ಕೋವಿಡ್ ಹಾವಳಿ, ರಾಜಕೀಯ ತ್ವಂಚಾಹAಚಗಳು, ಕುಸಿದ ಆರ್ಥಿಕತೆ – ಈ ಎಲ್ಲ ಅಸ್ತವ್ಯಸ್ತತೆಗಳ ನಡುವೆ ಇಡೀ ದೇಶವೇ ಭೇದಗಳನ್ನೆಲ್ಲ ಮರೆತು ಮುಕ್ತವಾಗಿ ಸಂಭ್ರಮಿಸಲು ಟೋಕಿಯೊ ಒಲಿಂಪಿಕ್ ಕ್ರೀಡಾವಳಿಯಲ್ಲಿ ಉನ್ನತ ಸಾಧನೆ ಮೆರೆದ ಕ್ರೀಡಾಪಟುಗಳು ಅವಕಾಶ ಕಲ್ಪಿಸಿದ್ದಾರೆ. ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡ ಹರ್ಯಾಣಾದ ನೀರಜ್ ಚೋಪ್ರಾರಂತೂ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಒಲಿಂಪಿಕ್ ಕ್ರೀಡಾವಳಿಯ ಶತಮಾನಕ್ಕೂ ಮೀರಿದ ಇತಿಹಾಸದಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ಚಿನ್ನದ ಪದಕ ಗೆದ್ದದ್ದು ಇದೇ ಮೊದಲು. ಎರಡು ರಜತ ಪದಕಗಳೂ (ಭಾರವೆತ್ತುವಿಕೆ – ಮೀರಾಬಾಯಿ ಚಾನು; ಕುಸ್ತಿ – ರವಿಕುಮಾರ್ ದಹಿಯಾ) ನಾಲ್ಕು ಕಂಚಿನ ಪದಕಗಳೂ (ಹಾಕಿ ಪುರುಷ ತಂಡ; ಷಟಲ್ಬ್ಯಾಡ್ಮಿಂಟನ್ – ಪಿ.ವಿ. ಸಿಂಧು; ಕುಸ್ತಿ – ಲೌಲಿನಾ ಬಾರ್ಗೊಹಾಯ್; ಕುಸ್ತಿ – ಬಜರಂಗ್ ಪೂನಿಯಾ) ಕ್ರೀಡೆ ಹಾಗೂ ಅಥ್ಲೆಟಿಕ್ಸ್ ಕ್ಷೇತ್ರಗಳಲ್ಲಿ ಭಾರತಕ್ಕೆ ಉಜ್ಜ್ವಲ ಭವಿಷ್ಯವಿರುವುದನ್ನು ಸ್ಮರಣೀಯವಾಗಿ ಸಾಕ್ಷ್ಯಪಡಿಸಿವೆ. ಅತಿಶಯವೆಂದರೆ ಒಂದೊಮ್ಮೆ ಹಾಕಿಯು ರಾಷ್ಟ್ರೀಯ ಕ್ರೀಡೆ ಎನಿಸಿದ್ದ ಸಂಗತಿಯೇ ವಿಸ್ಮರಣೆಗೊಳಗಾಗಿದೆಯೆನಿಸಿದ್ದ ಸನ್ನಿವೇಶದಲ್ಲಿ ನಾಲ್ಕು ದಶಕಗಳ ತರುವಾಯ (ಮಾಸ್ಕೋ, ೧೯೮೦) ಭಾರತದ ಹಾಕಿ ತಂಡ ಮತ್ತ್ತೆ ಪುಟಿದೆದ್ದಿರುವುದು. ಮಹಿಳಾ ಹಾಕಿ ತಂಡದ ಸಾಧನೆಯೂ ಗಮನ ಸೆಳೆದಿದೆ. ಗೆದ್ದಿರುವ ಏಳು ಪದಕಗಳಲ್ಲದೆ ಅನ್ಯ ನಾಲ್ಕಾರು ವಿಭಾಗಗಳಲ್ಲಿಯೂ ಕೂದಲೆಳೆಯಷ್ಟರಲ್ಲಿ ಪ್ರಶಸ್ತಿಗಳು ತಪ್ಪಿವೆ. ಕೋವಿಡ್-ಆವೃತ ಪರಿಸರದಲ್ಲಿಯೂ ಕಠಿಣ ಅಭ್ಯಾಸದಿಂದ ಕ್ರೀಡಾಪಟುಗಳು ಉನ್ನತಿಯನ್ನು ಸಾಧಿಸಿರುವುದು ಅಭಿನಂದನಾರ್ಹವಾಗಿದೆ. ಬರಲಿರುವ ವರ್ಷಗಳಲ್ಲಿ ಇನ್ನೂ ಅಧಿಕತರ ಸಾಧನೆಯನ್ನು ನಿಶ್ಚಿತವಾಗಿ ನಿರೀಕ್ಷಿಸಬಹುದಾಗಿದೆ.
ಕೀರ್ತಿ ತಂದ ಕ್ರೀಡಾಕಲಿಗಳು
Month : September-2021 Episode : Author : -ಎಸ್.ಆರ್.ಆರ್.