ಪ್ರಭಾವಿತರಾಗಿ 1939ರಲ್ಲಿ ಹಿಂದೂ ಮಹಾಸಭೆಯ ಸದಸ್ಯರಾಗಿ ಮರುವರ್ಷವೇ ಅದರ ಕಾರ್ಯಾಧ್ಯಕ್ಷರಾದರು. ಹಿಂದೂ ಮಹಾಸಭೆಯ ಪ್ರಮುಖರಾಗಿದ್ದಾಗಲೇ (1941) ಬಂಗಾಳದ ಫಜ್ಲುಲ್-ಹಕ್ ಸರ್ಕಾರದ ವಿತ್ತ ಸಚಿವರಾದರು; 1942ರ ‘ಭಾರತ್ ಛೋಡೋ’ಚಳವಳಿಯ ಸಂದರ್ಭದಲ್ಲಿ ಆಂಗ್ಲ ಸರ್ಕಾರದ ದಮನನೀತಿಗೆ ಪ್ರತಿಭಟಿಸಿ ಮಂತ್ರಿ ಪದವಿಗೆ ರಾಜೀನಾಮೆಯಿತ್ತರು. ಆ ಸಂದರ್ಭದಲ್ಲಿ ಗವರ್ನರ್ ಜಾನ್ ಹರ್ಬರ್ಟ್ಗೆ ಮುಖರ್ಜಿಯವರು ಬರೆದ ಪತ್ರ (16-11-1942) ಒಂದು ಅಪೂರ್ವ ದಾಖಲೆ.
ಹಿಂದೂ ಮಹಾಸಭೆಯ ನಾಯಕರಾಗಿದ್ದರೂ ಡಾ|| ಶ್ಯಾಮಾಪ್ರಸಾದ ಮುಖರ್ಜಿಯವರು ಸ್ಟಾಫರ್ಡ್ ಕ್ರಿಪ್ಸ್ ಸಂಧಾನದ ಸಮಯದಲ್ಲಿ ಕಾಂಗ್ರೆಸ್ಸಿನ ನಿಲವನ್ನು ಪ್ರಬಲವಾಗಿ ಪ್ರತಿಪಾದಿಸಿದುದು ಕ್ರಿಪ್ಸ್ರಿಗೆ ಆಶ್ಚರ್ಯವನ್ನುಂಟುಮಾಡಿತು. ಇದರ ಬಗ್ಗೆ ಕ್ರಿಪ್ಸ್ ಉದ್ಗರಿಸಿ “ನಿಮ್ಮ ಪಕ್ಷವೂ ಕಾಂಗ್ರೆಸ್ಸೂ ಪರಸ್ಪರ ವಿರೋಧಿಗಳಲ್ಲವೆ?” ಎಂದಾಗ ಮುಖರ್ಜಿ ನಸುನಕ್ಕು “True, but that is a quarrel as between a brother and brother. Our goal is the same” ಎಂದು ಉತ್ತರಿಸಿದ್ದರು.
ದೇಶವಿಭಜನೆಗೆ ವಿರೋಧ
ಕಾಂಗ್ರೆಸ್ ದೇಶವಿಭಜನೆಯನ್ನು ಒಪ್ಪುವುದಿಲ್ಲವೆಂಬ ಸರ್ದಾರ್ ಪಟೇಲ್ರ ಆಶ್ವಾಸನೆಯ ಆಧಾರದ ಮೇಲೆ 1946ರಲ್ಲಿ ಡಾ|| ಶ್ಯಾಮಾಪ್ರಸಾದ ಮುಖರ್ಜಿ ಕಾಂಗ್ರೆಸ್ಸನ್ನು ಬೆಂಬಲಿಸಿದ್ದರು. ಆದರೆ ಕಾಂಗ್ರೆಸ್ ಕಾರ್ಯಕಾರಿಣಿ ಆ ವೇಳೆಗೇ ಅಂತರಂಗದಲ್ಲಿ ವಿಭಜನೆಯನ್ನೊಪ್ಪಲು ಸಿದ್ಧರಾಗಿಬಿಟ್ಟಿದ್ದರೆಂಬುದು ತಿಳಿದು ಮುಖರ್ಜಿಯವರು ತೀವ್ರ ಹತಾಶೆಗೊಂಡರು. ಅಲ್ಲಿಂದಾಚೆಗೆ ವಿಭಜನೆಯಿಂದಾಗಲಿದ್ದ ಹಾನಿಗೆ ಜನರ ಗಮನ ಸೆಳೆಯಲು ತಮ್ಮೆಲ್ಲ ಶಕ್ತಿಯನ್ನು ವಿನಿಯೋಗಿಸಿದರು. ಬಂಗಾಳದ ಮತ್ತು ಪಂಜಾಬಿನ ಅರ್ಧಭಾಗವನ್ನಾದರೂ ಭಾರತಕ್ಕೆ ಉಳಿಸಿದುದರಲ್ಲಿ ಡಾ|| ಶ್ಯಾಮಾಪ್ರಸಾದ ಮುಖರ್ಜಿಯವರ ಯೋಗದಾನ ಮಹತ್ತ್ವದ್ದಾಯಿತು. ವಿಭಜನೆ ಅನಿವಾರ್ಯವೆಂಬ ಸ್ಥಿತಿ ತಲೆದೋರಿದಲ್ಲಿ ಬಂಗಾಳವು ವಿಭಜನೆಗೊಳ್ಳಲೆಂಬ ಮುಖರ್ಜಿಯವರ ನಿಲವು ಆಗ ಸ್ವಲ್ಪ ಮಟ್ಟಿಗೆ ಟೀಕೆಗೊಳಗಾಯಿತಾದರೂ ಕ್ರಮೇಣ ಅದರ ತಾರ್ಕಿಕತೆ ಜನರಿಗೆ ಮನವರಿಕೆಯಾಯಿತು. ಮುಖರ್ಜಿಯವರ ಆ ದಿನಗಳ ಹೇಳಿಕೆ ಸುಪ್ರಸಿದ್ಧವಾಯಿತು: “The Congress partitioned India, and I partitioned Pakistan.”
ಭಾರತ ವಿಭಜನೆಯ ಘೋಷಣೆಯಾದೊಡನೆ ನವಾಖಲಿಯಲ್ಲಿ ಮುಸ್ಲಿಂ ಬರ್ಬರತೆ ಹೊರಹೊಮ್ಮಿತು. ಅಮಾನವೀಯ ಅತ್ಯಾಚಾರ ನಡೆಯಿತು. ಹಿಂದೂ ತರುಣಿಯರನ್ನು ನಗ್ನಗೊಳಿಸಿ ಅವರ ಮೈಮೇಲೆ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಹಚ್ಚೆ ಹೊಯ್ಯಲಾಯಿತು. ಎಳೆಮಕ್ಕಳ ಕತ್ತು ಹಿಸುಕಿ ಅವರ ಶವಗಳನ್ನು ಅವರ ತಾಯಂದಿರ ಮೇಲೆ ಎಸೆಯಲಾಯಿತು.
ಈ ಸುದ್ದಿ ಬಂದೊಡನೆ ಡಾ|| ಶ್ಯಾಮಾಪ್ರಸಾದ ಮುಖರ್ಜಿ ಪ್ರಾಣದ ಹಂಗು ತೊರೆದು ಅಲ್ಲಿಗೆ ಹೋದರು; ಆ ಪೈಶಾಚಿಕತೆಯನ್ನು ಕಣ್ಣಿಂದ ಕಂಡರು. ಅಲ್ಲಿಯ ಹಿಂದೂ ಪ್ರಮುಖರ ಭೇಟಿಯಾದರು. ಅಗ್ರಗಣ್ಯ ಮುಸ್ಲಿಂ ನಾಯಕರೊಬ್ಬರಲ್ಲಿಗೆ ಹೋಗಿ ಅವರಿಗೆ ಹೇಳಿದರು:
“ಈ ರಾಕ್ಷಸೀ ಕೃತ್ಯಗಳು ನನ್ನನ್ನು ದಿಗ್ಭ್ರಮೆಗೊಳಿಸಿವೆ. ನಿಮ್ಮೆಲ್ಲರ ಮೌನ ಅನುಮೋದನೆಯಿಲ್ಲದೆ ಇವೆಲ್ಲ ನಡೆಯುವುದು ಅಶಕ್ಯ. ನೀವು ಇದನ್ನು ಚೆನ್ನಾಗಿ ಗುರುತಿಟ್ಟುಕೊಳ್ಳಿರಿ: ಪಶ್ಚಿಮ ಬಂಗಾಳದಲ್ಲಾಗಲಿ ಬಿಹಾರದಲ್ಲಾಗಲಿ ಎಲ್ಲಿಯಾದರೂ ನವಾಖಲಿ ಘಟನೆಗಳಿಗೆ ಪ್ರತಿಕ್ರಿಯೆ ಶುರುವಾದರೆ ಒಬ್ಬನೇ ಒಬ್ಬ ಮುಸ್ಲಿಮನೂ ಜೀವ ಉಳಿಸಿಕೊಳ್ಳಲಾರ. ಏಕೆಂದರೆ ಇದುವರೆಗೆ ಮುಸ್ಲಿಮರು ಸುರಕ್ಷಿತರಾಗಿದ್ದುದು ಅವರ ಹೊಣೆಯನ್ನು ಹಿಂದೂಗಳು ವಹಿಸಿಕೊಂಡಿದ್ದುದರಿಂದಲೇ.”
ಈ ಮಾತಿನಿಂದ ವಿಚಲಿತರಾದ ಮುಸ್ಲಿಂ ನಾಯಕರು ಮುಖರ್ಜಿಯವರ ಸಂಗಡ ಪ್ರಕ್ಷುಬ್ಧ ಪ್ರದೇಶಗಳಿಗೆ ಹೋದರು. ಮುಖರ್ಜಿಯವರ ಪ್ರಯತ್ನದಿಂದಾಗಿ ಹಲವು ನೂರು ಭಾರತೀಯ ಮಹಿಳೆಯರ ಪ್ರಾಣವೂ ಮಾನವೂ ಉಳಿಯಿತು. ಅವರನ್ನೆಲ್ಲ ಕೊಲ್ಕತ್ತಾಕ್ಕೆ ಕಳಿಸಲಾಯಿತು.
ಮುಖರ್ಜಿ ನವಾಖಲಿಯಿಂದ ಹಿಂದಿರುಗಿ ಗಾಂಧಿಯವರನ್ನು ಭೇಟಿಯಾಗಿ ಅವರಿಗೆ ವಸ್ತುಸ್ಥಿತಿಯನ್ನು ತಿಳಿಸಿದರು; ನವಾಖಲಿಗೆ ಹೋಗಿ ಅಲ್ಲಿಯ ಹಿಂದೂಗಳನ್ನು ಸಾಂತ್ವನಗೊಳಿಸುವಂತೆ ಕೋರಿದರು. ಅನಂತರ ಗಾಂಧಿಯವರು ಆ ಪ್ರದೇಶಗಳಿಗೆ ಹೋಗಿ ನರಸಂಹಾರವನ್ನು ನಿವಾರಿಸಲು ಯತ್ನಿಸಿದರು.
ಪಾಕಿಸ್ತಾನದಿಂದ ನಿರ್ವಾಸಿತರಾದ ಹಿಂದೂಗಳ ಸಂಖ್ಯೆಗನುಗುಣವಾಗಿ ಅವರ ವಸತಿಗೆ ಬೇಕಾದಷ್ಟು ಪ್ರಮಾಣದ ಭೂಭಾಗವನ್ನು ಪೂರ್ವಪಾಕಿಸ್ತಾನವು ಭಾರತಕ್ಕೆ ವರ್ಗಾಯಿಸುವಂತೆ ಒತ್ತಾಯ ಮಾಡಬೇಕೆಂಬ ಸರ್ದಾರ್ ಪಟೇಲ್ರ ಸೂತ್ರವನ್ನು ನೆಹರು ತಿರಸ್ಕರಿಸಿದರು. ಹೀಗೆ ಕ್ರಮೇಣ ನೆಹರುರೊಡನೆ ಮುಖರ್ಜಿಯವರ ಅಭಿಪ್ರಾಯಭೇದ ಬಲಿಯುತ್ತಹೋಯಿತು. ರಾಜ್ಯ ವಿಧಾನಸಭೆಗಳಲ್ಲಿಯೂ ಸರ್ಕಾರೀ ಸೇವಾವಲಯದಲ್ಲಿಯೂ ಮುಸ್ಲಿಮರಿಗೆ ಸ್ಥಾನಗಳನ್ನು ಮೀಸಲಿಡಬೇಕೆಂಬ 1950ರ ‘ನೆಹರು-ಲಿಯಾಖತ್ ಒಪ್ಪಂದ’ ದಿಂದ ಈ ಅಂಶಗಳನ್ನು ಹೊರಗಿರಿಸಿದುದು ಮುಖರ್ಜಿಯವರ ಒತ್ತಾಯದಿಂದಲೇ.
ಕೇಂದ್ರ ಸಂಪುಟ ಸದಸ್ಯ
1949-53ರ ವರ್ಷಗಳಲ್ಲಿ ಜವಾಹರಲಾಲ್ ನೆಹರುರವರ ವ್ಯಕ್ತಿಪ್ರತಿಷ್ಠೆ ಉಚ್ಚ ಸ್ತರದಲ್ಲಿತ್ತು. ಭಾರತದ ಅಗ್ರನಾಯಕನಲ್ಲದೆ ಜಾಗತಿಕ ನಾಯಕನೆಂದೂ ಕರೆಯಿಸಿಕೊಳ್ಳುವ ಹಂಬಲದಲ್ಲಿ ಅವರಿದ್ದರು. ಅವರ ದೋಷಯುಕ್ತ ಧೋರಣೆಗಳನ್ನು ಕಂಠೋಕ್ತವಾಗಿ ಟೀಕಿಸುವ ಎದೆಗಾರಿಕೆಯಿದ್ದ ವಿರಳರು, ಡಾ|| ಶ್ಯಾಮಾಪ್ರಸಾದ ಮುಖರ್ಜಿ.
ಸ್ವತಂತ್ರ ಭಾರತದ ಪ್ರಪ್ರಥಮ ಸರ್ಕಾರದ ಸಂಪುಟದಲ್ಲಿ ಗಾಂಧಿಯವರ ಆಗ್ರಹದ ಸಲಹೆಯಂತೆ ಡಾ|| ಶ್ಯಾಮಾಪ್ರಸಾದ ಮುಖರ್ಜಿಯವರು ಸೇರಿದರು. ಉದ್ಯಮ ಮತ್ತು ಸರಬರಾಜಿನಂಥ (Industry and Supplies) ಪ್ರಮುಖ ಸಚಿವಖಾತೆಯನ್ನು ಅವರಿಗೆ ವಹಿಸಲಾಯಿತೆಂಬುದು ಅವರ ತಜ್ಞತೆಯ ಬಗ್ಗೆ ಎಲ್ಲರಲ್ಲೂ ಇದ್ದ ವಿಶ್ವಾಸವನ್ನು ಸೂಚಿಸುತ್ತದೆ.
ಕಾಶ್ಮೀರದಂತೆ ಹೈದರಾಬಾದ್ ಸೇರ್ಪಡೆಯನ್ನೂ ಅನಿಶ್ಚಿತತೆಗೆ ತಳ್ಳಲು ನೆಹರು ಹವಣಿಸಿದಾಗ ಈ ವಿಷಯವನ್ನು ಸರ್ದಾರ್ ಪಟೇಲರಿಗೆ ವಹಿಸಬೇಕೆಂದು ಮುಖರ್ಜಿ ಕೇಂದ್ರ ಸಂಪುಟದ ಸಭೆಯಲ್ಲಿ ಆಗ್ರಹಿಸಿದರು. ಮುಖರ್ಜಿ, ಪಟೇಲ್ ಇಬ್ಬರನ್ನೂ ಎದುರಿಸಲು ನೆಹರು ಸಮರ್ಥರಿರಲಿಲ್ಲ. ಹೀಗೆ ಪಟೇಲ್ ಅದನ್ನು ವಹಿಸಿಕೊಂಡು ಬಗೆಹರಿಸಿದರು. ಏತನ್ಮಧ್ಯೆ ಪಟೇಲರ ಮಾರ್ಗದಲ್ಲಿ ನೆಹರು ಹಲವಾರು ಕಂಟಕಗಳನ್ನು ಒಡ್ಡಿದರೂ, ಅಂತಿಮವಾಗಿ ಹೈದರಾಬಾದಿನ ಸೇರ್ಪಡೆಯನ್ನು ಸೇನಾಚರಣೆಯ ಮೂಲಕ ಪಟೇಲ್ ಸಾಧಿಸಿದರು.
ನೆಹರು ಸಂಪುಟದಿಂದ ಡಾ|| ಶ್ಯಾಮಾಪ್ರಸಾದ ಮುಖರ್ಜಿ ನಿರ್ಗಮಿಸಿದ್ದು (ಏಪ್ರಿಲ್ 1950), ಭಾರತೀಯ ಜನಸಂಘದ ರಚನೆ (1951) – ಇದು ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಇತಿಹಾಸಕ್ಕೇ ಹೊಸ ತಿರುವನ್ನಿತ್ತಿತು. ಭಾರತೀಯ ಜನಸಂಘದ ಪ್ರಥಮ ಅಧ್ಯಕ್ಷರಾಗಿ ಮುಖರ್ಜಿ 1951ರ ಅಕ್ಟೋಬರ್ 11ರಂದು ಘೋಷಿತರಾದರು; 1952ರಲ್ಲಿ ಮರು-ಆಯ್ಕೆಯಾದರು. ರಾಷ್ಟ್ರ ಸ್ತರದ ರಾಜಕೀಯ ಪಕ್ಷವಾಗಿ ಭಾರತೀಯ ಜನಸಂಘ ರೂಪತಳೆಯುವುದಕ್ಕೆ ಭದ್ರ ಬುನಾದಿ ಹಾಕಿದವರು ಮುಖರ್ಜಿ.
ಹಿಂದೂ ಮಹಾಸಭೆಯ ರಚನೆಯ ಪ್ರಾಕಾರ ಹೆಚ್ಚು ವ್ಯಾಪಕಗೊಳ್ಳಬೇಕೆಂಬ ತಮ್ಮ ಸಲಹೆಗೆ ಅನುಮೋದನೆ ದೊರೆಯದಾದಾಗ ಡಾ|| ಶ್ಯಾಮಾಪ್ರಸಾದ ಮುಖರ್ಜಿ ಆ ವೇದಿಕೆಯಿಂದ ದೂರ ಸರಿದರು. ಕಾಂಗ್ರೆಸ್ಸೇತರ ರಾಷ್ಟ್ರೀಯ ಪಕ್ಷವೊಂದರ ಅನಿವಾರ್ಯತೆಯನ್ನು ಮನಗಂಡು ಅವರು ನಡೆಸಿದ ಪ್ರಯತ್ನದ ಫಲವಾಗಿ ರೂಪ ತಳೆದದ್ದು ಭಾರತೀಯ ಜನಸಂಘ (ಇಂದಿನ ಭಾರತೀಯ ಜನತಾ ಪಕ್ಷದ ಪೂರ್ವರೂಪ). ದೇಶದ ಎಲ್ಲ ರಾಷ್ಟ್ರವಾದಿ ಶಕ್ತಿಗಳ ಒಮ್ಮುಖ ಸಂಘಟನೆ ಅದಾಗಬೇಕೆಂಬುದು ಅವರಿಗಿದ್ದ ಆಶಯ.
ನೆಹರುರವರ ಮುಸ್ಲಿಂ ತುಷ್ಟೀಕರಣಕ್ಕೆ ವಿರೋಧ
1952ರ ಸಾರ್ವತ್ರಿಕ ಚುನಾವಣೆಯ ಭಾಷಣಗಳಲ್ಲಿ ನೆಹರು ಭಾರತೀಯ ಜನಸಂಘವನ್ನು ‘ಕಾಮ್ಯುನಲ್’(Communal) ಎಂದು ಜರೆದುದಕ್ಕೆ ಉತ್ತರವಾಗಿ ಮುಖರ್ಜಿ ವಾಕ್ಪ್ರಹಾರ ಮಾಡಿದರು:
“[The Congress] surrendered itself during the last 35 years at the feet of the communal leaders…. Did you fight against the Communal Award? Who gave the communal percentages for the purpose of having some pact with the Muslim League? Who agreed to partition the country?….
“If we feel with and attempt to unite 30 crores of Hindus living in India that have been liberated after a thousand years… if we try to recover our lost
position in a manner which is 100 percent consistent with the dynamic principles of Hinduism for which Swami Vivekananda stood, I am proud to be a communalist.”
ನೆಹರುರವರ ಮುಸ್ಲಿಂ ತುಷ್ಟೀಕರಣ ಧೋರಣೆಯ ಬಗ್ಗೆ ಮುಖರ್ಜಿ ಹೇಳಿದರು:
“What right has he to appease [Muslims] at the cost of the nation? It is a question of the honour and self-respect of India.” ….
“The Prime Minister very often says he believes in healing process.
Undoubtedly. Healing by what means? Healing by curing the diseases? If there is a cancerous growth, will you put sandal oil on the cancer and heat it? You will have to go to the root of it. You will have to appreciate what the disease is.”
ಪೂರ್ವ ಪಾಕಿಸ್ತಾನದಲ್ಲಿ ಹಿಂದೂಗಳು ಎದುರಿಸುತ್ತಿದ್ದ ನರಕಯಾತನೆಯನ್ನು ಉಲ್ಲೇಖಿಸಿ ಮುಖರ್ಜಿ ಹೇಳಿದರು:
“Until you can go and settle there with your wives and daughters, you cannot realize the agony of millions.”
ವಿರೋಧಪಕ್ಷ ನಾಯಕ
1952ರ ಲೋಕಸಭೆಯ ಚುನಾವಣೆಯಲ್ಲಿ ಡಾ|| ಶ್ಯಾಮಾಪ್ರಸಾದ ಮುಖರ್ಜಿ ಮತ್ತು ಇನ್ನಿಬ್ಬರು ಸದಸ್ಯರಷ್ಟೆ ಭಾರತೀಯ ಜನಸಂಘದಿಂದ ಆಯ್ಕೆಗೊಂಡರು. ಆದರೆ ಮುಖರ್ಜಿಯವರ ವ್ಯಕ್ತಿತ್ವದ ಸಮುನ್ನತಿ ಈ ಸಂಖ್ಯೆಗಳನ್ನು ಆಧರಿಸಿರಲಿಲ್ಲ. ಆಳುವ ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳವರ ಅಸೀಮ ಗೌರವವನ್ನು ಮುಖರ್ಜಿ ಗಳಿಸಿಕೊಂಡಿದ್ದರು – ತಮ್ಮ ಧ್ಯೇಯವಾದ ಹಾಗೂ ಜನಾಭಿಮುಖ ಕಾರ್ಯಗಳಿಂದಾಗಿ.
ಮುಖರ್ಜಿಯವರು ಸಂಸತ್ತಿನಲ್ಲಿ ಮೆರೆದ ವಿಶ್ಲೇಷಣನಿಶಿತತೆ ಮತ್ತು ಮಂಡನೆಯ ಪರಿಸ್ಫುಟತೆ ಎಷ್ಟು ಮೇಲ್ಮಟ್ಟದ್ದಿತ್ತೆಂದರೆ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯು “The mantle of Sardar Patel has fallen on Dr. Shyama prasad Mookerjee” ಎಂದು ವ್ಯಾಖ್ಯೆ ಮಾಡಿತ್ತು. ‘The Lion of Parliament’ ಎಂಬ ಅಭಿಧಾನ ಅವರ ಹೆಸರಿಗೆ ಅಂಟಿಕೊಂಡು ಆ ದಿನಗಳ ಪತ್ರಿಕೆಗಳಲ್ಲಿ ಪದೇ ಪದೇ ಬಳಕೆಯಾಗುತ್ತಿತ್ತು.
ಅಂದಿನ ದಿನಗಳಲ್ಲಿ ಕಾಂಗ್ರೆಸ್ಸೇತರ ಪಕ್ಷಗಳೆಲ್ಲ ಬಹುಮಟ್ಟಿಗೆ ಶೈಶವಾವಸ್ಥೆಯಲ್ಲಿದ್ದವು. ಹೀಗಿದ್ದರೂ ಲೋಕಸಭೆಯಲ್ಲಿ ವಿವಿಧ ಪಕ್ಷಗಳ ಕೋರಿಕೆಯಂತೆ ಮುಖರ್ಜಿಯವರೇ ಅನಧಿಕೃತ ವಿರೋಧಪಕ್ಷ ನಾಯಕರೆನಿಸಿದುದು ಅವರ ವ್ಯಕ್ತಿಪ್ರಭಾವದ ದ್ಯೋತಕ. ಆ ಸಂದರ್ಭದಲ್ಲಿ ಅಟಲ್ಜೀ ಉದ್ಗರಿಸಿದ್ದರು: ‘ವನದಲ್ಲಿ ಸಿಂಹಕ್ಕೆ ಯಾರು ಕಿರೀಟ ತೊಡಿಸುತ್ತಾರೆ? ಅದು ಸ್ವಯಂ ರಾಜಪದವಿಯನ್ನು ಅಲಂಕರಿಸಿಬಿಡುತ್ತದೆ.’
ಶ್ರೇಷ್ಠ ಸಾಂಸದ
ತಮ್ಮ ಪ್ರಭಾವವನ್ನು ಬಳಸಿ ಮುಖರ್ಜಿಯವರು ಪಂಜಾಬಿನ ಅಕಾಲಿಕದಳ, ಒಡಿಶಾದ ಗಣತಂತ್ರ ಪರಿಷದ್ ಮೊದಲಾದ ಕಾಂಗ್ರೆಸ್ಸೇತರ ಪಕ್ಷಗಳನ್ನು ಒಗ್ಗೂಡಿಸಿ ರಾಷ್ಟ್ರೀಯ ಲೋಕತಾಂತ್ರಿಕ ಮೋರ್ಚಾ (ನ್ಯಾಷನಲ್ ಡೆಮೊಕ್ರ್ಯಾಟಿಕ್ ಫ್ರಂಟ್) ರಚಿಸಿದರು. ಅವರ ಹಿಂದಿನ ಹಲವು ಸಾಧನೆಗಳಂತೆ ಇದು ಒಂದು ಪ್ರಥಮವೆನಿಸಿತು. ಗೌಣ ವಿಷಯಗಳಲ್ಲಿ ಮತಭೇದಗಳಿದ್ದರೂ ಒಟ್ಟಾರೆ ರಾಷ್ಟ್ರೀಯತಾ-ಪರ ಪಕ್ಷಗಳ ನಡುವೆ ತಾತ್ತ್ವಿಕ ಹೊಂದಾಣಿಕೆ ಸಾಧ್ಯ ಮತ್ತು ಅನಿವಾರ್ಯ ಕೂಡ ಎಂಬ ಚಿಂತನೆಯ ಆದ್ಯಪ್ರವರ್ತಕರು ಮುಖರ್ಜಿಯವರು.
ನೆಹರು ಧೋರಣೆಗಳನ್ನು ಸಂಸತ್ತಿನಲ್ಲಿ ನಿರ್ದಾಕ್ಷಿಣ್ಯವಾಗಿ ಟೀಕಿಸುವಾಗಲೂ ಮುಖರ್ಜಿಯವರು ಸಭಾಕಲಾಪಗಳು ಉನ್ನತ ಸ್ತರದಲ್ಲಿ ನಡೆಯುವಂತೆ ಕಾಳಜಿ ವಹಿಸಿ ಮೇಲ್ಪಂಕ್ತಿಯಾದರು.
ದೇಶಭಕ್ತರ ಸಲಹೆಗಳನ್ನೂ ಪರಾಮರ್ಶೆಗಳನ್ನೂ ಅಧಿಕಾರಾರೂಢರು ಸ್ನೇಹಪೂರ್ವಕ ಸ್ವೀಕರಿಸುವ ಸಭ್ಯತೆಯನ್ನು ಬೆಳೆಸಿಕೊಳ್ಳಬೇಕೆಂದೂ ಇದರಲ್ಲಿ ಅಹಮಿಕೆ ಸಲ್ಲದೆಂದೂ ಡಾ|| ಶ್ಯಾಮಾಪ್ರಸಾದ ಮುಖರ್ಜಿ ಸಂಸತ್ತಿನಲ್ಲಿ ತಮ್ಮ ಮೊತ್ತಮೊದಲ ಭಾಷಣದಲ್ಲಿಯೇ (21-5-1952) ಒತ್ತಿ ಹೇಳಿದರು.
1952ರ ನವೆಂಬರ್ 15ರಂದು ಡಾ|| ಶ್ಯಾಮಾಪ್ರಸಾದ ಮುಖರ್ಜಿಯವರು ಸಂಸತ್ತಿನಲ್ಲಿ ಮಾಡಿದ ಭಾಷಣ ಭಾರತದ ಸಾಂಸದಿಕ ಇತಿಹಾಸದ ಒಂದು ಮೈಲಿಗಲ್ಲು. ಪಾಕಿಸ್ತಾನದಲ್ಲಿದ್ದ ಹಿಂದೂಗಳ ಬವಣೆ ಕುರಿತ ಅವರ ಒಂದೊಂದು ಮಾತೂ ಕೂರಲಗಿನಂತಿತ್ತು. ಅದಾದ ಎಷ್ಟೊ ವರ್ಷಗಳ ಕಾಲ ಮುಖರ್ಜಿಯವರ ಆ ಸಿಂಹಗರ್ಜನೆಯ ಸ್ಮರಣೆ ಆಗುತ್ತಿತ್ತು:
“We accepted Pakistan under certain basic conditions. When that
basic condition is not observed by Pakistan, then the very basis of
partition disappears. From that point of view the partition stands
annulled and India is not bound by her commitments.”
1947ರ ಅಕ್ಟೋಬರಿನಲ್ಲಿ ಕಾಶ್ಮೀರದ ಗೊಂದಲಮಯ ಪರಿಸ್ಥಿತಿಯ ಲಾಭ ಪಡೆದು ಪಾಕಿಸ್ತಾನ ಆಕ್ರಮಣ ನಡೆಸಿದ್ದು, ಭಾರತದೊಡನೆ ವಿಲೀನಪತ್ರಕ್ಕೆ ಕಾಶ್ಮೀರ ಮಹಾರಾಜರು ಹಸ್ತಾಕ್ಷರ ಮಾಡಿದ್ದು, ಭಾರತೀಯ ಸೈನಿಕರು ಪ್ರಾಣಗಳನ್ನು ಪಣವಾಗಿಟ್ಟು ಸೆಣೆಸಿ ಕಾಶ್ಮೀರವನ್ನು ಉಳಿಸಿದ್ದು, ಯಾರ ಸಲಹೆಯನ್ನೂ ಕೇಳದೆಯೇ ನೆಹರು ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಯ ಬಾಗಿಲಿಗೊಯ್ದದ್ದು, ಶೇಖ್ ಅಬ್ದುಲ್ಲಾ ರಾಷ್ಟ್ರಹಿತವನ್ನು ಪೂರ್ಣ ಅಲಕ್ಷಿಸಿ ವಿದೇಶಗಳ ಬೆಂಬಲ ಪಡೆಯಲು ಉಜ್ಜುಗಿಸಿದ್ದುದು ಗುಪ್ತಚರ ವಿಭಾಗದಿಂದ ತಿಳಿದುಬಂದಾಗಲೂ ನೆಹರು ನಿಷ್ಕ್ರಿಯರಾಗಿದ್ದುದು, ಶೇಖ್ ಕಾಂಗ್ರೆಸ್ಸಿನ ಮೇಲೆಯೇ ಸಮರ ಸಾರಿದುದು (“ಯಾವ ಕಾಶ್ಮೀರಿ ಮುಸಲ್ಮಾನನೂ ಕಾಫಿರರ ಪಕ್ಷವಾದ ಕಾಂಗ್ರೆಸ್ಸಿಗೆ ಸೇರಬಾರದು; ಅದು ಪಾಪ”) – ಇದೆಲ್ಲ ಇತಿಹಾಸ.
ಕಾಶ್ಮೀರ ಉಳಿಸಲು ಸಂಘರ್ಷ
ಪ್ರೇಮನಾಥ ಡೋಗ್ರಾ ನೇತೃತ್ವದ ಪ್ರಜಾಪರಿಷದ್ ಆಂದೋಲನ ಅನಿವಾರ್ಯವಾದದ್ದು ಹೀಗೆ. ಅದು ಭಾರತದ ಅಖಂಡತೆಗಾಗಿ ನಡೆದ ಆಂದೋಲನ. ಯಾವ ಕ್ರಮಗಳನ್ನು ರಾಷ್ಟ್ರದ ಪ್ರಧಾನಿಯಾಗಿ ನೆಹರು ಕೈಗೊಳ್ಳಬೇಕಾಗಿತ್ತೋ ಆ ದಿಶೆಯಲ್ಲಿ ಪ್ರಜಾಪರಿಷದ್ ಉದ್ಯುಕ್ತವಾದುದನ್ನು ನೆಹರು ನ್ಯಾಯವಾಗಿ ಸ್ವಾಗತಿಸಬೇಕಾಗಿತ್ತು. ಆದರೆ ನೆಹರು ಅದಕ್ಕೆ ವಿರುದ್ಧ ನಿಲವನ್ನೇ ತಳೆದರು. ತಮ್ಮ ಬಣ್ಣ ಬಯಲಾದ ಮೇಲೆ ಶೇಖ್ ಅಬ್ದುಲ್ಲಾ ದೆಹಲಿಗೆ ಮಾತುಕತೆಗಾಗಿ ಬರಲು ಹಿಂದೆಗೆದರು; ನೆಹರು ಶೇಖರನ್ನು ಓಲೈಸುವುದಕ್ಕಾಗಿ ತಾವೇ ಶ್ರೀನಗರಕ್ಕೆ ಹೋದರು!
‘ಏಕ್ ನಿಶಾನ್, ಏಕ್ ವಿಧಾನ್, ಏಕ್ ಪ್ರಧಾನ್’ ಘೋಷಣೆಯೊಂದಿಗೆ ಪ್ರಜಾಪರಿಷದ್ 1949ರಿಂದಲೇ ಆಂದೋಲನವನ್ನು ಆರಂಭಿಸಿತ್ತು. ಅದರ ಅಧ್ಯಕ್ಷ ಪ್ರೇಮನಾಥ ಡೋಗ್ರಾರನ್ನು ಕಾಶ್ಮೀರ ಸರ್ಕಾರ ಬಂಧಿಸಿತ್ತು. 1952ರಲ್ಲಿ ಆಂದೋಲನದ ನೇತೃತ್ವವನ್ನು ಡಾ|| ಶ್ಯಾಮಾಪ್ರಸಾದ ಮುಖರ್ಜಿ ವಹಿಸಿಕೊಂಡು ಮುನ್ನಡೆಸದಿದ್ದಿದ್ದರೆ ಜಮ್ಮು-ಕಾಶ್ಮೀರ ರಾಜ್ಯ ಪಾಕಿಸ್ತಾನಕ್ಕೆ ಸೇರಿಹೋಗುತ್ತಿತ್ತು, ಇಲ್ಲವೆ ಸ್ವತಂತ್ರ ದೇಶವಾಗಿ ಘೋಷಿತವಾಗುತ್ತಿತ್ತು. ಜಮ್ಮು-ಕಾಶ್ಮೀರ ಭಾರತದಲ್ಲಿ ಉಳಿದುದರ ಕೀರ್ತಿ ಸಲ್ಲಬೇಕಾದ್ದು ಪ್ರಮುಖವಾಗಿ ಡೋಗ್ರಾ ಮತ್ತು ಮುಖರ್ಜಿಯವರಿಗೆ.
ನೆಹರುರವರ ಶೇಖ್ ಮೋಹ
ಭಾರತದೊಡನೆ ಕಾಶ್ಮೀರದ ಪೂರ್ಣ ವಿಲೀನಕ್ಕೆ ಅಡ್ಡಿಯಾಗಿದ್ದ ಏಕೈಕ ಸಂಗತಿಯೆಂದರೆ ನೆಹರುರಿಗೆ ಶೇಖ್ ಅಬ್ದುಲ್ಲಾರ ಬಗ್ಗೆ ಇದ್ದ ವಿಚಾರಶೂನ್ಯ ಮೋಹ ಮತ್ತು ಇದರಿಂದಾಗಿ ಮಹಾರಾಜ ಹರಿಸಿಂಗ್ರನ್ನು ನೆಹರು ಶತ್ರುವಾಗಿ ಪರಿಗಣಿಸತೊಡಗಿದ್ದುದು.
ಆದರೆ ಶೇಖ್ ಅಬ್ದುಲ್ಲಾರಿಗೆ ನೆಹರು ಬಗ್ಗೆ ಮೋಹವೇನಿರಲಿಲ್ಲ. ಅವರು ಚಾಣಾಕ್ಷತೆಯಿಂದ ನೆಹರುರನ್ನು ಬಳಸಿಕೊಂಡರಷ್ಟೆ. ಪಾಕಿಸ್ತಾನ, ಭಾರತ-ಎರಡರಿಂದಲೂ ಕಾಶ್ಮೀರವನ್ನು ಸ್ವತಂತ್ರವಾಗುಳಿಸಿ ತಾವು ಈ ‘ಆಜಾದ್ ಕಾಶ್ಮೀರ’ದ ಸಾಮ್ರಾಟರಾಗಬೇಕೆಂಬ ದಿಶೆಯಲ್ಲಿಯೇ ಅವರು ವರ್ಷಗಳುದ್ದಕ್ಕೂ ಪ್ರಯತ್ನಶೀಲರಾಗಿದ್ದರು.
ಶೇಖ್ರ ಸಖ್ಯಕ್ಕೆ ನೆಹರು ಎಷ್ಟುಮಟ್ಟಿಗೆ ಬಲಿಯಾಗಿದ್ದರೆಂದು ಸೂಚಿಸುವ ಪುರಾವೆಗಳಿಗೆ ಕೊರತೆಯಿಲ್ಲ.
ಕಾಶ್ಮೀರದ ಮಹಾರಾಜ ಹರಿಸಿಂಗ್ರ ವಿರುದ್ಧ ‘ಕಾಶ್ಮೀರ್ ಛೋಡೋ’ ಆಂದೋಲನ ನಡೆಸಿದ್ದ ಶೇಖ್ರನ್ನು ಮಹಾರಾಜರ ಸರ್ಕಾರ 1946ರ ಮೇ ತಿಂಗಳಲ್ಲಿ ಬಂಧಿಸಿತ್ತು. ಇದು ತಿಳಿದೊಡನೆ
ನೆಹರು ಹುಚ್ಚನಂತಾದರು. ಅದೇ ಸಮಯದಲ್ಲಿ ದೆಹಲಿಯಲ್ಲಿ ಕ್ಯಾಬಿನೆಟ್ ಆಯೋಗದೊಡನೆ ಕಾಂಗ್ರೆಸ್ಸಿನ ಮಾತುಕತೆ ನಿರ್ಣಾಯಕ ಹಂತದಲ್ಲಿತ್ತು; ಇದು ನೆಹರುರಿಗೆ ಆದ್ಯತೆಯ ವಿಷಯವಾಗಬೇಕಾಗಿತ್ತು. ಆದರೆ ಗಾಂಧಿ, ಮೌಲಾನಾ ಆಜಾದ್ ಮುಂತಾದವರೆಲ್ಲರ ಹಿತವಾದವನ್ನೂ ಅಲಕ್ಷಿಸಿ ನೆಹರು ತಮ್ಮ ಆತ್ಮೀಯ ಶೇಖ್ರನ್ನು ಉಳಿಸಲು ಕಾಶ್ಮೀರಕ್ಕೆ ದೌಡಾಯಿಸಿಬಿಟ್ಟರು. ದೇಶದ ಆಗುಹೋಗುಗಳಿಗಿಂತ ನೆಹರುರಿಗೆ ತಮ್ಮ ರಾಷ್ಟ್ರವಿರೋಧಿ ಮಿತ್ರನ ನೆರವಿಗೆ ಧಾವಿಸುವುದೇ ಮುಖ್ಯವೆನಿಸಿಬಿಟ್ಟಿತು.
ಕಾಶ್ಮೀರದ ನಿಜಸ್ಥಿತಿಯನ್ನು ಅಭ್ಯಾಸ ಮಾಡಿ ವರದಿ ಕಳಿಸುವಂತೆ 1949ರ ಆಗಸ್ಟ್ ತಿಂಗಳಲ್ಲಿ ನೆಹರು ಗುಪ್ತಚರ ವಿಭಾಗದ ನಿರ್ದೇಶಕ ಬಿ.ಎ. ಮಲ್ಲಿಕ್ರವರನ್ನು ಕಳಿಸಿದ್ದರು. ಶೇಖ್ ತಮ್ಮ ಸ್ವಭಾವಾನುಗುಣವಾಗಿ ಮಲ್ಲಿಕ್ರನ್ನು ನವುರಾದ ಮಾತುಗಳಿಂದ ತಮ್ಮ ಪ್ರಭಾವಕಕ್ಷೆಯೊಳಕ್ಕೆ ಸೆಳೆದುಕೊಂಡರು. ಸಹಜವಾಗಿಯೇ ಮಲ್ಲಿಕ್ ಅವರು ಶೇಖ್ರ ಪರವಾಗಿ ವರದಿಯನ್ನು ನೆಹರುರಿಗೆ ಕಳಿಸಿದರು. ಉಲ್ಲಾಸಗೊಂಡ ನೆಹರು ಆ ವರದಿಯನ್ನು ಎಲ್ಲೆಡೆ ಪ್ರಚಾರ ಮಾಡಿದರು.
ಗೃಹಮಂತ್ರಿ ಸರ್ದಾರ್ ಪಟೇಲ್ ಮಲ್ಲಿಕ್ರನ್ನು ಕರೆಯಿಸಿ, ನೆಹರುರವರಿಗೆ ಕೊಡುವುದಕ್ಕೆ ಮುಂಚೆ ವರದಿಯನ್ನು ಇನ್ನಷ್ಟು ಪರೀಕ್ಷೆಗೊಳಪಡಿಸಿದ್ದಿದ್ದರೆ ಒಳ್ಳೆಯದಾಗುತ್ತಿತ್ತು – ಎಂದು ಹೇಳಿದರು.
ಮಲ್ಲಿಕ್ ತಾವು ತಮಗೆ ಪ್ರಾಮಾಣಿಕವೆಂದು ತೋರಿದಂತೆ ಬರೆದಿರುವುದಾಗಿ ಸಮರ್ಥಿಸಿಕೊಂಡರು. ಪಟೇಲ್ “ನೀವು ಪ್ರಾಮಾಣಿಕರಾಗಿರುವುದನ್ನು ನಾನು ಮೆಚ್ಚುವೆ. ಆದರೆ ಶೇಖ್ರ ಬಗ್ಗೆ ನಿಮ್ಮ ಮನೋಮುದ್ರಿಕೆ ದೋಷಯುಕ್ತವೆಂದು ನನ್ನ ಅಭಿಪ್ರಾಯ” ಎಂದರು.
ಅದಾದ ಅನೇಕ ವರ್ಷಗಳ ನಂತರ ಬರೆದ ಗ್ರಂಥದಲ್ಲಿ ‘My Years with Neharu’) ಮಲ್ಲಿಕ್ ಹೇಳಿದರು: “ಈಗ ಸರ್ದಾರ್ ಪಟೇಲ್ ಇಲ್ಲ; ಗತಿಸಿದ್ದಾರೆ. ಆದರೆ ಕಾಲಗತಿಯಿಂದ ಈಗ ಸಿದ್ಧಪಟ್ಟಿದೆ: ಪಟೇಲ್ರ ವಿಶ್ಲೇಷಣೆ ಸರಿಯಾಗಿದ್ದಿತು. ನಾನು ತಪ್ಪು ಮಾಡಿದ್ದೆ. ನಾನು ನೆಹರುರಿಗೆ ವರದಿ ಸಲ್ಲಿಸಿದ ಮೂರೇ ವರ್ಷಗಳ ನಂತರ ನಾನೇ ಶೇಖ್ರ ವಿರುದ್ಧ ಕಾರ್ಯಾಚರಣೆ ನಡೆಸಬೇಕಾಯಿತು.”
ಕಾಶ್ಮೀರದ ದುರಂತ ಇತಿಹಾಸದಲ್ಲಿ ಇಂಥ ಎಷ್ಟೊ ಎಳೆಗಳು ಸೇರಿಕೊಂಡಿವೆ. ದೆಹಲಿಯಲ್ಲಿದ್ದ ಸರ್ದಾರ್ ಪಟೇಲ್ ಶೇಖ್ ಅಬ್ದುಲ್ಲಾರ ಸ್ವಭಾವವನ್ನು ಸರಿಯಾಗಿ ಗ್ರಹಿಸಿದ್ದರು. ಆದರೆ ಶೇಖ್ರ ನಿಕಟ ಮಿತ್ರರಾಗಿ ಅನೇಕ ಸಲ ಕಾಶ್ಮೀರಕ್ಕೆ ಹೋಗಿ ಅವರ ಆತಿಥ್ಯವನ್ನುಂಡು ಆನಂದಿಸಿದ್ದ ನೆಹರು ಶೇಖರನ್ನು ಅರಿತುಕೊಳ್ಳಲು ಅಸಮರ್ಥರಾಗಿದ್ದರು. ಇದು ಘೋರ ದೃಷ್ಟಿದೋಷದ ಪರಿಣಾಮವಷ್ಟೆ.
ಕಾಶ್ಮೀರಕ್ಕೆ ಭೇಟಿ
1952-53ರಲ್ಲಿ ನೆಹರುರೊಡನೆಯೂ ಶೇಖ್ ಅಬ್ದುಲ್ಲಾರೊಡನೆಯೂ ಡಾ|| ಶ್ಯಾಮಾಪ್ರಸಾದ ಮುಖರ್ಜಿಯವರು ಸತತ ಪತ್ರವ್ಯವಹಾರ ನಡೆಸಿದರು. ಅವರು ರಾಷ್ಟ್ರಹಿತ ದೃಷ್ಟಿಯಿಂದ ಆಗಲೇಬೇಕೆಂದು ಆಗ್ರಹಿಸಿದ್ದ ಅಂಶಗಳು ನಾಲ್ಕು:
(1) ಭಾರತ ಸಂಘಟನೆಯಲ್ಲಿ ಜಮ್ಮು-ಕಾಶ್ಮೀರದ ವಿಲೀನ ಸಮಗ್ರಗೊಳ್ಳಬೇಕು; ಸಂವಿಧಾನದ 370ನೇ ವಿಧಿಯೂ ‘ಪರ್ಮಿಟ್’ ಮೊದಲಾದ ವ್ಯವಸ್ಥೆಗಳೂ ರದ್ದಾಗಬೇಕು.
(2) ಆಕ್ರಮಿತ ಕಾಶ್ಮೀರದಿಂದ ನಿರ್ಗಮಿಸುವ ಸಮಯನಿಗದಿತ ಯೋಜನೆಯನ್ನು ಪಾಕಿಸ್ತಾನ ಘೋಷಿಸಬೇಕು.
(3) ಆಕ್ರಮಿತ ಕಾಶ್ಮೀರದಿಂದ ತರುಮಲ್ಪಟ್ಟು ಭಾರತಕ್ಕೆ ಬಂದು ಐದು ವರ್ಷಗಳಿಂದ ಬೀದಿಪಾಲಾಗಿದ್ದ ಸಾವಿರಾರು ಹಿಂದೂ ಮತ್ತು ಸಿಖ್ ನಿರಾಶ್ರಿತರ ಪುನರ್ವಸತಿ ಕ್ಷಿಪ್ರವಾಗಿ ಆಗಬೇಕು.
(4) ಪ್ರಜಾಪರಿಷದ್ ಜನಾಂದೋಲನದ ವಿರುದ್ಧ ಶೇಖ್ ಅಬ್ದುಲ್ಲಾ ಸರ್ಕಾರ ನಡೆಸಿದ್ದ ದಮನಚಕ್ರ ಮುಕ್ತಾಯಗೊಳ್ಳಬೇಕು.
1952ರ ಸೆಪ್ಟೆಂಬರ್ ತಿಂಗಳಲ್ಲಿ ಕಾಶ್ಮೀರಕ್ಕೆ ಭೇಟಿ ನೀಡಿದ ಮುಖರ್ಜಿಯವರು ಜಮ್ಮುವಿನಲ್ಲಿ ವಿಶಾಲ ಜನಸಭೆಯನ್ನು ಉದ್ದೇಶಿಸಿ ಭಾಷಣ ಮಾಡುತ್ತ “ನಾನು ನಿಮ್ಮನ್ನೆಲ್ಲ ಎಂದರೆ ಈ ಪ್ರಾಂತವನ್ನು ಭಾರತ ಸಂವಿಧಾನದಲ್ಲಿ ಅಂತರ್ಗತಗೊಳಿಸುವೆ. ಇಲ್ಲವೆ ಬಲಿದಾನ ಮಾಡುವೆ” ಎಂದಿದ್ದರು. ಆ ಆಂದೋಲನ ಅವರ ಬಲಿದಾನದಲ್ಲೆ ಸಮಾಪ್ತವಾದದ್ದು ದೊಡ್ಡ ದುರಂತ. ಅವರಂತೂ ತಮ್ಮ ವಚನದಂತೆ ನಡೆದು ಇತಿಹಾಸ ಸೇರಿದರು.
“ಭಾರತದ ಪ್ರಜೆಗಳಾಗಿ ಉಳಿಯಬೇಕೆಂಬ ಆಕಾಂಕ್ಷೆಯಿಂದ ಕಾಶ್ಮೀರದ ಜನ ಗುಂಡೇಟಿಗೆ ಗುರಿಯಾಗಿದ್ದಾರೆ, ಸತತ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಅವರನ್ನು ನಾವು ಬೆಂಬಲಿಸಬೇಕಾದುದು ಕರ್ತವ್ಯವಾಗಿದೆ” – ಎಂದು ಕಾನ್ಪುರದ ಜನಸಂಘ ಅಧಿವೇಶನದಲ್ಲಿ ಮುಖರ್ಜಿ ಪ್ರಜಾಪರಿಷದ್ ಆಂದೋಲನವನ್ನು ಪ್ರಸ್ತಾವಿಸಿ ಹೇಳಿದರು.
ವಿಡಂಬನೆ
ಇದಕ್ಕೆ ಜವಾಹರಲಾಲರ ಪ್ರತಿಕ್ರಿಯೆ ಹೀಗಿತ್ತು:
“ಶೇಖ್ ಅಬ್ದುಲ್ಲಾರ ಧೋರಣೆ ಸರಿಯಿದೆ. ಅವರ ಸ್ಥಾನದಲ್ಲಿ ನಾನು ಇದ್ದಿದ್ದರೆ ಇನ್ನೂ ಉಗ್ರವಾದ ದಮನಕಾರ್ಯ ನಡೆಸುತ್ತಿದ್ದೆ.”
ರಾಷ್ಟ್ರೀಯತೆಯಿಂದ ನೆಹರು ಆ ವೇಳೆಗೇ ಎಷ್ಟು ದೂರ ಸರಿದಿದ್ದರೆಂಬುದನ್ನು ಈ ಅಪ್ರಬುದ್ಧ ಮಾತುಗಳು ಸ್ಫುಟಪಡಿಸುತ್ತವೆ. ಡಾ|| ಶ್ಯಾಮಾಪ್ರಸಾದ ಮುಖರ್ಜಿಯಂಥ ದೇಶಭಕ್ತರನ್ನು ಭೇಟಿಯಾಗಲೂ ನೆಹರು ನಿರಾಕರಿಸಿದರೆಂಬುದು ಅವರ ಅಸಭ್ಯತೆಯನ್ನೂ ರಾಷ್ಟ್ರವಿರೋಧಿ ಮಾನಸಿಕತೆಯನ್ನೂ ಎತ್ತಿತೋರಿಸುತ್ತದೆ. 5-2-1953ರಂದು ಮುಖರ್ಜಿಯವರಿಗೆ ನೆಹರು ಸೊಕ್ಕಿನಿಂದ ಬರೆದಿದ್ದರು:
“ನಿಮಗೂ ನನಗೂ ನಡುವೆ ಸಮಾನ ಭೂಮಿಕೆ ಇಲ್ಲದಿರುವುದರಿಂದ ನಮ್ಮಿಬ್ಬರ ಮಾತುಕತೆ ಪ್ರಯೋಜನಕರವಾಗದು.”
ನೆಹರುರವರ ಈ ಮಾತನ್ನಂತೂ ಒಪ್ಪಬೇಕು. ಏಕೆಂದರೆ ಒಂದುಕಡೆ ಅಪ್ರತಿಮ ದೇಶಭಕ್ತರೂ ಪ್ರಖರ ರಾಷ್ಟ್ರವಾದಿಯೂ ಆದ ಮುಖರ್ಜಿ, ಇನ್ನೊಂದುಕಡೆ ರಾಷ್ಟ್ರವಾದವೆಂಬ ಮಾತನ್ನೇ ಸಹಿಸದ ನೆಹರು – ಇವರ ನಡುವೆ ಏನು ಸಮಾನ ಭೂಮಿಕೆ ಇದ್ದೀತು?
ವಿಡಂಬನೆಯೆಂದರೆ, ಶೇಖ್ಅಬ್ದುಲ್ಲಾರ ಹುಚ್ಚಾಟಗಳನ್ನು ಇಷ್ಟು ಪ್ರಬಲವಾಗಿ ಸಮರ್ಥಿಸಿದ ನೆಹರು ತಾವೇ ಅಲ್ಲಿಂದಾಚೆ ಕೇವಲ ಆರೇ ತಿಂಗಳಲ್ಲಿ ಶೇಖ್ ಅಬ್ದುಲ್ಲಾರ ಬಂಧನದ ಆಜ್ಞೆ ಹೊರಡಿಸಬೇಕಾಯಿತಲ್ಲ?
ಶೇಖ್ ಅಬ್ದುಲ್ಲಾರ ಅವಿಶ್ವಸನೀಯತೆ ಹೊಸ ಸಂಗತಿಯೆನಿಸಿದ್ದು ರಾಷ್ಟ್ರದ ಪ್ರಧಾನಮಂತ್ರಿಯೊಬ್ಬರಿಗೆ ಮಾತ್ರ. ಈ ಸಂಗತಿ ದೇಶಕ್ಕೆಲ್ಲ ಎಷ್ಟೊ ಹಿಂದಿನಿಂದಲೇ ಮನವರಿಕೆಯಾಗಿತ್ತು. ಮುಖರ್ಜಿಯವರ ಬಲಿದಾನದ ನೈತಿಕ ಹೊಣೆಗಾರಿಕೆಯನ್ನು ನೆಹರು ಹೊರಲೇಬೇಕಾಗಿದೆ.
“ದ್ವಿರಾಷ್ಟ್ರ ಸಿದ್ಧಾಂತದಿಂದಾಗಿ ಭಾರತದೇಶ ಎರಡು ತುಂಡುಗಳಾಗಿ ಒಡೆಯಿತು. ನೀವು ಈಗ ಕಾಶ್ಮೀರವನ್ನು ಮೂರನೆ ರಾಷ್ಟ್ರವಾಗಿಸಿ ತ್ರಿರಾಷ್ಟ್ರ ಸಿದ್ಧಾಂತಕ್ಕೆ ಜನ್ಮ ಕೊಡುತ್ತಿರುವಿರಿ! ಇದು ಭಯಾವಹವಾಗಿದೆ. ನಿಮ್ಮ ಕ್ರಮ ರಾಜ್ಯಾಂಗ ಸುಸ್ಥಿತಿಗೂ ಸಮಸ್ತ ಭಾರತದ ಹಿತಕ್ಕೂ ವಿರುದ್ಧವಾಗಿದೆ.”
ಹೀಗೆ ದಿಟ್ಟ ಮಾತುಗಳಲ್ಲಿ ಪ್ರಧಾನಿ ಜವಾಹರಲಾಲ್ ನೆಹರುರವರನ್ನು ಎಚ್ಚರಿಸಿದವರು ಡಾ|| ಶ್ಯಾಮಾಪ್ರಸಾದ ಮುಖರ್ಜಿ, 1953ರ ಫೆಬ್ರುವರಿ 13ರಂದು ಬರೆದ ಪತ್ರದಲ್ಲಿ.
ಭಾರತೀಯರು ಜಮ್ಮುವಿಗೆ ಪ್ರವೇಶಿಸಲು ‘ರಹದಾರಿ’ ಪಡೆದುಕೊಳ್ಳಬೇಕೆಂಬುದು ಅತ್ಯಂತ ಹೀನಾಯ ಸ್ಥಿತಿ – ಎಂದು ಸಂಸತ್ತಿನಲ್ಲಿ ಶ್ಯಾಮಾಪ್ರಸಾದ ಮುಖರ್ಜಿಯವರು ಹೇಳಿದಾಗ ನೆಹರು ‘ಅಂಥ ಪರ್ಮಿಟ್ನ ಆವಶ್ಯಕತೆ ಇಲ್ಲ’ ಎಂದು ತೇಲಿಸಿ ಮಾತನಾಡಿದರು. ಅವರಿಗೆ ವಸ್ತುಸ್ಥಿತಿಯ ಅರಿವಿರಲಿಲ್ಲವೆ?
“ಈಗ ಪ್ರಧಾನಮಂತ್ರಿಗಳ ಹೇಳಿಕೆಯ ಅಪ್ರಾಮಾಣಿಕತೆಯನ್ನು ಸಾಬೀತು ಮಾಡಲು ನಾನು ಕಾಶ್ಮೀರಕ್ಕೆ ಹೋಗಲೇಬೇಕಾಗಿದೆ” ಎಂದರು ಮುಖರ್ಜಿ.
ಕಾಶ್ಮೀರದಲ್ಲಿ ಬಂಧನ
‘ಏಕ್ ದೇಶ್ ಮೇ ದೋ ಪ್ರಧಾನ್, ದೋ ವಿಧಾನ್, ದೋ ನಿಶಾನ್ ನಹೀ ಚಲೇಂಗೇ, ನಹೀ ಚಲೇಂಗೇ’ ಎಂಬ ಪ್ರಜಾಪರಿಷದ್ ಘೋಷಣೆಯನ್ನು ಸಮರ್ಥಿಸಿ ಮುಖರ್ಜಿಯವರು ಶೇಖ್ ಅಬ್ದುಲ್ಲಾ ಸರ್ಕಾರದ ರಹದಾರಿ (ಪರ್ಮಿಟ್) ನಿಯಮವನ್ನು ಉಲ್ಲಂಘಿಸಿ 1953ರ ಮೇ 11ರಂದು ಕಾಶ್ಮೀರ ಪ್ರವೇಶಿಸಿದರು. ಶೇಖ್ ಅಬ್ದುಲ್ಲಾ ಸರ್ಕಾರ ಅವರನ್ನು ಗೃಹಬಂಧನದಲ್ಲಿರಿಸಿತು. ಅವರ ಆರೋಗ್ಯ ಕ್ಷೀಣಿಸುತ್ತಿದ್ದುದನ್ನು ಹೊರಜಗತ್ತಿಗೆ ಸರ್ಕಾರ ತಿಳಿಸಲೇ ಇಲ್ಲ. ‘ನಾನು ಅವರ ಕುಟುಂಬದ ವೈದ್ಯ. ಅವರ ದೇಹಸ್ಥಿತಿಯ ಬಗ್ಗೆ ನನಗೇಕೆ ತಿಳಿಸಲಿಲ್ಲ?’ ಎಂದು ಬಂಗಾಳದ ಮುಖ್ಯಮಂತ್ರಿ ಬಿಧಾನಚಂದ್ರರಾಯ್ ಶೇಖ್ ಅಬ್ದುಲ್ಲಾರನ್ನು ಕೇಳಿದ್ದರು.
ಮುಖರ್ಜಿಯವರ ಬಂಧನದ ಸುದ್ದಿ ತಿಳಿದ ಮೇಲೆ ನೆಹರು ಕಾಶ್ಮೀರಕ್ಕೆ ಭೇಟಿ ಕೊಟ್ಟರು.
ಆದರೆ ಆಗಲೂ ಮುಖರ್ಜಿಯವರನ್ನು ಮುಖತಃ ಕಂಡು ಮಾತನಾಡಬೇಕೆಂದು ನೆಹರು ಮಹಾಶಯರಿಗೆ ಅನ್ನಿಸಲೇ ಇಲ್ಲ.
ಡಾ|| ಶ್ಯಾಮಾಪ್ರಸಾದ ಮುಖರ್ಜಿಯವರನ್ನು ಶ್ರೀನಗರದ ನಿಶಾತಬಾಗ್ ಎಂಬ ಬಡಾವಣೆಯ ಪುಟ್ಟ ಮನೆಯೊಂದರಲ್ಲಿ ನಜರಬಂದಿಯಲ್ಲಿ ಇರಿಸಲಾಗಿತ್ತು. ಅವರ ನಿಧನಾನಂತರ ಆ ಪುಣ್ಯಸ್ಥಳದ ದರ್ಶನಕ್ಕೆಂದೇ ಪ್ರತಿದಿನ ನೂರಾರು ಜನ ದೇಶಭಕ್ತರು ಅಲ್ಲಿಗೆ ಹೋಗತೊಡಗಿದರು. ಅದರ ನೆನಪು ಉಳಿಯದಿರಲೆಂದು ಕಾಶ್ಮೀರ ಸರ್ಕಾರ ಆ ಮನೆಯನ್ನು ಕೆಡವಿ ನೆಲಸಮ ಮಾಡಿತು.
ಅವಸಾನ
ಬಂಧನದ ಆರಂಭದ ಕಾಲದಿಂದಲೇ ಮುಖರ್ಜಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ತಪಾಸಣೆಗಾಗಿ ಅವರನ್ನು ಆಸ್ಪತ್ರೆಗೂ ಒಯ್ಯಲಾಗಿತ್ತು. ಆ ಹಂತದಲ್ಲಿ ಈ ಜನನಾಯಕರ ಹೆತ್ತ ತಾಯಿಗಾದರೂ ಪರಿಸ್ಥಿತಿಯನ್ನು ತಿಳಿಸಬೇಕೆಂದು ಕಾಶ್ಮೀರ ಸರ್ಕಾರಕ್ಕೆ ಅನ್ನಿಸಲಿಲ್ಲ. ಬಂಧನಕ್ಕೆ ಮುಂಚೆ ಮುಖರ್ಜಿಯವರ ದೇಹಸ್ಥಿತಿಯ ಬಗ್ಗೆ ವೈದ್ಯಕೀಯ ವಿವರಗಳನ್ನು ತಿಳಿದುಕೊಳ್ಳುವ ಗೋಜಿಗೂ ಕಾಶ್ಮೀರ ಸರ್ಕಾರ ಹೋಗಲಿಲ್ಲ. ಅವರನ್ನು ಸುವ್ಯವಸ್ಥಿತ ಚಿಕಿತ್ಸಾಲಯಕ್ಕೊಯ್ಯಲೂ ಇಲ್ಲ. ವಿಳಂಬವಾಗಿ ಆಸ್ಪತ್ರೆಗೊಯ್ದಾಗಲೂ ಅವರ ಬಂಧನ ಉಸ್ತುವಾರಿ ನೋಡುತ್ತಿದ್ದ ಜೊತೆಗಾರರಿಗೆ ಅವರೊಡನೆ ಹೋಗಲು ಸರ್ಕಾರ ಅನುಮತಿಯನ್ನು ನಿರಾಕರಿಸಿತು.
ಮುಖರ್ಜಿಯವರು ನಿಧನರಾದ ಮೇಲೆ, ಎರಡು ಗಂಟೆ ಕಳೆದ ಮೇಲೆ ಅವರ ತಾಯಿ ಜೋಗಮಾಯಾದೇವಿಯವರಿಗೆ ಕಾಶ್ಮೀರ ಸರ್ಕಾರ ‘ತಮ್ಮ ಪುತ್ರರು ಈಗ ಜೀವಂತ ಇಲ್ಲ’ ಎಂದು ಮೊಗುಮ್ಮಾಗಿ ಒರಟಾಗಿ ಒಂದು ವಾಕ್ಯದಲ್ಲಿ ಸುದ್ದಿ ಕಳಿಸಿತು.
ಕುಪ್ರಸಿದ್ಧ ‘ಪರ್ಮಿಟ್’ ವ್ಯವಸ್ಥೆ ಅಸ್ತಗೊಂಡು ಕಾಶ್ಮೀರದಲ್ಲಿ ತ್ರಿವರ್ಣಧ್ವಜ ಹಾರಿದ್ದು ಡಾ|| ಶ್ಯಾಮಾಪ್ರಸಾದ ಮುಖರ್ಜಿಯವರ ಬಲಿದಾನದ ತರುವಾಯವೇ. ಅದಾದ ಮೇಲೆ ಭಾರತದ ಸಂವಿಧಾನವೂ ಕಾಯ್ದೆಗಳೂ ಕಾಶ್ಮೀರಕ್ಕೆ ಅನ್ವಯವಾಗಲು ಇನ್ನಷ್ಟು ಕಾಲ ಬೇಕಾಯಿತು.
ಬಲಿದಾನದ ಸತ್ಫಲ
ಕಾಲಕ್ರಮದಲ್ಲಿ ಕಾಶ್ಮೀರದ ‘ಪ್ರಧಾನಮಂತ್ರಿ’ಗಳು ಅನ್ಯ ರಾಜ್ಯಗಳಲ್ಲಿರುವಂತೆ ಮುಖ್ಯಮಂತ್ರಿ ಎನಿಸಿದರು; ‘ಸದರ್-ಎ-ರಿಯಾಯತ್’ ರಾಜ್ಯಪಾಲರೆನಿಸಿದರು; ಭಾರತದ ಸರ್ವೋಚ್ಚ ನ್ಯಾಯಾಲಯದ ವ್ಯಾಪ್ತಿ ಕಾಶ್ಮೀರಕ್ಕೂ ವಿಸ್ತರಿಸಿತು; ಭಾರತ ಸರ್ಕಾರದ ಚುನಾವಣಾ ಆಯೋಗ, ಲೆಕ್ಕಪತ್ರ ತನಿಖಾ ವಿಭಾಗ ಮೊದಲಾದ ಅಂಗಗಳ ನಿಯಂತ್ರಣದೊಳಕ್ಕೆ ಕಾಶ್ಮೀರ ಬಂದಿತು. ಮುಖರ್ಜಿಯವರ ಬಲಿದಾನದಿಂದಾಗಿಯೇ ಈ ಸಂವಿಧಾನಿಕ ಪ್ರಕ್ರಿಯೆಗಳಿಗೆಲ್ಲ ಚಾಲನೆ ದೊರೆತದ್ದು – 1956ರ ತರುವಾಯ.
1953ರ ಜೂನ್ 23ರಂದು ಮುಖರ್ಜಿಯವರ ದೇಹಾಂತವಾಯಿತು. ಅದಾದ ಆರು ವಾರಗಳಲ್ಲಿ
(8 ಆಗಸ್ಟ್) ಸ್ವಯಂ ಜವಾಹರಲಾಲ್ ನೆಹರುರವರೇ ತಮ್ಮ ನೆಚ್ಚಿನ ‘ಶೇರ್-ಎ-ಕಾಶ್ಮೀರ್’ಶೇಖ್ ಅಬ್ದುಲ್ಲಾರ ಬಂಧನದ ಆಜ್ಞೆ ಹೊರಡಿಸಬೇಕಾಯಿತು. ಶೇಖ್ ಬಂಧನವೇ ನೆಹರುರವರು ತಳೆಯುತ್ತ ಬಂದಿದ್ದ ಕಾಶ್ಮೀರ ಧೋರಣೆಯ ಅತಾರ್ಕಿಕತೆಯನ್ನು ಪುರಾವೆಗೊಳಿಸಿತು.
ಡಾ|| ಶ್ಯಾಮಾಪ್ರಸಾದ ಮುಖರ್ಜಿಯವರ ಬಲಿದಾನ, ಪರಿಣಾಮವಾಗಿ ಶೇಖ್ ಬಂಧನ – ಈ ಘಟನಾವಳಿಯಿಂದಾಗಿಯೇ ಜಮ್ಮು-ಕಾಶ್ಮೀರ ಭಾರತದ ಅಂಗವಾಗಿ ಉಳಿಯುವಂತಾಯಿತು – ಎಂಬುದು ನಿಸ್ಸಂದೇಹ.
ಡಾ|| ಶ್ಯಾಮಾಪ್ರಸಾದ ಮುಖರ್ಜಿ ನಿಧನರಾದಾಗ (23-6-1953) ದೇಶದುದ್ದಗಲಕ್ಕೂ ಶೋಕಾಚರಣೆಗಳೂ ಅವರ ಗುಣಗಾನಗಳೂ ನಡೆದವು. ವಿಖ್ಯಾತ ನ್ಯಾಯಶಾಸ್ತ್ರವೇತ್ತ ಡಾ|| ಎಂ.ಆರ್. ಜಯಕರ್ ಆಡಿದ ಮಾತು ಅತ್ಯಂತ ಮಾರ್ಮಿಕ: “To die in a prison house, locked there by his country’s Swadeshi Government by persons with whom he shared power as a colleague, is a fitting termination of a warring life. Let us hope that this incident will make the Government of India realize, in their self-complacent enjoyment of the chits of American visitors, the enormity of their behaviour, which ignored all the canons of fairness and justice accepted by civilized governments.”
ಡಾ|| ಶ್ಯಾಮಾಪ್ರಸಾದ ಮುಖರ್ಜಿಯವರ ಬಲಿದಾನವಾಗಿ ಈಗ ಅರವತ್ತೆಂಟು ವರ್ಷಗಳು ಕಳೆದಿವೆ. ಅಂದು ಶೇಖ್ ಅಬ್ದುಲ್ಲಾ ಮಾಡಿದ್ದ ಕೆಲಸವನ್ನೇ ಅನಂತರ ಅವರ ಸುಪುತ್ರ ಡಾ|| ಫಾರುಖ್ ಅಬ್ದುಲ್ಲಾ ಮಾಡುವ ಪ್ರಯಾಸ ನಡೆಸಿದರು. ಗಡಿಯಾಚೆಯಿಂದ ಅಕ್ರಮ ನುಸುಳುವಿಕೆಯ ನಿಯಂತ್ರಣದ ಹಿನ್ನೆಲೆಯಲ್ಲಿ 1995ರಲ್ಲಿ ಅವರು ಅವ್ಯವಹಾರ್ಯ ಬೇಡಿಕೆಗಳನ್ನು ಮುಂದೊತ್ತಿದಾಗ ಆಗಿನ ಪ್ರಧಾನಿ ಪಿ.ವಿ. ನರಸಿಂಹರಾವ್ “ಆಕಾಶಕ್ಕೂ ಒಂದು ಮಿತಿಯಿದೆ” ಎಂದಿದ್ದರು. ಜಮ್ಮು-ಕಾಶ್ಮೀರ ಹೆಚ್ಚು ಸ್ವಾಯತ್ತವಾಗಬೇಕೆಂದೂ 1953ಕ್ಕೆ ಪೂರ್ವದ ಸ್ಥಿತಿ ಬರಬೇಕೆಂದೂ
ಡಾ|| ಫಾರುಖ್ ಅಬ್ದುಲ್ಲಾ 2000ದ ಮಧ್ಯಭಾಗದಲ್ಲಿ ಅಲ್ಲಿಯ ವಿಧಾನಸಭೆಯಲ್ಲಿ ಗೊತ್ತುವಳಿ ಮಾಡಿಸಿದ್ದರು.
ಡಾ|| ಶ್ಯಾಮಾಪ್ರಸಾದ ಮುಖರ್ಜಿ : ಜೀವನರೇಖೆಗಳು
1901 : ಜುಲೈ 6 ಜನನ: ಕಲ್ಕತ್ತ-ಭವಾನಿಪುರದಲ್ಲಿ. ತಂದೆ: ಸರ್ ಆಶುತೋಷ
ಮುಖರ್ಜಿ; ತಾಯಿ: ಜೋಗಮಾಯಾದೇವಿ
1922 : ವಿವಾಹ : ಸುಧಾದೇವಿ ಅವರೊಡನೆ
1923 : ಎಂ. ಎ. ಪದವಿ (ಬಂಗಾಳಿ ಸಾಹಿತ್ಯದಲ್ಲಿ)
1924 : ಮೇ : ಆಶುತೋಷರ ನಿಧನ. ಬಿ.ಎಲ್. ಪದವಿ; ಕಲ್ಕತ್ತ ವಿಶ್ವವಿದ್ಯಾಲಯ
ಸಿಂಡಿಕೇಟ್ ಸದಸ್ಯ
1926-27 : ಇಂಗ್ಲೆಂಡಿನಲ್ಲಿ ಕಾನೂನು ವ್ಯಾಸಂಗ : ಬ್ಯಾರಿಸ್ಟರ್
1929-30 : ಕಾಂಗ್ರೆಸ್ ಉಮೇದುವಾರರಾಗಿ ಬಂಗಾಳ ವಿಧಾನಪರಿಷತ್ ಸದಸ್ಯ
1933 : ಪತ್ನಿ ಸುಧಾದೇವಿ ನಿಧನ
1934-38 : ಕೊಲ್ಕತ್ತಾ ವಿಶ್ವವಿದ್ಯಾಲಯದ ಉಪಕುಲಪತಿ
1937 : ಬಂಗಾಳ ಸರ್ಕಾರದಲ್ಲಿ ಅರ್ಥಸಚಿವ
1938 : ಕೊಲ್ಕತ್ತಾ ಮತ್ತು ವಾರಣಾಸಿ ವಿಶ್ವವಿದ್ಯಾಲಯಗಳಿಂದ ಗೌರವ
ಡಾಕ್ಟರೇಟ್
1939 : ಹಿಂದೂ ಮಹಾಸಭೆಗೆ ಸೇರ್ಪಡೆ. 1940: ಕಾರ್ಯಾಧ್ಯಕ್ಷ
1941-42 : ಫಜ್ಲುಲ್-ಹಕ್ ನೇತೃತ್ವದ ಬಂಗಾಳ ಸರ್ಕಾರದಲ್ಲಿ ವಿತ್ತಮಂತ್ರಿ
1942 : ಪ್ರಾಂತೀಯ ಸ್ವಾಯತ್ತತೆಗೆ ಪ್ರತಿಕೂಲವಾಗಿದ್ದ ಬ್ರಿಟಿಷ್ ಸರ್ಕಾರದ
ಧೋರಣೆಗಳಿಗೆ ಪ್ರತಿಭಟಿಸಿ ಬಂಗಾಳ ಸಂಪುಟದಿಂದ ರಾಜೀನಾಮೆ
1943 : ಬಂಗಾಳ ಕ್ಷಾಮ; ವ್ಯಾಪಕ ಪರಿಹಾರಕಾರ್ಯ
1943-46 : ದೇಶವಿಭಜನೆಯ ವಿರುದ್ಧ ಪ್ರಚಾರಾಭಿಯಾನ
1946 : ಬಂಗಾಳ ವಿಧಾನಸಭಾ ಸದಸ್ಯ; ಕೊಲ್ಕತ್ತಾ ದಂಗೆಯಲ್ಲಿ ಹಿಂದೂಗಳ
ಪರ ಕಾರ್ಯಾಚರಣೆ
1947 : ಗಾಂಧಿಯವರ ಸಲಹೆಯಂತೆ ಸ್ವತಂತ್ರ ಭಾರತದ ಮೊದಲ ಕೇಂದ್ರ
ಸಂಪುಟದಲ್ಲಿ ಉದ್ಯಮ ಮತ್ತು ಸರಬರಾಜು ಖಾತೆಯ ಸಚಿವ
1950 : ಪೂರ್ವಪಾಕಿಸ್ತಾನದ ಹಿಂದೂ ನಿರಾಶ್ರಿತರ ಪುನರ್ವಸತಿಯ ಬಗ್ಗೆ
ನೆಹರುರೊಡನೆ ಭಿನ್ನಾಭಿಪ್ರಾಯ ; ಮಂತ್ರಿಪದವಿಗೆ ರಾಜೀನಾಮೆ
(ಏಪ್ರಿಲ್ 1950)
1951 : ಅಕ್ಟೋಬರ್: ‘ಭಾರತೀಯ ಜನಸಂಘ’ ರಾಜಕೀಯ ಪಕ್ಷದ ಸ್ಥಾಪನೆ;
ಪ್ರಥಮ ಅಧ್ಯಕ್ಷ
1952 : ಸಂಸತ್ ಸದಸ್ಯ
1953 : ಭಾರತದೊಡನೆ ಜಮ್ಮು-ಕಾಶ್ಮೀರದ ಪೂರ್ಣ ವಿಲೀನಕ್ಕೆ ಆಗ್ರಹಿಸಿ
ಪ್ರಜಾಪರಿಷದ್ ಮೂಲಕ ಆಂದೋಲನ; ಬಂಧನ
1953 : ಜೂನ್ 23: ಬಂಧನದಲ್ಲಿದ್ದಾಗಲೇ ನಿಧನ